*ಭಕ್ತನ ಕುರಿತು ಕಿರು ಕಥೆ*
ಶ್ರೀಕೃಷ್ಣ ಒಮ್ಮೆ ತನ್ನ ಭಕ್ತನ ಮನೆಗೆ ತಾನಾಗಿಯೇ ಹೋದ.
ಭಕ್ತನಿಗೆ ಕೇಳಿದ : ” ಈ ಮನೆ ಯಾರದು? “
#ಭಕ್ತ ಹೇಳಿದ : ” ನಿನ್ನದೇ ಪ್ರಭು ! “
ಶ್ರೀ ಕೃಷ್ಣ : ” ಈ ಗಾಡಿ ಯಾರದು ? “
ಭಕ್ತ : ” ನಿನ್ನದೇ ದೇವಾ ! “
ಹೀಗೆಯೇ ಭಕ್ತನಿಗೆ ಮನೆಯಲ್ಲಿಯ ಎಲ್ಲ ವಸ್ತುಗಳ ಬಗ್ಗೆ ಅಷ್ಟೇ ಅಲ್ಲದೆ, ಮನೆಯ ಸದಸ್ಯರೆಲ್ಲರ ಬಗ್ಗೆ ಕೇಳಿದಾಗ್ಯೂ ಶ್ರೀ ಕೃಷ್ಣನಿಗೆ ಅದೇ ಉತ್ತರ ಸಿಕ್ಕಿತು : ” ಪ್ರಭು, ಇದೆಲ್ಲ ನಿನ್ನದೇ ದೇವಾ ! ” ಎಂದು.
ಕೊನೆಗೆ…
ಭಗವಾನ್ ಶ್ರೀ ಕೃಷ್ಣ ಆ ಭಕ್ತನ ದೇವರ ಕೊಣೆಗೆ ಬಂದು, ಅಲ್ಲಿಟ್ಟಿದ್ದ ತನ್ನದೇ ಚಿತ್ರಪಟವನ್ನು ತೋರಿಸುತ್ತ :
” ಇದು ಯಾರದು ? ” ಎಂದು ಕೇಳಿದ.
ಇದನ್ನು ಕೇಳುತ್ತಲೇ ಭಕ್ತ ಪ್ರೇಮಭಾವಭರಿತ ಭಕ್ತಿ ಪರಾಕಾಷ್ಠತೆಯಿಂದ ಅಶ್ರುಭರಿತನಾಗಿ :
” ದೇವಾ ಇದೊಂದೇ ನನ್ನದು…. ಬಾಕಿ ಎಲ್ಲವೂ ನಿನ್ನದೇ ಪ್ರಭು…
ಈ ದೇಹ ನಿನ್ನದು, ಮನ ನಿನ್ನದು, ಪ್ರಾಣ ನಿನ್ನದು, ಸಕಲ ಪಿಂಡಾಂಡವೂ ನಿನ್ನದೇ ಭಗವಾನ್, ಆದರೆ, ಕೇವಲ ನೀನು ಮಾತ್ರ ನನ್ನವನು ! ” ಎನ್ನುತ್ತಾ ಶ್ರೀ ಕೃಷ್ಣನ ಪಾದಗಳಿಗೆ ಎರಗಿದ.
ಭಕ್ತವತ್ಸಲನಾದ ಶ್ರೀ ಕೃಷ್ಣ ಅವನನ್ನೆಬ್ಬಿಸಿ ಬಿಗಿದಪ್ಪಿಕೊಂಡ…!