ರಾಮ-ನಾಮದ ಚಮತ್ಕಾರ:-
ಒಂದು ಹಳ್ಳಿಯಲ್ಲಿ ಒಬ್ಬ ಸಾಧು ಇದ್ದನು. ಆತ ದಿನಪೂರ್ತಿಯು ರಾಮನಾಮ ಸ್ಮರಣೆ ಮಾಡುತ್ತಿದ್ದನು ಮತ್ತು ಸಂಜೆಯಿಂದ ರಾತ್ರಿ ಬಹಳ ಹೊತ್ತಿನವರೆಗೂ ಡೋಲು ಬಡಿಯುತ್ತಾ ಶ್ರೀರಾಮ ಭಜನೆ ಮಾಡುತ್ತಿದ್ದನು. ಈ ಸಾಧುವಿನ ಕುಠೀರದ ಸಮೀಪದಲ್ಲಿಯೇ ಮತ್ತೊಬ್ಬ ವ್ಯಾಪಾರಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದನು. ಸಾಧು ಮಾಡುವ ಭಜನೆ ಡೋಲಿನ ಶಬ್ದದಿಂದಾಗಿ ವ್ಯಾಪಾರಿ ಗೆ ತುಂಬಾ ಕಿರಿಕಿರಿಯಾಗುತ್ತಿತ್ತು. ಡೊಲಿನ ಶಬ್ದದಿಂದ ನಿದ್ರೆ ಬರುತ್ತಿರಲಿಲ್ಲ. ಇದರಿಂದ ಸಿಟ್ಟುಗೊಂಡ ಅವನು ಒಂದು ದಿನ ಸಾಧುವಿನ ಕುಠೀರಕ್ಕೆ ಬಂದು ನಿನ್ನ ರಾಮ ನಾಮ ಭಜನೆಯಿಂದಾಗಿ ನನಗೆ ಬಹಳ ಕಷ್ಟವಾಗುತ್ತಿದೆ. ರಾತ್ರಿ ನಿದ್ರೆ ಬರುತ್ತಿಲ್ಲ. ನಿನಗೆ ಇದನ್ನು ಬಿಟ್ಟು ಮಾಡಲು ಬೇರೆ ಕೆಲಸವಿಲ್ಲವೇ ಎಂದು ಕೇಳಿದನು. ಸಾಧು ಹೇಳಿದ ನೀನು ನನ್ನ ಜೊತೆ ಬಂದು ರಾಮ-ನಾಮಸ್ಮರಣೆ ಮತ್ತು ಭಜನೆ ಮಾಡು ಇದರಲ್ಲಿ ಸಿಗುವ ಆನಂದ ನಿನಗೆ ಏನೆಂದು ಆಗ ತಿಳಿಯುತ್ತದೆ. ವ್ಯಾಪಾರಿ ಹೇಳಿದ, ಹೌದೌದು ನಿನ್ನ ಜೊತೆ ರಾಮ ಭಜನೆ ಮಾಡುತ್ತಾ ಕುಳಿತರೆ ನನ್ನ ಊಟಕ್ಕೆ ಬೇಕಾದ ರೊಟ್ಟಿಯನ್ನು ನಿನ್ನ ರಾಮ ಕೊಡುತ್ತಾನಾ? ಎಂದು ಕೇಳಿದನು. ಅದಕ್ಕೆ ಸಾಧು ಹೇಳಿದ, ನಾನು ಯಾವಾಗಿ ನಿಂದಲೂ ರಾಮನಾಮ ಭಜನೆಯನ್ನು ಮಾಡುತ್ತಲೇ ಬಂದಿದ್ದೇನೆ ಆವಾಗಿನಿಂದಲೂ ಇಂದಿನ ತನಕವು ರಾಮನ ದಯದಿಂದ ಊಟ- ತಿಂಡಿ- ನೀರು ಸೇರಿದಂತೆ ಇಲ್ಲಿ ತನಕವು ಯಾವುದರಲ್ಲೂ ನನಗೆ ಕೊರತೆಯಾಗದೆ ಸಿಗುತ್ತಲೇ ಇದೆ ಇದು ನನ್ನ ರಾಮ-ನಾಮಕ್ಕೆ ಇರುವ ಶಕ್ತಿ ಎಂದನು.
ವ್ಯಾಪಾರಿ ಹೇಳಿದ ಹೌದಾ ಸರಿ ನಿನ್ನ ರಾಮನಾಮದ ಶಕ್ತಿ ಎಷ್ಟು ಎಂದು ನಾನು ನೋಡುತ್ತೇನೆ. ಈ ದಿನ ನಾನು ನಿನ್ನ ಜೊತೆ ರಾಮ ನಾಮ ಸ್ಮರಣೆ, ಭಜನೆ ಮಾಡುತ್ತಲೇ ಕುಳಿತರೆ ನಿನ್ನ ರಾಮ ನನಗೆ ಊಟವನ್ನು ಕೊಡುತ್ತಾನೆ ಯೋ? ಪರೀಕ್ಷಿಸೋಣ ಹಾಗೆ ನಮ್ಮಿಬ್ಬರಲ್ಲಿ ಒಂದು ಪಂಥ ಕಟ್ಟುತ್ತೇನೆ. ಆ ಪ್ರಕಾರ ಇಂದು ನಾನು ಏನು ತಿನ್ನುವುದಿಲ್ಲ. ನಿನ್ನ ಜೊತೆ ಕುಳಿತು ರಾಮ ನಾಮ ಭಜನೆ ಮಾಡುವೆ ನಿನ್ನ ರಾಮ ನನಗೆ ಊಟ ಹೇಗೆ ಕೊಡುತ್ತಾನೆ ನೋಡೇ ಬಿಡುತ್ತೇನೆ. ಊಟ ಕೊಟ್ಟರೆ ಸರಿ ಕೊಡದಿದ್ದರೆ, ಪಂಥದಂತೆ ನೀನು ರಾಮ ಭಜನೆ ಮತ್ತು ಡೋಲು ಬಡಿಯುವುದನ್ನು ನಿಲ್ಲಿಸಬೇಕು. ನನಗೆ ಊಟ ಸಿಕ್ಕರೆ ನಾನು ಇಂದಿನಿಂದಲೇ ನಿನ್ನ ಜೊತೆ ಸೇರಿ ರಾಮ ಭಜನೆ ಮಾಡುವೆ ಎಂದು ಸಾಧುಗೆ ಹೇಳಿದಾಗ ಸಾಧು ಹೇಳಿದ, ಆಯಿತು ನಿಷ್ಕಾಮ ಪ್ರೀತಿ ಮತ್ತು ಶುದ್ಧವಾದ ಮನಸ್ಸಿನಿಂದ ಶ್ರೀರಾಮನನ್ನು ಸ್ಮರಣೆ ಮಾಡಿದರೆ ಅವನು ಎಲ್ಲವನ್ನು ಕೊಡುತ್ತಾನೆ ಎಂದು ದೃಢ ನಿರ್ಧಾರದಲ್ಲಿ ಹೇಳಿದನು. ಆಗಲೇ ವ್ಯಾಪಾರಿ ಸಾಧುವಿನ ಜೊತೆ ಕುಳಿತು ರಾಮನಾಮ ಭಜನೆ ಮಾಡುತ್ತಿದ್ದನು. ಹಾಗೆ ಅವನು ಮನಸ್ಸಿನಲ್ಲಿ ಅಂದುಕೊಂಡ, ಇದು ಹೇಗಾಗುತ್ತೆ ನೋಡುತ್ತೇನೆ ಎಂದು ಈ ದಿನ ಪೂರ್ತಿ ಯಾರೇ ಕೊಟ್ಟರು ನಾನು ಏನನ್ನು ತಿನ್ನುವುದಿಲ್ಲ. ಅದು ಹೇಗೆ ರಾಮ ನನಗೆ ಭೋಜನ ಮಾಡಿಸುತ್ತಾನೆ ನೋಡುವೆ ಎಂದು ಮನದಲ್ಲಿ ನಿರ್ಧರಿಸಿದನು. ಸ್ವಲ್ಪ ಹೊತ್ತಾದ ಮೇಲೆ ಯೋಚಿಸಿದನು ನಾನು ಇಲ್ಲೇ ಕುಳಿತರೆ ನನ್ನ ಹೆಂಡತಿ ಮತ್ತು ತಾಯಿ ಬಂದು ಊಟ ತಿಂಡಿಗೆ ಕರೆಯು ತ್ತಾರೆ ಹೋಗಬೇಕಾಗುತ್ತೆ. ಆದ್ದರಿಂದ ನಾನು ಅವರ್ಯಾರ ಕಣ್ಣಿಗೂ ಬೀಳದಂತೆ ಈಗಲೇ ಇಲ್ಲಿಂದ ಬೇರೆ ಕಡೆ ಹೋಗಬೇಕು ಎಂದು ಸಾಧುಗೆ ಹೇಳಿ ಕಾಡಿನ ಕಡೆ ನಡೆದನು. ಕಾಡು ತಲುಪಿ ಒಂದು ಮರ ಹತ್ತಿ ಕುಳಿತು ಅವನು ತನ್ನ ಜಾಣತನಕ್ಕೆ ಹೆಮ್ಮೆ ಪಟ್ಟುಕೊಂಡ. ಇದೇ ರೀತಿ ದಿನವಿಡೀ ಮರದಲ್ಲೇ ಕುಳಿತಿದ್ದರೆ ನನಗೆ ಯಾರು ಅನ್ನ ನೀರು ಕೊಡುವುದಿಲ್ಲ ಇನ್ನು ‘ರಾಮ’ ಕೊಡಲು ಸಾಧ್ಯವೇ ಇಲ್ಲ ನನ್ನ ಶಪಥ ನೆರವೇರುತ್ತದೆ. ಸಾಧುಗೆ ಡೋಲು ಬಡಿದು ಭಜನೆ ಮಾಡುವುದನ್ನು ನಿಲ್ಲಿಸಲು ಹೇಳಬಹುದು.
ಹೀಗಿರುವಾಗ ಸ್ವಲ್ಪ ಸಮಯಕ್ಕೆ ಅಲ್ಲಿಗೆ ಒಂದಷ್ಟು ಯಾತ್ರಿಕರ ತಂಡ ಬಂದಿತು. ಅವರೆಲ್ಲರೂ ಆ ಮರದ ಕೆಳಗೆ ಕುಳಿತರು. ಮತ್ತು ಅವರಿಗೆಲ್ಲಾ ಹಸಿವಾಗಿತ್ತು. ಎಲ್ಲರೂ ಸೇರಿ ಒಲೆ ಹೂಡಿ ರುಚಿ ರುಚಿ ಯಾದ ಪಾಯಸ, ಪಲ್ಯ, ಚಪಾತಿ ಅನ್ನ ಸಲಾಡ್ ಗಳಂಥ ಖಾದ್ಯಗಳನ್ನು ತಯಾರಿಸಿದರು. ಅವರು ತಯಾರಿಸಿದ ಅಡುಗೆಯ ಪರಿಮಳ ಘಮ ಘಮ ಆಘ್ರಾಣಿಸಿದನು. ಇನ್ನೇನು ಎಲ್ಲರೂ ಊಟಕ್ಕೆ ಕುಳಿತುಕೊಳ್ಳಬೇಕು ಅನ್ನುವ ಹೊತ್ತಿಗೆ ದೂರದಲ್ಲಿ ಕುದುರೆಗಳ ಖರಪುಟದ ಶಬ್ದ ಕೇಳಿತು. ಕಿವಿಗೊಟ್ಟು ಕೇಳಿದಾಗ ಅದು ಡಕಾಯಿತರ ತಂಡ ಎಂದು ಅವರಿಗೆ ಸೂಚನೆ ಸಿಕ್ಕಿತು. ಯಾತ್ರೀಕರ ಮುಖ್ಯಸ್ಥ ಗುಂಪಿನವರಿಗೆ
ಎಲ್ಲರೂ ಕೇಳಿ, ನಾವು ಊಟ ಮಾಡುತ್ತಾ ಕುಳಿತರೆ ಡಕಾಯಿತರು ಬರುತ್ತಾರೆ
ನಮ್ಮನ್ನು ಕೊಂದುಬಿಡುತ್ತಾರೆ. ಇಲ್ಲಿಂದ ಮೊದಲು ಜಾಗ ಖಾಲಿ ಮಾಡೋಣ ಮುಂದೆ ಎಲ್ಲಾದರೂ ಹಣ್ಣು ಹಂಪಲು ತಿಂದರಾಯಿತು ಎಂದು ಅವರೆಲ್ಲ ಮಾಡಿದ ಅಡುಗೆಯನ್ನು ಅಲ್ಲಲ್ಲಿ ಬಿಟ್ಟು ಹೆದರಿ ಅವಸರವಸರವಾಗಿ ಓಡುತ್ತಲೇ ಹೊರಟ ಅವರು ಕ್ಷಣದಲ್ಲಿ ಕಣ್ಮರೆಯಾದರು.
ಯಾತ್ರೀಕರು ಮಾತಾಡಿಕೊಂಡಂತೆ ಸ್ವಲ್ಪ ಸಮಯಕ್ಕೆ ಡಕಾಯಿತರ ತಂಡ ಬಂದಿತು ನೋಡಲು ಬಹಳ ಕ್ರೂರಿಗಳಾಗಿದ್ದರು. ಅವರೆಲ್ಲ ಅಲ್ಲಿ ಇಲ್ಲಿ ನೋಡುತ್ತಾ ಅಡಿಗೆ ತಯಾರಿಸಿದ್ದ ಜಾಗಕ್ಕೆ ಬಂದರು ಘಮ-ಘಮ ಅಡುಗೆ ಹೊಟ್ಟೆ ತುಂಬಾ ಎಲ್ಲರೂ ಊಟ ಮಾಡೋಣ ಎಂದುಕೊಂಡರು. ಕ್ಷಣ ಯೋಚಿಸಿದ ಕಳ್ಳರ ನಾಯಕ ಹೇಳಿದ, ಎಲ್ಲರೂ ನಿಲ್ಲಿ ನಾವು ಈ ರೀತಿ ತಯಾರಿಸಿಟ್ಟ ಆಹಾರ ತಿನ್ನಬಾರದು ನಮ್ಮನ್ನು ಕೊಲ್ಲಲಿಕ್ಕೆ ಇಂಥ ಅಡುಗೆ ಯಾರೊ ಶತ್ರುಗಳು ಮಾಡಿಟ್ಟಿದ್ದಾರೆ ಎಂದು ಚರ್ಚಿಸಿದರು.
ಸ್ವಲ್ಪ ಹೊತ್ತಿಗೆ ಒಬ್ಬ ಕಳ್ಳ ಅಕಸ್ಮಾತ್ ತಲೆಯೆತ್ತಿ ನೋಡಿದಾಗ ಮರದ ಮೇಲಿದ್ದ ವ್ಯಾಪಾರಿ ಕಣ್ಣಿಗೆ ಬಿದ್ದನು. ಅವನನ್ನು ಜೋರು ಮಾಡಿ ಕೆಳಗೆ ಇಳಿಸಿದರು, ನಮ್ಮನ್ನು ಕೊಲ್ಲಲು ಇವನೇ ನಮಗಾಗಿ ಅಡಿಗೆ ಮಾಡಿ ಚಹಾ ಕೆ ಇಟ್ಟಿದ್ದಾನೆ ಎಂದುಕೊಂಡರು. ವ್ಯಾಪಾರಿಯನ್ನು ನೋಡುತ್ತಾ ಓಹೋ ನೀನಾ ನಮಗೆಲ್ಲಾ ವಿಷದ ಅಡುಗೆ ಊಟ ಮಾಡಿಸಿ ಸಾಯಿಸಲೆಂದು ಮಾಡಿದ್ದೀಯಾ ಕೇಳಿದಾಗ ಆತ ಇಲ್ಲ ಇಲ್ಲ ನಾನು ಅಡುಗೆ ಯನ್ನೇ ಮಾಡಿಲ್ಲ ಉಪವಾಸದ ವ್ರತವನ್ನು ಮಾಡುತ್ತಿದ್ದೇನೆ, ಸ್ವಲ್ಪ ಸಮಯದ ಹಿಂದೆ ಯಾತ್ರೀಕರ ತಂಡ ಬಂದಿದ್ದು ಅವರು ಭೋಜನಕ್ಕಾಗಿ ಮಾಡಿ ಕೊಂಡರು. ಹಾಗೆ ಅವಸರವಾಗಿ ಹೊರಟು ಹೋದರು ನಿಮ್ಮ ಅದೃಷ್ಟ ಚೆನ್ನಾಗಿತ್ತು ನಿಮಗೆ ಈ ಸ್ವಾದಿಷ್ಟವಾದ ಭೋಜನ ಸಿಕ್ಕಿತು ಅಷ್ಟೇ ಎಂದು ಎಷ್ಟು ಹೇಳಿದರು ಕೇಳದೆ, ನಮಗೆ ಈ ಸುಳ್ಳು ಅಂತೆ ಕಂತೆ ಕಥೆಗಳನ್ನೆಲ್ಲ ಹೇಳಬೇಡ ಮೊದಲು ನೀನು ಇದನ್ನು ಊಟ ಮಾಡಲೇಬೇಕು ಆಮೇಲೆ ನಾವು ಊಟ ಮಾಡುತ್ತೇವೆ ಎಂದರು ಅವರ ಹೆದರಿಕೆಯಿಂದ ಊಟ ಮಾಡಿದನು. ಅವನಿಗೆ ಏನೂ ಆಗದಿರುವುದನ್ನು ನೋಡಿ ಕಳ್ಳರೆಲ್ಲ ಊಟ ಮಾಡಿಕೊಂಡು ಮುಂದೆ ನಡೆ ದರು. ಆಗ ವ್ಯಾಪಾರಿ ಅಂದುಕೊಂಡ ಆಹಾ ರಾಮ ನಿನ್ನ ಮಹಿಮೆ ಎಂತಹದು ನಾನು ಈ ದಿನ ಏನೂ ತಿನ್ನುವುದಿಲ್ಲ ಅದು ಹೇಗೆ ಊಟ ಮಾಡಿಸುತ್ತಿಯಾ? ನೋಡೋಣ ಎಂದು ನಿನ್ನ ಜೊತೆ ಪಣ ತೊಟ್ಟಿದ್ದರೆ ಈ ಕಾಡಿನ ಮಧ್ಯದಲ್ಲೂ ಭೋಜನ ಮಾಡಿಸಿದೆಯಲ್ಲ ನಿನ್ನ ಮಹಿಮೆ ಅಪಾರ ಎಂದು ರಾಮನಿಗೆ ಮನದಲ್ಲೇ ಕೈ ಮುಗಿದನು.
ಈ ಘಟನೆಯಿಂದಾಗಿ ವ್ಯಾಪಾರಿಯ ಮನಸ್ಸು ಪರಿವರ್ತನೆಯಾಯಿತು. ಸಾಧುವಿಗೆ ಕೃತಜ್ಞತೆ ಹೇಳಲು ಕಾಡಿನಿಂದ ಓಡಿ ಕುಠೀರಕ್ಕೆ ಬಂದನು. ಸಾಧುಗಳಿಗೆ ನಮಸ್ಕರಿಸಿ, ಸ್ವಾಮಿ ತಾವು ಮಾಡುವ ರಾಮ ಭಜನೆ ರಾಮ ನಾಮ ಸ್ಮರಣೆಗಳಿಂದ ಕಲ್ಪನೆಗೂ ಮೀರಿದ ಅದ್ಭುತಗಳು ನಡೆಯುತ್ತದೆ ಎಂದು ‘ತಾನು ಕಾಡಿಗೆ ಹೋದಾಗಿನಿಂದ ನಡೆದ ಸಂಗತಿಯನ್ನೆಲ್ಲ ಸಾಧುಗಳಿಗೆ ಹೇಳಿದನು. ಹಾಗೂ ಈ ಮೊದಲು ತಾನು ಕೋಪದಿಂದ ಸಾಧುವಿಗೆ ನಿಂದಿಸಿದ್ದನ್ನು ಕ್ಷಮಿಸಬೇಕೆಂದು ಅವರ ಕಾಲಿಗೆ ನಮಸ್ಕರಿಸಿ ಬೇಡಿದನು. ನಿಮ್ಮ ಜೊತೆ ಪಂಥ ಕಟ್ಟಿದಂತೆ ಈ ಕ್ಷಣದಿಂದಲೇ ನಿಮ್ಮ ಶಿಷ್ಯನಾಗಿ ನಿಮ್ಮ ಜೊತೆ ರಾಮನಾಮ ಸ್ಮರಣೆ ಮತ್ತು ಭಜನೆಯಲ್ಲಿ ಪ್ರತಿನಿತ್ಯವೂ ಪಾಲ್ಗೊಳ್ಳು ತ್ತೇನೆ ಎಂದು ಹೇಳಿ, ನಾನು ಸಹ ಇಂದಿನಿಂದ ಶ್ರೀರಾಮನನ್ನು ನಂಬಿದ್ದೇನೆ ಇನ್ನು ಮುಂದೆ ನೀವು ತೋರಿಸಿದ ಮಾರ್ಗದಲ್ಲಿ ನಡೆಯುತ್ತೇನೆ ಎಂದು ಸಾಧುಗಳಿಂದ ಆಶೀರ್ವಾದ ಪಡೆದನು.
ಮನುಷ್ಯ ಮಾತ್ರರಿರಲಿ, ಸ್ವತಃ ಆಂಜನೇಯನೇ ರಾಮನಿ ಗಿಂತ ರಾಮನ,
‘ನಾಮ ಬಲ’ ವೆ ಹೆಚ್ಚು ಎಂದು ತೋರಿಸಿದ ಉದಾಹರಣೆಯೊಂದಿದೆ. ಹೀಗಿರುವಾಗ ರಾಮ ನಾಮ ಸಮನಾದ ಬೇರೆ ಯಾವ ಪೂಜೆ- ವ್ರತ- ಹೋಮ- ಹವನ ಯಾವುದು ಇಲ್ಲ ಎನ್ನುವುದಕ್ಕೆ ಆಂಜನೇಯನೇ ಉದಾಹರಣೆ. ಒಮ್ಮೆ ವಿಶ್ವಾಮಿತ್ರರು ರಾಮನ ಸಭೆಗೆ ಬಂದರು. ಆಗ ಅಲ್ಲಿದ್ದ ನಾರದರು ಹನುಮಂತನಿಗೆ ಹೀಗೆ ಹೇಳಿದರು ವಿಶ್ವಾಮಿತ್ರರು ಹುಟ್ಟಿನಿಂದ ಋಷಿಗಳಾಗಿಲ್ಲ ಆದ್ದರಿಂದ ಅವರನ್ನು ಹೊರತುಪಡಿಸಿ ಉಳಿದವರಿಗೆಲ್ಲ ನಮಸ್ಕಾರ ಮಾಡು ಎಂದರು. ಹನುಮಂತ ನಾರದರು ಹೇಳಿದಂತೆ ಮಾಡಿದ ಇದರಿಂದ ವಿಶ್ವಾಮಿತ್ರ ರಿಗೆ ಮತ್ತು ಅಲ್ಲಿದ್ದ ಉಳಿದ ಋಷಿ ಮುನಿಗಳಿಗೆಲ್ಲ ಕೋಪ ಬಂದು, ರಾಮನಿಗೆ ಈ ರೀತಿ ಹೇಳಿದರು. ಹನುಮಂತ ಮಾಡಿದ ಅವನ ಈ ತಪ್ಪಿಗೆ ನೀನು ಅವನಿಗೆ ಮರಣ ದಂಡನೆ ಶಿಕ್ಷೆ ಕೊಡಬೇಕು ಎಂದು ಕೊಡಬೇಕು ಎಂದು ಆಜ್ಞಾಪಿಸಿದರು. ರಾಮನ ಪರಿಸ್ಥಿತಿ ಇಕ್ಕಟ್ಟಿಗೆ ಸಿಕ್ಕಿತು. ರಾಮನಿಗೆ ವಿಶ್ವಾಮಿತ್ರರು ಗುರುಗಳು. ಹನುಮಂತ ತನ್ನ ಪ್ರಿಯ ಭಕ್ತ ಆದರೂ ಗುರುವಾಕ್ಯದಂತೆ ರಾಮನು ಹನುಮಂತನ ಮೇಲೆ ಬಾಣ ಬಿಡಲು ತಯಾರಾದನು. ಹನುಮಂತನು ಮೊಣಕಾಲೂರಿ ಕಣ್ಣು ಮುಚ್ಚಿ ಕೈಮುಗಿದು ರಾಮ ನಾಮ ಜಪ ಮಾಡುತ್ತಾ ಕುಳಿತನು. ರಾಮನು ಬಾಣ ಹೂಡಿದನು. ಹನುಮಂತನಿಗೆ ಗುರಿ ಇಟ್ಟು ಹೊಡೆದನು ಆದರೆ ರಾಮ ನಾಮಸ್ಮರಣೆ ಮಾಡುತ್ತಿದ್ದ ಹನುಮಂತನಿಗೆ ರಾಮ ಬಿಟ್ಟ ಬಾಣಗಳಿಂದ ಏನೂ ಮಾಡಲಾಗಲಿಲ್ಲ.
ಈಗ ರಾಮನು ತನ್ನ ಅತ್ಯಂತ ಶಕ್ತಿಶಾಲಿಯಾದ ಬ್ರಹ್ಮಾಸ್ತ್ರವನ್ನೇ ಬಿಟ್ಟನು ಆದರೆ ಬ್ರಹ್ಮಾಸ್ತ್ರವು ಹನುಮಂತನಿಗೆ ಏನು ಮಾಡಲಾಗಲಿಲ್ಲ. ಹನುಮಂತ ನು ಕಣ್ಣು ಮುಚ್ಚಿ ಶುದ್ಧವಾದ ಮನಸ್ಸಿನಿಂದ ರಾಮ ನಾಮಸ್ಮರಣೆ ಮಾಡುತ್ತಾ ಇದ್ದನು.ಈಗ ನಾರದರಿಗೆ ತಮ್ಮ ತಪ್ಪಿನ ಅರಿವಾಗಿ ರಾಮನಲ್ಲಿ ಮತ್ತು ವಿಶ್ವಾ ಮಿತ್ರರಲ್ಲಿ ಕ್ಷಮೆ ಕೇಳಿದರು. ರಾಮನಿಗಿಂತ ರಾಮ ನಾಮದ ಶಕ್ತಿಯೇ ಹೆಚ್ಚು ಎಂಬುದು ನಾರದರಿಗೆ ಅರಿವಾಯಿತು.
ಕೂಜಂತಂ ರಾಮರಾಮೇತಿ ಮಧುರಂ ಮಧುರಾಕ್ಷರಂ!
ಆರೋಹ್ಯ ಕವಿತಾ ಶಾಖಾಂ ವಂದೇ ವಾಲ್ಮೀಕಿ ಕೋಕಿಲಂ !
ಅಂಜನಾ ನಂದನಂ ವೀರಂ ಜಾನಕಿ ಶೋಕ ನಾಶನಂ !
ಕಪೀಶಮಕ್ಷ ಹಂತಾರಂ ವಂದೇ ಲಂಕಾ ಭಯಂಕರಂ !!
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇದಸೇ
ರಘುನಾಥಾಯ ನಾಥಾಯ ಸೀತಾಯ ಪತಯೇ ನಮಃ!!