ಉದ್ಭವ ಲಿಂಗ ಸ್ವರೂಪಿಣಿ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ..!
ಈ ದೇವಸ್ಥಾನ ಉಡುಪಿ ಜಿಲ್ಲೆಯ ಹೊಸಂಗಡಿ, ಸಿದ್ದಾಪುರ, ಕುಂದಾಪುರ ಸಮೀಪದ ಪುಣ್ಯಕ್ಷೇತ್ರ ಕಮಲಶಿಲೆ. ಇದು ಮಲೆನಾಡಿನ ಹಸಿರು ವನಸಿರಿಗಳ ನಡುವೆ ಹರಿವ ‘ಕುಬ್ಜಾ’ ನದಿಯ ತಟದ ಮೇಲಿದೆ. ಇಲ್ಲಿ ಪುರಾಣ ಪ್ರಸಿದ್ಧವಾದ ಶ್ರೀ ಬ್ರಾಹ್ಮಿ ದುರ್ಗಾ ಪರಮೇಶ್ವರಿ ದೇವಸ್ಥಾನವಿದೆ. ಪ್ರಪಂಚದ ಸೃಷ್ಟಿಗೂ ಮೊದಲೇ ಇತ್ತು ಎಂದು ನಂಬಲಾಗಿದೆ. ಇಲ್ಲಿ ದೇವಿಯು ಲಿಂಗ ರೂಪದಲ್ಲಿ ಉದ್ಭವಾದ ಪುರಾಣ ಕಥೆ ಇದೆ. ಹಿಂದೆ ಕರಾಸುರ ಮತ್ತು ರಕ್ತಾಸುರ ಎಂಬ ದೈತ್ಯ ರಾಕ್ಷಸರಿದ್ದು ಋಷಿಮುನಿಗಳಿಗೆ ಪೀಡಕರಾಗಿದ್ದರು. ಕುಬ್ಜಾನದಿ ದಡ ದಲ್ಲಿ ‘ರೈಕ್ವ ಮುನಿ’ ಎಂಬ ಮಹರ್ಷಿಗಳ ಆಶ್ರಮ ಹಾಗೂ ಅನೇಕ ಋಷ್ಶಾ ಶ್ರಮಗಳು ಇದ್ದವು. ಅವರು ಮಾಡುವ ಪೂಜೆ- ಅನುಷ್ಠಾನ- ತಪಸ್ಸು -ಯಜ್ಞ- ಯಾಗ ಗಳಿಗೆ ಈ ರಾಕ್ಷಸರು ತೊಂದರೆ ಕೊಡುತ್ತಿದ್ದರು. ರಾಕ್ಷಸರ ಕಾಟ ತಾಳಲಾರದ ಋಷಿಮುನಿಗಳು ಆದಿಪರಾಶಕ್ತಿಯನ್ನು ಕುರಿತು ತಪಸ್ಸು ಮಾಡಿ ರಾಕ್ಷಸರನ್ನು ಸಂಹರಿಸುವಂತೆ ಪ್ರಾರ್ಥಿಸಿದರು. ಋಷಿಗಳ ಪ್ರಾರ್ಥನೆಗೆ ಒಲಿದ ಆದಿಶಕ್ತಿ ಈ ಕ್ಷೇತ್ರಕ್ಕೆ ಬಂದು ರಾಕ್ಷಸರಿಬ್ಬರನ್ನು ಸಂಹರಿಸಿ ಋಷಿಗಳ ಸಾಧನೆಗೆ ಅನುವು ಮಾಡಿಕೊಟ್ಟಳು. ಹಾಗೂ ಋಷಿಗಳ ಪ್ರಾರ್ಥನೆಗೆ ಮನ್ನಿಸಿ ಆದಿಪರಾ ಶಕ್ತಿಯು ಅದೇ ಕ್ಷೇತ್ರದಲ್ಲಿ ಲಿಂಗ ರೂಪದಲ್ಲಿ ಉದ್ಭವಿಸಿದಳು.
ದೇವಸ್ಥಾನದ ಪಕ್ಕದಲ್ಲಿ ಹರಿಯುವ ‘ಕುಬ್ಜಾ’ನದಿಯ ಕಥೆ. ಈ ನದಿಯು ಹಿಂದೆ ಕೈಲಾಸದಲ್ಲಿ ‘ಪಿಂಗಳೆ’ ಎಂಬ ದೇವಲೋಕದ ನರ್ತಕಿ ಯಾಗಿ ನೃತ್ಯ ಸೇವೆ ಮಾಡುತ್ತಿದ್ದಳು. ಪಿಂಗಳೆಯ ಅಪರಿಮಿತ ಸೌಂದರ್ಯಕ್ಕೆ ಅವಳೇ ಸಾಟಿ. ಹೀಗಾಗಿ ಅವಳಲ್ಲಿ ಅಹಂಕಾರ ಬಂದಿತು. ಒಂದು ದಿನ ಸಭೆಯಲ್ಲಿ ನೃತ್ಯ ಸೇವೆಗೆ ಬಂದವಳು, ಬಳ್ಳಿಯಂತೆ ಬಳುಕುತ್ತಾ ವೈಯಾರವಾಗಿ ಇಂದು ನೃತ್ಯ ಮಾಡುವುದಿಲ್ಲ ಎಂದಳು. ಅವಳ ಅಹಂಕಾರವನ್ನು ಅರಿತ ಪಾರ್ವತಿ ಸಿಟ್ಟಿ ನಿಂದ ನಿನ್ನ ಸೌಂದರ್ಯದ ಅಹಂ ನಲ್ಲಿ ಮೆರೆಯುತ್ತಾ ಅಂಕು ಡೊಂಕಾಗಿ ನುಲಿಯುತ್ತಿರುವ ನೀನು ಅಂಕು ಡೊಂಕಾದ ಗೂನು ಬೆನ್ನಿನ ಕುಬ್ಜೆಯಾಗು ಎಂದು ಶಾಪ ಕೊಟ್ಟಳು.
ಆಗ ಪಿಂಗಳೆಗೆ ತಪ್ಪಿನ ಅರಿವಾಗಿ ಪಾರ್ವತಿಯಲ್ಲಿ ಕ್ಷಮೆ ಬೇಡಿದಳು. ಕನಿಕರಗೊಂಡ ಪಾರ್ವತಿಯು, ಈಗ ಭೂಲೋಕಕ್ಕೆ ಹೋಗಿ ಗುಹೆಯಲ್ಲಿ ಕುಳಿತು ತಪಸ್ಸು ಮಾಡುತ್ತಿರು, ಮುಂದೆ ಆ ಕ್ಷೇತ್ರದಲ್ಲಿ ಕುಬ್ಜಾ ನದಿಯಾಗಿ ಹರಿಯುವೆ. ಆ ಸಮಯದಲ್ಲಿ ನಾನು ಋಷಿಗಳ ಪ್ರಾರ್ಥನೆಯಂತೆ ಅಲ್ಲಿಗೆ ಬಂದು ರಾಕ್ಷಸರನ್ನು ಸಂಹರಿಸಿ ಅದೇ ಕ್ಷೇತ್ರದಲ್ಲಿ ಲಿಂಗ ರೂಪದಲ್ಲಿ ಉದ್ಭವಿ ಸುತ್ತೇನೆ. ನದಿಯಾಗಿ ಹರಿಯುತ್ತಿರುವ ನೀನು ಪ್ರತಿ ವರ್ಷ ಮಳೆಗಾಲದಲ್ಲಿ ತುಂಬಿ ಬಂದು ನನ್ನ ಪಾದವನ್ನು ತೊಳೆಯುತ್ತಿರು. ಕ್ರಮೇಣ ನಿನ್ನ ಶಾಪ ನಿವಾರಣೆಯಾಗುತ್ತದೆ ಎಂದು ವರ ಕೊಟ್ಟಳು. ಪಿಂಗಲೆ ಕುಬ್ಜೆಯಾಗಿ ಈ ಕ್ಷೇತ್ರಕ್ಕೆ ಬಂದು ಗುಹೆಯಲ್ಲಿ ಹಲವು ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿ, ಪಾರ್ವತಿ ಕೊಟ್ಟ ವರದಂತೆ ಅದೇ ಕ್ಷೇತ್ರದಲ್ಲಿ ಕುಬ್ಜಾ ನದಿಯಾಗಿ ಹರಿದಳು. ಪ್ರತಿವರ್ಷ ಮಳೆಗಾಲದಲ್ಲಿ ನದಿಗೆ ಪ್ರವಾಹ ಬಂದು ಉಕ್ಕಿ ಹರಿವ ನದಿ ದುರ್ಗಾಪರಮೇಶ್ವರಿಯ ಗುಡಿ ಒಳಗೆ ಮೊಣಕಾಲು ತನಕ ನೀರು ಬಂದು ದೇವಿಯ ಪಾದಗಳನ್ನು ತೊಳೆದು ಶಾಪ ಪರಿಹರಿಸಿಕೊಳ್ಳುತ್ತಿದೆ. ಈ ಸಮಯದಲ್ಲಿ ದೇವಸ್ಥಾನದ ಮುಖ್ಯಸ್ಥರು, ಊರವರೆಲ್ಲಾ ಸೇರಿ ವಿಶೇಷ ವಾದ ಪೂಜೆ ಮಂಗಳಾರತಿ ಮಾಡಿ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸುತ್ತಾರೆ.
ಮೊದಲು ಲಿಂಗ ರೂಪಕ್ಕೆ ಪೂಜೆ ಮಾಡುತ್ತಿದ್ದ ಬ್ರಾಹ್ಮಣನ ಕನಸಿನಲ್ಲಿ ದೇವಿ ಬಂದು, ನಾನು ಲಿಂಗ ರೂಪದಲ್ಲಿರುವ ಬ್ರಾಹ್ಮಿ ದುರ್ಗಾಪರಮೇಶ್ವರಿ ಎಂದು ತಿಳಿಸಿದಳು. ಈ ವಿಷಯ ಊರಿಗೆ ಹಾಗೂ ಮುಖ್ಯಸ್ಥರಿಗೆ ತಿಳಿಸಿ ನಂತರದಲ್ಲಿ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸುತ್ತಾರೆ. ಶ್ರೀ ದುರ್ಗಾ ಪರಮೇಶ್ವರಿ ಚತುರ್ಭುಜೆಯಾಗಿ ಒಂದು ಕೈಯಲ್ಲಿ ಶಂಖ, ಇನ್ನೊಂದು ಕೈಯಲ್ಲಿ ಚಕ್ರ ಹಾಗೂ ಕಮಲವನ್ನು ಹಿಡಿದು, ಅಭಯ ಹಸ್ತವನ್ನು ನೀಡುತ್ತಾ ಭಕ್ತರಿಗೆ ಅನುಗ್ರಹಿಸುತ್ತಿದ್ದಾಳೆ. ಈ ವಿಗ್ರಹದಲ್ಲಿ ಪಾರ್ವತಿ, ಲಕ್ಷ್ಮಿ ,ಸರಸ್ವತಿ ಶಕ್ತಿಗಳು ಆವಿರ್ಭವಿಸಿ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ಆಗಿ ನೆಲೆಸಿದ್ದಾಳೆ. ವಿಗ್ರಹದ ಕೆಳಗಿರುವ ಲಿಂಗಕ್ಕೆ ನಿಜವಾದ ಕೆಂಪು ಮಣ್ಣನ್ನು ಕಲೆಸಿ ದಪ್ಪಗೆ ಹಚ್ಚಿರುತ್ತಾರೆ 15 ದಿನ ಬಿಟ್ಟು ಅದನ್ನು ತೆಗೆದು ಚಿಕ್ಕ ಉಂಡೆ ಮಾಡಿ ಭಕ್ತರಿಗೆ ಪ್ರಸಾದ ಕೊಡುತ್ತಾರೆ.
ಮಂಗಳವಾರ- ಶುಕ್ರವಾರ, ಹಬ್ಬ ಹರಿದಿನಗಳು, ವಿಶೇಷ ತಿಥಿ, ನಕ್ಷತ್ರ , ಮಾಸಗಳಲ್ಲಿ ಅಲಂಕಾರ, ಪೂಜೆ , ಸಹಸ್ರನಾಮಾರ್ಚನೆ ಮಾಡುತ್ತಾರೆ. ದೇವಸ್ಥಾನ ವಿಶಾಲಾವಾಗಿ ಚೆನ್ನಾಗಿದೆ. ಪ್ರತಿನಿತ್ಯ ವೂ ಅನ್ನ ಸಂತರ್ಪಣೆ ಇರುತ್ತದೆ. ಬಂದ ಭಕ್ತಾದಿಗಳು ಅಲ್ಲಿನ ಸುಂದರ ಪರಿಸರ, ದೇವಿಯ ದರ್ಶನ, ಪೂಜೆ ನೋಡಿ, ದೇವಿಯ ನೈವೇದ್ಯಕ್ಕೆ ದಿನಕ್ಕೆ ಒಂದೊಂದು ತರದ ಪಾಯಸ, ಸಿಹಿ ಪದಾರ್ಥ, ಪಲ್ಯ, ಸಾರು, ಚಿತ್ರಾನ್ನ, ಬಿಸಿ ಅನ್ನದ ಪ್ರಸಾದವನ್ನು ಬಾಳೆ ಎಲೆಯಲ್ಲಿ ಬಡಿಸಿ ಉಪಚರಿಸಿ ಬಡಿಸಿದ್ದನ್ನು ಊಟ ಮಾಡಿದವರಿಗೆ ಗೊತ್ತು ಅದರ ಗಮ್ಮತ್ತು. ಆದಿಪರಾಶಕ್ತಿ ಎಲ್ಲಿ ನೆಲೆಸಿರುತ್ತಾಳೋ ಅಲ್ಲಿ ಅನ್ನದಾನ ಎಷ್ಟು ಮಾಡುತ್ತಾರೋ ಅಷ್ಟು ದೇವಿ ಸಂತುಷ್ಟಳಾಗಿ ಅನುಗ್ರಹಿಸುತ್ತಾಳೆ ಎಂಬ ಪ್ರತೀತಿ ಇದೆ. ಶಕ್ತಿ ಸ್ವರೂಪಿಣಿ ದೇವಿ ನೆಲೆಸಿರುವ ಮಹಿಮಾನ್ವಿತ ಕ್ಷೇತ್ರ
ಕ್ಕೆ ಭಕ್ತರು ಮತ್ತೆ ಮತ್ತೆ ಬಂದು ದರ್ಶನ ಪಡೆಯುತ್ತಾರೆ.
ನವರಾತ್ರಿಯಲ್ಲಂತೂ ನೋಡಲು ಎರಡು ಕಣ್ಣು ಸಾಲದು. ಶ್ರಾವಣ ಭಾದ್ರಪದ, ಆಶ್ವಿಜ, ಚೈತ್ರ, ವೈಶಾಖ,ಇಂಥ ವಿಶೇಷ ಮಾಸಗಳಲ್ಲಿ ಹಾಗೂ
ದಿನಗಳಲ್ಲಿ ಲಲಿತಾ ಸಹಸ್ರನಾಮ, ಹೋಮ, ಹವನ, ಪಾರಾಯಣ ನಡೆಯುತ್ತದೆ. ವಿವಾಹಗಳು ಜರುಗುತ್ತದೆ. ಇಲ್ಲಿ ನೋಡಲು ಆಕರ್ಷಕ ತಾಣಗಳಿವೆ. ಮಹರ್ಷಿಗಳು ತಪಸ್ಸು ಮಾಡಿದ, ಬ್ರಹ್ಮ ವಿಷ್ಣು ಮಹೇಶ್ವರರು,
ಶಕ್ತಿ ಸ್ವರೂಪದ ದೇವ ದೇವತೆಯರು ನೆಲೆಸಿರುವ ಗುಹೆಗಳು, ತೀರ್ಥಗಳು ದೇವಸ್ಥಾನದ ಆಸುಪಾಸಿನಲ್ಲಿ ಇದೆ. ಇದನ್ನು ತೋರಿಸಿ ವಿವರಿಸಲು ಜನರು ಇರುತ್ತಾರೆ. ಕುಟುಂಬ ಸಮಸ್ಯೆಗಳು, ಮಕ್ಕಳ ವಿದ್ಯಾಭ್ಯಾಸ, ತೋಟ ಜಮೀನು ಮನೆ, ಹಸು ಕರು, ಮಕ್ಕಳು, ವಿದ್ಯಭ್ಯಾಸ, ಉದ್ಯೋಗ ,ಮದುವೆ, ಇಂಥ ಹಲವಾರು ಪ್ರಶ್ನೆಗಳಿಗೆ ದೇವಿಯ ಆಶೀರ್ವಾದದೊಂದಿಗೆ ಉತ್ತರ ಸಿಗುತ್ತದೆ. ಯಕ್ಷಗಾನ, ಕೋಲ, ಮುಂತಾದವು ಜರುಗುತ್ತದೆ. ವಿಶಾಲವಾದ ದೊಡ್ಡ ಪ್ರಾಂಗಣವಿದೆ. ಹೊರಗೆ ಬಂದರೆ ಹೂ, ಹಣ್ಣು, ಬಳೆ, ಅರಿಶಿನ ಕುಂಕುಮ, ಆಟಿಕೆಗಳ ಅಂಗಡಿಗಳಿದ್ದು ಜಾತ್ರೆ ನೋಡಿದಂತೆ ಖುಷಿ ಕೊಡುತ್ತದೆ. ಬಹಳ ವಿಶೇಷ ವಾದ ಪುಣ್ಯಕ್ಷೇತ್ರ ಶ್ರೀ ಬ್ರಾಹ್ಮಿದುರ್ಗಾ ಪರಮೇಶ್ವರಿ ದೇವಸ್ಥಾನ ಕಮಲಶಿಲೆ.
ಸರ್ವ ಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾದಿಕೇ
ಶರಣ್ಯೇ ತ್ರ್ಯಮ್ಬಕೇ ಗೌರೀ ನಾರಾಯಣೀ ನಮೋಸ್ತುತೆ !!
ಶರಣಾಗತ ದೀನಾರ್ಥ ಪವಿತ್ರಾಣ ಪಾರಾಯಣೀ
ಸರ್ವಸ್ಯಾ ರ್ತಿ ಹರೇದೇವಿ ನಾರಾಯಣಿ ನಮೋಸ್ತುತೇ!!
ಸರ್ವ ಸ್ವರೂಪೇ ಸರ್ವೇಶೇ ಸರ್ವ ಶಕ್ತಿ ಸಮನ್ವಿತೇ ಭಯಭ್ಯ ಸ್ತ್ರಾಹಿ ನೋ ದೇವಿ ದುರ್ಗೆ ದೇವಿ ನಮೋಸ್ತುತೇ!!
ಈ ಮೇಲಿನ ಮೂರು ಶ್ಲೋಕಗಳು ಅತ್ಯಂತ ಶಕ್ತಿಯುತವಾದ ಸ್ತೋತ್ರ. ಇದನ್ನು
ನಿತ್ಯವೂ ಪಠಿಸಿದರೆ ದುರ್ಗಾ ಪರಮೇಶ್ವರಿ ಅನುಗ್ರಹಿಸುತ್ತಾಳೆ.