🕉️ ಓಂ ಶ್ರೀ ಗುರುಭ್ಯೋ ನಮಃ 🕉️ ಭಾರತದ ಮಹಾನ್ ಪುರಾಣಗಳು ಅಷ್ಟಾದಶ ಪುರಾಣಗಳೆಂದು ಪ್ರಖ್ಯಾತವಾಗಿರುವ ಹದಿನೆಂಟು ಪುರಾಣಗಳನ್ನು ಭಗವಾನ್ ವೇದವ್ಯಾಸ ಮಹರ್ಷಿಗಳು ಬರೆದಿದ್ದಾರೆ. ಆ ಹದಿನೆಂಟು ಪುರಾಣಗಳು ಹೀಗಿವೆ :
ಮದ್ವಯಂ ಭದ್ವಯಂಚೈವ ಬ್ರತ್ರಯಂ ವ ಚತುಷ್ಟಯಂ ಅ ನಾ ಪ ಲಿಂ ಗ ಕೂ ಸ್ಕಾ ನಿ ಪುರಾಣಾನಿ ಪ್ರಚಕ್ಷತಃ
- ಮ ಕಾರದಿಂದ ಎರಡು ಪುರಾಣಗಳು
- ಭ ಕಾರದಿಂದ ಎರಡು ಪುರಾಣಗಳು
- ಬ್ರ ಕಾರದಿಂದ ಮೂರು ಪುರಾಣಗಳು
- ವ ಕಾರದಿಂದ ನಾಲ್ಕು ಪುರಾಣಗಳು
- ಅ ಕಾರದಿಂದ ಒಂದು
- ನ ಕಾರದಿಂದ ಒಂದು
- ಪ ಕಾರದಿಂದ ಒಂದು
- ಲಿಂ ಕಾರದಿಂದ ಒಂದು
- ಗ ಕಾರದಿಂದ ಒಂದು
- ಕೂ ಕಾರದಿಂದ ಒಂದು
-ಸ್ಕಾ ಕಾರದಿಂದ ಒಂದು ಒಟ್ಟು ಹದಿನೆಂಟು ಪುರಾಣಗಳಿವೆ.
೧ ಮತ್ಸ್ಯ ಪುರಾಣ
೨ ಮಾರ್ಕಂಡೇಯ ಪುರಾಣ
೩ ಭಾಗವತ ಪುರಾಣ
೪ ಭವಿಷ್ಯತ್ ಪುರಾಣ
೫ ಬ್ರಹ್ಮ ಪುರಾಣ
೬ ಬ್ರಹ್ಮಾಂಡ ಪುರಾಣ
೭ ಬ್ರಹ್ಮ ವೈವರ್ತ ಪುರಾಣ
೮ ವರಾಹ ಪುರಾಣ
೯ ವಾಮನ ಪುರಾಣ
೧೦ ವಾಯು ಪುರಾಣ
೧೧ ವಿಷ್ಣು ಪುರಾಣ
೧೨ ಅಗ್ನಿ ಪುರಾಣ
೧೩ ನಾರದ ಪುರಾಣ
೧೪ ಪದ್ಮ ಪುರಾಣ
೧೫ ಲಿಂಗ ಪುರಾಣ
೧೬ ಗರುಡ ಪುರಾಣ
೧೭ ಕೂರ್ಮ ಪುರಾಣ
೧೮ ಸ್ಕಂದ ಪುರಾಣ
೧ ಮತ್ಸ್ಯ ಪುರಾಣ
ಈ ಮತ್ಸ್ಯ ಪುರಾಣದಲ್ಲಿ ೧೪೦೦೦ ಶ್ಲೋಕಗಳಿವೆ. ಪುರಾಣಗಳಲ್ಲಿ ಅತೀ ಪ್ರಾಚೀನವಾದುದು ಎಂದು ಕೆಲವು ವಿದ್ವಾಂಸರುಗಳ ಅಭಿಪ್ರಾಯ. ಇದರಲ್ಲಿ ಮಹಾವಿಷ್ಣುವಿನ ಪ್ರಥಮ ಅವತಾರವಾದ ಮತ್ಸ್ಯಾವತಾರ ಧರಿಸಿದ ಶ್ರೀಮನ್ನಾರಾಯಣನು ಈ ಪುರಾಣವನ್ನು ಮನುವಿಗೆ ಬೋಧಿಸಿದ್ದಾನೆ. ಸಾವಿತ್ರಿ ಚರಿತ್ರೆ, ಕಾರ್ತಿಕೇಯ ಚರಿತ್ರೆ, ಯಯಾತಿ ಚರಿತ್ರೆ ಮತ್ತು ಮಾನವ ಧರ್ಮಾಚರಣೆಯ ವಿಷಯಗಳು ವಾರಣಾಸಿ ಪ್ರಯಾಗ, ತ್ರಿಪುರದಹನ ಮುಂತಾದ ಕ್ಷೇತ್ರ ವಿವರಗಳು ಈ ಪುರಾಣದಲ್ಲಿವೆ.
೨ ಮಾರ್ಕಂಡೇಯ ಪುರಾಣ
ಈ ಪುರಾಣದಲ್ಲಿ ೯೦೦೦ ಶ್ಲೋಕಗಳಿವೆ. ಇದು ಜೈಮಿನಿ ಹಾಗೂ ಮಾರ್ಕಂಡೇಯ ಮುನಿಗಳ ನಡುವಿನ ಸಂಭಾಷಣೆಯ ರೂಪದಲ್ಲಿದೆ. ಮಾರ್ಕಂಡೇಯ ಮಹಾಮುನಿಗಳಿಂದ ವಿವರಿಸಲ್ಪಟ್ಟ ಪುರಾಣವಿದು. ಇದರಲ್ಲಿ ಜಗತ್ತಿನ ಸೃಷ್ಟಿ, ಅಗ್ನಿ, ಸೂರ್ಯ, ಬ್ರಹ್ಮಾದಿ ದೇವತೆಗಳ ಸ್ತುತಿ ಇವೆ. ಶಿವ ವಿಷ್ಣುಗಳ ಮಹಾತ್ಮೆಗಳು ಮತ್ತು ಇಂದ್ರ, ಅಗ್ನಿ ಸೂರ್ಯರ ಮಹಿಮೆಗಳು ಮತ್ತು ಇದರ ಮುಖ್ಯ ಭಾಗವಾಗಿ ಸುಪ್ರಸಿದ್ಧ ಸಪ್ತಶತಿ ಎಂಬ ದೇವಿ ಮಹಾತ್ಮೆ ಮುಂತಾದ ವಿಷಯಗಳಿವೆ. ಈಗ ನಾವು ಮಾಡುತ್ತಿರುವ ಚಂಡಿಯಾಗ, ಶತ ಚಂಡಿಕಾ ಹೋಮ, ಸಹಸ್ರ ಚಂಡಿಯಾಗ ಮುಂತಾದ ಯಾಗಗಳಿಗೆ ಮಾರ್ಕಂಡೇಯ ಪುರಾಣವೇ ಆಧಾರವಾಗಿದೆ.
೩ ಭಾಗವತ ಪುರಾಣ
ಈ ಮಹಾ ಪುರಾಣದಲ್ಲಿ ೧೮೦೦೦ ಶ್ಲೋಕಗಳಿವೆ. ಈ ಪುರಾಣವನ್ನು ವ್ಯಾಸ ಮಹರ್ಷಿಗಳು ಶುಕಮಹರ್ಷಿಗೆ ಬೋಧಿಸಿದ್ದಾರೆ. ಹದಿನೆಂಟು ಪುರಾಣಗಳಲ್ಲೇ ಬಹಳ ಪ್ರಸಿದ್ಧವಾಗಿದೆ. ಇದರಲ್ಲಿ ವೇದ ವೇದಾಂತಗಳ ಸರ್ವಸ್ವವೂ ಅಡಗಿದೆ. ಜ್ಞಾನ ಹಾಗೂ ಭಕ್ತಿ ಎರಡೂ ವಿಚಾರಗಳೂ ಭಾಗವತದಲ್ಲಿ ಸಮರ್ಥವಾಗಿ ಮೂಡಿ ಬಂದಿದೆ. ಶುಕ ಮಹರ್ಷಿಗಳು ಪರೀಕ್ಷಿತ್ ಮಹಾರಾಜ (ಅಭಿಮನ್ಯುಮಗ ) ನಿಗೆ ಬೋಧಿಸಿದ್ದಾರೆ. ಈ ಭಾಗವತ ಪುರಾಣದಲ್ಲಿ ಹನ್ನೆರಡು ಸ್ಕಂದಗಳಿವೆ. ಶ್ರೀಮನ್ನಾರಾಯಣನ ದಶಾವತಾರ ಕಥೆಗಳು ಈ ಪುರಾಣದಲ್ಲಿವೆ. ರಾಮಾಯಣ ಮಹಾಭಾರತಗಳಿಗಿರುವ ಪ್ರಾಶಸ್ತ್ಯವೇ ಈ ಭಾಗವತ ಪುರಾಣಕ್ಕಿದೆ. ವಿಷ್ಣು ಭಕ್ತರಿಗೆ ಈ ಪುರಾಣ ಅಮೃತ ಸಮಾನವಾಗಿದೆ.
೪ ಭವಿಷ್ಯತ್ ಪುರಾಣ
ಈ ಪುರಾಣದಲ್ಲಿ ೧೪೫೦೦ ಶ್ಲೋಕಗಳಿವೆ. ಮನು ಬ್ರಹ್ಮ ನಿಗೆ ಸೂರ್ಯ ದೇವನು ಈ ಪುರಾಣವನ್ನು ಬೋಧಿಸಿದ್ದಾನೆ. ಈ ಪುರಾಣದಲ್ಲಿ ಸೂರ್ಯದೇವೋಪಾಸನೆ ಅಗ್ನಿದೇವೋಪಾಸನೆ ಮತ್ತು ಚತುರ್ವಿಧ ವರ್ಣಾಶ್ರಮ ಧರ್ಮಗಳು ತಿಳಿಸಲಾಗಿದೆ. ಮುಖ್ಯವಾಗಿ ಭವಿಷ್ಯತ್ ಕಾಲದಲ್ಲಿ ನಡೆಯಲಿರುವ ಅನೇಕ ಆಶ್ಚರ್ಯಕರ ವಿಷಯಗಳು ಈ ಪುರಾಣದಲ್ಲಿ ನಿಕ್ಷಿಪ್ತವಾಗಿವೆ.
೫ ಬ್ರಹ್ಮ ಪುರಾಣ
ಈ ಪುರಾಣದಲ್ಲಿ ೧೦,೦೦೦ ಶ್ಲೋಕಗಳಿವೆ. ಈ ಪುರಾಣವನ್ನು ಆದಿ ಪುರಾಣವೆಂದು ಸೂರ್ಯ ಪುರಾಣವೆಂದು ಕರೆಯುವ ರೂಢಿ ಇದೆ. ಇದರಲ್ಲಿ ಎರಡು ಭಾಗಗಳಿವೆ. ಪೂರ್ವ ಭಾಗದಲ್ಲಿ ಬ್ರಹ್ಮಾಂಡದ ರಚನೆಯ ಬಗ್ಗೆ ಮಾಹಿತಿ ಇದೆ. ಎರಡನೇ ಭಾಗವಾದ ಉತ್ತರ ಭಾಗದಲ್ಲಿ ರಾಮ ಹಾಗೂ ಕೃಷ್ಣರ ಕಥೆಗಳು ಬರುತ್ತವೆ. ಬ್ರಹ್ಮ ದೇವರು ಈ ಪುರಾಣವನ್ನು ದಕ್ಷ ಬ್ರಹ್ಮ ( ಪಾರ್ವತಿಯ ತಂದೆ) ನಿಗೆ ಬೋಧಿಸಿದ್ದಾನೆ ಈ ಪುರಾಣದಲ್ಲಿ ಕೃಷ್ಣ ಮಾರ್ಕಂಡೇಯ ಕಶ್ಯಪರ ಚರಿತ್ರೆಗಳು ವರ್ಣಾಶ್ರಮ ಧರ್ಮದ ವಿಷಯಗಳು ಧರ್ಮ ಮಾರ್ಗದ ವಿಷಯಗಳು ಸ್ವರ್ಗ ನರಕಲೋಕದ ವಿಷಯಗಳು ಈ ಪುರಾಣದಲ್ಲಿವೆ.
೬ ಬ್ರಹ್ಮಾಂಡ ಪುರಾಣ
ಈ ಪುರಾಣದಲ್ಲಿ ೧೨,೦೦೦ ಶ್ಲೋಕಗಳಿವೆ. ಮರೀಚಿ ಮಹರ್ಷಿ ಸೃಷ್ಟಿಕರ್ತ ಬ್ರಹ್ಮನಿಗೆ ಬೋಧಿಸಿದ ಪುರಾಣವಿದು. ಈ ಪುರಾಣದಲ್ಲಿ ರಾಧಾಕೃಷ್ಣ ವೃತ್ತಾಂತಗಳು, ರಾಮ ಪರಶುರಾಮ ಚರಿತ್ರೆಗಳು, ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರ, ಶಿವ ಸ್ತೋತ್ರ, ಕೃಷ್ಣ ಸ್ತೋತ್ರ, ಗಂಧರ್ವ ಶಾಸ್ತ್ರ ಖಗೋಳ ಶಾಸ್ತ್ರ, ಪಾಪ ಪುಣ್ಯಗಳ ವಿವರಣೆಗಳು ಈ ಪುರಾಣದಲ್ಲಿವೆ.
೭ ಬ್ರಹ್ಮ ವೈವರ್ತ ಪುರಾಣ
ಈ ಪುರಾಣದಲ್ಲಿ ೧೮,೦೦೦ ಶ್ಲೋಕಗಳಿವೆ. ಇದು ನಾಲ್ಕು ಭಾಗಗಳಲ್ಲಿ ಇದೆ. ಮೊದಲನೆಯ ಭಾಗದಲ್ಲಿ ಪ್ರಕೃತಿಯ ಸೃಷ್ಟಿಯ ಬಗ್ಗೆ, ಎರಡನೇ ಭಾಗದಲ್ಲಿ ಪ್ರಕೃತಿಯ ಭಾಗವಾದ ಸ್ತ್ರೀ ದೇವತೆಗಳ ಬಗ್ಗೆ, ಮೂರನೆಯ ಭಾಗದಲ್ಲಿ ಗಣೇಶ, ಪಾರ್ವತಿ, ಶಿವ ಮುಂತಾದವರ ಬಗ್ಗೆ, ನಾಲ್ಕನೇ ಭಾಗದಲ್ಲಿ ಕೃಷ್ಣನ ಜನ್ಮ ವೃತ್ತಾಂತದ ಬಗ್ಗೆ ವಿವರಗಳಿವೆ. ಸಾವರ್ಣೀ ಬ್ರಹ್ಮನಿಂದ ನಾರದ ಮಹರ್ಷಿಗಳಿಗೆ ಉಪದೇಶ ಮಾಡಿರುವ ಪುರಾಣವಿದು. ಸ್ಕಂದ ಗಣೇಶ ರುದ್ರ ಕೃಷ್ಣ ವೈಭವಗಳು ದುರ್ಗಾ ಲಕ್ಷ್ಮಿ ಸರಸ್ವತಿ ಸಾವಿತ್ರಿ ರಾಧ ಮುಂತಾದವರ ಚರಿತ್ರೆಗಳು ಈ ಪುರಾಣದಲ್ಲಿವೆ. ಪಂಚ ಶಕ್ತಿಗಳ ( ಪೃಥ್ವಿ ಅಪ್ ತೇಜೋ ವಾಯು ಆಕಾಶಗಳು ) ಪ್ರಭಾವ ಮತ್ತು ಸೃಷ್ಟಿಗೆ ಕಾರಣವಾದ ಭೌತಿಕ ಜಗತ್ತು ಮುಂತಾದ ವಿಷಯಗಳು ಈ ಪುರಾಣದಲ್ಲಿವೆ.
೮ ವರಾಹ ಪುರಾಣ
ಈ ಪುರಾಣದಲ್ಲಿ ೨೪,೦೦೦ ಶ್ಲೋಕಗಳಿವೆ.
ವರಹಾವತಾರ ಧರಿಸಿ ಶ್ರೀ ವಿಷ್ಣು ಭೂದೇವಿಗೆ ಬೋಧಿಸಿದ ಪುರಾಣವಿದು. ನಾರಾಯಣ ಉಪಾಸನಾ ವಿಧಾನ ಮತ್ತು ಪಾರ್ವತಿ ಪರಮೇಶ್ವರರ ಚರಿತ್ರೆಗಳು, ಧರ್ಮಶಾಸ್ತ್ರ ಮತ್ತು ವ್ರತಕಲ್ಪಗಳು ಪುಣ್ಯ ಕ್ಷೇತ್ರಗಳ ವಿವರಣೆಗಳು ಈ ಪುರಾಣದಲ್ಲಿವೆ.
೯ ವಾಮನ ಪುರಾಣ
ಈ ಪುರಾಣದಲ್ಲಿ ೧೦,೦೦೦ ಶ್ಲೋಕಗಳಿವೆ.
ಪುಲಸ್ತ್ಯ ಋಷಿ ನಾರದರಿಗೆ ಉಪದೇಶ ಮಾಡಿದ ಪುರಾಣವಿದು. ಶಿವಲಿಂಗೋಪಾಸನೆ, ಶಿವಪಾರ್ವತಿಯರ ಕಲ್ಯಾಣ, ಶಿವ ಚರಿತ್ರೆ, ಗಣೇಶ್ವರ ಚರಿತ್ರೆ, ಕಾರ್ತಿಕೇಯ ಚರಿತ್ರೆ, ಭೂಗೋಳ ಚರಿತ್ರೆ ಋತು ವಿಶೇಷಗಳು ಈ ಪುರಾಣದಲ್ಲಿವೆ. ವಿಷ್ಣುವಿನ ವಾಮನ ಅವತಾರದ ಕಥೆಗಳು, ಸಾತ್ವಿಕನ ಗುಣ ಲಕ್ಷಣಗಳು, ದಾನದ ಮಹತ್ವ ಮುಂತಾದ ವಿಚಾರಗಳನ್ನು ಇದರಲ್ಲಿ ವಿವರಿಸಲಾಗಿದೆ.
೧೦. ವಾಯು ಪುರಾಣ
ಈ ಪುರಾಣದಲ್ಲಿ ೨೪,೦೦೦ ಶ್ಲೋಕಗಳಿವೆ. ಮಹಾ ಶಕ್ತಿಶಾಲಿಯಾದ ವಾಯುದೇವನಿಂದ ಹೇಳಲಾಗಿರುವುದರಿಂದ ಈ ಪುರಾಣಕ್ಕೆ ವಾಯು ಪುರಾಣವೆಂದು ಹೆಸರು ಬಂದಿದೆ. ಮಹೇಶ್ವರನ ಮಹಾತ್ಮೆ, ಕಾಲಮಾನ ವಿವರಣೆ ಮತ್ತು ಭೂಮಂಡಲ ಸೌರಮಂಡಲ ವಿಶೇಷಗಳು ರಹಸ್ಯಗಳು ಈ ಪುರಾಣದಲ್ಲಿವೆ. ಜಗತ್ತನ್ನು ಏಳು ದ್ವೀಪಗಳ ವಿಭಾಗ ಮಾಡಿ ಅದರ ವಿವರ, ಬೇರೆಬೇರೆ ಖಂಡಗಳಲ್ಲಿರುವ ಜನರ ಜೀವನ ವಿಚಾರ, ಏಳು ಲೋಕಗಳ ವಿವರ, ನಾಲ್ಕು ಯುಗಗಳ ವಿಚಾರ, ಸಂಗೀತ ವಿದ್ಯೆ, ವೇದ ವಿದ್ಯೆ, ವಿವಿಧ ವರ್ಣಾಶ್ರಮ ಧರ್ಮಗಳ ಕರ್ತವ್ಯ ಜವಾಬ್ದಾರಿಗಳ ವಿವರ ಇತ್ಯಾದಿ ಇದರಲ್ಲಿ ಅಡಕವಾಗಿವೆ.
೧೧ ವಿಷ್ಣು ಪುರಾಣ
ಈ ಪುರಾಣದಲ್ಲಿ ೨೩,೦೦೦ ಶ್ಲೋಕಗಳಿವೆ. ಪರಾಶರ ಮಹರ್ಷಿ (ವ್ಯಾಸರ ತಂದೆ) ತನ್ನ ಶಿಷ್ಯನಾದ ಮೈತ್ರೇಯ ಮುನಿಗೆ ಬೋಧಿಸಿದ ಪುರಾಣವಿದು. ಶ್ರೀ ಮಹಾವಿಷ್ಣುವಿನ ಮಹಾತ್ಮೆಯ ಬಗ್ಗೆ ವಿಸ್ತಾರವಾಗಿ ವಿವರಿಸಲಾಗಿದೆ. ಶ್ರೀ ಕೃಷ್ಣ ಧೃವ ಪ್ರಹ್ಲಾದ ಭರತರಾಜನ ಚರಿತ್ರೆಗಳು ಈ ಪುರಾಣದಲ್ಲಿವೆ.
೧೨ ಅಗ್ನಿ ಪುರಾಣ
ಈ ಪುರಾಣದಲ್ಲಿ ೧೫,೪೦೦ ಶ್ಲೋಕಗಳಿವೆ. ಅಗ್ನಿದೇವರಿಂದ ವಶಿಷ್ಠ ಮಹರ್ಷಿಗಳಿಗೆ ಈ ಪುರಾಣವನ್ನು ಬೋಧಿಸಲಾಗಿದೆ. ವೇದಗಳಲ್ಲಿ ಹೇಳಲಾಗಿರುವ ಅಗ್ನಿದೇವತೆಯ ಕುರಿತಾದ ಕಾವ್ಯ, ನಾಟಕಗಳ ಲಕ್ಷಣಗಳು, ರಸ ವರ್ಣನೆಗಳು, ಮಂತ್ರ ಮತ್ತು ಮಂತ್ರ ವಿಧಾನಗಳು, ರಾಜಧರ್ಮ ಮುಂತಾದ ವಿಚಾರಗಳು ಹೇಳಲ್ಪಟ್ಟಿದೆ. ಇದರಲ್ಲಿ ಶಿವ ಗಣೇಶ ದುರ್ಗಾ ಉಪಾಸನಾ ವಿಷಯಗಳಿವೆ ಮತ್ತು ವ್ಯಾಕರಣ ಛಂದಸ್ಸು ಜ್ಯೋತಿಷ್ಯ ಆಯುರ್ವೇದ ರಾಜಕೀಯ ಲೌಕಿಕ ಭೂಗೋಳ ಖಗೋಳ ವಿಷಯಗಳನ್ನು ವಿಶದೀಕರಿಸಲಾಗಿದೆ. ಧರ್ಮಶಾಸ್ತ್ರ, ಆಯುರ್ವೇದ, ಅಲಂಕಾರ, ಛಂದಸ್ಸು ಮುಂತಾದ ಅನೇಕ ವಿಷಯಗಳನ್ನು ಒಳಗೊಂಡಿದೆ.
೧೩ ನಾರದ ಪುರಾಣ
ಈ ಪುರಾಣದಲ್ಲಿ ೨೫,೦೦೦ ಶ್ಲೋಕಗಳಿವೆ. ಬ್ರಹ್ಮ ಮಾನಸ ಪುತ್ರರಾಗಿರುವ ಸನಕ, ಸನಂದನ , ಸನತ್ಕುಮಾರ, ಸನಾತನ ಎಂಬ ನಾಲ್ಕು ಜನರಿಗೆ ನಾರದ ಮಹರ್ಷಿಗಳು ಬೋಧಿಸಿದ ಪುರಾಣವಿದು. ಅತೀ ಪವಿತ್ರ ಪ್ರಸಿದ್ದವಾದ ವೇದ ಪಾದಸ್ತವಂ ( ಶಿವ ಸ್ತೋತ್ರ) ಈ ಪುರಾಣದಲ್ಲಿದೆ. ವೇದಾಂಗ ವಿಷಯಗಳು ವ್ರತ, ನಿಯಮ ವಿಷಯಗಳು ಪುಣ್ಯ ಕ್ಷೇತ್ರ ಮಹಿಮೆಗಳು ಈ ಪುರಾಣದಲ್ಲಿವೆ.
೧೪ ಸ್ಕಂದ ಪುರಾಣ
ಹದಿನೆಂಟು ಪುರಾಣಗಳಲ್ಲಿ ಈ ಪುರಾಣವೇ ವಿಸ್ತೃತವಾಗಿದೆ. ಸ್ಕಂದ ಪುರಾಣದಲ್ಲಿ ೮೧,೦೦೦ ಶ್ಲೋಕಗಳಿವೆ. ಪರಮೇಶ್ವರನ ಕುಮಾರನಾದ ಸುಬ್ರಹ್ಮಣ್ಯ ಸ್ವಾಮಿಯ ಜೀವನ ಲೀಲೆಗಳ ಕುರಿತಾದ ವಿವರಣೆಯೇ ಈ ಪುರಾಣದಲ್ಲಿವೆ. ಈ ಪುರಾಣದೊಳಗೆ ಕಾಶೀಖಂಡ, ಕೇದಾರಖಂಡ, ರೇವಖಂಡ, ವೈಷ್ಣವಖಂಡ, ಉತ್ಕಳಖಂಡ, ಕುಮಾರಿಕಾಖಂಡ, ಬ್ರಹ್ಮ ಖಂಡ, ಬ್ರಹ್ಮೋತ್ತರಖಂಡ, ಅವಂತಿಕಾಖಂಡ ಮುಂತಾದ ಖಂಡಗಳಿವೆ. ಅನೇಕಾನೇಕ ವಿಷಯಗಳು ಸ್ಕಂದ ಪುರಾಣದಲ್ಲಿವೆ. ಅಷ್ಟಾದಶ ಪುರಾಣಗಳಲ್ಲಿ ಈ ಪುರಾಣಕ್ಕೆ ಪ್ರತ್ಯೇಕ ಪ್ರಾಮುಖ್ಯತೆಯಿದೆ. ವೆಂಕಟಾಚಲ ಮಹಾತ್ಮ (ತಿರುಮಲ ) ವೈಷ್ಣವ ಖಂಡದಲ್ಲಿದೆ. ಜಗನ್ನಾಥ ಕ್ಷೇತ್ರದ ಬಗ್ಗೆ ಉತ್ಕಳ ಖಂಡದಲ್ಲಿದೆ ಅರುಣಾಚಲದ ಬಗ್ಗೆ ಕುಮಾರಿಕಾ ಖಂಜದಲ್ಲಿದೆ ಸತ್ಯ ನಾರಾಯಣ ಸ್ವಾಮಿಯ ಬಗ್ಗೆ ರೇವಾ ಖಾಂಡದಲ್ಲಿದೆ.
೧೫ ಲಿಂಗ ಪುರಾಣ
ಲಿಂಗ ಪುರಾಣದಲ್ಲಿ ಶಿವದೇವನ ಉಪದೇಶಗಳು, ಮಹಾತ್ಮೆ, ಲೀಲೆಗಳು, ಲಿಂಗದ ಮಹಿಮೆ ಮುಂತಾದವುಗಳು ಈ ಪುರಾಣದ ಮುಖ್ಯ ವಸ್ತು. ಲಿಂಗ ರೂಪದ ಶಿವನ ಮಹಿಮೆ ಆರಾಧನೆ ವ್ರತಗಳು ಈ ಪುರಾಣದಲ್ಲಿವೆ. ಲಿಂಗದಿಂದ ಉಂಟಾಗಿರುವ ಸೃಷ್ಟಿ ಸ್ಥಿತಿ ಲಯ ರೂಪಗಳಾದ ಭಗವಂತನ ಲೀಲೆಗಳು, ನೀತಿ ಬೋಧೆಗಳು, ಖಗೋಳ ಜ್ಯೋತಿಷ್ಯ ಶಾಸ್ತ್ರಗಳು ಸಹ ಈ ಪುರಾಣದಲ್ಲಿವೆ.
೧೬ ಗರುಡ ಪುರಾಣ
ಈ ಪುರಾಣದಲ್ಲಿ ೧೯,೦೦೦ ಶ್ಲೋಕಗಳಿವೆ. ಈ ಪುರಾಣವನ್ನು ಶ್ರೀ ಮಹಾವಿಷ್ಣು ಗರುಡನಿಗೆ ಉಪದೇಶ ಮಾಡಿದ್ದಾನೆ. ಜನನ ಮರಣದ ವಿಷಯಗಳು ಮತ್ತು ಮರಣದ ನಂತರ ಮನುಷ್ಯನಿಗೆ ಸಿಗುವ ಸ್ವರ್ಗ ನರಕಗಳು ನರಕ ಲೋಕದಲ್ಲಿ ಯಾವ ಯಾವ ತಪ್ಪು ಮಾಡಿದವರಿಗೆ ಯಾವ ಯಾವ ಶಿಕ್ಷೆಗಳನ್ನು ವಿಧಿಸುತ್ತಾರೆಂಬುದು ಈ ಪುರಾಣದಲ್ಲಿ ತಿಳಿಯಬಹುದು.
೧೭ ಕೂರ್ಮ ಪುರಾಣ
ಈ ಪುರಾಣದಲ್ಲಿ ೧೭,೦೦೦ ಶ್ಲೋಕಗಳಿವೆ. ಕೂರ್ಮಾವತಾರ ವರಾಹ ನರಸಿಂಹ ಅವತಾರ ವಿಷಯಗಳು ಲಿಂಗರೂಪದಲ್ಲಿ ಶಿವನನ್ನು ಪೂಜಿಸುವ ವಿಷಯ ಖಗೋಳ ಭೂಗೋಳ ವಿಷಯಗಳು ಕಾಶಿ ಪ್ರಯಾಗಾದಿ ಪುಣ್ಯ ಕ್ಷೇತ್ರ ಮಹಿಮೆಗಳು ಈ ಪುರಾಣದಲ್ಲಿವೆ.
೧೮ ಪದ್ಮ ಪುರಾಣ
ಈ ಮಹಾ ಪುರಾಣದಲ್ಲಿ ೮೫,೦೦೦ ಶ್ಲೋಕಗಳಿವೆ. ಪದ್ಮ ಪುರಾಣವನ್ನು ಓದಿದರೂ ಕೇಳಿದರೂ ಅನೇಕ ಜನ್ಮಗಳ ಪಾಪಗಳು ನಾಶವಾಗುತ್ತವೆ ಎಂದು ಹಿರಿಯರು ಹೇಳುತ್ತಾರೆ. ಹದಿನೆಂಟು ಪುರಾಣಗಳಲ್ಲಿ ಪದ್ಮಪುರಾಣವೇ ದೊಡ್ಡದು. ಪದ್ಮ ಪುರಾಣದಲ್ಲಿ ಐದು ಕಾಂಡಗಳಿವೆ. ಪ್ರಥಮ ಸೃಷ್ಟಿ ಕಾಂಡದಲ್ಲಿ ಭೀಷ್ಮ ಹಾಗೂ ಮುನಿ ಪುಲಸ್ಯರ ನಡುವಿನ ಸಂಭಾಷಣೆ ಇವೆ. ಇದರಲ್ಲಿ ಗ್ರಹಗಳ ಬಗ್ಗೆ, ಪುಷ್ಕರದ ಬಗ್ಗೆ ವಿವರಗಳಿವೆ. ಎರಡನೆಯ ಭೂಮಿ ಕಾಂಡದಲ್ಲಿ ಪೃಥ್ವಿಯ ಬಗ್ಗೆ ವಿವರಗಳಿವೆ. ಇದು ಆ ಕಾಲದ ಭೌಗೋಳಿಕ ಮಾಹಿತಿಯನ್ನು ನೀಡುತ್ತವೆ. ಮೂರನೆಯ ಸ್ವರ್ಗ ಕಾಂಡದಲ್ಲಿ ಅಂತರಿಕ್ಷ ಹಾಗೂ ಜಂಬೂದ್ವೀಪದ ಬಗ್ಗೆ ವಿವರಗಳಿವೆ. ನಾಲ್ಕನೆಯ ಪಾತಾಳ ಕಾಂಡದಲ್ಲಿ ರಾಮ ಹಾಗೂ ಕೃಷ್ಣರ ಬಗ್ಗೆ ವಿವರಗಳಿವೆ. ಕೊನೆಯ ಉತ್ತರ ಕಾಂಡದಲ್ಲಿ ಶಿವ ಹಾಗೂ ಪಾರ್ವತಿಯವರ ನಡುವಿನ ಸಂಭಾಷಣೆಯ ರೂಪದಲ್ಲಿ ಧರ್ಮದ ವಿವಿಧ ವಿಷಯಗಳ ಬಗ್ಗೆ ಮಾಹಿತಿಗಳಿವೆ.