ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಉಡುಪಿ ಭೋಜನಶಾಲೆಯ ರೋಚಕ ಇತಿಹಾಸ ಬಲ್ಲಿರಾ !

ಉಡುಪಿ ಭೋಜನಶಾಲೆಯ ರೋಚಕ ಇತಿಹಾಸ ಬಲ್ಲಿರಾ !

ಬರಹ: ಪಿ ಲಾತವ್ಯ ಆಚಾರ್ಯ, ಉಡುಪಿ.

ಪುಟ್ಟಮಗುವೊಂದು ಗುಹ್ಯರೋಗದಿಂದ ಬಳಲುತ್ತಿತ್ತು.ಆ ಮಗುವನ್ನು ಉಳಿಸಲು ಮಗುವಿನ ಮಾತೆಯು ನೂರು ಹರಕೆಗಳನ್ನು ಹೇಳಿಕೊಂಡಳು.ತನ್ನ ಬಳಿ ಇದ್ದ ಚೂರುಪಾರು ಹಣಗಳನ್ನು ವ್ಯಯ ಮಾಡಿ ಬಗೆಬಗೆಯ ಔಷಧಿಗಳನ್ನು ಚಿಕಿತ್ಸೆಗಳನ್ನು ಕೊಡಿಸಿದಳು.ದಿನಕಳೆದಂತೆ ಮಗುವಿನ ಆರೋಗ್ಯ ಹದಗೆಡುತ್ತಾ ಹೋಯಿತು. ತೀರಾದುಃಖದಲ್ಲಿದ್ದ ಆಕೆ ಪ್ರತಿದಿನ ಉಡುಪಿ ಶ್ರೀಕೃಷ್ಣಮುಖ್ಯಪ್ರಾಣರಲ್ಲಿ ಮಗುವನ್ನು ಉಳಿಸಿ ಕೊಡುವಂತೆ ದೈನ್ಯಳಾಗಿ ಪ್ರಾರ್ಥಿಸುತ್ತಿದ್ದಳು.ಒಂದು ರಾತ್ರಿ ಆಕೆಗೆ ಕನಸಿನಲ್ಲಿ ಕೋತಿಯೊಂದು ಕಾಣಿಸಿಕೊಂಡಿತು.ದಷ್ಟಪುಷ್ಟವಾಗಿದ್ದ ಆ ಕೋತಿಯು ದೊಡ್ಡ ಕಠಾರವೊಂದರಿಂದ ನೈವೇದ್ಯ ಸ್ವೀಕರಿಸುತ್ತಿರುವ ದೃಶ್ಯವನ್ನು ಕಂಡಳು. ಮರುದಿನ ಮುಂಜಾನೆ ಮನೆಯ ಹಿರಿಯರಲ್ಲಿ ಈ ಕನಸಿನ ಕುರಿತು ಪ್ರಸ್ತಾಪಿಸಿದಾಗ ಉಡುಪಿ ಶ್ರೀಮುಖ್ಯಪ್ರಾಣ ದೇವರ ಪ್ರಸಾದವನ್ನು”ಮಗುವಿಗೆ ತಿನಿಸು ಏನಾದರೂ ಬದಲಾವಣೆ ಆದರೂ ಆದೀತು”ಎಂದು ಸೂಚಿಸಿದರು.ತಕ್ಷಣ ಎಚ್ಚೆತ್ತುಕೊಂಡ ಆಕೆ ಆ ದಿನದಿಂದಲೇ ನಿತ್ಯಮಠಕ್ಕೆ ತೆರಳಿ ದೇವರ ನೈವೇದ್ಯವನ್ನು ತಂದು ಮಗುವಿಗೆ ನೀಡಲು ಆರಂಭಿಸಿದಳು.ಆಗಾಗೆ ಆರೋಗ್ಯ ವಿಷಮ ಸ್ಥಿತಿಗೆ ತಲುಪುತ್ತಿತ್ತು.ಆದರೆ ಮಗುವಿನ ತಾಯಿಯು ಒಂದಿಷ್ಟೂ ದೃತಿಗೆಡದೆ ಸಂಪೂರ್ಣ ನಂಬಿಕೆಯಿಂದ ಎಡೆಬಿಡದೆ 47 ದಿನಗಳ ಕಾಲ(ಏಕಾದಶಿ ಹೊರತು) ಶ್ರೀದೇವರ ಅನ್ನಪ್ರಸಾದವನ್ನು ಮಗುವಿಗೆ ಉಣಿಸಿದಳು. ಇಷ್ಟಾದರೂ ಮಗು ಚಾಪೆಯಿಂದ ಕದಲುತ್ತಿರಲಿಲ್ಲ. ಮಾತನ್ನೂ ಆಡುತ್ತಿರಲಿಲ್ಲ.48ನೇ ದಿನ ಆಕೆ ಮಗುವಿಗೆ ಅನ್ನಪ್ರಸಾದ ತರಲು ಮಠಕ್ಕೆ ಬಂದಿದ್ದಳು.ಆಕೆ ಎಂದಿನಂತೆ ಅನ್ನದ ಪಾತ್ರೆ ಹಿಡಿದುಕೊಂಡು ಬಂದು ಅಡುಗೆಶಾಲೆಯ ಪಕ್ಕದಲ್ಲಿ ಕಾದು ಮಠದ ಸಿಬ್ಬಂದಿಗಳು ನೀಡಿದ ಅನ್ನ ಪ್ರಸಾದ ಸ್ವೀಕರಿಸಿದಳು. ದೊಡ್ಡದೊಡ್ಡ ಹೆಜ್ಜೆ ಹಾಕುತ್ತಾ ವೇಗವಾಗಿ ಮನೆಗೆ ಬಂದಳು.

ಆ ಸಂದರ್ಭದಲ್ಲಿ ಘಟನೆಯೊಂದು ನಡೆಯಿತು.ಇನ್ನೇನು ಮನೆಯ ಒಳಗೆ ಪ್ರವೇಶಿಸಿಬೇಕು ಅನ್ನುವಷ್ಟರಲ್ಲಿ ತನ್ನ ಮಗು ಗಟ್ಟಿಯಾಗಿ ನಗುವ ಸದ್ದು ಕೇಳುತ್ತಿತ್ತು.ಮಾತೆಯು ಹೆದರಿ ಕಕ್ಕಾಬಿಕ್ಕಿಯಾದಳು. ಭಯದಿಂದ ಮನೆಯ ಕೋಣೆಯ ಒಳಗೆ ಕಾಲಿಟ್ಟಳು.ಅಲ್ಲಿನ ದೃಶ್ಯ ನೋಡಿ ಮಾತೆಯು ದಂಗಾದಳು. ಕೋತಿಯೊಂದು ಮಗುವಿನ ಮುಂಭಾಗದಲ್ಲಿ ಕುಳಿತಿತ್ತು. ಅನಾರೋಗ್ಯಪೀಡಿತನಾಗಿದ್ದ ಮಗುವನ್ನು ಹಿಡಿದುಕೊಂಡು ಮುದ್ದಾಡುತ್ತಿತ್ತು. ಕೋತಿಯ ಆಟ ನೋಡಿ ಕಂದಮ್ಮ ಗಟ್ಟಿಯಾಗಿ ನಗುತ್ತಿತ್ತು.ತಾಯಿಯು
ಇವೆರಡೂ ಒಂದಾಗಿ ನಡೆಸುತ್ತಿರುವ ಆಟ ನೋಡಿ ಹೆದರಿ ಕಿರುಚಿಕೊಂಡಳು.ತಾಯಿಯ ಆರ್ಭಟಕ್ಕೆ ಬೆಚ್ಚಿದ ಕೋತಿಯು ಅಲ್ಲಿಂದ ಚಂಗನೆ ನೆಗೆದು ತಾಯಿಯ ಕೈಯಲ್ಲಿದ್ದ ನೈವೇದ್ಯ ಪ್ರಸಾದವನ್ನು ಒಂದಿಷ್ಟು ಗೆರೆಸಿ ತೆಗೆದು ಪಲಾಯನ ಮಾಡಿತು.ಮಗುವು ಮಾತೆಯನ್ನು ನೋಡುತ್ತಿದ್ದಂತೆ ನಗುತ್ತಾ ಎದ್ದುನಿಂತು ಓಡಿಬಂದು ಮಾತೆಯ ಮಡಿಲಲ್ಲಿ ಕುಳಿತುಕೊಂಡಿತು.ಸುಮಾರು ಒಂದುವರ್ಷದಿಂದ ಮಲಗಿಯೇ ಇದ್ದ ಒಂದು ಅಕ್ಷರವನ್ನೂ ಕೂಡಾ ಉಸುರದೇ ಇದ್ದ ಮಗುವಿನ ಆರೋಗ್ಯದಲ್ಲಿ ಹಠಾತ್ ಆಗಿ ಆದ ಬದಲಾವಣೆ ಕಂಡು ತಾಯಿ ಮೂಕವಿಸ್ಮಿತಳಾದಳು.
ಸಂತಸ ತಡೆಯಲಾರದೆ ಆನಂದಬಾಷ್ಪ ಹರಿದು ಬಂದಿತು.ಈಘಟನೆಯಿಂದ ತಾಯಿಗೆ ಹೊರಬರಲು ಬಹಳ ಹೊತ್ತು ಬೇಕಾಯಿತು.ಪ್ರಾಣದೇವರ ಅನ್ನದ ಮಹಿಮೆಯ ಅರಿವಾಯಿತು.ಮಗುವು ತಾಯಿಯ ಕೈಯಲ್ಲಿದ್ದ ಅನ್ನಪ್ರಸಾದವನ್ನು ಕಂಡು ಆಕೆ ಉಣಿಸುವ ಮೊದಲೇ ತಾನೇ ಕೈಯಾರೆ ಉಂಡಿತು.ಮಗುವಿನ ಆರೋಗ್ಯದಲ್ಲಾದ ಅನಿರೀಕ್ಷಿತ ಪರಿವರ್ತನೆಯಿಂದ ಮನೆಮಂದಿಗೆಲ್ಲಾ ಆಶ್ಚರ್ಯವೋ ಆಶ್ಚರ್ಯ.

  ಶ್ರೀ ಲಲಿತಾ ಸಹಸ್ರನಾಮ ಮಹಿಮೆ.

ಪ್ರತಿಭಾವಂತನಾಗಿ ಬೆಳೆಯುತ್ತಾ ಸಾಗಿದ ಈ ಬಾಲಕ 1887ನೇ ಇಸವಿಯಲ್ಲಿ ಶ್ರೀ ಶಿರೂರು ಮಠದ 27 ನೇ ಯತಿಗಳಾಗಿ ಶ್ರೀಲಕ್ಷ್ಮೀಸಮುದ್ರತೀರ್ಥರೆಂದು ಅಭಿಷಿಕ್ತರಾದರು.ನಿರಂತರ
ಅಧ್ಯಯನ,ಜಪ,ತಪ ಪೂಜೆಯಿಂದ ವಿಶೇಷ ಸಿದ್ದಿಯೂ ಕೂಡಾ ಪ್ರಾಪ್ತಿಯಾಯಿತು.
ಈ ಸಂದರ್ಭದಲ್ಲಿ ಶ್ರೀಗಳ ಪೂರ್ವಾಶ್ರಮದ ಮಾತೆಯು ಆಶ್ರಮಪೂರ್ವದಲ್ಲಿ ಅಂದರೆ ಶ್ರೀಪಾದರ ಬಾಲ್ಯದಲ್ಲಿ ಜರಗಿದ ಘಟನೆಯನ್ನು ಪ್ರಸ್ತಾಪಿಸಿದರು.”ತನ್ನ ಮಗು ಗುಣಮುಖವಾದರೆ ನಿತ್ಯ ಅನ್ನದಾನ ನಡೆಸುವೆ ಎಂಬ ಹರಕೆಯನ್ನೂ ಕೂಡಾ ನಿಮ್ಮ ಸಲುವಾಗಿ ಹೊತ್ತಿದ್ದೆ” ಎಂಬ ಅಂತರಾಳದ ಮಾತನ್ನು ತಿಳಿಸಿದರು.ತಾಯಿಯ ಮಾತಿನಿಂದ ಸಂತುಷ್ಟರಾದ ಯತಿಗಳು ಭೋಜನಶಾಲೆ ನಿರ್ಮಾಣಕ್ಕೆ ಸಂಕಲ್ಪಿಸಿದರು.

  ಕೌಶಿಕ ಮುನಿ ಮತ್ತು ಅಹಂಕಾರದ ಕಥೆ

ಈಗಿನ ಭೋಜನಶಾಲೆ ಇರುವ ಸ್ಥಳದಲ್ಲಿ 120+ ವರ್ಷಗಳ ಪೂರ್ವದಲ್ಲಿ ದೊಡ್ಡ ಅಂಗಣವಿತ್ತು. ಶ್ರೀಕೃಷ್ಣಮಠದಲ್ಲಿ ನಿತ್ಯ ಭೋಜನಾನಂತರ ಮಿಕ್ಕಿ ಉಳಿದ ನೈವೇದ್ಯಗಳನ್ನು ಇದೇ ಅಂಗಣದಲ್ಲಿ ಇರಿಸುತ್ತಿದ್ದರು.ಶ್ರೀಮಠದ ದನಕರುಗಳು,ಕೋತಿಗಳು,ಹಕ್ಕಿಗಳು ಬಂದು ಮಿಕ್ಕಿ ಉಳಿದ ಈ ಅನ್ನಗಳನ್ನು ತಿಂದು ಖಾಲಿ ಮಾಡುತ್ತಿದ್ದವು.ಶ್ರೀಕೃಷ್ಣನ
ಗೋವುಗಳು ನೂರಾರು ವರ್ಷಗಳಿಂದ ಆಹಾರ ಸ್ವೀಕರಿಸುತ್ತಿದ್ದ ಈ ಪವಿತ್ರ ಭೂಮಿಯನ್ನು ಶ್ರೀಶಿರೂರುಮಠದ ಶ್ರೀಲಕ್ಷ್ಮೀಸಮುದ್ರತೀರ್ಥರು ಭೋಜನಶಾಲೆ ನಿರ್ಮಾಣಕ್ಕೆ ಆಯ್ದುಕೊಂಡರು.
ತಮ್ಮ 2ನೇ ಪರ್ಯಾಯದಲ್ಲಿ ಶ್ರೀಪಾದರ ಸಂಕಲ್ಪ ನೆರವೇರಿತು.ಬೃಹತ್ ಭೋಜನಶಾಲೆ ನಿರ್ಮಾಣವಾಯಿತು.ಪ್ರತಿದಿನ ಅನ್ನದಾನವೂ ಆರಂಭವಾಯಿತು.

ಪಾಯಸಕ್ಕೆ ತುಪ್ಪ ಬೆರೆಸಿದಂತೆ ಶ್ರೀಲಕ್ಷ್ಮೀಸಮುದ್ರತೀರ್ಥರು ಭೋಜನಶಾಲೆಗೆ ಹೊನ್ನ ಕಿರೀಟ ತೊಡಿಸುವ ನೂತನ ಸೇವೆಗೆ ಮುಂದಾದರು.ಅದೇನೆಂದರೆ ಉಡುಪಿಯ ಹೆಬ್ಬಾಗಿಲು ಎಂದು ಕರೆಯಲ್ಪಡುತ್ತಿದ್ದ ಜೋಡುಕಟ್ಟೆಯ ಸಮೀಪದಲ್ಲಿ ಬೃಹತ್ ಶಿಲಾಮಯ ಕೋಟೆಬಾಗಿಲಿತ್ತು.ಆ ಮಹಾದ್ವಾರದ ಶಿಲಾಕಂಬದಲ್ಲಿದ್ದ ಸುಂದರವಾದ ಆಂಜನೇಯನ ಪ್ರತಿಮೆ ಶ್ರೀಲಕ್ಷ್ಮೀಸಮುದ್ರ ತೀರ್ಥರ ಹೃದಯವನ್ನು ಹಲವಾರು ಸಮಯದಿಂದ ಸೆಳೆಯುತ್ತಿತ್ತು.ಒಂದು ಪರ್ವಕಾಲದಲ್ಲಿ ಶ್ರೀಲಕ್ಷ್ಮೀಸಮುದ್ರತೀರ್ಥರಿಗೆ ಸ್ವಪ್ನಸೂಚನೆ ಲಭಿಸಿತು. ತಡಮಾಡಲಿಲ್ಲ.ಮಹಾದ್ವಾರದ ಕಂಬ ಸಹಿತವಾಗಿ ಆಂಜನೇಯನ ಪ್ರತಿಮೆಯನ್ನು ಜೋಡುಕಟ್ಟೆಯಿಂದ ತಂದು ಶಾಸ್ತ್ರೋಕ್ತವಾಗಿ ಭೋಜನಶಾಲೆಯಲ್ಲಿ ಪ್ರತಿಷ್ಠಾಪಿಸಿದರು.ಈಮೂಲಕ ತಮ್ಮತಾಯಿಯ ಬಹುದಿನದ ಎರಡೂ ಕನಸನ್ನೂ ನನಸಾಗಿಸಿದರು.

ಈ ಎಲ್ಲಾ ಕಾರಣಗಳಿಗಾಗಿ ಉಡುಪಿ ಶ್ರೀಕೃಷ್ಣಮಠದ ಭೋಜನಶಾಲೆಯಲ್ಲಿ ಅನ್ನಪ್ರಸಾದ ಸೇವಿಸುವುದಕ್ಕೆ ವಿಶೇಷ ಮಹತ್ವವಿದೆ.ಅದೂ ಕೂಡಾ ಎಲೆಯನ್ನು ಬಳಸದೇ ಖಾಲೀನೆಲದ ಮೇಲೆ ಭೋಜನಪ್ರಸಾದ ಸೇವಿಸಿದರೆ ಸಕಲ ಇಷ್ಟಾರ್ಥಗಳೂ ಸಿದ್ದಿಯಾಗುವುದೆಂಬ ನಂಬಿಕೆ ನೂರಾರು ವರ್ಷಗಳಿಂದ ಸಾಗಿ ಬಂದಿದೆ.ಏನೊಂದೂ ರೋಗ-ರುಜಿನಗಳು,ದುರಿತ-ದುಮ್ಮಾನಗಳು ಇದ್ದರೂ ತರಿದು ಹೋಗುವವು ಎಂಬ ಪ್ರತೀತಿ ಇದೆ.ಇಂದಿಗೂ ಪ್ರತೀ ಶನಿವಾರ ಶ್ರೀಕೃಷ್ಣಮಠದ ಭೋಜನ ಶಾಲೆಯಲ್ಲಿ ಸಾವಿರಾರು ಭಕ್ತರು ಖಾಲೀನೆಲದ ಮೇಲೆ ಎಲೆಯನ್ನು ಬಳಸದೇ ಭೋಜನಪ್ರಸಾದ ಸ್ವೀಕರಿಸಲು ಆಗಮಿಸುತ್ತಾರೆ.

  ವಿವಾಹ ಮತ್ತು ಜಾತಕ - ವರ ಪರೀಕ್ಷೆ ಮತ್ತು ವಧು ಪರೀಕ್ಷೆ

ಈ ನಿಮಿತ್ತ ಶ್ರೀಶಿರೂರುಮಠದ ಕೀರ್ತಿಶೇಷ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರು ತಮ್ಮ ಪರ್ಯಾಯದ 2 ವರ್ಷಗಳ ಅವಧಿಯಲ್ಲಿ ಶ್ರಾವಣಮಾಸದ ಐದೂ ಶನಿವಾರವೂ ಕೂಡಾ ಭೋಜನಶಾಲೆಯಲ್ಲಿ ಎಲೆಯನ್ನು ಬಳಸದೇ ಖಾಲೀನೆಲದ ಮೇಲೆ ಸ್ವತಃ ತಾವೇ ಶ್ರೀದೇವರ ಭೋಜನಪ್ರಸಾದವನ್ನು ಇಲ್ಲಿ(ಭಿಕ್ಷೆ) ಸ್ವೀಕರಿಸುತ್ತಿದ್ದರು.ತಮ್ಮ ಗುರುಗಳು ನಿರ್ಮಿಸಿದ ಪವಿತ್ರಸನ್ನಿಧಾನದಲ್ಲಿ ಭಿಕ್ಷೆ ಸ್ವೀಕರಿಸುವ ಮೂಲಕ ಅವರ ಕೊಡುಗೆಯನ್ನು ಸ್ಮರಿಸುವ ಶಿಷ್ಟಾಚಾರಕ್ಕೂ ಕೂಡಾ ತಲೆ ಬಾಗಿದರು.

120 ವರ್ಷಗಳ ಪೂರ್ವದಲ್ಲಿ ಶ್ರೀಲಕ್ಷ್ಮೀಸಮುದ್ರತೀರ್ಥ ಶ್ರೀಪಾದರು ತಾಯಿಯ ಹರಕೆಯನ್ನು ಸಾಕಾರಗೊಳಿಸಲು ನಿರ್ಮಾಸಿದ ಸ್ಮಾರಕವು ಇಂದು ಲಕ್ಷಾಂತರ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಿದೆ.ಈ ಸನ್ನಿದಾನದ ಪ್ರಸಾದವು ಭಕ್ತಕೋಟಿಯ ತನುಮನದಲ್ಲಿ ಹೊಸ ಹುರುಪನ್ನು ನೀಡಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿದೆ.

1940 ರ ದಶಕದಲ್ಲಿ ಶ್ರೀಶಿರೂರುಮಠದ 28ನೇ ಯತಿಗಳಾದ ಶ್ರೀಲಕ್ಷ್ಮೀಂದ್ರತೀರ್ಥ ಶ್ರೀಪಾದರಿಂದ ರಚಿತವಾದ “ಶ್ರೀಲಕ್ಷ್ಮೀಸಮುದ್ರತೀರ್ಥಗುರುಚರಿತಂ”ಕೃತಿಯಲ್ಲಿ ಈ ಘಟನೆಗಳ ಕುರಿತು ಬಲು ಸೊಗಸಾದ ವರ್ಣನೆ ಇದೆ.

ಆತ್ಮೀಯರೇ..
ವಿನೂತನ ಸೇವೆಯ ಮೂಲಕ ಶ್ರೀಹರಿಯ ಒಲುಮೆಗೆ ಪಾತ್ರರಾಗಲು ಸತ್ಯಪಥ ದರ್ಶಿಸಿದ
ಆ ಮಹಾತಾಯಿಗೆ ಭಕ್ತಿಪೂರ್ವಕ ಸಾಷ್ಟಾಂಗ ಪ್ರಣಾಮಗಳು.

ಬರಹ:ಪಿ.ಲಾತವ್ಯ ಆಚಾರ್ಯ ಉಡುಪಿ.

Leave a Reply

Your email address will not be published. Required fields are marked *

Translate »