ಮಾಘದಲ್ಲಿ ಶ್ರೀಕೃಷ್ಣನನ್ನೇಕೆ ಪೂಜಿಸಬೇಕು..? ಪೂಜೆ ಹೀಗಿರಲಿ..!
ಹಿಂದೂ ಪಂಚಾಂಗದ ಪ್ರಕಾರ ಮಾಘ ಮಾಸವು ಹನ್ನೊಂದನೇ ತಿಂಗಳು. ಈ ಮಾಸದಲ್ಲಿ ಶ್ರೀ ಕೃಷ್ಣನ ‘ಮಾಧವ’ ರೂಪಕ್ಕೆ ಸಂಬಂಧಿಸಿದೆ ಎಂದು ಪರಿಗಣಿಸಲಾಗಿದೆ. ಈ ಮಾಸವನ್ನು ಮೊದಲು ಮಾಧ ಮಾಸವೆಂದು ಕರೆಯಲಾಗುತ್ತಿತ್ತು, ನಂತರ ಅದು ಮಾಘವಾಯಿತು. ಈ ಮಾಸದಲ್ಲಿ ಕೃಷ್ಣನನ್ನು ಪೂಜಿಸುವ ವಿಶೇಷ ಫಲವನ್ನು ಹೇಳಲಾಗಿದೆ. ಈ ಮಾಸದಲ್ಲಿ ಮುರಳೀಧರನ ಆರಾಧನೆಯಿಂದ ಗ್ರಹದೋಷ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆಯಿದೆ. ಈ ಮಾಸದಲ್ಲಿ ಶ್ರಿಕೃಷ್ಣನನ್ನು ಪೂಜಿಸುವುದರಿಂದ ಶ್ರೀಕೃಷ್ಣನ ಅನುಗ್ರಹದಿಂದ ಸಂಪತ್ತು ಮತ್ತು ಸಮೃದ್ಧಿಯ ಆಶೀರ್ವಾದವೂ ದೊರೆಯುತ್ತದೆ. ಮಾಘ ಮಾಸದಲ್ಲಿ ಶ್ರೀಕೃಷ್ಣನನ್ನು ಪೂಜಿಸುವುದು ಹೇಗೆ ಎಂಬುದನ್ನು ತಿಳಿಯೋಣ.
ಶ್ರೀ ಕೃಷ್ಣನನ್ನು ಆರಾಧಿಸುವಾಗ ಈ ನಿಯಮವನ್ನು ನೆನಪಿನಲ್ಲಿಡಿ:
ಮಾಘ ಮಾಸದಲ್ಲಿ ಶ್ರೀ ಕೃಷ್ಣನ ಪಂಚೋಪಚಾರ ಪೂಜೆಯನ್ನು ಮಾಡಬೇಕು. ಇದಕ್ಕಾಗಿ ಭಕ್ತರು ‘ಓಂ ಶ್ರೀನಾಥಾಯ ನಮಃ’ ಎಂಬ ಮಂತ್ರವನ್ನು ಜಪಿಸಬೇಕು. ಈ ಮಂತ್ರವನ್ನು ಭಕ್ತಿಗೆ ಅನುಗುಣವಾಗಿ 11, 21 ಮತ್ತು 51 ಬಾರಿ ಪಠಿಸಬಹುದು. ಆದರೆ ಇದಕ್ಕಾಗಿ ಒಂದು ಸಮಯವನ್ನು ನಿಗದಿಪಡಿಸುವುದು ಬಹಳ ಮುಖ್ಯ. ಅದು ಬೆಳಿಗ್ಗೆ ಅಥವಾ ಸಂಜೆಯಾಗಿರಲಿ, ಆದರೆ ನೀವು ಈ ಮಂತ್ರವನ್ನು ಪಠಿಸಲು ಪ್ರಾರಂಭಿಸುವ ಸಮಯದಲ್ಲಿ, ಕಡ್ಡಾಯವಾಗಿ ಪೂಜೆಯನ್ನು ಮಾಡಿ ನಂತರ ಮಂತ್ರವನ್ನು ಪಠಿಸಬೇಕು. ಈ ಮಂತ್ರದೊಂದಿಗೆ ಪೂಜೆಯನ್ನು ಮಾಡುವುದರಿಂದ ಆ ವ್ಯಕ್ತಿಯು ದೊಡ್ಡ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ.
ಶ್ರೀಕೃಷ್ಣನಿಗೆ ಇದನ್ನು ಅರ್ಪಿಸಿ:
ಶ್ರೀ ಕೃಷ್ಣಪ್ರಿಯ ಶ್ರೀ ರಾಧಾರಾಣಿಯನ್ನು ಮೆಚ್ಚಿಸುವುದು ಸುಲಭ ಎಂದು ನಮಗೆಲ್ಲರಿಗೂ ತಿಳಿದಿದೆ ಆದರೆ ಶ್ರೀಕೃಷ್ಣನನ್ನು ಒಲಿಸಿಕೊಳ್ಳುವುದು ಸ್ವಲ್ಪ ಕಷ್ಟ. ಶ್ರೀ ಕೃಷ್ಣನು ಒಬ್ಬ ವ್ಯಕ್ತಿಗೆ ಅವನ ಕಾರ್ಯಗಳ ಆಧಾರದ ಮೇಲೆ ಮಾತ್ರ ಫಲವನ್ನು ನೀಡುತ್ತಾನೆ ಎಂದು ನಂಬಲಾಗಿದೆ. ಆದರೆ ಮಾಘ ಮಾಸದಲ್ಲಿ ಶ್ರೀ ಕೃಷ್ಣನಿಗೆ 8 ಹಿಡಿ ಕಪ್ಪು ಎಳ್ಳನ್ನು ಅರ್ಪಿಸಿ ನೀರಿನಲ್ಲಿ ತೇಲಿ ಬಿಟ್ಟರೆ ಅಂದರೆ ಹರಿಯುವ ನದಿಯಲ್ಲಿ ಬಿಟ್ಟರೆ ಅವನು ಸಂತುಷ್ಟನಾಗಿ ತನ್ನ ಭಕ್ತರಿಗೆ ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತಾನೆ.
ಕೃಷ್ಣನ ಕೃಪೆಯಿಂದ ಶನಿ ದೇವನು ಶಾಂತನಾಗುತ್ತಾನೆ:
ಶಾಸ್ತ್ರಗಳ ಪ್ರಕಾರ ಮಾಘ ಮಾಸದಲ್ಲಿ ಶ್ರೀಕೃಷ್ಣನನ್ನು ಪೂಜಿಸುವುದರಿಂದ ವಿಶೇಷವಾದ ಫಲವು ಪ್ರಾಪ್ತವಾಗುತ್ತದೆ. ಈ ಮಾಸದಲ್ಲಿ ಕಪ್ಪು ಎಳ್ಳಿನಿಂದ ಕೃಷ್ಣನನ್ನು ಪೂಜಿಸುವುದರಿಂದ ಶನಿಯ ದುಷ್ಪರಿಣಾಮಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ. ಇದಲ್ಲದೇ ಈ ಸಮಯದಲ್ಲಿ ಕಪ್ಪು ಎಳ್ಳಿನಿಂದ ಪಿತೃ ತರ್ಪಣ ಮಾಡಿದರೆ ಪಿತೃದೋಷದಿಂದ ಮುಕ್ತಿ ಸಿಗುತ್ತದೆ.
ಕೃಷ್ಣನಿಗೆ ಲಡ್ಡುಗಳನ್ನು ಅರ್ಪಿಸುವ ಮೂಲಕ ದಾನ ಮಾಡಿ:
ಮಾಘ ಮಾಸದಲ್ಲಿ ಶ್ರೀಕೃಷ್ಣನನ್ನು ಪೂಜಿಸುವಾಗ ಲಡ್ಡುಗಳನ್ನು ಅರ್ಪಿಸಬೇಕು. ವಿದ್ವಾಂಸರ ಪ್ರಕಾರ, ಕೃಷ್ಣನಿಗೆ ಮಾಘ ಮಾಸದಲ್ಲಿ ಲಡ್ಡುಗಳನ್ನು ಅರ್ಪಿಸಿದ ನಂತರ ಅದನ್ನು ಬ್ರಾಹ್ಮಣರಿಗೆ ದಾನ ಮಾಡಬೇಕು. ಹೀಗೆ ಮಾಡುವುದರಿಂದ ವ್ಯಕ್ತಿಯು ಜೀವನದಲ್ಲಿನ ತೊಂದರೆಗಳಿಂದ ಮುಕ್ತಿ ಪಡೆಯುತ್ತಾನೆ. ಆದರೆ ಭೋಗ ನೀಡುವಾಗ ತುಳಸಿ ಎಲೆಗಳನ್ನು ಸೇರಿಸಬೇಕು ಎಂಬುದನ್ನು ನೆನಪಿನಲ್ಲಿಡಿ. ಇಲ್ಲದಿದ್ದರೆ, ಶ್ರೀಕೃಷ್ಣನು ನೀವು ನೀಡಿದ ನೈವೇದ್ಯವನ್ನು ಅಥವಾ ಭೋಗವನ್ನು ಸ್ವೀಕರಿಸುವುದಿಲ್ಲ ಎನ್ನುವ ನಂಬಿಕೆಯಿದೆ.
ಮಾಘ ಮಾಸವು ಭಗವಾನ್ ಶ್ರೀಕೃಷ್ಣನಿಗೆ ಸಮರ್ಪಿತವಾದ ಮಾಸವಾಗಿದೆ. ಈ ಮಾಸದಲ್ಲಿ ಶ್ರೀಕೃಷ್ಣನನ್ನು ಪೂಜಿಸುವುದರಿಂದ ಓರ್ವ ವ್ಯಕ್ತಿಯು ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ಪಡೆದುಕೊಳ್ಳುತ್ತಾನೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!