” ಅರಳ ಸಂಗಬೆಟ್ಟು ಗುತ್ತಿನ ಮೂವರು ಮಾಯಗಾರರು – ಶ್ರೀಮೈಸಂದಾಯ – ಶ್ರೀಕಾಂತೇರಿ ಜುಮಾದಿ – ಬಂಟರು…”
ತುಳುನಾಡಿನ ದೈವಗಳ ಜಗತ್ತಿನಲ್ಲಿ ತನ್ನ ವಿಶಿಷ್ಟವಾದ ಕಟ್ಟು ಕಟ್ಟಳೆಯಿಂದ ಆರಾಧನೆ ಪಡೆಯುವ ದೈವಗಳು ಶ್ರೀಕಾಂತೇರಿ ಜುಮಾದಿ – ಬಂಟರು. “ಒಕ್ಕೆತ್ತಿರಿ ಬನ್ನಾಕುಲೆ ಬರಿಕ್ ಬಂಗಾರ್ – ಕುಲಕ್ ಸಿಂಗಾರವಾಯಿಂಚಿ ಸತ್ಯ” ಎಂಬುದು ಈ ದೈವದ ಹಿರಿಮೆ. ಅನೇಕ ಗುತ್ತು,ಬಾಳಿಕೆಗಳ ಚಾವಡಿಯಲ್ಲಿ ಅಧಿಕಾರದ ದೈವವಾಗಿ ಮೆರೆಯುವ ಈ ದೈವವು ಬಂಟ ಜನಾಂಗದ ಕುಲದೈವವಾಗಿ ಆರಾಧನೆ ಪಡೆಯುತ್ತದೆ.
ಪೂರ್ವದಲ್ಲಿ ಬೊಲ್ಲೂರು ಗುತ್ತಿನ ಕಾಂತಣ್ಣ ಅತಿಕಾರಿ / ಕರಿವಾಳರ ಭಜನೆಯ ದೈವ “ಕಾಂತೇರಿ” ಎಂಬ ಅಭಿದಾನದೊಂದಿಗೆ ಆರಾಧನೆ ಪಡೆಯುತ್ತಾ ಅವರ ಕಾಲಾ ನಂತರದ ಅದೇ ಪಟ್ಟದ ಹೆಸರಿನ ಪಟ್ಟದಾರರಾದ ಕಾಂತಣ್ಣ ಅತಿಕಾರಿ / ಕರಿವಾಳರ ಸೋದರಳಿಯ ಪೆರಿಂಜೆ ಗುತ್ತು ಮಂಜು ಪೂಂಜರ ಮಗ ದೇವುಪೂಂಜರ ಜೀವವನ್ನು ಚೆಂಡೆತ್ತಿಮಾರಿನ ಯುದ್ಧರಂಗದಲ್ಲಿ ಮಣಿಮಜಲ ಗುತ್ತಿನ ಗುತ್ತಿನಾರ್ ದಳವಾಯಿ ದುಗ್ಗಣ್ಣ ಕೊಂಡೆಯಿಂದ ಉಳಿಸಿ ಜೀವಕ್ಕೆ ಆದಿ ಜಿಮಾದಿ/ಜುಮಾದಿ ಎಂಬ ವಿಶೇಷಣದಿಂದ ಕಾಂತೇರಿ ಜುಮಾದಿ ಎಂದಾಯಿತು.ಆ ತನಕವೂ ಈ ದೈವ ಒಂಟಿ ದೈವವಾಗಿಯೇ ಕಾಂತೇರಿ ಎಂದೇ ಆರಾಧನೆ ಪಡೆಯುತ್ತಿತ್ತು. @beautyoftulunad
ಕಾಲಾನಂತರ ಯುದ್ಧ ಕಾಲದಲ್ಲಿ ಸೋದರಮಾವ ಕಾಂತಣ್ಣ ಅತಿಕಾರಿ / ಕರಿವಾಳರು ಸೋದರಳಿಯ ದೇವುಪೂಂಜರು ಯುದ್ಧಕ್ಕೆ ಹೋಗುವ ಸಮಯದಲ್ಲಿ ಪಟ್ಟದ ದೈವವಾದ ದೈವ ಶ್ರೀಕಾಂತೇರಿಗೆ ಹೇಳಿದ ಧರ್ಮನೇಮದ ಹರಕೆಗೆ ಸಿದ್ದು ಸೂಳೆಯ ಮೋಸದ ಬಲೆಗೆ ಬಿದ್ದು ಕಾಲಕ್ಕೆ ಬರದ ದೇವು ಪೂಂಜರ ಮೇಲೆ ಕೋಪಗೊಂಡು ಅವರು ಕೇರಳದ ಮಲಿಯಾಳಿ ಸೈನ್ಯದೊಂದಿಗೆ ಯುದ್ಧಕ್ಕೆ ಹೋದ ಕಾಲದಲ್ಲಿ ಉಚ್ಚಿಲಂದ ಕೋಟೆಯಲ್ಲಿ ರಾತ್ರಿ ಕಾಲದಲ್ಲಿ ಮಲಗಿರುವಾಗ ಮಂತ್ರವಾದಿ ಚಾತು ಕುಟ್ಟಿಯು ನಿದ್ದೆಯಲ್ಲಿ ಇದ್ದ ದೇವು ಪೂಂಜರ ತಲೆ ಕಡಿಯುವ ಮೂಲಕ ಅವರ ದಾರುಣ ಅಂತ್ಯಕ್ಕೆ ಮಾಯೆಯಲ್ಲಿ ಕಾರಣವಾಯಿತು.ಆ ನಂತರ ಅವರನ್ನು ತನ್ನ ಸೇರಿಗೆಗೆ ಬಂಟನಾಗಿ ಸೇರಿಸಿ ಕಾಂತೇರಿ ಜುಮಾದಿ – ಬಂಟೆರ್ ಎಂಬ ದೈವಗಳಾಗಿ ಮಾಯದ ಹಡಗಿನಲ್ಲಿ ಪಣಂಬೂರು ಸಾರಾಳ ಪಟ್ಟವನ್ನು ಪ್ರವೇಶಿಸಿ ಸಾರಾಳ ಪಟ್ಟದ ಮಾಯಗಾರೆ ಎಂಬ ಬಿರುದಿನೊಂದಿಗೆ ಆ ನಂತರ ಅನೇಕ ಗುತ್ತು, ಬಾಳಿಕೆ,ಬೂಡು ಚಾವಡಿಗಳಿಗೆ ಪ್ರಸರಣೆ ಪಡೆಯಿತು ಎಂಬುದು ಈ ದೈವದ ಬಗೆಗಿನ ಸಂಕ್ಷಿಪ್ತ ವಿವರ. @beautyoftulunad
ಶ್ರೀಕಾಂತೇರಿ ಜುಮಾದಿ ಬಂಟ ದೈವಗಳು ಆರಾಧನೆ ಪಡೆಯುವ ಅನೇಕ ಗುತ್ತು ಚಾವಡಿಗಳಲ್ಲಿ ಅರಳ ಸಂಗಬೆಟ್ಟು ಗುತ್ತು ಮನೆತನವೂ ಒಂದು. ಇಲ್ಲಿನ ದೈವದ ನೇಮದ ಕಟ್ಟಳೆಯ ಕ್ರಮವೂ ಬಲು ವಿಶಿಷ್ಟ ಹಾಗೆಯೇ ಈ ಗುತ್ತಿನಲ್ಲಿ ದೈವ ನೆಲೆನಿಂತ ಕತೆಯೂ ಬಲು ರೋಚಕ. ಪೂರ್ವ ಕಾಲದಲ್ಲಿ ಅರಳ ಸಂಗಬೆಟ್ಟು ಗುತ್ತಿನ ಒಕ್ಕೆತ್ತಿರಿ ಬಾರಗರು ಬೊಲ್ಲೂರು ಕೋಚಾಲ ಗುತ್ತಿನ ಕಾಂತೇರಿ ಜುಮಾದಿ ದೈವದ ನೇಮ ನೋಡಲು ಹೋದಾಗ ಅವರ ವೈಭವದ ಘನತೆಗೆ ಮರುಳಾಗಿ ಭಕ್ತಿಗೆ ಮೆಚ್ಚಿ ನಾನು ನಿಮ್ಮ ಬೆಂಬತ್ತಿ ನಿಮ್ಮ ಗುತ್ತಿಗೆ ಬಂದು ನೆಲೆಸುತ್ತೇನೆ ಎಂದು ದೈವ ಶ್ರೀಕಾಂತೇರಿ ಜುಮಾದಿ ನುಡಿದಾಗ “ಬರುವ ದೈವವನ್ನು ಬರಬಾರದು ಎಂದು ಹೇಳಲಾರೆ – ಬರದ ದೈವವನ್ನು ಬರಬೇಕು ಎಂದು ಹೇಳಲಾರೆ” ಎಂದು ಭಕ್ತಿಯಿಂದ ನುಡಿದಾಗ ಅವರ ಬೆಂಬತ್ತಿ ದೈವ ಶ್ರೀಕಾಂತೇರಿ ಜುಮಾದಿ ಬಂಟ ದೈವಗಳು ಸಂಗಬೆಟ್ಟು ಗುತ್ತು ಪ್ರವೇಶಿಸಿ ನೆಲೆಯಾಗುತ್ತದೆ.ಆಗ ಅಲ್ಲಿನ ಬೈಲ ಚಾವಡಿಯಲ್ಲಿ ಇದ್ದ ಮಂತ್ರವಾದಿ ಪೊಲ್ಲ ಭಟ್ರ ಸಂತಾನವನ್ನು ನಾಶ ಮಾಡಿ ಅವರ ಸಮಸ್ತ ಸೊತ್ತುಗಳನ್ನು ತಿಮರ ಬಾಕಿಮಾರಿನ ಮುಂಡೇವಿನ ಮುಳ್ಳಿನ ರಾಶಿಗೆ ಹಾಕಿ ಬೈಲ ಚಾವಡಿಯ ಹೆಸರನ್ನು ಅಳಿಸಿ ಬೈಕೋಲ-ಚಾವಡಿ ನಿರ್ಮಾಣ ಮಾಡಿ ಆ ನಂತರ ಮೂಲ ಮೈಸಂದಾಯ, ಕಾಂತೇರಿ ಜುಮಾದಿ-ಬಂಟ ಎಂದು ಒಂದು ತೆಂಗಿನ ಫಲಕ್ಕೆ ಮೂರು ದೃಷ್ಟಿಯಂತೆ ಮೂವರು ಮಾಯಗಾರರು ಎಂದು ನಿರ್ಣಯಿಸಿ ಸಂಗಬೆಟ್ಟು ಗುತ್ತಿನ ಹತ್ತು ಒಕ್ಕಲಿನವರನ್ನು ಸೇರಿಸಿ ಸಂಗಬೆಟ್ಟು ಒಕ್ಕೆತ್ತಿರಿ (ಬಂಟ) ಬಾರಗರ ಯಜಮಾನತ್ವದಲ್ಲಿ ಕಾಲ ಕಾಲಕ್ಕೆ ಕುಂಭ ಮಾಸದ (ಮಾಯಿ) 15ನೇ ದಿನದಂದು ದರಿ-ದೀಪಾರಾಧನೆ ಪೂರ್ವಕ ಕಾಲಾವಧಿ ಬೈಕೋಲ ಚಾವಡಿ ನೇಮೋತ್ಸವವನ್ನು ಪಡೆಯುತ್ತಾ ಬರುತ್ತಿದ್ದಾರೆ ಅರಳ ಸಂಗಬೆಟ್ಟು ಗುತ್ತಿನ ಕಾರಣೀಕದ ಶಕ್ತಿಗಳಾದ ಶ್ರೀಕಾಂತೇರಿ ಜುಮಾದಿ ಬಂಟರು.