ಧಾರ್ಮಿಕ ಕಾರ್ಯಗಳಲ್ಲಿ ದಿಕ್ಕುಗಳಿಗಿದೆ ಬಹಳ ಮಹತ್ವ : ಇದರಿಂದ ಇದೆ ಪ್ರಯೋಜನ
ಸನಾತನ ಹಿಂದೂ ಧರ್ಮದಲ್ಲಿ ಬಹುತೇಕ ಆಚರಣೆಗಳು, ಸಂಪ್ರದಾಯಗಳು ಪ್ರಕೃತಿ, ಖಗೋಳದೊಂದಿಗೆ ಬೆಸೆದುಕೊಂಡಿವೆ. ಈ ಪೂಜಾ ವಿಧಿ, ಧಾರ್ಮಿಕ ಕೈಂಕರ್ಯಗಳಿಗೆ ಅದರದ್ದೇ ಆದ ನಿಯಮಾವಳಿಗೂ ಇವೆ. ಅಂತೆಯೇ, ದಿಕ್ಕುಗಳಿಗೆ ಸಂಬಂಧಿಸಿದಂತೆಯೂ ಸಾಕಷ್ಟು ನಂಬಿಕೆ, ನಿಯಮಗಳನ್ನು ಶ್ರದ್ಧೆ ಭಕ್ತಿಯಿಂದ ಪಾಲಿಸಿಕೊಂಡು ಬರಲಾಗುತ್ತದೆ. ನಿರ್ದಿಷ್ಟ ದಿಕ್ಕಿನಲ್ಲಿ ಒಂದಷ್ಟು ಧಾರ್ಮಿಕ ಕಾರ್ಯಗಳನ್ನು ಮಾಡಬೇಕು ಎಂಬ ನಿಯಮವಿದೆ. ಹೀಗೆ ಮಾಡಿದರೆ ಮಾತ್ರ ಅದರ ಶುಭ ಫಲ ಸಿಗುತ್ತದೆ ಎಂಬುದು ನಂಬಿಕೆ.
ದಶ ದಿಕ್ಕುಗಳು ಇವೆ. ಅಂದರೆ, ನಾಲ್ಕು ಮುಖ್ಯ ದಿಕ್ಕುಗಳು, ನಾಲ್ಕು ಉಪ ದಿಕ್ಕುಗಳು ಮತ್ತು ಊರ್ಧ್ವ ಹಾಗೂ ಅಧೋ ಹೀಗೆ ಒಟ್ಟು ಹತ್ತು ದಿಕ್ಕುಗಳನ್ನು ನಾವು ಕಾಣಬಹುದು. ಎಂಟು ದಿಕ್ಕುಗಳಿಗೆ ಎಂಟು ದಿಕ್ಪಾಲಕರೂ ಇದ್ದಾರೆ ಎಂಬುದು ನಂಬಿಕೆ.
ದಿಕ್ಕುಗಳು ಮತ್ತು ದಿಕ್ಪಾಲಕರು
೧. ಪೂರ್ವ – ಇಂದ್ರ
೨. ಆಗ್ನೇಯ – ಅಗ್ನಿ
೩. ದಕ್ಷಿಣ – ಯಮ
೪. ನೈಋುತ್ಯ – ನಿಋುರುತಿ
೫. ಪಶ್ಚಿಮ – ವರುಣ
೬. ವಾಯುವ್ಯ – ವಾಯು
೭.ಉತ್ತರ – ಕುಬೇರ
೮. ಈಶಾನ್ಯ- ಶಿವ / ಈಶಾನ
೯. ಊಧ್ರ್ವ – ಎಂದರೆ ಆಕಾಶ – ಅನಂತ
೧೦. ಅಧೋ – ಎಂದರೆ ಭೂಮಿ – ಬ್ರಹ್ಮ
ಈ ಒಂದೊಂದು ದಿಕ್ಕಿಗೂ ಅದರದ್ದೇ ಆದ ಮಹತ್ವವಿದೆ. ಶಾಸ್ತ್ರದಲ್ಲಿ ಈ ದಿಕ್ಕುಗಳಿಗೆ ಅನುಗುಣವಾಗಿ ಪೂಜೆ ಮಾಡಲು ಹೇಳಲಾಗಿದೆ. ದೇವತೆಗಳ ಪೂಜೆಯನ್ನು ಪೂರ್ವ ದಿಕ್ಕಿನಲ್ಲಿ ಮಾಡಬೇಕು ಮತ್ತು ಪೂರ್ವಿಕರಿಗೆ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಪೂಜೆ ಮಾಡಬೇಕು ಎಂಬ ನಿಯಮವಿದೆ. ಧಾರ್ಮಿಕ ನಂಬಿಕೆಯೊಂದಿಗೆ ಇದರ ಹಿಂದೆ ವೈಜ್ಞಾನಿಕ ಕಾರಣ ಕೂಡಾ ಇದೆ. ವಿದ್ವಾಂಸರ ಪ್ರಕಾರ, ಪೂರ್ವ-ಪಶ್ಚಿಮ ದಿಕ್ಕುಗಳು ಸೂರ್ಯನ ಆಕರ್ಷಣೆಗೆ ಸಂಬಂಧಿಸಿವೆ. ಉತ್ತರ-ದಕ್ಷಿಣ ದಿಕ್ಕು ಧ್ರುವಗಳ ಕಾಂತೀಯ ಆಕರ್ಷಣೆಗೆ ಸಂಬಂಧಿಸಿದೆ. ಅಂತೆಯೇ, ದೇವರ ಪೂಜಾ ಕೈಂಕರ್ಯಗಳಿಗೆ ಪೂರ್ವ ದಿಕ್ಕನ್ನು ನಿಗದಿಪಡಿಸಲಾಗಿದೆ. ಬ್ರಹ್ಮಮುಹೂರ್ತದಿಂದ ಮಧ್ಯಾಹ್ನದ ತನಕ ಸೂರ್ಯನ ಆಕರ್ಷಣೆಯಿಂದಾಗಿ ಜ್ಞಾನದ ತಂತುಗಳು ಸಕ್ರಿಯವಾಗಿರುತ್ತವೆ ಎಂಬುದೇ ಇದರ ಹಿಂದಿನ ಕಾರಣ ಎಂಬುದು ತಿಳಿದವರ ಮಾತು.
ಇನ್ನು, ದಕ್ಷಿಣ ದಿಕ್ಕಿನ ಅಧಿಪತಿ ಯಮಧರ್ಮರಾಯ. ಹೀಗಾಗಿ, ಪೂರ್ವಜರ ಪೂಜೆಗೆ ಸಂಬಂಧಿಸಿದಂತೆ ದಕ್ಷಿಣ ದಿಕ್ಕನ್ನು ನಿಗದಿಪಡಿಸಲಾಗಿದೆ. ಶ್ರಾದ್ಧ ಮಾಡುವವರು ದಕ್ಷಿಣಕ್ಕೆ ಮುಖ ಮಾಡಿರುತ್ತಾರೆ. ಮನೆಯ ಮುಂಬಾಗಿಲು ಕೂಡಾ ದಕ್ಷಿಣ ದಿಕ್ಕಿನಲ್ಲಿ ಇರಬಾರದು ಎನ್ನುತ್ತಾರೆ ಹಿರಿಯರು.
ವಿದ್ಯಾಭ್ಯಾಸ, ಯೋಗ ಸೇರಿದಂತೆ ಜ್ಞಾನಕ್ಕೆ ಸಂಬಂಧಿಸಿದಂತೆ ಉತ್ತರ ದಿಕ್ಕು ಉತ್ತಮ. ಗುರು ದೀಕ್ಷೆ ತೆಗೆದುಕೊಳ್ಳುವಾಗ ಸಾಧಕನು ಪೂರ್ವಕ್ಕೆ ಮತ್ತು ಗುರು ಉತ್ತರಕ್ಕೆ ಮುಖ ಮಾಡಬೇಕು ಎಂಬೆಲ್ಲಾ ನಿಯಮ ಇದೆ. ಮನೆ ಅಥವಾ ಇತರ ಯಾವುದೇ ಕಟ್ಟಡಗಳನ್ನು ಕಟ್ಟುವಾಗಲೂ ಈ ದಿಕ್ಕುಗಳ ಬಗ್ಗೆ ಗಮನ ಹರಿಸಲಾಗುತ್ತದೆ. ಹೀಗೆ ದಿಕ್ಕುಗಳು ಪ್ರತಿಯೊಬ್ಬರ ಬದುಕಿನಲ್ಲೂ ನಂಟು ಹೊಂದಿವೆ. ಈ ದಿಕ್ಕುಗಳಿಗೆ ಅನುಗುಣವಾಗಿಯೇ ಹಿಂದೂ ಧರ್ಮದಲ್ಲಿ ಆಚರಣೆಗಳು, ಪೂಜಾ ವಿಧಿಗಳನ್ನು ನೆರವೇರಿಸಿಕೊಂಡು ಬರಲಾಗುತ್ತದೆ.