ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ತೀರ್ಥಹಳ್ಳಿಯ ಎಳ್ಳಮಾವಾಸ್ಯೆ ಉತ್ಸವ

ತೀರ್ಥಹಳ್ಳಿಯ ಎಳ್ಳಮಾವಾಸ್ಯೆ ಉತ್ಸವ..!

ಮಲೆನಾಡಿನ ಮಡಿಲಿನಲ್ಲಿರುವ ತೀರ್ಥಹಳ್ಳಿಯು ಪುರಾಣಪ್ರಸಿದ್ಧ ತೀರ್ಥಕ್ಷೇತ್ರಗಳಲ್ಲಿ ಒಂದಾಗಿದೆ. ಪವಿತ್ರ ತುಂಗಾನದಿಯ ತೀರದಲ್ಲಿರುವ ತೀರ್ಥರಾಜಪುರದಲ್ಲಿ (ಅಂದರೆ ಈಗಿನ ತೀರ್ಥಹಳ್ಳಿಯಲ್ಲಿ) ಪ್ರತಿ ವರ್ಷ ಎಳ್ಳಮಾವಾಸ್ಯೆ ಉತ್ಸವವು ಅತಿ ವಿಜೃಂಭಣೆಯಿಂದ ನಡೆಯುತ್ತದೆ. ಈ ವರ್ಷ ಜನವರಿ ೧೧ರಂದು ಎಳ್ಳಮಾವಾಸ್ಯೆ ಉತ್ಸವ, ಜನವರಿ೧೨ರಂದು ರಥೋತ್ಸವ ಮತ್ತು ಜನವರಿ೧೩ರಂದು ತೆಪ್ಪೋತ್ಸವವು ನಡೆಯಲಿದೆ. ಆ ಪ್ರಯುಕ್ತ ಈ ಕಿರುಲೇಖನವನ್ನು ಪ್ರಸ್ತುತಪಡಿಸುತ್ತಿದ್ದೇವೆ.

ಪರಶುರಾಮನು ಮಾತೃಹತ್ಯಾ ಪಾಪವನ್ನು ತೊಳೆದ ಕ್ಷೇತ್ರ
‘ಗಂಗಾ ಸ್ನಾನ ತುಂಗಾ ಪಾನ’ ಎನ್ನುವುದು ಜನಜನಿತ ನಾಣ್ನುಡಿ. ಗಂಗಾಮೂಲದಲ್ಲಿ ಹುಟ್ಟಿ ಹರಿದ್ವರ್ಣದ ದಟ್ಟಕಾಡುಗಳ ಸಾರವನ್ನು ಹೀರಿ ಮಲೆನಾಡಿಗರಿಗೆ ಸಿಹಿ ನೀರಿನ ಅಮೃತಪಾನ ಮಾಡುವ ತುಂಗೆ ರಸಗಂಗೆ ಆಗಿದ್ದಾಳೆ. ಪರಶುರಾಮನ ಕೊಡಲಿಗೆ ತಗಲಿದ ಮಾತೃಹತ್ಯಾ ದೋಷವನ್ನು ತೊಳೆದ ಮಂಗಳತರಂಗೆ ಮಂಗಳಾಂಗೆ! ಈ ತುಂಗೆಯು ಆಗುಂಬೆಯ ಘಟ್ಟವನ್ನು ದಾಟಿ ಮುಂದೆ ಸಾಗಿ ತೀರ್ಥಹಳ್ಳಿಯಲ್ಲಿ ಹರಿಯುತ್ತಾಳೆ. ಇಲ್ಲಿ ಪರಶುರಾಮನು ತನ್ನ ಮಾತೃಹತ್ಯಾ ಪಾಪ ದೋಷದಿಂದ ಮುಕ್ತನಾದನೆಂಬ ಪ್ರತೀತಿ ಇದೆ.

  ಅಮಲಕಿ ಏಕಾದಶಿ ಪೂಜೆ ವಿಧಾನ, ಮಂತ್ರ ಮತ್ತು ವ್ರತಕಥೆ

ಸ್ಕಂದ ಪುರಾಣದ ಕತೆ
ಭೃಗುಮುನಿಯ ವಂಶಜ ಜಮದಗ್ನಿಯು, ಪತ್ನಿ ರೇಣುಕಾದೇವಿಯೊಂದಿಗೆ ಯಜ್ಞ ಯಾಗಾದಿಗಳನ್ನು ಮಾಡಿ ಜೀವನ ಸಾಗಿಸುತ್ತಿದ್ದನು. ಪತಿವ್ರತೆಯಾದ ರೇಣುಕಾದೇವಿಯು ತನ್ನ ತಪೋಬಲದಿಂದ ಕೇವಲ ಮರಳಿನಿಂದ ಮಡಕೆಯನ್ನು ತಯಾರಿಸಿ ಅದರಲ್ಲಿ ಆಶ್ರಮಕ್ಕೆ ಬೇಕಾಗಿರುವ ನೀರನ್ನು ತರುತ್ತಿದ್ದಳು. ಒಮ್ಮೆ ನೀರು ತರಲು ಸರೋವರಕ್ಕೆ ಹೋದಾಗ ಓರ್ವ ಗಂಧರ್ವನನ್ನು ನೋಡಿ ಅರೆಕ್ಷಣ ವಿಚಲಿತಳಾದಳು. ಆದುದರಿಂದ ಅಂದು ಮರಳಿನಿಂದ ಮಡಕೆಯನ್ನು ಮಾಡಲು ಅಸಮರ್ಥಳಾದಳು. ತನ್ನ ದಿವ್ಯದೃಷ್ಟಿಯಿಂದ ಇದನ್ನು ಅರಿತುಕೊಂಡ ಜಮದಗ್ನಿಯು ಕ್ರೋಧಿತನಾಗಿ ಆಕೆಗೆ ಶಿಕ್ಷೆ ನೀಡಬೇಕೆಂದು ತನ್ನ ಮಕ್ಕಳನ್ನು ಕರೆದನು.ಅವರು ಮಾತೃಹತ್ಯೆಗೆ ಒಪ್ಪದಿದ್ದಾಗ ಜಮದಗ್ನಿಯು ಅವರಿಗೆ ಶಾಪ ನೀಡಿದನು ಮತ್ತು ಪರಶುರಾಮನಿಗೆ ಕರೆದು ತನ್ನ ತಾಯಿಯನ್ನು ದಂಡಿಸಬೇಕೆಂದು ಆಜ್ಞಾಪಿಸಿದನು. ತಂದೆಯ ಆಜ್ಞೆಯಂತೆ ಪರಶುರಾಮನು ತಾಯಿಯ ಶಿರವನ್ನು ಕಡಿದುರುಳಿಸಿದನು. ಪಿತೃಭಕ್ತಿಗೆ ಮೆಚ್ಚಿದ ಜಮದಗ್ನಿಯು ‘ವರವನ್ನು ಕೇಳು’ ಎಂದಾಗ ಪರಶುರಾಮನು ‘ಮಾತೆಯನ್ನು ಬದುಕಿಸು, ಅಣ್ಣಂದಿರನ್ನು ಶಾಪ ಮುಕ್ತಗೊಳಿಸು’ ಎಂಬ ವರವನ್ನು ಬೇಡಿ ಮಾತೆಯನ್ನು ಬದುಕಿಸಿದನು. ಆದರೂ ಪರಶುವಿಗೆ (ಕೊಡಲಿಗೆ) ತಗಲಿದ ಮಾತೃಹತ್ಯಾ ದೋಷವನ್ನು ದೂರಗೊಳಿಸಲು ಪರಶುರಾಮನು ತೀರ್ಥ ಯಾತ್ರೆಯನ್ನು ಕೈಗೊಂಡನು. ಆದರೆ ಮಾತೃಹತ್ಯೆಯ ಪಾಪವು ಹೋಗದಾಯಿತು.

  ಲಿಂಗ ಪೂಜೆಯು ಮತ್ತು ಪಾರ್ವತಿಯು ಬಾಣ ರೂಪಳೆಂದು ಪ್ರಸಿದ್ಧಿಯಾಗಲು ಕಾರಣವೇನು ?

ಮಾರ್ಗಶಿರ ಅಮಾವಾಸ್ಯೆಯಂದು ತೀರ್ಥಹಳ್ಳಿಗೆ ಬಂದು ತುಂಗೆಯ ತೀರ್ಥದಲ್ಲಿ ಕೊಡಲಿಯನ್ನು ತೊಳೆದನು. ಎಳ್ಳಿನಷ್ಟಿದ್ದ ಕಲೆಯೂ ತುಂಗೆ ನೀರಿನಿಂದ ತೊಳೆದು ಹೋಯಿತು. ಪರಶುರಾಮನು ಮಾತೃಹತ್ಯಾ ದೋಷದಿಂದ ಮುಕ್ತನಾದನು. ಅಂದಿನಿಂದ ಇಲ್ಲಿ ಎಳ್ಳಮಾವಾಸ್ಯೆಯಂದು ಪ್ರಾತಃಕಾಲದಲ್ಲಿ ಭಕ್ತರು ಮಾರ್ಗಶಿರದ ಚಳಿಗೆ ನಡುಗುತ್ತಿದ್ದರೂ ತೀರ್ಥ ಸ್ನಾನ ಮಾಡಿ ರಾಮೇಶ್ವರನ ದರ್ಶನವನ್ನು ಪಡೆಯುತ್ತಾರೆ. ಪಾಡ್ಯದಂದು ರಾಮೇಶ್ವರ ನಿಗೆ ರಥೋತ್ಸವ, ಬಿದಿಗೆಯಂದು ದೇವರಿಗೆ ತುಂಗಾನದಿಯಲ್ಲಿ ತೆಪ್ಪೋತ್ಸವ ಜರುಗುತ್ತದೆ.

ತುಂಗೆಯ ಒಡಲಿನ ಪಂಚತೀರ್ಥಗಳು
ಚಕ್ರತೀರ್ಥ, ಶಂಖತೀರ್ಥ, ಗದಾತೀರ್ಥ ಮತ್ತು ಗಂಗಾತೀರ್ಥ ಎಂಬ ನಾಲ್ಕು ತೀರ್ಥಗಳು ತುಂಗೆಯ ಒಡಲಿನಲ್ಲಿ ಸೇರಿ ಪಂಚ ತೀರ್ಥಗಳಾಗುತ್ತವೆ.

ಚಕ್ರತೀರ್ಥ ಮತ್ತು ರಾಮತೀರ್ಥ :ಚಕ್ರತೀರ್ಥ ಮತ್ತು ರಾಮತೀರ್ಥಗಳ ನಡುವೆ ಜೋಗಿಗುಡ್ಡೆ ಇದೆ. ಬಂಡೆಯ ನಡುವೆ ದೊಡ್ಡ ಗುಹೆಯಿದೆ. ಬೆಳಕಿನ ಸಹಾಯದಿಂದ ಒಳಹೊಕ್ಕರೆ ಬಂಡೆಯ ಮೇಲೆ ಕೆತ್ತನೆಗಳನ್ನು ಕಾಣಬಹುದು. ಜೈನರ ಕಾಲದಲ್ಲಿ ಜೋಗಿಗಳು ಧ್ಯಾನ ಮಾಡಲು ಬಳಸುತ್ತಿದ್ದರೆಂಬ ನಂಬಿಕೆಯಿದೆ.

  ಹೆಣ್ಣಿನ ಮೋಹ - ಒಂದು ಝೆನ್ ಕಥೆ

ರಾಮನು ತನ್ನ ವನವಾಸದ ಕಾಲದಲ್ಲಿ ಸೀತೆ ಮತ್ತು ಲಕ್ಷ್ಮಣರೊಂದಿಗೆ ಬಂದು ತುಂಗಾಸ್ನಾನ ಮಾಡಿದನೆಂಬ ನಂಬಿಕೆಯಿದೆ. ಅದರ ಪ್ರತೀಕವಾಗಿ ಬಂಡೆಯೊಂದರ ಮೇಲೆ ಸೀರೆಯಾಕಾರದಲ್ಲಿರುವ ಆಕೃತಿಯಿದೆ.

ಪಂಚಪಾಂಡವರು ತಾಯಿ ಕುಂತಿಯೊಂದಿಗೆ ತುಂಗೆಯ ದರ್ಶನ ಪಡೆದರು ಎನ್ನುವ ಪ್ರತೀತಿಯಿದೆ. ಭೀಮನ ಬಟ್ಟಲು ಎಂಬ ಬಟ್ಟಲಾಕಾರದ ಬಂಡೆಕಲ್ಲನ್ನು ಇಲ್ಲಿ ನೋಡಬಹುದು.

ಸಾತ್ತ್ವಿಕ ಸೌಂದರ್ಯ: ಸೇತುವೆಯ ಸೌಂದರ್ಯವನ್ನು ತೆಪ್ಪೋತ್ಸವದಂದು ನೋಡಬೇಕು. ಕೆಳಗೆ ಭಕ್ತಜನರು ತುಂಗೆಯಲ್ಲಿ ತೇಲಿ ಬಿಡುವ ಬೆಳಗುವ ಹಣತೆಗಳು, ಆಗಸದಲ್ಲಿ ನಕ್ಷತ್ರಲೋಕವನ್ನು ಸೃಷ್ಟಿಸಿ ಮಿಂಚುವ, ನೀರಿನಲ್ಲಿ ಪ್ರತಿಫಲಿಸಿ ಮಾಯವಾಗುವ ಬಿರುಸು ಬಾಣಗಳು, ಈ ಸೌಂದರ್ಯವನ್ನು ಕಣ್ಣಾರೆ ಕಂಡು ಆಸ್ವಾದಿಸಬೇಕು.

(ಸಂಗ್ರಹ : ಶ್ರೀ.ಪ್ರಭಾಕರ ಪಡಿಯಾರ್, ತೀರ್ಥಹಳ್ಳಿ)

Leave a Reply

Your email address will not be published. Required fields are marked *

Translate »