ರುಕ್ಮಿಣಿಯ ತುಳಸಿ ದಳಕ್ಕೆ ತೂಗಿದ ಕೃಷ್ಣ..!
ಶ್ರೀಕೃಷ್ಣನ ರಾಣಿಯರಲ್ಲಿ ರುಕ್ಮಿಣಿ ಮತ್ತು ಸತ್ಯಭಾಮೆಯರು ಹೆಚ್ಚು ಪ್ರಸಿದ್ಧ ರಾಗಿದ್ದರು. ಸತ್ಯಭಾಮೆಯು ತನ್ನ ರೂಪ ವಿಲಾಸದಿಂದ ಕೃಷ್ಣನನ್ನು ಒಲಿಸಿಕೊಳ್ಳಲು ಯತ್ನಿಸುತ್ತಿದ್ದರೆ, ರುಕ್ಮಿಣಿಯು ತನ್ನ ಭಕ್ತಿವಿಲಾಸದಿಂದ ಅವನನ್ನು ಒಲಿಸಿಕೊಂಡಿದ್ದಳು. ರುಕ್ಮಿಣಿಯನ್ನು ಕಂಡರೆ ಸತ್ಯಭಾಮೆಗೆ ಅಷ್ಟಕ್ಕಷ್ಟೆ. ಒಮ್ಮೆ ನಾರದಮುನಿಗಳು ಶ್ರೀಕೃಷ್ಣನ ಅರಮನೆಯನ್ನು ಹೊಕ್ಕು, ತಾವು ಇಂದ್ರಲೋಕದಿಂದ ತಂದಿದ್ದ ಪಾರಿಜಾತ ಕುಸುಮದ ಪ್ರಸಾದವನ್ನು ಶ್ರೀಕೃಷ್ಣನ ಕೈಗಿತ್ತರು. ಅದನ್ನು ಕೃಷ್ಣನು ರುಕ್ಮಿಣಿಯ ಮುಡಿಗೇರಿಸಿಬಿಟ್ಟನು. ಅದನ್ನು ಸತ್ಯಭಾಮೆ ಸಹಿಸಿಕೊಳ್ಳಲಿಲ್ಲ. ಕೊನೆಗೆ ಆ ಪಾರಿಜಾತ ವೃಕ್ಷವನ್ನೇ ಇಂದ್ರಲೋಕ ದಿಂದ ತಂದು, ಸತ್ಯಭಾಮೆಯ ಮನೆಯಂಗಳದಲ್ಲಿ ನೆಟ್ಟು ನಿಲ್ಲಿಸಬೇಕಾಯಿತು.ಆದರೇನು, ಆ ಪಾರಿಜಾತವೆಲ್ಲ ರುಕ್ಮಿಣಿಯ ಮನೆಯಂಗಳದಲ್ಲಿ ಉದುರುತ್ತಿತ್ತು.
ಒಮ್ಮೆ ಸತ್ಯಭಾಮೆಯು ನಾರದರನ್ನು ಕುರಿತು “ಮಹರ್ಷಿಗಳೇ, ಜನ್ಮಜನ್ಮಾಂತರಕ್ಕೂ ಶ್ರೀಕೃಷ್ಣನೇ ನನಗೆ ಗಂಡನಾಗಬೇಕೆಂಬ ಹಂಬಲವಿದೆ; ಅದು ಈಡೇರಲು ಏನಾದರೂ ದಾರಿಯಿದೆಯೆ” ಎಂದು ಕೇಳಿದಳು. ಅದಕ್ಕೆ ನಾರದರು “ಓಹೋ, ಇದೆ ತಾಯೆ, ನೀನು ಪುಣ್ಯಕವೆಂಬ ವ್ರತವನ್ನಾಚರಿಸಿ, ಅದರ ಮುಕ್ತಾಯದಲ್ಲಿ ಶ್ರೀಕೃಷ್ಣನನ್ನು ಯಾರಾದರೂ ಬ್ರಾಹ್ಮಣರಿಗೆ ದಾನವಾಗಿ ಕೊಟ್ಟುಬಿಡು. ಆಗ ನಿನ್ನ ಹಂಬಲಕ್ಕೆ ಬೆಂಬಲ ದೊರಕುತ್ತದೆ” ಎಂದರು. ಸರಿ ಆ, ವ್ರತ ನಡೆದೆ ಹೋಯಿತು. ಆ ಹೊತ್ತಿಗೆ ಸರಿಯಾಗಿ ಅಲ್ಲಿಗೆ ಬಂದ ನಾರದರಿಗೆ ಪತಿದೇವರನ್ನು ದಾನಮಾಡಿದ್ದೂ ಆಗಿ ಹೋಯಿತು. ಆಗ ಶ್ರೀಕೃಷ್ಣನು ನಾರದರನ್ನು ಕುರಿತು “ಈಗ ನಾನು ಏನು ಮಾಡಬೇಕು ಸ್ವಾಮಿ” ಎಂದು ಕೇಳಿದನು. ಅದಕ್ಕೆ ನಾರದರು “ಏನು ಮಾಡಬೇಕು ಎನ್ನುತ್ತೀಯಲ್ಲಪ್ಪಾ, ಇನ್ನು ಅರಮನೆಯಲ್ಲಿ ಇರು ವಂತಿಲ್ಲ, ಹಿಡಿದುಕೋ ಈ ತಂಬೂರಿ, ನಡೆ ಹಾಡುತ್ತ ನನ್ನ ಹಿಂದೆ, ನೀನಿನ್ನು ನನ್ನ ಅನುಚರನಲ್ಲವೆ”? ಎಂದರು.
ಆಗ ಸತ್ಯಭಾಮೆಗೆ ಸಿಡಿಲೆರಗಿದಂತಾಯಿತು, ದಿಕ್ಕು ತೋರದಾಯಿತು. “ಇದೆಂತಹ ಕೆಲಸ ಮಾಡಿಬಿಟ್ಟೆ” ಎಂದು ತನ್ನ ತಪ್ಪಿನ ಅರಿವಾಯಿತು. “ಈಗ ನೀವೇ ಏನಾದರೂ ಮಾರ್ಗವನ್ನು ತೋರಿಸಿ ನಾರದರೇ, ಸ್ವಾಮಿಯನ್ನು ಕಳೆದುಕೊಳ್ಳಲುಂಟೇ” ಎಂದು ಅಂಗಲಾಚಿದಳು. ಆಗ ನಾರದರು “ನಾನೇನೋ ಕೃಷ್ಣನನ್ನು ನಿನಗೇ ಮರಳಿಸಿಬಿಡುತ್ತೇನೆ. ಆದರೆ ದಾನವಾಗಿ ಕೊಟ್ಟುದನ್ನು ಮರಳಿ ಪಡೆದರೆ ‘ದತ್ತಾಪಹಾರ’ ಎಂಬ ದೋಷ ನಿನಗೆ ಅಂಟಿಕೊಳ್ಳುತ್ತದೆಯಲ್ಲ, ಅದಕ್ಕೇನು ಮಾಡುತ್ತೀಯೆ ತಾಯೆ” ಎಂದರು. “ಅದಕ್ಕೂ ನೀವೇ ಏನಾದರೂ ಪರಿಹಾರ ಸೂಚಿಸಬೇಕು ನಾರದರೆ” ಎಂದು ಸತ್ಯಭಾಮೆ ಅವರಿಗೆ ಶರಣಾದಳು ಆಗ ನಾರದರು “ತಾಯೆ, ತುಲಾಭಾರದ ಮೂಲಕ ಕೃಷ್ಣನ ತೂಕಕ್ಕೆ ಸಮನಾಗುವ ನಿನ್ನ ಆಭರಣಗಳನ್ನು ತೂಗಿಸಿ ನನಗೆ ದಾನಮಾಡು, ನಾನು ನಿನಗೆ ಕೃಷ್ಣನನ್ನು ಹಿಂದಕ್ಕೆ ಕೊಡುತ್ತೇನೆ. ಆಗ ದೋಷವೆಲ್ಲ ಪರಿಹಾರವಾಗುತ್ತದೆ” ಎಂದು ಸಲಹೆ ಕೊಟ್ಟರು.
ಸತ್ಯಭಾಮೆಗೆ ಹೋದಜೀವ ಬಂದಂತಾಯಿತು. ಲಗುಬಗೆಯಿಂದ ಕೃಷ್ಣನನ್ನು ತಕ್ಕಡಿಯ ಒಂದು ತಟ್ಟೆಯಲ್ಲಿ ಕೂರಿಸಿ, ತನ್ನ ಸ್ವರ್ಣಾಭರಣಗಳನ್ನೆಲ್ಲ ತಂದು ತಂದು ಇನ್ನೊಂದು ತಟ್ಟೆಗೆ ಅಡಕಿದಳು. ಅವಳ ಆಭರಣವೆಲ್ಲ ಬರಿದಾಯಿತೇ ಹೊರತು, ಕೃಷ್ಣನ ತೂಕಕ್ಕೆ ಅದು ಸಮನಾಗಲಿಲ್ಲ. “ಈಗ ನೀವೇ ಏನಾದರೂ ಮಾಡಬೇಕು ನಾರದರೇ” ಎಂದು ಸತ್ಯಭಾಮೆಯು ತಲೆಯ ಮೇಲೆ ಕೈಹೊತ್ತು ಕುಳಿತುಬಿಟ್ಟಳು. ಆಗ ನಾರದರು “ರುಕ್ಮಿಣಿಯನ್ನೊಮ್ಮೆ ಕೇಳಿ ನೋಡು ತಾಯೆ, ಅವಳ ಆಭರಣಗಳನ್ನೂ ತೂಗಿಸು” ಎಂದರು. ಸತ್ಯಭಾಮೆಗೆ ಅದು ಇಷ್ಟವಿಲ್ಲದಿದ್ದರೂ ಪತಿದೇವರನ್ನು ಕಳೆದುಕೊಳ್ಳಬೇಕಲ್ಲಾ ಎಂಬ ಸಂಕಟದಿಂದ ಅಸಹಾಯಕಳಾಗಿ “ನೀನೂ ಬಾ ರುಕ್ಮಿಣಿ, ಸಹಾಯ ಮಾಡು” ಎಂದಳು.
ಆಗ ರುಕ್ಮಿಣಿಯು “ಹದಿನಾಲ್ಕು ಲೋಕಗಳ ಸಂಪತ್ತನ್ನೆಲ್ಲ ತಂದು ಸುರಿದರೂ ಈ ಸ್ವಾಮಿಗೆ ಸಮನಾಗಿ ಅದು ತೂಗಬಲ್ಲದೇ? ಅಕ್ಕ, ಜಗತ್ತಿಗೆಲ್ಲ ಸೇರಿದ ಅವನನ್ನು ನಾನೇ ಕಟ್ಟಿ ಹಾಕಿಕೊಳ್ಳುತ್ತೇನೆಂದರೆ, ಅದು ನಡೆಯುವುದುಂಟೆ? ಅಕ್ಕ, ಅದೆಲ್ಲ ಈಗ ಬೇಡ” ಎನ್ನುತ್ತ ರುಕ್ಮಿಣಿಯು ಒಂದು ತುಳಸಿ ದಳದ ಮೇಲೆ ‘ಶ್ರೀಕೃಷ್ಣ’ ಎಂದು ಬರೆದು, ಸತ್ಯಭಾಮೆಯ ತಟ್ಟೆಯೊಳಕ್ಕೆ ಹಾಕುತ್ತ “ದೇವ ದೇವೋತ್ತಮನೆ, ದೇವತಾ ಸಾರ್ವಭೌಮ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನೇ ನನಗೆ ನಿನ್ನ ಮೇಲೆ ಭಕ್ತಿ ನನ್ನ ಹೃದಯದಲ್ಲೇನಾದರೂ ಇದ್ದರೆ, ನೀನು ಸಮನಾಗಿ ತೂಗಿಬಿಡು ಸ್ವಾಮಿ” ಎಂದು ನಮಸ್ಕರಿಸಿದಳು. ಒಂದು ಕೃಷ್ಣನಾಮವೇ ಸಾಕಾಗಿ, ತಕ್ಕಡಿ ಸಮನಾಗಿ ತೂಗಿಬಿಟ್ಟಿತು, ತೂಗಾಡಿಬಿಟ್ಟಿತು, ಆಗಲೇ ಸತ್ಯಭಾಮೆಯ ಗರ್ವವು ಇಳಿಯಿತು ಭಗವಂತ ನಾದನನ್ನು ಸಿರಿ ಸಂಪತ್ತಿನಿಂದ ತೂಗಲು ಎಂದು ಸಾಧ್ಯವಿಲ್ಲ ನಿಜ ಭಕ್ತಿಗೆ ಅವನು ಒಲಿಯುತ್ತಾನೆ ಎಂಬ ನಿಜ ವಾಸ್ತವ ಸತ್ಯಭಾಮೆಗೆ ಅಂದು ಅರ್ಥವಾಯಿತು.