ಶ್ರೀ ಸವದತ್ತಿಯ ಎಲ್ಲಮ್ಮ
ಉಧೋ ಉಧೋ ದೇವಿ ಎಲ್ಲಮ್ಮ ಎಂದು ತಲೆಯ ಮೇಲೆ ದೇವಿಯ ಮೂರ್ತಿಯನ್ನು ಹೊತ್ತು ಅರಿಶಿನ ಕುಂಕುಮವನ್ನು ಹಚ್ಚುತ್ತಾ ಸಾಗುವ ಜೋಗತ್ತಿಯರನ್ನು ಎಲ್ಲ ಊರಿನಲ್ಲೂ ಕಾಣಬಹುದು. ಇದರಿಂದ ಎಲ್ಲಮ್ಮನ ಪ್ರಭಾವ ಕರ್ನಾಟಕದ ಎಲ್ಲ ಭಾಗಗಳಲ್ಲೂ ಹೇಗೆ ಹರಡಿದೆ ಎಂದು ತಿಳಿಯಬಹುದು. ಈಗಿರುವ ದೇವಾಲಯವನ್ನು 1514ರಲ್ಲಿ ರಾಯಭಾಗದ ಬೊಮ್ಮಪ್ಪನಾಯಕ ನಿರ್ಮಿಸಿದನು. ಚಾಲುಕ್ಯ ಹಾಗೂ ರಾಷ್ಟ್ರಕೂಟ ಶೈಲಿಯ ಜೈನರ ವಾಸ್ತುಶಿಲ್ಪ ಇದಾಗಿದೆ. ಎಲ್ಲಮ್ಮ ದೇವಿಯನ್ನು ಮೂಲತಃ ರೇಣುಕಾದೇವಿ ಎಂದು ಕರೆಯುತ್ತಾರೆ. ರೇಣುಕಾದೇವಿ ಕುಬಜ್ ದೇಶದ ರಾಜ ರೇಣುವಿನ ಮಗಳು. ಪರಶುರಾಮನ ತಾಯಿ ಹಾಗೂ ಮಹಾಮುನಿ ಜಮದಗ್ನಿ ಋಷಿಗಳ ಪತ್ನಿ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಪೂಜಿಸಲ್ಪಡುವ ಹಿಂದೂಗಳ ಮಾತೃದೇವತೆ.
ರೇಣುಕಾ ದೇವಿಗೆ ಐದು ಜನ ಗಂಡು ಮಕ್ಕಳು. ಇವರಲ್ಲಿ ರಾಮಭದ್ರನು ಶಿವ-ಪಾರ್ವತಿಯರ ಆಶೀರ್ವಾದದಿಂದ ಪರಶು ಎಂಬ ಅಸ್ತ್ರವನ್ನು ಪಡೆದು ಪರಶುರಾಮ ಎಂದು ಕರೆಯಲ್ಪಡುತ್ತಾನೆ. ರೇಣುಕಾದೇವಿ ದಿನವೂ ಜಮದಗ್ನಿ ಋಷಿಗಳ ಆಜ್ಞೆಯಂತೆ ಆಶ್ರಮದ ಹತ್ತಿರದಲ್ಲೇ ಇದ್ದ ಮಲಪಹರಿ ಎಂಬ ನದಿಯಲ್ಲಿ ಸ್ನಾನ ಮಾಡಿ, ಮರಳಿನಿಂದ ಮಡಕೆ ಮಾಡಿ, ಹಾವನ್ನು ಸಿಂಬೆಯನ್ನಾಗಿ ಮಾಡಿಕೊಂಡು ನೀರನ್ನು ಹೊತ್ತು ತರುವುದು ವಾಡಿಕೆ. ಒಂದು ದಿನ ಹೀಗೆಯೇ ನೀರನ್ನು ತರುವಾಗ ನೀರಲ್ಲಿ ಆಟವಾಡುತ್ತಿದ್ದ ಗಂಧರ್ವರನ್ನು ನೋಡಿ ಮೈ ಮರೆಯುತ್ತಾಳೆ. ನಂತರ ಎಷ್ಟೇ ಪ್ರಯತ್ನಿಸಿದರೂ ಮರಳಿನ ಮಡಕೆ ಮಾಡಲಾಗುವುದಿಲ್ಲ, ನೀರಿಲ್ಲದೆ ಬರಿಗೈಯಲ್ಲಿ ಮರಳಿದ ರೇಣುಕೆಯನ್ನು ನೋಡಿ ಜಮದಗ್ನಿ ಋಷಿಗಳು ಕೋಪಗೊಂಡು ಕಾಡಿಗೆ ಕಳಿಸುತ್ತಾರೆ. ಕಾಡಿನಲ್ಲಿ ಶಿವನನ್ನು ಕುರಿತು ಕಠಿಣವಾದ ತಪಸ್ಸನ್ನು ಆಚರಿಸಿ, ಜೋಗುಳ ಬಾವಿಯಲ್ಲಿ ಸ್ನಾನ ಮಾಡಿ, ಅರಿಶಿನ ಲೇಪನ ಮಾಡಿಕೊಂಡಾಗ ಶಾಪ ವಿಮೋಚನೆಯಾಗುತ್ತದೆ. ಪರಿಶುದ್ಧಳಾದ ರೇಣುಕಾದೇವಿಯು ಜಮದಗ್ನಿ ಋಷಿಗಳಲ್ಲಿಗೆ ಬರುತ್ತಾಳೆ. ಕೋಪ ಇನ್ನೂ ಆರಿರದ ಜಮದಗ್ನಿ ಋಷಿಗಳು, ತಮ್ಮ ಐದು ಜನ ಪುತ್ರರನ್ನು ಕರೆದು ತಾಯಿಯ ಶಿರವನ್ನು ಕತ್ತರಿಸಲು ಆದೇಶಿಸುತ್ತಾರೆ. ಅವರಲ್ಲಿ ನಾಲ್ಕು ಜನ ಪುತ್ರರು ಇದನ್ನು ನಿರಾಕರಿಸುತ್ತಾರೆ. ಪರಶುರಾಮನು ತಂದೆಯ ಆಜ್ಞೆಯಂತೆ ತಾಯಿಯ ಶಿರವನ್ನು ಕತ್ತರಿಸಲು ಬಂದಾಗ, ಮಾತಂಗಿಯು ಇದನ್ನು ತಡೆಯುತ್ತಾಳೆ. ಪರಶುರಾಮನು ಇಬ್ಬರ ಶಿರವನ್ನೂ ಕತ್ತರಿಸುತ್ತಾನೆ. ಪ್ರಸನ್ನರಾದ ಜಮದಗ್ನಿ ಋಷಿಗಳು ಮೂರು ವರವನ್ನು ಕರುಣಿಸುತ್ತಾರೆ. ಆ ಮೂರು ವರಗಳಲ್ಲಿ ಪರಶುರಾಮನು ಮೊದಲನೆಯದಾಗಿ ತಾಯಿಯನ್ನು ಬದುಕಿಸಲು ಕೇಳುತ್ತಾನೆ. ಎರಡನೆಯದಾಗಿ ಭಸ್ಮವಾದ ತನ್ನ ಸಹೋದರರನ್ನು ಮರಳಿ ಪಡೆಯುತ್ತಾನೆ. ಹಾಗೆಯೇ ಮೂರನೆಯದಾಗಿ ಈ ಅವಘಡಕ್ಕೆಲ್ಲಾ ಕಾರಣವಾದ ಸಿಟ್ಟನ್ನು ಬಿಡಲು ಕೇಳುತ್ತಾನೆ. ಒಪ್ಪಿಕೊಂಡ ಜಮದಗ್ನಿ ಖುಷಿಗಳು, ಪವಿತ್ರ ನೀರನ್ನು ಕೊಟ್ಟು ದೇಹವನ್ನು ಜೋಡಿಸಿ ನಂತರ ಶವದ ಮೇಲೆ ಪವಿತ್ರವಾದ ನೀರನ್ನು ಹಾಕಲು ಹೇಳುತ್ತಾರೆ. ಪರಶುರಾಮನು ತಾಯಿಯನ್ನು ಬದುಕಿಸುವ ಆತುರದಲ್ಲಿ ಮಾತಂಗಿ ಹಾಗೂ ರೇಣುಕಾದೇವಿಯ ತಲೆಯನ್ನು ಅದಲು ಬದಲು ಮಾಡಿ ತಪ್ಪಾಗಿ ಜೋಡಿಸುತ್ತಾನೆ. ರೇಣುಕಾ ದೇವಿಯ ದೇಹ ಮತ್ತು ಮಾತಂಗಿಯ ತಲೆ ಸೇರಿದ ದೇಹವನ್ನು ರೇಣುಕಾದೇವಿ ಎಂದು ಜಮದಗ್ನಿ ಋಷಿಗಳು ಸ್ವೀಕರಿಸುತ್ತಾರೆ. ರೇಣುಕಾದೇವಿಯ ತಲೆ ಮತ್ತು ಮಾತಂಗಿಯ ದೇಹ ಇರುವ ದೇಹವನ್ನು ಎಲ್ಲರ ತಾಯಿ ಎಲ್ಲಮ್ಮ ಎಂದು ಎಲ್ಲರೂ ಪೂಜಿಸುತ್ತಾರೆ.
ರೇಣುಕಾದೇವಿಯ ಶಾಪ ವಿಮೋಚನೆಯಾದಂತೆ ಈ ಸ್ಥಳದಲ್ಲಿ ಎಲ್ಲರ ಶಾಪ ವಿಮೋಚನೆಯಾಗುತ್ತದೆ ಎಂದು ಎಲ್ಲರ ನಂಬಿಕೆ. ಹಾಗಾಗಿ ಸವದತ್ತಿಗೆ ಬರುವ ಭಕ್ತರು ಮೊದಲಿಗೆ ಈ ಜೋಗುಳ ಬಾವಿಯಲ್ಲಿ ಸ್ನಾನ ಮಾಡಿ, ನಂತರ ದೇವಿಯ ದರ್ಶನಕ್ಕೆ ತೆರಳುತ್ತಾರೆ.
ಜಮದಗ್ನಿ ಋಷಿಗಳು ತಮ್ಮ ಐದು ಜನ ಪುತ್ರರಲ್ಲಿ ತಾಯಿಯ ಶಿರವನ್ನು ಕಡಿಯಲು ಹೇಳಿದಾಗ, ಕಡಿಯಲು ಒಪ್ಪದೇ ನಪುಂಸಕರಾದ ನಾಲ್ವರು ಪುತ್ರರು ಜೋಗಪ್ಪರಾಗಿ ತಾಯಿಯ ಭಕ್ತರಾಗುತ್ತಾರೆ ಎನ್ನುವುದು ಕಥೆಗಳಲ್ಲಿ ಬರುತ್ತದೆ. ಇದೇ ಕಾರಣ ಜೋಗಪ್ಪ ಜೋಗಮ್ಮರು ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಕಾಣಿಸಿಗುತ್ತಾರೆ.
ಕಾಮಧೇನು ಹಸುವಿನ ಸಲುವಾಗಿ, ಕಾರ್ತಿಕ ರಾಜನು ತಪೋನಿರತರಾದ ಜಮದಗ್ನಿಯನ್ನು ಬಿಲ್ಲಿನಿಂದ ಶಿರಚ್ಛೇದ ಮಾಡುತ್ತಾನೆ. ವಿಷಯ ತಿಳಿದ ಪರಶುರಾಮನು, ಸಂಜೀವಿನಿಯನ್ನು ತಂದು ತಂದೆಯನ್ನು ಬದುಕಿಸುತ್ತಾನೆ. ಈ ನಡುವೆ ರೇಣುಕಾದೇವಿ ವಿಧವೆಯಾಗಿದ್ದ ಆ ಒಂದು ತಿಂಗಳನ್ನು ಇವತ್ತಿಗೂ ಜೋಗಪ್ಪ ಜೋಗಮ್ಮರು ವಿಧವೆಯರಂತೆ ಇದ್ದು ಈ ಸಂಪ್ರದಾಯ ಆಚರಿಸುತ್ತಾರೆ.
ಸವದತ್ತಿಯಲ್ಲಿ ಏಳು ಗುಡ್ಡಗಳಿವೆ. ಎಲ್ಲಾ ಗುಡ್ಡದ ಪಕ್ಕದಲ್ಲಿ ಒಂದೊಂದು ಕೊಳ್ಳಗಳಿವೆ. ಈ ಎಲ್ಲಾ ಕೊಳ್ಳಗಳಲ್ಲಿ ಎಲ್ಲಮ್ಮ ದೇವಿ ಸಂಚರಿಸುತ್ತಾಳೆ ಎಂಬ ನಂಬಿಕೆ ಇದೆ. ಇದೇ ಕಾರಣಕ್ಕೆ, ಸವದತ್ತಿ ಎಲ್ಲಮ್ಮನನ್ನು “ಏಳು ಕೊಳ್ಳದ ದೇವಿ ಎಲ್ಲಮ್ಮ” ಎಂದು ಕರೆಯುತ್ತಾರೆ.
ಇಲ್ಲಿ ವರ್ಷದಲ್ಲಿ ಏಳು ಬಾರಿ ಜಾತ್ರೆ ನಡೆಯುತ್ತದೆ. ಬನದ ಹುಣ್ಣಿಮೆ ಹಾಗೂ ಭರತ ಹುಣ್ಣಿಮೆಯಲ್ಲಿ ನಡೆಯುವ ಜಾತ್ರೆ ದೊಡ್ಡ ಜಾತ್ರೆಯಾಗಿದೆ. ಜಾತ್ರೆಗೆ ಚಕ್ಕಡಿಗಾಡಿಗಳಲ್ಲಿ ಬರುವುದು ವಿಶೇಷ. ಸಂಪ್ರದಾಯದಂತೆ ದೇವಿಗೆ ಸೀರೆ, ರವಿಕೆ, ಬಳೆ ಬಾಗಿನವನ್ನು ಅರ್ಪಿಸಿದ ನಂತರವೇ ಜಾತ್ರೆ ಶುರುವಾಗುತ್ತದೆ. ಬೇರೆ ಬೇರೆ ರಾಜ್ಯಗಳಿಂದ ಬರುವ ಭಕ್ತರು ತಾವು ಬೆಳೆದು ತಂದ ಎಲ್ಲಾ ಬೆಳೆಗಳನ್ನು ಪಡಲಗಿಯಲ್ಲಿ ತುಂಬಿ ಅಮ್ಮನಿಗೆ ನೈವೇದ್ಯ ಮಾಡಿ, ಮಂಗಳಾರತಿ ಆದ ನಂತರ ಐದು ಜನ ಜೋಗತ್ತಿಯರಿಂದ “ಉಧೋ ಉಧೋ ಎಲ್ಲಮ್ಮ” ಎಂದು ಹೇಳಿಸುತ್ತಾರೆ. ಅಲ್ಲಿಗೆ ಅಮ್ಮನವರಿಗೆ ಹರಕೆ ತುಂಬುವ ಶಾಸ್ತ್ರ ಮುಗಿಯುತ್ತದೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ದೇವಿಗೆ ಬೆಳ್ಳಿಯ ಪಲ್ಲಕ್ಕಿ ಉತ್ಸವ ಜರುಗುತ್ತದೆ. ಉಡಿ ಸೇವೆ, ಭಂಡಾರ ಸೇವೆಗಳು ಇಲ್ಲಿನ ವಿಶೇಷ ಸೇವೆಗಳಾಗಿವೆ.
ಮಕ್ಕಳಾಗದವರು ಜೋಗುಳ ಬಾವಿಯಲ್ಲಿ ಸ್ನಾನ ಮಾಡಿ, ದೇವಾಲಯದಲ್ಲಿರುವ ಪರಶುರಾಮನ ತೊಟ್ಟಿಲನ್ನು ತೂಗುತ್ತಾರೆ. ನವರಾತ್ರಿ ವೇಳೆ, ಎಲ್ಲಮ್ಮ ದೇವಸ್ಥಾನದಲ್ಲಿರುವ ದೀಪಕ್ಕೆ ಎಣ್ಣೆ ಹಾಕಿದರೆ, ತಮ್ಮ ಹಾಗೂ ಕುಟುಂಬದ ಬಾಳು ದೀಪದಂತೆ ಬೆಳಗುತ್ತದೆ ಎಂಬುದು ಭಕ್ತರ ನಂಬಿಕೆ. ಹಾಗಾಗಿ ಪ್ರತಿಯೊಬ್ಬರೂ ದೀಪಕ್ಕೆ ಎಣ್ಣೆ ಹಾಕಿ ಭಕ್ತಿ ಸಮರ್ಪಿಸುತ್ತಾರೆ. ನವರಾತ್ರಿಯಲ್ಲಿ ದೇವಿಗೆ ಸೀರೆಯ ಅಲಂಕಾರ, ವಿಶೇಷ ಹೂವಿನ ಹಾಗೂ ಹಣ್ಣಿನ ಅಲಂಕಾರ ಹಾಗೂ ಅರಿಶಿನ ಕುಂಕುಮದ ಅಲಂಕಾರ ಸೇವೆಗಳು ನಡೆಯುತ್ತವೆ.
ಸವದತ್ತಿ ದೇಗುಲದ ಸುತ್ತಮುತ್ತ ಏಕನಾಥ್, ಜೋಗ್ನಾಥ ಹಾಗೂ ಮಾತಂಗಿ ಗುಡಿಗಳಿವೆ. ಹಾಗೆಯೇ ಎಣ್ಣೆ ಹೊಂಡ, ಅರಿಶಿನ-ಕುಂಕುಮ ಕೊಂಡಗಳಿವೆ. “ರೇಣುಕಾ, ಜಗದಂಬಾ, ಮಾರ್ಗವ್ವಾ, ಮೂಕಾಂಬಾ” ಎನ್ನುವ ಹೆಸರಿನಿಂದ ಕರೆಯಲ್ಪಡುವ ಸವದತ್ತಿಯ ಎಲ್ಲಮ್ಮನ ಕೃಪಾಕಟಾಕ್ಷ ಸದಾ ನಮ್ಮೆಲ್ಲರ ಮೇಲಿರಲಿ.