ಬಂಧುಗಳೆ, ನಾವು ಚಿಕ್ಕವರಿರುವಾಗ ಗ್ರಾಮೀಣ ಭಾಗದ ನಮ್ಮಗಳ ಮನೆಯಲ್ಲಿ ಹಾವು ಬಂದರೆ ಆಸ್ತಿಕ, ಆಸ್ತಿಕ ಎಂದು ಪಠಿಸುತ್ತಿದ್ದರು ಮತ್ತು ಮನೆಗಳ ಗೋಡೆ, ಬಾಗಿಲುಗಳ ಮೇಲೆ ಆಸ್ತಿಕ ಋಷಿ ಎಂದು ಬಳಪ, ಬಣ್ಣದಿಂದ ನಮ್ಮ ನಮ್ಮ ಹಿರಿಯರು ಬರೆದಿರುತ್ತಿದ್ದರು. ಚಿಕ್ಕವರಾಗಿದ್ದ ನಾವು ನಮ್ಮ ಹಿರಿಯರಿಗೆ ಆಸ್ತಿಕ ಋಷಿ ಎಂದು ಏಕೆ ಬರೆದಿದ್ದೀರಿ ಎಂದು ಪ್ರಶ್ನಿಸಿದಾಗ ಹೀಗೆ ಬರೆದರೆ ಮನೆಯಲ್ಲಿ ಹಾವು ಬರುವುದಿಲ್ಲವೆಂದಷ್ಟೇ ಹೇಳುತ್ತಿದ್ದರು ಅಲ್ಲವೇ.! ಆದರೆ ಅದರ ಹಿಂದಿನ ಕಥೆ ನಮಗೆ ಗೊತ್ತಿರಲಿಲ್ಲ.
ಆಸ್ತಿಕ ಋಷಿ ಎಂದರೆ ಯಾರು.? ಸ್ವಲ್ಪ ಇತಿಹಾಸ ಮೆಲಕು ಹಾಕೋಣ.!
ಕುರುಕ್ಷೇತ್ರ ಯುದ್ಧ ಮುಗಿದು ಕೆಲವು ವರ್ಷಗಳ ಕಾಲ ರಾಜ್ಯಾಡಳಿತ ನಡೆಸಿದ ಪಾಂಡವರು ಸಶರೀರ ಸ್ವರ್ಗಾರೋಹಣಕ್ಕೆ ತೆರಳಿದರು. ಅವರ ನಂತರ ಉತ್ತರೆಯರ ಮಗ ಪರೀಕ್ಷಿತ ಹಸ್ತಿನಾವತಿಯ ಅರಸನಾದ. ಪರೀಕ್ಷಿತ ಒಮ್ಮೆ ಕಾಡಿಗೆ ಬೇಟೆಗೆಂದು ತೆರಳಿದಾಗ ಬಾಯಾರಿಕೆಯಾಗಿ ಶಮೀಕ ಮುನಿಯ ಆಶ್ರಮಕ್ಕೆ ಬಂದನು. ಆಶ್ರಮದಲ್ಲಿ ಸಮಾಧಿಸ್ಥನಾಗಿದ್ದ ಮುನಿಯು ನನ್ನನ್ನು ಸತ್ಕರಿಸಲಿಲ್ಲವೆಂಬ ಕಾರಣದಿಂದ ಕೋಪಗೊಂಡು ಅಲ್ಲಿಯೇ ಸತ್ತು ಬಿದ್ದಿದ್ದ ಹಾವನ್ನು ಮುನಿಯ ಕೊರಳಿಗೆ ಹಾಕಿ ಹೊರಟು ಹೋದನು.
ಅದೇವೇಳೆ ಆಶ್ರಮಕ್ಕೆ ಬಂದ ಮುನಿಯ ಪುತ್ರ ಶೃಂಗಿ ನಮ್ಮ ತಂದೆಯ ಕೊರಳಿಗೆ ಸತ್ತ ಹಾವನ್ನು ಹಾಕಿದ್ದನ್ನು ಕಂಡು, ನಮ್ಮ ತಂದೆಯನ್ನು ಅಪಮಾನ ಮಾಡಿದವನು ಇನ್ನು ಏಳು ದಿನಗಳೊಳಗೆ ಸರ್ಪದ ಕಡಿತದಿಂದ ಸಾಯಲಿ ಎಂದು ಶಪವಿತ್ತ. ಈ ಶಾಪವನ್ನು ಸ್ವೀಕರಿಸಿದ ಪರೀಕ್ಷಿತ, ತನ್ನ ಅಂತಿಮ ದಿನಗಳನ್ನು ಭಾಗವತ ಶ್ರವಣದಲ್ಲಿ ಕಳೆದು, ಸರ್ಪರಾಜ ತಕ್ಷಕನ ಕಡಿತಕ್ಕೆ ಒಳಗಾಗಿ ತೀರಿಹೋದನು.
ತಕ್ಷಕವೆಂಬ ಸರ್ಪ ಕಡಿತದಿಂದ ತನ್ನ ತಂದೆ ತೀರಿಕೊಂಡಿದ್ದನ್ನು ಮರೆಯಲಾಗದೆ ಸರ್ಪಯಾಗ ನಡೆಸಿ ಸರ್ಪಕುಲವನ್ನೇ ನಾಶ ಮಾಡಲು ಆರಂಭಿಸಿದ, ಋತ್ವಿಜರು ಒಂದೊಂದೇ ಸರ್ಪದ ಹೆಸರು ಹೇಳಿ ಆವಾಹನೆ ಮಾಡುತ್ತ ಅಗ್ನಿಯ ಬಳಿಗೆ ಆಕರ್ಷಿಸಿ ಸ್ವಾಹಾ ಅನ್ನುತ್ತಿದ್ದರು. ಕೂಡಲೇ ಸರ್ಪಗಳು ಪ್ರಜ್ವಲಿಸಿ ಉರಿಯುತಿದ್ದ ಯಾಗ ಕುಂಡದೊಳಗೆ ಬಿದ್ದು ಒದ್ದಾಡಿ ಬೆಂದು ಹೋಗುತ್ತಿದ್ದವು.
ಎಲ್ಲ ಲೋಕಗಳ, ಎಲ್ಲ ಬಗೆಯ ಹಾವುಗಳೂ ಸರಸರನೆ ಬಂದು ಅಗ್ನಿಕುಂಡದೊಳಗೆ ಬೀಳುವುದನ್ನು ನೋಡಿದರೆ ಎಂಥವರೂ ತಲ್ಲಣಿಸಬೇಕು! ಆದರೆ ಜನಮೇಜಯ ತನ್ನ ತಂದೆಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಬದ್ಧನಾಗಿದ್ದ. ಅವನ ಮನಸ್ಸು ಬದಲಾಗಲಿಲ್ಲ. ಜೊತೆಗೆ ಸರ್ಪಗಳು ಹೀಗೆ ಕುಂಡದೊಳಗೆ ಸುಟ್ಟು ಸಾಯಬೇಕೆನ್ನುವುದು ಅವನ ಇಚ್ಛೆಯಾಗಿತ್ತು.
ಜನಮೇಜಯನ ಯಜ್ಞಕ್ಕೆ ತನ್ನ ಬಾಂಧವರ ಬಲಿ ಕಂಡು ತಕ್ಷಕ ತಲ್ಲಣಗೊಂಡು ದೇವೇಂದ್ರನ ಬಳಿ ಧಾವಿಸಿ ಆಶ್ರಯ ಪಡೆದ. ಆಗ ಇಂದ್ರ ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡು ನಿಲ್ಲು ಎಂದನು. ಯಾಗ ಮಂತ್ರದ ಆಕರ್ಷಣೆ ದೇವೇಂದ್ರನ ಜೊತೆ ತಕ್ಷಕನನ್ನೂ ಯಾಗ ಕುಂಡದೆಗೆ ಸೆಳೆಯಲಾರಂಭಿಸಿತು.
ಇದನ್ನು ಕಂಡು ಭೀತರಾದ ವಾಸುಕಿ ಮೊದಲಾದ ಅಳಿದುಳಿದ ಸರ್ಪಗಳು ತಮ್ಮ ಕುಲಕ್ಕೆ ತಮ್ಮ ಸೋದರಳಿಯ ಆಸ್ತಿಕ ಋಷಿಯ ಬಳಿಗೆ ಹೋಗಿ ನಮ್ಮ ತಾಯಿಯ ಶಾಪ ಮತ್ತು ಜನಮೇಜಯನ ಕ್ರೋಧದ ಯಜ್ನಕುಂಡದಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುವ ಸ್ಥಿತಿ ಬಂದಿದೆ. ನೀನು ನಮ್ಮನ್ನು ಇದರಿಂದ ಪಾರು ಮಾಡದಿದ್ದರೆ ಇಡಿ ಸರ್ಪ ಸಂಕುಲ ನಾಶವಾಗಲಿದೆ ಎಂದು ಬೇಡಿಕೊಂಡರು.
ಆಗ ಬ್ರಹ್ಮಚಾರಿಯಾದ ಆಸ್ತಿಕ ಋಷಿಯು ಯಜ್ಞ ಶಾಲೆಗೆ ತೆರಳಿ ಜನಮೇಜಯನ ಮುಂದೆ ನಿಂತು ಬ್ರಹ್ಮಚಾರಿಗೆ ದಕ್ಷಿಣೆ ನೀಡದೆ ಯಜ್ಞ ಹೇಗೆ ಮುನ್ನಡೆಸುವೆ.? ಎಂದು ಪ್ರಶ್ನಿಸಿದನು. ಆಗ ಜನಮೇಜಯ ನಿಮಗೆ ಏನು ಬೇಕು ಕೇಳಿ ಎಂದು ವಾಗ್ದಾನ ನೀಡಿದ. ಆಗ ಆಸ್ತಿಕ ಋಷಿ ಯಜ್ಞ ನಿಲ್ಲಿಸುವಂತೆ ಆದೇಶಿಸಿದನು. ಮಾತಿಗೆ ಬದ್ಧನಾದ ಜನಮೇಜಯ ಯಜ್ಞ ನಿಲ್ಲಿಸಿದನು.
ಆಗ ಸಂತುಷ್ಟಗೊಂಡ ವಾಸುಕಿ ಹಾಗೂ ಅಳಿದುಳಿದ ಸರ್ಪಗಳು ತಮ್ಮ ಸೋದರಳಿಯ ಆಸ್ತಿಕ ಋಷಿಯ ಸಹಾಯಕ್ಕೆ ಕೃತಜ್ಞರಾಗಿ ಸಂಕಷ್ಟ ಕಾಲದಲ್ಲಿ ನಿನ್ನನ್ನು ಯಾರು ಸ್ಮರಿಸುತ್ತಾರೋ ಅವರನ್ನು ನಾವು ಕಚ್ಚುವುದಿಲ್ಲ, ಬಾಧಿಸುವುದಿಲ್ಲ ಎಂದು ವಾಗ್ದಾನ ನೀಡಿದವು.
ಹೀಗಾಗಿ ಇಂದಿಗೂ ನಮ್ಮ ಹಿರಿಯರು ನಮ್ಮ ಮನೆಯ ಬಾಗಿಲು, ಗೋಡೆಗಳ ಮೇಲೆ ಆಸ್ತಿಕ ಋಷಿ ಎಂದು ಬರೆಯುತ್ತಾರೆ ಅಥವಾ ಹಾವು ಕಂಡೊಡನೆ ಆಸ್ತಿಕ.. ಆಸ್ತಿಕ ಎಂದು ಪಠಿಸುತ್ತಾರೆ.
🙏🙏💐🙏🙏