ಹನುಮಂತ ದೇವರನ್ನು ಶ್ರೀ. ಮುಖ್ಯಪ್ರಾಣ ದೇವರು ಅಂತ ಸಂಬೋಧಿಸುವದಕ್ಕೆ/ಕರೆಯುವುದಕ್ಕೆ ಮುಖ್ಯಕಾರಣ ಏನು?
ನೀವೆಂದರೆ ನನಗೆ ಪಂಚ ಪ್ರಾಣ ಅಂತಾರಲ್ಲ!!. ಹಾಗೆಂದರೇನು ?
ಯಾರನ್ನು ಬಿಟ್ಟು ಇರವ ಕಲ್ಪನೆ ಕೂಡ ಸಾಧ್ಯ ಇಲ್ಲವೋ ಅವರೇ ಲೋಕದೃಷ್ಟಿಯಲ್ಲಿ ಪಂಚಪ್ರಾಣ.
ಹಾಗೆಯೇ, ನಮ್ಮದೇಹದ ಅಸ್ತಿತ್ವವೂ ಪ್ರಾಣವಾಯು ಇರುವದರಿಂದಲೇ ಸಾಧ್ಯ. ಆ ಪ್ರಾಣವಾಯುವೇ ಶ್ರೀ. ಮುಖ್ಯಪ್ರಾಣ ದೇವರು …
ವಾಯುವಿನ ಅಂಶದಿಂದ ವಾಯುನಂದನ, ಮತ್ತು ಕಪಿವೀರ ಕೇಸರಿಯ ಮಗನಾದ ಕಾರಣ ಕೇಸರಿನಂದನನೆನ್ನಿಸಿಕೊಂಡ.
ವಾನರನಾಗಿ ಅಂಜನೆಯ ಗರ್ಭದಲ್ಲಿ ಹುಟ್ಟಿ ಆಂಜನೇಯನೆನಿಸಿದ.
ಪ್ರತಿಯೊಂದು ಜೀವಿಯ ಅಸ್ತಿತ್ವವೂ ಪ್ರಾಣವಾಯು ಇರುವದರಿಂದಲೇ ಸಾಧ್ಯ ಆದ್ದರಿಂದ ಶ್ರೀ. ಮುಖ್ಯಪ್ರಾಣನೆನಿಸಿದ.
ಚಲನವು ಮಾರುತನ ಧರ್ಮ. ಪ್ರಾಣ, ಅಪಾನ, ಸಮಾನ, ಉದಾನ ಮತ್ತು ವ್ಯಾನಗಳು ಕೂಡ ಮಾರುತನ ರೂಪಗಳು. ಸ್ಪರ್ಶ ಇಂದ್ರಿಯ (ತ್ವಕ್) ಮತ್ತು ಸ್ಪರ್ಶ ಎಂಬ ಗುಣವೂ ಸಹ ಮಾರುತನಿಂದಲೇ ನಿಯಮಿಸಲ್ಪಡುವದು. ವಾಯು ಎಂದರೆ ಪ್ರಾಣಿಮಾತ್ರದ ಜೀವನಾಧಾರ ಶಕ್ತಿ. ಅನ್ನವಿಲ್ಲದೆ ಇರಬಹುದು;nನೀರಿಲ್ಲದೆ ದಿವಸಗಳನ್ನು ತಳ್ಳಬಹುದು; ಗಾಳಿಯಿಲ್ಲದೆ ಕೆಲ ಗಳಿಗೆಯೂ ಬದುಕಿರುವುದು ಸಾಧ್ಯವಿಲ್ಲ. ವಾಯುವೆಂದರೆ ಪ್ರಾಣಶಕ್ತಿ. ಆದ್ದರಿಂದ ವಾಯುವಿನ ಮಗನಾದ ಹನುಮಂತನಿಗೆ ‘ಪ್ರಾಣದೇವರು’ ಎನ್ನುತ್ತಾರೆ. ಹನೂಮಂತ, ವಾಯಪುತ್ರ, ಪವನಸಂಭವ, ಮಾರುತಿ ಹೀಗೆ ಅನೇಕ ಹೆಸರುಗಳಿಂದ ಪ್ರಸಿದ್ಧನಾದವನು ಆಂಜನೇಯ
ಶ್ರೀ. ಮುಖ್ಯಪ್ರಾಣ ದೇವರು ಭಗವಂತನೊಂದಿಗೆ ನಮ್ಮ ಹೃದಯದಲ್ಲೇ ನೆಲೆಸಿದ್ದಾರೆ. ಎಲ್ಲಕ್ಕಿಂತ ವಿಲಕ್ಷಣನಾಗಿ ನಮ್ಮ ಹೃತ್ಕಮಲ ಮಧ್ಯದಲ್ಲಿ ಸೂಕ್ಷಕ್ಕಿಂತ ಸೂಕ್ಷ್ಮನಾಗಿ ನೆಲೆಸಿದ್ದಾನೆ. ಅವರ ಇರುವಿಕೆಯ ಅರಿವನ್ನು ನಾವು ಭಕ್ತಿಪೂರ್ವಕ ಜ್ಞಾನದಿಂದ ಮಾತ್ರ ಅರಿಯಲು ಸಾಧ್ಯ. ಅರಿತವರಿಗೆ ಸಮೀಪವೂ, ಅರಿಯದವರಿಗೆ ಅತೀ ದೂರವು ಆಗಿದ್ದಾರೆ.
ನಮ್ಮ ಆತ್ಮವೇ ರಾಮ. ನಮ್ಮ ಮನಸ್ಸೇ ಸೀತೆ. ನಮ್ಮ ಉಸಿರೇ ಜೀವನದಾಯಿ ಪ್ರಾಣ ಎಂದರೆ ಹನುಮಂತ.
“ವೈಕುಂಠದಿಂದ ಬಂದು ನೀ ಪಂಪಾಕ್ಷೇತ್ರದಿ ನಿಂದು .. ಯಂತ್ರೋದ್ಧಾರಕನೆಂದೂ ಪುರಂದರವಿಠ್ಠಲ ಸಲಹೆಂದು …… ಸ್ವಾಮಿ ಮುಖ್ಯಪ್ರಾಣ ನಿನ್ನ ಮರೆವರ ಗಂಟಲಗಾಣ.. ಪಿಡಿದ್ಯೋ ರಾಮರ ಚಾರಣ ನೀ ಹೌದೌದೋ ಜಗತ್ರಾಣ. ” ಇದು ನಾರದಾಂಶ ಸಂಭೂತರ ಭವ್ಯ ವರ್ಣನೆ.
” ಒಂದು ಕೋಟಿ ಬೀಜ ಮಂತ್ರದಿಂದ ಸುತ್ಯಂತ್ರವ ಬರಿಸಿ ಅಂದು ಪ್ರಾಣ ಪ್ರತಿಷ್ಠೆಯ ಮಾಡಿ ನಿಂದಿರಿಸಿದರು ನಿನ್ನ ಮಂದಹಾಸದಿ ವ್ಯಾಸ ಮುನಿಗಳು ಒಂದು ಕರದಲಿ ಜಪಮಾಲೆ ಒಂದು ಕರ ನಾಭಿ ಕೆಳಗೆ ಚಂದದಿಂದ ಪದುಮಾಸನದಿಂದ ಕುಳಿತು ನಿತ್ಯ ನಿತ್ಯಾನಂದ ವಿಜಯ ವಿಠಲನ್ನ ವಂದಿಸಿ ವರಗಳ ಕೊಡುತ , ಬಂದ ನರರ ಪಾಲಿಸುತ್ತ” .
ಈ ಮೇಲಿನ ಸಾಲುಗಳಲ್ಲಿ ಶ್ರೀ ವಿಜಯ ದಾಸರು ಆ ಪ್ರಾಣದೇವರ ಹಿರಿಮೆಯನ್ನು, ವ್ಯಾಸರಾಜರ ತಪೋಶಕ್ತಿಯನ್ನು ಹಾಡಿ ಕೊಂಡಾಡಿದ್ದಾರೆ.
ಶ್ರೀ ವ್ಯಾಸರಾಜರೇ ರಚಿಸಿರುವ ಶ್ರೀ ಯಂತ್ರೋದ್ಧಾರಕ ಪ್ರಾಣದೇವರ ಅಷ್ಟಕದಲ್ಲಿ ಕಂಡುಬರುವಂತೆ, ತಂತ್ರಸಾರೋಕ್ತ ವಿಧಿಗಳಿಂದ ಶ್ರೀ ವ್ಯಾಸರಾಜರಿಂದ ಪೂಜಿಸಲ್ಪಟ್ಟ ಪ್ರಾಣದೇವರು , ದೇಶದೇಶಗಳಿಂದ ಬರುವ ಭಕ್ತರಿಗೆ ಇಷ್ಟಾರ್ಥಗಳನ್ನು ಅನುಗ್ರಹಿಸುವುದಕ್ಕೆ ಶ್ರೀ ಹರಿಯೇ ಸಾಕ್ಷಿಯಾಗಿದ್ದಾನೆ .
ಹನುಮಾನನು ಶಿವನ ಅಂಶಾವತಾರನಾಗಿದ್ದು ಅವನು ೧೧ ನೇ ರುದ್ರನಾಗಿದ್ದಾನೆ. ಆ ದೃಷ್ಟಿಯಿಂದಲೂ ಹನುಮಂತ ಶ್ರೀ. ಮುಖ್ಯಪ್ರಾಣನೇ ಯಾಕೆಂದರೆ…
ಶರೀರದಲ್ಲಿರುವ ಪ್ರಾಣಾಪಾನಾದಿಗಳು ರುದ್ರನ ಸ್ವರೂಪ ಎಂದು ಪೂರ್ವಪಕ್ಷ. ಮಹಾಭಾರತದಲ್ಲಿ ಶಿವನ ನಾಮಗಳನ್ನು ತಿಳಿಸುವಾಗ ಶಿವನೇ ಪ್ರಾಣಿಗಳ ಶರೀರದಲ್ಲಿ ಪ್ರಾಣಾಪಾನಾದಿ ಸಂಜ್ಞೆಗಳಿಂದ ಇರುವ ವಾಯು ಎಂದು ಹೇಳಲ್ಪಟ್ಟಿದೆ.
ಉತ್ತರಿಸಿದ ಮತ್ತು ಸ್ಪಂದಿಸಿದ ಎಲ್ಲಾ ಪ್ರತಿಭಾನ್ವಿತ ಆಧ್ಯಾತ್ಮಿಕ ಬಂಧುಗಳಿಗೂ ಧನ್ಯವಾದಗಳು.ಮತ್ತು ನಮ್ಮೆಲ್ಲರ ಜೀವನದಲ್ಲಿ ಸುಖ, ಸಂತೋಷ, ನೆಮ್ಮದಿಯನ್ನು ಭಾರತಿರಮಣ ಮುಖ್ಯಪ್ರಾಣಾಂತರ್ಗತ ಸಚ್ಚಿದಾನಂದ ಸ್ವರೂಪಿಯಾದ ಶ್ರೀ ಮಹಾ ವಿಷ್ಣುವು ಎಲ್ಲರಿಗೂ ಅನುಗ್ರಹಿಸಲಿ ಎಂದು ಪ್ರಾರ್ಥನೆ.
🙏🙏🙏