ಇಲ್ಲೊಂದು ಅಡುಗೆ ಎಣ್ಣೆಯ ವಿಚಾರ – ಲೆಕ್ಕಾಚಾರ ಇದೆ ನೋಡಿ.
ಉತ್ಕೃಷ್ಟ ದರ್ಜೆಯವೆಂದು, ಕೊಲೆಸ್ಟ್ರಾಲ್ ಮುಕ್ತ (ಇದು ಇನ್ನೊಂದು ದೊಡ್ಡ ಕಥೆ!) ಡಬಲ್ ರೀಫೈನ್ಡ್ ಎಂದೆಲ್ಲಾ ಹೇಳಿಕೊಳ್ಳುವ ಹೆಸರಾಂತ ಬ್ರಾಂಡುಗಳ ಬಹುತೇಕ ಎಣ್ಣೆಗಳ ಬೆಲೆಗಳು 70 ರಿಂದ ಶುರು ಆಗಿ 130–140ರಲ್ಲಿ ನಿಲ್ಲುತ್ತವೆ. ಬಹುತೇಕ ಎಣ್ಣೆಗಳು ಆಯಾ ಎಣ್ಣೆಕಾಳುಗಳಿಗೆ ಸಂಬಂಧಿಸಿದ ವಾಸನೆ, ಬಣ್ಣ ಇತ್ಯಾದಿಗಳನ್ನು ಕಳೆದುಕೊಂಡು ತಿಳಿನೀರಿನಂತೆ ಸ್ವಚ್ಛ ಸುಂದರವಾಗಿ ಕಾಣಿಸುತ್ತಿರುತ್ತವೆ. ಇರಲಿ.
ಒಂದಿಷ್ಟು ಎಣ್ಣೆ ತೆಗೆಯುವ ಹಂತದ ಲೆಕ್ಕಾಚಾರಗಳನ್ನು ನೋಡೋಣ ಬನ್ನಿ.
ಹೆಸರಾಂತ ಬ್ರಾಂಡಿನ ದೊಡ್ಡ ದೊಡ್ಡ ಎಣ್ಣೆ ಮಿಲ್ಲುಗಳಲ್ಲಿ ಕಡ್ಲೆಕಾಯಿ (ಶೇಂಗಾ) ಎಣ್ಣೆ ಒಂದು ಕೆಜಿಯಷ್ಟು ತಯಾರಾಗಲು ಅತ್ಯುತ್ತಮ ದರ್ಜೆಯ 2ರಿಂದ 2.5 ಕೆಜಿ ಶೇಂಗಾಬೀಜ ಬೇಕು. 2.5 ಕೆಜಿ ಬೀಜ (ಸಾವಯವ ಅಲ್ಲದ್ದು) ದ ಹೋಲ್ಸೇಲ್ ಬೆಲೆ ಈಗ 60 ರೂಪಾಯಿ ಇರಬಹುದೆಂದುಕೊಳ್ಳೋಣ. ಶೇಂಗಾಬೀಜದ ಖರ್ಚು 150 ಆಯಿತು. ಇದಕ್ಕೆ ಎಣ್ಣೆ ತೆಗೆಯುವ ಛಾರ್ಜು 20 ಸೇರಿಸೋಣ. ನಂತರ ಸಾಗಣೆ, ಕ್ಲೀನಿಂಗ್ ಇತ್ಯಾದಿ 20 ರೂಪಾಯಿ ಎಂದುಕೊಳ್ಳೋಣ. ಎಣ್ಣೆ ತೆಗೆದ ಮೇಲೆ ಇದಕ್ಕೆ ಶೇ 25ರಷ್ಟು ಪ್ಯಾಕಿಂಗ್ ಮತ್ತು ಮಾರ್ಕೆಟಿಂಗ್ ವೆಚ್ಚಗಳು ಸೇರಿಕೊಳ್ಳುತ್ತವೆ.
2.5 ಕೆಜಿ ಶೇಂಗಾ ಬೀಜ 150/-
ಮಿಲ್ಲಿಂಗ್ ಚಾರ್ಜು 20/-
ಸಾಗಣೆ, ಕ್ಲೀನಿಂಗ್ ಖರ್ಚು 20/-
ಪ್ಯಾಕಿಂಗ್ ಮಾರ್ಕೆಟಿಂಗ್ 48/-
————————————-
ಒಟ್ಟು 238/-
ಒಂದೂವರೆ ಕೆಜಿ ಹಿಂಡಿ -45/-
——————————–
ನಂತರ ಒಟ್ಟು 193/-
ಒಟ್ಟು ಮೊತ್ತದಲ್ಲಿ 1.5 ಕೆಜಿ ಹಿಂಡಿಯ ಫಾಕ್ಟರಿ ದರ 45ನ್ನು ಕಳೆದರೆ ಕೆಜಿ ಎಣ್ಣೆಯ ಮೊತ್ತ 193ಕ್ಕೆ ಇಳಿಯುತ್ತದೆ. ದೊಡ್ಡ ಪ್ರಮಾಣದಲ್ಲಿ ಫಾಕ್ಟರಿಗಳಲ್ಲಿ ಎಣ್ಣೆ ತೆಗೆದು ರೀಫೈನ್ ಮಾಡುವುದರಿಂದ, ಹೀಟ್ ಪ್ರೆಸ್ ಮಾಡಿ ಎಣ್ಣೆ ತೆಗೆಯುವಾಗ ಪ್ರತಿ ಕೆಜಿ ಬೀಜಕ್ಕೆ ಸ್ವಲ್ಪ ಹೆಚ್ಚು ಎಣ್ಣೆ ದೊರೆಯಬಹುದು. ಆಗ ಈ ಖರ್ಚುಗಳು ಶೇ 10 ರಷ್ಟು ಕಡಿಮೆ ಆಗುತ್ತವೆ ಎಂದುಕೊಂಡರೂ ಪ್ರತಿ ಕೆಜಿ ಎಣ್ಣೆಯ ಫ್ಯಾಕ್ಟರಿ ದರವೆ 174 ರೂಪಾಯಿ ಆಗುತ್ತದೆ. ಇದು ಕಂಪನಿ ಮಟ್ಟದ ಉತ್ಪಾದನಾ ವೆಚ್ಚ ಅದು ಡಿಸ್ಟಿಬ್ಯೂಟರ್‌ಗಳನ್ನು ತಲುಪಿ, ಹೋಲ್‌ಸೇಲ್, ರೀಟೈಲ್ (ಸಾಧಾರಣ ವಸ್ತುವಿನ ರೀಟೈಲ್ ಬೆಲೆಯ ಶೇ 33ರಷ್ಟು ಇಲ್ಲಿ ಹಂಚಿಕೆಯಾಗುತ್ತದೆ) ಎಂದು ನಮ್ಮ ಕೈ ತಲುಪುವಷ್ಟರಲ್ಲಿ 231 ಆಗಬೇಕು.
(ಗಮನವಿರಲಿ ಇಲ್ಲಿ ಕಂಪನಿಯ ಲಾಭ ಸೇರಿಸಿಲ್ಲ! ಲಾಭವಿಲ್ಲದೆ ಕಂಪನಿ ನಡೆಸ್ತಾರಾ..)
ಆದರೆ ಕೆಜಿಗೆ 231ರೂಪಾಯಿ ಎಂದರೆ ಯಾವ ಗ್ರಾಹಕನೂ ಆ ಎಣ್ಣೆಯನ್ನು ಮೂಸುವುದಿಲ್ಲ.
ಆಗ ‘ಮಾರುಕಟ್ಟೆ’ಯ ವ್ಯಾಪಾರಿ ಬುದ್ದಿ ಕೆಲಸ ಮಾಡತೊಡಗುತ್ತದೆ. ಕಲಬೆರಕೆ ಆರಂಭವಾಗುತ್ತದೆ. ಗ್ರಾಹಕರಿಗೆ ಬೆಲೆಯೂ ಹೆಚ್ಚಾಗಬಾರದು, ಕರಿದ ತಿಂಡಿಗಳೂ ಗರಿಗರಿಯಾಗಿರಬೇಕು. ಆರೋಗ್ಯದ ಮೇಲೆ ದಿಡೀರ್ ಪರಿಣಾಮ ಉಂಟಾಗುವಂತಿರಬಾರದು. ನಿಧಾನ ವಿಷದಂತ ಪದಾರ್ಥಗಳಾದರೆ ಸಲೀಸು.
’ಲಿಕ್ವಿಡ್ ಪ್ಯಾರಾಫಿನ್’ನಂತಹ ಪೆಟ್ರೊಲಿಯಂ ಸಂಸ್ಕರಣೆಯ ಹಂತದ ‘ಉಳಿಕೆ’ಗಳು ಕಲಬೆರಕೆ ಮಾಡಲು ಬಹಳ ಸೂಕ್ತ ಪದಾರ್ಥ. ಇಂತದ್ದೆ ಹಲವು ಕಲಬೆರಕೆ ಪದಾರ್ಥಗಳು ಹಾಲಿನಲ್ಲಿ ನೀರು ಹೊಂದಿಕೊಳ್ಳುವಂತೆ ಎಣ್ಣೆಯೊಡನೆ ಸೇರಿಹೋಗುತ್ತವೆ. ಅಗ್ಗದ ಫಾಮ್ ಆಯಿಲ್ ಕೊನೆಯ ಆಯ್ಕೆ. ಜೊತೆಗೆ ಒಂದಿಷ್ಟು ಬಣ್ಣ, ಕೃತಕ ಸುವಾಸನೆಯನ್ನು ಸೇರಿಸಲೇಬೇಕು. ಎಲ್ಲವೂ ಗ್ರಾಹಕರನ್ನು ಖುಷಿಪಡಿಸಲು. ಹೀಗೆಲ್ಲಾ ಕಲಬೆರಕೆಯಾಗಿ ತಯಾರಾದ ಎಣ್ಣೆಯ ಪ್ರತಿ ಕೆಜಿಯ ಫಾಕ್ಟರಿ ದರ 50–70..100ರ ಆಸುಪಾಸಿನಲ್ಲಿರಬಹುದು. ನೋಡಿ, ನಮಗಾಗಿ ಎಣ್ಣೆ ತಯಾರು ಮಾಡುವ ದೊಡ್ಡ ಫ್ಯಾಕ್ಟರಿಯವ ಎಷ್ಟೆಲ್ಲಾ ಕಲಬೆರಕೆಯ ಸರ್ಕಸ್ಸು ಮಾಡಬೇಕಲ್ಲವೆ…
ಈ ಲೆಕ್ಕಾಚಾರ ಸ್ವಲ್ಪ ಅಂಕಿ ಅಂಶ ಬದಲಾವಣೆಯೊಂದಿಗೆ ಈಗ ಲಭ್ಯ ಇರುವ ಸೂರ್ಯಕಾಂತಿ, ತೆಂಗು, ಎಳ್ಳು, ಹುಚ್ಚೆಳ್ಳು…ಹೀಗೆ ಎಲ್ಲಾ ಎಣ್ಣೆಗಳಿಗೂ ಅನ್ವಯಿಸುತ್ತದೆ ಹಾಗೂ ಕಲಬೆರಕೆಯಲ್ಲಿ ಎಲ್ಲವೂ ಅಣ್ಣತಮ್ಮಂದಿರೇ.
ಹೇಳಿ ಇಷ್ಟು ಕಡಿಮೆ ಬೆಲೆಗೆ ತಯಾರಾಗುವ ಎಣ್ಣೆಯನ್ನೇ ಅಲ್ಲವೆ ನಾವೂ ನೀವೂ ಆ ರುಚಿ, ಈ ರುಚಿ, ಡೈಮಂಡು, ಗೋಲ್ಡು ಇತ್ಯಾದಿ ಬ್ರಾಂಡುಗಳಲ್ಲಿ ತಿನ್ನುತ್ತಿರುವುದು…ಇದೇ ಎಣ್ಣೆ ಮತ್ತು ಮೈದಾದಂತಹ ಘೋರ ವಿಷದ ಜೊತೆಗೂಡಿ ತಯಾರಾದ ಬೇಕರಿ ತಿನಿಸುಗಳನ್ನು ನಾವು ಚಪ್ಪರಿಸುತ್ತಿದ್ದೇವಲ್ಲ…ಪ್ರತಿ ಹಳ್ಳಿಯಲ್ಲೂ ಇಂದು ಬೇಕರಿಗಳಾಗಿವೆ…ಪಾನಿಪೂರಿ, ಗೋಬಿ ಮಂಚೂರಿ ಅಂಗಡಿಗಳು ಬಂದಿವೆ. ಎಣ್ಣೆ ಬಳಸುವುದರಲ್ಲಿ ಇಂದು ಬಡವ, ಬಲ್ಲಿದ; ಹಳ್ಳಿ ನಗರ ಎಂಬ ವ್ಯತ್ಯಾಸಗಳಿಲ್ಲ.
ಪ್ರತಿ ಗ್ರಾಂ ಎಣ್ಣೆ ನಮ್ಮ ದೇಹ ಸೇರುವಾಗಲೂ ನಿಧಾನ ವಿಷವನ್ನು ಉಣ್ಣುತ್ತಿರುತ್ತೇವೆ. ಇಂದಿನ ಜನರನ್ನುಅತಿಹೆಚ್ಚು ಕಾಡುತ್ತಿರುವ ಬೊಜ್ಜು, ಬೀಪಿ, ಶುಗರ್ರು, ಕ್ಯಾನ್ಸರ್ರು ಮತ್ತೊಂದು ಇತ್ಯಾದಿ ನೂರೆಂಟು ಕಾಯಿಲೆಗಳಿಗೂ ನಾವು ಬಳಸುವ ಎಣ್ಣೆಗಳೇ ಮೂಲವಾಗಿರಬಾರದೇಕೆ…ಅದರಲ್ಲಿ ಸಂಶಯವೇ ಇಲ್ಲ ಬಿಡಿ. ಅಂಗೈ ಹುಣ್ಣಿಗೆ ಕನ್ನಡಿಯಾಕೆ?
ಹಾಗಿದ್ದ ಮೇಲೆ ನಾವು ಪ್ರತಿನಿತ್ಯ ಮನೆ, ಹೋಟೆಲ್ಲು, ಸಮಾರಂಭ ಎಲ್ಲೆಡೆಯೂ ವಿಷಕಾರಿ ಎಣ್ಣೆಗಳನ್ನು ಸೇವಿಸುತ್ತಿದ್ದೇವೆ ಅಂತಾಯಿತು.
ಹಾಗಾದರೆ ಇದರಿಂದ ಹೊರಬರಲು ಆಗುವುದಿಲ್ಲವೆ…
ಅಲ್ಲಾ.. ಇಷ್ಟೆಲ್ಲಾ ಆಗುವಾಗ ಸರ್ಕಾರ, ಅದರ ಅಂಗೋಪಾಂಗಗಳು ಎಣ್ಣೆ ಹೊಡೆಯುತ್ತಿರುತ್ತವಾ ಅಂತಾ ನೀವು ಕೇಳಬಹುದು…ನಿಮ್ಮ ಮನಸ್ಸಿನಲ್ಲಿ ಪ್ರಶ್ನೆಗಳು ಮೂಡುತ್ತಿವೆಯೆಂದರೆ ನಿಮಗೆ ವಿಷಯದ ಗಾಂಭೀರ್ಯ ಅರ್ಥವಾಗುತ್ತಿದೆ ಎಂದರ್ಥ.
ಎಲ್ಲರ ಮನಸ್ಸಿನಲ್ಲೂ ಆರೋಗ್ಯದ ಬುದ್ಧನ ಹುಟುಕಾಟ ಶುರುವಾಗಬೇಕಿದೆ.