ಶ್ರೀ ಭೀಷ್ಮಾಷ್ಟಮೀ
ಶ್ರೀ ಭೀಷ್ಮಾಚಾರ್ಯರು ನಿರ್ಯಾಣ ಹೊಂದಿದ ದಿನ
(ಈ ವಿಷಯವು ಶ್ರೀಮನ್ಮಹಾಭಾರತದ ಅನುಶಾಸನಿಕ ಪರ್ವದಿಂದ ಉಧೃತವಾಗಿದೆ )
ಶ್ರೀವೈಶಂಪಾಯನರು ಜನಮೇಜಯನಿಗೆ…
ರಾಜನ್! ಮಾಘ ಶುದ್ಧ ಅಷ್ಟಮಿಯಂದು ಧರ್ಮರಾಜಾದಿಗಳು ಶಾಂತನವನಿದ್ದ ರಣಭೂಮಿಗೆ ಬಂದರು.
ಶ್ರೀ ಕೃಷ್ಣ ಪರಮಾತ್ಮನೂ ಸಹ ಗಾಂಗೇಯನಿಗೆ ಅಂತ್ಯಕಾಲ ದರ್ಶನವನ್ನೀಯಬೇಕೆಂದು ಬಂದನು.
ಕೃಪ, ಧೌಮ್ಯರೂ ಬಂದರು. ಮಂತ್ರವಿದರಾದ ಯಾಜಕರು ಧೌಮರನ್ನು ಅನುಸರಿಸಿ ಬಂದರು.
ಧರ್ಮರಾಜನು ರತ್ನ – ವಸ್ತ್ರ – ಚಂದನಾಗರು – ಪುಷ್ಪ – ಫಲ – ತುಪ್ಪ – ಕುಂಭ – ಕುಶ ಮೊದಲಾದ ದ್ರವ್ಯಗಳನ್ನು ಸೇವಕರಿಂದ ಹೊರಿಸಿಕೊಂಡು ತಂದನು.
ಎಲ್ಲರೂ ಶ್ರೀ ಭೀಷ್ಮರ ಶಯನ ಸ್ಥಳಕ್ಕೆ ಸ್ವಲ್ಪ ದೂರದಲ್ಲೇ ರಥದಿಂದಿಳಿದು ನಡೆದು ಬಂದರು. ಶ್ರೀ ವ್ಯಾಸರು – ಶ್ರೀ ನಾರದರು – ಶ್ರೀ ವೇವಲರು ಪ್ರಭೃತ ಸಂಯಮೀ೦ದ್ರರು ” ಭೀಷ್ಮ ನಿರ್ಯಾಣವನ್ನವಲೋಕಿಸ ” ಬೇಕೆಂದು ಬಂದರು.
ಧರ್ಮರಾಜನು ವಿನಯನತಕಂಧರನಾಗಿ ಧ್ಯಾನಮಾಜ್ನ ಮಾನಸರಾಗಿದ್ದ ದೇವವ್ರತರನ್ನು ಸಮೀಪಿಸಿ…
ತಾತಾ! ಧರ್ಮಾನಂದನನು ಬಂದಿರುವೆನು. ನಮಸ್ಕರಿಸಿ ನಿನ್ನ ಆಶೀರ್ವಾದವನ್ನು ಬೇಡುತ್ತಿರುವೆನು. ಕಣ್ತೆರೆದು ನೋಡು! ಸಮಸ್ತ ಧೃತರಾಷ್ಟ್ರಾದಿ ಬಂಧು ಜನರೂ ಬಂದಿರುವರು. ಪುರ ಜನರು ಬಂದಿರುವರು. ಸದಯಹೃದಯನಾಗಿ ನಮ್ಮೆಲ್ಲರನ್ನೂ ನೋಡು! ಹಿತವನ್ನು ಉಪದೇಶಿಸು ಯೆಂದು ಪ್ರಾರ್ಥಿಸಿದನು!
ಶ್ರೀ ಭೀಷ್ಮಾಚಾರ್ಯರು ಕಣ್ತೆರೆದು ಶ್ರೀ ಕೃಷ್ಣ – ಶ್ರೀ ಭಗವಾನ್ ವ್ಯಾಸರಿಗೆ ಕೈಮುಗಿದು, ತನ್ನ ಕೈಯಿಂದ ಧರ್ಮರಾಜನ ಕೈ ಹಿಡಿದು…
ಒಳ್ಳೆಯದಾಯಿತು. ಸಮಯಕ್ಕೆ ಬಂದೆ. ರಾಜನ್! ನಿನ್ನಿಂದ ಅಭಿವಾಂಛಿತವಾದ ” ಮಾಘ ಶುದ್ಧ ಅಷ್ಟಮಿ ” ಯ ಪುಣ್ಯದಿನವು ಪ್ರಾಪ್ತವಾಗಿದೆ. ಶ್ರೀಶನ ರೂಪದ್ವಯದ ಸನ್ನಿಧಾನವಿದೆ. ಇನ್ನೂ ಹೆಚ್ಚಾದ ಪುಣ್ಯ ಕಾಲವೆನಗೆ ಸಿಗಲಾರದು. ನನಗೆ ಪರಲೋಕ ಗಮನಕ್ಕೆ ಅಪ್ಪಣೆ ಕೊಡಿರಿ!!
ಧೃತರಾಷ್ಟ! ಚಿಂತಿಸಬೇಡ! ಶ್ರೀ ವ್ಯಾಸಮುನಿವರರ ವರದಿಂದ ಜನಿಸಿದೆ. ವೇದ ಶಾಸ್ತ್ರ ಪರಿಜ್ಞಾನವನ್ನು ಆರ್ಜಿಸಿದೆ. ಎಲ್ಲ ಧರ್ಮಗಳನ್ನರಿತಿರುವೆ. ದೇವ ರಹಸ್ಯವನ್ನು ನಿನಗೆ ತಿಳಿಸಿದ ಸಿ ಭಗವನ್ ವೇದವ್ಯಾಸರ ವಚನವನ್ನು ನೆನೆ. ಶೋಕವನ್ನು ಬಿಡು. ಭವಿತವ್ಯವನ್ನು ಬದಲಿಸಲು ಯಾರಿಗೂ ಶಕ್ಯವಿಲ್ಲ. ಸದ್ಭಾವದಿಂದ ನೋಡು.
ವಿಚಾರಿಸಿ ನೋಡಿದರೆ ಪಾಂಡುಪುತ್ರರು ನಿನ್ನ ಪುತ್ರರಲ್ಲವೇ? ಅವರನ್ನು ಪರಿಪಾಲಿಸು! ಅವರು ನಿನ್ನನ್ನು ಶ್ರದ್ಧೆಯಿಂದ ಸೇವಿಸಲಿರುವರು. ಅವರ ಸೇವೆ ಸ್ವೀಕರಿಸು. ನಡೆದು ಹೋದ ಅನರ್ಥಕ್ಕಾಗಿ ಕುದಿಯುತ್ತಿರಬೇಡ. ಮುದದಿಂದ ಮುದಿತನವನ್ನು ಕಳೆ. ಪಾಂಡವರಲ್ಲಿ ಸಿಟ್ಟಾಗಬೇಡ. ಅವರಿಗೂ ನಿನ್ನ ಹೊರತು ಹಿತ ಚಿಂತಕರಿಲ್ಲ. ರಾಜ ಕಾರ್ಯಗಳಲ್ಲಿ ಧರ್ಮಾರಾಜನನ್ನು ಚೆನ್ನಾಗಿ ನಡೆಸು!
ಧರ್ಮಜನು ನಿನ್ನಲ್ಲಿ ಭಕ್ತಿ ಶ್ರದ್ಧೆಗಳುಳ್ಳವನಾಗಿರುವುದರಿಂದ ನಿನಗೂ ಗೊತ್ತಿದೆ. ಅವನಲ್ಲಿ ವಾತ್ಸಲ್ಯವನ್ನು ತೋರು. ನಿನ್ನ ಮಕ್ಕಳು ನಿನಗೆ ಶತ್ರುಗಳಾದರು. ದುಃಖಾಗ್ನಿಯನ್ನು ನಿನ್ನ ಉಡಿಯಲ್ಲಿ ಹಾಕಿ ತಾವೂ ದುರ್ಗತಿಯನ್ನು ಸೇರಿದರು. ಅನೀತಿಪರರೂ, ಮೂರ್ಖರೂ; ಕ್ರೋಧವಶರೂ; ಅತಿಲೋಭಿಗಳಾಗಿ ತಮ್ಮ ಅಪರಾಧ ಶತದಿಂದ ತಾವಾಗಿ ನಾಶವಾದ ದುರ್ಯೋಧನಾದಿಗಳಿಗಾಗಿ ಅಳಬೇಡ!!
ಶ್ರೀಕೃಷ್ಣಾ! ದೇವಕೀನಂದನ! ಜೀವೇಶ! ಶಂಖ ಚಕ್ರ ಗದಾ ಪದ್ಮ ಪ್ರಶಸ್ತ ಹಸ್ತ! ಶ್ರೀಶ! ತಿವಿಕ್ರಮ! ವಾಸುದೇವ! ವರದರಾಜ! ಪರಮಪುರುಷ! ಜಗಜ್ಜನ್ಮಾದಿ ಕಾರಣ! ನಾರಾಯಣ! ಕರುಣೆಯೆಂದೆನ್ನ ನೋಡಿ ನಿನ್ನ ಭಕ್ತನೆಂದು ಸ್ವೀಕರಿಸು! ಶ್ರೀಹರೇ ನಿನಗೆ ಅಣ್ನನಂತ ನಮಸ್ಕಾರಗಳು!!
ದೇವಾ! ನನಗಿನ್ಯಾರು ದಿಕ್ಕು? ತಂದೆಯೂ ಇಲ್ಲ. ತಾಯಿಯೂ ನೀರಾಗಿರುವಳು. ಸತೀ ಸುತರು ಇಲ್ಲವೇ ಇಲ್ಲ. ಎಲ್ಲವೂ ನೀನಾಗಿ ಕರುಣಿಸು! ಕಮಲಾಕ್ಷ ನನಗೆ ಅಪ್ಪಣೆ ಕೊಡು!!
ಶ್ರೀಕೃಷ್ಣಾ! ಪಾಂಡವರಿಗೆ ರಕ್ಷಕನಾಗಿ ಮೊದಲಿನಿಂದಲೂ ಕಾಪಾಡುತ್ತಿರುವೆ. ಮುಂದೂ ಕಾಪಾಡುತ್ತಿರು. ಮೊಮ್ಮಕ್ಕಳೆಂಬ ಅಭಿಮಾನ, ಶ್ರೀಹರಿ ಭಕರೆಂಬ ಸ್ನೇಹ, ಬಹು ಕಷ್ಟಗಳಿಂದ ಪಾರಾಗಿ ಬಂದಿರುವರೆಂಬ ಕರುಣೆ ಮೂರೂ ಬೆರೆತು ಮುರಾರೇ! ನನ್ನಿಂದ ಈ ಮಾತನ್ನಾಡಿಸುತ್ತಿವೆ.
ದುರ್ಯೋಧನನ ಕುತಂತ್ರಗಳಿಂದ ಅವರು ಪಡಬಾರದ ಕಷ್ಟಗಳನ್ನು ಪಟ್ಟರು. ನಾನು ದುರ್ಯೋಧನನಿಗೆ…
ಶ್ರೀ ಕೃಷ್ಣನಿದ್ದಲ್ಲಿ ಜಯವಿದೆ. ಶ್ರೀಕೃಷ್ಣನು ಧರ್ಮವನ್ನು ಬಿಟ್ಟಿರನು. ಪಾಂಡವರು ಧರ್ಮವಂತರಾಗಿರುವುದರಿಂದಲೇ ಶ್ರೀಶನ ರಕ್ಷಾ ಕವಚವನ್ನು ಪಡೆದು ಅಜೇಯರಾಗಿರುವರು. ಆದ್ದರಿಂದ ವೈರವು ಒಳಿತಲ್ಲ!!!!
ಯೆಂದು ಎಷ್ಟೋ ಸಲ ಹೇಳಿದೆನು. ಆ ಮೂರ್ಖನು ನನ್ನ ಮಾತನ್ನು ಕೇಳಲಿಲ್ಲ. ತಾನೂ ಸಾಯುವುದಲ್ಲದೆ ಅನಂತ ಸೈನ್ಯವನ್ನೂ ನಾಶ ಪಡಿಸಿದನು.
ನರ ನಾರಾಯಣರೇ ಅರ್ಜುನ ವಾಸುದೇವರೆಂದೂ; ಜೀವೋತ್ತಮ ಮುಖ್ಯಪ್ರಾಣನೇ ಭೀಮಸೇನದೇವರೆಂದೂ; ಭಾರತೀದೇವಿಯೇ ದ್ರೌಪದಿ ಯೆಂದು ನಾರದ ವ್ಯಾಸಾದಿ ಮಹಾನುಭಾವರುಗಳು ನನಗೆ ತಿಳಿಸಿರುವರು. ನನಗೆ ಧರ್ಮರಾಜಾದಿಗಳಲ್ಲಿ ಸಿಟ್ಟಿಲ್ಲ. ಅವರು ಧರ್ಮದಿಂದ ಕಾದಿ ಗೆದ್ದಿರುವರು.
ಶ್ರೀಶ! ಇನ್ನು ನನಗೆ ಅಪ್ಪಣೆ ಕೊಡು. ನಿನ್ನ ದಿವ್ಯ ಶ್ರೀ ಚರಣಾರವಿಂದದಲ್ಲಿ ಮನವಿಟ್ಟು, ಶಂತನು ರಾಜನಿತ್ತ ವರ ಪ್ರಸಾದದಿಂದ ಸ್ಪಚ್ಛ೦ದ ಮರಣನಾಗಿರುವುದರಿಂದ ಈಗಲೇ ಮಾನವ ಶರೀರವನ್ನು ಬಿಟ್ಟು ಬಿಡುವೆನು.
ಇಂತು ಪ್ರಾರ್ಥಿಸಿದ ಶ್ರೀ ದೇವವ್ರತನನ್ನು ಕರುಣಾಪಾಂಗ ಮಂಗಳ ವೀಕ್ಷಣವಾಗಿ ಈಕ್ಷಿಸಿ ಶ್ರೀ ಲಕ್ಷ್ಮೀಪತಿಯು ಇಂತೆಂದನು…
ದೇವವ್ರತ! ನಿನ್ನಲ್ಲಿ ಕಿಂಚಿತ್ತೂ ಪಾಪವಿಲ್ಲ. ಬಹು ಪುಣ್ಯಗಳನ್ನು ಆಚರಿಸಿ, ಮಹಾತ್ಮನೆಂದು ಖ್ಯಾತನಾಗಿರುವೆ. ಪಿತೃ ಭಕ್ತಿಯಿಂದ ಮೃತ್ಯುವನ್ನು ವಶದಲ್ಲಿಟ್ಟು ಮೆರೆದೆ. ಗುರು ಭಕ್ತಿಯಿಂದ ಶಾಸ್ತ್ರಾನುವೀರ ಸತ್ತಮನೆನಿಸಿದೆ. ತಂದೆಗಾಗಿ ರಾಜ್ಯವನ್ನೂ, ವಿವಾಹವನ್ನೂ ಬಿಟ್ಟೆ. ದೇವ ಮನುಜರಾದಿ ಸರ್ವರ ಪ್ರಶಂಸಗಳೆಸಿದೆ. ಧರ್ಮದಿಂದ ಕಾದೆ. ನಿನಗೆ ನಾನು ಶಾರೀರ ತ್ಯಾಗವನ್ನು ಮಾಡಲು ಅನುಜ್ಞೆಯನ್ನಿಟ್ಟಿರುವೆನು. ಚಿಂತಿಸು ನೀನ್ಯಾರೆಂದು!!
ಆಗ ಶ್ರೀ ಭೀಷ್ಮಾಚಾರ್ಯರು ಧೃತರಾಷ್ಟ್ರ ಧರ್ಮರಾಜಾದಿಗಳ ಕಡೆಗೆ ನೋಡಿ ಅವರ ಅಪ್ಪಣೆಯನ್ನು ಪಡೆದು, ತಾನು ಹಿಂದೆ ರಾಜರನ್ನು ಗೆದ್ದು ತಂದ ಧನ ರಾಶಿಗಳನ್ನು ವಿಪ್ರವರರಿಗೆ ದಾನವಾಗಿತ್ತನು. ಆಮೇಲೆ ಧಾರಣಾಧ್ಯಾನ ಸಮಾಧಿ ಕ್ರಮದಿಂದ ಸಮಾಹಿತ ಚಿತ್ತರಾದ ಶ್ರೀ ಭೀಷ್ಮರು ಶಾರೀರಾಂತರ್ಗತ ಪ್ರಾಣಾದಿ ವಾಯು ಮಾರ್ಗಗಳನ್ನು ಸಂಶೋಧಿಸಿ, ಉದಾನ ಗತಿಯಿಂದ ಮೆಲ್ಲನೆ ಮೇಲೆ ಸರಿಯಾದೊಡಗಿದರು.
ಶ್ರೀ ಭೀಷ್ಮರು ಪ್ರಾಣದೇವ ವಶರಾಗಿ ಶರಿರವನ್ನು ಬಿಟ್ಟಂತೆ ಅಲ್ಲಲ್ಲಿ ನೆಟ್ಟಿದ್ದ ಶರಚಾಲಗಳು ತಾವಾಗಿ ಬೇರಾಗಿ ಬಿದ್ದವು. ಇಂಥಹಾ ಆಶ್ಚರ್ಯವನ್ನು ಕಂಡು ನೆರೆದ ಜನರು ಬೆರಗಾಗಿ ಶ್ರೀ ದೇವವ್ರತರನ್ನು ಪ್ರಶಂಸಿಸಿದರು.
ಆಗ ಶ್ರೀ ಭೀಷ್ಮರು…
” ದ್ಯುನಾಮಕ ವಾಸು ರೂಪ ” ವನ್ನು ಧ್ಯಾನಿಸಿ, ತಮ್ಮ ಮೂಲ ರೂಪವನ್ನು ಸೇರಿದರು. ಒಂದು ದಿವ್ಯ ತೇಜವು ಶ್ರೀ ಭೀಷ್ಮರ ಶರೀರದಿಂದ ಹೊರ ಬಂದು ಅಂಬರಕ್ಕೆ ಹಾರಿ ಅದೃಶ್ಯವಾಯಿತು. ಆಕಾಶದಿಂದ ಪುಷ್ಪವೃಷ್ಟಿಯೊಡನೆ ದೇವದುಂದುಭಿ ಧ್ವಾನಗಳು ಕೇಳಿ ಬಂದವು. ಸಿದ್ಧಸಾಧ್ಯಚರಣರು ಶ್ರೀ ದೇವವ್ರತರ ಮಹಿಮೆಯನ್ನು ಪ್ರಶಂಸಿಸಿದರು.
ಧರ್ಮರಾಜನು ಸೋದರ, ವಿದುರಾದಿಗಳಿಂದ ಕೂಡಿ, ಶ್ರೀ ಭೀಷ್ಮರ ಶರೀರಕ್ಕೆ ಸಮುಚಿತ ಸಂಸ್ಕಾರವನ್ನು ನಡೆಸಿದನು. ಕನಕ – ರತ್ನ – ವಸ್ತ್ರ – ಧನ – ಗೋ – ತಿಲಾದಿ ದ್ರವ್ಯಗಳನ್ನು ಹೇರಳವಾಗಿ ಧರಣೀ ಸುರರಿಗೆ ದಾನ ಮಾಡಿದನು.
ಧೌಮ್ಯರು ಯಾಜಕರಿಂದ ಕೂಡಿ ಕೃತ್ಯಂಗಳನು ಸಾಂಗವಾಗಿ ನಡೆಸಿದ ಮೇಲೆ ಧರ್ಮರಾಜಾದಿಗಳು ಭಾಗೀರಥಿಯನ್ನು ಸೇರಿ ಅಲ್ಲಿ ಶ್ರೀ ಭೀಷ್ಮಾಚಾರ್ಯರಿಗೆ ತಿಲೋದಕಾನ್ನ ಪ್ರಧಾನಗಳನ್ನು ಶ್ರದ್ಧೆಯಿಂದ ಆಚರಿಸಿದರು.
ಆ ಸಮಯದಲ್ಲಿ ನದೀ ತಲದಿಂದ ಎದ್ದು ಬಂದ ಗಂಗಾದೇವಿಯು ಪುತ್ರ ಶೋಕದಿಂದ ಮನುಜರಂತೆ ರೋದಿಸಿ ವಿಲಪಿಸಿದಳು.
ಎಂಥಹಾ ಮಗನನ್ನು ಪಡೆದೆನು. ಅವನ ಅದ್ಭುತ ಚರಿತೆಯನ್ನು ನೀವರಿಯದಿಲ್ಲ. ಪಿತೃ ಭಕ್ತಿ, ಗುರು ಸೇವೆ, ವಿದ್ಯಾಪಾಟನ, ರಣ ಪರಾಕ್ರಮಗಳಿಂದ ಅಸಮಾನನಾಗಿ ಮೆರೆದ ಭೀಷ್ಮನಿಂದು ಅಸ್ತಂಗತನಾದನಲ್ಲ! ಹಾ!!
ಕಾಶೀರಾಜ ಕನ್ನೆಯರನ್ನು ಪರಾಕ್ರಮದಿಂದ ಹರಿಸಿ ತಂದವನಿಗೆ ಪಾಳುಶಿಖಂಡಿಯ ಕೈ ಬಾಣಗಳಿಗೆ ಸಿಕ್ಕು ಬೀಳುವಂತಾಯಿತು?
ಶ್ರೀ ಪರಶುರಾಮದೇವರ ಶಿಷ್ಯನಿಗೆ ಅಪಜಯವೇ?
ಇಂಥಹಾ ಪುತ್ರನನ್ನು ಕಳೆದುಕೊಂಡೂ ನನ್ನ ಹೃದಯವು ಚೂರಾಗದಿದೆ ಯೆಂದರೆ ಅದೇನು ಕಲ್ಲೋ? ಕಬ್ಬಿಣವೋ?
ಇಂತು ರೋದಿಸುವ ಗಂಗೆಯನ್ನು ಸಮಾಧಾನಪಡಿಸಲೆಣಿಸಿ ಶ್ರೀ ಕೃಷ್ಣ ಪರಮಾತ್ಮನಿಂತೆಂದನು..
ಅಮ್ಮಾ ಭಾಗೀರಥೀ! ಬಿಡು ಶೋಕವನ್ನು. ನಿನ್ನ ಸುತನು ಮತ್ತು ನನ್ನ ಮೊಮ್ಮಗ ( ಅಂದರೆ ಶ್ರೀ ಕೃಷ್ಣ ಪರಮಾತ್ಮನ ಮಗಳು ಗಂಗೆ, ಆ ಗಂಗೆಯ ಮಗ ಭೀಷ್ಮರು ) ಪರಮ ಸದ್ಗತಿಯನ್ನು ಪೊಂದಿರುವನು. ದ್ಯುನಾಮಕ ವಸುವೇ ಭೀಷ್ಮನಾಗಿ ಜನಿಸಿದನೆಂಬುದನ್ನು ಮರೆತೆಯಾ? ಅಮರ್ತ್ಯರಿಗೆ ಹೇಯವಾಗಿರುವ ಮರ್ತ್ಯ ದೇಹವು ಅನಿಷ್ಟವೆಂದು ನಿನಗೆ ತಿಳಿಯದೇ?
ಮರ್ತ್ಯನಿಂದು ಅಮರ್ತ್ಯನಾಗಿರುವನು. ಶೋಕಿಸಬೇಡ. ಇನ್ನು ಶಿಖಂಡಿಯು ಆ ಮಹಾ ವೀರನನ್ನು ಗೆದ್ದನೆಂದು ತಿಳಿಯುವುದು ನಿನಗೆ ಸರಿಯಲ್ಲ. ಸುರಾಸುರರೆತ್ತಿ ಬಂದರೂ ಆ ಮಹಾ ವೀರನ ಮುಂದೆ ನಿಂತು, ಕಾದಿ ಗೆಲ್ಲಲಾರರು ತಿಳಿ. ಇನ್ನು ಗಾಂಡೀವಿಯು ( ಅರ್ಜುನನು ) ಕೊಂದನೆಂದು ತಿಳಿಯಬೇಡ. ಕೇಳು..
ತಾನಾಗಿ ಧರ್ಮ ವಿಜಯವನ್ನು ಬಯಸಿ, ಅರ್ಜುನ ನಿರ್ಮಿತ ಶರಶಯ್ಯದಲ್ಲಿ ಮಲಗಿದ್ದು, ಈಗ ತನಗೆ ಸರಿಯಾದ ಮೃತ್ಯು ಕಾಲವೆಂದರಿತು, ತನು ತ್ಯಾಗವನ್ನು ಮಾಡಿರುವನು. ಅಂಥಹಾ ಮಹಾತ್ಮನಿಗಾಗಿ ಶೋಕಿಸಬೇಡ! ಪಾಂಡವರು ಆ ಮಹಾನುಭಾವನ ಪ್ರೀತಿಗೆ ಪಾತ್ರರು. ಅವರನ್ನು ಕೃಪೆಯಿಂದ ನೋಡು!!
ಶ್ರೀ ಕೃಷ್ಣದ್ವೈಪಾಯನರೂ ಸಂತೈಸಲು ತಿಳಿದು, ಗಂಗಾದೇವಿಯು ಧರ್ಮರಾಜಾದಿಗಳನ್ನು ಆಶೀರ್ವದಿಸಿ ಶ್ರೀ ಕೃಷ್ಣ ವ್ಯಾಸರಿಗೆ ನಮಿಸಿ, ಗಂಗಾ ತರಂಗ ಸಂಗತಳಾಗಿ ಅಂತರ್ಹಿತಳಾದಳು.
ಧರ್ಮರಾಜನು ತಾತನಿಗೆ ( ಶ್ರೀ ಭೀಷ್ಮರಿಗೆ ) ಮಾಡಲು ತಕ್ಕ ಸಕಲ ಕೃತ್ಯಗಳನ್ನೂ ಮಾಡಿ ಗಂಗಾಶೀರ್ವಾದದಿಂದ ಪರಮಾನಂದವನ್ನೂ; ಭೀಷ್ಮೋಪದೇಶದಿಂದ ನಿಸ್ಸಂದೇಹ ಮನಸ್ಥಿತಿಯನ್ನು ಪೊಂದಿ, ಸಕಲ ಸೋದರ ಯಾದವ ಪರಿವಾರದೊಡನೆ ಹಸ್ತಿನಾ ನಗರವನ್ನು ಸೇರಿ ಭೀಷ್ಮೋಪದೇಶದಂತೆ ರಾಜ್ಯ ಪರಿಪಾಲನ ಧುರಂಧರನಾದನು!!
ಜನಮೇಜಯ! ಅನುಶಾಸನಿಕ ಪರ್ವವನ್ನು ಶ್ರೀಶಾನುಗ್ರಹದಿಂದ ನಿನಗರುಹಿ ಧನ್ಯನಾದೆನು. ಇದನ್ನು ಪಠಿಸಿದವರೂ, ಕೇಳಿದವರೂ ಸಕಲ ಪಾಪಮುಕ್ತರೂ, ಸಕಲೈಶ್ವರ್ಯಯುಕ್ತರೂ ಶ್ರೀಹರಿ ಭಕ್ತರೂ ಆಗಿ ಚಿರಕಾಲ ಸುಖಿಸುವರು!!
” ಭೀಷ್ಮ ತರ್ಪಣ “
ಶುಕ್ಲಾಷ್ಟಮ್ಯಾ೦ ತು ಮಾಘಸ್ಯ ದದ್ಯಾತ್ ಭೀಷ್ಮಾಯ ಯೋ ಜಲಮ್ ।
ಸಂವತ್ಸರ ಕೃತಂ ಪಾಪಂ ತತ್ಕ್ಷಣಾದೇವ ನಶ್ಯತೇ ।।
ವರ್ಷವಿಡೀ ಮಾಡಿದ ಪಾಪದ ನಾಶಕ್ಕೆ ಇಂದು ಶ್ರೀ ಭೀಷ್ಮಾಚಾರ್ಯರಿಗೆ ತರ್ಪಣ ನೀಡಬೇಕು.
ವಸೂನಾಮಾವತಾರಾಯ ಶಂತನೋರಾತ್ಮಜಾಯ ಚ ।
ಅರ್ಘ್ಯ೦ ದದಾಯ ಭೀಷ್ಮಾಯ ಆಬಾಲ್ಯ ಬ್ರಹ್ಮಚಾರಿಣೇ ।।
ಎಂದು ಅರ್ಘ್ಯವನ್ನೂ…
ವೈಯಾಘ್ರಪಾದ ಗೋತ್ರಾಯ ಸಾಂಕೃತ್ಯ ಪ್ರವರಾಯ ಚ ।
ಗಂಗಾ ಪುತ್ರಾಯ ಭೀಷ್ಮಾಯ ಆಜನ್ಮ ಬ್ರಹ್ಮಚಾರಿಣೇ ।।
ಅಪುತ್ರಾಯ ಜಲಂ ದದ್ಮಿ ನಮೋ ಭೀಷ್ಮಾಯ ವರ್ಮಣೇ ।
ಭೀಷ್ಮ: ಶಾಂತನೋ ವೀರಃ ಸತ್ಯವಾದೀ ಜಿತೇಂದ್ರಿಯಃ ।
ಆಭಿರದ್ಭಿರವಾಪ್ನೋತಿ ಪುತ್ರಪೌತ್ರೋಚಿತಾಂ ಕ್ರಿಯಾಮ್ ।।
ಎಂದು ತರ್ಪಣವನ್ನೂ…
ಮಾಘೇ ಮಾಸೇ ಸೀತಾಷ್ಟಮ್ಯಾ೦ ಸತಿಲಂ ಭೀಷ್ಮ ತರ್ಪಣಮ್ ।
ಜೀವತ್ಪಿತಾಪಿ ಕುರ್ವೀತ ತರ್ಪಣಂ ಯಮ ಭೀಷ್ಮಯೋ: ।।
ಜೀವನ್ಪಿತೃಗಳೂ ( ಹೆತ್ತವರು ಬದುಕಿದ್ದರೂ ) ಶ್ರೀ ಯಮಧರ್ಮರಾಜರಿಗೆ ಮತ್ತು ಶ್ರೀ ಭೀಷ್ಮಾಚಾರ್ಯರಿಗೆ ಎಳ್ಳಿನೊಂದಿಗೆ ತರ್ಪಣ ಕೊಡಲೇಬೇಕು!!
ಬ್ರಾಹ್ಮಣಾದ್ಯಶ್ಚ ವರ್ಣಾ: ದದ್ಯುಭೀಷ್ಮಾಯ ನೋ ಜಲಮ್ ।
ಸಂವತ್ಸರ ಕೃತಂ ತೇಷಾ೦ ಪುಣ್ಯಂ ನಶ್ಯತಿ ಸತ್ತಮ ।।
ಶ್ರೀ ಭೀಷ್ಮಾಚಾರ್ಯರಿಗೆ ತರ್ಪಣವನ್ನು ಕೊಡದಿದ್ದರೆ ವರ್ಷ ಪೂರ್ತಿ ಮಾಡಿದ ಪುಣ್ಯ ನಾಶಗೊಳ್ಳುತ್ತದೆ.
ಆದ್ದರಿಂದ ಸರ್ವರೂ ಭೀಷ್ಮಷ್ಟಮೀಯಂದು ” ತರ್ಪಣ ” ವನ್ನು ಕೊಟ್ಟು ಶ್ರೀ ಹರಿವಾಯುಗುರುಗಳ ಪರಮಾನುಗ್ರಹಕ್ಕೆ ಪಾತ್ರರಾಗೋಣ…