18 ಪುರಾಣಗಳು : ಬ್ರಹ್ಮಾಂಡ ಪುರಾಣ ಏನು ಹೇಳುತ್ತದೆ?
ಬ್ರಹ್ಮಾಂಡ ಪುರಾಣ
ವಾಯು ಮಹಾಪುರಾಣದ ಹಳೆಯ ಪಾಠವೆಂದು ಅನುಮಾನಿಸಲಾಗಿದೆ. ಏಕೆಂದರೆ ಇದನ್ನು ವಾಯವೀಯ ಬ್ರಹ್ಮಾಂಡ ಎಂದು ಕರೆದಿದೆ, ಕೂರ್ಮಮಹಾಪುರಾಣ. ಮತ್ಸ್ಯಪುರಾಣದ ಪ್ರಕಾರ ಇದನ್ನು ಹೇಳಿದವನು ಬ್ರಹ್ಮ. ಈ ಹೆಸರಿನ 12,200 ಶ್ಲೋಕಗಳುಳ್ಳ ಪ್ರಾಚೀನಮಹಾಪುರಾಣ ಕಳೆದುಹೋಗಿರಬೇಕು. ಏಕೆಂದರೆ ಉಪಲಬ್ಧ ಪ್ರತಿಯಲ್ಲಿ ಕೇವಲ ಮಾಹಾತ್ಮ್ಯಗಳೂ ಸ್ತೋತ್ರಗಳೂ ಉಪಾಖ್ಯಾನಗಳೂ ಇವೆ. ಪಾರ್ಗಿಟರ್ಗೆ ದೊರೆತ ಇದರ ಹಸ್ತಪ್ರತಿಯೊಂದರಲ್ಲಿಯ ಪೂರ್ವಾರ್ಧ ವಾಯುಪುರಾಣಕ್ಕೆ ಸಂಪೂರ್ಣ ಸಮವಾಗಿದೆ.
ಉತ್ತರಾರ್ಧದಲ್ಲಿ ಲಲಿತಾದೇವಿಯ ಆರಾಧನೆಯನ್ನೂ ತಾಂತ್ರಿಕಕೃತ್ಯ ವಿಧಾನಗಳಿಗನುಗುಣವಾಗಿ ವಿವರಿಸಲಾಗಿದೆ. ಬಲಿದ್ವೀಪದಲ್ಲಿ ಸ್ಥಳೀಯ ಶಿವಭಕ್ತರಿಗೆ ಬ್ರಹ್ಮಾಂಡ ಮಹಾಪುರಾಣವೊಂದೇ ಮಹಾಧರ್ಮಗ್ರಂಥವಾಗಿದೆ. ಅಧ್ಯಾತ್ಮರಾಮಾಯಣವನ್ನು ಇದರ ಅಂಗವೆಂದು ಗಣಿಸುತ್ತಾರೆ. ಇದರಲ್ಲಿ ಅದ್ವೈತತತ್ತ್ವಗಳ ಮತ್ತು ರಾಮಭಕ್ತಿಯ ಉಪದೇಶವಿದೆ. ಅಧ್ಯಾತ್ಮರಾಮಾಯಣವಿಡೀ ಉಮಾಶಿವರ ಸಂವಾದದ ರೂಪದಲ್ಲಿದೆ.
ಇದರಲ್ಲಿ ಆದಿಯಿಂದ ಅಂತ್ಯದವರೆಗೆ ರಾಮ ಪರಮಾತ್ಮನಾದ ವಿಷ್ಣು, ಅಪಹೃತೆಯಾದ ಸೀತೆ ಮಾಯೆ. ಅಗ್ನಿಪ್ರವೇಶದ ಬಳಿಕ ಬರುವ ಸೀತೆ ವಿಷ್ಣುಪತ್ನಿಯಾದ ಲಕ್ಷ್ಮೀದೇವಿ ಅಥವಾ ಪ್ರಕೃತಿ. ಪ್ರಸ್ತುತ ಪುರಾಣದಲ್ಲಿ ಬರುವ ರಾಮಹೃದಯ ಮತ್ತು ರಾಮಗೀತೆಗಳನ್ನು ರಾಮಭಕ್ತರೆಲ್ಲರೂ ಕಲಿತು ಪಠಿಸುತ್ತಾರೆ. ಇದೇ ಪುರಾಣದ ಭಾಗವೆಂದು ಹೇಳಲಾಗುವ ನಚಿಕೇತೋಪಾಖ್ಯಾನ ಸುಂದರವಾಗಿರುವ ಪ್ರಾಚೀನ ನಚಿಕೇತಕಥೆಯ ಒಂದು ವಿಕೃತರೂಪ.
ಇದರ ಪ್ರಾಚೀನಮೂಲ ವಾಯುಪುರಾಣದ ಪ್ರಾಚೀನಮೂಲರೂಪ ದಷ್ಟೇ ಹಳೆಯದಾಗಿರಬಹುದಾದರೂ ಮರಾಠಿಕವಿ ಏಕನಾಥನ ಹೇಳಿಕೆಯ ಪ್ರಕಾರ ಇದರ ಪ್ರಸ್ತುತ ರೂಪದ ಕಾಲ ಹೆಚ್ಚು ಕಡಿಮೆ ವಾಯುಪುರಾಣದ ಆಧುನಿಕರೂಪದ ಕಾಲಕ್ಕೆ ಸರಿಸಮವಾದೀತು ಎಂದು ಊಹಿಸಬಹುದು. ಬ್ರಹ್ಮಾಂಡವೆಂಬ ಪದ ಪರಂಪರಾಗತ.
ಬ್ರಾಹ್ಮಣ ಮತ್ತು ಉಪನಿಷತ್ತುಗಳಲ್ಲಿ ವಿಶ್ವದ ಹುಟ್ಟು ಚಿನ್ನದ ಮೊಟ್ಟೆಯಿಂದ ಎನ್ನಲಾಗಿದೆ. ಬ್ರಹ್ಮ ಅಥವಾ ಬ್ರಹ್ಮರೂಪಿಯಾದ ವಿಷ್ಣು ಇಡೀ ವಿಶ್ವವನ್ನು ಗರ್ಭೀಕರಿಸಿಕೊಂಡಿದ್ದ ಚಿನ್ನದ ಮೊಟ್ಟೆಯಲ್ಲಿ ವಾಸಿಸಿದ್ದನೆಂದೂ ಅವನ ಇಚ್ಛೆಯಂತೆ ಅದರಿಂದ ವಿಶ್ವ ಆವಿರ್ಭವಿಸಿತೆಂದೂ ಮನುಸ್ಮೃತಿ ಮತ್ತು ವಿಷ್ಣು ಹಾಗೂ ವಾಯು ಪುರಾಣಗಳು ವರ್ಣಿಸಿರುವುದನ್ನಿಲ್ಲಿ ಸ್ಮರಣೀಯ.🙏