ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಬನಶಂಕರಿ ದೇವಿ ಮಹಾತ್ಮೆ

ಬನಶಂಕರಿ ದೇವಿ ಮಹಾತ್ಮೆ

ಹಿಂದೆ ಒಂದಾನೊಂದು ಕಾಲದಲ್ಲಿ ಷಣ್ಮುಖನು ಋಷಿಗಳ ಕೋರಿಕೆಯಂತೆ ಶ್ರೀ ಬನಶಂಕರೀ ದೇವಿಯ ಪುಣ್ಯ ಚರಿತ್ರೆಯನ್ನು ಹೇಳಿದ್ದನು ಅಗಸ್ತ್ಯ ಮಹಾಮುನಿಯು ತನ್ನ ಸತಿ ಶಿರೋಮಣಿಗೆ ಹೇಳುತ್ತಾನೆ.
ಅತಿ ಪೂರ್ವದಲ್ಲಿ ನಮ್ಮೀ ದೇಶವು ಭಯಂಕರವಾದ ಕಾಡುಗಳಿಂದ ಕೂಡಿದ್ದಾಗಿತ್ತು.ಎತ್ತ ನೋಡಿದರತ್ತ ದಟ್ಟವಾದ ಗಿಡಗಳ ಗುಂಪು, ಬಿದಿರು ಮಳೆಗಳ ಕಂಪು,ಕಾಡು ಪಶುಗಳ ಸೊಂಪು, ಕಿರಿದು ತುಂಬಿಕೊಂಡು ಘೋರ ರೂಪವಾಗಿ ಕಂಗೊಳಿಸುತ್ತಿತ್ತು. ಇವುಗಳಲ್ಲಿ ಕಳ್ಳ ಕಾಕರು ಬೀಡು ಮಾಡಿಕೊಂಡು ಸಿಕ್ಕ ಸಿಕ್ಕವರನ್ನು ಸುಲಿಗೆ ಮಾಡುವುದೇ ಇವರ ಮುಖ್ಯ ಉದ್ಯೋಗವಾಗಿತ್ತು.

ಈ ಕಾಡಿನಲ್ಲಿ ದುರ್ಗರಕ್ತ ಮತ್ತು ಧೂಮ್ರಾಕ್ಷರೆಂಬ ಹೆಸರಿನ ರಾಕ್ಷಸರು ನೆಲೆಯಾಗಿದ್ದರು.ಇವರು ಸರ್ವರಿಗೂ ಭಾದೆ ಕೊಡುತ್ತಾ ದೇವಲೋಕಕ್ಕೂ ದಾಳಿಯನ್ನಿಟ್ಟರು.ದೇವತೆಗಳನ್ನು ಹಿಂಸಿಸಿ ಉಪದ್ರವ ಕೊಟ್ಟರು. ಆಗ ದೇವತೆಗಳು ದಿಕ್ಕಾ ಪಾಲಾಗಿ ಒಡಿ ಅದಿಶಕ್ತಿಯ ಮೊರೆಹೊಕ್ಕರು.ನಡೆದ ಸಂಗತಿಯನ್ನು ತಿಳಿಸಿದರು. ದಯಾ ಸಾಗರಳಾದ ದೇವಿಯು ಅವರೆಲ್ಲರನ್ನೂ ಸಂತೈಸಿ ಬೀಳ್ಕೊಟ್ಟಳು.ಸಮೂಲ ನಾಶಕ್ಕೆ ಉಪಾಯವನ್ನು ಹುಡುಕಿದಳು.ಕೂಡಲೇ ಕ್ರೂರ ರಾಕ್ಷಸರ ರೂಪಕ್ಕಿಂತ ಸಹಸ್ರ ಪಟ್ಟು ಭಯಂಕರ ಕ್ರೂರ ರೂಪವನ್ನು ಧಾರಣ ಮಾಡಿದಳು.
ಆಯುಧಪಾಣಿಯಾಗಿ ರಾಕ್ಷಸರು ವಾಸಿಸುವ ನಿಬಿಡವಾದ ಅರಣ್ಯಕ್ಕೆ ನುಗ್ಗಿ ಅವರನ್ನು ಪರಶುವಿನಿಂದ ಸಂಹರಿಸಿದಳು;ದೇವತೆಗಳು ಸಂತೋಷ ಭರಿತರಾಗಿ ಏಕಕಂಠದಿಂದ ಹೊಗಳಿದರು.

ದೇವಿಯೂ ಅದೇ ಘೋರ ರೂಪದಿಂದ ಅರಣ್ಯದಲ್ಲಿ ನಿವಾಸಿಯಾದಳು.ಭಯಂಕರ ರೂಪ ಧಾರಣ ಮಾಡಿಕೊಂಡು ಶ್ರೀ ಬನಶಂಕರಿ ದೇವಿಯ ರೂಪವನ್ನು ಕಂಡು ಸುರರು ಬೆದರಿದರು.ದರ್ಶನ ಲಾಭದ ವಿಚಾರವನ್ನೇ ಬಿಟ್ಟುಕೊಟ್ಟರು.ನುಡಿದವರೆಲ್ಲರೂ ಮೂರ್ಛೆ ಹೊಂದುವವರಾದರು.ದೇವತೆಗಳಿಗೆ ಇದೊಂದು ಚಿಂತೆಯೇ ಪ್ರಾಪ್ತವಾಯಿತು. ಇದಕ್ಕೆ ತಕ್ಕ ಉಪಾಯವನ್ನು ಹುಡುಕಿ ಭಯಂಕರ ರೂಪವನ್ನು ಬಿಡಿಸಿ ಶಾಂತ ರೂಪಳಾದ ದೇವಿಯೂ ಪ್ರಸನ್ನಳಾಗಬೇಕೆಂದು ಮನದಲ್ಲಿ ಆಲೋಚಿಸತೊಡಗಿದರು.
ದೇವಿಯ ಪರಮ ಭಕ್ತರಾಗಿರುವವನಿಗೆ ಈ ಕಾರ್ಯವು ಸಾಧಿಸುವುದೆಂದು ಬಗೆದು, “ಅರಸುತಿಹಲತೆ ಕಾಲ ತೊಡಕಿಸು” ಎಂಬ ಉಕ್ತಿಯಂತೆ ತ್ರಿದಂಡಿ ಎಂಬ ದೇವಿಯು ಅತ್ಯಂತ ಭಕ್ತನ ನೆರವು ಪಡೆಯಲನುವಾದರು.ತ್ರಿದಂಡಿಗೆ ಈ ಸಂಗತಿಯನ್ನು ತಿಳಿಸಿದರು.ದೇವತೆಗಳ ಮಾತಿನಂತೆ ತ್ರಿದಂಡಿಯು ದೇವಿಯನ್ನು ಕುರಿತು ಅನನ್ಯ ಭಕ್ತಿಯಿಂದ ಪ್ರಾರ್ಥಿಸಿದನು.ಭಕ್ತ ಪಾರಾಯಣಳಾದ ದೇವಿಯು ಭಕ್ತನಾದ ತ್ರಿದಂಡಿಯ ಕೋರಿಕೆಯನ್ನು ಮನ್ನಿಸಿ,ಕ್ರೂರ ರೂಪವನ್ನು ಬಿಟ್ಟು ಶಾಂತ ರೂಪವನ್ನು ಧಾರಣೆ ಮಾಡಿಕೊಂಡ, ಸರ್ವರಿಗೂ ಕಲ್ಯಾಣವನ್ನು ಬಯಸುತ್ತಾ ವರದ ಹಸ್ತವನ್ನು ಅನುಗ್ರಹಿಸಿದಳು.ದೇವಾನು ದೇವತೆಗಳೂ ತ್ರಿದಂಡಿ ಮುನಿಯೂ ದೇವಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡುತ್ತಾ ಜಯ ಜಯಕಾರವನ್ನು ಮಾಡಿದರು.
ಅನಂತರ ದೇವತೆಗಳಿಗೆ ಆಧೀಷ್ಟನಾದ ದೇವೇಂದ್ರನು ದೇವಿಗೆ “ಜಗನ್ಮಾತೆಯೇ” ಮಂಗಳ ಪ್ರದಾಯಿನಿಯೇ ನೀನು ನಿನ್ನ ಭಯಂಕರ ರೂಪವನ್ನು ತೊರೆದು,ಸಾತ್ವಿಕ ರೂಪವನ್ನು ತೋರಿಸಿದ್ದು ನಮಗೆ ಅತಿಯಾದ ಆನಂದವನ್ನು ಉಂಟು ಮಾಡಿದೆ.ನಿಮ್ಮ ಕೃಪಾದೃಷ್ಟಿ ನಮ್ಮ ಮೇಲೆ ಸದಾ ಇರುವಾಗ ನಮಗೇನು ಕೊರತೆ?ಇನ್ನು ಮೇಲೆ ಭಕ್ತರ ಉದ್ದಾರಕ್ಕಾಗಿ ನೀನು ಈ ತಿಲಕವನದಲ್ಲಿಯೇ ನೆಲೆಸಿ ಈ ಸ್ಥಳವನ್ನು ಎಲ್ಲಾ ಕ್ಷೇತ್ರಗಳಿಗಿಂತ ಪವಿತ್ರ ಕ್ಷೇತ್ರವನ್ನಾಗಿ ಮಾಡು.ಈ ಕ್ಷೇತ್ರಗಳಲ್ಲಿಯ ತೀರ್ಥಗಳನ್ನು ಪಾವನವನ್ನಾಗಿ ಮಾಡು,ತೀರ್ಥದಲ್ಲಿ ಸ್ನಾನ ಮಾಡಿ ನಿನ್ನ ದರ್ಶನ ಪಡೆಯುವವರಿಗೆ ಮಹತ್ತರ ಪುಣ್ಯ ಪ್ರಾಪ್ತವಾಗಲಿ ಎಂದು ಅನುಗ್ರಹಿಸು ಮತ್ತು ನಿನ್ನ ಪರಮ ಭಕ್ತನಾದ, ಆರಾದ್ಯನಾದ ತ್ರಿದಂಡಿ ಮುನಿಯು ಪ್ರತೀ ವರ್ಷಕ್ಕೊಮ್ಮೆ ನಿನ್ನ ಉತ್ಸವವನ್ನು ಅತ್ಯಂತ ಸಡಗರದಿಂದ ನೆರವೇರಿಸುತ್ತಾನೆ.

  ಶನಿಮಹಾತ್ಮೆ ಶನಿ ಶಿಂಗನಪುರ

ಆ ಸಂಭ್ರಮದ ಸಮಯಕ್ಕೆ ನಾನು ಎಲ್ಲಾ ದೇವತೆಗಳನ್ನು ಕೂಡಿಕೊಂಡು ಬಂದು ನಿನ್ನ ದರ್ಶನ ಲಾಭವನ್ನು ಪಡೆದು ಪುಣ್ಯಮಯರಾಗುತ್ತೇವೆ. ಉತ್ಸವಕ್ಕೆಂದು ಬಂದ ಸಕಲ ಭಕ್ತರಿಗೂ ನಿನ್ನ ಅನುಗ್ರಹವಾಗಿ ಪಾಪದಿಂದ ಮುಕ್ತರಾಗಿ ಪುಣ್ಯವಂತರಾಗುತ್ತಾರೆಂಬುದಕ್ಕೆ ಸಂಶಯವಿಲ್ಲದೆ ಕೇಳಿಕೊಳ್ಳಲೂ, ಶ್ರೀ ದೇವಿಯೂ ಹರ್ಷ ಚಿತ್ತಳಾಗಿ ಒಪ್ಪಿ ನಿಮ್ಮೆಲ್ಲರ ಬಯಕೆಯಂತೆ ನಾನು ಈ ತಿಲಕವನದಲ್ಲಿಯೇ ವಾಸಿಸುತ್ತೇನೆ.ನನ್ನನ್ನು ನಂಬಿದ ಭಕ್ತರಿಗೆ ಅವರವರ ಭಕ್ತಿಗನುಸಾರವಾಗಿ ವರಗಳನ್ನು ದಾಯಪಾಲಿಸುವೆನೆಂದು ವರವನ್ನು ನೀಡಿದಳು.

ಈ ತಿಲಕವನದಲ್ಲಿರುವ ತೀರ್ಥ ಕ್ಷೇತ್ರಗಳೆಲ್ಲವೂ ಜಗತ್ತಿನಲ್ಲಿನ ತೀರ್ಥ ಕ್ಷೇತ್ರಗಳಿಗಿಂತ ಪರಮ ಪಾವನವಾದವುಗಳೆಂದು ನಿಸ್ಸಂದೇಹವಾಗಿ ಹೇಳಬಹುದು.

ಆಮೇಲೆ ದೇವಿಯೂ ದೇವತೆಗಳಿಗೆ “ಭಕ್ತ ಶ್ರೇಷ್ಠರಿರಾ!ಜಗತ್ತಿನ ಕಲ್ಯಾಣಕ್ಕಾಗಿ ದುಷ್ಟರನ್ನು ದಂಡಿಸಿ ಶಿಷ್ಟರನ್ನು ರಕ್ಷಿಸಲು ನಾನು ಕಾಲ ಕಾಲಕ್ಕೆ ತಕ್ಕಂತೆ ಅನಂತ ಅವತಾರಗಳನ್ನು ಧರಿಸಿ ಲೀಲಾಲೋಲವನ್ನು ಪ್ರದರ್ಶಿಸುವೆನು.-ಮಂದಾಸುರನೆಂಬ ದುಷ್ಟ ರಕ್ಕಸನ ಮಕ್ಕಳಾದ ಶುಂಭ, ನಿಶುಂಭರೆಂಬುವರು ಹುಟ್ಟುವರು. ಅವರು ಬ್ರಹ್ಮದೇವನ ವರದಿಂದ ಕೊಬ್ಬಿದವರಾಗಿ ಮೂರು ಲೋಕಗಳಿಗೆಲ್ಲ ಕೊಳ್ಳೆ ಇಡುವರು.

  ಮಾಂಸದ ಬೆಲೆ - ಚಾಣಕ್ಯನ ಕಥೆ

ಆಗ ನಾನು ಪಾರ್ವತಿಯಾಗಿ ಜನಿಸಿ ಕ್ರೂರ ಶುಂಭ ನಿಶುಂಭರನ್ನು ಸಂಹರಿಸಿ ನಿಮ್ಮನ್ನು ಕಾಪಾಡುವೆನು.

ಮುಂದೆ ವಿಪ್ರಚಿತ್ರ ಎಂಬ ಹೆಸರಿನ ರಕ್ಕಸನ ಮಕ್ಕಳು ಹುಟ್ಟುವರು.ಆಗ ನಾನು ಭಯಂಕರ ರೂಪವನ್ನು ಧರಿಸಿ ಆ ರಕ್ಕಸರನ್ನು ತಿಂದು ತೇಗುವೆನು. ಅವರನ್ನು ತಿನ್ನುವಾಗ ನನ್ನ ಹಲ್ಲುಗಳು ಬಾಯಿಯೂ ರಕ್ತಮಯವಾಗಿ ಭಯಂಕರವಾಗಿ ಕಾಣುವುದರಿಂದ ನಾನು “ರಕ್ತದಂತಾ” ಎಂಬ ಹೆಸರಿನಿಂದ ಪ್ರಸಿದ್ಧಳಾಗುವೆನು.
ಆಮೇಲೆ ಜಗತ್ತಿನಲ್ಲಿ ನೂರು ವರ್ಷಗಳ ಪರ್ಯಂತ ಮಳೆಯೂ ಸುರಿಯುವುದು.ನೀವೆಲ್ಲರೂ ಆ ಸಮಯದಲ್ಲಿ ನನ್ನನ್ನು ಅನನ್ಯ ಭಕ್ತಿಯಿಂದ ಪ್ರಾರ್ಥಿಸಲು ನಾನು ಅವತಾರ ತಾಳಿ ನೂರು ನಯನಗಳಿಂದ ಕೃಪಾದೃಷ್ಟಿಯನ್ನು ನಿಮ್ಮೆಲ್ಲರ ಮೇಲೆ ಬೀರುವೆನು.ಅದಕ್ಕಾಗಿ ಜಗತ್ತಿನಲ್ಲಿ ಸುವೃಷ್ಟಿಯಾಗಿ ಮಳೆಯಾಗಿ ಬೆಳೆಗಳು ಚೆನ್ನಾಗಿ ಬರುವುವು.ಆಗ ನಾನು “ಶತಾಕ್ಷಿ”ಹೆಸರಿನಿಂದ ಪ್ರಸಿದ್ದಿ ಪಡೆಯುವೆನು.

ನನ್ನ ದೇಹದಿಂದ ಉತ್ಪನ್ನವಾದ ಶಾಖಗಳಿಂದ (ಪಲ್ಯ) ಜನರನ್ನು ಸಂರಕ್ಷಿಸುವೆನು ಆಗ ನಾನು “ಶಾಖಂಬರಿ” ಎಂಬ ಹೆಸರಿನಿಂದ ಪ್ರಸ್ಸಿದ್ದಿ ಪಡೆಯುವೆನು.
ಇದೇ ತಿಲಕಾರಣ್ಯದಲ್ಲಿ ನಾನಿರುವಾಗ ಮುಂದೆ ಕೆಲವು ದಿನಗಳ ನಂತರ ದುರ್ಗಮನೆಂಬ ರಾಕ್ಷಸನು ಉದ್ಭವಿಸುವನು.ಅವನನ್ನು ನಾಮಶೇಷ ಮಾಡಿ “ದುರ್ಗಾದೇವಿ”ಎಂಬ ಹೆಸರಿನಿಂದ ಕರೆಯಿಸಿಕೊಳ್ಳುವೆನು.
ಋಷಿಗಳು ಇದೇ ಪವಿತ್ರ ತಾಣದಲ್ಲಿ ನನ್ನನ್ನು ಕುರಿತು ತಪಸ್ಸು ಮಾಡಲು ಅವರನ್ನು ನಾನಾ ರೀತಿಯಿಂದ ಹಿಂಸೆ ಮಾಡುವ ಭೀಕರ ಸ್ವರೂಪವಾಗಿರುವ ರಕ್ಕಸರನ್ನು ಬೀಮಾಕಾರ ರೂಪವನ್ನು ತಾಳಿ ಸಂಹರಿಸಿವೆನು.ಆಗ ನನಗೆ “ಭೀಮಾದೇವಿ” ಎಂಬ ಹೆಸರು ಬರುವುದು.
ಅರುಣನೆಂಬ ರಾಕ್ಷಸನಿಂದ ಜಗತ್ತಿಗೇ ಪೀಡೆಯಾಗಲು ಅವನನ್ನೂ ಸಂಹರಿಸುವೆನು.ಬ್ರಮನೆಂಬ ರಾಕ್ಷಸನನ್ನು ಗುಂಗೀಹುಳ ರೂಪ ಧರಿಸಿ ಕೊಂಡು ಹಾಕುವೆನು.ಆಗ ನಾನು “ಬ್ರಮರಾಂಬಾ” ಎಂಬ ಹೆಸರಿನಿಂದ ಪ್ರಸಿದ್ಧಳಾಗಿ ಮೆರೆಯುವೆನು.

ಅನಂತರ ಸೇತುದೈತ್ಯನು ಹುಟ್ಟಿ ಮದೋನ್ಮತ್ತನಾಗಿ ಮೆರೆಯುವೆನು.ಅತಿಯಾದ ಕಾಮುಕನಾದ ರಾಕ್ಷಸನಿವನು ಅನೇಕ ಪತಿವ್ರತಾ ಶಿರೋಮಣಿಗಳಿಗೆ ಮನಸೋತು ಮಹಪಾಪಿಯಾಗುವನು. ಆಗ ನಾನು ಭೀಮಾ ನದಿಯ ದಂಡೆಯ ಮೇಲಿನ ವನದಲ್ಲಿ ಪಂಚಭ್ರಮ ರೂಪಾನ್ವಿತಳಾಗಿ ಆ ಅಸುರನನ್ನು ಸಂಹರಿಸಿ “ಚಂದಲಾ”ಮತ್ತು “ಹಿಂಗಲಾ” ಎಂಬ ಹೆಸರನ್ನು ಹೊಂದುವೆನು.
ಆಮೇಲೆ ಕೊಲ್ಹಾಪುರ ಎಂಬ ನೀಚವಾದ ರಕ್ಕಸನು ಹುಟ್ಟಿ ನನ್ನ ಭಕ್ತರಿಗೆ ಅನೇಕ ರೀತಿಯ ಪೀಡೆ ಕೊಡುವನು.ಆಗ ನಾನು “ಮಹಾಲಕ್ಷ್ಮೀ” ಎಂಬ ರೂಪದಿಂದ ಅವತರಿಸಿ ಆ ರಕ್ಕಸನನ್ನು ಪಂಚಗಂಗಾ ದಂಡೆಯಲ್ಲಿ ಸಂಹಾರ ಮಾಡಿ ಜಗತ್ತಿಗೆ ಸುಖ ಶಾಂತಿಯನ್ನು ನೀಡುವೆನು.
ಈ ಪ್ರಕಾರವಾಗಿ ಕಾಲ ಕಾಲಕ್ಕೆ ತಕ್ಕಂತೆ ಅನಂತ ರೂಪಗಳನ್ನು ಧರಿಸಿ ದುಷ್ಟರಾದ ರಾಕ್ಷಸರನ್ನು ಸರ್ವ ರೀತಿಯಿಂದ ಹರಣ ಮಾಡಿ ಜಗತ್ತಿನಲ್ಲಿಯೇ ಸುಖ ಸಮೃದ್ಧಿ ನೀಡುವೆನು.ನನ್ನ ಭಕ್ತರ ಕೋರಿಕೆಯಂತೆ ಆಗಾಗ್ಗೆ ಅವರಿಗೆ ದರ್ಶನವನ್ನು ನೀಡುತ್ತಾ ಅವರನ್ನು ಸಂತೈಸುವೆನು.ಅನಂತ ಶಕ್ತಿಗಳಿಗೆ ಒಡತಿಯಾಗಿರುವ ನಾನು ಅನೇಕ ಸಾಧಕ,ಸಿದ್ದಿ ಪುರುಷರ;ಸಾದು ಸಜ್ಜನರ ಏಳಿಗೆಗಾಗಿ ಸಾದವ ಕಾಲದಲ್ಲಿ ದರ್ಶನ ಕೊಡುವೆನಲ್ಲದೇ ಅವರ ಅಂತಃಕರಣದಲ್ಲಿದ್ದಂತೆ ನಾನು ಬಾಲಾ, ಲಲಿತಾ, ಷೋಡಶಿ, ಗಾಯಿತ್ರಿ,ಶಾಂತನಾದ, ಬಿಂದು ತಲಾ ಮುಂತಾದ ಹೆಸರಿನಿಂದ ಅವರನ್ನು ಕಾಣುವೆನು.

  ವಿಷ್ಣುವಿನ ವಾಹನವಾದ ಗರುಡ ಯಾರು ? ಗರುಡ ಜಯಂತಿ ಏನು?

ಸರ್ವಾಂತರಾಯಾಮಿಯಾಗಿರುವ ನಾನು ಈ ತಿಲಕಾರಣ್ಯದಲ್ಲಿ ಯಾವಾಗಲೂ ಬನಶಂಕರೀ ರೂಪದಲ್ಲಿರುತ್ತೇನೆ. ನನ್ನನ್ನು ನಂಬಿ ಬಂದ ಭಕ್ತರಿಗೆ ಸರ್ವ ಬೇಡಿಕೆಗಳನ್ನು ವರದ ಹಸ್ತದಿಂದ ನೀಡುತ್ತೇನೆ.ಈ ಕಥಾ ಶ್ರವಣದಿಂದ ಸಪ್ತ ಜನ್ಮಗಳ ಪಾಪಗಳು ಕರುಣೆಯ ದಯದ ಮುಂದೆ ನಿಲ್ಲದ ತಿಮಿರದಂತೆ ಓಡಿ ಹೋಗುವುದಲ್ಲದೆ ಸರ್ವ ರೀತಿಯ ಪುಣ್ಯ ಭಾಗ್ಯಗಳು ಲಭಿಸುತ್ತವೆ ಎಂದು ದೇವಿಯೂ ನುಡಿದು ದೇವತೆಗಳಿಗೆ ಆಶೀರ್ವದಿಸಿ ಬಯಲಾದಳು.

Leave a Reply

Your email address will not be published. Required fields are marked *

Translate »