ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಬಾಳೆ ಎಲೆಯಲ್ಲಿ ಊಟ ಮಾಡುವ ಪದ್ಧತಿ ಏಕೆ ?

ಬಾಳೆ ಎಲೆಯಲ್ಲಿ ಊಟ ಮಾಡುವ ಪದ್ಧತಿ ಇತ್ತೀಚೆಗೆ ಒಂದು ರೀತಿಯ ಫ್ಯಾಷನ್ ಆಗಿ ಹೋಗಿದೆ. ಈ ಟ್ರೆಂಡನ್ನು ಅನೇಕ ದರ್ಶಿನಿಗಳು, ಹೋಟೆಲ್ಗಳು ತಮ್ಮ ವ್ಯಾಪಾರಿ ಉಪಯೋಗಕ್ಕೆ ಬಳಸಿಕೊಂಡು ಹಣ ಮಾಡುವತ್ತ ಹೆಜ್ಜೆ ಹಾಕಿದ್ದಾರೆ.

     ಬಾಳೆ ಎಲೆಯಲ್ಲಿ ಊಟ ಮಾಡುವ ಪದ್ಧತಿ ಭಾರತದಲ್ಲಿ, ಅದರಲ್ಲೂ ದಕ್ಷಿಣ ಭಾರತದಲ್ಲಿ ಅನಾದಿ ಕಾಲದಿಂದಲೂ ನಡೆದು ಬಂದಿದೆ. ಭಾರತ ಮಾತ್ರವಲ್ಲದೆ ಇಂಡೋನೇಷ್ಯಾ, ಸಿಂಗಾಪುರ್, ಮಲೇಷಿಯಾ, ಫಿಲಿಫೈನ್ಸ್, ಮೆಕ್ಸಿಕೋ, ಮಧ್ಯ ಅಮೇರಿಕಾ ಮುಂತಾದ ಅನೇಕ ದೇಶಗಳಲ್ಲೂ ವ್ಯಾಪಕವಾಗಿ ಹರಡಿದೆ. 

      ಹಾಗಾದರೆ ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಏನಾದರೂ ಉಪಯೋಗವಿದೆಯೇ? ಖಂಡಿತ ಹೌದು ಎನ್ನುತ್ತಾರೆ ವಿಜ್ಞಾನಿಗಳು. ಅವರುಗಳ ಸಂಶೋಧನೆಯಿಂದ ಸಾಬೀತಾಗಿರುವ ವಿಷಯವನ್ನು ಅರಿಯೋಣ. 

      ಮೂಲವಾಗಿ ಬಾಳೆ ಎಲೆಯಲ್ಲಿ ಊಟ ಮಾಡುವಾಗ, ಬಿಸಿ ಬಿಸಿ ಪದಾರ್ಥ ಅದರ ಮೇಲೆ ಹಾಕಿದಾಗ ಅದರಿಂದ ಸ್ರವಿಸುವ ಜಿಗುಟಾದ ವಸ್ತು ಆಹಾರದೊಂದಿಗೆ ದೇಹವನ್ನು ಸೇರುತ್ತದೆ. ಈ ಜಿಗುಟಾದ ವಸ್ತುವಿಗೆ ಕ್ಯಾನ್ಸರ್ ಹೆಚ್ಚಿಸುವ ಗ್ರಂಥಿಗಳನ್ನು ನಿಷ್ಕ್ರಿಯೆಗೊಳಿಸುವ ಶಕ್ತಿಯಿದೆ. ಹಾಗಾಗಿ ದೇಹ ಕ್ರಾನ್ಸರ್ಗೆ ತುತ್ತಾಗುವ ಸಂಭವವನ್ನು ತಡೆಯುತ್ತದೆ. 

     ಬಾಳೆ ಎಲೆಯ ಮೇಲೆ ಬಿಸಿ ಬಿಸಿ ಆಹಾರ ಪದಾರ್ಥಗಳನ್ನು ಬಡಿಸಿದಾಗ, ಬಾಳೆ ಎಲೆಯಲ್ಲಿನ ಆರೋಗ್ಯಕರ ಪೋಷಕಾಂಶಗಳು ಆಹಾರದೊಂದಿಗೆ ಬೆರೆತು, ದೇಹವನ್ನು ಸೇರುತ್ತದೆ. ಇದರಿಂದ ಸಾಮಾನ್ಯವಾಗಿ ದೇಹದಲ್ಲಿ ಕಾಣಿಸಿಕೊಳ್ಳುವ ದದ್ದು, ತುರಿಕೆ, ಕುರು ಮುಂತಾದ ಸಣ್ಣ ಪುಟ್ಟ ದೈಹಿಕ ಕಾಯಿಲೆಗಳು ದೂರವಾಗುತ್ತವೆ. 

      ಬಾಳೆ ಎಲೆಗಳಲ್ಲಿ ಪಾಲಿಫಿನಾಲ್ ನಂತಹ ಆ್ಯಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದೆ. ಈ ಆ್ಯಂಟಿ ಆಕ್ಸಿಡೆಂಟ್ಗಳಲ್ಲಿ ಅತ್ಯಂತ ಉಪಯುಕ್ತವಾದ ಎಪಿಗಲ್ಲೋಕಾಟೆಚಿನ್ ಗಾಲೆಟ್ (ಇಜಿಸಿಜಿ). ಊತ, ತೂಕ ಕಡಿತಗೊಳಿಸಲು ಹಾಗೂ ಇದು ನೈಸರ್ಗಿಕ ಉತ್ಕರ್ಷಣ ನಿರೋಧಕವಾಗಿದೆ. ಮಾನವನ ದೇಹವು ಇದನ್ನು ಸ್ವೀಕರಿಸುವುದರಿಂದ ದೇಹದ ಮೇಲಿನ ಚರ್ಮ ದೀರ್ಘಕಾಲದವರೆವಿಗೂ ಸುಕ್ಕಾಗುವುದನ್ನು ತಡೆಯಲು ಸಹ ಸಹಾಯ ಮಾಡುತ್ತದೆ. 

     ಬಾಳೇ ಎಲೆಯಲ್ಲಿನ ಕೆಲವು ಪೋಷಕಾಂಶಗಳು ದದ್ದು, ತುರಿಕೆ ಮತ್ತು ಹುಣ್ಣನ್ನು ದೂರಮಾಡುತ್ತದೆ ಎಂದು ಈಗಾಗಲೇ ತಿಳಿದಿದ್ದೇವೆ. ಅಕಸ್ಮಾತ್ ದದ್ದು, ಮೊಡವೆ, ಕುರು ಮುಂತಾದವುಗಳೇನಾದರೂ ಚರ್ಮದ ಮೇಲೆ ಕಾಣಸಿಕೊಂಡಲ್ಲಿ, ಬಾಳೆ ಎಲೆ ಮೇಲೆ ತೆಂಗಿನ ಎಣ್ಣೆ ಹಚ್ಚಿ ಬಾಧಿತ ಚರ್ಮದ ಭಾಗಕ್ಕೆ ಕಟ್ಟುವುದರಿಂದ ಶೀಘ್ರ ಗುಣಮುಖವಾಗಲು ಪ್ರೇರೇಪಿಸುತ್ತದೆ. 

     ಬಾಳೆ ಎಲೆಯನ್ನು ಊಟಕ್ಕೆ ಬಳಸುವ ಸಂಪ್ರದಾಯ ಭಾರತೀಯ ಸಂಸ್ಕೃತಿಯಲ್ಲಿ ಅನಾದಿಕಾಲದಿಂದಲೂ ನಡೆದು ಬಂದಿದೆ. ಅದರಿಂದ ಮಾನವನ ದೇಹಕ್ಕಾಗುವ ಅನುಕೂಲಗಳನ್ನು ಈಗ ವಿಜ್ಞಾನ ಸಾಬೀತು ಮಾಡಿದೆ. 

     ಕೆಲವೊಂದು ಅಡುಗೆಯ ತಯಾರಿಕೆಯಲ್ಲಿ ಪದಾರ್ಥವನ್ನು ಬಾಳೆ ಎಲೆಯಲ್ಲಿ ಸುತ್ತಿ ಬೇಯಿಸುವುದು ಉಂಟು. ಈ ರೀತಿಯಲ್ಲಿ ತಯಾರಿಸಿದ ಅಡುಗೆಗೆ, ಅದರದೇ ಆದ ವಿಶಿಷ್ಟ ಸುವಾಸನಾ ಪರಿಮಳ ಬಂದಿರುತ್ತದೆ. ದಕ್ಷಿಣ ಭಾರತದ ಅತ್ಯಂತ ಉತ್ಕೃಷ್ಟ ಸಿಹಿ ಭಕ್ಷ್ಯ ಹೋಳಿಗೆ ಮಾಡುವಾಗಲೂ ಬಾಳೆ ಎಲೆಯ ಮೇಲೆ ತಟ್ಟಿ ನಂತರ ಬೇಯಿಸುವುದುಂಟು. ಬಾಳೆ ಎಲೆ ಉಪಯೋಗಿಸಿ ತಯಾರಿಸಿದ ಹೋಳಿಗೆಗೂ, ಪ್ಲಾಸ್ಟಿಕ್ ಹಾಳೆಯ ಮೇಲೆ ತಟ್ಟಿ ತಯಾರಿಸಿದ ಹೋಳಿಗೆಗೂ ರುಚಿಯಲ್ಲಿ ವ್ಯಾತ್ಯಾಸ ಕಂಡು ಬರುವುದನ್ನು ಗಮನಿಸಿರಬಹುದು. ಬಾಳೆ ಎಲೆಯ ಮೇಲೆ ತಟ್ಟಿ ಮಾಡಿದ ಹೋಳಿಗೆಯ ಸ್ವಾಧವೇ ಬೇರೆ!!! 

     ಊಟಕ್ಕೆ ಬಾಳೆ ಎಲೆಯನ್ನು ಬಳಸಿದ ನಂತರ ಅದನ್ನು ದನಕರುಗಳಿಗೆ ಮೇವಾಗಿ ನೀಡಬಹುದು. ಇದರಿಂದ ಅವುಗಳಿಗೂ ಆಹಾರ ದೊರಕಿದಂತಾಗುತ್ತದೆ ಮತ್ತು ಪ್ಲೇಟುಗಳನ್ನು ತೊಳೆಯಲು ಉಪಯೋಗಿಸುವ ನೀರೂ ಸಹ ಉಳಿತಾಯವಾಗುತ್ತದೆ. ದನಕರುಗಳು ಇಲ್ಲವಾದಲ್ಲಿ ಭೂಮಿಯಲ್ಲಿ ಎಸೆದರೂ ಅದು ಪರಿಸರ ಸ್ನೇಹಿಯಾದ ಕಾರಣ ಉತ್ತಮ ಗೊಬ್ಬರವಾಗುತ್ತದೆ. 

    ಆಧುನಿಕ ಜಗತ್ತಿನಲ್ಲಿ ಬಳಸಲಾಗುತ್ತಿರುವ ಪ್ಲಾಸ್ಟಿಕ್ ಪ್ಲೇಟುಗಳಾಗಲಿ, ಥರ್ಮೋಕೋಲ್ ಪ್ಲೇಟುಗಳಾಗಲಿ ಉಪಯೋಗಿಸಿದ ನಂತರ ಅದರ ತ್ಯಾಜ್ಯ ವಿಲೇವಾರಿ ಅತ್ಯಂತ ಗಂಭೀರ ಹಾಗೂ ಕಷ್ಟಕರ ಸಮಸ್ಯೆ. ದನಕರುಗಳು ಈ ತ್ಯಾಜ್ಯವನ್ನು ತಿಂದು ಪ್ರಾಣ ಕಳೆದುಕೊಂಡ ಉದಾಹರಣೆ ಸಹ ನಮ್ಮ ಮುಂದಿದೆ. ಹಾಗಾಗಿ ಬಾಳೆ ಎಲೆ ಇದಕ್ಕೆ ಅತ್ಯಂತ ಪರಿಣಾಮಕಾರಿ ಪರ್ಯಾಯ. 

      ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ಆಹಾರ ಬಡಿಸಲು ಮತ್ತು ಆಹಾರವನ್ನು ಪ್ಯಾಕ್ ಮಾಡಲು ಸಹ ಬಾಳೆ ಎಲೆಗಳನ್ನು ಬಳಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಇದನ್ನೇ ಇತರರೂ ಅನುಸರಿಸಿದರೆ, ಎಲ್ಲಾ ರೀತಿಯಲ್ಲೂ ಮಾನವನ ಆರೋಗ್ಯ ವೃದ್ದಿಸಲು ಹಾಗೂ ಪರಿಸರವನ್ನು ಸ್ವಚ್ಛವಾಗಿಡಲು ಸಹಾಯಕಾರಿ. 

      ಕೊನೆ ಹನಿ: ಊಟಕ್ಕೆ ಬಾಳೆ ಎಲೆಯನ್ನು ಹಾಕುವಾಗ ಕೆಲವೊಂದು ಪದ್ಧತಿಯನ್ನು ಹಿಂದಿನ ಕಾಲದಿಂದ ರೂಢಿಸಿಕೊಂಡು ಬರಲಾಗಿದೆ. ಅದೇನೆಂದರೆ, ಅಗ್ರವು (ಬಾಳೆ ಎಲೆಯ ತುದಿ) ಬಡಿಸುವವರ ಬಲಕ್ಕೆ, ಊಟಕ್ಕೆ ಕುಳಿತವರ ಎಡಕ್ಕೆ, ಬರುವಂತೆ ಹಾಕಬೇಕೆಂಬುದು. ‘ಈ ಪದ್ದತಿಯ ಹಿಂದೆ ಏನಾದರೂ ವೈಜ್ಞಾನಿಕ ಕಾರಣವಿದೆಯೇ???’ ಎಂದು ಹುಡುಕುವ ಪ್ರಯತ್ನ ಬೇಡ. ಊಟ ಮಾಡುವವರ ಎಡಕ್ಕೆ ಎಲೆಯ ಸಣ್ಣ ಭಾಗ ಇದ್ದಲ್ಲಿ, ಎಲೆ ಕೊನೆಗೆ ಹಾಕುವಂತಹ ಪದಾರ್ಥ, ಉಪ್ಪು, ಉಪ್ಪಿನಕಾಯಿ, ಚಟ್ನಿ, ಬಡಿಸಲು ಸುಗಮ. ಹೆಚ್ಚು ಭುಂಜಿಸುವ ಪದಾರ್ಥಗಳನ್ನು, ಹೆಚ್ಚು ಸ್ಥಳಾವಕಾಶವಿರುವ ಬಲಗಡೆ ಬಡಿಸಿದಲ್ಲಿ, ಬಲದ ಕೈಯಲ್ಲಿ ಊಟ ಮಾಡುವವರಿಗೆ ಅನುಕೂಲವಷ್ಟೇ. ಹೆಚ್ಚು ಜಾಗವಿರುವ ಕಾರಣ ಬಡಿಸಿದ ಪದಾರ್ಥ ನೆಲ ಸೇರುವುದಿಲ್ಲ ಎಂಬುದು ಅಷ್ಟೇ ಸತ್ಯ. 

     ಆದಷ್ಟು ಬಾಳೆ ಎಲೆಯ ಮೇಲೆ ಬಡಿಸುವ ಆಹಾರವನ್ನು ಸೇವಿಸಿ. ‘ಬಿಸಿ ಬಿಸಿ ಸಾರು ಹರಿದು ಹೋಗಿ ನೆಲ ಸೇರುತ್ತದೆ’ ಎಂಬ ಕಾರಣಕ್ಕೆ ಬಾಳೆ ಎಲೆಯಲ್ಲಿ ತಿನ್ನುವುದನ್ನು ತ್ಯಜಿಸಬೇಡಿ. ಆರೋಗ್ಯ ವೃದ್ಧಿಸಿಕೊಳ್ಳಲು, ಸಣ್ಣ ಪುಟ್ಟ ಕಾಯಿಲೆಯಿಂದ ದೂರವಿರಲು ಇದೊಂದು ಸುಲುಭೋಪಾಯ. ಈ ಸಣ್ಣ ಪದ್ಧತಿಯನ್ನು ಆದಷ್ಟೂ ರೂಢಿಸಿಕೊಳ್ಳಿ. ಆರೋಗ್ಯ ವೃದ್ದಿಸಿಕೊಳ್ಳಿ. 

ಧನ್ಯವಾದಗಳು
ಕೆ.ವಿ.ಶಶಿಧರ

Leave a Reply

Your email address will not be published. Required fields are marked *

Translate »