ಒಂದು ದಿನ ಒಬ್ಬ ಭಿಕ್ಷುಕ ತನ್ನ ಮನೆಯಿಂದ ಹೊರಗೆ ನಡೆದ. ಅಂದು ಒಂದು ಹಬ್ಬದ ದಿನವಾಗಿತ್ತು. ‘ಇಂದು ಊರಲ್ಲಿ ಭಾರಿ ಭಿಕ್ಷೆ ಸಿಗಬಹುದು’ ಎಂದುಕೊಂಡು ಅವನು ತನ್ನ ಜೋಳಿಗೆಯಲ್ಲಿ ಒಂದು ಮುಷ್ಟಿಯಷ್ಟು ಅಕ್ಕಿಯನ್ನು ಹಾಕಿಕೊಂಡು ಹೊರಟಿದ್ದನು. ಊರಲ್ಲಿ ಇನ್ನು ಯಾರೂ ಎಚ್ಚರಗೊಂಡಿರಲಿಲ್ಲ . ಯಾರಾದರೂ ತನ್ನ ಜೋಳಿಗೆಯನ್ನು ನೋಡಿದರೆ ಯಾರೋ ಒಬ್ಬರು ಆಗಲೇ ಇವನಿಗೆ ಭೀಕ್ಷೆಯಲ್ಲಿ ಅಕ್ಕಿ ನೀಡಿರುತ್ತಾರೆ ಹಾಗೂ ಇವನು ಭಿಕ್ಷೆಯಲ್ಲಿ ಅಕ್ಕಿ ತೆಗೆದುಕೊಳ್ಳುತ್ತಾನೆ ಇವನಿಗೆ ಅಕ್ಕಿಯನ್ನೇ ಕೊಡಬಹುದು ಎಂದು ಅಕ್ಕಿಯನ್ನು ನೀಡುತ್ತಾರೆ ಎಂದುಕೊಂಡಿದ್ದನು. ಮುಂಜಾವಿನ ಹೊಂಗಿರಣಗಳು ಇನ್ನೂ ಮೂಡುತ್ತಿದ್ದವು. ಓಡಾಡುವ ದಾರಿಗಳೆಲ್ಲ ನಿರ್ಜನವಾಗಿದ್ದವು. ಈಗೀಗ ಜನ ಎಚ್ಚರವಾಗಿ ಅಲ್ಲೊಬ್ಬ ಇನ್ನೊಬ್ಬರಂತೆ ಓಡಾಡತೊಡಗಿದ್ದರು. ಮುಖ್ಯ ಬೀದಿಯಿಂದ ಮನೆಗಳಿರುವ ಓಣಿಯಲ್ಲಿ ಪ್ರವೇಶಿಸಿದ ಭಿಕ್ಷುಕನು ಎದುರಿಗೆ ಮಹಾರಾಜನ ರಥ ಬರುವುದು ಕಾಣುತ್ತಾನೆ. ಇನ್ನು ಮಹಾರಾಜನಿಂದ ಒಳ್ಳೆಯ ಭಿಕ್ಷೆ ಸಿಗಬಹುದು ಎಂದುಕೊಳ್ಳುವಾಗಲೇ ರಾಜನ ರಥವು ಅವನ ಮುಂದೆ ಬಂದು ನಿಲ್ಲುತ್ತದೆ. ಆಗ ಅವನು ಯೋಚಿಸಿದ ‘- ಧನ್ಯನಾದೆ ನಾನು..! ಜೀವನದಲ್ಲಿ ಇದುವರೆಗೂ ಯಾವ ರಾಜನಿಂದಲೂ ಭಿಕ್ಷೆಯನ್ನು ಬೇಡಿರಲಿಲ್ಲ. ಕಾರಣ, ದ್ವಾರಪಾಲಕರು ಹೊರಗಿನಿಂದಲೇ ಹಿಂದಿರುಗಿಸುತ್ತಿದ್ದರು. ಈಗ ನೋಡಿದರೆ ಸ್ವಯಂ ರಾಜನೇ ನನ್ನ ಎದುರು ಬಂದು ನಿಂತಿದ್ದಾನೆ ಇದು ನನ್ನ ಭಾಗ್ಯ. ‘ ಎಂದುಕೊಳ್ಳುತ್ತಿರುವಾಗಲೇ ಆ ಮಹಾರಾಜನು ಇವನ ಮುಂದೆ ಬಂದು ಒಬ್ಬ ಭಿಕ್ಷೆಯನ್ನು ಬೇಡುವ ಭಿಕ್ಷುಕನಂತೆ ನಿಲ್ಲುತ್ತಾನೆ ಎಂದು ಇವನಿಗೆ ಅನಿಸಿರಲಿಲ್ಲ. ರಾಜ ಹೇಳುತ್ತಾನೆ
” ಇಂದು ದೇಶದ ಮೇಲೆ ಬಹಳ ದೊಡ್ಡ ಸಂಕಟ ಬಂದಿದೆ. ಒಬ್ಬ ಜ್ಯೋತಿಷ್ಯನು ಹೇಳಿದ ಪ್ರಕಾರ, ಈ ಸಂಕಟದಿಂದ ಪಾರಾಗಲು ನಾನು ನನ್ನ ಎಲ್ಲವನ್ನೂ ತ್ಯಾಗ ಮಾಡಿ ಒಬ್ಬ ಯಾಚಕನ ಹಾಗೆ ಭಿಕ್ಷೆಯನ್ನು ಬೇಡಿ ತಂದ ಮೇಲೆ ಈ ಸಂಕಟದ ಪರಿಹಾರ ತಿಳಿಯುವುದು. ನೀನು ಈ ಹಾದಿಯಲ್ಲಿ ಸಿಕ್ಕ ಭಿಕ್ಷೆ ಬೇಡುವ ಮೊದಲನೇ ಆ ವ್ಯಕ್ತಿ ನೀನೇ ಆಗಿರುವೆ . ಹೀಗಾಗಿ ಇಂದು ನಾನು ನಿನ್ನ ಬಳಿ ಭಿಕ್ಷೆ ಬೇಡುತ್ತೇನೆ. ನೀನು ಭಿಕ್ಷೆ ಕೊಡುವುದನ್ನು ನಿರಾಕರಿಸಿದರೆ ದೇಶದ ಮೇಲೆ ಬಂದು ಒದಗಿದ ಸಂಕಟವೂ ದೂರವಾಗಲಾರದು. ಇಂದು ನೀನು ನನಗೆ ಭಿಕ್ಷೆಯಲ್ಲಿ ಏನಾದರೂ ಕೊಡು. “
ಭಿಕ್ಷುಕನು ಜೀವನಪೂರ್ತಿ ತಾನು ಬೇಡಿ ತಿನ್ನುವುದರಲ್ಲೇ ಕಳೆದಿದ್ದನು. ಯಾವತ್ತೂ ಏನೂ ಕೊಡಲು ಅವನ ಕೈ ಮುಂದಾಗಿದ್ದೇ ಇಲ್ಲ.
‘- ಹೇ ದೇವರೇ ಇದೆಂತ ಸಮಯ ಬಂತು..?!’ ಎಂದು ಯೋಚಿಸತೊಡಗಿದ. ಒಬ್ಬ ರಾಜನಿಂದ ಭಿಕ್ಷೆ ಬಿಡಲಾಗುತ್ತಿದೆ, ಮತ್ತು ನಾನು ಅದನ್ನು ನಿರಾಕರಿಸಲಾರೆ.’ ಬಹಳ ಕಷ್ಟದಿಂದ ಒಂದು ಹಿಡಿ ಅಕ್ಕಿಯಲ್ಲಿ ಒಂದು ಅಕ್ಕಿಯ ಕಾಳನ್ನು ತೆಗೆದು ಅವನು ರಾಜನ ಕೈಗೆ ಕೊಡುತ್ತಾನೆ. ರಾಜನು ಸಂತೋಷದಿಂದ ಅದೇ ಅಕ್ಕಿಯ ಒಂದು ಕಾಳನ್ನು ತೆಗೆದುಕೊಂಡು ಮುಂದೆ ಭಿಕ್ಷೆಗಾಗಿ ಹೊರಟು ಹೋದ. ರಾಜನು ಭಿಕ್ಷೆಗೆ ಬರುತ್ತಿರುವುದು ನೋಡಿ ನಾ ಮುಂದು ತಾ ಮುಂದು ಎಂದು ಜನರೆಲ್ಲ ಭಿಕ್ಷೆ ಹಾಕಲು ಬಂದರು. ಆದರೆ ಇಲ್ಲಿ ಭಿಕ್ಷುಕನಿಗೆ ತನ್ನ ಹಿಡಿಯ ಅಕ್ಕಿಯಲ್ಲಿನ ಒಂದು ಅಕ್ಕಿ ಕಾಳು ಹೋಯಿತಲ್ಲ ಎಂಬ ನೋವು ಕಾಡತೊಡಗಿತು.
ಹಾಗೂ ಹೀಗೂ ಮಾಡಿ ಮನೆಗೆ ಬಂದಾಗ ಭಿಕ್ಷುಕನ ಪತ್ನಿ ಅವನ ಜೋಳಿಗೆಯನ್ನು ಸುರಿದು ನೋಡಿದಾಗ ಆಕೆಗೆ ಒಂದೇ ಒಂದು ಬಂಗಾರದ ಅಕ್ಕಿ ಕಾಳು ಕಾಣಿಸಿತು. ಬಿಕ್ಷುಕನ ಹೆಂಡತಿಯು ಈ ವಿಷಯವನ್ನು ಅವನಿಗೆ ತಿಳಿಸಿದಾಗ ಅವನ ಎದೆ ಹೊಡೆದುಕೊಂಡು ಅಳತೊಡಗಿದ. ಅವನ ಹೆಂಡತಿ ಅಳುವಿನ ಕಾರಣವನ್ನು ಕೇಳಿದಾಗ ಬೆಳಗ್ಗೆ ನಡೆದಿರುವ ಸಂಗತಿಯನ್ನು ಅವಳಿಗೆ ತಿಳಿಸಿದ. ಆಗ ಅವನ ಪತ್ನಿ ಹೇಳಿದಳು
“- ನಿನಗೆ ಗೊತ್ತಿಲ್ಲ..!? ಯಾರು ದಾನ ಕೊಡುತ್ತಾರೋ ಅದು ನಮ್ಮ ಪಾಲಿನ ಬಂಗಾರ. ನಾವು ಕೂಡಿಸಿ ಇಟ್ಟಿದ್ದು ಅದೆಲ್ಲ ಮಣ್ಣು ಪಾಲು ಆಗುತ್ತದೆ..!”
ಆ ದಿನದ ನಂತರ ಆ ಭಿಕ್ಷುಕ, ಭಿಕ್ಷೆ ಬೇಡುವುದನ್ನು ನಿಲ್ಲಿಸಿದ. ಸಾಕಷ್ಟು ಶ್ರಮವಹಿಸಿ ದುಡಿದು ತನ್ನ ಪರಿವಾರ ಹೆಂಡತಿ ಮಕ್ಕಳನ್ನು ಪೋಷಿಸತೊಡಗಿದ. ಇಲ್ಲಿಯವರೆಗೆ ಎಲ್ಲರ ಮುಂದೆ ಕೈಚಾಚಿ ಭಿಕ್ಷೆ ಬೇಡುತ್ತಿದ್ದವನು ಇನ್ನು ಮೇಲೆ ಕೈ ಬಿಚ್ಚಿ ದಾನ ಮಾಡತೊಡಗಿದ. ನಿಧಾನವಾಗಿ ಅವನ ದಿನಗಳಲ್ಲಿ ಬದಲಾವಣೆ ಆಗತೊಡಗಿದವು. ದಾನ ಧರ್ಮದಿಂದ ಅವನಿಗೆ ಪುಣ್ಯವು ಪ್ರಾಪ್ತವಾಗತೊಡಗಿತು. ಯಾವ ಜನ ಅವನಿಂದ ದೂರ ಉಳಿಯುತ್ತಿದ್ದರೋ, ಅವರೆಲ್ಲ ಅವನಿಗೆ ಹತ್ತಿರವಾಗಿ ಬರತೊಡಗಿದರು. ಆತ ಒಬ್ಬ ಬಿಕ್ಷುಕನಿಗಿಂತ ಸಮಾಜದಲ್ಲಿ ಒಬ್ಬ ಶ್ರೇಷ್ಠ ದಾನಿಯಾಗಿ ಗುರುತಿಸಿಕೊಳ್ಳತೊಡಗಿದ.
ಈ ಕಥೆಯ ಸಾರ ಏನೆಂದರೆ ಯಾವ ಮನುಷ್ಯನ ಪ್ರವೃತ್ತಿಯು ಕೊಡುವಂತದ್ದಿರುತ್ತದೆಯೋ ಅವನಿಗೆ ಯಾವತ್ತೂ ಯಾವ ವಸ್ತುವಿನ ಕೊರತೆ ಆಗುವುದಿಲ್ಲ ಮತ್ತು ಯಾರ ಪ್ರವೃತ್ತಿಯು ಬೇಡುವ ನಿಯತಿ ಹೊಂದಿರುತ್ತದೆಯೋ ಅವನು ಎಂದಿಗೂ ಪರಿಪೂರ್ಣನಾಗುವುದಿಲ್ಲ.
ಜೈ ಶ್ರೀ ಕೃಷ್ಣ 🙏🚩