ಅಜಾ ಏಕಾದಶಿ ಮಹಿಮೆ
ಶ್ರಾವಣಮಾಸ ಕೃಷ್ಣಪಕ್ಷದ ಏಕಾದಶಿ “#ಅಜಾ” ಏಕಾದಶಿ
ಕೃಷ್ಣಾಯ ಯಾದವೇಂಧ್ರಾಯ ಜ್ಞಾನಮುದ್ರಾಯ ಯೋಗಿನೇ |
ನಾಥಾಯ ರುಕ್ಮಿಣೀಶಾಯ ನಮೋ ವೇದಾಂತ ವೇದಿನೇ||
ಕೃಷ್ಣಾಯ ವಾಸುದೇವಾಯ ದೇವಕೀನಂದನಾಯ ಚ |
ನಂದಗೋಪಕುಮಾರಾಯ ಗೋವಿಂದಾಯ ನಮೋ ನಮಃ ||
ಶ್ರಾವಣಮಾಸ ಕೃಷ್ಣಪಕ್ಷದ ಏಕಾದಶಿಗೆ “ಅಜಾ” ಏಕಾದಶಿ ಎಂಬ ಹೆಸರಿದೆ. ಈ ವ್ರತ ಮಹಾತ್ಮೆ ಕುರಿತು ಬ್ರಹ್ಮವೈವರ್ತ ಪುರಾಣದಲ್ಲಿ ಉಲ್ಲೇಖವಾಗಿದೆ. ಧರ್ಮರಾಜನಿಗೆ ಶ್ರೀಕೃಷ್ಣ ಈ ವ್ರತದ ಮಹತ್ವವನ್ನು ಸತ್ಯಹರಿಶ್ಚಂದ್ರನ ಕಥೆಯ ಮೂಲಕ ಮಹತ್ವವನ್ನು ತಿಳಿಸಿದ್ದಾನೆ.
ದೃಷ್ಟಾಂತ:
ಸತ್ಯ ಮತ್ತು ಪ್ರಾಮಾಣಿಕತೆಯ ಮೊದಲ ಹೆಸರೇ ರಾಜಾ ಸತ್ಯಹರಿಶ್ಚಂದ್ರ. ಆತ ಸೂರ್ಯವಂಶದ ಅರಸ. ತಂದೆ ತ್ರಿಶಂಕು, ತಾಯಿ ಸತ್ಯವ್ರತೆ. ಅವನ ಹೆಂಡತಿ ಚಂದ್ರಮತಿ. ಮಗ ಲೋಹಿತಾಶ್ವ. ದುರದೃಷ್ಟವಶಾತ ಈತನ ತಂದೆಯಾದ ತ್ರಿಶಂಕು ತನ್ನ ತಂದೆಯಿಂದ ಪರಿತ್ಯಕ್ತನಾಗಿ ರಾಜ್ಯವನ್ನು ಕಳೆದುಕೊಂಡ.
ಹರಿಶ್ಚಂದ್ರ ತನ್ನ ತಂದೆ ಕಳೆದುಕೊಂಡ ರಾಜ್ಯವನ್ನು ತಂದೆಯ ಜೀವಿತಕಾಲದಲ್ಲಿಯೇ ಸತ್ಯವ್ರತಗಳ ಫಲವಾಗಿ ಮರಳಿ ಪಡೆದ, ರಾಜ್ಯಭಾರ ನಡೆಸಿದ. ಆತನ ಕೀರ್ತಿ ನಾಲ್ಕು ದಿಕ್ಕುಗಳಿಗೂ ಹರಡಿತ್ತು. ವಿಶ್ವಾಮಿತ್ರರು ನಡೆಸಿದ ಸತ್ಯವ್ರತದ ಪರೀಕ್ಷೆಯ ಕಾರಣ ಮತ್ತೆ ರಾಜ್ಯಬ್ರಷ್ಠನಾದ.
ರಾಜ್ಯವನ್ನು ಕಳೆದುಕೊಂಡ ರಾಜ ಪತ್ನಿ, ಪುತ್ರನನ್ನಿ ಮಾರುವ ಸ್ಥಿತಿ ತಲುಪಿದ. ಅಲೆಯುತ್ತಾ ಕಾಶಿ ನಗರವನ್ನು ಸೇರಿದ. ತನ್ನ ಹೆಂಡತಿಯನ್ನು ಕಾಲಕೌಶಿಕ ಎಂಬ ಬ್ರಾಹ್ಮಣನಿಗೆ ದಾಸಿಯಾಗಿ ಒಪ್ಪಿಸದ, ತನ್ನನ್ನು ತಾನು ವೀರಬಾಹು ಎಂಬ ಚಾಂಡಾಲನಿಗೆ ಮಾರಿಕೊಂಡ.
ಗುರುಗಳಾದ ವಿಶ್ವಾಮಿತ್ರರರು ಪರೀಕ್ಷೆಯ ಭಾಗವಾಗಿ ತಮಗೆ ಕೊಡಬೇಕಾದ ದಕ್ಷಿಣಾದೃವ್ಯದ ನೆಪಮಾಡಿ ನಕ್ಷತ್ರಿಕನನ್ನು ಈತನೊಂದಿಗೆ ಕಳುಹಿಸಿದ್ದರು, ಆತ ಪ್ರತಿದಿನ ಹರಿಶ್ಚಂದ್ರನಿಗೆ ನಾನಾ ತರಹದ ತೊಂದರೆ ಕೊಡುತ್ತಿದ್ದ, ಸತ್ಯವ್ರತದ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದ.
ಇದರಿಂದ ರಾಜ ಸ್ಮಶಾನ ಕಾಯುವ ಕೆಲಸಕ್ಕೆ ಸೇರಿದ. ಆದರೆ ಎಂಥ ಪರಿಸ್ಥಿತಿ ಒದಗಿಬಂದರೂ ಆತ ಪ್ರಾಮಾಣಿಕನಾಗಿದ್ದ, ನೀತಿವಂತನಾಗಿದ್ದ, ಸತ್ಯವಂತನಾಗಿದ್ದ. ಎಷ್ಟೋ ವರ್ಷ ಕಳೆದ ಮೇಲೆ ಒಂದು ದಿನ ಚಿಂತಿತನಾಗಿ ಯಾರು ನನ್ನನ್ನು ಈ ದು:ಖಸಾಗರದಿಂದ ಪಾರುಮಾಡುವರು ಎಂದು ಯೋಚಿಸಿದ.
ತನ್ನನ್ನು ಈ ಕಷ್ಟದಿಂದ ಪಾರುಮಾಬಲ್ಲ ಬ್ರಾಹ್ಮಣೋತ್ತಮರನ್ನು ಭೆಟ್ಟಿಯಾಗಬೇಕು ಎಂದುಕೊಂಡು ಗೌತಮ ಋಷಿಗಳನ್ನು ಭೆಟ್ಟಿಯಾಗುತ್ತಾನೆ. ಅವರಲ್ಲಿ ತನ್ನ ಕಥೆಯನ್ನು ಹೇಳಿ ಪರಿಹಾರ ಸೂಚಿಸುವಂತೆ ಕೈಮುಗಿದು ಕೇಳಿಕೊಳ್ಳುತ್ತಾನೆ.
ಸ್ಮಶಾನದಲ್ಲಿ ಬಟ್ಟೆ ಆಯ್ದುಕೊಳ್ಳುವ ಸ್ಥಿತಿಗೆ ತಲುಪಿದ ರಾಜಾ ಹರಿಶ್ಚಂದ್ರನ ಬಗ್ಗೆ ಗೌತಮರಿಗೆ ದಯೆಯುಂಟಾಗಿ “ಅಜಾ” ಏಕಾದಶಿ ವ್ರತದ ಮಹತ್ವ ತಿಳಿಸಿ ಆಚರಿಸುವಂತೆ ಹೇಳಿ ಕಣ್ಮರೆಯಾಗುತ್ತಾರೆ. ಅದರಂತೆ ಹರಿಶ್ಚಂದ್ರ ಈ ಉಪವಾಸ ವ್ರತ ಆಚರಿಸಿ ಎಲ್ಲ ಪಾಪಗಳಿಂದ, ಕಷ್ಟಗಳಿಂದ ಮುಕ್ತಿ ಪಡೆಯುತ್ತಾನೆ.
ವಿಶ್ವಾಮಿತ್ರರು ನಡೆಸಿದ ಸತ್ವಪರೀಕ್ಷೆಗೆ ಸೋಲದೇ ಸತ್ಯದ ಮಹಿಮೆಯನ್ನು ಜಗತ್ತಿಗೆ ಸಾರುತ್ತಾನೆ. ಕಷ್ಟಸಹನೆಯ ತನ್ನ ಗುಣದಿಂದ ಗುರುಗಳಾದ ವಿಶ್ವಾಮಿತ್ರರ ಕೃಪೆಗೆ ಪಾತ್ರನಾಗುತ್ತಾನೆ. ಹೆಂಡತಿ ಮಗನನ್ನು ಮರಳಿ ಸೇರಿಕೊಳ್ಳುತ್ತಾನೆ. ಸತ್ತುಹೋದ ಮಗ ದೈವಬಲದಿಂದ ಮರುಜೀವ ಪಡೆಯುತ್ತಾನೆ. ನಂತರ ನೂರಾರು ವರ್ಷ ಹರಿಶ್ಚಂದ್ರ ರಾಜ್ಯವಾಳುತ್ತಾನೆ.
ಈ ಅಜಾ ಏಕಾದಶಿ ಉಪವಾಸ ವ್ರತವು ಅಶ್ವಮೇಧ ಯಾಗ ಮಾಡಿದಷ್ಟೇ ಫಲದಾಯಕ.
|| ಶ್ರೀಕೃಷ್ಣಾರ್ಪಣಮಸ್ತು ||