ಅಲ್ಲಮಪ್ರಭು ೧೨ನೆಯ ಶತಮಾನದ ವಚನಕಾರರಲ್ಲಿ ಪ್ರಸಿದ್ಧನಾದವರು. ಅಲ್ಲಮನ ವಚನಚಂದ್ರಿಕೆಯಲ್ಲಿ 1600+ ವಚನಗಳು ಲಭ್ಯವಾಗಿವೆ. ಅಲ್ಲಮಪ್ರಭುವಿನ ವಚನಗಳ ಅಂಕಿತ ‘ಗುಹೇಶ್ವರ’ ಅಥವಾ ‘ಗೊಹೇಶ್ವರ’. ಶಿವಮೊಗ್ಗೆ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯಲ್ಲಿ ನೀರಹಂಕರ ಮತ್ತು ಸುಜ್ಞಾನಿಗೆ ಜನಿಸಿದರು.
ಅಲ್ಲಮಪ್ರಭು ೧೨ನೆಯ ಶತಮಾನದ ವಚನಕಾರರಲ್ಲಿ ಪ್ರಸಿದ್ಧನಾದವರು. ಅತ್ಯಂತ ನೇರ ನಿಷ್ಠುರವಾದಿ. ಅನೇಕ ಶಿವಶರಣ, ಶಿವಶರಣೆಯರಿಗೆ ಭಕ್ತಿ-ವೈರಾಗ್ಯವನ್ನು ಬೋಧಿಸಿದರು. ತನ್ನ ವಚನಗಳ ಮೂಲಕ ಅಂತರಂಗ, ಬಹಿರಂಗಗಳನ್ನು ಶೋಧಿಸಲೆತ್ನಿಸಿದರು. ೧೨ನೆಯ ಶತಮಾನದ ಶಿವಶರಣರಲ್ಲಿ ಅಲ್ಲಮಪ್ರಭು ಉಚ್ಚಸ್ಥಾನದಲ್ಲಿದ್ದರು.
ಅಲ್ಲಮ ಪ್ರಭು ಸ್ವಯಂ (ಆತ್ಮ) ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡರು ಮತ್ತು ಜನರು ತಮ್ಮ ಆತ್ಮಗಳಲ್ಲಿ ಆಧ್ಯಾತ್ಮಿಕ ಶಕ್ತಿಯನ್ನು ತುಂಬಲು ಮತ್ತು ಅವರ ಆತ್ಮಗಳಲ್ಲಿ ಭಗವಂತನ ವಾಸಸ್ಥಾನವನ್ನು ಅನುಭವಿಸಲು ಒತ್ತಾಯಿಸಿದರು. ಅವರು ದೇವಾಲಯದ ಕಲಾವಿದರ ಕುಟುಂಬದಲ್ಲಿ ಜನಿಸಿದ ಕಾರಣ ದೇವಸ್ಥಾನವೊಂದರಲ್ಲಿ ಉದ್ಯೋಗದಲ್ಲಿದ್ದರು.
ಅವರ ತಂದೆ ನೃತ್ಯ ಶಿಕ್ಷಕರಾಗಿದ್ದಾಗ, ಕವಿ ಮದ್ದಳೆ ನುಡಿಸುವುದರಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು. ದೇವಸ್ಥಾನದಲ್ಲಿ ಅವರ ಒಂದು ಪ್ರದರ್ಶನದ ಸಮಯದಲ್ಲಿ, ಅವರು ದೇವಾಲಯದ ನರ್ತಕಿ ಕಮಲತೇ ಅವರನ್ನು ಪ್ರೀತಿಸಿ ಮದುವೆಯಾದರು.
ದುರದೃಷ್ಟವಶಾತ್, ಅವಳು ಮಾರಣಾಂತಿಕ ಕಾಯಿಲೆಯಿಂದ ಸಾವನ್ನಪ್ಪಿದಳು. ಪತ್ನಿಯ ನಿಧನದ ನಂತರ ಅಲ್ಲಮಪ್ರಭುವಿನ ಬದುಕು ಸಂಪೂರ್ಣ ಬದಲಾಯಿತು. ಅವರು ಗುಹಾ ದೇವಾಲಯಕ್ಕೆ ಹೋದರು, ಅಲ್ಲಿ ತಮ್ಮ ಗುರುಗಳಾದ ಅನಿಮಿಸಯ್ಯ ಸಂತರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದ ನಂತರ ಸಂತರಾದರು. ಬಸವಣ್ಣನ ಕಲ್ಯಾಣಕ್ಕೆ ಬಂದ ಅಲ್ಲಮಪ್ರಭು ಅಲ್ಲಿ ಅನುಭವಮಂಟಪದ ಶೂನ್ಯಸಿಂಹಾಸನದ ಅಧ್ಯಕ್ಷನಾಗುತ್ತಾನೆ. ಅಲ್ಲಮನ ವಚನಚಂದ್ರಿಕೆಯಲ್ಲಿ 1600+ ವಚನಗಳು ಲಭ್ಯವಾಗಿವೆ.
ಅಲ್ಲಮಪ್ರಭು ತನ್ನ ಕೊನೆಯ ದಿನಗಳಲ್ಲಿ ಶ್ರೀಶೈಲಕ್ಕೆ ಹೋಗಿ ಅಲ್ಲಿಯ ವನದಲ್ಲಿ ಶಿವೈಕ್ಯನಾದನೆಂದು ಪ್ರತೀತಿ. ಬಸವಣ್ಣನವರ ಸಮಕಾಲೀನನಾದ ಅಲ್ಲಮಪ್ರಭುವಿನ ವಚನಗಳ ಅಂಕಿತ ‘ಗುಹೇಶ್ವರ’ ಅಥವಾ ‘ಗೊಹೇಶ್ವರ’. ಈತನ ವಚನಗಳಲ್ಲಿ ಗಹನವಾದ ಆಧ್ಯಾತ್ಮ ಹಾಗೂ ತಾತ್ವಿಕ ವಿಚಾರಗಳಿವೆ. ಅಲ್ಲಮನ ಆಧ್ಯಾತ್ಮಿಕ ಅನುಭವಗಳ ಅಸಾಮಾನ್ಯತೆಯಿಂದ ಅವನ ವಚನಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಅವನದು ಬಹುಮಟ್ಟಿಗೆ ರೂಪಕ ಭಾಷೆ. ಈ ಭಾಷೆ ಅವನ ವೈಶಿಷ್ಟ್ಯವೂ ಹೌದು.
ಶಿವಮೊಗ್ಗೆ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯಲ್ಲಿ ನೀರಹಂಕರ ಮತ್ತು ಸುಜ್ಞಾನಿಗೆ ಜನಿಸಿದರು. ಇದೇ ಬಳ್ಳಿಗಾವೆಯ ಹತ್ತಿರವಿರುವ ಕೋಡಿಮಠ ಕಾಳಾಮುಖ ಶೈವರ ಪ್ರಮುಖ ಕೇಂದ್ರ. ಚಾಮರಸನು ಅಲ್ಲಮಪ್ರಭುದೇವನನ್ನು ಈ ಲೋಕದ ಮಾನವ ಚೇತನವೆಂದು ಒಪ್ಪಿಕೊಳ್ಳುವುದೇ ಇಲ್ಲ. ಅವನು ಕೈಲಾಸದಿಂದ ಬಂದ ಶಿವನ ಚಿತ್ಕಳೆ, ಎಂದೇ ಚಿತ್ರಿಸುತ್ತಾನೆ. ಅಲ್ಲಮನ ಬಗ್ಗೆ ಹದಿಮೂರನೇ ಶತಮಾನದ ಹರಿಹರಮಹಾಕವಿಯು ಒಂದು ಸಹಜ ಚಿತ್ರಣವನ್ನು ಕೊಡುವಲ್ಲಿ ಹರಿಹರನಂತಹ ವಾಸ್ತವವಾದಿ ಕವಿ ಸಹ ಸೋಲುತ್ತಾನೆ.
ವಚನ 0001
ಅಂಗ ಅಂಗನೆಯ ರೂಪಲ್ಲದೆ,
ಮನ ವಸ್ತುಭಾವದಲ್ಲಿ ಬೆಚ್ಚಂತಿಪ್ಪುದು.
ಬಂದ ಕಥನದಲ್ಲಿ ಬಂದು ಹಿಂಗಿದೆಯಲ್ಲಾ ಅಕ್ಕಾ !
ಗುಹೇಶ್ವರಲಿಂಗದಲ್ಲಿ ಉಭಯನಾಮವಳಿದೆ ಎನ್ನಕಾ
ವಚನ 0002
ಅಂಗ ಅನಂಗವೆಂಬೆರಡೂ ಅಳಿದು ನಿಜದಲ್ಲಿ ನಿಂದ ಲಿಂಗೈಕ್ಯನ
ಅಂಗದಲುಳ್ಳ ಕ್ರೀಗಳೆಲ್ಲವೂ ಲಿಂಗಕ್ರೀಗಳು ನೋಡಾ.
ಮನೋಲಯವಾಗಿಪ್ಪ ಲಿಂಗೈಕ್ಯನ ಅನುಭಾವವೆಲ್ಲವೂ
ಜ್ಞಾನನಷ್ಟ ಶಬ್ದ ನೋಡಾ. ಳ
ತನ್ನಲ್ಲಿ ತಾನು ತದ್ಗತವಾಗಿಪ್ಪ ಶಿವಯೋಗಿಗೆ
ಬಿನ್ನವಿಲ್ಲ ನೋಡಾ- ಗುಹೇಶ್ವರ ಸಾಕ್ಷಿಯಾಗಿ
ವಚನ 0003
ಅಂಗ ಉಳ್ಳನ್ನಬರ ಲಿಂಗಪೂಜೆಯ ಬೇಕು.
ಲಿಂಗವೆಂಬ ಮೂರ್ತಿ ಉಳ್ಳನ್ನಬರ ಸಂದಿಲ್ಲದೆ ಅರ್ಪಿಸಬೇಕು.
ಅಂಗವಳಿದ ಮತ್ತೆ ಲಿಂಗವೆಂಬ ಭಾವ ಹಿಂಗದಿರಬೇಕು.
ಅದು ಗುಹೇಶ್ವರಲಿಂಗದ ಇರವು ಚಂದಯ್ಯಾ.
ವಚನ 0004
ಅಂಗ ಮೂವತ್ತಾರರ ಮೇಲೆ ಲಿಂಗ.
ನಿಸ್ಸಂಗವೆಂಬ ಕರದಲ್ಲಿ ಹಿಡಿದು ಅಂಗವಿಸಿ,
ಅಹುದು ಆಗದು ಎಂಬ ನಿಸ್ಸಂಗದ ಅರ್ಪಣವ ಮಾಡಿ
ಸುಸಂಗ ಪ್ರಸಾದವ ಕೊಳಬಲ್ಲವಂಗೆ
ಗುಹೇಶ್ವರಾ, ಮುಂದೆ ಬಯಲು ಬಯಲು ಬಟ್ಟ ಬಯಲು !
ವಚನ 0005
ಅಂಗ ಲಿಂಗದಲ್ಲಿ ತರಹರವಾಗಿ, ಸಮತೆ ಶಾಂತಿಯಲ್ಲಿ ತರಹರವಾಗಿ,
ಮನ ಜ್ಞಾನದಲ್ಲಿ ತರಹರವಾಗಿ, ಭಾವ ನಿರ್ಭಾವದಲ್ಲಿ ತರಹರವಾಗಿ ಇರಬಲ್ಲಡೆ,
ಆತನೆ ಅಚ್ಚಶರಣನು ಕಾಣಾ ಗುಹೇಶ್ವರಾ.
ವಚನ 0006
ಅಂಗಕ್ಕೆ ಆಚಾರವಾಗಿ ಕಳೆಗಳುಳ್ಳನ್ನಕ್ಕ
ಸಕಲ ಪದಾರ್ಥವ ಲಿಂಗಕ್ಕೆ ಕೊಟ್ಟಲ್ಲದೆ ಕೊಳಲಾಗದು.
ಲಿಂಗವ ಬಿಟ್ಟು ಕಳೆ ಹಿಂಗಿದ ಬಳಿಕ ಅಂಗವೇನು ಬಲ್ಲುದೊ ?
ಕಪ್ಪಡಿಯ ಸಂಗಮನಾಥನಲ್ಲಿ ಐಕ್ಯವಾದಂದಿಂಗೆ ನಿಜವ ಮರೆ.
ಗುಹೇಶ್ವರಲಿಂಗ ಸಾಕ್ಷಿಯಾಗಿ,
ಸಂಗನಬಸವಣ್ಣಾ ಅರ್ಪಿತವಿಲ್ಲದೆ ಕೊಳದಿರು ಅನರ್ಪಿತವ.
ವಚನ 0007
ಅಂಗಕ್ಕೆಂದಡೆ ಹಿರಿಯ ಹರಿವಾಣವ ತುಂಬಿ ಬೋನವ ತಾ ಎಂಬರು.
ಲಿಂಗಕ್ಕೆಂದಡೆ ಚಿಕ್ಕ ಗಿಣ್ಣಿಲು ತುಂಬಿ ಬೋನವ ತಾ ಎಂಬರು.
ಅಂಗವ ಹಿರಿದು ಮಾಡಿ ಲಿಂಗವ ಕಿರಿದು ಮಾಡಿ
ಮನೆಯಲ್ಲಿ ಮಡಕೆ ತುಂಬಿ ಬೋನವ ಮಾಡಿ,
ಚಿಕ್ಕ ಕುಡಿಕೆ ಗಿಣ್ಣಿಲು ಲಿಂಗಕ್ಕೆ ಬೋನವ ಹಿಡಿವ
ಈ ಮಡಕೆಮಾರಿಗಳನೇನೆಂಬೆ ಗುಹೇಶ್ವರಾ.
ವಚನ 0008
ಅಂಗಜಂಗುಳಿಗಳೆಲ್ಲಾ ಅಶನಕ್ಕೆ ನೆರೆದರು.
ಲಿಂಗದ ಹವಣನಿವರೆತ್ತ ಬಲ್ಲರು ?
ಕಾಯಜೀವಿಗಳು ಕಳವಳಧಾರಿಗಳು,
ದೇವರ ಸುದ್ದಿಯನಿವರೆತ್ತ ಬಲ್ಲರು ?
ಮದ್ಯಪಾನವನುಂಡು ಮದವೆದ್ದ ಜೋಗಿಯಂತೆ ನುಡಿವರು.
ಗುಹೇಶ್ವರನ ನಿಲವನಿವರೆತ್ತ ಬಲ್ಲರು.
ವಚನ 0009
ಅಂಗಜೀವಿಗಳೆಲ್ಲಾ ಅಶನಕ್ಕೆ ನೆರೆದು, ಲಿಂಗವಾರ್ತೆಯ ನುಡಿವರಯ್ಯಾ.
ಕಾಯಜೀವಿಗಳೆಲ್ಲಾ ಕಳವಳಿಸಿ ನುಡಿವರಯ್ಯಾ.
ಮನಬಂದ ಪರಿಯಲ್ಲಿ ನುಡಿವಿರಿ,
ಗುಹೇಶ್ವರಲಿಂಗ ನಿಮಗೆಲ್ಲಿಯದೊ ?
ವಚನ 0010
ಅಂಗದ ಕಳೆ ಲಿಂಗದಲ್ಲಿ ಅರತ ಬಳಿಕ,
ಅಂಗವೆಂಬ ಶಂಕೆಯಿಲ್ಲ ನೋಡಾ ಶರಣಂಗೆ.
ಪ್ರಾಣದ ಕಳೆ ಅರಿವಿನಲ್ಲಿ ಅರತ ಬಳಿಕ,
ಶಬ್ದಸಂದಣಿಗೆ ಹಂಗಿಲ್ಲ ನೋಡಾ.
ಶರಣ ನಡೆದಡೆ ನಿರ್ಗಮನಿ ನುಡಿದಡೆ ನಿಶ್ಶಬ್ದಿ !
ಗುಹೇಶ್ವರನ ಶರಣಂಗೆ ಕುರುಹಿಲ್ಲ ಕೇಳಾ ಎಲೆ ಅವ್ವಾ.
ವಚನ 0011
ಅಂಗದ ಕಳೆಯಲೊಂದು ಲಿಂಗವ ಕಂಡೆ.
ಲಿಂಗದ ಕಳೆಯಲೊಂದು ಅಂಗವ ಕಂಡೆ.
ಅಂಗ ಲಿಂಗ[ದ]ಸಂದಣಿಯನರಸಿ ಕಂಡೆ, ನೋಡಿರೆ.
ಇಲ್ಲಿಯೆ ಇದಾನೆ ಶಿವನು ! ಬಲ್ಲಡೆ ಇರಿಸಿಕೊಳ್ಳಿರೆ;
ಕಾಯವಳಿಯದ ಮುನ್ನ ನೋಡಬಲ್ಲಡೆ.
ಗುಹೇಶ್ವರಲಿಂಗಕ್ಕೆ ಬೇರೆಠಾವುಂಟೆ ಹೇಳಿರೆ ?
ವಚನ 0012
ಅಂಗದ ಕೈಯಲ್ಲಿ ಲಿಂಗ, ಮನದ ಕೈಯಲ್ಲಿ ಸಂಸಾರ,
ಎಂತಯ್ಯಾ ನಿನ್ನ ಪ್ರಾಣಲಿಂಗವೆಂಬೆ ?
ಹೊರಗೆ ಕುರುಹಾಗಿ ತೋರುತ್ತಿದೆ.
ತನುವಿಗೆ ತನು ಸಯವಾಗದು ಮನಕ್ಕೆ ಮನ ಸಯವಾಗದು
ಎಂತಯ್ಯಾ ನಿನ್ನ ಪ್ರಾಣಲಿಂಗವೆಂಬೆ ಗುಹೇಶ್ವರಾ.
ವಚನ 0013
ಅಂಗದ ಕೊನೆಯ ಮೇಲಣ ಕೋಡಗ ಕೊಂಬಿಗೆ ಹಾರಿತ್ತು,
ಅಯ್ಯಾ ಇದು ಸೋಜಿಗ !-
ಕಯ್ಯ ನೀಡಲು ಮೈಯೆಲ್ಲವನು ನುಂಗಿತ್ತು
ಒಯ್ಯನೆ ಕರೆದಡೆ ಮುಂದೆ ನಿಂತಿತ್ತು
ಮುಯ್ಯಾಂತಡೆ ಬಯಲಾಯಿತ್ತು-ಗುಹೇಶ್ವರಾ !
ವಚನ 0014
ಅಂಗದ ಧರೆಯ ಮೇಲೆ ಮೂರು ಬಾವಿಯುಂಟು:
ಮೊದಲ ಬಾವಿಯ ಮುಟ್ಟಿದಾತ ಅಂಗಸಂಗಿಯಾದನು.
ನಡುವಡ ಬಾವಿಯ ಮುಟ್ಟಿದಾತ ಉತ್ಪತ್ಯ-ಸ್ಥಿತಿ-ಲಯಕ್ಕೊಳಗಾದನು.
ಮೇಲಣ ಬಾವಿಯ ಮುಟ್ಟಿದಾತ ಜೀವನ್ಮುಕ್ತನಾದನು.-
ಇವ ತಟ್ಟದೆ ಮುಟ್ಟದೆ ಹೋದರು ನೋಡಾ, ಪರಬ್ರಹ್ಮವ ದಾಂಟಿ,
ಗುಹೇಶ್ವರಲಿಂಗದಲ್ಲಿ ಹಂಗು ಹರಿದ ಶರಣರು
ವಚನ 0015
ಅಂಗದ ಮೇಲಣ ಲಿಂಗವ ಹಿಂಗಿ ಸ್ಥಾವರಲಿಂಗಕ್ಕೆರಗುವ
ಭಂಗಿತರ ಮುಖವ ನೋಡಲಾಗದು.
ಅದೆಂತೆಂದಡೆ;
ತನ್ನ ಗಂಡನ ಬಿಟ್ಟು ಅನ್ಯ ಗಂಡರಿಗೆರಗುವ
ಹಾದರಗಿತ್ತಿಯಂತೆ ಅವಂದಿರ ಭಕ್ತಿ.
ಅಂತಪ್ಪ ಪಂಚಮಹಾಪಾತಕರ
ಮುಖದತ್ತ ತೋರದಿರಾ ಗುಹೇಶ್ವರಾ
ವಚನ 0016
ಅಂಗದ ಮೇಲಣ ಲಿಂಗವ ಹಿಂಗಿದಾತನ ಭವಿಯೆಂಬರು,
ಅಂಗದ ಮೇಲಣ ಲಿಂಗವು ಇಪ್ಪಾತನ ಭಕ್ತನೆಂಬರು,
ಅಂಗದೊಳಗೆ ಬೆರಸಿಪ್ಪ ಲಿಂಗದ ಹೊಲಬನರಿಯದೆ.
ಲಿಂಗವಿಲ್ಲದೆ ಒಂದು ಕ್ಷಣ ಒಂದಂಗ ಸುಳಿದುದುಂಟೆ ಜಗದೊಳಗೆ ?
ಅಂಗದೊಳಗಣ ಲಿಂಗವನು ಹಿಂಗಿದವರಿಗೆ
ಭವಮಾಲೆಯುಂಟು,
ಹಿಂಗದವರಿಗೆ ಭವಮಾಲೆಯಿಲ್ಲ ಗುಹೇಶ್ವರಾ.
ವಚನ 0017
ಅಂಗದ ಮೇಲೆ ಲಿಂಗ, ಲಿಂಗದ ಮೇಲೆ ಅಂಗವಿದೇನೊ ?
ಮನದ ಮೇಲೆ ಅರಿವು, ಅರಿವಿನ ಮೇಲೆ ಕುರುಹು ಇದೇನೊ ?
ನೀನೆಂಬಲ್ಲಿ ನಾನು, ನಾನೆಂಬಲ್ಲಿ ನೀನು.
ನೀ’ನಾ’ ಎಂಬುದೆ?-ತೆರಹಿಲ್ಲ ಗುಹೇಶ್ವರಾ.
ವಚನ 0018
ಅಂಗದ ಮೇಲೆ ಲಿಂಗವರತು, ಲಿಂಗದ ಮೇಲೆ ಅಂಗವರತು
ಭಾವತುಂಬಿ ಪರಿಣಾಮವರತು,
ನಾಮವಿಲ್ಲದ ದೇವರಿಗೆ ನೇಮವೆಲ್ಲಿಯದೊ ಗುಹೇಶ್ವರಾ.
ವಚನ 0019
ಅಂಗದ ಮೇಲೆ ಲಿಂಗಸಂಬಂಧವಾದ ಬಳಿಕ,
ಪ್ರಾಣದ ಮೇಲೆ ಜ್ಞಾನ ನಿಧರ್ಾರವಾಯಿತ್ತು ನೋಡಾ.
ಒಳಹೊರಗೆಂಬ ಉಭಯವು ಏಕಾರ್ಥವಾಯಿತ್ತು,
ಗುಹೇಶ್ವರಾ ನಿಮ್ಮ ನೆನೆದೆನಾಗಿ.
ವಚನ 0020
ಅಂಗದ ಲಿಂಗವೆ ಮನದ ಲಿಂಗ, ಮನದ ಲಿಂಗವೆ ಭಾವದ ಲಿಂಗ,
ಭಾವದ ಲಿಂಗವೆ ಜಂಗಮದಾಸೋಹ,
ದಾಸೋಹವೆಂಬುದು ಸಂದಿಲ್ಲದ ನಿಜ ನೋಡಾ.
ಅದರಂದವನೆ ತಿಳಿದು ನಿಂದ ನಿಲುಕಡೆಯ ಭೇದವ
ಕೇಳಬೇಕೆಂದು ಬಂದಲ್ಲಿಯೆ ತಿಳುಹಬೇಕಯ್ಯಾ.
ಇಂತೀ ಪ್ರಕಾರದಲ್ಲಿ ಸಂದ ಸೌಖ್ಯದ ಭೇದವನು,
ಸಂದಿಲ್ಲದ ಲಿಂಗದ ನಿಜವನು,
ಇಂದು ನಮ್ಮ ಗುಹೇಶ್ವರಲಿಂಗದಲ್ಲಿ
ಚಂದಯ್ಯಂಗೆ ತಿಳುಹಿ ಕೊಡಾ ಚೆನ್ನಬಸವಣ್ಣಾ.
ವಚನ 0021
ಅಂಗದಲಪ್ಪಿದೆನೆಂದಡೆ ಸಿಲುಕದು,
ಪ್ರಾಣದಲಪ್ಪಿದೆನೆಂದಡೆ ಸಿಲುಕದು,
ಭಾವದಲಪ್ಪಿದೆನೆಂದಡೆ ಸಿಲುಕದು,
ಸೂಕ್ಷ್ಮತನುವಿನ ಮನದ ಕೊನೆಯ ಮೇಲೆ
ಅಪ್ಪಿದೆನೆಂದಡೆ ಸಿಲುಕದು.
ಭಾವಾತೀತವಾದ ನಿರಾಕಾರದ ಘನವು
ಸುಜ್ಞಾನದ ಮುಖಕ್ಕೆ ಅಸಾಧ್ಯ ನೋಡಾ !
ಗುಹೇಶ್ವರನ ಶರಣರನಿನ್ನಾವ ಪರಿಯಲ್ಲಿ
ತಡೆದು ನಿಲ್ಲಿಸುವೆ ಹೇಳಾ- ಸಿದ್ಧರಾಮಯ್ಯಾ ?
ವಚನ 0022
ಅಂಗದಲಳವಟ್ಟ ಲಿಂಗೈಕ್ಯನ ಸಂಗವನಾರಿಗೂ ಕಾಣಬಾರದು ನೋಡಾ.
ಪ್ರಾಣದ ಕೊನೆಯ ಮೊನೆಯ ಮೇಲೆ, ಭಾವಸೂತಕದ ಹೊದಕೆಯ ಕಳೆದು,
ನಿರ್ಭಾವ ನಿಸ್ಸೂತಕಿಯಾಗಿಪ್ಪ ನಿಜಲಿಂಗ ಸಮಾದಿಯ ಘನವನು
ಆರಿಗೆಯೂ ಕಾಣಬಾರದು ನೋಡಾ.
ಗುಹೇಶ್ವರಲಿಂಗದಲ್ಲಿ ಸಂಗನಬಸವಣ್ಣನ ನಿಲವ ಕಂಡು
ನಾನು ಬದುಕಿದೆನು ಕಾಣಾ ಚೆನ್ನಬಸವಣ್ಣಾ.
ವಚನ 0023
ಅಂಗದಲ್ಲಿ ಅಳವಟ್ಟಿಪ್ಪ ಆಚಾರವೆ ಲಿಂಗವೆಂದರಿದನು,
ಮನದಲ್ಲಿ ಬೆಳಗುತ್ತಿಪ್ಪ ಅರಿವೆ ಜಂಗಮವೆಂದರಿದನು,
ಈ ಎರಡರ ಸಂಗವೆ ತಾನೆಂದರಿದನು
ಮಾಡುವ ದಾಸೋಹವೆ ಲಿಂಗಜಂಗಮವೆಂದರಿದನು
ನಮ್ಮ ಗುಹೇಶ್ವರಲಿಂಗದಲ್ಲಿ,
ಸಂಗನಬಸವಣ್ಣನ ನಿಲವನರಿಯಬೇಕು ಕೇಳಾ ಚಂದಯ್ಯಾ.
ವಚನ 0024
ಅಂಗದಲ್ಲಿ ಆಚಾರವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು.
ಆಚಾರದಲ್ಲಿ ಪ್ರಾಣವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು.
ಪ್ರಾಣದಲ್ಲಿ ಲಿಂಗವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು.
ಲಿಂಗದಲ್ಲಿ ಜಂಗಮವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು.
ಜಂಗಮದಲ್ಲಿ ಪ್ರಸಾದವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು.
ಪ್ರಸಾದದಲ್ಲಿ ನಿತ್ಯವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು.
ನಿತ್ಯದಲ್ಲಿ ದಾಸೋಹವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು.
ದಾಸೋಹದಲ್ಲಿ ತನ್ನ ಮರೆದು,
ನಿಶ್ಚಿಂತನಿವಾಸಿಯಾಗಿ ಐದಾನೆ ಗುಹೇಶ್ವರಲಿಂಗದಲ್ಲಿ.
ಸಂಗನಬಸವಣ್ಣನ ಶ್ರೀಪಾದಕ್ಕೆ ಶರಣೆಂದು
ಧನ್ಯರಾಗಬೇಕು ನಡೆಯಾ- ಸಿದ್ಧರಾಮಯ್ಯಾ
ವಚನ 0025
ಅಂಗದಲ್ಲಿ ಮಾಡುವ ಸುಖ, ಲಿಂಗಕ್ಕದು ಭೂಷಣವಾಯಿತ್ತು.
ಕಾಡುಗಿಚ್ಚಿನ ಕೈಯಲ್ಲಿ ಕರಡ ಕೊಯಿಸುವಂತೆ-
ಹಿಂದೆ ಮೆದೆಯಿಲ್ಲ ಮುಂದೆ ಹುಲ್ಲಿಲ್ಲ.
ಅಂಗ ಲಿಂಗವೆಂಬನ್ನಕ್ಕರ ಫಲದಾಯಕ.
ಲಿಂಗೈಕ್ಯವದು ಬೇರೆ ಗುಹೇಶ್ವರಾ.
ವಚನ 0026
ಅಂಗದೊಳಗಣ ಲಿಂಗ, ಲಿಂಗದೊಳಗಣ ಅಂಗ;
ಅಂಗ-ಲಿಂಗ ಸಂಗ ಹಿಂಗದಂತೆ ಮಾಡಿರೆ.
ದೇವ ದೇವ ಎಂಬಿರಿ ಬಲ್ಲವರು,
ಲಿಂಗವ, ಬಲ್ಲವರು ಹಿಡಿದುಕೊಳ್ಳಿರೆ !
ತಾ ಸತ್ತು ಲಿಂಗವ ಕೂಡಿಹೆನೆಂದಡೆ
ಗುಹೇಶ್ವರಂಗೆ ಬೇರೊಂದುಠಾವುಂಟೆ ಹೇಳಿರೆ ?
ವಚನ 0027
ಅಂಗದೊಳಗಣ ಸವಿ, ಸಂಗದೊಳಗಣ ರುಚಿ,
ಅಂಗನೆಯ ನಖದೊಳಗೆ ಬಂದು ಮೂರ್ತಿಯಾಯಿತ್ತು !
ಚಂದ್ರಕಾಂತದ ಗಿರಿಗೆ ಬಿಂದುತೃಪ್ತಿಯ ಸಂಚ !
ಅದರಂದದೊಳಗಣ ಭ್ರಮೆಯ ಪಿಂಡದಾಹುತಿ ನುಂಗಿತ್ತು.
ಚಂದ್ರಮನ ಷೋಡಶಕಳೆಯ ಇಂದ್ರನ ವಾಹನ ನುಂಗಿ,
ಗುಹೇಶ್ವರನೆಂಬ ನಿಲವ ನಖದ ಮುಖ ನುಂಗಿತ್ತು
ವಚನ 0028
ಅಂಗದೊಳಗೆ ಮಹಾಲಿಂಗವಿರಲು,
ಕೈಯ ಲಿಂಗ ಬಿದ್ದಿತ್ತೆಂದು ನೆಲದೊಳಗಂಗವ ಹೂಳಿ
ಭಂಗಪಡುವರಲ್ಲಾ,
ಗುಹೇಶ್ವರಲಿಂಗವನರಿಯದ ಜಡರು.
ವಚನ 0029
ಅಂಗದೊಳಗೆ ಲಿಂಗ ಲಿಂಗದೊಳಗೆ ಅಂಗ !
ಅಂಗವಿಲ್ಲದೆ ಬೇರೆ ಸಂಗವಿಲ್ಲ ಕಾಣಿರೆ.
ಅದೆಂತೆಂದಡೆ;
“ಲಿಂಗಸ್ಥಲಂ ಶಿವಃ ಸಾಕ್ಷಾತ್ ಜೀವಾತ್ಮಾಂಗಸ್ಥಲಂ ಭವೇತ್
ಲಿಂಗಾಂಗಸ್ಥಲಯೋರೈಕ್ಯಂ ಶಿವಜೀವೈಕ್ಯಮೇವಹಿ ” ಎಂದುದಾಗಿ.
ಲಿಂಗವಿದ್ದೆಡೆಯ ನೀವು ತಿಳಿದು ನೋಡಿ ಕೂಡಿಕೊಳ್ಳಿ.
ಕಾಯವಳಿಯದ ಮುನ್ನವೆ ಕೂಡಿಕೊಳ್ಳಬಲ್ಲಡೆ,
ಗುಹೇಶ್ವರನು ಬೇರಿಲ್ಲ ಕಾಣಿರೆ.
ವಚನ 0030
ಅಂಗನೆಯ ಮೊಲೆ ಲಿಂಗವೆ ? ಬಳ್ಳ ಲಿಂಗವೆ ?
ಕಿತ್ತು ಬಹ ಸಾಣೆ ಲಿಂಗವೆ ? ಆಡಿನ ಹಿಕ್ಕಿ ಲಿಂಗವೆ ?
ಮೆಚ್ಚುವರೆ ಪ್ರಮಥರು ? ಮೆಚ್ಚುವರೆ ಪುರಾತನರು, ನಿಮ್ಮ ಭಕ್ತರು ?
ಭಾವಭ್ರಮೆಯಳಿದು, ಗುಹೇಶ್ವರಾ
ನಿಮ್ಮಲ್ಲಿ ಅನಾದಿಸಂಸಿದ್ಧವಾದ ಜಂಗಮವನರಿದಾತ
ಬಸವಣ್ಣನೊಬ್ಬನೆ.
ವಚನ 0031
ಅಂಗವಿಕಾರ ಆಚಾರದೊಳಡಗಿ, ಆಚಾರಕ್ರೀಗಳು ಗುರುವಿನೊಳಡಗಿ,
ಗುರುವೆನ್ನ ಅಂಗದೊಳಗಡಗಿ; ಅಂಗ ಲಿಂಗನಿಷ್ಠೆಯೊಳಡಗಿ,
ಲಿಂಗನಿಷ್ಠೆ ಅಂಗದಾಚರಣೆಯ ಆಚಾರವಾವರಸಿ,
ಆಚಾರದ ನಿಲವ ಗುರುಮೂರ್ತಿಯಾವರಸಿ,
ಗುರುಮೂರ್ತಿಯ ಸರ್ವಾಂಗವಾವರಸಿ,
ಸರ್ವಾಂಗವ ಲಿಂಗನಿಷ್ಠೆಯಾವರಿಸಿ, ಲಿಂಗನಿಷ್ಠೆಯ ಸಾವಧಾನವಾವರಿಸಿ,
ಸಾವಧಾನವ ಸುವಿಚಾರವಾವರಿಸಿ, ಸುವಿಚಾರವ ಮಹಾಜ್ಞಾನವಾವರಿಸಿ,
ಮಹಾಜ್ಞಾನದೊಳಗೆ ಪರಮಾನಂದನಿಜನಿಂದು
ನಿಜದೊಳಗೆ ಪರಮಾಮೃತ ತುಂಬಿ-
ಮೊದಲ ಕಟ್ಟೆಯನೊಡೆದು, ನಡುವಣ ಕಟ್ಟೆಯನಾಂತು ನಿಂದು,
ನಡುವಣ ಕಟ್ಟೆಯೂ ಮೊದಲ ಕಟ್ಟೆಯೂ ಕೂಡಿ ಬಂದು,
ಕಡೆಯಣ ಕಟ್ಟೆಯನಾಂತುದು.
ಈ ಮೂರುಕಟ್ಟೆಯೊಡೆದ ಮಹಾಜಲವನು ಪರಮಪದವಾಂತುದು.
ಆ ಪದದಲ್ಲಿ ನಾನು ಎರಗಿ, ಪಾದೋದಕವ ಕೊಂಡು
ಎನ್ನ ನಾನರಿಯದಾದೆ ಕಾಣಾ ಗುಹೇಶ್ವರಾ.
ವಚನ 0032
ಅಂಗವಿಕಾರಿ ಲಿಂಗವಿಕಾರಿಯನರಿಯ.
ಲಿಂಗವಿಕಾರಿ ಅಂಗವಿಕಾರಿಯನರಿಯ.
ಅಂಗವೇ ದಿಂಡುನಾಳ ಲಿಂಗವೇ….. ನವ ಸುರಾಳ
ಕಳಚಿದಡೆ ತೋರಲಿಲ್ಲ, ತೋರಿದಡೆ ಬೆಚ್ಚಲಿಲ್ಲ.
ಸುರುಳಿನೊಳಗೆ ಸುತ್ತಿ ಹೊರಗಿರಿಸಿದೆನು ಕಾಣಾ-ಗುಹೇಶ್ವರಾ.
ವಚನ 0033
ಅಂಗವಿಡಿದಂಗಿಯನೇನೆಂಬೆ ?
ಆರನೊಳಕೊಂಡ ಅನುಪಮನು ನೋಡಾ !
ಮೂರರ ಹೊಲಿಗೆಯ ಬಿಚ್ಚಿ, ಎಂಟಾತ್ಮ ಹರಿಗಳ
ತನ್ನಿಚ್ಛೆಯೊಳ್ ನಿಲಿಸಿದ ನಿಜಸುಖಿಯು ನೋಡಾ.
ತತ್ತ್ವ ಮೂವತ್ತಾರ ಮೀರಿ,
ಅತ್ತತ್ತವೆ ತೋರ್ಪ ಆಗಮ್ಯನು ನೋಡಾ !
ನಮ್ಮ ಗುಹೇಶ್ವರನ ಶರಣ ಅಲ್ಲಯ್ಯನ ಇರವನೊಳಕೊಂಡ
ಪರಮಪ್ರಸಾದಿ ಮರುಳಶಂಕರದೇವರ ನಿಲವ
ಬಸವಣ್ಣನಿಂದ ಕಂಡೆ ನೋಡಾ ಸಿದ್ಧರಾಮಯ್ಯಾ.
ವಚನ 0034
ಅಂಗವಿಡಿದು, ಅಂಗ ಅನಂಗವೆಂಬೆರಡನೂ ಹೊದ್ದದ
ಮಹಿಮನ ನೋಡಾ !
ಅಂಗವೆ ಆಚಾರವಾಗಿರಬಲ್ಲ, ಆಚಾರವೆ ಅಂಗವಾಗಿರಬಲ್ಲನಾಗಿ
ಅಂಗವಿಲ್ಲದಪ್ರತಿಮ ನೋಡಾ !
ಆಚಾರವೆ ಸ್ವಾಯತ, ಆಚಾರವೆ ಪ್ರಾಣ !
ಗುಹೇಶ್ವರಲಿಂಗದಲ್ಲಿ ನಿನ್ನ ಆಚಾರಬಿಕ್ಷವನಿಕ್ಕಾ ಚನ್ನಬಸವಣ್ಣಾ.
ವಚನ 0035
ಅಂಗವಿಲ್ಲದ ಅನುಭಾವಕ್ಕೆ ನೇಮವಿಲ್ಲದ ನೆನಹು
ತಾಗು ತಡೆಯಿಲ್ಲದ ಸುಮ್ಮಾನದ ಸುಖ.
ಗುಹೇಶ್ವರ ನಿರಾಳ ಕಂಡಾ !
ವಚನ 0036
ಅಂಗವಿಲ್ಲಾಗಿ ಅನ್ಯಸಂಗವಿಲ್ಲ, ಅನ್ಯಸಂಗವಿಲ್ಲಾಗಿ ಮತ್ತೊಂದ ವಿವರಿಸಲಿಲ್ಲ.
ಮತ್ತೊಂದ ವಿವರಿಸಲಿಲ್ಲಾಗಿ ನಿಸ್ಸಂಗವಾಯಿತ್ತಯ್ಯಾ.
ಗುಹೇಶ್ವರಾ ನಿಮ್ಮ ನಾಮವಿಂತುಟಯ್ಯಾ
ವಚನ 0037
ಅಂಗವೆಂಬ ಸಂಸಾರದೊಳಗೆ ಸವೆದವರೆಲ್ಲರೂ ಶಿವನನರಿವರೆ ?
ಮನವೆಂಬ ಸಂಕಲ್ಪದ ಕುಣಿಕೆಗೊಳಗಾದವರೆಲ್ಲರೂ
ಮಾಯದ ಹೊಡೆಗಿಚ್ಚ ಗೆಲ್ಲಬಲ್ಲರೆ ?
ಗುಹೇಶ್ವರಲಿಂಗದಲ್ಲಿ ಸರ್ವಸಂದೇಹವ ಕಳೆದಿಪ್ಪ
ಚನ್ನಬಸವಣ್ಣಂಗೆ ನಮೋ ನಮೋ ಎಂಬೆನು.
ವಚನ 0038
ಅಂಗಸಂಸಾರ ಲಿಂಗದಲ್ಲಿತ್ತು ಅರತು
ಕಾಯವೆಂಬ ಸಂಬಂಧ ಸಂಶಯವಳಿದು
ನಿಸ್ಸಂದೇಹಿಯಾಗಿಪ್ಪನು ನೋಡಾ ಬಸವಣ್ಣನು.
ಪ್ರಾಣ ಭಾವವೆಂಬ ಶಂಕೆ ತಲೆದೋರದೆ
ನಿಶ್ಶಂಕನಿಜೈಕ್ಯನಾಗಿಪ್ಪನು ನೋಡಾ ಬಸವಣ್ಣನು.
ಆ ಬಸವಣ್ಣನ ಅಂತರಂಗದಲ್ಲಿ ನಿಶ್ಚಿಂತನಿವಾಸಿಯಾಗಿದ್ದೆನು.
ಆ ಬಸವಣ್ಣನ ಅಂತರಂಗದಲ್ಲಿ ನಿರಾಲಂಬಜ್ಞಾನಿಯಾಗಿದ್ದೆನು.
ಆ ಬಸವಣ್ಣನೊಳಗೆ ನಾನು ಅಳಿದುಳಿದೆನು.
ಬಸವಣ್ಣನೆನ್ನ ಅಂತರಂಗದೊಳಗೆ ನಿಜನಿವಾಸಿಯಾಗಿದ್ದನು.
ಇದು ಕಾರಣ:ಒಂದಕ್ಕೊಂದ ಬಿಚ್ಚಿ ಬೇರು(ರೆ?) ಮಾಡಬಾರದು ನೋಡಾ.
ಗುಹೇಶ್ವರಲಿಂಗದಲ್ಲಿ `ಸಂಗನಬಸವ-ಪ್ರಭು’ವೆಂಬ ಎರಡು ಭಾವಭ್ರಾಂತಿಯಳಿದು,
ನಿಭ್ರಾಂತಿ ಎಡೆಗೊಂಡಿತ್ತು ನೋಡಾ ಚನ್ನಬಸವಣ್ಣಾ
ವಚನ 0039
ಅಂಗಸೋಂಕೆಂಬುದು ಅಧಮವು.
ಉರಸೆಜ್ಜೆಯೆಂಬುದು ಎದೆಯ ಗೂಂಟ.
ಕಕ್ಷೆಯೆಂಬುದು ಕವುಚಿನ ತವರುಮನೆ.
ಅಮಳೋಕ್ಯವೆಂಬುದು ಬಾಯ ಬಗದಳ.
ಮುಖಸೆಜ್ಜೆಯೆಂಬುದು ಪಾಂಡುರೋಗ.
ಕರಸ್ಥಳವೆಂಬುದು ಮರವಡದ ಕುಳಿ.
ಉತ್ತಮಾಂಗವೆಂಬುದು ಸಿಂಬಿಯ ಕಪ್ಪಡ.
ಎಲ್ಲರಿಗೆಯೂ ಸೋಂಕಾಯಿತ್ತು !
ಈ ಹಸಿಯ ಗೂಂಟದಲ್ಲಿ ಕಟ್ಟಿ, ಒಣಗಿದ ಗೂಂಟದಲ್ಲಿ ಬಿಡುವ
ಬಾಲಭಾಷೆಯ ಭಂಡರ ನುಡಿಯ ಕೇಳಲಾಗದು ಗುಹೇಶ್ವರಾ.
ವಚನ 0040
ಅಂಗಳ[ದ] ಬಾಗಿಲ ನೆಲೆಯಲ್ಲಿ ನಿಂದಿದ್ದ ಲಿಂಗವನರಿದುದಿಲ್ಲವೆ ?
ಸುಸಂಗಿ ನಿರಂಗಿ ನಿಷ್ಕಲಬ್ರಹ್ಮ ಮರುಳಶಂಕರಲಿಂಗ !
ಪ್ರಸಾದದ ಕುಳಿಯಲ್ಲಿ ನಿಜನಿವಾಸದ ಅಂಗವ ನೋಡು,
ಗುಹೇಶ್ವರಲಿಂಗದಲ್ಲಿ ಬಸವಣ್ಣಾ.
ವಚನ 0041
ಅಂಗೈಯ ಲಿಂಗದಲ್ಲಿ ಕಂಗಳ ನೋಟ ಸ್ವಯವಾದ ಇರವ ನೋಡಾ !
ತನ್ನ ಸ್ವಾನುಭಾವದ ಉದಯದಿಂದ ತನ್ನ ತಾನರಿದ ನಿಜಶಕ್ತಿಯ ನೋಡಾ !
ಬಿನ್ನವಿಲ್ಲದರಿವು, ಮನ್ನಣೆಯ ಮಮಕಾರವ ಮೀರಿದ ಭಾವ !
ತನ್ನಿಂದ ತಾನಾದಳು !
ನಮ್ಮ ಗುಹೇಶ್ವರಲಿಂಗದಲ್ಲಿ ಸ್ವಯಲಿಂಗವಾದ
ಮಹಾದೇವಿಯಕ್ಕಗಳ ನಿಲವಿಂಗೆ
ನಮೋ ನಮೋ ಎನುತಿರ್ದೆನು ಕಾಣಾ ಚನ್ನಬಸವಣ್ಣ.
ವಚನ 0042
ಅಂಗೈಯೊಳಗಣ ನಾರಿವಾಳದ ಸಸಿ,
ಅಂಬರದೆರಳೆಯ ನುಂಗಿತ್ತಲ್ಲಯ್ಯಾ.
ಕಂಭದೊಳಗಣ ಮಾಣಿಕ್ಯದ ಬಿಂದು
ನವಕೋಟಿ ಬ್ರಹ್ಮರ ನುಂಗಿತ್ತಲ್ಲಯ್ಯಾ.
ಅಂಡಜವೆಂಬ ತತ್ತಿ ಹಲವು ಪಕ್ಷಿಯ ನುಂಗಿ
ನಿರ್ವಯಲಾಗಿತ್ತು ಗುಹೇಶ್ವರಾ !
ವಚನ 0043
ಅಂಗೈಯೊಳಗಣ ಸಿಂಹಾಸನವಿದೇನೊ?
ಅಂಗೈಯ ಮೇಲೆ ಸಿಂಹಾಸನವೆಂದೇನೊ?
ಧೂಪ ದೀಪ ನಿವಾಳಿಯೆಂದೇನೊ?
ಶರಣಂಗೆ ಕಳಸದ ಮೇಲೆ ನೆಲೆಗಟ್ಟೆಯೆಂಬುದೇನೊ?
ಗುಹೇಶ್ವರನೆಂಬ ನಿರಾಳ !
ವಚನ 0044
ಅಂಗೈಯೊಳಗೊಂದು ಅರಳ್ದ ತಲೆಯ ಹಿಡಿದುಕೊಂಡು
ಕಂಗಳ ಮುತ್ತ ಪವಣಿಸುವಾಕೆ ನೀನಾರು ಹೇಳಾ ?
ಸಂದ ಸಂಪಿಗೆಯರಳ ತುಂಬಿ ಬಂದುಂಬ ಭೇದವನರಿಯದೆ
ಹಂಬಲಿಸುವ ಪರಿತಾಪವೇನು ಹೇಳಾ ?
ಒಂದೆಂಬೆನೆ ಎರಡಾಗಿದೆ ಎರಡೆಂಬೆನೆ ಒಂದಾಗಿದೆ
ಅರಿವಿನೊಳಗಣ ಮರಹಿದೇನು ಹೇಳಾ ?
ದುಃಖವಿಲ್ಲದ ಅಕ್ಕೆ, ಅಕ್ಕೆಯಿಲ್ಲದ ಅನುತಾಪ
ನಮ್ಮ ಗುಹೇಶ್ವರಲಿಂಗದಲ್ಲಿ ತೋರುತ್ತಿದೆ.
ನೀನಾರೆಂದು ಹೇಳಾ ಎಲೆ ಅವ್ವಾ ?
ವಚನ 0045
ಅಂಜಬೇಡ ಅಳುಕಬೇಡ;
ಹೋದವರಾರು ಇದ್ದವರಾರು ? ಎಲೆ ಮರುಳೆ !
ಒಂದು ಮುಖದಲ್ಲಿಪ್ಪ ದೇವನೊಬ್ಬನೆ.
ಹಲವು ಮುಖದಲ್ಲಿಪ್ಪ ದೇವನೊಬ್ಬನೆ.
ನಾಮ ಹಲವಲ್ಲದೆ ಕಾರ್ಯ ಒಂದೇ ನೋಡಾ !
ಮನದೊಳಗಣ ಘನವು ತನುವನಗಲುವುದೆ ?
ಗುಹೇಶ್ವರಲಿಂಗದಲ್ಲಿ ವಿಯೋಗಕ್ಕೆ ತೆರಹಿಲ್ಲ ಕೇಳಾ, ಸಂಗನಬಸವಣ್ಣ.
ವಚನ 0046
ಅಂಡಜ ಒಡೆಯದರಿಂದ ಮುನ್ನ,
ದ್ವೀಪಾದ್ವೀಪವಿಲ್ಲದ ಮುನ್ನ,
ಅನಲಪವನರಿಲ್ಲದ ಮುನ್ನ,
ರವಿಚಂದ್ರರಿಲ್ಲದ ಮುನ್ನ,
ಗುಹೇಶ್ವರಲಿಂಗವಲ್ಲಿಂದ ಮುನ್ನ.
ವಚನ 0047
ಅಂಡಜವಳಯವಿಲ್ಲದ ಮುನ್ನ,
ದ್ವೀಪಂಗಳೇಳೂ ಇಲ್ಲದ ಮುನ್ನ,
ರವಿಚಂದ್ರರಿಲ್ಲದ ಮುನ್ನ,
ತ್ರಿದೇವತೆಗಳಿಲ್ಲದ ಮುನ್ನ,
ಗುಹೇಶ್ವರನು ಉಲುಹಡಗಿರ್ದನಂದು ಅನಂತಕಾಲ !
ವಚನ 0048
ಅಂಡಜವೆಂಬ ತತ್ತಿಯೊಡೆದು ಪಿಂಡ ಪಲ್ಲಟವಾಗಿ
ಗಂಡಗಂಡರನರಸಿ ತೊಳಲುತ್ತೈದಾರೆ.
ಖಂಡಮಂಡಲದೊಳಗೆ ಕಂಡೆನೊಂದು ಚೋದ್ಯವ:
ಕಂದನ ಕೈಯ ದರ್ಪಣವ ಪ್ರತಿಬಿಂಬ ನುಂಗಿತ್ತು.
ದಿವರಾತ್ರಿಯುದಯದ ಬೆಳಗನು ಕತ್ತಲೆ ನುಂಗಿತ್ತು.
ಗುಹೇಶ್ವರನಲ್ಲಿಯೆ ನಿರ್ವಯಲಾಗಿತ್ತು.
ವಚನ 0049
ಅಂಡವ ಮೇಲು ಮಾಡಿ ಪಿಂಡಿಯಾಗಿ,
ಆ ಅಂಡದೊಳಗೆ ನಾಲ್ಕು ಕೈಕರಣ ಅನೇಕ ಉದ್ದವಾದವು !
ಆ ಕೈಕರಣದೊಳಗೊಬ್ಬ ಶರಣ, ದಾಸೋಹಮೆನಲು,
ಆ ಕ್ಷಣ ಒಂದು ಸೋಜಿಗ ಮೂಡಿತ್ತ ಕಂಡೆ ಗುಹೇಶ್ವರಾ
ವಚನ 0050
ಅಂತರಂಗ ಸನ್ನಹಿತ, ಬಹಿರಂಗ ನಿಶ್ಚಿಂತವೊ ಅಯ್ಯಾ.
ತನು ತನ್ನ ಸುಖ, ಮನ ಪರಮ ಸುಖವೊ,
ಅದು ಕಾರಣ ಕಾಯ ವಾಯವೊ, ಗುಹೇಶ್ವರ ನಿರಾಳವೊ ಅಯ್ಯಾ.
ವಚನ 0051
ಅಂತರಂಗದಲ್ಲಿ ಅಡಗಿತ್ತೆಂದಡೆ ಭಾವಕ್ಕೆ ಪೂಜ್ಯವಲ್ಲ.
ಬಹಿರಂಗದಲ್ಲಿ ಅಡಗಿತ್ತೆಂದಡೆ ಕ್ರಿಯಾಬದ್ಧವಲ್ಲ.
ಅರಿವಿನೊಳಗೆ ಅಡಗಿತ್ತೆಂದಡೆ ಮತಿಗೆ ಹವಣಲ್ಲ.
ಭಾವ ನಿರ್ಭಾವ ನಿಶ್ಶೂನ್ಯವನು ಕಾಂಬ ಪರಿ ಎಂತು ಹೇಳಾ ?
ಕಂಡು ತನ್ನೊಳಗಿಂಬಿಟ್ಟುಕೊಂಬ ಪರಿ ಎಂತು ಹೇಳಾ ?
ಗುಹೇಶ್ವರನೆಂಬ ಲಿಂಗವನರಿದು ಕೂಡಿ
ಸುಖಿಯಹ ಪರಿ ಎಂತು ಹೇಳಾ ಸಂಗನಬಸವಣ್ಣ ?
ವಚನ 0052
ಅಂತರಂಗದಲ್ಲಿ ಭವಿಯನೊಳಕೊಂಡು, ಬಹಿರಂಗದಲ್ಲಿ ಭಕ್ತಿಯನೊಳಕೊಂಡು,
ಆತ್ಮಸಂಗದಲ್ಲಿ ಪ್ರಸಾದವನೊಳಕೊಂಡು, ಇಪ್ಪ ಭಕ್ತರ ಕಾಣೆನಯ್ಯಾ ನಾನು,
ಇಂತಪ್ಪ ಲಿಂಗೈಕ್ಯರ ಕಾಣೆನಯ್ಯಾ.
ಅಂತರಂಗದಲ್ಲಿ ಸುಳಿದಾಡುವ ತನುಗುಣಾದಿಗಳ, ಮನಗುಣಾದಿಗಳ,
ಪ್ರಾಣಗುಣಾದಿಗಳ ಕಳೆದಲ್ಲಿ ಶರಣರಹರೆ ?
ತನು ಮನ ಧನವ ಕೊಟ್ಟಲ್ಲಿ ಭಕ್ತರಹರೆ ?
ಉಂಬವರ ಕಂಡು ಕೈನೀಡಿದಡೆ ಪ್ರಸಾದಿಗಳಹರೆ ?
ಅಂತರಂಗ ಬಹಿರಂಗ ಆತ್ಮಸಂಗ-ಈ ತ್ರಿವಿಧದ ಭೇದವ
ಗುಹೇಶ್ವರಾ ನಿಮ್ಮ ಶರಣ ಬಲ್ಲ.
ವಚನ 0053
ಅಂತರಂಗದೊಳಗಿಲ್ಲ ಬಹಿರಂಗದೊಳಗಿಲ್ಲ
ಮತ್ತಾವ ದೆಶೆ ದಿಕ್ಕಿನೊಳಗೆಯೂ ಇಲ್ಲ.
ಏನಾಯಿತ್ತೆಂದರಿಯೆ ಎಂತಾಯಿತ್ತೆಂದರಿಯೆ
ಅದೆಂತೆಂದರೆ:
“ಅಂತಃ ಶೂನ್ಯಂ ಬಹಿಃಶೂನ್ಯಂ ಶೂನ್ಯಂ ಶೂನ್ಯಂ ದಿಶೌ ದಿಶೌ!
ಸರ್ವಶೂನ್ಯಂ ನಿರಾಲಂಬಂ ನಿದ್ರ್ವಂದ್ವಂ ಪರಮಂ ಪದಂ
ಎಂಬುದಾಗಿ-ಅಲ್ಲಿ ಇಲ್ಲಿ ಎಲ್ಲಿಯೂ ಇಲ್ಲ.
ಗುಹೇಶ್ವರ ಬಯಲು.
ವಚನ 0054
ಅಂದಂದಿಗೆ ಬಂದ ಧನವನಂದಂದಿಂಗೆ ವೆಚ್ಚವ ಮಾಡಿ
ಹಿಂದು ಮುಂದ ಸಮವ ಮಾಡಿ,
ಮಧ್ಯ ನಿರಾಳ ಊಧ್ರ್ವ ತಾನಾಗಿದ್ದು ಇಲ್ಲದಂತಿಪ್ಪಡೆ
ಇದೇ ತೆರನು ಕಂಡಯ್ಯಾ.
ಆರ ವಶವಲ್ಲದ ಪುರುಷನೊಬ್ಬನ ಸಾದಿಸಿಕೊಳಬಲ್ಲಡೆ
ಆ ಹಿರಿಯರಿಬ್ಬರೂ ತನ್ನ ವಶರಪ್ಪರು.
ಆ ಹಿರಿಯರಿಬ್ಬರೂ ತನ್ನವರಾದಡೆ ಸರ್ವವೂ ಸಾಧ್ಯವಪ್ಪುದು.
ಸರ್ವವೂ ಸಾಧ್ಯವಾದಡೆ ತಾನಿಲ್ಲ.
ಬಯಲಹುದಕ್ಕೆ ಇದೇ ಚಿಹ್ನ ನೋಡಾ-
ಹೀಗೆಂದು ನಂಬುವುದು
ನಂಬದಿದ್ದಡೆ ಚೆನ್ನಬಸವಣ್ಣನ ಹೊಣೆಯ ಕೊಡುವೆ ಕಾಣಾ ಗುಹೇಶ್ವರಾ.
ವಚನ 0055
ಅಂದಂದಿನ ಮಾತನು ಅಂದಂದಿಗೆ ಅರಿಯಬಾರದು.
ಹಿಂದೆ ಹೋದ ಯುಗಪ್ರಳಯಂಗಳ ಬಲ್ಲವರಾರಯ್ಯಾ ?
ಮುಂದೆ ಬಪ್ಪ ಯುಗಪ್ರಳಯಂಗಳ ಬಲ್ಲವರಾರಯ್ಯಾ ?
ಬಸವಣ್ಣನು ಆದಿಯಲ್ಲಿ ಲಿಂಗಶರಣನೆಂಬುದ
ಭೇದಿಸಿ ನೋಡಿ ಅರಿವರಿನ್ನಾರಯ್ಯಾ ?
ಲಿಂಗ ಜಂಗಮ ಪ್ರಸಾದದ ಮಹಾತ್ಮೆಗೆ
ಬಸವಣ್ಣನೆ ಆದಿಯಾದನೆಂಬುದನರಿದ ಸ್ವಯಂಭು ಜ್ಞಾನಿ,
ಗುಹೇಶ್ವರಲಿಂಗದಲ್ಲಿ ಚನ್ನಬಸವಣ್ಣನೊಬ್ಬನೆ.
ವಚನ 0056
ಅಂದಾದಿಬಿಂದುವಿಲ್ಲದಂದು ಅಂದಾ ಜೀವನೆಲ್ಲಿಪ್ಪುದೊ ?
ಪಿಂಡ ರೂಪಿಸುವಲ್ಲಿ ಆ ಜೀವ ಬಂದು ಪರಿಯೆಂತುಟೊ ?
ಇದನರಿದಡೆ ಗುರುವೆಂಬೆ, ಲಿಂಗವೆಂಬೆ, ಜಂಗಮವೆಂಬೆ,
ಅಲ್ಲದಿದ್ದಡೆ ನರನೆಂಬೆ ಕಾಣಾ ಗುಹೇಶ್ವರಾ
ವಚನ 0057
ಅಂದಿನ ದಿನವನಂತಿರಿಸಿ, ಇಂದಿನ ದಿನವನಿಂತಿರಿಸಿ,
ತಾ ಬೇರೆ ಮತ್ತೊಂದು ಪರಿಯಾದ ಅಪ್ಪಣ್ಣನು.
ಅಂದಿನವನಂತಾಗದೆ ಇಂದಿನವನಂತಾಗದೆ, ಅಂತಿಂತುವ ಕೆಡಿಸಿ
ಮತ್ತೊಂದಾದನು(ನ?)ವ.
ಶ್ರುತಿಗೆಟ್ಟು ಮತಿಗೆಟ್ಟು ಹದಗೆಟ್ಟು ಹವಣುಗೆಟ್ಟು,
ಬಿಮ್ಮುಗೆಟ್ಟು ಬೆಮಳ ವಿಮಳನಾದ ಅಪ್ಪಣ್ಣನು.
ಗಣಿತ ಗುಣಿತವನಳಿದುಳಿದು,
ಅಗಣಿತನಚಳಿತನಾದ ಅಪ್ಪಣ್ಣನು.
ಅಮಳೋಕ್ಯವಾದ ಘನವ, ಅಮಳೋಕ್ಯವಾದ ಮಹವ,
ಅಮಳೋಕ್ಯವಾದ ನಿಜದ ನಿಲವ ;
ಕುಲಗೆಟ್ಟ, ಛಲಗೆಟ್ಟ, ಲಜ್ಜೆಗೆಟ್ಟ, ಭವಗೆಟ್ಟ
ಗುಹೇಶ್ವರನ ಶರಣ ಸಂಗಮೇಶ್ವರದ ಅಪ್ಪಣ್ಣನು.
ವಚನ 0058
ಅಂದು ನೀ ಬಂದ ಬೆಂಬಳಿಯಲ್ಲಿ ನಾ ಬಂದೆ.
ಅಂದಂದಿನ ಸಂದೇಹ ಹರಿಯಿತ್ತು.
ನೀ ಭಕ್ತನಾಗಿ ನಾ ಜಂಗಮವಾಗಿ,
ಗುಹೇಶ್ವರಲಿಂಗವೆಂಬುದಕ್ಕೆ ಅಂಗವಾಯಿತ್ತು.
ವಚನ 0059
ಅಂದೊಮ್ಮೆ ಧರೆಯ ಮೇಲೆ ಉದಕವಿಲ್ಲದಂದು
ಕೆಳಯಿಂಕೆ ಪಾದವ ನೀಡಿದೆಯಲ್ಲಾ ಬಸವಣ್ಣ
ಧರೆಯ ತಾಗಿದ ಪಾದವ ದಿಗಿಲನೆ ಎತ್ತಲು
ಭುಗಿಲೆನೆ ಉದಕವೆದ್ದು ನಿಮ್ಮ ಉರಸ್ಥಲಕೆ ಬಾರದೆ ?
ಕನಲಿ ಎದ್ದು ಅಂಕೆಗೆ (ಆಚೆಗೆ ?) ನಿಂದು ನೋಡಲು
ಸಪ್ತ ಸಾಗರಂಗಳೆಲ್ಲವು ನಿಮ್ಮ ಕಿರುಪಾದದಲ್ಲಿ ಅಡಗವೆ ಬಸವಣ್ಣಾ ?
ಅದನೆಂತು ಕೊಡಬಹುದು, ಅದನೆಂತು ಕೊಳಬಹುದು ?
ನಮ್ಮ ಗುಹೇಶ್ವರಲಿಂಗಕ್ಕೆ
ನಿಮ್ಮ ಪಾದೋದಕವೆ ಮಜ್ಜನ ಕಾಣಾ ಸಂಗನಬಸವಣ್ಣ.
ವಚನ 0060
ಅಂಬರದೊಳಗೊಂದು ಅಡವಿ ಹುಟ್ಟಿತ್ತು.
ಆ ಅಡವಿಯೊಳಗೊಬ್ಬ ವ್ಯಾಧನೈದಾನೆ.
ಆ ವ್ಯಾಧನ ಕೈಯಲ್ಲಿ ಸಿಕ್ಕಿತ್ತು ಒಂದು ಮೃಗವು.
ಆ ಮೃಗವ ಕೊಂದಲ್ಲದೆ ವ್ಯಾಧ ಸಾಯನು !
ಅರಿವು ಬರಿದುಂಟೆ ಗುಹೇಶ್ವರಾ ?
ವಚನ 0061
ಅಂಬರವಿಲ್ಲದ ಮೇರು, ಅಂಬುದಿಯಿಲ್ಲದ ಗುಂಪ
ತಂದವರಿಲ್ಲದೆ ಬಂದಿತ್ತು, ನಿಜವನೊಳಕೊಂಡಿತ್ತು
ಸಾಧನವಿಲ್ಲದ ಓಗರವ ಭಾಜನವಿಲ್ಲದೆ ಗಡಣಿಸಿ
ಭೋಜನವಿಲ್ಲದೆ ತೃಪ್ತಿಯಾಯಿತ್ತು ನೋಡಾ.
ಕ್ರಿಯಾವಿರಹಿತಯೋಗ ಫಲದಾಯಕ ಹೀನಭಕ್ತಿ,
ಆಯತ ಸ್ವಾಯತವರಿಯದೆ ಹೋಯಿತ್ತು ಗುಹೇಶ್ವರಾ.
ವಚನ 0062
ಅಂಬುದಿಯೊಳಗಾದ ನದಿಗಳು ಮರಳುವುವೆ ?
ಉರಿಯೊಳಗಾದ ಕರ್ಪುರ ರೂಪಿಂಗೆ ಬಪ್ಪುದೆ ?
ಮರುತನೊಳಗಾದ ಪರಿಮಳ ಲೇಪನಕ್ಕೆ ಬಪ್ಪುದೆ ?
ಲಿಂಗವನರಿದು ಲಿಂಗೈಕ್ಯವಾದ ಶರಣ
ಮರಳಿ ಹುಟ್ಟುವನೆ ಗುಹೇಶ್ವರಾ ?
ವಚನ 0063
ಅಂಬುಧಿ ಉರಿಯಿತ್ತು ಅವನಿಯ ಮೇಲನರಿಯಲು.
ಕೋಡೆರಡರೊಳೊಂದ ತಿಳಿದು, ವಾಯುವ ಬೈಯುತ್ತ, ತುಂಬಿ
ಅಮೃತವ ಕಂಡು ಪ್ರಾಣನಾಥಂಗೆ ಅರ್ಪಿತವ ಮಾಡಿ,
ಆ ಪ್ರಸಾದದಿಂದ ಸುಖಿಯಾದೆನಯ್ಯಾ-ಗುಹೇಶ್ವರಾ.
ವಚನ 0064
ಅಕಟಕಟಾ ದೇಹಾರ ಅಭ್ಯಾಸವಾಯಿತ್ತಲ್ಲಾ !
ಅಕಟಕಟಾ ಓಗರ ಉಪಹಾರವಾಯಿತ್ತಲ್ಲಾ !
ಅಕಟಕಟಾ ಅನುಭಾವ ಹೊಲಬುಗೆಟ್ಟು ಹೋಯಿತ್ತಲ್ಲಾ !
ಅಕಟಕಟಾ ಷೋಡಶೋಪಚಾರವನರಿಯದೆ
ಕೆಟ್ಟರಲ್ಲಾ ಗುಹೇಶ್ವರಾ.
ವಚನ 0065
ಅಕಲ್ಪಿತ ನಿತ್ಯ ನಿರಂಜನ ನಿಃಸೀಮ ನಿರವಯ
ಅಖಂಡ ಪರಿಪೂರ್ಣ ಪರಂಜ್ಯೋತಿಯಾದ
ಮಹಾ ಘನವಸ್ತುವಿನಲ್ಲಿ ಪರಮಾತ್ಮನುತ್ಪತ್ತಿ.
ಆ ಪರಮಾತ್ಮನಿಂದ ಅಂತರಾತ್ಮನುತ್ಪತ್ತಿ.
ಆ ಅಂತರಾತ್ಮನಿಂದ ಜೀವಾತ್ಮನುತ್ಪತ್ತಿ.
ಈ ತ್ರಯಾತ್ಮರೊಳಗೆ ಜೀವ-ಅಂತರಾತ್ಮಾದಿಗಳೆ ಪಾಶಬದ್ಧರು
ಪರಮಾತ್ಮನೆ ಪಾಶಮುಕ್ತನು.
ಈ ಸಂಚವನರಿದ ದ್ವಂದ್ವರಹಿತ ತಾನೆ
ನಮ್ಮ ಗುಹೇಶ್ವರಲಿಂಗದಲ್ಲಿ ಯಂತ್ರವಾಹಕನೆನಿಸುವನು.
ವಚನ 0066
ಅಕಲ್ಪಿತ ನಿತ್ಯ ನಿರಂಜನ ನಿರವಯ ನಿರಾಕಾರ ಪರಂಜ್ಯೋತಿ ಲಿಂಗದಲ್ಲಿ
ಅಂತರಾತ್ಮಲಿಂಗ ಉತ್ಪತ್ತಿಯಾಯಿತ್ತು.
ಆ ಅಂತರಾತ್ಮಲಿಂಗದಲ್ಲಿ ಜೀವಾತ್ಮಲಿಂಗ ಉತ್ಪತ್ತಿಯಾಯಿತ್ತು.
ಆ ಅಂತರಾತ್ಮನೆ ಗುರು ಜೀವಾತ್ಮನೆ ಶಿಷ್ಯ, ಪರಮಾತ್ಮನೆ ಲಿಂಗ-
ಇದು ಪ್ರಸಿದ್ಧವಾಕ್ಯ ನೋಡಯ್ಯಾ.
ಲಿಂಗದೊಳಗಣ ಬೀಜ ಜಂಗಮ,
ಆ ಜಂಗಮದ ಪ್ರಕಾಶವೆ ಗುರು,
ಆ ಜಂಗಮದ ನಿರಾಕಾರವೆ ಲಿಂಗ,
ಪರಮಾತ್ಮನೆ ಪ್ರಾಣಸ್ವರೂಪವೆಂಬ ಜಂಗಮ.
ಈ ಗುರುಲಿಂಗಜಂಗಮವೆಂಬ ತ್ರಿವಿಧವು, ಏಕವೆಂದರಿಯದ ಕಾರಣ,
ಬ್ರಹ್ಮ ಮುಂದುಗಾಣ, ಹರಿ ಹೊಲಬುಗೆಟ್ಟ, ರುದ್ರ ಧ್ಯಾನಾರೂಢನಾದ.
ಇವರಂಡಜದೊಳಗಣ ಬಾಲಕರೆತ್ತ ಬಲ್ಲರು ಗುಹೇಶ್ವರಾ,
ನಿಮ್ಮ ಮಹತ್ವವ ?
ವಚನ 0067
ಅಕಲ್ಪಿತನೆಂಬ ಭಕ್ತ ಮಾಡಿದ ಸೈದಾನವ ನೋಡಾ !
ಅನಂತಕೋಟಿ ಅಜಾಂಡಂಗಳೆ ಸೈದಾನವಾಗಿ,
ಸವಿಕಲ್ಪಿತ ಸುಖಂಗಳೆಂಬವೆ ಶಾಕವಾಗಿ,
ಸರ್ವಸ್ವಾದವೆಂಬುದೆ ಅಬಿಗಾರವಾಗಿ,
ಇವೆಲ್ಲವನು ಸಹಜವೆಂಬ ಭಾಜನದಲ್ಲಿ ಎಡೆ ಮಾಡುತ್ತಿರಲು
ಉಣಬಂದ ಹಿರಿಯರು ಉಣುತ್ತಿದ್ದರು ನೋಡಾ !
ನಿರ್ವಿಕಲ್ಪವೆಂಬ ಮಹಂತ ಬರಲು ಸೈದಾನವಡಗಿತ್ತು ಭಾಜನ ಉಳಿಯಿತ್ತು.
ಆ ಭಾಜನವ ಉತ್ತರನಿರಾಳದಲ್ಲಿ ಅಳವಡಿಸಿಕೊಳಲು
ನಿಶ್ಚಳ ಘನಪ್ರಸಾದವಾಯಿತ್ತು ಗುಹೇಶ್ವರಾ.
ವಚನ 0068
ಅಕಾರದಾದಿಯನರಿ, ಕ್ಷಕಾರದಂತ್ಯವ ತಿಳಿ.
ಅಕಾರ ಉಕಾರ ಮಕಾರದೊಳಗಣ ಓಂಕಾಪ್ರಭೆಯ ತಿಳಿ.
ವೇದಾದಿ ಪಂಚಕದಾದಿಯನರಿ.
ಐಶ್ವರ್ಯ ಮೊದಲಾದೈದು ನಾಮವನುಳ್ಳ
ವಿಭೂತಿ ಭಸಿತ ಭಸ್ಮ ಕ್ಷಾರ ರಕ್ಷೆ ಎಂಬೈದು
ನಿನ್ನಬಿಮುಖದಿಂದ ಜನನವೆ ಹೇಳು ಗುಹೇಶ್ವರಾ ?
ವಚನ 0069
ಅಕ್ಕಟಾ ಜೀವನ ತ್ರಿವಿಧವೆ,
ಮೂರಕ್ಕೆ ಮುಟ್ಟದೆ ಹೋದೆಯಲ್ಲಾ!
ಬಿಂದುವಿನ ಕೊಡನ ಹೊತ್ತುಕೊಂಡು,
ಅಂದಚಂದಗೆಟ್ಟು ಆಡುವರಯ್ಯಾ!
ಗುಹೇಶ್ವರ ನಿರಾಳವೆ, ಐದರಿಂದ ಕೆಟ್ಟಿತ್ತು ಮೂರು ಲೋಕ
ವಚನ 0070
ಅಕ್ಷರದಲಭ್ಯಾಸವ ಮಾಡಿ ಬರೆವ ತೊಡೆವ ಪರಿಯಿನ್ನೆಂತೊ?
ಸ್ವರೂಪವೆಂಬುದಾವುದು ನಿರೂಪವೆಂಬುದಾವುದು ಅರಿಯರಾಗಿ,
ಆದಿನಿರಾಳ ಮಧ್ಯನಿರಾಳ ಊಧ್ರ್ವನಿರಾಳ ಗುಹೇಶ್ವರ.
ವಚನ 0071
ಅಕ್ಷರವ ನೋಡಿ ಅಭ್ಯಾಸವ ಕಲಿತು,
ನಾನಾವರ್ಣವನಿಟ್ಟು (ಕಳೆವಿರಿ?)ಭೋ,
ಸ್ವರೂಪಾದಿಕನಲ್ಲ ನಿರೂಪಾದಿಕನಲ್ಲ,
ಮಹಾಘನವು ಕಾಣಿ ಭೋ.
ಆದಿನಿರಾಳ ಮಧ್ಯನಿರಾಳ ಊಧ್ರ್ವನಿರಾಳ ಗುಹೇಶ್ವರಯ್ಯನು ತಾನೆ.
ವಚನ 0072
ಅಕ್ಷರವ ಬಲ್ಲೆನೆಂ(ವೆಂ?)ದು ಅಹಂಕಾರವೆಡೆಗೊಂಡು, ಲೆಕ್ಕಗೊಳ್ಳರಯ್ಯಾ.
ಗುರು ಹಿರಿಯರು ತೋರಿದ ಉಪದೇಶದಿಂದ;
ವಾಗದ್ವೈತವನೆ ಕಲಿತು ವಾದಿಪರಲ್ಲದೆ
ಆಗು-ಹೋಗೆಂಬುದನರಿಯರು.
ಭಕ್ತಿಯನರಿಯರು ಯುಕ್ತಿಯನರಿಯರು, [ಮುಕ್ತಿಯನರಿಯರು]
ಮತ್ತೂ ವಾದಕೆಳಸುವರು.
ಹೋದರು ಗುಹೇಶ್ವರಾ ಸಲೆ ಕೊಂಡಮಾರಿಗೆ.
ವಚನ 0073
ಅಗ್ಗಣಿತಹೈಸಕ್ಕೆ ಅನಂತಯುಗಂಗಳು ಹೋಗುತ್ತಿವೆಯಯ್ಯಾ.
ಪುಷ್ಪತಹೈಸಕ್ಕೆ ಅನಂತಯುಗಂಗಳು ಹೋಗುತ್ತಿವೆಯಯ್ಯಾ.
ಲಿಂಗಾರ್ಚನೆ ಘನಲಿಂಗಕ್ಕೆಡೆಯಿಲ್ಲ !
ಗುಹೇಶ್ವರಾ ಸಿದ್ಧರಾಮಯ್ಯದೇವರಿಗೆ ಆರೋಗಣೆಯಿಲ್ಲ,
ಶರಣರಿಗೆ ಪ್ರಸಾದವಿಲ್ಲ.
ವಚನ 0074
ಅಗ್ಘವಣಿಯ ತಂದು ಮಜ್ಜನವ ಮರೆದವನ,
ಪುಷ್ಪವ ತಂದು ಪೂಜೆಯ ಮರೆದವನ,
ಓಗರವ ತಂದು ಅರ್ಪಿತವ ಮರೆದವನ,
ಲಿಂಗವ ಕಂಡು ತನ್ನ ಮರೆದವನ,
ಮಹಾಘನವ ಒಳಕೊಂಡಿತ್ತು ಗುಹೇಶ್ವರ.
ವಚನ 0075
ಅಗ್ನಿ ಮುಟ್ಟಲು ತೃಣ, ಭಸ್ಮವಾದುದನೆಲ್ಲರೂ ಬಲ್ಲರು.
ತೃಣದೊಳಗೆ ಅಗ್ನಿಯುಂಟೆಂಬುದ ತಿಳಿದು ನೋಡಿರೆ.
ಅಗ್ನಿ ಜಲವ ನುಂಗಿತ್ತು, ಜಲ ಅಗ್ನಿಯ ನುಂಗಿತ್ತು.
ಪೃಥ್ವಿ ಎಲ್ಲವ ನುಂಗಿತ್ತು, ಆಕಾಶವನೆಯ್ದೆ ನುಂಗಿತ್ತು.
ಅರಿದೆನೆಂಬ ಜಡರುಗಳು ನೀವು ತಿಳಿದು ನೋಡಿರೆ-
ತಿಳಿಯಬಲ್ಲಡೆ ಗುಹೇಶ್ವರನ ನಿಲವು ತಾನೆ !
ವಚನ 0076
ಅಗ್ನಿ ಮುಟ್ಟಿದುದುವೊ, ಆಕಾಶದಲದೆವೊ
ಉದಕ ಮುಟ್ಟಿದುದುವೊ, ನಿರಾಳದಲದೆವೊ
ಬ್ರಹ್ಮರಂಧ್ರದಲದೆವೊ-ಭ್ರಮಿಸದೆ ನೋಡಾ !
ಆವಂಗೆಯೂ ಅಸದಳ, ಆವಂಗೆಯೂ ಅರಿಯಬಾರದು!
ಇದೇನು ಮಾಯೆ ಹೇಳಾ ಗುಹೇಶ್ವರಾ ?
ವಚನ 0077
ಅಗ್ನಿಗೆ ತಂಪುಂಟೆ? ವಿಷಕ್ಕೆ ರುಚಿಯುಂಟೆ ಹೇಳಾ ?
ಕಂಗಳಿಗೆ ಮರೆಯುಂಟೆ ಹೇಳಾ ಲಿಂಗವೆ ?
ದಾಳಿಕಾರಂಗೆ ಧರ್ಮವುಂಟೆ ? [ಕನ್ನಗಳ್ಳಂಗೆ] ಕರುಳುಂಟೆ ?
ಗುಹೇಶ್ವರಾ, ನಿಮ್ಮ ಶರಣರು,
ಮೂರು ಲೋಕವರಿಯೆ ನಿಶ್ಚಟರಯ್ಯಾ.
ವಚನ 0078
ಅಗ್ನಿಯ ಒಡಲೊಳಗೊಬ್ಬ ಆಕಾಶವರ್ಣದ ಸೂಳೆ;
ಆ ಸೂಳೆಗೆ ಮೂವರು ಮಕ್ಕಳು ನೋಡಾ !
ಆ ಮಕ್ಕಳ ಕೈ ಬಾಯಲ್ಲಿ ಮೂರುಲೋಕ ಮರುಳಾಗಿ
ಅಚ್ಚುಗಬಡುತ್ತಿರ್ದಡೇನು ಚೋದ್ಯವೊ ?
ಕರಿಯ ಬಣ್ಣದ ಮುಸುಕನುಗಿದು ಬೆರೆಸಬಲ್ಲ ಶರಣಂಗಲ್ಲದೆ
ಪರಮತತ್ವ(ಪರತತ್ವ ?)ವೆಂಬುದು ಸಾಧ್ಯವಾಗದು ಗುಹೇಶ್ವರಾ.
ವಚನ 0079
ಅಗ್ನಿಯ ಸುಡುವಲ್ಲಿ ಉದಕವ ತೊಳೆವಲ್ಲಿ
ವಾಯುವ ಮೆಟ್ಟಿ ಆಕಾಶವ ಹಿಡಿವಲ್ಲಿ
ಯೋಗದ ಹೊಲಬ ನೀನೆತ್ತ ಬಲ್ಲೆ?
ಕದಳಿಯ ಬನವ ನಿನ್ನಲ್ಲಿ ನೀನು ತಿಳಿದು ನೋಡು,
ಮದ ಮತ್ಸರ ಬೇಡ. ಹೊದಕುಳಿಗೊಳಬೇಡ.
ಗುಹೇಶ್ವರನೆಂಬ ಲಿಂಗವು ಕಲ್ಪಿತವಲ್ಲ ನಿಲ್ಲೊ.
ವಚನ 0080
ಅಗ್ನಿಸ್ತಂಭದ ರಕ್ಷೆಯಿದ್ದು ಮನೆ ಬೆಂದಿತ್ತಯ್ಯಾ.
ಬಲಮುರಿಯ ಶಂಖವಿದ್ದು ಪದ ಹೋಯಿತ್ತಯ್ಯಾ.
ಏಕಮುಖ ರುದ್ರಾಕ್ಷಿಯಿದ್ದು ವಿಘ್ನವಾಯಿತ್ತಯ್ಯಾ.
ಇವೆಲ್ಲವ ಸಾದಿಸಿದಡೆ,
ಏನೂ ಇಲ್ಲದಂತಾಯಿತ್ತು ಕಾಣಾ ಗುಹೇಶ್ವರಾ.
ವಚನ 0081
ಅಘಟಿತ ಘಟಿತನೆ ವಿಪರೀತ ಚರಿತ್ರನೆ,
ಸಾವರ ಕೈಯಲ್ಲಿ ಪೂಜೆಗೊಂಬರೆ ಲಿಂಗಯ್ಯಾ ?
ಸಾವರ ನೋವರ ಕೈಯಲ್ಲಿ ಪೂಜೆಗೊಂಬುದು
ಲಜ್ಜೆ ಕಾಣಾ – ಗುಹೇಶ್ವರಾ.
ವಚನ 0082
ಅಚಲಸಿಂಹಾಸನವನಿಕ್ಕಿ;
ನಿಶ್ಚಲ ಮಂಟಪದ ಸಂಚದೋವರಿಯೊಳಗೆ;
ರುಚಿಗಳೆಲ್ಲವ ನಿಲಿಸಿ-
ಪಂಚರತ್ನದ ಶಿಖರ, ಮಿಂಚುಕೋಟಿಯ ಕಳಸ,
ವಚನ ವಿಚಿತ್ರದ ಪುಷ್ಪದ ರಚನೆ[ಯ] ನವರಂಗದಲ್ಲಿ,
ಖೇಚರಾದಿಯ ಗಮನ.
ವಿಚಾರಿಪರ ನುಂಗಿ.-ಗುಹೇಶ್ವರ ನಿಂದ ನಿಲುವು
ಸಚರಾಚರವ ನುಂಗಿತ್ತು
ವಚನ 0083
ಅಚ್ಚಪ್ರಸಾದಿ ಅಚ್ಚಪ್ರಸಾದಿ ಎಂಬಿರಿ ಕೇಳಿರಯ್ಯಾ;
ನಿಚ್ಚಕ್ಕೆ ನಿಚ್ಚ ಹುಸಿವ ಹುಸಿಗಳ ಕಂಡೆವಯ್ಯಾ [ನಿಮ್ಮಲ್ಲಿ].
ವಾಯು ಬೀಸದ ಮುನ್ನ, ಆಕಾಶ ಬಲಿಯದ ಮುನ್ನ,
ಲಿಂಗಕ್ಕೆ ಅರ್ಪಿತಮುಖವ ಮರೆದಿರಯ್ಯಾ.
ಭೋಜನವ ಮಾಡಿ ಭಾಜನವನಿಕ್ಕಿಟ್ಟು ಹೋಹ ಹಿರಿಯರಿಗೆ
ಭಂಗ ನೋಡಾ ಗುಹೇಶ್ವರಾ.
ವಚನ 0084
ಅಚ್ಚಪ್ರಸಾದಿ ನಿಚ್ಚಪ್ರಸಾದಿಯೆಂಬ ಮುಚ್ಚಟ ಮುದಿಹೊಲೆಯರಿರಾ
ನೀವು ಕೇಳಿರೊ.
ಮುಟ್ಟುವ ಯೋನಿ ಮೆಟ್ಟುವ ಪಾದರಕ್ಷೆ ಈ ಎರಡೆಂಬ ಉಭಯಭ್ರಷ್ಟರಿಗೆ
ಎಲ್ಲಿಯದೊ ಪ್ರಸಾದ ಗುಹೇಶ್ವರಾ ?
ವಚನ 0085
ಅಜ್ಞಾನ ಸುಜ್ಞಾನಗಳೆರಡೂ ಶಿವನೆಂದಡೆ
ಶಿವಜ್ಞಾನಿಗಳು ಮೆಚ್ಚುವರೆ ?
ಶಿವ ಶಕ್ತಿಗಳೆರಡೂ ನೀನೇ ಎಂದಡೆ
ಮಹಾನುಭಾವಿಗಳು ಪರಿಣಾಮಿಸುವರೆ ?
ತನ್ನ ತಾನಾರೆಂಬುದನರಿಯದೆ, ಅನ್ಯವೆಲ್ಲವೂ ಬೊಮ್ಮವೆಂಬ,
ಈ ಕರ್ಮದ ನುಡಿಯ ಮೆಚ್ಚುವನೆ ನಮ್ಮ ಗುಹೇಶ್ವರಲಿಂಗವು ?
ವಚನ 0086
ಅಜ್ಞಾನವೆಂಬ ತೊಟ್ಟಿಲೊಳಗೆ, ಜ್ಞಾನವೆಂಬ ಶಿಶುವ ಮಲಗಿಸಿ,
ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ,
ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ !
ತೊಟ್ಟಿಲು ಮುರಿದು ನೇಣು ಹರಿದು, ಜೋಗುಳ ನಿಂದಲ್ಲದೆ,
ಗುಹೇಶ್ವರನೆಂಬ ಲಿಂಗವ ಕಾಣಬಾರದು
ವಚನ 0087
ಅಜ್ಞಾನಿಯಾದವಂಗೆ ಅರಿವು ತಾನೆಲ್ಲಿಯದೊ ?
ಸುಜ್ಞಾನಿಯಾದವಂಗೆ ಮರಹು ತಾನೆಲ್ಲಿಯದೊ ?
ನಾನರಿದೆನೆಂಬಾತ ಇದಿರ ಕೇಳಲುಂಟೆ ?
ಭ್ರಾಂತಿನ ಭ್ರಮೆಯೊಳಗೆ ಬಳಲುತ್ತಿರಲು
ಮಾತಿನ ಮಾತಿನೊಳಗೆ ಅರಿವೆಂಬುದುಂಟೆ ?
ಸೂತಕ ಹಿಂಗದೆ ಸಂದೇಹವಳಿಯದೆ,
ಮುಂದಣ ಸೂಕ್ಷ್ಮವ ಕಾಬ ಪರಿಯೆಂತೊ?
ಜ್ಯೋತಿಯ ಬಸಿರೊಳಗೆ ಜನಿಸಿದ
ಕಾಂತಿಯೂಥ(ಯುತ?) ಬೆಳಗು ಗುಹೇಶ್ವರಾ ನಿಮ್ಮ ಶರಣ !
ವಚನ 0088
ಅಟ್ಟದ ಮೇಲೆ ಹರಿದಾಡುವ ಇಲಿ
ಕಾದಿರ್ದ ಬೆಕ್ಕ ತಪ್ಪಿಸಿ,
ಬೆಕ್ಕಿನ ಕಣ್ಣೊಳಡಗಿತ್ತು !
ಕಣ್ಣೂ ಇಲಿಯೂ ಕೂಡೆ
ಗುಹೇಶ್ವರಲಿಂಗವ ಕಂಡುದಿಲ್ಲ.
ವಚನ 0089
ಅಟ್ಟಿ ಮುಟ್ಟಲಿಲ್ಲ, ಮುಟ್ಟಿ ಮರಳಲಿಲ್ಲ,
ಏನೆಂಬೆ ಲಿಂಗವೆ, ಎಂತೆಂಬೆ ಲಿಂಗಯ್ಯಾ ?
ನಿಜವನರಿದ ಬಳಿಕ ಮರಳಿ ಹುಟ್ಟಲಿಲ್ಲ, ಕಾಣಾ ಗುಹೇಶ್ವರಾ.
ವಚನ 0090
ಅಟ್ಟಿತ್ತೊಂದು, ಓಡಿತ್ತೊಂದು, ಮುಟ್ಟಿ ಹಿಡಿಯಿತ್ತೊಂದು.
ಅಟ್ಟಾಟಿಕೆಯಲಿ ಅರಿದಾವುದು !
ಹಸು ಮಾಣಿಕ್ಯವ ನುಂಗಿ ಬ್ರಹ್ಮೇತಿಗೊಳಗಾಯಿತ್ತು.
ಮೂರ್ತಿಯಾದುದೆ ಅಮೂರ್ತಿಯಾದತ್ತು,
ಅಮೂರ್ತಿಯಾದುದೆ ಮೂರ್ತಿಯಾದತ್ತು.
ಇದನೆಂತು ತೆಗೆಯಬಹುದು ? ಇದನೆಂತು ಕೊಳಬಹುದು !
ಅಗಮ್ಯ, ಅಗೋಚರ.
ಕಾಯವು ಲಿಂಗದೊಳಡಗಿ, ಪ್ರಾಣವು ಲಿಂಗದೊಳಗಿದ್ದು,
ನೀನೆನ್ನ ಕರಸ್ಥಲದೊಳಗೆ ಮೂರ್ತಿಗೊಂಡು,
ಕಾರುಣ್ಯವ ಮಾಡು ಗುಹೇಶ್ವರಾ.
ವಚನ 0091
ಅಟ್ಟಿಮುಟ್ಟಿತ್ತು ಮನ,
ದೃಷ್ಟಿ ಲಿಂಗದ ಮೇಲೆ,
ತನ್ನ ತಾನರಿದಾತ ತಾನೆ ಮರೆದ
ಗುಹೇಶ್ವರ ಅಲ್ಲಯ್ಯ ನಿಶ್ಶಬ್ದ ಲಿಂಗದಲ್ಲಿ.
ವಚನ 0092
ಅಟ್ಟುದನಡಲುಂಟೆ ? ಸುಟ್ಟುದ ಸುಡಲುಂಟೆ ?
ಜ್ಞಾನಾಗ್ನಿಯಲ್ಲಿ ದಗ್ಧವಾದ ಪರಮಶಿವಯೋಗಿಗೆ
ಹುಟ್ಟು ಹೊಂದೆಂಬ ಉಭಯ ಜಡತೆಯುಂಟೆ ?
ಅದೆಂತೆಂದಡೆ:
“ದಗ್ಧಸ್ಯ ದಹನಂ ನಾಸ್ತಿ ಪಾಕಸ್ಯ ಪಚನಂ ನ ಹಿ
ಜ್ಞಾನಾಗ್ನಿರ್ದಗ್ಧದೇಹಸ್ಯ ನ ಚ ದಾಹೋ ನ ಚ ಕ್ರಿಯಾ ”
ಎಂದುದಾಗಿ-
ನಮ್ಮ ಗುಹೇಶ್ವರಲಿಂಗವನೊಡಗೂಡಿ, ಎರಡಳಿದು ನಿಂದ,
ಮಹಾಮಹಿಮಂಗೆ ಪರಿಭವವಿಲ್ಲ ಕಾಣಿರೊ.
ವಚನ 0093
ಅಡವಿಯಲೊಂದು ಮನೆಯ ಮಾಡಿ,
ಆಶ್ರಯವಿಲ್ಲದಂತಾಯಿತ್ತು.
ನಡುನೀರಿನ ಜ್ಯೋತಿಯ, ವಾಯುವಿನ ಕೈಯಲ್ಲಿ ಕೊಟ್ಟಂತಾಯಿತ್ತು.
ಗುಹೇಶ್ವರಾ ನಿಮ್ಮ ಶರಣರು ಎರವಿನ ಲಿಂಗ ಮೂರು ಲೋಕಕ್ಕೆ !
ವಚನ 0094
ಅಡವಿಯೊಳಗೆ ಕಳ್ಳರು ಕಡವಸಿದ್ಧ (ಕಡವಸದ?) ಸ್ವಾಮಿಯನು
ಹುಡುಕಿ ಹುಡುಕಿ ಅರಸುತ್ತೈದಾರೆ.-ಸೊಡರು ನಂದಿ ಕಾಣದೆ !
ಅನ್ನ ಪಾನದ ಹಿರಿಯರೆಲ್ಲರು ತಮ್ಮತಾವರಿಯದೆ,
ಅಧರಪಾನವನುಂಡು ತೇಗಿ, ಸುರಾಪಾನವ ಬೇಡುತ್ತೈದಾರೆ.
ಅರಿದ ಹಾರುವನೊಬ್ಬನು ಅರಿದ ತಲೆಯ ಹಿಡಿದುಕೊಂಡು,
ಆಧ್ಯಾತ್ಮವಿಕಾರದ ನೆತ್ತರ ಕುಡಿದನು ನೋಡಾ-ಗುಹೇಶ್ವರಾ.
ವಚನ 0095
ಅಡಿಗಡಿಗೆ ತೊಳೆದು ಕುಡಿವಡೆ ಹೊಟ್ಟೆಯ ಜಲಗರಕುತ್ತ ಬೆಳೆಯಿತ್ತೆ ?
ಅಚ್ಚ ಪ್ರಸಾದಿಯಾದಡೆ ಹಿಂದೆ ಪರಿಯಾಣ ಉಳಿವುದೆ ?
ಇವರೆಲ್ಲರು ನಿಮ್ಮ ಪೂಜಿಸಿ ವ್ರತಗೇಡಿಗಳಾದರು.
ನಾ ನಿಮ್ಮ ಪೂಜಿಸಿ ಬದುಕಿದೆನು ಗುಹೇಶ್ವರಾ !
ವಚನ 0096
ಅಣುವಿಂಗೆ ಅಣು ಮಹತ್ತಿಂಗೆ ಮಹತ್ತು ಆದಲ್ಲಿ
ಮರದೊಳಗಣ ಪತ್ರ-ಫಲಂಗಳು
ಕಾಲವಶದಲ್ಲಿ ತೋರುವಂತೆ
ಹರನೊಳಗಣ ಲೀಲಾಪ್ರಕೃತಿಸ್ವಭಾವ
ಹರಲೀಲಾವಶದಲ್ಲಿ ತೋರುವುದು
ಶಿವನೆ ಚೈತನ್ಯಾತ್ಮನು ಚಿತ್ಸ್ವರೂಪನೆಂದರಿಯಬಲ್ಲರೆ
ಬಿನ್ನವೆಲ್ಲಿಯದೊ ಗುಹೇಶ್ವರಾ.
ವಚನ 0097
ಅಣೋರಣೀಯಾನ್ ಮಹತೋ ಮಹೀಯಾನ್” ಎಂಬ ಶ್ರುತಿ ಹುಸಿ.
ಲಿಂಗವಿದ್ದಠಾವಿಂಗೆೆ(ಠಾವಿನಲ್ಲಿ?) ಪ್ರಳಯವುಂಟೆ?
ಭಕ್ತರ ಭಾವದಲ್ಲಿರ್ಪನಲ್ಲದೆ, ಮತ್ತೆಲ್ಲಿಯೂ ಇಲ್ಲ ಗುಹೇಶ್ವರನು.
ವಚನ 0098
ಅತಿರಥ ಸಮರಥರೆನಿಪ ಹಿರಿಯರು,
ಮತಿಗೆಟ್ಟು ಮರುಳಾದರಲ್ಲಾ !
ದೇವಸತ್ತ ಬ್ರಹ್ಮ ಹೊತ್ತ, ವಿಷ್ಣು ಕಿಚ್ಚ ಹಿಡಿದ.
ಗಂಗೆಗೌರಿಯರಿಬ್ಬರು ಬರು ಮುಂಡೆಯರಾದರು.
ಇದ ಕಂಡು ಬೆರಗಾದೆ ಗುಹೇಶ್ವರಾ.
ವಚನ 0099
ಅತ್ತಲಿಂದ ಒಂದು ಪಶುವು ಬಂದು,
ಇತ್ತಲಿಂದ ಒಂದು ಪಶುವು ಬಂದು,
ಒಂದರ ಮೋರೆಯನೊಂದು ಮೂಸಿ ನೋಡಿದಂತೆ,
ಗುರುವು ಗುರುವಿನೊಳಗೆ ಸಂಬಂಧವಿಲ್ಲ ಶಿಷ್ಯರು ಶಿಷ್ಯರೊಳಗೆ ಸಂಬಂಧವಿಲ್ಲ,
ಭಕ್ತರಲಿ ಭಕ್ತರಲಿ ಸಂಬಂಧವಿಲ್ಲ.
ಈ ಕಲಿಯುಗದೊಳಗುಪದೇಶವ ಮಾಡುವ ಹಂದಿಗಳಿರಾ ನೀವು ಕೇಳಿರೊ,
ಗಂಡಗೆ ಗುರುವಾದಡೆ ಹೆಂಡತಿಗೆ ಮಾವನೆ ?
ಹೆಂಡತಿಗೆ ಗುರುವಾದಡೆ ಗಂಡಂಗೆ ಮಾವನೆ ?
ಗಂಡ ಹೆಂಡತಿಗೆ ಗುರುವಾದಡೆ ಇವರಿಬ್ಬರೇನು ಒಡಹುಟ್ಟಿದರೆ ?
ಈ ಭೇದವನರಿಯದೆ ದೀಕ್ಷೆ ಕಾರಣವ ಮಾಡುವಾತ ಗುರುವಲ್ಲ.
ಈ ಕಳೆಯ ಕುಲವನರಿಯದಾತ ಶಿಷ್ಯನಲ್ಲ.
ಈ ಭೇದವನರಿದು ಕಾರಣವ ಮಾಡುವ ಗುರುಶಿಷ್ಯ ಸಂಬಂಧವೆಲ್ಲ
ಉರಿ ಕರ್ಪುರ ಸಂಯೋಗದಂತಹುದು ಕಾಣಾ ಗುಹೇಶ್ವರಾ.
ವಚನ 0100
ಅತ್ತಲಿತ್ತಲು ಕಾಣಲಿಲ್ಲ, ಬಯಲ ಧಾಳಿ ಮುಟ್ಟಿತ್ತಲ್ಲಾ !
ಸರಳಮಂಡಲ ಮಂಜಿನ ಕಾಳಗತ್ತಲೆ ಕವಿಯಿತ್ತು.
ರವಿಯ ರಥದಚ್ಚು ಮುರಿಯಿತ್ತು !
ಶಶಿ ಅಂಶದ ನಿಲವನು ರಾಯ (ರಾಹು ?) ಗೆದ್ದುದ ಕಂಡು
ಹಿರಿಯರು ಹೊಲಬುಗೆಟ್ಟರು ಗುಹೇಶ್ವರಾ.
ವಚನ 0101
ಅದೃಷ್ಟಕರಣದ ಮೇಲಣ ಪೂರ್ವಾಶ್ರಯವ ಕಳೆದು
ಗುರುವಿನ ಹಸ್ತ ಮುಟ್ಟಿತ್ತೆಂಬ ಸಂದಣಿಯಲ್ಲಿ ಹೋಗದು.
ಪಂಚೇಂದ್ರಿಯ ಲಿಖಿತವ ತೊಡೆದು, ಲಿಂಗಲಿಖಿತವ ಬರೆವುದು
ಶಿಷ್ಯನ ಕೈಯಲ್ಲಲ್ಲದೆ ಗುರುವಿನ ಕೈಯಲಾಗದು.
ಭವಿ ಮಾಡುವ ಬೋನವ,
ಭಕ್ತ ಕಾಣದ ಹಾಗೆ ಅರ್ಪಿಸುವ ಭೇದವರಿದು,
ಪ್ರಸಾದದ ಪೂರ್ವಾಶ್ರಯವ ಕಳೆದು,
ರೂಪಿಸಬಲ್ಲೆವೆಂದಡೆ ಹರಿಯದು.
ಗುರುವಿಲ್ಲದ ಶಿಷ್ಯ ಶಿಷ್ಯನಿಲ್ಲದ ಗುರು-
ಇಂತೀ ಒಂದಕ್ಕೊಂದು ಇಲ್ಲದೆ
ಗುಹೇಶ್ವರಲಿಂಗದಲ್ಲಿ ಸಹಜದುದಯವಾದ
ನಮ್ಮ ಚನ್ನಬಸವಣ್ಣಂಗೆ ನಮೋ ನಮೋ ಎಂಬೆನು.
ವಚನ 0102
ಅದ್ಭುತವೆಂಬ ಪಿಶಾಚಿ ಮೂರುಲೋಕವನವಗ್ರಹಿಸಿತ್ತಯ್ಯಾ!
ಆ ಅದ್ಭುತದೊಳಗೊಂದು ಗ್ರಹ, ನಿರಂತರ ನಲಿದಾಡುತ್ತಿದ್ದಿತ್ತಯ್ಯಾ!
ವಜ್ರಯೋಗಿ ಖಗರಂಧ್ರಪುರದಲ್ಲಿ,
ಗುಹೇಶ್ವರಲಿಂಗವು ತಾನೇ ನೋಡಾ.
ವಚನ 0103
ಅದ್ವೈತನ ಕರಸ್ಥಲದೊಳಗೆ, ಅನಂತನೆಂಬ ಗಿಳಿ ಮೂರ್ತಗೊಂಡು
ಅತೀತ ಅನಾಗತ ವರ್ತಮಾನವೆಂಬ ಕೊರೆಕೂಳನುಂಡು
ಓದಿತ್ತು ಅಗಣಿತ ಪುರಾಣ(ವ), ಅನಾಮಯ ಶಾಸ್ತ್ರವನು,
ಅನುಪಮ ವೇದವೆಂದು.-
ನಿಃಸ್ಥಲವ ಸ್ಥಲವಿಡಲು,
ನಿರ್ಮಳಾತ್ಮಂಗೆ ಇಹವಿಲ್ಲ ಪರವಿಲ್ಲ !
ಆದಿ ಮಧ್ಯಾಂತ ನಿರಾಳ ಗುಹೇಶ್ವರನ ಅನುಭವಿಗೆ
ಸರ್ವಾಂಗ ಲಿಂಗವು !
ವಚನ 0104
ಅದ್ವೈತವ ನುಡಿದು ಅಹಂಕಾರಿಯಾದೆನಯ್ಯಾ.
ಬ್ರಹ್ಮವ ನುಡಿದು ಭ್ರಮಿತನಾದೆನಯ್ಯಾ.
ಶೂನ್ಯವ ನುಡಿದು ನಾನು ಸುಖದುಃಖಕ್ಕೆ ಗುರಿಯಾದೆನಯ್ಯಾ.
ಗುಹೇಶ್ವರಾ ನಿಮ್ಮ ಶರಣ ಸಂಗನಬಸವಣ್ಣನ ಸಾನ್ನಿಧ್ಯದಿಂದ
ನಾನು ಸದ್ಭಕ್ತನಾದೆನಯ್ಯಾ.
ವಚನ 0105
ಅದ್ವೈತವೆಂಬ ಶಿಶುವೆನ್ನ ಕರಸ್ಥಲವ ಸೋಂಕಲೊಡನೆ
ಎನ್ನ ತನ್ನಂತೆ ಮಾಡಿತ್ತಾಗಿ,
ಎನ್ನ ನಾನೆಂಬ ವಿಚಾರವು ಅರತು ಹೋಯಿತ್ತು ಕೇಳಾ.
ಮತ್ತೆ ಅನ್ಯವಿಚಾರವನೆಂತೂ ಅರಿಯೆನು.
ಎನ್ನ ಪೂರ್ವಾಪರವ ನಿಮ್ಮಿಂದಲರಿಯಲೆಂದು ಬಂದು
ನಿಮ್ಮ ಮರೆಹೊಕ್ಕೆನಾಗಿ,
ಸಂಗನಬಸವಣ್ಣನ ಮಹಿಮೆಯ ನಾನೆತ್ತ ಬಲ್ಲೆನು ?
ಗುಹೇಶ್ವರನ ಸಾಕ್ಷಿಯಾಗಿ
ಸಂಗನಬಸವಣ್ಣ ನಿನ್ನ ಅಂತರಂಗದೊಳಗೆ ಬೆಳಗುತ್ತೈದಾನೆ.
ಎನಗೊಮ್ಮೆ ಬಸವಣ್ಣನ ಘನವ ತಿಳುಹಿ ಕೊಡಾ ಚೆನ್ನಬಸವಣಾ
ವಚನ 0106
ಅಧರ ತಾಗಿದ ರುಚಿಯ, ಉದರ ತಾಗಿದ ಸುಖವ,
ಲಿಂಗಾರ್ಪಿತವ ಮಾಡಿದಡೆ ಕಿಲ್ಬಿಷ ನೋಡಿರೆ.
ಓಗರ ಪ್ರಸಾದವಲ್ಲ; ಪ್ರಸಾದ ಅರ್ಪಿತವಲ್ಲ.
ಇದನರಿದ ಶರಣಂಗೆ ಆಚಾರವಿಲ್ಲ, ಆಚಾರವಿಲ್ಲದ ಶರಣಂಗೆ ಲಿಂಗವಿಲ್ಲ.
ಲಿಂಗವಿಲ್ಲದ ಶರಣನ ನಿಲವು;
ಶಿವಸಂಪತ್ತಿನಲಾದ ಉದಯ, ವಿಪರೀತ ಸುಳುಹು !
ಪ್ರಕಟಸಂಸಾರದ ಬಳಕೆಯ ಹೊಡಕಟ್ಟಿ ಹಾಯ್ದು
ನಿಬ್ಬೆರಗು ಎಸೆವುದು ಅರಿವಿನ (ಎರವಿನ?) ಘಟದಲ್ಲಿ !
ಅರ್ಪಿಸಿದ ಪ್ರಸಾದವನು ಭೇದದಿಂದ ರುಚಿಸುವನಲ್ಲ ಕೇಳಿರಯ್ಯಾ.
ದಿಟವ ಬಿಟ್ಟು ಸಟೆಯಲ್ಲಿ ನಡೆಯ ನೋಡಾ.
ಇಲ್ಲದ ಲಿಂಗವನುಂಟುಮಾಡಿ ಪೂಜಿಸುವ,
ಬರಿಯ ಬಣ್ಣಕರೆಲ್ಲ ನೀವು ಕೇಳಿರೆ.
ನೀವು ಪೂಜಕರಪ್ಪಿರಲ್ಲದೆ,
ಗುಹೇಶ್ವರಲಿಂಗವಿಲ್ಲೆಂಬ ಶಬುದ ಸತ್ತು ಹುಟ್ಟುವರಿಗೆಲ್ಲಿಯದೊ ?
ವಚನ 0107
ಅನಂತಕೋಟಿ ಪ್ರಕಾಶವೆಂದು ಗಣಿಸಬಾರದ ಬ್ರಹ್ಮದಾ ಬೆಳಗು,
ನೋಡಬಾರದ ಘನವು ತೆರಹಿಲ್ಲದ ಬೆಳಗು, ಮಹಾಬೆಳಗು !
ತನ್ನಿಂದ ತಾನಾದ ಸ್ವಯ ಸುಖದ ನಿಜ, ನಿತ್ಯ ನಿಜ;
ರೂಪು ನಿರಂಜನ, ನಿಗಮಕ್ಕತೀತ !
ಹರಿಯಜರಿಗೆಟುಕದ ಜ್ಯೋತಿರ್ಮಯ ತಾನೆ
ಲೀಲೆಗೆ ಮೂಲವಾದ.
ಗುಹೇಶ್ವರಲಿಂಗ ಘನಕ್ಕೆ, ಘನವಾದುದು !
ವಚನ 0108
ಅನಲನಾರಣ್ಯದೊಳಗೆ ಎದ್ದಲ್ಲಿ;
ದೂ(ಧು?)ರದೆಡೆಯಲಾರನೂ ಕಾಣೆವು,
ಸಂಗ್ರಾಮದಿರರೆಲ್ಲರೂ ನೆಲೆಗೆಟ್ಟರಾಗಿ !
ಮಾಯಾಮಂಜಿನ ಕೋಟೆಗೆ, ರಂಜನೆಯ ಕೊತ್ತಳ, ಅಂಜನೆಯ ಕಟ್ಟಳೆ.
ಗುಹೇಶ್ವರನು ಶರಣ ಐಕ್ಯಸ್ಥಲವ ಮೆಟ್ಟಲೊಡನೆ,
ಸರ್ವವೂ ಸಾಧ್ಯವಾಯಿತ್ತು.
ವಚನ 0109
ಅನಾದಿ ಶರಣನ ಹೃತ್ಕಮಲ ಮಧ್ಯದ
ತೇಜೋಮಯವನೇನೆಂದುಪಮಿಸಯ್ಯಾ ?
ಜಲವೆ ಪಾದಶಿಲೆ, ಪೃಥ್ವಿಯೆ ಪಿಂಡಿಗೆ
ಆಕಾಶವೆ ಲಿಂಗ, ಸಪ್ತಸಮುದ್ರಗಳೆ ಪಂಚಾಮೃತ,
ಮೇಘವೆ, ಅಗ್ಘವಣಿಯ ಬಿಂದಿಗೆ, ಮಳೆಗಾಲವೆ ಮಜ್ಜನ,
ಚಂದ್ರಮನೆ ನೊಸಲ ಗಂಧ, ನಕ್ಷತ್ರವೆ ಅಕ್ಷತೆ,
ತರುಮರಾದಿಗಳೆ ಪತ್ರೆಪುಷ್ಪ, ಮೊಳಗೆ ಪಂಚಮಹಾವಾದ್ಯ !
ಮಾಗಿಯೆಂಬ ಪರಿಯಾಣವ ಬೆಳಗಿ, ಬೇಸಗೆಯೆಂಬ ಓಗರವ ಗಡಣಿಸಿ
ಸರ್ವಪರಿಮಳವೆಂಬ ತುಪ್ಪವನೆರೆದು, ಪರವೆಂಬ ಮೇಲೋಗರವನಿಕ್ಕಿ
ಬೆಳಗು ಕತ್ತಲೆಯೆಂಬ ಕನ್ನಡವ ಕಟ್ಟಿ,
ಲಿಂಗವ ಆರೋಗಣೆಯ ಮಾಡಿಸಿ
ಸುಜ್ಞಾನದಲ್ಲಿ ಕೈಗೆರೆದು
ಭಾವವೆಂಬ ವೀಳೆಯವ ಕೊಟ್ಟು,
ಅನು ನೀನೆಂಬ ಅನುಲೇಪಗಂಧವ ಪೂಸಿ
ವಾಯುವೆಂಬ ವಸ್ತ್ರವನುಡಿಸಿ,
ಗುಹೇಶ್ವರನೆಂಬ ಲಿಂಗ ಪರಿಪೂರ್ಣವಾಗಿದ್ದ ಬಳಿಕ,
ಮಜ್ಜನಕ್ಕೆರೆವಠಾವಾವುದೈ ಸಂಗನಬಸವಣ್ಣಾ ?
ವಚನ 0110
ಅನಾದಿಗಣನಾಥನ ಶಿಷ್ಯನು ಆದಿಗಣನಾಥನು.
ಆದಿಗಣನಾಥನ ಶಿಷ್ಯನು ಅಧ್ಯಾತ್ಮಗಣನಾಥನು.
ಅಧ್ಯಾತ್ಮಗಣನಾಥನ ಶಿಷ್ಯನು ಆತ್ಮಗಣನಾಥನು.
ಆತ್ಮಗಣನಾಥನ ಶಿಷ್ಯನು ವ್ಯೋಮಸಿದ್ಧಗಣನಾಥನು
ವೋಮಸಿದ್ಧಗಣನಾಥನ ಶಿಷ್ಯನು ಬಸವನೆಂಬ ಗಣನಾಥನು.
ಬಸವನೆಂಬ ಗಣನಾಥನ ಶಿಷ್ಯನು ಅನಿಮಿಷನೆಂಬ ಗಣನಾಥನು.
ಅನಿಮಿಷನೆಂಬ ಗಣನಾಥನ ಶಿಷ್ಯನು ಅಲ್ಲಮಪ್ರಭುವೆಂಬ ಗಣನಾಥನು.
ಇಂತು ಅನಾದಿವಿಡಿದು ಬಂದ ಅನುಪಮಲಿಂಗವು,
ಗುಹೇಶ್ವರನೆಂಬ ಹೆಸರನೊಳಕೊಂಡು,
ಎನ್ನ ಕರಸ್ಥಲಕ್ಕೆ ಸಾಧ್ಯವಾಯಿತ್ತು ಕಾಣಾ ಸಿದ್ಧರಾಮಯ್ಯಾ.
ವಚನ 0111
ಅನಾದಿಪುರುಷ ಬಸವಣ್ಣಾ,
ಕಾಲ ಮಾಯೆಗಳೆರಡೂ ನಿಮ್ಮ ಮುಂದಿರ್ದು,
ನಿಮ್ಮ ಕಾಣೆವೆನುತ್ತಿಹವು.
ಆದಿಪುರುಷ ಬಸವಣ್ಣಾ;
ಸುರಾಸುರರು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹರು.
ನಾದಪುರುಷ ಬಸವಣ್ಣಾ,
ನಾದ ಮಂತ್ರಗಳು ಪಂಚಮಹಾವಾದ್ಯಂಗಳು
ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹವು.
ವೇದಪುರುಷ ಬಸವಣ್ಣಾ,
ವೇದಶಾಸ್ತ್ರಾಗಮ ಪುರಾಣಂಗಳು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹವು.
ಆಗಮ್ಯಪುರುಷ ಬಸವಣ್ಣಾ,
ಅಂಗಾಲ ಕಣ್ಣವರು ಮೈಯೆಲ್ಲ ಕಣ್ಣವರು ನಂದಿವಾಹನರು
ಗಂಗೆವಾಳುಕರೆಲ್ಲರು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹರು.
ಅಗೋಚರಪುರುಷ ಬಸವಣ್ಣಾ,
ಈ ಗೋಚರಿಸಿದ ಮನುಮುನಿ ದೇವದಾನವ ಮಾನವರೆಲ್ಲರು
ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹರು.
ಅಪ್ರಮಾಣಪುರುಷ ಬಸವಣ್ಣ,
ಈ ಪ್ರಮಾಣರೆಲ್ಲರು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹರು.
ಸರ್ವಜ್ಞಪುರುಷ ಬಸವಣ್ಣಾ,
ಈ ಸರ್ವರು ನಿಮ್ಮ ಬಳಸಿರ್ದು ನಿಮ್ಮ ಕಾಣೆವೆನುತ್ತಿಹರು.
ಇಂತೀ ಸರ್ವಪ್ರಕಾರದವರೆಲ್ಲರೂ
ನಿಮ್ಮ ಸಾದಿಸಿ ಭೇದಿಸಿ ಪೂಜಿಸಿ ತರ್ಕಿಸಿ ಹೊಗಳಿ ಕಾಣದೆ
ನಿಮ್ಮಿಂದವೆ ಉತ್ಪತ್ತಿ ಸ್ಥಿತಿಲಯಂಗಳಾಗುತ್ತಿಹರು.
ಅದು ಕಾರಣ,-ನಮ್ಮ ಗುಹೇಶ್ವರಲಿಂಗದಲ್ಲಿ ಭಕ್ತಿವಡೆದ
ಅನಂತ ಭಕ್ತರೆಲ್ಲ
ಬಸವಣ್ಣ ಬಸವಣ್ಣ ಬಸವಣ್ಣ ಎನುತ್ತ ಬದುಕಿದರಯ್ಯಾ.
ವಚನ 0112
ಅನಾದಿಯ ಭ್ರೂಮಧ್ಯದಲ್ಲಿ, ಐದು ಕುದುರೆಯ ಕಟ್ಟಿದ ಕಂಬ, ಮುರಿಯಿತ್ತು !
ಎಂಟಾನೆ ಬಿಟ್ಟೋಡಿದವು !
ಹದಿನಾರು ಪ್ರಜೆ ಬೊಬ್ಬಿಡುತಿರ್ದರು.
ಶತಪತ್ರಕಮಲಕರ್ಣಿಕೆಯ ಮಧ್ಯದಲ್ಲಿ
ಗುಹೇಶ್ವರಲಿಂಗ ಶಬ್ದ ಮುಗ್ಧವಾಗಿರ್ದನು.
ವಚನ 0113
ಅನಾದಿಯ ಮಗನು ಆದಿ, ಆದಿಯ ಮಗನತೀತ,
ಅತೀತನ ಮಗನು ಆಕಾಶ,. ಆಕಾಶನ ಮಗನು ವಾಯು,
ವಾಯುವಿನ ಮಗನಗ್ನಿ, ಅಗ್ನಿಯ ಮಗನು ಅಪ್ಪು,
ಅಪ್ಪುವಿನ ಮಗನು ಪೃಥ್ವಿ.
ಪೃಥ್ವಿಯಿಂದ ಸಕಲ ಜೀವರೆಲ್ಲರು ಉದ್ಭವಿಸಿದರು ಗುಹೇಶ್ವರಾ
ವಚನ 0114
ಅನಾದಿಯಲೊಬ್ಬ ಶರಣ;
ಆಹ್ವಾನ ವಿಸರ್ಜನವಿಲ್ಲದ ಪರತತ್ವವ ಸ್ಥಾಪಿಸಿ ಪ್ರತಿಷ್ಠೆಯ ಮಾಡುವಲ್ಲಿ
ಷಡುವರ್ಣಾತ್ಮಕ ಮೃಗಿ ಹುಟ್ಟಿದಳು ನೋಡಾ !
ಆ ಮೃಗಿಯೊಳು ಪಂಚಾಂಗ ಪಂಚತಂಡದವರೆಲ್ಲ ಹುಟ್ಟಿ ವರ್ತಿಸಿ ಲಯವಾಗಿ,
ಮತ್ತೆ ಪಲ್ಲವಿಸುತಿರ್ದರು ನೋಡಾ !
ಆ ಪರತತ್ವದ ಲೀಲೆಯನು ಆ ಶರಣನೆ ಬಲ್ಲ ಗುಹೇಶ್ವರಾ
ವಚನ 0115
ಅನು ನೀನೆಂಬುದು ತಾನಿಲ್ಲ, ತಾನರಿದ ಬಳಿಕ ಏನೂ ಇಲ್ಲ ಇಲ್ಲ.
ಇಲ್ಲದ ಇಲ್ಲವೆ ಎಲ್ಲಿಂದ ಬಪ್ಪುದೊ?
ಅನುವರಿದು, ತನುವ ಮರೆದ ಭಾವರಹಿತ ಗುಹೇಶ್ವರ.
ವಚನ 0116
ಅನುಭವ ಅನುಭವವೆಂಬ ಅಣ್ಣಗಳು ನೀವು ಕೇಳಿರೆ,
ಅನುಭವವೆಂಬುದೊಂದು ಎತ್ತು, ಕೆಟ್ಟಿತ್ತು.
ಎತ್ತು ಗೇಣುದ್ದ, ಕೊಂಬು ಮೊಳದುದ್ದ.
ಕೆಟ್ಟೆಂಟು ದಿನ, ಕಂಡು ಹದಿನಾರುದಿನ
ನಿನ್ನೆ ಮೆಟ್ಟಿದ ನಾಟಿಯ ಮೊನ್ನೆ ಮೇವುದ ಕಂಡೆ
ಗುಹೇಶ್ವರನೆಂಬ ಎತ್ತು ನಿಮ್ಮೊಳಗೈದಾನೆ; ಅರಸಿಕೊಳ್ಳಿರೊ.
ವಚನ 0117
ಅನುಭವ ಪ್ರಾಣಲಿಂಗ ಪರಾತ್ಪರವೆಂದರಿದು,
ಅಣೋರಣೀಯಾನ್ ಮಹತೋ ಮಹೀಯಾನ್” ಎಂದು ಅಣುರೇಣು ತೃಣಕಾಷ್ಠದೊಳ್ಕೂಡಿ, ತೇನ ವಿನಾ ತೃಣಾಗ್ರಮಪಿ ನ ಚಲತಿ”-
ಎಂದು ಪರಿಪೂರ್ಣ ಸದಾಶಿವನೆಂದರಿದು-
ಇಂತು ಕ್ಷಣವೇದಿ ಅಂತರಂಗವ ವೇದಿಸಲ್ಕೆ, ಅಗಣಿತ ಅಕ್ಷೇಶ್ವರ ತಾನೆಂದು
ಪ್ರಣಮಪ್ರಭೆಯ ಮೇಲಣ ಪರಂಜ್ಯೋತಿ ತಾನೆಂದರಿದ ಕಾರಣ
ಗುಹೇಶ್ವರಾ ನಿಮ್ಮ ಶರಣನುಪಾಮಾತೀತನು.
ವಚನ 0118
ಅನುಭಾವದಿಂದ ಹುಟ್ಟಿತ್ತು ಲಿಂಗ,
ಅನುಭಾವದಿಂದ ಹುಟ್ಟಿತ್ತು ಜಂಗಮ,
ಅನುಭಾವದಿಂದ ಹುಟ್ಟಿತ್ತು ಪ್ರಸಾದ.
ಅನುಭಾವ ಅನುವಿನಲ್ಲಿ ಗುಹೇಶ್ವರಲಿಂಗವನುಪಮ ಸುಖಿ.
ವಚನ 0119
ಅನುವನರಿಯದೆ, ಆದಿಯ ವಿಚಾರಿಸದೆ
ಅನಾದಿಯಲ್ಲಿ ತಾನೆರೆಂಬುದ ನೋಡದೆ
ಸ್ತೋತ್ರವ ಮಾಡಿ ಫಲವೇನು ?
`ನಿಶ್ಶಬ್ದಂ ಬ್ರಹ್ಮ ಉಚ್ಯತೇ’ ಎಂಬ ಘನವು
ಹೊಗಳತೆಗೆ ಸಿಕ್ಕುವುದೆ ಎಲೆ ಮರುಳುಗಳಿರಾ ?
ಅನಾದಿಯಲ್ಲಿ ಬಸವಣ್ಣನು ಏಳುನೂರೆಪ್ಪತ್ತು ಅಮರಗಣಂಗಳು ಸಹಿತ
ಮತ್ರ್ಯಕ್ಕೆ ಬಂದನೊಂದು ಕಾರಣದಲ್ಲಿ.
ಬಂದ ಮಣಿಹ ಪೂರೈಸಿತ್ತು-ಸಂದ ಪುರಾತರೆಲ್ಲರೂ ಕೇಳಿ,
ಇಂದು ನೀವೆಲ್ಲರು ನಿಮ್ಮ ನೀವು ತಿಳಿದು ನೋಡಿ
ನಿಜವನೈದುವುದು.
ಇನ್ನು ನಮ್ಮ ಗುಹೇಶ್ವರಲಿಂಗಕ್ಕೆ
ಸುರಾಳದ ಸುಳುಹಿಲ್ಲ.
ವಚನ 0120
ಅನ್ನಬರ ಹಾಗೆನ್ನದಿರು ಸಂಗನಬಸವಣ್ಣಾ.
ನಿನಗೆ ಬೇರೆ ಅಡಗುವ ಕುರುಹೆಂಬುದೊಂದೊಡಲುಂಟು
ಎನಗೆ ಅಂಗೈಯ ನಾಮ, ಕಾಯವೆಂಬ ಕದಳಿ,
ಗುಹೇಶ್ವರನೆಂಬ ಭ್ರಮೆ ಬಿಡದು.
ವಚನ 0121
ಅನ್ನವನಿಕ್ಕಿ ನನ್ನಿಯ ನುಡಿದು
ಅರವಟ್ಟಿಗೆಯನಿಕ್ಕಿ ಕೆರೆಯ ಕಟ್ಟಿಸಿದಡೆ
ಮರಣದಿಂದ ಮೇಲೆ ಸ್ವರ್ಗ ಉಂಟಲ್ಲದೆ
ಶಿವನ ನಿಜವು ಸಾಧ್ಯವಾಗದು.
ಗುಹೇಶ್ವರನನರಿದ ಶರಣಂಗೆ ಆವ ಫಲವೂ ಇಲ್ಲ
ವಚನ 0122
ಅನ್ಯ ರಜವ ಸೋಂಕದೆ, ತನ್ನ ರಜವ ಬಾದಿಸದೆ,
ರವಿಯ ಬೆಳಸ ಬಳಸದೆ ಲಿಂಗದಲ್ಲಿ ಬೆಳೆದ ಬೆಳಸ ತಂದು,
ಜಂಗಮದಲ್ಲಿ ಸವೆಸುತಿಪ್ಪ[ನು] ಲಿಂಗಭಕ್ತ.
ಆ ಭಕ್ತನಲ್ಲಿ ಗುಹೇಶ್ವರಲಿಂಗವಿಪ್ಪನು.
ವಚನ 0123
ಅಪರಿಮಿತ ಕತ್ತಲೆಯೊಳಗೆ ಪರಿಮಿತದ ಬೆಳಗನಿಕ್ಕಿದಡೆ
ಬೆಳಕೂ ಅದೆ, ಕತ್ತಲೆಯೂ ಅದೆ !
ಇದೇನು ಚೋದ್ಯವೊ? ಒಂದಕ್ಕೊಂದಂಜದು !
ಆನೆಯೂ ಸಿಂಹವೂ ಒಂದಾಗಿ ಉಂಬುದ ಕಂಡು
ಬೆರಗಾದೆನು ಕಾಣಾ – ಗುಹೇಶ್ವರಾ.
ವಚನ 0124
ಅಪ್ಪುವಿನ ಬಾವಿಗೆ ತುಪ್ಪದ ಘಟ;
ಸಪ್ಪಗೆ, ಸಿಹಿ ಎಂಬ ಎರಡಿಲ್ಲದ ರುಚಿ,
ಪರುಷ ಮುಟ್ಟದ ಹೊನ್ನು!
ಕರೆಸದ ಬೊಜಗನು ಬೆರಸದೆ ಬಸುರಾಯಿತ್ತ ಕಂಡೆನಾಹಾ!
ಅರುವಿನ ಆಪ್ಯಾಯನ ಮರಹಿನ ಸುಖವೊ!
ಇದು ಕಾರಣ ಮೂರು ಲೋಕವಳಿಯಿತ್ತು ಗುಹೇಶ್ವರಾ.
ವಚನ 0125
ಅಭ್ಯಾಸದ ಮಾತಲ್ಲ, ಶ್ರೋತ್ರದ ಸುಖವಲ್ಲ,
ಶಾಸ್ತ್ರದ ಅನುಭಾವದ ಮಾತಲ್ಲ.
ಒಳಗಣ ಮಾತಲ್ಲ ಹೊರಗಣ ಮಾತಲ್ಲ.
ಇದರಂಗ (ತು?) ವನರಿಯರೆ,
ಅನುಭಾವವ ಮಾಡಿ ಫಲವೇನಯ್ಯಾ ?
ಗುಹೇಶ್ವರಲಿಂಗವು ಉಪಮಾತೀತ ನೋಡಯ್ಯಾ ಸಿದ್ಧರಾಮಯ್ಯ !
ವಚನ 0126
ಅಭ್ಯಾಸವ ಮಾಡುವ ಕೋಲಿಂಗೆ ಶರಣೆಂದಡೆ
ಮುಂದಣ ಬವರಕ್ಕಾಗಬಲ್ಲುದೆ ಅಯ್ಯಾ ?
ಇಷ್ಟಲಿಂಗವೆಂದು ಮುಟ್ಟಿ ಪೂಜಿಸುತ್ತಿದ್ದಡೆ
ಮುಂದಣ ಶಂಕೆಗಿನ್ನೆಂತೊ ?
ಲಿಂಗವೆಂದಡೆ ನಿಸ್ಸಂಗದಲ್ಲಿದೆ,
ಜಂಗಮವೆಂದಡೆ ಆಶ್ರಯದಲ್ಲಿದೆ
ಈ ಲಿಂಗಜಂಗಮವನೊಂದೆಂದಡೆ ಮುಂದಣ ಲಯಕ್ಕಿನ್ನೆಂತೊ ?
ಎಲೆ ಗುಹೇಶ್ವರಾ,
ನಿಮ್ಮ ಶರಣ ಚತುರ್ವಿಧಪದವಿಗಳಿಗೆ ಹೊರಗು.
ವಚನ 0127
ಅಮರದ ಹೊಲಬನರಿಯದೆ ಜಗ ಬರಡಾಯಿತ್ತು.
ಅಂಗದ ಹೊಲಬನರಿಯದೆ ಯೋಗ ಭಂಗವಾಯಿತ್ತು.
ಸಂಗದ ಹೊಲಬನರಿಯದೆ ಶರಣರು ಭಂಗಿತರಾದರು.
ಲಿಂಗದ ಹೊಲಬನರಿಯದೆ ಭಕ್ತ ಶೀಲವಂತನಾದ.
ಆದಿ ಮಧ್ಯಾವಸಾನದಲ್ಲಿ ಗುಹೇಶ್ವರನೆಂಬ ಲಿಂಗವು,
ಅರಿವಿನ ಮರೆಯಲ್ಲಿಹುದನಾರೂ ಅರಿಯರಲ್ಲಾ !
ವಚನ 0128
ಅಮರದ ಹೊಲಬನರಿಯದೆ ಜಗವೆಲ್ಲ ಬರಡಾಯಿತ್ತು.
ಅಂಗದ ಹೊಲಬನರಿಯದೆ ಯೋಗಿಗಳೆಲ್ಲ ಭಂಗಿತರಾದರು
ಸಂಗದ ಹೊಲಬನರಿಯದೆ ಶರಣರು ಭಂಗಿತರಾದರು
ಲಿಂಗದ ಹೊಲಬನರಿಯದೆ ಭಕ್ತ ಶೀಲವಂತನಾದ.
ಆದಿ ಮಧ್ಯಾವಸಾನದಲ್ಲಿ ಗುಹೇಶ್ವರನೆಂಬ ಲಿಂಗವು
ಅರಿವಿನ ಮರೆಯಲ್ಲಿಹುದನಾರೂ ಅರಿಯರಲ್ಲಾ ?
ವಚನ 0129
ಅಮರಾವತಿಯ ಪಟ್ಟಣದೊಳಗೆ,
ದೇವೇಂದ್ರನಾಳುವ ನಂದನವನವಯ್ಯಾ.
ಅತ್ತ ಸಾರಲೆ ಕಾಮಯ್ಯಾ, ಮೋಹವೆ ನಿನಗೆ?
ಲೋಕಾದಿಲೋಕವೆಲ್ಲವ ಮರುಳು ಮಾಡಿದೆ.
ಕಾಮಾ, ಗುಹೇಶ್ವರಲಿಂಗವನರಿಯೊ.
ವಚನ 0130
ಅಮೃತ ಸೇವನೆಯ ಮಾಡಿ ಆಪ್ಯಾಯನ ಘನವಾಯಿತ್ತು.
ಪರುಷವೇದಿಯ ಸಾದಿಸ ಹೋದಡೆ ದಾರಿದ್ರ್ಯ ಘನವಾಯಿತ್ತು.
ಮರುಜೇ (ಜ?)ವಣಿಯ ಹಣ್ಣ ಮೆದ್ದು, ಮರಣವಾಯಿತ್ತ ಕಂಡೆ.
ಎಲ್ಲವನೂ ಸಾದಿಸ ಹೋದಡೆ ಏನೂ ಇಲ್ಲದಂತಾಯಿತ್ತು.
ನಾನು ನಿಜವ ಸಾದಿಸಿ ಬದುಕಿದೆನು ಗುಹೇಶ್ವರಾ.
ವಚನ 0131
ಅಮೃತಕಲೆಯ ಸೂಡಿದವ ಅಂಬಲಿಯನುಂಬನೆ ?
ಶಿವನಾರು ? ಮಾಂಸನಾರು ?
ಚೋಳಿಯಕ್ಕನೆಂಜಲ, ಹಸಿದುಂಡನೆನಬಹುದೆ ?
ಹಸುಳೆಯ ಕೈಯ ಹಾಲನಾರು ಕಿತ್ತುಕೊಂಬರು ?
ಗುಹೇಶ್ವರಾ, ನೀನು ಭಕ್ತಿಪ್ರಿಯನೆಂಬುದ
ಮೂರು ಲೋಕವರಿಯದೆ ?
ವಚನ 0132
ಅಮೃತಸಾಗರದೊಳಗಿರ್ದು ಆಕಳ ಚಿಂತೆ ಏಕೆ ?
ಮೇರುಮಧ್ಯದೊಳಗಿರ್ದು ಜರಗ ತೊಳೆವ ಚಿಂತೆ ಏಕೆ ?
ಗುರುವಿನೊಳಗಿರ್ದು ತತ್ವವಿದ್ಯೆಯ ಚಿಂತೆ ಏಕೆ ?
ಪ್ರಸಾದದೊಳಗಿರ್ದು ಮುಕ್ತಿಯ ಚಿಂತೆ ಏಕೆ ?
ಕರಸ್ಥಲದೊಳಗೆ ಲಿಂಗವಿರ್ದ ಬಳಿಕ,
ಮತ್ತಾವ ಚಿಂತೆ ಏಕೆ ಹೇಳಾ ಗುಹೇಶ್ವರಾ ?
ವಚನ 0133
ಅಯ್ಯ ! ಆಗಮಿಕನಲ್ಲಿ ವೇದಪಾಠಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ತರ್ಕನಲ್ಲ ವ್ಯಾಕರಣನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಶಾಸ್ತ್ರಜ್ಞನಲ್ಲ ಪುರಾಣಿಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ವಾದಿಯಲ್ಲ ಉಪನೀತಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಮಾತಿನವನಲ್ಲ ಮಥನದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ನೀತಿಯವನಲ್ಲ ಖ್ಯಾತಿಯವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ರತಿಯವನಲ್ಲ ವಿರತಿಯವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಹೆಣ್ಣು ರೂಪನಲ್ಲ ಗಂಡು ರೂಪನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ನಾಮದವನಲ್ಲ ಸೀಮೆಯವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಆಕ್ರಿಯದವನಲ್ಲ ದುಃಕ್ರಿಯದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಶ್ವಾನಜ್ಞಾನಿಯಲ್ಲ ಕುಕ್ಕಟಜ್ಞಾನಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಆಶನಿಯಲ್ಲ ವ್ಯಸನಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಇಂತು ಉಭಯ ಬಿನ್ನನಾಮವಳಿದ ಸಂಗನ ಬಸವಣ್ಣನ ಕರ ನಯನ ಮುಖದಲ್ಲಿ
ಬೆಳಗುವ ಚಿಜ್ಯೋತಿ ತಾನೆ ನೋಡ! ನಿರವಯಶೂನ್ಯಲಿಂಗಮೂರ್ತಿ ಚೆನ್ನಬಸವಣ್ಣ.
ವಚನ 0134
ಅಯ್ಯ ! ಏಕಮುಖನಲ್ಲ ದ್ವಿಮುಖನಲ್ಲ ನೋಡ !
ನಿರವಯಶೂನ್ಯಲಿಂಗಮೂರ್ತಿ.
ತ್ರಿಮುಖನಲ್ಲ ಚತುಮರ್ುಖನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಪಂಚಮುಖನಲ್ಲ ಷಣ್ಮುಖನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಸಪ್ತಮುಖನಲ್ಲ ಅಷ್ಟಮುಖನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ನವಮುಖನಲ್ಲ ದಶಮುಖನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಜೀವಾತ್ಮನಲ್ಲ ಅಂತರಾತ್ಮನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಜಾಗ್ರನಲ್ಲ ಸ್ವಪ್ನನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ವಿಶ್ವನಲ್ಲ ತೈಜಸನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ನೋಡ ! ನಿರವಯಶೂನ್ಯಲಿಂಗಮೂರ್ತಿ.
ಖೇಚರನಲ್ಲ ಭೂಚರನಲ್ಲ
ನಿರವಯಶೂನ್ಯಲಿಂಗಮೂರ್ತಿ.
ಜಾರನಲ್ಲ ಚೋರನಲ್ಲ ನೋಡ !
ಹಮ್ಮಿನವನಲ್ಲ ಬಿಮ್ಮಿನವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಭುಕ್ತನಲ್ಲ ಮುಕ್ತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ-
ಇಂತು ಉಭಯವಳಿದ ಸಂಗನಬಸವಣ್ಣನ
ಬೆಳಗಿನೊಳಗೆ ಮಹಾ ಬೆಳಗಾಗಿರ್ಪುದು ನೋಡ ! ಗುಹೇಶ್ವರಲಿಂಗವು
ಚೆನ್ನಬಸವಣ್ಣ.
ವಚನ 0135
ಅಯ್ಯ ! ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ,
ಕ್ಷುತ್ತು, ಪಿಪಾಸೆ, ಶೋಕ, ಮೋಹ, ಜನನ ಮರಣಂಗಳ, ಅಡಿಮೆಟ್ಟಿ ನಿಂದು,
ಅಷ್ಟವಿಧಾರ್ಚನೆ-ಷೋಡಶೋಪಚಾರಂಗಳ ಮಾಡಿ ಶಿವನನಂತ ಲೀಲೆಗಳನರ್ಚಿಸಿ
ಫಲ-ಪದ-ಮೋಕ್ಷಂಗಳ ಪಡೆಯಬೇಕೆಂಬ ಬಯಕೆಯನುಳಿದು,
ಅಂತರಂಗದ ಜ್ಞಾನ, ಬಹಿರಂಗದ ಸತ್ಕ್ರಿಯಾಚಾರಂಗಳಲ್ಲಿ
ದೃಢ ಚಿತ್ತದಿಂದ ನಿಂದು, ಹಿಂದೆ ಹೇಳಿದ
ಸದ್ಭಕ್ತ-ಮಹೇಶ್ವರ-ಪ್ರಸಾದಿ-ಪ್ರಾಣಲಿಂಗಿ-ಶರಣಸ್ಥಲಂಗಳನೊಳಗು
ಮಾಡಿಕೊಂಡು,
ಪರಾತ್ಪರ ನಿತ್ಯತೃಪ್ತಾನಂದ ಮೂರ್ತಿಯಾಗಿ,
ಝಗಝಗಿಸುವ ನಿಜೈಕ್ಯನಂತರಂಗದಲ್ಲಿ ಚಿದ್ರೂಪಲೀಲೆಯಿಂ
ಸಾಕಾರ-ನಿರಾಕಾರ; ಸಕಲ-ನಿಃಕಲತತ್ತ್ವಂಗಳನೊಳಕೊಂಡು,
ಹದಿಮೂರು ಸ್ಥಲಂಗಳ ಗರ್ಬಿಕರಿಸಿಕೊಂಡು,
ಎಂಟುನೂರ ಆರುವತ್ತನಾಲ್ಕು ಮಂತ್ರಮಾಲಿಕೆಗಳ ಪಿಡಿದುಕೊಂಡು,
ಇಪ್ಪತ್ತುನಾಲ್ಕು ಸಕೀಲಗರ್ಭದಿಂ
ಜ್ಯೋತಿ ಜ್ಯೋತಿ ಕೂಡಿ ಬಿನ್ನ ದೋರದ ಹಾಂಗೆ ಏಕಸ್ವರೂಪಿನಿಂದ
ವೇದಸ್ವರೂಪ ಮಹಾಲಿಂಗವಾಗಿ ನೆಲಸಿರ್ಪುದು ನೋಡ !
ನಿರವಯಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು
ಚೆನ್ನಬಸವಣ್ಣ.
ವಚನ 0136
ಅಯ್ಯ ! ಕಾರ್ಯನಲ್ಲ ಕಾರಣನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಭೇದಕನಲ್ಲ ಸಾಧಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಪಾತಕನಲ್ಲ ಸೂತಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ದ್ವೈತನಲ್ಲ ಅದ್ವೈತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಕಾಟಕನಲ್ಲ ಕೀಟಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಎನ್ನವನಲ್ಲ ನಿನ್ನವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಸಂಕಲ್ಪನಲ್ಲ ವಿಕಲ್ಪನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಒಮ್ಮೆ ಆಚಾರದವನಲ್ಲ ಒಮ್ಮೆ ಅನಾಚಾರದವನಲ್ಲ ನೋಡ !
ನಿರವಯಶೂನ್ಯಲಿಂಗಮೂರ್ತಿ.
ಕುಂಟಣಿಯಲ್ಲ ನೆಂಟಣಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ದುಶ್ಶೀಲನಲ್ಲ ದುರ್ಮಾಗರ್ಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಜಾತಿಯವನಲ್ಲ ಅಜಾತಿಯವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಇಂದು ಉಭಯವಳಿದು ಬೆಳಗುವ ಸಂಗನಬಸವಣ್ಣನ
ಉನ್ಮನಾಗ್ರದಲಿ ಹೊಳೆವಾತ ತಾನೆ ನೋಡ ! ಗುಹೇಶ್ವರಲಿಂಗವು
ಚೆನ್ನಬಸವಣ್ಣ.
ವಚನ 0137
ಅಯ್ಯ ! ಗಮನಿಯಲ್ಲ ನಿರ್ಗಮನಿಯಲ್ಲ ನೋಡ !
ನಿರವಯ ಶೂನ್ಯಲಿಂಗಮೂರ್ತಿ
ಸುಚಿಂತನಲ್ಲ, ದುಶ್ಚಿಂತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಕುಟಿಲನಲ್ಲ ಕುಹಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಬೂಟಕನಲ್ಲ ಚಾಟಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ದಿಟದವನಲ್ಲ ಸಟೆಯವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಸಂಚಲನಲ್ಲ ವಂಚಲನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಪ್ರಪಂಚನಲ್ಲ ಪ್ರಮಾಣನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಗಣಿತನಲ್ಲ ಅಗಣಿತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಖಂಡಿತನಲ್ಲ ಅಖಂಡಿತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಚರಿತನಲ್ಲ ಅಚರಿತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಭರಿತನಲ್ಲ ಸುರಿತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಚಾಡಿಯಲ್ಲ ಚಿತಾಲನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಗಾರುಡನಲ್ಲ (ಗಾಡಿಗನಲ್ಲ?) ಕುರೂಪನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಮರುಳನಲ್ಲ ದುರುಳನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಆಶಕನಲ್ಲ ಪಾಶಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಇಂತು ಉಭಯವಳಿದುಳಿದು ಸಂಗನ ಬಸವಣ್ಣನ
ಅರುವಿನ ಮಧ್ಯದಲಿ ಬೆಳಗುವ ಜ್ಯೋತಿ ತಾನೆ ನೋಡ ! ಗುಹೇಶ್ವರಲಿಂಗವು
ಚೆನ್ನಬಸವಣ್ಣ.
ವಚನ 0138
ಅಯ್ಯ ! ಜ್ಞಾನೇಂದ್ರಿಯ, ಕಮರ್ೆಂದ್ರಿಯ, ವಿಷಯಂಗಳು,
ಕರಣ ಮುಂತಾದವರ ಆಶಾಪಾಶಂಗಳನುಳಿದು
ನುಡಿಯಂತೆ ನಡೆ, ನಡೆಯಂತೆ ನುಡಿ-ದೃಢಚಿತ್ತದಿಂದ ಘಟ್ಟಿಗೊಂಡು,
ಹಿಂದೆ ಹೇಳಿದ ಸದ್ಭಕ್ತ-ಮಹೇಶ್ವರ-ಪ್ರಸಾದಿ-ಪ್ರಾಣಲಿಂಗಿ
ಸ್ಥಲಂಗಳ ನೊಳಗುಮಾಡಿಕೊಂಡು,
ಪರಮಪರಿಣಾಮಿ ಅಚಲಾನಂದಮೂರ್ತಿಯಾಗಿ,
ಝಗಝಗಿಸಿ ನೆಲಸಿರ್ಪ ಶಿವಶರಣನಂತರಂಗದಲ್ಲಿ,
ಚಿನ್ಮಯಪರನಾದ ಸ್ವಯಂಭು ಲೀಲೆಯಿಂ,
ಮಿಶ್ರಾಮಿಶ್ರಂಗಳೊಡನೆ ಕೂಡಿದ, ಸಕಲ ತತ್ತ್ವಂಗಳನೊಳಕೊಂಡು,
ಹದಿಮೂರುಸ್ಥಲಂಗಳ ಗರ್ಬಿಕರಿಸಿಕೊಂಡು,
ಆರುಸಾವಿರದ ಒಂಬೈನೂರ ಹನ್ನೆರಡು ಮಂತ್ರ ಮಾಲೆಗಳ ಪಿಡಿದುಕೊಂಡು,
ಇಪ್ಪತ್ತುನಾಲ್ಕು ಸಕೀಲಗರ್ಭದಿಂ
ಕ್ಷೀರಕ್ಷೀರ ಬೆರದು ಬಿನ್ನದೋರದ ಹಾಂಗೆ, ಏಕರೂಪಿನಿಂದೆ
ಈಳನಸ್ವರೂಪ ಪ್ರಸಾದಲಿಂಗಮೂರ್ತಿಯಾಗಿ [ನೆಲಸಿರ್ಪುದು] ನೋಡ !
ನಿರವಯಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು
ಚೆನ್ನಬಸವಣ್ಣ.
ವಚನ 0139
ಅಯ್ಯ ! ದರಿದ್ರನಲ್ಲ ಧನಿಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಕುಚಿತ್ತದವನಲ್ಲ ಸುಚಿತ್ತದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಕುಬುದ್ಧಿಯವನಲ್ಲ ಸುಬುದ್ಧಿಯವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಅಹಂಕಾರಿಯಲ್ಲ ನಿರಹಂಕಾರಿಯವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಕುಮನದವನಲ್ಲ ಸುಮನದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಅಜ್ಞಾನದವನಲ್ಲ ಸುಜ್ಞಾನದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ದುರ್ಭಾವದವನಲ್ಲ ಸದ್ಭಾವದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಸಕಲನಲ್ಲ ನಿಃಕಲನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಅರ್ಪಿತನಲ್ಲ ಅನರ್ಪಿತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಆಹ್ವಾನನಲ್ಲ ವಿಸರ್ಜನನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಇಂತು ಉಭಯವಳಿದು ಬೆಳಗುವ ಸಂಗನಬಸವಣ್ಣನ
ಕರನಯನದಲ್ಲಿ ಝಗಝಗಿಸುವ ಗುಹೇಶ್ವರಲಿಂಗವು ತಾನೆ ನೋಡ !
ಚೆನ್ನಬಸವಣ್ಣ.
ವಚನ 0140
ಅಯ್ಯ ! ದೀಕ್ಷಾಗುರು, ಶಿಕ್ಷಾಗುರು, ಜ್ಞಾನಗುರುಗಳೆಂಬ ತ್ರಿವಿಧ ಗುರುಗಳು:
ಕ್ರಿಯಾಲಿಂಗ, ಜ್ಞಾನಲಿಂಗ, ಭಾವಲಿಂಗವೆಂಬ ತ್ರಿವಿಧ ಲಿಂಗಗಳು:
ಸ್ವಯ, ಚರ, ಪರವೆಂಬ ತ್ರಿವಿಧ ಜಂಗಮವು-
ಈ ಒಂಬತ್ತು ಆಚಾರಲಿಂಗದಲ್ಲಿ ಸಂಬಂಧವು.
ಕ್ರಿಯಾಗಮ, ಭಾವಾಗಮ, ಜ್ಞಾನಾಗಮವೆಂಬ ತ್ರಿವಿಧ ಲಿಂಗಗಳು,
ಸಕಾಯ, ಆಕಾಯ, ಪರಕಾಯವೆಂಬ ತ್ರಿವಿಧ ಗುರುಗಳು:
ಧರ್ಮಾಚಾರ, ಭಾವಾಚಾರ, ಜ್ಞಾನಾಚಾರವೆಂಬ ತ್ರಿವಿಧ ಜಂಗಮವು-
ಈ ಒಂಬತ್ತು ಗುರುಲಿಂಗದಲ್ಲಿ ಸಂಬಂಧವು.
ಕಾಯಾನುಗ್ರಹ, ಇಂದ್ರಿಯಾನುಗ್ರಹ, ಪ್ರಾಣಾನುಗ್ರಹವೆಂಬ ತ್ರಿವಿಧ ಗುರುಗಳು
ಕಾಯಾರ್ಪಿತ, ಕರಣಾರ್ಪಿತ, ಭಾವಾರ್ಪಿತವೆಂಬ ತ್ರಿವಿಧ ಲಿಂಗಗಳು:
ಶಿಷ್ಯ, ಶುಶ್ರೂಷ, ಸೇವ್ಯವೆಂಬ ತ್ರಿವಿಧ ಜಂಗಮವು-
ಈ ಒಂಬತ್ತು ಶಿವಲಿಂಗದಲ್ಲಿ ಸಂಬಂಧವು.
ಈ ಮೂರು ಸ್ಥಲವು ಅನಾದಿಭಕ್ತನ ಮಾರ್ಗಕ್ರಿಯಾ ಸ್ವರೂಪು.
ಜೀವಾತ್ಮ, ಅಂತರಾತ್ಮ, ಪರಮಾತ್ಮವೆಂಬ ತ್ರಿವಿಧಲಿಂಗಗಳು:
ನಿರ್ದೆಹಾಗಮ, ನಿರ್ಭಾವಾಗಮ, ನಷ್ಟಾಗಮವೆಂಬ ತ್ರಿವಿಧ ಗುರುಗಳು;
ಆದಿಪ್ರಸಾದಿ, ಅಂತ್ಯಪ್ರಸಾದಿ, ಸೇವ್ಯ ಪ್ರಸಾದಿಯೆಂಬ ತ್ರಿವಿಧ ಜಂಗಮವು-
ಈ ಒಂಬತ್ತು ಜಂಗಮಲಿಂಗದಲ್ಲಿ ಸಂಬಂಧವು-
ದೀಕ್ಷಾಪಾದೋದಕ, ಶಿಕ್ಷಾಪಾದೋದಕ, ಜ್ಞಾನಪಾದೋದಕವೆಂಬ
ತ್ರಿವಿಧ ಲಿಂಗಂಗಳು,
ಕ್ರಿಯಾನಿಷ್ಪ, ಭಾವನಿಷ್ಪ, ಜ್ಞಾನನಿಷ್ಪಯೆಂಬ ತ್ರಿವಿಧ ಗುರುಗಳು;
ಪಿಂಡಾಕಾಶ, ಬಿಂದ್ವಾಕಾಶ, ಮಹದಾಕಾಶವೆಂಬ ತ್ರಿವಿಧ ಜಂಗಮವು-
ಈ ಒಂಬತ್ತು ಪ್ರಸಾದಲಿಂಗದಲ್ಲಿ ಸಂಬಂಧವು.
ಕ್ರಿಯಾಪ್ರಕಾಶ, ಭಾವಪ್ರಕಾಶ, ಜ್ಞಾನಪ್ರಕಾಶವೆಂಬ ತ್ರಿವಿಧ ಲಿಂಗಗಳು
ಕೊಂಡದ್ದು ಪ್ರಸಾದ, ನಿಂದದ್ದು ಓಗರ,
ಚರಾಚರನಾಸ್ತಿಯೆಂಬ ತ್ರಿವಿಧ ಗುರುಗಳು;
ಬಾಂಢಸ್ಥಲ, ಭಾಜನಸ್ಥಲ, ಅಂಗಲೇಪನಸ್ಥಲವೆಂಬ ತ್ರಿವಿಧ ಜಂಗಮವು-
ಈ ಒಂಬತ್ತು ಮಹಾಲಿಂಗದಲ್ಲಿ ಸಂಬಂಧವು.
ಈ ಮೂರು ಸ್ಥಲವು ಅನಾದಿ ಜಂಗಮದ ಮೀರಿದ ಕ್ರಿಯಾ ಸ್ವರೂಪವು.
ಈ ಉಭಯಂ ಕೂಡಲು ಐವತ್ತುನಾಲ್ಕು ಸ್ಥಲಂಗಳಾದವು. ಮುಂದುಳಿದ
ಮೂರು ಸ್ಥಲಂಗಳಲ್ಲಿ ಭಾವಾಭಾವನಷ್ಟಸ್ಥಲವೆ ಮೂಲ ಗುರುಸ್ವರೂಪವಾಗಿ
ಹದಿನೆಂಟು ಗುರುಸ್ಥಲಂಗಳನೊಳಕೊಂಡು
ಕ್ರಿಯಾಗುರುಲಿಂಗ ಜಂಗಮ ಸ್ವರೂಪವಾದ
ಇಷ್ಟಮಹಾಲಿಂಗದ ಅಧೋಪೀಠಿಕೆಯೆಂಬ ಹಲ್ಲೆಯಲ್ಲಿ
ಸ್ಪರ್ಶನೋದಕ, ಅವಧಾನೋದಕ, ಗುರುಪಾದೋದಕ,
ಅಪ್ಯಾಯನಪ್ರಸಾದ, ಸಮಯಪ್ರಸಾದ, ಗುರುಪ್ರಸಾದ
ಆದಿ ಪ್ರಸಾದ, ನಿಚ್ಚಪ್ರಸಾದವಾಗಿ ತೆರಹಿಲ್ಲದೆ ಒಪ್ಪುತ್ತಿರ್ಪುದು ನೋಡ !
ಜ್ಞಾನಶೂನ್ಯಸ್ಥಲವೆ ಮೂಲ ಜಂಗಮಸ್ವರೂಪವಾಗಿ
ಹದಿನೆಂಟು ಚರಸ್ಥಲಂಗಳನೊಳಕೊಂಡು
ಮಹಾಜ್ಞಾನಗುರುಲಿಂಗಜಂಗಮ ಸ್ವರೂಪವಾದ
ಇಷ್ಟಮಹಾಲಿಂಗದ ಜಲರೇಖೆಯನ್ನುಳ್ಳ ಪಾನಿವಟ್ಟಲಲ್ಲಿ
ಪರಿಣಾಮೋದಕ, ನಿರ್ನಾಮೋದಕ, ಜಂಗಮಪಾದೋದಕ, ನಿತ್ಯೋದಕ,
ಸಮತಾಪ್ರಸಾದ, ಪ್ರಸಾದಿಯ ಪ್ರಸಾದ, ಜಂಗಮ ಪ್ರಸಾದ, ಸದ್ಭಾವ ಪ್ರಸಾದ,
ಜ್ಞಾನಪ್ರಸಾದ, ಸೇವ್ಯ ಪ್ರಸಾದ,
ಅಚ್ಚ ಪ್ರಸಾದವಾಗಿ ತೆರಹಿಲ್ಲದೆ ಒಪ್ಪುತಿರ್ಪುದು ನೋಡ !
ಸ್ವಯ ಪರವರಿಯದ ಸ್ಥಲವೆ ಮೂಲಲಿಂಗಸ್ವರೂಪವಾಗಿ
ಹದಿನೆಂಟು ಲಿಂಗಸ್ಥಲಂಗಳನೊಳಕೊಂಡು
ಜ್ಞಾನಗುರುಲಿಂಗ ಜಂಗಮ ಸ್ವರೂಪವಾದ
ಇಷ್ಟಮಹಾಲಿಂಗದ ಉನ್ನತವಾದ ಗೋಲಕದಲ್ಲಿ
ಅಪ್ಯಾಯನೋದಕ, ಹಸ್ತೋದಕ, ಲಿಂಗಪಾದೋದಕ,
ಪಂಚೇಂದ್ರಿ[ಯ] ವಿರಹಿತಪ್ರಸಾದ,
ಕರಣಚತುಷ್ಟಯವಿರಹಿತ ಪ್ರಸಾದ, ಲಿಂಗಪ್ರಸಾದ
ಅಂತ್ಯಪ್ರಸಾದ ಸಮಯಪ್ರಸಾದವಾಗಿ ತೆರಹಿಲ್ಲದೆ ಒಪ್ಪುತ್ತಿರ್ಪುದು ನೋಡ !
ಇಂತಪ್ಪ ಲಿಂಗಜಂಗಮದ ಪಾದೋದಕ ಪ್ರಸಾದವ ಸ್ವೀಕರಿಸಿದಂಥ
ಜಂಗಮಭಕ್ತರಾದ ಸಹಜಭಕ್ತರೆ ಪ್ರಸಾದಪಾದೋದಕ ಸಂಬಂದಿಗಳು.
ಇವರು ಸ್ವೀಕರಿಸಿದಂಥ ಪಾದೋದಕವೆ
ನೇತ್ರದಲ್ಲಿ ಕರುಣಜಲ; ವಾಕಿನಲ್ಲಿ ವಿನಯಜಲ; ಅಂತರಂಗದಲ್ಲಿ ಸಮತಾಜಲ-
ಇಂತೀ ತ್ರಿವಿಧೋದಕವೆ ಘಟ್ಟಿಗೊಂಡು ಸಾಕಾರವಾಗಿ,
ತಿಳಿದುಪ್ಪ ಹೆರೆದುಪ್ಪವಾದಂತೆ
ಇಷ್ಟ ಮಹಾಲಿಂಗಕ್ಕೆ ತ್ಯಾಗಾಂಗವಾದ ಶುದ್ಧ ಪ್ರಸಾದವಾಗಿರ್ಪುದಯ್ಯ;
ಪ್ರಾಣಲಿಂಗಕ್ಕೆ ಭೋಗಾಂಗವಾದ ಸಿದ್ಧ ಪ್ರಸಾದವಾಗಿರ್ಪುದಯ್ಯ.
ಭಾವಲಿಂಗಕ್ಕೆ ಯೋಗಾಂಗವಾದ ಪ್ರಸಿದ್ಧ ಪ್ರಸಾದವಾಗಿರ್ಪುದಯ್ಯ.
ಇಂತೀ ತ್ರಿವಿಧಪ್ರಸಾದಪಾದೋದಕವೆ
ಶರಣನ ಶುದ್ಧ ಪ್ರಸಾದವೆ ಜಿಹ್ವೆಯಲ್ಲಿ ಅಚ್ಚಪ್ರಸಾದವಾಗಿರ್ಪುದಯ್ಯ
ಸಿದ್ಧಪ್ರಸಾದವೆ ಪಾದದಲ್ಲಿ ಸಮಯ ಪ್ರಸಾದವಾಗಿರ್ಪುದಯ್ಯ
ಇಂತಪ್ಪ ಶರಣಸ್ವರೂಪವಾದ ಜ್ಞಾನಲಿಂಗಜಂಗಮದ
ತೀರ್ಥಪ್ರಸಾದ ಸ್ವರೂಪವನ್ನು ಅರಿಯದೆ,
ಕ್ರಿಯಾ `ಜಂಗಮಲಿಂಗ’ದ ತೀರ್ಥಪ್ರಸಾದವನ್ನು ತೆಗೆದುಕೊಳ್ಳಬಹುದು.
ಜ್ಞಾನಲಿಂಗಜಂಗಮ ತೀರ್ಥಪ್ರಸಾದವನ್ನು ತೆಗೆದುಕೊಳ್ಳಲಾಗದು ಎಂಬ
ಅಜ್ಞಾನಿಗಳ ಎನಗೆ ತೋರದಿರ ! ಗುಹೇಶ್ವರ !
ವಚನ 0141
ಅಯ್ಯ ! ಧರ್ಮಿಯಲ್ಲ ಕರ್ಮಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಕಾಮಿಯಲ್ಲ ನಿಃಕಾಮಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಕ್ರೋದಿಯಲ್ಲ ನಿಃಕ್ರೋದಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಲೋಬಿಯಲ್ಲ ನಿರ್ಲೊಬಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಮೋಹಿಯಲ್ಲ ನಿರ್ಮೊಹಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಮದದವನಲ್ಲ ನಿರ್ಮದದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಮತ್ಸರದವನಲ್ಲ ನಿರ್ಮತ್ಸರದವನಲ್ಲ ನೋಡಶ! ನಿರವಯಶೂನ್ಯಲಿಂಗಮೂರ್ತಿ
ಆದೀತೆನ್ನ ಆಗದೆನ್ನ ನೋಡ ! ನಿರವಯಶೂನ್ಯಲಿಂಗಮೂರ್ತಿ
ರೋಗವೆನ್ನ ನಿರೋಗವೆನ್ನ ನೋಡ ! ನಿರವಯಶೂನ್ಯಲಿಂಗಮೂರ್ತಿ
ಬೇಕೆನ್ನ ಬೇಡವೆನ್ನ ನೋಡ ! ನಿರವಯಶೂನ್ಯಲಿಂಗಮೂರ್ತಿ
ಇಂತು ಉಭಯವಳಿದ ರಾಜಾದಿರಾಜ ಸಂಗನಬಸವಣ್ಣನ
ಸರ್ವಾಂಗದಿ ಬೆಳಗುವ ಪರಂಜ್ಯೋತಿ ಗುಹೇಶ್ವರಲಿಂಗವು ತಾನೆ ನೋಡ !
ಚೆನ್ನಬಸವಣ್ಣ.
ವಚನ 0142
ಅಯ್ಯ ! ನವರತ್ನ ಪ್ರಕಾಶಕ್ಕೆ ಸಮಾನವಾದ ಶಿಲಾರೂಪ
ಪಾಷಾಣಂಗಳ ಮಧ್ಯದಲ್ಲಿ ಕ್ರಿಯಾಗ್ನಿ ಇರ್ದು ದಹನಕೃತ್ಯಂಗಳಿಗೆ ಒಳಗಾಗದಿರ್ಪಂತೆ;
ಕುಂತಣದೇಶ ಮೊದಲಾದ ಸಮಸ್ತ ದೇಶಂಗಳಲ್ಲಿ ಸೂರ್ಯನ ಪ್ರಕಾಶ ಮರೀಚಿಕಾಜಲ;
ಅಶ್ವ-ಗಜ-ಎರಳೆಗಳೋಪಾದಿಯಲ್ಲಿ
ಕಣ್ಣಿಗೆ ಕಾಣಿಸಿ ಕೈವಶವಾಗದಂತೆ;
ಒಬ್ಬಾನೊಬ್ಬ ಚಿತ್ರಕನ ಮನದ ಮಧ್ಯದಲ್ಲಿ
ಅನಂತ ಚಿತ್ರವಿಚಿತ್ರ ಪ್ರಕಾಶಂಗಳಡಗಿರ್ಪಂತೆ;
ಕಂಠ, ಲೆಕ್ಕಣಿಕೆ, ಬಳಹಂಗಳ ಮೊನೆಯಲ್ಲಿ ಸಮಸ್ತ ವರ್ಣಂಗಳಡಗಿರ್ಪಂತೆ;
ಕನ್ನಡಿಯೊಳಗೆ ಅನಂತ ಬಿಂಬಂಗಳಡಗಿರ್ಪಂತೆ;
ಪಟ್ಟ ಪಟ್ಟಾವಳಿಗಳು ಮೊದಲಾದ ಸಮಸ್ತವಸನಂಗಳ ಮಧ್ಯದಲ್ಲಿ
ಸಮಸ್ತ ಬಣ್ಣಂಗಳಡಗಿರ್ಪಂತೆ;
ಮೂಕನಂತರಂಗದಲ್ಲಿ ನಾಮ-ರೂಪ-ಕ್ರಿಯೆಗಳಡಗಿರ್ಪಂತೆ;
ಕವಿತ್ವವುಳ್ಳ ಶಾಸ್ತ್ರಜ್ಞನಂತರಂಗದಲ್ಲಿ
ಅರ್ಥ-ಅನ್ವಯ-ಆಕಾಂಕ್ಷೆಗಳಡಗಿರ್ಪಂತೆ;
ಸಚ್ಚಿದಾನಂದ ಸ್ವರೂಪ ಸದ್ಭಕ್ತ ಶಿವಶರಣಗಣಂಗಳಲ್ಲಿ ಗೋಪ್ಯವಾಗಿರ್ದು
ಹಠಯೋಗಿ ಮೊದಲಾದ ಬಿನ್ನಕರ್ಮಕಾಂಡಿಗಳಿಗೆ ಅಗೋಚರವಾಗಿರ್ಪುದು ನೋಡ !
ನಿರವಯಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು
ಚೆನ್ನಬಸವಣ್ಣ.
ವಚನ 0143
ಅಯ್ಯ ! ನಾಟಕನಲ್ಲ ಬೂಟಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಶೀಲಿಗನಲ್ಲ ಕಪಟನಾಟಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ರುಂಡಮಾಲಿಗನಲ್ಲ ಗುಂಡುಗಾಸಿಗನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಪುಲಿಚರ್ಮನಲ್ಲ ಗಜಚರ್ಮನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ದಕ್ಷಾಧ್ವರಸಂಹರನಲ್ಲ ತ್ರಿಪುರಾರಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ನಂದಿವಾಹನನಲ್ಲ ಭೃಂಗಿಸ್ತುತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಸರ್ಪಧರನಲ್ಲ ಚಂದ್ರಶೇಖರನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಗಂಗಾಧರನಲ್ಲ ಗೌರಿಪ್ರಿಯನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಗಿರಿಜಾವಲ್ಲಭನಲ್ಲ ಪಾರ್ವತಿಪ್ರಿಯನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಯೋಗಿಯಲ್ಲ ಜೋಗಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಶ್ರವಣನಲ್ಲ ಸನ್ಯಾಸಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಕಾಳಾಮುಖಿಯಲ್ಲ ಪಾಶುಪತಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಇಂತು ಉಭಯವಳಿದ ಸಂಗನಬಸವಣ್ಣನ
ಸರ್ವಾಂಗದಿ ಬೆಳಗುವ ಮಹಾಜ್ಯೋತಿ ತಾನೆ ನೋಡ ! ಗುಹೇಶ್ವರಲಿಂಗವು
ಚೆನ್ನಬಸವಣ್ಣ.
ವಚನ 0144
ಅಯ್ಯ ! ನಿಜವಸ್ತು ನೆಲೆಸಿರ್ಪ ನೇತ್ರವೇ
ಗುಹ್ಯಕ್ಕೆ ಗುಹ್ಯ, ಗೋಪ್ಯಕ್ಕೆ ಗೋಪ್ಯ
ರಹಸ್ಯಕ್ಕೆ ರಹಸ್ಯ, ಕೂಟಕ್ಕೆ ಕೂಟ
ನೋಟಕ್ಕೆ ನೋಟ, ಬೇಟಕ್ಕೆ ಬೇಟ.
ಅದೆಂತೆಂದಡೆ:
ಲಿಂಗಸ್ಯ ಸಾಯಕಂ ನೇತ್ರಂ
ಚುಕ್ಷುರ್ಲಿಂಗಸ್ಯ ಚಕ್ಷುಸಃ
ಇಂತೆಂದುದಾಗಿ,
ಗುರುಕಟಾಕ್ಷೆಯಿಂದ ಇಷ್ಟ-ಪ್ರಾಣ-ಭಾವಲಿಂಗ ಸಂಬಂಧವಾದ
ಮಹಾಘನ ಚಕ್ಷುವೆ ಗುಹೇಶ್ವರಲಿಂಗಕ್ಕೆ ಮಹಾಪ್ರಸಾದ ನೋಡಾ
ಸಿದ್ಧರಾಮಯ್ಯಾ.
ವಚನ 0145
ಅಯ್ಯ ! ನಿರವಯಶೂನ್ಯಮೂರ್ತಿ ಗುಹೇಶ್ವರಲಿಂಗಕ್ಕೆ
ಎನ್ನ ಅಷ್ಟತನುವೆ ಅಷ್ಟ ವಿಧಾರ್ಚನೆಯಾಗಿ,
ಎನ್ನ ಅಷ್ಟಾತ್ಮ-ಅಷ್ಟಕರಣಂಗಳೆ ಷೋಡಶೋಪಚಾರವಾಗಿ,
ಶರಣಸತಿ-ಲಿಂಗಪತಿಯೆಂಬ ಉಭಯ ಭೇದವಳಿದು ಏಕವಾಗಿ
ಎಲೆಗಳೆದ ವೃಕ್ಷದಂತೆ ಉಲುಹಡಗಿರ್ದೆನಯ್ಯ.
ತೆರೆಯಳಿದ ಅಂಬುದಿಯಂತೆ ಪರಮ ಚಿದ್ಘನಗುರು ಶಿವಸಾಗರದೊಳಗೆ ಮುಳುಗಿ
ಪರಮ ಚಿದ್ಗಂಬಿರನಾಗಿರ್ದೆನಯ್ಯ
ಘಟವನಳಿದ ಅವಕಾಶದಂತೆ
ಬಚ್ಚಬರಿಯ ಬಯಲಾಗಿ ನಿಶ್ಚಲನಾಗಿರ್ದೆನಯ್ಯಾ
ಪಟವನಳಿದ ಚಿತ್ರದಂತೆ ನಿರ್ಮಲ ನಿರಾವರಣನಾಗಿ
ಶುದ್ಧ ಅಮಲಬ್ರಹ್ಮವಾಗಿ ಪ್ರತಿಯಿಲ್ಲದ ಅಪ್ರತಿಮ
ಅನುಮಿಷ ಅನುಪಮ ಅಪ್ರಮಾಣ ಅನಾಮಯ ಅಗಣಿತ ಅಚಲಾನಂದ
ನಿತ್ಯ ನಿಃಕಳಂಕ ನಿರ್ಮಾಯ ನಿರಾಲಂಬ ನಿರ್ಗುಣ ನಿತ್ಯಮುಕ್ತ
ನಿತ್ಯತೃಪ್ತ ನಿಶ್ಚಿಂತ ನಿಃಕಾಮ್ಯ ನಿಜಷಡ್ಗುಣೈಶ್ವರ್ಯ
ಮದ್ಗುರು ಸಂಗನಬಸವಣ್ಣನ ಚಿದ್ಬೆಳಗಿನ ಬಯಲೊಳಗೆ
ಬಯಲಪ್ಪುದು ತಪ್ಪದು ! ನಿಮ್ಮ ಕೃಪೆಯಿಂದ ! ನೋಡ !
ಚೆನ್ನಬಸವಣ್ಣ.
ವಚನ 0146
ಅಯ್ಯ ! ನಿರವಯಶೂನ್ಯಲಿಂಗದೇಹಿ ನಿಜಕರುಣಪ್ರಸಾದಾತ್ಮನು
ಆ ನಿರವಯ ಶೂನ್ಯಲಿಂಗದಾಚಾರದಲ್ಲಿಯೆ ನಡೆವನಯ್ಯ !
ಲೋಕವರ್ತಕ ಲೋಕಚಾತುರ್ಯಕ್ಕೆ, ಲೋಕವ್ಯವಹರಣೆಯನನುಕರಿಸಿ ನಡೆವನಲ್ಲ !
ನಿಜಶಿವಜ್ಞಾನ-ನಿಜಶಿವಕ್ರಿಯಾಪ್ರಕಾಶವ ಸಂಬಂದಿಸಿಕೊಂಡು
ಸರ್ವಾಂಗವು ನಿರವಯಶೂನ್ಯಲಿಂಗರೂಪವಾಗಿ
ಲಿಂಗಕ್ಕೆ ಲಿಂಗವೆ ಭಾಜನ ಪದಾರ್ಥ-ಪ್ರಸಾದ-ಪರಿಣಾಮವಾಗಿರಬಲ್ಲಡೆ
ಅದು ಲಿಂಗೈಕ್ಯ ನೋಡ !
ನೆಲನಿಲ್ಲದ ನಿರ್ಮಲ ಚಿದ್ಭೂಮಿಯಲ್ಲಿ
ಸ್ವಯಜ್ಞಾನಶಿಶು ಉದಯವಾಯಿತ್ತು ನೋಡ ! ಆ ಸ್ವಯಜ್ಞಾನ ಶಿಶು
ಊಧ್ರ್ವಲೋಕಕ್ಕೆ ಹೋಗಿ ವ್ಯೋಮಾಮೃತಪ್ರಸಾದವನುಂಡು
ನಾಮರೂಪು-ಕ್ರಿಯೆಗಳನಳಿದು, ನಿರವಯಶೂನ್ಯಲೀಲೆಯ ಧರಿಸಿ
ಸೋಮನಾಳದಲ್ಲಿ ಶುಭ್ರ ಕಳೆ; ಪಿಂಗಳನಾಳದಲ್ಲಿ ಸುವರ್ಣಕಳೆ;
ಸುಷುಮ್ನನಾಳದಲ್ಲಿ ಸುಜ್ಞಾನಜ್ಯೋತಿಪ್ರಕಾಶದಂತೆ
ಏಳುನೂರ ಎಪ್ಪತ್ತುನಾಳದಲ್ಲಿ ಹೊಳೆವುತ್ತಿರ್ಪ
ಪರಮಗುರು ಸಂಗನಬಸವಣ್ಣನ ಬೆಳಗಿನ ನಿಜಪ್ರಸಾದದೊಳಗೆ
ಗುಹೇಶ್ವರ ಪ್ರಭುವೆಂಬ ರೂಪತಾಳಿ, ಪಕ್ವವಾದ ಮೇಲೆ
ಮತ್ತಲ್ಲಿಯೆ ನಿರವಯಶೂನ್ಯವಪ್ಪುದು ತಪ್ಪದು ನೋಡ !
ಚೆನ್ನಬಸವಣ್ಣ.
ವಚನ 0147
ಅಯ್ಯ ! ನಿರವಯಶೂನ್ಯಲಿಂಗಮೂರ್ತಿಯ ನಿಲುಕಡೆ ಎಂತೆಂದಡೆ,-
ಸಾಕಾರನಲ್ಲ ನಿರಾಕಾರನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಆದಿಯಲ್ಲ ಅನಾದಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಇಹದವನಲ್ಲ ಪರದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಸುಖದವನಲ್ಲ ದುಃಖದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಪುಣ್ಯದವನಲ್ಲ ಪಾಪದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಕರ್ತುವಲ್ಲ ಭೃತ್ಯನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಕಾರಣನಲ್ಲ ಕಾರ್ಯನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಧರ್ಮಿಯಲ್ಲ ಕರ್ಮಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಪೂಜ್ಯನಲ್ಲ ಪೂಜಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಇಂತು ಉಭಯವಳಿದು ಬೆಳಗುವ ಸಂಗನಬಸವಣ್ಣನ
ಹೃತ್ಕಮಲಮಧ್ಯದಲ್ಲಿ ನೆಲಸಿರ್ಪುದು ನೋಡ ! ಗುಹೇಶ್ವರಲಿಂಗವು
ಚೆನ್ನಬಸವಣ್ಣ.
ವಚನ 0148
ಅಯ್ಯ ! ನಿರಾಳ ನಿಃಶೂನ್ಯ ಪರಮ ಭಕ್ತ-ಜಂಗಮ ತಾನಾಗಲರಿಯದೆ
ಬರಿದೆ ಅಹಂಕರಿಸಿ ಮುಂದುಗೊಂಡು ಮೂರು ಮಲಗಳ ಸ್ವೀಕರಿಸಿ,
ನಾವೆ ಭಕ್ತ-ಜಂಗಮವೆಂದು ನುಡಿವ ಕರ್ಮಕಾಂಡಿಗಳು
ಕಾಶಿ, ಕೇತಾರ, ಶ್ರೀಶೈಲ, ಗಯಾ, ಪ್ರಯಾಗ, ಶಿವಗಂಗೆ, ಕಂಚಿ,
ಕಾಳಹಸ್ತಿ, ಪಂಪಾಕ್ಷೇತ್ರ,
ವೀರಣ್ಣ, ಬಸವಣ್ಣ, ಕಲ್ಲಣ್ಣ, ಮಲ್ಲಣ್ಣ,
ಕಂಥೆ, ಕಮಂಡಲ, ಗದ್ದಿಗೆ, ಪಾವುಗೆ, ಭಸ್ಮ, ಘಂಟಿಕೆ, ಪುರಾಣ, ದಂಡಾಗ್ರ,
ಗಿಳಿಲು, ಶಂಖು,
ತಿಥಿ, ವಾರ, ನಕ್ಷತ್ರ, ಹುಣ್ಣಿವೆ, ಅಮಾವಾಸ್ಯೆ, ಸೂರ್ಯ, ಚಂದ್ರಾಗ್ನಿ, ದೀಪಾರತಿ
ಗಂಗೆ, ಗೌರಿ, ವಿಘ್ನೇಶ್ವರ ಮೊದಲಾದವು ಇವು ದೈವಂಗಳೆಂದು
ಕಲ್ಲು, ಮಣ್ಣು, ಮರದಿಂದ ರಚಿಸಿ, ಸಂದಿ-ಗೊಂದಿ-ಮಾಡು-
ಜಗುಲಿಯ ಮಾಡಿಟ್ಟು,
ಅದರ ತೊಳೆದ ನೀರು, ಎಂಜಲವ ತಿಂಬವರ ದೇವ-ಭಕ್ತರೆನಬಹುದೆ ?
ಇಂತಪ್ಪ ಅನಾಚಾರಿ ಶ್ವಪಚರ, ಭಕ್ತ-ಜಂಗಮ-ದೇವರೆಂದು ಪೂಜಿಸಲಾಗದು.
ನಿರಾಭಾರಿ ವೀರಶೈವಾಚಾರ ಕ್ರಿಯಾಜ್ಞಾನ ವೈರಾಗ್ಯ ಸದ್ಭಕ್ತಿಯುಳ್ಳ
ಸದ್ಭಕ್ತ ಶಿವಶರಣನ ಪೂಜಿಸಿ ಪಾದೋದಕ-ಪ್ರಸಾದವ ಕೊಂಡಡೆ
ಭವಪಾಶಕರ್ಮಂಗಳು ಮಾಣ್ಬವು ಕಾಣಾ ಗುಹೇಶ್ವರಲಿಂಗದಲ್ಲಿ
ಚೆನ್ನಬಸವಣ್ಣ.
ವಚನ 0149
ಅಯ್ಯ ! ನೀಲಮಣಿ ಮಧ್ಯಸ್ಥಾನದಲ್ಲಿ,
ಕಾರ ಮೇಘದೊಳಗಿನ ಮಿಂಚಿನ ಪ್ರಕಾಶವಾಗಿ
ಚಿದಾಕಾಶಸ್ವರೂಪದಿಂದ ಪೀತವರ್ಣ ಮೊದಲಾಗಿ ಅನಂತ ವರ್ಣಸ್ವರೂಪವಾಗಿ
ಅತ್ಯಂತವಾದ ಅಣುರೂಪವಾಗಿ
ಬದನೆಯ ಮುಳ್ಳಿನ ಹಾಗೆ
ಅನಂತ ಪ್ರಕಾರದಿಂದ ಕಾಣಲ್ಪಡುವುದು ನಿಜಶಿವಯೋಗಿಗೆ,
ಲಿಂಗಧ್ಯಾನಿಗಳಿಗೆ ಅನಾದಿಮೂಲ ಪ್ರಣಮಸ್ವರೂಪದಿಂದ
ಮುಖಕಮಲದ ಮೇಲೆ ಕಾಣಲ್ಪಡುವುದು ನೋಡಾ.
ಅದೆಂತೆಂದಡೆ:ಮುಖ ಮಧ್ಯದಲ್ಲಿ ನೇತ್ರ, ನೇತ್ರ ಮಧ್ಯದಲ್ಲಿ ಮನಸ್ಸು,
ಮನೋಮಧ್ಯದಲ್ಲಿ ತಾನೆ ತಾನಲ್ಲದೆ ಮತ್ತೊಂದು ಸಾಧಕವಿಲ್ಲದದು
ನಿಜತಾರಕಬ್ರಹ್ಮಶಾಂಭವಮೂರ್ತಿಯ ನೋಡ-
ಇಂತು ನಿಜತಾರಕಬ್ರಹ್ಮಶಾಂಭವಮೂರ್ತಿಯ ಮೂರ್ತಿಗೊಂಡಿರ್ಪರು ನೋಡಾ
ಗುಹೇಶ್ವರಲಿಂಗದ ಹೃತ್ಕಮಲಮಧ್ಯದಲ್ಲಿ ಸಿದ್ಧರಾಮಯ್ಯ.
ವಚನ 0150
ಅಯ್ಯ ! ಪೂರ್ವವನಳಿದು ಪುನರ್ಜಾತನಾದ
ಸತ್ಯಸದ್ಧರ್ಮಸ್ವರೂಪ ತಚ್ಛಿಷ್ಯನು ಶ್ರೀಗುರುಲಿಂಗಜಂಗಮದ
ವೇಧಾ-ಮಂತ್ರ-ಕ್ರಿಯಾದೀಕ್ಷೆಯ ಪಡೆದು, ಅಷ್ಟಾವರಣದ ನೆಲೆಕಲೆಗಳ ತಿಳಿದು,
ಪಂಚಾಚಾರ ಮೊದಲಾಗಿ ಸರ್ವಾಚಾರ ಸಂಪತ್ತಿನ ವಿವರ ತಿಳಿದು,
ನೂರೊಂದು ಸ್ಥಲದ ಆಚರಣೆ-ಇನ್ನೂರಹದಿನಾರು ಸ್ಥಲದ ಸಂಬಂಧವನರಿದು,
ಷಟ್ಸ್ಥಲ ಮಾರ್ಗವಿಡಿದು, ಶ್ರೀಗುರುಲಿಂಗ ಜಂಗಮಕ್ಕೆ
ತನು-ಮನ-ಧನವಂಚನೆಯಿಲ್ಲದೆ ನಿರ್ವಂಚಕನಾಗಿ,
ಭಕ್ತಸ್ಥಲದಲ್ಲಿ ನಿಂದಡೆ ಸತ್ಯಶುದ್ಧ ಕಾಯಕ[ವ ಮಾಡಿ]
ಮಹೇಶ್ವರಸ್ಥಲದಲ್ಲಿ ನಿಂದಡೆ ಸತ್ಯಶುದ್ಧ ಬಿಕ್ಷವ ಮಾಡಿ, (ಬೇಡಿ?)
ಬಂದ ಪದಾರ್ಥವ ಸಮರ್ಪಿಸಿ, ಪರದ್ರವ್ಯದಲ್ಲಿ ರಿಣಭಾರನಾಗದೆ,
ಸತ್ಯಶುದ್ಧ ನಡೆನುಡಿಯಿಂದಾಚರಿಸಿ,
ಶ್ರದ್ಧಾದಿ ಸಮರಸಾಂತ್ಯಮಾದ ಸದ್ಭಕ್ತಿಯ ತಿಳಿದು
ಅನಾದಿಕುಳ ಸನ್ಮತವಾದ ದಶವಿಧ ಪಾದೋದಕ, ಏಕಾದಶ ಪ್ರಸಾದದ ವಿಚಾರ
ಮೊದಲಾದ ಅರ್ಪಿತಾವಧಾನವ,
ಪರಿಪೂರ್ಣಮಯ ಶ್ರೀಗುರುಲಿಂಗಜಂಗಮಕರುಣಕಟಾಕ್ಷೆಯಿಂದ,
ಅಚ್ಚ ಪ್ರಸಾದಿಸ್ಥಲದ ಶರಣತ್ವವ ಪಡೆದು,
ಸತ್ಯಸದಾಚಾರವುಳ್ಳ ಸದ್ಗುರುಲಿಂಗಜಂಗಮದ ನಿಜನಿಷ್ಠತ್ವಮಂ ತಿಳಿದು,
ದಂತಧಾವನಕಡ್ಡಿ ಮೊದಲು ಕಾಪ ಕಟಿಸೂತ್ರ ಕಡೆಯಾದ ಸಮಸ್ತ ಪದಾರ್ಥವ
ಗುರು-ಲಿಂಗ-ಜಂಗಮಕ್ಕೆ ಸಮರ್ಪಿಸಿ, ಅವರೊಕ್ಕುದ ಹಾರೈಸಿ, ಕೊಂಡು
ಇಂತು ಅಂತರಂಗ ಪರಿಪೂರ್ಣವಾಗಿ ನಿಂದ ಸಮಯದಲ್ಲಿ,
ಸ್ವಯ-ಚರ-ಪರಲೀಲೆಯ ಧರಿಸಿ ಜಂಗಮಾಕೃತಿಯಿಂದ ಬಂದ
ಗುರುಲಿಂಗಜಂಗಮದ ವೃತ್ತಸ್ಥಾನವಾದ ಮೊಳಪಾದ ಪರಿಯಂತರವು
ತೊಳದು ಬಹುಗುಣಿಯಲ್ಲಿ ಮಡಗಿಕೊಂಡು,
ಹೊಸಮನೆ, ಹೊಸಧನ, ಧಾನ್ಯ ಭಾಂಡಭಾಜನ, ಹೊಸ ಅರುವೆ-ಆಭರಣ,
ಜನನಿಜಠರದಿಂದಾದ ಅಂಗಾಂಗ, ಕಾಯಿಪಲ್ಯ,
ಉಚಿತಕ್ರಿಯೆ ಮೊದಲಾಗಿ ಅರಿದಾಚರಿಸುವದು ನೋಡ !
ಆ ಮೇಲೆ ಗುರುಲಿಂಗಜಂಗಮದ ಪ್ರಕ್ಷಾಲನೆ ಮಾಡಿದ ಪಾದವನ್ನು
ಮೂರು ವೇಳೆ ಅಡಿಪಾದವ ಸ್ಪರ್ಶನವ ಮಾಡಿ, ನಾಲ್ಕನೆಯ ವೇಳ್ಯಕ್ಕೆ
ದಶಾಂಗುಲಿಗಳ ಒಂದು ವೇಳೆ ಸ್ಪರ್ಶನವ ಮಾಡಿದ
ಉದಕವನ್ನು ಭಾಂಡಭಾಜನದಲ್ಲಿ ತುಂಬಿ ಸ್ವಪಾಕವ ಮಾಡುವುದು.
ಆ ಸಮಯದಲ್ಲಿ ಬಿಂದುಮಾತ್ರ [ವಾದರೂ]
ಇಷ್ಟಲಿಂಗ ಬಾಹ್ಯವಾದ ಭವಿಜನ್ಮಾತ್ಮರಿಗೆ ಹಾಕಲಾಗದು.
ಇನ್ನು ಜಂಗಮದ ಅಂಗುಷ್ಠ ಎರಡು-ಅಂಗುಲಿ ಎಂಟರಲ್ಲಿ ತನ್ನ ತರ್ಜನಿ ಬೆರಳಿಂದ
ಮೊದಲಂತೆ ಪಾದೋದಕವ ಮಾಡಿ, ಬಟ್ಟಲಲ್ಲಿ ಮಡಗಿ,
ಪೂರ್ವದಲ್ಲಿ ಭಾಂಡದೊಳಗೆ ತುಂಬಿದ
ಗುರುಪಾದೋದಕದಿಂದ ವಿಭೂತಿ ಘಟ್ಟಿಯ ಅಬಿಷೇಕವ ಮಾಡಿ,
ಈ ಬಟ್ಟಲಲ್ಲಿ ಮಡಗಿದ ಲಿಂಗಪಾದೋದಕದಲ್ಲಿ ಮಿಶ್ರವ ಮಾಡಿ,
ಇಪ್ಪತ್ತೊಂದು ಪ್ರಣಮವ ಲಿಖಿಸಿ
ಶ್ರೀಗುರುಲಿಂಗಜಂಗಮವು ತಾನು ಮಂತ್ರಸ್ಮರಣೆಯಿಂದ
ಸ್ನಾನ-ಧೂಳನ-ಧಾರಣವ ಮಾಡಿ, ಲಿಂಗಾರ್ಚನೆ ಕ್ರಿಯೆಗಳ ಮುಗಿಸಿಕೊಂಡು,
ಆ ಮೇಲೆ ತೀರ್ಥವ ಪಡಕೊಂಬುವಂಥ ಲಿಂಗಭಕ್ತನು
ಆ ಜಂಗಮಲಿಂಗಮೂರ್ತಿಯ ಸಮ್ಮುಖದಲ್ಲಿ ಗರ್ದುಗೆಯ ರಚಿಸಿಕೊಂಡು,
ಅಷ್ಟಾಂಗಯುಕ್ತನಾಗಿ ಶರಣಾಥರ್ಿ ಸ್ವಾಮಿ ! ಜಂಗಮಲಿಂಗಾರ್ಚನೆಗೆ ಅಪ್ಪಣೆಯ
ಪಾಲಿಸಬೇಕೆಂದು ಬೆಸಗೊಂಡು,
ಆ ಗರ್ದುಗೆಯ ಮೇಲೆ ಮೂರ್ತವ ಮಾಡಿಕೊಂಡು
ಆ ಕ್ರಿಯಾಜಂಗಮಮೂರ್ತಿಯ ಕರಕಮಲದಲ್ಲಿ
ನೆಲಸಿರುವ ಪರಾತ್ಪರ ಜ್ಞಾನಜಂಗಮ ಲಿಂಗಮೂರ್ತಿಗೆ
ಅಷ್ಟವಿಧಾರ್ಚನೆ-ಷೋಡಶೋಪಚಾರಂಗಳ ಸಮರ್ಪಿಸಿ,
ಆ ಮೇಲೆ, ತನ್ನ ವಾಮಕರದಂಗುಲಿ ಮಧ್ಯದಲ್ಲಿ
ಷಡಕ್ಷರಂಗಳ ಲಿಖಿಸಿಕೊಂಡು ಅರ್ಚಿಸಿ,
ತನ್ನ ಹೃನ್ಮಂದಿರಾಲಯದಲ್ಲಿ ನೆಲಸಿರುವ
ಜ್ಯೋತಿರ್ಮಯ ಇಷ್ಟಮಹಾಲಿಂಗವ ನಿರೀಕ್ಷಿಸಿ
ಆ ಪರಶಿವಜಂಗಮಲಿಂಗದೇವನ ಚರಣಾಂಗುಷ್ಠವ, ತನ್ನ ವಾಮಕರಸ್ಥಲದಲ್ಲಿ
ಸುತ್ತು ಚಿತ್ತಾನಂದ ನಿತ್ಯಪರಿಪೂರ್ಣ ಅವಿರಳ ಪರಂಜ್ಯೋತಿ ಸ್ವರೂಪವಾದ
ಪ್ರಾಣಲಿಂಗವೆಂದು ಭಾವಿಸಿ ಅಷ್ಟವಿಧಾರ್ಚನೆ
ಷೋಡಶೋಪಚಾರ ಕ್ರಿಯಗಳ ಮಾಡಿ,
ಆಮೇಲೆ ಇಷ್ಟಲಿಂಗಜಪಪ್ರಣಮ ಒಂದು ವೇಳೆ
ಪ್ರಾಣಲಿಂಗ ಜಪಪ್ರಣಮ ಒಂದು ವೇಳೆ
ಭಾವಲಿಂಗ ಜಪಪ್ರಣಮ ಒಂದು ವೇಳೆ ಪ್ರದಕ್ಷಿಣವ ಮಾಡಿ
ಜಂಗಮಸ್ತೋತ್ರದಿಂದ ಶರಣು ಮಾಡಿ ಪೂಜೆಯನಿಳುಹಿ, ಪಾತ್ರೆಯಲ್ಲಿರುವ
ಗುರುಪಾದೋದಕದಲ್ಲಿ ಬಿಂದುಯುಕ್ತವಾಗಿ ಮೂಲ ಪ್ರಣಮವ ಲಿಖಿಸಿ
ಬಲದಂಗುಷ್ಠದಲ್ಲಿ ನೀಡುವಾಗ ಷಡಕ್ಷರಿಮಂತ್ರವ ಆರು ವೇಳೆ ಸ್ಮರಿಸಿ,
ನೀಡುವಾಗ ಅಲ್ಲಿ ಅನಾದಿಗುರುವೆಂದು ಭಾವಿಸುವುದು.
ಎಡದಂಗುಷ್ಠದ ಮೇಲೆ ನೀಡುವಾಗ ಪಂಚಾಕ್ಷರವ ಐದು ವೇಳೆ ಸ್ಮರಿಸಿ,
ನೀಡುವಾಗ ಅಲ್ಲಿ ಅನಾದಿಲಿಂಗವೆಂದು ಭಾವಿಸುವುದು.
ಎರಡಂಗುಷ್ಠದ ಮಧ್ಯದಲ್ಲಿ ನೀಡುವಾಗ ಒಂಬತ್ತಕ್ಷರವ ಒಂದು ವೇಳೆ ಸ್ಮರಿಸಿ,
ನೀಡುವಾಗ ಅಲ್ಲಿ ತ್ರಿಕೂಟಸಂಗಮ ಅನಾದಿಜಂಗಮವೆಂದು ಭಾವಿಸುವುದು.
ಈ ಪ್ರಕಾರದಲ್ಲಿ ನೀಡಿದ ಮೇಲೆ ದ್ರವವನಾರಿಸಿ, ಭಸ್ಮಧಾರಣವ ಮಾಡಿ,
ಒಂದೆ ಪುಷ್ಪವ ಧರಿಸಿ, ನಿರಂಜನ ಪೂಜೆಯಿಂದ ಪ್ರದಕ್ಷಣವ ಮಾಡಿ, ನಮಸ್ಕರಿಸಿ,
ಆ ತೀರ್ಥದ ಬಟ್ಟಲೆತ್ತಿ ಆ ಜಂಗಮಲಿಂಗಕ್ಕೆ ಶರಣಾಥರ್ಿಯೆಂದು ಅಬಿವಂದಿಸಿ.
ಅವರು ಸಲಿಸಿದ ಮೇಲೆ ತಾನು ಗರ್ದುಗೆಯ ಬಿಟ್ಟೆದ್ದು,
ಪರಾತ್ಪರ ಬ್ರಹ್ಮಸ್ವರೂಪ ಜಂಗಮ ತೀರ್ಥದ ಸ್ತೋತ್ರವ ಮಾಡಿ,
ಅಷ್ಟಾಂಗ ಹೊಂದಿ ಶರಣುಹೊಕ್ಕು,
ನಿಮ್ಮ ಪ್ರಸಾದೋದಕಕ್ಕೆ ನಿರೂಪವ ಪಾಲಿಸಬೇಕು ಸ್ವಾಮಿ ! ಎಂದು ಬೇಡಿಕೊಂಡು
ಬಂದು ಮೊದಲ ಹಾಂಗೆ ಗರ್ದುಗೆಯ ಮೇಲೆ ಮೂರ್ತವ ಮಾಡಿಕೊಂಡು
ಆ ಜಂಗಮ ಮೂರ್ತಿಗಳು ಸಲಿಸಿದೋಪಾದಿಯಲ್ಲಿ ತಾನು ಸಲಿಸುವುದು.
ಆಮೇಲೆ ಷಟ್ಸ್ಥಲಭಕ್ತ ಮಹೇಶ್ವರರು ಅದೇ ರೀತಿಯಲ್ಲಿ ಸಲಿಸುವುದು.
ಉಳಿದ ಷಟ್ಸ್ಥಲಮಾರ್ಗವರಿಯದ ಲಿಂಗಧಾರಕಶಿಶುವಾಗಿಲಿ,
ಶಕ್ತಿಯಾಗಲಿ, ದೊಡ್ಡವರಾಗಲಿ
ಆ ಗರ್ದುಗೆಯ ತೆಗೆದು ಲಿಂಗಕ್ಕೆ ಅರ್ಪಿಸಿಕೊಳ್ಳಬೇಕಲ್ಲದೆ ಬಟ್ಟಲೆತ್ತಲಾಗದು.
ಅದೇನು ಕಾರಣವೆಂದಡೆ, ಅವರಿಗೆ ಇಪ್ಪತ್ತೊಂದು ದೀಕ್ಷೆ, ಷಟ್ಸ್ಥಲಮಾರ್ಗ,
ಸರ್ವಾಚಾರ ಸಂಪತ್ತಿನಾಚರಣೆ ಮುಂದಿದ್ದರಿಂದ ಅವರು ಬಟ್ಟಲೆತ್ತಲಾಗದು.
ಹೀಂಗೆ ಸಮಸ್ತರು ಸಲಿಸಿದ ಮೇಲೆ ಕೊಟ್ಟು-ಕೊಂಡ, ಭಕ್ತ-ಜಂಗಮವು
ಇರ್ವರು ಕೂಡಿ ಮುಕ್ತಾಯವ ಮಾಡಿದಲ್ಲಿಗೆ ದಶವಿಧ ಪಾದೋದಕವಾಗುವುದು.
ಆ ಮೇಲೆ ಗುರುಪಾದೋದಕದಿಂದ ಪಾಕವ ಮಾಡಿದ ಭಾಂಡಭಾಜನಂಗಳು
ತಾಂಬೂಲ ಪದಾರ್ಥ ಮುಂತಾಗಿ ಇರ್ವರು ಕೂಡಿ
ಮೌನಮಂತ್ರ ಧ್ಯಾನದಿಂದ ಹಸ್ತಸ್ಪರ್ಶನವ ಮಾಡಿ.
ಶುದ್ಧ ಪ್ರಸಾದವೆಂದು ಭಾವಿಸಿ, ಬಹುಸುಯಿದಾನದಿಂದ
ಸಮಸ್ತ ಜಂಗಮಭಕ್ತ ಮಹೇಶ್ವರ ಶರಣಗಣಾರಾಧ್ಯರಿಗೆ ಎಡೆಮಾಡಿ,
ಅಷ್ಟಾಂಗ ಹೊಂದಿ, ಎಡಬಲ ಗಣತಿಂಥಿಣಿಯ ನೋಡಿ, ನಿರೀಕ್ಷಿಸಿ,
ಶರಣಾಥರ್ಿ ! ಸ್ವಾಮಿ ! ಮಹಾಲಿಂಗಾರ್ಪಿತವ ಮಾಡಬೇಕೆಂದು ಅಬಿವಂದಿಸಿ,
ಪತಿವ್ರತತ್ವದಿಂದ ಜಂಗಮಕ್ಕೆ ನಿರ್ವಂಚಕನಾಗಿ,
ಭಕ್ತ-ಜಂಗಮವೆಂಬ ಉಭಯನಾಮವಳಿದು ಕ್ಷೀರ ಕ್ಷೀರ ಬೆರೆತಂತೆ ನಿರಾಕಾರ-
ನಿಶ್ಯಬ್ಧಲೀಲೆ ಪರಿಯಂತರವು ಶ್ರೀಗುರುಲಿಂಗಜಂಗಮಪಾದೋದಕಪ್ರಸಾದವ
ಸಪ್ತವಿಧಭಕ್ತಿಯಿಂದ ಸಾವಧಾನಿಯಾಗಿ ಆಚರಿಸುವಾತನೆ ಜಂಗಮಭಕ್ತನಾದ
ಅಚ್ಚಪ್ರಸಾದಿಯೆಂಬೆ ಕಾಣಾ ! ಗುಹೇಶ್ವರಲಿಂಗದಲ್ಲಿ ಚೆನ್ನಬಸವಣ್ಣ.
ವಚನ 0151
ಅಯ್ಯ ! ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ,
ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯವೆಂಬ
ದಶವಾಯು ಪ್ರಾಣಗುಣಂಗಳ ನಷ್ಟವ ಮಾಡಿ
ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ,
ಧಾನ್ಯ, ಧಾರಣ, ಸಮಾದಿಯೆಂಬ ಹಠಯೋಗ ಜಡಶೈವಮಾರ್ಗವನುಳಿದು,
ನಿಭ್ರರ್ಾಂತ, ನಿಶ್ಚಿಂತ, ನಿರ್ಗುಣಾನಂದಲೀಲೆಯನರಿದು, ಹಿಂದೆ ಹೇಳಿದ
ಸದ್ಭಕ್ತ-ಮಹೇಶ-ಪ್ರಸಾದಿಸ್ಥಲವ ಅಂಗವ ಮಾಡಿಕೊಂಡು
ಸರ್ವಾಂಗಲೋಚನಮೂರ್ತಿಯಾಗಿ ಪ್ರಭಾವಿಸುವ
ನಿಜಪ್ರಾಣಲಿಂಗಿಯಂತರಂಗದಲ್ಲಿ ಚಿನ್ಮಯ ಸ್ವರೂಪಲೀಲೆಯಿಂ
ಸಮಸ್ತ ತತ್ತ್ವಾನುಭಾವವನೊಳಗು ಮಾಡಿಕೊಂಡು
ಹದಿನಾಲ್ಕು ಸ್ಥಲಂಗಳ ಗರ್ಬಿಕರಿಸಿಕೊಂಡು
ಐದು ಸಾವಿರದ ನೂರ ಎಂಬತ್ತುನಾಲ್ಕು ಮಂತ್ರಮಾಲೆಗಳ ಪಿಡಿದುಕೊಂಡು
ಇಪ್ಪತ್ತುನಾಲ್ಕು ಸಕೀಲಗರ್ಭದಿಂ, ಬಂಗಾರ ಲೋಹವನೊಳಕೊಂಡಂತೆ,
ತನ್ನ ಸೋಂಕಿದವರೆಲ್ಲ ತನ್ನಂತೆಯೆಂಬ ಗುರುವಚನೋಕ್ತಿಪ್ರಮಾಣದಿಂದೆ
ಶಬ್ದದೊಳಗೆ ನಿಃಶಬ್ದವಡಗಿರ್ಪ ಹಾಂಗೆ ಏಕಸ್ವರೂಪಿನಿಂದೆ
ಯಜನಸ್ವರೂಪಮೂರ್ತಿ ಜಂಗಮಲಿಂಗವಾಗಿ ನೆಲಸಿರ್ಪುದು ನೋಡ !
ನಿರವಯಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು
ಚೆನ್ನಬಸವಣ್ಣ.
ವಚನ 0152
ಅಯ್ಯ ! ಮುಂದೆ ಮರ್ತ್ಯಲೋಕದ ಮಹಾಗಣಂಗಳು
ಸದ್ಭಕ್ತಿ, ಸದಾಚಾರ, ಸತ್ಕ್ರಿಯಾ, ಸಮ್ಯಜ್ಞಾನ,
ಆಜ್ಞಾದೀಕ್ಷೆ ಮೊದಲಾದ ಇಪ್ಪತ್ತೊಂದು ದೀಕ್ಷೆಯ ವಿಚಾರ,
ತ್ರಿವಿಧ ಸ್ಥಲ-ಷಟ್ಸ್ಥಲ
ದಶವಿಧಪಾದೋದಕ, ಏಕಾದಶಪ್ರಸಾದ, ಷೋಡಶಾವರಣ,
ನೂರೆಂಟುಸಕೀಲು ಮೊದಲಾದ ಸಮಸ್ತಸಕೀಲದ ಅರ್ಪಿತ-ಅವಧಾನಂಗಳು,
ಮೂಲಪ್ರಣಮ ಮೊದಲಾಗಿ ಮಹಾಮಂತ್ರಗಳು,
ಸರ್ವಾಚಾರ ಸಂಪತ್ತಿನ ಲಿಂಗಾನುಭಾವದ ನಡೆ-ನುಡಿಯ ವಿಚಾರವು
ಷಡ್ವಿಧಶೀಲ, ಷಡ್ವಿಧವ್ರತ, ಷಡ್ವಿಧನೇಮದ ಕಲೆನೆಲೆಯ ಸನ್ಮಾರ್ಗವು,
ಇಂತೀ ಸ್ವಸ್ವರೂಪುನಿಲುಕಡೆಯ
ನಿಷ್ಕಲಂಕ ಪರಶಿವಮೂರ್ತಿ ಸದ್ಗುರು ಲಿಂಗಜಂಗಮದಿಂ ಪಡೆದು
ಪರುಷಮುಟ್ಟಿದ ಲೋಹ ಬಂಗಾರವಾಗಿ ಮರಳಿ ಲೋಹವಾಗದಂತೆ,
ಪಾವನಾರ್ಥವಾಗಿ ಸ್ವಯ-ಚರ-ಪರ, ಆದಿ-ಅಂತ್ಯ-ಸೇವ್ಯಸ್ಥಲ ಮೊದಲಾದ
ಷಟ್ಸ್ಥಲಮಾರ್ಗವಿಡಿದಾಚರಿಸುವಲ್ಲಿ ಭಕ್ತಮಾಹೇಶ್ವರ ಶರಣಗಣಂಗಳು
ಸಮಪಙ್ತಯಲ್ಲಿ
ಸುಗಂಧ, ಸುರಸ, ಸುರೂಪು, ಸುಸ್ಪರ್ಶನ ಸುಶಬ್ದ, [ಸುಪರಿಣಾಮ],
ಮಧುರ, ಒಗರು, ಕಾರ, ಹುಳಿ, ಕಹಿ, ಲವಣ, ಪಂಚಾಮೃತ
ಮೊದಲಾದ ಪದಾರ್ಥದ
ಪೂರ್ವಾಶ್ರಯವ ಕಳೆದು, ಮಹಾಘನಲಿಂಗಮುಖದಲ್ಲಿ
ಶುದ್ಧ-ಸಿದ್ಧ-ಪ್ರಸಿದ್ಧ, ರೂಪು-ರುಚಿ-ತೃಪ್ತಿಗಳು ಮಹಾಮಂತ್ರ
ಧ್ಯಾನದಿಂದ ಸಮರ್ಪಿಸಿ
ಆ ಲಿಂಗದ ಗರ್ಭದಿ ನೆಲಸಿರ್ಪ ನಿರಂಜನಜಂಗಮದಿಂ ಮಹಾಪ್ರಸಾದವ ಪಡೆದು
ತಾನೆ ಪ್ರಾಣಲಿಂಗವೆಂದು ಎರಡಳಿದು,
ಪರಿಶಿವಲಿಂಗಲೀಲೆಯಿಂ ಭೋಗಿಸುವ ಸಮಪಙ್ತಯ ಮಧ್ಯದಲ್ಲಿ
ಆವ ಗಣಂಗಳಾದರು ಸರಿಯೆ, ಪ್ರಸಾದ ನಮಗೆ ಹೆಚ್ಚಾಯಿತ್ತೆಂದು
ತ್ರಿವಿಧದೀಕ್ಷಾಹೀನವಾದ ಉಪಾದಿಲಿಂಗಭಕ್ತಂಗೆ
ಒಲ್ಮೆಯಿಂದ ಶರಣಾಗೆಂದು ಕೊಡುವವನೊಬ್ಬ ಅಯೋಗ್ಯನು !
ಅಥವಾ ಗುರುಮಾರ್ಗದಾಚರಣೆಯ ತಿಳಿಯದೆ ಕೊಟ್ಟಲ್ಲಿ,
ಇಂತು ಕೊಂಡ ಭಕ್ತನು ಬಹುನಿಜದಿಂದ ಆ ಪ್ರಸಾದವೆ-
-ಪ್ರಾಣವಾಗಿದ್ದುದ ನೋಡಿ
ಮುಂದೆ ಷಟ್ಸ್ಥಲಲಿಂಗಾನುಭಾವ ಸದ್ಭಕ್ತ ಶರಣಗಣಂಗಳು
ಕೊಟ್ಟಾತಂಗೆ ಇಂತು ಕೊಡದಂತೆ ಆಜ್ಞೆಯ ಮಾಡಿ,
ಕೊಂಡಂಥವರ ದುರ್ಗುಣಗಳ ಬಿಡಿಸಿ
ವೇಧಾಮಂತ್ರಕ್ರಿಯೆ ಹಸ್ತಮಸ್ತಕಸಂಯೋಗ ಮೊದಲಾದ
ಇಪ್ಪತ್ತೊಂದು ದೀಕ್ಷೆಯ ಸದ್ಗುರುವಿನಿಂ ಮಾಡಿಸಿ ಸದಾಚಾರವ ಬೋದಿಸಿ,
ಅಷ್ಟಾವರಣದ ಗೊತ್ತ ಸರ್ವಾಂಗಲಿಂಗದಿ ತೋರಿ,
ಅನಾದಿಜಂಗಮಪ್ರಸಿದ್ಧ ಪ್ರಸಾದ ಪಾದೋದಕವ ಕೊಟ್ಟುಕೊಂಬುದೆ
ಸದಾಚಾರ-ಸನ್ಮಾರ್ಗ ನೋಡ ! ಗುಹೇಶ್ವರಲಿಂಗಕ್ಕೆ ಚೆನ್ನಬಸವಣ್ಣ.
ವಚನ 0153
ಅಯ್ಯ ! ಯಂತ್ರಗಾರನಲ್ಲ ಮಂತ್ರಗಾರನಲ್ಲ ನೋಡ !
ನಿರವಯಶೂನ್ಯಲಿಂಗಮೂರ್ತಿ
ಕುಳನಲ್ಲ ವ್ಯಾಕುಳನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಪಾಶನಲ್ಲ ಪಾಶಬದ್ಧನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಕಾಲನಲ್ಲ ಕರ್ಮನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಅಂಗವಿಕಾರಿಯಲ್ಲ ಮನವಿಕಾರಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಸೂಯನಲ್ಲ ಅಸೂಯನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಜಪದವನಲ್ಲ ತಪದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ವೈದಿಕನಲ್ಲ ವ್ಯವಹಾರಿಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಸಿದ್ಧನಲ್ಲ ಪ್ರಸಿದ್ಧನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಸುಖಿಯಲ್ಲ ದುಃಖಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಪಾಪಿಯಲ್ಲ ಕೋಪಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಕರ್ಮಿಯಲ್ಲ ಧರ್ಮಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಇಂತು ಉಭಯವಳಿದು ಸಂಗನಬಸವಣ್ಣನ ಪಂಚಪರುಷಮೂರ್ತಿಯಾಗಿ ಬೆಳಗುವ
ಜ್ಯೋತಿ ತಾನೆ ನೋಡ ಗುಹೇಶ್ವರಲಿಂಗವು, ಚೆನ್ನಬಸವಣ್ಣ.
ವಚನ 0154
ಅಯ್ಯ ! ಶ್ವೇತ, ಪೀತ, ಹರಿತ, ಮಾಂಜಿಷ್ಠ, ಕಪೋತ, ಮಾಣಿಕ್ಯ,
ಹಂಡಬಂಡ, ಚಿತ್ರ ವಿಚಿತ್ರ, ಮೊದಲಾದ ಪಶುಗಳ ಮಧ್ಯದಲ್ಲಿ ಕ್ಷೀರ !;
ಕ್ಷೀರ ಮಧ್ಯದಲ್ಲಿ ದದಿ, ತಕ್ರ, ನವನೀತ, ಘೃತ, ರುಚಿ, ಚೇತನವಡಗಿರ್ಪಂತೆ,
ಸಿಂಪಿಯ ಮಧ್ಯದಲ್ಲಿ ಚಿಜ್ಜಲ ಸ್ವಾತಿಮಿಂಚಿನ ಪ್ರಕಾಶಕ್ಕೆ ಘಟ್ಟಿಗೊಂಡು
ಜಲರೂಪವಳಿದು ನಿರಾಕಾರವಾಗಿರ್ಪಂತೆ
ಸಮಸ್ತ ಬೀಜಮಧ್ಯದಲ್ಲಿ ವೃಕ್ಷಂಗಳಡಗಿರ್ಪಂತೆ
ವೃಕ್ಷಂಗಳ ಮಧ್ಯದಲ್ಲಿ ಬೀಜಂಗಳಡಗಿರ್ಪಂತೆ
ಸದ್ಭಕ್ತ ಶಿವಶರಣಗಣಂಗಳ ಮಧ್ಯದಲ್ಲಿ ಗೋಪ್ಯವಾಗಿರ್ದು
ಸಮಸ್ತ ಕುಲ-ಛಲ-ಮತಭ್ರಮಿತಂಗಳಿಂದ ತೊಳಲುವ
ವೇದಾಂತಿ-ಸಿದ್ಧಾಂತಿ-ಬಿನ್ನಯೋಗಿ ಮೊದಲಾದ ಅದ್ವೈತಜಡಾತ್ಮರ ಕಣ್ಣಿಂಗೆ
ಅಗೋಚರವಾಗಿರ್ಪುದು ನೋಡ ! ನಿರವಯಶೂನ್ಯಮೂರ್ತಿ ಗುಹೇಶ್ವರಲಿಂಗವು
ಚೆನ್ನಬಸವಣ್ಣ.
ವಚನ 0155
ಅಯ್ಯ ! ಸಗುಣಿಯಲ್ಲ ನಿರ್ಗುಣಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಪರಮನಲ್ಲ ಜೀವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಅಹುದೆನ್ನ ಅಲ್ಲವೆನ್ನ ನೋಡ ! ನಿರವಯಶೂನ್ಯಲಿಂಗಮೂರ್ತಿ
ನಾನು ಎನ್ನ ನೀನು ಎನ್ನ ನೋಡ ! ನಿರವಯಶೂನ್ಯಲಿಂಗಮೂರ್ತಿ
ಸೂಕ್ಷ್ಮನಲ್ಲ ಸ್ಥೂಲನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಯೋಗದವನಲ್ಲ ಭೋಗದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಮಾಡುವೆ [ನೆನ್ನ] ಮಾಡಿಸಿಕೊಂಬೆನೆನ್ನ ನೋಡ ! ನಿರವಯಶೂನ್ಯಲಿಂಗಮೂರ್ತಿ
ಸುಶಬ್ದದವನಲ್ಲ ಕುಶಬ್ದದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಸುಸ್ಪರ್ಶನದವನಲ್ಲ ಕುಸ್ಪರ್ಶನದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಸುರೂಪದವನಲ್ಲ ಕುರೂಪದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಸುರುಚಿಯವನಲ್ಲ ಕುರುಚಿಯವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಸುಗಂಧದವನಲ್ಲ ದುರ್ಗಂಧದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಇಂತು ಉಭಯವಳಿದು ಸಂಗನಬಸವಣ್ಣನ ಕರ-ಮನ-ಭಾವಂಗಳಲ್ಲಿ
ಬೆಳಗುವ ಪರಂಜ್ಯೋತಿ ತಾನೆ ನೋಡ ! ಗುಹೇಶ್ವರಲಿಂಗವು
ಚೆನ್ನಬಸವಣ್ಣ.
ವಚನ 0156
ಅಯ್ಯ ! ಸದ್ಭಕ್ತ-ಮಹೇಶ್ವರ-ಪ್ರಸಾದಿ-
ಪ್ರಾಣಲಿಂಗಿ-ಶರಣ-ಐಕ್ಯ-ನಿರಾಲಂಬಸ್ಥಲ ಮೊದಲಾದ
ಸಮಸ್ತಸ್ಥಲಂಗಳನರಿದು ಮರದು, ಮೇಲಾದ
ನಿರವಯಶೂನ್ಯಸ್ಥಲದಲ್ಲಿ ಪ್ರಭಾವಿಸುವ ಮೂರ್ತಿಯ ಇರವೆಂತೆಂದಡೆ-
ಅಜ್ಞಾನಮಾಯಾಸಂಸಾರ ಪ್ರಪಂಚೆಂಬ ಪಾಶದಲ್ಲಿ ಬಿದ್ದು ತೊಳಲುವ
ಜಡಜೀವರಿಗೆ ಮರೆಯಾಗಿ, ಕಣ್ಣುಮನ ಭಾವಂಗಳಿಗೆ ಗೋಚರವಿಲ್ಲದೆ
ಕ್ರಿಯಾಕಾಶ-ಜ್ಞಾನಾಕಾಶ-ಭಾವಾಕಾಶ-ಪಿಂಡಾಕಾಶ-ಬಿಂದ್ವಾಕಾಶ-
ಚಿದಾಕಾಶ-ಮಹದಾಕಾಶಮಧ್ಯದಲ್ಲಿ ಸಿಡಿಲುಮಿಂಚು ಅಭ್ರಚ್ಛಾಯೆಯಂತೆ,
ಇಕ್ಷು-ಲವಣ-ಸರ್ಪಿ-ದದಿ-ಕ್ಷೀರ-ಘೃತ-ಸ್ವಾದೋದಕ
ಮೊದಲಾದ [ಸಪ್ತ] ಸಮುದ್ರಂಗಳಲ್ಲಿ
ಉದರಾಗ್ನಿ-ಮುಂದಾಗ್ನಿ-ಕಾಮಾಗ್ನಿ-ಶೋಕಾಗ್ನಿ-
ವಡವಾಗ್ನಿ-ಕಾಲಾಗ್ನಿ-ಚಿದಗ್ನಿ-[ಯೆಂಬ ಸಪ್ತಾಗ್ನಿ] ಇರ್ದು
ಆ ಸಮುದ್ರಂಗಳ ಸಂಸಾರ-ಪಾಶ-ಜನ್ಮ-ಜರೆ-ಮರಣಾದಿಗಳಿಗೆ
ಹೊರಗಾಗಿ ಇರ್ಪಂತೆ, ಶಿವಶರಣರ್ಗೆ ರೂಪಾಗಿ ಜಡಜೀವರಿಗೆ ನಿರೂಪವಾಗಿರ್ಪುದು
ನೋಡ ! ಗುಹೇಶ್ವರಲಿಂಗವು ಚೆನ್ನಬಸವಣ್ಣ.
ವಚನ 0157
ಅಯ್ಯ ! ಸಪ್ತಧಾತುವಿನ ಸಪ್ತವ್ಯಸನವನಳಿದು,
ಜೀವನ ಸಂಕಲ್ಪ-ವಿಕಲ್ಪ ಆಸೆ-ಆಮಿಷಂಗಳ ಹೊಟ್ಟುಮಾಡಿ ತೂರಿ,
ಹಿಂದೆ ಹೇಳಿದ ಭಕ್ತಸ್ಥಲದಲ್ಲಿ ನಿಂದು ನಿರ್ವಂಚಕನಾಗಿ ಪಾತಕಸೂತಕಗಳ ಪರಿದು
ಸತ್ತುಚಿತ್ತಾನಂದ ನಿತ್ಯಪರಿಪೂರ್ಣ ಅವಿರಳಪರಂಜ್ಯೋತಿಮೂರ್ತಿಯಾಗಿ
ಪ್ರಜ್ವಲಿಸುವ ಸದ್ವೀರಮಾಹೇಶ್ವರನಂತರಂಗದಲ್ಲಿ
ಪರಮಾನಂದ ಲೀಲೆಯಿಂ ಇಪ್ಪತ್ತೈದು ತತ್ತ್ವಂಗಳನೊಳಕೊಂಡು
ಹದಿನೆಂಟು ಸ್ಥಲಂಗಳ ಗರ್ಬಿಕರಿಸಿಕೊಂಡು,
ಎರಡು ಸಾವಿರದ ಐನೂರ ತೊಂಬತ್ತೆರಡು ಮಂತ್ರಮಾಲೆಗಳ ಪಿಡಿದುಕೊಂಡು
ಇಪ್ಪತ್ತುನಾಲ್ಕು ಸಕೀಲಗರ್ಭದಿಂ, ಗುರುಮುಟ್ಟಿ ಗುರುವಾದ ಗುರುವಿಂಗೆ ಎಂಬ
ಎರಡೆಂಬತ್ತೆಂಟು ಕೋಟಿ ವಚನಾನುಭಾವವ ಸ್ವಾನುಭಾವಜ್ಞಾನದಿಂದರಿದು,
ಪುಷ್ಪ ಪರಿಮಳ [ಜ್ಯೋತಿ] ಪ್ರಕಾಶದಂತೆ ಏಕರೂಪಿನಿಂದ
ಮಂತ್ರಮೂರ್ತಿ ಗುರುಲಿಂಗವಾಗಿ [ನೆಲಸಿರ್ಪುದು] ನೋಡ
ನಿರವಯಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು ಚೆನ್ನಬಸವಣ್ಣ.
ವಚನ 0158
ಅಯ್ಯ ! ಸಮಸ್ತ ಆತ್ಮರು ರತಿಸಂಯೋಗದಿಂದ ಗರ್ಭಿಣಿಯಾದಲ್ಲಿ
ಹೆಣ್ಣು ಗಂಡೆಂಬ ನಾಮ-ರೂಪ-ಕ್ರಿಯೆಗಳು ಕಾಣಿಸಿಕೊಳ್ಳದಂತೆ;
ಬಾಲ ಶಿಶುವಿನೊಳಗೆ ಯೌವನವಡಗಿರ್ಪಂತೆ;
ಆ ಯೌವನದೊಳಗೆ ಮುಪ್ಪು ಅಡಗಿರ್ಪಂತೆ;
ಆ ಮುಪ್ಪಿನೊಳಗೆ ಜನನ-ಮರಣ-ಸ್ಥಿತಿ ಅಡಗಿರ್ಪಂತೆ;
ಆ ಜನನ ಮರಣ ಸ್ಥಿತಿಯೊಳಗೆ ಸಕಲ ಭೋಗಂಗಳಡಗಿರ್ಪಂತೆ;
ಸರ್ವಜೀವದಯಾಪರತ್ವವುಳ್ಳ ಸದ್ಭಕ್ತ ಶಿವಶರಣಗಣಂಗಳಲ್ಲಿ
ಮುಗಿಲ ಮರೆಯ ಸೂರ್ಯನಂತೆ ನೆಲದ ಮರೆಯ ನಿಧಾನದಂತೆ;
ಒರೆಯ ಮರೆಯ ಅಲಗಿನಂತೆ; ಹಣ್ಣಿನ ಮರೆಯ ರಸದಂತೆ
ಪರಮ ಪಾವನಮೂರ್ತಿ ನಿರವಯಘನವನೊಡಗೂಡಿ
ಏಕಸ್ವರೂಪಿನಿಂದ ಗುಹೇಶ್ವರಲಿಂಗವು
ತಾನು ತಾನಾಗಿರ್ದುದನೇನೆಂಬೆನಯ್ಯ ಚೆನ್ನಬಸವಣ್ಣ.
ವಚನ 0159
ಅಯ್ಯ ! ಸಮಸ್ತಧಾನ್ಯಾದಿಗಳಲ್ಲಿ, ಸಮಸ್ತ ಫಲಾದಿಗಳಲ್ಲಿ,
ಸಮಸ್ತಪುಷ್ಪಪತ್ರಾದಿಗಳಲ್ಲಿ
ಮಧುರ, ಒಗರು, ಕ್ಷಾರ, ಆಮ್ಲ, ಕಹಿ, ಲವಣ ಮೊದಲಾದ
ಸಮಸ್ತಪರಮಚಿದ್ರಸವಡಗಿರ್ಪಂತೆ,
ಷೋಡಶಮದಗಜದಂತರಂಗದ ಮಧ್ಯದಲ್ಲಿ
ಸಮಸ್ತ ವೈರಾಗ್ಯ, ತಿರಸ್ಕಾರಸ್ವರೂಪ ಮಹಾ [ಅ]ಜ್ಞಾನವಡಗಿರ್ಪಂತೆ,
ಚಂದ್ರಕಾಂತದ ಶಿಲಾಮಧ್ಯದಲ್ಲಿ ಚಿಜ್ಜಲವಡಗಿರ್ಪಂತೆ,
ಶಿಶುಗಳು `ಕಂಡ ಕನಸು’ ತಂದೆ ತಾಯಿಗಳಿಗೆ ಕಾಣಿಸಿದಂತೆ,
ಕರವೀರ, ಸುರಹೊನ್ನೆ, ಜಾಜಿ, ಬಕುಳ, ಪಾದರಿ, ಪಾರಿಜಾತ, ಮೊಲ್ಲೆ,
ಮಲ್ಲಿಗೆ, ತಾವರೆ, ನೈದಿಲೆ, ಸಂಪಿಗೆ, ದವನ, ಪಚ್ಚೆ, ಕಸ್ತೂರಿ,
ಮರುಗ, ಬಿಲ್ವ ಮೊದಲಾದ ಪುಷ್ಪ ಪತ್ರಾದಿಗಳಲ್ಲಿ
ಮಹಾಸದ್ವಾಸನಾ ಸ್ವರೂಪವಾದ ಪರಿಮಳವಡಗಿರ್ಪಂತೆ,
ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ,
ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯವೆಂಬ ದಶವಾಯುಗಳ ಮಧ್ಯದಲ್ಲಿ
ಭ್ರಮರನಾದ, ವೀಣಾನಾದ, ಘಂಟಾನಾದ, ಭೇರಿನಾದ, ಮೇಘನಾದ,
ಪ್ರಣಮನಾದ, ದಿವ್ಯನಾದ, ಸಿಂಹನಾದ, ಶರಭನಾದ, ಮಹಾನಾದಂಗಳಡಗಿರ್ಪಂತೆ,
ಸದ್ಭಕ್ತ ಶಿವಶರಣಗಣಂಗಳ ಮಧ್ಯದಲ್ಲಿ ಅಡಗಿರ್ದು, ಜಗದ ಜಡಜೀವರಿಗೆ
ಗೋಚರವಿಲ್ಲದಿರ್ಪುದು ನೋಡ ! ಗುಹೇಶ್ವರಲಿಂಗವು, ಚೆನ್ನಬಸವಣ್ಣ
ವಚನ 0160
ಅಯ್ಯ ! ಸಮಸ್ತಲೋಕದ ಅಹಂ-ಮಮತೆಯೆಂಬ
ಮೂಲಾಹಂಕಾರಂಗಳ ಪಾವುಗೆಯ ಮಾಡಿ ಮೆಟ್ಟಿನಿಂದು
ಸರ್ವಾಂಗದಲ್ಲಿ ಚಿದ್ವಿಭೂತಿರುದ್ರಾಕ್ಷೆಮಂತ್ರ-
ಜ್ಞಾನ, ಕ್ರಿಯಾಪಾದೋದಕ ಪ್ರಸಾದಭಕ್ತಿಯೆ
ಅಂಗ ಮನ ಪ್ರಾಣ ಭಾವ ಇಂದ್ರಿಯಂಗಳಾಗಿ, ಹಿಂದೆ ಹೇಳಿದ
ಸದ್ಭಕ್ತ-ಮಹೇಶ್ವರ-ಪ್ರಸಾದಿ-ಪ್ರಾಣಲಿಂಗ-ಶರಣ-ಐಕ್ಯಸ್ಥಲಂಗಳ
ತನ್ನೊಳಗು ಮಾಡಿಕೊಂಡು
ಮೇಲಾದ ನಿರಾಲಂಬಸ್ಥಲದಲ್ಲಾಚರಿಸುವ ಶರಣನಂತರಂಗದಲ್ಲಿ
ಅಣುವಿಗೆ ಅಣುವಾಗಿ; ಮಹತ್ತಿಂಗೆ ಮಹತ್ತಾಗಿ
ನೂರೊಂದು ಸ್ಥಲಂಗಳ ಕರತಳಾಮಳಕವಾಗಿ
ಇಪ್ಪತ್ತೊಂದು ಸಾವಿರದಾ [ಆ]ರುನೂರು ಮಂತ್ರಮಾಲಿಕೆಗಳ ಪಿಡಿದುಕೊಂಡು
ಇನ್ನೂರ ಹದಿನಾರು ಸಕೀಲಗರ್ಭದಿಂ
ಪರಿಮಳ ಪರಿಮಳ ಕೂಡಿ ಬಿನ್ನದೋರದ ಹಾಂಗೆ ಏಕಸ್ವರೂಪಿನಿಂದೆ
ದೀಕ್ಷಾ-ಶಿಕ್ಷಾ-ಮೋಕ್ಷಕಾರಣಾವತಾರಮೂರ್ತಿ ನಿಃಕಳಲಿಂಗವಾಗಿ
ನೆಲಸಿರ್ಪುದು ನೋಡ ! ನಿರವಯಶೂನ್ಯಲಿಂಗಮೂರ್ತಿ
ಗುಹೇಶ್ವರಲಿಂಗವು ಚೆನ್ನಬಸವಣ್ಣ.
ವಚನ 0161
ಅಯ್ಯ ಅಷ್ಟತನುವಿನ ಭ್ರಷ್ಟಮದಂಗಳ ತೂರಿ,
ಅಷ್ಟಭೋಗವನಳಿದು, ಅಷ್ಟೈಶ್ವರ್ಯಗಳ ನೀಗಿ, ಅಷ್ಟಭಕ್ತಿಯನರಿದು,
ಅಷ್ಟಾವರಣವ ತಿಳಿದು, ಅಷ್ಟವಿಧಸಕೀಲವ ಭೇದಿಸಿ ನೋಡಿ,
ಅಷ್ಟಾಚಾರಗಳ ಕಂಡು, ನಿಷ್ಠೆ ನಿಜದಲ್ಲಿ ನಿಂದು,
ಸಗುಣಾನಂದಲೀಲಾಮೂರ್ತಿಯಾಗಿ ಪ್ರಜ್ವಲಿಸುವ ಸದ್ಭಕ್ತ ಶರಣನಂತರಂಗದಲ್ಲಿ
ಪರಿಪೂರ್ಣಲೀಲೆಯಿಂ ಮೂವತ್ತಾರು ತತ್ವಂಗಳನೊಳಕೊಂಡು,
ಇಪ್ಪತ್ತು ನಾಲ್ಕು ಸ್ಥಲಂಗಳ ಗರ್ಬಿಕರಿಸಿಕೊಂಡು
ಸಾವಿರದೇಳುನೂರ ಇಪ್ಪತ್ತೆಂಟು ಮಂತ್ರಮಾಲೆಗಳ ಪಿಡಿದು,
ಇಪ್ಪತ್ತುನಾಲ್ಕು ಸಕೀಲ ಗರ್ಭದಿಂ
“ಭಕ್ತದೇಹಿಕದೇವಾನಾಂ ದೇವದೇಹಿಕ ಭಕ್ತಯೋಃ”
ಎಂಬ ವಾಂಛೆಯಿಂ ಕ್ಷೀರದೊಳು ಘೃತವಡಗಿದಂತೆ
ಪಂಚಾಚಾರಮೂರ್ತಿ ಆಚಾರಲಿಂಗವಾಗಿ ನೆಲಸಿರ್ಪುದು ನೋಡ !
ಗುಹೇಶ್ವರಲಿಂಗವು ಚೆನ್ನಬಸವಣ್ಣ.
ವಚನ 0162
ಅಯ್ಯ ಉಭಯ ಬಿನ್ನವರ್ತನಾಗುಣಂಗಳ
ತನ್ನ ಮೂಲ ಚಿತ್ಸ್ವರೂಪವಾದ ಪರಿಪೂರ್ಣ ಮಹಾಜ್ಞಾನ ಪ್ರಕಾಶದ ಬಲದಿಂ
ಜಳ್ಳುಮಾಡಿ ತೂರಿ, ತನ್ನನಾದಿಸನ್ಮಾರ್ಗವ ತಿಳಿದು,
ಆ ಸನ್ಮಾರ್ಗದೊಳಗೆ ನಿರಾಭಾರಿ ವೀರಶೈವ ಅನಾದಿಶರಣಸ್ವರೂಪವ ತಿಳಿದು,
ಆ ಶರಣನ ನಿಜಾಚರಣೆ ಸ್ವಸ್ವರೂಪದ ನಿಲುಕಡೆಯ
ಆ ಪರಿಪೂರ್ಣಜ್ಞಾನಪ್ರಕಾಶದೊಳಗೆ ಮಹದರಿವ
ಸ್ವಾನುಭಾವದೃಕ್ಕಿನಿಂ ಕಂಡು, ಆ ಮಹದರಿವೆ ಗುರುವಾಗಿ,
ಆ ಪರಿಪೂರ್ಣಜ್ಞಾನವೆ ಶಿಷ್ಯನಾಗಿ, ಆ ಸ್ವಾನುಭಾವ ಪ್ರಕಾಶವೆ ಲಿಂಗವಾಗಿ,
ತಮ್ಮ ತಮ್ಮ ನಿಜ ಪ್ರಕಾಶಕ್ಕೆ ಪ್ರಭಾವಿಸುವ
ಪರಾತ್ಪರಂಜ್ಯೋತಿ ನಿರವಯ ಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು
ಸಂಗನ ಬಸವಣ್ಣನ ಅಷ್ಟದಳ, ಚೌದಳ, ಷಡ್ದಳ, ದಶದಳ, ದ್ವಾದಶದಳ,
ಷೋಡಶದಳ, ದ್ವಿದಳ, ಶತದಳ, ಸಹಸ್ರದಳ, ಲಕ್ಷದಳ, ಕೋಟಿದಳಂಗಳಿಂದ
ಸರ್ವಾಂಗದಿ ಶೋಬಿಸುವ ಅನಂತದಂಗಳದಲ್ಲಿ
ಅನಂತಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶಕ್ಕೆ ಮಿಗಿಲಾಗಿ [ಒಪ್ಪುತ್ತಿರ್ಪುದು]
ನೋಡ ! ಚೆನ್ನಬಸವಣ್ಣ
ವಚನ 0163
ಅಯ್ಯ ಎತ್ತಿದ (ಇಕ್ಕಿದ?) ಮಣಿ ಮುಕುಟದ ಮೇಲೆ
ಸುತ್ತಿದ ನಾಗಭೂಷಣದ ಪಡೆಯೊಂದು ಕೋಟಿ
ಶಿವನಿಪ್ಪ ನೆಲೆಯನಾರೂ ಅರಿಯರಯ್ಯ.
ಇಕ್ಕಿದ ಕರೋಟಿಮಾಲೆಯೊಳಗಿಪ್ಪ ರುದ್ರರು ಒಂದು ಕೋಟಿ
ಶಿವನಿಪ್ಪ ನೆಲೆಯನಾರೂ ಅರಿಯರಯ್ಯ.
ಇಕ್ಕಿದ ರುಂಡಮಾಲೆಯೊಳಗಿಪ್ಪ ಮುಂಡಧಾರಿಗಳು ಒಂದು ಕೋಟಿ
ಶಿವನಿಪ್ಪ ನೆಲೆಯನಾರೂ ಅರಿಯರಯ್ಯ.
ಉಟ್ಟ ಗಜಚರ್ಮದೊಳಗಿಪ್ಪ ಋಷಿಗಳು ಒಂದು ಕೋಟಿ
ಶಿವನಿಪ್ಪ ನೆಲೆಯನಾರೂ ಅರಿಯರಯ್ಯ.
ಖಟ್ವಾಂಗದೊಳಗಿಪ್ಪ ಮನುಮುನಿಗಳು ಒಂದು ಕೋಟಿ
ಶಿವನಿಪ್ಪ ನೆಲೆಯನಾರೂ ಅರಿಯರಯ್ಯ.
ಗಂಗೆ ಗೌರಿ ಭೃಂಗಿ ಮೊದಲಾಗಿ ಶಿವನಿಪ್ಪ ನೆಲೆಯನರಿಯರು,
ಗುಹೇಶ್ವರ ನಿಮ್ಮ ಶರಣ ಸಂಗನಬಸವಣ್ಣ ಬಲ
ವಚನ 0164
ಅಯ್ಯ ತತ್ತ್ವ ವಿತತ್ತ್ವಗಳಿಲ್ಲದಂದು, ಪ್ರಕೃತಿ ಪುರುಷರಿಲ್ಲದಂದು,
ಜೀವ-ಪರಮರೆಂಬ ಭಾವ ತಲೆದೋರದಂದು, ಏನೂ ಏನೂ ಇಲ್ಲದಂದು
ಬಯಲು ಬಲಿದು ಒಂದು ಬಿಂದುವಾಯಿತ್ತು ನೋಡಾ.
ಆ ಬಿಂದು ಅಕ್ಷರತ್ರಯದ ಗದ್ದುಗೆಯಲ್ಲಿ ಕುಳ್ಳಿರಲು
ಓಂಕಾರ ಉತ್ಪತ್ತಿಯಾಯಿತ್ತು.
ಆ [ಓಂಕಾರದ] ನಾದದಲ್ಲಿ ಮೂರ್ತಿಗೊಂಡನೊಬ್ಬ ಶರಣ.
ಆ ಶರಣನಿಂದಾಯಿತ್ತು ಪ್ರಕೃತಿ, ಆ ಪ್ರಕೃತಿಯಿಂದಾಯಿತ್ತು ಲೋಕ.
ಈ ಲೋಕ ಲೌಕಿಕವನತಿಗಳೆದು ನಿಜದಲ್ಲಿ ನಿವಾಸಿಯಾಗಿಪ್ಪ,
ಗುಹೇಶ್ವರನ ಶರಣ ಚೆನ್ನಬಸವಣ್ಣನ ಘನವನು
ಬಸವಣ್ಣನ ಕೃಪೆಯಿಂದಲರಿದು ನಮೋ ನಮೋ ಎನುತಿರ್ದೆನು.
ವಚನ 0165
ಅಯ್ಯ ತನುತ್ರಯಂಗಳು, ಜೀವತ್ರಯಂಗಳು,
ಆತ್ಮತ್ರಯಂಗಳು, ಅವಸ್ಥಾತ್ರಯಂಗಳು, ಗುಣತ್ರಯಂಗಳು,
ಮನತ್ರಯಂಗಳು, ತಾಪತ್ರಯಂಗಳು, ಕಾಲತ್ರಯಂಗಳು,
ಕರ್ಮತ್ರಯಂಗಳು, ಭಾವತ್ರಯಂಗಳು, ಮಲತ್ರಯಂಗಳು,
ಕರಣತ್ರಯಂಗಳು ಮೊದಲಾದ ಪ್ರವೃತ್ತಿಮಾರ್ಗವನುಳಿದು,
ಹಿಂದೆ ಹೇಳಿದ ಸದ್ಭಕ್ತ-ಮಹೇಶ್ವರಸ್ಥಲದಲ್ಲಿ ನಿಂದು-
ಅಷ್ಟಾವಧಾನ ಅವಿರಳಾನಂದಮೂರ್ತಿಯಾಗಿ ಪ್ರಕಾಶಿಸುವ
ನಿಜಪ್ರಸಾದಿಯಂತರಂಗದಲ್ಲಿ ಚಿತ್ಘನ ಸ್ವರೂಪವಲೀಲೆಯಿಂ
ಅಂತರಂಗದಲ್ಲಿ ಅಂಗತತ್ತ್ವ, ಲಿಂಗತತ್ತ್ವ, ಶಿವತತ್ತ್ವ, ಪರತತ್ತ್ವ ಮೊದಲಾದ
ಸಮಸ್ತ ತತ್ತ್ವಂಗಳನೊಳಕೊಂಡು,
ಹದಿನಾರು ಸ್ಥಲಂಗಳ ಗರ್ಬಿಕರಿಸಿಕೊಂಡು,
ನಾಲ್ಕು ಸಾವಿರದ ಮುನ್ನೂರಿಪ್ಪತ್ತು ಮಂತ್ರಮಾಲಿಕೆಗಳ ಪಿಡಿದುಕೊಂಡು
ಇಪ್ಪತ್ತುನಾಲ್ಕು ಸಕೀಲಗರ್ಭದಿಂ ಪಾದೋದಕ ಪ್ರಸಾದವ ಕೊಂಡ
ಅಂಗ-ಮನ-ಪ್ರಾಣ-ಭಾವ-ಇಂದ್ರಿಯಂಗಳೆಲ್ಲ
ಪಾದೋದಕ ಪ್ರಸಾದಮಯವೆಂಬ ಹರಗುರುವಾಕ್ಯದಿಂ
ಚಿನ್ನಬಣ್ಣ ಪ್ರಕಾಶದ ಹಾಂಗೆ ಬಿನ್ನ ಭಾವವಿಲ್ಲದೆ ಏಕರೂಪಿನಿಂದ
ನಿರೀಕ್ಷಣಾಮೂರ್ತಿ ಶಿವಲಿಂಗವಾಗಿ ನೆಲಸಿರ್ಪುದು ನೋಡ !
ನಿರವಯಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು
ಚೆನ್ನಬಸವಣ್ಣ.
ವಚನ 0166
ಅಯ್ಯ ಲಿಂಗಾಂಗ ಸಮರಸ ಹೇಗುಂಟೆಂದರೆ:
ಸುಚಿತ್ತಕಮಲ ಮೊದಲಾಗಿ ಆಯಾಯ ಕರಸ್ಥಲದಲ್ಲಿ ಮೂರ್ತಗೊಂಡಿರುವ
ಸುಜ್ಞಾನಜಂಗಮ ಸ್ವರೂಪನಾದ ಇಷ್ಟ ಮಹಾಲಿಂಗದ ಗರ್ಭದಲ್ಲಿ
ತನ್ನಂಗವ ಬಿಟ್ಟು; ಎರಡು ನೇತ್ರ ಒಂದಾದ ಲಲಾಟನೇತ್ರದಲ್ಲಿ
ಇಷ್ಟಲಿಂಗವನು ಮುಳುಗಿಸುವುದೀಗ ಲಿಂಗಾಂಗಸಂಗಸಮರಸವು ನೋಡಾ.
ಆ ಇಷ್ಟ ಮಹಾಲಿಂಗ ನೇತ್ರದರ್ಪಣದಲ್ಲಿ ಪ್ರತಿಬಿಂಬವಾಗಿ
ಮನೋನೇತ್ರಕ್ಕೆ ಒಂದೆರಡಾಗಿ ಕಾಣಲ್ಪಡುವುದೀಗ ಪ್ರಾಣಲಿಂಗವು.
ಆ ಪ್ರಾಣಲಿಂಗಹಸ್ತಂಗಳೆಂಬ ಎರಡರಲ್ಲಿ
ನೇತ್ರದ್ವಯವೆಂಬ ಕುಚಂಗಳೆರಡ ಹಿಡಿವುದೀಗ ಲಿಂಗಾಂಗಸಂಗಸಮರಸವು [ನೋಡಾ]
ರೂಪು ರೇಖೆವಿಭ್ರಮ ವಿಲಾಸಕಳಾಲಾವಣ್ಯಸ್ವರೂಪವಾದ ಹರಶಿವ
ಬ್ರಹ್ಮಮೂರ್ತಿಯ
ಮುದ್ದು ಮುಖದ ಆಧಾರದಲ್ಲಿ ಓಂಕಾರನಾದಾಮೃತವ ತಾ ಚುಂಬನ ಮಾಡಲ್ಕೆ
ಚಿತ್ಶಕ್ತಿಸ್ವರೂಪಮಪ್ಪ ತನ್ನ ಮುದ್ದುಮುಖದ ಆಧಾರದಲ್ಲಿ ಹುಟ್ಟಿದ
ನಕಾರಾದಿ ಪಂಚಪ್ರಣಮಂಗಳು ಆ ಪಂಚಬ್ರಹ್ಮ ಚುಂಬನವ ಮಾಡಲ್ಕೆ
ಇದು ಲಿಂಗಾಂಗ ಸಮರಸವು. ಇದು ಶರಣಸತಿ ಲಿಂಗಪತಿ ನ್ಯಾಯವು.
ಇದು ಶ್ರೀ (ತ್ರಿ?)ತನುವ ಲಿಂಗಕ್ಕರ್ಪಿಸುವ ಕ್ರಮವು.
ತನ್ನಲ್ಲಿ ತನ್ನ ತೋರಿ ನನ್ನಲ್ಲಿ ನನ್ನ ತೋರಿದನಾಗಿ
ನಾನು ನೀನೆಂಬುದಿಲ್ಲ ನೀನು ನಾನೆಂಬುದಿಲ್ಲ, ತಾನೆ ತಾನಾದುದು.
ಬಯಲು ಬಯಲು ಕೂಡಿದ ಹಾಗೆ, ಮಾತು ಮಾತ ಕಲಿವ ಹಾಗೆ
ಪರಶಿವಲಿಂಗದಲ್ಲಿ ನಿಜದೃಷ್ಟಿ ಕರಿಗೊಂಡ ಮೇಲೆ
ಗುಹ್ಯಕ್ಕೆ ಗುಹ್ಯ ಗೋಪ್ಯಕ್ಕೆ ಗೋಪ್ಯ ರಹಸ್ಯಕ್ಕೆ ರಹಸ್ಯ.
ಇದ ಗುಹೇಶ್ವರನೆ ಬಲ್ಲನಲ್ಲದೆ, ಕಣ್ಣುಗೆಟ್ಟಣ್ಣಗಳೆತ್ತ ಬಲ್ಲರು ನೋಡಾ ?
ವಚನ 0167
ಅಯ್ಯ ವಿಶ್ವತೋಚಕ್ಷುರುತ’ ಎಂದುದಾಗಿ,
ಜಗವೆಲ್ಲ ನೇತ್ರಂಗಳಾಗಿರ್ಪನು ಶಿವನು.
ಜಗವೆಲ್ಲ ನೇತ್ರವಾಗಿದ್ದರೆ, ನೇತ್ರದೊಳಗುತ್ತಮ ಮಧ್ಯಮ ಕನಿಷ್ಠಂಗಳು
ಏಕಾದವು ? ಎಂದಡೆ ಹೇಳಿಹೆವು ಕೇಳಿರಯ್ಯ:
ನೇತ್ರಕ್ಕೆ ನೇತ್ರವಾದ ಜಗನೇತ್ರಕ್ಕೆ ಪ್ರಕಾಶನಾಗಿ ತನ್ನ ತೋರದೆ ಇದ್ದಂಥಾ,
ಶ್ರೀಗುರು ಕರುಣಾಕಟಾಕ್ಷೆಯಿಂದ ಉದಯವಾದ
ಇಷ್ಟಮಹಾಜ್ಯೋತಿರ್ಲಿಂಗವನು ನೋಡಿದ ನೇತ್ರವೆ ಲಿಂಗನೇತ್ರವು.
ಅದೇ ಸದ್ಧರ್ಮಸ್ವರೂಪವಾದ ಉತ್ತಮವೆನಿಸುವುದು.
ಅಯ್ಯಾ ಖಗಮೃಗ ಫಣಿಕೀಟಕಾದಿಗಳ ನೇತ್ರಂಗಳು ಉಭಯಕರ್ಮಕ್ಕೆ ಒಳಗಿಲ್ಲಾಗಿ
ದೃಷ್ಟಿದೋಷವಿಲ್ಲಾಗಿ ಅದು ಮಧ್ಯಮವೆನಿಸುವುದು
ಅಯ್ಯಾ ಇಷ್ಟಮಹಾಜ್ಯೋತಿರ್ಲಿಂಗಬಾಹ್ಯವಾಗಿ
ಪಂಚಮಹಾಪಾತಕ ಸೂತಕಂಗಳಲ್ಲಿ ವರ್ತಿಸುವ
ಅಪಾತ್ರಜೀವಿಗಳಾದ ಭವಿಗಳ ನೇತ್ರಂಗಳು ಉಭಯಕ್ಕೆ ಅನುಕೂಲವಾದ ಕಾರಣ
ಚರ್ಮಚಕ್ಷುವೆಂದು, ತನ್ನತಾನರಿಯದ ಗಾಡಾಂಧಕಾರವೆಂದು
ಮೀನುಗಳೆಂದು ವಿಷನೇತ್ರವೆಂದು
ಮನ್ಮಥನ ಕೈಗೆ ಸಿಲುಕಿದ ನೀಲೋತ್ಪಲ ಬಾಣವೆಂದು, ತಾಮಸಾಗ್ನಿಯೆಂದು
ಕುರೂಪದ ನೇತ್ರೇಂದ್ರಿಯವೆಂದು, ಶಿವಾಚಾರ ಸದ್ಧರ್ಮಿಗಳ ನಿಂದಿಸುವ
ಮಹಾಪಾತಕ ದೃಷ್ಟಿಯೆಂದು ಹೇಳಲ್ಪಟ್ಟಿತ್ತು.
ಇಷ್ಟಲಿಂಗವಿಲ್ಲಾದ ಕಾರಣ ಕನಿಷ್ಠಚಕ್ಷುವೆಂದುದು ನೋಡಾ ಅಯ್ಯ.
ಅದರಿಂದ ಸದ್ಭಕ್ತ ಶರಣಗಣಂಗಳು ಅರ್ಚನೆ ಅರ್ಪಿತದ್ರವ್ಯವ ಕೊಡದೆ,
ಅವರೊಡನೆ ಸಂಭಾಷಣೆ ದರ್ಶನ ಸ್ಪರ್ಶನವ ಮಾಡಲಿಲ್ಲ ನೋಡಾ
ಗುಹೇಶ್ವರಲಿಂಗದಲ್ಲಿ ಸಿದ್ಧರಾಮಯ್ಯ.
ವಚನ 0168
ಅಯ್ಯ ಸತ್ಕ್ರಿಯಾಸಮ್ಯಜ್ಞಾನವುಂಟಾದಡೆ ಸದಾಚಾರಸದ್ಭಕ್ತಿ ಉಂಟೆಂಬೆ.
ಸದಾಚಾರ ಸದ್ಭಕ್ತಿ ಸತ್ಕ್ರಿಯಾ ಸಮ್ಯಜ್ಞಾನ [ಸತ್ಯ]
ನಡೆನುಡಿ ಒಂದಾದಡೆ
ಆದಿ-ಅನಾದಿಯಿಂದತ್ತತ್ತ ಮೀರಿ ತೋರುವ,
ಪರಿಪೂರ್ಣ ಪರಮಾನಂದ ಪರಬ್ರಹ್ಮ ಗುರುಲಿಂಗಜಂಗಮವೆಂಬೆ ನೋಡಾ.
ಇಂತು-ಸದಾಚಾರ, ಸದ್ಭಕ್ತಿ, ಸತ್ಕ್ರಿಯಾ, ಸಮ್ಯಜ್ಞಾನ,
ಸತ್ಯನಡೆ ನುಡಿಯಿಲ್ಲವಾದಡೆ
ಗುಹೇಶ್ವರಲಿಂಗಕ್ಕೆ ದೂರ ಕಾಣಾ ಚೆನ್ನಬಸವಣ್ಣ.
ವಚನ 0169
ಅಯ್ಯ ಸದಾಚಾರ ಸದ್ಭಕ್ತಿವಿಡಿದಾಚರಿಸಿದ ಗುರುವೆ ಪರಾತ್ಪರಬ್ರಹ್ಮನೋಡಾ.
ಆ ಗುರುವಿನಿಂದ ತ್ರಿವಿಧದೀಕ್ಷೆಯ ಪಡೆದ ಶಿಷ್ಯೋತ್ತಮನೆ ಮೋಕ್ಷಮಂದಿರನೋಡಾ.
ಆ ಶಿಷ್ಯೋತ್ತಮನ ಕರ-ಮನ-ಭಾವದಲ್ಲಿ ಪೂಜೆಗೊಂಬ
ಲಿಂಗ-ಜಂಗಮವೆ ನಿಷ್ಕಲ ಪರಶಿವತತ್ವನೋಡಾ.
ಆ ಗುರು-ಶಿಷ್ಯ-ಲಿಂಗ-ಜಂಗಮದಡಿದಾವರೆಯೆ ಗುಹೇಶ್ವರಲಿಂಗ ಸಾಕ್ಷಿಯಾಗಿ
ಎನಗೂ ನಿನಗೂ ಅವಿಮುಕ್ತ ಕ್ಷೇತ್ರ ನೋಡಾ ಚೆನ್ನಬಸವಣ್ಣ.
ವಚನ 0170
ಅಯ್ಯ ಸದಾಚಾರಸದ್ಭಕ್ತಿಯಿಲ್ಲದ ಗುರುವು ನರಜೀವಿ.
ಆತನಿಂದ ಹುಟ್ಟಿದ ಲಿಂಗಾಂಗವೆರಡು ಜಡಜೀವಿ.
ಅವರಿಬ್ಬರಲ್ಲಿ ಹೊಕ್ಕು ಕೊಟ್ಟು ಕೊಂಬುವ ಜಂಗಮ ಭೂತಪ್ರಾಣಿ.
ಈ ನರಜೀವಿ, ಜಡಜೀವಿ, ಭೂತಪ್ರಾಣಿಗಳಿಗೆ ಕೊಟ್ಟುಕೊಂಬ ಭಕ್ತಂಗೆ
ಏಳನೆಯ ಪಾತಕ ಬಿಡದು ಕಾಣಾ.
ಗುಹೇಶ್ವರಲಿಂಗದ ಸದಾಚಾರಸದ್ಭಕ್ತಿಯಿಂದಲ್ಲದೆ ಮುಕ್ತಿಯಿಲ್ಲ ನೋಡಾ
ಚೆನ್ನಬಸವಣ್ಣ.
ವಚನ 0171
ಅಯ್ಯ, ಅನುಭಾವವಿಲ್ಲದ ವಿರಕ್ತಿ ಆಯುಧವಿಲ್ಲದ ವೀರನಂತೆ.
ಅನುಭಾವವಿಲ್ಲದ ಷಟ್ಸ್ಥಲವು ಕಣ್ಣಿಲ್ಲದ ಕುರುಡನಂತೆ.
ಅನುಭಾವವಿಲ್ಲದ ಜಂಗಮವು ಕಾಲಿಲ್ಲದ ಹೆಳವನಂತೆ.
ಅನುಭಾವವಿಲ್ಲದ ಶಿವಪೂಜೆಯ ಎಷ್ಟು ಮಾಡಿದಡೆಯು ಪ್ರಯೋಜನಕ್ಕೆಬಾರದು.
ಅನುಭಾವವಿಲ್ಲದವನ ಲಿಂಗಪೂಜೆ ಬರಿಕೈಯಲ್ಲಿ ಹುಡಿಮಣ್ಣ ಹೊಯ್ದುಕೊಂಡಂತೆ.
ಇದು ಕಾರಣ:
ಭಕ್ತಿಗೆ ವಿರಕ್ತಿಗೆ ಮುಕ್ತಿಗೆ ವೀರಶೈವಕ್ಕೆ ಜಂಗಮಕ್ಕೆ ಅನುಭಾವವಿರಬೇಕು.
ಅನುಭಾವವಿಲ್ಲದ ವಿರಕ್ತನಲ್ಲಿ ಪಾದೋದಕ-ಪ್ರಸಾದವ ಕೊಳಲಾಗದು.
ಅನುಭಾವವುಳ್ಳ ಆಚಾರಸಂಪನ್ನನಾದ ಸದ್ಭಕ್ತನಲ್ಲಿ
ಅನಾದಿ ಪಾದೋದಕ-ಪ್ರಸಾದವ ಕೊಂಡವರು ಪರಮಮುಕ್ತರಾದರಯ್ಯಾ
ನಿಜಗುರು ಗುಹೇಶ್ವರಲಿಂಗದಲ್ಲಿ ಚೆನ್ನಬಸವಣ್ಣಾ.
ವಚನ 0172
ಅಯ್ಯ, ಆಚಾರವಿಲ್ಲದ ಜಂಗಮದಲ್ಲಿ ಪಾದೋದಕಪ್ರಸಾದವ ಕೊಳಲಾಗದು.
ಆಚಾರವಿಲ್ಲದ ಜಂಗಮ[ವ] ದೇವರೆಂದು ಭಾವಿಸಲಾಗದು.
`ಆಚಾರಶೂನ್ಯಂ ಚ ಭೂತಪ್ರಾಣೀ’ ಎಂದುದಾಗಿ
ಆಚಾರವಿಲ್ಲದ ಅನಾಮಿಕರ ಕೈಯಲ್ಲಿ
ಪಾದೋದಕ ಪ್ರಸಾದ ಉಪದೇಶವ ಕೊಂಡವಂಗೆ
ಅಘನಾಸ್ತಿಯಾಗದು, ಮುಂದೆ ಅಘೋರನರಕ ತಪ್ಪದು
ಕಾಣಾ ಗುಹೇಶ್ವರಾ.
ವಚನ 0173
ಅಯ್ಯ, ಒಂದು ಕೋಟಿ ವರುಷ ತಲೆ ಕೆಳಗಾಗಿ ತಪವ ಮಾಡಿದಕಿಂದಲು
ಒಂದು ದಿನ ಶಿವಭಕ್ತರಲ್ಲಿ ನಿರಹಂಕಾರವಾಗಿರ್ದಡೆ ಸಾಕು ನೋಡಾ.
ಒಂದು ಕೋಟಿ ವರುಷ ಊಧ್ರ್ವಮುಖವಾಗಿ ಸೂರ್ಯನ ನೋಡಿದ ಫಲವು
ಒಂದು ದಿನ ಸದಾಚಾರ ಸದ್ಧರ್ಮರಪ್ಪ ಶಿವಭಕ್ತರ ನೋಡಿದುದಕ್ಕೆ
ಸರಿಯಲ್ಲ ನೋಡಾ.
ಒಂದು ಕೋಟಿ ವರುಷ ಅಖಿಳ ದೇವತೆಗಳ ಸ್ತೋತ್ರವ ಮಾಡಿದ ಫಲವು
ಒಂದು ದಿನ ಶರಣರಿಗೆ ಶರಣು ಮಾಡಿದುದಕ್ಕೆ ಸರಿಯಲ್ಲ ನೋಡಾ.
ಒಂದು ಕೋಟಿ ವರುಷ ಅರವತ್ತಾರು ಕೋಟಿ ನದಿಗಳ ಮಿಂದು
ಮುಡಿಯಿಟ್ಟ ಫಲವು,
ಒಂದು ದಿನ ಸದ್ಭಕ್ತ-ಜಂಗಮ-ಶರಣಗಣ ತೀರ್ಥಕ್ಕೆ ಸರಿಯಲ್ಲ ನೋಡಾ.
ಒಂದು ಕೋಟಿ ವರುಷ ಚಾಂದ್ರಾಯಣವ್ರತ ಮೊದಲಾದ
ಸರ್ವವ್ರತಂಗಳ ನಡಸಿದ ಫಲವು
ಒಂದು ದಿನ ಗುರು-ಲಿಂಗ-ಜಂಗಮ-ಪ್ರಸಾದಕ್ಕೆ ಸರಿಯಲ್ಲ ನೋಡಾ.
ಒಂದು ಕೋಟಿ ವರುಷ ವೇದಾಗಮ ಪುರಾಣಶಾಸ್ತ್ರ ಮಂತ್ರಂಗಳ ಓದಿದ ಫಲವು
ಒಂದು ದಿನ ಶಿವಭಕ್ತಶರಣರ ಸಂಭಾಷಣಕ್ಕೆ ಸರಿಯಲ್ಲ ನೋಡಾ.
ಒಂದು ಕೋಟಿ ವರುಷ ಮಹಾಯೋಗವ ಮಾಡಿದ ಫಲವು
ಒಂದು ದಿನ ಶ್ರೀಗುರು-ಲಿಂಗ-ಜಂಗಮ ಧ್ಯಾನಕ್ಕೆ ಸರಿಯಲ್ಲ ನೋಡಾ.
ಒಂದು ಕೋಟಿ ವರುಷ ಷೋಡಶ ಮಹಾದಾನಂಗಳ ಮಾಡಿದ ಫಲವು
ಒಂದು ದಿನ ಸದ್ಧರ್ಮಿ ಶಿವಯೋಗಿಗೆ ನೀಡಿದ ತೃಪ್ತಿಯ ಮಾಡಿದುದಕ್ಕೆ
ಸರಿಯಲ್ಲ ನೋಡಾ.
ಅಖಿಳ ಕ್ರಿಯೆಗಳು ಲಿಂಗಜಂಗಮಾರ್ಚನೆ ಕ್ರಿಯೆಗಳೆಗೆ ಸರಿಯಲ್ಲ ನೋಡಾ.
ಯೋಗದ ಬಲದಿಂದ ಸಮಸ್ತ ಭೋಗವ ಪಡೆದ ಫಲವು
ಒಂದು ವೇಳೆ ಗುರು-ಲಿಂಗ-ಜಂಗಮಕ್ಕೆ ದೀರ್ಘದಂಡ ನಮಸ್ಕಾರವ ಮಾಡಿ
ಸನ್ನಿದಿಯಲ್ಲಿ ಭೃತ್ಯನಾಗಿರ್ದುದಕ್ಕೆ ಸರಿಯಲ್ಲ ನೋಡಾ.
ಪ್ರಾಣನ ಬ್ರಹ್ಮರಂಧ್ರದಲ್ಲಿ ಬಿಡುವ ಯೋಗವು
ಪ್ರಾಣಲಿಂಗ ಸಂಬಂಧಕ್ಕೆ ಸರಿಯಲ್ಲ ನೋಡಾ [ಗುಹೇಶ್ವರ]
ವಚನ 0174
ಅಯ್ಯ, ಕ್ರಿಯಾಚಾರದಲ್ಲಿ ಮೋಹವುಳ್ಳಾತನ ಸದ್ಗುರುವೆಂಬೆ ನೋಡ.
ಜ್ಞಾನಾಚಾರದಲ್ಲಿ ನೈಷ್ಠೆಯುಳ್ಳಾತನ ಸಚ್ಚಿದಾನಂದಲಿಂಗವೆಂಬೆ ನೋಡ.
ಭಾವಾಚಾರದಲ್ಲಿ ಪ್ರೇಮವುಳ್ಳಾತನ ಪರಾತ್ಪರಜಂಗಮವೆಂಬೆ ನೋಡ.
ಈ ತ್ರಿವಿಧಾಚಾರದಲ್ಲಿ ಕಾಂಕ್ಷೆಯುಳ್ಳಾತನ ನಿಜಶರಣನೆಂಬೆ ನೋಡ.
ಇಂತು ಆಚಾರಸನ್ಮಾರ್ಗ ಗುರುಲಿಂಗಜಂಗಮಶರಣರೆ
ಗುಹೇಶ್ವರಲಿಂಗಕ್ಕೆ ಮೋಕ್ಷಮಂದಿರವೆಂಬೆ ನೋಡಾ, ಚೆನ್ನಬಸವಣ್ಣಾ.
ವಚನ 0175
ಅಯ್ಯ, ತನುವಿನಾಸೆಯನಳಿದಾತನ ಸತ್ತುಚಿತ್ತಾನಂದನ ಗುರುವೆಂಬೆ.
ಮನದ ಕಾಂಕ್ಷೆಯನಳಿದಾತನ ಸರ್ವಾಚಾರನ ಲಿಂಗವೆಂಬೆ ನೋಡಾ.
ಭಾವದ ಭ್ರಮೆಯ ನಳಿದಾತನ ಷಟ್ಸ್ಥಲಜಂಗಮವೆಂಬೆ ನೋಡಾ.
ಪ್ರಾಣನ ಪ್ರಪಂಚನಳಿದಾತನ
ನಿರಾತಂಕನಿರಾಲಂಬ ನಿಷ್ಕಳಂಕನಿಜಶರಣನೆಂಬೆ ನೋಡಾ.
ಈ ಚತುರ್ವಿಧ ಪಾಶವ ಗೆದ್ದಾತನ ಗುಹೇಶ್ವರಲಿಂಗವೆಂಬೆ ನೋಡಾ
ಚೆನ್ನಬಸವಣ್ಣಾ.
ವಚನ 0176
ಅಯ್ಯ, ಮಣ್ಣಿಂಗೆ ಹೊಡೆದಾಡುವಾತನ ಗುರುವೆಂಬೆನೆ? ಆತ ಗುರುವಲ್ಲ.
ಹೆಣ್ಣಿಂಗೆ ಹೊಡೆದಾಡುವಂತಾ [ಗೆ?] ಲಿಂಗವೆಂಬೆನೆ ? ಅದು ಲಿಂಗವಲ್ಲ.
ಹೊನ್ನಿಂಗೆ ಹೊಡೆದಾಡುವಾತನ ಜಂಗಮವೆಂಬೆನೆ ? ಆತ ಜಂಗಮವಲ್ಲ.
ಈ ತ್ರಿವಿಧಮಲಕ್ಕೆ ಹೊಡೆದಾಡುವಾತನ ಶರಣನೆಂಬೆನೆ ? ಆತ ಶರಣನಲ್ಲ ನೋಡಾ.
ಈ ವಿಚಾರವನರಿದು, ಮಲತ್ರಯಂಗಳ ಸರ್ವಾವಸ್ಥೆಯಲ್ಲಿ ಹೊದ್ದಲೀಯದೆ
ಗೌರವ ಬುದ್ಧಿ ಲಿಂಗಲೀಯ ಜಂಗಮಾನುಭಾವ ಸರ್ವಾಚಾರಸಂಪತ್ತಿನಾಚರಣೆಯ
ಶ್ರುತಿ-ಗುರು-ಸ್ವಾನುಭಾವದಿಂದರಿದು ಆಚರಿಸಿದಡೆ,
ಗುಹೇಶ್ವರಲಿಂಗದಲ್ಲಿ ಪರಾತ್ಪರಗುರುಲಿಂಗಜಂಗಮಶರಣನೆಂಬೆ ನೋಡ
ಜೆನ್ನಬಸವಣ್ಣ.
ವಚನ 0177
ಅಯ್ಯ, ಸತ್ಯವ ನುಡಿಯದ, ಸದಾಚಾರದಲ್ಲಿ ನಡೆಯದ
ಸದ್ಭಕ್ತಿಯ ಹಿಡಿಯದ, ನಿಜಮುಕ್ತಿಯ ಪಡೆಯದ
ಸತ್ಕ್ರಿಯವ ಸಾರದ ಸಮ್ಯಜ್ಞಾನವ ಮುಟ್ಟದ;
ಸುಡು ಸುಡು-ಈ ವೇಷದ ಭಾಷೆಯ ನೋಡಿ
ಗುಹೇಶ್ವರಲಿಂಗವು ನಗುತ್ತೈದಾನೆ ಕಾಣಾ ಚೆನ್ನಬಸವಣ್ಣಾ.
ವಚನ 0178
ಅಯ್ಯ, ಸದಾಚಾರಸದ್ಭಕ್ತಿಯಿಲ್ಲದ ಗುರುತ್ವ ಉಂಟೇನೊ ಮರುಳೆ ?
ಸದಾಚಾರಸದ್ಭಕ್ತಿಯಿಲ್ಲದ ನಿಜಲಿಂಗ ಉಂಟೇನೊ ಮರುಳೆ ?
ಸದಾಚಾರಸದ್ಭಕ್ತಿಯಿಲ್ಲದ ನಿಜಜಂಗಮತ್ವ ಉಂಟೇನೊ ಮರುಳೆ ?
ಸದಾಚಾರಸದ್ಭಕ್ತಿಯಿಲ್ಲದ ಶರಣತ್ವ ಉಂಟೇನೊ ಮರುಳೆ?
ಗುಹೇಶ್ವರ ಲಿಂಗ[ದಲ್ಲಿ] ಸದಾಚಾರಸದ್ಭಕ್ತಿಯಿಂದಲ್ಲದೆ ನಿಜಮೋಕ್ಷವುಂಟೆ
ಚೆನ್ನಬಸವಣ್ಣಾ ?
ವಚನ 0179
ಅಯ್ಯ, ಸಾತ್ವಿಕ ಶರಣರ ನುಡಿ ಹುಸಿಯೆ ?
ಅದು ದಿಟ ಅದು ಆಟ.
ಒಳಗೆಂಬುದೆ ದೇವಲೋಕ, ಹೊರಗೆಂಬುದೆ ಮರ್ತ್ಯಲೋಕ.
ಈ ಎರಡು ಲೋಕಕ್ಕೆ ಹೊರಗಾಗಿ ನಾವಿರಲು
ಈ ಎರಡು ಲೋಕದೊಳಗೆಯೂ ತಾವೆ ಇರಲಿ ಗುಹೇಶ್ವರಾ.
ವಚನ 0180
ಅಯ್ಯ, ಸ್ಥೂಲದೇಹದ ಸುಖದಲ್ಲಿ ಹೊದ್ದಿದವರು ಸೂಕರನ ಹಾಂಗೆ.
ಸೂಕ್ಷ್ಮದೇಹದ [ಸುಖ]ದಲ್ಲಿ ಹೊದ್ದಿದವರು ಮದಗಜದಂತೆ.
ಕಾರಣ ದೇಹದ ಸುಖದಲ್ಲಿ ಹೊದ್ದಿದವರು ರಾಜಹಂಸನ ಹಾಂಗೆ.
ಅದೆಂತೆಂದಡೆ:
ಸ್ಥೂಲದೇಹವೆಂದಡೆ ಸಪ್ತಧಾತುಯುಕ್ತವಾದ ಪಂಚವಿಂಶತಿತತ್ತ್ವ ಸ್ವರೂಪು,
ಆ ದೇಹಕ್ಕೆ ಬಿಂದು ಮಾತ್ರ ಸುಖ ಪರ್ವತದಷ್ಟು ದುಃಖ ನೋಡಾ.
ಸೂಕ್ಷ್ಮದೇಹವೆಂದಡೆ:ಪಂಚರಸಾಮೃತಸ್ವರೂಪವಾದ ಕರಣಂಗಳು.
ಆ ದೇಹಕ್ಕೆ ಬಿಂದು ಮಾತ್ರ ದುಃಖವು, ಪರ್ವತದಷ್ಟು ಸುಖ ನೋಡಾ.
ದಶವಿಧತತ್ತ್ವಸ್ವರೂಪವಾದ ಕಾರಣದೇಹವೆಂದಡೆ:
ಅನಂತನಾದಸ್ವರೂಪವಾದ ಏಕತತ್ತ್ವವನ್ನುಳ್ಳ ಆತ್ಮನೆ ಕಾರಣದೇಹ,
[ಅದು] ದಿವ್ಯ ಸುಧಾರಸಾಮೃತಸ್ವರೂಪವಾದ ಮಹಾಸದ್ಗಂಧದ
ಪರಿಮಳದಂತಿಪ್ಪುದು ನೋಡಾ.
ಆ ದೇಹಕ್ಕೆ ಅಣುಮಾತ್ರ ದುಃಖವಿಲ್ಲದ ಸುಖವುಂಟು ನೋಡಾ,
ಲಿಂಗಸಂಗಿಯಾದ ಕಾರಣ.
ಇಂತಪ್ಪ ಲಿಂಗಸಂಗದಿಂದ ಅಖಂಡಸುಖಿ ತಾನಾಗಬೇಕಾದಡೆ
ಪಿಂಡಾದಿ ಜ್ಞಾನಶೂನ್ಯಾಂತಮಾದ ನೂರೊಂದು ಸ್ಥಳ-ಕುಳವ
ಕರತಳಾಮಳಕವಾಗಿ ತಿಳಿದು,
ಮೇಲಾದ ಜ್ಞಾನಶೂನ್ಯಸ್ಥಲದಲ್ಲಿ ನಿಂದು,
ಪಿಂಡಾದಿ ಜ್ಞಾನ ಗುರುಕರುಣ ಸ್ಥಲಂಗಳೆಂಬ ಮಾರ್ಗವು ತಪ್ಪದೆ
ನಡೆ-ನುಡಿ ಸಂಪನ್ನರಾಗಿ ನಿಜಾಚರಣೆಯಲ್ಲಿ ನಿಂದು
ಅರು ವೈರಿ ಅಷ್ಟಮದ [ಸಪ್ತ]ವ್ಯಸನವೆಂಬ ಮಾಯಾಪಾಶಪರ್ವತಕ್ಕೆ
ವಜ್ರಾಯುಧವಾಗಿ ನಿಂದರು ನೋಡಾ ನಮ್ಮ ಶರಣಗಣಂಗಳು.
ಇಂತು-ಕಾರಣಸ್ವರೂಪವಾದ
ಚಿದ್ಘನಲಿಂಗ ನಡೆ-ನುಡಿ-ಸ್ಥಳ-ಕುಳದನುಭಾವ ಸುಖವ ಪಡೆಯದ
ಶೈವ ಜಡಕರ್ಮಿಗಳೆಲ್ಲ,
ಅರುವೈರಿ ಅಷ್ಟಮದ ಸಪ್ತವ್ಯಸನವೆಂಬ
ಮಾಯಾಪಾಶ ಕಾಲ ಕಾಮರ ಬಾಧೆಗೊಳಗಾಗಿ
ಗುಹೇಶ್ವರಲಿಂಗದ ಶರಣರ ಮಾರ್ಗವನರಿಯದೆ [ಕೆಟ್ಟರು].
ಕೆಟ್ಟಿತೀ ಲೋಕ ನೋಡಾ ಸಿದ್ಧರಾಮಯ್ಯಾ.
ವಚನ 0181
ಅಯ್ಯಾ ಜಲ, ಕೂರ್ಮ, ಗಜ, ಫಣಿಯ ಮೇಲೆ
ಧರೆ ವಿಸ್ತರಿಸಿ ನಿಲ್ಲದಂದು, ಗಗನವಿಲ್ಲದಂದು,
ಪವನನ ಸುಳುಹಿಲ್ಲದಂದು, ಅಗ್ನಿಗೆ ಕಳೆದೋರದಂದು,
ತರು ಗಿರಿ ತೃಣ ಕಾಷ್ಠಾದಿಗಳಿಲ್ಲದಂದು,
ಯುಗ ಜುಗ, ಮಿಗಿಲೆನಿಸಿದ ಹದಿನಾಲ್ಕು ಭುವನ ನೆಲೆಗೊಳ್ಳದಂದು,
ನಿಜವನರಿದೆನೆಂಬ ತ್ರಿಜಗಾದಿಪತಿಗಳಿಲ್ಲದಂದು
ತೋರುವ ಬೀರುವ ಭಾವದ ಪರಿ,
ಭಾವದಲ್ಲಿ ಭರಿತ, ಆಗಮ್ಯ ಗುಹೇಶ್ವರ ನಿರಾಳವು !
ವಚನ 0182
ಅಯ್ಯಾ ನೀನು ನಿರಾಳ ನಿರ್ಮಾಯನಾಗಿಪ್ಪೆಯಾಗಿ-
ಆಕಾಶ ಪ್ರಕಾಶವಿಲ್ಲದಂದು, ಸಾಕ್ಷಿ ಸಭೆಗಳಿಲ್ಲದಂದು
ಸಚರಾಚರವೆಲ್ಲ ರಚನೆಗೆ ಬಾರದಂದು;
ಆಧಾರದೊಳಗಣ ವಿಭೂತಿಯನೆ ತೆಗೆದು, ಭೂಮಿಯ ನೆಲೆಗೊಳಿಸಿ (ಸೆ?)
ಪಂಚಾಶತ್ಕೋಟಿ ವಿಸ್ತೀರ್ಣ ಭೂಮಂಡಲಕ್ಕೆ
ಸುತ್ತಿ ಹರಿದವು ಸಪ್ತಸಾಗರಂಗಳು.
ಎಂಬತ್ತಾರು ಕೋಟಿಯ (ಯುಂ?) ತೊಂಬತ್ತೇಳುಲಕ್ಷ ಕಾಲ
ಭವನ ಮಂಡಲಕ್ಕೆ ಉದಯ ಬ್ರಹ್ಮಾಂಡ.
ಅರುವತ್ತಾರು ಕೋಟಿ ತಾರಾಮಂಡಲವೆಂದೆಡೆ,
ಬೆಳಗಿ ತೋರಿದ ಹನ್ನೆರಡು ಜ್ಯೋತಿಯ
ನಿಲಿಸಿ ತೋರಿದ ಹದಿನಾಲ್ಕು ಭುವನವ-
ಈ ಜಗದ ಜಂಗುಳಿಯ ಕಾವ ಗೋವಳ ತಾನಾಗಿ
ಚೌರಾಸಿಲಕ್ಷ ಜೀವರಾಶಿಗಳಿಗೆ ರಾಶಿವಾಳ ತಾನಾಗಿ
ಸಕಲದ ಅಳಿವಿನ ಉಳಿವಿನ ನಿಜದ ನಿಲವ ನೋಡಿ ಕಂಡೆನು.
ಗುಹೇಶ್ವರಾ, ನಿಮ್ಮ ಶ್ರೀಪಾದಕೆ ನಮೋ ನಮೋ ಎನುತಿರ್ದೆನು.
ವಚನ 0183
ಅಯ್ಯಾ ನೀನೆನಗೆ ಗುರುವಪ್ಪಡೆ, ನಾ ನಿನಗೆ ಶಿಷ್ಯನಪ್ಪಡೆ,
ಎನ್ನ ಕರಣಾದಿ ಗುಣಂಗಳ ಕಳೆದು,
ಎನ್ನ ಕಾಯದ ಕರ್ಮವ ತೊಡೆದು,
ಎನ್ನ ಪ್ರಾಣನ ಧರ್ಮವ ನಿಲಿಸಿ,
ನೀನೆನ್ನ ಕಾಯದಲಡಗಿ, ನೀನೆನ್ನ ಪ್ರಾಣದಲಡಗಿ
ನೀನೆನ್ನ ಭಾವದಲಡಗಿ, ನೀನೆನ್ನ ಕರಸ್ಥಲಕ್ಕೆ ಬಂದು
ಕಾರುಣ್ಯವ ಮಾಡಾ ಗುಹೇಶ್ವರಾ
ವಚನ 0184
ಅರಗಿನ ದೇಗುಲದಲ್ಲಿ ಒಂದು ಉರಿಯ ಲಿಂಗವ ಕಂಡೆ.
ಮತ್ತೆ ದೇವರ ಪೂಜಿಸುವರಾರೂ ಇಲ್ಲ.
ಉತ್ತರಾಪಥದ ದಶನಾಡಿಗಳಿಗೆ,
ಸುತ್ತಿಮುತ್ತಿದ ಮಾಯೆ ಎತ್ತಲಿಕೆ ಹೋಯಿತ್ತು ?
ಮರನೊಳಗಣ ಕಿಚ್ಚು ಮರನ ಸುಟ್ಟುದ ಕಂಡೆ !
ಗುಹೇಶ್ವರನೆಂಬ ಲಿಂಗ ಅಲ್ಲಿಯೆ ನಿಂದಿತ್ತು
ವಚನ 0185
ಅರಗಿನ ಪುತ್ಥಳಿಯನುರಿ ಕೊಂಡಡೆ, ಉದಕ ಬಾಯಾರಿ ಬಳಲುತ್ತಿದೆ
[ಅಗೆಯಿಂ ಭೋ ಬಾವಿಯನಗೆಯಿಂ ಭೋ]
ಬಾವಿಯನಗೆದಾತ ಸತ್ತ, ಬಾವಿ ಬತ್ತಿತ್ತು-ಇದು ಕಾರಣ,
ಮೂರು ಲೋಕವು ಬರುಸೂರೆವೋಯಿತ್ತು ಗುಹೇಶ್ವರಾ.
ವಚನ 0186
ಅರಸಲಿಲ್ಲದ ಘನವ ಅರಸುವದದೇನೊ? ತಿಳಿವುದದೇನೊ?
ತಿಳುಹಿನ ಮುಂದಣ ಸುಳುಹು ತಾನೇನೊ?
ಸರದ ಸಮತೆಯ ಪರಿಣಾಮವ ನೋಡಾ !
ಗುಹೇಶ್ವರನೆಂಬುದು ಅದೆ ಕಂಡಾ !
ವಚನ 0187
ಅರಸಿ ಅರಸಿ ಹಾ ಹಾ ಎನುತ್ತಿದ್ದೆನು.
ಬೆದಕಿ ಬೆದಕಿ ಬೆದಬೆದ ಬೇವುತ್ತಿದ್ದೆನು
ಗುಹೇಶ್ವರಾ ಕಣ್ಣ ಮೊದಲಲ್ಲಿದ್ದವನ ಕಾಣೆನು
ವಚನ 0188
ಅರಸುವ ಬಳ್ಳಿ ಕಾಲ ಸುತ್ತಿತ್ತೆಂಬಂತೆ,
ಬಯಸುವ ಬಯಕೆ ಕೈಸಾರಿದಂತೆ,
ಬಡವ ನಿಧಾನವನೆಡಹಿ ಕಂಡಂತೆ,
ನಾನರಸುತ್ತಲರಸುತ್ತ ಬಂದು
ಭಾವಕ್ಕಗಮ್ಯವಾದ ಮೂರ್ತಿಯ ಕಂಡೆ ನೋಡಾ.
ಎನ್ನ ಅರಿವಿನ ಹರುಹ ಕಂಡೆ ನೋಡಾ.
ಎನ್ನ ಒಳಹೊರಗೆ ಎಡೆದೆರಹಿಲ್ಲದೆ ಥಳಥಳಿಸಿ ಬೆಳಗಿ ಹೊಳೆವುತಿಪ್ಪ
ಅಖಂಡಜ್ಯೋತಿಯ ಕಂಡೆ ನೋಡಾ !
ಕರುಹಳಿದ ಕರಸ್ಥಲದ ನಿಬ್ಬೆರಗಿನ ನೋಟದ
ಎನ್ನ ಪರಮಗುರುವ ಕಂಡು ಬದುಕಿದೆನು ಕಾಣಾ ಗುಹೇಶ್ವರಾ
ವಚನ 0189
ಅರಳಿಯ ಮರದ ಮೇಲೆ,
ಒಂದು ಹಂಸೆ ಗೂಡನ್ನಿಕ್ಕಿತ್ತ ಕಂಡೆ.
ಆ ಗೂಡಿನೊಳಗೆ,
ಒಬ್ಬ ಹೆಂಗೂಸು ಉಯ್ಯಾಲೆಯಾಡುತ್ತಿರ್ದಳು.
ಉಯ್ಯಾಲೆ ಹರಿದು,
ಹೆಂಗೂಸು ನೆಲಕ್ಕೆ ಬಿದ್ದು ಸತ್ತಡೆ,
ಪ್ರಾಣಲಿಂಗವ ಕಾಣಬಹುದು ಕಾಣಾ ಗುಹೇಶ್ವರಾ.
ವಚನ 0190
ಅರಿತು ಜನ್ಮವಾದವರಿಲ್ಲ ಸತ್ತು ಮರಳಿ ತೋರುವರಿಲ್ಲ.
ದುರಬಿಮಾನವ ಹೊತ್ತು ಅಘಟಿತ ಘಟಿತವ ನುಡಿವಿರಿ.
ಈ ದೇಹವಿಡಿದು ನುಡಿವ ಪ್ರಪಂಚಿಗಳನೇನೆಂಬೆ ಗುಹೇಶ್ವರಾ.
ವಚನ 0191
ಅರಿದ ಶರಣಂಗೆ ಆಚಾರವಿಲ್ಲ, ಆಚಾರವುಳ್ಳವಂಗೆ ಲಿಂಗವಿಲ್ಲ.
ಲಿಂಗವಿಲ್ಲದ ಶರಣನ ಸುಳುಹು ಜಗಕ್ಕೆ ವಿಪರೀತ,
ಚರಿತ್ರವದು ಪ್ರಕಟವಲ್ಲ ನೋಡಾ !
ಸಂಸಾರಿ ಬಳಸುವ ಬಯಕೆಯನೆಂದೂ ಹೊದ್ದನು.
ಸಟೆಯ ಹಿಡಿದು ದಿಟವ ಮರೆದು,
ಇಲ್ಲದ ಲಿಂಗವನು ಉಂಟೆಂದು ಪೂಜಿಸುವರಾಗಿ ಆಚಾರವುಂಟು,
ಆಚಾರವುಳ್ಳವಂಗೆ ಗುರುವುಂಟು, ಗುರುವುಳ್ಳವಂಗೆ ಲಿಂಗವುಂಟು,
ಲಿಂಗಪೂಜಕಂಗೆ ಭೋಗವುಂಟು.
ಈ ಬರಿಯ ಬಾಯ ಬಣ್ಣಕರೆಲ್ಲರೂ ಪೂಜಕರಾದರು.
ಗುಹೇಶ್ವರಲಿಂಗವು ಅಲ್ಲಿ ಇಲ್ಲವೆಂಬುದನು;
ಈ ವೇಷಲಾಂಛನರೆತ್ತಬಲ್ಲರು ಹೇಳಾ ಸಂಗನಬಸವಣ್ಣ.
ವಚನ 0192
ಅರಿದಡೆ ಸುಖವಿಲ್ಲ; ಮರದಡೆ ದುಃಖವಿಲ್ಲ ! ಸತ್ತಡೆ ಚೇಗೆಯಿಲ್ಲ;
ಬದುಕಿದಡೆ ಆಗಿಲ್ಲವೆಂಬ ! ನಿರ್ಣಯದಲ್ಲಿ ನಿಶ್ಚಯಿಸಿ ನಿಲ್ಲದೆ !
ನಾನು ನೀನೆಂಬ ಉಭಯವಳಿದು ಕೂಡುವ ಯೋಗದ ಹೊಲಬನರಿಯದೆ !
ಬರಿಯ ಮರವೆಯ ಪ್ರೌಡಿಕೆಯಲ್ಲಿ ಕೆಟ್ಟರಯ್ಯ ಗುಹೇಶ್ವರ.
ವಚನ 0193
ಅರಿದರಿದು ಅರಿವು ಬಂಜೆಯಾಯಿತ್ತು.
ಮರೆ ಮರೆದು ಮರಹು ಬಂಜೆಯಾಯಿತ್ತು.
ಗುಹೇಶ್ವರನೆಂಬ ಶಬ್ದ ಸಿನೆ ಬಂಜೆಯಾಯಿತ್ತು.
ವಚನ 0194
ಅರಿದರಿದು ಅರಿವು ಬರುದೊರೆವೋಯಿತ್ತು.
ಕುರುಹ ತೋರಿದೊಡಿಂತು ನಂಬರು.
ತೆರಹಿಲ್ಲದ ಘನವ ನೆನೆದು
ಗುರು ಶರಣು ಶರಣೆಂಬುದಲ್ಲದೆ,
ಮರಹು ಬಂದಿಹುದೆಂದು, ಗುರು ಕುರುಹ ತೋರಿದನಲ್ಲದೆ
ಅರಿಯಬಲ್ಲಡೆ ಗುಹೇಶ್ವರನೆಂಬ ಲಿಂಗವು, ಹೃದಯದಲೈದಾನೆ.
ವಚನ 0195
ಅರಿದರಿದು ನಿಮ್ಮ ನೆನೆವ ಪರಿಕರ ಹೊಸತು
ಅಲಗನೇರಿ ಹೂವ ಕೊಯ್ದು ಇಳಿದು ಬರುವಂತೆ,
ಗುಹೇಶ್ವರಾ ನಿಮ್ಮ ಶರಣ ಚನ್ನಬಸವಣ್ಣಂಗಲ್ಲದೆ.
ವಚನ 0196
ಅರಿದು ನೆನೆಯಲಿಲ್ಲ, ಮರೆದು ಪೂಜಿಸಲಿಲ್ಲ.
ತೆರಹಿಲ್ಲದ ಘನಕ್ಕೆ ಕುರುಹು ಮುನ್ನಿಲ್ಲ.
ತನಗೆ ಗುರುವಿಲ್ಲ, ಗುರುವಿಗೆ ತಾನಿಲ್ಲ
ಗುರುವಿಗೆ ಶಿಷ್ಯನು ಹೊಡವಡುವ ಕಾರಣ ಮುನ್ನಿಲ್ಲ.
ಬಯಲ ಬಿತ್ತಲಿಲ್ಲ, ಬೆಳೆಯಲಿಲ್ಲ, ಒಕ್ಕಲಿಲ್ಲ, ತೂರಲಿಲ್ಲ,
ಗುಹೇಶ್ವರನೆಂಬ ಲಿಂಗಕ್ಕೆ ಕುರುಹು ಮುನ್ನಿಲ್ಲ.
ವಚನ 0197
ಅರಿದು ಮರೆದು ಬೆರಗು ಹತ್ತಿತ್ತು.
ಏನಂದರಿಯದೆ ಅದೆಂತೆಂದರಿಯದೆ
ಗುಹೇಶ್ವರಾ ಗುಹೇಶ್ವರಾ ಎನುತ ಅಲ್ಲಿಯೆ ನಿಂದಿತ್ತು
ವಚನ 0198
ಅರಿದೆನೆಂಬುದು ತಾ ಬಯಲು,
ಅರಿಯೆನೆಂಬುದು ತಾ ಬಯಲು,
ಅರುಹಿನ ಕುರುಹಿನ ಮರಹಿನೊಳಗೆ
ಗುಹೇಶ್ವರನೆಂಬುದು ತಾ ಬಯಲು !
ವಚನ 0199
ಅರಿದೆವರಿದೆವೆಂಬಿರಿ ಅರಿದ ಪರಿಯೆಂತು ಹೇಳಿರೆ ?
ಅರಿದವರು ಅರಿದೆವೆಂಬರೆ ?
ಅರಿಯಬಾರದ ಘನವನರಿದು,
ಅರಿಯದಂತಿಪ್ಪರು ಗುಹೇಶ್ವರಾ.
ವಚನ 0200
ಅರಿದೆಹೆ ಅರಿದೆಹೆನೆಂದಡೆ ಅದೇಕೊ ಮುಂದೆ ಮರವೆ?
ನೀನರಿದೆನೆಂಬುದು ನಿನ್ನಲ್ಲಿ ಲೇಸಾಗಿ ಉಳ್ಳಡೆ,
ನಿನ್ನರಿವೆಲ್ಲವ ಹರಿಹಂಚ ಮಾಡಿ ಹೋದಡರಿ ಮರುಳೆ !
ಸ್ವತಂತ್ರ ಘನದೊಳಗಿರ್ದು,
ನಿಜವನರಿದಿಹೆನೆಂದಡೆ ಮೂರ್ತಿ ಕಿರಿದಲ್ಲ, ನಿಲ್ಲು ಮಾಣು.
ಗುಹೇಶ್ವರನೆಂಬ ಲಿಂಗದ ಘನಘಟ್ಟಿಯನರಿವಡೆ
ನಿನ್ನರಿವೆಲ್ಲವ ಹರಿಹಂಚು ಮಾಡಿ,
ನೀನರಿ ಮರುಳೇ-ಅನುಭಾವಿಯಾದಡೆ
ವಚನ 0201
ಅರಿಯದ ಕಾರಣ ಕುರುಹುವಿಡಿವೆನಲ್ಲದೆ
ಅರಿದ ಬಳಿಕ ಇನ್ನೇನೊ ?
ಬಿಟ್ಟಡೆ ಸಮಯವಿರೋಧ, ಬಿಡದಿದ್ದರೆ ಜ್ಞಾನವಿರೋಧ.
ಗುಹೇಶ್ವರಲಿಂಗವು ಉಭಯ ದಳದ ಮೇಲೈದಾನೆ ಕಾಣಾ
ಸಿದ್ಧರಾಮಯ್ಯಾ
ವಚನ 0202
ಅರಿಯದಂತಿರಲೊಲ್ಲದೆ, ಅರಿದು ಕುರುಹಾದೆಯಲ್ಲಾ !
ಹಿರಿಯರೆಲ್ಲರು ನೆರೆದು ನಿಮ್ಮ ಕಟ್ಟಿದರೆ ಅಯ್ಯಾ,
ಉಪಚಾರಕ್ಕೋಸುಗ !
ಸಾವಿಂಗೆ ಸಂಗಡವಾದೆಯಲ್ಲಾ-ಗುಹೇಶ್ವರಾ !
ವಚನ 0203
ಅರಿಯದೆ [ಅರಿದು?] ಅರಸಿದಡೆ ಮನದ ವಿಕಾರ,
ಸುಳಿದರಸಿದಡೆ ಪವನವಿಕಾರ, ನಿಂದರಸಿದಡೆ ದೇಹವಿಕಾರ,
ಒಳಗನರಸಿದಡೆ ಜ್ಞಾನವಿಕಾರ.
ಅರಸದೆ ಬೆರಸಿದಡೆ ಆತನೆ ಶರಣ ಗುಹೇಶ್ವರಾ.
ವಚನ 0204
ಅರಿವ ಆತ್ಮ;
ಕಂಗಳ ಮರೆಯಲ್ಲಿ ಕಾಂಬಂತೆ,
ಕಿವಿಯ ಮರೆಯಲ್ಲಿ ಕೇಳುವಂತೆ-
ಕಂಗಳು ನಷ್ಟವಾದಲ್ಲಿ ಕರ್ಣ ಬದಿರವಾದಲ್ಲಿ
ಕಾಂಬುದು ಕೇಳುವುದು ಅಲ್ಲಿಯೆ ನಿಂದಿತ್ತು.
ಆತ್ಮನ ಅರಿವಾವುದು ? ಗುಹೇಶ್ವರನೆಂಬ ಕುರುಹಾವುದು;
ಅಂಬಿಗರ ಚೌಡಯ್ಯ ?
ವಚನ 0205
ಅರಿವ ಬಲ್ಲೆನೆಂದು ಬರುನುಡಿಯ ನುಡಿವರೆ ?
ಸತ್ಯವನರಿದವಂಗೆ ಮಿಥ್ಯಾಭಾವವುಂಟೆ ?
ತಥ್ಯ ಮಿಥ್ಯ ಉಭಯಭಾವವಳಿದಿರಬೇಕು.
ಸಮಯವೆಂಬುದು ಸಂಪದ. ಅದು ನಿನಗನ್ಯವೆ ?
ಸರ್ವಮಯ ಸಂಪದವಾದಲ್ಲಿ
ಗುಹೇಶ್ವರಲಿಂಗಕ್ಕೆ ತಥ್ಯಮಿಥ್ಯವಿಲ್ಲ ಘಟ್ಟಿವಾಳಯ್ಯ
ವಚನ 0206
ಅರಿವನರಿದಹೆನೆಂಬುದು ಮರವೆ,
ಮರಹ ಮರೆದಹೆನೆಂಬುದು ಮರವೆ,
ಸಾಕಾರ ನಷ್ಟ ನಿರಾಕಾರ ದೃಷ್ಟವೆಂಬುದು ಭಾವದ ಬಳಲಿಕೆ.
ಗುರುವೆಂಬುದು ಶಿಷ್ಯನೆಂದಲ್ಲಿಯೆ ಹೋಯಿತ್ತು.
ಶಿಷ್ಯನೆಂಬುದು ಗುರುವೆಂದಲ್ಲಿಯೆ ಹೋಯಿತ್ತು.
ನಿರ್ಣಯದಲ್ಲಿ ನಿಜೈಕ್ಯನಾದಹೆನೆಂದಡೆ, ಎಚ್ಚರಿಕೆಯಲ್ಲಿ ತಪ್ಪಿತ್ತು.
ಸಹಜ ಸಂಬಂಧಕ್ಕೆ ಗುರುವಲ್ಲದೆ ಅಸಹಜಕ್ಕೆ ಗುರುವುಂಟೆ ?
ಗುಹೇಶ್ವರಲಿಂಗದಲ್ಲಿ ಪರವೆಂದಲ್ಲಿ ಗುರುವುಂಟಲ್ಲದೆ
ಸ್ವಯವೆಂದಲ್ಲಿ ನುಡಿಯಲಿಲ್ಲ.
ವಚನ 0207
ಅರಿವನರಿದು ಮರಹ ಮರೆದು,
ಸಂಕಲ್ಪ ಸಂಶಯವಳಿದ ನಿಲವನು, ಅರಿದ ಪರಿ ಎಂತು ಹೇಳಾ ?
ಅರಿದೆನೆಂದಡೆ ಜ್ಞಾನಕ್ಕೆ ದೂರ, ಮರೆದೆನೆಂದಡೆ ಮನಕ್ಕೆ ದೂರ.
ನಿರ್ಭಾವದ ಹೊಲಿಗೆಯಲ್ಲಿ ಭಾವಸಂಕಲ್ಪ ಬಿಡದು.
ನಮ್ಮ ಗುಹೇಶ್ವರಲಿಂಗದಲ್ಲಿ ಮನಮಗ್ನಯೋಗ,
ನಿನಗೆಂತು ಸಾಧ್ಯವಾಯಿತ್ತು ಹೇಳಾ ಸಿದ್ಧರಾಮಯ್ಯಾ ?
ವಚನ 0208
ಅರಿವರತು ಬೆರಗುಹೊಡೆದು, ಕುರುಹುಗೆಟ್ಟವನ,
ಬಂದ ಬಟ್ಟೆಯಲ್ಲಿ ಬಾರದೆ ಹೋದವನ,
ಕಂಗಳಲುಂಡವನ, ಮನದಲ್ಲಿ ದಣಿದವನ,
ಕಿಚ್ಚಿಲ್ಲದೆ ಬೆಂದವನ, ಅಚ್ಚಲಿಂಗೈಕ್ಯನ,
ಕೈಯಿಲ್ಲದೆ ಕೊಂಡವನ, ಬಾಯಿಲ್ಲದೆ ಉಂಡವನ,
ಒಡಲಿಲ್ಲದೆ ಅವಗ್ರಹಿಸಿದವನ-ನಂಬು ಗುಹೇಶ್ವರಲ್ಲಮನ !
ವಚನ 0209
ಅರಿವರತು ಮರಹುಗೆಟ್ಟು ತನ್ನಲ್ಲಿ ತಾನು ಸನ್ನಹಿತನಾದವಂಗೆ
ದುಃಖಿಸುವರೆ ಹೇಳಾ ? ಶೋಕಿಸುವರೆ ಹೇಳಾ ?
ಒಡಲಿಲ್ಲದಾತಂಗೆ ಎಡೆಯಲೊಂದು ಅಳಿವುಂಟೆಂದು
ನುಡಿದು ಹೇಳುವ ಮಾತು ಭ್ರಾಂತು ನೋಡಾ !
ಎರಡಿಲ್ಲದ ಐಕ್ಯಂಗೆ ಒಳಹೊರಗಿಲ್ಲ ನೋಡಾ,
ಗುಹೇಶ್ವರನ ಶರಣ ಅಜಗಣ್ಣಂಗೆ !
ವಚನ 0210
ಅರಿವರಿತು ಬೆರಗು ಹತ್ತಿತೆಂಬ ಜ್ಞಾನವಿದೇನೊ ?ನಾಹಂ’ ಎಂಬಲ್ಲಿ ತಾನಾರೊ ?
ಕೋಡಿಹಂ’ ಎಂಬಲ್ಲಿ ಮುನ್ನಾರೊ ?
`ಪರಬ್ರಹ್ಮ ಸೋಡಿಹಂ’ ಎಂಬಲ್ಲಿ ಮುನ್ನ ತಾನೇನಾಗಿದ್ದನೊ ?
ಚಿದಹಂ ಎಂಬ ಹಮ್ಮಿನ ಮಾಲೆ ಇದೇನು ಹೇಳಾ ?
“ನಿಃಶಬ್ದಂ ಬ್ರಹ್ಮ ಉಚ್ಯತೇ” ಎಂಬ ಶಬ್ದವಿಡಿದು
ಬಳಲುವ ಕಾರಣವಿದೇನು ಹೇಳು ಗುಹೇಶ್ವರಾ ?
ವಚನ 0211
ಅರಿವಿಂಗಸಾಧ್ಯ, ಉಪಮೆಗೆ ಕಡೆ ಮುಟ್ಟದು !
ಗುಹೇಶ್ವರನ ಕರುಣಪ್ರಸಾದಿ ಮರುಳುಶಂಕರದೇವ
ಎಂತಿಪ್ಪನೆಂಬುದ ತಿಳಿದು ನೋಡಾ, ಸಂಗನಬಸವಣ್ಣ.
ವಚನ 0212
ಅರಿವಿಂದರಿಯಬಾರದು, ಕುರುಹುವಿಡಿದ ಪರಿಯೆಂತಯ್ಯಾ ?
ತೆರಹಿಲ್ಲದ ಘನವನರಿದೆಹೆನೆಂದಡೆ, ಅರಹು ಮರಹು ನಷ್ಟವಾದ
ಮಹದರಿವು ತಾನಾಗಿ ಗುಹೇಶ್ವರಲಿಂಗವನರಿಯದಂತಿರಬೇಕು
ಕಾಣಾ ಸಿದ್ಧರಾಮಯ್ಯ.
ವಚನ 0213
ಅರಿವಿನ ಕುರುಹಿದೇನೊ ಒಳಗೆ ಅನು(ನಿ?)ಮಿಷ ನಂದಿನಾಥನಿರಲು ?
ಪೂಜಿಸುವ ಭಕ್ತನಾರೊ? ಪೂಜೆಗೊಂಬ ದೇವನಾರೊ ?
ಮುಂದು ಹಿಂದು, ಹಿಂದು ಮುಂದಾಡದೆ,
ಗುಹೇಶ್ವರ ನೀನು ನಾನು, ನಾನು ನೀನಾದೊಡೆ ?
ವಚನ 0214
ಅರಿವಿನ ನಿರಿಗೆಗಾಣದೆ ಗಿರಿಯ ಕೋಡುಗಲ್ಲ ಮೇಲೆ
ತಲೆಯೂರಿ ತಪಸ್ಸು ಮಾಡಿದಡಿಲ್ಲ, ಇಲ್ಲದ ಕಾಲಕ್ಕಿಲ್ಲ,
ಗಾತ್ರವ ದಂಡಿಸಿದಡಿಲ್ಲ ಪೃಥ್ವಿಯ ತಿರುಗಿದಡಿಲ್ಲ,
ತೀರ್ಥಂಗಳ ಮಿಂದು ನಿತ್ಯನೇಮಂಗಳ ಮಾಡಿ
ಜಪಸಮಾದಿಯಲ್ಲಿ ನಿಂದಡಿಲ್ಲ,
“ಪೂಜಾಕೋಟಿಸಮಂ ಸ್ತೋತ್ರಂ, ಸ್ತೋತ್ರಕೋಟಿಸಮಂ ಜಪಃ
ಜಪಕೋಟಿ ಸಮಂ ಧ್ಯಾನಂ, ಧ್ಯಾನಕೋಟಿರ್ಮನೋ ಲಯಃ-
ಎಂದುದಾಗಿ,
ಸುತ್ತಿಸುಳಿವ ಮನವ ಚಿತ್ತಿನಲ್ಲಿರಿಸಿ, ಚಿತ್ತು ಲಯವಾದಡೆ ನಿತ್ಯಪ್ರಕಾಶ !
ಗುಹೇಶ್ವರಲಿಂಗವ ಮತ್ತೆ ಅರಸಲುಂಟೆ ?
ವಚನ 0215
ಅರಿವಿನ ಬಲದಿಂದ ಕೆಲಬರು
ಅರಿಯದವರ ಗೆಲಬೇಕೆಂದು,
ಬರುಮಾತಿನ ಉಯ್ಯಲೆಯನೇರಿ, ಒದೆದು ಒರಲಿ ಕೆಡೆವ ದರಿದ್ರರು !
ಅರಿವು ತೋರದೆ ಇರಬೇಕು-ಕಾಯನಿರ್ಣಯ ನಿಃಪತಿಯೆಂಬಾತನು.
ಸೋಂಕಿನ ಸೋಜಿಗವೆಂಬ ಪರಿಣತೆ ಫಲಿಸಬೇಕು,
ಅರಿವು ತೋರದೆ ಎರಡೆಂಬ ಬಿನ್ನವೇಷವ ತೊಟ್ಟು
ಡಂಬಕವ ನುಡಿದೆಹೆವೆಂಬ ಉದ್ದಂಡರ
ಗುಹೇಶ್ವರ ಕಂಡರೆ ಕನಲುವ.
ವಚನ 0216
ಅರಿವಿನ ಹೃದಯ ಕಂದೆರೆಯಬೇಕೆಂದು
ಗುರುವೆಂದು ಕಲ್ಪಿಸಿಕೊಂಬರಲ್ಲದೆ,
ಗುರುವೆಂದೆನಲುಂಟೆ ಶಿಷ್ಯಂಗೆ ?
ಶಿಷ್ಯನೆಂದೆನಲುಂಟೆ ಗುರುವಿಂಗೆ ?
ಗಮನಾಗಮನ ನಾಸ್ತಿಯಾದ ಲಿಂಗಕ್ಕೆ
ಅಂಗವೆಲ್ಲಿಯದು ಹೇಳಾ ಗುಹೇಶ್ವರಾ ?
ವಚನ 0217
ಅರಿವಿನಲ್ಲಿ ಉದಯಿಸಿ ಮರಹು ನಷ್ಟವಾಗಿರ್ದ
ಶರಣನ ಪರಿಯನರಸಲುಂಟೆ ? ಗತಿಯ ಹೇಳಲುಂಟೆ ?
ಶಿಶು ಕಂಡ ಕನಸಿನಂತಿಪ್ಪರು ಗುಹೇಶ್ವರಾ ನಿಮ್ಮ ಶರಣರು !
ವಚನ 0218
ಅರಿವಿನೊಳಗಣ ಮರಹು, ಮರಹಿನೊಳಗಣ ಅರಿವು !
ಅರಿದು ಮರೆದು ನೆನೆದಡೆ ನೆಲೆಗೊಳ್ಳದು.
ಅರಿವರಾರಯ್ಯ ಆಗಮ್ಯಲಿಂಗವನು ?
ಕೊಟ್ಟು ಕೊಂಡಾಡುವ ವ್ಯವಹಾರಕ್ಕೆಲ್ಲಿಯದೊ ?
ನೀರಲೊದಗಿದ ಬೆಣ್ಣೆ ಮುಗಿಲಲೊದಗಿದ ಕಿಚ್ಚು
ಪವನನ ಶಬ್ದಸಂಚಕ್ಕೆ ಬಣ್ಣವುಂಟೆ ?
ಗುಹೇಶ್ವರಲಿಂಗದ ನಿಲವ ತೋರಬಾರದು-ಕೇಳಾ ಸಂಗನಬಸವಣ್ಣಾ.
ವಚನ 0219
ಅರಿವಿನೊಳಗೊಂದು ಮರವೆಯದೆ, ಮರವೆಯೊಳಗೊಂದು ಅರಿವದೆ.
ಅರಿವು ಮರವೆಯೆಂಬೆರಡೂ ಅಳಿದಡೆ ನಿರ್ಣಯವದೆ (ನಿರ್ವಯಲಿದೆ?).
ತಾನೆಂಬಲ್ಲಿ ನಿಷ್ಪತಿಯಿದೆ-ಇದೇನು ಹೇಳಾ ಗುಹೇಶ್ವರಾ?
ವಚನ 0220
ಅರಿವು ಅರಿವು ಎನುತಿಪ್ಪಿರಿ, ಅರಿವು ಸಾಮಾನ್ಯವೆ ?
ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ
ನಿಂದ ಹೆಜ್ಜೆಯನರಿಯಬಾರದು.
ಮುಂದಣ ಹೆಜ್ಜೆಯಳಿದಲ್ಲದೆ, ಒಂದು ಪಾದ ನೆಲೆಗೊಳ್ಳದು.
ನೆಲನ ಬಿಟ್ಟು ಆಕಾಶದಲ್ಲಿ ನಿಂದು ಮುಗಿಲೊಳಗೆ ಮಿಂಚಿದಲ್ಲದೆ
ತಾನಾಗಬಾರದು.-ಗುಹೇಶ್ವರನೆಂಬುದು ಬರಿದೆ ಬಹುದೆ ಹೇಳಿರೆ ?
ವಚನ 0221
ಅರಿವು ಉದಯವಾದಲ್ಲದೆ ಮರಹು ನಷ್ಟವಾಗದು.
ಮರಹು ನಷ್ಟವಾದಲ್ಲದೆ ಅರಿವು ಸಯವಾಗದು.
ಅರಿವು ಸಯವಾಗಿ ದೊರೆಕೊಂಡ ಬಳಿಕ;-
ಗುರುವಾರು ? ಲಿಂಗವಾರು ? ಆವುದು ಘನ, ಆವುದು ಕಿರಿದು ಹೇಳಾ ?
ಗುಹೇಶ್ವರಲಿಂಗದಲ್ಲಿ ಅರಿದು ಮರೆದು ಉಪದೇಶವ ಹಡೆದಡೆ
ಮುಂದೆ ನಿಜವೆಂತು ಸಾಧ್ಯವಪ್ಪುದು,
ಹೇಳಾ ಮಡಿವಾಳ ಮಾಚಯ್ಯಾ ?
ವಚನ 0222
ಅರಿವು ಮರವೆಯನರಿದು ನೆರೆನಿಂದ ನಿಜವನಾರು ಬಲ್ಲರೊ ?
ಭಾವ ನಿರ್ಭಾವವ ಮೀರಿದ ಮಹಾಘನವ ಭಾವಿಸುವರಿನ್ನಾರೊ ?
ಅದು ಭಾವಕ್ಕತೀತವಾಗಿ ಭಾವಿಸಲಿಲ್ಲ, ಮನಕ್ಕೆ [ಅ]ಗೋಚರವಾಗಿ ನೆನೆಯಲಿಲ್ಲ.
ಅರಿವುದಕ್ಕೆ ಕುರುಹಿಲ್ಲ, ಮರೆವುದಕ್ಕೆ ತೆರಹಿಲ್ಲ.
ಜ್ಞಾತೃ, ಜ್ಞಾನ, ಜ್ಞೇಯವಳಿದು ನಿಃಪತಿ,
ಗುಹೇಶ್ವರಾ ನಿಮ್ಮ ಶರಣ, ನಿಶ್ಚಿಂತನಿವಾಸಿಯಾದನು
ವಚನ 0223
ಅರಿವುಗೆಟ್ಟು ಮರ[ಕುರು ?]ಹಳಿದು
ಭಾವಭ್ರಾಂತು ನಿಭ್ರಾಂತವಾದವರ ಕೈಯಲ್ಲಿ
ಕರುಹನರಸುವರೆ ಹೇಳಾ ?
ತಾನಳಿದು ತಾನುಳಿದು ತಾನುತಾನಾದ ನಿಜಶರಣಂಗೆ
ಅಂತರಂಗದಲ್ಲಿ ಒಂದು ಅರಿವುಂಟೆ ?
ಗುಹೇಶ್ವರನ ಶರಣರ ನಿಲವು
ಕಾಯಗೊಂಡವರ ಕಣ್ಣಿಂಗೆ ಸಂದೇಹವಾಗಿಪ್ಪುದು,
ನಿಸ್ಸಂದೇಹಿಗಳಿಗೆ ನಿಜವಾಗಿಪ್ಪುದು ನೋಡಾ ಮರುಳೆ
ವಚನ 0224
ಅರುವೆಯನು ಒಂದು ಒರಲೆ ಕೊಂಡಡೆ,
ಆಕಾಶವನು ಉಡು ಮೇಯಿತ್ತಲ್ಲಾ !
ಕತ್ತಲೆಯ ಬೆಳಗುವ ತಾನೆ ನುಂಗಿತ್ತಲ್ಲಾ !
ಗುಹೇಶ್ವರಾ ಸತ್ತವರು ಬದುಕಿದವರ ಹೊತ್ತರು !
ವಚನ 0225
ಅರೂಪು ಕಾಣಬಾರದು, ಪೂಜಿಸುವ ಪರಿ ಇನ್ನೆಂತೊ ?
ರೂಪಿಂಗೆ ಕೇಡುಂಟು ಪೂಜಿಸುವ ಪರಿ ಇನ್ನೆಂತೊ ?
ಸಕಲ ನಿಷ್ಕಲ ಪೂಜೆಗೆ ಕಾರಣವಲ್ಲ !
ಇನ್ನೆಂತಯ್ಯಾ ಲಿಂಗವಂತರಿಗೆ ಪೂಜಿಸುವ ಪರಿ ?
ಲಿಂಗದ ಪರಿ ಇನ್ನೆಂತಯ್ಯಾ ?
ಅರಿಯಬಾರದ ಲಿಂಗವನು ಅರಿವಂತೆ ಮಾಡಿಕೊಟ್ಟನು ಶ್ರೀಗುರು.
ಈ ಎರಡುವನರಿದು ಪೂಜಿಸಬೇಕು ಗುಹೇಶ್ವರಾ.
ವಚನ 0226
ಅರೆಯ ಮೇಲಣ ಹುಲ್ಲೆಗೆ ಕೆಂಗರಿಯ ಬಾಣವ ತೊಟ್ಟವನೆ (ತೊಟ್ಟಡೆ ?)
ತಪ್ಪದೆ ತಾಗಿತ್ತಲ್ಲಾ ! ಅದು ಒಂದೆ ಬಾಣದಲ್ಲಿ ಅಳಿಯಿತ್ತಲ್ಲಾ !
ನಾರಿ ಹರಿಯಿತ್ತು, ಬಿಲ್ಲು ಮುರಿಯಿತ್ತು.
ಹುಲ್ಲೆ ಎತ್ತ ಹೋಯಿತ್ತು ಗುಹೇಶ್ವರಾ?
ವಚನ 0227
ಅರ್ಕನ ಅದ್ಭುತದಲ್ಲಿ ಕೆಟ್ಟರು ಹಲಬರು,
ತಪ್ಪುಕರಾದರು ಹಲಬರು.
ಬಿಂದು ಬಿಂದುವನೆ ಕೂಡಿ ಲಿಂಗಲೀಯವಾಯಿತ್ತು.
ನಿಂದನು ಗುಹೇಶ್ವರನೆನ್ನೊಳಗೆ ಭರಿತನಾಗಿ.
ವಚನ 0228
ಅರ್ಚನೆ ಪೂಜನೆಯ ನಿಮಗೆ ನಾನು ಹಂಗು ಹರಿಯಿಲ್ಲದೆ ಮಾಡುವೆನಯ್ಯಾ
ನಾ ಮಾಡುವ ಕ್ರೀಯೆಲ್ಲವು ನೀವೆಯಾದ ಕಾರಣ,
ನಿಮ್ಮಲ್ಲಿ ತದ್ಗತನಾಗಿದ್ದೆ ಕಾಣಾ ಗುಹೇಶ್ವರಾ.
ವಚನ 0229
ಅರ್ಧನಾರೀಶ್ವರನೆಂಬರು ಅನುವನರಿಯದವರು.
ತ್ರಿಪುರವಿಜಯನೆಂಬರು ವಿರೋದಿಗಳಾದವರು.
ಕಾಮಾರಿಯೆಂಬರು ಕಣ್ಕಾಣದವರು.
ಜಟಾಜೂಟಕೋಟೀರಭಾರನೆಂಬರು ಜಾಣರಲ್ಲದವರು.
ನಮ್ಮ ಗುಹೇಶ್ವರಲಿಂಗ ಇಂತಹ ಬಹುರೂಪದವನಲ್ಲ !
ವಚನ 0230
ಅರ್ಪಿತ ಅನರ್ಪಿತವನಾರುಬಲ್ಲರಯ್ಯಾ ?
ಅರ್ಪಿಸಿ ಕೊಂಬುದು ಅನರ್ಪಿತ
ಅರ್ಪಿಸದೆ ಕೊಂಬುದೂ ಮುನ್ನವೆ ಅನರ್ಪಿತ.
ಅರ್ಪಿಸಿ ಅರ್ಪಿಸದೆ ಕೊಳಬಲ್ಲ
ಗುಹೇಶ್ವರಾ ನಿಮ್ಮ ಶರಣ.
ವಚನ 0231
ಅಲ್ಪಜ್ಞಾನಿ ಪ್ರಕೃತಿ ಸ್ವಭಾವಿ, ಮಧ್ಯಮಜ್ಞಾನಿ ವೇಷಧಾರಿ,
ಅತೀತಜ್ಞಾನಿ ಆರೂಢ. ಆರೂಢನಾದರೂ ಅರಿಯಬಾರದಯ್ಯಾ.
ಜ್ಞಾನವನರಿಯದಾತ ಅಜ್ಞಾನಿ, ನಾಮನಷ್ಟ.
ಈ ಚತುರ್ವಿಧದೊಳಗೆ ಆವಂಗವೂ ಇಲ್ಲ,
ಗುಹೇಶ್ವರಾ-ನಿಮ್ಮ ಶರಣ.
ವಚನ 0232
ಅವದಿ ಅಳಿಯಿತ್ತು ವ್ಯವಧಾನ ಉಳಿಯಿತ್ತು.
ನಿಜವೆ ನಿಜವನೊಡಗೂಡಿತ್ತು ಕೇಳಾ ಬಸವಣ್ಣ.
ಕಲಿಯುಗದಲ್ಲಿ ಮುಂದೆ ಇರಬಾರದು ನಿಜ ಶರಣಂಗೆ
ನಡೆ ನೀನು ಕಪ್ಪಡಿಯ ಸಂಗಯ್ಯನಲ್ಲಿ ಒಡಗೂಡು.
ಉಳುಮೆಯಲ್ಲಿ ನಿಜವನೆಯ್ದು ನಡೆ, ಚೆನ್ನಬಸವಣ್ಣಾ.
ಮಹವನೊಡಗೂಡು ಮಡಿವಾಳಯ್ಯ.
ಸೊಡ್ಡಳ ಬಾಚರಸರು ಮೊದಲಾದ ಪ್ರಮಥರೆಲ್ಲರು
ನಿಜವನೆಯ್ದುವುದು ನಿರ್ವಯಲ ಸಮಾದಿಯಲ್ಲಿ.
ಬಗಿದು ಹೋಗಿ ಲಿಂಗದೊಳಗೆ ಹೊಗುವರೆಲ್ಲರೂ !
ನಡೆಯಿರಿ ಕಾಯವೆರಸಿ ಕೈಲಾಸಕ್ಕೆ, ಕಾಯಸಹಿತ ಎಯ್ದುವುದು.
ನಿಮಗೆಲ್ಲರಿಗೆಯೂ ಉಪದೇಶಮಂತ್ರ ತಪ್ಪದು.
ನಮಗೆ ಕದಳಿಯಲ್ಲಿ ಹೊಕ್ಕು ನಿಜದಲ್ಲಿ ಒಡಗೂಡುವ ಪರಿಣಾಮ.
ಇದು ನಮ್ಮ ಗುಹೇಶ್ವರಲಿಂಗದ ಅಣತಿ ನಿಮಗೆಲ್ಲರಿಗೆಯೂ.
ವಚನ 0233
ಅವನು ಜಗವ ನುಂಗಿ, ಜಗವವನ ನುಂಗಿ,
ಸೀಮೆಯ ನಿಸ್ಸೀಮೆ ನುಂಗಿ,
ಗುಹೇಶ್ವರನೆಂಬ ನಾಮವ ಲಿಂಗವು ನುಂಗಿತ್ತು.
ವಚನ 0234
ಅವಸ್ಥಾತ್ರಯಮಂ ಬಿಟ್ಟು ಇಷ್ಟಲಿಂಗದ ಗರ್ಭದಲ್ಲಿ
ಕಾಯವ ನಿಕ್ಷೇಪವಂ ಮಾಡಿದ ಬಳಿಕ ಕಾಲನ ಭಯವಿಲ್ಲ.
ನೇತ್ರದಲ್ಲಿರ್ದ ಪ್ರಾಣಲಿಂಗದ ಮೇಲೆ ಮನವ ನಿಲಿಸಿದ ಬಳಿಕ ಕಾಮನ ಭಯವಿಲ್ಲ.
ಏಕಾಂತ ಸ್ಥಾನವಾಗಿ, ಅಂತರಂಗದ ಭಾವ
ಜ್ಯೋತಿರ್ಲಿಂಗದಲ್ಲಿ ಅರಿವು ಸಂಧಾನದಿಂ ಸಮರಸವಾಗಲು, ಕರ್ಮದ ಭಯವಿಲ್ಲ.
ಈ ತ್ರಿಲಿಂಗ ಸಂಬಂಧದಿಂದ ಕಾಲಕಾಮಕರ್ಮವನೊತ್ತಿ ಮೆಟ್ಟಿ ನಿಲ್ಲದೆ,
ವಿಷಯಸುಖಕ್ಕೆ ಮೆಚ್ಚಿ ಆ ಮೂವರ ಕಾಲ ಕೆಳಗೆ ಬಿದ್ದು,
ಮಹಾದುಃಖಕ್ಕೊಳಗಾದರು, ನರರು.
ಈ ವಿಷಯಗಾಳಿ ಸೋಂಕಲು ಹರಿ ಹತ್ತು ಭವವೆತ್ತಿದ.
ಅಜ
ವಚನ 0235
ಅವಸ್ಥೆ ಅವಸ್ಥೆಯ ಕೂಡಿ, ಬಿಂದು ನಾದವ ಕೂಡಿ,
ಕಳೆಕಳೆಗಳು ಒಂದಾದ ಪರಿಯ ನೋಡಾ !
ಅದು ಲಿಂಗದಲನಿಮಿಷ, ಆನೆಂಬ ಗುರುಪದವಾದೆನಯ್ಯಾ.
ಹಿಂದು ಮುಂದ ಒಂದು ಮಾಡಿ ಮೂರ್ತಿಯಾಗಿ
ಲಿಂಗ ಜಂಗಮವಾದ ಪರಿಯ ನೋಡಾ !
ಗುಹೇಶ್ವರನ ಅಮಳೋಕ್ಯವಾದ ಸಂಗನಬಸವಣ್ಣನ
ಶ್ರೀಪಾದಕ್ಕೆ ನಮೋ ನಮೋ ಎಂಬೆನು
ವಚನ 0236
ಅವಿರಳ ವಿಟನ ಮದುವೆಗೆ ನಿಬ್ಬಣಗಿತ್ತಿಯರೆಲ್ಲ ಬಂದು
ಕೆಂಡದ ದಂಡೆಯನೆ ಮುಡಿದು, ಅಂಡಜವೆಂಬ ಅರಿಷಿಣವ ಮಿಂದು,
ಉರಿಯೆಂಬ ಹಚ್ಚಡದ ಹೊಂದಿಕೆ (ಹೊದಿಕೆ?)ಯಲ್ಲಿ-
ನಿಬ್ಬಣಗಿತ್ತಿಯರು ಬಪ್ಪ ಭರವ ಕಂಡು ನೀರಲಡಿಗೆಯ ಮಾಡಿ;
ವಾಯದ ಕೂಸಿಂಗೆ ಮಾಯದ ಮದವಣಿಗ;
ಸಂಗ ಸಂಯೋಗವಿಲ್ಲದೆ ಬಸುರಾಯಿತ್ತು.
ಕೂಸೆದ್ದು ಕುಣಿದಾಡಿ ಸೂಲಗಿತ್ತಿಯನವಗ್ರಹಿಸಿತ್ತು.
ಗುಹೇಶ್ವರಾ ಒಬ್ಬ ಇಬ್ಬ ಮೂವರು
ತ್ರಿದೇವತೆಗಳು ಬಲ್ಲರೆ ಆ ಲಿಂಗದ ಘನವನು?
ವಚನ 0237
ಅಶನಕ್ಕಂಜಿ ವೇಷವನೆ ಹೊತ್ತು ದೇಶವ ತೊಳಲುವ
ಹಿರಿಯರ ಗಂಡ, ಕಾಲನ ಗಂಡ ಕರ್ಮದ ಗಂಡ
ಲಿಂಗವಿಡಿದು ಸಾವ ಹಿರಿಯರ ಗಂಡ
ಗುಹೇಶ್ವರಾ ನಿಮ್ಮ ಶರಣ ಘಟ್ಟಿವಾಳ
ಅಲ್ಲಮನಂತಿಂತೆಂಬವರ ಗಂಡ.
ವಚನ 0238
ಅಷ್ಟದಳಕಮಲದ ಮೇಲಿಪ್ಪ ನಿಶ್ಶೂನ್ಯನ ಮರ್ಮವನರಿಯದೆ,
ಪ್ರಾಣಲಿಂಗವೆಂದೆಂಬರು, ಸಂತೆಯ ಸುದ್ದಿಯ ವಂಚಕರು.
ಅಂಗದ ಆಪ್ಯಾಯನಕ್ಕೆ ಲಿಂಗವನರಸುವ,
ಭಂಗಿತರನೇನೆಂಬೆ ಗುಹೇಶ್ವರಾ.
ವಚನ 0239
ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ
ಹಂಗು ಹರಿಯಿಲ್ಲದೆ ಮಾಡುವೆನು.
ನಾ ಮಾಡುವ ಕ್ರೀಗಳೆಲ್ಲವು ನೀವೆಯಾದ ಕಾರಣ
ಗುಹೇಶ್ವರಾ ನಿಮ್ಮಲ್ಲಿ ತದ್ಗತವಾಗಿದ್ದೆನು.
ವಚನ 0240
ಅಷ್ಟಾಂಗಯೋಗದಲ್ಲಿ;
ಯಮ ನಿಯಮಾಸನ ಪ್ರಾಣಾಯಾಮ ಪ್ರತ್ಯಾಹಾರ[ವೆಂಬ]
ಧಾನ್ಯ ಧಾರಣ ಸಮಾದಿ[ಯೆಂಬ], ಎರಡು ಯೋಗ [ವುಂಟು],
ಅಲ್ಲಿ ಅಳಿದು ಕೂಡುವುದೊಂದು ಯೋಗ,
ಅಳಿಯದೆ ಕೂಡುವುದೊಂದು ಯೋಗ.
ಈ ಎರಡು ಯೋಗದೊಳಗೆ,
ಅಳಿಯದೆ ಕೂಡುವ ಯೋಗವು ಅರಿದು ಕಾಣಾ ಗುಹೇಶ್ವರಾ.
ವಚನ 0241
ಅಸ್ಥಿಗೆ ಚರ್ಮವಾಧಾರವಾಗಿ, ಪ್ರಾಣಕ್ಕೆ ಪ್ರಸಾದ ಮೃತ್ತಿಕೆಯಾಗಿ(ಗೆ?)
ಪ್ರಾಣ ಲಿಂಗವಲ್ಲೊ!
ಪ್ರಾಣಲಿಂಗವೆಂಬುದು ಕರಕಷ್ಟ ನೋಡಾ.
ಪ್ರಾಣಲಿಂಗವೆಂಬುದು ಕರನಾಚಿಕೆ ನೋಡಾ.
ಒಡೆದ ಮಡಕೆಗೆ ಒತ್ತಿ ಮಣ್ಣ ಮೆತ್ತಿದಡೆ,
ಅದು ತರಹರವಾಗಬಲ್ಲುದೆ ಗುಹೇಶ್ವರಾ?
ವಚನ 0242
ಅಹಂಕಾರವನೆ ಮರೆದು, ದೇಹಗುಣಂಗಳನೆ ಜರೆದು,
ಇಹ ಪರವು ತಾನೆಂದರಿದ ಕಾರಣ, ಸೋಹಂ ಭಾವ ಸ್ಥಿರವಾಯಿತ್ತು.
ಸಹಜದುದಯದ ನಿಲವಿಂಗೆ,
ಮಹಾಘನಲಿಂಗದ ಬೆಳಗು ಸ್ವಾಯತವಾದ ಕಾರಣ
ಗುಹೇಶ್ವರಾ ನಿಮ್ಮ ಶರಣನು ಉಪಮಾತೀತನು.
ವಚನ 0243
ಅಹುದಹುದು ಕಿಂಕುರ್ವಾಣ ! ಮಝ ಭಾಪು !
ಬಲ್ಲವರು ಬಲ್ಲೆವೆಂದೆಂಬರೆ ?
ಲಿಂಗವಂತರ ಮಹಿಮೆ ಈ ಹೀಂಗಿರಬೇಡಾ ?
ಗುಹೇಶ್ವರನ ಅಪ್ಯಾಯನವಡಗಿಸುವ ಅನುವನು
ನೀನಲ್ಲದೆ ಮಹೀತಳದೊಳು ಮತ್ತೆ ಬಲ್ಲವರಾರು ?
ಹೇಳಾ ಸಂಗನಬಸವಣ್ಣಾ.
ವಚನ 0244
ಅಹುದಹುದು ಬಸವಣ್ಣಾ ನೀನೆಂದುದನಲ್ಲೆನಬಹುದೆ ?
ಎನ್ನ ಮನದ ಕಪ್ಪ ಕಳೆದು ನಿಲರ್ೆಪನ ಮಾಡಿ
ಎನ್ನ ನಿರವಯಲಲ್ಲಿ ನಿಲಿಸಿ ಪ್ರತಿಷ್ಠೆಯ ಮಾಡುವಾತನು
ನೀನೆಂಬುದು ಸತ್ಯವಚನ ನೋಡಾ.
ಗುಹೇಶ್ವರನ ಮಹಾಗಣಂಗಳಿದ್ದಲ್ಲಿಗೆ ಹೋಗಿ
ತಿಳುಹಿಕೊಂಡು ಬಾರಾ ಸಂಗನಬಸವಣ್ಣಾ.
ವಚನ 0245
ಅಹುದಹುದು,
ಭಕ್ತಿಭಾವದ ಭಜನೆ ಎಂತಿರ್ದುದಂತೆ ಅಂತರಂಗದಲ್ಲಿ ಅರಿವು.
ಆ ಅಂತರಂಗದ ಅರಿವಿಂಗೆ ಆಚಾರವೆ ಕಾಯ.
ಆಚಾರವೆಂಬ ಕಾಯವಿಲ್ಲದಡೆ ಅರಿವಿಂಗೆ ಆಶ್ರಯವಿಲ್ಲ.
ಅರಿವು ಆಚಾರದಲ್ಲಿ ಸಮವೇದಿಸಿದ ಲಿಂಗೈಕ್ಯನ
ಕ್ರಿಯಾಬದ್ಧನೆಂದು ನುಡಿದಡೆ ಪಂಚಮಹಾಪಾತಕ.
ನಿನ್ನ ಅರಿವಿಂಗೆ ಆಚಾರವಾಗಿ, ಆಚಾರಕ್ಕೆ ಆಳಾಗಿ
ನಮ್ಮ ಗುಹೇಶ್ವರನು ನಿನ್ನ ಕೈವಶಕ್ಕೆ ಒಳಗಾದನು
ನಿನ್ನ ಸುಖಸಮಾದಿಯ ತೋರು, ಬಾರಾ ಸಿದ್ಧರಾಮಯ್ಯ
ವಚನ 0246
ಅಳಿಯ, ಬಳಿಯೆ ಸುಳಿವನಲ್ಲ ಪ್ರಳಯವಿಲ್ಲದ ವಿಜಯನು.
ಕುಳಾಕುಳದ ಆತ್ಮನ ಅಂಗದ ಸಂಗಿಯಲ್ಲ.
ಸುಳುಹಿನೊಳಗಣ ಸೂಕ್ಷ್ಮವ ತಿಳಿದು ನೋಡುವಡೆ
ಅಣಿಮಾದಿ ಗುಣರಹಿತನು, ಅಕಲ್ಪಿತಮಹಿಮನನೇನೆಂಬೆ ?
ನೆಳಲ ಕಳವಳದ ಬಳಿಯ ಭಾವರೂಪನಲ್ಲ !
ಬೆಳಗಿನೊಳಗಣ ಬೆಳಗು,
ಗುಹೇಶ್ವರಾ ನಿಮ್ಮ ಶರಣನ ನಿಲವು !
ವಚನ 0247
ಅಳಿವನಲ್ಲ ಉಳವನಲ್ಲ ಘನಕ್ಕೆ ಗಮನನಲ್ಲ ಮನಕ್ಕೆ ಸಾಧ್ಯನಲ್ಲ
ತನ್ನ ತಪ್ಪಿಸಿ ಇದಿರನೊಪ್ಪಿಸಿಹೆನೆಂಬ ಬಿನ್ನಭಾವಿಯಲ್ಲ,
ಗುಹೇಶ್ವರನ ಶರಣ.
ಅಜಗಣ್ಣನ ಅಂತಿಂತೆನಬಾರದು ಕೇಳಾ ತಾಯೆ.
ವಚನ 0248
ಅಳಿವರ ಉಳಿವರ ಸುಳಿವರ ನಿಲವ ನೋಡಿ ಕಂಡು
ಸೋಂಕಿಲ್ಲದ ರೂಪಿಲ್ಲದ ನಿಜವ ಬಯಸುತ್ತಿದ್ದೆ,
ಕಾಲಿಲ್ಲದೆ ನಡೆಯುತ್ತಿದ್ದೆ, ಕಣ್ಣಿಲ್ಲದೆ ನೋಡುತ್ತಿದ್ದೆ ಗುಹೇಶ್ವರಾ.
ವಚನ 0249
ಆ ಮಾತು, ಈ ಮಾತು, ಹೋ ಮಾತು-ಎಲ್ಲವೂ ನೆರೆದು ಹೋಯಿತ್ತಲ್ಲಾ
ಭಕ್ತಿ ನೀರಲ್ಲಿ ನೆರೆದು ಜಲವ ಕೂಡಿ ಹೋಯಿತ್ತಲ್ಲಾ.
ಸಾವನ್ನಕ್ಕ [ಸರಸ] ಉಂಟೇ ಗುಹೇಶ್ವರಾ?
ವಚನ 0250
ಆ ಮೂಲಮಂತ್ರಮೂರ್ತಿಯ ನಿಲುಕಡೆಯ ಕೇಳಿರಯ್ಯ ಶರಣಗಣಂಗಳೆ;
ಬ್ರಹ್ಮಾಂಡ ಮಧ್ಯದಲ್ಲಿ ಪಿಂಡಾಕೃತಿಯ ಧರಿಸಿ, ಆ ಪೂರ್ವಾಶ್ರಯ ಸ್ವರೂಪವಾದ
ಪಿಂಡಬ್ರಹ್ಮಾಂಡಗಳ ಜೀವನವರ್ತನ-
ದುರ್ಮಾರ್ಗ-ದುರ್ನಡತೆ-ದುರಾಚಾರ-ದುರ್ಗುಣಂಗಳ ತ್ಯಜಿಸಿ,
ಗುರು ಲಿಂಗ ಜಂಗಮ ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ,
ಶರಣ ಐಕ್ಯಗಣಂಗಳಲ್ಲಿ
ಒಪ್ಪುತಿರ್ಪರು ನೋಡಾ,-
ನಿರವಯ ಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು ಚೆನ್ನಬಸವಣ್ಣ.
ವಚನ 0251
ಆ ಶಿಷ್ಯನ ಕರಣದ ಮೇಲಣ ಪೂರ್ವಾಶ್ರಯವ ಕಳೆದೆವೆಂದು
ಹೂಸಿ ಹುಂಡನ ಮಾಡಿ ಗುರುವಿನ ಕೈ ಮುಟ್ಟೆ
ಹೋಯಿತ್ತೆಂಬ ಸಂದಣಿಯಲ್ಲಿ ಹೋಗದು ನಿಲ್ಲು.
ಪಂಚೇಂದ್ರಿಯದ ಮೇಲಣ ಇಂದ್ರಿಯಲಿಕ್ತವ ತೊಡೆದು,
ಲಿಂಗಲಿಕ್ತವ ಮಾಡುವಡೆ ಶಿಷ್ಯನ ಕೈಯಲಲ್ಲದೆ,
ಗುರವಿನ ಕೈಯಲಾಗದು ನಿಲ್ಲು.
ಪಂಚೇಂದ್ರಿಯ ಪ್ರಾಣ ಸಂಯೋಗದಲ್ಲಿ ಭವಿಗೆ ಮಾಡಿದ ಬೋನವನು
ಭಕ್ತನ ಕಾಣಲೀಯದೆ ಮಾಡುವುದು ಸಯಿದಾನ.
ಲಿಂಗವಿಲ್ಲದ ಗುರು, ಗುರುವಿಲ್ಲದ ಶಿಷ್ಯ,
ಒಂದಕ್ಕೊಂದಿಲ್ಲದ ಗುಹೇಶ್ವರ ನಿಮ್ಮ ಶರಣನ ನಿಲವ
ಚೆನ್ನಬಸವಣ್ಣ ಬಲ್ಲನು.
ವಚನ 0252
ಆಕಾರ ನಿರಾಕಾರವೆಂಬೆರಡೂ ಸ್ವರೂಪಂಗಳು ;
ಒಂದು ಆಹ್ವಾನ, ಒಂದು ವಿಸರ್ಜನ,
ಒಂದು ವ್ಯಾಕುಳ, ಒಂದು ನಿರಾಕುಳ.
ಉಭಯಕುಳರಹಿತ ಗುಹೇಶ್ವರಾ-ನಿಮ್ಮ ಶರಣ ನಿಶ್ವಿಂತನು.
ವಚನ 0253
ಆಕಾರನಿರಾಕಾರವೆಂಬೆರಡೂ ತಾನೆ;
ದಿಟ ದಿಟ ತಪ್ಪದು ಕೇಳಾ.
ಆಕಾರಕ್ಕೆ ಭಾವವೆ ಪ್ರಾಣ (ಪ್ರಮಾಣ?)
ನಿರಾಕಾರಕ್ಕೆ ಮಹಾಜ್ಞಾನವೆ ಪ್ರಾಣ (ಪ್ರಮಾಣ?)-
ಇಂತೀ ಉಭಯಕುಳಕ್ಕೆ ಇದು ಲಕ್ಷಣ ಕೇಳಾ.
ಎರಡರೊಳಗೆ ಆವ ಮುಖದಲ್ಲಿ ಇಪ್ಪಾತನು,
ಆ ಮುಖದಲ್ಲಿ ಶುದ್ಧನಾಗದನ್ನಕ್ಕರ
ಗುಹೇಶ್ವರಲಿಂಗಕ್ಕೆ ದೂರ ಕೇಳಾ ಸಂಗನಬಸವಣ್ಣಾ.
ವಚನ 0254
ಆಕಾಶ ಒಂದಂಡಜ, ಪೃಥ್ವಿ ಒಂದಂಡಜ (ಒಂದು ಪಿಂಡಜ?)
ಆ ಎರಡರ ಮಧ್ಯದಲ್ಲಿ ಪಕ್ಷಿ ಮರಿಗಳನಿಕ್ಕಿತ್ತ ಕಂಡೆ.
ತುಪ್ಪುಳು ಬಾರದು ಅದರೊಪ್ಪವನೇನೆಂಬೆನು ಗುರುವೆ ?
ಬಯಲನೆ ಉಡುಗಿತ್ತು ನಿರ್ವಯಲನೆ ಗೂಡು ಮಾಡಿತ್ತು,
ಉರಿಯನೆ ಉಂಡಿತ್ತು ಮಧುರಸವನೆ ಹಿಂಡಿತ್ತ ಕಂಡೆ.
ಪಕ್ಷಿಗೆ ಪಕ್ಕ ಬಂದಿತ್ತು ಗಗನಕ್ಕೆ ಹಾರಿತ್ತು !
ಹಾರಿ ಹೋಗುತ್ತ ನಮ್ಮ ಗುಹೇಶ್ವರಲಿಂಗವ ಕೂಡಿತ್ತ ಕಂಡೆ !
ವಚನ 0255
ಆಕಾಶದ ಬೀಜ ಅಗ್ನಿಯಲೊದಗಿ, ಶಾಖವಿಲ್ಲದೆ ಮೊಳೆತು ಪಲ್ಲವಿಸಿತ್ತು.
ಅರಿದೆಹೆನೆಂಬವನನಾರಡಿಗೊಂಡಿತ್ತು.
ಈ ನಿರ್ಣಯವನರಿಯದ ಮಾನವಾ,
ಗುಹೇಶ್ವರನೆಂಬುದು ಬಯಲ ವಿಕಾರ
ವಚನ 0256
ಆಕಾಶದಂತರಂಗದಲ್ಲಿ ತೋರುವ ಸಕಲ ವರ್ಣಂಗಳ ವರ್ಣಿಸುವರು,
ನಿರವಯದ ನಿಲವನೆತ್ತ ಬಲ್ಲರು ?
ಅರಿವನಾಶ್ರಯಿಸಿ ಮನವ ಮುಂದುಗೊಂಡು
ನೆನಹಿಂಗೆ ಗುರಿಯಾದವರೆಲ್ಲರೂ ನಿರವಯದ ನಿಲವನೆತ್ತ ಬಲ್ಲರು ?
ವರ್ಣನಾಮವಳಿಯದಾಗಿ.
ಆಕಾಶದಂತರಂಗ ಬಹಿರಂಗವೆನಲಿಲ್ಲದ ನಿರವಯವು !
ಗುಹೇಶ್ವರನೆನಲಿಲ್ಲದ ನಿಲವಿಗೆ ಸೊಲ್ಲು ಸಲ್ಲುವುದೆ ?
ವಚನ 0257
ಆಕಾಶದಲ್ಲಾಡುವ ಪಕ್ಷಿ ಆಕಾಶವ ನುಂಗಿ ಮಹದಾಕಾಶದಲ್ಲಾಡುತ್ತಿದ್ದಿತ್ತು.
ಆಡುವ ಪಕ್ಷಿಯೊಳಗಾದ ಆಕಾಶದ ಪಕ್ಷಿಗೆ ತೆರಪುಗೊಟ್ಟ ಮಹದಾಕಾಶವನೊಂದು
ಶಂಕೆಯಲ್ಲಿ ಷಡಾಂಗವಾ ಎಲೆಯುದುರಿದ ವೃಕ್ಷದಂತುಲುಹಡಗಿದ ಶರಣ,
ಗಗನದ ಪರಿ.
ಬೆಳಗಿನೊಳಗೆಂಬುದು ಮುನ್ನಿಲ್ಲವೋ ವಾಯುರೂಪಿನ ಪರಿಯಂತುಟಲ್ಲವೊ,
ಪ್ರಾಣಲಿಂಗ ಲಿಂಗಪ್ರಾಣವೆಂಬುದು ಮುಂದಿಲ್ಲವೊ.
ಯಥಾಲಿಂಗ ತಥಾ ಶರಣನೆಂಬುದು ಮುನ್ನಿಲ್ಲವೋ.
ನಾನೂ ಇಲ್ಲ ನೀನೂ ಇಲ್ಲ ಮತ್ತೇನೂ ಏನೂ ಇಲ್ಲವೋ
ಗುಹೇಶ್ವರನೆಂಬ ಲಿಂಗ ನಿಶ್ಚಿಂತ ನಿರ್ವಯಲವೋ
ವಚನ 0258
ಆಕಾಶವ ಕಪ್ಪೆ ನುಂಗಿದಡೆ ಆಗಳೆ ಹತ್ತಿತ್ತು ರಾಹು!
ನೋಡಿರೆ; ಅಪೂರ್ವ ಅತಿಶಯವ!
ಅಂಧಕ ಹಾವ ಹಿಡಿದ.-
ಇದು ಕಾರಣ; ಲೋಕಕ್ಕೆ ಅರುಹದೆ,
ನಾನು ಅರಿದೆನು ಗುಹೇಶ್ವರಾ.
ವಚನ 0259
ಆಕಾಶವ ನುಂಗಿದ ಸರ್ಪನ ಫಣಿಯ ಮಣಿಯೊಳಗಣ ಕಪ್ಪೆ,
ವಾಯುವನಲನ ಸಂಚವ ನುಂಗಿತ್ತದೇನೊ ?
ರೂಹಿಲ್ಲದ ತಲೆಗೆ, ಮೊಲೆ ಮೂರಾಯಿತ್ತ ಕಂಡೆ !
ಉಂಡಾಡುವ ಶಿಶುವಿನ ಕೈಯಲ್ಲಿ ಮಾಣಿಕದಾರತಿಯ ಕಂಡೆ !
ಕಾಯವಿಲ್ಲದ ಹೆಣನ ವಾಯುವಿಲ್ಲದೆ ಜವನೆಳೆದೊಯ್ದನೆಂಬ
ವಾಯಕ್ಕೆ ವಾಯವನೇನೆಂಬೆ ಗುಹೇಶ್ವರಾ !
ವಚನ 0260
ಆಕಾಶವ ಮೀರುವ ತರುಗಿರಿಗಳುಂಟೆ ?
ನಿರಾಕಾರವ ಮೀರುವ ಸಾಕಾರವುಂಟೆ ?
ಗುಹೇಶ್ವರಲಿಂಗವ ಮೀರುವ ಒಡೆತನವುಂಟೆ, ಸಂಗನಬಸವಣ್ಣಾ ?
ವಚನ 0261
ಆಕಾಶವನಡರುವಂಗೆ ಅಟ್ಟಗೋಲ ಹಂಗೇಕೊ ?
ಸಮುದ್ರವ ದಾಟುವಂಗೆ ಹರಿಗೋಲ ಹಂಗೇಕೊ ?
ಸೀಮೆಯ ಮೀರಿದ ನಿಸ್ಸೀಮಂಗೆ ಸೀಮೆಯ ಹಂಗೇಕೊ ?
ಗುಹೇಶ್ವರಲಿಂಗದಲ್ಲಿ ನಿಸ್ಸೀಮ ಸಿದ್ಧರಾಮಯ್ಯದೇವರಿಗೆ
ಲಿಂಗವೆಂದೇನು ಹೇಳಾ ಚನ್ನಬಸವಣ್ಣಾ ?
ವಚನ 0262
ಆಗ ಹುಟ್ಟಿ ಬೇಗ ಸಾವ ಕಾಯಗೊಂಡ ಮಾನವಾ,
ನೀ ದೇವರೆನಿಸಿಕೊಂಬುದೊಂದು ಆವುದಂತರ ಹೇಳಾ ?
ದೇವರು ಸಾವಡೆ, ದೇವರಿಗೂ ಸಾವರಿಗೂ ಆವುದಂತರ ಹೇಳಾ ?
ದೇವರಿಗೆ ದೇವಲೋಕ, ಮಾನವರಿಗೆ ಮತ್ರ್ಯಲೋಕ,
ಗುಹೇಶ್ವರ ಅಲ್ಲಯ್ಯಂಗೆ ಇನ್ನಾವ ಲೋಕವೂ ಇಲ್ಲ.
ವಚನ 0263
ಆಗದಂತೆ ಆದೆನು, ಜಗದ ಆಗುವ ಕಂಡು ಬಲ್ಲೆನಾಗಿ ಒಲ್ಲೆನು
ಜಗ ನಿಲ್ಲದು ಕಂಡಯ್ಯಾ.
ಮಾಡಿ ಮಾಡಿ ಕೆಡಿಸದಿರಾ, ನೀ ನಾಡಿಂಗೆ ಮರುಳಾಗದಿರಾ !
ಬೇಡು ಗುಹೇಶ್ವರಾ ನಿರಾಳವನೆನ್ನಲ್ಲಿ.
ವಚನ 0264
ಆಗಮಪುರುಷರಿರಾ,
ನಿಮ್ಮ ಆಗಮ ವಾಯವಾಗಿ ಹೋಯಿತ್ತಲ್ಲಾ.
ವಿದ್ಯಾಪುರುಷರಿರಾ ನಿಮ್ಮ ವಿದ್ಯೆ ಅವಿದ್ಯೆಯಾಗಿ ಹೋದಲ್ಲಿ,
ಬರುಮುಖರಾಗಿ ಇದ್ದಿರಲ್ಲಾ.
ವೇದಪುರುಷರಿರಾ ನಿಮ್ಮ ವೇದ ಹೊಲಬುದಪ್ಪಿ ಹೋದಲ್ಲಿ,
ವೇದವೇ ದೈವವೆಂದು ಕೆಟ್ಟಿರಲ್ಲಾ.
ಪುರಾಣಪುರುಷರಿರಾ ನಿಮ್ಮ ಪುರಾಣ ವಿಚಾರಭ್ರಷ್ಟವಾಗಿ ಹೋದಲ್ಲಿ,
ನೀವು ಒಡನೆ ಭ್ರಷ್ಟರಾಗಿ ಹೋದಿರಲ್ಲಾ.
ಶಾಸ್ತ್ರಪುರುಷರಿರಾ, ನಿಮ್ಮ ಶಾಸ್ತ್ರದ ಮಹಾಪಥ ಹೊನಲಲ್ಲಿ ಹೋದಲ್ಲಿ
ಭಕ್ತದೇಹಿಕದೇವನೆಂದರಿಯದೆ ಕೆಟ್ಟಿರಲ್ಲಾ.
`ಯತ್ರ ಶಿವಸ್ತತ್ರ ಮಾಹೇಶ್ವರ’ನೆಂದು ಹೇಳಿತ್ತು ಮುನ್ನ,
ಅಂತು ಭಕ್ತ, ನಿತ್ಯ ಸತ್ಯ ಸನ್ನಹಿತ ಗುಹೇಶ್ವರಾ-ನಿಮ್ಮ ಶರಣ.
ವಚನ 0265
ಆಗಮ್ಯ ಅಗೋಚರನೆನಿಸಿಕೊಂಡು, ಅವರಿವರ ಕೈಗೆ ಎಂತು ಬಂದೆ ?
ಉಗುರುಗಳೆಲ್ಲ ಸುತ್ತಿದವೆ? ಅಗ್ಘವಣಿ ಪತ್ರೆ ಅರತವೆ ಅಯ್ಯಾ ?
ಎನ್ನ ಕರಸ್ಥಲದೊಳಗಿರ್ದು ಎನ್ನೊಡನೆ ನುಡಿಯೆ,
ನಿನ್ನ ಹಲ್ಲ ಕಳೆದಡೆ ಒಡೆಯರುಂಟೆ ಗುಹೇಶ್ವರಾ?
ವಚನ 0266
ಆಗ್ಘವಣಿ ಪತ್ರೆ ಪುಷ್ಪ ಧೂಪ ದೀಪ ನಿವಾಳಿಯಲ್ಲಿ
ಪೂಜಿಸಿ ಪೂಜಿಸಿ ಬಳಲುತ್ತೈದಾರೆ.
ಏನೆಂದರಿಯರು ಎಂತೆಂದರಿಯರು.
ಜನ ಮರುಳೊ ಜಾತ್ರೆ ಮರುಳೊ ಎಂಬಂತೆ;
ಎಲ್ಲರೂ ಪೂಜಿಸಿ, ಏನನೂ ಕಾಣದೆ,
ಲಯವಾಗಿ ಹೋದರು ಗುಹೇಶ್ವರಾ.
ವಚನ 0267
ಆಚಾರ ಅನಾಚಾರವೆಂದಡೆ ಹೇಳಿಹೆ ಕೇಳಿರಣ್ಣಾ :
ಸರ್ವಪದಾರ್ಥಂಗಳ ಇದಿರಿಟ್ಟಲ್ಲಿ ಇಷ್ಟಲಿಂಗಕ್ಕೆ ಕೊಟ್ಟು
ಪ್ರಸಾದವೆಂದು ಕೊಂಡು ಸುಯಿಧಾನವಿಲ್ಲದೆ ಸೂಸಿದಲ್ಲಿ, ದೂಷಿಸಿ
ಪ್ರಸಾದದಲ್ಲಿ ಒಳ್ಳಿತು ಹೊಲ್ಲಹ ವಿಷ ಸಿಹಿ ಹುಳಿ ಸಪ್ಪೆಯೆಂದು
ಜರೆದು ಝಂಕಿಸಿ ಬಿಡುವ ಕರ್ಮಿಗಳು ನೀವು ಕೇಳಿರೊ-
ಜ್ಯೋತಿಯ ತಂದು ಬತ್ತಿಯ ಮುಟ್ಟಿಸಲು ಜ್ಯೋತಿಯಪ್ಪಂತೆ ಕಾಣಿರೊ
ಒಂದು ವೇಳೆ ಪ್ರಸಾದವೆಂದು ಕೊಂಡು, ಮತ್ತೊಂದು ವೇಳೆಯಲ್ಲಿ
ಎಂಜಲೆಂದು ನಿಂದಿಸುವ
ಪ್ರಸಾದದ್ರೋಹಿಗಳಿಗೆ ದೇವಭಕ್ತರೆನ್ನಲಾಗದು.
ಅವರಿಗೆ ಸೂರ್ಯಚಂದ್ರರುಳ್ಳನ್ನಕ್ಕ ನರಕ.
ಎಕ್ಕಲನರಕದಲ್ಲಿ ಮುಳುಗಾಡುತ್ತಿಪ್ಪವರ ಮುಖವನೆನಗೆ ತೋರದಿರಾ
ಗುಹೇಶ್ವರ.
ವಚನ 0268
ಆಚಾರ ಅನಾಚಾರವೆಂದು ಎರಡು ಪ್ರಕಾರವಾಗಿಪ್ಪುದು.
ಆಚಾರವೆಂದಡೆ ಹೇಳಿಹೆ ಕೇಳಿರೊ:
ಸರ್ವಪದಾರ್ಥಂಗಳು ಇದಿರಿದ್ದಲ್ಲಿ ಆ ಪದಾರ್ಥಂಗಳ ಶುದ್ಧವ ಮಾಡಿ
ಲಿಂಗಕ್ಕೆ ಸಮರ್ಪಿಸುವಲ್ಲಿ ಭೋಜ್ಯಭೋಜ್ಯಕ್ಕೆ
ಶಿವಮಂತ್ರಯುಕ್ತನಾಗಿ ಪ್ರಸಾದಗ್ರಾಹಕನಾಗಿರಬಲ್ಲಡೆ
ಆತನೆ ಪ್ರಸಾದಿ, ವೀರಮಾಹೇಶ್ವರನೆಂಬೆ.
ತಟ್ಟುವ ಮುಟ್ಟುವ ತಾಗು[ವ] ನಿರೋಧವೆಲ್ಲವನು
ಹಲ್ಲುಕಡ್ಡಿ ದರ್ಪಣ ಮೊದಲಾದ ಸರ್ವವ್ಯವಹಾರದಲ್ಲಿ
ಆವುದಾನೊಂದು ಭೋಗಿಸಲು, ಆವುದಾನೊಂದು ಕ್ರೀಡಿಸಲು
ಲಿಂಗವೆ ಪ್ರಾಣವಾಗಿರಬಲ್ಲಡೆ ಆ ಮಹಾಂತನೆ ಸರ್ವಾಚಾರಸಂಪನ್ನನೆಂಬೆ.
ಅಂತಪ್ಪ ಮಹಾತ್ಮನ ತ್ರಿವಿಧಮುಖವನರಿದು ಕರುಣಪೂರಿತನಾಗಿ
ಪ್ರಸಾದವ ಕೊಂಡಡೆ ಪಾವನವೆಂಬೆ
ಆತನ ಕೇವಲ ಮಹಾನುಭಾವ ಪರಮಜ್ಞಾನಪರಿಪೂರ್ಣನೆಂಬೆ,
ಆ ಮಹಾತ್ಮನೆ ತ್ರೈಜಗದೊಡೆಯನೆಂಬೆ ಗುಹೇಶ್ವರಾ.
ವಚನ 0269
ಆಚಾರ ಸನ್ನಹಿತವಾಗಿ ಬಂದಡೆ,
ಜಂಗಮ ಬೇರಲ್ಲದಿರ್ದಡೆ ಭೂತಪ್ರಾಣಿ ಎಂಬೆ.
ಅರ್ತಿಯಲ್ಲಿ ಲಿಂಗವೆ ಜಂಗಮವೆಂದರಿದು ಮಾಡುವಲ್ಲಿ,
ಭಕ್ತನಲ್ಲದಿರ್ದಡೆ ಫಲದಾಯಕನೆಂಬೆ.
ಸ್ಥಾವರ ಜಂಗಮ ಒಂದೆ ಎನಬಲ್ಲಡೆ, ಶರಣ ಸಂಬಂದಿ,
ಅಲ್ಲದಿರ್ದಡೆ ಪೂಜಕನೆಂಬೆ.
ಇಂತೀ ತ್ರಿವಿಧ ನಿರ್ಣಯದ ಸೋಂಕಿನ ಸುಖವ,
ಗುಹೇಶ್ವರ ಲಿಂಗದಲ್ಲಿ ಬಸವಣ್ಣನೊಬ್ಬನೆ ಬಲ್ಲನು
ವಚನ 0270
ಆಚಾರಲಿಂಗವಿಡಿದು ಗುರುಲಿಂಗವ ಕಾಣಬೇಕು.
ಗುರುಲಿಂಗವಿಡಿದು ಶಿವಲಿಂಗವ ಕಾಣಬೇಕು.
ಶಿವಲಿಂಗವಿಡಿದು ಜಂಗಮಲಿಂಗವ ಕಾಣಬೇಕು.
ಜಂಗಮಲಿಂಗವಿಡಿದು ಪ್ರಸಾದಲಿಂಗವ ಕಾಣಬೇಕು.
ಪ್ರಸಾದಲಿಂಗವಿಡಿದು ಮಹಾಲಿಂಗವ ಕಾಣಬೇಕು.
ಇಂತೀ ಷಡುಸ್ಥಲದ ಧಾತುವ ಸಂಬಂದಿಸಿ
ಒಂದು ಮಾಡಿಕೊಂಡಿಪ್ಪ ಈ ಕರಸ್ಥಲದ ಅನುವ
ಗುಹೇಶ್ವರನ ಶರಣ ಸಂಗನಬಸವಣ್ಣ ಬಲ್ಲ,
ಬೆಸಗೊಂಬ ಬಾರಾ ಸಿದ್ಧರಾಮಯ್ಯಾ
ವಚನ 0271
ಆಚಾರವಂಗಲೇಪವಾಗಿ, ಕಾಯಮುಕ್ತನು ನೀನು ನೋಡಯ್ಯಾ.
ಅರಿವು ಅಂತರಂಗದಲ್ಲಿ ಭರಿತವಾಗಿಪ್ಪುದಾಗಿ,
ಮನೋಮುಕ್ತನು ನೀನು ನೋಡಯ್ಯಾ.
ಅರ್ಪಿತ ಪರಿಣಾಮದಲ್ಲಿ ಅವಿರಳವಾಗಿಪ್ಪುದಾಗಿ
ಸರ್ವಾಂಗಲಿಂಗೈಕ್ಯನು ನೀನು ನೋಡಯ್ಯಾ.
ಮುಕ್ತನಲ್ಲೆಂಬ ಬಳಕೆಯ ಮಾತಂತಿರಲಿ,
ಬಯಲ ಭ್ರಮೆಯ ಕಳೆದು ಭವದ ಬಟ್ಟೆಯ ಹರಿದಿಪ್ಪುದ
ನಮ್ಮ ಗುಹೇಶ್ವರಲಿಂಗ ಬಲ್ಲನು
ನೀನು ಮರೆಯಾಗಿ ನುಡಿವರೆ ಸಂಗನಬಸವಣ್ಣಾ.
ವಚನ 0272
ಆಚಾರವರಿಯದೆ, ವಿಭವವಳಿಯದೆ,
ಕೋಪವಡಗದೆ ತಾಪ ಮುರಿಯದೆ,
ಬರಿದೆ ಭಕ್ತರಾದೆವೆಂದು ಬೆಬ್ಬನೆ ಬೆರೆಯುವ ಕೇಡಿಂಗೆ
ನಾನು ಮರುಗುವೆ ಕಾಣಾ ಗುಹೇಶ್ವರಾ.
ವಚನ 0273
ಆಚಾರವೆ ಲಿಂಗ, ಆ ಆಚಾದರಿವೆ ಜಂಗಮ
ಅಂಗವೆ ಲಿಂಗ, ಚೈತನ್ಯವೆ ಜಂಗಮ
ಆ ಜಂಗಮದ ಸೇವೆಯೆ ಲಿಂಗ, ಕೈಕೊಂಬುದೆ ಜಂಗಮ.
ನಮ್ಮ ಗುಹೇಶ್ವರನ ಶರಣರು ಮಚ್ಚುವಂತೆ,
ಮಡಿವಾಳನ ಕಾಯಕದಂತೆ, ನಿರೂಪಿಸಿದ
ಚನ್ನಬಸವಣ್ಣನ ಕರುಣದಲ್ಲಿ ಬದುಕಾ ಚಂದಯ್ಯಾ.
ವಚನ 0274
ಆಚಾರವೆ ಸ್ವರೂಪವಾದ ಕುರುಹಿನ ಅಂಗವಿಡಿದು
ಅಂಗ ಅನಂಗವೆಂಬವೆರಡನೂ ಹೊದ್ದದ ಮಹಿಮ
ನೀನು ನೋಡಾ, ಚೆನ್ನಬಸವಣ್ಣಾ !
ಅಂಗವೆ ಆಚಾರವಾಗಿ ಇರಬಲ್ಲೆ
ಆಚಾರವೆ ಅಂಗವಾಗಿ ಇರಬಲ್ಲೆಯಾಗಿ
ಅಂಗವಿಲ್ಲದ ಅಪ್ರತಿಮನು ನೀನು ನೋಡಾ.
ಆಚಾರವೆ ಆಯತ ಆಚಾರವೆ ಸ್ವಾಯತ
ಆಚಾರವೆ ಸನ್ನಿಹಿತ ಆಚಾರವೆ ಪ್ರಾಣವಾಗಿಪ್ಪೆಯಾಗಿ
ಎನ್ನ ಗುಹೇಶ್ವರಲಿಂಗದಲ್ಲಿ ನಿನ್ನ ಆಚಾರ ಬಿಕ್ಷವನಿಕ್ಕು
ಚೆನ್ನಬಸವಣ್ಣಾ.
ವಚನ 0275
ಆಡಂಬರದೊಳಗಾಡಂಬರವಿದೇನೊ?
ಹಾರಿತ್ತು ಬ್ರಹ್ಮನೋಲಗ, ಕೆದರಿತ್ತಿದೇನಯ್ಯಾ ?
`ಸಾರು ಸಾರು’ ಎನ್ನುತ್ತ ವಿಷ್ಣು ಅಜರ ನುಂಗಿ
ರುದ್ರಯೋನಿಯೊಳಡಗಿತ್ತಿದೇನೊ !
ಬೇರಿಲ್ಲದ ಮರ, ನೀರಿಲ್ಲದ ನೆಳಲೊಳಗೆ
ತೋರಿದ ಪ್ರತಿಬಿಂಬವ ನಾನೇನೆಂಬೆನು ಗುಹೇಶ್ವರಾ ?
ವಚನ 0276
ಆಡಾಡ ಬಂದ ಕೋಡಗ ಹಂದರವನೇರಿತ್ತಲ್ಲಾ !
ನೋಡಬಂದವರ ಕಣ್ಣೆಲ್ಲಾ ಒಡೆದವು.
ಬೆಣ್ಣೆಯ ತಿಂದವರ ಹಲ್ಲೆಲ್ಲಾ ಹೋದವು !
ಇದೇನು ಸೋಜಿಗ ಹೇಳಾ ಗುಹೇಶ್ವರಾ?
ವಚನ 0277
ಆಡಿಂಗೆ ದಾಯಾದ್ಯರಾದಿರಲ್ಲಾ.
ಕಾಡ ಗಿಡುವಿಂಗೆ ಮ್ಯತ್ಯುವಾದಿರಲ್ಲಾ.
ಅರಿವನರಿಯ ಹೇಳಿ,
ಶ್ರೀಗುರು ಕುರುಹ ಕೈಯಲ್ಲಿ ಕೊಟ್ಟಡೆ
ಅರಿವನೆ ಮರೆದು ಕುರುಹ ಪೂಜಿಸುವ
ಕುರಿಗಳ ನೋಡಾ ಗುಹೇಶ್ವರಾ
ವಚನ 0278
ಆಡು ಮಂದರಗಿರಿಯ ಕೋಡು ಬ್ರಹ್ಮಶಿಖಿಯ,
ಬೇಡಿತ್ತನೀವ ವರದಾನಿಯನೇನೆಂಬೆನು?
ಆಡುತ್ತಾಡುತ್ತ ಅನಲನುರಿದು ಎರಡೊಂದಾದ ಪರಿಯ ನೋಡಾ!
ನೋಡುತ್ತ ನೋಡುತ್ತ ಅನಲನಲ್ಲಿಯೆ ಅರತು ಕೂಡಿದ,
ಮಹಾಘನವನೇನೆಂಬೆನು ಗುಹೇಶ್ವರಾ ?
ವಚನ 0279
ಆಡುತಾಡುತ ಬಂದ ಕೋಡಗ,
ಜಪವ ಮಾಡುವ ತಪಸಿಯ ನುಂಗಿತ್ತಲ್ಲಾ !
ಬೇಡ ಬೇಡೆಂದಿತ್ತು, ಮುಂದಣ ಕೇರಿಯ ಮೊಲನೊಂದು !
ಮುಂದಣ ಮೊಲನ ಹಿಂದಣ ಕೋಡಗವ
ಕಂಬಳಿ ನುಂಗಿತ್ತು ಗುಹೇಶ್ವರಾ.
ವಚನ 0280
ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ
ಮಲತ್ರಯಂಗಳಳಿದು ನಿರ್ಮಲನಾದ ಶಿಷ್ಯ;-
ಕಾಯಜೀವದ ಭ್ರಾಂತುಸೂತಕ ಹಿಂಗಿ
ನಿಶ್ಯಂಕನಾದ ಗುರು-
ಈ ಉಭಯ ಭಾವದೊಳಗೆ
ಆವುದು ಮುಂದು ಆವುದು ಹಿಂದೆಂದರಿಯಬಪ್ಪುದು ?
ಕರಸ್ಥಲಕ್ಕೆ ಕಾರುಣ್ಯವ ಮಾಡಿದಡೆ ಮನಸ್ಥಲಕ್ಕೆ ಹಂಗಿಲ್ಲ.
ಮನಸ್ಥಲದಲ್ಲಿ ಸೆರಗೊಡ್ಡಿ ಬೇಡಿರ್ದಡೆ
ಕರಸ್ಥಲದ ಲಿಂಗ ಕೈಸಾರಿತ್ತು !
ಗುರುಸ್ಥಲದ ನಿಲವು ಪರಸ್ಥಲದಲಡಗಿದರೆ
ಭಾವ ಬಳಲಿತ್ತಿದೇನೊ (ಬೆರಗಾಯಿತ್ತು?) ಗುಹೇಶ್ವರಾ. ?
ವಚನ 0281
ಆತ್ಮನೆಂಬ ಹುತ್ತಿನೊಳಗೆ
ನಿದ್ರೆಯೆಂಬ ಕಾಳೋರಗನಟ್ಟಿ ಕಚ್ಚೆ,
ಅಂಜನಸಿದ್ಧರ [ಅಂಜನ]ಹೋಯಿತ್ತು.
ಘುಟಿಕಾಸಿದ್ಧರ ಘುಟಿಕೆಯುರುಳಿ ಬಿದ್ದಿತ್ತು.
ಮಂತ್ರಸಿದ್ಧರ ಮಂತ್ರ ಮರೆದು ಹೋದವು.
ಇದರ ವಿಷವ ಪರಿಹ [ರಿಸಿದವರ ಕಾ]ಣೆ.
ಈ ರಾಹುವಿನ ವಿಷದಿಂದ ಮೂರು ಲೋಕದವರೆಲ್ಲರೂ
ಮೂಛರ್ಾಗತವಾದುದ ಕಂಡು
ನಾನು ಪರಮಭಕುತಿಬಿಕ್ಷೆಯನುಂಡು
ಮಂಡೆ ಬೋಳಾದೆನು ಕಾಣಾ ಗುಹೇಶ್ವರಾ.
ವಚನ 0282
ಆತ್ಮಸಂಗವಾದವರ್ಗೆ ಬಹಿರ್ಭಾವವಿಲ್ಲ.
ಇಂದ್ರಿಯಂಗಳು ಲಿಂಗವಾದವರ್ಗೆ ವಿಷಯಸೂತಕವಿಲ್ಲ.
ಕರಣಂಗಳು ಲಿಂಗವಾದವರ್ಗೆ ಹಿಂದು ಮುಂದೆಂಬ ಸಂದೇಹವಿಲ್ಲ.
ಲಿಂಗಾಲಯವು ಮನವಾದವರ್ಗೆ ಇಹಪರವೆಂಬ ಸಂಶಯವಿಲ್ಲ.
ಲೋಕದಂತೆ ನಡೆವರು ಲೋಕದಂತೆ ನುಡಿವರು,
ಮನವು ಮಹಾಲಿಂಗದಲ್ಲಿ ಪರಿಣಾಮಿಗಳು !
ಅಂತಪ್ಪ ಮಹಾನುಭಾವಿಗಳ ಲೋಕದ ಪ್ರಪಂಚಿಗಳೆಂದಡೆ
ಮನೋಮಧ್ಯದಲ್ಲಿಪ್ಪ ಜ್ಯೋತಿರ್ಲಿಂಗವು ನಗದಿಪ್ಪನೆ ಗುಹೇಶ್ವರಾ ?
ವಚನ 0283
ಆದಿ ಅನಾದಿ ಎಂಬೆರಡರ ಮೂಲವನೆತ್ತಿ ತೋರಿದನಯ್ಯಾ ಬಸವಣ್ಣನು.
ಆದಿ ಲಿಂಗ ಅನಾದಿ ಜಂಗಮವೆಂಬ (ಶರಣನೆಂಬ?) ಭೇದವ,
ವಿವರಿಸಿ ತೋರಿದನಯ್ಯಾ ಬಸವಣ್ಣನು.
ಕಾಯದ ಜೀವದ ಸಂಬಂಧವ,
ಅಸಂಬಂಧವ ಮಾಡಿ ತೋರಿದನಯ್ಯಾ ಬಸವಣ್ಣನು.
ಎನ್ನ ಆದಿ ಅನಾದಿಯನು ಬಸವಣ್ಣನಿಂದರಿದು
ಗುಹೇಶ್ವರಲಿಂಗದಲ್ಲಿ ಸುಖಿಯಾದೆನು ಕಾಣಾ ಚನ್ನಬಸವಣ್ಣ.
ವಚನ 0284
ಆದಿ ಅನಾದಿ ಒಂದಾದಂದು, ಚಂದ್ರಸೂರ್ಯರೊಂದಾದಂದು,
ಧರೆ ಆಕಾಶ ಒಂದಾದಂದು;
ಗುಹೇಶ್ವರಲಿಂಗನು ನಿರಾಳನು.
ವಚನ 0285
ಆದಿ ಅನಾದಿ ಷಡುದೇವತೆಗಳಿಲ್ಲದಂದು,
ಒಬ್ಬ ಶರಣ ಷಡಕ್ಷರವನು ಷಡುಸ್ಥಲವನು
ಒಳಕೊಂಡು ಇರ್ದನಯ್ಯಾ.
ಆ ಶರಣನ ನೆನಹಿನ ಲೀಲೆಯಿಂದ
ಪರಶಿವನ ಮೂಲಜ್ಞಾನ ಪಂಚಶಕ್ತಿಗಳಾಗಿ
ತೋರಿ ಬೆರಸಿದ್ದವಯ್ಯಾ,
ಇದ್ದ ಕಾರಣ ಶರಣನ ಪರಮಶಾಂತಿ
ಭಕ್ತ್ಯಂಗನೆಯಾಗಿ ತೋರಿ ಬೆರಸಿದ್ದಳಯ್ಯ.
ಇದ್ದ ಕಾರಣ ಶರಣನ ಮಹಾಬೆಳಗು
ಷಡುಸ್ಥಲಬ್ರಹ್ಮಿಗಳಾಗಿದ್ದಿತಯ್ಯಾ.
ಇದ್ದ ಕಾರಣ ಶರಣನ ಪರಶಿವನ ಶಕ್ತಿಗಳ ಮಹಾಬೆಳಗು
ಷಡುಭಕ್ತ್ಯಂಗನೆಯಾಗಿ ಷಡುಸ್ಥಲ ಭಕ್ತರ ಬೆರಸಿದ್ದವಯ್ಯಾ.
ಇದ್ದ ಕಾರಣ ಶರಣನೊಳಡಗಿದ ಸುವಾಕುವಕ್ಷರ
ಲಿಂಗ ಪ್ರಣಮ ಮಂತ್ರ ಚಕ್ರ ಕಮಲ ಸತ್ಕ್ರೀ ಭಸಿತ ರುದ್ರಾಕ್ಷಿ
ಇಂತಿವೆಲ್ಲಾ ಇವರೊಳಗಡಗಿದ್ದವಯ್ಯಾ.
ಇದ್ದ ಕಾರಣ ಶರಣನಿವರು ಸಹಿತ ಕೋಟಾನುಕೋಟಿ ಕಾಲವು
ಪ್ರಮಥಗಣೇಶ್ವರನೆಂಬ ನಾಮವಾಗಿರುತ್ತಿರ್ದನಯ್ಯಾ,
ನಿಮ್ಮ ಶರಣ ಗುಹೇಶ್ವರಾ
ವಚನ 0286
ಆದಿ ಅನಾದಿ ಸಂಗದಿಂದಾದವನಲ್ಲ.
ಸಂಗಸುಖದೊಳಗಿರ್ದವನಲ್ಲ.
ಇಬ್ಬರ ಸಂಗದಿಂದಾದವನಲ್ಲ.
ರವಿ ಶಶಿಯ ಬೆಳಗಿನಿಂದ ಬೆಳೆದವನಲ್ಲ.
ನಾದ ಬಿಂದು ಕಳೆ ಹುಟ್ಟದ ಮುನ್ನ
ಅಲ್ಲಿಂದತ್ತತ್ತ ಗುಹೇಶ್ವರಾ ನಿಮ್ಮ ಶರಣ
ವಚನ 0287
ಆದಿ ಅನಾದಿ ಹದಿನಾಲ್ಕುಲೋಕ ಕಾಲ ಕಲ್ಪಿತ ಮಂತ್ರ ತಂತ್ರ
ಓದು, ನೇಮ, ಸಂಧ್ಯಾ ಸಮಾದಿ ಮೌಂಜಿ ಕರ್ಮ
ನೀರು ನೇಣು ಯಜ್ಞೋಪವೀತ ಹುಟ್ಟದಂದು
ಒಬ್ಬ ಶರಣ ಭಕ್ತಿಯ ಮಾಡುತ್ತಿಪ್ಪುದ ಕಂಡೆನಯ್ಯಾ.
ಆ ಶರಣನ ಭಕ್ತಿಯೆಂಬ ಚಿತ್ಪಿಂಡದೊಳಗೆ
ಎರಡುಸಾವಿರದೆಂಟುನೂರು ಕೋಟಿ ಯೋಜನದುದ್ದದೊಂದು
ಮಹಾಲೋಕದಿಂದತ್ತಲರಿಯದಿಪ್ಪ
ಷಡುಸಾದಾಖ್ಯನಾಯಕರ ಹೆಂಡಿರೆಲ್ಲಾ
ಮೊಲೆದೆಗೆದು (ಓಲೆದೆಗೆದು?) ಹೋಯಿತ್ತ ಕಂಡೆ ಗುಹೇಶ್ವರಾ.
ವಚನ 0288
ಆದಿ ಅನಾದಿಗಳಿಲ್ಲದಂದಿನ ಕೂಗು;
ನಾದ ಬಿಂದುಗಳಿಲ್ಲದಂದಿನ ಕೂಗ ಕಂಡು ಕೂಗಿದೆ !
ಇಡಾ ಪಿಂಗಳ ಸುಷುಮ್ನನಾಳಮಧ್ಯದ ಕೂಗ ಕಂಡು ಕೂಗಿದೆ.
ಗುಹೇಶ್ವರನೆಂಬ ತಲೆವೊಲನ ದಾಂಟಿ
ಅಲ್ಲಮ ಕೂಗಿದ ಕೂಗು
ವಚನ 0289
ಆದಿ ಅನಾದಿಯೆಂಬ (ಯೆಂಬುದ?) ಅಂತರಾತ್ಮನಲ್ಲಿ ತಿಳಿಯಲರಿಯದೆ
ಆದಿ ದೈವವೆಂದು ಬರಿಯ ಬಹಿರಂಗದ ಬಳಕೆಯನೆ ಬಳಸಿ,
ಅನ್ಯ ದೈವಂಗಳನಾರಾದಿಸಿ ಕೆಡುತ್ತಿಪ್ಪರು ನೋಡಾ.
ಅದಕೆ ತಪ್ಪೇನು, ಮಕ್ಕಳಿಗೆ ತಮ್ಮ ಮಾತೆಯೇ ದೈವ.
ಮಾತೆಗೆ ತನ್ನ ಪುರುಷನೆ ದೈವ, ಪುರುಷಂಗೆ ತನ್ನ ಪ್ರಭುವೆ ದೈವ.
ಪ್ರಭುವಿಗೆ ತನ್ನ ಪ್ರಧಾನನೆ ದೈವ, ಪ್ರಧಾನಂಗೆ ತನ್ನ ರಾಯನೆ ದೈವ.
ರಾಯಂಗೆ ತನ್ನ ಲಕ್ಷ್ಮಿಯೆ ದೈವ, ಲಕ್ಷ್ಮಿಗೆ ತನ್ನ ವಿಷ್ಣುವೆ ದೈವ.
ವಿಷ್ಣುವಿಗೆ ತನ್ನ ರುದ್ರನೆ ದೈವ, ಆ ರುದ್ರಂಗೆ ತನ್ನ ಈಶ್ವರನೆ ದೈವ.
ಈಶ್ವರಂಗೆ ತನ್ನ ಸದಾಶಿವನೆ ದೈವ, ಸದಾಶಿವಂಗೆ ತನ್ನ ಸರ್ವಗತ ಶಿವನೆ ದೈವ.
ಸರ್ವಗತ ಶಿವನಿಗೆ ಆಕಾಶಮಹಿಪತಿಯೆಂಬ ಮಹಾಲಿಂಗಕ್ಕೆ
ಆದಿ ದೇವರುಳ್ಳಡೆ ಹೇಳಿರೆ, ಇಲ್ಲದಿರ್ದಡೆ ಸುಮ್ಮನೆ ಇರಿರೆ.
ಇದು ಕಾರಣ ಷಡುದರುಶನದ ಚರಾಚರಾದಿಗಳೆಲ್ಲರೂ
ತಮ ತಮಗಿಷ್ಟ ಕಾಮ್ಯವ ಕೊಡುವುದಕ್ಕೆ
ವರವುಳ್ಳ ದೇವರೆಂದು ಬೆರವುತ್ತಿಹರು.
ಅದಕ್ಕೆ ತಪ್ಪೇನು ಅವರಿಗಪ್ಪಂಥ,
ವರವೀವುದಕ್ಕೆ ಸತ್ಯವುಳ್ಳವನಹುದು.
ಆದಡೇನು, ಪ್ರಾಣಕ್ಕೆ ಪರಿಣಾಮವ ಕೊಡಲರಿಯವು.
ಅವರ ಕೈಯಲ್ಲಿ ಆರಾದಿಸಿಕೊಂಬ ದೈವಂಗಳೆಲ್ಲವು.
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಮನವೆಂಬಾರರ ಹಂಗಿನಲ್ಲಿ ಸಿಕ್ಕಿ,
ವಿಭೂತಿಯನ್ನಿಟ್ಟು, ರುದ್ರಾಕ್ಷೆಯಂ ತೊಟ್ಟು
ಜಪತಪ ಹೋಮ ನೇಮಂಗಳ ಮಾಡಿ
ಮಾರಣ ಮೋಹನ ಸ್ತಂಭನ ಉಚ್ಚಾಟನ
ಅಂಜನ ಸಿದ್ಧಿ, ಘುಟಿಕಾ ಸಿದ್ಧಿ, ಮಂತ್ರಸಿದ್ಧಿ, ದೂರದೃಷ್ಟಿ
ದೂರ ಶ್ರವಣ, ಕಮಲದರ್ಶನ, ತ್ರಿಕಾಲಜ್ಞಾನ,
ಪರಕಾಯಪ್ರವೇಶವೆಂಬ
ಅಷ್ಟಮಹಾಸಿದ್ಧಿಗಳಂ ಲಿಂಗದಲ್ಲಿ ವರಂಬಡೆದು
ತಮ್ಮ ಬೇಡಿದವರಿಗೆ ಕೊಟ್ಟು ತಮ್ಮಿಂದ ಹಿರಿಯರಿಗೆ ನಮಸ್ಕರಿಸಿ,
ತಮ್ಮಿಂದ ಕಿರಿಯರಿಗೆ ದೇವರೆಂದು ಬೆರವುತ್ತಿಹರು.
ಕಿರಿದುದಿನ ಅವರ ದೇವರೆನ್ನಬಹುದೆ ?
ದೇಹಕೇಡಿಗಳ ಸತ್ಯರೆಂದೆನಬಹುದೆ ?
ಅಸತ್ಯದಲ್ಲಿ ಅಳಿದವರ ಭಕ್ತರೆಂದೆನಬಹುದೆ ?
ಬಹುರೂಪಿನ ಕಪಟಿಗಳ ನಿತ್ಯರೆನಬಹುದೆ ?
ದಿನದಿನಕ್ಕೆ ಸತ್ತು ಸತ್ತು ಹುಟ್ಟುವವರ.
ಅದೆಂತೆಂದಡೆ:
ಬ್ರಹ್ಮನ ಜಾವವೊಂದಕ್ಕೆ ಒಬ್ಬ ಇಂದ್ರನಳಿವ
ವಿಷ್ಣುವಿನ ಜಾವವೊಂದಕ್ಕೆ ಒಬ್ಬ ಬ್ರಹ್ಮನಳಿವ
ರುದ್ರನ ಜಾವವೊಂದಕ್ಕೆ ಒಬ್ಬ ವಿಷ್ಣುವಳಿವ
ಈಶ್ವರನ ಜಾವವೊಂದಕ್ಕೆ ಒಬ್ಬ ರುದ್ರನಳಿವ
ಸದಾಶಿವನ ಜಾವವೊಂದಕ್ಕೆ ಒಬ್ಬ ಈಶ್ವರನಳಿವ
ಸರ್ವಗತನ ಜಾವವೊಂದಕ್ಕೆ ಒಬ್ಬ ಸದಾಶಿವನಳಿವ
ಲಿಂಗ ಶರಣರ ಒಂದು ನಿಮಿಷಕ್ಕೆ ಒಬ್ಬ ಸರ್ವಗತನಳಿವ
ಲಿಂಗ ಶರಣರಿಗೆ ಅಳಿವುಳ್ಳಡೆ ಹೇಳಿರೆ ?
ಇಲ್ಲದಿರ್ದಡೆ ಸುಮ್ಮನಿರಿರೆ.
ಅಂತಪ್ಪ ಮಹಾಲಿಂಗವನು ಶರಣರನು ಅರಿಯದೆ
ಷಡುದೇವತೆಗಳು ಮುಖ್ಯವಾದ ಮನು ಮುನಿ ದೇವ ದಾನವ
ಮಾನವರೆಲ್ಲರೂ ಆರಿಸಿ ತೊಳಲಿ ಬಳಲುತ್ತಿಪ್ಪರು.
ಅದು ಹೇಗೆಂದಡೆ:
ಬ್ರಹ್ಮವೇದದಲ್ಲರಸುವನು.
ವಿಷ್ಣು ಪೂಜೆಯಲ್ಲರಸುವನು.
ರುದ್ರ ಜಪದಲ್ಲರಸುವನು.
ಈಶ್ವರ ನಿತ್ಯನೇಮದಲ್ಲರಸುವನು.
ಸದಾಶಿವನು ನಿತ್ಯ ಉಪಚಾರದಲ್ಲರಸುವನು.
ಸರ್ವಗತ ಶೂನ್ಯದಲ್ಲರಸುವನು.
ಗೌರಿ ತಪದಲ್ಲರಸುವಳು, ಗಂಗೆ ಉಗ್ರದಲ್ಲರಸುವಳು.
ಚಂದ್ರ ಸೂರ್ಯರು ಹರಿದರಸುವರು.
ಇಂದ್ರ ಮೊದಲಾದಷ್ಟದಿಕ್ಪಾಲಕರು ಆಗಮ್ಯದಲ್ಲರಸುವರು
ಸಪ್ತ ಮಾತೃಕೆಯರು `ಓಂ ಪಟು ಸ್ವಾಹಾ’ ಎಂಬ ಮಂತ್ರದಲ್ಲರಸುವರು.
ಸತ್ಯಋಷಿ ದದಿಚಿ ಗೌತಮ ವಶಿಷ್ಠ ವಾಲ್ಮೀಕಿ ಅಗಸ್ತ್ಯ ವಿಶ್ವಾಮಿತ್ರ
ಇವರು ಮೊದಲಾದ ಸಪ್ತಋಷಿಯರುಗಳೆಲ್ಲಾ
ತಪ, ಯೋಗ, ಆಗಮಂಗಳಲ್ಲಿ ಅರಸುವರು.
ಇಂತಿವರೆಲ್ಲರಿಗೆಯೂ ಸಿಕ್ಕಿಯೂ ಸಿಕ್ಕದ ಘನವು
ಶುಕ್ಲ ಶೋಣಿತವಿಲ್ಲದ ಕಾಮಿ, ಒಡಲಿಲ್ಲದ ರೂಪು,
ತಲೆಯಿಲ್ಲದ ಗಜ, ಬಾಲವಿಲ್ಲದ ಸಿಂಹ, ನಿದ್ರೆಯಿಲ್ಲದ ನಿರಾಳ.
ಇಂತೀ ಭೇದಮಂ ಭೇದಿಸಿ ನೋಡಬಲ್ಲಡೆ ಕಣ್ಣ ಮೇಲೆ ಕಣ್ಣುಂಟು.
ಮತ್ತಾ ಕಣ್ಣ ತೆರೆದು
ಅಮೃತಕಾಯದೃಷ್ಟಿಯಲ್ಲಿ ನೋಡಿದಡೊಂದೂಯಿಲ್ಲ.
ನಮ್ಮ ಗುಹೇಶ್ವರ ಲಿಂಗವು ಬಚ್ಚಬರಿಯ ಬಯಲು
ನಿಶ್ಚಿಂತ ನಿರಾಳನು
ವಚನ 0290
ಆದಿ ಆಧಾರವಿಲ್ಲದಂದು, ಹಮ್ಮುಬಿಮ್ಮುಗಳಿಲ್ಲದಂದು
ಸುರಾಳನಿರಾಳವಿಲ್ಲದಂದು, ಸಚರಾಚರವೆಲ್ಲ ರಚನೆಗೆ ಬಾರದಂದು,
ಗುಹೇಶ್ವರಾ ನಿಮ್ಮ ಶರಣನುದಯಿಸಿದನಂದು.
ವಚನ 0291
ಆದಿ ಇಲ್ಲದಿರ್ದಡೆ ಲಿಂಗಪ್ರಸಾದಿಯೆಂಬೆನು,
ವ್ಯಾದಿ ಇಲ್ಲದಿರ್ದಡೆ ಜಂಗಮಪ್ರಸಾದಿಯೆಂಬೆನು.
ಲಾಕಿಕವ ಸೋಂಕದಿರ್ದಡೆ ಸಮಯಪ್ರಸಾದಿಯೆಂಬೆನು.
-ಇಂತೀ ತ್ರಿವಿಧ ಪ್ರಸಾದಸಂಬಂದಿಯಾದಡೆ
ಆತನ ಅಚ್ಚಪ್ರಸಾದಿಯೆಂಬೆನು ಕಾಣಾ-ಗುಹೇಶ್ವರಾ
ವಚನ 0292
ಆದಿ ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ
ಪ್ರಸಾದಸ್ಥಲ ಪಾದೋದಕಸ್ಥಲಂಗಳನಾರು ಬಲ್ಲರಯ್ಯಾ ?
ಆದಿಯ ತೋರಿದ, ಅನಾದಿಯನರುಪಿದ,
ನಾದ ಬಿಂದು ಕಳೆಗಳ ಭೇದಮಂ ಭೇದಿಸಿ ತೋರಿದ,
ಹುಟ್ಟುವುದ ಮುಟ್ಟದೆ ತೋರಿದ
ಹುಟ್ಟದೆ ಇದ್ದುದ ಮುಟ್ಟಿ ತೋರಿದ.
ಎನ್ನ ಅಂತರಂಗವನನುಮಾಡಿ ನಿಜಲಿಂಗವ ನೆಲೆಗೊಳಿಸಿದ.
ಗುಹೇಶ್ವರನ ಶರಣ ಸಂಗನಬಸವಣ್ಣನಿಂದ
ಸಕಲಸನುಮತವನರಿದೆನಯ್ಯಾ.
ವಚನ 0293
ಆದಿ ಜಂಗಮ ಅನಾದಿ ಭಕ್ತನೆಂಬುದನಾರು ಬಲ್ಲರು
ಹೇಳಾ ಬಸವಣ್ಣಾ ನೀನಲ್ಲದೆ ?
ನಿತ್ಯನಿರಾಕಾರ ಘನವು ಶಕ್ತಿಯಿಲ್ಲದೆ ಇದ್ದಡೆ,
ಆಗಲೆ ಬಯಲಾದಹುದೆಂದು,
ನೀನು ಘನಚೈತನ್ಯವೆಂಬ ಕಾಯವ ಧರಿಸಿದಡೆ,
ಆ ಬಯಲು ಪರಬ್ರಹ್ಮವೆಂಬ ನಾಮವನೆಯ್ದಿತ್ತು.
ಆ ಮಹಾಘನವು ತನ್ನ ವಿನೋದದಿಂದ ಸಾಕಾರವನೆಯ್ದಿದಡೆ,
[ನೀನು] ಧರ್ಮವೆಂಬ ಕಾಯವ ಧರಿಸಿ, ಆ ಮೂರ್ತಿಗೆ ಆಧಾರವಾದೆಯಾಗಿ
ಜಗದ ಕರ್ತ ಶಿವನೆಂಬ ನಾಮವಾಯಿತ್ತಲ್ಲಾ ಬಸವಣ್ಣಾ.
ಜಂಗಮವೆ ಲಿಂಗವೆಂದು ನೀನು ಭಾವಿಸಲಾಗಿ,
ನಿನ್ನ ಸನ್ನಿದಿಯಿಂದ ಪ್ರತಿನಿದಿಯಾಯಿತ್ತು ನೋಡಾ ಬಸವಣ್ಣಾ.
ಲಿಂಗವ ಹಿಡಿದು ನೀನು ಪೂಜಿಸಲಾಗಿ,
ಲಿಂಗವು ಹೆಸರುವಡೆಯಿತ್ತು ನೋಡಾ ಬಸವಣ್ಣಾ.
ಪ್ರಸಾದವನು ನೀನು ಕೊಂಡು ಪಥವ ತೋರಿದೆಯಾಗಿ
ಪ್ರಸಾದವು ಹೆಸರಾಯಿತ್ತು ನೋಡಾ ಬಸವಣ್ಣಾ.
ಇದು ಕಾರಣ ನೀನೆ ಅನಾದಿ ಭಕ್ತ, ನಾನೆ ಅನಾದಿಯಿಂದತ್ತತ್ತ !
ನೀನು ಮಾಡಲಾಗಿ ಆನಾದೆನೆಂಬುದ
ನಮ್ಮ ಗುಹೇಶ್ವರಲಿಂಗವು ಬಲ್ಲ ಕಾಣಾ ಸಂಗನಬಸವಣ್ಣ.
ವಚನ 0294
ಆದಿ ತ್ರೈಯುಗದಲ್ಲಿ ದೇವ ದಾನವ ಮಾನವರು
ಮಾಯಾಮೋಹದಲ್ಲಿ ಹುಟ್ಟಿ ತೊಳಲಿ ಬಳಲುತ್ತೈದಾರೆ !
ಆವ ವೇಷವಾದಡೇನು? ತಾಮಸಧಾರಿಗಳು,
ಕಾಮ ಕ್ರೋಧ ಲೋಭ ಬಿಡದ ನಾನಾ ವಿಧದ ಡಂಬಕರು !
ಹೂಳದ ಹುಣ್ಣಿಂಗೆ ಆರಯ್ಯಾ ಮದ್ದನಿಕ್ಕುವರು ?
ಇದೇನು ಗುಹೇಶ್ವರ? ಸೋರೆಯ ಬಣ್ಣದ ಹಿರಿಯರು !
ವಚನ 0295
ಆದಿ ಸ್ವಯಂಭುವಿಲ್ಲದ ಮುನ್ನ, ಸಂಗನಿಸ್ಸಂಗವಿಲ್ಲದ ಮುನ್ನ,
ನಕ್ಷತ್ರಗ್ರಹಂಗಳಿಲ್ಲದ ಮುನ್ನ, ಯೋಗ ಕರಣಂಗಳಿಲ್ಲದ ಮುನ್ನ,
ಖೇಚರ ಭೂಚರರಿಲ್ಲದ ಮುನ್ನ, ಆರಾರೂ ಇಲ್ಲದ ಮುನ್ನ,
ಆಕಾಶ ಮಾರುತರಿಲ್ಲದ ಮುನ್ನ, ಅಂಬುದಿ ಕಮಠರಿಲ್ಲದ ಮುನ್ನ-
ಹರಿಬ್ರಹ್ಮಾದಿಗಳಾರ ನಿಲವಿಲ್ಲದ ಮುನ್ನ
ಹಿಮಕರದಿನಕರ ಸುಳುಹಿಲ್ಲದ ಮುನ್ನ-
ಹಿಂದಿಲ್ಲ ಮುಂದಿಲ್ಲ ಒಂದೂ ಇಲ್ಲದ ಮುನ್ನ,
ಗುಹೇಶ್ವರನಿರ್ದ ತನ್ನ ತಾನರಿಯದಂತೆ
ವಚನ 0296
ಆದಿಗೆ ಅನಾದಿಗೆ ಭೇದವುಂಟೆ ?
ಆದಿ ಲಿಂಗ ಅನಾದಿ ಶರಣನೆಂಬುದು,
ತನ್ನಿಂದ ತಾ ಮಾಡಲಾಯಿತ್ತು.
ಧರೆಯಾಕಾಶ ಭುವನ ಭವನಂಗಳು ಹುಟ್ಟದ ಮುನ್ನ
ಅನಾದಿ ಪರಶಿವನು ತಾನೆ ತನ್ನ ಲೀಲೆಗೆ ಸಾಕಾರವ ಧರಿಸಿದಡೆ
ಆ ಸಾಕಾರವೆ ಈ ಸಾಕಾರವಾಯಿತ್ತು.
ಎನ್ನ ಸಾಕಾರದ ಆದಿಯನೂ, ಎನ್ನ ನಿರಾಕಾರದ ಆದಿಯನೂ
ಬಸವಣ್ಣ ಬಲ್ಲವನಾಗಿ,
ಗುಹೇಶ್ವರಲಿಂಗದ ಘನವು ಬಸವಣ್ಣನಿಂದೆನಗೆ ಸಾಧ್ಯವಾಯಿತ್ತು
ಕಾಣಾ ಚನ್ನಬಸವಣ್ಣಾ !
ವಚನ 0297
ಆದಿತ್ಯವಾರ ಸೋಮವಾರ ಮಂಗಳವಾರವೆಂದು,
ಏಳು ವಾರವ ಹೆಸರಿಟ್ಟು ನುಡಿವರು, ನಾವಿದನರಿಯೆವು.
ಗುಹೇಶ್ವರನ ಶರಣ ಚೆನ್ನಬಸವಣ್ಣಂಗೆ ಮೂರೇ ವಾರ
ವಚನ 0298
ಆದಿಪುರ ವೇದಪುರ ಹಿಮಪುರ ಖಂಡಿತ ಅಖಂಡಿತ-
ಶಿವಶಿವಾ ಗಗನವ ಮನ ನುಂಗಿತ್ತು.
ಆದಿ ವೇದವ ನುಂಗಿ, ವೇದ ಸ್ವಯಂಭುವ ನುಂಗಿ,
ಕಾಲ ಕರ್ಮ ಹಿಂಗಿತ್ತು-ಗುಹೇಶ್ವರಾ ನಿಮ್ಮ ಶರಣಂಗೆ
ವಚನ 0299
ಆದಿಯ ಅಂಗಮುಖಕ್ಕರ್ಪಿಸಿ, ಅನಾದಿಯ ಪ್ರಾಣ ಮುಖಕ್ಕರ್ಪಿಸಿ,
ಮನವೆಂಬುದ ಅರಿವಿನ ಮುಖಕ್ಕರ್ಪಿಸಿ,
ತಾನೆಂಬುದ ನಿರಾಕಾರದಲ್ಲಿ ನಿಲಿಸಿ,
ಪರಿಣಾಮಪ್ರಸಾದದಲ್ಲಿ ತದ್ಗತವಾಗಿ,
ಪ್ರಸಾದವೆ ಪ್ರಾಣವಾಗಿ ಪ್ರಸಾದವೆ ಕಾಯವಾಗಿ,
ಪ್ರಸಾದವೆ ಜ್ಞಾನವಾಗಿ ಪ್ರಸಾದವೆ ಧ್ಯಾನವಾಗಿ,
ಪ್ರಸಾದವೆ ಲಿಂಗಭೋಗೋಪಭಾಗವಾಗಿಪ್ಪ,
ನಮ್ಮ ಗುಹೇಶ್ವರಲಿಂಗದಲ್ಲಿ ನಿಜಪ್ರಸಾದಿ
ಮರುಳಶಂಕರದೇವರ ನಿಲವ ನೋಡಾ ಸಂಗನಬಸವಣ್ಣಾ.
ವಚನ 0300
ಆದಿಯ ಕಂಡೆ, ಅನಾದಿಯ ಕಂಡೆ
ಘನವ ಕಂಡೆ, ಮನವ ಕಂಡೆ, ಅನುವ ಕಂಡೆ
ಆಯತ ಸ್ವಾಯತ ಸನ್ನಹಿತವ ಕಂಡೆ.
ಗುಹೇಶ್ವರಲಿಂಗದಲ್ಲಿ ಬಸವಣ್ಣನ ಕೃಪೆಯಿಂದ,
ನಿನ್ನ ಕಂಡೆ ಕಾಣಾ ಮಡಿವಾಳ ಮಾಚಯ್ಯಾ.
ವಚನ 0301
ಆದಿಯ ತೋರಿದೆ, ಅನಾದಿಯನರುಹಿದೆ.
ಇಹವ ಕೆಡಿಸಿದೆ ಪರವ ನಿಲಿಸಿದೆ
ಕಾಯಪ್ರಸಾದ ಭಾವಪ್ರಸಾದ ಜ್ಞಾನಪ್ರಸಾದವನು
ಏಕವ ಮಾಡಿ ತೋರಿದೆ.
ಪರವನೊಳಕೊಂಡು ಪರಿಣಾಮದಲ್ಲಿರಿಸಿದೆ.
ಗುಹೇಶ್ವರನ ಶರಣ ಸಂಗನಬಸವಣ್ಣನ ಪೂರ್ವಾಪರವ ಹೇಳಿ
ಎನ್ನನುಳಿಹಿಕೊಳ್ಳಾ ಚನ್ನಬಸವಣಾ
ವಚನ 0302
ಆದಿಯ ಮುಟ್ಟಿಬಂದ ಶರಣಂಗೆ ಬದ್ಧ(ಬಂಧ?)ವಿಲ್ಲಯ್ಯಾ.
ಜನ್ಮಕೋಟಿ ಕ್ರೂರಕರ್ಮವ ಮಾಡಿದವಂಗೆ, ಸೋಂಕಿನ ಸೊಬಗ
ಹೇಳಲಿ(ಲೇ?)ಕೆ ?
ಅಂಗದಲ್ಲಿ ಲಿಂಗ ಸೋಂಕಿದ ಶರಣಂಗೆ,
ಕಾಯದೊಳಗುಳ್ಳ ಕರಣಂಗಳು ಕಳಾಕುಳ ಕಳಾಭೇದವಯ್ಯಾ
ಸುಖದ ಸೋಂಕಿನ ಸೊಬಗ, ಇನ್ನಾರಿಗೆಯೂ ಹೇಳಲಿಲ್ಲ ಗುಹೇಶ್ವರ.
ವಚನ 0303
ಆದಿಯ ಲಿಂಗ ನಿನ್ನಿಂದ ಎನಗಾಯಿತ್ತು.
ಅನಾದಿಯ ಜ್ಞಾನ ನಿನ್ನ ನೆನೆದಡೆ ಎನಗಾಯಿತ್ತು.
ನಿನ್ನ ಕೃಪೆಯಿಂದ ಪ್ರಾಣ ಲಿಂಗವೆಂದರಿದೆನೆಂಬುದ,
ನಿಮ್ಮ ಪ್ರಮಥರೆ ಬಲ್ಲರು.
ಗುಹೇಶ್ವರ ಸಾಕ್ಷಿಯಾಗಿ, ಸಂಗನಬಸವಣ್ಣ
ನಿನ್ನ ಪ್ರಸಾದದ ಶಿಶು ನಾನು ನೋಡಯ್ಯಾ.
ವಚನ 0304
ಆದಿಯ ಲಿಂಗವ ತೋರಿದ ಅನಿಮಿಷನ ಕಂಡೆನಯ್ಯಾ ಇಂದು.
ಕೃತಯುಗದ ಸ್ಕಂದನೆಂಬ ಗಣೇಶ್ವರನ ಕಂಡೆನಯ್ಯಾ ಇಂದು.
ತ್ರೇತಾಯುಗದ ನೀಲಲೋಹಿತನೆಂಬ ಗಣೇಶ್ವರನ ಕಂಡೆನಯ್ಯಾ ಇಂದು.
ದ್ವಾಪರಯುಗದ ವೃಷಭನೆಂಬ ಗಣೇಶ್ವರನ ಕಂಡೆನಯ್ಯಾ ಇಂದು.
ಕಲಿಯುಗದಲ್ಲಿ ಅನಿಮಿಷಬಸವನೆಂಬ ಗಣೇಶ್ವರನ ಕಂಡೆನಯ್ಯಾ ಇಂದು.
ಎನ್ನ ಕಂಡವರನೂ, ನಿನ್ನ ಕಂಡವರನೂ,
ಇಂದು ಕಂಡೆ ಕಾಣಾ ಗುಹೇಶ್ವರಾ
ವಚನ 0305
ಆದಿಯ ಲಿಂಗವ ಮೇದಿನಿಗೆ ತಂದು,
ಮರ್ತ್ಯಲೋಕದಲ್ಲಿ ಮಹಾಮನೆಯ ಕಟ್ಟಿದನಯ್ಯಾ ಸಂಗನಬಸವಣ್ಣನು.
ಆ ಮನೆಯ ನೋಡಲೆಂದು ಹೋದಡೆ,
ಆ ಗೃಹ ಹೋಗದ ಮುನ್ನವೆ ಎನ್ನ ನುಂಗಿತ್ತಯ್ಯಾ !
ಅದಕ್ಕೆ ಕಂಭ ಒಂದು, ತೊಲೆ ಆರು, ಜಂತೆವಲಗೆ ಮೂವತ್ತಾರು
ಧರೆಯಾಕಾಶವ ಹೊದ್ದದ ಕೆಸರುಗಲ್ಲು
ಒಂಬತ್ತು ಬಾಗಿಲು, ಬಿಯ್ಯಗವಿಕ್ಕಿಹವು.
ಬೇರೊಂದು ಬಾಗಿಲು ಉರಿಯನುಗುಳುತಿರ್ಪುದು.
ಮುತ್ತಿನ ಕಂಭದ ಮೇಲುಕಟ್ಟಿನ ಮೇಲೆ ಮಾಣಿಕ್ಯದ ಶಿಖರಿ !
ಆ ಶಿಖರಿಯ ತುದಿಯಲ್ಲಿ ಬಿಳಿಯ ಹೊಂಗಳಸವಿಪ್ಪುದು.
ಅದು ಕಾಬವರಿಗೆ ಕಾಣಬಾರದು.
ಕಾಣಬಾರದವರಿಗೆ ಕಾಣಬಪ್ಪುದು.
ಅಲ್ಲಿ ಹತ್ತು ಮಂದಿ ಪರಿಚಾರಕರು ಎಡೆಯಾಡುತಿಪ್ಪರು.
ಇಬ್ಬರು ದಡಿಕಾರರು ಬಾಗಿಲ ಕಾಯ್ದಿಪ್ಪರು.
ಒಬ್ಬಾಕೆ ಎಡೆಯಾಡುತ್ತಿಪ್ಪಳು.
ಒಬ್ಬಾಕೆ ಲಿಂಗಾರ್ಚನೆಗೆ ನೀಡುತ್ತಿಪ್ಪಳು.
ಒಬ್ಬಾಕೆ ಸುಯಿಧಾನಂಗಳೆಲ್ಲವನು ಶೋದಿಸಿ ತಂದುಕೊಡುತ್ತಿಪ್ಪಳು.
ಒಬ್ಬಾಕೆ ಉರಿಯಿಲ್ಲದಗ್ನಿಯಲಿ ಪಾಕವ ಮಾಡುತ್ತಿಪ್ಪಳು.
ಒಬ್ಬಾಕೆ ಲಿಂಗಜಂಗಮಕ್ಕೆ ಮಾಡಿ, ನೀಡಿ, ಊಡಿ, ಉಣಿಸಿ
ತೃಪ್ತಿಯ ಮಾಡುತ್ತಿಪ್ಪಳು-
ಒಂದಡ್ಡಣಿಗೆಯ ಮೇಲೆ,
ಐದು ಅಗಲೊಳಗೆ ಇಟ್ಟ ಬೋನವನು ಒಬ್ಬನುಂಡಡೆ,
ಪ್ರಮಥಗಣಂಗಳೆಲ್ಲರೂ ಆತನ ಒಕ್ಕುದ ಕೊಳಲೆಂದು ಬಂದು,
ಆ ಮನೆಯ ಹೊಕ್ಕು ನಿಶ್ಚಿಂತನಿವಾಸಿಗಳಾದರು.
ಗುಹೇಶ್ವರನ ಶರಣ ಸಂಗನಬಸವಣ್ಣನ ಮಹಾಮನೆಯ ಕಂಡು
ಧನ್ಯನಾದೆನು ಕಾಣಾ ಸಿದ್ಧರಾಮಯ್ಯಾ.
ವಚನ 0306
ಆದಿಯ ಶರಣನೊಬ್ಬನ ಮದುವೆಯ ಮಾಡಲು,
ಯುಗ ಜುಗದವರೆಲ್ಲಾ ನಿಬ್ಬಣ ಹೋದರು,
ಹೋದ ನಿಬ್ಬಣಿಗರು ಮರಳರು !
ಮದುವಣಿಗನ ಸುದ್ದಿಯನರಿಯಲು ಬಾರದು.
ಹಂದರವಳಿಯದು, ಹಸೆ ಮುನ್ನಲುಡುಗದು !
ಬಂದಬಂದವರೆಲ್ಲಾ ಮಿಂದುಂಡು ಹೋದರು.
[ಇದರಂತುವನರಿಯದೆ ಜಗವೆಲ್ಲ ಬರಡಾಯಿತ್ತು]
ಇದರಂತುವನರಿದಡೆ-
ಗುಹೇಶ್ವರಶಬ್ದವನೊಳಕೊಂಡ ಮಹಂತ ಬಯಲು !
ವಚನ 0307
ಆದಿಯನರಿಯದೆ,
ಅನಾದಿಯಿಂದತ್ತತ್ತ ತಾನಾರೆಂಬುದ ವಿಚಾರಿಸಿ ತಿಳಿದು ನೋಡದೆ;
ಮಾಡಿದಡೆ ಫಲವೇನಯ್ಯಾ ಬಸವಯ್ಯಾ ?
ಸಾವನ್ನಕ್ಕ ಸಾಧನೆಯ ಮಾಡಿದಡೆ,
ಕಾದುವ ದಿನ ಇನ್ನಾವುದಯ್ಯಾ ಬಸವಯ್ಯಾ ?
ಬಾಳುವನ್ನಕ್ಕ ಭಜನೆಯ ಬಾಡಿದಡೆ
ತಾನಹ ದಿನ ಇನ್ನಾವುದಯ್ಯಾ ಬಸವಯ್ಯಾ ?-
ಇದು ಕಾರಣ,
ಮರ್ತ್ಯಲೋಕದ ಭಕ್ತರುಗಳೆಲ್ಲರು, ತಥ್ಯವನರಿಯದೆ,
ಮಿಥ್ಯವನೆ ಹಿಡಿದು ಮಿಥ್ಯವನೆ ಪೂಜಿಸಿ ವ್ಯರ್ಥರಾಗಿ ಹೋದರು,
ತಮ್ಮ ತಾವರಿಯದೆ ಕೆಟ್ಟರು.
ತಲೆಯ ಕೊಯಿದು ದೇಹವ ಕಡಿದು, ಕಣ್ಣ ಕಳೆದು
ಹೊಟ್ಟೆಯ ಸೀಳಿ, ಮಗನ ಕೊಂದು ಬಾಣಸವ ಮಾಡಿ,
ವಾದಿಗೆ ಪುರಂಗಳನೊಯ್ದು,
ಕಾಯವೆರಸಿ ಕೈಲಾಸಕ್ಕೆ ಹೋದವರೆಲ್ಲರು ಭಕ್ತರಪ್ಪರೆ ?
ಅವರಿಗೆ ಶಿವಪಥವು ಸಾಧ್ಯವಾಯಿತ್ತೆ ? ಭವ ಹಿಂಗಿತ್ತೆ ?
ಅದು ಸಹಜವೆ ?-ಅಲ್ಲಲ್ಲ ನಿಲ್ಲು ಮಾಣು.
ನರಲೋಕದವರೆಲ್ಲರು ನರಸಂಸಾರಕ್ಕೊಳಗಾದರು,
ಸುರಲೋಕದ ಸುರರುಗಳೆಲ್ಲ ಸುರಸಂಸಾರಕ್ಕೊಳಗಾದರು,
ರುದ್ರಲೋಕದ ರುದ್ರರುಗಳೆಲ್ಲ ರುದ್ರಸಂಸಾರಕ್ಕೊಳಗಾದರು,
ಮುನಿಜನಂಗಳೆಲ್ಲರು ತಪವೆಂಬ ಸಂಸಾರಕ್ಕೊಳಗಾದರು,
ಜಂಗಮವ ಹಿಡಿದವರೆಲ್ಲರು ಸಾಯುಜ್ಯವೆಂಬ ಸಂಸಾರಕ್ಕೊಳಗಾದರು,
ಲಿಂಗವ ಹಿಡಿದವರೆಲ್ಲರು ಫಲ-ಪದಗಳೆಂಬ ಸಂಸಾರಕ್ಕೊಳಗಾದರು,
ಇಂತೀ ಸಂಸಾರಕ್ಕೊಳಗಾದವರೆಲ್ಲ ಮಾಯೆಯ ಹೊಡೆಗಿಚ್ಚ ಗೆಲಬಲ್ಲರೆ ?
ಇದು ಕಾರಣ; ನಿತ್ಯ ನಿಜತತ್ವ ತಾನೆಂದರಿಯದೆ, `ತತ್ವಮಸಿ’ ವಾಕ್ಯವ
ಹೊರಹೊರಗನೆ ಬಳಸಿ ಕೆಟ್ಟರಲ್ಲಾ ಹಿರಿಯರು, ಸತ್ತರಲ್ಲಾ ನಾಯಿ ಸಾವ !
ಸತ್ತವರ ಹೆಸರ ಪತ್ರವ ನೋಡಿದಡೆ (ಓದಿದಡೆ?)
ಅದೆತ್ತಣ ಮುಕ್ತಿಯೊ ಗುಹೇಶ್ವರಾ ?
ವಚನ 0308
ಆದಿಯನರಿಯರು ಅನಾದಿಯನರಿಯರು,
ಒಂದರೊಳಗಿಪ್ಪ ಎರಡನರಿಯರು,
ಎರಡರೊಳಗಿಪ್ಪ ಮೂರರ ಕೀಲನರಿಯರು,
ಮೂರರ ಸಂದು ಆರಾದುದನರಿಯರು.
ಆರೆಂದು ನುಡಿವ ಗಾರು ಮಾತು ತಾನಲ್ಲ
ಗುಹೇಶ್ವರ[ನ] ನಿಲವನರಿದಡೆ, -ಒಂದೂ ಇಲ್ಲ.
ಅರಿಯದಿರ್ದಡೆ ಬಹುಮುಖವಯ್ಯಾ.
ವಚನ 0309
ಆದಿಯಲ್ಲಿ ಗುರುಬೀಜವಾದ ಪಿಂಡಕ್ಕೆ,
ಅನಾದಿಯೆಂಬುದನೊಬ್ಬರು ತಿಳುಹಲುಂಟೆ ?
ಆದಿ ಕಾಯ ಅನಾದಿ ಪ್ರಾಣವಾಗಿಪ್ಪ ಯೋಗವ ಭೇದಿಸಿ
ತನ್ನೊಳಗೆ ತಾನೆ ತಿಳಿದು ನೋಡಲುಸ್ಯೋಹಂ’ ಎಂಬುದು ತಾನೆ ಸತ್ಯ ನೋಡಾ ! (
ಕೋಹಂ’ ಎಂಬುದು ತಾನಸತ್ಯ ನೋಡಾ?)
ವಚನ 0310
ಆದಿಯಲ್ಲಿ ನೀನೆ ಗುರುವಾದ ಕಾರಣ ನಿನ್ನಿಂದ ಹುಟ್ಟಿತ್ತು ಲಿಂಗ.
ಆದಿಯಲ್ಲಿ ನೀನೆ ಲಿಂಗವಾದ ಕಾರಣ ನಿನ್ನಿಂದ ಹುಟ್ಟಿತ್ತು ಜಂಗಮ.
ಆದಿಯಲ್ಲಿ ನೀನೆ ಜಂಗಮವಾದ ಕಾರಣ ನಿನ್ನಿಂದ ಹುಟ್ಟಿತ್ತು ಪ್ರಸಾದ.
ಆದಿಯಲ್ಲಿ ನೀನೆ ಪ್ರಸಾದಿಯಾದ ಕಾರಣ ನಿನ್ನಿಂದ ಹುಟ್ಟಿತ್ತು ಪಾದೋದಕ.
ಇಂತೀ-ಗುರು ಲಿಂಗ ಜಂಗಮ ಪ್ರಸಾದ ಪಾದೋದಕ ಸ್ವರೂಪ
ನೀನೆಯಾದ ಕಾರಣ;
ಜಂಗಮ ಪ್ರಾಣಿಯಾಗಿ ಸದಾಚಾರಿಯಾದೆ,
ಅದು ಕಾರಣ ನೀನೆ ಸರ್ವಾಚಾರಸಂಪನ್ನನಾಗಿ,
ಪೂರ್ವಾಚಾರಿ[ಯೂ] ನೀನೆಯಾದೆ,
[ಅದು] ಕಾರಣ, ಗುಹೇಶ್ವರಲಿಂಗದಲ್ಲಿ ಚಂದಯ್ಯಂಗೆ.
ಲಿಂಗದ ನಿಜವ ತಿಳುಹಾ ಸಂಗನಬಸವಣ್ಣಾ !
ವಚನ 0311
ಆದಿಯಲ್ಲಿ ಬಸವಣ್ಣನುತ್ಪತ್ಯವಾದ ಕಾರಣ
ನಾಗಲೋಕದ ನಾಗಗಣಂಗಳಿಗೆಯೂ ಬಸವಣ್ಣನ ಪ್ರಸಾದ.
ಮತ್ರ್ಯಲೋಕದ ಮಹಾಗಣಂಗಳಿಗೆಯೂ ಬಸವಣ್ಣನ ಪ್ರಸಾದ.
ದೇವಲೋಕದ ದೇವಗಣಂಗಳಿಗೆಯೂ ಬಸವಣ್ಣನ ಪ್ರಸಾದ.
ಗುಹೇಶ್ವರಾ ನಿಮ್ಮಾಣೆ,
ಎನಗೆಯೂ ನಿನಗೆಯೂ ಬಸವಣ್ಣನ ಪ್ರಸಾದ.
ವಚನ 0312
ಆದಿಯಲ್ಲಿ ಶಿವದಾರವ ಕಂಡೆ; ಬೀದಿಯಲ್ಲಿ ಬಿದ್ದ ಸೆಜ್ಜೆಯ ಕಂಡೆ.
ಪ್ರಾಣಲಿಂಗವ ಬೈಚಿಟ್ಟುಕೊಂಡೆ.
ಕಾಯವಳಿದು ಜೀವ ನಿಮ್ಮಲ್ಲಿಗೆ ಬಂದಡೆ
ಎನ್ನಿಂದ ವ್ರತಗೇಡಿಗಳಿಲ್ಲ ಗುಹೇಶ್ವರಾ.
ವಚನ 0313
ಆದಿಯಾಧಾರ ತನುಗುಣವುಳ್ಳನ್ನಕ್ಕರ ಸಮತೆಯೆಂಬುದೇನೊ ?
ಕಾಲಕಲ್ಪಿತ ಉಪಾದಿಯುಳ್ಳನ್ನಕ್ಕರ ಶೀಲವೆಂಬುದು ಭಂಗ.
ಕಾಮವೆಂಬುದರ ಬೆಂಬಳಿಯ ಕೂಸಿನ ಹುಸಿಯೆ ತಾನೆಂದು
ತಿಳಿಯದನ್ನಕ್ಕರ,
ಗುಹೇಶ್ವರಾ ನಿಮ್ಮ ನಾಮಕ್ಕೆ ನಾಚದವರನೇನೆಂಬೆನು ?
ವಚನ 0314
ಆದಿಯಾಧಾರಮಂ ಮಾಡಿ, ಅಜಕೋಟಿ ಬ್ರಹ್ಮಾಂಡಂಗಳ ಮಾಡಿ
ಈರೇಳು ಭುವನಂಗಳಂ ಮಾಡಿ ಹರ ಲೀಲೆಯಾಡುವಲ್ಲಿ-
ಹರಿವಿರಿಂಚಿಗಳ ಸುರಾಸುರರ ಶಿರೋಮಾಲೆಯನಿಕ್ಕಿ ಕುಣಿದಾಡುವಲ್ಲಿ
ಪಾದ ರಸಾತಳಕ್ಕಿಳಿದು ಭುವನ ಜಲಮಯವಾದಲ್ಲಿ
ಹಸ್ತ ಮಕುಟ ತಾಗಿ ಸಕಲಲೋಕಂಗಳೆಲ್ಲವೂ ನಿರವಯಲಾದಲ್ಲಿ
ನಿಜದ ಬೆಳಗಿನ ಬೆಳಗಿನೊಳು `ಸ್ಯೋಹಂ’ ಎನಲು,
ವಿಚಾರದಿಂದ ಘನಮನವಾದಂದು,
ಗುಹೇಶ್ವರಾ ನೀನೆ ಲಿಂಗ, ನಾನೆ ಜಂಗಮ, ಬಸವಣ್ಣನೇ ಭಕ್ತ !
ವಚನ 0315
ಆದಿಯಾಧಾರವಿಲ್ಲದ ಆಗಮನಾಸ್ತಿಯಾಗಿಪ್ಪ
ಸಾಗಾರ (ಆಗರ?) ವಿರಹಿತನನಾರೂ ಅರಿಯರಲ್ಲಾ !
ದಶಮುಖಮಾಣಿಕದೆಸಳಗಂಗಳು ಪರ್ಬಿಪಸರಿಸಿದುದನಾರೂ ಅರಿಯರಲ್ಲಾ !
ಪಿರಿದೊಂದು ವೃಕ್ಷವು ಅತಿಶಯದ ರೂಪಾಗಿ
ಪೃಥ್ವಿಗಿಂಬಾದುದನಾರೂ ಅರಿಯರಲ್ಲಾ !
ಅಂತರಂಗದ ಭುವನವ ಮೆಟ್ಟಿ ನೋಡುತ್ತಿಪ್ಪ,
ಬೆಡಗಿನ ತಾವರೆಯ ಮಧ್ಯದ ತಾರಕಿಯನಾರೂ ಅರಿಯರಲ್ಲಾ !
ರವಿ-ಶಶಿಗಳಿಬ್ಬರು,
ನಯನ ನೋಟದ ಪುಷ್ಪಪರಿಮಳವಾಗಿರ್ದುದನಾರೂ ಅರಿಯರಲ್ಲಾ !
ಇಂಬು ನಯನದಲ್ಲಿ ಸಂಭ್ರಮವಿಲ್ಲದ ರೂಪು, ಮಹತ್ತಾಗಿರ್ದುದನಾರೂ
ಅರಿಯರಲ್ಲಾ !
ಸಾಗರದೊಳಗಣ ಜ್ಯೋತಿಯಂತೆ,
ಗುಹೇಶ್ವರಲಿಂಗದೊಳಗೆ ಎನ್ನ ಪರಮಾರಾಧ್ಯ ಸಂಗನಬಸವಣ್ಣ[ನು],
ನಿಂದ ನಿಲವ ಉಪಮಿಸಬಾರದು ಕಾಣಾ ಸಿದ್ಧರಾಮಯ್ಯಾ.
ವಚನ 0316
ಆದಿಯಾಧಾರವುಳ್ಳನ್ನಕ್ಕರ ಉಪಚಾರ,
ಎರಡೂ ಒಂದಾದಡೆ ಶಿವಾಚಾರ.
ಆ ಶಿವಾಚಾರ ಸಯವಾದಡೆ ಬ್ರಹ್ಮಾಚಾರ,
ಗುಹೇಶ್ವರನನರಿದಡೆ ಅನಾಚಾರ !
ವಚನ 0317
ಆದಿಯಿಂದತ್ತತ್ತಲೆನಗೆ ನೀನೆ ಗುರುವಯ್ಯಾ.
ಅನಾದಿಯಿಂದತ್ತತ್ತಲೆನಗೆ ನೀನೆ ಗುರುವಯ್ಯಾ.
ಈ ಎರಡು ನಾಮ ಹುಟ್ಟದ ಮುನ್ನ
ನಿಮಗೆ ನಾನು ಶಿಷ್ಯನಯ್ಯಾ.
ಎನ್ನ ಭಾವಕಾಯದೊಳಗಣ ಭ್ರಮೆಯ ಕಳೆದು,
ಎನ್ನ ಜ್ಞಾನಕಾಯದೊಳಗಣ ಮರಹ ಕಳೆದು,
ಎನ್ನೊಳಗೆ ತಿಳಿವಿನ ಬಗೆಯ ತೋರುತ್ತ,
ಹೊರಗೆ ನುಡಿಯದಂತಿರ್ದಡೆ ಬಿಡೆನು ನೋಡಾ ನಿಮ್ಮ ಶ್ರೀಚರಣವನು.
ಮಾಡಿದಡೆ ಅಂತು ಮಹಾಪ್ರಸಾದವೆಂದು ಕೈಕೊಂಬೆ.
ಮಾಡದಿರ್ದಡೆ ನೀವೆ ನಾನಾಗಿ ಮಹಾಪ್ರಸಾದವೆಂದು ಕೈಕೊಂಬೆನು,
ಇಂತು ಆವತೆರದಿಂದಲಾದಡೂ
ಎನ್ನೊಡಲ ನಿಮ್ಮಲ್ಲಿ ಸವೆದು ಪಡೆವೆನು ನಿಮ್ಮ ಕರುಣವ
ಗುಹೇಶ್ವರಾ ಎನ್ನ ಇರವಿನ ಪರಿ ಇಂತುಟು ನೋಡಾ
ವಚನ 0318
ಆದಿಯಿಲ್ಲದೆ, ಕರ್ತೃವಿಲ್ಲದೆ, ಕರ್ಮಂಗಳಿಲ್ಲದೆ
ನಿನ್ನಿಂದ ನೀನೇ ಸಗುಣನಯ್ಯಾ.
ನಿನ್ನ ಸ್ವಲೀಲೆವಿಡಿದಾಡಿ ನಿನ್ನಿಂದ ನೀನೇ ನಿರ್ಗುಣನಯ್ಯಾ.
ಅದೆಂತೆಂದಡೆ:
“ಅನಾದಿಸಿದ್ಧಸಂಸ್ಕಾರಃ ಕರ್ತೃಕರ್ಮವಿವರ್ಜಿತಃ
ಸ್ವಯಮೇವ ಭವೇದ್ದೇಹೇ ಸ್ವಯಮೇವ ವಿಲೀಯತೇ”
ಎಂದುದಾಗಿ,
ಗುಹೇಶ್ವರಾ, ನಿನ್ನ ಲೀಲೆಯ ಘನವ ನೀನೇ ಬಲೆ
ವಚನ 0319
ಆದಿವಿಡಿದು ಬಹಾತ ಭಕ್ತನಲ್ಲ, ಅನಾದಿವಿಡಿದು ಬಹಾತ ಮಾಹೇಶ್ವರನಲ್ಲ.
ಸ್ಥಲವಿಡಿದು ಬಹಾತ ಪ್ರಸಾದಿಯಲ್ಲ,
ಇಷ್ಟಲಿಂಗದಲ್ಲಿ ಪ್ರಸಾದವ ಕೊಂಬಾತ ಪ್ರಾಣಲಿಂಗಿಯಲ್ಲ,
ಲಿಂಗವಿಡಿದು ಬಹಾತ ಶರಣನಲ್ಲ,
ಬಿನ್ನಭಾವವಿಡಿದು ಬಹಾತ ಐಕ್ಯನಲ್ಲ,
ಶೂನ್ಯಕಾಯವ ನಿಶ್ಶೂನ್ಯಂಗಿಕ್ಕಿ, ಪ್ರಾಣಲಿಂಗಪ್ರಸಾದವ ಕೊಳಬಲ್ಲನಾಗಿ
ಗುಹೇಶ್ವರಲಿಂಗದಲ್ಲಿ ಚೆನ್ನಬಸವಣ್ಣಂಗೆ ನಮೋ ನಮೋ ಎಂಬೆನು
ವಚನ 0320
ಆದಿಶಕ್ತಿ ಅನಾದಿಶಕ್ತಿಯೆಂಬರು ಅದನಾರು ಬಲ್ಲರಯ್ಯಾ ?ಆದಿ’ ಎಂದಡೆ ಕುರುಹಿಂಗೆ ಬಂದಿತ್ತು.
ಅನಾದಿ’ ಎಂದಡೆ ನಾಮಕ್ಕೆ ಬಂದಿತ್ತು.
ಆದಿಯೂ ಅಲ್ಲ ಅನಾದಿಯೂ ಅಲ್ಲ,
ನಾಮವಿಲ್ಲದ ಸೀಮೆಯಿಲ್ಲದ ನಿಜಭಕ್ತಿಯೆ
ಚಿಚ್ಛಕ್ತಿಯಾಯಿತ್ತು ನೋಡಾ.
ಅಂತರಂಗದ ಪ್ರಭೆ ಬಹಿರಂಗವೆಲ್ಲಾ ತಾನೆಯಾಗಿ
ಗುಹೇಶ್ವರಲಿಂಗದಲ್ಲಿ ಸಂದಿಲ್ಲದಿಪ್ಪ
ಮಹಾದೇವಿಯಕ್ಕನ ಶ್ರೀಪಾದಕ್ಕೆ ನಮೋ ನಮೋ ಎಂಬೆನು
ವಚನ 0321
ಆದ್ಯರಲ್ಲ ವೇದ್ಯರಲ್ಲ ಸಾಧ್ಯರಲ್ಲದ ಹಿರಿಯರ ನೋಡಾ.
ತನುವಿಕಾರ ಮನವಿಕಾರ ಇಂದ್ರಿಯವಿಕಾರದ ಹಿರಿಯರ ನೋಡಾ.
ಶಿವಚಿಂತೆ ಶಿವಜ್ಞಾನಿಗಳ ಕಂಡಡೆ, ಆಳವಾಡಿ ನುಡಿವರು,
ಗುಹೇಶ್ವರನರಿಯದ ಕರ್ಮಿಗಳು.
ವಚನ 0322
ಆಧಾರ ಲಿಂಗ ನಾಬಿ ಹೃದಯ ಕಂಠ ಭ್ರೂಮಧ್ಯದ ಮೇಲೆ
ನಿಂದುದದೇನೊ?
ನಿತ್ಯ ನಿರಂಜನ ನಿರುಪಾದಿಕರೇಖೆಯಾಗಿ,
ಇರ್ದುದದೇನೊ?
ವಿದ್ರುಮಕುಸುಮಚಕ್ಷು ಪರಿಮಳದಿಂದತ್ತತ್ತಲೆ,-
ಗುಹೇಶ್ವರನೆಂಬುದದೇನೊ?
ವಚನ 0323
ಆಧಾರ ಸ್ವಾಧಿಷ್ಠಾನ ಮಣಿಪೂರಕಸ್ಥಾನವರಿಯರು.
ಅಷ್ಟದಳ ಕಮಲದಲ್ಲಿ ಸೂಕ್ಮ ನಾಳವೈದುವದೆ?
ಇನ್ನೇನನರಿವರಾರೊ? ಬೇರೆ ಮತ್ತೆ ಅರಿಯಲುಂಟೆ ಹೇಳಾ?
ಸಹಸ್ರದಳಕಮಲದ ಬ್ರಹ್ಮರಂಧ್ರದಲ್ಲಿಪ್ಪ
ಅಮೃತಸ್ವರವನರಿದು, ಹಿಡಿದುಕೊಂಬುದು, ಅರಿದು!-ಗುಹೇಶ್ವರಾ.
ವಚನ 0324
ಆಧಾರದಲ್ಲಿ ಅಭವನು ಸ್ವಾಯತ,
ಸ್ವಾದಿಷ್ಠಾನದಲ್ಲಿ ರುದ್ರನು ಸ್ವಾಯತ,
ಮಣಿಪೂರಕದಲ್ಲಿ ಮೃಡನು ಸ್ವಾಯತ,
ವಿಶುದ್ಧಿಯಲ್ಲಿ ಸದಾಶಿವನು ಸ್ವಾಯತ.
ಆಜ್ಞಾಚಕ್ರದಲ್ಲಿ ಶಾಂತ್ಯಾತೀತನು ಸ್ವಾಯತ.
ಗುಹೇಶ್ವರಲಿಂಗವು, ವ್ಯೋಮ ವ್ಯೋಮವ ಕೂಡಿದಂತೆ !
ವಚನ 0325
ಆಧಾರದಲ್ಲಿ ಬ್ರಹ್ಮ ಸ್ವಾಯತವಾದ, ಸ್ವಾದಿಷ್ಠಾನದಲ್ಲಿ ವಿಷ್ಣು ಸ್ವಾಯತವಾದ.
ಮಣಿಪೂರಕದಲ್ಲಿ ರುದ್ರ ಸ್ವಾಯತವಾದ, ಅನಾಹತದಲ್ಲಿ ಈಶ್ವರ ಸ್ವಾಯತವಾದ.
ವಿಶುದ್ಧಿಯಲ್ಲಿ ಸದಾಶಿವ ಸ್ವಾಯತವಾದ,
ಆಜ್ಞೆಯಲ್ಲಿ ಉಪಮಾತೀತ ಸ್ವಾಯತವಾದ.-
ಇವರೆಲ್ಲರು; ಬಯಲಲ್ಲಿ ಹುಟ್ಟಿ ಬಯಲಲ್ಲಿ ಬೆಳೆದು,
ಬಯಲಲಿಂಗವನೆ ಧರಿಸಿಕೊಂಡು, ಬಯಲನೆ ಆರಾದಿಸಿ
ಬಯಲಾಗಿ ಹೋಯಿತ್ತ ಕಂಡೆ ಗುಹೇಶ್ವರಾ
ವಚನ 0326
ಆಧಾರಲಿಂಗ ಕುಂಡಲಿವಿಡಿದು; ಹೃದಯಕಮಲದಲ್ಲಿ ಬ್ರಹ್ಮ,
ನಾಳದಲ್ಲಿ ವಿಷ್ಣು, ನಾಳಾಗ್ರದಲ್ಲಿ ರುದ್ರ,
ಭ್ರೂಮಧ್ಯದ ಮೇಲೆ ಈಶ್ವರನು, ಬ್ರಹ್ಮರಂಧ್ರದ ಮೇಲೆ ಸದಾಶಿವನು.
ಶಿಖಾಗ್ರದಲ್ಲಿ ಸರ್ವಗತ ಶಿವನು.-
ಆದಿ ಅನಾದಿಯಿಲ್ಲದಂದು ಗುಹೇಶ್ವರಲಿಂಗ ನಿರಾಳನು.
ವಚನ 0327
ಆನು ನೀನೆಂದ ಬಳಿಕ, ಮತ್ತೆ ಏನೂ ಇಲ್ಲ
ಇಲ್ಲಾದುದಿಲ್ಲಾದುದೆಂತಿಪ್ಪುದೊ ?
ತನು ಮರೆದು ಘನವ ಬೆರೆದಡೆ,
ಭವರಹಿತನು ಗುಹೇಶ್ವರಯ್ಯ ತಾನೆ
ವಚನ 0328
ಆನೆಯ ಹೆಣ ಬಿದ್ದಡೆ ಕೋಡಗ ಮುದ್ದಾಡಿಸಿತ್ತ ಕಂಡೆನಯ್ಯಾ,
ಕಾಡೊಳಗೊಬ್ಬ ಸೂಳೆ ಕರೆದು ಒತ್ತೆಯ ಕೊಂಬುದ ಕಂಡೆನಯ್ಯಾ,
ಹಾಳೂರೊಳಗೆ ನಾಯ ಜಗಳವ ಕಂಡೆ:
ಇದೇನು ಸೋಜಿಗವೊ ಗುಹೇಶ್ವರಾ !
ವಚನ 0329
ಆಯತ ಸ್ವಾಯತ ಸನ್ನಹಿತನಾಗಿ,
ಆರಾಧ್ಯಲಿಂಗದಲ್ಲಿ ಅನುಭಾವಿಯಾಗಿಪ್ಪನು ಬಸವಣ್ಣನು.
ಜಂಗಮಲಿಂಗ ಪ್ರಾಣಿಯಾಗಿ ನಿಷ್ಪ್ರಾಣವಾಗಿಪ್ಪನು ಬಸವಣ್ಣನು.
ಗುಹೇಶ್ವರಲಿಂಗದಲ್ಲಿ,
ಸಂಗನಬಸವಣ್ಣನ ಆಚಾರದ ಪರಿ ನಿನಗಲ್ಲದೆ ಅರಿಯಬಾರದು.
ಎನಗೊಮ್ಮೆ ತಿಳುಹಿಕೊಡಾ ಚೆನ್ನಬಸವಣ್ಣಾ.
ವಚನ 0330
ಆಯತದಲ್ಲಿ ಪೂರ್ವಾಚಾರಿಯ ಕಂಡೆ.
ಸ್ವಾಯತದಲ್ಲಿ ಪೂರ್ವಾಚಾರಿಯ ಕಂಡೆ.
ಸನ್ನಹಿತದಲ್ಲಿ ಪೂರ್ವಾಚಾರಿಯ ಕಂಡೆ.
ಗುಹೇಶ್ವರಲಿಂಗದಲ್ಲಿ ಪೂರ್ವಾಚಾರಿ ಸಂಗನಬಸವಣ್ಣನ,
ಶ್ರೀಪಾದಕ್ಕೆ ನಮೋ ನಮೋ ಎಂಬೆನು.
ವಚನ 0331
ಆಯತಲಿಂಗವಿಡಿದು ಸ್ವಾಯತಲಿಂಗವ ಕಾಣಬೇಕು ಸಿದ್ಧರಾಮಯ್ಯಾ.
ಸ್ವಾಯತಲಿಂಗವಿಡಿದು ಸನ್ನಹಿತಲಿಂಗವ ಕಾಣಬೇಕು ಸಿದ್ಧರಾಮಯ್ಯಾ.
ಸನ್ನಹಿತಲಿಂಗವಿಡಿದು ಮಹಾಲಿಂಗವ ಕಾಣಬೇಕು ಸಿದ್ಧರಾಮಯ್ಯಾ.
ಮಹಾಲಿಂಗವಿಡಿದು ಜಂಗಮಲಿಂಗವ ಕಾಣಬೇಕು ಸಿದ್ಧರಾಮಯ್ಯಾ.
ಜಂಗಮಲಿಂಗವಿಡಿದು ಶಿವಲಿಂಗವ ಕಾಣಬೇಕು ಸಿದ್ಧರಾಮಯ್ಯಾ.
ಶಿವಲಿಂಗವಿಡಿದು ಗುರುಲಿಂಗವ ಕಾಣಬೇಕು ಸಿದ್ಧರಾಮಯ್ಯಾ.
ಗುರುಲಿಂಗವಿಡಿದು ಆಚಾರಲಿಂಗವ ಕಾಣಬೇಕು ಸಿದ್ಧರಾಮಯ್ಯಾ-
ಇಂತೀ ಆಚಾರಲಿಂಗವಿಡಿದು ಷಟ್ಸ್ಥಲದ ಆದಿ ಮಧ್ಯಾಂತವರಿದು, ಸಂಬಂದಿಸಿ,
ಒಂದು ಮಾಡಿಕೊಂಡಿಪ್ಪ ಈ ಕರಸ್ಥಲದನುವ,
ಗುಹೇಶ್ವರನ ಶರಣ ಸಂಗನಬಸವಣ್ಣ ಬಲ್ಲ.
ಬೆಸಗೊಂಬ ಬಾರಾ ಸಿದ್ಧರಾಮಯ್ಯಾ.
ವಚನ 0332
ಆಯತವಾಯಿತ್ತು ಅನುಭಾವ, ಸ್ವಾಯತವಾಯಿತ್ತು ಶಿವಜ್ಞಾನ,
ಸಮಾಧಾನವಾಯಿತ್ತು ಸದಾಚಾರ.-
ಇಂತೀ ತ್ರಿವಿಧವು ಏಕಾರ್ಥವಾಗಿ,
ಅರುಹಿನ ಹೃದಯ ಕಂದೆರೆದು,
ಅನಂತಲೋಕಾಲೋಕದ ಅಸಂಖ್ಯಾತ ಮಹಾಗಣಂಗಳೆಲ್ಲರು
ಲಿಂಗಭಾವದಲ್ಲಿ ಭರಿತರಾಗಿ, ಗಗನಸಿದ್ಧಾಂತದಿಂದ ಉಪದೇಶಕ್ಕೆ ಬಂದು
ಭಕ್ತಿರಾಜ್ಯವನೆ ಹೊಕ್ಕು, ನಿಜಲಿಂಗಸುಕ್ಷೇತ್ರವನೆ ಕಂಡು,
ಅಮೃತಸರೋವರದೊಳಗಣ ವಿವೇಕವೃಕ್ಷ ಪಲ್ಲವಿಸಲು
ವಿರಕ್ತಿಯೆಂಬ ಪುಷ್ಪ ವಿಕಸಿತವಾಗಲು,
ಪರಮಾನಂದವೆಂಬ ಮಠದೊಳಗೆ, ಪರಿಣಾಮ ಪಶ್ಚಿಮಜ್ಯೋತಿಯ ಬೆಳಗಿನಲ್ಲಿ
ಪರುಷದ ಸಿಂಹಾಸನವನಿಕ್ಕಿ ಪ್ರಾಣಲಿಂಗ ಮೂರ್ತಿಗೊಂಡಿರಲು,
ದಕ್ಷಿಣವ ದಾಂಟಿ ಉತ್ತರಾಬ್ಧಿಯಲ್ಲಿ ನಿಂದು
ಅಖಂಡ ಪರಿಪೂರ್ಣಪೂಜೆಯ ಮಾಡುವವರಿಗೆ
ನಮೋನಮೋ ಎಂಬೆ ಗುಹೇಶ್ವರಾ.
ವಚನ 0333
ಆಯಿತ್ತು ಬಸವಾ ನಿನ್ನಿಂದ ಗುರುಸ್ವಾಯತವೆನಗೆ.
ಆಯಿತ್ತು ಬಸವಾ ನಿನ್ನಿಂದ ಲಿಂಗಸ್ವಾಯತವೆನಗೆ.
ಆಯಿತ್ತು ಬಸವಾ ನಿನ್ನಿಂದ ಜಂಗಮಸ್ವಾಯತವೆನಗೆ.
ಆಯಿತ್ತು ಬಸವಾ ನಿನ್ನಿಂದ ಪ್ರಸಾದಸ್ವಾಯತವೆನಗೆ.
ಇಂತೀ ಚತುರ್ವಿಧ ಸ್ವಾಯತವನು ನೀನೆ ಮಾಡಿದೆಯಾಗಿ
ನಮ್ಮ ಗುಹೇಶ್ವರಲಿಂಗಕ್ಕೆ ವಿಳಾಸವಾದೆಯಲ್ಲಾ ಸಂಗನಬಸವಣ್ಣಾ.
ವಚನ 0334
ಆಯಿತ್ತೆ ಉದಯಮಾನ, ಹೋಯಿತ್ತೆ ಅಸ್ತಮಾನ.
ಅಳಿದವಲ್ಲಾ ನೀರಲಾದ ನಿರ್ಮಿತಂಗಳೆಲ್ಲವು !
ಕತ್ತಲೆಗವಿಯಿತ್ತು ಮೂರು ಲೋಕದೊಳಗೆ.
ಇದರಚ್ಚುಗವೇನು ಹೇಳಾ ಗುಹೇಶ್ವರಾ ?
ವಚನ 0335
ಆರಕ್ಕೆಯ ಸಿರಿಗೆ ಆರಕ್ಕೆ ಚಿಂತಿಸುವರು.
ಆರಕ್ಕೆಯ ಬಡತನಕ್ಕೆ ಆರಕ್ಕೆ ಮರುಗುವರು.
ಇದಾರಕ್ಕೆ ? ಏನಕ್ಕೆ ?-ಮಾಯದ ಬೇಳುವೆ ಹುರುಳಿಲ್ಲ.
ಕೊಂದು ಕೂಗಿತ್ತು ನೋಡಾ ಗುಹೇಶ್ವರಾ
ವಚನ 0336
ಆರಾದಿಸಿ ವಿರೋದಿಸುವರೆ ? ಪೂಜಿಸಿ ಪೂಜೆಯ ಮರೆಯುವರೆ ?
ಜಂಗಮಲಿಂಗವೆಂದರಿದವರು ಸಂಚ ತಪ್ಪುವರೆ ?
ಗಾಳಿಯೂ ಗಂಧವೂ ಕೂಡಿದಂತೆ ಜಗದೊಳಗೆ ಇದೆ !
ಕೀರ್ತಿವಾರ್ತೆಯ ಹಡೆದೆಯಲ್ಲಾ ಬಸವಣ್ಣಾ.
ನಿನ್ನ ಶಿಶುವಿನೊಡತಣ ತೆರಹುಮರಹ ಪ್ರಮಥರು ಮೆಚ್ಚುವರೆ ?
ತಿಳಿದು ನೋಡುವಡೆ ಗುಹೇಶ್ವರನ ಶರಣ ಅಲ್ಲಯ್ಯಂಗೆ
ನೀನು ಪರಮಾರಾಧ್ಯ ಕಾಣಾ ಸಂಗನಬಸವಣ್ಣ.
ವಚನ 0337
ಆರಾರ ನೇಮಕ್ಕೆ ಸಂದಿತ್ತು,
ಇಚ್ಛಾಭೋಜನಕ್ಕೆ ಕೃತ್ಯವಾಯಿತ್ತು.
ಮನಘನದೊದಗ ಕಂಡೆಯಾ ಸಂಗನಬಸವಣ್ಣಾ,
ಗುಹೇಶ್ವರಲಿಂಗಕ್ಕೆ ಆಶ್ಚರ್ಯವಾಯಿತ್ತು.
ವಚನ 0338
ಆರಾರ ಭಾವಕ್ಕೆ ತೋರಿದಂತೆ ಆ ಕುಳಕ್ಕೆ ಸುಖವಾಗಿಪ್ಪನು.
ಹಿಡಿದ ವ್ರತನೇಮಂಗಳಲ್ಲಿ ಬಿಡುಗಡೆ ಇಲ್ಲದಿರಬೇಕು.
ತಾ ಮಾಡುವ ನಿತ್ಯನೇಮಂಗಳಲ್ಲಿ ಭಾವಶುದ್ಧವಾಗಿಪ್ಪಡೆ
ಗುಹೇಶ್ವರಲಿಂಗಕ್ಕೆ ಅನ್ಯಬಿನ್ನವಿಲ್ಲ ಮಡಿವಾಳ ಮಾಚಯ್ಯಾ
ವಚನ 0339
ಆರು ಅಂಕಣದೊಳಗಾರು ದರುಶನ ಪೂಜೆ,
ಆರೂಢರೂಢಾದಿಯೋಗಿಗಳಿರುತ್ತಿರಲು,
ಆರಾರಿಂದತ್ತತ್ತ ವಿೂರಿ ತೋರುವ ಸ್ವಯಂಜ್ಯೋತಿ ಇರಲು,
ಬೇರೆಯರಸಲುಂಟೆ ಶಿವಯೋಗವು ?
ಆರು ಅಂಕಣದೊಳಗೆ ಆರು ಮಂದಿಯ
ಸಂದಣಿಯ ಓಲಗದ ಸಡಗರವೆಂದು
ಆರೂಢ ಯೋಗಿಗಳದನೆಣಿಕೆಗೊಳರು.
ಮೂರು ಮನೆಯ ಮತ್ತೆ ದಾಳಿಗೊಳುವ ಕಾರಣಿಕರವಲ್ಲವಾಗಿ
ವಿೂರಿ ಒಂಬತ್ತು ಗೊಪೆಯೊಳು
ಲಯ ಗಮನ ಸ್ಥಿತ್ಯರ್ಥಂಗಳ ಹಂಗಿಲ್ಲದ ಹಂಗಿನಲ್ಲಿ
ನೀನು ನಿನ್ನಲ್ಲಿ ಪತಂಗನ್ಯಾಯದಂತೆ
ಗುಹೇಶ್ವರನೊಳೊಂದು ಕಂಡಾ.
ವಚನ 0340
ಆರು ಚಕ್ರದಲ್ಲಿ ಅರಿದಿಹೆನೆಂಬ ಅಜ್ಞಾನ ಜಡರುಗಳು ನೀವು ಕೇಳಿರೊ !
ಅದೆಂತೆಂದಡೆ :
ಆಧಾರಚಕ್ರ ಪೃಥ್ವಿ ಸಂಬಂಧ, ಅಲ್ಲಿಗೆ ಬ್ರಹ್ಮನದಿದೇವತೆ,
ಆಚಾರ ಲಿಂಗವ ಪಿಡಿದು ಯೋಗಿಯಾಗಿ ಸುಳಿದ !
ಸ್ವಾದಿಷ್ಠಾನ ಚಕ್ರ ಅಪ್ಪುವಿನ ಸಂಬಂಧ, ಅಲ್ಲಿಗೆ ವಿಷ್ಣು ಅದಿದೇವತೆ,
ಗುರುಲಿಂಗವ ಪಿಡಿದು ಜೋಗಿಯಾಗಿ ಸುಳಿದ !
ಮಣಿಪೂರಕಚಕ್ರ ಅಗ್ನಿಯ ಸಂಬಂಧ, ಅಲ್ಲಿಗೆ ರುದ್ರನದಿದೇವತೆ,
ಶಿವಲಿಂಗವ ಪಿಡಿದು ಶ್ರವಣನಾಗಿ ಸುಳಿದ !
ಅನಾಹತಚಕ್ರ ವಾಯು ಸಂಬಂಧ, ಅಲ್ಲಿಗೆ ಈಶ್ವರನದಿದೇವತೆ,
ಜಂಗಮಲಿಂಗವ ಪಿಡಿದು ಸನ್ಯಾಸಿಯಾಗಿ ಸುಳಿದ !
ವಿಶುದ್ಧಿಚಕ್ರ ಆಕಾಶ ಸಂಬಂಧ, ಅಲ್ಲಿಗೆ ಸದಾಶಿವನದಿದೇವತೆ,
ಪ್ರಸಾದಲಿಂಗವ ಪಿಡಿದು ಕಾಳಾಮುಖಿಯಾಗಿ ಸುಳಿದ !
ಆಜ್ಞಾಚಕ್ರ ಪರತತ್ತ್ವ ಸಂಬಂಧ ಅಲ್ಲಿಗೆ ಪರಶಿವನದಿದೇವತೆ,
ಮಹಾಲಿಂಗವ ಪಿಡಿದು ಪಾಶುಪತಿಯಾಗಿ ಸುಳಿದ !
ಇಂತೀ ಆರುದರುಶನಂಗಳು ಬಂದಡೆ ಅಂಗಳವ ಹೋಗಲೀಸಿರಿ !
ಆ ಲಿಂಗ ನಿಮಗೆಂತಪ್ಪವು ?
ಇದು ಕಾರಣ, ಮುಂದಿರ್ದ ಗುರುಲಿಂಗಜಂಗಮದ ತ್ರಿವಿಧ ಸಂಬಂಧವನರಿಯದೆ
ಷಟ್ಸ್ಥಲದಲ್ಲಿ ತೃಪ್ತರಾದೆವೆಂಬ ಭ್ರಷ್ಟರ ನೋಡಾ ಗುಹೇಶ್ವರಾ !
ವಚನ 0341
ಆರು ಚಕ್ರದೊಳಗೆ ಆರುಭೂತಂಗಳೇರಿಪ್ಪವಯ್ಯಾ
ಅವರೊಳಗೆ ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಆತ್ಮತತ್ವವೆಂಬ
ಆರು ಅದಿದೇವತೆಗಳಿಪ್ಪವಯ್ಯಾ.
ಇಂತಪ್ಪ ಷಟ್ಕರ್ಮ ಸಾದಾಖ್ಯರ
ಹಾನಿ ಮಾಡಿ ದಾಟುವರನೆ ಭಕ್ತಜಂಗಮವೆಂಬೆನು ಕಾಣಾ ಗುಹೇಶ್ವರಾ.
ವಚನ 0342
ಆರು ದರುಶನ ಅನಾಚಾರವ ನಡೆದವು,
ಸುರೆಯ ಕುಡಿದವು, ಮಾಂಸವ ತಿಂದವು.
ಆರು ದರುಶನಕ್ಕೆ ಅನಾಚಾರವಾದುದೆಂದು
ನಾನು ಗುರುವಾದೆ ಕಾಣಾ ಗುಹೇಶ್ವರಾ.
ವಚನ 0343
ಆರು ಬಣ್ಣದ ಮೃಗವು ತೋರಿಯಡಗಿತ್ತು.
ಬಯಲ ಮೂರು ಲೋಕದೊಳಗೆ ಸಾರಿ, ಹೆಜ್ಜೆಯ ನೋಡಿ
ತೊರೆಯ ಬೆಂಬಳಿವಿಡಿದು ತೋಹಿನಲ್ಲಿಗೆ ಬಂದಿತ್ತು, ಮೃಗವು.
“ಸ್ಯೋಹಂ ಸ್ಯೋಹಂ” ಎನ್ನುತ್ತಿದ್ದಿತ್ತು, ಇಹಪರವ ಮೀರಿ ನಿಂದಿತ್ತು.
ತೋರಲಿಲ್ಲದ ಬಿಲ್ಲು ಬೇರೆನಿಸದ ಬಾಣ,
ಅರುಹಿನ ಕೈಯಲ್ಲಿ ಕುರುಹ ಬಾಣಸವ ಮಾಡಿ
ತೆರಹಿಲ್ಲದ ಪಾದಕದಲ್ಲಿ (ಶಾಖದಲ್ಲಿ?) ಅಡಿಗೆಯ ಮಾಡಿದ ಬೋನವ
ಅರ್ಪಿತವ ಮಾಡಿದ ಪ್ರಸಾದದಿಂದ ಸುಖಿಯಾದೆ ಗುಹೇಶ್ವರಾ.
ವಚನ 0344
ಆರುಲಿಂಗದಲ್ಲಿ ಅರಿದಿಹೆನೆಂಬ ಆರುಹುಗೇಡಿಗಳು ನೀವು ಕೇಳಿರೊ !
ಆರುಲಿಂಗ ನಿಮಗೆಲ್ಲಿಹವು ?
ಅದೆಂತೆಂದಡೆ:ಆಚಾರಲಿಂಗ ಬ್ರಹ್ಮಂಗೆ ಸಂಬಂಧ,
ಗುರುಲಿಂಗ ವಿಷ್ಣುವಿಂಗೆ ಸಂಬಂಧ,
ಶಿವಲಿಂಗ ರುದ್ರಂಗೆ ಸಂಬಂಧ,
ಜಂಗಮಲಿಂಗ ಈಶ್ವರಂಗೆ ಸಂಬಂಧ,
ಪ್ರಸಾದಲಿಂಗ ಸದಾಶಿವಂಗೆ ಸಂಬಂಧ,
ಮಹಾಲಿಂಗ ಪರಶಿವಂಗೆ ಸಂಬಂಧ,
ಇಂತಾರುಲಿಂಗ ಆರುದರುಶನಕ್ಕೆ ಸಂಬಂಧ.
ನಿಮ್ಮ ಸಂಬಂಧವ ನೀವು ಬಲ್ಲಿರೆ ಹೇಳಿರೊ ! ಅರಿಯದಿರ್ದಡೆ ಕೇಳಿರೊ !
ಗುರುಲಿಂಗ ಜಂಗಮವೆಂಬ ತ್ರಿವಿಧ ಸಂಬಂಧವ ತಿಳಿದು !
ಆರು ಪರಿಯ ಶಿಲೆಯಂ ಮೆಟ್ಟಿ ! ಮೂರುಬಾಗಿಲ ತೆರೆದು !
ಶ್ರೀ ಗುರುವಿನ ಪ್ರಸಾದವ ಸವಿದು ! ಮುಂದಿರ್ದ ಲಿಂಗಸಂಗವ ಮಾಡಿ !
ಆ ಪ್ರಥಮಶಿವನೆಂಬ ಜಂಗಮವ ನೋಡುತ್ತಾ ನೋಡುತ್ತಾ ನಿಬ್ಬೆರಗಾಗಬೇಕು !
ಇದು ಕಾರಣ ಆರುಮೂರುಗಳೆಂಬ ಮರವೆಯ ಹರಿದು,
ತಟ್ಟುಮುಟ್ಟುಗಳೆಂಬ ಭ್ರಮೆಯ ಜರೆದು ! ಅಂಗಲಿಂಗವೆಂಬ ದ್ವಂದ್ವವ ಹಿಂಗಿ
ನಿಸ್ಸಂಗಿಯಾಗಿರ್ದೆನಯ್ಯಾ ಗುಹೇಶ್ವರಾ !
ವಚನ 0345
ಆರುಸ್ಥಲದಲ್ಲಿ ಅರಿತಿಹೆನೆಂದು
ಸಹಭೋಜನದಲ್ಲಿ ಉಂಬ ಅಣ್ಣಗಳು ನೀವು ಕೇಳಿರೊ !
ಅಂಗದ ಮೇಲೆ ಲಿಂಗಸಂಬಂದಿಯಾದಡೇನಯ್ಯ,
ಆ ಲಿಂಗವ ತನ್ನ ಪ್ರಾಣಕ್ಕೆ ಅವಧರಿಸದನ್ನಕ್ಕ !
ಆ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರ
ಬಾಹ್ಯಕ್ರೀಯ ಮಾಡಿದಡೇನಯ್ಯ ನೈಷ್ಠೆಇಲ್ಲದನ್ನಕ್ಕ
ಅಷ್ಟಮದಂಗಳ ನಷ್ಟವಮಾಡಿ ಪಂಚೇಂದ್ರಿಯಂಗಳ ಲಿಂಗಮುಖವ ಮಾಡಿ
ದೇಹೇಂದ್ರಿಯ ಮನ ಪ್ರಾಣಾದಿಗಳ ಪ್ರಕೃತಿಯನಳಿದು !
ಇಷ್ಟ ಪ್ರಾಣ ಭಾವವೆಂಬ ತ್ರಿವಿಧ ಲಿಂಗಕ್ಕೆ
ರೂಪು ರುಚಿ ತೃಪ್ತಿಯನೀವ ವರ್ಮಾದಿವರ್ಮಂಗಳ ಭೇದವನರಿಯದೆ !
ಕರಸ್ಥಲದಲ್ಲಿ ಲಿಂಗವಿಡಿದು ಸಹಭೋಜನವೆಂದು ಒಂದಾಗಿ ಉಂಡು
ತಮ್ಮ ಒಡಲ ಹೊರೆವ ಲಿಂಗದ್ರೋಹಿಗಳ ನೋಡಿ ನಗುತ್ತಿರ್ದೆನಯ್ಯಾ
ಗುಹೇಶ್ವರಾ.
ವಚನ 0346
ಆರೂ ಇಲ್ಲದ ಅರಣ್ಯದೊಳಗೆ ಮನೆಯ ಕಟ್ಟಿದರೆ,
ಕಾಡುಗಿಚ್ಚು ಎದ್ದುಬಂದು ಹತ್ತಿತ್ತಲ್ಲಾ !
ಆ ಉರಿಯೊಳಗೆ ಮನೆ ಬೇವಲ್ಲಿ, ಮನೆಯೊಡೆಯನೆತ್ತ ಹೋದನೊ?
ಆ ಉರಿಯೊಳಗೆ ಬೆಂದ ಮನೆ, ಚೇಗೆಯಾಗುದದ ಕಂಡು,
ಮನೆಯೊಡೆಯನಳಲುತ್ತ ಬಳಲುತ್ತೈದಾನೆ.
ಗುಹೇಶ್ವರಾ, ನಿಮ್ಮ ಒಲವಿಲ್ಲದಠಾವ ಕಂಡು,
ಮನದಲ್ಲಿ ಹೇಸಿ ತೊಲಗಿದೆನಯ್ಯಾ.
ವಚನ 0347
ಆಲಿಕಲ್ಲ ನಡುವೆ ಆರಯ್ಯಾ ಅಗ್ನಿಯನಿರಿಸಿದವರು ?
ಅದು ನಂದದೆ ಉರಿಯದೆ ನಿಂದ ಪರಿಯ ನೋಡಾ !
ಮನಪವನಗಳ ಅಡುಗಬ್ಬನಿಕ್ಕಿ,
ಅಗ್ನಿಯ ಪಟುಮಾಡಬಲ್ಲವರನೊಬ್ಬರನೂ ಕಾಣೆ !
ಹಸಿಯಡಗನೆ ಹಿಡಿದು ಹಸಿದು ಸತ್ತರು.
ಗುಹೇಶ್ವರಲಿಂಗದಲ್ಲಿ ಪ್ರಾಣಲಿಂಗಿಗಳಪೂರ್ವ !
ವಚನ 0348
ಆವ ಕಾಯಕವಾದಡೂ ಒಂದೇ ಕಾಯಕವಯ್ಯಾ.
ಆವ ವ್ರತವಾದಡೂ ಒಂದೇ ವ್ರತವಯ್ಯಾ.
ಆಯ ತಪ್ಪಿದಡೆ ಸಾವಿಲ್ಲ; ವ್ರತ ತಪ್ಪಿದಡೆ ಕೂಡಲಿಲ್ಲ.
ಕಾಕಪಿಕದಂತೆ ಎಡೆಯಾಡಲು ನಾಯಕನರಕ ಗುಹೇಶ್ವರ.
ವಚನ 0349
ಆವ ಜಾತಿಯಾದಡೂ ಆಗಲಿ;
ಪುರಾತನ ಚಾರಿತ್ರದಲ್ಲಿ ನಡೆದು,
ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಬಿಮಾನಮಂ ಕೊಟ್ಟು,
ಅಹಂಕಾರವಳಿದಿಹಂತಹ ಮಹಾತ್ಮರ
ಬಾಯ ತಂಬುಲವ ಮೆಲುವೆ, ಬೀಳುಡಿಗೆಯ ಹೊದಿವೆ.
ಅವರ ಪಾದರಕ್ಷೆಗಳೆರಡನೂ,
ಮಂಡೆಯ ಮೇಲೆ ಹೊತ್ತುಕೊಂಡು ಬದುಕುವೆನಯ್ಯಾ.
ಆ ಗಣಂಗಳ ದಾಸನ ದಾಸ ನಾನು,
ಜನ್ಮ ಜನ್ಮದಲ್ಲಿ ಆಗುವೆ ಕಾಣಾ ಗುಹೇಶ್ವರಾ
ವಚನ 0350
ಆವನಾದಡೇನಯ್ಯಾ ಮಾನವನಪ್ಪುದು ಅರಿದಯ್ಯಾ.
ಮಾನವನಾಗಿ ಕಿಂಚಿನ್ಮಾತ್ರ ಶಿವಜ್ಞಾನವಿಲ್ಲದಿದ್ದಡೆ
ಶ್ವಾನ ಶರೀರವ ಹೊರೆದಂತೆ.
ಅವರನರಿದಡೆ ಸುಖವಿಲ್ಲ ಮರೆದಡೆ ದುಃಖವಿಲ್ಲ.
ಬದುಕಿದಡೆ ಆಗಿಲ್ಲ ಸತ್ತಡೆ ಚೇಗಿಲ್ಲ.
`ಏನೋ’ ಎಂಬ ಸಂದೇಹವಿಲ್ಲ
ವಚನ 0351
ಆಶೆಯ ವೇಷವ ಧರಿಸಿ ಭಾಷೆ ಪಲ್ಲಟವಾದರೆ
ಎಂತಯ್ಯಾ ಶರಣಪಥ ವೇದ್ಯವಹುದು ?
ತ್ರಿಭುವನದ ಮಸ್ತಕದ ಮೇಲಿಪ್ಪ ಮೂರು ಗಿರಿಯ ಹುಡಿಗುಟ್ಟದನ್ನಕ್ಕರ
ಎಂತಯ್ಯಾ ಶಿವಪಥ ಸಾಧ್ಯವಹುದು ?
ಭದ್ರೆ ನಿಭದ್ರೆಯೆಂಬವರ ಮೂಲವ ನಾಶಮಾಡದನ್ನಕ್ಕರ,
ಎಂತಯ್ಯಾ ಲಿಂಗೈಕ್ಯವು?
ಅತಳಲೋಕದಲ್ಲಿ ಕುಳ್ಳಿರ್ದು, ಬ್ರಹ್ಮಲೋಕವ ಮುಟ್ಟಿದೆನೆಂಬವರೆಲ್ಲ
ಭವಭಾರಕ್ಕೊಳಗಾದುದ ಕಂಡು
ನಾನು ಬೆರಗಾದೆನು ಗುಹೇಶ್ವರಾ.
ವಚನ 0352
ಆಸನಬಂಧನರು ಸುಮ್ಮನಿರರು.
ಭಸ್ಮವ ಹೂಸಿ ಸ್ವರವ ಹಿಡಿದವರು ಸಾಯದಿಪ್ಪರೆ?
ಸತ್ಯವನೆ ಮರೆದು, ಅಸತ್ಯವನೆ ಹಿಡಿದು,
ಸತ್ತುಹೋದರು ಗುಹೇಶ್ವರಾ.
ವಚನ 0353
ಆಸುರವಾದುದು ಬೀಸರವಾಯಿತ್ತು.
ಬಲ್ಲೆನೊಲ್ಲೆ ನೀ ಕೊಡುವ ವರವನು.
ನಾ ಬೇಡಿತ್ತು ನಿನ್ನ ಮುಖದಲಿಲ್ಲ ಗುಹೇಶ್ವರಾ.
ವಚನ 0354
ಆಸೆಗೆ ಸತ್ತುದು ಕೋಟಿ, ಆಮಿಷಕ್ಕೆ ಸತ್ತುದು ಕೋಟಿ,
ಹೊನ್ನು ಹೆಣ್ಣು ಮಣ್ಣಿಂಗೆ ಸತ್ತುದು ಕೋಟಿ.
ಗುಹೇಶ್ವರಾ ನಿಮಗಾಗಿ ಸತ್ತವರನಾರನೂ ಕಾಣೆ.
ವಚನ 0355
ಆಸೆಯೆಂಬ ಕೂಸನೆತ್ತಲು,
ರೋಷವೆಂಬ ತಾಯಿ ಮುಂದೆ ಬಂದಿಪ್ಪಳು ನೋಡಾ-
ಇಂತೀ ಎರಡಿಲ್ಲದ ಕೂಸನೆತ್ತ ಬಲ್ಲಡೆ
ಆತನೇ ಲಿಂಗೈಕ್ಯನು ಗುಹೇಶ್ವರಾ.
ವಚನ 0356
ಆಸೆಯೆಂಬ ಶೂಲದ ಮೇಲೆ, ವೇಷವೆಂಬ ಹೆಣನ ಕುಳ್ಳಿರಿಸಿ;
ಧರೆಯ ಮೇಲುಳ್ಳ ಹಿರಿಯರು ಹೀಂಗೆ ಸವೆದರು ನೋಡಾ !
ಆಸೆಯ ಮುಂದಿಟ್ಟುಕೊಂಡು ಸುಳಿವ ಹಿರಿಯರ ಕಂಡು,
ಹೇಸಿಕೆಯಾಗಿತ್ತು ಗುಹೇಶ್ವರಾ
ವಚನ 0357
ಆಹಾ ಮನವೆ, ಮರೆದೆಯಲ್ಲಾ ನಿನ್ನ ಪೂರ್ವಾಪರವ,
ಘನ ಮನದೊಳಡಗಿ, ಆ ಮನ ಲಿಂಗದೊಳಡಗಿ,
ಆ ಲಿಂಗವೆನ್ನ ಕರಸ್ಥಲಕ್ಕೆ ಬಂದ ಬಳಿಕ
ಅಳಿಯಿತ್ತು ಅಗಲಿತ್ತು ಎಂಬ ಭಾವಭ್ರಾಂತಿ ಇದೇನೊ ?
ಜನನವಿಲ್ಲದ ಘನಕ್ಕೆ ಮರಣವುಂಟೆ ?
ತೆರಹಿಲ್ಲದ ನಿಜವು ತನ್ನಲ್ಲಿ ತಾನು ವೇದ್ಯವಾಗಿಪ್ಪುದಲ್ಲದೆ
ಇದಿರಿಟ್ಟು ತೋರದೆಂಬ ಅಜ್ಞಾನವಿದೇನೊ ?ನೀ’
ನಾ’ ಎಂಬುದು ಮಾದು.
`ತಾನೆ’ ಆಗೆ ಸಾಧ್ಯವಾಯಿತ್ತು ! ಇದೇನೆಂಬೆ ಗುಹೇಶ್ವರಾ.
ವಚನ 0358
ಆಳವರಿಯದ ಭಾಷೆ, ಬಹುಕುಳವಾದ ನುಡಿ-
ಇಂತೆರಡರ ನುಡಿ ಹುಸಿಯಯ್ಯಾ.
ಬಹು ಭಾಷಿತರು; ಸುಭಾಷಿತ ವರ್ಜಿತರು.
`ಶರಣಸತಿ ಲಿಂಗಪತಿ’ ಎಂಬರು ಹುಸಿಯಯ್ಯಾ.
ಇಂತಪ್ಪವರ ಕಂಡು ನಾನು ನಾಚಿದೆನಯ್ಯಾ ಗುಹೇಶ್ವರಾ.
ವಚನ 0359
ಆಳುದ್ದಿಯದೊಂದು ಬಾವಿ ಆಕಾಶದ ಮೇಲೆ ಹುಟ್ಟಿತ್ತು ನೋಡಾ !
ಆ ಬಾವಿಯ ನೀರನೊಂದು ಮೃಗ ಬಂದು ಕುಡಿಯಿತ್ತು.
ಕುಡಿಯ ಬಂದ ಮೃಗವು ಆ ನೀರೊಳಗೆ ಮುಳಿಗಿದಡೆ
ಉರಿಯ ಬಾಣದಲೆಚ್ಚು ತೆಗೆದೆ ನೋಡಾ !
ಒಂದೆ ಬಾಣದಲ್ಲಿ ಸತ್ತ ಮೃಗವು,
ಮುಂದಣ ಹೆಜ್ಜೆಯನಿಕ್ಕಿತ್ತ ಕಂಡೆ !
ಅಂಗೈಯೊಳಗೊಂದು ಕಂಗಳು ಮೂಡಿ,
ಸಂಗದ ಸುಖವು ದಿಟವಾಯಿತ್ತು !
ಲಿಂಗಪ್ರಾಣವೆಂಬುದರ ನಿರ್ಣಯವನು ಇಂದು ಕಂಡೆನು ಗುಹೇಶ್ವರಾ.
ವಚನ 0360
ಇಂತೀ ಮರ್ತ್ಯಲೋಕದ ಮಹಾಗಣಂಗಳು
ಅನಂತ ಪರೀಕ್ಷಣೆಯಿಂದ ಲಕ್ಷಣಾಲಕ್ಷಣಂಗಳಿಂದ ವಿಚಾರಿಸಿ
ಮಾರ್ಗಕ್ರಿಯೆವಿಡಿದು ಭಕ್ತಗಣ ಮಧ್ಯದಲ್ಲಿ ಸಾಕಾರಕಂಥೆಯ ನಡೆನುಡಿಗಳ,
ಪರಶಿವ ಗುರುಲಿಂಗಜಂಗಮಕ್ಕೆ ಸಮರ್ಪಿಸಿ
ನಿರ್ಮಾಲ್ಯವಾದ ಪುಷ್ಪವ
ಮಾರ್ಗಕ್ರಿಯಾಸ್ವರೂಪ ಸಮಾದಿಯಲ್ಲಿ ಬಿಟ್ಟು
ನಿರವಯವಾದರು ನೋಡ !
ಇಂತು ಮಾರ್ಗಾಚರಣೆಯನರಿದು ಅದರಲ್ಲಿ ಸಂತೃಪ್ತರಾಗಿ
ಅದರಿಂದ ಮೀರಿತೋರುವ ಮೀರಿದ ಕ್ರಿಯಾಚರಣೆಯನರಿದು
ಇದ್ಧು ಇಲ್ಲದಂತೆ, ಹೊದ್ದಿ ಹೊದ್ದದಂತೆ ನಿರಾಕಾರಕಂಥೆಯ ಪರಿಮಳ
ನಡೆನುಡಿಗಳ
ನಿರಾಕಾರ ಪರಶಿವ ಗುರುಲಿಂಗಜಂಗಮಕ್ಕೆ ಸಮರ್ಪಿಸಿ
ನಿರ್ಮಾಲ್ಯವಾದ ಪುಷ್ಪವ
ಮೀರಿದ ಕ್ರಿಯಾಸ್ವರೂಪ ಸಮಾದಿಯಲ್ಲಿ ಬಿಟ್ಟು
ನಿರವಯ ನಿರಂಜನರಾದರು ನೋಡ !
ಇಂತು ಮಾರ್ಗಕ್ರಿ[ಯೆ]ಯ ಮೀರಿದ ಕಿ[ಯೆ]ಯ
ನಡೆ-ನುಡಿ-ಪರಿಣಾಮ-ತೃಪ್ತಿಯಲ್ಲಿ ತಾವೆ ತಾವಾಗಿರ್ಪರು ನೋಡ !
ಗುಹೇಶ್ವರಲಿಂಗಪ್ರಭುವೆಂಬ ನಾಮರೂಪುಕ್ರಿಯವಳಿದು
ಸಂಗನಬಸವಣ್ಣನ ಬೆಳಗಿನೊಳಗೆ
ಮಹಾಬಯಲಾದರು ನೋಡ !
ವಚನ 0361
ಇಂದು ನಾಳೆ ಮುಕ್ತಿಯ ಪಡೆವೆನೆಂಬ ಶಿಷ್ಯಂಗೆ
ಮುಂದಳ ಮುಕ್ತಿಯ ತೋರಿಹೆನೆಂಬ ಗುರುಗಳ ನೋಡಿರೆ !
ಹೋಮ, ನೇಮ, ಜಪ, ತಪಗಳ ಮಾಡಿ ತಾನುಂಡು
ಫಲವುಂಟೆಂದ ಗುರು ಹುಸಿದು ಸತ್ತ, ಶಿಷ್ಯ ಹಸಿದು ಸತ್ತ.
ಹಿಂದಣ ಕಥೆಯ ಹೇಳುವಾತ ಹೆಡ್ಡ, ಮುಂದಣ ಕಥೆಯ ಹೇಳುವಾತ ಮೂಢ,
ಇಂದಿನ ಘನವ ಹೇಳುವಾತನೆ ಹಿರಿಯನಯ್ಯಾ.
ತಾ ಹುಟ್ಟಿದಂದೆ ಯುಗಜುಗಂಗಳು ಹುಟ್ಟಿದವು, ತಾನಳಿದಲ್ಲೆ ಯುಗಜುಗಂಗಳಳಿದವು.
ತನ್ನ ನೇತ್ರಕ್ಕಿಂಪಾದುದೆ ಸುವರ್ಣಸುವಸ್ತು,
ತನ್ನ ಶ್ರೋತಕ್ಕೆ ಸೊಂಪಾದುದೆ ವೇದಶಾಸ್ತ್ರ, ಪುರಾಣ.
ತನ್ನ ಘ್ರಾಣಕ್ಕಿಂಪಾದುದೆ ಪರಿಮಳ, ತನ್ನ ಜಿಹ್ವೆಗಿಂಪಾದುದೆ ರುಚಿ,
ತನ್ನ ಮನ ಮುಳುಗಿದುದೆ ಲಿಂಗ.
ತನ್ನ ನೆತ್ತಿಯಲ್ಲಿ ಸತ್ಯರ್ಲೊಕ, ಪಾದದಲ್ಲಿ ಪಾತಾಳಲೋಕ,
ನಡುವೆ ಹನ್ನೆರಡು ಲೋಕ.
ಅಂಡಜ ಪಿಂಡಜ ಉದ್ಭಿಜ ಜರಾಯುಜವೆಂಬ
ಎಂಬತ್ತು ನಾಲ್ಕುಲಕ್ಷ ಜೀವರಾಶಿಗಳು.
ತನ್ನಲ್ಲಿ ಕಾಯವು, ತನ್ನಲ್ಲಿ ಜೀವವು, ತನ್ನಲ್ಲಿ ಪುಣ್ಯವು,
ತನ್ನಲ್ಲಿ ಪಾಪವು, ತನ್ನಲ್ಲಿ ಶಬ್ದವು, ತನ್ನಲ್ಲಿ ನಿಶ್ಯಬ್ದವು.
ಒಂದು ಒಡಲೆಂಬ ಊರಲ್ಲಿ ಒಂಬತ್ತು ಶಿವಾಲಯವು
ಆ ಶಿವಾಲಯದ ಶಿಖರದ ಮೇಲೆ ಶಿವಲಿಂಗದೇವರು
ಪೂರ್ವಭಾಗದಲ್ಲಿ ಚಂದ್ರಾದಿತ್ಯರು, ಪಶ್ಚಿಮ ಭಾಗದಲ್ಲಿ ಪರಶಿವನು
ಉತ್ತರ ಭಾಗದಲ್ಲಿ ಮಹೇಶ್ವರನು, ದಕ್ಷಿಣ ಭಾಗದಲ್ಲಿ ರುದ್ರನು
ಇಂತೀ ಪಂಚೈವರ ಮನದ ಕೊನೆಯ ಕೀಲಿನ ಸಂಚವನರಿದು
ತುರ್ಯಾವಸ್ಥೆಯಲ್ಲಿ ನಿಲಿಸಿ ಒಡಲುವಿಡಿದು ಕಾಂಬುದೆ ಉಪಮೆ.
ಈ ಘಟದೇವತೆಯ ಸಟೆಯೆಂದು ಬಿಸುಟು ಮುಂದೆ ತಾ
ದಿಟವಪ್ಪುದಿನ್ನೆಲ್ಲಿಯದೊ ?
ಪೃಥ್ವಿಯಳಿದಂದೆ ಭೋಗಾದಿ ಭೋಗಂಗಳಳಿದವು.
ಅಪ್ಪುವಳಿದಂದೆ ಮಾಯಾಮೋಹಾದಿಗಳಳಿದವು.
ತೇಜವಳಿದಂದೆ ಹಸಿವು ತೃಷೆಗಳಳಿದವು.
ವಾಯುವಳಿದಂದೆ ನಡೆನುಡಿ ಚೈತನ್ಯಂಗಳಳಿದವು.
ಆಕಾಶವಳಿದಂದೆ ಅವು ಅಲ್ಲಿಯೆ ಲೀಯವಾಯಿತ್ತು.
ಇದು ಕಾರಣ ಉರಿಕೊಂಡ ಕರ್ಪುರದ ಕರಿ ಕಂಡವರುಂಟೆ ?
ಅಪ್ಪುವುಂಡ ಉಪ್ಪಿನ ಹರಳ ಮರಳಿ ಹೊರೆಯ ಕಟ್ಟಿ ಹೊತ್ತವರುಂಟೆ ?
ವಾಯುಕೊಂಡ ಜ್ಯೋತಿಯ ಬೆಳಗ ಕಂಡವರುಂಟೆ ?
ಹರಿ ಬ್ರಹ್ಮಾದಿಗಳ್ಗೆಯು ಕಾಣಬಾರದಾಗಿ.
ಮಣ್ಣಿನ ಸಾರಾಯದಿಂದ ಮರನುತ್ಪತ್ಯ.
ಮರದ ಸಾರಾಯದಿಂದ ಎಲೆಯುತ್ಪತ್ಯ
ಎಲೆಯ ಸಾರಾಯದಿಂದ ಹೂವ ಉತ್ಪತ್ಯ
ಹೂವ ಸಾರಾಯದಿಂದ ಕಾಯಿ ಉತ್ಪತ್ಯ
ಕಾಯ ಸಾರಾಯದಿಂದ ಹಣ್ಣು ಉತ್ಪತ್ಯ
ಹಣ್ಣಿನ ಸಾರಾಯದಿಂದ ರುಚಿ ಉತ್ಪತ್ಯ
ರುಚಿಯಿಂದತ್ತ ಇಲ್ಲವೆಂಬ ತತ್ವ.
ಮಣ್ಣು ಮರನು ಅಳಿದ ಬಳಿಕ ಬೇರೆ ರುಚಿಯಿಪ್ಪಠಾವುಂಟೆ ?
ದೇಹವಳಿದ ಬಳಿಕ ಪ್ರಾಣವಿಪ್ಪುದಕ್ಕೆ ಠಾವುಂಟೆ ? ಇಲ್ಲವಾಗಿ;
ಇದು ಕಾರಣ, ಗುಹೇಶ್ವರನೆಂಬ ಲಿಂಗವ ಒಡಲು ವಿಡಿದು ಕಂಡೆ ಕಾಣಾ.
ಸಿದ್ಧರಾಮಯ್ಯ.
ವಚನ 0362
ಇಂದು ಸಾವ ಹೆಂಡತಿಗೆ, ನಾಳೆ ಸಾವ ಗಂಡನವ್ವಾ !
ಗಳಿಗೆಗಳಿಗೆಗೆ ಮಗು ಹುಟ್ಟಿ ಕೈ ಬಾಯ್ಗೆ ಬಂದಿತ್ತವ್ವಾ !
ಅರಿವು ಕುರುಹನು ಮರವೆ ನುಂಗಿತ್ತು;
ಗುಹೇಶ್ವರನುಳಿದನವ್ವಾ !
ವಚನ 0363
ಇಂದುವಿನ ಬೆಳಗಿನ ಸಂಪತ್ತನಿಂಬುಗೊಂಡ, ಚಕೋರನ
ಧ್ಯಾನವೆಂತಿಪ್ಪದು,-ಅಂತಾಗಿದ್ದೆ ನಾನು.
ಮಾತೆ ವಿಯೋಗವಾದ ಶಿಶುವಿನ
ಧ್ಯಾನವೆಂತಿಪ್ಪುದು-ಅಂತಾಗಿದ್ದೆ ನಾನು.
ಬಂಧನದಲ್ಲಿ ಸಿಕ್ಕಿದ ಫಣಿಯ
ಧ್ಯಾನವೆಂತಿಪ್ಪುದು-ಅಂತಾಗಿದ್ದೆ ನಾನು.
ರಾತ್ರಿಯೊಳು ಮುಗಿದ ಪದ್ಮದ ಭ್ರಮರನ
ಧ್ಯಾನವೆಂತಿಪ್ಪುದು-ಅಂತಾಗಿದ್ದೆ ನಾನು.
ಸ್ವಪ್ನದಲ್ಲಿ ದುಷ್ಟ ಕೇಸರಿಯ ಧ್ಯಾನದ
ಮದಹಸ್ತಿ ಎಂತಿಪ್ಪುದು-ಅಂತಾಗಿದ್ದೆ ನಾನು.
ನೋಟವಗಲಿದ ನೇಹದ
ಧ್ಯಾನವೆಂತಿಪ್ಪುದು-ಅಂತಾಗಿದ್ದೆ ನಾನು.
ಬ್ರಹ್ಮಪಾಶ ವಿಷ್ಣುಮಾಯವನತಿಗಳೆದ ಛಲದಲ್ಲಿ ಏನೆಂದರಿಯದಿದ್ದೆ ನಾನು.
ಗುಹೇಶ್ವರಲಿಂಗವೆ ಸಂಗನಬಸವಣ್ಣನೊಳಗೆ ಲೀಯವಹ ಭರದಲ್ಲಿ
ಏನೆಂದರಿಯದಿದ್ದೆ ನಾನು.
ವಚನ 0364
ಇಂದ್ರನಂತೆ ಮಾಡುವೆ, ಚಂದ್ರನಂತೆ ಮಾಡುವೆ,
ಮಾಣಿಕ್ಯದ ಹೊಳಹಿನಂತೆ ಮಾಡುವೆನಯ್ಯಾ.
ನೀ ನೋಡದಿರಯ್ಯಾ.
ಮಾಡುವೆನು ಸೂರ್ಯನ ಪ್ರಭೆಯಂತೆ,
ನೀ ನೋಡಿ ಮತ್ತಡಗುವ ಕೃತಕವ ನಾನು ಬಲ್ಲೆ.
ಬೆಡಗು ನಿರಾಳ ಗುಹೇಶ್ವರಾ.
ವಚನ 0365
ಇಕ್ಷುದಂಡಕ್ಕೆ ಕೀಳು ಮೇಲಲ್ಲದೆ
ಸಕ್ಕರೆಯ ದಂಡಕ್ಕೆ ಕೀಳು ಮೇಲುಂಟೆ ?
ಪರುಷಪಾಷಾಣಕ್ಕೆ ಕೀಳು ಮೇಲಲ್ಲದೆ
ಕಡೆಯಾಣಿಗುಂಟೆ ಒರೆಗಲ್ಲು ?ಉಂಟು’
ಇಲ್ಲ’ ಎಂಬ ಸಂದೇಹ ನಿಂದಲ್ಲಿ
ಗುಹೇಶ್ವರಲಿಂಗವು ತಾನೆ ಸಿದ್ಧರಾಮಯ್ಯಾ.
ವಚನ 0366
ಇತ(ದಿ?)ರ ಭ್ರಮಿತನು ಭಕ್ತನಲ್ಲ, ಲೋಕೋಪಚಾರಿ ಜಂಗಮವಲ್ಲ.
ಹೇಳಿಹೆನು ಕೇಳಿರಣ್ಣಾ:
ಜಂಗಮ ಪ್ರೇಮಿಯಾದರೆ ಭಸಿತ ರುದ್ರಾಕ್ಷೆ ಸಹ ಶಿವಸ್ವರೂಪ ಕಾಣುತ್ತ,
ನಮಸ್ಕರಿಸಿ ಬಿಜಯಂ ಮಾಡಿಕೊಂಡು ಬಂದು
ಮನಹರುಷದಲ್ಲಿ ಭೋಜನವ ಮಾಡಿಸೂದೀಗ ಭಕ್ತಂಗೆ ಲಕ್ಷಣ.
ಕಾಡೊಳಗಿರಲಿ ಊರೊಳಗಿರಲಿ ಮಠದಲ್ಲಿರಲಿ ಮನೆಯಲ್ಲಿರಲಿ
ಲಿಂಗವಂತರು ಕರೆಯಬಂದರೆ, ಹೋಗಬೇಕೆಂಬ ಅಬಿಲಾಷೆಯುಳ್ಳಡೆ,
ತಾನಿದ್ದಲ್ಲಿ ತಾ ಮಾಡುವಂಥ ಅಷ್ಟವಿಧಾರ್ಚನೆ ಷೋಡಶೋಪಚಾರ
ಲಿಂಗಕ್ರಿಯೆಗಳು ನಿತ್ಯನೇಮವು ಆದ ಬಳಿಕ
ಮತ್ತೆ ತಾ ಹೋಗಿ ತನ್ನ ಗುಂಪ ತೋರದೆ, ಭಕ್ತರಾಶ್ರಯದಲ್ಲಿ
ಭೋಜನವ ಮಾಡುವುದೀಗ ಜಂಗಮಕ್ಕೆ ಲಕ್ಷಣ.
ಅಂತಲ್ಲದೆ ಗ್ರಹಸ್ಥಾಶ್ರಮದಲ್ಲಿ ಕ್ರಿಯೆ ಮಾಡಿದರೆ
ಜಂಗಮಕ್ಕೆ ಹೇಳುವ ಅರಿವು ಕೊರಮಜೀವಿಯಂತಾಯಿತ್ತಾಗಿ-
ಇದು ಕಾರಣ ಲೋಕೋಪಚಾರಿಗಳಾಗಿ ಒಡಲ ಹೊರೆವವರ
ನಮ್ಮ ಗುಹೇಶ್ವರಲಿಂಗವು ಬಲ್ಲನಾಗಿ ಅವರ ಒಲ್ಲನಯ್ಯಾ.
ವಚನ 0367
ಇದರ ಒಲೆಯಡಿಯನರುಹಿದಡೆ,
ಹೊಗೆ ಗೋಳಕನಾಥನ ಕೊರಳ ಸುತ್ತಿತ್ತು,
ಮಹೀತಳನ ಜಡೆ ಹತ್ತಿತ್ತು, ಮರೀಚನ ಶಿರ ಬೆಂದಿತ್ತು,
ರುದ್ರನ ಹಾವುಗೆ ಉರಿಯಿತ್ತು, ದೇವಗಣಂಗಳೆಲ್ಲ ವಿತಾಪವಾದರು.
ಮಡದಿಯರು ಮುಡಿಯ ಹಿಡಿದುಕೊಂಡು ಹೋದರು.
ಭಸ್ಮಧಾರಿಯಾದೆ ಕಾಣಾ ಗುಹೇಶ್ವರ.
ವಚನ 0368
ಇದು ಎನಗೆ ಆಶ್ಚರ್ಯ; ಹೇಳವ್ವಾ !
ಕಾಯವಿಲ್ಲದ ಸುಖವ ಜೀವವಿಲ್ಲದ ಭವವ !
ಆಠಾವ ಹೇಳಾ ಗುಹೇಶ್ವರಲಿಂಗಕ್ಕೆ ?
ವಚನ 0369
ಇದು ಲೇಸಾಯಿತ್ತು:
ತುಂಬಿದ ಲೆಕ್ಕಕ್ಕೆ ಮತ್ತೊಂದೆಂದು ಕಡೆಗಾಣಿಸುವಂತೆ,
ಸ್ಥಾಣುವಿನ ಮರೆಯ ಚೋರನಂತೆ,
ಅಂಬುದಿಯ ಕೊಂಬಿನಲ್ಲಿದ್ದ ವಿಹಂಗನಂತೆ,
ಎಲ್ಲಿ ಬಂದಡೂ ಗುಹೇಶ್ವರನೆಂಬ ಭಾವ ಒಂದಾಯಿತ್ತು !
ವಚನ 0370
ಇದ್ದಿತ್ತೆಂದರಿಯೆ, ಇಲ್ಲವೆಂದರಿಯೆ, ಏನೆಂದರಿಯೆ.
ಪಂಚಭೂತಪ್ರಾಣಿಯ ಏಕಭೂತಪ್ರಾಣಿ ಬಂದು ಸೋಂಕಿದಡೆ
ಎಹಂಗೆ ಇದ್ದಿತ್ತು ಅಹಂಗೆ ಇದ್ದಿತ್ತಾಗಿ-ಇದೇನೆಂದರಿಯೆ.
ಗುಹೇಶ್ವರಲಿಂಗವು ತನ್ನಂತೆ ಮಾಡಿದನಾಗಿ-ಇದೇನೆಂದರಿಯೆ
ವಚನ 0371
ಇದ್ದುದ ಹೇಳಲಿಲ್ಲ, ಇದ್ದುದ ತೋರಲಿಲ್ಲ,
ಹೊದ್ದಿದ ಆಶ್ರಮವ ನಾನೇನೆಂಬೆನು ಶಿವನೆ?
ಭದ್ರಕಾಳಿಯ ಬಸಿರೊಳಗಿರ್ದ ಬಾವಿಯ ಸರ್ಪನು,
ಸಿದ್ಧರಸದ ಘಟಿಕೆಯ ನುಂಗಿ ಎದ್ದು ಆಡಿತ್ತು ನೋಡಾ !
ಹದ್ದಿನ ಹೆಡೆಯಲ್ಲಿ ಮಾಣಿಕವಿದ್ದುದು
ಇಲ್ಲೆಂಬ ಎದ್ದು ಹೇಳುವ ಕನಸು ತಾನಲ್ಲ ಗುಹೇಶ್ವರ.
ವಚನ 0372
ಇನ್ನೇವೆ ಇನ್ನೇವೆ ?
ಇದು ಮುನ್ನ ಮಾಯದಲಾದ ಭೂತದ ಲಿಂಗ.
ಅಗಲಲಾಗದ ಮುನ್ನ ಆರೋಗಣೆಯಾಯಿತ್ತು,
ಕೈದೊಳೆಯದ ಮುನ್ನ ! (ಎಂಜಲು ಹೋಯಿತ್ತು)
ನಾನಾಗದ ಮುನ್ನ ತಾನೆಯಾಯಿತ್ತು.
ಗುಹೇಶ್ವರನೆಂಬ ಲಿಂಗ ಎನ್ನೊಳಗಡಗಿತ್ತು.
ವಚನ 0373
ಇಪ್ಪತ್ತೆ ದು ತತ್ವದ ಹತ್ತೆಂಬ ದ್ವಾರದಲ್ಲಿ ಬಳಲುವ
ವ್ಯರ್ಥಗೇಡಿ ಮನವ ನಾನೇನೆಂಬೆನಯ್ಯಾ?
ತನ್ನ ತಾ ತಿಳಿಯಲು ತನಗೆ ತಾನನ್ಯವಿಲ್ಲ ಮರುಳೆ
ಮುತ್ತಯ್ಯನ ಬೆಣ್ಣೆಯ, ಶಿಶು ನುಂಗಿತ್ತು.
ಮತ್ತೆ ಶಿಶುವಿನ ಸುಖವನೇನೆಂಬೆ ಗುಹೇಶ್ವರಾ?
ವಚನ 0374
ಇಪ್ಪತ್ತೈದು ತಲೆಯೊಳಗೆ, ಏಳು ಮೊಲೆ ಮುಖವೆಂಟು,
ಹದಿನಾಲ್ಕು ಬಾಯಿ ನೂರಿಪ್ಪತ್ತು ಕೋರೆದಾಡೆ.
ಹೃದಯದಲ್ಲಿ ಹುದುಗಿದ ಅಗ್ನಿಯ ತೆಗೆದು ಮುದ್ದಾಡಿಸಿ (ಸೆ ?)
ದನಿಯ ಧರ್ಮವ ನುಂಗಿ ಮನದ ಬಣ್ಣಗಳಡಗಿ
ಹೆತ್ತ ತಾಯಿ ಮಗನ ನುಂಗಿ, ಶಿಶು ತಾಯ ಬೆಸಲಾಗಿ
ಗುಹೇಶ್ವರನೆಂಬ ನಿಲವ ಅಂಗಯ್ಯ ಮೊಲೆ ನುಂಗಿತ್ತು.
ವಚನ 0375
ಇಬ್ಬರ ಮಧ್ಯದಲೊಂದು ಮಗುವು ಹುಟ್ಟಿತ್ತು.
ಆ ಮಗುವಿನ ಹುಟ್ಟ ತಾಯಿಯೂ ಅರಿಯಳು,
ತಂದೆಯೂ ಅರಿಯನು !
ಹೆಸರಿಟ್ಟು ಕರೆದು ಜೋಗುಳವಾಡುತ್ತೈದಾರೆ.
ಕೈ ಬಾಯಿಗೆ ಬಂದ ಶಿಶು ಮೈದೋರದಿದ್ದಡೆ,
ಕಂಡು ನಾನು ನಾಚಿದೆನು ಕಾಣಾ ಗುಹೇಶ್ವರಾ.
ವಚನ 0376
ಇಬ್ಬರ ಮಧ್ಯದಲ್ಲಿ ಒಂದು ವಸ್ತುವುಂಟು,
ಕಂಡಿರೆ ಗಣಂಗಳಿರಾ ? ಕಂಡಿರೆ ಅಣ್ಣಗಳಿರಾ ?
ಗುರುವಿನ ಗುರು ಇದ ಬೇಗಲ(ನ?)ರಿಯೆ
ಗುಹೇಶ್ವರಲಿಂಗದಲ್ಲಿ-ಸಂಗನಬಸವಣ್ಣಾ.
ವಚನ 0377
ಇಬ್ಬರ ಹಿಡಿವಡೆ ಒಬ್ಬನ ಕೊಲಬೇಕು,
ಒಬ್ಬನ ಕೊಂದರೆ ಎಲ್ಲರೂ ಸಾವರು.
ಎಲ್ಲರೂ ಸತ್ತು ಹಿಡಿದವರಿಬ್ಬರು ಉಳಿದಡೆ,
ಆ ಇಬ್ಬರ ನಂಬಿ ಬಯಲಾದೆ ಗುಹೇಶ್ವರಾ.
ವಚನ 0378
ಇರುಳ ನುಂಗಿತ್ತು, ಇರುಳಿಲ್ಲ; ಹಗಲ ನುಂಗಿತ್ತು ಹಗಲಿಲ್ಲ.
ಅರಿವ ನುಂಗಿತ್ತು ಅರಿವಿಲ್ಲ, ಮರಹ ನುಂಗಿತ್ತು ಮರಹಿಲ್ಲ.
ಕಾಯವ ನುಂಗಿತ್ತು ಕಾಯವಿಲ್ಲ, ಜೀವವ ನುಂಗಿತ್ತು ಜೀವವಿಲ್ಲ.
ಇವೆಲ್ಲವ ನುಂಗಿತ್ತು-ಇದೇನಯ್ಯಾ, ಸಾವ ನುಂಗದು ಗುಹೇಶ್ವರಾ ?
ವಚನ 0379
ಇರುಳಿನ ಮುಖದೊಳಗೊಂದು ನವರತ್ನದಖಂಡಿತ ಹಾರವಡಗಿತ್ತು.
ಹಗಲಿನ ಮುಖದೊಳಗೊಂದು ನವಚಿತ್ರಪತ್ರದ ವೃಕ್ಷವಡಗಿತ್ತು.
ರತ್ನದ ಹಾರವ ವೃಕ್ಷಕ್ಕಾಹಾರವನಿಕ್ಕಿದಡೆ,
ಗುಹೇಶ್ವರಲಿಂಗದಲ್ಲಿ ಪ್ರಾಣಲಿಂಗಕ್ಕೆ ಸುಖವಾಯಿತ್ತು.
ವಚನ 0380
ಇರುಳಿನ ಸಂಗವ ಹಗಲೆಂದರಿಯರು
ಹಗಲಿನ ಸಂಗವನಿರುಳೆಂದರಿಯರು.
ವಾಯಕ್ಕೆ ನಡೆವರು, ವಾಯಕ್ಕೆ ನುಡಿವರು,
ವಾಯುಪ್ರಾಣಿಗಳು.
ಗುಹೇಶ್ವರನೆಂಬ ಅರುಹಿನ ಕುರುಹು
ಇನ್ನಾರಿಗೆಯೂ ಅಳವಡದು.
ವಚನ 0381
ಇರುಳೊಂದು ಮುಖ ಹಗಲೊಂದು ಮುಖ
ಕಾಯವೊಂದು ಮುಖ ಜೀವವೊಂದು ಮುಖ,
ಬುದ್ಧಿಯನರಿಯದಿದೆ ನೋಡಾ !
ಪ್ರಾಣಲಿಂಗವೆಂಬ ಭ್ರಾಂತು ನೋಡಾ !
ಇದು ಕಾರಣ-ಮೂರುಲೋಕವೆಯ್ದೆ
ಬರುಸೂರೆವೋಯಿತ್ತು ಗುಹೇಶ್ವರಾ
ವಚನ 0382
ಇಲ್ಲದ ಶಂಕೆಯನು ಉಂಟೆಂದು ಭಾವಿಸಿದಡೆ
ಅದು ಕಣ್ಣ ಮುಂದೆ ರೂಪಾಗಿ ಕಾಡುತ್ತಿಪ್ಪುದು.
ಇಲ್ಲದ ತನುವ ಉಂಟೆಂಬನ್ನಕ್ಕರ,
ಅದೇ ಮಾಯೆಯಾಗಿ ಕಾಡುತ್ತಿಪ್ಪುದು.
ನಿಃಕ್ರಿಯಾಲಿಂಗಕ್ಕೆ ಕ್ರಿಯಾಂತಲ್ಲದೆ ಆಗದೆಂಬವರ
ಸಂದು ಸಂಶಯ ಮುಂದುಗೆಡಿಸುತ್ತಿಪ್ಪುದು ಕೇಳಾ.
ಮನವ ಮನೆಯ ಮಾಡಿಕೊಂಡಿಪ್ಪ
ಲಿಂಗದ ಅನುವನರಿಯಬಲ್ಲಡೆ,
ಗುಹೇಶ್ವರಲಿಂಗ ದೂರವಿಲ್ಲ ಕೇಳಾ ಮರುಳೆ.
ವಚನ 0383
ಇಲ್ಲದಲ್ಲಿ ಇಲ್ಲವಿದ್ದಿತ್ತು.
ಇಲ್ಲವೆಂಬುದು ಉಂಟು ನೋಡಾ.
ಉಂಟೆಂದಲ್ಲಿ ಇಲ್ಲ’ ಉಂಟಾಯಿತ್ತು. ಉಂಟೆಂದು ತಿಳಿದಡೆ ಅದೆ
ಇಲ್ಲ’.
ಆ `ಇಲ್ಲ’ದಲ್ಲಿ ಒಂದು ತಲೆ ಉದಿಸಿತ್ತು.
ಆ ತಲೆಯೊಳಗೆ ಮೂರು ಲಿಪಿಯ ಕಂಡೆ.
ಲಿಪಿಯೊಳಗೊಂದು ಧ್ವನಿಯ ಕಂಡೆ.
ಧ್ವನಿಯ ಬಣ್ಣ ತಲೆಯೆತ್ತದ ಮುನ್ನ,
ಐದು ಬಾಯ ರಕ್ಕಸಿ ಆಗುಳಿಸಿ ನುಂಗಿದಳು.
ಆ ರಕ್ಕಸಿಗೆ ಕೋಡಗ ಹುಟ್ಟಿ, ಕೋಣನ ಕೊರಳ ಕಚ್ಚಿತ್ತ ಕಂಡೆ.
ಕೋಣನ ಕೋಡಗ ಮುರಿದು ಈಡಾಡಿದಡೆ ಕೋಡಗ ಸಿಕ್ಕಿತ್ತು.
ಅಡವಿಯ ಸುಟ್ಟು ಆಕಾಶವ ಹೊಕ್ಕು
ಗುಹೇಶ್ವರಲಿಂಗದಲ್ಲಿ ಗುರುಕಾರುಣ್ಯವ ಪಡೆದನು
ವಚನ 0384
ಇಲ್ಲವೆಂದು ಸಂದೇಹಿಸಿದವಂಗೆ
ಉಂಟೆಂದು ತೋರಿದನಲ್ಲದೆ,
ಶ್ರೀಗುರು ಖೇಚರತ್ವವ ಬಿಟ್ಟು
ಭೂಚರನಾಗಬಹುದೆ ?
ಮಹಾಘನಲಿಂಗವನು ಅರಿದು ನಂಬಿದ ಬಳಿಕ
ಮುಚ್ಚುಮರೆಯುಂಟೆ ಗುಹೇಶ್ವರ ?
ವಚನ 0385
ಇಲ್ಲವೆಯ ಮೇಲೊಂದು ಉಂಟೆಂಬ ಪರಿಭಾವ,
ಅಲ್ಲಿ ಇಲ್ಲಿ ಎನ್ನದೆ ತಾನೆ ನಿಂದಿತ್ತು ನೋಡಾ !
ತನ್ನಲ್ಲಿಯ ಪ್ರಕೃತಿಯ ತಾನೆ ಹಿಂಗಿಸಲು;
ಅಲ್ಲಿಯೆ ಜ್ಞಾನ ಉದಯಿಸಿತ್ತು !
ಎಲ್ಲಾ ಎಡೆಯಲ್ಲಿ ನಿಂದ ನಿಜಪದವ
ಗುಹೇಶ್ವರಾ ನಿಮ್ಮ ಶರಣ ಬಲ್ಲ.
ವಚನ 0386
ಇವಳ (ಅವಳ?) ನೋಟವೆನ್ನ ಮತ್ರ್ಯಕ್ಕೆ ತಂದಿತ್ತಯ್ಯಾ.
ಇವಳ ಕೂಟ ಸವಿಯನವಗಡಿಸಿ ಕಾಡಿತ್ತಯ್ಯಾ.
ಇವಳ ಬೇಟದ ಬೇರ ಹರಿದಲ್ಲಿ
ತ್ರಿಪುರ ಹಾಳಾದುದ ಕಂಡೆನು.
ಉರಿಯ ಮೇಲೆ ಉರಿ ಎರಗಿದಡೆ
ತಂಪು ಮೂಡಿತ್ತ ಕಂಡೆನು.
ಕರಿಯ ಬೇಡನ ಕಸ್ತುರಿಯ ಮೃಗ ನುಂಗಿದಡೆ
ಹಿರಿಯ ಹೆಂಡತಿ ಓಲೆಗಳೆದುದ ಕಂಡೆನು.
ಕಾರಿರುಳ ಕೋಟೆಯಲಿ ಕಲಿಯ ಕಾಳೆಗವ ಗೆಲಿದು
ಹೂಳಿರ್ದ ನಿಧಾನವ ಕಂಡೆನು ಕಾಣಾ ಗುಹೇಶ್ವರಾ.
ವಚನ 0387
ಇಷ್ಟತನುವಿನ ಘಟ್ಟಿಯ ಕರಗಿಸಿ,
ಕಟ್ಟುಗ್ರದ ಕಾಮ ಕ್ರೋಧ ಲೋಭ ಮೋಹ
ಮದ ಮತ್ಸರಂಗಳೆಂಬವ ಸುಟ್ಟುರುಹಿ,
ತನುವಿನ ಅವಗುಣವ ಕೆಡಿಸಿ, ಮನದ ಸಂಚಲವ ನಿಲಿಸಿ
ಸಕಲ ಕರಣಂಗಳ ಅರಿವಿಂಗೆ ಆಹುತಿಯನಿಕ್ಕಿ
ಸುಜ್ಞಾನಪ್ರಭೆಯನುಟ್ಟು ಸುಜ್ಞಾನಪ್ರಭೆಯ ಹೊದೆದು,
ಸುಜ್ಞಾನಪ್ರಭೆಯ ಸುತ್ತಿ ಸುಜ್ಞಾನಪ್ರಭೆಯ ಹಾಸಿ,
ಮಹಾಜ್ಞಾನದಲ್ಲಿ ನಿರ್ಭಾವ ಸಂಪನ್ನನಾದ
ಮಡಿವಾಳನ ಮಡಿಯ ಪ್ರಸಾದವ ನಾನು ಹೊದ್ದ ಕಾರಣ
ನಿರ್ಮಳನಾದೆನು, ನಿಜೈಕ್ಯನಾದೆನು, ನಿಶ್ಚಿಂತನಾದೆನು.
ಇದು ಕಾರಣ-
ಗುಹೇಶ್ವರಲಿಂಗದಲ್ಲಿ ತೆರಹಿಲ್ಲದಿಪ್ಪ
ಮಡಿವಾಳನ ಪ್ರಸಾದದಿಂದ ನಿಮ್ಮ ಘನವನರಿದು
ಬದುಕಿದೆನು ಕಾಣಾ ಸಂಗನಬಸವಣ್ಣಾ.
ವಚನ 0388
ಇಷ್ಟಲಿಂಗ ಪ್ರಾಣಲಿಂಗವೆಂಬ ಭೇದವನಾರು ಬಲ್ಲರು ಹೇಳಾ ?
ಅಂತರಂಗವೆಂಬ ಶಬ್ದಕ್ಕೆ ಬಹಿರಂಗ ಮುಂದುಗೊಂಡಿಪ್ಪುದು.
ಬಹಿರಂಗವೆಂಬ ಶಬ್ದಕ್ಕೆ ಅಂತರಂಗ ಮುಂದುಗೊಂಡಿಪ್ಪುದು.
ಮನವನೆಡೆಗೊಂಡ ಲಿಂಗದ ಅರಿವು,
ವಿಚಾರ ವ್ಯಾಕುಲಕ್ಕೊಳಗಾಗಬಾರದೆಂದು
ಮನ ಭಾವ ಜ್ಞಾನ ನೋಟಕ್ಕೆ ತಂದು, ಕರಸ್ಥಲದಲ್ಲಿ ನಿಕ್ಷೇಪಿಸಿ
ಅಂತರಂಗ ಬಹಿರಂಗವೆಂದರಿಯದೆ, ಅನಿಮಿಷನಾಗಿಪ್ಪನು ಶರಣನು.
ಪ್ರಾಣಲಿಂಗದ ಪ್ರಸನ್ನಮುಖವ ನೋಡಿ ಪರಿಣಾಮಿಸಲೋಸುಗ
ತೇಜ (ಜಂಗಮ?)ವೆಂಬ ದರ್ಪಣವ ಹಿಡಿದಿಪ್ಪ ನೋಡಯ್ಯಾ.
ಗುಹೇಶ್ವರಲಿಂಗದಲ್ಲಿ ನಿಜವನೆಯ್ದಿಹೆನೆಂದಡೆ,
ಕುರುಹುವಿಡಿದು ಕುರುಹುಗೆಡಬೇಕು ನೋಡಾ ಸಿದ್ಧರಾಮಯ್ಯಾ.
ವಚನ 0389
ಇಷ್ಟಲಿಂಗಕ್ಕೆ ಅಂಗದಲ್ಲಿಯೆ ಮಜ್ಜನ, ಲಲಾಟದಲ್ಲಿಯೆ ಗಂಧಾಕ್ಷತೆ.
ತುರುಬಿದ ಪುಷ್ಪಚಯವೆ ಲಿಂಗಕ್ಕೆ ಪೂಜೆ.
ಜಿಹ್ವೆ ಸೋಂಕಿದ ಷಡುರಸಾನ್ನವೆ ಲಿಂಗಕ್ಕೆ ನೈವೇದ್ಯ.
ತಾಂಬೂಲ ಸವಿಹವೆ ಲಿಂಗಕ್ಕೆ ವೀಳೆಯ.
ಅಂಗಚ್ಛಾದನವಸ್ತ್ರವೆ ಲಿಂಗಕ್ಕೆ ವಸ್ತ್ರ,
ಕಂಡು ಕೇಳಿದ ಗೀತ ವಾದ್ಯ ನೃತ್ಯಾದಿಗಳೆ ಲಿಂಗದ ಕೇಳಿಕೆ
ಇಂತೀ ಅಂಗದಲ್ಲಿ ಇಷ್ಟಲಿಂಗಪೂಜೆಯ ಮಾಡುವ
ಲಿಂಗಸಂಪನ್ನರ ತೋರಾ ಗುಹೇಶ್ವರಾ.
ವಚನ 0390
ಇಷ್ಟಲಿಂಗಕ್ಕೆ ರೂಪನರ್ಪಿಸಿ ದ್ರವ್ಯಶುದ್ಧವಾಯಿತ್ತೆಂದು
ಪ್ರಾಣಲಿಂಗಕ್ಕೆ ಆರೋಗಣೆಯನಿಕ್ಕುವಾಗ,
ನಿಚ್ಚನ[ಕ್ಕೆ] ನಿಚ್ಚ ಕಿಲ್ಬಿಷವೆಂದರಿಯರು.
ಇಷ್ಟಲಿಂಗ ಪ್ರಾಣಲಿಂಗದ, ಆದಿ ನಅಂತುವಫ ನಾರೂ ಅರಿಯರು-
ಇದು ಕಾರಣ, ಗುಹೇಶ್ವರಾ ನಿಮ್ಮ ಶರಣರು
ಹಿಂದುಗಾಣದೆ ಮುಂದುಗೆಟ್ಟರು.
ವಚನ 0391
ಇಷ್ಟಲಿಂಗದ ಕೂಟ, ಪ್ರಾಣಲಿಂಗದ ಸಂಗ,
ಭಾವಲಿಂಗದ ಸಮರಸವ ಬಲ್ಲವರಾರೊ
ಅವರನೆನ್ನ ಸದ್ಗುರು ಅನುಮಿಷೇಶ್ವರನೆಂಬೆ.
ಆ ನಿಜಶಿವಯೋಗವ ಮರೆಯದವರಿಗೆ ಅಣಿಮಾದಿ ಅಷ್ಟೈಶ್ವರ್ಯದೊಡನೆ
ಕೂಡಿದ ಸಕಲ ಲಕ್ಷಣ ಸಂಪನ್ನರು ಸರಿಯಲ್ಲ.
ವಚನ 0392
ಇಷ್ಟಲಿಂಗದಲ್ಲಿ ವಿಶ್ವಾಸ ಬಲಿದರೆ ಆಯತಲಿಂಗ.
ಆ ಇಷ್ಟಲಿಂಗದಲ್ಲಿ ಭಾವಮನೋವೇದ್ಯವಾದಲ್ಲಿ ಸ್ವಾಯತಲಿಂಗ.
ಆ ಇಷ್ಟಲಿಂಗದ ಭಾವ ಮನೋವೇದ್ಯವಾದ ಸುಖವು
ಬಿನ್ನವಾಗಿ ತೋರದೆ, ಅನುಪಮ ಪರಿಣಾಮ ಭರಿತವಾದಲ್ಲಿ ಸನ್ನಹಿತಲಿಂಗ.
ಇಂತು, ಇಷ್ಟಲಿಂಗ ಪ್ರಾಣಲಿಂಗ ತೃಪ್ತಿಯ ಭಾವಲಿಂಗಂಗಳೆಂಬ ಲಿಂಗತ್ರಯಂಗಳು,
ತನುತ್ರಯಂಗಳ ಮೇಲೆ ಆಯತ ಸ್ವಾಯತ ಸನ್ನಹಿತಂಗಳಾದ
ಶರಣನ ಪಂಚಭೂತಂಗಳಳಿದು ಲಿಂಗ ತತ್ವಂಗಳಾಗಿ,
ಆತನ ಜೀವ ಭಾವವಳಿದು ಪರಮಾತ್ಮನೆನಿಸಿದಲ್ಲಿ
ಷಡಂಗಯೋಗವಾದುದು ಕಾಣಾ ಗುಹೇಶ್ವರಾ.
ವಚನ 0393
ಇಷ್ಟಲಿಂಗವ ತೋರಿ ಮೃಷ್ಟಾನ್ನವ ಹಾರುವವರಿಗೆ
ಇಷ್ಟಾರ್ಥಸಿದ್ಧಿ ಇನ್ನೆಲ್ಲಿಯದೊ ?
ಅದೆಲ್ಲಿಯದೊ ಲಿಂಗ ಅದೆಲ್ಲಿಯದೊ ಜಂಗಮ ?
ಅದೆಲ್ಲಿಯದೊ ಪಾದೋದಕ ಪ್ರಸಾದ ?
ಅಲ್ಲದಾಟವನಾಡಿ ಎಲ್ಲರೂ ಮುಂದುಗೆಟ್ಟರು,-
ಗುಹೇಶ್ವರಾ ನಿಮ್ಮಾಣೆ.
ವಚನ 0394
ಇಷ್ಟಲಿಂಗವ ಪೂಜಿಸಿದರಾಗಿ ನಿಷ್ಠೆ ನೆಲೆಗೊಳ್ಳದು.
ಬಹುಲಿಂಗವ ಪೂಜಿಸಿ ಭ್ರಮಿತರಾದರು.
ಅನ್ಯಲಿಂಗವ ಪೂಜಿಸಿ ಬಿನ್ನರಾದರು.
ಸ್ಥಾವರ ಲಿಂಗವ ಪೂಜಿಸಿ ಸಾವಿಗೊಳಗಾದರು
ಬಳ್ಳ ಲಿಂಗವೆಂದು ಪೂಜಿಸಿ ಏನುವನರಿಯದೆ ಹೋದರು.
ಗುಹೇಶ್ವರನೆಂಬ ಲಿಂಗವ ಪೂಜಿಸಿ
ನಿಮ್ಮ ಶರಣರು ಅಲ್ಲಿಗಲ್ಲದೆ ಇಲ್ಲಿಗಲ್ಲದೆ ಹೋದರು ನೋಡಾ.
ವಚನ 0395
ಇಷ್ಟಲಿಂಗವನು ಪ್ರಾಣಲಿಂಗವೆಂಬ ಕಷ್ಟವೆಲ್ಲಿಯದೊ?
ಇಷ್ಟಲಿಂಗ ಹೋದಡೆ ಪ್ರಾಣಲಿಂಗ ಹೋಗದು ನೋಡಾ.
ಇಷ್ಟಲಿಂಗ ಪ್ರಾಣಲಿಂಗದ ಭೇದವನು
ಗುಹೇಶ್ವರಾ, ನಿಮ್ಮ ಶರಣ ಬಲ್ಲ.
ವಚನ 0396
ಇಷ್ಟಲಿಂಗವೆ ಅಂಗಲಿಂಗ ಪ್ರಾಣಲಿಂಗವೆ ಮನಲಿಂಗವಾಯಿತ್ತು ನೋಡಾ.
ಅಂಗಲಿಂಗವಾಗಿ ನಡೆನುಡಿಗತಿಯನರಿಯದು,
ಪ್ರಾಣಲಿಂಗವಾಗಿ ನವನಾಳದ ಸುಳುಹನರಿಯದು.
ಮನ ಲಿಂಗವಾಗಿ ನೆನಹುಗೆಟ್ಟಿತ್ತು,
ಅನುಭಾವ ಲಿಂಗವಾಗಿ ವಿಚಾರವರತಿತ್ತು.
ಭಾವಲಿಂಗವಾಗಿ ನಿರ್ಭಾವವಳವಟ್ಟಿತ್ತು.
ಸರ್ವಕ್ರೀಗಳೆಲ್ಲ ಲಿಂಗವಾಗಿ ಮಾರ್ಗಕ್ರೀಯ ಹೊಲಬನರಿದು
ಅರಿವು ಲಿಂಗವಾಗಿ ಮರಹುಗೆಟ್ಟಿತ್ತು.
ಅಂತರಂಗ ಲಿಂಗವಾಗಿ ಬಹಿರಂಗವೆಂದರಿಯದು
ಬಹಿರಂಗ ಲಿಂಗವಾಗಿ ಅಂತರಂಗದ ಶುದ್ಧಿಯನರಿಯದು.
ಇಂತು ಸರ್ವಾಂಗಲಿಂಗವಾಗಿ ಸರ್ವೆಂದ್ರಿಯ ಗಮನ ಕೆಟ್ಟಿತ್ತು.
ಮಹಾಘನವಿಂಬುಗೊಂಡಿತ್ತಾಗಿ ನಿಷ್ಪತಿ ಕರಿಗೊಂಡಿತ್ತು.
ಗುಹೇಶ್ವರಲಿಂಗದಲ್ಲಿ ಪ್ರಾಣಲಿಂಗ ಸಂಬಂಧ ಸ್ವಯವಾಯಿತ್ತು ನೋಡಾ
ಸಿದ್ಧರಾಮಯ್ಯಾ.
ವಚನ 0397
ಇಷ್ಟಲಿಂಗವೆ ಪ್ರಾಣಲಿಂಗವೆಂಬ
ಮಿಟ್ಟಿಯ ಭಂಡರು ನೀವು ಕೇಳಿರೆ.
ಇಷ್ಟಲಿಂಗವನೂ ಕಾಯವನೂ ಮೆಟ್ಟಿ ಹೂಳುವಲ್ಲಿ,
ಬಿಟ್ಟು ಹೋಹ ಪ್ರಾಣಕ್ಕೆ
ಇನ್ನಾವುದು ಲಿಂಗ ಹೇಳಾ ಗುಹೇಶ್ವರಾ ?
ವಚನ 0398
ಇಹಲೋಕ ಪರಲೋಕ ತಾನಿರ್ದಲ್ಲಿ,
ಗಗನ ಮೇರುಮಂದಿರ ತಾನಿರ್ದಲ್ಲಿ,
ಸಕಲಭುವನ ತಾನಿರ್ದಲ್ಲಿ,
ಸತ್ಯ ನಿತ್ಯ ನಿರಂಜನ ಶಿವತತ್ವ ತಾನಿರ್ದಲ್ಲಿ,
ಅಂತರ ಮಹದಂತರ ತಾನಿರ್ದಲ್ಲಿ,
ಸ್ವತಂತ್ರ ಗುಹೇಶ್ವರಲಿಂಗ ತಾನಿರ್ದಲ್ಲಿ.
ವಚನ 0399
ಇಹವ ತೋರಿದನು ಶ್ರೀಗುರು; ಪರವ ತೋರಿದನು ಶ್ರೀಗುರು.
ಎನ್ನ ತೋರಿದನು ಶ್ರೀಗುರು; ತನ್ನ ತೋರಿದನು ಶ್ರೀಗುರು.
ಗುರು ತೋರಿದಡೆ ಕಂಡೆನು ಸಕಲ ನಿಷ್ಕಲವೆಲ್ಲವ.
ಗುರು ತೋರಿದಡೆ ಕಂಡೆನು ಗುರುಲಿಂಗಜಂಗಮ ಒಂದೆ ಎಂದು.
ತೋರಿ ಕರಸ್ಥಲದಲ್ಲಿದ್ದನು ಗುಹೇಶ್ವರಲಿಂಗನು.
ವಚನ 0400
ಈರೈದು ತಲೆಯನರಿದು, ಧಾರೆವಟ್ಟಲನಿಕ್ಕಿ,
ಧಾರುಣಿಯ ಮೇಲೆ ತಂದಿರಿಸಿದವರಾರೊ ?
ಸೋಮ ಸೂರ್ಯರ ಹಿಡಿದೆಳೆತಂದು,
ವಾರಿದಿಯ ತಡೆಯಲ್ಲಿ ಓಲೆಗಳೆದವರಾರೊ ?
ಊರಿಲ್ಲದ ಊರಿನಲ್ಲಿ[ಹೆ]ಮ್ಮಾರಿ ಹೊಕ್ಕುದ ಕಂಡು
ಆರೈಯ ಹೋಗಿ [ನೀ] ನಾನಿಲ್ಲ ಗುಹೇಶ್ವರಾ:
ವಚನ 0401
ಈಶ್ವರ ನುಡಿದ ನುಡಿಯನರಿದೆಹೆವೆಂದು,
ಬೀಸರವೋದರು ಅಣ್ಣಗಳೆಲ್ಲಾ.
ಪ್ರಾಣಲಿಂಗವೆಂಬರಯ್ಯಾ.
ಮನ ಘನವೆಂದರಿಯದೆ ಮರುಳುಗೊಂಡರು.
ಈಶ್ವರನನರಿದಡೆ ತಾ ಶಿವನು.
ಗುಹೇಶ್ವರನೆಂಬುದು ಬೇರಿಲ್ಲ.
ವಚನ 0402
ಈಶ್ವರನ ದ್ರೋಣವ ಮಾಡಿ, ಪದ್ಮನಾಭನ ನಾರಿಯ ಮಾಡಿ,
ಕಮಲಜನೆಂಬ ಬಾಣವ ತೊಟ್ಟು, ತ್ರಿಭುವನವನೆಚ್ಚವರಾರೊ ?
ಚಂದ್ರಸೂರ್ಯರ ಬೆನ್ನ ಮೆಟ್ಟಿ, ಸುವರ್ಣದ ಮಳೆಯ ಕರಸಿದವರಾರೊ ?
ದೇವದಾನವ ಮಾನವರೆಲ್ಲ, ಈ ಬಾಣಕ್ಕೆ ಗುರಿಯಾಗಿ ಬಿದ್ದರು.
ಗುಹೇಶ್ವರ ಶೂನ್ಯ ನಿಶ್ಶೂನ್ಯದೊಳಗೆ !
ವಚನ 0403
ಉಂಡಡೇನೊ ? ಉಣದೆ ಇರ್ದಡೇನೊ?
ಸೋಂಕಿತವೇನೊ ? ಅಸೋಂಕಿತವೇನೊ?
ಹುಟ್ಟೂದಿಲ್ಲಾಗಿ ಹೊಂದೂದಿಲ್ಲ
ಸತ್ತು ಬದುಕಿ ನಿಶ್ಚಿಂತವಾಯಿತ್ತು ಗುಹೇಶ್ವರಾ.
ವಚನ 0404
ಉಂಡೆನುಟ್ಟೆನೆಂಬ ಸಂದೇಹ ನಿನಗೇಕಯ್ಯಾ?
ಉಂಬುದೆ ಅಗ್ನಿ? ಉಡುವುದೆ ಪೃಥ್ವಿ?
ನೀನೆಂದು ಉಂಡೆ? ನಾನೆಂದು ಕಂಡೆ?
ಉಣ್ಣದೆ ಉಡದೆ ಹೊಗೆಯ ಕೈಯಲ್ಲಿ ಸತ್ತೆನೆಂಬ ಅಂಜಿಕೆ
ನಿನಗೆ ಬೇಡ, ಅಂಜದಿರು,-
ಗುಹೇಶ್ವರಾ ನಿನಗಾವ ನಾಚಿಕೆಯೂ ಇಲ್ಲ.
ವಚನ 0405
ಉಂಡೆಹೆನೆಂದೆಡೆ ಹಸಿವಿಲ್ಲ, ಕಂಡೆಹೆನೆಂದಡೆ ಪ್ರತಿಯಿಲ್ಲ.
ನೋಡಿಹೆನೆಂದಡೆ-ಉದಕದೊಳಗಣ ಜ್ಯೋತಿಯಂತಾದವು (ಜ್ಯೋತಿಯಂತೆ ?)
ಗುಹೇಶ್ವರಾ, ನಿಮ್ಮ ನಾಮವ ಹಿಡಿದು ಬಿಟ್ಟಡೆ ಭಂಗವಯ್ಯಾ.
ವಚನ 0406
ಉಂಬುವುದ ಉಣಲೆ ಬೇಕು, ಮುಟ್ಟುವುದ ಮುಟ್ಟಲೆ ಬೇಕು,
ಮಾಡುವುದ ಮಾಡಲೆ ಬೇಕು, ನೋಡುವುದ ನೋಡಲೆ ಬೇಕು,
ಕೂಡುವುದ ಕೂಡಲೆ ಬೇಕು.
ಉಂಡು ಉಟ್ಟು ಕಂಡು ಕೇಳಿ ಹೇಳಿ
ಬಿಟ್ಟು-ಬಿಡದಾತ ಕಾಣಾ ಗುಹೇಶ್ವರಾ.
ವಚನ 0407
ಉಗುಳ ನುಂಗಿ, ಹಸಿವ ಕಳೆದು, ತೆವರ ಮಲಗಿ ನಿದ್ರೆಗೆಯ್ದು
ನೋಡಿ ನೋಡಿ ಸುಖಂಬಡೆದೆನಯ್ಯಾ.
ಗುಹೇಶ್ವರಾ ನಿಮ್ಮ ವಿರಹದಲ್ಲಿ ಕಂಗಳೇ ಕರುವಾಗಿರ್ದೆನಯ್ಯಾ.
ವಚನ 0408
ಉಚ್ಚೆಯ ಜವುಗಿನ ಬಚ್ಚಲ ತಂಪಿನಲ್ಲಿ:
ನಿಚ್ಚಕ್ಕೆ ಹೊರಳುವ ಹೀಹಂದಿಯಂತೆ,
ಶಿವನ ಇಚ್ಛೆಯನರಿಯದೆ ಮಾತನಾಡುವರ
ಮೆಚ್ಚುವನೆ ನಮ್ಮ ಗುಹೇಶ್ವರಲಿಂಗವು ?
ವಚನ 0409
ಉಚ್ಛಿಷ್ಟಕಾಯ ಚಾಂಡಾಲದೊಳಗೆ ಜನಿಸಿದ
ಹದಿನಾಲ್ಕು ಭುವನದೊಳಗೆಲ್ಲಾ,
`ನಾವು ಬಲ್ಲೆವು, ನಾವು ಹಿರಿಯರು, ನಾವು ಘನಮಹಿಮರು’ ಎಂಬರೆಲ್ಲಾ
ಮತ್ತೆ ಸಾವರೆ, ಇದೇನೊ ಇದೆಂತೊ ?
ಗುಹೇಶ್ವರನೊಬ್ಬ ತಪ್ಪಿಸಿ
ಮಿಕ್ಕಾದವರೆಲ್ಲ ಪ್ರಳಯಕ್ಕೆ ಒಳಗು !
ವಚನ 0410
ಉತ್ತರಾಪಥದ ಮೇಲೆ ಮೇಘವರ್ಷ ಕರೆಯಲು,
ಆ ದೇಶದಲ್ಲಿ ಬರನಾಯಿತ್ತು !
ಆ ದೇಶದ ಪ್ರಾಣಿಗಳೆಲ್ಲರೂ ಮೃತವಾದರು!
ಅವರ ಸುಟ್ಟ ರುದ್ರಭೂಮಿಯಲ್ಲಿ,
ನಾ ನಿಮ್ಮನರಸುವೆ ಗುಹೇಶ್ವರಾ.
ವಚನ 0411
ಉದಕ ಮಜ್ಜನವಲ್ಲ ಪತ್ರೆ ಪೂಜೆಯಲ್ಲ.
ಧೂಪ ಪರಿಮಳವಲ್ಲ, ಕಂಚು ಬೆಳಗಲ್ಲ, ಸಯಧಾನ ಅರ್ಪಿತವಲ್ಲ !
ಅದೆಂತೆಂದಡೆ:
ಸಜ್ಜನವೆ ಮಜ್ಜನ, ಸತ್ಯಸದಾಚಾರವೆ ಪತ್ರೆ ಪುಷ್ಪ.
ಅಷ್ಟಮದಂಗಳ ಸುಟ್ಟುದೆ ಧೂಪ, ನಯನವೆ ಸ್ವಯಂ ಜ್ಯೋತಿ,
ಪರಿಣಾಮವೆ ಅರ್ಪಿತ ಕಾಣಾ ಗುಹೇಶ್ವರಾ.
ವಚನ 0412
ಉದಕ ಮೂರುತಿಯಾಗಿ ಉದಯವಾಯಿತ್ತು ಪಿಂಡಿಗೆಯಲ್ಲಿ.
ಅಲ್ಲಿಯೆ ಮೂಲಸ್ಥಾನ ಸ್ಥಾಪ್ಯವಾಯಿತ್ತು ಸ್ವದೇಹ ಶಿವಪುರದಲ್ಲಿ.
ವಾಯು ಪೂಜಾರಿಯಾಗಿ, ಪರಿಮಳದಿಂಡೆಯ ಕಟ್ಟಿ,
ಪೂಜಿಸುತಿರ್ದುದು-ಓ ನವದ್ವಾರಶಿವಾಲಯದ ಆದಿ ಮಧ್ಯಸ್ಥಾನದಲ್ಲಿ!
ಗುಹೇಶ್ವರನೆಂಬುದಲ್ಲಿಯೇ ನಿಂದಿತ್ತು.
ವಚನ 0413
ಉದಕಕ್ಕೆ ನೆಲೆಯುಂಟೆ ?
ವಾಯುವಿಂಗೆ ಶಿರ ಉಂಟೆ ? ಶಬ್ದಕ್ಕೆ ಕಡೆಯುಂಟೆ ?
ಗುರುವಿನ ಗುರು ಜಂಗಮಕ್ಕೆ ಬೇರೆ ಗುರು ಉಂಟೆ ?
ಈ ಶಬ್ದವ ಕೇಳಿ ನಾನು ಬೆರಗಾದೆ ಕಾಣಾ ಗುಹೇಶ್ವರಾ.
ವಚನ 0414
ಉದಕದ ಕೈಕಾಲ ಮುರಿದು, ಅಗ್ನಿಯ ಕಿವಿಮೂಗನರಿದು,
ವಾಯುವ ತಲೆಯ ಕೊಯ್ದು, ಆಕಾಶವ ಶೂಲದಲಿಕ್ಕಿದ
ಬಲ್ಲಿದ ತಳವಾರನೀತನು !
ಅರಸು ಪ್ರಧಾನ ಮಂತ್ರಿ ಮೂವರ ಮುಂದುಗೆಡಿಸಿದ
ಬಲ್ಲಿದ ತಳವಾರನೀತನು !
ಒಂಬತ್ತು ಬಾಗಿಲ ಕದವನಿಕ್ಕಿ ಬಲಿದು ಬಿಯ್ಯಗವ ಹೂಡಿ
ನವಸಾಸಿರ ಮಂದಿಯ ಕೊಂದುಳಿದನು ಗುಹೇಶ್ವರ.
ವಚನ 0415
ಉದಕದ ಕೊಡನ ಹೊತ್ತಾಡುವ ಗೊರವಿತಿಯ ಕೈಯಲ್ಲಿ ಕಂಕಣ,
ಉಲಿವ ಗೆಜ್ಜೆ ಚರಣದಲ್ಲಿ.
ಉರಿಯ ಗೊರವನ ನೆರೆವ ಭರವಸದಿಂದ ಬಂದಿರಲು
ಬಹಳ ಮುಳ್ಳಡ್ಡಲಾದವಲ್ಲಾ !
ಕಂಕಣದುಲುಹು ನಂದಿ, ಕಣ್ಣುದೆರೆದಾ ಮುಳ್ಳಳಿಯಲು
ಕಾಡುಗಿಚ್ಚೆದ್ದು ಕರಡವ ಸುಟ್ಟಂತೆ
ಪ್ರಾಣಗುಣ ಪ್ರಧ್ವಂಸಕಂಗೆ ಅನ್ಯೋನ್ಯ ಭಾವತ್ರಯವುಂಟೆ ?
ಶರಣಲಿಂಗಕ್ಕೆ ಸಂದಿಲ್ಲ ಗುಹೇಶ್ವರಾ.
ವಚನ 0416
ಉದಕದಲುತ್ಪತ್ಯವಾದ ಶತಪತ್ರದಂತೆ
ಸಂಸಾರಸಂಗವ ತಾ ಹೊಗ(ದ್ದ?)ದಿರಬೇಕು.
ಕಾಯವೇ ಪೀಠ, ಮನವೇ ಲಿಂಗವಾದಡೆ,
ಕೊರಳಲ್ಲಿ ನಾಗವತ್ತಿಗೆ ಏಕೊ ಶರಣಂಗೆ ?-ಗುಹೇಶ್ವರಾ
ವಚನ 0417
ಉದಕದೊಳಗಣ ಕಿಚ್ಚು ನನೆಯಿತ್ತು,
ಕಿಚ್ಚಿನೊಳಗಣ ತೇಜ ಬೆಂದಿತ್ತು;-ತಿಳಿದು ನೋಡಾ
ಅದೇನೊ ಅದೆಂತೊ ? ಸಂಬಂದಿಗಳು ತಿಳಿಯರು ನೋಡಾ.
ಬೆಳಗಿನೊಳಗಣ ಕತ್ತಲೆಯಡಗಿತ್ತು;
ಗುಹೇಶ್ವರನೆಂಬುದು ಅಲ್ಲಿಯೆ ಲಿಂಗೈಕ್ಯವು.
ವಚನ 0418
ಉದಕದೊಳಗೆ ಕಿಚ್ಚು ಹುಟ್ಟಿ ಸುಡುತಿರ್ದುದ ಕಂಡೆ,
ಗಗನದ ಮೇಲೆ ಮಾಮರನ ಕಂಡೆ,
ಪಕ್ಕವಿಲ್ಲದ ಹಕ್ಕಿ ಬಯಲ ನುಂಗಿತ್ತ [ಕಂಡೆ] ಗುಹೇಶ್ವರಾ.
ವಚನ 0419
ಉದಕದೊಳಗೊಂದು ಸೆಜ್ಜೆಯಾಯಿತ್ತು.
ಸೆಜ್ಜೆಯೊಳಗೊಂದು ಕಿಚ್ಚು ಹುಟ್ಟಿತ್ತು.
ಇದೇನೊ ಇದೆಂತೊ ? ನೀನರಸಿಹೆನೆಂಬ ಸಂಬಂಧವಿಲ್ಲ.
ಇದೇನೊ ಇದೆಂತೊ ? ನೀನರಿದಿಹೆನೆಂಬ ಸಂಬಂಧವಿಲ್ಲ.
ಇದೇನೊ ಇದೆಂತೊ ? ನೀನೊಲಿಸಿಹೆನೆಂಬ ಸಂಬಂಧವಿಲ್ಲ.
ಉದಯಮುಖದಲ್ಲಿ ಕತ್ತಲೆಯಡಗಿತ್ತು.
ಗುಹೇಶ್ವರನೆಂಬ ನಾಮವಲ್ಲಿಯೆ ನಿಂದಿತ್ತು.
ವಚನ 0420
ಉದಮದದ ಯೌವನವನೊಳಕೊಂಡ ಸತಿ,
ನೀನು ಇತ್ತಲೇಕೆ ಬಂದೆಯವ್ವಾ
ಸತಿ ಎಂದಡೆ ಮುನಿವರು ನಮ್ಮ ಶರಣರು.
ನಿನ್ನ ಪತಿಯ ಕುರುಹ ಹೇಳಿದಡೆ ಬಂದು ಕುಳ್ಳಿರು,
ಅಲ್ಲದಡೆ ತೊಲಗು ತಾಯೆ.
ನಮ್ಮ ಗುಹೇಶ್ವರನ ಶರಣರಲ್ಲಿ
ಸಂಗಸುಖಸನ್ನಹಿತವ ಬಯಸುವಡೆ
ನಿನ್ನ ಪತಿ ಯಾರೆಂಬುದ ಹೇಳಾ ಎಲೆ ಅವ್ವಾ ?
ವಚನ 0421
ಉದಯ ಮುಖದಲ್ಲಿ ಪೂಜಿಸ ಹೋದರೆ,
ಹೃದಯ ಮುಖದಲ್ಲಿ ಕತ್ತಲೆಯಾಯಿತ್ತು,
ಹಾರಿ ಹೋಯಿತ್ತು ಪ್ರಾಣಲಿಂಗ, ಹರಿದು ಬಿದ್ದಿತ್ತು ಸೆಜ್ಜೆ.
ಕಟ್ಟುವ ಬಿಡುವ ಸಂಬಂದಿಗಳ ಕಷ್ಟವ ನೋಡಾ ಗುಹೇಶ್ವರಾ.
ವಚನ 0422
ಉದಯಬಿಂದು ರೂಪಾಯಿತ್ತು.
ಅಂತರಬಿಂದು ನಿರೂಪಾಯಿತ್ತು.
ಊಧ್ರ್ವಬಿಂದು ನಿಶ್ಶೂನ್ಯವಾಯಿತ್ತು.
ತ್ರಿವಿಧಲಿಂಗವ ಕೂಡಿ ಬಯಲಾಯಿತ್ತು.
ಗುಹೇಶ್ವರಲಿಂಗದಲ್ಲಿ.
ವಚನ 0423
ಉದಯಮುಖದಲ್ಲಿ ಹುಟ್ಟಿದ ಪ್ರಾಣಿಗಳು
ಅಸ್ತಮಾನಕ್ಕೆ ಅಳಿದರಲ್ಲಾ !
ಅಂದಂದಿನ ಘಟಜೀವಿಗಳು ಬಂದ ಬಟ್ಟೆಯಲ್ಲಿ ಹೋದರಲ್ಲಾ !
ಗುಹೇಶ್ವರನೆಂಬ ಲಿಂಗವು ಆರಿಗೆಯೂ ಇಲ್ಲವಯ್ಯಾ.
ವಚನ 0424
ಉದಯವಾಯಿತ್ತ ಕಂಡು ಉದರಕ್ಕೆ ಕುದಿವರಯ್ಯಾ
ಕತ್ತಲೆಯಾಯಿತ್ತ ಕಂಡು ಮಜ್ಜನಕ್ಕೆರೆವರಯ್ಯಾ.
ಲಿಂಗಕ್ಕೆ ನೇಮವಿಲ್ಲ.
ಇರುಳಿಗೊಂದು ನೇಮ, ಹಗಲಿಗೊಂದು ನೇಮ ?
ಲಿಂಗಕ್ಕೆ ನೇಮವಿಲ್ಲ.
ಕಾಯ ಒಂದು ದೆಸೆ, ಜೀವ ಒಂದು ದೆಸೆ,
ಗುಹೇಶ್ವರನೆಂಬ ಲಿಂಗ ತಾನೊಂದು ದೆಸೆ.
ವಚನ 0425
ಉಪಚಾರದ ಗುರುವಿಂಗೆ ಉಪಚಾರದ ಶಿಷ್ಯನು,
ಉಪಚಾರದ ಲಿಂಗ ಉಪಚಾರದ ಜಂಗಮವು,
ಉಪಚಾರದ ಪ್ರಸಾದವ ಕೊಂಡು, ಗುರುವಿಂಗೆ ಭವದ ಲೆಂಕನಾಗೆ,
ಅಂಧನ ಕೈಯ ಅಂಧಕ ಹಿಡಿದಂತೆ-
ಇಬ್ಬರೂ ಹೊಲಬುಗೆಟ್ಟರು ಕಾಣಾ ಗುಹೇಶ್ವರಾ.
ವಚನ 0426
ಉಪಪಾತಕ ಮಹಾಪಾತಕಂಗಳ ಮಾಡಿದ ಕರ್ಮಂಗಳು ಕೋಟ್ಯನುಕೋಟಿ,
ಒಬ್ಬ ಶಿವಶರಣನ ಅಂಗಳವ ಕಂಡಲ್ಲಿ ಅಳಿದು ಹೋಹುದು ನೋಡಯ್ಯಾ.
ಅದೇನು ಕಾರಣವೆಂದಡೆ:
ಆ ಶಿವಶರಣನ ಅಂತರಂಗದಲ್ಲಿ ಶಿವನಿಪ್ಪನು.
ಶಿವನಿದ್ದಲ್ಲಿ ಕೈಲಾಸವಿಪ್ಪುದು
ಕೈಲಾಸವಿದ್ದಲ್ಲಿ ಸಮಸ್ತ ರುದ್ರಗಣಂಗಳಿಪ್ಪರು.
ಅಲ್ಲಿ ಅಷ್ಟಾಷಷ್ಟಿ ತೀರ್ಥಂಗಳಿಪ್ಪವು.
ಇಂತಪ್ಪ ಶರಣಬಸವಣ್ಣನ ಅಂಗಳವ ಕಂಡೆನಾಗಿ
ಗುಹೇಶ್ವರಲಿಂಗದ ಕಂಗಳಿಗೆ ತೃಪ್ತಿಯಾಯಿತ್ತು ಕಾಣಾ
ಸಿದ್ಧರಾಮಯ್ಯಾ.
ವಚನ 0427
ಉಪಮೆ ಉಪಮಿಸಲರಿಯದೆ ಉಪಮಾತೀತವೆನುತ್ತಿದ್ದಿತ್ತು.
ಅರಿವು, ಅರಿವಿನ ಮರೆಯಲ್ಲಿರ್ದುದನರಿಯಲರಿಯದೆ,
ಪರಾಪರವೆಂದು ನುಡಿಯುತ್ತಿದ್ದಿತ್ತು.
ಧ್ಯಾನ ಧ್ಯಾನಿಸಲರಿಯದೆ, ಧ್ಯಾನರೂಪಾತೀತನೆಂದು, ತದ್ಧ್ಯಾನಗೊಂಡಿತ್ತು.
ಜ್ಞಾತೃ ಜ್ಞಾನ ಜ್ಞೇಯಕ್ಕೆ ಇನ್ನಾವ ಜ್ಞಾನವೊ?
ವೇದವಿಜ್ಞಾನವೆಂದುದಾಗಿ, `ತತ್ತ್ವಮಸಿ’ ವಾಕ್ಯಂಗಳೆಲ್ಲವೂ
ಹುಸಿಯಾಗಿ ಹೋದವು.
ಸಚ್ಚಿದಾನಂದವೆಂದುದಾಗಿ
ದ್ವೈತಾದ್ವೈತಿಗಳೆಲ್ಲ ಸಂಹಾರವಾಗಿ ಹೋದರು.
ಬಂದೂ ಬಾರದ, ನಿಂದ ನಿರಾಳ ಗುಹೇಶ್ವರ.
ವಚನ 0428
ಉಪಮೆಗುಪಮಾನ ಮನುದೇವತಾದಿಗಳೆಲ್ಲಾ
ಜಪತಪ ಮಹಾ ದಿವ್ಯ ಧ್ಯಾನ ಮಂತ್ರಗಳಿಂದ
ಪರಿಮಿತ ಸೇವನಿರತರಾಗಿ
ನಿಮ್ಮ ಪದನುತಿಯಿಂ ಕೃತಾರ್ಥರಾಗಿ
ತೃಪ್ತಿಪಟ್ಟಿಪ್ಪರಲ್ಲದೆ, ನಿಚ್ಚಯದ ಮಹಿಮೆಯ,
ಪರಾಪರಂ ಪರಮಗಮ್ಯಭಾವಾತೀತ ವಿಪುಳ
ಜ್ಯೋತಿರ್ಲಿಂಗ ವಿಶ್ವತೋಮುಖ ಮುಸಿಗಿರ್ದ ಘನವಾವುದು ?
ತಿಳಿಯದೆ ಹೋದರಲ್ಲಾ ಗುಹೇಶ್ವರಾ.
ವಚನ 0429
ಉಪಾದಿಕ ಮನವು !
ಉಪಾದಿಕರಹಿತನ ಮನ ನಿಂದಲ್ಲಿ ನಿವಾತವಾಗಿತ್ತು.
ಆನಂದದ ಭಾವವು !
ಬಿಂದು ತಾನುಳಿದು ನಿಂದಲ್ಲಿ ನಿವಾತವಾಯಿತ್ತು.
ಲಿಂಗೋದಯ ಪ್ರಜ್ವಲಿಸುತ್ತಿದೆ,
ಗುಹೇಶ್ವರಲಿಂಗವು ತಾನೆಯಾಗಿ !
ವಚನ 0430
ಉಪಾದಿಯಿಲ್ಲದೆ ಬೇಡಬಲ್ಲಡೆ, ಗಮನವಿಲ್ಲದೆ ಸುಳಿಯಬಲ್ಲಡೆ,
ನಿರ್ಗಮನಿಯಾಗಿರಬಲ್ಲಡೆ, ಅದು ವರ್ಮ,
ಅದು ಸಂಬಂಧ, ಅವರ ನಡೆ ಪಾವನ,
ಅವರ ನುಡಿ ಸತ್ಯ, ಅವರ ಜಗದಾರಾಧ್ಯರೆಂಬೆನು ಕಾಣಾ
ಗುಹೇಶ್ವರಾ.
ವಚನ 0431
ಉಭಯದೃಷ್ಟಿ ಏಕದೃಷ್ಟಿಯಲ್ಲಿ ಕಾಬಂತೆ
ದಂಪತಿ ಏಕಭಾವವಾಗಿ ನಿಂದಲ್ಲಿ,
ಗುಹೇಶ್ವರಲಿಂಗಕ್ಕೆ ಅರ್ಪಿತವಾಯಿತ್ತು,-ಸಂಗನಬಸವಣ್ಣ.
ವಚನ 0432
ಉರವಣಿಸುವ ಮನ ಮುಟ್ಟುವನ್ನಬರ ಕಾಡುವುದು
ಘನ ಘನದಲ್ಲಿ ಮನ ನಂಬುವನ್ನಬರ ಕಾಡುವುದು.
ಮಹಂತ ಗುಹೇಶ್ವರನೆಂಬ ಶಬ್ದವುಳ್ಳನ್ನಬರ ಕಾಡುವುದು.
ವಚನ 0433
ಉರಿಗೆ ಉರಿಯನೆ ತೋರುವೆನು, ಅಮೃತದ ಕಳೆಯಲ್ಲಿ ನಿಲಿಸುವೆನು.
ನಾನು ಬ್ರಹ್ಮಸ್ಥಾನದಲ್ಲಿ ಗುಹೇಶ್ವರಾ-ನಿರಂತರವಾಗಿರ್ದೆನಯ್ಯಾ.
ವಚನ 0434
ಉರಿವ ಕಿಚ್ಚಿನೊಳಗೆ ಹಾಯ್ಕಿದಡೆ,
ಬೆಂದಿತ್ತೆಂದರಿಯಬಾರದು ಬೇಯದೆಂದರಿಯಬಾರದು.
ಹಿಡಿದು ಸುಟ್ಟು ಬೂದಿಯ ಹೂಸಿಕೊಂಡಡೆ
ಮರಳಿ ಹುಟ್ಟಲಿಲ್ಲ ಕಾಣಾ ಗುಹೇಶ್ವರಾ.
ವಚನ 0435
ಉಲಿವ ಉಯ್ಯಲೆಯ ಹರಿದು ಬಂದೇರಲು,
ತಾಗದೆ ತೂಗುವುದು, ಭವಸಾಗರ ಮರಳಿ ಬಾರದಂತೆ !
ಹಂಸೆಯ ಮೇಲೆ ತುಂಬಿ ಕುಳ್ಳಿರ್ದು ಸ್ವರ ಗೆಯ್ಯುವ ಘೋಷವಿದೇನೊ ?
ಆತನಿರ್ದ ಸರ ಹರಿಯದೆ ಇದ್ದಿತ್ತು.
ದೇಹಿಗಳೆಲ್ಲ ಅರಿವರೆ, ಗುಹೇಶ್ವರನ ಆಹಾರಮುಖವ ?
ವಚನ 0436
ಉಲಿವ ತರುವಲಿಗಳೆಲ್ಲ ಗಿಳಿವಿಂಡುಗೆಡೆದಿಹರು
ಅರಿಯದ ಮೌನಿಯ ಮುಕ್ತಿಯಿದೇನೊ ?
ಅರಿದಡೇನು ಅರಿಯದಿದ್ದಡೇನು,
ತನ್ನಲ್ಲಿದ್ದ ವಸ್ತುವ ತಾನರಿಯದನ್ನಕ್ಕ ?
ಅಂಗದಲ್ಲಿ ಒದಗಿದ ಲಿಂಗವನರಿಯದೆ
ಭಂಗಬಟ್ಟರು ಕಾಣಾ ಗುಹೇಶ್ವರಾ.
ವಚನ 0437
ಉಲಿವ ಮರದ ಪಕ್ಷಿಯಂತೆ, ದೆಸೆದೆಸೆಯನಾಲಿಸುತ್ತಿರ್ದೆ.
ಅರಿವರಿಲ್ಲ ಅರಿವರಿಲ್ಲ ಅರಿದು ಮರೆಯಿತ್ತಯ್ಯಾ.
ಮಡುವಿನೊಳಗೆ ಬಿದ್ದ ಆಲಿಕಲ್ಲಿನಂತೆ
ತನ್ನ ತಾನಿರ್ದನು ಗುಹೇಶ್ವರಯ್ಯನು.
ವಚನ 0438
ಉಲುಹಿನ ವೃಕ್ಷದ ನೆಳಲಡಿಯಲಿರ್ದು,
ಗಲಭೆಯನೊಲ್ಲೆನೆಂಬುದೆಂತಯ್ಯಾ?
ಪಟ್ಟದರಾಣಿಯ ಮುಖವ ಮುದ್ರಿಸಿ, ಮೆಟ್ಟಿ ನಡೆವ ಸತಿಯ ಶಿರವ,
ಮೆಟ್ಟಿ ನಿಲುವ ಪರಿಯೆಂತಯ್ಯಾ?
ಆದಿಯ ಹೆಂಡತಿಯನುಲ್ಲಂಘಿಸಿದ ಕಾರಣ,
ಮೇದಿನಿಯ ಮೇಲೆ ನಿಲಬಾರದು.
ಸಾಧಕರೆಲ್ಲರು ಮರುಳಾದುದ ಕಂಡು
ನಾಚಿ ನಗುತ್ತಿರ್ದೆನು ಗುಹೇಶ್ವರಾ.
ವಚನ 0439
ಉಳ್ಳವರು ಹಗೆಹ ತೆಗೆವನ್ನಕ್ಕರ,
ಇಲ್ಲದವರ ಹರಣ ಹೋಯಿತ್ತೆಂಬ ಗಾದೆ ಎನಗಾಯಿತ್ತು.
ಮಾತು ಬಣ್ಣಿಸಲು ಹೊತ್ತು ಹೋಯಿತ್ತಯ್ಯಾ.
ನಿನಗೆ ಅದೆ, ಹರಿನುಡಿಗೆ ಕಡೆಯಿಲ್ಲ.
ಒಬ್ಬರ ನೋಡುವಾಗ,
ಅರುವತ್ತು ಮನುಷ್ಯರ ನೋಡುವ ಹಾಂಗೆ ಆಗುತ್ತಿದೆ.
ಶೂನ್ಯಸಿಂಹಾಸನ ಬವರಿಗೊಡುತ್ತಿದೆ.
ಪ್ರಾಣ ಹೆಡತಲೆಯಲ್ಲಿ ಹೋಗುತ್ತಿದೆ.
ಗುಹೇಶ್ವರ ಹಸಿದನು,
ಪದಾರ್ಥವ ನೀಡಯ್ಯಾ ಸಂಗನಬಸವಣ್ಣಾ.
ವಚನ 0440
ಊರ ಮಧ್ಯದ ಕಣ್ಣ ಕಾಡಿನೊಳಗೆ, ಬಿದ್ದೈದಾವೆ ಐದು ಹೆಣನು.
ಬಂದು ಬಂದು ಅಳುವರು.
ಬಳಗ ಘನವಾದ ಕಾರಣ-ಹೆಣನೂ ಬೇಯದು ಕಾಡೂ ನಂದದು.
ಮಾಡ ಉರಿಯಿತ್ತು ಗುಹೇಶ್ವರಾ.
ವಚನ 0441
ಊರ ಹೊರಗೊಂದು ದೇಗುಲ,
ದೇಗುಲದೊಳಗೊಬ್ಬ ಗೊರತಿ ನೋಡಯ್ಯಾ.
ಗೊರತಿಯ ಕೈಯಲ್ಲಿ ಸೂಜಿ, ಸೂಜಿಯ ಮೊನೆಯಲ್ಲಿ ಹದಿನಾಲ್ಕು ಲೋಕ !
ಗೊರತಿಯ, ಸೂಜಿಯ, ಹದಿನಾಲ್ಕು ಲೋಕವ;
ಒಂದಿರುಹೆ ನುಂಗಿತ್ತ ಕಂಡೆ !- ಗುಹೇಶ್ವರಾ.
ವಚನ 0442
ಊರಕ್ಕಿ ಊರೆಣ್ಣೆ;-`ಮಾರಿಕವ್ವ ತಾಯೆ ಬಾರೆ,
ಕುಮಾರನ ತಲೆಗಾಯಿ’ ಎಂಬಂತೆ;
ಕಾಡ ಹೂ ಕೈಯ ಲಿಂಗವ ಪೂಜಿಸುವಾತನ ಭಕ್ತನೆಂಬರು, ಅಲ್ಲ.
ತಾನು ಲಿಂಗ ತನ್ನ ಮನವೆ ಪುಷ್ಪ.
ಪೂಜೆಯ ಪೂಜಿಸುವಾತನೆ ಸದ್ಭಕ್ತನು-ಗುಹೇಶ್ವರಾ.
ವಚನ 0443
ಊರದ ಚೇಳಿನ ಏರದ ಬೇನೆಯಲ್ಲಿ, ಮೂರುಲೋಕವೆಲ್ಲಾ ನರಳಿತ್ತು !
ಹುಟ್ಟದ ಗಿಡುವಿನ ಬಿಟ್ಟ ಎಲೆಯ ತಂದು ಮುಟ್ಟದೆ ಹೂಸಲು;
ಮಾಬುದು-ಗುಹೇಶ್ವರಾ
ವಚನ 0444
ಊರೊಳಗಣ ಕಿಚ್ಚು ಕಾನನದಲ್ಲಿ ಉರಿಯಿತ್ತು.
ಕಾನನದ ಕಿಚ್ಚು ಬಂದು ಊರೊಳಗೆ ಉರಿಯಿತ್ತು.
ಆರಿಸಿರೊ ಆರಿಸಿರೊ ನಾಲ್ಕು ದಿಕ್ಕಿನ ಬೇಗೆಯ.
ಆ ಭೂಭೂಕಾರವ ದೃಷ್ಟಿ ಮುಟ್ಟಿದಡೆ
ಅಟ್ಟೆ ಸಹಸ್ರವಾಡಿತ್ತು ! ಲೆಕ್ಕವಿಲ್ಲದ ಮರಣ ಮಡಿಯಿತ್ತು ಗುಹೇಶ್ವರಾ.
ವಚನ 0445
ಊರೊಳಗಣ ಘನಹೇರಡವಿಯೊಳೊಂದು
ಬೇರು ಮೇಲು, ಕೊನೆ ಕೆಳಗಾಗಿ ಸಸಿ [ಹುಟ್ಟಿತ್ತು]
ಆರೈದು ನೀರನೆರೆದು ಸಲುಹಲಿಕ್ಕೆ,
ಅದು ಸಾರಾಯದ ಫಲವಾಯಿತ್ತಲ್ಲಾ !
ಬಾರುಗೊಂಬಿನಲುದುರಿದ ಹಣ್ಣ ಮೆಲಿದವ
ಘೋರ ಸಂಸಾರಭವಕ್ಕೆ ಸಿಕ್ಕಿದ.
ಬೇರಿಂದಲಾದ ಫಲವ ದಣಿದುಂಡವ, ಊರಿಂದ ಹೊರಗಾದ
ಕಾಣಾ ಗುಹೇಶ್ವರಾ.
ವಚನ 0446
ಊರೊಳಗೊಬ್ಬ ದೇವ, ಮಡುವಿನಲೊಬ್ಬ ದೇವ,
ಅಡವಿಯಲೊಬ್ಬ ದೇವ, ಮಡಿಲಲೊಬ್ಬ ದೇವ.
ನೀರು ನೀರ ಕೂಡಿ, ಬಯಲು ಬಯಲ ಕೂಡಿ
ನರನೆಂಬ ದೇವ ತಾ ನಿರಾಳವೊ!
ಲಿಂಗವೆಂಬುದೊಂದು ಅನಂತ[ದ] ಹೆಸರು,
ಗುಹೇಶ್ವರನೆಂಬುದದೇನೊ ?
ವಚನ 0447
ಎಂಟು ನೆಲೆಯ ಮಣಿಮಾಡದ ಮಂಟಪದ ಮೇಲೆ,
ಏಳು ವಶ್ಯ ಕನ್ನಿಕೆಯರು,
ಮಹಾಲಿಂಗಕ್ಕೆ ಮಾಣಿಕದಾರತಿಯನೆತ್ತಿದರಲ್ಲಾ !
ಚಾಮರಂಗಳು ಬೀಸದೆ, ಮಾಣಿಕಸೂಸಕ ಕೆದರದೆ
ಅಧರಪಟಂಗಳು ಹಳಚದೆ, ಸ್ವಯಲಿಂಗಾರ್ಚನೆಯ ಮಾಡುವಲ್ಲಿ
ಪ್ರಸಾದಕ್ಕೆ ಕರುಣದಿಂ ದಯಮಾಡೈ (ದಯಮಾಡಿಸೈ?) ಗುಹೇಶ್ವರಾ.
ವಚನ 0448
ಎಂತಯ್ಯಾ ?
ನೊಸಲಲ್ಲಿ ಕಣ್ಣು, ಮನದಲ್ಲಿ ವಿರಸ, ನುಡಿವುದೆಲ್ಲ ಭಕ್ತಿರಸ-
ಜ್ಞಾನವೆಂತು ಹೇಳಾ ? ನಿರಹಂಕಾರವೆಂತು ಹೇಳಾ ?
ಅರುಹಿನ ಕುರುಹಿನ ಮರವೆ ಮಾತಿನೊಳಗದೆ.
ನಿನ್ನಿಂದ ನಿಜಪದವೆಂತು ಸಾಧ್ಯವಪ್ಪುದು ಹೇಳಾ ?
ಕುರುಹಳಿದು ಕುರುಹನರಿಯ ಬಲ್ಲಡೆ
ಗುಹೇಶ್ವರಲಿಂಗದಲ್ಲಿ ಉಭಯಗೆಟ್ಟಲ್ಲದೆ
ಪ್ರಸಾದವಿಲ್ಲ ಕಾಣಾ ಮಡಿವಾಳ ಮಾಚಯ್ಯಾ.
ವಚನ 0449
ಎಂಬತ್ತು (ಎರಡೆಂಬತ್ತು?) ಕೋಟಿ ವಚನವ ಹಾಡಿ
ಹಲವ ಹಂಬಲಿಸಿತ್ತೆನ್ನ ಮನವು,
ಮನ ಘನವನರಿಯದು, ಘನ ಮನವನರಿಯದು.
ಗುಹೇಶ್ವರನೆಂಬ ಲಿಂಗವನರಿದ ಬಳಿಕ
ಗೀತವೆಲ್ಲ ಒಂದು ಮಾತಿನೊಳಗು !
ವಚನ 0450
ಎಂಬತ್ತುನಾಲ್ಕು ಲಕ್ಷ ಒಟ್ಟೆ ಮೂರು ತತ್ತಿಯನಿಕ್ಕಿತ್ತ ಕಂಡೆ.
ಆನೆ ಆಡ ಹೋದಡೆ ಒಂದು ಚಿಕ್ಕಾಡು ನುಂಗಿತ್ತ ಕಂಡೆ,
ನಾರಿಯಾಡ ಹೋದಡೆ ಒಂದು ಚಂದ್ರಮತಿಯ ಕಂಡೆನು.
ಪೃಥ್ವೀಮಂಡಲವನೊಂದು ನೊಣ ನುಂಗಿತ್ತ ಕಂಡೆನು.
ಗುಹೇಶ್ವರನೆಂಬ ಲಿಂಗವ ಕಂಡವರುಳ್ಳಡೆ ನೀವು ಹೇಳಿರೆ
ವಚನ 0451
ಎಂಬತ್ತುನಾಲ್ಕು ಲಕ್ಷ ಜೀವರಾಶಿಗೂ ನೆಲನೊಂದೆ, ಜಲವೊಂದೆ,
ಲೋಕಸಂಬಂದಿಗೂ ಲಿಂಗಸಂಬಂದಿಗೂ
ನೆಲನೊಂದೆ ಜಲವೊಂದೆ,
ವಿರಕ್ತರ ಹಸ್ತಮುಟ್ಟಿ ಬಂದ ಕಾರಣ
ಅಗ್ಗವಣಿಯೆನಸಿತ್ತು, ಸಿತಾಳವೆನಸಿತ್ತು.
ಇಂತಪ್ಪ ಸುಪವಿತ್ರದ ಅಗ್ಗವಣಿಯನೊಲ್ಲದೆ,
ಅ[ನೇಕ] ಒರತೆಯ ನೀರಿಂಗೆರಗಿ
ಬರುದೊರೆ ಹೋಹರಿಗೆ ಮರಳಿ ಭಕ್ತರ ಪಿಠವೇಕೆ
ಹೇಳಾ ಗುಹೇಶ್ವರಾ ?
ವಚನ 0452
ಎಡದ ಕಾಲಲೊದ್ದಡೆ ಬಲದ ಕಾಲ ಹಿಡಿವುದು
ಬಲದ ಕಾಲಲೊದ್ದಡೆ ಎಡದ ಕಾಲ ಹಿಡಿವುದು.
`ತ್ರಾಹಿ ತ್ರಾಹಿ ತಪ್ಪೆನ್ನದು’ ಎಂದು
ಗುಹೇಶ್ವರನ ಶರಣರನೊಡಗೊಂಡು ಬಾರಯ್ಯಾ ಸಂಗನಬಸವಣ್ಣಾ.
ವಚನ 0453
ಎಡದ ಕೈಯ ಲಿಂಗವ ಬಲದ ಕೈಯಲ್ಲಿ ಮುಟ್ಟಿ,
ಸ್ಪರ್ಶನವ ಮಾಡುವ ಕರ್ಮಿಯ ನಾನೇನೆಂಬೆ !
ಭವಭವದಲ್ಲಿ ಬಹ ಕರ್ಮಿಯ ನಾನೇನೆಂಬೆ !
ಸತ್ಯವೇನವದಿರ, ಮಿಥ್ಯವೇನವದಿರ
ಹಿಡಿದ ಕೈ ತಾನೆ ಎಂದರಿಯರಾಗಿ.
ಗುಹೇಶ್ವರಲಿಂಗವು ಬೆರಗಾದನು !
ವಚನ 0454
ಎಡೆಬಿಡಾರಕ್ಕೆ ಕರ್ತರೆಂಬರಯ್ಯಾ, ಎಡೆ ಬಿಡಾರದ ಘನವನೆತ್ತಬಲ್ಲರೊ ?
ಆದಿ ಅನಾದಿಯಿಲ್ಲದಂದು ಶೂನ್ಯ ನಿಶ್ಶೂನ್ಯವಿಲ್ಲದಂದು
ನಾದ ಬಿಂದು ಕಳೆ ಹುಟ್ಟದಂದು ಬ್ರಹ್ಮವಿಷ್ಣ್ವಾದಿಗಳಿಲ್ಲದಂದು
ಅಷ್ಟದಿಕ್ಕು ನವಖಂಡಗಳಿಲ್ಲದಂದು
ನಿರಾಳ ನಿಶ್ಶೂನ್ಯ ನಿರ್ಭೆದ್ಯವಾದ ಪರಮಚಿತ್ಕಲೆಯೆಂಬ ಕೋಣದಲ್ಲಿಪ್ಪ
ಪರಮಾಮೃತವನು ಸುಯಿಧಾನವೆಂಬ ಹಸ್ತದಿಂದ
ಸುಜ್ಞಾನವೆಂಬ ಗಿಣಿಲಿನಲ್ಲಿ ಗಡಣಿಸಿಕೊಂಡು
ನಿರ್ಮಳ ಸದ್ಭಾವ ಹಸ್ತದಿಂದ ಚಿನ್ಮಯ ಮಹಾಲಿಂಗಕ್ಕರ್ಪಿಸಿ
ಚಿದ್ಘನಪ್ರಸಾದವ ಸವಿದು
ಅಸಂಖ್ಯಾತ ಬ್ರಹ್ಮಾಂಡ ಪಿಂಡಾಂಡದೊಳಗೆ ಪರಿಪೂರ್ಣವಾಗಿ
ತನ್ನ ನಿಲವ ತಾನರಿಯ ಬಲ್ಲಡೆ ಎಡೆಬಿಡಾರಕ್ಕೆ ಕರ್ತನೆಂಬೆನಯ್ಯಾ.
ಹಾಂಗಲ್ಲದೆ; ಹೊನ್ನಿಂಗೆ ಮಣ್ಣಿಂಗೆ ಹೆಣ್ಣಿಂಗೆ ಕೂಳಿಂಗೆ
ಮಣ್ಣಮನೆ, ದೇಗುಲಕೆ ಹೊಡೆದಾಡಿ
ಭವಾಂಬುದಿಯಲ್ಲಿ ತೇಂಕಾಡುವಂಥ ಕುನ್ನಿಮಾನವರು
ಎಡೆಬಿಡಾರಕ್ಕೆ ಸಲ್ಲರು ಕಾಣಾ ಗುಹೇಶ್ವರಾ.
ವಚನ 0455
ಎಣ್ಣೆ ಬತ್ತಿ ಪ್ರಣತೆ ಕೂಡಿ ಜ್ಯೋತಿಯ ಬೆಳಗಯ್ಯಾ.
ಅಸ್ಥಿ ಮಾಂಸ ದೇಹ ಪ್ರಾಣ ನಿಃಪ್ರಾಣವಾಯಿತ್ತು.
ದೃಷ್ಟಿ ಪರಿದು ಮನಮುಟ್ಟಿದ ಪರಿಯೆಂತೊ ?
ಮುಟ್ಟಿ ಲಿಂಗವ ಕೊಂಡಡೆ, ಕೆಟ್ಟತ್ತು ಜ್ಯೋತಿಯ ಬೆಳಗು !
ಇದು ಕಷ್ಟವೆಂದರಿದೆನು ಗುಹೇಶ್ವರಾ.
ವಚನ 0456
ಎಣ್ಣೆ ಬೇರೆ ಬತ್ತಿ ಬೇರೆ:ಎರಡೂ ಕೂಡಿ ಸೊಡರಾಯಿತ್ತು.
ಪುಣ್ಯ ಬೇರೆ ಪಾಪ ಬೇರೆ:ಎರಡೂ ಕೂಡಿ ಒಡಲಾಯಿತ್ತು.
ಮಿಗಬಾರದು, ಮಿಗದಿರಬಾರದು, ಒಡಲಿಚ್ಛೆಯ ಸಲಿಸದೆ ನಿಮಿಷವಿರಬಾರದು.
ಕಾಯಗುಣವಳಿದು ಮಾಯಾಜ್ಯೋತಿ ವಾಯುವ ಕೂಡುವ ಮುನ್ನ,
ಭಕ್ತಿಯ ಮಾಡಬಲ್ಲಡೆ ಆತನೆ ದೇವ ಗುಹೇಶ್ವರಾ.
ವಚನ 0457
ಎತ್ತಣ ಮಾಮರ ಎತ್ತಣ ಕೋಗಿಲೆ, ಎತ್ತಣಿಂದೆತ್ತ ಸಂಬಂಧವಯ್ಯಾ ?
ಬೆಟ್ಟದ ಮೇಲಣ ನೆಲ್ಲಿಯ ಕಾಯಿ ಸಮುದ್ರದೊಳಗಣ ಉಪ್ಪು,
ಎತ್ತಣಿಂದೆತ್ತ ಸಂಬಂಧವಯ್ಯಾ ?
ಗುಹೇಶ್ವರಲಿಂಗಕ್ಕೆಯೂ ನಮಗೆಯೂ ಎತ್ತಣಿಂದೆತ್ತ ಸಂಬಂಧವಯ್ಯಾ.
ವಚನ 0458
ಎತ್ತೆತ್ತ ನೋಡಿದಡೆ ಬಸವಣ್ಣನೆಂಬ ಬಳ್ಳಿ,
ಆ ಬಳ್ಳಿಯ ಹಿಡಿದೆತ್ತಿದಡೆ ಲಿಂಗವೆಂಬ ಗೊಂಚಲು.
ಆ ಲಿಂಗದ ಗೊಂಚಲ ಹಿಡಿದೆತ್ತಿದಡೆ, ಭಕ್ತಿರಸಮಯವಾಯಿತ್ತಯ್ಯಾ.
ಇದಾರಯ್ಯಾ ಅಮಳೋಕ್ಯವ ಮಾಡಬಲ್ಲವರು ?
ಇದಾರಯ್ಯಾ ಹೊರಗೆ ಪ್ರಜ್ವಲಿಸಿ ತೋರಬಲ್ಲವರು ?
ಬಸವಗುರು[ವೆ] ಎನ್ನ ಕರಸ್ಥಲದ ಲಿಂಗದ
ಆದಿಯನರುಹಿ ತೋರಿದ ಕಾರಣ,
ಗುಹೇಶ್ವರಲಿಂಗದ ನಿಲವ ನಿನ್ನಿಂದಲರಿದೆ,
ಈ ಲೋಕಾದಿಲೋಕಂಗಳೆಲ್ಲವು
ಎನ್ನ ಮುಖದಲ್ಲಿ ಕಿಂಚಿತ್ತು.
ವಚನ 0459
ಎನಗೊಂದು ಲಿಂಗ ನಿನಗೊಂದು ಲಿಂಗ ಮನೆಗೊಂದು ಲಿಂಗವಾಯಿತ್ತು.
ಹೋಯಿತ್ತಲ್ಲಾ ಭಕ್ತಿ ಜಲವ ಕೂಡಿ.
ಉಳಿ ಮುಟ್ಟದ ಲಿಂಗವ ಮನ ಮುಟ್ಟಬಲ್ಲುದೆ ಗುಹೇಶ್ವರಾ.
ವಚನ 0460
ಎನ್ನ ಕಂಗಳೊಳಗಣ ರೂಹಿಂಗೆ ಅನು ಬೇಟಗೊಂಡು ಬಳಲುವಂತೆ,
ಹಿಡಿದು ನೆರೆಯಲಿಲ್ಲಯ್ಯಾ.
ತುರೀಯದ ತವಕವನೇನೆಂಬೆನಯ್ಯಾ.
ಸಂಗಸಂಯೋಗವಿಲ್ಲದ ರತಿಸುಖವನರಸಲುಂಟೆ?
ಗುಹೇಶ್ವರಲಿಂಗದ ಕೃತಕದಾಳಿಯನೇನೆಂಬೆ?
ವಚನ 0461
ಎನ್ನ ಕರಸ್ಥಲದ ಲಿಂಗದೊಳಗೆ
ಒಂದು ಮಹಾಬೆಳಗ ಕಂಡೆನಯ್ಯಾ !
ಮಹಾ ಮಂಗಳನಿಳಯವಾಗಿ ತೋರುತ್ತಿದೆ !
ಗುಹೇಶ್ವರನೆಂಬ ಲಿಂಗದ ಕಂಗಳ ಕಾಂತಿಗಳು
ಸಂಗನಬಸವಣ್ಣನ ನಿವಾಳಿಸುತ್ತಿದ್ದವಯ್ಯಾ !
ವಚನ 0462
ಎನ್ನ ಕಾಯವ ಬಸವಣ್ಣನಳವಡಿಸಿಕೊಂಡ.
ಎನ್ನ ಮನವ ಚನ್ನಬಸವಣ್ಣನಳವಡಿಸಿಕೊಂಡ.
ಎನ್ನ ಭಾವವ ಮಡಿವಾಳಯ್ಯನಳವಡಿಸಿಕೊಂಡ.-
ಇಂತೀ ಮೂವರು ಒಂದೊಂದನಳವಡಿಸಿಕೊಂಡ ಕಾರಣ
ಗುಹೇಶ್ವರಾ, ನಿಮ್ಮ ಶರಣರೆಂಬ ತ್ರಿಮೂರ್ತಿಗಳಿಗೆ
ನಮೋ ನಮೋ ಎನುತಿರ್ದೆನು.
ವಚನ 0463
ಎನ್ನ ಕಾಯವೆಂಬ ಸಿಂಹಾಸನದಲ್ಲಿ
ಪ್ರಾಣವೆಂಬ ಲಿಂಗವ ಮೂರ್ತಗೊಳಿಸಿ,
ಧ್ಯಾನವೆಂಬ ಹಸ್ತದಲ್ಲಿ ಮುಚ್ಚಿ ಪೂಜಿಸುತಿರಲು,
ಮೆಲ್ಲಮೆಲ್ಲನೆ ಸುತ್ತಿ ಮುತ್ತಿದ ಸಂಸಾರ, ಬಯಲ ಬೆರಸಿ,
ನಾ ನೀನೆಂಬ ಭೇದವಳಿದು,
ಮಹಾದಾನಿ ಗುಹೇಶ್ವರನ ನೋಡಲಾಗಿ ನಿಜಲಿಂಗವಾಯಿತ್ತು.
ವಚನ 0464
ಎನ್ನ ತನುವೆ ಚನ್ನಬಸವಣ್ಣನಯ್ಯಾ, ಎನ್ನ ಮನವೆ ಮಡಿವಾಳನಯ್ಯಾ,
ಎನ್ನ ಪ್ರಾಣವೆ ಸಂಗನಬಸವಣ್ಣನಯ್ಯಾ,
ಗುಹೇಶ್ವರಾ-ನಿಮ್ಮ ಶರಣರ ಘನವನು
ಎನ್ನ ಸರ್ವಾಂಗದಲ್ಲಿ ಕಂಡು ಪರಮಸುಖಿಯಾಗಿರ್ದೆನು.
ವಚನ 0465
ಎನ್ನ ನಾನರಿಯದಂದು ಮುನ್ನ ನೀನೇನಾಗಿರ್ದೆ ಹೇಳಾ?
ಮುನ್ನ [ನೀ] ಬಾಯ ಮುಚ್ಚಿಕೊಂಡಿರ್ದೆ ಎಂಬುದ,
ನಾ ನಿನ್ನ ಕಣ್ಣಿಂದ ಕಂಡೆನು,
ಎನ್ನ ನಾನರಿದ ಬಳಿಕ ಇನ್ನು ನೀ ಬಾಯಿದೆರೆದು ಮಾತನಾಡಿದಡೆ
ಅದನೆನ್ನ ಕಣ್ಣಿಂದ ಕಂಡು ನಾಚಿದೆ ನೋಡಾ.
ಎನ್ನ ಕಾಬ ನಿನಗೆ, ನಿನ್ನ ಕಾಬ ಎನಗೆ, ಸಂಬಂಧ ಒಂದೇ ನೋಡಾ!
ಗುಹೇಶ್ವರಾ ನಿನ್ನ ಬೆಡಗಿನ ಬಿನ್ನಾಣವ ನಾನರಿದೆ ನೋಡಾ.
ವಚನ 0466
ಎನ್ನ ಮನದ ಕೊನೆಯ ಮೊನೆಯ ಮೇಲೆ
ಅಂಗವಿಲ್ಲದ ರೂಪನ ಕಂಡು ಮರುಳಾದೆನವ್ವಾ.
ಆತನ ಕಂಡು ಬೆರಗಾದೆನವ್ವಾ.
ಎನ್ನಂತರಂಗದ ಆತುಮನೊಳಗೆ
ಅನು(ನಿ?)ಮಿಷ ನಿಜೈಕ್ಯ ಗುಹೇಶ್ವರನ ಕಂಡು !
ವಚನ 0467
ಎನ್ನ ಮನದ ಮರವೆ ಬಿನ್ನವಾಗದು.
ಮರೆದು ಅರಿದೆನೆಂದಡೆ ಅರುಹಿನ ಮರವೆಯ ಮಧ್ಯದಲ್ಲಿ ಎಡೆದೆರಪಿಲ್ಲ.
ಕೋಲಿನಲ್ಲಿ ನೀರ ಹೊಯ್ದರೆ ಸೀಳಿ ಹೋಳಾದುದುಂಟೆ ?
ಅರಿವುದೊಂದು ಘಟ, ಮರೆವುದೊಂದು ಘಟ, ಒಡಗೂಡುವಠಾವಿನ್ನೆಂತೋ.
ಹುತ್ತದ ಬಾಯಿ ಹಲವಾದಡೆ ಸರ್ಪನೈದುವಲ್ಲಿ ಒಡಲೊಂದೆ ತಪ್ಪದು.
ತನ್ನ ಚಿತ್ತದ ಭೇದವಲ್ಲದೆ ವಸ್ತುವಿಂಗೆ ಭೇದವುಂಟೆ [ಗುಹೇಶ್ವರ]
ವಚನ 0468
ಎನ್ನ ಹೃದಯಕಮಲ ಮಧ್ಯದಲ್ಲಿ
ಮೂರ್ತಿಗೊಂಡಿಪ್ಪ ಎನ್ನ ಪ್ರಾಣೇಶ್ವರಂಗೆ-
ಎನ್ನ ಕ್ಷಮೆಯೆ ಅಬಿಷೇಕ, ಎನ್ನ ಪರಮವೈರಾಗ್ಯವೆ ಪುಷ್ಪದಮಾಲೆ
ಎನ್ನ ಸಮಾದಿಸಂಪತ್ತೆ ಗಂಧ, ಎನ್ನ ನಿರಹಂಕಾರವೆ ಅಕ್ಷತೆ,
ಎನ್ನ ಸದ್ವಿವೇಕವೆ ವಸ್ತ್ರ, ಎನ್ನ ಸತ್ಯವೆ ದಿವ್ಯಾಭರಣ
ಎನ್ನ ವಿಶ್ವಾಸವೆ ಧೂಪ, ಎನ್ನ ದಿವ್ಯಜ್ಞಾನವೆ ದೀಪ,
ಎನ್ನ ನಿಭ್ರಾಂತಿಯೆ ನೈವೇದ್ಯ, ಎನ್ನ ನಿರ್ವಿಷಯವೆ ತಾಂಬೂಲ
ಎನ್ನ ವರಿಾನವೆ ಘಂಟೆ, ಎನ್ನ ನಿರ್ವಿಕಲ್ಪತೆಯೆ ಪ್ರದಕ್ಷಿಣೆ,
ಎನ್ನ ಶುದ್ಧಿಯೆ ನಮಸ್ಕಾರ,
ಎನ್ನ ಅಂತಃಕರಣದಿಂದ ಮಾಡುವ ಸೇವೆಯೆ ಉಪಚಾರಂಗಳು-
ಈ ಪರಿಯಲ್ಲಿ ಎಮ್ಮ ಗುಹೇಶ್ವರಲಿಂಗಕ್ಕೆ ಪ್ರಾಣ (ಲಿಂಗ) ಪೂಜೆಯೆ ಮಾಡಿ
ಬಾಹ್ಯಕ್ರೀಯ ಮರೆದನು ಕಾಣಾ ಸಂಗನಬಸವಣ್ಣಾ.
ವಚನ 0469
ಎನ್ನಂಗದಲ್ಲಿ ನಿಮಗೆ ಮಜ್ಜನ,
ಎನ್ನ ತುರುಬಿನಲ್ಲಿ ನಿಮಗೆ ಕುಸುಮ ಪೂಜೆ
ಎನ್ನ ನೇತ್ರದಲ್ಲಿ ನಿಮಗೆ ನಾನಾರೂಪು ವಿಚಿತ್ರ ನೋಟ.
ಎನ್ನ ಶ್ರೋತ್ರದಲ್ಲಿ ನಿಮಗೆ ಪಂಚ ಮಹಾವಾದ್ಯದ ಕೇಳಿಕೆ.
ಎನ್ನ ನಾಸಿಕದಲ್ಲಿ ನಿಮಗೆ ಸುಗಂಧ ಧೂಪ ಪರಿಮಳ.
ಎನ್ನ ಜಿಹ್ವೆಯಲ್ಲಿ ನಿಮಗೆ ಷಡುರಸಾನ್ನ ನೈವೇದ್ಯ.
ಎನ್ನ ತ್ವಕ್ಕಿನಲ್ಲಿ ನಿಮಗೆ ವಸ್ತ್ರಾಭರಣಾಲಂಕಾರ ಪೂಜೆ.
ಎನ್ನ ಆನಂದವೆಂಬ ಸಜ್ಜೆಗೃಹದಲ್ಲಿ ನೀವು ಸ್ಪರುಸನಂಗೈದು ನೆರೆದಿಪ್ಪಿರಾಗಿ,
ನಾನು ನೀನೆಂಬೆರಡಳಿದು, ತಾನು ತಾನಾದ
ಘನವನೇನೆಂಬೆ ಗುಹೇಶ್ವರಯ್ಯಾ.
ವಚನ 0470
ಎನ್ನಂತರಂಗವೆಂಬ ಭೂಮಿಯಲ್ಲಿ
ಮಹಾಜ್ಞಾನವೆಂಬ ನಿಧಾನ ಭೂಗತವಾಗಿದ್ದಿತ್ತಯ್ಯಾ.
ಶ್ರೀಗುರುವೆಂಬ ಅಂಜನಸಿದ್ಧನು ಬಂದು,
ಎನ್ನ ಅದಕ್ಕೆ ಬಲೆಯನಿಕ್ಕಿ,
ತನ್ನ ಕರುಣಾಮೃತವೆಂಬ ಮರುಜವಣಿಯ ಹಿಂಡಿ
ಆ ನಿಧಾನವನೆನಗೆ ಕರತಳಾಮಳಕವ ಮಾಡಿಕೊಟ್ಟನಯ್ಯಾ.
ಗುಹೇಶ್ವರಾ-ನಿಮ್ಮ ಶರಣ ಅನಿಮಿಷನೆಂಬ ಶ್ರೀಗುರು.
ವಚನ 0471
ಎನ್ನಲ್ಲಿ ನಾನು ದೃಷ್ಟವೆಂದಡೆ
ನಿಮ್ಮಲ್ಲಿ ನೀವು ಮೆಚ್ಚುವಿರೆ ?
ಸಂದೇಹದಿಂದ ಸವೆಯಿತ್ತು ಲೋಕವು.
ಕನ್ನಡಿಯುಂಡ ಬಿಂಬ, ಕಬ್ಬನವುಂಡ ನೀರು,
ಕಬ್ಬಿಸಿಲು ಅರಿಸಿನವ ನುಂಗಿದಂತೆ ಗುಹೇಶ್ವರಾ ನಿಮ್ಮ ಶರಣರು.
ವಚನ 0472
ಎನ್ನಲ್ಲಿ ನಾನು ನಿಜವಾಗಿ ನಿಮ್ಮನರಿದೆಹೆನೆಂದಡೆ
ಅದು ನಿಮ್ಮ ಮತಕ್ಕೆ ಬಪ್ಪುದೆ?
ಎನ್ನ ನಾನು ಮರೆದು, ನಿಮ್ಮನರಿದಡೆ,
ಅದು ನಿಮ್ಮ ರೂಪೆಂಬೆ.
ಎನ್ನ ನಿನ್ನೊಳು ಮರೆದಡೆ, ಕನ್ನಡಿಯೊಳಗಣ ಪ್ರತಿಬಿಂಬದಂತೆ
ಬಿನ್ನವಿಲ್ಲದೆ ಇದ್ದೆನು ಕಾಣಾ ಗುಹೇಶ್ವರಾ.
ವಚನ 0473
ಎರಡು ಒಂದಾದ ಬಳಿಕ ಅರ್ಚನೆ ಹಿಂಗಿತ್ತು.
ಎರಡು ಒಂದಾದ ಬಳಿಕ ಅರ್ಪಿತ ಹಿಂಗಿತ್ತು.
ಎರಡು ಒಂದಾದ ಬಳಿಕ ಆಚಾರ ಹಿಂಗಿತ್ತು.
ಎರಡು ಒಂದಾದ ಬಳಿಕ ಅವಧಾನ ಹಿಂಗಿತ್ತು.
ಎರಡು ಒಂದಾದ ಬಳಿಕ ಶಬ್ದಕ್ಕೆ ಇಂಬಿಲ್ಲ
ರೂಹಿಸಲೆಡೆಯುಂಟೆ ಗುಹೇಶ್ವರಾ ?
ವಚನ 0474
ಎರಡು ಕಣ್ಣುಳ್ಳಡೆ ಚತುಭರ್ುಜನೆಂಬೆನು.
ಮೂರು ಕಣ್ಣುಳ್ಳಡೆ ಮಹೇಶ್ವರನೆಂಬೆನು
ಮೈಯೆಲ್ಲಾ ಕಣ್ಣಾದಡೆ ಸದಾಶಿವನೆಂಬೆನು
(ಹದಿನೈದು ಕಣ್ಣಾದಡೆ ಪರಶಿವನೆಂಬೆನು?)
ಗುಹೇಶ್ವರಾ ನಿಮ್ಮ ಶರಣಂಗೆ ಅಂಗಾಲ ಕಣ್ಣು ಮೂಡಿದಡೆ
ನಿರುಪಮ ಮಹಿಮ ಅಲ್ಲಯ್ಯನೆಂಬೆನು.
ವಚನ 0475
ಎರಡು ನೇತ್ರ ಒಂದಾದ ಭಾಳನೇತ್ರವು ಇಷ್ಟಲಿಂಗದ ಗೋಳಕಕ್ಕೆ ಕೂಟವು.
ಒಂದು ಲಿಂಗ ಎರಡಾದುದೆ ಇಷ್ಟ ಪ್ರಾಣಲಿಂಗವು.
ಆ ಪ್ರಾಣಲಿಂಗದ ಹಸ್ತಂಗಳಿಗೆರಡು ನೇತ್ರಂಗಳೆ ಕುಚಂಗಳು,
ಆ ಕುಚಂಗಳು ಹಿಡಿಯಲಿಕೆ,
ಈ ಕುಚವೆರಡು ಗುಹ್ಯ ಒಂದು ಕೂಡಿ ತ್ರಿಕೂಟವೆಂಬ ಹೆಸರಾಯಿತ್ತು.
ಆ ತ್ರಿಕೂಟವೆಂಬ ಶಾಂಭವಪುರದ ಮಧ್ಯದಲ್ಲಿ
ಜ್ಯೋತಿರ್ಲಿಂಗವೇಕವಾದ ಬಳಿಕ,
ತನುತ್ರಯದ ವಿಕಾರವ ಹೊದ್ದಲಾಗದು.
ವಿಕಾರವ ಹೊದ್ದಿದರೆ ಮೀಸಲೋಗರವ ಶುನಿಮುಟ್ಟಿದಂತಾಯಿತ್ತು
ಆ ಜೀವಾತ್ಮಪದಾರ್ಥವು ಲಿಂಗಕ್ಕೆ ಸಲ್ಲದು,
ಅವರ ತೆರನೆಂತಾಯಿತ್ತೆಂದಡೆ ;
ಜನ್ಮದಾರಿದ್ರನು ನಿಕ್ಷೇಪವಂ ಕಂಡು ಹೋಗಲಾಗಿ ದಿಗಿಲುಬಿದ್ದು ಸತ್ತಂತಾಯಿತ್ತು.
ಅಂಥ ನಿರ್ಭಾಗ್ಯ ದುರ್ಮರಣನ ಕಂಡು ಹೇಸಿ,
ತಮ್ಮ ತನುತ್ರಯವಿಕಾರಮಂ ಪೊರ್ದದೆ,
ಲಿಂಗ ನಿಕ್ಷೇಪದಲ್ಲಿ ನಿರಂಗವಾಗಿ, ಮನ್ಮಥರತಿಯೆಂಬ ನರಕವ ಬೀಳದೆ,
ಅಕ್ಷಯಸುಖಿಗಳಾದರು ನೋಡಾ ಗುಹೇಶ್ವರಲಿಂಗದಲ್ಲಿ.
ವಚನ 0476
ಎರಡು ಬೆಟ್ಟದ ನಡುವೆ ಕರಡಿಯ ಮಿಳಿಯ ಮಾಡಿ,
ಹುಲಿಯನೂ ಎತ್ತನೂ ಹೂಡಿ ಹೊಡೆದವರಾರೊ ?
ಎರಡರ ಎಂಟೆರಡರ, ಆರರ (ಆರೆಡರ?), ನಾಲ್ಕೆರಡರ
ಶರದಿ ಶರದಿಯ ಕೂಡಿ ಮೊರೆವುದಿದೇನೊ ?
ಕುರುಡ ಹೆಳವನ ಕೈವಿಡಿದು ನಡೆವಂತೆ,
ಗುಹೇಶ್ವರನೆಂಬ ಲಿಂಗನಿರಾಳದ ನಿಲುವು.
ವಚನ 0477
ಎರಡು ಬೆಟ್ಟದ ನಡುವೆ ಹಳ್ಳವ ಮಿಳಿಯ ಮಾಡಿ,
ಬಾವಿಯನುತ್ತೆನೆಂಬ ಮರುಳತನವ ನೋಡಾ !
ತೊರೆಯ ಮೇಲೆ ಮಾರುಗೋಲನಿಕ್ಕಿ
ಹುಟ್ಟ ಮುರಿದು ಹೋದ ಅಂಬಿಗನ ನೋಡಾ.
ಮರೆದು ಮಲಗಿದ ಬೆಕ್ಕಿನ ಕಿವಿಯ ಇಲಿ ಮೇದಂತೆ
ಗುಹೇಶ್ವರನೆಂಬ ಲಿಂಗ ನಿರಾಳದ ನಿಲವು.
ವಚನ 0478
ಎರಡೆಂಬತ್ತು ಕೋಟಿ ಗೀತವ ಹಾಡಿದರೇನಯ್ಯಾ ?
ಬೆಟ್ಟಕ್ಕೆ ನಾಯಿ ಬೊಗಳಿದಂತಾಯಿತ್ತಯ್ಯಾ.
ಮನವು ಘನವ ನೆಮ್ಮದು, ಘನವು ಮನವ ನೆಮ್ಮದು.
ಹಾಡಿದರೇನು ಓದಿದರೇನು ?
ಗುಹೇಶ್ವರ ನೀನೊಲಿದ ಕಾಲಕ್ಕೆ
ಎರಡೆಂಬತ್ತು ಕೋಟಿ ಗೀತವೆಲ್ಲವೂ
ನಿಮ್ಮದೊಂದು ಮಾತಿನೊಳಡಕವಯ್ಯಾ.
ವಚನ 0479
ಎರಡೆಂಬರಯ್ಯಾ ಕರಣದ ಕಂಗಳಲ್ಲಿ ನೋಡಿದವರು.
ಎರಡುವನತಿಗಳೆದು ಒಂದೆಂಬರಯ್ಯಾ.
ಕಾಮಿಸೂದಿಲ್ಲಾಗಿ ಕಲ್ಪಿಸೂದಿಲ್ಲ.
ಭಾವಿಸೂದಿಲ್ಲಾಗಿ ಬಯಸೂದಿಲ್ಲ.
ಗುಹೇಶ್ವರನೆಂಬುದಿಲ್ಲಾಗಿ ಮುಂದೆ ಬಯಲೆಂಬುದೂ ಇಲ್ಲ.
ವಚನ 0480
ಎರಡೊಂದು ಮುಕ್ಕೂಟದೊಳು ಲಿಂಗದೆಡೆಯಾಟವಿರಲು,
ಬೀಜಕ್ಷೇತ್ರದೆರಕ ಹರಿಹರಯೋಗ.
ವಿರತರತಿ ನಿಕ್ಷೇಪವಿದುವೆ ಗರ್ಭಾದಾನ.
ಪರಮಬೀಜಾವಾಪವಿದರ ಫಲನಿರ್ವಾಣ !
ಸರಸಲಿಂಗದ ನಿಷೇಕವನರಿವುದೆ ಸಾಜ,
ಗುರುವೆ ಕರುಣಿಸಿದ ಶಿವಲಿಂಗಕಮಲಾರ್ಚನೆಯನು.
ಇದು ಗುಹ್ಯ ಗುಹೇಶ್ವರಾ.
ವಚನ 0481
ಎಲೆ ಬಸವಣ್ಣ ನಾವು ಬಹುದಕ್ಕೆ ಮುನ್ನವೆ
ಬಂದಹರೆಂದು ಶುಭಸೂಚನೆ ತೋರಿತ್ತೆಂದೆ.
ಮನೆಯ ಮೀರಿ ಮಂದದ ದೈವ ಉಂಟೆ ಎಂಬುದ ತಿಳಿ,
ಗುಹೇಶ್ವರಲಿಂಗದಲ್ಲಿ ಸಂಗನಬಸವಣಾ
ವಚನ 0482
ಎಲೆ ಮನವೆ,
ಎಲ್ಲಿ ಹವಣಿಸಬಾರದ ಅಖಂಡ ಬೆಳಗು ತೋರುತ್ತಿಹುದು
ಅದೀಗ ನಿನ್ನ ನಿಜ.
ಎಲೆ ಮನವೆ,
ಆವಲ್ಲಿ ನೀನೆಂಬ ಶಂಕೆ ಹಿಂಗಿ ತಾನೆ ತೋರುತ್ತಿಹುದು
ಅದೀಗ ನಿನ್ನ ನಿಜ.
ಎಲೆ ಮನವೆ,
ನಿನ್ನ ನಿಜವನರಿಯಬಲ್ಲಡೆ ಅದೇ ಬ್ರಹ್ಮಜ್ಞಾನ, ಅದೇ ಕೇವಲಮುಕ್ತಿ,
ಅದೇ ನಮ್ಮ ಗುಹೇಶ್ವರಲಿಂಗವನರಿವ
ಸಹಜಭಕ್ತಿಯ ಕುಳ ಕಾಣಾ.
ಎಲೆ ಮನವೆ-ನೀನಿದ ನಿಶ್ಚಯಿಸಿಕೊ ಮರೆಯದೆ.
ವಚನ 0483
ಎಲೆ ಮನವೆ; ನೀ ನಿನ್ನ ನಿಜವ ತಿಳಿವಡೆ
ಆ ನಿನ್ನ ನಿಜವ ಹೇಳುವೆ ಕೇಳು:
ಅದು ಕೇವಲ ಜ್ಯೋತಿ ಅದು ವರ್ಣಾತೀತ.
ನೀನದನರಸುವಾಗ ನಿನಗಾವಲ್ಲಿ ನಿಶ್ಚಯ ತೋರಿತ್ತು,
ಅದೀಗ ನಿನ್ನ ಪರಿಪೂರ್ಣತ್ವದ ನೆಲೆ.
ಆ ನಿನ್ನ ನಿಜವ ನಿಶ್ಚಯಿಸಿ ನೀ ನಿರ್ಗಮನಿಯಾದಲ್ಲಿ
ಅದೇ ನಿನ್ನ ಸಮ್ಯಕ್ಜ್ಞಾನದ ತೋರಿಕೆ !
ಆ ತೋರಿಕೆಯ ಅಖಂಡ ಬೆಳಗಿನ ಹೊಳಹಿನೊಳಗೆ
ನೀ ನಮ್ಮ ಗುಹೇಶ್ವರಲಿಂಗದ ಶ್ರೀಚರಣವನರಸಿಕೊಂಡು
ನಿಶ್ಚಿಂತನಾಗೆಲೆ ಮನವೆ.
ವಚನ 0484
ಎಲೆಯಿಲ್ಲದ ವೃಕ್ಷ ಉಲಿಯಬಲ್ಲುದೆ ?
ಜಲವಿಲ್ಲದ ತಟಾಕ ತೆರೆಗೊಡಲುಂಟೆ ?
ಶಬ್ದಮುಗ್ಧವಾದವಂಗೆ, ನುಡಿಗೆಡೆಯುಂಟೆ ?
ಸಮಯವ ಸಾದಿಸುವನ್ನಬರ ಎಂತು ನಿಜನಿಃಪತಿಯಪ್ಪುದು ?
ಭ್ರಾಂತುಮರ್ಕಟನ ವೃಶ್ಚಿಕ ಹೊಯಿದಂತೆ
ನಮ್ಮ ಗುಹೇಶ್ವರಲಿಂಗದಲ್ಲಿ
ಮರೆದಾಡಬೇಡವೆಲೆ ಭ್ರಾಂತುಯೋಗಿ ಘಟ್ಟಿವಾಳಯ್ಯ.
ವಚನ 0485
ಎಲ್ಲ ಎಲ್ಲವನರಿಯಬಹುದು; ಸಾವನರಿಯಬಾರದು.
ಸರ್ವವಿದ್ಯೆ ಸಕಲವ್ಯಾಪ್ತಿಯನರಿಯಬಹುದು; ಸಾವನರಿಯಬಾರದು.
ಹರಿ ಬ್ರಹ್ಮ ಕಾಲ ಕಾಮ ದಕ್ಷಾದಿ ದೇವ ದಾನವ ಮಾನವರಿಗೆಲ್ಲಗೆಯೂ ಸಾವು !
ಮಹಾಪುರುಷರಿಗೆಯೂ ಸಾವು !
ಶಿವ ಶಿವಾ, ಈ ಸಾವನರಿಯದೀ ಲೋಕ !
ಪ್ರಪಂಚವ ಮರೆದು ಲಿಂಗದಲ್ಲಿ ನೆನಹು ನೆಲೆಗೊಂಡಡೆ
ಆ ಮಹಿಮಂಗೆ ಸಾವಿಲ್ಲ.
ಈ ಸಾವನರಿಯದ ಅರೆಮರುಳಗಳ ಅರಿವು
ಮಾನ (ಮಹಾ?) ಹಾನಿ ಕಾಣಾ ಗುಹೇಶ್ವರಾ.
ವಚನ 0486
ಎಲ್ಲರಂತೆ ನುಡಿದು ಎಲ್ಲರಂತೆ ನಡೆದು
ಎಲ್ಲರಂತೆ ಸಂಸಾರವ ಬಳಸುತ್ತಿಪ್ಪರೆಂದು
ಎಲ್ಲರಂತೆ ಕಾಣಬಹುದೆ ನಿಜ ದೊರೆಕೊಂಡ ನಿರ್ಮಲಜ್ಞಾನಿಗಳ ?
ಅವರ ಮನೋಮಧ್ಯದಲ್ಲಿ ತೊಳಗಿ ಬೆಳಗುವ ಶಿವಜ್ಞಾನಬೀಜವು ಹೊಳ್ಳಪ್ಪುದೆ ?
ಉರಿಯದಿದ್ದಡೂ ಕಿಚ್ಚನೊರಲೆ ಕೊಂಬುದೆ ಗುಹೇಶ್ವರಾ ?
ವಚನ 0487
ಎಲ್ಲಿಯೂ ಇಲ್ಲೆಂಬುದ ಹುಸಿ ಮಾಡಿ,
ಶಿಲಾಲಿಖಿತವು ಗುರುವಿನ ವಶವಾಗಿ,
ಅಲ್ಲಲ್ಲಿಗೆ ಉಂಟೆಂಬುದನು ನಿಲ್ಲದೆ ತೋರಿ,
ಮಾಡಿದನು ಶಿಷ್ಯ-ತಾನು ಬಲ್ಲಿದ !
ಷಡುವಿಧದ ಜವನಿಕೆಯ ಮರೆಯಲ್ಲಿಯೆ
ಗುಹೇಶ್ವರಲಿಂಗದ ಅರಿವು !
ವಚನ 0488
ಎಸೆಯದಿರು ಎಸೆಯದಿರು ಕಾಮಾ,
ನಿನ್ನ ಬಾಣ ಹುಸಿಯಲೇಕೊ?
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ-ಇವು ಸಾಲದೆ ನಿನಗೆ ?
ಗುಹೇಶ್ವರಲಿಂಗದ ವಿರಹದಲ್ಲಿ ಬೆಂದವರ,
ಮರಳಿ ಸುಡಲುಂಟೆ ಮರುಳು ಕಾಮಾ ?
ವಚನ 0489
ಎಳ್ಳಿಂಗೆ ಪರಿಮಳವ ಕಟ್ಟಿದಲ್ಲದೆ,
ಎಣ್ಣೆಗೆ ಪರಿಮಳ ವೇದಿಸದು (ಘಟಿಸದು?)
ದೇಹದಲ್ಲಿ ಇಷ್ಟಲಿಂಗ ಸ್ಥಾಪಿಸಿದಲ್ಲದೆ ಪ್ರಾಣಲಿಂಗ ಸಂಬಂಧವಾಗದು.
ಇದು ಕಾರಣ ನಮ್ಮ ಗುಹೇಶ್ವರಲಿಂಗದಲ್ಲಿ
ಇಷ್ಟಲಿಂಗ ಸಂಬಂದಿಯಾದಲ್ಲದೆ, ಪ್ರಾಣಲಿಂಗ ಸಂಬಂದಿಯಾಗಬಾರದು,-
ಕಾಣಾ ಸಿದ್ಧರಾಮಯ್ಯಾ.
ವಚನ 0490
ಏನ ಕಂಡಡೇನಯ್ಯಾ, ತನ್ನ ಕಾಣದಾತ ಕುರುಡ.
ಏನ ಕೇಳಿದಡೇನಯ್ಯಾ ತನ್ನ ಕೇಳದಾತ ಕಿವುಡ.
ಏನ ಮಾತಾಡಿದಡೇನಯ್ಯಾ ತನ್ನ ಮಾತಾಡದಾತ ಮೂಕ.
ದಿಟದಿಂತ ತನ್ನ ತಾ ಕಾಣಬೇಕು, ದಿಟದಿಂದ ತನ್ನ ತಾ ಕೇಳಬೇಕು,
ದಿಟದಿಂದ ತನ್ನ ತಾ ಮಾತಾಡಬೇಕು.
ಇದೆ ತನ್ನ ನೆಲೆ, ಸ್ವಭೂಮಿ, ಸ್ವಸ್ವರೂಪು ಕಾಣಾ-ಗುಹೇಶ್ವರಾ
ವಚನ 0491
ಏನೂ ಇಲ್ಲದಠಾವಿನಲ್ಲಿ ನಾ ನೀನೆಂಬುದ ತಾನೆ ತಂದನು.
ಇಲ್ಲಾದುದ ಉಂಟಾದುದ ಸಾವಿರವನಾಡಿದಡೇನು ?
ಉಂಟಾದುದನು ಇಲ್ಲ’ ಮಾಡಬಲ್ಲಡೆ ಆ
ಇಲ್ಲ’ವೆ ತಾನೆ ಗುಹೇಶ್ವರ !
ವಚನ 0492
ಏನೂ ಎನಲಿಲ್ಲದ ಮಹಾಘನದೊಳಗೆ,
ತಾನೆಂಬುದನಳಿದ ಪರಮಲಿಂಗೈಕ್ಯಂಗೆ,
ಧ್ಯಾನ ಮೌನದ ಹಂಗುಂಟೆ ಗುಹೇಶ್ವರಾ.
ವಚನ 0493
ಏನೂ ಏನೂ ಇಲ್ಲದ ಬಯಲೊಳಗೊಂದು
ಬಗೆಗೊಳಗಾದ ಬಣ್ಣ ತಲೆದೋರಿತ್ತು.
ಆ ಬಣ್ಣವು ಆ ಬಯಲ ಶೃಂಗರಿಸಲು,
ಬಯಲು ಸ್ವರೂಪಗೊಂಡಿತ್ತು.
ಅಂತಪ್ಪ ಸ್ವರೂಪಿನ ಬೆಡಗು ತಾನೆ,
ನಮ್ಮ ಗುಹೇಶ್ವರಲಿಂಗದ ಪ್ರಥಮ ಬಿತ್ತಿ
ವಚನ 0494
ಏನೆಂದರಿಯರು ಎಂತೆಂದರಿಯರು,
ಅರಿವನರಿದೆವೆಂಬರು, ಮರಹ ಮರೆದೆವೆಂಬರು.
ಒಂದನರಿದೆನೆಂದಡೆ ಮುಖ ಮೂರಾಯಿತ್ತು.
ಮೂರು ಮುಖವ ಏಕಾಗ್ರಹಕವ ಮಾಡಿದಲ್ಲದೆ
ಶರಣನಲ್ಲ ಗುಹೇಶ್ವರಾ.
ವಚನ 0495
ಏನೆಂದರಿಯರು ಎಂತೆಂದರಿಯರು,
ಬರುಮಾತಿನ ಬೊಮ್ಮವನಾಡುತ್ತಿಪ್ಪರು.
ರುದ್ರನ ನೊಸಲ ಕಣ್ಣ ಕಿಚ್ಚಿನೊಳಗೆ
ತ್ರಿಪುರವ ಸುಡಲರಿಯದೆ
ಕಾಮನ ಕಣ್ಣ ಕಿಚ್ಚಿನೊಳಗೆ ತ್ರಿಪುರವ ಸುಡುತ್ತಿಪ್ಪರು.
ಭೂಮಿಯಾಕಾಶವ ಮೆಟ್ಟಿ,
ಕಾಮಗುಣಂಗಳ ಕೂಡೆ ಕಾದಿ ಗೆಲಲರಿಯದೆ
ನೀಲಗಿರಿಯ ಮೇಲೆ ನಿಂದು
ಉಲಿವದ (ಉಲಿಯ?) ಉಯ್ಯಾಲೆಯನಾಡುತ್ತಿಪ್ಪರಯ್ಯಾ.
ಗುಹೇಶ್ವರಾ ನಿಮ್ಮನರಿದೆಹೆವೆಂಬವರೆಲ್ಲ
ಬರುದೊರೆವೋದರಯ್ಯಾ
ವಚನ 0496
ಏಳು ತಾಳ[ದ] ಮೇಲೆ ಕೇಳುವ ಸುನಾದ,
ಸ್ಥೂಲ ಸೂಕ್ಷ್ಮ ಕೈಲಾಸದ ರಭಸ,
ಗಂಗೆವಾಳುಕಸಮಾರುದ್ರರ ತಿಂಥಿಣಿ,
ಗಗನಗಂಬಿರದ ಶಿವಸ್ತುತಿಯ ನೋಡನಲೊಡನೆಫ
ಪಿಂಡ ಬ್ರಹ್ಮಾಂಡವಾಯಿತ್ತು-
ಅಖಂಡ ನಿರಾಳ ಗುಹೇಶ್ವರಾ.
ವಚನ 0497
ಐದ ಕಟ್ಟಿ ಐದ ನೆಗಪಿ,
ಮನಪವನಧ್ಯಾನ ಭಾವ ದೃಢದಿಂದ
ಧ್ಯಾನದಿ ನೋಡಿ; ಕಾಯದ ಗಾಳಿಯ ಸಂಚವ ಶೋದಿಸಿ,
ಒಳಗೆ ಜಾರಿದ ಅಮೃತವನು
ವಾಯುಮಂಡಲದಲೆತ್ತಿ, ನಾಬಿಮಂಡಲದಲ್ಲಿ ನುಂಗಿ
ಮಾಯಾಮಂಡಲ ತೋರಲರಿಯ ಬಲ್ಲಡೆ
ಗುಹೇಶ್ವರಲಿಂಗದಲ್ಲಿ ಆತ ಶಿವಯೋಗಿ
ವಚನ 0498
ಐದರ ಮಧ್ಯದ ಕಣ್ಣ ಕಾಡಿನೊಳಗೆ ಬಿದ್ದಿದಾವೆ ಈರೈದು ಹೆಣನು
ಬೆಂಬಳುವರು ಬಳಗ ಘನವಾದ ಕಾರಣ
ಆ ಹೆಣನು ಬೇಯವು, ಕಾಡೂ ನಂದದು
ಮಾಡು ಉರಿಯಿತ್ತು ಗುಹೇಶ್ವರಾ
ವಚನ 0499
ಐದಾನೆಯ ಬೆನ್ನಲ್ಲಿ ಐದು ಒಂಟೆ ಹೋದವು,
ಒಂಬತ್ತು ಸಾವಿರ ಕುದುರೆಯನು ಒಂದು ಎಳಗ ಎಯ್ದಿಸುತ್ತಿದ್ದಿತ್ತು.
ಅರೆಮರುಳಾದವನ ನೆರೆ ಮರುಳಾದವ ಬಲ್ಲನೆ ?
ಕುರುಬ ಕುರಿಯ ಹಾಲ ಕರೆದು ಒಲೆಯ ಮೇಲಿಕ್ಕೆ,
ಇಕ್ಕಿದ ಹಾಲ ಬೆಕ್ಕು ಕುಡಿಯಿತ್ತು,
ಬೆಣ್ಣೆಯ ಮುಂದಿಟ್ಟುಕೊಂಡಳುತಿರ್ದ ಕಾಣಾ ಗುಹೇಶ್ವರಾ
ವಚನ 0500
ಐದಿಂದ್ರಿಯವನರಿತಲ್ಲದೆ, ಒಂದಿಂದ್ರಿಯಕ್ಕೆ ಸಂದ ಗುಣವನರಿಯಬಾರದು.
ಆ ಗುಣ ಏಕಮೂರ್ತಿ ತ್ರಿವಿಧರೂಪಾದ ಕಾರಣ.
ಪೂಜೆಯೆಂಬುದ ಪುಣ್ಯವೆಂಬ ಭಾವವಿಲ್ಲದೆ ಮಾಡಿದಡೆ
ನಮ್ಮ ಗುಹೇಶ್ವರಲಿಂಗಕ್ಕೆ ಅನ್ಯವಿಲ್ಲ ಕಾಣಾ ಚಂದಯ್ಯ
ವಚನ 0501
ಐದು ಬಣ್ಣದ ಗಿಡುವಿಂಗೆ ಐದೆಲೆ ಐದು ಹೂ, ಐದು ಕಾಯಾಯಿತ್ತು.
ಮತ್ತೈದರಠಾವಿನಲ್ಲಿ, ಐದು ಹೂವಿನ ಕ್ರಮದಲ್ಲಿ
ಹಣ್ಣ ಮೆಲಬಲ್ಲಡೆ, ಗುಹೇಶ್ವರನೆಂಬ ಲಿಂಗವು ತಾನೆ ನೋಡಾ !
ವಚನ 0502
ಐದು ಮುಖದ ಅಂಗನೆಗೆ ಹದಿನೈದು ದೇಹ ನೋಡಾ!
ಆ ಅಂಗನೆಯ ಮನೆಯೊಳಗಿರ್ದು, ತಾವಾರೆಂಬುದನರಿಯದೆ;
ಬಾಯ್ಗೆ ಬಂದಂತೆ ನುಡಿವರು,
ಗುಹೇಶ್ವರಾ ನಿಮ್ಮನರಿಯದ ಜಡರುಗಳು.
ವಚನ 0503
ಐದು ಸರ್ಪಂಗಳಿಗೆ ತನು ಒಂದು, ದಂತವೆರಡು.
ಸರ್ಪ ಕಡಿದು ಸತ್ತ ಹೆಣನು ಸುಳಿದಾಡುವುದ ಕಂಡೆ.
ಈ ನಿತ್ಯವನರಿಯದಠಾವಿನಲ್ಲಿ, ಭಕ್ತಿಯೆಲ್ಲಿಯದೊ ಗುಹೇಶ್ವರಾ ?
ವಚನ 0504
ಐವರ ಸಂಗದಿಂದ ಬಂದೆ ನೋಡಯ್ಯಾ.
ಐವರ ಸಂಗದಿಂದ ನಿಂದೆ ನೋಡಯ್ಯಾ.
ಈ ಐವರೂ ತಮ್ಮ ತಮ್ಮ ಬಟ್ಟೆಯಲ್ಲಿ ಹೋದರು.
ನಾನೊಬ್ಬನೆ ನಿಸ್ಸಂಗಿಯಾಗಿ ಉಳಿದೆನಲ್ಲಾ !
ಗುಹೇಶ್ವರನೆಂಬ ನಿತ್ಯನಿರಂಜನ ರೂಹಿಲ್ಲದ ಘನವ ಕಂಡೆನಯ್ಯಾ.
ವಚನ 0505
ಒಂದ ಮಾಡ ಹೋದಡೆ ಮತ್ತೊಂದಾಯಿತ್ತೆಂಬ ಮಾತು
ದಿಟವಾಯಿತ್ತು ನೋಡಾ.
ನಿಮ್ಮ ಒಡತಣ ಅನುಭಾವದಿಂದ
ಗುರುಮುಖ ಸಾಧ್ಯವಾದುದಯ್ಯಾ,
ಗುಹೇಶ್ವರಲಿಂಗದಲ್ಲಿ ನಿನಗೂ ನನಗೂ
ಉಪದೇಶವ ಒಂದಾದ ಭೇದವ ಹೇಳಾ ಚನ್ನಬಸವಣ್ಣಾ
ವಚನ 0506
ಒಂದ ಮಾಡಹೋದಡೆ ಮತ್ತೊಂದಾಯಿತ್ತೆಂಬುದು,
ಎನಗಾಯಿತ್ತು ನೋಡಾ ಬಸವಣ್ಣಾ
ಮಡಿವಾಳನ ಪೂರ್ವಾಪರವನೊರೆದು ನೋಡಿದಡೆ
ನಿನ್ನ ಪೂರ್ವಾಪರ ಎನಗೆ ಅರಿಯ ಬಂದಿತ್ತು ನೋಡಾ ಬಸವಣ್ಣಾ.
ನಿನ್ನ ಪೂರ್ವಾಪರಸಂಗವ ಮಾಡಬಂದಡೆ
ಎನ್ನ ಪೂರ್ವಾಪರ ಎನಗೆ ಅರಿಯ ಬಂದಿತ್ತು ನೋಡಾ ಬಸವಣ್ಣಾ.
ಮಹಾಜ್ಞಾನಿಗಳ ಸಂಗದಿಂದ ಉಭಯ ಸಂಗಸಿದ್ಧಿಯೆಂಬುದು
ದಿಟವಾಯಿತ್ತು ನೋಡಾ ಬಸವಣ್ಣಾ.
ಗುಹೇಶ್ವರನ ಶರಣ ಮಡಿವಾಳ ಮಾಚಿತಂದೆಗಳ ಶ್ರೀಪಾದಕ್ಕೆ
ನಮೋ ನಮೋ ಎಂದು ಬದುಕಿದೆನು ಕಾಣಾ ಸಂಗನಬಸವಣ್ಣಾ.
ವಚನ 0507
ಒಂದಡಕೆಯನಿಟ್ಟರೆ ಅಡ್ಡಗೋಡೆ ಬಸುರಾಯಿತ್ತು,
ನಡುಮನೆಯೊಳಗಣ ಕಂಭ ಗಂಡು ಮಗನ ಹಡೆಯಿತ್ತು.
ಹೊರಗೆ ಕಿಚ್ಚನಿಕ್ಕಿ ಒಳಗೆ ಅಗ್ನಿ ಪುಟವ ಹಾಕಿ,
ಹಾದಿ ಹೋಗೋ ಅಣ್ಣ ನಮ್ಮ ಕರುವ ಕಾಣಲಿಲ್ಲವೆ.
ನಿನ್ನೆ ಬಿತ್ತಿದ ಹೊಲದಾಗೆ ಮೊನ್ನೆ ಮೇಯ್ವುದ ಕಂಡೆ.
ಕೊರಳ ಕೊಯ್ವುದ ಕಂಡೆ, ರಕ್ತವ ಕಾಣಲಿಲ್ಲ,
ಸುಡುವುದ ಕಂಡೆ ಬೂದಿಯ ಕಾಣಲಿಲ್ಲ.
ಇಷ್ಟ ಕಂಡು ಬೆರಗಾದ ನಮ್ಮ ಗುಹೇಶ್ವರಾ
ವಚನ 0508
ಒಂದರ ಮೋರೆಯನೊಂದು ಮೂಸಿನೋಡಿ
ಮತ್ತೊಚ್ಚಿ ಬೇಕಿಂಗೆ (ಹೊತ್ತಿಂಗೆ ?) ಕಚ್ಚಿಯಾಡಿ ಹೋದಂತೆಯಾಯಿತ್ತು,
ನೋಡಿರೆ, ಕಲಿಯುಗದೊಳಗಣ ಮೇಳಾಪವ !
ಗುರುವೆಂಬಾತ ಶಿಷ್ಯನಂತುವನರಿಯ.
ಶಿಷ್ಯನೆಂಬಾತ ಗುರುವಿನಂತುವನರಿಯ.
ಭಕ್ತರೆಂಬವರು ಭಕ್ತರೊಳಗೆ ಸಮವಿಲ್ಲ.
ಜಂಗಮರೆಂಬವರು ಜಂಗಮದೊಳಗೆ ಸಮವಿಲ್ಲ.
ಇದು ಕಾರಣ-ಕಲಿಯುಗದೊಳಗೆ ಉಪದೇಶವ ತೋರುವ (ಮಾಡುವ ?)
ಕಾಳಗುರಿಕೆಯ ಮಕ್ಕಳನೇನೆಂಬೆ ಗುಹೇಶ್ವರಾ ?
ವಚನ 0509
ಒಂದಾದುದು ಎರಡಪ್ಪುದೆ ? ಎರಡಾದುದು ಒಂದಪ್ಪುದೆ-[ಎಂದ]
ಪರಿಣಾಮದ ವೇಳೆಯಲ್ಲಿ ಸಂದೇಹ ಹುಟ್ಟಲುಂಟೆ ?
ಬಂದ ಜಂಗಮದ ನಿಲವನರಿಯದೆ,
ಹಿಂದನೆಣಿಸಿ ಹಲವ ಹಂಬಲಿಸುವರೆ ?
ಈ ಒಂದು ನಿಲವಿಂಗೆ ಪರಿಣಾಮವ ಮಾಡಬಲ್ಲಡೆ
ನಿನ್ನ ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ
ಪರಿಣಾಮವಹುದು ನೋಡಾ.
ಗುಹೇಶ್ವರನೆಂಬ ಲಿಂಗದ ನಿಲವನರಿಯದೆ
ಮರುಳಾದೆಯಲ್ಲಾ ಸಂಗನಬಸವಣ್ಣಾ
ವಚನ 0510
ಒಂದು ಇಲ್ಲದ ಬಿಂದುವ, ತಂದೆಯಿಲ್ಲದ ಕಂದನ,
ಮಾತೆ ಇಲ್ಲದ ಜಾತನ, ಗಮನವಿಲ್ಲದ ಗಮ್ಯನ,
ಮೂವರರಿಯದ ಮುಗ್ಧನಠಾವ ತೋರಿಸು ಗುಹೇಶ್ವರಾ
ವಚನ 0511
ಒಂದು ದಿಕ್ಕಿನಲ್ಲಿ ಕತ್ತಲೆಯನಿರಿಸಿ,
ಒಂದು ದಿಕ್ಕಿನಲ್ಲಿ ತನುವನಿರಿಸಿ,
ಒಂದು ದಿಕ್ಕಿನಲ್ಲಿ ವಚನವನಿರಿಸಿ,
ಒಂದು ದಿಕ್ಕಿನಲ್ಲಿ ರುಚಿಯನಿರಿಸಿ,
ನಾಲ್ಕು ದಿಕ್ಕಿನ ನಡುವೆ ನೀನಿರಬಲ್ಲಡೆ,
ಎನ್ನ ಬೆಸಗೊಳ್ಳಯ್ಯಾ ಗುಹೇಶ್ವರಾ.
ವಚನ 0512
ಒಂದು ಧನುವಿಂಗೆ ಮೂರಂಬ ಹಿಡಿದೆ.
ಒಂದು ಬಾಣವ ಬಿಡಲಾಗಿ ಪದ್ಮೋದ್ಭವನ ಸೃಷ್ಟಿಯ ಕಟ್ಟಿತ್ತು,
ಮತ್ತೊಂದು ಬಾಣವ ಬಿಡಲಾಗಿ ಪದ್ಮೋದ್ಭವನ ಹೆಡಗಯ್ಯ ಕಟ್ಟಿತ್ತು.
ಕಡೆಯ ಬಾಣವು ರುದ್ರನ ಹಣೆಯನೊಡೆದು ಅಲಗು ಮುರಿಯಿತ್ತು.
ನಾರಿ ಜಾರಿತ್ತು, ನಾರಿಯ ಹೂಳುವ ಹಿಳಿಕು ಹೋಳಾಯಿತ್ತು.
ಗುಹೇಶ್ವರನ ಶರಣ ಅಲ್ಲಮ ಹಿಡಿದ ಬಿಲ್ಲು ಮುರಿಯಿತ್ತು.
ವಚನ 0513
ಒಂದು ಪಟ್ಟಣದೊಳಗೆ ಛಪ್ಪನ್ನ ಗೃಹಕ್ಕೆ ಒಂದೆ ಕೀಲಾಗಿ,
ಆ ಕೀಲಿನ ಸಕೀಲವನಾರಿಗೂ ಕಾಣಬಾರದೆಂದೂ-
ಭಾವಿಸಿ ಕಂಡರು ಒಂದೆ ಮನದವರು.
ಉಳಿದವರೆಲ್ಲ ಆ ಕೀಲಿನೊಳಗಾಗಿ ಜೀವ ಜೀರ್ಣವಾಯಿತ್ತು.
ಹದಿನೆಂಟು ಸ್ಥಾನದ ಕೀಲಗಳ ಸಂಗವನಳಿದು, ಸುಸಂಗವಾಗಿ
ಶೃಂಗಾರ ಭೃಂಗಾರವಾಗದೆ ಒಂದು ಮುಖದಲ್ಲಿ ನಿಂದು
ಗುಹೇಶ್ವರಾ-ನಿಮ್ಮ ಶರಣ ಚನ್ನಬಸವಣ್ಣ ಹೊರಗಾದ !
ವಚನ 0514
ಒಂದು ಮನ;
ಆ ಮನದಲ್ಲಿ ಲಿಂಗತ್ರಯವನು ಒಂದೆ ಬಾರಿ [ಗೆ] ನೆನೆವ ಪರಿಯೆಂತೊ ?
ಅರಿದರಿದು ಲಿಂಗಜಾಣಿಕೆ !
ಮುಂದ ನೆನೆದಡೆ ಹಿಂದಿಲ್ಲ; ಹಿಂದ ನೆನೆದಡೆ ಮುಂದಿಲ್ಲ.
ಒಂದರೊಳಗೆ ಎರಡೆರಡಿಪ್ಪವೆಂದಡೆ,
ಅದು ಭಾವಭ್ರಮೆಯಲ್ಲದೆ ಸಹಜವಲ್ಲ.
ನಿರುಪಾದಿಕಲಿಂಗವನುಪಾದಿಗೆ ತರಬಹುದೆ ?
ಸ್ವತಂತ್ರಲಿಂಗವ ಪರತಂತ್ರಕ್ಕೆ ತರಬಹುದೆ ?
ಗುಹೇಶ್ವರಾ-ನಿಮ್ಮ ಬೆಡಗು ಬಿನ್ನಾಣವನರಿದೆನಾಗಿ,
ಎಂತಿರ್ದುದಂತೆ ಸಂತ !
ವಚನ 0515
ಒಂದು ಮುಳ್ಳ ಮೊನೆಯ ಮೇಲೆ ಎಂಬತ್ನಾಲ್ಕು ಲಕ್ಷ ಪಟ್ಟಣವ ಕಟ್ಟಿ,
ಈ ಎಂಬತ್ನಾಲ್ಕು ಲಕ್ಷ ಪಟ್ಟಣಕ್ಕೆ ತಲೆಯಿಲ್ಲದ ತಳವಾರ,
ಆ ತಲೆಯಿಲ್ಲದ ತಳವಾರನ ತಂಗಿ ಮಾತಿನಲಿ ಕಡುಜಾಣೆ.
ಆಕೆ ಸರ್ಪನ ಸಿಂಬೆಯ ಮಾಡಿಕೊಂಡು ತಳವಿಲ್ಲದ ಕೊಡನ ತಕ್ಕೊಂಡು
ಜಲವಿಲ್ಲದ ಬಾವಿಗೆ ನೀರಿಗೆ ಹೋದಳು.
ಆ ಜಲವಿಲ್ಲದ ಬಾವಿಯೊಳೊಂದು ಬೇರಿಲ್ಲದ ಸಸಿ ಪುಟ್ಟಿತ್ತು.
ಆ ಬೇರಿಲ್ಲದ ಸಸಿ ವೃಕ್ಷವಾಗಿರಲಾವೃಕ್ಷವ ಕಾಲಿಲ್ಲದ ಮೃಗ ಏರಿ ಹೋಗುತ್ತಿತ್ತು.
ಅದ ಕಣ್ಣಿಲ್ಲದ ಕುರುಡ ಕಂಡ.
ಕೈಯಿಲ್ಲದ ಪುರುಷ ಹೆದೆಯಿಲ್ಲದ ಬಿಲ್ಲ ಪಿಡಿದು,
ಅಲಗಿಲ್ಲದಂಬಿನಲ್ಲೆಸೆಯಲಾ ಮೃಗವ ತಾಕಲಿಲ್ಲ.
ಅದರ ಹೊಟ್ಟೆಯೊಳಗಿರ್ದ ಪಿಂಡಕ್ಕೆ ತಾಕಿತ್ತು.
ಇದ ಕಂಡು ಬೆರಗಾದ ನಮ್ಮ ಗುಹೇಶ್ವರ.
ವಚನ 0516
ಒಂದೆ ಹೂ, ಒಂದೆ ಅಗ್ಘವಣಿ, ಒಂದೆ ಓಗರ,
ಒಂದೆ ಪ್ರಸಾದ, ಒಂದೆ ಮನ, ಒಂದೆ ಲಿಂಗ.
ನಂದಾದೀವಿಗೆ, ಕುಂದದ ಬೆಳಗು; ಸ್ವತಂತ್ರ ಪೂಜೆ-ಒಂದೇ.
ಅನಾಹತವೆರಡಾಗಿ ಬರುಮುಖರಾಗಿ ಕೆಟ್ಟುಹೋದರು ಗುಹೇಶ್ವರಾ.
ವಚನ 0517
ಒಂದೆಂಬೆನೆ ? ಎರಡಾಗಿದೆ; ಎರಡೆಂಬೆನೆ ? ಒಂದಾಗಿದೆ.
ಒಂದೆರಡೆಂಬ ಸಂದೇಹವಿದೇನೊ ?
ಅಗಲಲಿಲ್ಲದ ಕೂಟಕ್ಕೆ ಬಿಚ್ಚಿ ಬೇರಾಗದ ಉಪದೇಶ !
ಗುರು ಶಿಷ್ಯರೆಂಬ ಭಾವಕ್ಕೆ ಭೇದವುಂಟೆ ಗುಹೇಶ್ವರಾ ?
ವಚನ 0518
ಒಂದೆರಡರ ಮೂರು ನಾಲ್ಕರ ಪರಿವಿಡಿಯ ಭಾವವನರಿಯದೆ
ಕೆಟ್ಟಿತ್ತು ನೋಡಾ ಲೋಕ, ಕೆಟ್ಟಿತ್ತು ನೋಡಾ ಜಗವು
ಕೆಟ್ಟಿತ್ತು ನೋಡಾ ಈರೇಳು ಭುವನವೆಲ್ಲವು
ಇತ್ತ ವಿಸ್ತಾರವಾಯಿತ್ತು, ಸ್ಥಿತಿ ಆಯತವಾಯಿತ್ತು
ಮಾರಾರಿ ಕಟ್ಟಳೆ ವಿಪರೀತವು ನೋಡಾ
ನಾದ ಚಕ್ರಂಗಳ, ಬಿಂದು ಚಕ್ರಂಗಳ, ಕಲಾ ಚಕ್ರಂಗಳ
ನಿಲ್ಲೆಂದು ನಿಲಿಸಿದ ನಿರ್ವಯ ಚೆನ್ನಬಸವಣ್ಣನು
ಕಾಲಕರ್ಮ ಸ್ಥಿತಿಗುಣವನತಿಗಳೆದು ನಿರ್ಭಾವದಲ್ಲಿ ನಿರ್ವಯ ಚೆನ್ನಬಸವಣ್ಣನು
ತನ್ನಲ್ಲಿ ತಾನು ಬೆಳಗಾದ ಚೆನ್ನಬಸವಣ್ಣನು
ಬೆಳಗಪ್ಪ ಬೆಳಗು ಲೀಯವಾಯಿತು ಗುಹೇಶ್ವರಾ
ಚೆನ್ನಬಸವಣ್ಣನು
ವಚನ 0519
ಒಂದೆರಡಾದುದ ಬಲ್ಲವರಾರೊ ?
ಎರಡರೊಳಗಣ ಮೂರ ಬಲ್ಲವರಾರೊ ?
ಮೂರರ ಮುಖವನರಿದು ಕೂಡಿ ಮಾಡಬಲ್ಲವರಾರೊ ?
ಗುಹೇಶ್ವರಲಿಂಗದಲ್ಲಿ ಸಂಗನಬಸವಣ್ಣನೊಬ್ಬನೆ.
ವಚನ 0520
ಒಂದೆರಡಾದುದನಾರೂ ಅರಿಯರು:
ಆ `ಒಂದು’ ಒಂದೆ ಆಯಿತ್ತು, ತ್ರಿತತ್ವವಾಯಿತ್ತು, ವೇದಾತೀತವಾಯಿತ್ತು,
ಭರಿತವಾಯಿತ್ತು, ಪ್ರಾದೇಶಿಕವಾಯಿತ್ತು, ಭಕ್ತಿಗೆ ಸಾಧ್ಯವಾಯಿತ್ತು.
ಅದಕ್ಕೆ ಆಧಾರ ದೇಹವಾಯಿತ್ತು.
ಅದು ಅಷ್ಟವಿಗ್ರಹ ಸ್ವರೂಪವಾಗಿರುತ್ತಿಪ್ಪುದು.
ಮತ್ತಿರುತಿರ್ದ ಒಂದು ಮಾಯಾಶಕ್ತಿಯಂ ಕೂಡಿ,
ಗುಣತ್ರಯಂಗಳಂ ಕೂಡಿ, ನಾನಾತ್ಮನೆನಿಸಿಕೊಂಡು-
ವಿಷಯಾತ್ಮ ಇಂದ್ರಿಯಾತ್ಮ ಭೂತಾತ್ಮ ಜೀವಾತ್ಮ ಪರಮಾತ್ಮನೆನಿಸಿಕೊಂಡು,
ಪ್ರಾಣಾದಿವಾಯುಗಳಂ ಕೂಡಿಕೊಂಡು ಜಡಪ್ರಕೃತಿಗಳಂ ಹೊತ್ತುಕೊಂಡು
ಸಂಕಲ್ಪ-ವಿಕಲ್ಪವೆಂಬ ಉಭಯ ಕರ್ಮಂಗಳಂ ಕಲ್ಪಿಸಿ
ನಾನಾಯೋನಿ ಪ್ರಾಪ್ತವಾಗುತ್ತಿರ್ದು,
ಲೋಕಾದಿಲೋಕಂಗಳೊಳು ತೊಳಲಿ ಬಳಲಿ
ತನ್ನ ಮೊದಲ ಕೂಡುವ ಪ್ರಕಾರಮಂ ಬಯಸಿ
ನಾನಾ ವಿಧದಿಂದ ಅರಸಿ ಹರಿವುತ್ತಿಪ್ಪರು ಅಖಿಳ ಜೀವಿಗಳೆಲ್ಲರು.
ಇದ ಬೆರಸದೆ; ಬೆರಸಿದ ಸಂಗನಬಸವಣ್ಣನ ನೆನೆನೆನೆದು
ಶರಣೆಂದು ಶುದ್ಧನಾದೆನು ಕಾಣಾ ಗುಹೇಶ್ವರಾ.
ವಚನ 0521
ಒಂದೆರಡೆಂಬ ಸಂದೇಹಕ್ಕೊಳಗಾದವರೆಲ್ಲರೂ
ಬಂದರು ನೋಡಾ ನಾನಾ ಭವದಲ್ಲಿ.
ಕುಂದು ಹೆಚ್ಚಿನ ಹೋರಾಟದಿಂದ ಬಂಧನಕ್ಕೆ ಸಿಕ್ಕಿದರಲ್ಲ !
ಒಂದೆರಡನೊಳಕೊಂಡು ನಿಂದ ನಿಲವ,
ಸಂದಿಲ್ಲದೆ ಹೊಂದಿಪ್ಪ ಗುಹೇಶ್ವರ ತನ್ನಲ್ಲಿ.
ವಚನ 0522
ಒಂಬತ್ತು ಒಟ್ಟೆ ನೆರೆದು ಮೂರು ತತ್ತಿಯನಿಕ್ಕತ್ತ ಕಂಡೆ
ಆನೆ ಆಡಹೋದರೊಂದು ಚಿಕ್ಕಾಡು ನುಂಗಿತ್ತ ಕಂಡೆ
ನಾರಿಯಾಡಹೋದಲ್ಲಿ ಒಂದು ಚಂದ್ರಮತಿಯ ಕಂಡೆನು
ಪೃಥ್ವೀ ಮಂಡಲವನೊಂದು ನೊಣ ನುಂಗಿತ್ತು ನೋಡಾ
ಗುಹೇಶ್ವರನೆಂಬ ಲಿಂಗವ ಕಂಡವರುಳ್ಳರೆ ಹೇಳಿರೆ
ವಚನ 0523
ಒಕ್ಕು ಮಿಕ್ಕುದ ಕೊಂಬ ನಿಶ್ಚಲಪ್ರಸಾದಿ ನೀ ಕೇಳಾ.
ಒಕ್ಕುದಾವುದು? ಮಿಕ್ಕುದಾವುದು? ಬಲ್ಲಡೆ ನೀ ಹೇಳಾ.
ಒಕ್ಕು ಹೋಹುದು ಕಾಯ, ಮಿಕ್ಕು ಹೋಹುದು ಪ್ರಾಣ.
ಇದು ತಕ್ಕುದೆಂದರಿದು, ಕೊಳಬಲ್ಲಡೆ
ಸಿಕ್ಕುವನು ನಮ್ಮ ಗುಹೇಶ್ವರನು.
ವಚನ 0524
ಒಕ್ಕುದು ಪ್ರಸಾದವೆಂಬರು, ಮಿಕ್ಕುದು ಪ್ರಸಾದವೆಂಬರು
ಒಕ್ಕುದು ಮಿಕ್ಕುದನೆಲ್ಲ ಬೆಕ್ಕು ಕೊಳ್ಳದೆ ?
ಒಕ್ಕುಮಿಕ್ಕು ಹೋಗುವ ಪಂಚಸಕೀಲವ ಬಲ್ಲಡೆ
ಗುಹೇಶ್ವರಲಿಂಗದಲ್ಲಿ ಆತನೆ ಪ್ರಸಾದಿ
ವಚನ 0525
ಒಟ್ಟೆಯ ಮರಿ ಮೂರೊಟ್ಟೆಯನಿಕ್ಕಿತ್ತು.
ಕಟ್ಟುಗ್ರದಿರುಹೆ ಕತ್ತಲೆಯ ನುಂಗಿತ್ತು.
ಬೆಟ್ಟವ ಬೆಳ್ಳಕ್ಕಿ ನುಂಗಿತ್ತು.
ಸುಟ್ಟುದು ಎದ್ದು ಕುಳ್ಳಿದ್ದುದಯ್ಯಾ.
ಕಟ್ಟಿರ್ದುದು ತೋರದೆ ಗುಹೇಶ್ವರನಲ್ಲಿಯೆ ಅಡಗಿತ್ತು ನೋಡಾ !
ವಚನ 0526
ಒಡಲಡಗ ಮಚ್ಚಿದಾತನ ಅಚ್ಚಶರಣನೆಂಬೆ.
ಮಡಿಲಡಗ ಮಚ್ಚಿದಾತನ ಅಚ್ಚಲಿಂಗವಂತನೆಂಬೆ.
(ಈ ಒಡಲಡಗು ಮಡಿಲಡಗಿನೊಳಗೆ ಒಂದ ಮಚ್ಚದಿದ್ದರೆ ?)
ಉತ್ಪತ್ತಿ ಪ್ರಳಯ ತಪ್ಪದು.
ಶ್ರೀಗುರು ಮಹಾಲಿಂಗದಲ್ಲಿ ಒಡಲಡಗ ಮಚ್ಚಿ
ಅಚ್ಚಭವಿಯಾದ ಶರಣನೊಬ್ಬನೆ-ಗುಹೇಶ್ವರ.
ವಚನ 0527
ಒಡಲಲ್ಲಿ ಹುಟ್ಟಿತ್ತು ಭ್ರಮೆಯಿಂದ ಬೆಳೆಯಿತ್ತು.
ಒಡನೆ ಹುಟ್ಟಿತ್ತು ತನ್ನನರಿಯದ ಕಾರಣ.
ಇದು ಒಂದು ಸೋಜಿಗವ ಕಂಡೆ.
ಕೂಡೆ ಭರಿತವೆಂದರಿಯಲು ಅಂಗದಲಳವಟ್ಟಿತ್ತು ಗುಹೇಶ್ವರಾ.
ವಚನ 0528
ಒಡಲುಗೊಂಡ ಮಾನವರೆಲ್ಲರು ನೀವು ಕೇಳಿರೆ,
ಬಿಡದೆ ಕಾಡುವುದು ವಿದಿ ಮೂರುಲೋಕವನೆಲ್ಲ.
ಒಡಲು ಒಡವೆಯನು ಒಲ್ಲೆನೆಂಬವರುಗಳಿಗೆ
ತೊಡರನಿಕ್ಕಿತ್ತು ಮಾಯೆ.
ಆರುದರ್ಶನಕ್ಕೆಲ್ಲ ಮಡದಿ ಮಕ್ಕಳನೊಲ್ಲೆನೆಂಬ ಹಿರಿಯರಿಗೆಲ್ಲ
ತೊಡರನಿಕ್ಕಿತ್ತು ಮಾಯೆ.
ಮೃಡ ಮೊದಲಾದ ಹರಿ ವಿರಿಂಚಿಗಳನೆಲ್ಲರನು
ಕೋಡಗದಾಟವ ಆಡಿಸಿತ್ತು,
ಗುಹೇಶ್ವರಾ ನಿಮ್ಮ ಮಾಯೆ
ವಚನ 0529
ಒಡಲುವಿಡಿದು ಪಾಷಾಣಕ್ಕೆ ಹಂಗಿಗರಾದಿರಲ್ಲಾ.
ಅಂಗಸಂಗಿಗಳೆಲ್ಲ ಮಹಾಘನವನರಿಯದೆ ನಿಂದಿರೊ!
ಹುಸಿಯನೆ ಕೊಯ್ದು ಹುಸಿಯನೆ ಪೂಜಿಸಿ
ಗಸಣಿಗೊಳಗಾದರು ಗುಹೇಶ್ವರಾ.
ವಚನ 0530
ಒಡಲೊಳಗಿದ್ದು ಒಡಲಿಂಗಾಧಾರವಾಗಿ ಒಡಲ ಸೋಂಕದೆ,
ಒಡಲ ಬೆಳಗುವ ಪರಿಯ ನೋಡಾ !
ಬೆಳಗಿಂಗೆ ಬೆಳಗಾಗಿ ಬೆಳಗುವ ಪರಿಯ ನೋಡಾ !
ಪರಮಚೈತನ್ಯ ನಿರಾಳ ಗುಹೇಶ್ವರಲಿಂಗವ ನೋಡಾ !
ವಚನ 0531
ಒತ್ತಿ ಹಣ್ಣ ಮಾಡಿದಡೆ ಅದೆತ್ತಣ ರುಚಿಯಪ್ಪುದೊ?
ಕಾಮಿಸಿ ಕಲ್ಪಿಸಿ ಭಾವಿಸಿದಡೆ ಅದೆ ಭಂಗ.
ಭಾವಿಸುವ ಭಾವನೆಗಿಂದ ಸಾವು[ದೆ]ಲೇಸು ಕಾಣಾ ಗುಹೇಶ್ವರಾ.
ವಚನ 0532
ಒಲುಮೆಯ ಕೂಟಕ್ಕೆ ಹಾಸಿನ ಹಂಗೇಕೆ ?
ಬೇಟದ ಮರುಳಗೆ ಲಜ್ಜೆ ಮುನ್ನುಂಟೆ ?
ನಿಮ್ಮನರಿದ ಶರಣಂಗೆ ಪೂಜೆಯ ಹಂಬಲ, ದಂದುಗವೇಕೆ ?
ಮಿಸುನಿಯ ಚಿನ್ನಕ್ಕೆ ಒರೆಗಲ್ಲ ಹಂಗೇಕೆ ?
ಗುಹೇಶ್ವರಲಿಂಗಕ್ಕೆ ಕುರುಹು ಮುನ್ನುಂಟೆ ?
ವಚನ 0533
ಒಳಗ ತೊಳೆದು ಜಲವ ತುಂಬಲರಿಯದ ಅರೆಮರುಳನೇನಾದ ಹೇಳಿರೆ ?
ಜಲದ ಸಂಗವ ತೊರೆಯಲರಿಯದೆ ಜಲವ ಬಯಸುವನೆಂತಿರ್ದ ಹೇಳಿರೆ ?
ನೆಲನ ಶೋದಿಸಿ ನೆಲೆಯನರಿಯದೆ,
ಕೆರೆಯ ಕಟ್ಟಿಸುವ ಒಡ್ಡ ರಾಮನ ಇರವೆಂತು ಹೇಳಿರೆ ?
ನಮ್ಮ ಗುಹೇಶ್ವರನ ನಿಲವನರಿಯದ ಮರುಳ
ಸಿದ್ಧರಾಮನೆಂತಿರ್ದಹ ಹೇಳಿರೆ ?
ವಚನ 0534
ಒಳಗ ತೊಳೆಯಲರಿಯದೆ ಹೊರಗ ತೊಳೆದು ಕುಡಿವುತ್ತಿರ್ದರಯ್ಯಾ,
ಪಾದೋದಕ ಪ್ರಸಾದವನರಿಯದೆ.
ಬಂದ ಬಟ್ಟೆಯಲ್ಲಿ ಮುಳುಗುತ್ತೈದಾರೆ ಗುಹೇಶ್ವರಾ.
ವಚನ 0535
ಒಳಗೆ ನೋಡಿಹೆನೆಂದಡೆ ಒಳಗ ನೋಡಲಿಲ್ಲ.
ಹೊರಗೆ ನೋಡಿಹೆನೆಂದಡೆ ಹೊರಗ ನೋಡಲಿಲ್ಲ.
ಜ್ಞಾನವೆಂತುಟೊ? ಅಜ್ಞಾನವೆಂತುಟೊ ?
ಬಲೆಯ ಬೀಸಿ ಕೊಲುವನ ಮನೆಯಲ್ಲಿ ಸತ್ತಡೆ
ಏನು ಕಾರಣ ಅಳುವರೊ ಗುಹೇಶ್ವರಾ ?
ವಚನ 0536
ಒಳಗೆ ನೋಡಿಹೆನೆಂದಡೆ ಒಳಗೆ ನಿರಾಳ.
ಹೊರಗೆ ನೋಡಿಹೆನೆಂದಡೆ ಹೊರಗೆ ನಿರಾಳ.
ಹೊಲದಲ್ಲಿ ಆವಿಲ್ಲ ಮನೆಯಲ್ಲಿ ಕರುವಿಲ್ಲ.
ನೆಲಹಿನ ಮೇಲಣ ಬೆಣ್ಣೆ-ಇದು ದಿಟವೊ?
ನಾರಿವಾಳದ ಕಾಯೊಳಗಣ ತಿರುಳ
ಒಡೆಯದೆ ಮೆಲಬಲ್ಲಡೆ ಬೆಡಗು-ಗುಹೇಶ್ವರಾ.
ವಚನ 0537
ಒಳಗೆ ಪ್ರಾಣಲಿಂಗ, ಹೊರಗೆ ಕಾಯಲಿಂಗ
ಮನಕ್ಕೆ ಮನ ನಾಚದಿದೇನೊ ?
ಎರಡರ ನಿರಿಗೆಯ ಒಂದೆಂದರಿದಡೆ
ಅದೇ ಪಥವಯ್ಯಾ ಗುಹೇಶ್ವರಾ.
ವಚನ 0538
ಓಂ’ ಎಂದು ವೇದವನೋದುವ ಮಾದಿಗಂಗೆ ಸಾಧ್ಯವಾಗದು ವಿಭೂತಿ.
ಪುರಾಣವನೋದುವ ಪುಂಡರಿಗೆ ಸಾಧ್ಯವಗದು ವಿಭೂತಿ
ಶಾಸ್ತ್ರವನೋದುವ ಸಂತೆಯ ಸೂಳೆಮಕ್ಕಳಿಗೆ ಸಾಧ್ಯವಾಗದು ವಿಭೂತಿ
ಅಂಗಲಿಂಗಸಂಬಂಧವನರಿದ ಶಿವಜ್ಞಾನಿಗಳಿಗಲ್ಲದೆ ಸಾಧ್ಯವಾಗದು ವಿಭೂತಿ.
ಅಂಗೈಯೊಳಗೆ ವಿಭೂತಿಯನಿರಿಸಿಕೊಂಡು,
ಅಗ್ಘಣಿಯ ನೀಡಿ ಗುಣಮರ್ದನೆಯ ಮಾಡಿ
ಲಿಂಗ ಉಚ್ಛಿಷ್ಟನಂಗೈದು ? ಲಿಂಗ ಸಮರ್ಪಣಂಗೈದು,
ಷಡಕ್ಷರಿಯ ಸ್ಮರಣೆಯಂಗೈದು
ಭಾಳದೊಳು ಪಟ್ಟವಂ ಕಟ್ಟಿ, ವಿಭೂತಿಯ ಧಾರಣಂಗೈದು
ಹಸ್ತವ ಪ್ರಕ್ಷಾಲಿಸುವವ ಗುರುದ್ರೋಹಿ ಲಿಂಗದ್ರೋಹಿ ಜಂಗಮದ್ರೋಹಿ.
ಶ್ರೀವಿಭೂತಿಯ ಲಲಾಟಕ್ಕೆ ಧರಿಸಿ ಹಸ್ತವ ತೊಳೆವ
ಪಾತಕರ ಮುಖವ ನೋಡಲಾಗದು.
ಶ್ರೀವಿಭೂತಿಯನು ಶಿವನೆಂದು ಧರಿಸುವುದು, ಪರಶಿವನು ತಾನೆಂದು ಧರಿಸುವುದು.
ಸಾಕ್ಷಿ:ಕೃತ್ವೇವ ಜಲಮಿಶ್ರಂತು ಸಮುಧೃತ್ಯಷಡಕ್ಷರಿ
ಧಾರಯೇತ್ ತ್ರಿಪುಂಡ್ರಂತು ಮಂತ್ರೇಣ ಮಂತ್ರಿತಂ”
ಶ್ರೀವಿಭೂತಿಯ ಧರಿಸಿ ಹಸ್ತವ ತೊಳದಾತಂಗೆ
ದೇವಲೋಕ ಮತ್ರ್ಯಲೋಕಕ್ಕೆ ಸಲ್ಲದೆಂದುದಾಗಿ
ನಿಮ್ಮಾಣೆ ನಿಮ್ಮ ಪ್ರಮಥರಾಣೆ,
ನಮ್ಮ ಗುಹೇಶ್ವರಲಿಂಗವು ತಾನಾದ ವಿಭೂತಿ ಕಾಣಾ ಸಂಗನಬಸವಣ್ಣ.
ವಚನ 0539
ಓಂ ನಮಃ ಶಿವಾಯ’ ಎಂಬ ದೇವನಿರಲು
ಒಡಲುವಿಡಿದು ಪಾಷಾಣಕ್ಕೆ ಹಂಗಿಗರಾದಿರೆ.
ಶರೀರ, ಶರೀರ ರೂಹಿಸಿದ ರೂಹಿಂಗೆ ಮಾಯದ ಬಲೆಯಲ್ಲಿ ಸಿಲುಕಿ
ಅಂಗಸಂಗಿಗಳೆಲ್ಲರು ಮಹಾಘನವನರಿಯದೆ ಹೋದಿರೆ.
ಹುಸಿಯನೆ ಕೊಯ್ದು ಹುಸಿಯನೆ ಪೂಜಿಸೆ-
ನೇಮದೊಳಗಿದು ಸಲ್ಲದು,
ಗುಹೇಶ್ವರಾ, ನಿಮ್ಮ ಶರಣರ ಸಂಬಂಧ
ತೋರದು ತೋರದು ಬಹುಮುಖಿಗಳಿಗೆ !
ವಚನ 0540
ಓಂ ನಮಃ ಶಿವಾಯಯೆಂಬುದನರಿಯದೆ
ಜಗವೆಲ್ಲವು ನಾಯಾ[ಯಿತ್ತು]
ತಮ್ಮ ತಾವರಿಯದವರಿಗೆ, ಇನ್ನು ಹೇಳಿ ಕೇಳಿದಂತೆ ಆಚರಿಸದಿರ್ದಡೆ
ಆ ನಾಯ ಸಾವು ತಪ್ಪದು.
ಇನ್ನೆತ್ತಣ ಮುಕ್ತಿ ? ಅವರಿಗೆ ಭೋದಿಸಿದ್ದಾನಗದುಫ
ಕಾಣಾ ಗುಹೇಶ್ವರಾ.
ವಚನ 0541
ಓಟೆ ಇದ್ದಂತೆ ಕಾಯಿ ಮೆದ್ದವರುಂಟೆ ?
ಕಾಯದ ಗುಣವಿದ್ದಂತೆ ಲಿಂಗವನರಿದವರುಂಟೆ ?
ಜೋಡು ಹರಿದಲ್ಲದೆ ಕಾಯವನಿರಿಯಲರಿಯದು ಕೈದು.
ಆ ಭಾವವ ತಿಳಿದಲ್ಲದೆ ನಮ್ಮ ಗುಹೇಶ್ವರಲಿಂಗವನರಿಯಬಾರದು
ಕಾಣಾ, ಎಲೆ ಅಂಬಿಗರ ಚಾಡಯ್ಯ.
ವಚನ 0542
ಓಡಿನಲುಂಟೆ ಕನ್ನಡಿಯ ನೋಟ?
ಮರುಳಿನ ಕೂಟ ವಿಪರೀತಚರಿತ್ರ.
ನೋಟದ ಸುಖ ತಾಗಿ ಕೋಟಲೆಗೊಂಡೆನು.
ಗುಹೇಶ್ವರನೆಂಬ ಲಿಂಗವು ಒಬ್ಬನೆ ಅಚಲ.
ಉಳಿದವರೆಲ್ಲರೂ ಸೂತಕಿಗಳು.
ವಚನ 0543
ಓಡಿನಲೂಟ ಕಾಡಿನಲಾಟ-ವಿಪರೀತ ಚರಿತ್ರ !
ಮರುಳಿನ ಕೂಟ !
ಕೋವಿದ ಕೋವಿದ ಅವಿದ ಅವಿದ ಲಿಂಗ
ಗುಹೇಶ್ವರನೆಂಬಾತನೊಬ್ಬನೆ ಹೊರಗು,
ಉಳಿದವರೆಲ್ಲರೂ ಸೂತಕರಯ್ಯಾ.
ವಚನ 0544
ಓದಿ ಓದಿ ವೇದ ವಾದಕ್ಕಿಕ್ಕಿತ್ತು.
ಕೇಳೀ ಕೇಳಿ ಶಾಸ್ತ್ರ ಸಂದೇಹಕ್ಕಿಕ್ಕಿತ್ತು.
ಅರಿದೆ ಅರಿದೆನೆಂದು ಆಗಮ ಅಗಲಕ್ಕೆ ಹರಿಯಿತ್ತು.
ನೀನೆತ್ತ ನಾನೆತ್ತಲೆಂದು-
ಬೊಮ್ಮ ಬಕ್ಕಟ ಬಯಲು ಗುಹೇಶ್ವರಾ
ವಚನ 0545
ಓಹೋ ನಮಃ ಶಿವಾಯ,-
ಮಹದಾಕಾಶದ ಮರೆಯಲ್ಲಿರ್ದ ಶಾಂತ್ಯರ್ಕನ ನಿಲವೊ !
ದಶಮರುತನ ಹೊಯಿಲಿಲ್ಲದೆ,
ತಾನೆ ಲಿಂಗದ ಜ್ಞಾನಜ್ಯೋತಿಯ ನಿಲವೊ !
ತನ್ನಿಂದ ತಾನಾಗಿ ಮುಕ್ತಿಯೆ ಕರಿಗೊಂಡ
ಮುಕ್ತಿಯ ಮುತ್ತಿನ ಧವಳಕಾಂತಿಯ ನಿಲವೊ !
ರುದ್ರಾಕ್ಷಿಯ ಹಂಗು ಬೇಡವೆಂದು
ಹೊದ್ದ ಚರ್ಮದ ಹೊದಿಕೆಯಂ ತೆಗೆದ
ಗಿಟಿ ಗಿಟಿ ಜಂತ್ರದ ನಿಲವೊ !
ಅಲ್ಲ, ತನ್ನ ನಿಲವನರಿಯದೆ ವಾದಿಸುತ್ತಿರಲು
ಉರಿಲಿಂಗೋದ್ಭವವಾದ ಉರಿಲಿಂಗದ ನಿಲವೋ !
ಆವ ನಿಲವೆಂದರಿಯಬಾರದು !
ಗುಹೇಶ್ವರನ ಕಂಗಳಿಗೆ ಒಂದಾಶ್ಚರ್ಯ ತೋರಿತ್ತು
ಕಾಣಾ ಸಂಗನಬಸವಣ್ಣಾ !
ವಚನ 0546
ಕಂಕಳ ತೂಕ (ನೋಟ ?)ಲಿಂಗಕ್ಕೆ ಭಾರ.
ಅಂಗಜೀವಿಗಳ ಕೂಡೆ ನುಡಿವನೆ ಶರಣನು ?
ನಡೆನುಡಿ ಮುಗ್ಧ, ಗುಹೇಶ್ವರಾ ನಿಮ್ಮ ಶರಣ.
ವಚನ 0547
ಕಂಕುಳೆಂಬುದು ಕವುಚಿನ ತವರುಮನೆ.
ಕರಸ್ಥಲವೆಂಬುದು [ಕೈ] ಕೆಟ್ಟ ಹುಣ್ಣು.
ಅಮಳೋಕ್ಯವೆಂಬುದು ಬಾಯ ಭಗಂದರ (ಬಗದಳ ?).
ಅಂಗಸೋಂಕೆಂಬುದು ಪಾಪದ ತವರುಮನೆ.
ಉತ್ತಮಾಂಗವೆಂಬುದು ನೆತ್ತಿಯ ಮೃತ್ಯು.
ಕಂಠವೆಂಬುದು ಗಂಟಲ ಗಾಣ.
ಮತ್ತೆ, ಗುಹೇಶ್ವರನ ಮಾತು ನಿಮಗೇಕೆಲವೊ ?
ವಚನ 0548
ಕಂಗಳ ಕರುಳ ಕೊಯ್ದವರ, ಮನದ ತಿರುಳ ಹುರಿದವರ,
ಮಾತಿನ ಮೊದಲ ಬಲ್ಲವರ; ಎನಗೊಮ್ಮೆ ತೋರಾ ಗುಹೇಶ್ವರಾ
ವಚನ 0549
ಕಂಗಳ ಬೆಳಗ ಕಲ್ಪಿಸಬಾರದು, ಕರ್ಣದ ನಾದವ ವರ್ಣಿಸಬಾರದು.
ಜಿಹ್ವೆಯ ರುಚಿಗೆ ಪ್ರತಿಯಿಲ್ಲವೆಂದಿತ್ತು.
ಮತಿಗೆ ಮಹಾಘನವಪ್ಪ ಸುಷುಮ್ನನಾಳದ ಸುಯಿಧಾನವ,
ಪ್ರಮಾಣಿಸಬಾರದು,
ಅಣು ರೇಣು ತೃಣ ಕಾಷ್ಠದೊಳಗೆ ಭರಿತ ಮನೋಹರ,
ನಿಂದ ನಿರಾಳ- ಗುಹೇಶ್ವರಾ.
ವಚನ 0550
ಕಂಗಳ ಮುಂದಣ ಗೊತ್ತನರಿದು,
ಕಾಮ್ಯದ ಮುಂದಣ ಚಿತ್ತವ ಹರಿದು,
ಮಾಡಿಹೆನೆಂಬ ಮಾಟಕೂಟದ ಚಿತ್ತ ನಿಂದಲ್ಲದೆ ಸ್ವಸ್ಥವಿಲ್ಲ.
ಹಾಂಗಲ್ಲದೆ ಗುಹೇಶ್ವರಲಿಂಗವ ಕಾಣಬಾರದು-
ಆಯ್ದಕ್ಕಿಯ ಮಾರಯ್ಯಾ.
ವಚನ 0551
ಕಂಗಳ ಮುಂದೆ ಕತ್ತಲೆ ಇದೇನೊ?
ಮನದ ಮುಂದಣ ಮರಣ (ಮರವೆ ?) ಇದೇನೊ?
ಒಳಗಣ ರಣರಂಗ ಹೊರಗಣ ಶೃಂಗಾರ !
ಬಳಕೆಗೆ ಬಂದ ಬಟ್ಟೆ ಇದೇನೊ ಗುಹೇಶ್ವರಾ ?
ವಚನ 0552
ಕಂಗಳ ಸೂತಕ ಕಾಮಿಸಲಾಗಿ ಹರಿಯಿತ್ತು.
ಮನದ ಸೂತಕ ಮುಟ್ಟಲಾಗಿ ಬಿಟ್ಟಿತ್ತು.
ನಾನೆಂಬ ಭಾವ ಗುಹೇಶ್ವರಲಿಂಗದಲ್ಲಿ ಐಕ್ಯವಾಯಿತ್ತು !
ವಚನ 0553
ಕಂಗಳಲ್ಲಿ ಜ್ಯೋತಿರ್ಲಿಂಗ, ಕೈಯಲ್ಲಿ ಉಭಯ ಪ್ರತಿಷ್ಠೆಯ ಲಿಂಗ,
ಬ್ರಹ್ಮರಂಧ್ರದಲ್ಲಿ ಅಮೃತಲಿಂಗ ಉಂಟೆಂಬ
ತ್ರಿವಿಧ ಸಂದನಳಿಯಬೇಕು; ಸಿದ್ಧರಾಮಯ್ಯಾ,
ಗುಹೇಶ್ವರಲಿಂಗವನರಿಯಬೇಕು
ವಚನ 0554
ಕಂಗಳಲ್ಲಿ ನಟ್ಟಗಾಯವನಾರಿಗೆ ತೋರಬಹುದಯ್ಯಾ?
ಮನ ಸೋಂಕಿದ ಸುಖವ ಮೊಟ್ಟೆಯ ಕಟ್ಟಬಹುದೆ?
ಆತ ನಿಂದ ನಿಲವಾತಂಗೆ ಸಾಧ್ಯವಾಯಿತ್ತು.
ಆತ ನಿಂದ ನಿಲವನೇನೆಂಬೆ ಗುಹೇಶ್ವರಾ.
ವಚನ 0555
ಕಂಗಳಾಲಿಯ ಕರಿಯ ನಾಳದಲ್ಲಿ, ಈರೇಳು ಭುವನಂಗಳಡಗಿದವು!
ನಾಟಕ ನಾಟಕವ ರಚಿಸುತ್ತ, ಆಡಿಸುವ ಸೂತ್ರದ ಪರಿ,
ಗುಹೇಶ್ವರಲಿಂಗ ನಿರಾಳಚೈತನ್ಯ.
ವಚನ 0556
ಕಂಗಳೇಕೆ ನೋಡಬೇಡಾ’ ಎಂದರೆ ಮಾಣವು ? ಶ್ರೋತ್ರಂಗಳೇಕೆ
ಆಲಿಸಬೇಡಾ’ ಎಂದರೆ ಮಾಣವು ?
ಜಿಹ್ವೆ ಏಕೆ ರುಚಿಸಬೇಡಾ’ ಎಂದರೆ ಮಾಣವು (ದು ?) ನಾಸಿಕವೇಕೆ
ವಾಸಿಸಬೇಡಾ’ ಎಂದರೆ ಮಾಣವು ? (ದು ?)
ತ್ವಕ್ಕು ಏಕೆ `ಸೋಂಕಬೇಡಾ’ ಎಂದರೆ ಮಾಣವು ? (ದು ?)-
ಈ ಭೇದವನರಿದು ನುಡಿಯಲು ಸಮಧಾತುವಾಯಿತ್ತು!
ಗುಹೇಶ್ವರಲಿಂಗಕ್ಕೆ ಒಲಿದ ಕಾರಣ, ಅಬಿಮಾನ ಲಜ್ಜೆ ಬೇಸತ್ತು ಹೋಯಿತ್ತು.
ವಚನ 0557
ಕಂಗಳೊಳಗಣ ಕಟ್ಟಿಗೆಯ ಮುರಿಯದ,
ಕೈಯೊಳಗಣ ಕಪ್ಪರವನೊಡೆಯದ,
ತನ್ನೊಳಗಿಪ್ಪ ನಿಕ್ಷೇಪವ ಭೇದಿಸಿ ಕಾಣಲರಿಯದ ಬಿನುಗರೆಲ್ಲ,
ಹಲುಗಿರಿವುತ್ತಿಹರು ಕಾಣಾ ಗುಹೇಶ್ವರಾ
ವಚನ 0558
ಕಂಡುದ ಹಿಡಿಯಲೊಲ್ಲದೆ ಕಾಣದುದನರಸಿ ಹಿಡಿದಿಹೆನೆಂದಡೆ,
ಸಿಕ್ಕದೆಂಬ ಬಳಲಿಕೆಯ ನೋಡಾ.
ಕಂಡುದನೆ ಕಂಡು ಗುರುಪಾದವಿಡಿದಲ್ಲಿ,
ಕಾಣಬಾರದುದ ಕಾಣಬಹುದು ಗುಹೇಶ್ವರಾ.
ವಚನ 0559
ಕಂಡುದೆಲ್ಲ ಪಾವನ ಕೇಳಿತ್ತೆಲ್ಲ ಪರಮಬೋಧೆ,
ಮುಟ್ಟಿತ್ತೆಲ್ಲ ಪರುಷದ ಸೋಂಕು
ಒಡನೆ ನುಡಿದವರೆಲ್ಲ ಸದ್ಯೋನ್ಮುಕ್ತರು.
ಸುಳಿದ ಸುಳುಹೆಲ್ಲ ಜಗತ್ಪಾವನ, ಮೆಟ್ಟಿದ ಧರೆಯೆಲ್ಲ ಅವಿಮುಕ್ತಕ್ಷೇತ್ರ,
ಸೋಂಕಿದ ಜಲವೆಲ್ಲ ಪುಣ್ಯತೀರ್ಥಂಗಳು.
ಶರಣೆಂದು ಭಕ್ತಿಯ ಮಾಡಿದವರೆಲ್ಲರು ಸಾಯುಜ್ಯರು.
ಗುಹೇಶ್ವರಾ ನಿಮ್ಮ ಸುಳುಹಿನ ಸೊಗಸನುಪಮಿಸಬಾರದು.
ವಚನ 0560
ಕಂಡೆನಲ್ಲಾ ಕರುಳಿಲ್ಲದ ಕಲಿಯ !
ಕಂಡೆನಲ್ಲಾ ಯೌವನವಿಲ್ಲದ ನೇಹವ !
ಕಂಡೆನಲ್ಲಾ ಕೈದುವಿಲ್ಲದ ಕಲಿತನವ !
ಕಂಡೆನಲ್ಲಾ ಕುಸುಮವಿಲ್ಲದ ಗಂಧವ !
ಕಂಡೆನಲ್ಲಾ ಗುಹೇಶ್ವರಲಿಂಗದಲ್ಲಿ
ಮರುಳಶಂಕರನೆಂಬ ನಾಮವ !
ವಚನ 0561
ಕಂಡೆನೆಂಬುದು ಕಂಗಳ ಮರವೆ,
ಕಾಣೆನೆಂಬುದು ಮನದ ಮರವೆ,
ಕೂಡಿದೆನೆಂಬುದು ಅರುಹಿನ ಮರವೆ,
ಅಗಲಿದೆನೆಂಬುದು ಮರಹಿನ ಮರವೆ.
ಇಂತು-ಕಂಡೆ ಕಾಣೆ ಕೂಡಿದೆ ಅಗಲಿದೆ ಎಂಬ,
ಭ್ರಾಂತಿಸೂತಕವಳಿದು ನೋಡಲು
ಗುಹೇಶ್ವರಲಿಂಗವನಗಲಲೆಡೆಯಿಲ್ಲ ಕೇಳಾ, ಎಲೆ ತಾಯೆ
ವಚನ 0562
ಕಂಡೆಯಾ ಬಸವಣ್ಣಾ,
ಕಣ್ಣಿನೊಳಗಣ ಬೊಂಬೆಯ ಸೂತ್ರದ ಇರವಿನಂತೆ,
ಕುಂದಣದೊಳಗಡೆಗೆ ತೋರುವ ಮೃದು ಛಾಯದಂತೆ,
ನವನೀತದೊಳಗಡಗಿದ ಸಾರದ ಸವಿಯಂತೆ
ಅಂಗವಿಲ್ಲದ ಕುರುಹು, ಭಾವವಿಲ್ಲದ ಬಯಲು,
ಬೆಳಗನರಿಯದ ಜ್ಯೋತಿಯ ಕಂಡೆಯಾ ಸಂಗನಬಸವಣ್ಣಾ,
ಗುಹೇಶ್ವರಲಿಂಗದಲ್ಲಿ ಮರುಳು ಶಂಕರದೇವರ ?
ವಚನ 0563
ಕಂಬವೊಂದೆ, ದೇಗುಲವೊಂದೆ, ದೇವರೊಂದೆ
ಗುಹೇಶ್ವರ ನಿಮ್ಮ ಮನ್ನಣೆಯ ಶರಣರ ದೇವರೆಂಬೆನು.
ವಚನ 0564
ಕಕ್ಷೆ ಕರಸ್ಥಲ ಕಂಠ ಉತ್ತಮಾಂಗ ಮುಖಸೆಜ್ಜೆ ಅಂಗಂಸೋಂಕೆಂಬದು;
ಷಡುಸ್ಥಲದರುಶನಾದಿಗಳಿಗೆ, ಬಹಿರಂಗದಲ್ಲಿ ವೇಷಲಾಂಛನವಯ್ಯಾ.
ಅಂತರಂಗದಲ್ಲಿ ನಾಲ್ಕು ಸ್ಥಲ;
ಬ್ರಹ್ಮರಂಧ್ರ ಭ್ರೂಮಧ್ಯ ನಾಶಿಕಾಗ್ರ ಚೌಕಮಧ್ಯ,
-ಇಂತೀ ಸ್ಥಾನಂಗಳನರಿಯರಾಗಿ!
ಬ್ರಹ್ಮರಂಧ್ರದಲ್ಲಿ ಲಿಂಗಸ್ವಾಯತ, ಭ್ರೂಮಧ್ಯದಲ್ಲಿ ಜಂಗಮಸ್ವಾಯತ,
ನಾಶಿಕಾಗ್ರದಲ್ಲಿ ಪ್ರಸಾದಸ್ವಾಯತ, ಚೌಕಮಧ್ಯದಲ್ಲಿ ಅನುಭಾವಸ್ವಾಯತ,
ಅಷ್ಟದಳಕಮಲದಲ್ಲಿ ಸರ್ವಸ್ವಾಯತ.-
ಇದು ಕಾರಣ ಗುಹೇಶ್ವರಾ ನಿಮ್ಮಶರಣರು ಸದಾ ಸನ್ನಹಿತರು.
ವಚನ 0565
ಕಕ್ಷೆಯಲ್ಲಿ ಲಿಂಗವ ಧರಿಸಿಕೊಂಡಾತನು ಬ್ರಹ್ಮನು.
ಕರಸ್ಥಲದಲ್ಲಿ ಲಿಂಗವ ಧರಿಸಿಕೊಂಡಾತನು ವಿಷ್ಣುವು.
ಉತ್ತಮಾಂಗದಲ್ಲಿ ಲಿಂಗವ ಧರಿಸಿಕೊಂಡಾತನು ರುದ್ರನು.
ಅಮಳೋಕ್ಯದಲ್ಲಿ ಲಿಂಗವ ಧರಿಸಿಕೊಂಡಾತನು ಈಶ್ವರನು.
ಮುಖಸೆಜ್ಜೆಯಲ್ಲಿ ಲಿಂಗವ ಧರಿಸಿಕೊಂಡಾತನು ಸದಾಶಿವನು.
ಅಂಗಸೆಜ್ಜೆಯಲ್ಲಿ ಲಿಂಗವ ಧರಿಸಿಕೊಂಡಾತನು ಉಪಮಾತೀತನು-
ಇವರೆಲ್ಲರೂ ಬಯಲನೆ ಪೂಜಿಸಿ ಬಯಲಾಗಿ ಹೋದರು.
ನಾನು ನಿತ್ಯವ ಪೂಜಿಸಿ ಮಿಥ್ಯವಳಿದ ಇರವಿನಲ್ಲಿ
ಸುಖಿಯಾದೆನು ಗುಹೇಶ್ವರಾ.
ವಚನ 0566
ಕಟ್ಟಿದಾತ ಭಕ್ತನಪ್ಪನೆ ? ಕೆಡಹಿದಾತ ದ್ರೋಹಿಯಪ್ಪನೆ ?
ಲಿಂಗವ ಕಟ್ಟಲಿಕ್ಕೆ ತನ್ನ ಕೈಯೊಳಗಿಪ್ಪುದೆ ?
ಕೆಡಹಲಿಕ್ಕೆ ಬೀಳಬಲ್ಲುದೆ ?
ಆ ಲಿಂಗವು ಬಿದ್ದ ಬಳಿಕ ಜಗವು ತಾಳಬಲ್ಲುದೆ ?
ಪ್ರಾಣಲಿಂಗ ಬಿದ್ದ ಬಳಿಕ ಆ ಪ್ರಾಣ ಉಳಿಯಬಲ್ಲುದೆ ?
ಲಿಂಗ ಬಿದ್ದಿತ್ತೆಂಬುದು ಸೂತಕದ ಶಬ್ದ, ಭ್ರಾಂತುವಿನ ಪುಂಜ.
ಅಂತು ಅದ ಕೇಳಲಾಗದು.
ಯುಗಜುಗಂಗಳು ಗತವಹವಲ್ಲದೆ ಲಿಂಗಕ್ಕೆ ಗತವುಂಟೆ ?
ಲಿಂಗವು ಬಿದ್ದಿತ್ತೆಂದು ನಿಂದಿಸಿ ನುಡಿವ
ದ್ರೋಹಿಯ ಮಾತ ಕೇಳಲಾಗದು ಕಾಣಾ ಗುಹೇಶ್ವರಾ.
ವಚನ 0567
ಕಡಲ ನುಂಗಿದ ಕಪ್ಪಿನ ಪರಿಭವ ನವಸಾಸಿರ !
ಸಿಡಿಲು ಹೊಯ್ದ ಬಯಲಿಂಗೆ ಬಣ್ಣವುಂಟೆ ?
ಕಂಗಳ ಮುಂದಣ ಕನಸು ಹಿಂಗಿದ ತುಂಬಿಯ ಪರಿಮಳ !
ಅಂಗವಿಲ್ಲದ ರೂಹಿಂಗೆ ಸಂಗವುಂಟೆ ?-ಇದೇನೋ !
ಗಗನದ ಹಣ್ಣನೆ ಕೊಯ್ದು, ಮುಗುದೆ ರುಚಿಯನರಿಯಳು !
ಹಗರಣದಮ್ಮಾವಿನ ಹಯನು ಸಯವಪ್ಪುದೆ ಗುಹೇಶ್ವರಾ ?
ವಚನ 0568
ಕಡಲ ಮೇಲಣ ಕಲ್ಲು, ಸಿಡಿಲು ಹೊಯ್ದ ಬಾವಿ !
ತಡದ ರಕ್ಕಸಿಯ ಮಗಳು ಅಡವಿಯಲ್ಲಿ ಮಡಿದಳು.
ತೊಡೆಯಬಾರದ ಲಿಪಿಯ ಬರೆಯಬಾರದು ನೋಡಾ !
ನಡುನೀರ ಜ್ಯೋತಿಯ ವಾಯುವ ಕೊನೆಯಲ್ಲಿ ನೋಡಾ !
ಮೊದಲಿಲ್ಲದ ನಿಜ, ಕಡೆಯಿಲ್ಲದ ನಡು-
ಏನೂ ಇಲ್ಲದ ಊರೊಳಗೆ ಹಿಡಿದಡೆ
ನುಂಗಿತ್ತು ನೋಡಾ ಹೆಮ್ಮಾರಿ ಗುಹೇಶ್ವರಾ.
ವಚನ 0569
ಕಡುಜಲಕ್ಕೆ (ಹರಿವ ಜಲಕ್ಕೆ ?) ಇದಿರಾಗಿ ಹರಿವ ಸ್ವಾಮಿಯ ಬರವ ಕಂಡು,
ಬಿಡದೆ ಬೆಂಬತ್ತಿಸುವ ಪರಿಯ ನೋಡಾ.
ನಡೆ ನುಡಿ ಚೈತನ್ಯ ಒಡಲನೊಂದನು ಮಾಡಿ
ಬಿಡದೆ ವೇದಿಸುವ ಬೆಡಗ ಕಂಡೆನಯ್ಯಾ !
ಕಡೆಗೆ ಸೂಸದ ದೃಷ್ಟಿ, ಹಿಡಿದು ತೊಲಗದ ಹಸ್ತ,
ಬೇಡ ಬೇಡ ತನಗೆನ್ನದ ಸಜ್ಜನ ಮಡದಿ,
ತನ್ನ ಗಂಡನ ಅಡಗಿ ಕೂಡುವ ಭೇದ !-
ನಡುವಿರುಳು ಕೂಡಿ ನಿಮಿರೆ ಬೆಳಗಾಯಿತ್ತು.
ಮಾಡಿ ನೀಡುವನ ಕಂಡು ನಾಡು ಬೀಡೆಲ್ಲ ನೆರೆದು
ಕೊಡ ಕೈಯಲ್ಲಿ ಕೊಟ್ಟಡೆ ತೃಪ್ತರಾಗಿ,
ಮಾಡುವರು ಹರಸುವರು ನೋಡುವರು ಮನದಣಿಯೆ
ಕೊಡುವರು ಕೋಟಿ, ಸಹಜ ಒಂದೆ ಎಂದು !
ಜೋಡ ತೊಡದಾತನ ಮೈಯಲ್ಲಿ, ಕೂಡೆ ಘಾಯವಿಲ್ಲದುದ ಕಂಡು,
ನೋಡಿರೆ ಮಸೆ ಮುಟ್ಟದ ಮಹಾಂತನ !
ಬೇಡುವೆನು ಕರುಣವನು, ಪಾದ [ವ]ನೊಸಲಲ್ಲಿ ಸೂಡುವೆನು
ಗುಹೇಶ್ವರನ ಶರಣ ಬಸವಣ್ಣಂಗೆ ನಮೋ ನಮೋ ಎಂಬೆನು.
ವಚನ 0570
ಕಡೆನಾಡಲಿಂಗವ ನಡುನಾಡಿಗೆ ತಂದೆನೆಂಬ ಅಹಂಕಾರವ
ಮುಂದುಗೊಂಡಿದ್ದೆಯಲ್ಲಾ
ಎಂಬತ್ತುನಾಲ್ಕುಲಕ್ಷ ಶಿವಾಲಯವೆಂಬ ಬಯಲಭ್ರಮೆ
ಇದೆಲ್ಲಿಯದು ಹೇಳಾ ?
ಮಹಾಘನಲಿಂಗಕ್ಕೆ ಜಗದ ಜೀವರಾಶಿಗಳು
ಶಿವಾಲಯವಾಗಬಲ್ಲವೆ ?
ನಿನ್ನ ಲಕ್ಷದ ಮೇಲೆ ತೊಂಬತ್ತಾರುಸಾವಿರ ಲಿಂಗವ
ನಿನ್ನ ಎದೆಯಲ್ಲಿ ಇರಿದುಕೊಳ್ಳಾ.
ಗುಹೇಶ್ವರಲಿಂಗವು ನಿನ್ನ ತಪ್ಪಿಸಿ ಹೋದುದ
ಮರೆದೆಯಲ್ಲಾ ಮರುಳ ಸಿದ್ಧರಾಮಯ್ಯಾ
ವಚನ 0571
ಕಡೆಯಿಲ್ಲದ ದೇಶವ ತಿರುಗಿದೆನು,
ಹವಣಿಲ್ಲದ ಕಂಥೆಯ ತೊಟ್ಟೆನು,
ಹಸಿವಿಲ್ಲದ ಕಪ್ಪರವ ಹಿಡಿದು ಭಕ್ತಿಬಿಕ್ಷವ ಬೇಡ ಬಂದೆನು.
ಗುಹೇಶ್ವರ ಹಸಿದನು, ಉಣಲಿಕ್ಕು ಏಳಾ ಸಂಗನಬಸವಣ್ಣಾ.
ವಚನ 0572
ಕಣ್ಗೆ ಕಾಬಡೆ ರೂಪಲ್ಲ, ಕೈಗೆ ಸಿಲುಕವಡೆ ದೇಹಿಯಲ್ಲ.
ನಡೆವಡೆ ಗಮನಿಯಲ್ಲ, ನುಡಿವಡೆ ವಾಚಾಳನಲ್ಲ.
ನಿಂದಿಸಿದಡೆ ಹಗೆಯಲ್ಲ, ಹೊಗಳಿದವರಿಗೆ ಕೆಳೆಯಲ್ಲ.
ಗುಹೇಶ್ವರನ ನಿಲುವು ಮಾತಿನ ಮಾಲೆಗೆ ಸಿಲುಕುವುದೆ ?
ಸಿದ್ಧರಾಮಯ್ಯ ನೀನು ಮರುಳಾದೆಯಲ್ಲಾ
ವಚನ 0573
ಕಣ್ಣ ಮುಂದಿರ್ದವನ ಕಾಣದೆ ಹೋದೆನು.
ನೋಡೂದ ನೋಡಲರಿಯದೆ ಕೆಟ್ಟಿತ್ತು ಲೋಕವೆಲ್ಲಾ.
ನೋಡೂದ ನೋಡಬಲ್ಲಡೆ ಕೂಡಲಿಲ್ಲ ಅಗಲಲಿಲ್ಲ.
ನೋಡದ ಕೂಡದ ಅಗಲದ ಸುಖವನು
ಗುಹೇಶ್ವರಾ ನಿಮ್ಮ ಶರಣ ಬಲ್ಲನು.
ವಚನ 0574
ಕಣ್ಣಿಂಗೆ ಕಣ್ಣು, ಕಣ್ಣೊಳು ಕಣ್ಣು, ಕಣ್ಣೇ ನೇತ್ರ,
ನೇತ್ರವೆ ಸೂತ್ರ, ಸೂತ್ರವೆ ಲಿಂಗ, ಲಿಂಗವೆ ಗುಹ್ಯ.
ಗುಹ್ಯಕ್ಕೆ ಗುಹ್ಯ, ಗೋಪ್ಯಕ್ಕೆ ಗೋಪ್ಯ, ರಹಸ್ಯಕ್ಕೆ ರಹಸ್ಯ.
ಈ ನೇತ್ರಮಹಿಮೆಯ ಗುಹೇಶ್ವರ ಬಲ್ಲನಲ್ಲದೆ
ಕಣ್ಣುಗೆಟ್ಟಣ್ಣಗಳೆತ್ತ ಬಲ್ಲರು ನೋಡಯ್ಯ.
ವಚನ 0575
ಕಣ್ಣಿನೊಳಗಣ ಕಸ, ಕಾಲೊಳಗಣ ಮುಳ್ಳು,
ಮನದೊಳಗಣ ಶಂಕೆ ಹರಿಯಿತ್ತು,
ಗುಹೇಶ್ವರನೆಂಬ ಭಾವ ನಿರಾಳವಾದಲ್ಲಿ !
ವಚನ 0576
ಕಣ್ಣು ಕಂಡಲ್ಲದೆ ಮನ ನೆನೆಯದು.
ಆ ಮನ ನೆನೆದಲ್ಲಿಗೆ ಕಾಲು ನಡೆವುದು.
ಕಾಲು ನಡೆದಲ್ಲದೆ ಕಾರ್ಯವಾಗದು.
ಕಾಲೆಂದಡೆ ನೀ ಚರಿಸುವ ವರ್ತನೆ.
ಆ ವರ್ತನಾಚಾರವೆಲ್ಲವು ಲಿಂಗವು.
ಇದು ಕಾರಣ-ಲಿಂಗವ ಹಿಂಗಿದ ಮಾಟ
ಮೀಸಲಿಲ್ಲದ ಮನೆದೇವರ ಹಬ್ಬದಂತೆ !
ನಮ್ಮ ಗುಹೇಶ್ವರಲಿಂಗಕ್ಕೆ,
ಇದೇ ಬೇಹ ಶೌಚ ಕೇಳಾ ಚಂದಯ್ಯಾ.
ವಚನ 0577
ಕಣ್ಣೆ ಕಟ್ಟಿಗೆಯಾಗಿ, ಕೈಯೆ ಕರ್ಪರವಾಗಿ ,
ಕಿವಿಯೆ ಸಕಲಪುರಾತನರ ಕಾರುಣ್ಯವೆನುತ,
ಮನದ ಬಿಕ್ಷವನುಂಡು, ತನು ಪರಿಣಾಮವನೆಯ್ದಿಹ
ಘನಮಹಿಮರ ತೋರಯ್ಯಾ ಗುಹೇಶ್ವರಾ
ವಚನ 0578
ಕದನದೊಳಗಣ ಕಣ್ಣ ಕೆಂಪು, ಕದನದೊಳಗಣ ಮನದ ಕೆಂಪು
ಇದಾವನಾವನ ಕಾಡದಯ್ಯಾ ?
ಪದುಮದೊಳಗೆ ಬಿಂದು ಸಿಲುಕಿ ಅಲ್ಲಿಯೆ ಅದೆ ನೋಡಿರೆ !
ಗುಹೇಶ್ವರನೆಂಬ ಅನುಗ್ರಹ ತನ್ನ ನುಂಗಿ ಲಿಂಗವಿಲ್ಲೆನುತ್ತಿರ್ದೆನು(ದ್ದಿತು?)
ವಚನ 0579
ಕದಳಿಯ ಬನವ ಹೊಕ್ಕು ಹೊಲಬ ತಿಳಿಯದನ್ನಕ್ಕ,
ಬಯಲ ಗಾಳಿಯ ಹಿಡಿದು ಗಟ್ಟಿ ಮಾಡದನ್ನಕ್ಕ,
ಬರಿದೆ ಬಹುದೆ ಶಿವಜ್ಞಾನ?
ಷಡುವರ್ಣ(ರ್ಗ?)ವಳಿಯದನ್ನಕ್ಕ, ಬರಿದೆ ಬಹುದೆ?
ಅಷ್ಟಮದವಳಿಯದನ್ನಕ್ಕ ನಬರಿದೆ ಬಹುದೆ?
ಮದಮತ್ಸರ ಮಾಡಲಿಲ್ಲ, ಹೊದಕುಳಿಗೊಳಲಿಲ್ಲ,
ಗುಹೇಶ್ವರಲಿಂಗ ಕಲ್ಪಿತದೊಳಗಿಲ್ಲ.
ವಚನ 0580
ಕನಕಾಚಲದಲ್ಲಿ ದಿನನಾಯಕ ಎಂಬ ರತ್ನ ಹುಟ್ಟಿ,
ಅಹುದಲ್ಲ (ಅಹುದು ಅಲ್ಲ?) ಎಂಬ ಕೊಳಗದ ಕೊರಳಿನಲ್ಲಿ ಅಳೆವುತ್ತೈದಾನೆ.
ಕೊಳಗದ ಕೊರಳು ತುಂಬಿ ಅಳೆವಾತನ ಹೃದಯ ತುಂಬಿ
ಗುಹೇಶ್ವರಲಿಂಗದ ಕಂಗಳು ತುಂಬಿ ಮಂಗಳಮಯವಾಯಿತ್ತು !
ವಚನ 0581
ಕನ್ನಡಿಯೊಳಗಣ ರೂಪನರಸಿಯೂ ಕಾಣರು,
ಹೊಳೆವುತ್ತಿದೆ ಧ್ರುವ (ಭ್ರೂ?) ಮಂಡಲದೊಳಗೆ
ಇದ ಬಲ್ಲವರೊಳಗಿಪ್ಪ ಗುಹೇಶ್ವರ.
ವಚನ 0582
ಕಬ್ಬಿನ ಬಿಲ್ಲ ಮಾಡಿ, ಪರಿಮಳದಲದ್ದಿ ಅಂಬ ಮಾಡಿ ನಿಲ್ಲೊ ಬಿಲ್ಲಾಳೆ
ಎನ್ನ ಮನದಲ್ಲಿ ಎಸೆಯ ಬಲ್ಲೆಯಯ್ಯಾ, ಗುಹೇಶ್ವರನೆಂಬ ಲಿಂಗವನು !
ವಚನ 0583
ಕಬ್ಬಿನ ರಸದೊಳಗಣ ಮುತ್ತನೊಡೆದು ನೋಡಲು
ಹುಬ್ಬಿನ ಮೇಲಣ ನೀಲದ ಪ್ರಭೆಯ ನೋಡಾ !
ವಜ್ರದ ಚಂಡಿಕೆ (ಚಂದ್ರಿಕೆ?)ಯಲ್ಲಿ ಕಟ್ಟಿ ಆಳುವರು !
ಉಭಯ ಕವಿಗಳಿಗೆ ಅರಿಯಬಾರದು.
ಗುಹೇಶ್ವರನ ಸ್ವಾನುಭಾವಿಗಳಿಗಲ್ಲದೆ ತಿಳಿಯಬಾರದು.
ವಚನ 0584
ಕಬ್ಬು ಬೆಳೆವುದಯ್ಯ ಕರಿಯ ಭೂಮಿಯಿದ್ದಲ್ಲಿ,
ಉಬ್ಬುಬ್ಬಿ ಬೆಳೆವುದಯ್ಯ ಜಲ ಪ್ರಮಾಣವಿರ್ದಲ್ಲಿ,
ದಾರಿದ್ರ್ಯವಿದ್ದಲ್ಲಿ ನಿದ್ರೆ ಬೆಳೆವುದಯ್ಯ,
ನಮ್ಮ ಶಿವನ ಸಲೆ ಸಂದ ಶರಣರಾದ ಹಿರಿಯರಿದ್ದಲ್ಲಿ ಬುದ್ಧಿ ಬೆಳವುದಯ್ಯ,
ಜಟ್ಟಿ ಮಾಸಾಳರಿರ್ದಲ್ಲಿ ಕಾಳಗ ಘನವನಪ್ಪುದಯ್ಯ,
ಇಷ್ಟ ಕಂಡು ಬೆರಗಾದ ನಮ್ಮ ಗುಹೇಶ್ವರ.
ವಚನ 0585
ಕಬ್ಬುನದ ಗುಂಡಿಗೆಯಲ್ಲಿ [ರಸದ] ಭಂಡವ ತುಂಬಿ,
ಹೊನ್ನ ಮಾಡ ಬಲ್ಲಡೆ ಅದು ಪರುಷ ಕಾಣಿರಣ್ಣಾ.
ಲಿಂಗ ಬಂದು ಉಂಬಡೆ ಪ್ರಸಾದಕಾಯವಪ್ಪಡೆ,
ಅಂದಂದಿಂಗೆ ಭವಕರ್ಮ ಮುಟ್ಟಲಮ್ಮದು ಕಾಣಿರೆ.
ಆದಿಯ ಪ್ರಸಾದಕ್ಕೆ ಬಾಧೆಯಿಲ್ಲ ಕಾಣಿರೆ.
ಶಶಿಯಲ್ಲಿ ಕರಗದು ಬಿಸಿಲಲ್ಲಿ ಕೊರಗದು,
ರಸವುಂಡ ಹೊನ್ನು -ಗುಹೇಶ್ವರಾ ನಿಮ್ಮ ಶರಣ !
ವಚನ 0586
ಕರಗಿಸಿ ನೋಡಿರೆ ಅಣ್ಣಾ ಕರಿಯ ಘಟ್ಟಿಯನು.
ಆ ಕರಿಯ ಘಟ್ಟಿಯೊಳಗೊಂದು ರತ್ನವಿಪ್ಪುದು.
ಆ ರತ್ನದ ಪರೀಕ್ಷೆಯ ಬಲ್ಲೆವೆಂಬವರೆಲ್ಲರ ಕಣ್ಣುಗೆಡಿಸಿತ್ತು ನೋಡಾ !
ಅರುಹಿರಿಯರೆಲ್ಲರೂ ಮರುಳಾಗಿ ಹೋದರು.
ಕರಿಯ ಘಟ್ಟಿಯ ಬಿಳಿದು ಮಾಡಿ
ಮುಖದ ಮುದ್ರೆಯನೊಡೆಯಬಲ್ಲವರಿಗಲ್ಲದೆ
ಗುಹೇಶ್ವರನ ನಿಲವನರಿಯಬಾರದು ನೋಡಿರಣ್ಣಾ.
ವಚನ 0587
ಕರಣಾದಿ ಗುಣಂಗಳಳಿದು ನವಚಕ್ರಂಗಳು ಬಿನ್ನವಾದ ಬಳಿಕ
ಇನ್ನೇನೊ? ಇನ್ನೇನೊ?
ಪುಣ್ಯ-ಪಾಪವಿಲ್ಲ ಇನ್ನೇನೊ ? ಇನ್ನೇನೊ ?
ಸ್ವರ್ಗ-ನರಕವಿಲ್ಲ ಇನ್ನೇನೊ ? ಇನ್ನೇನೊ ?
ಗುಹೇಶ್ವರಲಿಂಗವ ವೇದಿಸಿ ಸುಖಿಯಾದ ಬಳಿಕ
ಇನ್ನೇನೊ ? ಇನ್ನೇನೊ ?
ವಚನ 0588
ಕರಸ್ಥಲದ ಬೆಳಗಿನೊಳಗೊಂದು ಘನಲಿಂಗದ ಬೆಳಗ ಕಂಡೆ.
ಮಹಾಮಂಗಳನಿಳಯನಾಗಿ ತೋರುತ್ತಿದ್ದಾನೆ.
ಮಹಾಮಂಗಳನಿಳಯವಾಗಿ ತೋರುತ್ತಿದ್ದಿತ್ತು, ಗುಹೇಶ್ವರಲಿಂಗದ ವಾರ್ತೆ.
ಸಂಗನಬಸವಣ್ಣನ ನಿವಾಳಿಸುತ್ತಿದ್ದಿತ್ತು.
ವಚನ 0589
ಕರಸ್ಥಲದ ಲಿಂಗ ಮನಸ್ಥಲದಲ್ಲಿ ವೇದ್ಯವಾಗಿ
ಮನಸ್ಥಲದ ಲಿಂಗ ಸರ್ವಾಂಗದಲ್ಲಿ ವೇದ್ಯವಾದ ಬಳಿಕ
ಇನ್ನು ಬಿನ್ನಭಾವಕ್ಕೆ ತೆರಹುಂಟೆ ?
ಗುಹೇಶ್ವರಲಿಂಗವ ಬೆರಸಿ ಸಮರಸವಾದ ಬಳಿಕ
ಎರಡೆಂಬುದಿಲ್ಲ ನೋಡಾ ಚನ್ನಬಸವಣ್ಣಾ
ವಚನ 0590
ಕರಸ್ಥಲದ ಲಿಂಗವೆ ಕಾಯಕ್ಕೆ ವೇದಿಸಿದಲ್ಲಿ, ಕಾಯ ಲಿಂಗವಾಯಿತ್ತು.
ಅಂತಾದ ಮಹಾಘನಲಿಂಗವೆ ಪ್ರಾಣಕ್ಕೆ ವೇದಿಸಿದಲ್ಲಿ ಪ್ರಾಣ ಲಿಂಗವಾಯಿತ್ತು,
ಅಂತಾದ ಮಹಾಘನಲಿಂಗವೆ ಭಾವಕ್ಕೆ ವೇದಿಸಿದಲ್ಲಿ ಭಾವ ಲಿಂಗವಾಯಿತ್ತು.
ಅಂತಾದ ಮಹಾಘನಲಿಂಗವೆ ಜ್ಞಾನಕ್ಕೆ ವೇದಿಸಿದಲ್ಲಿ ಜ್ಞಾನ ಲಿಂಗವಾಯಿತ್ತು.
ಅಂತಾದ ಕಾರಣ-ನಮ್ಮ ಗುಹೇಶ್ವರನ ಶರಣಂಗೆ,
ಅರಿವರತು ಕುರುಹು ನಿಷ್ಪತಿಯಾಗಿ,
ತಾನೆಂಬ ಭಾವವು ಉರಿಯುಂಡ ಕರ್ಪುರದಂತಾಯಿತ್ತು
ವಚನ 0591
ಕರಿಯ ತಲೆಯ ಅರಮನೆಯ ಸುರಧೇನು ಹಯನಾಯಿತ್ತು !
ಕರೆದುಂಬಾತಂಗೆ ಕೈಕಾಲಿಲ್ಲ !
ಕರು ನಾಲ್ವೆರಳಿನ ಪ್ರಮಾಣದಲ್ಲಿಹುದು !
ಇದ, ಕರೆದುಂಬಾತನೆ ದೇವ-ಗುಹೇಶ್ವರಾ.
ವಚನ 0592
ಕರಿಯ ಮುತ್ತಿನ ಹಾರದ ಪರಿಯೊಂದು ಶೃಂಗಾರ,
ಕರದ ಬಣ್ಣದ ನುಡಿಯ ಬೆಡಗಿನೊಳಗಡಗಿತ್ತು.
ಸಿಡಿಲ ಬಣ್ಣವನುಟ್ಟು ಮಡದಿ ಒಂದೂರೊಳಗೆ
ಕಡುಗಲಿಯ ವಿದ್ಯೆಯನು ನೋಡಿ,
ನೋಡದ ನಿರ್ಭಾವ ವೀರವಿತರಣೆಯಿಂದ,
ಧಾರುಣಿಯ ರಚನೆಯ, ಗುಹೇಶ್ವರನೆಂಬ ಲಿಂಗವ
ಬೆಡಗು ನುಂಗಿ ಅಡಗಿತ್ತು.
ವಚನ 0593
ಕರಿಯು ಸ್ಪರ್ಶನೇಂದ್ರಿಯದಿಂದ ಬಂಧನವಡೆದಳಿಯಿತ್ತು.
ಪತಂಗನು ರೂಪೇಂದ್ರಿಯದಿಂದ ಬಂಧನವಡೆದಳಿಯಿತ್ತು.
ಭೃಂಗನು ಗಂಧೇಂದ್ರಿಯದಿಂದ ಬಂಧನವಡೆದಳಿಯಿತ್ತು.
ಕುರಂಗನು ಶಬ್ದೇಂದ್ರಿಯದಿಂದ ಬಂಧನವಡೆದಳಿಯಿತ್ತು.
ಮತ್ಸ್ಯವು ರಸನೇಂದ್ರಿಯದಿಂದ ಬಂಧನವಡೆದಳಿಯಿತ್ತು.-
ಇಂತೀ; ಒಂದೊಂದು ಇಂದ್ರಿಯೋದ್ರೇಕದಿಂದ
ಒಂದೊಂದು ಪ್ರಾಣಿಯು ಪ್ರಳಯವಾಯಿತ್ತು.
ಪಂಚೇಂದ್ರಿಯಂಗಳ, ಒಂದು ಘಟದಲ್ಲಿ ತಾಳಿಹ ಮನುಷ್ಯ ಪ್ರಾಣಿಗಳಿಗೆ,
ಮರವೆ ಎಡೆಗೊಂಡು ದೇಹಮೋಹಭ್ರಾಂತು ಮುಸುಕಿ
ಮಾಯೆಯ ಬಾಯ ತುತ್ತಹುದು
ಚೋದ್ಯವೇನು ಹೇಳಾ ಗುಹೇಶ್ವರಾ ?
ವಚನ 0594
ಕರು(ರ?)ಣ ಲಿಂಗಾರ್ಚನೆಯ ಮಾಡಲೆಂದು ಪುಷ್ಪಕ್ಕೆ ಕೈಯ ನೀಡಿದಡೆ
ಆ ಪುಷ್ಪ ಕರಣದೊಳಗಡಗಿತ್ತಯ್ಯ.
ಷೋಡಶ ಕಳೆ ಹದಿನಾರರೆಸಳು ವಿಕಸಿತವಾಯ್ತು.
ಪುರುಷ ಪುಷ್ಪದ ಮರನು,
ಅದು ಓಗರದ ಗೊಬ್ಬರವನುಣ್ಣದು, ಕಾಮದ ಕಣ್ಣಿರಿಯದು.
ನಿದ್ರೆಯ ಕಪ್ಪೊತ್ತದು.
ಅರುಣ ಚಂದ್ರಾದಿಗಳಿಬ್ಬರ ತೆರೆಯುಂಡು ಬೆಳೆಯದ ಪುಷ್ಪ
ಲಿಂಗವೆ ಧರೆಯಾಗಿ ಬೆಳೆಯಿತ್ತು,
ಆ ಪುಷ್ಪ ನೋಡಾ !
ಆ ಪುಷ್ಪವೆಂದಿಗೂ ನಿರ್ಮಾಲ್ಯವಲ್ಲೆಂದು
ಗುಹೇಶ್ವರ, ನಿಮ್ಮ ಶರಣ ಪ್ರಾಣಲಿಂಗಕ್ಕೆ ಪ್ರಾಣಪೂಜೆಯ ಮಾಡಿದ.
ವಚನ 0595
ಕರೆಯದೆ ಬಂದುದ, ಹೇಳದೆ ಹೋದುದನಾರೂ. ಅರಿಯರಲ್ಲಾ.
ಅಂದಂದಿಂಗೆ ಬಂದ ಪ್ರಾಣಿಗಳು, ಆರೂ ಅರಿಯರಲ್ಲಾ.
ಗುಹೇಶ್ವರನೆಂಬ ಲಿಂಗವು ಉಣ್ಣದೆ ಹೋದುದನಾರೂ ಅರಿಯರಲ್ಲಾ!
ವಚನ 0596
ಕರ್ಪುರದ ಗಿರಿಯ ಉರಿ ಹಿಡಿದಡೆ ಇದ್ದಿಲುಂಟೆ ?
ಮಂಜಿನ ಶಿವಾಲಯಕ್ಕೆ ಬಿಸಿಲ ಕಳಸವುಂಟೆ ?
ಕೆಂಡದ ಗಿರಿಯನರಗಿನ ಬಾಣದಲೆಚ್ಚಡೆ,
ಮರಳಿ ಬಾಣವನರಸಲುಂಟೆ ?
ಗುಹೇಶ್ವರನೆಂಬ ಲಿಂಗವನರಿದು
ಮರಳಿ ನೆನೆಯಲುಂಟೆ ?
ವಚನ 0597
ಕರ್ಮ ಚರಣಾದಿಗಳು ಬೇರಾದವಲ್ಲದೆ
ಅರಿದು ಮುಟ್ಟುವುದು ಒಂದೆ ಆತ್ಮ.
ಬಿಂದುವಿನ ಒಂದು ಸಾರದಲ್ಲಿ,
ಸಸಿ ಹಲವು ನಾಮ ಬೆಳೆವಂತೆ
ಗುಹೇಶ್ವರಲಿಂಗದಲ್ಲಿ ನಾ’
ನೀ’
ಎಂಬ ಭಾವವಿಲ್ಲ ಸಿದ್ಧರಾಮಯ್ಯಾ.
ವಚನ 0598
ಕರ್ಮ ನಾಸ್ತಿ ಎಂಬೆ, ಅಸ್ತಿ ನಾಸ್ತಿ (ಅನಾಸ್ತಿ ?) ಎಂಬೆ.
ಜ್ಞಾನ [ದ] ಕೊಬ್ಬಿನಲಿ ಉಲಿವೆ, ಉಲಿದಂತೆ ನಡೆವೆ.
ಸಂಗಡ ಸಹಿತ ಕರಸ್ಥಲಕ್ಕೆ ಬಂದು,
ನೀನು ಬಯಲಾಗೆಯಲ್ಲಾ, ಎನ್ನನೂ ಬಯಲು ಮಾಡೆ-ಗುಹೇಶ್ವರಾ,
ವಚನ 0599
ಕರ್ಮದ ಕಟ್ಟನೆ ಕೊಯ್ದು ಬ್ರಹ್ಮದ್ವಾರವ ಕಂಡೆ,
ಮೇಲೊಂದು ಕಂಬವ ಕಂಡೆನಲ್ಲಾ !
ಕಂಬವ ಖಂಡಣೆಯ ಮಾಡಿ ಮಹಾಬೆಳಗನೆ ಕಂಡೆ
ಗುಹೇಶ್ವರನೆಂಬ ಲಿಂಗ ಅಲ್ಲಿಯೆ ನಿಂದನು.
ವಚನ 0600
ಕರ್ಮದ ಗಡಣ ಹಿಂಗಿದುವಿಂದು,
ಪಾಪದ ಬಲೆ ಬಳಸಿ ಹೋದವು.
ಬಲ್ಲೆನು ಈ ಸಂಸಾರದಲ್ಲಿ ನೊಂದು ಬೆಂದೆನಾಗಿ,
ಮಾಯೆಯ ತಲೆಯ ಮೆಟ್ಟಿ ಹೋದೆನು.
ಇನ್ನು ಮರಳಿ ಬಾರೆನು ಗುಹೇಶ್ವರಾ ನಿಮ್ಮಾಣೆ
ವಚನ 0601
ಕರ್ಮವಿಲ್ಲದ ಕಾಯ, ಕರಣವಿಲ್ಲದ ಪ್ರಾಣ.
ಮಥನವಿಲ್ಲದ ಶಬ್ದ, ಗಮನವಿಲ್ಲದ ಮನ.
ಗುಹೇಶ್ವರಾ ನಿಮ್ಮ ಬರವು ಸಂಗನಬಸವಣ್ಣನ ಮೆಚ್ಚು ನೋಡಾ.
ವಚನ 0602
ಕರ್ಮವೆ ಪ್ರಾಣವೆಂದು ಮಾಡುವಾಗ
ಜ್ಞಾನವನರಿವ ನೆಲೆ ಶುದ್ಧವಿನ್ನಾವುದು ?
ಸಾವನ್ನಕ್ಕ ಸಾಧನೆಯ ಮಾಡಿ ಕಾದವಾಠಾವಿನ್ನಾವುದು ?
ಅರಿದುದ ನೇತಿಗಳೆದು; ಮೇಲರಿದುದ ಕರಿಗೊಳುತ್ತ
ತುಷವ ನೀಗಿದ ತಂಡುಲದಂತೆ
ಕಾಯದ ದೆಸೆ ಶುದ್ಧವಾಗಿರಬೇಕು, ಸಿದ್ಧರಾಮಯ್ಯಾ
ಗುಹೇಶ್ವರಲಿಂಗವನರಿವುದಕ್ಕೆ.
ವಚನ 0603
ಕರ್ಮಾದಿನವೆಂಬ, ಕರ್ಮಿ, ಲಿಂಗಾದಿನವೆಂಬ, ಭಕ್ತ.
ದೇಹ ಪ್ರಾರಬ್ಧವೆಂಬ, ದ್ವೈತಿ-
ಈ ತ್ರಿವಿಧವೆನ್ನದವ[ರ], ನೀನೆಂಬೆ ಗುಹೇಶ್ವರಾ.
ವಚನ 0604
ಕಲಿ ತನ್ನ ತಲೆಯನರಿದು ಕೈಯಲ್ಲಿ ಹಿಡಿದು
ಹಲವು ದ್ವೀಪಕ್ಕೆ ಹೋಗಿ ತೊಳಲುತ್ತೈದಾನೆ !
ಕಂಡವರು ತೋರಿರೆ, ಕೇಳಿದವರು ಹೇಳಿರೆ,
ಬುದ್ಧಿಗೆಟ್ಟವ ಸುದ್ಧಿಯ ಬೆಸಗೊಳ್ಳುತ್ತೈದಾನೆ !
ತಲೆ ತಲೆಯನೆ ನುಂಗಿ ಹಲವು ದ್ವೀಪಕ್ಕೆ ಹೋಯಿತ್ತು.
ಗುಹೇಶ್ವರಾ-ತಲೆ ಮೊದಲಿಲ್ಲ !
ವಚನ 0605
ಕಲ್ಪಿತದುದಯ ಸಂಕಲ್ಪಿತದ ಸುಳುಹು.
ಪವನಭೇದವನರಿಯದೆ,
ಪ್ರಾಣಲಿಂಗವೆಂಬುದು ಅಂಗಸಂಸಾರಿ,
ಜಂಗಮವೆಂಬುದು ಲಿಂಗಸಂಸಾರಿ.
ಪರವಲ್ಲ ಸ್ವಯವಲ್ಲ, ನಿರವಯ,
ಗುಹೇಶ್ವರನೆಂಬ ಲಿಂಗಕ್ಕೆ ನಾಚರು ನೋಡಾ
ವಚನ 0606
ಕಲ್ಪಿತವೆಂಬ ಭಕ್ತ ಮಾಡಿದ ಸಯಧಾನವ ನೋಡಾ !
ಅನಂತಕೋಟಿ ಅಜಾಂಡಗಳೆ ಸಯಧಾನವಾಗಿ
ಸವಿಕಲ್ಪ ವಿಷಯಂಗಳೆ ಶಾಕವಾಗಿ
ಸರ್ವವಾಸನೆ ಎಂಬುದೆ ಅಬಿಘಾರವಾಗಿ-
ಇವೆಲ್ಲವನೂ ಜ್ಞಾನವೆಂಬ ಭಾಜನದಲ್ಲಿ ಎಡೆಮಾಡುತ್ತಿರಲು
ಉಣ ಬಂದ ಹಿರಿಯರು ಉಣುತ್ತಿದ್ದುದ ನೋಡಿರೆ !
ನಿರ್ವಿಕಲ್ಪಿತವೆಂಬ ಮಹಂತ ಬರಲು,
ಸಯಧಾನವಡಗಿತ್ತು, ಭಾಜನ ಉಳಿಯಿತ್ತು.
ಆ ಭಾಜನವನುತ್ತಮಾಂಗದಲ್ಲಿ ಅಳವಡಿಸಿಕೊಳಲು
ನಿಶ್ಚಿಂತವಾಯಿತ್ತು ಗುಹೇಶ್ವರಾ.
ವಚನ 0607
ಕಲ್ಯಾಣವರಿಯೆ ಕಟಕವರಿಯೆ ಬೇಂಟೆಯನಾಡುತ್ತಿದ್ದೆ.
ಎನ್ನ ಕೈ ನೋಡಿ ಭೋ ಕಲಿ ವೀರ ಸುಭಟರು.
ಎನ್ನ ಕೈ ನೋಡಿ ಭೋ ಅರುಹಿರಿಯರು.
ಕಾದಿ ಗೆಲಿದು ಗುಹೇಶ್ವರಲಿಂಗದಲ್ಲಿಗೆ ತಲೆವರಿಗೆಯನಿಕ್ಕಿ ಬಂದೆ,
ಎನ್ನ ಕೈ ನೋಡಿ ಭೋ.
ವಚನ 0608
ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು,
ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು
ತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶ !
ಆ ಬೆಳಗಿನೊಳಗೆ ಒಪ್ಪುತ್ತಿದ್ದರಯ್ಯಾ ಅಸಂಖ್ಯಾತ ಭಕ್ತಗಣಂಗಳು.
ಶಿವಭಕ್ತರಿರ್ದ ಕ್ಷೇತ್ರವೆ ಅವಿಮುಕ್ತಕ್ಷೇತ್ರವೆಂಬುದು ಹುಸಿಯೆ ?
ಶಿವಭಕ್ತರಿರ್ದ ದೇಶ ಪಾವನವೆಂಬುದು ಹುಸಿಯೆ ?
ಗುಹೇಶ್ವರಲಿಂಗದಲ್ಲಿ ಎನ್ನ ಪರಮಾರಾಧ್ಯ ಸಂಗನಬಸವಣ್ಣನ ಕಂಡು
ಬದುಕಿದೆನು ಕಾಣಾ ಸಿದ್ಧರಾಮಯ್ಯಾ.
ವಚನ 0609
ಕಲ್ಲ ಮನೆಯ ಮಾಡಿ ಕಲ್ಲ ದೇವರ ಮಾಡಿ
ಆ ಕಲ್ಲು ಕಲ್ಲ ಮೇಲೆ ಕೆಡೆದಡೆ, ದೇವರೆತ್ತ ಹೋದರೊ ?
ಲಿಂಗಪ್ರತಿಷ್ಠೆಯ ಮಾಡಿದವಂಗೆ ನಾಯಕನರಕ-ಗುಹೇಶ್ವರಾ
ವಚನ 0610
ಕಲ್ಲ ಹೋರಿನೊಳಗೊಂದು ಕಾರ್ಯವ ಕಾಬಡೆ,
ಕಲ್ಲ ಬೆದಕದೆ ಕಪ್ಪೆಯ ಸೋಂಕದೆ
ಅಲ್ಲಿಯ ಉದಕವ ಕುಡಿಯ ಬಲ್ಲಡೆ-ಅದು ಯೋಗ.
ಬಲ್ಲಡೆ ನಿಮ್ಮಲ್ಲಿ ನೀವೆ ತಿಳಿದು ನೋಡಿರೆ.
ಅರಿವ ಯೋಗಕ್ಕಿದು ಚಿಹ್ನವಯ್ಯಾ:
ಕಲ್ಲು ಕಪ್ಪೆಯೊಳಗಣ ಹುಲ್ಲುರಿಯದೆ ಅಟ್ಟುಂಬಂತೆ ಗುಹೇಶ್ವರಾ.
ವಚನ 0611
ಕಲ್ಲ ಹೋರಿನೊಳಗೊಂದು ಕಿಚ್ಚು ಹುಟ್ಟಿತ್ತ ಕಂಡೆ.
ಹುಲ್ಲ ಮೇವ ಎರಳೆಯ, ಹುಲಿಯ, ಸರಸವ ಕಂಡೆ
ಎಲ್ಲರೂ ಸತ್ತು ಆಡುತ್ತಿಪ್ಪುದ ಕಂಡೆ.
ಇನ್ನು ಎಲ್ಲಿಯ ಭಕುತಿ ಹೇಳಾ ಗುಹೇಶ್ವರಾ ?
ವಚನ 0612
ಕಲ್ಲ, ದೇವರೆಂದು ಪೂಜಿಸುವರು-ಆಗದು ಕಾಣಿರೊ.
ಅಗಡಿಗರಾದಿರಲ್ಲಾ !
ಮುಂದೆ ಹುಟ್ಟುವ ಕೂಸಿಂಗೆ
ಇಂದು ಮೊಲೆಯ ಕೊಡುವಂತೆ ಗುಹೇಶ್ವರ !
ವಚನ 0613
ಕಲ್ಲೊಣಗಣ ಕಿಚ್ಚು ಉರಿಯದಂತೆ, ಬೀಜದೊಳಗಣ ವೃಕ್ಷ ಉಲಿಯದಂತೆ,
ತೋರಲಿಲ್ಲಾಗಿ ಬೀರಲಿಲ್ಲಾರಿಗೆಯು,
ಗುಹೇಶ್ವರ ನಿಂದ ನಿಲವ ಅನುಭ(ಭಾ?)ವ ಸುಖಿ ಬಲ್ಲ.
ವಚನ 0614
ಕವಿತ್ವಸಾಧಕರೆಲ್ಲರು ಕಳವಳಿಸಿ ಕೆಟ್ಟರು.
ವಿದ್ಯಾಸಾಧಕರೆಲ್ಲರು ಬುದ್ಧಿಹೀನರಾದರು.
ಪವನ ಸಾಧಕರೆಲ್ಲರು ಹದ್ದು ಕಾಗೆಗಳಾದರು.
ಜಲಸಾಧಕರೆಲ್ಲರು ಕಪ್ಪೆ ಮೀನಗಳಾದರು.
ಅನ್ನಸಾಧಕರೆಲ್ಲರು ಭೂತಪ್ರಾಣಿಗಳಾದರು.
ಬಸವಣ್ಣ, ಸದ್ಗುರುಸಾಧಕನಾಗಿ
ಸ್ವಯಲಿಂಗವಾದ ಕಾಣಾ ಗುಹೇಶ್ವರಾ.
ವಚನ 0615
ಕಸ್ತೂರಿಯ ಮೃಗ ಬಂದು ಸುಳಿಯಿತ್ತಯ್ಯಾ,
ಸಕಲ ವಿಸ್ತಾರದ ರೂಹು ಬಂದು ನಿಂದಿತ್ತಯ್ಯಾ,
ಆವ ಗ್ರಹ ಬಂದು ಸೋಂಕಿತ್ತೆಂದರಿಯೆನಯ್ಯಾ
ಆವ ಗ್ರಹ ಬಂದು ಹಿಡಿಯಿತ್ತೆಂಬುದ ನಾನರಿಯೆನಯ್ಯಾ.
ಹೃದಯಕಮಲಮಧ್ಯದಲ್ಲಿ ಗುರುವನರಿದು ಪೂಜಿಸಿ,
ಗುರು ವಿಖ್ಯಾತನೆಂಬುದ ನಾನರಿದೆನಯ್ಯಾ.
ಗುಹೇಶ್ವರಲಿಂಗದಲ್ಲಿಹಿಂದಣ ಹುಟ್ಟರತು ಹೋದುದ ಕಂಡೆನಯ್ಯಾ.
ವಚನ 0616
ಕಳಸವುಳ್ಳ ಶಿವಾಲಯವೊಂದಕ್ಕೆ, ಚೌಕದಲ್ಲಿ ಎರಡು ಕಂಬ,
ಮೂರುಭಾವ-ಪೂಜಕರಾರೊ? ಅನುಭಾವಿಗಳಿನ್ನಾರೊ ?
ಪೂಜಿಸುವರಿನ್ನಾರೊ ?
ಇದರ ಸ್ಥಾನದ ನೆಲಗತಿಯನಾರು ಬಲ್ಲರು ಗುಹೇಶ್ವರಾ ?
ವಚನ 0617
ಕಳ್ಳಗಂಜಿ ಕಾಡ ಹೊಕ್ಕಡೆ ಹುಲಿ ತಿಂಬುದ ಮಾಬುದೆ ?
ಹುಲಿಗಂಜಿ ಹುತ್ತವ ಹೊಕ್ಕಡೆ ಸರ್ಪ ತಿಂಬುದ ಮಾಬುದೆ ?
ಕಾಲಗಂಜಿ ಭಕ್ತನಾದಡೆ ಕರ್ಮ ತಿಂಬುದ ಮಾಬುದೆ ?-
ಇಂತೀ ಮೃತ್ಯುವಿನ ಬಾಯ ತುತ್ತಾದ,
ವೇಷಡಂಬಕರ ನಾನೇನೆಂಬೆ ಗುಹೇಶ್ವರಾ.
ವಚನ 0618
ಕಾಗೆಯ ತಿಂದವನಲ್ಲದೆ ಭಕ್ತನಲ್ಲ.
ಕೋಣನ ತಿಂದವನಲ್ಲದೆ ಮಹೇಶ್ವರನಲ್ಲ.
ಕೋಡಗನ ತಿಂದವನಲ್ಲದೆ ಪ್ರಸಾದಿಯಲ್ಲ.
ನಾಯ ತಿಂದವನಲ್ಲದೆ ಪ್ರಾಣಲಿಂಗಿಯಲ್ಲ.
ಹೇಯವ ತಿಂದವನಲ್ಲದೆ ಶರಣನಲ್ಲ.
ಇಂತೈವರ ತಿಂದವನಲ್ಲದೆ ಲಿಂಗೈಕ್ಯನಲ್ಲ ಗುಹೇಶ್ವರ !
ವಚನ 0619
ಕಾಡಿ ಬೇಡಿ ಉಂಬವರೆಲ್ಲರು ಬ್ರಹ್ಮನ ಸಂಪ್ರದಾಯ.
ಕುಟ್ಟಿ ಕುಟ್ಟಿ ಉಂಬವರೆಲ್ಲರು ವಿಷ್ಣುವಿನ ಸಂಪ್ರದಾಯ.
ದಳಾದಳಿಯಲುಂಬವರೆಲ್ಲರು ಯಮನ ಸಂಪ್ರದಾಯ.
ಇವಾವವನೂ ಹೊದ್ದದೆ ಭಕ್ತಿಬಿಕ್ಷವನುಂಬವರೆಲ್ಲ
ನಿಮ್ಮ ಸಂಪ್ರದಾಯ ಕಾಣಾ ಗುಹೇಶ್ವರಾ.
ವಚನ 0620
ಕಾಡುಗಿಚ್ಚೆದ್ದಡೆ ಅಡವಿಯೆ ಗುರಿ.
ನೀರುಗಿಚ್ಚೆದ್ದಡೆ ಸಮುದ್ರವೆ ಗುರಿ.
ಒಡಲುಗಿಚ್ಚೆದ್ದಡೆ ತನುವೆ ಗುರಿ.
ಕಾಲಾಗ್ನಿಯೆದ್ದಡೆ ಲೋಕಂಗಳೆ ಗುರಿ.
ಶಿವಶರಣರ ಮನದಲ್ಲಿ ಕೋಪಾಗ್ನಿಯೆದ್ದಡೆ ನಿಂದಕರೆ ಗುರಿ.
ಗುಹೇಶ್ವರಾ ನಿಮ್ಮ ಮಾಯದ ಹೊಡೆಗಿಚ್ಚಿಂಗೆ
ನಾನು ಗುರಿಯಲ್ಲ ಕೇಳಾ.
ವಚನ 0621
ಕಾಣದುದ ಕಂಡೆ, ಕೇಳದುದ ಕೇಳಿದೆ-
ಮುಟ್ಟಬಾರದುದ ಮುಟ್ಟಿದ, ಅಸಾಧ್ಯವ ಸಾದಿಸಿದ,
ತಲೆಗೆಟ್ಟುದ ತಲೆವಿಡಿದ, ನೆಲೆಗೆಟ್ಟುದ ನಿರ್ಧರಿಸಿದ.
ಗುಹೇಶ್ವರಾ ನಿಮ್ಮ ಶರಣ ಅಜಗಣ್ಣಂಗೆ
ಶರಣೆಂದು ಶುದ್ಧನಾದೆನು.
ವಚನ 0622
ಕಾಣದುದನರಸುವರಲ್ಲದೆ ಕಂಡದುದನರಸುವರೆ ಹೇಳಾ !
ಘನಕ್ಕೆ ಘನವಾದ ವಸ್ತು;
ತಾನೆ ಗುರುವಾದ, ತಾನೆ ಲಿಂಗವಾದ, ತಾನೆ ಜಂಗಮವಾದ,
ತಾನೆ ಪ್ರಸಾದವಾದ, ತಾನೆ ಮಂತ್ರವಾದ, ತಾನೆ ಯಂತ್ರವಾದ
ತಾನೆ ಸಕಲವಿದ್ಯಾರೂಪನಾದ.-
ಇಂತಿವೆಲ್ಲವನೊಳಕೊಂಡು ಎನ್ನ ಕರಸ್ಥಲಕ್ಕೆ ಬಂದ.
ಇನ್ನು ನಿರ್ವಿಕಾರ ಗುಹೇಶ್ವರ.
ವಚನ 0623
ಕಾಣಬಹ ತನು, ಕೇಳಬಹ ಧ್ವನಿಯಿಂದ
ಆಳವಾಡಿ ಕಾಡುತ್ತದೆ ಲೋಕವನು,
ಅಯ್ಯಾ ಅಯ್ಯಾ ಬೊಮ್ಮವೆ !
ಅಣಕಿಸಿ ಲೋಕವನು ಕಾಡುತ್ತದೆ,
ಅಯ್ಯಾ ಅಯ್ಯಾ ಬೊಮ್ಮವೆ !
ಬೊಮ್ಮ ತಾನೆಂದರಿದು ಸಂಸಾರದ ಬೇರ ಹರಿಯಬಲ[ವ]
ಶರಣನೊಬ್ಬನೆ ಗುಹೇಶ್ವರಾ.
ವಚನ 0624
ಕಾಣಬಾರದ ಗುರು ಕಣ್ಗೆ ಗೋಚರವಾದಡೆ;-
ಹೇಳಲಿಲ್ಲದ ಬಿನ್ನಪ್ಪ, ಮುಟ್ಟಲಿಲ್ಲದ ಹಸ್ತಮಸ್ತಕಸಂಯೋಗ.
ಹೂಸಲಿಲ್ಲದ ವಿಭೂತಿಯ ಪಟ್ಟ, ಕೇಳಲಿಲ್ಲದ ಕರ್ಣಮಂತ್ರ.
ತುಂಬಿ ತುಳುಕದ ಕಲಶಾಬಿಷೇಕ ಆಗಮವಿಲ್ಲದ ದೀಕ್ಷೆ,
ಪೂಜೆಗೆ ಬಾರದ ಲಿಂಗ, ಸಂಗವಿಲ್ಲದ ಸಂಬಂಧ.
ಸ್ವಯವಪ್ಪ ಅನುಗ್ರಹ,
ಅನುಗೊಂಬಂತೆ ಮಾಡಾ ಗುಹೇಶ್ವರಾ.
ವಚನ 0625
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದಡೆ,
ಎನಗಿದು ಸೋಜಿಗ, ಎನಗಿದು ಸೋಜಿಗ !
ಅಹುದೆನಲಮ್ಮೆನು, ಅಲ್ಲೆನಲಮ್ಮೆನು,
ಗುಹೇಶ್ವರಲಿಂಗವು ನಿರಾಳ ನಿರಾಕಾರ ಬಯಲು ಆಕಾರವಾದಡೆ !
ವಚನ 0626
ಕಾಪ ಕಾಷಾಯಾಂಬರವ ಕಟ್ಟಿ,
ಮಂಡೆ ಬೋಳಾದಡೇನಯ್ಯಾ.
ಎನ್ನಲ್ಲಿ ನಿಜವಿಲ್ಲದನ್ನಕ್ಕ ?
ಹೊನ್ನು ಹೆಣ್ಣು ಮಣ್ಣು ತ್ರಿವಿಧವ ತೊರೆದಡೇನಯ್ಯಾ
ಮನದಲ್ಲಿ ವ್ರತಿಯಾಗದನ್ನಕ್ಕ ?
ಹಸಿವು ತೃಷೆ ವ್ಯಸನಾದಿಗಳ ಬಿಟ್ಟಡೇನಯ್ಯಾ
ಅರ್ಥದಿಚ್ಛೆ ಮನದಲ್ಲಿ ಹಿಂಗದನ್ನಕ್ಕ ?
ಆನು ಜಂಗಮವೆ ?
ಆನು ಹಿರಿಯನಾದೆನಲ್ಲದೆ ಆನು ಜಂಗಮವೆ ?
ಒಡಲಿಲ್ಲದಾತ ಬಸವಣ್ಣ, ಪ್ರಾಣವಿಲ್ಲದಾತ ಬಸವಣ್ಣ.
[ಎನ್ನ]ಬಸವಣ್ಣನಾಗಿ ಹುಟ್ಟಿಸದೆ
ಪ್ರಭುವಾಗಿ ಏಕೆ ಹುಟ್ಟಿಸಿದೆ ಗುಹೇಶ್ವರಾ ?
ವಚನ 0627
ಕಾಮ ಸತ್ಯವ ತಿಂದಿತ್ತು, ಕ್ರೋಧ ಜ್ಞಾನವ ತಿಂದಿತ್ತು,
ಲೋಭ ಧರ್ಮವ ತಿಂದಿತ್ತು,
ಮೋಹ ವಿರಕ್ತಿಯ ತಿಂದಿತ್ತು, ಮದ ಭಕ್ತಿಯ ತಿಂದಿತ್ತು,
ಮತ್ಸರ ಯು(ಮು ?)ಕ್ತಿಯ ತಿಂದಿತ್ತು.
ಈ ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯವೆಂಬ
ಅರಿಷಡ್ವರ್ಗಂಗಳಿವು ನಿಮ್ಮ ನೈದಲರಿಯದೆ,
ಈ ಸತ್ಯ ಜ್ಞಾನ ಧರ್ಮ ವಿರಕ್ತಿ ಭಕ್ತಿ ಯುಕ್ತಿಗಳೆಂಬ ಸದ್ವರ್ತನೆಯ,
ದುರ್ವರ್ತನೆಯೆಂಬರಿಷಡುವರ್ಗಂಗಳೆಂಬ ನಾಡ ನಾಯಿಗಳೆ ತಿಂದವು.
ಎನಗೆ ಸದ್ವರ್ತನೆಯಿಲ್ಲದೆ ಅಪ್ರದೇಶಿಕನಾದೆನು ಕಾಣಾ ಗುಹೇಶ್ವರಾ.
ವಚನ 0628
ಕಾಮದಿಂದ ಕಂಡ, ಕ್ರೋಧದಿಂದ ಅಸ್ಥಿ,
ಲೋಭದಿಂದ ಸಕಲ ವಿಷಯಂಗಳು.
ಮೋಹದಿಂದ ನೋಡಿಹೆನೆಂಬುದೆಲ್ಲವು ಕಾಮನ ಬಲೆಯೊಳಗು.
ಕಾಮನ ಗೆದ್ದಠಾವಾವುದು ಹೇಳಾ ಗುಹೇಶ್ವರಲಿಂಗಕ್ಕೆ ?
ವಚನ 0629
ಕಾಮನ ಕಣ್ಣ ಮುಳ್ಳ ಕಳೆದು
ಭೂಮಿಯ ತೈಲದ ಸೀಮೆಯ ಕೆಡಿಸಿ
ಹೋಮವನುರುಹಿ ದಕ್ಷನ ತಲೆಯನರಿದು
ನಿಸ್ಸೀಮನಾದ ಮಹಿಮನ ನಿಲವನರಿಯಬಹುದೆ ?
ಅರಿವಿಂಗೆ ಅಸಾಧ್ಯ ಉಪಮೆಗೆ ಕಡೆಮುಟ್ಟದು !
ಗುಹೇಶ್ವರನ ಕರುಣಪ್ರಸಾದಿ ಮರುಳಶಂಕರದೇವರೆಂತಪ್ಪನೆಂಬುದ
ತಿಳಿದು ನೋಡಾ ಸಂಗನಬಸವಣ.
ವಚನ 0630
ಕಾಮನ ಕೈ ಮುರಿದಡೆ ಮೋಹ ಮುಂದುಗೆಟ್ಟಿತ್ತು.
ಆಮಿಷ ತಾಮಸಧಾರಿಗಳೆಲ್ಲ ಎಳತಟವಾದರು.
ಅಕ್ಕಟಾ, ಅಯ್ಯಲಾ, ನಿಮ್ಮ ಕಂಡವರಾರೊ?
ಆಳವಿಲ್ಲದ ಸ್ನೇಹಕ್ಕೆ ಮರಣವೆ ಮಹಾನವಮಿ.
ಗುಹೇಶ್ವರನನರಿಯದೆ ರಣಭೂಮಿಗಳುಲಿದವು !
ವಚನ 0631
ಕಾಮನ ಕೊಲುವಲ್ಲಿ ಹೋಮವ ಸುಡುವಲ್ಲಿ
ತ್ರಿಪುರಸಂಹಾರದ ಕೀಲನರಿವಲ್ಲಿ
ಆತನ ಯೋಗಿ’ ಎನಬೇಡ ಆತನ
ಭೋಗಿ’ ಎನಬೇಡ,
ಆತನೆ ಅಚ್ಚಲಿಂಗೈಕ್ಯನು !
ಹಸಿವ ಮರೆದಲ್ಲಿ ವ್ಯಸನವರತಲ್ಲಿ
ಗುಹೇಶ್ವರಲಿಂಗವು, ಸಿದ್ಧರಾಮಯ್ಯದೇವರು ತಾನೆ !
ವಚನ 0632
ಕಾಮವ ಸುಟ್ಟು ಹೋಮವನುರುಹಿ, ತ್ರಿಪುರಸಂಹಾರದ ಕೀಲ ಬಲ್ಲಡೆ,
ಯೋಗಿಯಾದಡೇನು ? ಭೋಗಿಯಾದಡೇನು ?
ಶೈವನಾದಡೇನು ? ಸನ್ಯಾಸಿಯಾದಡೇನು ?
ಅಶನವ ತೊರೆದಾತ ವ್ಯಸನವ ಮರೆದಾತ-
ಗುಹೇಶ್ವರಲಿಂಗದಲ್ಲಿ ಅವರ ಹಿರಿಯರೆಂಬೆನು.
ವಚನ 0633
ಕಾಮವಿಲ್ಲ, ಕ್ರೋಧವಿಲ್ಲ, ಲೋಭವಿಲ್ಲ,
ಮೋಹವಿಲ್ಲ, ಮದವಿಲ್ಲ, ಮತ್ಸರವಿಲ್ಲ, ಹಸಿವು, ತೃಷೆ,
ವಿಷಯ, ವ್ಯಸನವ್ಯಾಪ್ತಿಗಳಿಲ್ಲ, ಸಂಸಾರ ಬಂಧನ ಮುನ್ನಿಲ್ಲ,
ಪುಣ್ಯವಿಲ್ಲ, ಪಾಪವಿಲ್ಲ, ಆಚಾರ ಅನಾಚಾರವೆಂಬುದಿಲ್ಲ,
ಸದಾಚಾರ ಸಂಪೂರ್ಣ, ಗುಹೇಶ್ವರಾ, ನಿಮ್ಮ ಶರಣ.
ವಚನ 0634
ಕಾಮಿಸದೆ ನೆನೆದಡೆ, ಕಲ್ಪಿತವಿಲ್ಲದ ಪುರುಷ ಬಂದನೆನಗೆ ನೋಡಾ !
ಕಲ್ಪಿತವಿಲ್ಲದೆ ನೆನೆದಡೆ, ಭಾವಿಸಲಿಲ್ಲದ ಸುಖವು ದೊರಕಿತ್ತು ನೋಡಾ !
ಗುಹೇಶ್ವರನೆಂಬ ಲಿಂಗವನರಿದ ಬಳಿಕ, `ನಾ’ ಎಂಬುದಿಲ್ಲ ನೋಡಾ !
ವಚನ 0635
ಕಾಮಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ.
ಕಲ್ಪಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ
ಭಾವಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ
ರೂಪಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ
ಪೂರ್ವಾಚಾರ್ಯ ಸಂಗನಬಸವಣ್ಣನ ಕಂಡು
ಗುಹೇಶ್ವರಲಿಂಗವು ಅಲ್ಲಿಯೆ ಅನುಶ್ರುತವಯ್ಯಾ !
ವಚನ 0636
ಕಾಮಿಸುವ ಕಲ್ಪಿಸುವ ಬ್ರಹ್ಮನೆಂಬವ ವ್ರತಗೇಡಿ,
ವಿಷ್ಣುವೆಂಬವ ಸತ್ತು ಬಿದ್ದ, ರುದ್ರನೆಂಬವ ಅಬದ್ಧಅವಿಚಾರಿ!
ಅವಿಚಾರದಲ್ಲಿ ಎಲ್ಲರ ಕೊಂದ ಕೊಲೆ, ನಿಮ್ಮ ತಾಗುವುದು ಗುಹೇಶ್ವರಾ.
ವಚನ 0637
ಕಾಯ ಉಭಯಭೇದವಾಗಿ, ಆತ್ಮನೇಕವಾಗಿ;
ಕಾಯ ಭಕ್ತನಾಗಿ, ಪ್ರಾಣ ಜಂಗಮವಾಗಿ;
ನಾ ಹಿಡಿದ ರೂಪು ಬಸವಣ್ಣನಾಗಿ;
ಅರಿದರಿದು ಗುಹೇಶ್ವರಲಿಂಗವಾಗಿ ನೆನೆವುತ್ತಿದ್ದೆನು.
ವಚನ 0638
ಕಾಯ ಬಿನ್ನವಾಯಿತ್ತೆಂದು ಮುಟ್ಟಿಸುವರು ಲಿಂಗವನು.
ಮುಟ್ಟಲಾಗದು ಲಿಂಗವನು; ಮುಟ್ಟಿದಾತ ಮುಂದೆ ಹೋದ.
ಮುನ್ನ ಮುಟ್ಟಿದವರೆಲ್ಲ ಉಪಜೀವಿಗಳಾದರು.
ಇನ್ನು ಮುಟ್ಟಿದವರಿಗೆ ಗತಿಯುಂಟೆ ಗುಹೇಶ್ವರಾ ?
ವಚನ 0639
ಕಾಯ ಲಿಂಗೈಕ್ಯವೆ ? ಅಲ್ಲ ನಿಲ್ಲು.
ಜೀವ ಲಿಂಗೈಕ್ಯವೆ ? ಅಲ್ಲ ನಿಲ್ಲು.
ಕಾಯದ ಜೀವದ ಸಂದ ಬಲ್ಲಡೆ-ಆತ ಲಿಂಗೈಕ್ಯ.
ಒಂಬತ್ತು ದ್ವಾರಮಂ ಕಳೆದು, ಹತ್ತನೆಯ ದ್ವಾರದಲ್ಲಿ ನಿಲಬಲ್ಲಡೆ
ಆತನೆ ಗುರು ಕಾಣಾ ಗುಹೇಶ್ವರಾ.
ವಚನ 0640
ಕಾಯ ಸತಿಯೆಂದು ಹೇಸಿ ಕಳೆದೆ.
ವಾಯದ ಮನ ಮಾಯೆಯೆಂದು ಹೇಸಿ ಬಿಟ್ಟೆ.
ವಾಯದ ಸತಿ ಎಂಬ ಸಂದೇಹವೆಮಗೇಕೆ ?
ಸತಿಯರ ಗೋಷ್ಠಿ ವಿಷ ಕಾಣವ್ವ.
ಗುಹೇಶ್ವರಲಿಂಗದಲ್ಲಿ ನಿನ್ನ ಪತಿಯ ಕುರುಹ ಹೇಳಾ ಎಲೆ ಅವ್ವಾ ?
ವಚನ 0641
ಕಾಯಕ್ಕೆ ಕಾಯವಾಗಿ, ತನುವಿಂಗೆ ತನುವಾಗಿ
ಮನಕ್ಕೆ ಮನವಾಗಿ ಜೀವಕ್ಕೆ ಜೀವವಾಗಿ ಇದ್ದುದನಾರುಬಲ್ಲರೊ ?
ಅದು ದೂರವೆಂದು, ಅದು ಸಮೀಪವೆಂದು
ಮಹಂತ ಗುಹೇಶ್ವರನೊಳಗೆಂದು, ಹೊರಗೆಂದು
ಬರುಸೂರೆಹೋದರೆಲ್ಲರೂ.
ವಚನ 0642
ಕಾಯಕ್ಕೆ ಜೀವಕ್ಕೆ ಸಂದು ಮುನ್ನುಳ್ಳಡೆ,
ಅದು ಪ್ರಾಣಲಿಂಗವಲ್ಲ ಕಾಣಿರೆ.
ಲೋಕಾಚಾರದ ಕೂಳನುಂಡು, ಲೀಲೆಯೊಳಾಡುತಿಹರಲ್ಲದೆ
ಸಲೆ ಸಂದವರಪ್ಪರೆ ?
ಈ ಕಲ್ಲ ಹಿಡಿದಾತ ಆ ಕಲ್ಲನೆತ್ತ ಬಲ್ಲ ?
ಇವರೊಬ್ಬರ ಕರೆದಡೆ ಒಬ್ಬರು (ಇಬ್ಬರು ?) `ಓ’ ಎಂಬಂತೆ.
ಇವರಿಬ್ಬರ ಭಾವ ಹುರುಳಿಲ್ಲ ಕಾಣಾ ಗುಹೇಶ್ವರಾ.
ವಚನ 0643
ಕಾಯಕ್ಕೆ ಮಜ್ಜನ ಪ್ರಾಣಕ್ಕೆ ಓಗರ-
ಇದ ಮಾಡಲೆ ಬೇಕು.
ಸುಳಿವ ಸುಳುಹುಳ್ಳನ್ನಕ್ಕ ಇದ ಮಾಡಲೆ ಬೇಕು.
ಗುಹೇಶ್ವರನೆಂಬ [ಲಿಂಗಕ್ಕೆ] ಆತ್ಮವುಳ್ಳನ್ನಕ್ಕ
ಭಕ್ತಿಯ ಮಾಡಲೆ ಬೇಕು.
ವಚನ 0644
ಕಾಯಗುಣ ಕೆಟ್ಟ ಮತ್ತೆ ಅರ್ಚನೆ ಹಿಂಗಿತ್ತು.
ಪ್ರಾಣಗುಣ ಕೆಟ್ಟ ಮತ್ತೆ ಅರ್ಪಿತ ಹಿಂಗಿತ್ತು.
ಭಾವಗುಣ ಕೆಟ್ಟ ಮತ್ತೆ ಉಭಯ ಜಂಜಡ ಹಿಂಗಿತ್ತು.
ಇಂತಾದ ಕಾರಣ-ನಮ್ಮ ಗುಹೇಶ್ವರನ ಶರಣರು
ಲಿಂಗಭೋಗೋಪಭೋಗವೆಂಬ ಖಂಡಿತ ಬುದ್ಧಿಯ ಮೀರಿ,
ಅಖಂಡಾದ್ವೈತಬ್ರಹ್ಮದಲ್ಲಿ ತಲ್ಲೀಯವಾದರು.
ವಚನ 0645
ಕಾಯಗುಣವಳಿದು ಜೀವನ್ಮುಕ್ತನಾದ ಬಳಿಕ
ಸಮ್ಯಕ್ಜ್ಞಾನವೆಂಬ ಶಾಂತಿ ದೊರೆಕೊಂಡಿತ್ತು ನೋಡಿರೆ !
ಅಂತರಂಗ ಬಹಿರಂಗವೆಂಬುದನು ಅರಿಯನಾಗಿ
ದ್ವೈತಾದ್ವೈತವ ನೀಕರಿಸಿ, ನಿರ್ವಾಣ ನಿಷ್ಪತಿಯಾಗಿ,
ಗುಹೇಶ್ವರಾ ನಿಮ್ಮ ಶರಣನನುಪಮ ಸುಖಿಯಾಗಿರ್ದನು.
ವಚನ 0646
ಕಾಯಗುಣವಳಿದು ಮಾಯಾಮದ ಮುರಿದು,
ಕಾಮಕ್ರೋಧಂಗಳೆಲ್ಲವು ಹೆರೆಹಿಂಗಿ ಹೋದವು.
ಅಂಗವೆಲ್ಲವು ಲಿಂಗಲೀಯವಾಗಿ ಕಂಗಳ ಕಳೆಯ ಬೆಳಗಳಿದು
ಗುಹೇಶ್ವರನ ವಿರಹದುರಿಯೊಳಗೆ ಬೆಂದವರ
ಮರಳಿ ಸುಟ್ಟಿಹೆನೆಂಬ ಸಿದ್ಧರಾಮಯ್ಯ ಮರುಳ ನೋಡಾ.
ವಚನ 0647
ಕಾಯಗೊಂಡ ಮಾನವರಂತೆ ಕೈಗೆ ಸಿಲುಕ.
ಪ್ರಾಣವಿಡಿದ ಜೀವಿಗಳಂತೆ ಎಡೆಯಾಡದಿಪ್ಪ.
ಕಾಂಬಡೆ ಕಂಗಳತೆಯಲ್ಲ, ಕೇಳುವಡೆ ಕಿವಿಗಳತೆಯಲ್ಲ.
ಗುಹೇಶ್ವರನ ನಿಲುವು ಬರಿಯ ಸ್ತೋತ್ರಕ್ಕೆ ನಿಲುಕದು.
ಕಾಣಾ ಸಿದ್ಧರಾಮಯ್ಯಾ.
ವಚನ 0648
ಕಾಯಗೊಂಡು ಹುಟ್ಟಿದವರು;
ದೇವರಾದಡಾಗಲಿ ಈವರಾದಡಾಗಲಿ
ಮಾಯೆಯ ಸಾದಿಸಿ ಗೆಲುವದರಿದು ನೋಡಾ !
ಮನದ ತಮಂಧವ ಗೆಲಿದು,
ನೆನೆದು ಸುಖಿಯಾದೆಹೆನೆಂಬವರ ಬೆಂಬತ್ತಿ ಕಾಡಿತ್ತು ಕರ್ಮ.
ಗುಹೇಶ್ವರಲಿಂಗವ ಕಿರಕಿರಿದಾಗಿ ನೆನೆದಡೆ
ಹಿರಿಹಿರಿದಾಗಿ ಕಾಡುವುದು ನೋಡಾ ಮರಹು !
ಸಂಗನಬಸವಣ್ಣಾ ನೀ ನೆನೆದ ನೆನಹು ಆರಂತಹುದೂ ಅಲ್ಲ ನೋಡಾ.
ವಚನ 0649
ಕಾಯದ ಒಲವರದಲ್ಲಿ ನಿಲುವ ಚಿತ್ತ,
ಕಂಗಳ ಗೊತ್ತಿನಲ್ಲಿ ಕಟ್ಟುವಡೆದು
ದೃಷ್ಟದ ಇಷ್ಟದಲ್ಲಿ ಕಂಗಳ ಸೂತಕ ಹಿಂಗಿ
ಮನದ ಸೂತಕ ಹರಿದು
ಗುಹೇಶ್ವರನೆಂಬ ಭಾವದ ಭ್ರಮೆ ಅಡಗಬೇಕು.
ವಚನ 0650
ಕಾಯದ ಕಳವಳ ಕಾಣೆನೆಂದಲ್ಲಿ ಹೋಯಿತ್ತು.
ಜೀವದ ದುಷ್ಕೃತ ದೂರವೆಂದಲ್ಲಿ ತಪ್ಪಿತ್ತು.
ಕಾಯ ಜೀವವೆಂಬ ಸೂತಕ, ಮನ ನಿರ್ಮಲವಾದಲ್ಲಿಯೆ ಅಳಿಯಿತ್ತು.
ಗುಹೇಶ್ವರನೆಂಬ ಲಿಂಗವನರಿಯ ಬೇಕಾದಡೆ,
ನಿನ್ನ ಒಳಗ ತೊಳೆದು ನೋಡಾ ಸಿದ್ಧರಾಮಯ್ಯಾ.
ವಚನ 0651
ಕಾಯದ ಕಳವಳಕ್ಕಂಜಿ ಪ್ರಾಣ ಹೋದಲ್ಲಿ,
ಭವ ಹಿಂಗದು, ಪ್ರಕೃತಿ ಬಿಡದು.
ವಾಯಕ್ಕಾದಡೆ ಸತ್ತು ದೇವರ ಕೂಡಿಹೆವೆಂಬರು,
ಈ ವಾಯದ ಮಾತಿಂಗೆ ಆನು ಬೆರಗಾದೆನು.
ಕಾಯವಿದ್ದಲ್ಲಿ ಸಾಯದ ಸಾವ ಬಲ್ಲಡೆ
ಬೇರಿಲ್ಲ, ಗುಹೇಶ್ವರ ತಾನೆ !
ವಚನ 0652
ಕಾಯದ ಕಳವಳವ ಗೆಲಿದಡೇನೊ, ಮಾಯದ ತಲೆಯನರಿಯದನ್ನಕ್ಕರ ?
ಮಾಯೆಯ ತಲೆಯನರಿದಡೇನೊ, ಜ್ಞಾನದ ನೆಲೆಯನರಿಯದನ್ನಕ್ಕರ ?
ಜ್ಞಾನದ ನೆಲೆಯನರಿದಡೇನೊ, ತಾನು ತಾನಾಗದನ್ನಕ್ಕರ ?
ತಾನು ತಾನಾದ ಶರಣರ ನಿಲವಿಂಗೆ
ಒಂದು ಧಾರೆ ಮೇರೆಯುಂಟೆ ಗುಹೇಶ್ವರಾ ?
ವಚನ 0653
ಕಾಯದ ಕೈಯಲ್ಲಿ ಲಿಂಗಕ್ಕೆ ಮಜ್ಜನ,
ಪ್ರಾಣದ ಕೈಯಲ್ಲಿ ಜಂಗಮಕ್ಕೆ ಭೋಜನ
ಇವ ಮಾಡಲೆ ಬೇಕು.
ಸುಳಿವ ಸುಳುಹುಳ್ಳನ್ನಕ್ಕ ಲಿಂಗಜಂಗಮಕ್ಕೆ ಮಾಡಲೆ ಬೇಕು.
ಗುಹೇಶ್ವರನೆಂಬ ಆತ್ಮನುಳ್ಳನ್ನಕ್ಕ ಸತ್ಕ್ರೀಯ ಮಾಡಲೆ ಬೇಕು.
ವಚನ 0654
ಕಾಯದ ಮೇಲೆ ಕಲ್ಲು ಬೀಳಲಿಕ್ಕೆ
ಜೀವ ಆಠಾವನರಿದು
ಕಾವು ಮಾಡಿಸಿಕೊಂಬಾಗ
ನೋವನರಿವುದು ಕಾಯವೊ ? ಜೀವವೊ ? ಉಭಯ ಸಮವೊ ?
ಗುಹೇಶ್ವರಲಿಂಗಕ್ಕೆ ಅನ್ಯವಿಲ್ಲ ಸಂಗನಬಸವಣ್ಣಾ.
ವಚನ 0655
ಕಾಯದ ಮೊದಲಿಗೆ ಬೀಜವಾವುದೆಂದರಿಯದೀ ಲೋಕ.
ಇಂದ್ರಿಯಂಗಳು ಬೀಜವಲ್ಲ,
ಆ ಕಳಾಭೇದವಲ್ಲ! ಸ್ವಪ್ನ ಬಂದೆರಗಿತ್ತಲ್ಲಾ!
ಇದಾವಂಗೂ ಶುದ್ಧ ಸುಯಿಧಾನವಲ್ಲ ಕಾಣಾ ಗುಹೇಶ್ವರಾ.
ವಚನ 0656
ಕಾಯದಲಾದ ಅರ್ಪಿತ ಅರ್ಪಿತವಲ್ಲ.
ಪ್ರಾಣದಲಾದ ಅರ್ಪಿತ ಅರ್ಪಿತವಲ್ಲ.
ಭಾವದಲಾದ ಅರ್ಪಿತ ಅರ್ಪಿತವಲ್ಲ.
ಅರಿವಿನಲಾದ ಅರ್ಪಿತ ಅರ್ಪಿತವಲ್ಲ.
ನೆನಹಿಲ್ಲದ ಅವಧಾನ ಮರಹಿಲ್ಲದ ಆರೋಗಣೆ
ತಟ್ಟದ ಮುಟ್ಟದ ಅರ್ಪಿತ !
ಗುಹೇಶ್ವರಲಿಂಗದ ಆರೋಗಣೆಯನು,
ಇಂದು ಬಸವಣ್ಣನಿಂದ ಕಂಡೆನು.
ವಚನ 0657
ಕಾಯದಲಾದ ಮೂರ್ತಿಯಲ್ಲ, ಜೀವದಲಾದ ಮೂರ್ತಿಯಲ್ಲ,
ಪ್ರಾಣದಲಾದ ಮೂರ್ತಿಯಲ್ಲ, ಪುಣ್ಯದಲಾದ ಮೂರ್ತಿಯಲ್ಲ,
ಮುಕ್ತಿಯಲಾದ ಮೂರ್ತಿಯಲ್ಲ,
ಯುಗದಲಾದ ಮೂರ್ತಿಯಲ್ಲ, ಜುಗದಲಾದ ಮೂರ್ತಿಯಲ್ಲ,
ಇದೆಂತಹ ಮೂರ್ತಿಯೆಂದುಪಮಿಸುವೆ ?
ಕಾಣಬಾರದ ಕಾಯ ನೋಡಬಾರದ ತೇಜ,
ಉಪಮಿಸಬಾರದ ನಿಲವು.
ಕಾರಣವಿಡಿದು ಕಣ್ಗೆ ಗೋಚರವಾದ ಸುಖವನು
ಏನೆಂದು ಹೇಳುವೆ ಗುಹೇಶ್ವರಾ ?
ವಚನ 0658
ಕಾಯದಲ್ಲಿ ಕಳವಳವೆಡೆಗೊಂಡ ಬಳಿಕ,
ಅರಿವಿನಲ್ಲಿ ಮರವೆ ತಾನೆ ನಿಂದಿತ್ತು ನೋಡಾ.
ಕಾಯದ ಕಳವಳವ ವಾಯವೆಂದರಿಯ ಬಲ್ಲಡೆ
ದೇವ ಗುಹೇಶ್ವರನ ನಿಲುವು ತಾನೆ ನೋಡಾ
ವಚನ 0659
ಕಾಯದಲ್ಲಿ ಕಾಯ ಸವೆದು,
ಪ್ರಾಣದಲ್ಲಿ ಪ್ರಾಣ ಸವೆದು-ನಿಶ್ಚಿಂತವಾದ ಬಳಿಕ
ಹಸಿವು-ತೃಷೆಗಳೆಂಬವು ಅಳಿದು ಹೋದವು ನೋಡಾ.
ಉಂಡಿಹೆನೆಂಬ ಬಯಕೆಯಿಲ್ಲ ಒಲ್ಲೆನೆಂಬ ವೈರಾಗ್ಯವಿಲ್ಲ.
ಇದು ಸ್ವಾನುಭಾವತೃಪ್ತಿಯೊಳಡಗಿತ್ತು.
ಇದು ಕಾರಣ-ನಮ್ಮ ಗುಹೇಶ್ವರಲಿಂಗಕ್ಕೆ
ಆರೋಗಣೆ ಇಲ್ಲ ಕಾಣಾ ಸಂಗನಬಸವಣ್ಣಾ.
ವಚನ 0660
ಕಾಯದೊಳಗಣ ಜೀವವ ಮೀರಿ ಹೋಹ ಕಳ್ಳನ ಸಂಗ ಬೇಡ.
ನಿಮ್ಮ ನಿಮ್ಮ ವಸ್ತುವ ಸುಯಿಧಾನವ ಮಾಡಿಕೊಳ್ಳಿ
ಗುಹೇಶ್ವರನೆಂಬ ಕಳ್ಳನ ಕೊಂದಡೆ ಅಳುವವರಾರೂ ಇಲ್ಲ!
ವಚನ 0661
ಕಾಯದೊಳಗೆ ಕರಣವಿಲ್ಲ ಪ್ರಾಣದೊಳಗೆ ಭಾವವಿಲ್ಲ.
ಭಾವದೊಳಗೆ ಭ್ರಮೆಯಿಲ್ಲ, ನವನಾಳದೊಳಗೆ ಸುಳುಹು ಮುನ್ನಿಲ್ಲ.
ಬ್ರಹ್ಮರಂಧ್ರದಲ್ಲಿ ಅರಿವು ಅರತ ಶಿವಯೋಗಿ;
ಗುಹೇಶ್ವರನ ಶರಣ ಸಿದ್ಧರಾಮಯ್ಯಾ
ನಿನ್ನ ಕಂಡು ಎನ್ನ ಭವಂ ನಾಸ್ತಿಯಾಯಿತ್ತು ಕೇಳಾ.
ವಚನ 0662
ಕಾಯದೊಳಗೆ ಕರುಳುಳ್ಳನ್ನಕ್ಕರ ಹಸಿವು ಮಾಣದು.
ಕಾಯದೊಳಗಣ ಕರುಳ ತೆಗೆದು ಕಂಗಳ ಮೇಲಿರಿಸಿ
ಇದನಡಿಗೆಯ ಮಾಡಿ ಗಡಣಿಸುತ್ತಿದ್ದೆ,
ಏನೆಂಬೆ ಗುಹೇಶ್ವರಾ ?
ವಚನ 0663
ಕಾಯದೊಳಗೆ ಕಾಯವಾಗಿ, ಪ್ರಾಣದೊಳಗೆ ಪ್ರಾಣವಾಗಿ,
ಮನದೊಳಗೆ ಮನವಾಗಿ ಭಾವದೊಳಗೆ ಭಾವವಾಗಿ
ಅರಿವಿನೊಳಗೆ ಅರಿವಿನ ತಿರುಳಾಗಿ,-ಮರಹು ಮಾರಡೆಯಿಲ್ಲದೆ.
ನಿಜಪದವು ಸಾಧ್ಯವಾದ ಬಳಿಕ
ಆವುದು ವರ್ಮ, ಆವುದು ಕರ್ಮ ?
ಆವುದು ಬೋಧೆ, ಆವುದು ಸಂಬಂಧ ?
ನಾ ಹೇಳಲಿಲ್ಲ ನೀ ಕೇಳಲಿಲ್ಲ !
ಅದೇನು ಕಾರಣವೆಂದಡೆ ಬೆಸಗೊಂಬಡೆ ತೆರಹಿಲ್ಲವಾಗಿ !
ಗುಹೇಶ್ವರಲಿಂಗದಲ್ಲಿ ತೆರೆಮರೆ ಆವುದು ಹೇಳಯ್ಯಾ ಬಸವಣ್ಣಾ ?
ವಚನ 0664
ಕಾಯವ ಹೊತ್ತು ತಿರುಗಾಡುವನ್ನಬರ
ನಾನರಿದೆನೆಂಬುದು ಹುಸಿಯಾಯಿತ್ತು.
ಅರಿದಡೆ ತಾವರೆ ಎಲೆಯ ಬಿಂದುವಿನಂತೆ ಲೇಪವಿಲ್ಲದೆ
ಗುಹೇಶ್ವರಲಿಂಗವನರಿಯಬೇಕು ಸಂಗನಬಸವಣ್ಣಾ.
ವಚನ 0665
ಕಾಯವಿಡಿದು ಲಿಂಗವಿದೆ ಲಿಂಗವಿಡಿದು ಕಾಯವಿದೆ.
ಅರಿವಿಡಿದು ಮರಹಿದೆ, ಮರಹುವಿಡಿದು
ತೋರುವ ಅರಿವಿದೆ.
ಲಿಂಗಾಂಗವೆರಡೂ ನಿಮ್ಮಲ್ಲಿ ಐಕ್ಯವಾದ ಪರಿ ಎಂತು ಹೇಳಾ ?
ಸ್ವರವಿಡಿದು ಸಬುದ ಸಮರಸವಾದ ಪರಿ ಎಂತು ಹೇಳಾ ?ದೇವ’
ಭಕ್ತ’ ಎಂಬ ನಾಮ ಸೀಮೆಯಡಗಿ
ಗುಹೇಶ್ವರಲಿಂಗದಲ್ಲಿ ತದುಗತವಾಗಿದ್ದ ಪರಿ ಎಂತು ಹೇಳಾ
ಸಂಗನಬಸವಣ್ಣಾ ?
ವಚನ 0666
ಕಾಯವಿಡಿದು ಸುಳಿದಾಡುವನ್ನಕ್ಕ,
ಕರಣಂಗಳ ಮೀರುವರಾರೈ ಚೆನ್ನಬಸವಣ್ಣಾ ?
ಕರಣಂಗಳಿಂದ ಕರ್ಮಂಗಳ ಮಾಡುತ್ತಿದ್ದಿತು.
ಕರ್ಮವ ಕರ್ಮದಿಂದ ಅಳಿದು ಮಲವ ಜಲ ತೊಳೆದಂತೆ,-
ನಾನು ಕಾಯದ ಕರ್ಮ ಮಾಡುವಲ್ಲಿ,
ಜೀವವಿಕಾರ ಬಿಡಿಸಿದೆಯಲ್ಲಾ !
ಗುಹೇಶ್ವರಲಿಂಗಕ್ಕೆ ಒಡಲಿಲ್ಲ ಎಂಬುದನು,
ಅರುಹಿದೆಯಲ್ಲಾ ಚೆನ್ನಬಸವಣ್ಣಾ.
ವಚನ 0667
ಕಾಯವಿಡಿದು ಹುಟ್ಟಿದಾತ ಕಾಲಾಗ್ನಿರುದ್ರನಾಗಲಿ,
ಕಾಯವಿಡಿದು ಹುಟ್ಟಿದಾತ ಕಾಮಸಂಹಾರಿಯಾಗಲಿ,
ಕಾಯವಿಡಿದು ಹುಟ್ಟಿದಾತ ಅನಾದಿ ಪರಮೇಶ್ವರನಾಗಲಿ,
ಅರಿವು ಸಾಧ್ಯವಾಗದು ಆರಿಗೆಯು.
ಗುಹೇಶ್ವರಲಿಂಗದಲ್ಲಿ-ನೀನು
ಕಾಯವಿಡಿದು ಕಲ್ಪಿತವ ಹೊದ್ದೆಯೆಂಬುದು,
ಕಾಣ ಬಂದಿತ್ತು ನೋಡಾ ಚೆನ್ನಬಸವಣ್ಣಾ.
ವಚನ 0668
ಕಾಯವುಳ್ಳನ್ನಕ್ಕ ಶರಣರ ಸಂಗದಿಂದ ಅರಿಯಬೇಕು.
ಜೀವವುಳ್ಳನ್ನಕ್ಕ ಅರಿವಿನ ಮುಖದಿಂದ ಹರಿಯಬೇಕು.
ಅರಿವನ್ನಬರ ಗುಹೇಶ್ವರನೆಂಬ ಕುರುಹಾಯಿತ್ತು.
ವಚನ 0669
ಕಾಯವೆ ಕಡವಸವಾಗಿ, ಮನವೆ ಯೋಗವಟ್ಟಿಗೆಯಾಗಿ;
ಇಂದ್ರಿಯವಿಸಂಚದಿಂದಾದ ಉಪಮೆಯಯ್ಯಾ !
ಏನೆಂದೆನಬಹುದು ? ಎಂತೆಂದೆನಬಹುದು ?
ಸುಖದ ಸೋಂಕಿನಲಾದ ಸಮಾದಿಯಯ್ಯಾ !
ಅಂತರಂಗದ ಕಂಥೆ ಚಿಂತೆಗೆಟ್ಟುದು ಬ್ರಹ್ಮ,
ಗುಹೇಶ್ವರಲಿಂಗದಲ್ಲಿ ಸಂಗವಯ್ಯಾ.
ವಚನ 0670
ಕಾಯವೆ ಸಕಲ, ಪ್ರಾಣವೆ ಸಕಲ-ನಿಷ್ಕಲ,
ಭಾವವೆ ನಿಷ್ಕಲಲಿಂಗವಾಗಿದ್ದ ಮತ್ತೆ
ಬೇರೆ ಆಯತ ಸ್ವಾಯತ ಸನ್ನಹಿತವೆಂಬುದಿಲ್ಲ ನೋಡಾ.
ಶಿವ-ಶಕ್ತಿ (ಭಕ್ತಿ-ಶಕ್ತಿ ?) ಸಂಬಂಧವೆ ದೇಹದೇಹಿಗಳಾಗಿದ್ದ ಬಳಿಕ
ಗುಹೇಶ್ವರಲಿಂಗದಲ್ಲಿ,
ಬೇರೊಂದು ಕುರುಹುವಿಡಿದು ಅರಿಯಲೇಕಯ್ಯಾ ಚನ್ನಬಸವಣ್ಣಾ ?
ವಚನ 0671
ಕಾಯವೆ ಸತ್ತು ಮಾಯವೆ ಉಳಿಯಿತ್ತು.
ಎರಡರ ಸುಖದುಃಖವನರಿಯರು ನೋಡಾ.
ಅದೇನೆಂದರಿಯರು ಅದೆಂತೆಂದರಿಯರು ನೋಡಾ.
ಹಿರಿಯರೆಲ್ಲಾ ವೃಥಾಯ ಹೋದರು ನೋಡಾ.
ಕಣ್ಣ ಮುಂದಣ ಕಪ್ಪ ಕಳೆಯಲರಿಯರು ನೋಡಾ.
ಗುಹೇಶ್ವರನೆಂಬ ಶಬ್ದಕ್ಕೆ ನಾಚರು ನೋಡಾ !
ವಚನ 0672
ಕಾಯವೆಂಬ ಕಂಥೆಯ ತೊಟ್ಟವರು,
ಬ್ರಹ್ಮನಾಗಲಿ ವಿಷ್ಣುವಾಗಲಿ ಈಶ್ವರನಾಗಲಿ
ಅಂಗಾಲ ಕಣ್ಣು ಮೈಯೆಲ್ಲಾ ಕಣ್ಣುಳ್ಳ ನಂದಿವಾಹನ ರುದ್ರನಾಗಲಿ
ಗಂಗಾಧರನಾಗಲಿ ಗೌರೀಪತಿಯಾಗಲಿ
ಮಾಯೆ ಕಾಡದೆ ಬಿಡಳು ನೋಡಾ !
ಕಾಯವೆಂಬ ಕಂಥೆಯ ತೊಟ್ಟು ಕೈಲಾಸದಲ್ಲಿದ್ದಡೆ,
ಅಗ್ಗದ ರುದ್ರರೆನ್ನ ನುಗ್ಗು ನುಗ್ಗು ಮಾಡಿ ನೆಲಕ್ಕೆ ಹಾಯ್ಕಿದಡೆ,
ಬಿದ್ದು ಎದ್ದು ಬಂದು ಗುರುವಿನಿಂದ ಭವದ ಬಳ್ಳಿಯ ಹರಿದೆ ನೋಡಾ,
ಹಿಂದಣ ಭವಕ್ಕಂಜಿ, ಮುಂದೆ ಪರಲೋಕದ ಗತಿಯನೊಲ್ಲೆನೆಂದು
ಜರೆದು ಕಳೆದಡೆ-ಪುಣ್ಯಪಾಪಂಗಳೆರಡೂ ಹೊರಗಾದವು.
ಗುಹೇಶ್ವರನೊಡ್ಡಿದ ಸಂಸಾರಸಾಗರವ ದಾಟಿ
ನಿತ್ಯ ನಿಜನಿವಾಸದ ಮುಂಬಾಗಿಲ ಕಂಡು,
ತಲೆವಾಗಿ ಹೊಕ್ಕೆನಯ್ಯಾ.
ವಚನ 0673
ಕಾಯವೆಂಬ ಕದಳಿಯ ಹೊಕ್ಕು; ಪ್ರಾಣವೆಂಬ ಗಂಹರದಲ್ಲಿ;
ಸಕಲೇಂದ್ರಿಯವೆಂಬ ಕೋಣೆ ಕೋಣೆಗಳಲ್ಲಿ ತಿರುಗಾಡುತ್ತ ಬರಲಾಗಿ
ಮೇರು ಮಂದಿರದ ತ್ರಿಕೋಣೆಯಲ್ಲಿ ಬೆಳಗಾಯಿತ್ತು !
ಗುಹೇಶ್ವರಲಿಂಗವೆಂಬುದು ರೂಪಾಯಿತ್ತು ಸಂಗನಬಸವಣ್ಣಾ.
ವಚನ 0674
ಕಾಯವೆಂಬ ಕಲ್ಪಿತವ ಕಳೆದು, ಪ್ರಾಣವೆಂಬ ಸೂತಕವ ಹರಿದು,
ನಿಜಭಕ್ತಿ ಸಾಧ್ಯವಾದಲ್ಲದೆ ಲಿಂಗಪರಿಣಾಮವನೆಯ್ದಿಸಬಾರದು (ವೇದಿಸಬಾರದು ?)
ಅನು ಮಾಡಿದೆ, ನೀವು ಕೈಕೊಳ್ಳಿ ಎಂದಡೆ ಅದೇ ಅಜ್ಞಾನ.
ನಮ್ಮ ಗುಹೇಶ್ವರಲಿಂಗಕ್ಕೆ ಕುರುಹಳಿದು ನಿಜ ಉಳಿದವಂಗಲ್ಲದೆ
ಪದಾರ್ಥವ ನೀಡಬಾರದು ಕಾಣಾ ಸಂಗನಬಸವಣ್ಣಾ.
ವಚನ 0675
ಕಾಯವೆಂಬ ಗ್ರಾಮದೊಳಗೊಂದು ಉದರಾಗ್ನಿ
ಹಸಿವು ತೃಷೆ ಅನ್ನ ಪಾನಾದಿಗಳಾಹುತಿಯೆಂಬ ಹೋಮದ ಕುಳಿಯಿದ್ದು,
ನೇಮಾನೇಮಂಗಳನೆಲ್ಲ ಉಳಿದು ಆಹುತಿಯನಿಕ್ಕಿದರು.
ಕೃಚ್ಚ್ರ ಚಾಂದ್ರಾಯಣ ಮೊದಲಾದ ಷೋಡಶ ಕರ್ಮವೆಂಬ ತಪ,
ಎರಡುನೂರಹದಿನಾರು ತೆರೆದ ನೇಮ ಅರವತ್ತಾರು ಶೀಲ,
ಎಂಬತ್ತೆಂಟು ವ್ರತವೆಂಬೀ ಚತುರ್ವಿಧ ಪ್ರಾಣಘಾತಕದೊಳಿಲ್ಲ
ಗುಹೇಶ್ವರ ನಿಮ್ಮ ಶರಣ ಕಂಡೆಯ್ಯ.
ವಚನ 0676
ಕಾಯವೆಂಬ ದೇಗುಲದಲ್ಲಿ ಜೀವವೆಂಬ ದೇವರು,
ಕರಣೇಂದ್ರಿಯಂಗಳೆಂಬ ಸ್ಥಾನಿಕರ ಕೈಯಲ್ಲಿ ಪೂಜಿಸಿಕೊಂಬುದು
ಗುಹೇಶ್ವರಲಿಂಗಕ್ಕೆ ದೂರ !
ವಚನ 0677
ಕಾಯವೆಂಬ ಮಹಾಕದಳಿಯ ಗೆಲಬಲ್ಲವರನಾರನೂ ಕಾಣೆ-
ಸಂಸಾರವೆಂಬ ಸಪ್ತಸಮುದ್ರ ಬಳಸಿ ಬಂದಿಪ್ಪವು.
ಭವವೆಂಬ ಮಹಾರಣ್ಯದೊಳು,
ಪಂಚೇಂದ್ರಿಯವೆಂಬ ವಿಷದ ಮಳೆ ಸುರುವುತ್ತಿಪ್ಪುದು.
ಕೋಪವೆಂಬ ಪಬರ್ುಲಿ ಮೊರೆವುತ್ತಿಪ್ಪುದು.
ಅಷ್ಟಮದವೆಂಬ ಮದಗಜಂಗಳು ಬೀದಿವರಿಯುತ್ತಿಪ್ಪುವು.
ಕಾಮವೆಂಬ ಕೆಂಡದ ಮಳೆ-ಅಡಿಯಿಡಬಾರದು.
ಮತ್ಸರವೆಂಬ ಮಹಾಸರ್ಪಂಗಳು ಕಿಡಿಯನುಗುಳುತ್ತಿಪ್ಪವು.
ಆಸೆಯೆಂಬ ಪಾಪಿಯ ಕೂಸು ಹಿಸಿಹಿಸಿದು ತಿನ್ನುತ್ತಿಪ್ಪುದು.
ತಾಪತ್ರಯವೆಂಬ ಮೂರಂಬಿನಸೋನೆ ಸುರಿವುತ್ತಿಪ್ಪುದು.
ಅಹಂಕಾರವೆಂಬ ಗಿರಿಗಳು ಅಡ್ಡ ಬಿದ್ದಿಪ್ಪವು.
ಪಂಚಭೂತಗಳೆಂಬ ಭೂತಂಗಳ ಭಯ-ದಿಟ್ಟಿಸಬಾರದು.
ಮಾಯೆಯೆಂಬ ರಕ್ಕಸಿ ಹಸಿಯ ತಿನುತಿಪ್ಪಳು
ವಿಷಯವೆಂಬ ಕೂಪ-ಬಳಸಬಾರದು.
ಮೋಹವೆಂಬ ಬಳ್ಳಿ-ಕಾಲ ಕುತ್ತಬಾರದು.
ಲೋಭವೆಂಬ ಮಸೆದಡಾಯುಧ-ಒರೆ ಉಚ್ಚಬಾರದು.
ಇಂತಪ್ಪ ಕದಳಿಯ ಹೊಗಲರಿಯದೆ
ದೇವದಾನವ ಮಾನವರೆಲ್ಲರೂ, ಮತಿಗೆಟ್ಟು ಮರುಳಾಗಿ ಹೆರೆದೆಗೆದು ಓಡಿದರು.
ಅಂಗಾಲ ಕಣ್ಣವರು ಮೈಯೆಲ್ಲ ಕಣ್ಣವರು ತಲೆಬಾಲಗೆಟ್ಟರು.
ನಾನು ಈ ಕದಳಿಯ ಹೊಕ್ಕು ಹೊಯ್ದಾಡಿ,
ಮುಳ್ಳು ಮಸೆ ಮುಟ್ಟದೆ ಕಳಿವರಿದು, ಗೆಲಿದು, ಉತ್ತರಿಸಿ;
ಗುಹೇಶ್ವರನೆಂಬ ಲಿಂಗದ ನಿಜಸಮಾದಿಯಲ್ಲಿ ನಿಂದು,
ಪರವಶನಾಗಿ ನಿರಾಳಕ್ಕೆ ನಿರಾಳವಾಗಿದ್ದೆನಯ್ಯಾ !
ವಚನ 0678
ಕಾಯಶುದ್ಧವಾಯಿತ್ತೆಂದಡೆ ಲಿಂಗ ನೆಲೆಗೊಳ್ಳದು.
ಜೀವ ಶುದ್ಧವಾಯಿತ್ತೆಂದಡೆ ಲಿಂಗ ನೆಲೆಗೊಳ್ಳದು.
ಭಾವ ಶುದ್ಧವಾಯಿತ್ತೆಂದಡೆ ಲಿಂಗ ನೆಲೆಗೊಳ್ಳದು.
ಗುಹೇಶ್ವರಲಿಂಗದಲ್ಲಿ ಶುದ್ಧ ಸುಯಿಧಾನಿಯಾದೆನೆಂದಡೆ
ನಿಜವು ಸಾಧ್ಯವಾಗದು ಕೇಳು ಅವ್ವಾ.
ವಚನ 0679
ಕಾಯಸದೆ ನೆನೆದಡೆ, ಕಲ್ಪಿತವಿಲ್ಲದ ಪುರುಷ ಬಂದನೆನಗೆ ನೋಡಾ,
ಕಲ್ಪಿತವಿಲ್ಲದೆ ನೆರೆದಡೆ ಭಾವಿಸಲಿಲ್ಲದ ಸುಖವು ದೊರಕಿತ್ತು ನೋಡಾ,
ಗುಹೇಶ್ವರನೆಂಬ ಲಿಂಗವನರಿದ ಬಳಿಕ ನೀ ನಾನೆಂಬುದಿಲ್ಲ ನೋಡಾ.
ವಚನ 0680
ಕಾರ ಮೇಘವೆದ್ದು ಧಾರಾವರ್ತ ಸುರಿವಾಗ,
ಧಾರುಣಿಯೆಲ್ಲವೂ ಮುಳುಗಿತ್ತು ನೋಡಾ !
ಕಾರಿರುಳ ಕಣ್ಣೊಳಗೆ ಸೂರ್ಯರನೇಕರು ಮೂಡಿ
ದಾರಿಯ ಹೊಲಬೆಂಬುದು ಕೆಟ್ಟಿತ್ತು ನೋಡಾ !
ಪೂರಾಯ ಗಾಯದಲ್ಲಿ ಸಾಯೆ ಕೊಂದಲ್ಲದೆ
ಸೂರಿಯ (ಸೂರ್ಯ?)ರನೇಕರು ಮಡಿಯರು ಗುಹೇಶ್ವರಾ.
ವಚನ 0681
ಕಾರಣವಿಲ್ಲ ಕಾರ್ಯವಿಲ್ಲ ಏತಕ್ಕೆ ಭಕ್ತರಾದೆವಿಂಬಿರೊ ?
ಐವರ ಬಾಯ ಎಂಜಲನುಂಬಿರಿ, ಐವರು ಸ್ತ್ರೀಯರ ಮುಖವನರಿಯಿರಿ.
ಮೂರು ಸಂಕಲೆಯ ಕಳೆಯಲರಿಯಿರಿ.
ಕಾಯವಿಡಿದು ಲಿಂಗವ ಮುಟ್ಟಿಹೆನೆಂಬ, ಭ್ರಮೆಯ ನೋಡಾ ಗುಹೇಶ್ವರಾ.
ವಚನ 0682
ಕಾರಿಯ (ಕಾರ್ಯ?)ವನರಿಯರು ಕೊರತೆಯನರಿಯರು.
ವಾಯಕ್ಕೆ ಬಳಲುವರು ತಾವು ಜ್ಞಾನಿಗಳೆಂದು.
ತಾಯಿಯಿಲ್ಲದ ಮೂಲನ ತಲೆವಿಡಿಯಲರಿಯದೆ
ದೇವರಾದೆವೆಂದಡೆ ನಾಚಿದೆನು ಗುಹೇಶ್ವರಾ.
ವಚನ 0683
ಕಾಲ ಸಡಗರ ಕೈಯಲದೆ ಕೈಯ ಸಡಗರ ಕಂಗಳಲದೆ.
ಅದೇನು ಕಾರಣವೆಂದಡೆ, ಕಂಗಳೇ ಕಾರಣವಾಗಿ,
ಒಂದು ಮಾತಿನೊಳಗೆ ವಿಚಾರವದೆ; ಕನ್ನಡಿಯೊಳಗೆ ಕಾರ್ಯವದೆ,-
ಇದೇನು ಕಾರಣ ತಿಳಿಯಲರಿಯರು ಹೇಳಾ ಗುಹೇಶ್ವರಾ ?
ವಚನ 0684
ಕಾಲ,-ಕಾಲವರವತ್ತು; ಕಾಲ ಕಾಲವನೆ ಅರಿವುದು.
ಕಾಲ-ಕಾಲವೈವತ್ತು; ಕಾಲ ಕಾಲವನೆ ಅರಿವುದು.
ಕಾಲ-ಕಾಲ ನಾಲ್ವತ್ತು; ಕಾಲ ಕಾಲವನೆ ಅರಿವುದು.
ಕಾಲ-ಕಾಲ ಮೂವತ್ತು; ಕಾಲ ಕಾಲವನೆ ಅರಿವುದು.
ಕಾಲ-ಕಾಲ ಇಪ್ಪತ್ತು; ಕಾಲ ಕಾಲವನೆ ಅರಿವುದು.
ಕಾಲ-ಕಾಲ ಹತ್ತು; ಕಾಲ ಕಾಲವನೆ ಅರಿವುದು.
ಇಂತೀ ಕಾಲಂಗಳ ಕಾಲವನರಿವಡೆ
ಗುಹೇಶ್ವರಲಿಂಗದಲ್ಲಿ ಹೇಳು ಚೆನ್ನಬಸವಣ್ಣಾ ?
ವಚನ 0685
ಕಾಲಚಕ್ರದ ವಚನ :
ಏಕಂ ಏಕವಾದ ವಸ್ತುವ ಲೋಕಾಲೋಕಂಗಳರಿಯವು
ಸ್ಥೂಲ ಸೂಕ್ಷ್ಮವೆನುತಿರ್ಪರೆಲ್ಲರೂ,
ಆತನೀತ ಬೇರೆ ಮತ್ತೊಬ್ಬಾತನೆಂಬ ಭ್ರಮೆಯಲ್ಲಿ
ಭೂತಪ್ರಾಣಿಗಳವರೆತ್ತ ಬಲ್ಲರು ಆತನ ಘನವ.
ಚಿಟುಕು ಮುನ್ನೂರರವತ್ತು ಕೂಡಿದಡೆ ಒಂದು ವಿಘಳಿಗೆ,
ಆ ವಿಘಳಿಗೆ ಅರುವತ್ತು ಕೂಡಿದೊಡೆ ಒಂದು ಘಳಿಗೆ,
ಆ ಘಳಿಗೆ ಅರುವತ್ತು ಕೂಡಿದೊಡೆ ಒಂದು ದಿನ.
ದಿನ ಮೂವತ್ತು ಕೂಡಿದೊಡೆ ಒಂದು ಮಾಸ
ಮಾಸ ಹನ್ನೆರಡು ಕೂಡಿದೊಡೆ ಒಂದು ವರುಷ
ವರುಷ ಅರುವತ್ತು ಕೂಡಿದೊಡೆ ಒಂದು ಸಂವತ್ಸರ-
ಇಂತೀ ಕಾಲಚಕ್ರಂಗಳು ಈ ಪರಿದಿಯಲ್ಲಿ ತಿರುಗಿ ಬರುತ್ತಿಹವು ಕಾಣಿರೆ.
ನಾಲ್ಕು ಯುಗಂಗಳು ಬೇರೆ ಬೇರೆ ಕಟ್ಟಿದ ಕಟ್ಟಳೆಯೊಳು,
ತಿರುಗಿ ಬರುತ್ತಿಹವು ಕಾಣಿರೆ.
ಕೃತಯುಗ ಹದಿನೇಳು ಲಕ್ಷವು ಇಪ್ಪತ್ತೆಂಟುಸಾವಿರವರ್ಷ ವರ್ತಿಸಿ ನಿಂದಿತ್ತು.
ತ್ರೇತಾಯುಗ ಹನ್ನೆರಡು ಲಕ್ಷವು ತೊಂಬತ್ತಾರುಸಾವಿರ ವರ್ಷ ವರ್ತಿಸಿ ನಿಂದಿತ್ತು.
ದ್ವಾಪರಯುಗ ಎಂಟು ಲಕ್ಷವು ಅರುವತ್ತುನಾಲ್ಕುಸಾವಿರ ವರ್ಷ ವರ್ತಿಸಿ ನಿಂದಿತ್ತು.
ಕಲಿಯುಗ ನಾಲ್ಕುಲಕ್ಷವು ಮೂವತ್ತೆರಡುಸಾವಿರ ವರ್ಷ ವರ್ತಿಸಿ ನಿಂದಿತ್ತು.
-ಇಂತೀ ನಾಲ್ಕು ಯುಗಂಗಳು ಕೂಡಿ ಒಂದಾಗಿ ಮೇಳಯಿಸಿದೊಡೆ,
ನಾಲ್ವತ್ತು ಮೂರು ಲಕ್ಷವು ಇಪ್ಪತ್ತುಸಾವಿರ ವರುಷ ಕಟ್ಟಳೆಯಾಯಿತ್ತು.
ಈ ನಾಲ್ಕುಯುಗಂಗಳು ಇಪ್ಪತ್ತೊಂದು ಬಾರಿ ತಿರುಗಿದಡೆ
ಸುರಪತಿಗೆ ಪರಮಾಯು, ಬ್ರಹ್ಮಂಗೆ ಜಾವ,
ಅಷ್ಟಾಶಿತಿ ಸಹಸ್ರ ಋಷಿಯರು ಸಾವಿರಬಾರಿ ತಿರುಗಿದಡೆ
ಬ್ರಹ್ಮಂಗೆ ಆಯುಷ್ಯ ನೂರಪ್ಪುದು, ವಿಷ್ಣುವಿಂಗೆ ಜಾವಪ್ಪುದು.
ಆ ವಿಷ್ಣುವಿನ ಒಂದು ದಿನ(ಜಾವ?)ದೊಳಗೆ
ನಾಲ್ಕು ಬಾರಿ ಹುಟ್ಟಿ ನಾಲ್ಕು ಬಾರಿ ಹೊಂದುವ ಬ್ರಹ್ಮನು,
ಆ(ದಿ) ವಿಷ್ಣುವಿನ ಒಂದು ದಿನವಪ್ಪುದು, (ಅಂಥ ವಿಷ್ಣುವಿನ ಒಂದು ದಿನದಲ್ಲಿ)
ಸಮಸ್ತ ಈರೇಳು ಭುವನಂಗಳೆಲ್ಲ ಭೂತಸಂಹಾರ ,
ಅಂಥಾ ಭೂತಸಂಹಾರಗಳು
ಹದಿನೆಂಟು ಲಕ್ಷವು ಇಪ್ಪತ್ತೆಂಟುಸಹಸ್ರ ವರುಷ ತಿರುಗಲು
ಪೃಥ್ವಿಯೆಲ್ಲಾ ಜಲಪ್ರಳಯ.
ಅಂಥಾ ಜಲಪ್ರಳಯವೆಂಟು ಬಾರಿ ತಿರುಗಿದಡೆ ವಿಷ್ಣುವಿಂಗೆ ಮರಣ,
ರುದ್ರಂಗೆ ನಿಮಿಷ.
ಅಂಥಾ ರುದ್ರನ ಒಂದು ನಿಮಿಷದಲ್ಲಿ
ಅತಳ ವಿತಳ ಸುತಳ ಮಹೀತಳ ರಸಾತಳ ತಳಾತಳ ಪಾತಾಳ-
ಇಂತು ಕೆಳಗೇಳು ಭುವನಂಗಳು,
ಮೇಲೆ, ಸತ್ಯಲೋಕ ಜನರ್ಲೊಕ ತಪೋಲೋಕ ಮಹರ್ಲೊಕ, ಸ್ವರ್ಲೊಕ
ಭುವರ್ಲೊಕ ಭೂಲೋಕ ಮೊದಲಾಗಿ-ಇಂತೀ ಲೋಕಾಲೋಕಂಗಳೆಲ್ಲ ಮುಳುಗಿ
ಮಹಾಪ್ರಳಯವಾದಲ್ಲಿ ರುದ್ರಲೋಕವೊಂದುಳಿಯೆ, ಆ ರುದ್ರಂಗೆ ಒಂದುದಿನ.
ಅಂಥಾದಿನ ಮುನ್ನೂರರವತ್ತು ಕೂಡಿದಡೆ ಒಂದು ವರುಷ.
ಅಂಥಾ ವರುಷ ಶತಕೋಟಿ ಕೂಡಿದಡೆ ರುದ್ರಂಗೆ ಪರಮಾಯು.
ಅಂಥಾ ರುದ್ರರು ಅನೇಕರು ಹೋದರಲ್ಲಾ,
ಮತ್ತಂ ಪಶುಪತಿ, ಶಂಕರ, ಶಶಿಧರ, ಸದಾಶಿವ, ಗೌರೀಪತಿ, ಮಹಾದೇವ
ಈಶ್ವರರೆಂಬವರು
ಆ ದಿನದಲ್ಲಿ ಇವರು ಪ್ರಮಥಗಣೇಶ್ವರರು, ತಪೋರಾಜ್ಯವನುಂಬರು.
ತಪಕ್ಕೆ ಬಿಜಯಂಗೈವರು ಆ ರುದ್ರರು.
ಲೋಕಾಲೋಕಂಗಳು ಕೂಡಿ ಭೂತ ವರ್ತಿಸುತ್ತಿದ್ದಿತ್ತೊಂದು ಕೆಲವು ಕಾಲ,
ಅದು ತೊಡೆದು ಹೋಯಿತ್ತು.
ಬಳಿಕ ಶೂನ್ಯವರ್ತಿಸುತ್ತಿದ್ದಿತ್ತೊಂದು ಕೆಲವು ಕಾಲ,
ಅದು ತೊಡೆದು ಹೋಯಿತ್ತು
ಬಳಿಕ ಕಾಳಾಂಧರ ವರ್ತಿಸುತ್ತಿದ್ದಿತ್ತೊಂದು ಕೆಲವು ಕಾಲ,
ಅದು ತೊಡೆದು ಹೋಯಿತ್ತು-ಬಳಿಕ ಮಹಾ ಪ್ರಕಾಶದ ಬೆಳಗು.
ಇಂತಹ ಕಾಲಂಗಳು ಈ ಪರಿಯಲ್ಲಿ ತಿರುಗಿ ಬರುತ್ತಿಹವು ಕಾಣಿರೆ !
ಅಂತಹ ಕಾಲಂಗಳೂ ಅರಿಯವು, ಅಂತಹ ದಿನಂಗಳೂ ಅರಿಯವು
ಅಂತಹ ದೇವತೆಗಳೂ ಅರಿಯರು,-
ಅಪ್ರಮಾಣ ಅಗಮ್ಯ ಅಗೋಚರ ಉಪಮಿಸಬಾರದು
ಅಂತಿಂತೆನಲಿಲ್ಲ ಗುಹೇಶ್ವರಲಿಂಗ ನಿರಂಜನ ನಿರಾಳ ! ನಿರಾಮಯ !
ವಚನ 0686
ಕಾಲನ ಕೊಂದಾತನಲ್ಲದೆ ಶುದ್ಧಪ್ರಸಾದಿಯಲ್ಲ.
ಕಾಮನ ತಿಂದಾತನಲ್ಲದೆ ಸಿದ್ಧಪ್ರಸಾದಿಯಲ್ಲ.
ತ್ರಿಪುರವ ಸುಟ್ಟಾತನಲ್ಲದೆ ಪ್ರಸಿದ್ಧಪ್ರಸಾದಿಯಲ್ಲ.
ಕೆಸರಿನಲ್ಲಿ ಕಿಚ್ಚನಿಕ್ಕಿ ಬಸುರ ಬಡಿದುಕೊಂಡಾತಗಲ್ಲದೆ
ಈ ತ್ರಿವಿಧ ಪ್ರಸಾದವಿಲ್ಲ ಕಾಣಾ ಗುಹೇಶ್ವರಾ.
ವಚನ 0687
ಕಾಲಾಗ್ನಿಯೆಂಬ ಕಾಡುಗಿಚ್ಚೆದ್ದು ಲೋಕವ ಸುಟ್ಟಿತ್ತೆಂದಡೆ
ಶಿವಶರಣರಂಜರು.
ಶಶಿಧರ ಮುನಿದು ಬಿಸುಗಣ್ಣ ತೆಗೆದಡೆ
ಶಿವಶರಣರದ ಮನಸಿಗೆ ತಾರರು.
ಅಸಮಾಕ್ಷಲಿಂಗವ ತಮ್ಮ ವಶಕ್ಕೆ ತಂದ ಶರಣರು,
ಮುನಿದು ಉರಿಗಣ್ಣ ತೆಗೆದಡೆ,
ಚತುರ್ದಶ ಭುವನದೊಳಗೆ ಆರೂ ಗುರಿಯಲ್ಲ.
ಗುಹೇಶ್ವರಾ ನಿಮ್ಮ ಅರಿವಿನ ಬೆಳಗು ಬಿಸಿಯಾದಡೆ
ಸಿದ್ಧರಾಮಯ್ಯದೇವರೆಂಬ ಶಿವಯೋಗಿಯ
ಹೃದಯವೆ ಗುರಿ.
ವಚನ 0688
ಕಾಲಿಲ್ಲದ ಗಮನ, ಕೈಯಿಲ್ಲದ ಸೋಂಕು, ಬಾಯಿಲ್ಲದ ರುಚಿ,
ಭಾವವೆ ಕರ್ಪರವಾಗಿ `ಪರಮ ದೇಹಿ’ ಎಂದು ಬೇಡುವ
ಪರಮನ ತೋರಯ್ಯಾ ಗುಹೇಶ್ವರಾ.
ವಚನ 0689
ಕಾಲು ಕರ ಕಾಯ ಜೀವದೊಳಗಾಡುವ
ಭಾವವೇ ದೈವವೆ ?
`ನಾನು’ ಎಂಬುದ ತಾನು ಅಳಿದಲ್ಲಿ ಗುಹೇಶ್ವರಲಿಂಗವು ತಾನೆ !
ವಚನ 0690
ಕಾಲು ಮುಖವ ತೊಳೆದುಕೊಂಡ ಬಳಿಕ ಮಜ್ಜನಕ್ಕೆರೆವಿರಿ,
ತಾನು ಲಿಂಗವೊ ? ತನ್ನ ಕೈಯದು ಲಿಂಗವೊ ?
ಆವುದು ಲಿಂಗ ಹೇಳಿರೆ ?
ಲಿಂಗಸ್ಥಲವನರಿಯದೆ,
ಎರಡರಿಂದ ಕೆಟ್ಟರು ಗುಹೇಶ್ವರಾ.
ವಚನ 0691
ಕಾಲುಗಳೆಂಬುವು ಗಾಲಿ ಕಂಡಯ್ಯಾ
ದೇಹವೆಂಬುದು ತುಂಬಿದ ಬಂಡಿ ಕಂಡಯ್ಯಾ.
ಬಂಡಿಯ ಹೊಡೆವರೈವರು ಮಾನಿಸರು, ಒಬ್ಬರಿಗೊಬ್ಬರು ಸಮವಿಲ್ಲಯ್ಯ.
ಆದರಿಚ್ಛೆಯನರಿದು ಹೊಡೆಯದಿರ್ದಡೆ,
ಅದರಚ್ಚು ಮುರಿಯಿತ್ತು, ಗುಹೇಶ್ವರಾ.
ವಚನ 0692
ಕಾಲೇ ಕಂಬಗಳಾದವೆನ್ನ, ದೇಹವೇ ದೇಗುಲವಾಯಿತ್ತಯ್ಯಾ !
ಎನ್ನ ನಾಲಗೆಯೆ ಗಂಟೆ, ಶಿರ ಸುವರ್ಣದ ಕಳಸ-ಇದೇನಯ್ಯಾ !
ಸರವೆ ಲಿಂಗಕ್ಕೆ ಸಿಂಹಾಸನವಾಗಿದ್ದಿತ್ತಯ್ಯಾ.
ಗುಹೇಶ್ವರಾ ನಿಮ್ಮ ಪ್ರಾಣಲಿಂಗಪ್ರತಿಷ್ಠೆ,
ಪಲ್ಲಟವಾಗದಂತಿದ್ದೆನಯ್ಯಾ
ವಚನ 0693
ಕಾಳರಕ್ಕಸಿಗೊಬ್ಬ ಮಗ ಹುಟ್ಟಿ,
ಕಾಯದ ರಾಶಿಯ ಮೊಗೆವುತ್ತ ಸುರಿವುತ್ತಲಿದ್ದನಯ್ಯಾ !
ಕಾಳರಕ್ಕಸಿಯ ಮೂಗು ಮೊಲೆಯ ಕೊಯ್ದು,
ದೇವಕನ್ನಿಕೆಯ ಮೊರೆಹೊಕ್ಕು,
ಬಾಯ ತುತ್ತೆಲ್ಲವನು ಉಣಲೊಲ್ಲದೆ ಕಾರಿದಡೆ,
ಆತನೆ ಭಕ್ತನೆಂದೆಂಬೆ ಗುಹೇಶ್ವರಾ.
ವಚನ 0694
ಕಿಚ್ಚಿಗೆ ಮೈಹುಗುಳು ಹುಟ್ಟಿತ್ತು,
ಉದಕಕ್ಕೆ ಚಳಿಯಾಗಿ ಸ್ಫಟಿಕ ಗಿರಿಯಲ್ಲಿ ಹಣ್ಣು ಹುಟ್ಟಿತ್ತು !
ಅಟ್ಟಿತ್ತೊಂದು ತಲೆ ಹೋ ! ಹಣ್ಣನದ (ನೆಯ್ದೆ ?) ನುಂಗಿತ್ತು ರೆ !
ಹೆಂಡತಿಯಿಲ್ಲದ ಗಂಡಂಗೆ ಅರುಮಾನಿಸ ಮಕ್ಕಳು.
ಅಖಂಡಿತ ಗುಹೇಶ್ವರಾ ಹಾ ನಿರಾಳರೆ.
ವಚನ 0695
ಕಿಚ್ಚಿನ ಕೆಂಡದಂತೆ ಹೊರೆಯಲ್ಲಿಪ್ಪೆಯಯ್ಯಾ,
ಬೆಂಕಿಯ ಬೆಳಗ ಕಂಡೆ-ಇದು ಕಾರಣ,
ನಿಮ್ಮ ಕಂಡೆ ಪರಮಜ್ಞಾನಿ ಗುಹೇಶ್ವರಾ.
ವಚನ 0696
ಕಿಚ್ಚಿನ ದೇವನು, ಕೆಂಡದ ದೇವನು,
ಮಾರಿಯ ದೇವನು, ಮಸಣದ ದೇವನು,
ತಿರುಕ ಗೊರವನೆಂದು ಅಲ್ಲಲ್ಲಿ ಒಂದೊಂದನಾಡುತ್ತಿಪ್ಪರಯ್ಯಾ.
ನಾ ನಿಮ್ಮ ಪೂಜಿಸಿ ನಷ್ಟಸಂತಾನವಾಗಿ,
ಬಟ್ಟಬಯಲಲ್ಲಿ ಬಿದ್ದು ಕೆಟ್ಟೆನು ಗುಹೇಶ್ವರಾ.
ವಚನ 0697
ಕಿಚ್ಚಿನೊಳಗೆ(ನೊಡನೆ?) ಹೋರಿದ ಹುಳ್ಳಿಯಂತಾದೆನಯ್ಯಾ.
ಬೆಂದ ನುಲಿಯ ಸಂದಿಕ್ಕಿ ಮತ್ತೊಂದ ಮಾಡಬಾರದಯ್ಯಾ.
ಗುಹೇಶ್ವರಾ-ನಿಮ್ಮ ನಿಲವಿನ ಪರಿ ಇಂತುಟಯ್ಯಾ.
ವಚನ 0698
ಕಿಚ್ಚು ಬಯಲೆಂದಡದು ನಿರವಯವಕೆ ಹತ್ತಿ ಹೊತ್ತಿದುದುಂಟೆ ?
ಅರಿವು ನಿಜವೆಂದಡೆ ಅಡಗುವುದಕ್ಕೊಂದು ನಾಮ ಉಂಟು.
ಅಗ್ನಿರೂಪಿನಲ್ಲಿ ಹುಟ್ಟಿ ಆ ರೂಪ ದಗ್ಧವ ಮಾಡಿದಲ್ಲದೆ
ತನ್ನ ಹೊದ್ದಿಗೆ ಕೆಡದು.
ಆ ಉಭಯವನರಿವನ್ನಬರ ಕೈಯ ಕುರುಹು,
ಅರಿವನ ಜ್ಞಾನ ಪರಿಪೂರ್ಣವಾಗಿರಬೇಕು.
ನಮ್ಮ ಗುಹೇಶ್ವರಲಿಂಗದಲ್ಲಿ ಆ ಉಭಯವ ತಿಳಿವನ್ನಬರ
ತನ್ನ ಹಿಂಗಿರಬೇಕು ಕಾಣಾ, ಎಲೆ ಅಂಬಿಗರ ಚೌಡಯ್ಯ.
ವಚನ 0699
ಕಿರಿಯರಾದಡೇನು ? ಹಿರಿಯರಾದಡೇನು ?
ಅರಿವಿಂಗೆ ಹಿರಿದು ಕಿರಿದುಂಟೆ ?
ಆದಿ ಅನಾದಿ ಇಲ್ಲದಂದು,
ಅಜಾಂಡ ಬ್ರಹ್ಮಾಂಡ ಕೋಟಿಗಳುದಯವಾಗದಂದು
ಗುಹೇಶ್ವರಲಿಂಗದಲ್ಲಿ ನೀನೊಬ್ಬನೆ ಮಹಾಜ್ಞಾನಿ ಎಂಬುದು
ಕಾಣಬಂದಿತ್ತು ಕಾಣಾ ಚೆನ್ನಬಸವಣ್ಣಾ.
ವಚನ 0700
ಕೀರ್ತಿವಾರ್ತೆಗೆ ಮಾಡುವಾತ ಭಕ್ತನಲ್ಲ.
ಪರರ ಬೋದಿಸಿಕೊಂಡುಂಬಾತ ಜಂಗಮವಲ್ಲ.
ತ್ರಿಸಂಧ್ಯಾಕಾಲವೆಂದು ಪ್ರಸಾದವನಿಕ್ಕುವಾತ ಗುರುವಲ್ಲ.
ತ್ರಿಸಂಧ್ಯಾಕಾಲವೆಂದು ಪ್ರಸಾದವ ಕೊಂಬಾತ ಶಿಷ್ಯನಲ್ಲ.
ಪರಗಮನವಿರಹಿತ ಜಂಗಮ, ಕಾಲಕರ್ಮವಿರಹಿತ ಪ್ರಸಾದಿ,
ಪ್ರಸಾದವ ಇಕ್ಕಿಯೂ ಇಕ್ಕದಾತ ಗುರು, ಕೊಂಡೂ ಕೊಳ್ಳದಾತ ಶಿಷ್ಯ.
ಆ ಭಕ್ತನಲ್ಲಿಯೆ ನಿಕ್ಷೇಪಿಸಿ ನಿರ್ಗಮನಿಯಾಗಿ ಹೋದಾತ ಜಂಗಮ.
ಆ ಜಂಗಮಕ್ಕೆ ಅರ್ಥಪ್ರಾಣಾಬಿಮಾನವಿಡಿದು ಮಾಡುವಾತ ಭಕ್ತ-
ಇಂತೀ ಚತುರ್ವಿಧದನುವನು, ಗುಹೇಶ್ವರಲಿಂಗದನುವನು
ವೇಷಧಾರಿಗಳೆತ್ತ ಬಲ್ಲರು ಬಸವಣ್ಣನೊಬ್ಬನೆ ಬಲ್ಲನಲ್ಲದೆ.
ವಚನ 0701
ಕುಂಡಲಿಗನ ಕೀಟದಂತೆ, ಮೈ ಮಣ್ಣಾಗದಂತೆ
ಇದ್ದೆಯಲ್ಲಾ ಬಸವಣ್ಣಾ.
ಜಲದೊಳಗಣ ತಾವರೆಯಂತೆ ಹೊದ್ದಿಯೂ ಹೊದ್ದದಂತೆ
ಇದ್ದೆಯಲ್ಲಾ ಬಸವಣ್ಣಾ.
ಜಲದಿಂದಲಾದ ಮೌಕ್ತಿಕದಂತೆ,
ಜಲವು ತಾನಾಗದಂತೆ ಇದ್ದೆಯಲ್ಲಾ ಬಸವಣ್ಣಾ.
ಗುಹೇಶ್ವರಲಿಂಗದ ಆಣತಿವಿಡಿದು,
ತನುಗುಣ ಮತ್ತರಾಗಿದ್ದ ಐಶ್ವರ್ಯಾಂಧಕರ
ಮತವನೇನ ಮಾಡಬಂದೆಯಯ್ಯಾ, ಸಂಗನ ಬಸವಣ್ಣಾ ?
ವಚನ 0702
ಕುರುಹುಳ್ಳನ್ನಕ್ಕ ಸಮಯದ ಹಂಗು,
ಅರಿದಹೆನೆಂಬನ್ನಕ್ಕ ಆತ್ಮದ ಹಂಗು,ಅಲ್ಲ’
ಅಹುದು’ ಎಂಬನ್ನಕ್ಕ ಎಲ್ಲರ ಹಂಗು,
ಗುಹೇಶ್ವರನೆಂಬನ್ನಕ್ಕ
ಲಿಂಗದ ಹಂಗು ಬೇಕು ಘಟ್ಟಿವಾಳಣ್ಣಾ.
ವಚನ 0703
ಕುರೂಪಿ ಸುರೂಪಿಯ ನೆನೆದಡೆ ಸುರೂಪಿಯಪ್ಪನೆ ?
ಆ ಸುರೂಪಿ ಕುರೂಪಿಯ ನೆನೆದಡೆ ಕುರೂಪಿಯಪ್ಪನೆ ?
ಧನವುಳ್ಳವರ ನೆನೆದಡೆ ದರಿದ್ರ (ದಾರಿದ್ರ್ಯ ?) ಹೋಹುದೆ ?
ಪುರಾತರನು ನೆನೆದು ಕೃತಾರ್ಥರಾದೆವೆಂಬರು,
ತಮ್ಮಲ್ಲಿ ಭಕ್ತಿ ನಿಷ್ಠೆಯಿಲ್ಲದವರ ಕಂಡಡೆ ಮೆಚ್ಚನು ಗುಹೇಶ್ವರನು.
ವಚನ 0704
ಕುಲದಲದಿಕನು ಹೋಗಿ ಹೊಲೆಗೇರಿಯಲ್ಲಿ ಮನೆಯ ಕಟ್ಟಿದಡೆ,
ಕುಲ ಕೆಡದಿಪ್ಪ ಈ ಪರಿಯ ನೋಡಾ !
ಆತನ ಕುಲದವರೆಲ್ಲರು ಮುಖವ ನೋಡಲೊಲ್ಲದಡೆ
ಕುಲವುಳ್ಳವರೆಲ್ಲರೂ ಕೈವಿಡಿದರು.
ಕುಲಗೆಟ್ಟವನೆಂದು ತಿಳಿದು ವಿಚಾರಿಸಲು,
ಹೊಲೆಗೆಟ್ಟು ಹೋಯಿತ್ತು ಕಾಣಾ ಗುಹೇಶ್ವರಾ.
ವಚನ 0705
ಕುಲದೊಳಗೆ ಹುಟ್ಟಿ ಕುಲವ ಬೆರಸದೆ
ತಮ್ಮ ನಿಲವ ಬಲಿದಿಪ್ಪವರು ಇನ್ನಾರು ಹೇಳಾ ?
ಹಬ್ಬಿದ ಮೂರು ಬೆಟ್ಟಕ್ಕೆ ತನ್ನ ಮನವ ಹಬ್ಬಲೀಯದೆ
ಲಿಂಗ ಜಂಗಮಕ್ಕೆ ಸವೆಸಿ ಸ್ವಯಲಿಂಗವಪ್ಪರಿನ್ನಾರು ಹೇಳಾ ?
ಸ್ವಯೋ ಲಿಂಗ ಸ್ವಯೋ ಶರಣ ಸ್ವಯೋ ಭೋಗವೆಂದುದಾಗಿ,
ಗುಹೇಶ್ವರಾ-ನಿಮ್ಮ ಶರಣ ಸಂಗನಬಸವಣ್ಣಂಗೆ
ನಮೋ ನಮೋ ಎಂಬೆನು.
ವಚನ 0706
ಕುಲಮದ ಛಲಮದ ವಿದ್ಯಾಮದದವರ ತೋರದಿರಾ.
ಅವರ ಅರೂಢಪದವಿಯನೆನಗೆ ತೋರದಿರಾ.
ಅವರ ಗರುವ ಗಂಬಿರವನೆನಗೆ ತೋರದಿರಾ.
ಶಮೆದಮೆಯುಳಿದು ದಶಮುಖ ನಿಂದು
ಲಿಂಗದಲ್ಲಿ ಲೀಯವಾದವರನಲ್ಲದೆ, ಎನಗೆ ತೋರದಿರಾ ಗುಹೇಶ್ವರಾ.
ವಚನ 0707
ಕೂಡಲಿಲ್ಲದ ಅಗಲಲಿಲ್ಲದ ಘನವ,
ಕೂಡುವ ಪರಿ ಎಂತವ್ವಾ ?
ಗುಹೇಶ್ವರಲಿಂಗವ ಬೇರೆ ಮಾಡಿ
ಬೆರಸಬಾರದು ಕೇಳಾ ಕೆಳದಿ.
ವಚನ 0708
ಕೂರಹ ಮುಟ್ಟದೆ, ಕೂದಲು ಹರಿಯದೆ, ಬೋಳಾಗಬೇಕು.
ಕಾಯ ಬೋಳೋ ? ಕಪಾಲ ಬೋಳೊ ?
ಹುಟ್ಟುವುದು ಬೋಳೊ ? ಹುಟ್ಟದೆ ಹೋಹುದು ಬೋಳೊ ?
ಗುಹೇಶ್ವರಾ.
ವಚನ 0709
ಕೂರ್ಮನ ಶಿಶುವಿನ ಸ್ನೇಹದಂತಿರಬೇಡಾ ಸಂಗನಬಸವಣ್ಣಾ ?
ಕಾಕಪಿಕಸಂಧಾನದಂತಿರಬೇಡಾ ಸಂಗನಬಸವಣ್ಣಾ ?
ಕೊಂಬ ತಪ್ಪದೆ ಹಾಯ್ವ ಕಪಿಯಂತಿರಬೇಡಾ ಸಂಗನಬಸವಣ್ಣಾ ?
ನೀರು ಕ್ಷೀರವ ಭೇದಿಸಿ ತೆಗೆವ ಹಂಸೆಯಂತಿರಬೇಡಾ ಸಂಗನಬಸವಣ್ಣಾ ?
ಗುಹೇಶ್ವರಲಿಂಗದಲ್ಲಿ ಅವಧಾನ ತಪ್ಪಿ,
ಮರಳಿ ಅರಸಿದಡುಂಟೆ ಹೇಳಾ ಸಂಗನಬಸವಣ್ಣಾ ?
ವಚನ 0710
ಕೃತಯುಗದಲ್ಲಿ ನಾನು ಭಕ್ತಿ ಕಾರಣ
ಸ್ಥೂಲಕಾಯನೆಂಬ ಗಣೇಶ್ವರನಾಗಿರ್ದೆನಯ್ಯಾ.
ತ್ರೇತಾಯುಗದಲ್ಲಿ ನಾನು ಭಕ್ತಿ ಕಾರಣ
ಶೂನ್ಯಕಾಯನೆಂಬ ಗಣೇಶ್ವರನಾಗಿರ್ದೆನಯ್ಯಾ.
ದ್ವಾಪರದಲ್ಲಿ ನಾನು ಭಕ್ತಿ ಕಾರಣ
ಅನಿಮಿಷನೆಂಬ ಗಣೇಶ್ವರನಾಗಿರ್ದೆನಯ್ಯಾ.
ಕಲಿಯುಗದಲ್ಲಿ ನಾನು ಭಕ್ತಿ ಕಾರಣ
ಅಲ್ಲಮಪ್ರಭುವೆಂಬ ಗಣೇಶ್ವರ (ಜಂಗಮ ?)ನಾಗಿರ್ದೆ
ಕಾಣಾ ಗುಹೇಶ್ವರಾ.
ವಚನ 0711
ಕೃತಯುಗದಲ್ಲಿ ನೀನು
ಸ್ಕಂದನೆಂಬ ಗಣೇಶ್ವರನಾಗಿರ್ದುದ ಬಲ್ಲೆ ನಾನು.
ತ್ರೇತಾಯುಗದಲ್ಲಿ ನೀನು
ನೀಲಲೋಹಿತನೆಂಬ ಗಣೇಶ್ವರನಾಗಿರ್ದುದ ಬಲ್ಲೆ ನಾನು.
ದ್ವಾಪರದಲ್ಲಿ ನೀನು
ವೃಷಭನೆಂಬ ಗಣೇಶ್ವರನಾಗಿರ್ದುದ ಬಲ್ಲೆ ನಾನು.
ಕಲಿಯುಗದಲ್ಲಿ ನೀನು
ಬಸವನೆಂಬ ಗಣೇಶ್ವರನಾಗಿ, ಸರ್ವಾಚಾರ ಸಂಪನ್ನನಾಗಿ,
ಭಕ್ತಿಜ್ಞಾನವ ಕಂದೆರವೆಯ ಮಾಡಿ,
ಶಿವಾಚಾರದ ಘನದ ಬೆಳವಿಗೆಯ ಮಾಡಿ,
ಶಿವಭಕ್ತಿಯ ಧ್ವಜವನೆತ್ತಿಸಿ ಮರ್ತ್ಯಲೋಕದೊಳಗೆ
ಹರಹಿದ ಭೇದವ ಭೇದಿಸಿ ನೋಡಿ ಆನು ಅರಿದೆ.
ಗುಹೇಶ್ವರ ಸಾಕ್ಷಿಯಾಗಿ ನಿನ್ನ ಮಹಾತ್ಮೆಗೆ
ನಮೋ ನಮೋ ಎನುತಿರ್ದೆನು ಕಾಣಾ ಸಂಗನಬಸವಣ್ಣಾ.
ವಚನ 0712
ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ
ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ.
ದ್ವಾಪರದಲ್ಲಿ ಶ್ರೀಗುರು ಶಿಷ್ಯಂಗೆ ಝಂಕಿಸಿ ಬುದ್ಧಿಯ ಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ.
ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ
ಗುಹೇಶ್ವರಾ ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾನು ಬೆರಗಾದೆನು.
ವಚನ 0713
ಕೃತ್ಯಕ್ಕೆ ಬಾರದ ಲಿಂಗವ ಕೃತ್ಯಕ್ಕೆ ತಂದವರಾರೊ ?
ವಾಙ್ಮನಕ್ಕಗೋಚರ ಲಿಂಗ, ಬೊಟ್ಟಿಡಲೆಡೆದೆರಹಿಲ್ಲದ ಲಿಂಗ !
ಪರಾತ್ಪರಗುರು ಕೊಟ್ಟ, ಶಿಷ್ಯ ತೆಗೆದುಕೊಂಡ ಎಂಬ
ರಚ್ಚೆಯ ಭಂಡರ ನೋಡಾ ಗುಹೇಶ್ವರಾ.
ವಚನ 0714
ಕೆಂಡದ ಗಿರಿಯ ಅರಗಿನ ಬಾಣದಲೆಚ್ಚಡೆ
ಮರಳಿ ಆ ಬಾಣವನರಸಲುಂಟೆ ?
ಮಂಜಿನ ಶಿವಾಲಯಕ್ಕೆ ಬಿಸಿಲ ಕಳಸವುಂಟೆ ?
ಗುಹೇಶ್ವರನೆಂಬ ಲಿಂಗವನರಿದ ಬಳಿಕ
ಮತ್ತೆ ಮರಳಿ ನೆನೆಯಲುಂಟೆ ?
ವಚನ 0715
ಕೆಂಡದ ಗಿರಿಯ ಮೇಲೊಂದು, ಅರಗಿನ ಕಂಬವಿದ್ದಿತ್ತು ನೋಡಯ್ಯಾ.
ಅರಗಿನ ಕಂಬದ ಮೇಲೆ ಹಂಸೆಯಿದ್ದಿತ್ತು.
ಕಂಭ ಬೆಂದಿತ್ತು ಹಂಸೆ ಹಾರಿತ್ತು ಗುಹೇಶ್ವರಾ
ವಚನ 0716
ಕೆಂಡದ ಮಳೆ ಕರೆವಲ್ಲಿ ಉದಕವಾಗಿರಬೇಕು.
ಜಲಪ್ರಳಯವಾದಲ್ಲಿ ವಾಯುವಿನಂತಿರಬೇಕು.
ಮಹಾಪ್ರಳಯವಾದಲ್ಲಿ ಆಕಾಶದಂತಿರಬೇಕು.
ಜಗತ್ಪ್ರಳಯವಾದಲ್ಲಿ ತನ್ನ ತಾ ಬಿಡಬೇಕು,
ಗುಹೇಶ್ವರನೆಂಬ ಲಿಂಗ ತಾನಾಗಿರಬೇಕು.
ವಚನ 0717
ಕೆಟ್ಟ ಒಡವೆಯನರಸ ಹೋಗಿ,
ಆ ಕೆಟ್ಟ ಒಡವೆಯ ಕಂಡ ಬಳಿಕ, ಆರನೂ ಕೇಳಲಿಲ್ಲ ಹೇಳಲಿಲ್ಲ,
ಅದು ಮುನ್ನಲಿದ್ದ ಹಾಂಗೆ ಆಯಿತ್ತು.
ಅಂತು ಶರಣನು ಆ ಪರಿಯಲೆ ತನ್ನ ಸ್ವಯಾನುಭಾವದಿಂದ
ತನ್ನ ನಿಜವ ತಾ ಕಂಡು ಸೈವೆರಗಾಗಿರಲು,
ಅದನ್ನು ಅಜ್ಞಾನಿಗಳು ಬಲ್ಲರೆ ಗುಹೇಶ್ವರಾ ?
ವಚನ 0718
ಕೆಟ್ಟುದನರಸ ಹೋಗಿ ತಾನೆ ಕೆಟ್ಟಿತ್ತು.
ಹೇಳಲೆಂತೂ ಬಾರದು ಕೇಳಲೆಂತೂ ಬಾರದು.
ಎಂತಿರ್ದುದಂತೆ !
ಸಹಜ ಸ್ವಾನುಭಾವದ ಸಮ್ಯಕ್ ಜ್ಞಾನವ, ಅಜ್ಞಾನಿ ಬಲ್ಲನೆ
ಗುಹೇಶ್ವರಾ ?
ವಚನ 0719
ಕೆರೆ ದೇಗುಲಂಗಳೆಲ್ಲವು ಹಿಂದಣ ಅಡಿವಜ್ಜೆಗೆ ಒಳಗು.
ಕರ್ಮಕಾಂಡ ಯೋಗಂಗಳೆಲ್ಲವು ಭವದ ತೆಕ್ಕೆಗೆ ಒಳಗು.
ಹಿಂದಣ ಮುಂದಣ ಸಂದನಳಿದು
ಗುಹೇಶ್ವರಲಿಂಗದಲ್ಲಿ ಸಲೆ ಸಂದಿರಬೇಕು ಸಿದ್ಧರಾಮಯ್ಯಾ.
ವಚನ 0720
ಕೆರೆಯ ಕಟ್ಟಿಸುವ ಒಡ್ಡನ ಪ್ರತಾಪವನೇನೆಂಬೆನಯ್ಯಾ.
ನೆಲನನಗಿದು ಜಲವ ಮೊಗೆದಿಹೆನೆಂಬ ಬಳಲಿಕೆಯ ನೋಡಾ.
ಒಂದು ಕಲ್ಲನು ಕಡಿದು ಮತ್ತೊಂದು ಕಲ್ಲಿಗೆ
ಭೋಗವ ಕೊಟ್ಟಿಹೆನೆಂಬ ಅಜ್ಞಾನವಿದೇನೊ ?
ಗುಹೇಶ್ವರಾ ಈ ಇರವಿನ ಪರಿಗೆ ಬೆರಗಾದೆನು !
ವಚನ 0721
ಕೆರೆಯಲುಂಡು ತೊರೆಯ ಹೊಗಳುವರು.
ಅತ್ಯುತ್ಕಟದ ಪರಬ್ರಹ್ಮವನೆ ನುಡಿವರು.
ಸಹಜ ಪಿನಾಕಿಯ ಬಲೆಯಲ್ಲಿ ಸಿಲುಕಿ
ಭವವ ಹರಿಯಲರಿಯರು.
ರುದ್ರನ ಛತ್ರವನುಂಡು ಇಲ್ಲವೆಯ ನುಡಿವ ಹಿರಿಯರಿಗೆ
ಮಹದ ಮಾತೇಕೋ ಗುಹೇಶ್ವರಾ?
ವಚನ 0722
ಕೆಲಬರು ಕಂಡೆವೆಂಬರು, ಕೆಲಬರು ಕಾಣೆವೆಂಬರು.
ತಾರಾಮಂಡಲವೆ ? ಸೂರ್ಯಮಂಡಲವೆ ?
ಗುಹೇಶ್ವರನಿಪ್ಪುದು ಚಂದ್ರಗಿರಿಪಟ್ಟಣವು !
ವಚನ 0723
ಕೆಳಗೇಳು ಭುವನಂಗಳಿಲ್ಲದಂದು, ಮೇಲೇಳು ಭುವನಂಗಳಿಲ್ಲದಂದು,-
ಅಂದು ಆದ ಗುರು, ಅಂದು ಆದ ಲಿಂಗ, ಅಂದು ಆದ ಜಂಗಮ,
ಅಂದು ಆದ ಪ್ರಸಾದ, ಅಂದು ಆದ ಪಾದೋದಕ.
ಇಂದಿನದಾವುದೂ ಹೊಸತಿಲ್ಲಯ್ಯಾ.
ಶಶಿಧರಂಗೆ ವೃಷಭನಾಗಿದ್ದಂದು
ಗುಹೇಶ್ವರನ ಶರಣ ಸಂಗನಬಸವಣ್ಣನಂದೆ ಸಾಹಿತ್ಯನು.
ವಚನ 0724
ಕೆಳಗೇಳು ಲೋಕಂಗಳಿಲ್ಲದ ಮುನ್ನ, ಮೇಲೇಳು ಲೋಕಂಗಳಿಲ್ಲದ ಮುನ್ನ
ಸಹಸ್ರ (ಸಮಸ್ತ ?) ಬ್ರಹ್ಮಾಂಡಗಳಿಲ್ಲದ ಮುನ್ನ, ಅಲ್ಲಿಂದತ್ತತ್ತ;
ಬಸವಣ್ಣಾ ನೀನು ಲಿಂಗಭಕ್ತ, ಜಂಗಮಪ್ರಾಣಿ !
ಶಶಿಧರನ ಶರಣಂಗೆ ವೃಷಧರ ಸ್ವಾಯತವಾಗಿ,
ನಮ್ಮ ಗುಹೇಶ್ವರಲಿಂಗಕ್ಕೆ ಸಂಗನಬಸವಣ್ಣನೆ ಭಕ್ತನೆಂದರಿದು
ನಾನು ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
ವಚನ 0725
ಕೈಯಲ್ಲಿ ಕಟ್ಟುವರು ಕೊರಳಲ್ಲಿ ಕಟ್ಟುವರು,
ಮೈಯಲ್ಲಿ ಕಟ್ಟುವರು ಮಂಡೆಯಲ್ಲಿ ಕಟ್ಟುವರು,
ಮನದಲ್ಲಿ ಲಿಂಗವ ಕಟ್ಟರಾಗಿ !
ಆದ್ಯರು ಹೋದರೆಂದು ವಾಯಕ್ಕೆ ಸಾವರು.
ಸಾವುದು ವಿಚಾರವೆ ಗುಹೇಶ್ವರಾ ?
ವಚನ 0726
ಕೈಯಲ್ಲಿ ಕರಸ್ಥಲ ಮನದಲ್ಲಿ ಪರಸ್ಥಲ,
ತನುವೆಲ್ಲ ಹುಸಿಸ್ಥಲ-ಶರಣನೆಂತೆಂಬೆ?
ಮಾತಿನಂತುಟಲ್ಲ ಕ್ರಿಯಾಸಮ (ಕ್ರಿಯಾಗಮ?) ಸ್ಥಲ.
ಊತ್ಪತ್ಯ-ಸ್ಥಿತಿ-ಲಯರಹಿತ ನಿಜಸ್ಥಲ,
ಗುಹೇಶ್ವರನೆಂಬ ಲಿಂಗೈಕ್ಯವೈಕ್ಯ.
ವಚನ 0727
ಕೈಯಲ್ಲಿ ಡಾಣೆ ಮನದಲ್ಲಿ ಕ್ರೋಧ ವಚನದಲ್ಲಿ ಕಿಂಕಲ,
ಲಿಂಗದ ವಾರ್ತೆ ನಿನಗೇಕೆ ಹೇಳಾ ಬಸವಾ ?
ಜಂಗಮವೆ ಲಿಂಗವೆಂಬ ಶಬ್ದಸಂದೇಹಸೂತಕಿ ನೀನು,
ಸಜ್ಜನ ಸದ್ಭಕ್ತಿಯ ಮಾತು ನಿನಗೇಕೆ ಹೇಳಾ ಬಸವಾ ?
ಕಬ್ಬುನದ ರೂಪು ಪರುಷವ ಮುಟ್ಟಿದಡೆ ಹೊನ್ನಾಯಿತ್ತಲ್ಲದೆ
ಪರುಷವಪ್ಪುದೆ ಹೇಳಾ ಬಸವಾ ?
ಗುಹೇಶ್ವರನೆಂಬ ಪರುಷದ ಪುತ್ಥಳಿಯನರಿಯಬಲ್ಲಡೆ
ನಿನ್ನ ನೀನೆ ತಿಳಿದು ನೋಡಾ ಸಂಗನಬಸವಣ್ಣಾ.
ವಚನ 0728
ಕೈಲಾಸಕ್ಕೆ ಹೋದವರೆಲ್ಲ ಕೈಸೆರೆಯಾದರು.
ಲಿಂಗದಲ್ಲಿ ಲೀಯವಾದವರೆಲ್ಲ ಬಂಧನಕ್ಕೊಳಗಾದರು.
ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯದವರೆಲ್ಲ
ಎಡೆಯಾಡುತ್ತಿದ್ದರು.
ಗುಹೇಶ್ವರಾ ನಿಮ್ಮ ಶರಣ ಸಂಗನಬಸವಣ್ಣ
ಜಂಗಮಪ್ರಸಾದಿಯಾದನಾಗಿ ಸ್ವಯಲಿಂಗವಾದ !
ವಚನ 0729
ಕೈಲಾಸವೆಂಬುದೊಂದು ಬೆಳ್ಳಿಯ ಬೆಟ್ಟ,
ಅಲ್ಲಿದ್ದಾತ ರುದ್ರನೊಬ್ಬ.
ಆ ಬೆಟ್ಟಕ್ಕೂ ಆ ರುದ್ರಂಗೆಯೂ
ಪ್ರಳಯವುಂಟೆಂಬುದ
ಗುಹೇಶ್ವರಾ ನಿಮ್ಮ ಶರಣ ಬಲ್ಲನು
ವಚನ 0730
ಕೊಂಕಣ ದ್ವೀಪದಲ್ಲಿ ಒಂದು ಕಪಿ ಹುಟ್ಟಿತ್ತು
ತಪವ ಮಾಡುವ ಸಪ್ತ ಋಷಿಯರ ನುಂಗಿತ್ತು
ನವನಾಥಸಿದ್ಧರ ತೊತ್ತಳದುಳಿಯಿತ್ತು,
ಅರುಹಿರಿಯರ ತಲೆಯ ಮೆಟ್ಟಿ ಅರಿಯಿತ್ತು.
ಕಪಿಜನ ವೈರಿ ಸರ್ಪನ ಹೇಳಿಗೆಯಲ್ಲಿ ನಿದ್ರೆಗೆಯ್ಯಿತ್ತು.
ಯೋಗಿಗಳ ಭೋಗಿಗಳ ಕೊಲ್ಲದ ಕೊಲೆಯ ಕೊಂದಿತ್ತು.
ಕಾಮನ ಅರೆಯ ಮೆಟ್ಟಿ ಕೂಗಿತ್ತು,
ಕೋಳಿಯ ಹಂಜರನನಾಸಿಕ ಬೆಕ್ಕ ನುಂಗಿತ್ತು,
ಕೋಳಿಯ ಅರ್ಕಜದ ಅರಿವನರಿವ ಅರುಹಿರಿಯರ ಮಿಕ್ಕು ;
ಭಾವಸೊಕ್ಕನುಂಡು ಕೊಕ್ಕರನಾಯಿತ್ತು.
ಹಿಂದಿರ್ದ ಕೋಳಿಯ ಕೊಕ್ಕರನ ಕಪಿಯ, ಭಾವವ ಅರಿಯದಿರ್ದ ಕಾರಣ-
ಕೆದರಿದ ಚರಣ ಉಡುಗಿ, ಮರಣವರಿಯದೆ, ಕರಣದೇಹತ್ವವಿಲ್ಲದೆ,
ಲಿಂಗೈಕ್ಯ-ತಾನೆ ಪ್ರಾಣ ಪುರುಷ.
ಇದನರಿದು ನುಂಗಿದಾತನೆ ಪರಮಶಿವಯೋಗಿ-
ಭಂಗವರಿಯದ, ಜನನದ ಹೊಲಬರಿಯದ, ಭಾವದ ಜೀವವರಿಯದ !
-ಇದು ಕಾರಣ ನಿಮ್ಮ ಶರಣನು ಲಿಂಗಸ್ವಯಶಕ್ತಿಶರಣ ತಾನೆ.
ವಚನ 0731
ಕೊಂಡ ಆಹಾರದ ರಸವ ಕಟ್ಟಿ,
ಯೋಗಿಗಳಾದೆವೆಂಬ
ಭಂಡರು ನೀವು ಕೇಳಿರೊ.
ಜೋಡು ದೇಹದ ಮಲಿನವ ಕಟ್ಟಿ ಮಾಯೆಯ ಗೆದ್ದಿಹೆವೆಂಬರು.
ಬಿಂದುವಿನ ಸಂಚವನಿವರೆತ್ತ ಬಲ್ಲರು ?
ಮನದ ಮಲಿನವೆ ಮಾಯೆ, ಮನದ ಸಂಚವೆ ಬಿಂದು.
ಇಂತಪ್ಪ ಬಿಂದುವ ಕಟ್ಟಿ ಮಾಯೆಯ ಗೆಲಲರಿಯದವರು
ಅವರೆತ್ತಣ ಯೋಗಿಗಳು ಗುಹೇಶ್ವರಾ ?
ವಚನ 0732
ಕೊಟ್ಟ ಕುದುರೆಯನೇರಲರಿಯದೆ
ಮತ್ತೊಂದು ಕುದುರೆಯನೇರ ಬಯಸುವರು,
ವೀರರೂ ಅಲ್ಲ, ದಿರರೂ ಅಲ್ಲ, ಇದು ಕಾರಣ-
ನೆರೆ ಮೂರು ಲೋಕವೆಲ್ಲವೂ ಹಲ್ಲಣವ ಹೊತ್ತುಕೊಂಡು,
ತೊಳಲುತ್ತ ಇದ್ದಾರೆ.
ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರು ?
ವಚನ 0733
ಕೋಣನ ಕೊಂಬಿನ ತುದಿಯಲ್ಲಿ, ಏಳುನೂರೆಪ್ಪತ್ತು ಸೇದೆಯ ಬಾವಿ.
ಬಾವಿಯೊಳಗೊಂದು ಬಗರಿಗೆ, ಬಗರಿಗೆಯೊಳಗೊಬ್ಬ ಸೂಳೆ ನೋಡಯ್ಯಾ.
ಆ ಸೂಳೆಯ ಕೊರಳಲ್ಲಿ ಏಳುನೂರೆಪ್ಪತ್ತು
ಆನೆ ನೇರಿತ್ತ ಕಂಡೆ ಗುಹೇಶ್ವರಾ.
ವಚನ 0734
ಕೋಣನನೂ ಕುದುರೆಯನೂ; ಹಾವನೂ ಹದ್ದನೂ;
ಮೊಲನನೂ ನಾಯನೂ, ಇಲಿಯನೂ ಬೆಕ್ಕನೂ,
ಹುಲಿಯನೂ ಹುಲ್ಲೆಯನೂ-ಮೇಳೈಸುವಂತೆ
ಮೇಳವಿಲ್ಲದವನ ಒಕ್ಕತನ, ಅಳಿಯ ಬಾಳುವೆ,
ಕಾಡಬೆಕ್ಕಿಂಗೆ ತುಯ್ಯಲನಿಕ್ಕುವಂತೆ !-ಕೇಳು ಗುಹೇಶ್ವರಾ
ನಿರಾಳ ಬೋಳಿಂಗೆ ತೊಂಡಿಲ ಮುಡಿಸುವಂತೆ
ವಚನ 0735
ಕೋಪ-ತಾಪವ ಬಿಟ್ಟು ಭ್ರಾಂತಿಭ್ರಮೆಯಂ ಬಿಟ್ಟು
ಜಂಗಮವಾಗಬೇಕು ಕಾಣಿರೆ ಮರುಳುಗಳಿರಾ
ಇಂತೀ ಕಡುಲೋಭದ ರುಚಿ ಹಿಂಗಿ
ಜಂಗಮವಾದಲ್ಲದೆ, ಭವ ಹಿಂಗದು ಕಾಣಾ ಗುಹೇಶ್ವರ.
ವಚನ 0736
ಕೋಪತಾಪವೆಂಬುದು ಅರಿವಿನೊಳಗೆ,
ಭಕ್ತಿ ಯುಕ್ತಿ ಎಂಬುದು ನಿತ್ಯದೊಳಗೆ.
ಭಾವದ ಬಗೆಗೆ ಬಣ್ಣವಿಟ್ಟುಕೊಂಡಡೆ
ನಿರ್ಭಾವಿಕಂಗೆ ಅದು ಸಹಜವೆ ?
ಬಂದ ಶರಣರ ನಿಲವನರಿದು,
ಸಂದುಸಂಶಯವಳಿದು ನಂಬದಿದ್ದಡೆ,
ಹಿಂದು ಮುಂದಾಗಿ ಹೋಹನು ಕಾಣಾ
ನಮ್ಮ ಗುಹೇಶ್ವರಲಿಂಗವು.
ವಚನ 0737
ಕ್ರಿಯಾದೀಕ್ಷೆ ಮಂತ್ರದೀಕ್ಷೆ ಹೀನರಿಗೆ
ಜಂಗಮ ಪಾದೋದಕ ಪ್ರಸಾದವ ಕೊಡುವನೊಬ್ಬ ಜಂಗಮದ್ರೋಹಿ ನೋಡ !
ಗುಹೇಶ್ವರಲಿಂಗವೆ !
ವಚನ 0738
ಕ್ರಿಯಾಮಥನವಿಲ್ಲದೆ ಕಾಣಬಂದುದೆ ಇಕ್ಷುವಿನೊಳಗಣ ಮಧುರ ?
ಕ್ರಿಯಾಮಥನವಿಲ್ಲದೆ ಕಾಣಬಂದುದೆ ತಿಲದೊಳಗಣ ತೈಲ ?
ಕ್ರಿಯಾಮಥನವಿಲ್ಲದೆ ಕಾಣಬಂದುದೆ ಕ್ಷೀರದೊಳಗಣ ಘೃತ ?
ಕ್ರಿಯಾಮಥನವಿಲ್ಲದೆ ಕಾಣಬಂದುದೆ ಕಾಷ್ಠದೊಳಗಣ ಅಗ್ನಿ ?
ಇದು ಕಾರಣ,
ನಮ್ಮ ಗುಹೇಶ್ವರಲಿಂಗವ ತನ್ನೊಳರಿದೆನೆಂಬ ಮಹಂತಂಗೆ
ಸತ್ಕ್ರಿಯಾಚರಣೆಯೆ ಸಾಧನ ಕಾಣಿಭೋ.
ವಚನ 0739
ಕ್ಷೀರಕ್ಕೆ ತವರಾಜವ ಹೊಯ್ದಲ್ಲಿ, ಬೇರೆ ಲೇಸು ಕಷ್ಟವನರಸುವರೆ ?
ಅಂಗಕ್ಕೆ ತಿಮಿರವಾದಲ್ಲಿ ಅಂಗುಲ ಮುಟ್ಟಿ ತಿಮಿರದ ಅಂಗವ ಕೆಡಿಸಿದಡೆ,
ಅಂಗಕ್ಕೆ ಮಿಥ್ಯವುಂಟೆ ?
ಎನ್ನಂಗವು ತಾನಾದ ಕಾರಣ, `ನೀನು’ ಎಂಬ ನಾಮ ಬೇರಿಲ್ಲ
ಗುಹೇಶ್ವರಲಿಂಗವು ನೀನಾದ ಕಾರಣ.
ವಚನ 0740
ಕ್ಷೀರಸಾಗರದೊಳಗಿರ್ದ ಹಂಸೆಗೆ ಹಾಲ ಬಯಸಲುಂಟೆ ?
ಪುಷ್ಪದೊಳಗಿರ್ದ ತುಂಬಿಗೆ ಪರಿಮಳವನರಸಲುಂಟೆ ?
ತಾವು ಲಿಂಗದೊಳಗಿರ್ದು,
ಬೇರೆ ಇತರ ಕಾಮ್ಯಾರ್ಥದೊಳಗಿರ್ಪ
ಭ್ರಾಂತರನೇನೆಂಬೆನಯ್ಯಾ ಗುಹೇಶ್ವರಾ.
ವಚನ 0741
ಕ್ಷೀರಸಾಗರದೊಳಗಿರ್ದು ಆಕಳ ಚಿಂತೆಯೇಕೆ ?
ಮೇರುಮಂದಿರದೊಳಗಿರ್ದು ಜರಗ ತೊಳೆವ ಚಿಂತೆಯೇಕೆ ?
ಶ್ರೀಗುರುವಿನೊಳಗಿರ್ದು ತತ್ವವಿದ್ಯೆಯ ಚಿಂತೆಯೇಕೆ ?
ಪ್ರಸಾದದೊಳಗಿರ್ದು ಮುಕ್ತಿಯ ಚಿಂತೆಯೇಕೆ ?
ಕರಸ್ಥಲಕೆ ಲಿಂಗ ಬಂದ ಬಳಿಕ
ಇನ್ನಾವ ಚಿಂತೆ ಹೇಳಾ, ಗುಹೇಶ್ವರಾ.
ವಚನ 0742
ಖಂಡಾಖಂಡ ಸಂಯೋಗವಿಲ್ಲದ ಅಖಂಡಿತನ ನಿಲವು,
ತನ್ನಲ್ಲಿ ಅಲ್ಲದೆ ಮತ್ತೆಲ್ಲಿಯೂ ಇಲ್ಲ.
ಬಯಲ ಹಿರಿಯರು ಬಯಲನೆ ಅರಸುವರು.
ಅಲ್ಲಿ ಉಂಟೆ ಹೇಳಾ ಗುಹೇಶ್ವರಾ?
ವಚನ 0743
ಖಂಡಿತವಿಲ್ಲಾಗಿ ಸರ್ವಾಂಗವೆಲ್ಲವೂ ನಾಸಿಕವಾಯಿತ್ತು.
ತಾನಲ್ಲದೆ ಅನ್ಯ ವಾಸನೆ ಇಲ್ಲವಾಗಿ,
ಅಲ್ಲಿಯೆ ಮಹತ್ತಪ್ಪ ಪೃಥ್ವಿಯಡಗಿತು.
ಖಂಡಿತವಿಲ್ಲಾಗಿ ಸರ್ವಾಂಗವೆಲ್ಲವೂ ಜಿಹ್ವೆಯಾಯಿತ್ತು.
ತಾನಲ್ಲದೆ ಅನ್ಯ ರುಚಿ ಇಲ್ಲವಾಗಿ,
ಅಲ್ಲಿಯೆ ಮಹತ್ತಪ್ಪ ಅಪ್ಪು ಅಡಗಿತ್ತು.
ಖಂಡಿತವಿಲ್ಲಾಗಿ ಸರ್ವಾಂಗವೆಲ್ಲವೂ ನೇತ್ರವಾಯಿತ್ತು.
ತಾನಲ್ಲದೆ ಅನ್ಯ ರೂಪಿಲ್ಲವಾಗಿ,
ಅಲ್ಲಿಯೆ ಮಹತ್ತಪ್ಪ ಅಗ್ನಿ ಅಡಗಿತ್ತು.
ಖಂಡಿತವಿಲ್ಲಾಗಿ ಸರ್ವಾಂಗವೆಲ್ಲವೂ ತ್ವಕ್ಕಾಯಿತ್ತು.
ತಾನಲ್ಲದೆ ಅನ್ಯ ಸೋಂಕಿಲ್ಲವಾಗಿ,
ಅಲ್ಲಿಯೆ ಮಹತ್ತಪ್ಪ ವಾಯು ಅಡಗಿತ್ತು.
ಖಂಡಿತವಿಲ್ಲಾಗಿ ಸರ್ವಾಂಗವೆಲ್ಲವೂ ಶ್ರೋತ್ರವಾಯಿತ್ತು.
ತಾನಲ್ಲದೆ ಅನ್ಯ ಶಬ್ದವಿಲ್ಲಾಗಿ,
ಅಲ್ಲಿಯೆ ಮಹತ್ತಪ್ಪ ಆಕಾಶವಡಗಿತ್ತು.
ಇಂತು ಪಂಚಭೂತಂಗಳಡಗಿದಡೆ,
ಪಂಚಬ್ರಹ್ಮಮಯವಾಯಿತ್ತು.
ಅದರೊಳಗೆ ಜಗತ್ತಡಗಿದ ಭೇದವದೆ.
ಪಂಚವರ್ಣಾತೀತವಾಗಿ ಮಹತ್ತನೊಳಕೊಂಡ
ಶರಣನ ಭೇದವನು ಏನೆಂದುಪಮಿಸುವೆನಯ್ಯಾ ಗುಹೇಶ್ವರಾ.
ವಚನ 0744
ಖೇಚರಪವನದಂತೆ ಜಾತಿಯೋಗಿಯ ನಿಲುವು !
ಮಾತಿನೊಳು ಧಾತು ನುಂಗಿ ಉಗುಳದಿನ್ನೆಂತೊ ?
ಭೂಚಕ್ರವಳಯವನು ಆಚಾರ್ಯ ರಚಿಸಿದ.
ಗ್ರಾಮವೆಲ್ಲವ ಸುಟ್ಟು, ನೇಮ ನಾಮವ ನುಂಗಿ
ಗ್ರಾಮದ ಪ್ರಭುವನೆ ನುಂಗಿ,
`ಗುಹೇಶ್ವರ ಗುಹೇಶ್ವರ’ ಎನುತ ನಿರ್ವಯಲಾಗಿತ್ತು.
ವಚನ 0745
ಖೇಚರರಾಗಲಿ ಭೂಚರರಾಗಲಿ ಲಾಂಛನಧಾರಿಯಾಗಲಿ,
ಮರಣವಾರಿಗೂ ಮನ್ನಣೆಯಿಲ್ಲ!
ಸನಕ ಸನಂದಾದಿಗಳಿಗೂ ಮರಣ ಮನ್ನಣೆಯಿಲ್ಲ.
ಇದು ಕಾರಣ – ಗುಹೇಶ್ವರಾ ನಿಮ್ಮ ಶರಣರು
ಕಾಲನ ಬಾರಿಗೆ ಕಲ್ಪಿತರಾಗರು !
ವಚನ 0746
ಗಂಗಾದೇವಿ ಮುಂಡೆಯಾದಳು,
ಗಾರೀದೇವಿ ಓಲೆಯ ಕಳೆದಳು.
ಚಂದ್ರಸೂರ್ಯರಿಬ್ಬರೂ ನೀರಿಳಿದರು.
ವಾಯುದೇವ ವಿಮಾನವ ಹೊತ್ತ,
ವಾಸುದೇವ ತಲೆಗೂಳ್ಳಿಯನಿರಿದ.
ಅಲ್ಲಿಂದತ್ತ ಗುಹೇಶ್ವರ ಸತ್ತನೆಂಬ ಸುದ್ದಿ !
ವಚನ 0747
ಗಂಗಾದೇವಿಯ ಹುಳಿಯ ಕಾಸಿ, ಗೌರಿದೇವಿಯ ಕೂಳನಟ್ಟು,
ಭಕ್ತನ ಬಾಡನಟ್ಟು, ದೇವನ ಸಾಸವೆಗಲಸಿ,
ಬ್ರಹ್ಮನಡ್ಡಣಿಗೆ, ವಿಷ್ಣು ಪರಿಯಾಣ, ರುದ್ರನೋಗರ,
ಈಶ್ವರ ಮೇಲೋಗರ, ಸದಾಶಿವ ತುಪ್ಪ;
ಉಣಲಿಕ್ಕಿ ಕೈಕಾಲು ಮುರಿಯಿತ್ತು ಗುಹೇಶ್ವರಾ.
ವಚನ 0748
ಗಂಗೆಯ ತಡಿಯಲೊಂದು ಐವಾಗಿಲಪಟ್ಟಣದ ಕಾಲುವಳ್ಳಿಯಲ್ಲಿ
ಹುಟ್ಟಿ ಬೆಳೆದೆ ನಾನು.
ತರುವಕ್ಕಳ ಕೂಡಿ ನೀರಾಟವ ಹೊಕ್ಕು,
ಉಟ್ಟುವ ಹೋಗಾಡಿಹಳೆಂದು
ಬಾಯ ಬಾಯ ಕುಟ್ಟಿ,
ಬ್ರಹ್ಮ ಪಾಶವೆಂಬ ಕಿರಿಗೆಯನುಗಿದುಕೊಂಡಳು ನಮ್ಮವ್ವೆ.
ಇಂತಪ್ಪ ತಾಯಿತಂದೆಯರ ಕೂಡೆ ಮುನಿದು ಹೋಗಿ,
ಗುಹೇಶ್ವರನಲ್ಲಯ್ಯನ ಮೊರೆಹೊಕ್ಕೆ.
ಇನ್ನು ಮರಳಿ ಬಂದು ಆ ಕಿರಿಗೆಯನುಟ್ಟೆನಾದಡೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ.
ವಚನ 0749
ಗಂಡಂಗಿಂದ ಹೆಂಡತಿ ಮುನ್ನವೆ ಹುಟ್ಟಿ,
ಗಂಡಂಗಿಂದ ಕಿರಿಯಳಾದಳು
ಆ ಹೆಂಡತಿಯೆ ಒಡಹುಟ್ಟಿದಳಾದಳೆಂಬುದ ಕೇಳಿ,
ಆ ಗಂಡ ಸಂಗವ ಮಾಡಿದಡೆ
ಇಬ್ಬರಿಗೊಂದು ಮಗು ಹುಟ್ಟಿತ್ತಲ್ಲಾ!
ಆ ಹುಟ್ಟಿದ ಮಗುವ ತಾಯಿ ಮುದ್ದಾಡಿಸಿದಡೆ
ತಾಯ ತಕ್ಕೈಸಿತ್ತಿದೇನು ಹೇಳಾ?
ತಾಯಿಯೆದ್ದು ಪತಿಭಕ್ತಿಯ ಮಾಡಿತ್ತ ಕಂಡು
ಗುಹೇಶ್ವರಲಿಂಗಕ್ಕೆ ಭಕ್ತಿ ಪರಿಣಾಮವಾಯಿತ್ತು.
ವಚನ 0750
ಗಗನ ಮಂಡಳದ ಸೂಕ್ಷ್ಮನಾಳದಲ್ಲಿ
`ಸೋಹಂ ಸೋಹಂ’ ಎನುತ್ತಿರ್ದತ್ತದೊಂದು ಬಿಂದು,
ಅಮೃತದ ವಾರಿದಿಯ ದಣಿಯುಂಡ ತೃಪ್ತಿಯಿಂದ.
ಗುಹೇಶ್ವರಾ ನಿಂದ(ನಿಮ್ಮ?)ಲ್ಲಿಯೆ ಎನಗೆ ನಿವಾಸವಾಯಿತ್ತು.
ವಚನ 0751
ಗಗನಕ್ಕೆ ನಿಚ್ಚಣಿಕೆಯನಿಕ್ಕಿದವರುಂಟೆ ?
ವಾಯುವಿನ ಸ್ಥಳವನರಿದವರುಂಟೆ ?
ಅಂಬುದಿಯ ಗುಣ್ಪವನಳೆದವರುಂಟೆ ?
ಲಿಂಗದ ಪ್ರಮಾಣ ಹೇಳಬಹುದೆ ?
ಚಂದ್ರಮಂಡಲ ತಾರಾಮಂಡಲ ಸೂರ್ಯಮಂಡಲ ಇತ್ತಿತ್ತಲಯ್ಯಾ !
ಪಂಚಮುಖವಾಗಿ, ನೊಸಲಕಣ್ಣು ಚತುಭರ್ುಜ ಅಣುಮಾತ್ರವೆ ?
ಒಬ್ಬ ಶರಣನಾಗಿ ಗುಹೇಶ್ವರನೆಂಬ ಘನನೆಲೆಯ ಬಲ್ಲಡೆ
ಅಲ್ಲಿಂದತ್ತ ಶರಣು ಶರಣು.
ವಚನ 0752
ಗಗನದ ಮೇಘಂಗಳು ಸುರಿದಲ್ಲಿ ಒಂದು ಹಿರಿಯ ಕೆರೆ ತುಂಬಿತ್ತು.
ಆ ಕೆರೆಗೆ ಏರಿ ಮೂರು;
ಅಲ್ಲಿ ಒಳಗೆ ಹತ್ತು ಬಾವಿ ಹೊರಗೆ ಐದು ಬಾವಿ !
ಆ ಏರಿಯೊಳಗೆ ಒಂಬತ್ತು ತೂಬನುಚ್ಚಿದಡೆ
ಆಕಾಶವೆಲ್ಲ ಜಲಮಯವಾಗಿತ್ತು !
ತುಂಬಿದ ಜಲವನುಂಡುಂಡು ಬಂದು
ಅಂಜದೆ ನುಡಿವ ಭಂಡಯೋಗಿಗಳನೇನೆಂಬೆ ಗುಹೇಶ್ವರಾ
ವಚನ 0753
ಗಗನದ ಮೇಘಂಗಳೆಲ್ಲ ಸುರಿದು[ವು] ಭೂಮಿಯ ಮೇಲೆ.
ಭೂಮಿ ದಣಿಯುಂಡು ಸಸಿಗಳೆಲ್ಲಾ ಬೆಳೆದವು.
ಬಹುವಿಕಾರದಿಂದ ಬೆಳೆದ ಸಸಿ[ಯ], ವಿಕಾರದಿಂದ ಗ್ರಹಿಸುವ
ಕಾಮವಿಕಾರಿಗಳು, ಲಿಂಗವನೆತ್ತ ಬಲ್ಲರು ಗುಹೇಶ್ವರಾ.
ವಚನ 0754
ಗಗನದ ಮೇಲೊಂದು ಅಭಿನವ ಗಿಳಿ ಹುಟ್ಟಿ
ಸಯ ಸಂಭ್ರಮದಲ್ಲಿ ಮನೆಯ ಮಾಡಿತ್ತು
ಬ್ರಹ್ಮನಾ ಗಿಳಿಗೆ ಹಂಜರವಾದ, ವಿಷ್ಣು ಆ ಗಿಳಿಗೆ ಕೊರೆವ ಕೂಳಾದ
ರುದ್ರನಾ ಗಿಳಿಗೆ ತಾ ಕೋಳಾದ (ಕೋಳುವೋದ ?)
ಇಂತೀ ಮೂವರ ಮುಂದಣ ಕಂದನ ನುಂಗಿ
ದೃಷ್ಟನಾಮ ನಷ್ಟವಾಯಿತ್ತು-ಇದೆಂತೊ ಗುಹೇಶ್ವರಾ ?
ವಚನ 0755
ಗಗನದ ಮೇಲೊಂದು ಸರೋವರ;
ಆ ಜಲದಲ್ಲಿ ಮುಖವ ತೊಳೆದು ಹೂವ ಕೊಯ್ವವರೆಲ್ಲರೂ;
ದೇವರಿಗೆ ಮುಖಮಜ್ಜನವನೆರೆದು, ಪೂಜಿಸಿ ಹೊಡವಂಟಡೆ
ಒಮ್ಮೆ ನಾಯಕನರಕ ತಪ್ಪದಲ್ಲಾ!
ದೇವಲೋಕದ ಪ್ರಮಥರ ಲಜ್ಜೆಯನೇನ ಹೇಳುವೆ ಗುಹೇಶ್ವರಾ
ವಚನ 0756
ಗಗನಪವನದ ಮೇಲೆ ಉದಯಮುಖದನುಭಾವ,
ಸದಮದದ ಗಜವ ನಿಲಿಸುವ ಮಾವತಿಗ ಬಂದ.
ಅಷ್ಟದಳಕಮಲದೊಳು ಸೃಷ್ಟಿಯಂಕುರ ಭಜನೆ;
ಮೆಟ್ಟಿ ನಿಂದಾತ ಪರಮಯೋಗಿಯಾಗದೆ ಮಾಣ !
ಬಯಲ ಬಣ್ಣವ ತುಂಬಿ, ನೆಳಲ ಶೃಂಗಾರವ ಮಾಡಿದ
ಗುಹೇಶ್ವರನ ಶರಣ ಚನ್ನಬಸವಣ್ಣಂಗೆ ಶರಣೆನುತಿರ್ದೆನು.
ವಚನ 0757
ಗಗನವೆ ಗುಂಡಿಗೆ ಆಕಾಶವೆ ಅಗ್ಘವಣಿ,
ಚಂದ್ರ, ಸೂರ್ಯರಿಬ್ಬರು ಪುಷ್ಪ, ಬ್ರಹ್ಮ ಧೂಪ, ವಿಷ್ಣು ದೀಪ,
ರುದ್ರನೋಗರ !-ಸಯಧಾನ ನೋಡಾ !
ಗುಹೇಶ್ವರಲಿಂಗಕ್ಕೆ ಪೂಜೆ ನೋಡಾ !
ವಚನ 0758
ಗತಿಗೆಟ್ಟೆ ಧೃತಿಗೆಟ್ಟೆ ಮತಿಗೆಟ್ಟೆ ನಾನಯ್ಯಾ.
ನಡೆವಡೆ ಶಕ್ತಿಯಿಲ್ಲ ನುಡಿವಡೆ ಜಿಹ್ವೆಯಿಲ್ಲ.
ಇದಿರಲೊಬ್ಬರ ಉಪಚಾರ ಸೇರದು ನೋಡಾ ಎಮಗೆ.
ಬಂದ ಬರವನರಿದು ನಿಂದ ನಿಲವನರಿದು ಕೂಡಬಲ್ಲ ಶರಣಂಗೆ,
ಬೇರೊಂದು ಏಕಾಂತವೆಂಬ ಸಂದೇಹ ಉಂಟೆ ?
ತೆರಹಿಲ್ಲದ ಘನವನೊಳಕೊಂಡ ಬಳಿಕ
ಬರಲೆಡೆಯುಂಟೆ ನಮ್ಮ ಗುಹೇಶ್ವರಲಿಂಗಕ್ಕೆ ?
ವಚನ 0759
ಗತಿವಿರಹಿತನೇನೆಂಬೆ, ಎಂತೆಂಬೆ ?
ಅಘಟಿತಘಟಿತ ಅಖಂಡಿತಮಹಿಮನನೇನೆಂಬೆನೇನೆಂಬೆ ?
ಆದಿಯಿಂದತ್ತತ್ತ ಗುಹೇಶ್ವರ !
ಅಲ್ಲಯ್ಯನ ಸುಳುಹು ಜಗಕ್ಕೆ ಪಾವನ.
ವಚನ 0760
ಗಿಡುವಿನ ಮೇಲಣ ತುಂಬಿ ಕೂಡೆ ವಿಕಸಿತವಾಯಿತ್ತು,
ತುಂಬಿ ನೋಡಾ !
ಆತುಮ ತುಂಬಿ ತುಂಬಿ ಪರಮಾತುಮ ತುಂಬಿ ತುಂಬಿ ನೋಡಾ!
ಗುಹೇಶ್ವರನೆಂಬ ಲಿಂಗಕ್ಕೆ ಎರಗಿ ನಿಬ್ಬೆರಗಾಯಿತ್ತು
ತುಂಬಿ ನೋಡಾ !
ವಚನ 0761
ಗಿಡುವಿಲ್ಲದ ಪುಷ್ಪಕ್ಕೆ ಕುಸುಮವಿಲ್ಲದ ಪರಿಮಳವಿದ್ದಿತ್ತಯ್ಯಾ !ಕ್ಷಂ ಕ್ಷಂ’ ಎನುತ್ತಿದ್ದಿತಯ್ಯಾ.
ಹಂ ಹಂ’ ಎನುತ್ತಿದ್ದಿತಯ್ಯಾ.
ಬಯಲುವಿಡಿದು ಹೋದಡೆ,
ಪಿಂಡಕ್ಕೆ ಹೆಣನ ಸುಡುವರಿಲ್ಲ ಗುಹೇಶ್ವರಾ !
ವಚನ 0762
ಗಿರಿಗಳ ಗುಹೆಗಳ ಕಂದರದಲ್ಲಿ, ನೆಲಹೊಲನ ಮುಟ್ಟದೆ ಇಪ್ಪೆ ದೇವಾ !
ಮನಕ್ಕೆ ಅಗಮ್ಯ ಅಗೋಚರನಾಗಿ, ಅಲ್ಲಲ್ಲಿ ಎಲ್ಲೆಲ್ಲಿಯೂ ನೀನೆ ಇಪ್ಪೆಯಯ್ಯಾ !
ಗುಹೇಶ್ವರಾ ನಿಮ್ಮನು ಅಗಲಕ್ಕೆ ಹರಿವರಿದು ಕಂಡೆ ನಾನು.
ವಚನ 0763
ಗುದ ಲಿಂಗ ನಾಬಿಕಮಲದಿಂದ ಮೇಲೆ ಷಡಂಗುಲವನೊತ್ತಿದಡೆ
ಕಣ್ಣಿಲ್ಲದೆ ಕಾಣಬಹುದು ಲಿಂಗಪ್ರಕಾಶವ,
ಕಿವಿಯಿಲ್ಲದೆ ಕೇಳಬಹುದು ಮಹಾನಾದ ಸುನಾದವ
ಕಂಡು ಕೇಳಿದ ಬಳಿಕ ಮನ ನಂಬದಿದ್ದಡೆ
ಮಕ್ಕಳಾಟಿಕೆ ತಪ್ಪದು ಗುಹೇಶ್ವರಾ.
ವಚನ 0764
ಗುದಸ್ಥಾನದಲ್ಲಿ ಆಧಾರಚಕ್ರ, ಪೃಥ್ವಿಯೆಂಬ ಮಹಾಭೂತ,
ಚತುಃಕೋಣೆ ಚೌದಳ ಪದ್ಮ, ಅಲ್ಲಿ ಇಹ ಅಕ್ಷರ ನಾಲ್ಕು-ವ, ಶ, ಷ, ಸ,
ಅದರ ವರ್ಣ ಸುವರ್ಣ, ಅದಕ್ಕೆ ಅದಿದೇವತೆ ದಾಕ್ಷಾಯಣಿ.ಲಿಂಗಸ್ಥಾನದಲ್ಲಿ ಸ್ವಾಧಿಷ್ಠಾನಚಕ್ರ, ಅಪ್ಪುವೆಂಬ ಮಹಾಭೂತ,
ಧನುರ್ಗತಿ, ಷಡುದಳ ಪದ್ಮ, ಅಲ್ಲಿ ಇಹ ಅಕ್ಷರವಾರು-ಬ, ಭ, ಮ, ಯ, ರ, ಲ,
ಅದರ ವರ್ಣ ಪಚ್ಚೆಯ ವರ್ಣ, ಅದಕ್ಕೆ ಅದಿದೇವತೆ ಬಹ್ಮನು.ನಾಬಿಸ್ಥಾನದಲ್ಲಿ ಮಣಿಪೂರಕವೆಂಬಚಕ್ರ, ತೇಜವೆಂಬ ಮಹಾಭೂತ,
ತ್ರಿಕೋಣೆ, ದಶದಳ ಪದ್ಮ ಅಲ್ಲಿ ಇಹ ಅಕ್ಷರ ಹತ್ತು-
ಡ, ಢ, ಣ, ತ, ಥ, ದ, ಧ, ನ, ಪ, ಫ,
ಅದರ ವರ್ಣ ಕೃಷ್ಣವರ್ಣ, ಅದಕ್ಕೆ ಅದಿದೇವತೆ ವಿಷ್ಣು.ಹೃದಯಸ್ಥಾನದಲ್ಲಿ ಅನಾಹತಚಕ್ರ, ವಾಯುವೆಂಬ ಮಹಾಭೂತ,
ಷಟ್ಕೋಣೆ, ದ್ವಾದಶಗಳ ಪದ್ಮ ಅಲ್ಲಿ ಇಹ ಅಕ್ಷರ ಹನ್ನೆರಡು-
ಕ, ಖ, ಗ, ಘ, ಙ, ಚ, ಛ, ಜ, ಝ, ಞ, ಟ,ಠ,
ಅದರ ವರ್ಣ ಕುಂಕುಮವರ್ಣ, ಅದಕ್ಕೆ ಅದಿದೇವತೆ ಮಹೇಶ್ವರನು.
ಕಂಠಸ್ಥಾನದಲ್ಲಿ ವಿಶುದ್ಧಿಚಕ್ರ, ಆಕಾಶವೆಂಬ ಮಹಾಭೂತ,
ವರ್ತುಲಾಕಾರ, ಷೋಡಶದಳ ಪದ್ಮ ಅಲ್ಲಿ ಇಹ ಅಕ್ಷರ ಹದಿನಾರು-
ಅ, ಆ, ಇ, ಈ, ಉ, ಊ, ಋ, ಋೂ,ಎ,ಏ, ಐ, ಓ, ಔ, ಅಂ, ಅಃ,
ಅದರ ವರ್ಣ ಶ್ವೇತವರ್ಣ, ಅದಕ್ಕೆ ಅದಿದೇವತೆ ಸದಾಶಿವನು.
ಭ್ರೂಮಧ್ಯಸ್ಥಾನದಲ್ಲಿ ಆಜ್ಞಾಚಕ್ರ, ಮನವೆಂಬ ಮಹಾಭೂತ,
ತಮಂಧಾಕಾರ, ದ್ವಿದಳಪದ್ಮ ಅಲ್ಲಿ ಇಹ ಅಕ್ಷರವೆರಡು- ಹಂ, ಕ್ಷಂ,
ಅದರ ವರ್ಣ ಮಾಣಿಕ್ಯವರ್ಣ, ಅದಕ್ಕೆ ಅದಿದೇವತೆ ಶ್ರೀಗುರು.
ಉನ್ಮನೀಜ್ಯೋತಿ ಬ್ರಹ್ಮರಂಧ್ರದ ಮೇಲೆ. ಸಹಸ್ರದಳ ಪದ್ಮ,
ಅಲ್ಲಿ ಅಮೃತವಿಹುದು ಅಲ್ಲಿ `ಓಂ’ ಕಾರಸ್ವರೂಪವಾಗಿ
ಗುಹೇಶ್ವರಲಿಂಗವು ಸದಾಸನ್ನಹಿತನು.
ವಚನ 0765
ಗುರು ಶಿಷ್ಯರಿಬ್ಬರ ಮಧ್ಯದಲ್ಲಿ ಒಂದು ಮಗು ಹುಟ್ಟಿತ್ತು ನೋಡಾ !
ಗುರುವಿಂಗೆ ಗುರುವಾದ ಪರಿಯೆಂತೊ ?
ಶಿಷ್ಯಂಗೆ ಶಿಷ್ಯನಾದ ಪರಿಯೆಂತೊ ?
ಆದಿಯ ಲಿಂಗವ ಸಾಧ್ಯವ ಮಾಡಿ ತೋರಿದ
ಗುಹೇಶ್ವರನ ಚನ್ನಬಸವಣ್ಣಂಗೆ
ಶರಣೆಂದು ಬದುಕಿದೆನು ಕಾಣಾ ಸಂಗನಬಸವಣ್ಣಾ.
ವಚನ 0766
ಗುರು, ಶಿಷ್ಯ ಸಂಬಂಧವನರಸಲೆಂದು ಹೋದಡೆ,
ತಾನೆ ಗುರುವಾದ ತಾನೆ ಶಿಷ್ಯನಾದ, ತಾನೆ ಲಿಂಗವಾದ.
ಗುಹೇಶ್ವರಾ-ನಿಮ್ಮ ಶರಣನ ಕಾಯದ ಕೈಯಲ್ಲಿ ಲಿಂಗವ ಕೊಟ್ಟಡೆ,
ಭಾವ ಬತ್ತಲೆಯಾಯಿತ್ತು !
ವಚನ 0767
ಗುರುತತ್ವದಲ್ಲಿ ಹುಟ್ಟಿ, ಶಿವತತ್ವದಲ್ಲಿ ಬೆಳೆದು
ಪರತತ್ವದಲ್ಲಿ ಮಗ್ನವಾದ ಶರಣಂಗೆ
ಕಾಯವಿಡಿದಡೇನು ? ಕಾಯವಳಿದು ನಿರ್ವಯಲಾದಡೇನು ?
ಕಾಯಸಮಾದಿ ಕರಣಸಮಾದಿ ಭಾವಸಮಾದಿಯಾದ ಬಳಿಕ,
ಗುಹೇಶ್ವರಲಿಂಗದಲ್ಲಿ ಬಯಲಭ್ರಮೆಯ ಕಳೆದು
ಸುಜ್ಞಾನಸಮಾದಿಯನೆಯ್ದಬಲ್ಲಡೆ
ಅದೇ ನಿಜಸಮಾದಿ ಕೇಳಾ ಸಿದ್ಧರಾಮಯ್ಯಾ.
ವಚನ 0768
ಗುರುವ ನೆನೆದೆಹೆನೆಂದು ನೆನೆಯುತ್ತಿದ್ದಡೆ
ನೆನೆವ ಮನವು ತಾನು ಗುರುವಾಯಿತು ನೋಡಾ.
ಆಹಾ ! ಮಹಾದೇವ,
ಇನ್ನಾವುದರಿಂದ ? ಆವುದನು ? ಏನೆಂದು ನೆನೆವೆ ?
ಮನವೆ ಗುರುವಾದ ಕಾರಣ,-
ಮನವೆ ಗುರುವಾಗಿ ನೆನಹನಿಂಬುಗೊಂಡನು
ಗುಹೇಶ್ವರಲಿಂಗ ಚೋದ್ಯಚರಿತ್ರನು !
ವಚನ 0769
ಗುರುವಿಂಗೂ ಶಿಷ್ಯಂಗೂ,-
ಆವುದು ದೂರ ? ಆವುದು ಸಾರೆ ? ಎಂಬುದನು, ಆರುಬಲ್ಲರು ?
ಗುರುವೆ ಶಿಷ್ಯನಾದ ತನ್ನ ವಿನೋದಕ್ಕೆ, ಶಿಷ್ಯನೆ ಗುರುವಾದ ತನ್ನ ವಿನೋದಕ್ಕೆ.
ಕರ್ಮವೆಂಬ ಕೌಟಿಲ್ಯ ಎಡೆವೊಕ್ಕ ಕಾರಣ, ಬಿನ್ನವಾಗಿ ಇದ್ದಿತ್ತೆಂದಡೆ,
ಅದು ನಿಶ್ಚಯವಹುದೆ ?
ಆದಿ ಅನಾದಿಯಿಂದತ್ತತ್ತ ಮುನ್ನಲಾದ
ಪರತತ್ವಮಂ ತಿಳಿದು ನೋಡಲು,
ನೀನೆ ಸ್ವಯಂ ಜ್ಯೋತಿಪ್ರಕಾಶನೆಂದರಿಯಲು,
ನಿನಗೆ ನೀನೆ ಗುರುವಲ್ಲದೆ ನಿನ್ನಿಂದದಿಕವಪ್ಪ ಗುರುವುಂಟೆ ?
ಇದು ಕಾರಣ ಗುಹೇಶ್ವರಲಿಂಗವು ತಾನೆ ಎಂಬುದನು
ತನ್ನಿಂದ ತಾನೆ ಅರಿಯಬೇಕು ನೋಡಾ.
ವಚನ 0770
ಗುರುವಿಡಿದ ಅರಿವು ಅರಿವಲ್ಲ,
ಲಿಂಗವಿಡಿದ ಅರಿವು ಅರಿವಲ್ಲ.
ಇಲ್ಲದ ಗುರು ಇಲ್ಲದ ಲಿಂಗ !
ಕಲ್ಪಿತಕ್ಕೆ ಅರಿವಹುದೆ ?
ತನ್ನಿಂದ ತಾನರಿವುದೆ ಅರಿವು ಗುಹೇಶ್ವರಾ.
ವಚನ 0771
ಗುರುವಿದು ಲಿಂಗವಿದು ಜಂಗಮವಿದು ಎಂಬ ಭೇದವ
ಏಕವ ಮಾಡಿ ನಿನಗೆ ತೋರಿದವರಾರು ಹೇಳಾ ?
ಆದಿ ಅನಾದಿಯನು ಒಂದು ಮಾಡುವ,
ಭಾವ ನಿರ್ಭಾವವನು ಅರುಹಿದವರಾರು ಹೇಳಾ ?
ದೀಕ್ಷೆ ಶಿಕ್ಷೆ ಸ್ವಾನುಭಾವದ ಪರಿಯ ತೋರಿ
ನಿಜಪದದಲ್ಲಿ ನಿಲಿಸಿದವರಾದು ಹೇಳಾ ?
ಗುಹೇಶ್ವರಲಿಂಗದಲ್ಲಿ
ನಿನ್ನ ಆಯತವ ಹೇಳಾ ಮಡಿವಾಳ ಮಾಚಯ್ಯಾ ?
ವಚನ 0772
ಗುರುವಿನ ಪರಿ ವಿಪರೀತವಾಯಿತ್ತಯ್ಯಾ,
ಭ್ರಮರ-ಕೀಟ ನ್ಯಾಯದಂತಾಯಿತ್ತು.
ಗುರು ತನ್ನ ನೆನೆವನ್ನಬರ ಎನ್ನನಾ ಗುರುವ ಮಾಡಿದನು.
ಇನ್ನು ಶಿಷ್ಯನಾಗಿ ಶ್ರೀಗುರುವ ಪೂಜಿಸುವರಾರು
ಹೇಳಾ ಗುಹೇಶ್ವರಾ ?
ವಚನ 0773
ಗುರುವಿನ ಪ್ರಾಣ ಲಿಂಗದಲ್ಲಿ ಲೀಯವಾದ ಬಳಿಕ
ಆ ಲಿಂಗವೆನ್ನ ಕರಸ್ಥಲಕ್ಕೆ ಬಂದಿತ್ತು ನೋಡಾ.
ಇದ್ದಾನೆ ನೋಡಾ ಎನ್ನ ಗುರು ಅನಿಮಿಷನು ಎನ್ನ ಕರಸ್ಥಲದಲ್ಲಿ.
ಇದ್ದಾನೆ ನೋಡಾ ಎನ್ನ ಗುರು ಅನಿಮಿಷನು ಎನ್ನ ಜ್ಞಾನದೊಳಗೆ.
ಇದ್ದಾನೆ ನೋಡಾ ಎನ್ನ ಗುರುವಿನ ಗುರು ಪರಮಗುರು
ಬಸವಣ್ಣ ಎನ್ನ ಕಂಗಳ ಮುಂದೆ !
ಗುಹೇಶ್ವರ ಸಾಕ್ಷಿಯಾಗಿ,
ಎನ್ನ ಮೇಲೆ ದ್ರೋಹವಿಲ್ಲ ಕಾಣಾ ಚನ್ನಬಸವಣ್ಣಾ !
ವಚನ 0774
ಗುರುವಿನಿಂದಾದ ಕಾಯವ ಬೆರಸಿ, ಗುರುವನರಿಯದಾದೆನಯ್ಯಾ.
ಲಿಂಗದಿಂದಾದ ಜೀವ ಬೆರಸಿ, ಲಿಂಗವನರಿಯದಾದೆನಯ್ಯಾ.
ಜಂಗಮದಿಂದಾದ ಮನವ ಬೆರಸಿ ಜಂಗಮವನರಿಯದಾದೆನಯ್ಯಾ.
ಈ ತ್ರಿವಿಧ ಭಕ್ತಿಯುಕ್ತಿಯ ಅರುಹಿಸಿ ಕೊಟ್ಟ
ಸಂಗನಬಸವಣ್ಣನ ಬೆರಸಿ-ನೀನು ನಾನು
ಬದುಕಿದೆವು ಕಾಣಾ ಗುಹೇಶ್ವರಾ.
ವಚನ 0775
ಗುರುವೆಂದರಿಯರು, ಹಿರಿಯರೆಂದರಿಯರು;
ದೇವರೆಂದರಿಯರು, ಭಕ್ತರೆಂದರಿಯರು.
ಲಿಂಗವೆಂದರಿಯರು, ಜಂಗಮವೆಂದರಿಯರು;
ಬಂದ ಬರವನರಿಯರು ನಿಂದ ನಿಲವನರಿಯರು.
ಶಿವಶರಣರ ನೋಯಿಸುವ ಪಾತಕರನೇನೆಂಬೆ ?
ಗುಹೇಶ್ವರಾ, ನಿಮ್ಮ ಮನ ನೊಂದ ನೋವು ಬರಿದೆ ಹೋಗದು.
ವಚನ 0776
ಗುರುವೆಂಬಾತ ಶಿಷ್ಯನಂತುವನರಿಯ,
ಶಿಷ್ಯನೆಂಬಾತ ಗುರುವನಂತುವನರಿಯ.
ಗುರುವಿನಲ್ಲಿ ಸಮವಿಲ್ಲ, ಶಿಷ್ಯನಲ್ಲಿ ಸಮವಿಲ್ಲ,
ಜಂಗಮ ಜಂಗಮದಲ್ಲಿ ಸಮವಿಲ್ಲ, ಭಕ್ತ ಭಕ್ತನಲ್ಲಿ ಸಮವಿಲ್ಲ.
ಇದು ಕಾರಣ ಕಲಿಯುಗದಲ್ಲಿ ಉಪದೇಶವ ಮಾಡುವ
ಕಾಳುಕುರಿಕೆಯ ಮಕ್ಕಳನೇನೆಂಬೆ ಗುಹೇಶ್ವರಾ.
ವಚನ 0777
ಗುರುವೊಂದೆ ಬಸಿರು, ಲಿಂಗ ಒಂದೆ ಬಸಿರು
ಜಂಗಮ ಒಂದೆ ಬಸಿರು ಪ್ರಸಾದ ಒಂದೆ ಬಸಿರು-
ಇದನಾರಯ್ಯಾ ಅಮಳೋಕ್ಯವ ಮಾಡಿ ತೋರಿದವರು ?
ಇದನಾರಯ್ಯಾ ಪ್ರಜ್ವಲಿತವ ಮಾಡಿ ಬೇರೆ ತೋರಿದವರು ?
ಪೂರ್ವಾಚಾರಿ ಭಕ್ತಿಭಾಂಡಾರಿ ಬಸವಣ್ಣಾ
ಎನಗೆ ನೀನು ಗುಹೇಶ್ವರಲಿಂಗವ ತೋರಿದೆಯಾಗಿ
ಲೋಕಾದಿಲೋಕವೆಲ್ಲವು ಎನಗೆ ಕಿಂಚಿತ್.
ವಚನ 0778
ಗುರುಶಿಷ್ಯಸಂಬಂಧಕ್ಕೆ ಲಿಂಗವ ಧರಿಸುವರಯ್ಯಾ.
ನಿಮ್ಮ ಬಂಧನಕ್ಕಿಕ್ಕಿ ಆಳುವರಯ್ಯಾ.
ಆನು ಕಂಡು ಮರುಗಿ `ಅಕಟಕಟಾ’ ಎಂದೆನಲ್ಲಾ !
ಕೂಗಿಲ್ಲ ಬೊಬ್ಬೆಯಿಲ್ಲ ಹೋದ ಹೊಲಬನರಿಯರು
ದೇವಾ ಗುಹೇಶ್ವರಾ ಬಾಳುದಲೆಯ ಹಿಡಿದೆನು.
ವಚನ 0779
ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಪ್ರಸಾದಸ್ಥಲ-
ಬಸವಣ್ಣನ ಕರಸ್ಥಲದೊಳಗೆ ಅಡಗಿತ್ತಲ್ಲ !
ಇನ್ನಾರಿಗೆ ಭಕ್ತಿಸ್ಥಲ, ಇನ್ನಾರಿಗೆ ಸಾರುವುದೀ ಲಿಂಗಸ್ಥಲ ?
ಗುಹೇಶ್ವರಾ ಸಂಗನಬಸವಣ್ಣನ ಮೊರೆಹೊಕ್ಕು ಬದುಕಿದೆನು.
ವಚನ 0780
ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಪ್ರಸಾದಸ್ಥಲವಡಗಿದ ಕರಸ್ಥಲ
ಇನ್ನಾರಿಗೆ ಸಾರಿತ್ತು ?
ನಿರ್ವಂಚಕತ್ವ ನಿತ್ಯನಿಜಸ್ಥಲವಾದ ಭಕ್ತಿಸ್ಥಲ
ಇನ್ನಾರಿಗೆ ಸಾರಿತ್ತು ಬಸವಣ್ಣಂಗಲ್ಲದೆ ?
ಗುಹೇಶ್ವರಾ ನಿಮ್ಮ ಶರಣ ಸಂಗನಬಸವಣ್ಣನ
ಮೊರೆಯ ಹೊಕ್ಕು ನಾನು ಬದುಕಿದೆನು.
ವಚನ 0781
ಗುರುಸ್ಥಲಭಕ್ತರ ಮೂಲ ಜ್ಞಾನಶಕ್ತಿಗಳಾರು ಗುರುಸ್ವರೂಪವಾದವು.
ಆ ಗುರುಸ್ವರೂಪವನುಳ್ಳ ಶಕ್ತಿಗಳಿಂದ,
ಪರಮಚೈತನ್ಯವೆಂಬ ಮಂಟಪ ಉದಯಿಸಿ
ಸಕಲಲೋಕಕ್ಕೆ ಆದಿಯಾಯಿತ್ತು.
ಆ ಮಂಟಪದ ಮೇಲೆ ನಾನು ಕುಳಿತು ಸಂತೋಷದಿಂದ
ಗುಹೇಶ್ವರಲಿಂಗವ ಕಣ್ಣು ತುಂಬಿ ನೋಡಿದ ನೋಟ
ಸಕಲಭಕ್ತರಿಗೆ ಕೂಟವಾಯಿತ್ತು ಕಾಣಾ ಸಂಗನಬಸವಣ್ಣಾ.
ವಚನ 0782
ಗುರುಸ್ವಾಯತವಾಯಿತ್ತು ಲಿಂಗಸ್ವಾಯತವಾಯಿತ್ತು,
ಜಂಗಮಸ್ವಾಯತವಾಯಿತ್ತು ಬಸವಣ್ಣನಿಂದಲೆಂದಡೆ-
ತನುವಿಲ್ಲದಿರಬೇಕು ಮನವಿಲ್ಲದಿರಬೇಕು ಧನವಿಲ್ಲದಿರಬೇಕು;
ಅರಿವರಿತು ಮರಹು ನಷ್ಟವಾಗಿರಬೇಕು.
ಗುಹೇಶ್ವರಲಿಂಗದಲ್ಲಿ.
ನಿಲರ್ೆಪಿಯಾದಲ್ಲದೆ ಇಲ್ಲ ಕಾಣಾ ಮಡಿವಾಳ ಮಾಚಯ್ಯಾ.
ವಚನ 0783
ಗ್ರಾಮಮಧ್ಯದ ಮೇಲಣ ಮಾಮರ,
ಸೋಮಸೂರ್ಯರ ನುಂಗಿತ್ತಲ್ಲಾ!
ಅಮರಗಣಂಗಳ ನೇಮದ ಮಂತ್ರ,
ಬ್ರಹ್ಮಾಂಡಕೋಟಿಯ ಮೀರಿತ್ತಲ್ಲಾ!
ಸುಮನ ಸುಜ್ಞಾನದೊಳಗಾಡುವ ಮಹಾಮಹಿಮಂಗೆ,
ನಿರ್ಮಳವಾಯಿತ್ತು-ಗುಹೇಶ್ವರಾ.
ವಚನ 0784
ಘಟಪಟದ ಬಿತ್ತಿಯಂತೆ ಬಿನ್ನವೆಂಬ ಹಾಂಗೆ ಇಹುದು.
ತಿಳಿದು ನೋಡಿದಡೆ ಬಿನ್ನವುಂಟೆ ?
ಘಟದೊಳಗಣ ಬಯಲು, ಪಟದೊಳಗಣ ನೂಲು;
ಬಿತ್ತಿಯ ಮೃತ್ತಿಕೆಯಂತೆ ಒಂದಲ್ಲದೆ ಎರಡಿಲ್ಲ.
ದೇಹಿಗಳೊಳಗೆ ಗುಹೇಶ್ವರನಲ್ಲದೆ ಮತ್ತಾರೂ ಇಲ್ಲ.
ವಚನ 0785
ಘಟಸರ್ಪನಂತೆ ಅತಿಶಯವು !
ನಾಬಿಸರವರಸ್ಥಾನಕವೆ ದಳವೆಂಟು !
ನವದಳಕಮಲ ಊಧ್ರ್ವಮಂಡಲದ ಅಮೃತಸೇವನೆಯಾಗಿ,
ಶಿವಯೋಗಿಯಾದೆವೆಂಬರು.
ಗುಹೇಶ್ವರಲಿಂಗವು ಪವನವಿಯೋಗ !
ವಚನ 0786
ಘನಚೈತನ್ಯಜಂಗಮದ ಕಾರಣಾಂಗವಾದಾತ ಗುರು,
ನಿಜಚೈತನ್ಯವನುಳ್ಳ ಜಂಗಮದ ಸೂಕ್ಷ್ಮಾಂಗವಾದಾತ ಗುರು,
ಸುಚೈತನ್ಯಜಂಗಮದ ಚರವಿಗ್ರಹವಾದಾತ ಗುರು,
ಭಕ್ತಾಚಾರವನುಳ್ಳ ಸ್ಥೂಲಾಂಗವಾದಾತ ಗುರು,
ಇಂತೀ ಘನಚೈತನ್ಯ ಜಂಗಮದ ಸ್ವರೂಪನಾದಾತ ಗುರು.
ಅಂತಪ್ಪ ಜಂಗಮದ ಸಂಬಂಧವಾದ ಶ್ರೀಗುರುವಿಂಗೆ,
ನಮೋ ನಮೋ ಎಂಬೆನು ಕಾಣಾ ಗುಹೇಶ್ವರಯ್ಯಾ.
ವಚನ 0787
ಘನತರವಾದ ಚಿತ್ರದ ರೂಪ ಬರೆಯಬಹುದಲ್ಲದೆ,
ಪ್ರಾಣವ ಬರೆಯಬಹುದೆ ಅಯ್ಯಾ?
ದಿವ್ಯಾಗಮಂಗಳು ಹೇಳಿದ ಕ್ರೀಯಲ್ಲಿ ದೀಕ್ಷೆಯ ಮಾಡಬಹುದಲ್ಲದೆ,
ಭಕ್ತಿಯ ಮಾಡಬಹುದೆ ಅಯ್ಯಾ?
ಪ್ರಾಣವಹ ಭಕ್ತಿಯ ತನ್ಮಯ ನೀನು.
ಈ ಗುಣವುಳ್ಳಲ್ಲಿ ನೀನಿಹೆ, ಇಲ್ಲದಲ್ಲಿ ನೀನಿಲ್ಲ ಗುಹೇಶ್ವರಾ.
ವಚನ 0788
ಘನವ ಕಂಡು ಮನ ಅವಗ್ರಾಹಕವಾಯಿತ್ತು.
ಕಂಡು ಕಂಡು ಮನ ಮಹಾಘನವಾಯಿತ್ತು,
ತಲ್ಲೀಯವಾಯಿತ್ತು !-ತದುಗತ ಶಬ್ದ ಮುಗ್ಧವಾದುದನೇನೆಂಬೆ
ಗುಹೇಶ್ವರಾ ?
ವಚನ 0789
ಘನವ ನೆನೆವ ಮನದಲ್ಲಿ ತನುವಿನಾಸೆ ಮುನ್ನಿಲ್ಲ,
ನೆನೆವ ಮನವನೊಳಕೊಂಡ ಘನವನೇನೆಂಬೆನಯ್ಯಾ !
ತನ್ನಲ್ಲಿ ತಾನೆಯಾಗಿತ್ತು !
ನೆನಹಳಿದ ನಿರಾಳವ ಕಂಡು ಬೆರಗಾದೆ !
ಅಂತು ಇಂತು ಎನಲಿಲ್ಲ.
ಚಿಂತೆಯಿಲ್ಲದ ಘನಗುಹೇಶ್ವರಯ್ಯನ ಬೆರಸಲಿಲ್ಲ.
ವಚನ 0790
ಘನವ ಮನ ಕಂಡು ಆದನೊಂದು ಮಾತಿಂಗೆ ತಂದು ನುಡಿದಡೆ
ಅದಕ್ಕದೇ ಕಿರಿದು ನೋಡಾ.
ಅದೇನೂ ಇಲ್ಲದ ನಿಸ್ಸಂಗದ ಸುಖವು ಗುಹೇಶ್ವರ !
ವಚನ 0791
ಘನವಪ್ಪ ಪರಿಯಾಣದಲ್ಲಿ ಒಂದನುವಿನ ಬೋನವನಳವಡಿಸಿ,
ಪರಿಪರಿಯ ಪದಾರ್ಥಂಗಳು ಬಗೆಬಗೆಯಿಂದ ಬರಲು,
ನೋಡದ ಮುನ್ನವೆ ರೂಪವರ್ಪಿತವಾಯಿತ್ತು.
ಮುಟ್ಟದ ಮುನ್ನವೆ ಸೋಂಕರ್ಪಿತವಾಯಿತ್ತು.
ರುಚಿಸದ ಮುನ್ನವೆ ಸುಖವರ್ಪಿತವಾಯಿತ್ತು.
ಅವಧಾರು ಅವಧಾರು ಲಿಂಗವೆ,
ನಿನ್ನ ಮನಕ್ಕೆ ಬಂದ ಪದಾರ್ಥವ ನಿನ್ನ ಘನಕ್ಕೆ ನೀನರ್ಪಿಸಿದಡೆ
ಎನ್ನ ಮನಕ್ಕೆ ಬಂದ ಪದಾರ್ಥವ ನಾ ನಿನಗರ್ಪಿಸುವೆನು.
ಗುಹೇಶ್ವರಾ ನಿನಗೆ ಭರಿತ ಬೋನವನಳವಡಿಸಿ ನೀಡಬಲ್ಲವನಾಗಿ
ಎನಗೂ ನಿನಗೂ ಸಂಗನಬಸವಣ್ಣನ ಪ್ರಸಾದ-
ಆರೋಗಿಸು ದೇವಾ.
ವಚನ 0792
ಘನವಪ್ಪ ಬೋನವನು ಒಂದು ಅನುವಿನ ಪರಿಯಾಣದಲ್ಲಿ ಹಿಡಿದು,
ಗುರುಲಿಂಗವಾರೋಗಣೆಯ ಮಾಡಿ ಮಿಕ್ಕುದು ಪ್ರಸಾದ.
ಈ ತೆರೆದ ಘನವಪ್ಪ ಲಿಂಗವನು,
ಒಂದನುವಿನಲ್ಲಿ ತಂದಿರಿಸಿ,
ಘನವಪ್ಪ ಬೋನವನು ಲಿಂಗವಾರೋಗಣೆಯ ಮಾಡಿ,
ಮಿಕ್ಕುದ ಕೊಳ್ಳಬಲ್ಲಡೆ ಪ್ರಸಾದಿ.-
ಇಂತೀ ತೆರನ ಬೆಸಗೊಳ್ಳಬಲ್ಲಡೆ,
ಎನ್ನ ಬೆಸಗೊಳ್ಳೈ-ಗುಹೇಶ್ವರಾ.
ವಚನ 0793
ಘುಟಿಕಾಸಿದ್ಧರ ಘುಟಿಕೆಯುರುಳಿತ್ತು
ಯಂತ್ರಿಗಳ ಯಂತ್ರ ಎದ್ದು ಹೋಯಿತ್ತು
ಮಂತ್ರಿಗಳ ಮಂತ್ರ ಮರೆತುಹೋಯಿತ್ತು
ಔಷದಿಗರ ಔಷಧವನಾರಡಿಗೊಂಡಿತ್ತು
ಸರ್ವವಿದ್ಯಾಮುಖದ ಜ್ಯೋತಿ ನಂದಿತ್ತು
ಈ ವಿಷಯದ ಲಹರಿಯಲ್ಲಿ ಮೂರುಲೋಕದವರೆಲ್ಲರು
ಮೂಛರ್ಿತರಾದರು ಕಾಣಾ ಗುಹೇಶ್ವರ.
ವಚನ 0794
ಚಂದ್ರಕಾಂತದ ಗಿರಿಗೆ ಉದಕದ ಸಂಚ,
ಸೂರ್ಯಕಾಂತದ ಗಿರಿಗೆ ಅಗ್ನಿಯ ಸಂಚ,
ಪರುಷದ ಗಿರಿಗೆ ರಸದ ಸಂಚ.
ಬೆರಸುವ ಭೇದವಿನ್ನೆಂತೊ?
ಅಪ್ಪುವನು ಅಗ್ನಿಯನು ಪಕ್ವಕ್ಕೆ ತಂದು
ಅಟ್ಟುಂಬ ಭೇದವನು ಗುಹೇಶ್ವರ ಬಲ್ಲ.
ವಚನ 0795
ಚಂದ್ರಮನ ಕಾಂಬಡೆ ಆ ಚಂದ್ರನಿಂದೊದಗಿದ ಬೆಳಗೆ ಮುಖ್ಯ.
ಸೂರ್ಯನ ಕಾಂಬಡೆ ಆ ಸೂರ್ಯನಿಂದೊದಗಿದ ಬೆಳಗೆ ಮುಖ್ಯ.
ಜ್ಯೋತಿಯ ಕಾಂಬಡೆ ಆ ಜ್ಯೋತಿಯಿಂದೊದಗಿದ ಬೆಳಗೆ ಮುಖ್ಯ.
ರತ್ನವ ಕಾಂಬಡೆ ಆ ರತ್ನದಿಂದೊದಗಿದ ಬೆಳಗೆ ಮುಖ್ಯ.
ನಮ್ಮ ಗುಹೇಶ್ವರಲಿಂಗವ ಕಾಂಬಡೆ
ಆ ಮಹಾವಸ್ತುವಿನ ಪರಮ ಪ್ರಕಾಶದಿಂದೊದಗಿದ
ಭಸಿತವೇ ಮುಖ್ಯ ಕಾಣಿರಣ್ಣಾ.
ವಚನ 0796
ಚಂದ್ರಮನೊಳಗಣ ಎರಳೆಯ ನುಂಗಿದ ರಾಹುವಿನ ನೋಟವು,
ಅಂದಂದಿಗೆ ಬಂದು ಕಾಡಿತ್ತು ನೋಡಾ.
ಒಂದರ ತಲೆ, ಒಂದರ ಬಸುರು-ಅಂದಂದಿಗೆ ಬಂದು ಕಾಡಿತ್ತು ನೋಡಾ.
ನಂದಿ ನಂದಿಯ ನುಂಗಿ ಬಂದುದು ಮಹೀತಳಕ್ಕಾಗಿ,
ಇಂದು, ರವಿಗಡಣವ ನಾನೇನೆಂಬೆ ಗುಹೇಶ್ವರಾ
ವಚನ 0797
ಚಿತ್ತ ಶುದ್ಧವಿಲ್ಲದವರಲ್ಲಿ ಮನ ಸಂಚಲ ನಿಲ್ಲದು.
ಮನ ಸಂಚಲ ನಿಲ್ಲದವರಲ್ಲಿ ಶಿವಧ್ಯಾನ ಕರಿಗೊಳ್ಳದು.
ಶಿವಧ್ಯಾನ ಕರಿಗೊಳ್ಳದವನ ಮಾತು ಸಟೆ.
ಗುಹೇಶ್ವರಲಿಂಗವನರಿಯದ ಭ್ರಾಂತಿಯೋಗಿಗಳ ಮನ
ಬೇತಾಳನಂತೆ ಕಾಡುವುದು.
ವಚನ 0798
ಚಿತ್ತದ ಸ್ನೇಹವ ಸಜ್ಜನಕ್ಕರ್ಪಿತವ ಮಾಡೆ;
ನಟ್ಟಿದ್ದ ಬೇಟಕ್ಕೆ ತಾಗು-ತಡೆಯುಂಟೆ ಎಲೆ ಮರುಳೆ ?
ಆತುರದಲ್ಲಿ ಕಳವಳಿಸಿ, ವ್ಯಾಕುಳದಲ್ಲಿ ಡಾವರಿಸುತ್ತಿಪ್ಪುದೀ ಮನವು.
ಈ ಮನವು ಚಿಹ್ನೆದೋರದ ಘನಕ್ಕೆ ಬೆಂಬತ್ತಿ ಬಿಡದಿರಬಲ್ಲಡೆ,
ತನ್ಮೂರ್ತಿ ತನ್ನಲ್ಲಿ ಗುಹೇಶ್ವರಲಿಂಗವು !
ವಚನ 0799
ಚಿತ್ತುವೆಂಬ ಬಿತ್ತು ಬಲಿದು ಎರಡಾದಲ್ಲಿ,
ಲಿಂಗವೆಂಬ ಕಳೆ ಅಂಕುರಿಸಿ ಮೂರ್ತಿಯಾಯಿತ್ತು.
ಆ ಮೂರ್ತಿಯ ಘನತೆಯ ಏನೆಂದೂ ಉಪಮಿಸಬಾರದು !
ನೋಡಿದಡೆ ಮೂರ್ತಿ ಹಿಡಿದಡೆ ಬಯಲು !
ಆ ಮೂರ್ತಿಯೊಳಗದೆ ಈರೇಳು ಲೋಕದ ಪ್ರಾಣಕಳೆ.
ಆ ಕಳೆಯ ಬೆಳಗು ತಾನೆ ನಮ್ಮ ಗುಹೇಶ್ವರಲಿಂಗದಲ್ಲಿ
ಲೀಲಾಮೂಲದ ಪ್ರಥಮ ಬಿತ್ತಿ.
ವಚನ 0800
ಚಿನ್ನವನೊರೆಯಬಹುದಲ್ಲದೆ ಬಣ್ಣವನೊರೆಯಬಹುದೆ ?
ಹೂವ ಮುಡಿಯಬಹುದಲ್ಲದೆ ಗಂಧವ ಮುಡಿಯಬಹುದೆ ?
ಕರ್ಮವ ಮಾಡಬಹುದಲ್ಲದೆ ವಸ್ತುವನರಿಯಬಹುದೆ ?
ಗುಹೇಶ್ವರನೆನಬಹುದಲ್ಲದೆ,
ಲಿಂಗವು ತಾನಾಗಬಾರದು ಸಿದ್ಧರಾಮಯ್ಯಾ.
ವಚನ 0801
ಚೌದಂತ ಮದಕರಿಯೊಳಡಗಿತ್ತು.
ಬೆಳಗಿನ ಬಳಗದ ನವಪಂಜರವೊ !
ಮದಾಳಿಯ ಸುಳುಹಿನ ಸೂಕ್ಷ್ಮಂಗಲ್ಲದೆ.
ಭಾವ ಪರಿಮಳವ ಭೇದಿಸಬಾರದು.
ಅಳಿ ರತುನವ ನುಂಗಿದ ಪರಿಯೆಂತೊ ?
ಸಾಧ್ಯವಾಯಿತ್ತು ಸುಖಸಂಭಾಷಣೆ
ಗುಹೇಶ್ವರಲಿಂಗದಲ್ಲಿ ಚನ್ನಬಸವಣ್ಣಂಗೆ.
ವಚನ 0802
ಜಂಗಮ ಘನವೆಂಬೆನೆ? ಬೇಡಿ ಕಿರಿದಾಯಿತ್ತು.
ಲಿಂಗ ಘನವೆಂಬೆನೆ? ಕಲುಕುಟಿಗನ ಕೈಯಲ್ಲಿ
ಮೂಡಿಸಿಕೊಂಡು ಕಿರಿದಾಯಿತ್ತು.
ಭಕ್ತ ಘನವೆಂಬೆನೆ? ತನು-ಮನ-ಧನದಲ್ಲಿ ವಂಚಕನಾಗಿ ಕಿರಿದಾದ.
ಇಂತೀ ತ್ರಿವಿಧದಲ್ಲಿ ಪರಿಣಾಮವಿಲ್ಲ ಪರಮಾರ್ಥವಿಲ್ಲ.
ಘನವ ಬಲ್ಲವರಾರೊ ಗುಹೇಶ್ವರಾ ?
ವಚನ 0803
ಜಂಗಮ ಜಂಗಮವೆಂಬ ಭಂಗಿತರ ಮುಖವ ನೋಡಲಾಗದು.
ಅದೇನು ಕಾರಣವೆಂದಡೆ-ನಿರಾಳಜಂಗಮವನರಿಯದೆ ನಾನೆ ಜಂಗಮವೆಂಬರು.
ಗ್ರಂಥ “ಜಕಾರಂ ಜನನಂ ನಾಸ್ತಿ ಗಕಾರಂ ಗಮನವರ್ಜಿತಂ
ಮಕಾರಂ ಮರಣಂ ನಾಸ್ತಿ ಏತದ್ಭವ್ಜೇಂಗಮಂ –
ಎಂದುದಾಗಿ, ಇಂತಪ್ಪ ನಿರ್ದೆಹಿ ಜಂಗಮವ ಕರ-ಮನ-ಭಾವದಲ್ಲಿ ಆರಾದಿಸಿ
ಜನನ ಮರಣಂಗಳ ಗೆಲಿದು ಕರ್ಪುರದ ಜ್ಯೋತಿಯಂತೆ ಇರಬಲ್ಲಡೆ
ಆ ಮಹಾತ್ಮನೆ ತ್ರೈಜಗದೊಡೆಯನೆಂಬೆ,
ಆ ಮಹಾತ್ಮನೆ ವಿಶ್ವಪರಿಪೂರ್ಣನೆಂಬೆನು ಗುಹೇಶ್ವರಾ.
ವಚನ 0804
ಜಂಗಮಕ್ಕೆ ಲಕ್ಷಣವಾವುದೆಂದಡೆ :
ಲಿಂಗರೂಪಾಗಿ ಪಾದಾರ್ಚನೆಯ ಮಾಡಿಸಿಕೊಳ್ಳಬೇಕು.
ಭಕ್ತಂಗೆ ಲಕ್ಷಣವಾವುದೆಂದಡೆ:
ಭೃತ್ಯರೂಪಾಗಿ ಪಾದಾರ್ಚನೆಯ ಮಾಡಬೇಕು.
ಜಂಗಮವು ಲಿಂಗರೂಪವಹ ವಿವರವೆಂತೆಂದಡೆ:
ಮಾತಿನಲ್ಲಿ ನಾನು ಲಿಂಗರೂಪೆಂದಡೆ ಹರಿಯದು
ತನು-ಮನ-ಧನತ್ರಯಂಗಳ ಹಿಡಿದೂ ಹಿಡಿಯದೆ
ಮಾಡಿಸಿಕೊಂಬುದೀಗ ಜಂಗಮಕ್ಕೆ ಲಕ್ಷಣ.
ಆ ನಿಲವಿಂಗೆ ಭವಂನಾಸ್ತಿ.
ಭಕ್ತನು ಭೃತ್ಯರೂಪವಹ ವಿವರವೆಂತೆಂದಡೆ:
ಮಾತಿನಲ್ಲಿ ನಾನು ಭ್ಯತ್ಯರೂಪೆಂದಡೆ ಹರಿಯದು.
ತನು-ಮನ-ಧನತ್ರಯಂಗಳ ಜೀವನ ಗುಣಕ್ಕಿಕ್ಕದೆ
ಗುರುಲಿಂಗಜಂಗಮಕ್ಕೆ ಸಂದಳಿದು ದಾಸೋಹವ ಮಾಡುವುದೀಗ ಭಕ್ತಂಗೆ ಲಕ್ಷಣ.
ಆ ನಿಲವಿಂಗೆ ಭವಂನಾಸ್ತಿ.
ಇಂತೀ ಉಭಯಕುಳಸ್ಥಳದ ಸಂದಳಿದು
ಒಂದಾಗಿ ನಿಂದ ನಿಲವು ಗುಹೇಶ್ವರಲಿಂಗದಲ್ಲಿ ಐಕ್ಯವು !
ವಚನ 0805
ಜಂಗಮದಿಂಗಿತಾಕಾರವ ನೋಡಿ ಲಿಂಗವೆಂದರಿದ ಭಕ್ತರು
ಮನ ಮನ ಬೆರಸಿದಡೆ,
ಕೂರ್ಮದ ಶಿಶುವಿನ ಸ್ನೇಹದಂತೆ ಮುನ್ನವೆ ತೆರಹಿಲ್ಲದಿರಬೇಕು ನೋಡಾ.
ಬಂದ ಬರವನರಿಯದೆ ನಿಂದ ನಿಲವ ನೋಡದೆ
ಕೆಮ್ಮನೆ ಅಹಂಕಾರವ ಹೊತ್ತಿಪ್ಪವರ
ನಮ್ಮ ಗುಹೇಶ್ವರಲಿಂಗನು ಒಲ್ಲ ಕಾಣಾ.
ವಚನ 0806
ಜಂಗಮವೆ ಲಿಂಗವೆಂದು ನಂಬಿದ ಬಳಿಕ
ಸಂದೇಹವಿಲ್ಲದೆ ಇರಬೇಕು ನೋಡಾ.
ಸಂದುಸಂಶಯವಳಿದು ಸಯವಾದ ಭಕ್ತಿ,
ಹಿಮ್ಮೆಟ್ಟಿದಡೆ ಹೋಯಿತ್ತಲ್ಲಾ.
ಒಪ್ಪಚ್ಚಿ ಬಳಿಕ ಕಿಂಕಿಲನಾಗಿ, ಮತ್ತೊಪ್ಪಚ್ಚಿ ಬಳಿಕ ಅಹಂಕಾರಿಯಾದಡೆ
ಹೋಗ ನೂಕುವ ಕಾಣಾ ನಮ್ಮ ಗುಹೇಶ್ವರಲಿಂಗವು.
ವಚನ 0807
ಜಂಗಮವೆ ಲಿಂಗವೆಂದು ನಂಬಿದ ಭಕ್ತನ ಕಣ್ಣ ಮುಂದೆ
[ಜಂಗಮ] ನಿಂದು ಹೋದಡೆ,
ಹಿಂದೆ ಮಾಡಿದ ಭಕ್ತಿಯೆಲ್ಲವೂ ನೀರಲ್ಲಿ ನೆನೆಯಿತ್ತು
ಮಂದಮತಿಯಾಗಿ ಕಂಡೂ ಕಡೆಗಣಿಸಿ
ಹೋಹವನು ಅಂಗವಿಕಾರಿ ನೋಡಾ.
ಮುಂದುವರಿದು ಅವನ ಮನೆಯ ಹೊಗುವ
ಜಂಗಮಕ್ಕೆ ಭವ ಹಿಂಗದು.
ನಮ್ಮ ಗುಹೇಶ್ವರಲಿಂಗವು
ಅರಿದು ಬರುದೊರೆವೋದವರ ಒಲ್ಲನು ಹೋಗಾ ಮರುಳೆ.
ವಚನ 0808
ಜಂಗಮವೆ ಹೊರಗಿರಲು ಲಿಂಗಾರ್ಚನೆ ಏವುದಯ್ಯಾ ?
ಪ್ರಾಣನ ಹೊರಗಿರಿಸಿ ಎಡೆಯಾಡುವ ದೇಹವುಂಟೆ ?
ಶರಣರು ಬಂದು ಬಾಗಿಲಲ್ಲಿ ನಿಂದಿರಲು
ತನ್ನ ತಾ ಮರೆದಿಪ್ಪವರ ಕಂಡಡೆ
ನಮ್ಮ ಗುಹೇಶ್ವರಲಿಂಗ ಒಡೆಯ ಹಾಯ್ಕದೆ ಮಾಣ್ಬನೆ ?
ವಚನ 0809
ಜಂಗಮಸ್ಥಲಕ್ಕೆ ಲಕ್ಷಣವಾವುದೆಂದಡೆ ಹೇಳಿಹೆ ಕೇಳಿರಣ್ಣಾ :
ಮೂರರ ಹೊಲಿಗೆಯ ಬಿಚ್ಚಿ ಆರ ಮಾಡಬೇಕು.
ಆರರ ತಿರುಳ ತೆಗೆದು ಒಂದರೊಳಗೆ ನಿಲಿಸಬೇಕು,
ಐದರ ಮುಸುಕನುಗಿದು, ಐದರ ಕಳೆಯ ಕೆಡಿಸಿ
ಐದರ ನಿಲವನಡಗಿಸಿ, ಮೂರರ ಮುದ್ರೆಯನೊಡೆದು
ನಾಲ್ಕರೊಳಗೆ ನಿಲ್ಲದೆ, ಮೂರು ಮುಖವು ಒಂದು ಭಾಗವಾಗಿ ಇರಬೇಕು !
ಈ ಭೇದವನರಿಯದೆ ಸುಳಿವರ ಕಂಡು
ಬೆರಗಾದೆ ಕಾಣಾ ಗುಹೇಶ್ವರಾ.
ವಚನ 0810
ಜಂಬೂದ್ವೀಪದ ವ್ಯವಹಾರಿ ಖಂಡ ಭಂಡವ ತುಂಬಿ
ಕುಂಬಿನಿಯುದರದ ಮೇಲೆ ಪಸರವನಿಕ್ಕಿದ.
ಉಷ್ಣ ತೃಷ್ಣೆ ಘನವಾಗಿ, ಕಡಲೇಳು ಸಮುದ್ರವ ಕುಡಿದು
ನೀರಡಿಸಿದಾತ ಅರಲುಗೊಂಡು ಬೆರಗಾದ.
ಶಿಶು ತಾಯ ಹೆಣನ ಹೊತ್ತುಕೊಂಡು ಹೆಸರ ಹೇಳುತ್ತೈದಾನೆ !
ಗುಹೇಶ್ವರನೆಂಬ ನಿಲವ ವಸುಧೆಯಾಕೃತಿ ನುಂಗಿತ್ತು.
ವಚನ 0811
ಜಗ[ದ್]ವಂದ್ಯರೆಂದು ನುಡಿದು ನಡೆವರು ನೋಡಾ.
ಭವಬಂಧನದ ಕುಣಿಕೆಯ ಕಳೆಯಲರಿಯರು ನೋಡಾ.
ಭವ ತಮ್ಮ ತುಳಿ ತುಳಿದು ಕೊಂದಿತ್ತು ನೋಡಾ !
ಶಬ್ದವೇದಿಗಳೆಂದು ನುಡಿದು ನಡೆವರು ನೋಡಾ,
ನಿಃಶಬ್ದ ವೇದಿಸದಿರ್ದಡೆ, ಗುಹೇಶ್ವರ ನೋಡಿ ನಗುತ್ತಿಪ್ಪನೋಡಾ !
ವಚನ 0812
ಜಗತ್ತಿನ ಹೊಲೆಯನೆಲ್ಲವನು ಉದಕ ಕೊಳುವುದು,
ಆ ಉದಕದ ಹೊಲೆಯ ಕಳೆದಲ್ಲದೆ
ಲಿಂಗಕ್ಕೆ ಮಜ್ಜನಕ್ಕೆರೆವ ಲಿಂಗದ್ರೋಹಿಗಳ ಮಾತಕೇಳಲಾಗದು.
ಮೇಘಬಿಂದುವಿನಿಂದಾದ ಉದಕ, ಸೂರ್ಯನ ಮುಖದಿಂದಾಗಿ ದ್ರವ್ಯ,
ಅಗ್ನಿಯ ಮುಖದಿಂದಾದ ಪಾಕ-ಇಂತಿವರ ಪೂರ್ವಾಶ್ರಯವ ಕಳೆದಲ್ಲದೆ
ಭಕ್ತ ಮಾಹೇಶ್ವರರೂ ಶೀಲಪರರೂ ಮೊದಲಾದ
ನಾನಾ ವ್ರತಿಗಳು ಲಿಂಗಕ್ಕೆ ಮಜ್ಜನವ ಮಾಡಲಾಗದು,
ಅರ್ಪಿಸಲಾಗದು, ಅದೆಂತೆಂದಡೆ:
ಉದಕದ ಪೂರ್ವಾಶ್ರಯವನು, ದ್ರವ್ಯದ ಪೂರ್ವಾಶ್ರಯವನು,
ಕಳೆದಲ್ಲದೆ ಲಿಂಗಕ್ಕೆ ಅರ್ಪಿಸಬಾರದು.
ಇಂತೀ ತ್ರಿವಿಧದ ಪೂರ್ವಾಶ್ರಯವ ಕಳೆವ ಪರಿಯೆಂತೆಂದಡೆ:
ಉದಕದ ಪೂರ್ವಾಶ್ರಯವ ಮಂತ್ರಯುಕ್ತವಾಗಿ
ಜಂಗಮದ ಪಾದೋದಕದಿಂದ ಕಳೆದು
ಪಾಕಪ್ರಯತ್ನವ ಮಾಡುವುದು.
ದ್ರವ್ಯದ ಪೂರ್ವಾಶ್ರಯ ಜಂಗಮದ ಹಸ್ತ ಪರುಷದಿಂದ ಹೋದುದಾಗಿ
ಅಗ್ನಿಯಲಾದ ಪಾಕದ ಪೂರ್ವಾಶ್ರಯವು
ಜಂಗಮದ ಪ್ರಸಾದದಿಂದ ಹೋಯಿತ್ತು.
ಈ ಶಿವನ ವಾಕ್ಯಗಳನರಿದು, ಮತ್ತೆ
ಜಂಗಮದ ಪಾದೋದಕದಿಂದ ಪಾಕಪ್ರಯತ್ನವ ಮಾಡಲಾಗದು,
ಲಿಂಗಕ್ಕೆ ಮಜ್ಜನಕ್ಕೆರೆಯಲಾಗದೆಂಬ ಶೈವ ಬೌದ್ಧ
ಚಾರ್ವಾಕ ಚಾಂಡಾಲ ಶಿವದ್ರೋಹಿಯ ಮಾತಕೇಳಿ,
ಬಿಟ್ಟನಾದರೆ,-ಅವ ವ್ರತಭ್ರಷ್ಟ ಅವನ ಮುಖವ ನೋಡಲಾಗದು.
ಸಾಕ್ಷಿ:“ಸರ್ವಾಚಾರಪರಿಭ್ರಷ್ಟಃ ಶಿವಾಚಾರೇನ ಶುಧ್ಯತಿ
ಶಿವಾಚಾರ ಪರಿಭ್ರಷ್ಟಃ ರೌರವಂ ನರಕಂ ವ್ರಜೇತ್”-
ಇಂತೆಂದುದಾಗಿ, ಸಮಸ್ತವಾದ ವ್ರತಂಗಳಲ್ಲಿ ಭ್ರಷ್ಟರಾದವರ
ಶಿವಾಚಾರದಲ್ಲಿ ಶುದ್ಧನ ಮಾಡಬಹುದು,
ಶಿವಾಚಾರದಲ್ಲಿ ಭ್ರಷ್ಟರಾದವರಿಗೆ ರೌರವ ನರಕ ತಪ್ಪದು.
ಅವಗೆ ಪ್ರಾಯಶ್ಚಿತ್ತವಿಲ್ಲಾಗಿ
ಅವನ ಮುಖವ ನೋಡಲಾಗದು, ಮತ್ತಂ
“ವ್ರತಭ್ರಷ್ಟಮುಖಂ ದೃಷ್ಟ್ವಾಶ್ವಾನಸೂಕರವಾಯಸಂ
ಅಶುದ್ಧಸ್ಯ ತಥಾದೃಷ್ಟಂ ದೂರತಃ ಪರಿವರ್ಜಯೇತ್”-ಇಂತೆಂದುದಾಗಿ,
ವ್ರತಶೀಲಗಳಲ್ಲಿ ನಿರುತನಾದ ಶಿವಶರಣನು ಪಥದಲ್ಲಿ ಆಚಾರಭ್ರಷ್ಟನ ಕಂಡಡೆ
ಮುಖವ ನೋಡಿದಡೆ ನಾಯ ಕಂಡಂತೆ ಸೂತಕನ ಕಂಡಂತೆ ಕಾಗೆಯ ಕಂಡಂತೆ
ಹೇಸಿಗೆಯ ಕಂಡಂತೆ ತೊಲಗುವುದು.
ಆ ವ್ರತವ ಬಿಡಿಸಿದವನು, ಅವನ ಮಾತ ಕೇಳಿ ಬಿಟ್ಟವನು
ಇಬ್ಬರಿಗೂ ಗುರುಲಿಂಗಜಂಗಮ ಪಾದೋದಕ ಪ್ರಸಾದಕ್ಕೆ ಹೊರಗಾಗಿ
ಅನಂತಕಾಲ ನರಕವನೈದುವರು. ಆ ಪಾಪಿಗಳ ಮುಖವ ನೋಡಲಾಗದು,
ನುಡಿಸಲಾಗದು ವ್ರತನಿಷ್ಠೆಯುಳ್ಳವರು ಕಾಣಾ ಗುಹೇಶ್ವರಾ.
ವಚನ 0813
ಜಗತ್ಸೃಷ್ಟನಹ ಅಜನ ಕೊಂಬು ಮುರಿಯಿತ್ತು.
ಧರೆಯ ಚಂದ್ರಸೂರ್ಯರಿಬ್ಬರೂ ನೆಲಕ್ಕೆ ಬಿದ್ದರಲ್ಲಾ !
ಉದಯ ನಿಂದಡೆ ಅಸ್ತಮಾನವಹುದು.
ಊರು ಬೆಂದು ಉಲುಹಳಿದುದು. -ಇದೇನು ಸೋಜಿಗವೊ !
ದೇವ ಸತ್ತ ದೇವಿ ಕೆಟ್ಟಳು, ಆನು ಬದುಕಿದೆನು ಗುಹೇಶ್ವರಾ.
ವಚನ 0814
ಜಗತ್ಸ್ವಯಂಭು’ ಎಂಬ ಗುಹೇಶ್ವರನ
ಕರಸ್ಥಲದಲ್ಲಿ ಹಿಡಿದಾಡುತ್ತಿರ್ದಡೆ
ಆದಿಲಿಂಗವೆಂದು ಬಗೆಯದು ಲೋಕವೆಲ್ಲ.
ಗುಹೇಶ್ವರಾ-ನಿಮ್ಮ ಶರಣ ಬಸವಣ್ಣ,
ಅಚ್ಚಲಿಂಗವ ಹಿಡಿದ ಕಾರಣ,
ಬರಿಯ ಲಿಂಗದ ಮಸ್ತಕವಾಯಿತ್ತು ತ್ರಿಜಗದೊಳಗೆ !
ವಚನ 0815
ಜಗದ ಕರ್ತನ ಕೈಯಲ್ಲಿ ಹಿಡಿದುಕೊಂಡು
ಮನೆಮನೆ ತಪ್ಪದೆ ತಿರುಗುವ ತುಡುಗುಣಿಯಂತೆ
ಕಾಡಲಾಗದು ಭಕ್ತನ, ಬೇಡಲಾಗದು ಭವಿಯ.
ಕಾಡಿ ಬೇಡಿ ನೀವು ಒಲಿಸಿಕೊಂಡಡೆ,
ಬೇಂಟೆಯ ಶ್ವಾನ ಮೊಲಕ್ಕೆ ಬಾಯಿದೆರೆದಂತೆ ಗುಹೇಶ್ವರಾ
ವಚನ 0816
ಜಗದ ಜನವ ಹಿಡಿದು ಉಪದೇಶವ ಮಾಡಿದ ಗುರುವಿಂಗೆ,
ಆ ಉಪದೇಶ ಕೊಟ್ಟುಕೊಂಡ ಮಾರಿಗೆ ಹೋಹುದಲ್ಲದೆ
ಅಲ್ಲಿ ನಿಜವಳವಡುವುದೆ ?
ತೆರನನರಿಯದ ಸಂಸಾರ ಜೀವಿಗಳು ಮಾಡಿದ ದೋಷ
ತಮ್ಮನುಂಗಿ, ಆ ಗುರುವಿಂಗೆ ಉಪಹತಿಯ ಮಾಡುವುದು ನೋಡಾ.
ಗುಹೇಶ್ವರಾ-ತಾನಿಟ್ಟ ಬೇತಾಳ ತನ್ನನೆ ತಿಂದಡೆ
ಬೇಕು ಬೇಡ ಎನಲುಂಟೆ ?
ವಚನ 0817
ಜಗದಗಲದ ಗಗನದ ಆನೆ ಕನಸಿನಲ್ಲಿ ಬಂದು ಮೆಟ್ಟಿತ್ತ ಕಂಡೆ
ಅದೇನೆಂಬೆ ಹೇಳಾ ? ಮಹಾಘನವನದೆಂತೆಂಬೆ ಹೇಳಾ ?
ಗುಹೇಶ್ವರನೆಂಬ ಲಿಂಗವನರಿದು ಮರೆದಡೆ,
ಲೋಯಿಸರದ ಮೇಲೆ ಬಂಡಿ ಹರಿದಂತೆ !
ವಚನ 0818
ಜಗದಗಲದ ಮಂಟಪಕ್ಕೆ, ಮುಗಿಲಗಲದ ಮೇಲುಕಟ್ಟಿನಲ್ಲಿ
ಚಿತ್ರ [ವಿಚಿತ್ರ]ವ ನೋಡುತ್ತ ನೋಡುತ್ತ;
ಧ್ಯಾನವಿಶ್ರಾಮದಲ್ಲಿ ದಿಟದಿಟವೆಂಬುದೊಂದು ದರುಶನವ ನೋಡುತ್ತ ನೋಡುತ್ತ,
ಗಗನಗಂಬಿರದಲ್ಲಿ ಉದಯವಾಯಿತ್ತ ಕಂಡೆ !
ಗುಹೇಶ್ವರನೆಂಬ ಲಿಂಗವು ತಾನೆಯಾಗಿ
ವಚನ 0819
ಜಗದಗಲದಲ್ಲಿ ಹಬ್ಬಿದ ಬಲೆ, ಯುಗಜುಗಕ್ಕೆ ತೆಗೆಯದು ನೋಡಾ !
[ಅದು] ಬಗೆಯಲ್ಲಿ ಭ್ರಮೆಗೊಳ್ಳದು;-ತನ್ನ ಇರವಿನ ಪರಿ ಇಂತುಟಾಗಿ !
ಜಗದ ಪ್ರಾಣಿಗಳುಲಿದುಲಿದು ಮರಳಿ ಮತ್ತಲ್ಲಿಯೆ ಬೀಳಲು;
ಬಲೆಯ ನೇಣು ಬಗ್ಗುರಿಯ ಕೈಯಲಿರಲು,-
ಬಲೆಯ ನೇಣ ಕಣ್ಣಿ ಕಳಚಿ,
ಲಿಂಗಕ್ಕೆ ಪ್ರಾಣ ಶರಣೆನ್ನುತ್ತವೆ ನಿಂದು,
ಒಡಲುಪಾದಿಯನರಿಯದೆ ಬೆಳಗಿನಲ್ಲಿ ನಿಂದು,
ಬೇಡಿದವರಿಗೆ ಅಣಿಮಾದಿ ಗುಣಂಗಳನಿತ್ತು,
ಮನೋಮಧ್ಯದಲ್ಲಿ ನಿಲಿಸಿ ನೆನೆವುತ್ತಿರ್ದು ಸುಖಿಯಾದ;
ಪ್ರಾಣನಾಥನ ಕಾಯ ಶೂನ್ಯಲಿಂಗಕ್ಕೆ, ಪ್ರಾಣಶೂನ್ಯಶರಣ.
ಗುಹೇಶ್ವರಲಿಂಗವ ಬೆರಸಿ ಬೇರಿಲ್ಲ.
ವಚನ 0820
ಜಲ ಕೂರ್ಮ ಗಜ ಫಣಿಯ ಮೇಲೆ ಧರೆ ವಿಸ್ತರಿಸಿ ನಿಲ್ಲದಂದು,
ಗಗನವಿಲ್ಲದಂದು ಪವನನ ಸುಳುಹು ಇಲ್ಲದಂದು,
ಅಗ್ನಿಗೆ ಕಳೆ ಮೊಳೆದೋರದಂದು, ತರು ಗಿರಿ ತೃಣಕಾಷ್ಠಾದಿಗಳಿಲ್ಲದಂದು,
ಯುಗಜುಗ ಮಿಗಿಲೆನಿಸಿದ ಹದಿನಾಲ್ಕು ಭುವನ ನೆಲೆಗೊಳ್ಳದಂದು,
ನಿಜವನರಿದಿಹೆನೆಂಬ ತ್ರಿಜಗಾದಿಪತಿಗಳಿಲ್ಲದಂದು-
ತೋರುವ ಬೀರುವ ಪರಿ ಇಲ್ಲದಂದು,
ಆ ಭಾವದಲ್ಲಿ ಭರಿತ ಅಗಮ್ಯ ಗುಹೇಶ್ವರ ನಿರಾಳವು !
ವಚನ 0821
ಜಲದ ಸತ್ವ ಜಲಚರಾದಿಗಳಿಗಲ್ಲದೆ ಬಲುಹಿಲ್ಲ
ವಾಗದ್ವೈತಿಗಳ ಅದ್ವೈತ, ಸ್ವಯವ ಮುಟ್ಟಬಲ್ಲುದೆ ?
ಗುಹೇಶ್ವರಲಿಂಗಕ್ಕೆ [ಅವರು] ದೂರ ಸಂಗನಬಸವಣ್ಣಾ.
ವಚನ 0822
ಜಲದೊಳಗಿರ್ದ ಕಿಚ್ಚು ಜಲವ ಸುಡದೆ,
ಜಲವು ತಾನಾಗಿಯೆ ಇದ್ದಿತ್ತು ನೋಡಾ,
ನೆಲೆಯನರಿದು ನೋಡಿಹೆನೆಂದಡೆ, ಅದು ಜಲವು ತಾನಲ್ಲ,
ಕುಲದೊಳಗಿರ್ದು ಕುಲವ ಬೆರಸದೆ, ನೆಲೆಗಟ್ಟುನಿಂದುದನಾರು ಬಲ್ಲರೊ?
ಹೊರಗೊಳಗೆ ತಾನಾಗಿರ್ದು-ಮತ್ತೆ ತಲೆದೋರದಿಪ್ಪುದು,
ಗುಹೇಶ್ವರಾ ನಿಮ್ಮ ನಿಲವು ನೋಡಾ.
ವಚನ 0823
ಜಲದೊಳಗೆ ಹುಟ್ಟಿ ನೆಲದೊಳಗೆ ಹುದುಗಿರ್ದುದ,
ಕೆಲಬಲದೊಳಗಿರ್ದವರೆಲ್ಲಾ ಬಲ್ಲರೆ ?
ಗಾಳಿಯೊಳಗಿಪ್ಪ ಜ್ಯೋತಿ ಕೆಡದೆ ಇದ್ದುದ ಕಂಡು -ನಾನು ಬೆರಗಾದೆ !
ಬಾಲಕ್ರೀಡೆಯೊಳಗಾಡುತ್ತಿಪ್ಪ ನಾರಿಯ ಮಕ್ಕಳೈವರು,
ಆರೂ ಕಾಣದ ಬಾವಿಯೊಳಗೆ ಬಿದ್ದಿರಲು,
ಬೇರೆ ಮತ್ತೆ ಜ್ಞಾನವೆಲ್ಲಿಯದೊ ?
ಗುಹೇಶ್ವರಾ, ನಿಮ್ಮನರಿಯದ, ಬರಿಯರಿವಿನ ಹಿರಿಯರ ಕಂಡಡೆ,
ನಾನು ನಾಚುವೆನಯ್ಯಾ.
ವಚನ 0824
ಜಲದೊಳಗೆ ಹುಟ್ಟಿದ ಹಲವು ಬಣ್ಣದ ವೃಕ್ಷ,
ಕೊಂಬಿಲ್ಲದೆ ಹೂವಾಯಿತ್ತು, ಇಂಬಿನಲ್ಲಿ ಫಲದೋರಿತ್ತು !
ಜಂಬೂದ್ವೀಪದ ಮುಗ್ಧೆಯ ಅಂಗೈಯ ಅರಳುದಲೆ
ಇಂದ್ರನ ವಾಹನವ ನುಂಗಿ,
ಬ್ರಹ್ಮರಂಧ್ರದೊಳಗೆ ಆಸನ ಪವನವ ದೃಢಸೂಸಿ
ಬೀಸರವೋಗದ ಶಿವಯೋಗ !
ಸಾಕ್ಷೀಭೂತಾತ್ಮದ ಮಾತು ಮಥನವ ನುಂಗಿ
ಜ್ಯೋತಿಯೊಳಗಣ ಕರ್ಪುರದ ಬೆಳಗಿನಂತಿದ್ದಿತ್ತು
ಗುಹೇಶ್ವರಲಿಂಗದಲ್ಲಿ ಯೋಗ !
ವಚನ 0825
ಜಲವಿಲ್ಲದ ಕೆರೆ, ಫಲವಿಲ್ಲದ ಬನ,
ಭಕ್ತನಿಲ್ಲದ ಗ್ರಾಮ ಸುಡುಗಾಡಯ್ಯಾ,
ಅಲ್ಲಿ ಶಿವನಿಲ್ಲ,
ಪ್ರೇತಜಡಾರಣ್ಯದಲ್ಲಿ ಹೋಗಬಹುದೆ ಗುಹೇಶ್ವರಾ ?
ವಚನ 0826
ಜವನ ಕದ್ದ ಕಳ್ಳನು ಆಗಲಿ ಮಿಕ್ಕು ಹೋದಡೆ,
ಅಗಲಕ್ಕೆ ಹಬ್ಬಿತ್ತು ಅಲ್ಲಲ್ಲಿ ನೋಡಲು.
ಶರಣರ ಸಂಗವನರಸುವರೆಲಾ ್ಲಅಲ್ಲಲ್ಲಿ ನೋಡಿರೆ !
ಸಾಧಕರೆಲ್ಲರೂ ಸಾದಿಸ ಹೋಗಿ,
ಅಭೇದ್ಯವನರಿಯದೆ ಕೆಟ್ಟರು ಗುಹೇಶ್ವರಾ.
ವಚನ 0827
ಜಾತಿಜಂಗಮ ಒಂದು ಕೋಟಾನುಕೋಟಿ,
ನೀತಿಜಂಗಮ ಒಂದು ಕೋಟಾನುಕೋಟಿ,
ಸಿದ್ಧಜಂಗಮ ಒಂದು ಕೋಟಾನುಕೋಟಿ,
ಜ್ಞಾನಜಂಗಮ ತ್ರೈಲೋಕ ದುರ್ಲಭ ಗುಹೇಶ್ವರಾ.
ವಚನ 0828
ಜಾತಿಭೇದಂಗಳನು ಅರಿವುದಯ್ಯಾ.
ಸಾಕ್ಷಾತ್ ಹಿಂದು ಮುಂದ ಹರಿವುದಯ್ಯಾ.
ಪ್ರೀತಿಯಿಂದ ಬೆಳಗು ಮತ್ತಪ್ಪುದಯ್ಯಾ.
ಆದಡೆ,-ಆತ ಗುಹೇಶ್ವರನೆಂದರಿವುದಯ್ಯಾ
ವಚನ 0829
ಜಾನು ಜಂಗೆಯಲ್ಲಿ ಹುಟ್ಟಿ ಜಂಗಮವೆನಿಸಿಕೊಳಬಹುದೆ ?
ಆಠಾವು ಹಿಂಗಿದಡೆ ಭಂಗಿತನು ಕಂಡಾ.
ಅಂತರಂಗದಲೊದಗೂದನರಿಯರು
ಗುಹೇಶ್ವರನೆಂಬುದು ಮೀರಿದ ಘನವು
ವಚನ 0830
ಜಾಲಗಾರನ ಕಾಲು ಮುಳ್ಳು ತಾಗಿ ನೊಂದಿತ್ತೆಂಬಂತೆ,
ಸೂನೆಗಾರನ ಮನೆಯಲ್ಲಿ ಹೆಣ ಹೋಗಿ ಅಳುವಂತೆ,
ಕನ್ನಗಳ್ಳನ ಮನೆಯಲ್ಲಿ ಬಟ್ಟಲು ಹೋಗಿ ಮರಗುವಂತೆ,-
ಠಕ್ಕನ ಪೂಜೆಗೆ ಮೆಚ್ಚುವನೆ ನಮ್ಮ ಗುಹೇಶ್ವರನು?
ವಚನ 0831
ಜಿಹ್ವೆಯ ಮುಖದಿಂದುಂಡು ಗುಹ್ಯದ್ವಾರದಿಂ ಬಿಡುವನೆ ಯೋಗಿ ?
ಅಲ್ಲ, ನಿಲ್ಲು.
ಶುಕ್ಲ ಶೋಣಿತಮಲದೇಹಿಯಲ್ಲ-
ಇಬ್ಬಟ್ಟೆಯಂ ಕಟ್ಟಿದ ಮಹಾಯೋಗಿ !
ಮೇಲಿಪ್ಪ ಕೈಲಾಸವ ಮರ್ತ್ಯಕ್ಕೆ ತಂದು ನಿಲಿಸಿದ,
ಸರಿಯಿಲ್ಲದ ಪ್ರತಿಯಿಲ್ಲದ ಗುಹೇಶ್ವರ
ಸಿದ್ಧರಾಮಯ್ಯದೇವರು ತಾನೆ.
ವಚನ 0832
ಜೀವಕ್ಕೆ ಜೀವವೇ ಆಧಾರ
ಜೀವತಪ್ಪಿಸಿ ಜೀವಿಸಬಾರದು.
“ಪೃಥ್ವೀಬೀಜಂ ತಥಾ ಮಾಂಸಂ ಅಪ್ದ್ರವ್ಯಂ ಸುರಾಮಯಂ
ಆತ್ಮಾ ಜೀವಸಮಾಯುಕ್ತಂ ಜೀವೋ ಜೀವೇನ ಭಕ್ಷಯೇತ್ ಎಂದುದಾಗಿ
ಅಹಿಂಸಾ ಪರಮೋಧರ್ಮವೆಂಬ ಶ್ರಾವಕರನು ಕಾಣೆ.
ಲಿಂಗಾರ್ಪಿತವಾದುದೆಲ್ಲ ಶುದ್ಧ; ಉಳಿದುದೆಲ್ಲ ಜೀವನ್ಮಯ ಕಾಣಾ,
ಗುಹೇಶ್ವರಾ.
ವಚನ 0833
ಜೀವತಾಮಸದ ಮಾಯದ ಬಲೆಯ ಭ್ರಾಂತಿಂಗೆ ಸೋಲುವ ಶರೀರ !
ಸಂಸಾರ ಸಂಗವ ಭೇದಿಸಿ ನೋಡುವಡೆ ದೂರ,
ಚಿಂತೆಯನೆ ಗೆಲಿದು ಸುಳಿದಡೆ,
ಗುಹೇಶ್ವರನೆಂದರಿದ ಶರಣಸಾರಾಯನು.
ವಚನ 0834
ಜೀವವಿಲ್ಲದ ಹೆಣನ ಹಿಡಿದಾಡುವರಯ್ಯಾ.
ಪ್ರತಿಯಿಲ್ಲದಪ್ರತಿಗೆ ಪ್ರತಿಯ ಮಾಡುವರಯ್ಯಾ.
ಶಿರವಿಲ್ಲದ ಮುಂಡಕ್ಕೆ ಸೇಸೆಯನಿಕ್ಕುವರಯ್ಯಾ-ಗುಹೇಶ್ವರ.
ವಚನ 0835
ಜೂಜಿನ ವೇಧೆಯುಂಟು ಜಾಗರದ ಬಲವಿಲ್ಲ;
ಆಗಲೂ ಗೆಲಲುಂಟೆ ಪ್ರಾಣಪದತನಕ?
ರತುನದ ಸರ ಹರಿದು ಸೂಸಿ ಬಿದ್ದಡೆ
ಮಾಣಿಕವ ಬೆಲೆಯಿಟ್ಟು ಬಿಲಿತವರಿಲ್ಲ,
ಸರ್ಪಿಣಿ ಸರ್ಪನ ನುಂಗಿ [ದೀಪ] ನುಂಗಿತ್ತು
ಇದು, ಯೋಗದ ದೃಷ್ಟಾಂತ ಗುಹೇಶ್ವರಾ.
ವಚನ 0836
ಜ್ಞಾತೃವೆ ಅರಸುವುದು ಜ್ಞಾನವೆ ಅರಿವುದು.
ಜ್ಞೇಯವೆ ನಿಶ್ಚಯಿಸುವುದು.
ಈ ಜ್ಞಾತೃ ಜ್ಞಾನ ಜ್ಞೇಯವೆಂಬ ತ್ರಿವಿಧಸಾಧನದಿಂದ
ಲಿಂಗವನರಸಿ ಲಿಂಗವನರಿದು ಲಿಂಗವ ಬೆರಸಿ ಲಿಂಗವಾದ ಮತ್ತೆ,
ಜ್ಞಾತೃ ಜ್ಞಾನ ಜ್ಞೇಯವೆಂಬ ತ್ರಿವಿಧಭ್ರಾಂತಿಸೂತಕ ಹೋಯಿತ್ತು
ನಿಜವಾಯಿತ್ತು ಕಾಣಾ ಗುಹೇಶ್ವರಾ
ವಚನ 0837
ಜ್ಞಾನಚಕ್ರ:
ಪರಮ ತತ್ವ ಪರಮಜ್ಞಾನ ಪರಮಾರ್ಥ ಪರಾಪರ
ವಾಙ್ಮನಕ್ಕಗೋಚರ ಶಬ್ದಗಂಬಿರ ಉಪಮಾತೀತ, ಉನ್ನತ ಪರಶಿವ,
ಜ್ಞಾನಜ್ಯೋತಿ ಸುಜ್ಞಾನದ ಪ್ರಭೆಯ ಬೆಳಗಿನೊಳಗೆ ಸುಳಿದಾಡುವ
ಪರಮಾನಂದದ ಮಹಾಮಹಿಮಂಗೆ,
ಶಿವಜ್ಞಾನವೆ ಶೃಂಗಾರ, ಮಹಾಬೆಳಗೆ ವಿಭೂತಿ, ಪಂಚಬ್ರಹ್ಮವೆ ದರ್ಶನ
ಗಗನಸ್ಥಾನವೆ ಕಂಥೆ, ಆಕಾಶವೆ ಟೊಪ್ಪರ,
ಅಜಾಂಡ-ಬ್ರಹ್ಮಾಂಡವೆ ಕರ್ಣಕುಂಡಲ,
ಆದಿ ಆಧಾರವೆ ಕಕ್ಷಪಾಳ ಅನಾಹತವೆ ಒಡ್ಯಾಣ, ಅದ್ವೈತವೆ ಯೋಗವಟ್ಟಿಗೆ,
ಅಗಮ್ಯವೆ ಯೋಗವಾವುಗೆ, ಅಚಳಿತವೆ ಖರ್ಪರ, ಅಪ್ರಾಮಣವೆ ಲಾಕುಳ,
ಅವಿಚಾರವೆ ಸುಳುಹು, ಅಕಲ್ಪಿತವೆ ಬಿಕ್ಷೆ, ಕೊಂಡುದೆ ಗಮನ, ನಿಂದುದೆ ನಿವಾಸ,-
ನಿಶ್ಚಿಂತವೆಂಬ ಆಶ್ರಮದಲ್ಲಿ ನಿರಾಕುಳವೆಂಬ ಸಿಂಹಾಸನವನಿಕ್ಕಿ;
ಗಗನಗಂಬಿರದ ಬಾವಿಯೊಳಗೆ ಅಗೋಚರದ ಅಗ್ಘಣಿಯ ತಂದು
ಮಹಾಘನಪ್ರಾಣಲಿಂಗಕ್ಕೆ ಮಂಗಳದ ಬೆಳಗಿನಲ್ಲಿ ಮಜ್ಜನಕ್ಕೆರೆದು;
ಬಿಂದ್ವಾಕಾಶವೆ ಗಂಧ, ಮಹದಾಕಾಶವೆ ಅಕ್ಷತೆ, ಪರಾಪರವೆ ಪತ್ರೆಪುಷ್ಪ,
ನಿರ್ಮಳವೆ ಲಿಂಗಾರ್ಚನೆ, ಮಹಾಪ್ರಕಾಶವೆ ಪೂಜೆ,
ನಿತ್ಯನಿರಂಜನವೆ ಧೂಪದೀಪಾರತಿ,
ಸಕಲ ಭುವನಾದಿಭುವನಂಗಳೆ ಸಯದಾನ, ಆಚಾರವೆ ಅರ್ಪಿತ, ಮಹತ್ವವೆ ಸಿತಾಳ,
ಅಖಂಡಿತವೆ ಅಡಕೆ, ಏಕೋಭಾವವೆ ಎಲೆ, ಶುದ್ಧಶಿವಾಚಾರವೆ ಸುಣ್ಣ-
ವಿವೇಕ ವಿಚಾರದಿಂದ ವೀಳೆಯವನವಧರಿಸೂದು.
ಮಹಾಲಿಂಗದ ಪರಿಣಾಮವೆ ಪ್ರಸಾದ, ಸಮ್ಯಕ್ ಜ್ಞಾನವೆ ಸಂತೋಷ.
ಸಹಜ ನಿರಾಭಾರಿಗಳ ಮೇಳದಿಂದ, ನಿಸ್ಸೀಮದ ನಿಭ್ರಾಂತಿನ ಸುಸಂಗದಲ್ಲಿ-
ನಿರಾಶಾಪದವೆ ಅನುಕೂಲ, ನಿಶ್ಶಬ್ದವೆ ಅನುಭಾವ,
ಅನುಪಮದ ನಿಶ್ಶೂನ್ಯವೆ ವಿಶ್ರಾಮ, ನಿರಾಕಾರವೆ ಗಮನ.
ನಿರಂತರ ಪಾತಾಳ ಊಧ್ರ್ವದ ಪವನ;-ತ್ರಿಭುವನಗಿರಿಯೆಂಬ ಪರ್ವತವನೇರಿ,
ಕಾಯವೆಂಬ ಕದಳಿಯ ಹೊಕ್ಕು ಸುಳಿದಾಡುವ
ಪರಮಾನಂದದ ಮಹಾಮಹಿಮಂಗೆ;
ಇಹಲೋಕವೇನು ? ಪರಲೋಕವೇನು ?-
ಅಲ್ಲಿಂದತ್ತ ಆಗಮ್ಯ ನಿರಾಳ ಪರಮಜ್ಞಾನದ ಸಿದ್ಧಿ ಮಹಾಲಿಂಗದ ಬೆಳಗು,
ಗುಹೇಶ್ವರಾ, ನಿಮ್ಮ ನಿಜವನರಿದ ಮಹಾಮಹಿಮ ಶರಣಂಗೆ,
ನಮೋ ನಮೋ ಎಂಬೆನು.
ವಚನ 0838
ಜ್ಞಾನದ ಉಬ್ಬು ಕೊಬ್ಬಿನಲ್ಲಿ ನುಡಿವುತ್ತಿಪ್ಪರೆಲ್ಲರ (ಉಲಿವುತ್ತಿಪ್ಪರೆಲ್ಲರ ?);
ನಾಮ ನಾಸ್ತಿಯಾಗದು, ತನುಗುಣ ನಾಸ್ತಿಯಾಗದು,
ಕರಣಾದಿಗುಣಂಗಳು ನಾಸ್ತಿಯಾಗವು, ಕರಸ್ಥಲವು ನಾಸ್ತಿಯಾಗದು.
ಇದೆತ್ತಣ ಉಲುಹೊ ಗುಹೇಶ್ವರಾ ?
ವಚನ 0839
ಜ್ಞಾನದಿಂದ ನಿಮ್ಮನರಿದಿಹೆನೆಂದಡೆ:
ಅರಿವಿಂಗೆ ಬಂದಾಗಲೆ ಕುರುಹು.
ಕುರುಹಿಂಗೆ ಕೇಡುಂಟು;
ಜ್ಞಾನವೆಂಬುದೇನು ? ಮನೋಭೇದ !
ಇಂತಪ್ಪ ಜ್ಞಾನದ ಕೈಯಲ್ಲಿ,
ಅರುಹಿಸಿಕೊಂಡಡೆ ನೀ ದೇವನಲ್ಲ,
ಅರಿಯದಿದ್ದಡೆ ನಾ ಶರಣನಲ್ಲ.
ನೀ ದೇವ, ನಾ ಶರಣನೆಂತಾದೆ ಹೇಳಾ ಗುಹೇಶ್ವರಾ ?
ವಚನ 0840
ಜ್ಞಾನದುದಯವೇ ಭಕ್ತ,
ಜ್ಞಾನದ ಶೂನ್ಯವೇ ಐಕ್ಯ.
ಇಂತೀ ಜ್ಞಾನದಾದ್ಯಂತವನರಿವರಿವೆ ಸರ್ವಜ್ಞನಾದ ಈಶ್ವರ ನೋಡಾ.
ಅದೆಂತೆಂದಡೆ:
“ಚಿದೋದಯಶ್ಚ ಸದ್ಭಕ್ತೋ ಚಿತ್ಯೂನ್ಯಂಚೈಕ್ಯಮೇವ ಚ
ಉಭಯೋರೈಕ್ಯ ವಿಜ್ಞೇಯಾತ್ಸರ್ವಜ್ಞಮೀಶ್ವರಃ” (?)
ಎಂದುದಾಗಿ
ಇಂತೀ ಷಟ್ಸ್ಥಲದೊಳಗಾದ್ಯಂತವಡಗಿಹ ಭೇದವ
ನೀ ನಲ್ಲದನ್ಯರೆತ್ತ ಬಲ್ಲರು ಗುಹೇಶ್ವರಾ.
ವಚನ 0841
ಜ್ಞಾನೋದಯವಾಗಿ ಷಟ್ಸ್ಥಲದ ನಿರ್ಣಯವೆಂತುಟೆಂದು ವಿಚಾರಿಸೆ:
ಮೊದಲಲ್ಲಿ ಭಕ್ತಸ್ಥಲವೆಂತು ಹೇಳಿತ್ತು-
ಅಂತೆ ನಡೆದು ಪೂರೈಸಿ ಮಾಹೇಶ್ವರಸ್ಥಲಕ್ಕೆ ಬಂದು,
ಮಾಹೇಶ್ವರಸ್ಥಲವೆಂತು ಹೇಳಿತ್ತು-
ಅಂತೆ ನಡೆದು ಪೂರೈಸಿ ಪ್ರಸಾದಿಸ್ಥಲಕ್ಕೆ ಬಂದು,
ಪ್ರಸಾದಿಸ್ಥಲವೆಂತು ಹೇಳಿತ್ತು-
ಅಂತೆ ನಡೆದು ಪೂರೈಸಿ ಪ್ರಾಣಲಿಂಗಿಸ್ಥಲಕ್ಕೆ ಬಂದು,
ಪ್ರಾಣಲಿಂಗಿಸ್ಥಲವೆಂತು ಹೇಳಿತ್ತು-
ಅಂತೆ ನಡೆದು ಪೂರೈಸಿ ಶರಣಸ್ಥಲಕ್ಕೆ ಬಂದು,
ಶರಣಸ್ಥಲವೆಂತು ಹೇಳಿತ್ತು-
ಅಂತೆ ನಡೆದು ಪೂರೈಸಿ ಐಕ್ಯಸ್ಥಲಕ್ಕೆ ಬಂದು,
ಐಕ್ಯಸ್ಥಲವೆಂತು ಹೇಳಿತ್ತು-
ಅಂತೆ ನಡೆದು ಪೂರೈಸಿ ನಿರವಯಸ್ಥಲಕ್ಕೆ ಬಂದು
ನಿರಾಳಕ್ಕೆ ನಿರಾಳನಾದೆನಯ್ಯಾ ಗುಹೇಶ್ವರಾ.
ವಚನ 0842
ಜ್ಯೋತಿ ಕಂಡಾ, ಇರಲು ಕತ್ತಲೆ ಕಂಡಾ !
ನಿಧಾನ ಕಂಡಾ, ಇರಲು ಬಡತನ ಕಂಡಾ !
ಪ್ರಸಾದ ಕಂಡಾ, ಕೊಂಡಡೆ ಪ್ರಳಯ ಕಂಡಾ !
ಗುಹೇಶ್ವರ ಕಂಡಾ, ಇದು ಭ್ರಾಂತು ಕಂಡಾ !
ವಚನ 0843
ಜ್ಯೋತಿಯೊಳಗಣ ಕರ್ಪುರಕ್ಕೆ, ಅಪ್ಪುವಿನ ಕೈಯಲಿಪ್ಪ ಉಪ್ಪಿಂಗೆ,
ಶ್ರೀಗುರುವಿನ ಹಸ್ತದೊಳಗಿಪ್ಪ ಶಿಷ್ಯಂಗೆ-ಈ ಮೂರಕ್ಕೆಯೂ
ಬೇರೆ ಕ್ರಿಯಾವರ್ತನೆಯುಂಟೆ ಗುಹೇಶ್ವರಾ ?
ವಚನ 0844
ಡೊಂಕನ ಕೊಂಡು ಡೊಂಕನ ಕಾಡುವಡೆ
ನಮ್ಮ ಡೊಂಕನೆ ಸಾಲದೆ ?
ಕೆಮ್ಮುವನಾದಡೆ ನಮ್ಮವನೆ ಸಾಲದೆ ?
ಎಂಬ ಲೋಕದ ಗಾದೆಯ ಮಾತಿನಂತೆ;
ಈ ಡೊಂಕನ ಕೊಂಡು ಸಸಿನವ ಕೊಡಬಲ್ಲಡೆ
ಅವರ ಹಿರಯರೆಂಬೆ ಗುರುವೆಂಬೆ.
ಅವರಿಗೆ ನಮೋ ನಮೋ ಎಂಬೆ.
ಈ ಡೊಂಕನ ಕೊಂಡು ಸಸಿನವ ಕೊಡಲರಿಯದಿದ್ದಡೆ,
ಆ ಗುರುವಿಂಗೆ ಏಳನೆಯ ನರಕ,
ಭವಘೋರದಲ್ಲಿ ಓಲಾಡುತ್ತಿಹ.
ಇದು ಕಾರಣ,
ಡೊಂಕನ ಕೊಂಡು ಸಸಿನವ ಕೊಡಬಲ್ಲ
ಗುರು, ಅಪೂರ್ವ ಕಾಣಾ ಗುಹೇಶ್ವರಾ.
ವಚನ 0845
ಭಕ್ತ ಭಕ್ತನೆಂದೇನೊ ? ಭವಿಗಳು ಮನೆಯಲುಳ್ಳನ್ನಕ್ಕ ಭಕ್ತನೆ ?
ಭಕ್ತ ಭಕ್ತನೆಂದೇನೊ ? ಅನ್ಯದೈವ ಸುರೆ ಮಾಂಸವುಳ್ಳನ್ನಕ್ಕ ಭಕ್ತನೆ ?
ಭಕ್ತ ಭಕ್ತನೆಂದೇನೊ ? ಹರಕೆ ತೀರ್ಥಯಾತ್ರೆಯುಳ್ಳನ್ನಕ್ಕ ಭಕ್ತನೆ ?
ಭಕ್ತ ಭಕ್ತನೆಂದೇನೊ ? ತನು ಮನ ಧನ ವಂಚನೆಯುಳ್ಳನ್ನಕ್ಕ ಭಕ್ತನೆ ?
ಇವರೆಲ್ಲರು ಎದೆಯಲ್ಲಿ ಕಲ್ಲನಿರಿಸಿಕೊಂಡು
ಸಾವಿಂಗೆ ಸಂಬಳಿಗರು ಕಾಣಾ ಗುಹೇಶ್ವರಾ.
ವಚನ 0846
ಭಕ್ತರ ಮನೆಯೊಳಗೆ ಮನೆಕಟ್ಟಿಕೊಂಡಿಪ್ಪ ಜಂಗಮದ ಇಂಗಿತಾಕಾರವೆಂತೆಂದಡೆ
ಆ ಭಕ್ತನ ತನುಮನದೆಡೆಯಲ್ಲಿ ಮೋಹಿತನಾಗದೆ,
ಹೋಹ, ಬಾಹ, ಭಕ್ತ ಜಂಗಮಕ್ಕೆ ಮಾಡುವ ದಾಸೋಹ ನೋಡಿ,
ಅವರಿಗೆ ಮಾಡುವಡೆ ಎನಗೆ ಮಾಡುವ ಭಕ್ತಿಯೆಂದು ಇದ್ದ ಪರಿಯಲ್ಲಿ ಸುಖಿಸಿ,
ಬಂದ ಪರಿಯಲ್ಲಿ ಪರಿಣಾಮಿಸಿ,
ನಿಷ್ಕಾಮ್ಯ, ನಿಸ್ಪೃಹ, ನಿರ್ದೊಷಿಯಾಗಿ,
ಕೋಪ ತಾಪವಿಲ್ಲದೆ ಭಕ್ತಿ ಜ್ಞಾನಯುಕ್ತನಾಗಿ
ಆ ಭಕ್ತನ ನಡೆ ನುಡಿಯಲ್ಲಿ ಜಡ ಹುಟ್ಟಿದರೆ ಅದಲ್ಲವೆಂದು ಕಳೆದು,
ಸತ್ಯದ ಬುದ್ಧಿಗಲಿಸಿ ಸಂತೈಸಿಕೊಂಡು ಇಹುದೆ ಜಂಗಮಲಕ್ಷಣ.
ಅಂಥ ಜಂಗಮನೆ ಪ್ರಾಣವಾಗಿ,
ಅದರಾಜ್ಞೆಯ ಮೀರದೆ
ಮನವಚನಕಾಯದಲ್ಲಿ ಉದಾಸೀನವಿಲ್ಲದೆ,
ಅವರ ಕೂಡಿಕೊಂಡು ದಾಸೋಹವ ಮಾಡುವುದೆ ಭಕ್ತನ ಲಕ್ಷಣವು.
ಈ ಎರಡಕ್ಕೂ ಭವಂ ನಾಸ್ತಿಯಹುದು.
ಇಂತಪ್ಪ ಭಕ್ತ ಜಂಗಮದ ಸಕೀಲಸಂಬಂಧವ
ಬಸವಣ್ಣ ಮೆಚ್ಚುವನು ಕಾಣಾ ಗುಹೇಶ್ವರಾ.
ವಚನ 0847
ಭಕ್ತಿಯನಾರು ಬಲ್ಲರು ? ಬಲ್ಲವರನಾರನೂ ಕಾಣೆ.
ತನ್ನ ಮರೆದು ಇದಿರ ಹರಿದು ಇರಬಲ್ಲಡೆ ಆತ ಭಕ್ತ .
ಆ ಭಕ್ತಂಗೆ ಶಿವನೊಲಿವ.
ನುಡಿಯಲ್ಲಿ ಭಕ್ತಿಯನಾಡಿ ನಡೆಯಲ್ಲಿ ಇಲ್ಲದಿದ್ದಡೆ
ಕಡೆಮುಟ್ಟಿ ಶಿವನೊಲಿವುದು ಹುಸಿ.
ಮರೆದು ಕೋಪದುರಿಯನುಗುಳಿ
ಅರಿದು ಬಂದೆರಗಿದೆನೆಂಬ ನುಡಿಗೆ
ಒಲಿವನೆ ನಮ್ಮ ಗುಹೇಶ್ವರಲಿಂಗವು ?
ವಚನ 0848
ತಂಗಾಳಿ ಪರಿಮಳದೊಡಗೂಡಿ ಸುಳಿವಂತೆ,
ಆ ಸುಳುಹಾಗಿ ಸುಳಿಯಬೇಕು.
ನಿಂದಡೆ ನೆಟ್ಟನೆ ಭಕ್ತನಾಗಿ ನಿಂದು
ಸಹಜ ಮಾಟವ ಮಾಡಬೇಕು.
ಸುಳಿದಡೆ ನೆಟ್ಟನೆ ಪರಮಜಂಗಮವಾಗಿ ಸುಳಿಯಬೇಕು.
ನಿಂದು ಭಕ್ತನಾಗಲರಿಯದ, ಸುಳಿದು ಜಂಗಮವಾಗಲರಿಯದ
ಉಭಯಭ್ರಷ್ಟರನೇನೆಂಬೆನಯ್ಯಾ ಗುಹೇಶ್ವರಾ.
ವಚನ 0849
ತಂದೆಯ ಸದಾಚಾರ ಮಕ್ಕಳೆಂಬರು,
ಗುರುಮಾರ್ಗಾಚಾರ ಶಿಷ್ಯನದೆಂಬರು.
ಮೇಲು ಪಂಕ್ತಿಯ ಕಾಣರು ನೋಡಾ.
ತತ್ವದ ಮೇಲು ಪಂಕ್ತಿ ಅತ್ತಲೆ ಉಳಿಯಿತ್ತು.
ಕತ್ತಲೆಯ ಮರೆಯಲ್ಲಿ ಕಾಣರು ನೋಡಾ.
ತತ್ವದ ಹಾದಿಯನು, ಭಕ್ತಿಯ ಭೇದವನು,
ಇವರೆತ್ತ ಬಲ್ಲರಯ್ಯಾ ಗುಹೇಶ್ವರಾ
ವಚನ 0850
ತತ್ತಿಯೊಳಗಣ ಹಕ್ಕಿಯ ಪ್ರಾಣವದೆತ್ತಣಿಂದ ತೋರಿತ್ತೊ ?
ಅದು ಮಾತನಾಡುವ ಬೆಡಗ ಜಡಜೀವಿಗಳೆತ್ತ ಬಲ್ಲರು ?
ಎತ್ತಿನ ಮರೆಯ ಬೇಟೆಕಾರನ
ಅಡವಿಯ ಮೃಗವೆತ್ತ ಬಲ್ಲವು ಗುಹೇಶ್ವರಾ ?
ವಚನ 0851
ತತ್ವವ ನುಡಿವ ಹಿರಿಯರೆಲ್ಲರು.
ತುತ್ತನಿಕ್ಕುವರ ಬಾಗಿಲಲ್ಲಿ, ಅಚ್ಚುಗಪಡುತ್ತಿದ್ದರು ನೋಡಾ,
ನಿತ್ಯಾನಿತ್ಯವ ಹೇಳುವ ಹಿರಿಯರು ತಮ್ಮ ಒಡಲ ಕಕ್ಕುಲತೆಗೆ ಹೋಗಿ,
ಭಕ್ತಿಯ ಹೊಲಬನರಿಯದ, ಜಡಜೀವಿ ಮಾನವರ ಇಚ್ಛೆಯ ನುಡಿದು,
ಹಲುಬುತ್ತಿಪ್ಪರು ನೋಡಾ !
ಕತ್ತೆಗೆ ಕಪರ್ೂರವ ಹೇರಿದಂತೆ,
ಅವರಿಗೆ ಇನ್ನೆತ್ತಣ ಮುಕ್ತಿಯೋ ಗುಹೇಶ್ವರಾ.
ವಚನ 0852
ತತ್ವವೆಂಬುದ ನೀನೆತ್ತ ಬಲ್ಲೆಯೊ ?
ಸತ್ತು ಮುಂದೆ ನೀನೇನ ಕಾಬೆಯೊ ?
ಇಂದೆ ಇಂದೆಯೊ ಇಂದೆ ಮಾನವಾ
ಮಾತಿನಂತಿಲ್ಲ ಶಿವಾಚಾರ, ದಸರಿದೊಡಕು ಕಾಣಿರಣ್ಣಾ.
ರಚ್ಚೆಯ ಮಾತಲ್ಲ ಬೀದಿಯ ಮಾತಲ್ಲ.
ಏಕೋ ರಾತ್ರಿಯ ಬಿಂದು ನೋಡಾ !
ಗುಹೇಶ್ವರನ ಕೂಡಿದ ಕೂಟ
ಇಂದು ಸುಖ, ಮುಂದೆ ಲೇಸು
ವಚನ 0853
ತತ್ವಾತತ್ವಂಗಳಿಲ್ಲದಂದು, ಸಾಕ್ಷಿಸಭೆಗಳಿಲ್ಲದಂದು,
ಏನೇನಿಲ್ಲದಂದು, ಬಯಲು ಬಲಿವಂದು ಈ ಬಿಂದುವಾಯಿತ್ತು.
ಆ ಬಿಂದು ಅಕ್ಷರತ್ರಯ ಗದ್ದಿಗೆಯಲ್ಲಿ ಕುಳ್ಳಿರಲು ಲೋಕದುತುಪತಿಯಾಯಿತ್ತು.
ನಾದದ ಬಲದಿಂದ ಮೂರ್ತಿಯಾದನೊಬ್ಬ ಶರಣ.
ಆ ಶರಣನಿಂದಾದುದು ಪ್ರಕೃತಿ,
ಆ ಪ್ರಕೃತಿಯಿಂದಾಯಿತು ಲೋಕ ಲೌಕಿಕ
ಆ ಲೋಕ ಲೌಕಿಕವನತಿಗಳೆದು ನಿಜದಲ್ಲಿ ನಿವಾಸಿಯಾಗಿಪ್ಪ
ಗುಹೇಶ್ವರ, ನಿಮ್ಮ ಶರಣ ಸಂಗನಬಸವಣ್ಣ.
ವಚನ 0854
ತನಗುಳ್ಳ ನಿಧಾನ ತನಗಿಲ್ಲದಂತೆ,
ಬಂಧುಗಳೆಲ್ಲರ ನುಂಗಿ ಅಂಬುದಿ ಬತ್ತಿತ್ತು.
ಅದುಭುತ ಸತ್ತಿತ್ತು; ರಣರಂಗವತ್ತಿತ್ತು.
ಇರುಳು ಮಾಣಿಕವ ನುಂಗಿ ಮರಣವಾದ ಬಳಿಕ
ಅಮೃತದ ಪುತ್ಥಳಿಯ ಹಾಲ ಕುಡಿಯ ಕರೆದಡೆ
ಗುಹೇಶ್ವರಲಿಂಗಕ್ಕೆ ಊಟವೆಂಬುದಿಲ್ಲ ನೋಡಾ ಸಂಗನಬಸವಣ್ಣಾ.
ವಚನ 0855
ತನು ಉಂಟೆಂದಡೆ ಪಾಶಬದ್ಧ, ಮನ ಉಂಟೆಂದಡೆ ಭವಕ್ಕೆ ಬೀಜ.
ಅರಿವ ನುಡಿದು ಕೆಟ್ಟೆನೆಂದರೆ ಅದೇ ಅಜ್ಞಾನ.
ಭಾವದಲ್ಲಿ ಸಿಲುಕಿದೆನೆಂಬ ಮಾತು ಬಯಲ ಭ್ರಮೆ ನೋಡಾ.
ಒಮ್ಮೆ ಕಂಡೆ, ಒಮ್ಮೆ ಕಾಣೆ, ಒಮ್ಮೆ ಕೂಡಿದೆ, ಒಮ್ಮೆ ಅಗಲಿದೆ
ಎಂದಡೆ ಕರ್ಮ ಬೆಂಬತ್ತಿ ಬಿಡದು.
ನಿನ್ನೊಳಗೆ ನೀ ತಿಳಿದುನೋಡಲು ಬಿನ್ನವುಂಟೆ ?
ಗುಹೇಶ್ವರಲಿಂಗವನರಿವಡೆ ನೀನೆಂದೇ ತಿಳಿದು ನೋಡಾ ಮರುಳೆ ?
ವಚನ 0856
ತನು ಒಂದು ದ್ವೀಪ, ಮನ ಒಂದು ದ್ವೀಪ,
ಆಪ್ಯಾಯನ ಒಂದು ದ್ವೀಪ, ವಚನ ಒಂದು ದ್ವೀಪ.-
ಇಂತೀ ನಾಲ್ಕು ದ್ವೀಪದೆಡೆಯ ಬೆಸಗೊಂಬಡೆ
ಗುಹೇಶ್ವರಾ-ನಿಮ್ಮ ಸ್ಥಾನಂಗಳು.
ವಚನ 0857
ತನು ತರತರಂಬೋಗಿ, ಮನವು ನಿಮ್ಮಲ್ಲಿ ಸಿಲುಕಿತ್ತಯ್ಯಾ.
ನೋಟವೇ ಪ್ರಾಣವಾಗಿ ಅಪ್ಯಾಯನ ನಿಮ್ಮಲ್ಲಿ ಆರತುದಯ್ಯಾ.
ಸಿಲುಕಿತ್ತು ಶೂನ್ಯದೊಳಗೆ, ಗುಹೇಶ್ವರಾ ನಿರಾಳವಯ್ಯಾ !
ವಚನ 0858
ತನು ದಾಸೋಹ, ಅವಯವಂಗಳೆಲ್ಲವು ಆಚಾರ,
ಮನ ಪ್ರಾಣವೆಂಬವೆಲ್ಲವು ಅರಿವಿನ ಮೂರ್ತಿ ನೋಡಾ.
ಒಳಗು ಹೊರಗು, ಹೊರಗು ಒಳಗು ಎಂಬುದನರಿಯದ
ಸತ್ಯ ಸದಾಚಾರಿ ನೀನು.
ನಿನ್ನಳವ ಅರಿಯಲು ಆನು ಏತರವನಯ್ಯಾ.
ಅಂತರಂಗದಲ್ಲಿ ಅರಿವು ಉಂಟಾದಡೇನು ?
ಎನ್ನ ಕಾಯದಲ್ಲಿ ಭಕ್ತಿ ಸ್ವಾಯತವಿಲ್ಲ, ಆಚಾರವೆಂಬುದು ಅತ್ತತ್ತಲಿಲ್ಲ.
ಸರ್ವಾಚಾರಸಂಪನ್ನ [ನೀನು], ನಿನ್ನಳವ ನಾನೆತ್ತ ಬಲ್ಲೆನಯ್ಯಾ ?
ಗುಹೇಶ್ವರ ಸಾಕ್ಷಿಯಾಗಿ,
ನಿಮ್ಮ ಮಹಾಮನೆಯ ಕಾವಲು ಬಂಟ ನಾನೆಂಬುದ
ನಿಮ್ಮ ಪ್ರಮಥರೆಲ್ಲಾ ಬಲ್ಲರು ಸಂಗನಬಸವಣ್ಣಾ.
ವಚನ 0859
ತನು ನಿಮ್ಮ ಪೂಜಿಸುವ ಕೃಪೆಗೆ ಸಂದುದು.
ಮನ ನಿಮ್ಮ ನೆನೆವ ಧ್ಯಾನಕ್ಕೆ ಸಂದುದು.
ಪ್ರಾಣ ನಿಮ್ಮ ನೆರೆವ ರತಿಸುಖಕ್ಕೆ ಸಂದುದು-
ಇಂತು, ತನು ಮನ ಪ್ರಾಣ ನಿಮಗೆ ಸಂದಿಪ್ಪ
ನಿಸ್ಸಂಗಿಯಾದ ನಿಚ್ಚಟ, -ನಿಜಲಿಂಗೈಕ್ಯ ಕಾಣಾ ಗುಹೇಶ್ವರಾ.
ವಚನ 0860
ತನು ಬತ್ತಲಿದ್ದರೇನೊ ಮನ ಶುಚಿಯಾಗದನ್ನಕ್ಕರ ?
ಮಂಡೆ ಬೋಳಾದಡೇನೊ, ಭಾವ ಬಯಲಾಗದನ್ನಕ್ಕರ ?
ಭಸ್ಮವ ಹೂಸಿದಡೇನೊ,
ಕರಣಾದಿ ಗುಣಂಗಳನೊತ್ತಿ ಮೆಟ್ಟಿ ಸುಡದನ್ನಕ್ಕರ ?
ಇಂತೀ ಆಶೆಯ ವೇಷದ ಭಾಷೆಗೆ,
ಗುಹೇಶ್ವರಾ ನೀ ಸಾಕ್ಷಿಯಾಗಿ ಛೀ ಎಂಬೆನು.
ವಚನ 0861
ತನು ಶುದ್ಧವಾಯಿತ್ತು ಬಸವಾ ಇಂದೆನ್ನ.
ಮನ ಶುದ್ಧವಾಯಿತ್ತು ಬಸವಾ ಇಂದೆನ್ನ.
ಭಕ್ತಿ ಯುಕ್ತಿ ಮುಕ್ತಿ ಶುದ್ಧವಾಯಿತ್ತು ಬಸವಾ ಇಂದೆನ್ನ.
ಇಂತೀ ಸರ್ವವೂ ಶುದ್ಧವಾಯಿತ್ತು ಬಸವಾ ಇಂದೆನ್ನ.
ನಮ್ಮ ಗುಹೇಶ್ವರಲಿಂಗಕ್ಕೆ
ಆದಿಯಾಧಾರವಾದೆಯೆಲ್ಲಾ ಬಸವಣ್ಣಾ ನೀನಿಂದು.
ವಚನ 0862
ತನು ಹೊರಗಿರಲು, ಪ್ರಸಾದ ಒಳಗಿರಲು
ಏನಯ್ಯಾ ನಿಮ್ಮ ಮನಕ್ಕೆ ಮನ ನಾಚದು?
ಪ್ರಾಣಕ್ಕೆ ಲಿಂಗದಲ್ಲಿ ಪ್ರಸಾದವ ಕೊಂಡಡೆ,
ವ್ರತಕ್ಕೆ ಭಂಗ ಗುಹೇಶ್ವರಾ.
ವಚನ 0863
ತನುಗುಣನಾಸ್ತಿ ಮನಗುಣನಾಸ್ತಿ ಧನಗುಣನಾಸ್ತಿಯಾದಡೇನು ?
ಭಾವನಾಸ್ತಿಯಾಗಿರಬೇಕು.
ಭಾವನಾಸ್ತಿಯಾದಲ್ಲದೆ ಅರಿವು ನೆಲೆಗೊಳ್ಳದು.
ಅರಿವು ನೆಲೆಗೊಂಡಲ್ಲಿ ಕುರುಹಿಂಗೆ ಹೊರಗು
ಕುರುಹಳಿದು ಕೂಡುವ ಪರಮಸುಖವು,
ಗುಹೇಶ್ವರಲಿಂಗದಲ್ಲಿ ನಿನಗೆ ಸಾಧ್ಯವಾದ ಪರಿಯ ಹೇಳಾ
ಮಡಿವಾಳ ಮಾಚಯ್ಯಾ ?
ವಚನ 0864
ತನುಗುಣನಾಸ್ತಿಯಾಗಿ ಲಿಂಗಸಂಗಿಯಾದಳು.
ಮನಗುಣನಾಸ್ತಿಯಾಗಿ ಅರಿವುಸಂಗಿಯಾದಳು.
ಭಾವಗುಣನಾಸ್ತಿಯಾಗಿ ಮಹಾಪ್ರಭೆ ತಾನಾದಳು.ತಾನು’
ಇದಿರು’ ಎಂಬ ಎರಡಳಿದು
ನಮ್ಮ ಗುಹೇಶ್ವರಲಿಂಗದಲ್ಲಿ ಸ್ವಯಲಿಂಗವಾದ
ಮಹಾದೇವಿಯಕ್ಕಗಳ ನಿಲವಿಂಗೆ ಶರಣೆನುತಿರ್ದೆನು.
ವಚನ 0865
ತನುವ ಗುರುವಿಂಗರ್ಪಿಸಿ, ಮನವ ಲಿಂಗಕ್ಕರ್ಪಿಸಿ,
ಭಾವವ ಜಂಗಮಕ್ಕರ್ಪಿಸಿ, ನಿಜವ ತೃಪ್ತಿಯಲರ್ಪಿಸಿ,
ಘನವ ಅರಿವಿಂಗೆ ಅರ್ಪಿಸಿ,
ಅರ್ಪಿತವೆ ಅನರ್ಪಿತವಾಗಿ, ಅನರ್ಪಿತವೆ ಅರ್ಪಿತವಾಗಿ
ಅರ್ಪಿತ ಅನರ್ಪಿತಗಳಳಿದು ನಿತ್ಯಪ್ರಸಾದಿಯಾಗಿ
ಪ್ರಸಾದದ ಹಾದಿಯನೆಲ್ಲರಿಗೆ ತೋರಿ
ಮಹಾಪ್ರಸಾದದ ಬೆಳವಿಗೆಯ ಮಾಡಿದನು-
ಗುಹೇಶ್ವರನ ಶರಣ ಚನ್ನಬಸವಣ್ಣನು.
ವಚನ 0866
ತನುವ ಗೆಲಲರಿಯದೆ, ಮನವ ಗೆಲಲರಿಯದೆ
ಧನವ ಗೆಲಲರಿಯದೆ, ಭ್ರಮೆಗೊಂಡಿತ್ತು ಲೋಕವೆಲ್ಲವು.
ತನುವ ದಾಸೋಹಕ್ಕೆ ಸವೆಸಿ, ಮನವ ಲಿಂಗಧ್ಯಾನದಲ್ಲಿ ಸವೆಸಿ
ಧನವ ಜಂಗಮದಲ್ಲಿ ಸವೆಸಿ ಗೆಲಬಲ್ಲಡೆ,
ಸಂಗನಬಸವಣ್ಣನಲ್ಲದೆ ಮತ್ತಾರನು ಕಾಣೆ.
ಗುಹೇಶ್ವರಾ-ನಿಮ್ಮ ಶರಣ ಸಂಗನಬಸವಣ್ಣಂಗೆ,
ನಮೋ ನಮೋ ಎನುತಿರ್ದೆನು.
ವಚನ 0867
ತನುವ ತಾಗದ ಮುನ್ನ, ಮನವ ತಾಗದ ಮುನ್ನ,
ಅಪ್ಯಾಯನ ಬಂದು ಎಡೆಗೊಳ್ಳದ ಮುನ್ನ-ಅರ್ಪಿತವ ಮಾಡಬೇಕು.
ಗುರುವಿನ ಕೈಯಲ್ಲಿ ಎಳತಟವಾಗದ ಮುನ್ನ-ಅರ್ಪಿತವ ಮಾಡಬೇಕು.
ಎಡದ ಕೈಯಲ್ಲಿ ಕಿಚ್ಚು, ಬಲದ ಕೈಯಲ್ಲಿ ಹುಲ್ಲು,
ಉರಿ ಹತ್ತಿತ್ತು ಗುಹೇಶ್ವರಾ ನಿಮ್ಮ ಪ್ರಸಾದಿಯ !
ವಚನ 0868
ತನುವ ತೋಂಟವ ಮಾಡಿ ಮನವ ಗುದ್ದಲಿ ಮಾಡಿ
ಅಗೆದು ಕಳೆದೆನಯ್ಯಾ ಭ್ರಾಂತಿನ ಬೇರ
ಒಡೆದು ಸಂಸಾರದ ಹೆಂಟೆಯ ಬಗಿದು ಬಿತ್ತಿದೆನಯ್ಯಾ ಬ್ರಹ್ಮಬೀಜವ.
ಅಖಂಡಮಂಡಲವೆಂಬ ಬಾವಿ, ಪವನವೆ ರಾಟಾಳ
ಸುಷುಮ್ನನಾಳದಿಂದ ಉದಕವ ತಿದ್ದಿ
ಬಸವಗಳೈವರು ಹಸಗೆಡಿಸಿಹವೆಂದು
ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ ,
ಆವಾಗಳೂ ಈ ತೋಂಟದಲ್ಲಿ ಜಾಗರವಿದ್ದು
ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ.
ವಚನ 0869
ತನುವರ್ಪಿತವೆಂದಡೆ ಗುರುದ್ರೋಹ.
ಮನವರ್ಪಿತವೆಂದಡೆ ಲಿಂಗದ್ರೋಹ.
ಧನವರ್ಪಿತವೆಂದಡೆ ಜಂಗಮದ್ರೋಹ-
ಇಂತೀ ತನುಮನಧನಗಳೆಂಬ ಅನಿತ್ಯವನು
ನಿತ್ಯಕ್ಕರ್ಪಿಸಿ ಭಕ್ತನಾದೆನೆಂದಡೆ, ಅದು ಅಜ್ಞಾನ ನೋಡಾ.
ಒಡೆಯರಿಗೆ ಉಂಡೆಯ ಮುರಿದಿಕ್ಕಿ
ನಾ ಭಕ್ತನೆಂಬ ಮಾತ ಸಮ್ಯಕ್ ಶರಣರು ಮೆಚ್ಚುವರೆ ?
ನಮ್ಮ ಗುಹೇಶ್ವರಲಿಂಗಕ್ಕೆ,
ನೀನು ಆವುದರಲ್ಲಿ ಏನನರ್ಪಿಸಿ ಭಕ್ತನಾದೆ ಹೇಳಾ ಸಂಗನಬಸವಣ್ಣಾ ?
ವಚನ 0870
ತನುವಿಂಗೆ ತನುವಾಗಿ, ಮನಕ್ಕೆ ಮನವಾಗಿ, ಜೀವಕ್ಕೆ ಜೀವವಾಗಿ,
ಇದ್ದುದನಾರು ಬಲ್ಲರೊ?
ಅದು ದೂರವೆಂದು, ಸಮೀಪವೆಂದು,
ಮಹಂತ ಗುಹೇಶ್ವರ[ನು], ಒಳಗೆಂದು ಹೊರಗೆಂದು,
ಬರುಸೂರೆವೋದರು.
ವಚನ 0871
ತನುವಿನ ಕೊರತೆಗೆ ಸುಳಿಸುಳಿದು , ಮನದ ಕೊರತೆಗೆ ನೆನೆನೆನೆದು,
ಭಾವದ ಕೊರತೆಗೆ ತಿಳಿತಿಳಿದು, ಶಬ್ದದ ಕೊರತೆಗೆ ಉಲಿದುಲಿದು,
ಗುಹೇಶ್ವರನೆಂಬ ಲಿಂಗವು ಮನದಲ್ಲಿ ನೆಲೆಗೊಳ್ಳದಾಗಿ !
ವಚನ 0872
ತನುವಿನ ಗುಣವ ವಿವರಿಸಿಹೆನೆಂದೆಡೆ, ಮನ ಶುದ್ಧವಾಗಬೇಕು.
ಮನದ ಗುಣವ ವಿವರಿಸಿಹೆನೆಂದೆಡೆ ಇಂದ್ರಿಯಂಗಳು, ಶುದ್ಧವಾಗಬೇಕು.
ತನು ಮನ ಇಂದ್ರಿಯಂಗಳು ಶುದ್ಧ ಸುಯಿಧಾನವಾಗಿ
ಲಿಂಗಮುಖಕ್ಕೆ ವೇದ್ಯವಾದಲ್ಲದೆ
ಗುಹೇಶ್ವರನ ಬೆರಸಬಾರದು ಕೇಳಾ ತಾಯೆ.
ವಚನ 0873
ತನುವಿನಲ್ಲಿ ತನು ಸವೆಯದು, ಮನದಲ್ಲಿ ಮನ ಸವೆಯದು,
ಧನದಲ್ಲಿ ಧನ ಸವೆಯದು.
ಭಕ್ತಿಯುಕ್ತಿಯ ಮಾತು ನಿನಗೇಕೆ ಹೇಳಾ ಬಸವಾ ?
ಮಾಟಕೂಟವೆಂಬ ಕೀರ್ತಿವಾರ್ತೆಗೆ ಸಿಲುಕಿ
ಜಂಗಮವೆ ಲಿಂಗವೆಂಬುದ ಮರೆದೆಯೆಲ್ಲಾ ಬಸವಣ್ಣಾ !
ಗುಹೇಶ್ವರನ ಶರಣರಿಗೆ ತ್ರಿಕರಣವನೊಪ್ಪಿಸಿದಲ್ಲದೆ
ಭಕ್ತನಾಗಬಾರದು ಕಾಣಾ ಸಂಗನಬಸವಣ್ಣಾ.
ವಚನ 0874
ತನುವಿನಲ್ಲಿಪ್ಪ ಲೋಭವ ಮನವ ಕದ್ದು ಮಾತನಾಡಿದಡೆ
ಆ ತನುವೆ ಮನೋರೂಪವಾಗಿ ಕಾಣಬರುತ್ತದೆ.
ಆ ಮನದಲ್ಲಿ ಬಯಕೆ ಸಮರತಿಯಾಗದಾಗಿ;
ಕಾಮ(ಯ?)ದ ಕರುಳು ಲೋಭದ ಬಯಕೆಯೊಳಗದೆ.
ಅರಿದೆನೆಂದು ಬರುಮಾತ ನುಡಿದಡೆ
ನಮ್ಮ ಗುಹೇಶ್ವರಲಿಂಗವು ಮೆಚ್ಚ ನೋಡಾ
ಮಡಿವಾಳ ಮಾಚಯ್ಯಾ.
ವಚನ 0875
ತನುವಿಲ್ಲದೆ ಕಂಡು ಕಂಡು ನಿಂದೆ.
ಬೆರಗಿಲ್ಲದೆ ಕಂಡು ಕಂಡು ಬೆರಗಾದೆ.
ರೂಹಿಲ್ಲದೆ ಕಂಡರಿದೆ ಗುಹೇಶ್ವರನೆಂಬ ಲಿಂಗವ !
ವಚನ 0876
ತನುವೆಂಬ ಏರಿಗೆ ಮನವೆಂಬ ಕಟ್ಟೆಯ ಮಾಡಿ,
ಬಲಿದು ಷಡ್ವಿಧಭಕ್ತಿಯೆಂಬ ಸೋಪಾನದಿಂದ
ಪರಮಾನಂದವೆಂಬ ಜಲವ ತುಂಬಿ
ಕೆರೆಯ ಕಟ್ಟಬಲ್ಲವರನಾರನೂ ಕಾಣೆ !
ನಾನು ಕಟ್ಟಿದ ಕೆರೆ ಸ್ಥಿರವಾಯಿತ್ತು ಗುಹೇಶ್ವರಾ ನಿಮ್ಮಾಣೆ.
ವಚನ 0877
ತನುವೆಂಬ ದೇವಸ್ಥಾನದೊಳಗೆ ಮಸ್ತಕಾಗ್ರವೆಂಬ ಸೆಜ್ಜಾಗೃಹದಲ್ಲಿ
ಪ್ರಾಣಲಿಂಗಸ್ವಯಂಬ ಪ್ರತಿಷ್ಠೆಯಾಗಿರಲು,
ಗುರುವೆಂಬ ಆರ್ಚಕನು ಮಂತ್ರವೆಂಬ ಆಗಮಿಕನು ಸಹ
ಲಿಂಗವೆಂಬ ಉಚ್ಚಾಯ ವಿಗ್ರಹವನು ಕರಸ್ಥಲವೆಂಬ ರಥದಲ್ಲಿ
ಮೂರ್ತಿಗೊಳಿಸಿ-
ಆ ಕರಸ್ಥಲವೆಂಬ ರಥಕ್ಕೆ ಜ್ಞಾನಕ್ರಿಯೆ ಎರಡು ಪಾದದ್ವಯ ಎರಡು ಕೂಡಿ
ನಾಲ್ಕು ಗಾಲಿಗಳಂ ಹೂಡಿ, ಪಂಚೇಂದ್ರಿಯಗಳೆಂಬ ಪತಾಕೆಗಳಂ ಧರಿಸಿ
ಏಕೋಭಾವವೆಂಬ ಕಳಸವನಿಟ್ಟು, ದಶವಾಯುಗಳೆಂಬ ಪಾಶವಂ ಬಂದಿಸಿ
ಷಡಂಗಗಳೆಂಬ ಮೊಳೆಗಳಂ ಬಲಿದು, ಸಪ್ತಧಾತುವೆಂಬ
ಝಲ್ಲಿ ಪಟ್ಟೆಯನಲಂಕರಿಸಿ
ಅಷ್ಟಮದ ಸಪ್ತವ್ಯಸನಂಗಳೆಂಬ ಆನೆ ಕುದುರೆಗಳು ಸಹ
ಮಹಾನಾದವೆಂಬ ಭೇರಿ ವಾದ್ಯಂಗಳಿಂ
ಷೋಡಶವಿಕಾರಂಗಳೆಂಬ ನರ್ತಕೀಮೇಳದಾರತಿಯಿಂ
ಅಂತಃಕರಣ ಚತುಷ್ಟಯಗಳೆಂಬ ಚಾಮರಧಾರಕರಿಂ
ಮನವೆಂಬ ಹೊರಜೆಯಿಂ ಕರಣಂಗಳೆಂಬ ಕಾಲಾಳ್ಗಳಿಂ-ಪಿಡಿಸಿ,-
ಸುಬುದ್ಧಿಯೆಂಬ ಭೂಮಿಯಲ್ಲಿ ಆನಂದವೆಂಬರಸು ರಥಮಂ ನಡೆಸಿ
ನೆನಹು ನಿಷ್ಪತ್ತಿಯೆಂಬ ಸ್ಥಾನದಲ್ಲಿ ನಿಲಿಸಿ-
ಇಷ್ಟಲಿಂಗವೆಂಬ ಉಚ್ಚಾಯ ವಿಗ್ರಹವನ್ನು
ಹೃದಯಕಮಲವೆಂಬ ಅಂತರಾಳದಲ್ಲಿ ಮೂರ್ತಿಗೊಳಿಸಿ
ಆನಂದವೆಂಬ ಅರಸು ನಿರಾಳವೆಂಬ ಅಪರಿಮಿತ ಪಟ್ಟಣವ
ಪ್ರವೇಶವಾದನು ಕಾಣಾ ಗುಹೇಶ್ವರಾ.
ವಚನ 0878
ತನ್ನ ಕಣ್ಣಿನಲ್ಲಿ ಕಾಣದಂತೆ ಇದ್ದಿತ್ತು ದರ್ಪಣದೊಳಗಣ ಬೆಳಗು.
ಬೆಳಗಿನೊಳಗಣ ಬೆಳಗು ಗುಹೇಶ್ವರನಿಪ್ಪೆಡೆಯ ತಿಳಿದು ನೋಡಯ್ಯಾ.
ಸಂಗನಬಸವಣ್ಣಾ.
ವಚನ 0879
ತನ್ನ ತಾನರಿತ ಬಳಿಕ ಅನ್ಯವಿಲ್ಲ.
ಕಾಬ ಮರಹು ನಷ್ಟವಾಯಿತ್ತು.
ಆ ಮರವೆ ನಷ್ಟವಾದ ಬಳಿಕ
ಅರಿವಿನ ಮರವೆಯ ನೆರೆ ಮರೆದ ಬಳಿಕ
ಅಲ್ಲಿ ನಿಶ್ಶಬ್ದವಾಯಿತ್ತು ಗುಹೇಶ್ವರಾ.
ವಚನ 0880
ತನ್ನ ತಾನರಿದಡೆ ನುಡಿಯೆಲ್ಲ ತತ್ವ ನೋಡಾ !
ತನ್ನ ತಾ ಮರೆದಡೆ ನುಡಿಯೆಲ್ಲ ಮಾಯೆ ನೋಡಾ !
ಅರಿದು ಮರೆದ ಶಿವಯೋಗಿಯ ಶಬ್ದವೆಲ್ಲವು
ಉಪದೇಶವಲ್ಲದೆ ಬಿನ್ನವುಂಟೆ ?
ನಿನ್ನ ಮನದ ಕಳವಳವ ತಿಳುಹಲೆಂದು ಮಾತನಾಡಿಸಿ ನೋಡಿದಡೆ,
ಎನ್ನ ಮನದೊಳಗೆ ಕಂದು ಕಲೆ ಎಂಬುದಿಲ್ಲ ನೋಡಾ !
ನಮ್ಮ ಗುಹೇಶ್ವರಲಿಂಗಕ್ಕೆ ನೀನು ಕರುಣದ ಶಿಶುವಾದ ಕಾರಣ
ಬಾಯ್ದೆಗೆದೆನಲ್ಲದೆ, ಬಿನ್ನವುಂಟೆ ಹೇಳಾ ಮರುಳೆ ?
ವಚನ 0881
ತನ್ನ ತಾನರಿದೆನೆಂಬವನ ಮುನ್ನ ನುಂಗಿತ್ತು ಮಾಯೆ.
ನಿನ್ನೊಳಗೆ ಅರಿವು ಬಿನ್ನವಾಗಿರುತ್ತಿರಲು
ಮುನ್ನವೆ ನೀನು ದೂರಸ್ಥ ನೋಡಾ !
ಬಿನ್ನವಿಲ್ಲದ ಅಜ್ಞಾನವ ಬಿನ್ನವ ಮಾಡಬಲ್ಲಡೆ
ತನ್ನಲ್ಲಿ ಅರಿವು ನಿಜವಪ್ಪುದು ಗುಹೇಶ್ವರಾ
ವಚನ 0882
ತನ್ನ ತಾನರಿದೆಹೆನೆಂದಡೆ ತನಗೆ ತಾನನ್ಯನೆ ?
ನಿಮ್ಮ ನಾನರಿದೆಹೆನೆಂದಡೆ ನಿಮ್ಮಿಂದಲಾನನ್ಯನೆ ?
ತನ್ನ ನಿಮ್ಮನರಿದೆಹೆನೆಂಬ ಅರಿವಿನ ಬೆನ್ನಲ್ಲಿಪ್ಪುದು
ತನ್ನ ತನ್ನಿಂದಿನ್ನೇತರಿಂದರಿವೆ ಹೇಳಾ ಗುಹೇಶ್ವರಾ.
ವಚನ 0883
ತನ್ನ ಮುಟ್ಟಿ ನೀಡಿದುದೆ ಪ್ರಸಾದ,
ತನ್ನ ಮುಟ್ಟ[ದೆ] ನೀಡಿದುದೆ ಓಗರ.
ಲಿಂಗಕ್ಕೆ ಕೊಟ್ಟು ಕೊಂಡಡೆ ಪ್ರಸಾದಿ.
ಇದು ಕಾರಣ-ಇಂತಪ್ಪ ಭೃತ್ಯಾಚಾರಿಗಲ್ಲದೆ
ಪ್ರಸಾದವಿಲ್ಲ ಗುಹೇಶ್ವರಾ.
ವಚನ 0884
ತನ್ನನರಿಯದ ಅರಿವೆಂತುಟೊ ? ತನ್ನ ಮರೆದ ಮರಹೆಂತುಟೊ ?
ಅರಿದವರು ಮರೆದವರು
ನಿಮ್ಮ ಪ್ರತಿಬಿಂಬದಂತಿಪ್ಪರು ಕಾಣಾ ಗುಹೇಶ್ವರಾ.
ವಚನ 0885
ತನ್ನನರಿಯೆನೆಂಬುದು ಅಜ್ಞಾನ ನೋಡಾ.
ಅರಿಯದ ಅಜ್ಞಾನವ ಅಗಳೆದು
ಜ್ಞಾನವ ಕಾಣೆನೆಂಬುದು ವಿಪರೀತ ಭಾವ ನೋಡಾ !
ಎಲ್ಲವನು ತೋರುವ ಘನವನು ಎಲ್ಲಿಯೂ ಕಾಣಬಾರದು.
ಕಾಣಬಾರದ ನಿಜವ ತೋರಬಾರದು,
ತೋರಬಾರದ ನಿಜವ ತಿಳಿಯಬಾರದು,.
ಗುಹೇಶ್ವರಲಿಂಗದಲ್ಲಿ ಬಯಕೆಯುಳ್ಳನ್ನಕ್ಕ
ತವಕ ಎಡೆಗೊಂಡಿಪ್ಪ ಕಾರಣ
ತಿಳುಹಲಿಲ್ಲವೆಂಬುದ ನಿನ್ನ ನೀ ತಿಳಿದು ನೋಡಾ ಸಿದ್ಧರಾಮಯ್ಯಾ.
ವಚನ 0886
ತನ್ನರಿದವಂಗೆ ಇದಿರೆಂಬುದಿಲ್ಲ, ತನ್ನರಿಯದವಂಗೆ ಇದಿರೆಂಬುದುಂಟು.
ಅರುಹು ಮರಹು ಕುರುಹಳಿಯಿತ್ತು, ಬೆರಗಾಯಿತ್ತು.
ಬೆರಗು ಬೆರಗಿನೊಳಗೆ ಕರಿಗೊಂಡಿತ್ತು ಇದೇನೊ?
ಭ್ರಾಂತು ಭ್ರಾಂತನೆ ನುಂಗಿ
ಗುಹೇಶ್ವರ ಭವಿಯ ಬೆಂಬತ್ತಿ ಭವಿಯಾದ ಕಾರಣ
ವಚನ 0887
ತನ್ನಿಂದ ತನ್ನ ನೋಡಲು, ತನಗೆ ತಾ ಪ್ರತ್ಯಕ್ಷನಾಗೆ
ಆ ಪ್ರತ್ಯಕ್ಷವೆಂಬುದೆ ಭ್ರಾಂತು ನೋಡಾ !
ಅದೇನು ಕಾರಣವೆಂದಡೆ;
ತನಗೆ ತಾನು ಅನ್ಯವಲ್ಲಾಗಿ, ಎನಗೆ ಅನ್ಯವಿಲ್ಲ.
ಅನ್ಯ ನಾನಲ್ಲ ಎಂದು; ಬ್ರಹ್ಮವು ನಾನು’ ಎಂಬೆಡೆ- ಅದು ಅತಿಶಯದಿಂದ ಭ್ರಾಂತು-ಎಂಬುದನು ತಿಳಿದು ನೋಡಾ. ಅದೇನು ಕಾರಣವೆಂದಡೆ:
ಬ್ರಹ್ಮಕ್ಕೆ ನಾ ಬ್ರಹ್ಮ’ ಎಂಬುದು ಘಟಿಸದಾಗಿ !
ಅತಿಶಯದ ಸುಖವಳಿದ ನಿರಂತರ ಸುಖವೆಂತುಟೆಂದಡೆ
ಗುರು ಮುಗ್ಧನಾದೆಡೆಯ ತಿಳಿಯಲು ನೋಡಲು
ಗುಹೇಶ್ವರಲಿಂಗದ ನಿಲವು ತಾನೆ.
ವಚನ 0888
ತಪವೆಂಬುದು ತಗಹು, ನೇಮವೆಂಬುದು ಬಂಧನ,
ಶೀಲವೆಂಬುದು ಸೂತಕ, ಭಾಷೆಯೆಂಬುದು ಪ್ರಾಣ ಘಾತಕ.-
ಇಂತೀ ಚತುರ್ವಿಧದೊಳಗಲ್ಲ
ಗುಹೇಶ್ವರಾ ನಿಮ್ಮ ಶರಣರು ಅಗ್ರಗಣ್ಯರು.
ತಿ
ವಚನ 0889
ತಪ್ಪ ಹೊರಿಸಿ ಹೊರಟೆಹೆನೆಂಬುದು ಸತ್ಯವೆ ?
ತನು, ಸೀರೆಯನುಳಿದು ನಿರ್ವಾಣವಾದಲ್ಲಿ
ಮನದ ಭ್ರಾಂತು ನಿಶ್ಚಯವಾಗದು !
ಕೇಶವೆಂಬ ಸೀರೆ ಅಂಗಕ್ಕೆ ಮರೆಯಾಯಿತ್ತು.
ಅಪಮಾನವೆಂತು ಹರಿಯಿತ್ತು ?
ಅದು ಗುಹೇಶ್ವರಲಿಂಗಕ್ಕೆ ಸಲ್ಲದ ವೇಷ !
ವಚನ 0890
ತಪ್ಪಿ ನೋಡಿದಡೆ ಮನದಲ್ಲಿ ಅಚ್ಚೊತ್ತಿದಂತಿತ್ತು .
ಇಪ್ಪೆಡೆಯ ವಿಚಾರಿಸಿ ನೋಡಿದಡೆ ಇಲ್ಲದಂತಾಯಿತ್ತು,
ಲೆಪ್ಪದ ಜಲದ ಪಾದಘಾತದಂತೆ.
ಕರ್ತೃತ್ವವೆಲ್ಲಿಯದೊ ಗುಹೇಶ್ವರಾ.
ವಚನ 0891
ತಮ್ಮ ತಮ್ಮ ಭಾವಕ್ಕೆ, ಉಡಿಯಲ್ಲಿ ಕಟ್ಟಿಕೊಂಡ(ಬ?)ರು.
ತಮ್ಮ ತಮ್ಮ ಭಾವಕ್ಕೆ, ಕೊರಳಲ್ಲಿ ಕಟ್ಟಿಕೊಂಡ(ಬ?)ರು,
ನಾನೆನ್ನ ಭಾವಕ್ಕೆ ಪೂಜಿಸ ಹೋದಡೆ,
ಕೈತಪ್ಪಿ ಮನದಲ್ಲಿ ಸಿಲುಕಿತ್ತೆನ್ನ ಲಿಂಗ.
ಸಾಧಕನಲ್ಲ ಭೇದಕನಲ್ಲ-ಗುಹೇಶ್ವರಲ್ಲಯ್ಯ ತಾನೆ ಬಲ್ಲ.
ವಚನ 0892
ತಮ್ಮ ತಮ್ಮ ಮುಖದಲ್ಲಿ;
ಲಿಂಗವನೊಲಿಸಿದರು, ಆರಾದಿಸಿದರು, ಬೇಡಿತ್ತ ಪಡೆದರು ಎಲ್ಲಾ-
ಲಿಂಗಭೋಗೋಪಭೋಗಿಗಳಾಗಿ ಭೋಗಿಸುವವರಿಲ್ಲ.
ಗಂಗೆವಾಳುಕರೆಲ್ಲ ವರಮುಖಿಗಳಾಗಿ
ಮೂರ್ತಿಯಳಿದು ಹೋದರು ಗುಹೇಶ್ವರಾ.
ವಚನ 0893
ತಮ್ಮ ತಾವರಿದೆಹೆವೆಂಬರು, ತಮ್ಮ ತಾವರಿವ ಪರಿಯೆಂತೋ ?
ಎಲ್ಲರನೂ ಕಾಬ ಕಣ್ಣು ತನ್ನ ಕಾಬುದೆ ?
ತನ್ನರಿವಿಂದ ತಾ ಬಿನ್ನವಾಗಲರಿವನೆ ?
ತನ್ನ ತಾನಿದಿರಿಟ್ಟು ಕಾಬಾತನೊಬ್ಬನುಂಟೆ ?
ತನ್ನ ತಾನರಿವ ಪರಿಯ ಗುಹೇಶ್ವರಾ ನಿಮ್ಮ ಶರಣ ಬಲ್ಲ.
ವಚನ 0894
ತಮ್ಮ ತಾವರಿಯರು ಹೇಳಿದಡೂ ಕೇಳರು.
ಆರರ ಹೊಲಬ ಏನೆಂದರಿಯರು.
ಎಂಟರ ಕಂಟಕವ ಮುನ್ನರಿಯರು.
ಏರಿದ ಬೆಟ್ಟವ ಇಳಿಯಲರಿಯದವರ ಏನೆಂಬೆ ಗುಹೇಶ್ವರಾ ?
ವಚನ 0895
ತಲೆ ಇಲ್ಲದ ತಲೆಯಾತಂಗೆ ಕರುಳಿಲ್ಲದ ಒಡಲು ನೋಡಾ!
ಆ ನಲ್ಲಂಗೆ ಅಂಗವಿಲ್ಲದ ಅಂಗನೆ ಸತಿಯಾಗಿಪ್ಪಳು!
ಇವರಿಬ್ಬರ ಬಸುರಲ್ಲಿ ಹುಟ್ಟಿದಳೆಮ್ಮ ತಾಯಿ,
ನಾ ಹುಟ್ಟಿ, ತಾಯ ಕೈವಿಡಿದು ಸಂಗವ ಮಾಡಿ
ನಿರ್ದೊಷಿಯಾದೆನು ಕಾಣಾ ಗುಹೇಶ್ವರಾ.
ವಚನ 0896
ತಲೆಯ ಮೇಲೆ ತಲೆಯಿದ್ದಿತ್ತಲ್ಲಾ !
ಆ ತಲೆಯಾತಲೆ ನುಂಗಿತ್ತಲ್ಲಾ !
ಸತ್ತು ಹಾಲ ಸವಿಯ ಬಲ್ಲಡೆ,
ರಥದ ಕೀಲ ಬಲ್ಲಡೆ-ಅದು ಯೋಗ !
ಶಿಶು ಕಂಡ ಕನಸಿನಲುಳ್ಳ ತೃಪ್ತಿ ನಿನ್ನಲ್ಲಿ ಉಂಟೆ ಗುಹೇಶ್ವರಾ?
ವಚನ 0897
ತಲೆಯಲಟ್ಟುಂಬುದ ಒಲೆಯಲಟ್ಟುಂಡಡೆ ಹೊಗೆ ಘನವಾಯಿತ್ತು.
ತಲೆಯಲಟ್ಟುಂಡಾತ ಮಹಾಪ್ರಸಾದಿ,
ಈಶ್ವರಸ್ವರವ ನುಡಿಯಲರಿಯದೆ ಬೀಸರವೋದರಣ್ಣಗಳೆಲ್ಲ.
ಈಶ್ವರ ಸ್ವರವ ನುಡಿದರೆ ತಾನೆ ಶಿವನು
ಗುಹೇಶ್ವರನೆಂಬುದು ಬೇರಿಲ್ಲ ಕಾಣಿರೊ.
ವಚನ 0898
ತಲೆಯಲಟ್ಟುಂಬುದ, ಒಲೆಯಲಟ್ಟುಂಬರು,
ಒಲೆಯಲುಳ್ಳುದ, ಹೊಟ್ಟೆಯಲುಂಬೈಸಕ್ಕರ
ಹೊಗೆ ಘನವಾಯಿತ್ತು-
ಇದ ಕಂಡು ಹೇಸಿಬಿಟ್ಟೆನು ಗುಹೇಶ್ವರಾ
ವಚನ 0899
ತಲೆಯಿಲ್ಲದ ಅಟ್ಟೆ ಜಗವ ನುಂಗಿತ್ತು.
ಅಟ್ಟೆಯಿಲ್ಲದ ತಲೆ ಆಕಾಶವ ನುಂಗಿತ್ತು.
ಅಟ್ಟೆ ಬೇರೆ, ತಲೆ ಬೇರಾದಡೆ-ಮನ ಸಂಚಲಿಸುತ್ತಿದ್ದಿತ್ತು !
ಅಟ್ಟೆಯನೂ ತಲೆಯನೂ ಬಯಲು ನುಂಗಿದಡೆ,
ಅನು ನುಂಗಿದೆನು ಗುಹೇಶ್ವರನಿಲ್ಲದಂತೆ !
ವಚನ 0900
ತಲೆಯಿಲ್ಲದ ಮೃಗ ಒಡಲಿಲ್ಲದೆ ಆಹಾರವ ಕೊಂಡಿತ್ತು,
ಹೆಜ್ಜೆ ಇಲ್ಲದೆ ಹರಿಯಿತ್ತು !
ಅದ ಶುದ್ಧಿಯ ಮಾಡ ಹೋದಾತನಿನ್ನೂ ಮರಳನು.
ವೆಜ್ಜವಿಲ್ಲದ ಮಣಿಯ ದಾರವಿಲ್ಲದೆ ಪವಣಿಸುವ
ನಿಮ್ಮ ಶರಣನ ಪರಿಯ ನೋಡಾ ಗುಹೇಶ್ವರಾ !
ವಚನ 0901
ತಾ ಕೇಳಿ, ನೋಡಿ, ಮುಟ್ಟಿ ಮನವರಿದ ಸುಖವ
ಲಿಂಗಕ್ಕೆ ಕೊಡುವುದೆಂತೊ ಅಂಗ ಮನವೆಂಬವನು ?
ಲಿಂಗದ ಪರಿಪೂರ್ಣವನು ಕಾಣದಿಹ
ಅಂಗಹೀನರಿಗೇಕೆ ವ್ರತಾಚಾರದ ಹೊಲಬು ?
ಜೀರ್ಣಪರ್ಣ-ರವಿರಶ್ಮಿ ಜ್ಞೇಯದಂತೆ (ನ್ಯಾಯದಂತೆ?)
ಜಗದೊಳಗೆ ಏತರಲ್ಲಿಯೂ ಖಂಡಿತವಿಲ್ಲದೆ ಗುಹೇಶ್ವರನಿಪ್ಪ
ಭಕ್ತದೇಹಿಕನಾಗಿ !
ವಚನ 0902
ತಾ ನಡೆವಡೆ ನಡೆಗೆಟ್ಟ ನಡೆಯ ನಡೆವುದಯ್ಯಾ.
ತಾ ನುಡಿವಡೆ ನುಡಿಗೆಟ್ಟ ನುಡಿಯ ನುಡಿವುದಯ್ಯಾ.
ರೂಹಿಲ್ಲದ ಸಂಗವ ಮಾಡಬೇಕು,
ಭವವಿಲ್ಲದ ಭಕ್ತಿಯ ಮಾಡಬೇಕು.
ತಾನಾವನೆಂದರಿಯದಂತಿಹುದು, ಗುಹೇಶ್ವರಾ.
ವಚನ 0903
ತಾ ಬಾಳಲಾರೆ ವಿದಿಯ ಬೈದನೆಂಬ ನಾಣ್ಣುಡಿ
ದಿಟವಾಯಿತ್ತಲ್ಲಾ ಬಸವಣ್ಣಾ.
ಅವಧಾನ ತಪ್ಪಿ ಆಚಾರಗೆಟ್ಟು ನಡೆದು
ಶಿವನಾದಿನವೆಂದಡೆ ಹೋಹುದೆ ?
ಗುಹೇಶ್ವರಲಿಂಗದಲ್ಲಿ ಈ ಬಣ್ಣಿಗೆಯ ಮಾತು ಸಲ್ಲದು ಕೇಳಾ
ಸಂಗನಬಸವಣ್ಣಾ.
ವಚನ 0904
ತಾ ಸುಖಿಯಾದಡೆ ನಡೆಯಲು ಬೇಡ.
ತಾ ಸುಖಿಯಾದಡೆ ನುಡಿಯಲು ಬೇಡ.
ತಾ ಸುಖಿಯಾದಡೆ ಪೂಜಿಸಲು ಬೇಡ,
ತಾ ಸುಖಿಯಾದಡೆ ಉಣಲು ಬೇಡಫ ಗುಹೇಶ್ವರಾ.
ವಚನ 0905
ತಾ ಹೆಳವ; ಎಡಹೊತ್ತಿನ ಪಯಣ;
ಒಡ್ಡಿದ ಮಳೆಯ ಮುಗಿಲು,
ಸೋರುವ ಮನೆ, ನೆಲದ ಹಾಸಿಕೆ,
ಕೊರಳಲ್ಲಿ ಮೂರು ಮಣ್ಣ ಮಣಿ,
ಹಿಂದೆ ಕಲ್ಲೊರಳು, ಮೇಣದೊನಕೆ,
ಹಳೆ ಅಕ್ಕಿ, ಹೊಸ ಭಾಂಡ-
ಹಸಿಯ ಬೆರಣಿಯ ತಾಳಿಯನಿಕ್ಕಿ,
ಕಿಚ್ಚಿಲ್ಲದೆ ಒಲೆಯನುರುಹಿ ಓಗರವನಡಲು,
ಗುಹೇಶ್ವರಲಿಂಗವು ಒಡೆದ ತಳಿಗೆಯ [ಲಿ?]
ಆರೋಗಣೆಯ ಮಾಡಿದನು.
ವಚನ 0906
ತಾನಿಟ್ಟ ಬೇತಾಳ ತನ್ನನೆ ತಿಂದಿತ್ತೆಂಬಂತೆ,
ನಿನ್ನ ಭವಾವಳಿಯನೆತ್ತುವನ್ನಕ್ಕ
ಎನ್ನ ಮರವೆ ಎನಗೆ ಎಚ್ಚರಿಕೆಯಾಯಿತ್ತು,
ಎನ್ನ ಪೂರ್ವ ನಿರ್ವಾಹವಾಯಿತ್ತು !
ನಿಮ್ಮ ವರ್ಮ ತಿಳಿಯದೆನಗೆ,-ಅದೆಂತೆಂದಡೆ:
ಹಿಂದೆ ನೀನೇನಾಗಿದ್ದೆ ಎಂಬುದನು ಅರಿಯೆನಾಗಿ.
ಇಂದು ನಿಮ್ಮ ಮನೆಯಲಿ ಆರೋಗಣೆಯಾಗದು ಕಾಣಾ
ಸಂಗನಬಸವಣ್ಣ ನಮ್ಮ ಗುಹೇಶ್ವರಲಿಂಗಕ್ಕೆ !
ವಚನ 0907
ತಾನಿರ್ದು ತನ್ನನರಿಯದೆ ಇನ್ನೆಂದಿಗೆ ಶರಣನಪ್ಪನಯ್ಯಾ ?
ಪವನಸ್ಥಾನವನರಿದ ಬಳಿಕ, ಬಂದು ಬಂದು ಸುಳಿಯಲಿಲ್ಲ.
ಇದರಂತುವನಾರು ಬಲ್ಲರು ಗುಹೇಶ್ವರಾ-ನಿಮ್ಮ ಶರಣರಲ್ಲದೆ ?
ವಚನ 0908
ತಾನು ಮಿಂದು ಕಾಲ ತೊಳೆದ ಬಳಿಕ
ಲಿಂಗಕ್ಕೆ ಮಜ್ಜನಕ್ಕೆರೆವರು.
ತಾನು ಲಿಂಗವೊ ಲಿಂಗ ಲಿಂಗವೊ ?
ಏನು ಲಿಂಗನವುಫ? ಬಲ್ಲಡೆ ನೀವು ಹೇಳಿರೆ.
ಲಿಂಗಸಂಬಂಧವನರಿಯದೆ ಕೆಟ್ಟರು ಗುಹೇಶ್ವರಾ.
ವಚನ 0909
ತಾನೆಂದೆನಲೊಲ್ಲದೆ ಗುರುವೆಂದು ಹಿಡಿದವನ,
ಗುರುವೆಂದಲ್ಲಿಯೆ ನೀನೆಂದು ನಡೆದವನ,
ನೀನೆಂದಲ್ಲಿಯೆ ಲಿಂಗಜಂಗಮದ ಸಕೀಲಸಂಬಂಧವ ನೆಲೆಗೊಳಿಸಿದವನ,
ಲಿಂಗಜಂಗಮದಲ್ಲಿ ತನ್ನ ಮರೆದು ಕರಿಗೊಂಡ ಲಿಂಗೈಕ್ಯನ,
ಗುಹೇಶ್ವರಲಿಂಗದಲ್ಲಿ ಚನ್ನಬಸವಣ್ಣನ
ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
ವಚನ 0910
ತಾಪತ್ರಯದಲ್ಲಿ ಬೇವ ಒಡಲ ಹಿಡಿದು ತಂದು
ಜ್ಞಾನವೆಂಬ ಉರಿಗೆ ಆಹುತಿಯ ಕೊಟ್ಟವನ,
ಜ್ಞಾನವೆಂಬ ಕಾಯವ ಹಿಡಿದು ತಂದು
ನಿಶ್ಶೂನ್ಯವೆಂಬ ತೇಜದಲ್ಲಿ ಸುಟ್ಟವನ,
ನಿಶ್ಶೂನ್ಯವೆಂಬ ಶಬ್ದವ ಸುಟ್ಟು, ಭಸ್ಮವ ಧರಿಸಿದ ಲಿಂಗೈಕ್ಯನ,
ಲೋಕದ ಸ್ಥಿತಿ-ಗತಿಯ ಮರೆದು, ನಿರ್ವಾಣದಲ್ಲಿ ನಿಂದವನ,
ಗುಹೇಶ್ವರಲಿಂಗದಲ್ಲಿ ತನ್ನ ಮರೆದ ಅಲ್ಲಯ್ಯನ ಕೋಪದಲ್ಲಿ ಕಿಚ್ಚಿನಲ್ಲಿ
ಸುಟ್ಟಿಹೆನೆಂಬ ಸಿದ್ಧರಾಮಯ್ಯನನೇನೆಂಬೆನು ?
ವಚನ 0911
ತಾಯಿ ಬಂಜೆಯಾದಲ್ಲದೆ ಶಿಶು ಗತವಾಗದು.
ಬೀಜ ನಷ್ಟವಾದಲ್ಲದೆ ಸಸಿ ಗತವಾಗದು.
ನಾಮ ನಷ್ಟವಾದಲ್ಲದೆ ನೇಮ ನಷ್ಟವಾಗದು.
ಮೊದಲು ಕೆಟ್ಟಲ್ಲದೆ ಲಾಭದಾಸೆ ಬಿಡದು.
ಗುಹೇಶ್ವರನೆಂಬ ಲಿಂಗದ ನಿಜವನೆಯ್ದುವಡೆ,
ಪೂಜೆಯ ಫಲ ಮಾದಲ್ಲದೆ ಭವಂ ನಾಸ್ತಿಯಾಗದು.
ವಚನ 0912
ತಾಯಿಗಾದ ಸುಖದುಃಖಂಗಳು ಬಸಿರ ಶಿಶುವಿಂಗೆ ನೋಡಯ್ಯಾ.
ಶಿವಶರಣರಿಗೆ ಮಾಡಿದ ಸುಖದುಃಖಗಳು ಶಿವನ ತಾಗುವುವು.
ಕರಣವುಳ್ಳವರು ಮರಣವಿಲ್ಲದವಂಗೆ ಮುಳಿದಡೆ
ತನುವುಳ್ಳವರ ಮುಟ್ಟುವುದಲ್ಲದೆ, ಒಡಲಿಲ್ಲದಾತನ ಮುಟ್ಟಬಲ್ಲುದೆ ?
ಗುಹೇಶ್ವರಾ ಕೆಂಡವ ಒರಲೆ ಮುಟ್ಟಬಲ್ಲುದೆ ?
ವಚನ 0913
ತಾಯಿ-ತಂದೆಯಿಲ್ಲದ ಕಂದಾ,
ನಿನಗೆ ನೀನೆ ಹುಟ್ಟಿ ಬೆಳೆದೆಯಲ್ಲಾ !
ನಿನ್ನ ಪರಿಣಾಮವೆ ನಿನಗೆ ಪ್ರಾಣತೃಪ್ತಿಯಾಗಿರ್ದೆಯಲ್ಲಾ !
ಭೇದಕರಿಗೆ ಅಭೇದ್ಯನಾಗಿ ನಿನ್ನ ನೀನೆ ಬೆಳಗುತ್ತಿರ್ದೆಯಲ್ಲಾ !
ನಿನ್ನ ಚರಿತ್ರ ನಿನಗೆ ಸಹಜ ಗುಹೇಶ್ವರಾ.
ವಚನ 0914
ತಾಯಿಯಿಲ್ಲದ ಶಿಶುವಿಂಗೆ,
ಶಿಶುವಿಲ್ಲದ ತಾಯಿ ಮೊಲೆಯನೂಡಿದಳು.
ಮೊಲೆವಾಲನುಂಡ ಶಿಶು ತಾಯ ತಕ್ಕೈಸಿದಡೆ
ತಾಯಿ ಆ ಶಿಶುವಿಂಗೆ ಸತಿಯಾದಳಲ್ಲಾ !
ಸತಿಯ ಸಂಗದ ಸುಖವ ಪತಿಯಿಲ್ಲ (ಯಿಂ?)ದರಿದಲ್ಲಿ
ಸತಿ ಪತಿ ಎಂಬೆರಡೂ ಅಳಿಯಿತ್ತು ನೋಡಾ !
ಈ ನಿಜದ ನಿರ್ಣಯವ ಎನಗೆ ತೋರಿದ
ಗುಹೇಶ್ವರನ ಶರಣ ಮಡಿವಳ ಮಾಚಿತಂದೆಗಳ ಪಾದಕ್ಕೆ
ನಮೋ ನಮೋ ಎನುತಿರ್ದೆನು.
ವಚನ 0915
ತಾಳಮರದ ಮೇಲೊಂದು ಬಾವಿ ಇದ್ದಿತ್ತಲ್ಲಾ.
ಆ ಬಾವಿಯ ತಡಿಯ ಹುಲ್ಲನು, ಒಂದು ಮೊಲ ಬಂದು ಮೇಯಿತ್ತಲ್ಲಾ!
ಕಾಯಸಹಿತಜೀವನ ಬಾಣಸ ಮಾಡಲರಿಯರು
ಗುಹೇಶ್ವರಾ-ನಿಮ್ಮಾಣೆ.
ವಚನ 0916
ತಾಳು ಬೋಳು ಕಟ್ಟಿಗೆ ಕರ್ಪರವೆಂದೆಂಬರು.
ತಾಳು ಬೋಳು ಕಟ್ಟಿಗೆ ಕರ್ಪರವಾವುದೆಂದರಿಯರು.
ತಾಳು:ತನುಗುಣಾದಿಗಳ ಪ್ರಾಣಗುಣಾದಿಗಳ
ತಾಳಿಕೊಂಡಿರಬಲ್ಲಡೆ ತಾಳು.
ಬೋಳು:ಭ್ರಮೆಯಿಲ್ಲದೆ ಬಂಧನವಿಲ್ಲದೆ ಸಂಸಾರ ವಿಷಯಗಳ ಬೋಳೈಸಿ
ತನ್ನಿಚ್ಛೆಗೆ ನಿಲಿಸಿಕೊಂಡಿರಬಲ್ಲಡೆ ಬೋಳು.
ಕಟ್ಟಿಗೆ:ಕರಣಾದಿ ಗುಣಂಗಳ ನಿಲಿಸಿಕೊಂಡಿರಬಲ್ಲಡೆ ಕಟ್ಟಿಗೆ.
ಕರ್ಪರ:ಪರವ ಅರಿದಿರಬಲ್ಲಡೆ ಕರ್ಪರ-
ಇಂತೀ ಚತುರ್ವಿಧವನರಿದವರ ಪರಮಾರಾಧ್ಯರೆಂಬೆ ಕಾಣಾ
ಗುಹೇಶ್ವರಾ.
ವಚನ 0917
ತಿಂಬ ಗಂದೆಯ ಮೇಲೆ ಉಗುರು ಬಿದ್ದಂತಾಯಿತ್ತು.
ಅರಸುವ ಬಳ್ಳಿ ಕಾಲ ಸುತ್ತಿದಂತಾಯಿತ್ತು.
ನಾನು ಬಯಸುವ ಬಯಕೆ ತಾರ್ಕಣೆಗೆ ಬಂದಿತ್ತು.
ಗುಹೇಶ್ವರಲಿಂಗದಲ್ಲಿ,
ಎನಗೂ ನಿನಗೂ ಒಂದಾದ ಪರಿ ಎಂತು ಹೇಳಾ
ಚನ್ನಬಸವಣ್ಣಾ ?
ವಚನ 0918
ತಿಳಿದಿರ್ದ ಮಡುವಿನೊಳಗೆ ಸುಳಿಸುಳಿದಾಡುತ್ತಿದೆ
ಒಂದು ಸುವರ್ಣದ ಬಿಂದು !
ಅದು ಹಿಂದು ಮುಂದಾಗಿ ನೋಡಿದವರಿಗೆಲ್ಲ ಕಾಣಬಾರದು.
ಮಡುವ ತುಳುಕದೆ ದಡವ ಸೋಂಕದೆ ಹಿಡಿಯಬಲ್ಲಡೆ
ಗುಹೇಶ್ವರನೆಂಬ ಲಿಂಗವು ಈಗಳೆ ಸಾಧ್ಯ.
ವಚನ 0919
ತುಂಬಿ ಪರಿಮಳವನುಂಡಿತೊ, ಪರಿಮಳ ತುಂಬಿಯ ನುಂಡಿತೊ ?
ಲಿಂಗ ಪ್ರಾಣವಾಯಿತೊ ? ಪ್ರಾಣ ಲಿಂಗವಾಯಿತೊ ?
ಗುಹೇಶ್ವರಾ, ಇವರ ಈ ಉಭಯದ ಭೇದವ ನೀನೆ ಬಲೆ
ವಚನ 0920
ತುಂಬಿ ಬಂದಡೆ ಪರಿಮಳ ಓಡಿತ್ತ ಕಂಡೆ !
ಇದೇನು ಸೋಜಿಗ ಹೇಳಾ ?
ಮನ ಬಂದಡೆ ಬುದ್ಧಿ ಓಡಿತ್ತ ಕಂಡೆ,
ದೇವ ಬಂದಡೆ ದೇಗುಲ ಓಡಿತ್ತ ಕಂಡೆ-ಗುಹೇಶ್ವರಾ.
ವಚನ 0921
ತುಂಬಿದ ತೊರೆಯ ಹಾಯ್ದಹೆವೆಂದು
ಹರುಗೋಲನೇರುವ ಅಣ್ಣಗಳು ನೀವು ಕೇಳಿರೆ.
ತೊರೆಯೊಳಗಣ ನೆಗಳು ಹರುಗೋಲ ನುಂಗಿದಡೆ, ಗತಿಯಿಲ್ಲ.
ಎಚ್ಚತ್ತು ನಡಿಸಿರೆ.
ನಡುದೊರೆಯಲ್ಲಿ ಹುಟ್ಟು ಹಾಯ್ಕಿದಡೆ,
ಹರುಗೋಲು ಮುಳುಗದೆ, ಏರಿದವರು ಸತ್ತರು.
ಇದರೊಳಹೊರಗನರಿದಾತನಲ್ಲದೆ
ಗುಹೇಶ್ವರಲಿಂಗದಲ್ಲಿ ಅಚ್ಚ ಶರಣನಲ್ಲ.
ವಚನ 0922
ತೆಗೆದು ವಾಯುವ ನೇಣ ಗಗನದಲ್ಲಿ ಗಂಟಿಕ್ಕಿ,
ತ್ರಿಜಗಾದಿಪತಿಯ ಕೋಣೆಯಲ್ಲಿ ಹಸುವಿದ್ದು,
ಕರುವ ಕೊಂದು ಕಂದಲನೊಡೆದು, ಕರೆಯಬಲ್ಲವಂಗಲ್ಲದೆ,
ಹಯನಾಗದು ನೋಡಾ !
ಹಯನೆ ಬರಡು, ಬರಡೆ ಹಯನು !
ಅರುಹಿರಿಯರ ಬಾಯ, ಕರು ಒದೆದು ಹೋಯಿತ್ತು !
ಎರಡಿಲ್ಲದ ನಿರಾಳ ಗುಹೇಶ್ವರ.
ವಚನ 0923
ತೆರಹಿಲ್ಲದ ಘನ ಕುರುಹಿಂಗೆ ಬಾರದ ಮುನ್ನ
ತೋರಿದವರಾರು ಹೇಳಾ ಮಹಾ ಘನ ಲಿಂಗೈಕ್ಯವನು ?
ಆರೂಢದ ಕೂಟದಲ್ಲಿ ನಾನಾರುವ ಸಾಕ್ಷಿಯ ಕಾಣೆನು.
ಬೇರೆ ಮಾಡಿ ನುಡಿಯಬಹುದೆ ಪ್ರಾಣಲಿಂಗವನು ?
ಅರಿವು ಸ್ವಯವಾಗಿ ಮರಹು ನಷ್ಟವಾದಲ್ಲಿ
ಗುಹೇಶ್ವರಾ ನಿಮ್ಮ ಶರಣನುಪಮಾತೀತನು
ವಚನ 0924
ತೆರಹಿಲ್ಲದ ಘನವ ಅರಸಿಹೆನೆಂದಡೆ ಕಾಣಬಾರದು.
ಅದೇನು ಕಾರಣವೆಂದಡೆ:
ಆ ಅರಸುವಾತನು ತಾನೆ ವಸ್ತುವಾದ ಕಾರಣ.
ವಿಚಾರಕ್ಕೆ ಬಾರದ[ದು]
ನಿಶ್ಚಲಬ್ರಹ್ಮವೆಂಬುದು ಗುಹೇಶ್ವರಾ.
ವಚನ 0925
ತೆರಹಿಲ್ಲದ ಘನವ ಮನ ಒಳಕೊಂಡು
ಆ ತಲೆಯಿಲ್ಲದ (ತಲಹಿಲ್ಲದ?) ಮನವ ಘನ ಒಳಕೊಂಡು
ತನಗೆ ತಾ ತರಹರವಾದ ಬಳಿಕ
ಇನ್ನು ಮರಳಿ ಇಂಬುಗೊಡಲುಂಟೆ ?
ಗುಹೇಶ್ವರನ ಲೀಲೆ ಮಾಬನ್ನಕ್ಕರ
ಉರಿಯೊಳಗಣ ಕರ್ಪುರದಂತಿರಬೇಕು ಕಾಣಾ ಸಿದ್ಧರಾಮಯ್ಯಾ.
ವಚನ 0926
ತೆರೆಯ ಮರೆಯ ಕುರುಹೆಂಬುದೇನೊ
ಒಳಗೆ ಲಿಂಗವನನುವಿಡಿದ ಬಳಿಕ ?
ಪೂಜಿಸುವ ಭಕ್ತನಾರೊ ? ಪೂಜಿಸಿಕೊಂಬ ದೇವನಾರೊ ?
ಮುಂದು ಹಿಂದು, ಹಿಂದು ಮುಂದಾಯಿತ್ತು
ಗುಹೇಶ್ವರಾ ನಾನು ನೀನು, ನೀನು ನಾನಾದ ಬಳಿಕ
ಮತ್ತೇನುಂಟು ಹೇಳಾ ?
ವಚನ 0927
ತೋಟವ ಬಿತ್ತಿದ[ರೆಮ್ಮ]ವರು, ಕಾಹ ಕೊಟ್ಟವರು ಜವನವರು.
ನಿತ್ಯವಲ್ಲದ ಸಂಸಾರ ವೃಥಾ ಹೋಯಿತಲ್ಲಾ !
ಗುಹೇಶ್ವರನಿಕ್ಕಿದ ಕಿಚ್ಚು, ಹೊತ್ತಿಕ್ಕಲುಂಟು ಅಟ್ಟುಣಲಿಲ್ಲ ಗುಹೇಶ್ವರಾ.
ವಚನ 0928
ತೋರಬಾರದ ಘನವ ಹೇಳಲೆಂದೇನಯ್ಯಾ ?
ಹೇಳಬಾರದ ಘನವ ತೋರಲೆಂದೇನಯ್ಯಾ ?
ಶರಸಂಧಾನದ ಪರಿಯಲ್ಲ ನೋಡಾ !
ಗುಹೇಶ್ವರಲಿಂಗವು ಕಲ್ಪಿತವಲ್ಲ ನೋಡಯ್ಯಾ.
ವಚನ 0929
ತೋರಬಾರದಠಾವಿನಲ್ಲಿ ಒಂದು ಹೊಂಬಣ್ಣ ಸುಳಿಯಿತ್ತು.
`ಸ್ಯೋಹಂ ಸ್ಯೋಹಂ’ಎಂದುದು ಬ್ರಹ್ಮವು.
ಮುಟ್ಟಿಯೂ ಮುಟ್ಟದ ಬ್ರಹ್ಮವ ನೆಟ್ಟನೆ ಮುಂದರಿದೆ.
ಕಟ್ಟಳೆಯಿಲ್ಲದ ಇರವು ಗುಹೇಶ್ವರಾ ನಿಮ್ಮ ನಿಲವು.
ವಚನ 0930
ತೋರಿದ ಭೇದವ ತೋರಿದಂತೆ ಕಂಡಾತನಲ್ಲದೆ,
ದ್ಯಷ್ಟಿವಾಳಕ ತಾನಲ್ಲ.
ಬೇರೊಂದ ವಿವರಿಸಿಹೆನೆಂದಡೆ,
ಆರ ಮೀರಿದಲ್ಲದೆ ಅರಿಯಬಾರದು.
ಅರಿವನರಿದು ಮರಹ ಮರೆಯದೆ,
ಮನದ ಬೆಳಗಿನೊಳಗಣ ಪರಿಯನರಿಯದೆ
ವಾದಿಸಿ ಕೆಟ್ಟು ಹೋದರು ಗುಹೇಶ್ವರಾ,
ಸಲೆ ಕೊಂಡ ಮಾರಿಂಗೆ !
ವಚನ 0931
ತೋರುವುದೆಲ್ಲ ಬೇರಾಗಿ ಕಾಂಬುದು,
ಕಂಡುದ ಬಿಡುವುದು ಕಾಣದುದ ಹಿಡಿವುದು.
ಕಾಣದುದ ಕಂಡೆವೆಂದು ಬಿಟ್ಟಣ್ಣಗಳು
ನಟ್ಟನಡುನೀರೊಳಗೆ ಕೆಟ್ಟ ಕೇಡ ನೋಡಾ ಗುಹೇಶ್ವರಾ.
ವಚನ 0932
ತ್ರಿನದಿಯ ಮಧ್ಯದಲ್ಲೈದು ಕುದುರೆಯ ಕಟ್ಟಿದ್ದ ಕಂಭ ಮುರಿಯಿತ್ತು.
ಎಂಟಾನೆ ಬಿಟ್ಟೋಡಿದವು.
ಹದಿನಾರು ಪ್ರಜೆ ಬೊಬ್ಬಿಡುತ್ತಿದ್ದವು.
ಶತಪತ್ರಕಮಲಕರ್ಣಿಕಾ ಮಧ್ಯದಲ್ಲಿ
ಗುಹೇಶ್ವರಲಿಂಗವು ಮುಗ್ಧವಾಗಿರ್ದನು.
ವಚನ 0933
ತ್ರಿಪುರವನುರುಹಿದ ತ್ರಿಣೇತ್ರನಲ್ಲ,
ಅಂಧಕಾಸುರನ ಮೆಟ್ಟಿ ನಾಟ್ಯವನಾಡಿದಾತನಲ್ಲ,
ಖಂಡಕಪಾಲಿಯಲ್ಲ ಮುಂಡಧಾರಿಯಲ್ಲ,
ಮಂಡಲದೊಳಗೆ ಬಂದು ಸುಳಿವಾತನಲ್ಲ,
ಈಶ್ವರನಲ್ಲ ಮಹೇಶ್ವರನಲ್ಲ,
ಗುಹೇಶ್ವರನೆಂಬ ಲಿಂಗ ಅಪಾರ ಮಹಿಮನು.
ವಚನ 0934
ತ್ರಿಭುವನವೆಂಬ ಪಂಜರದೊಳಗೆ, ಸಂಸಾರಚಕ್ರದಲ್ಲಿ-
ಹೊನ್ನು ಪ್ರಾಣವೆ ಪ್ರಾಣವಾಗಿ, ಹೆಣ್ಣು ಪ್ರಾಣವೆ ಪ್ರಾಣವಾಗಿ
ಮಣ್ಣು ಪ್ರಾಣವೆ ಪ್ರಾಣವಾಗಿ,
ಆ ಸುಖದ ಸೊಕ್ಕಿನಲ್ಲಿ ಈಸಿಯಾಡುತ್ತಿರ್ದರಲ್ಲಾ,
ಬಹುವಿಧದ ವ್ಯವಹಾರ ವೇದಿಸಿದವರು ಗುಹೇಶ್ವರಾ.
ವಚನ 0935
ತ್ರಿವಿಧದ ನಿತ್ಯವ, ತ್ರಿವಿಧದ ಅನಿತ್ಯವ ಬಲ್ಲವರಾರೊ?
ತ್ರಿವಿಧಕ್ಕೆ ತ್ರಿವಿಧವನಿತ್ತು ತ್ರಿವಿಧ ಪ್ರಸಾದವ ಕೊಳ್ಳಬಲ್ಲಡೆ;
ಆತನು ತ್ರಿವಿಧನಾಥನೆಂಬೆನು, ಆತನು ವೀರನೆಂಬೆನು.
ಆತನು ದಿರನೆಂಬೆನು,
ಆತನು ಗುಹೇಶ್ವರಲಿಂಗದಲ್ಲಿ ಅಚ್ಚಪ್ರಸಾದಿಯೆಂಬೆನು.
ವಚನ 0936
ದರ್ಪಣದೊಳಗಣ ರೂಹಿಂಗೆ ಆ ದರ್ಪಣವೆ ಉತ್ಪತ್ತಿ ಸ್ಥಿತಿ ಲಯವಲ್ಲದೆ
ಮತ್ರ್ಯಲೋಕದೊಳಗಣ ಆಕೃತಿ ಅಲ್ಲಿಲ್ಲವೇಕಯ್ಯಾ ?
ಆ ಲೋಕದೊಳಗೆ ಉತ್ಪತ್ಯ(ತ್ತಿ ?) ಸ್ಥಿತಿ ಲಯ-ಇದೆಂತಹ ಕರ್ಮಬದ್ಧರು ?
ಒಂದರ ಪರಿ ಒಂದಕ್ಕಿಲ್ಲ ಕಂಡಿರೆ !
ದೃಷ್ಟವಹ ಗುರುಹಸ್ತದೊಳಗಣ ಸದ್ಭಕ್ತಂಗೆ,
ಅಲ್ಲಿಯ ಉತ್ಪತ್ತಿ ಸ್ಥಿತಿ ಲಯ-ಇದೆಂತಹ ಕರ್ಮದ ಪರಿಯೊ ?
ಮತ್ತಾವ ಪರಿಯೂ ಇಲ್ಲ, ಲಿಂಗದ ಪರಿಯ ಮಾಡಿದ ಗುಹೇಶ್ವರ.
ವಚನ 0937
ದಾರಿಗೊಂಡು ಹೋಹವರೆಲ್ಲರೂ ನೀವು ಕೇಳಿರೆ.
ಮೂರು ಬಟ್ಟೆ ಕೂಡಿದಠಾವಿನಲ್ಲಿ ಒಬ್ಬ ಹೆಮ್ಮಾರಿ ಐದಾಳೆ.
ಆ ಮಾರಿಯ ಬಾಯೊಳಗೆ ಮೂರು ಘಟ್ಟವಿಪ್ಪುವು.
ನಂಜಿನ ಸೊನೆ ಸುರಿವುತ್ತಿಪ್ಪುದು.
ಕಾಡ ಕೋಣನ ಮುಖದಲ್ಲಿ ಕತ್ತಲೆ ಕಾಣಲೀಸದು.
ಐದು ಬಾಯ ಹುಲಿ ಆಗುಳಿಸುತ್ತಿಪ್ಪುದು.
ಇವೆಲ್ಲವ ಗೆದ್ದಲ್ಲದೆ ಗುಹೇಶ್ವರನ ಕಾಣಬಾರದು
ವಚನ 0938
ದುಷ್ಟನಿಗ್ರಹ ಶಿಷ್ಟಪರಿಪಾಲಕನಪ್ಪ ದಿವ್ಯವಸ್ತು
ಶಕ್ತಿಗೊಳಗಾಯಿತ್ತಾಗಿ
ಬಚ್ಚಬಯಲೆಂಬುದಕ್ಕುಪಮಾನವಿಲ್ಲಯ್ಯ [ಗುಹೇಶ್ವರ].
ವಚನ 0939
ದೂರದ ತುದಿಗೊಂಬನಾರಯ್ಯ ಗೆಲುವರು ?
ಮೀರಲಿಲ್ಲದ ನಿರಾಳದ ಘನವನು (ನಿಲವನು ?),
ಮೀರಿ, ಕಾಬ ಘನವನು ಬೇರೆ ತೋರಲಿಲ್ಲ.
ತೋರಿ ಕಾಬಡೆ ತನ್ನ ಹಿಡಿಯಲಿಲ್ಲ.
ಓರೆ ಆವಿನ ಹಾಲನಾರಯ್ಯ ಕರೆವರು ?
ಮೂರು ಲೋಕದೊಳಗೆ ತಾನಿಲ್ಲ ಗುಹೇಶ್ವರಾ.
ವಚನ 0940
ದೃಷ್ಟಕ್ಕೆ ದೃಷ್ಟ ಮುಂದಿಲ್ಲ, ಇಲ್ಲ.
ಮಾಡಿದಡೇನಹುದೊ? ಮಾಡದಿರ್ದಡೇನಹುದೊ?
ಗುಹೇಶ್ವರನೆಂಬ ಅರುಹಿನ ಕುರುಹು ಮಂದಿಲ್ಲ, ಇಲ್ಲ.
ಮಾಡಿದಡೇನಹುದೊ?
ವಚನ 0941
ದೇವ ಕಂಡಾ, ಭಕ್ತ ಕಂಡಾ; ಮರಳಿ ಮರಳಿ ಶರಣೆಂಬ ಕಂಡಾ.
ಹೋಯಿತ್ತಲ್ಲಾ ಭಕ್ತಿ ಜಲವ ಕೂಡಿ !
ಸಾವನ್ನಕ್ಕ ಸರಸವುಂಟೆ ಗುಹೇಶ್ವರಾ ?
ವಚನ 0942
ದೇವನೊಲಿದ, ನೀನೊಲಿದೆ-ಎಂಬುದು ಅದಾವುದಕ್ಕಾ ?
ಭಾವಶುದ್ಧವಾದಲ್ಲಿ ಸೀರೆಯನಳಿದು ಕೂದಲು ಮರೆಸಲೇತಕ್ಕೆ ?
ಅದು ಅಂತರಂಗದ ನಾಚಿಕೆ ಬಾಹ್ಯದಲ್ಲಿ ತೋರಿತ್ತು.
ಅದು ಗುಹೇಶ್ವರಲಿಂಗಕ್ಕೆ ಒಲವರವಲ್ಲ.
ವಚನ 0943
ದೇವರೆಲ್ಲರ ಹೊಡೆತಂದು ದೇವಿಯರೊಳಗೆ ಕೂಡಿತ್ತು ಮಾಯೆ,
ಹರಹರಾ ಮಾಯೆ ಇದ್ದೆಡೆಯ ನೋಡಾ.
ಶಿವಶಿವಾ ಮಾಯೆ ಇದ್ದೆಡೆಯ ನೋಡಾ.
ಎರಡೆಂಬತ್ತುಕೋಟಿ ಪ್ರಮಥಗಣಂಗಳು, ಅಂಗಾಲ ಕಣ್ಣವರು
ಮೈಯೆಲ್ಲಾ ಕಣ್ಣವರು, ನಂದಿ ವಾಹನ ರುದ್ರರು-ಇವರೆಲ್ಲರು,
ಮಾಯೆಯ ಕಾಲಗಾಹಿನ ಸರಮಾಲೆ ಕಾಣಾ ಗುಹೇಶ್ವರಾ.
ವಚನ 0944
ದೇವಲೋಕದ ದೇವಗಣಂಗಳೆಲ್ಲ ಎನ್ನ ಹೊರಗೆಂಬರು;
ಅದು ದಿಟವೆ.
ಸತ್ಯ ಸಾತ್ವಿಕ ಸದ್ಭಕ್ತರು ಎನ್ನ ಹೊರಗೆಂಬರು;
ಅದು ದಿಟವೆ.
ಹದಿನಾಲ್ಕು ಭವನದೊಳಗೆ ಅವರು ತಾವಿರಲಿ,
ನಾ ನಿಮ್ಮೊಳಗು ಗುಹೇಶ್ವರಾ.
ವಚನ 0945
ದೇವಲೋಕದವ[ರೆಲ್ಲರ] ವ್ರತಗೇಡಿಗಳೆಂಬೆ.
ಮತ್ರ್ಯಲೋಕದವ[ರೆಲ್ಲರ] ಭಕ್ತದ್ರೋಹಿಗಳೆಂಬೆ.
ದೇವಸಂಭ್ರಮ ಗಣಪದವಿಯ ಕಂಡವರೆಲ್ಲರ
ಕುಂಭಕರ್ಣನಂತೆ ಅತಿನಿದ್ರಿಗಳೆಂಬೆ.
ಅನಂತಶೀಲರ ಕಂಡಡೆ ಕೈಕೂಲಿಕಾರರೆಂಬೆ-
ಗುಹೇಶ್ವರಾ ಲಿಂಗೈಕ್ಯವನರಿಯರಾಗಿ.
ವಚನ 0946
ದೇವಲೋಕದವರ ತೃಣವೆಂಬೆ.
ಮರ್ತ್ಯಲೋಕದವರ ಕ್ಷಣವೆಂಬೆ.
ಅಹಂಕಾರವೆಂಬ ಶೃಂಗಾರವ ಮಾಣೆ !
ಆನಲ್ಲದೆ ಅನ್ಯವ ಅಲ್ಲೆಂಬೆ
ಗುಹೇಶ್ವರನೆಂಬವನು ತಾನೆ ತಾನಾಗಿ.
ವಚನ 0947
ದೇಶ ಗುರಿಯಾಗಿ ಲಯವಾಗಿ ಹೋದವರ ಕಂಡೆ.
ತಮಂಧ ಗುರಿಯಾಗಿ ಲಯವಾಗಿ ಹೋದವರ ಕಂಡೆ.
ಕಾಮ ಗುರಿಯಾಗಿ ಬೆಂದು ಹೋದವರ ಕಂಡೆ.
ನೀ ಗುರಿಯಾಗಿ ಹೋದವರನಾರನೂ ಕಾಣೆ ಗುಹೇಶ್ವರಾ.
ವಚನ 0948
ದೇಹದೊಳಗೆ ದೇವಾಲಯವಿದ್ದು, ಮತ್ತೆ ಬೇರೆ ದೇಗುಲವೇಕಯ್ಯಾ ?
ಎರಡಕ್ಕೆ ಹೇಳಲಿಲ್ಲಯ್ಯಾ.
ಗುಹೇಶ್ವರಾ ನೀನು ಕಲ್ಲಾದಡೆ ನಾನು ಏನಪ್ಪನು ?
ವಚನ 0949
ದೇಹಭಾವವಳಿದಲ್ಲದೆ ಜೀವಭಾವವಳಿಯದು.
ಜೀವಭಾವವಳಿದಲ್ಲದೆ ಭಕ್ತಿಭಾವವಳವಡದು.
ಭಕ್ತಿಭಾವವಳವಟ್ಟಲ್ಲದೆ ಅರಿವು ತಲೆದೋರದು.
ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು.
ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು.
ಇದು ಕಾರಣ;-
ಕಾಯದ ಜೀವದ ಹೊಲಿಗೆಯ ಅಳಿವ ಭೇದವ ತಿಳಿಯಬಲ್ಲಡೆ
ಗುಹೇಶ್ವರಲಿಂಗದ ಅರಿವು ಸಾಧ್ಯವಪ್ಪುದು ಕಾಣಾ ಸಿದ್ಧರಾಮಯ್ಯಾ.
ವಚನ 0950
ದೇಹಿಗೆ ದೇಹಿಯಾಗಿರ್ಪುದರ ಭೇದವನು ಆರು ಬಲ್ಲರು ?
ಹರಿಬ್ರಹ್ಮಾದಿಗಳರಿಯರು, ಮನುಮುನಿಗಳರಿಯರು,
ಸಿದ್ಧಸಾಧಕರರಿಯರು.
ಅರಿವಿಂಗೆ ಅರಿವಾಗಿರ್ಪುದನು ನಿನ್ನ ಅರಿವಿಂದ ಅರಿಯಬಹುದೆ ?
ಗುಹೇಶ್ವರಲಿಂಗವನರಿವಡೆ ನೀನರಿಯದಂತಿರಬೇಕು.
ವಚನ 0951
ದ್ರವ್ಯ ನೀನು ದ್ರವ್ಯಾರ್ಥ ನೀನು; ಪದ ನೀನು, ಪದಾರ್ಥ ನೀನು.
ಸಕಲ ನೀನು ನಿಷ್ಕಲ ನೀನು.
ಸಕಲ ನಿಷ್ಕಲಾತ್ಮಕ ಪರಿಪೂರ್ಣ ಶಿವನಲ್ಲದೆ ಅನ್ಯ ಬಿನ್ನಭಾವ ಉಂಟೆ ?
ಸಕಲ ನಿಷ್ಕಲ ತತ್ವಂಗಳು; ನಿಮ್ಮೊಳಗೆ ಸಮಾಸವನೆಯ್ದುವೆವೆಂದು
ತಮ್ಮ ತಮ್ಮ ಅಂಗದ ಮೇಲೆ ಸರ್ವಪದಾರ್ಥಂಗಳ ಹೆಸರಿಟ್ಟು
ಹೊತ್ತುಕೊಂಡೈದಾವೆ ನೋಡಾ !
ಅದೆಂತೆಂದಡೆ:
“ದ್ರವ್ಯಾರ್ಥಂ ಚ ಮಹಾದೇವೋ ದ್ರವ್ಯರೂಪೋ ಮಹೇಶ್ವರಃ
ಇತಿ ಮೇ ಭೇದನಂ ನಾಸ್ತಿ ಸರ್ವರೂಪಸ್ಸದಾಶಿವಃ” –
ಇಂತೆಂದುದಾಗಿ-ನಾದ ನೀನು, ಬಿಂದು ನೀನು, ಕಳೆ ನೀನು,
ಕಳಾತೀತ ನೀನು ಗುಹೇಶ್ವರಾ.
ವಚನ 0952
ಧರೆಯ ಮೇಲಣ ಜನಿತಕ್ಕೆ ಉರಗನ ಅಧರಪಾನ.
ನಖಕಂಕಣ (ನ ಖ ಕಂ ಕ ಣ ?) ಮುಖ ಮೂವತ್ತೊಂದು ಶಿರವ ನುಂಗಿತ್ತು ನೋಡಾ !
ಉತ್ತರಾಪಥದ ಕೊಡಗೂಸು ಈಶಾನ್ಯದ ಒಡಲೊಳಗೆ ಅಡಗಿ,
ಸಾಕಾರದ ಸಂಗವ ನುಂಗಿದ ಭಾಷೆಯನರಿಯದ ಮುಗ್ಧೆ !
ಅರಿವಿನೊಳಗಣ ಮರಹು, ಮರಹಿನೊಳಗಣ ಅರಿವು
ಗುಹೇಶ್ವರಲಿಂಗವು ತ್ರಿಕಾಲ ಪೂಜೆಯ ನುಂಗಿತ್ತು.
ವಚನ 0953
ಧರೆಯ ಮೇಲುಳ್ಳ ಅರುಹಿರಿಯರೆಲ್ಲರು ನೆರಹಿ
ಪರಿಯಾಯಪರೀಕ್ಷೆಯನೊರೆದು, ಬಣ್ಣವ ನೋಡಿ,
ಸರೋವರದ ಪುಷ್ಪದೊಳು ಭರಿತ ಪರಿಮಳ ತುಂಬಿ,
ಪರಮಜ್ಞಾನ ಜ್ಯೋತಿ ಪರಬ್ರಹ್ಮವನು ಮೀರಿ
ಪುರುಷರತ್ನದೊಳಡಗಿ, ಗುಹೇಶ್ವರ ನಿಂದ ನಿಲುವು-
ಮೇರು ಗಗನವ ನುಂಗಿತ್ತು.
ವಚನ 0954
ಧರೆಯ ಮೇಲುಳ್ಳ ಅರುಹಿರಿಯರೆಲ್ಲರೂ
ಮರುಳುಗೊಂಡಾಡುತ್ತಿದ್ದಾರೆ ನೋಡಾ.
ಮಂಜಿನ ಮಡಕೆಯೊಳಗೆ ರಂಜನೆಯ ಭಂಡವ ತುಂಬಿ
ಅಂಜದೆ ಪಾಕವ ಮಾಡಿಕೊಂಡು ಉಂಡು,
ಭಂಡವ ಮಾರುತ್ತಿರ್ಪರು ನೋಡಾ.
ಸಂಜೀವನಿಯ ಬೇರೆ ಕಾಣದೆ ಮರಣಕ್ಕೊಳಗಾದರು
ಗುಹೇಶ್ವರನನರಿಯದ ಭವಭಾರಕರೆಲ್ಲರು.
ವಚನ 0955
ಧರೆಯ ಮೇಲೊಂದು ಅರಿದಪ್ಪ ರತ್ನ ಹುಟ್ಟಿರಲು,
ಅದನರಸಲರಸ ಹೋಯಿತ್ತಯ್ಯಾ.
ನಡುನೀರೊಳಗೆ ಮುಳುಗಿ, ಆಳವರಿದು ನೋಡಿ,
ಕಂಡೆಹೆನೆಂದಡೆ ಕಾಣಬಾರದು.
ಧಾರೆವಟ್ಟಲ ಕಳೆದುಕೊಂಡು ನೀರ ಶೋದಿಸಿ ನೋಡಿದಡೆ
ದೂರದಲ್ಲಿ ಕಾಣಬರುತ್ತಿಹುದು ನೋಡಾ.
ಸಾರಕ್ಕೆ ಹೋಗಿ ಹಿಡಿದುಕೊಂಡೆನೆಂಬ ದಿರರೆಲ್ಲರ ಮತಿಯ
ಬಗೆಯ ನುಂಗಿತ್ತು ಗುಹೇಶ್ವರಾ
ವಚನ 0956
ಧರೆಯ ಮೇಲೊಂದು ಪಿರಿದಪ್ಪ ಸಂತೆಯ ನೆರವಿಗೆ ಬಂದವರನೇನೆಂಬೆನು !
ಪರಿಪರಿಯ ಭಂಡದ ವ್ಯವಹಾರದೊಳಗೆ ಕೊಡಲಿಲ್ಲ, ಕೊಳಲಿಲ್ಲ.
ವ್ಯಥಾ ವಿಳಾಸವಿದೇನೊ ?
ಅರೆಮರುಳೆಂಬ ಶಿವನು,
ನೆರೆ ಮರುಳೆಂಬ ಜಗವ ಹುಟ್ಟಿಸಿದ ಪರಿಯ ಕಂಡು
ಬೆರಗಾದೆ ಗುಹೇಶ್ವರಾ.
ವಚನ 0957
ಧರೆಯಗಲದ ಹುಲ್ಲೆ ಹರಿದು ಮೇಯಿತ್ತ ಕಂಡೆ.
ಬಲೆಯ ಬೀಸುವ ಗಂಡರಾರೂ ಇಲ್ಲ,
ಹರಿದು ಹಿಡಿದಹೆನೆಂದಡೆ ತಲೆ ಕಾಣಬರುತ್ತಲಿದೆ.
ಶಿರವ ಹಿಡಿದೆಹೆನೆಂಬವರಿನ್ನಾರೂ ಇಲ್ಲ.
ಹರಿದಾಡುವ ಹುಲ್ಲೆಯ ಕಂಡು ಹಲವು ಬೇಳಾರ (ಬೆಳ್ಳಾರ?)ವ ಬಿಟ್ಟು,
ಬೇಟೆಕಾರ ಬಲೆಯ ಬೀಸಿದಡೆ ಹುಲ್ಲೆಯಂಜಿ ಹೋಯಿತ್ತು.
ಮರುಳುದಲೆಯಲ್ಲಿ ಹುಲ್ಲೆಯನೆಸೆದಯಬೇಕೆಂದು
ಸರಳ ಬಿಟ್ಟು ಬಾಣವನೊಂದು ಕೈಯಲ್ಲಿ ಹಿಡಿದು (ಹಿಡಿವಡೆ?)
ಹಳ್ಳಕೊಳ್ಳವ ದಾಂಟಿ ಗಟ್ಟಬೆಟ್ಟವ ಕಳೆದು
ಅತ್ತ ಬಯಲ ಮರನ ತಾ ಮೊರೆಗೊಂಡಿತ್ತು.
ಹತ್ತೆ ಸಾರಿದ ಮೃಗವ ತಾನೆಚ್ಚಡೆ
ನಾರಿ ಹರಿದು ಬಿಲ್ಲು ಮುರಿದು ಹುಲ್ಲೆ ಸತ್ತಿತ್ತು.
ಅದ ಕಿಚ್ಚಿಲ್ಲದ ನಾಡಿಗೊಯ್ದು ಸುಟ್ಟು ಬಾಣಸವ ಮಾಡಲು
ಸತ್ತ ಹುಲ್ಲೆ ಕರಗಿ ಶಬ (ಸಬ?) ಉಳಿಯಿತ್ತು.
ಗುಹೇಶ್ವರಾ ನಿಮ್ಮ ಶರಣ
ಕಟ್ಟಿದಿರ ಬಾಣಸದ ಮನೆಗೆ ಬಂದನು.
ವಚನ 0958
ಧರೆಯಾಕಾಶ ಕೂಡಿ ಜಗವಾದಂತೆ,
ಕಾಯ, ಜೀವ ಕೂಡಿ ಸಾವಯವಾದಂತೆ,
ನಾದ ಬಿಂದು ಕೂಡಿ ಲಿಂಗವಾಯಿತ್ತು.
ಅದೆಂತೆಂದಡೆ:
ನಾದ ಬಿಂದು ಶಕ್ತಿ ರೂಪಾಗಿ,
ಈ ಉಭಯ ಸಂಪುಟದಿಂದ ಲಿಂಗವಾಗಿ,
ಅದು ಕಾಯ ಜೀವದಂತೆ ಕೂಡಿ ಏಕವಾದಲ್ಲಿ
ಆ ಕಾಯದಿಂದ ಜೀವ ವಿಯೋಗವಾಗಿಹುದೇ ಗುಹೇಶ್ವರಾ ?
ವಚನ 0959
ಧರೆಯಾಕಾಶ ತಾರಾಮಂಡಲ ಸಪ್ತಸಮುದ್ರಂಗಳಿಲ್ಲದಂದು,
ಒಂದು ಮಹಾವೃಕ್ಷವಿದ್ದಿತ್ತಯ್ಯಾ.
ಆ ವೃಕ್ಷವ ಕಂಡು ನಾನು `ಓಂ ನಮಃ ಶಿವಾಯ’ ಎನುತಿದ್ದೆನು.
ಆ ವೃಕ್ಷದಿಂದ ಷಡುಸಾದಾಖ್ಯಂಗಳು ಪುಟ್ಟಿದುವು.
ಆ ಷಡುಸಾದಾಖ್ಯಂಗಳ ನೆಳಲಲ್ಲಿ ಕುಳ್ಳಿರ್ದು
ನಾನು ಬಸವಾ ಬಸವಾ ಬಸವಾ ಎನುತಿರ್ದೆನು ಕಾಣಾ ಗುಹೇಶ್ವರಾ.
ವಚನ 0960
ಧರೆಯಾಕಾಶವಿಲ್ಲದಂದು, ತ್ರೈಮಂಡಲ ನೆಲೆಗೊಳ್ಳದಂದು,
ಹೋಮ ನೇಮ ಜಪ ತಪವಿಲ್ಲದಂದು ನಿಮ್ಮನಾರು ಬಲ್ಲರು ?
ಹರಿ ಬ್ರಹ್ಮಾದಿಗಳಿಗೆ ಅಗೋಚರ, ನಿಲರ್ೆಪ ನಿರಂಜನನಾಗಿ-
ವೇದಂಗಳರಿಯವು, ಶಾಸ್ತ್ರ ಸ್ಮೃತಿಗಳು ನಿಮ್ಮನರಿಯವು.
ಗಗನಕಮಲಕುಸುಮ ಪರಿಮಳದಿಂದತ್ತತ್ತಲು
ಗುಹೇಶ್ವರಾ ನಿಮ್ಮ ನಿಲವನಾರು ಬಲ್ಲರು ?
ವಚನ 0961
ಧರೆಯೂ ಬ್ರಹ್ಮಾಂಡವೂ ಚಂದ್ರಸೂರ್ಯ ತಾರಾಮಂಡಲವೂ
ಇಲ್ಲಿಂದತ್ತಲೆ ನೋಡಾ.
ನರನಲ್ಲ ಸುರನಲ್ಲ ಭ್ರಾಂತನಲ್ಲ ಶರಣನು,
ಲಿಂಗಸನ್ನಹಿತ ಅಪಾರಮಹಿಮನು.
ಸುರಾಸುರರೆಲ್ಲರು ನಿಮ್ಮ ವರದಲ್ಲಿ ಸಿಲುಕಿದರು !
ಸರಸದೊಳಗಲ್ಲ ಹೊರಗಲ್ಲ ಕೇಳು ಭಾವ ಗುಹೇಶ್ವರ.
ವಚನ 0962
ಧಾತು ಮಾತು ಪಲ್ಲಟಿಸಿದರೆ, ಗಮನವಿನ್ನೆಲ್ಲಿಯದೊ?
ಧ್ಯಾನ ಮೌನವೆಂಬುದು ತನುಗುಣ ಸಂದೇಹವಯ್ಯಾ.
ಸುಜ್ಞಾನಭರಿತ, ಅನುಪಮಸುಖಿ-ಗುಹೇಶ್ವರಾ ನಿಮ್ಮ ಶರಣನು.
ವಚನ 0963
ಧೂಪ ದೀಪಾರತಿಯ ಬೆಳಗುವಡೆ, ನೀನು ಸ್ವಯಂಜ್ಯೋತಿಪ್ರಕಾಶನು.
ಅರ್ಪಿತವ ಮಾಡುವಡೆ, ನೀನು ನಿತ್ಯತೃಪ್ತನು.
ಅಷ್ಟವಿಧಾರ್ಚನೆಯ ಮಾಡುವಡೆ, ನೀನು ಮುಟ್ಟಬಾರದ ಘನವೇದ್ಯನು.
ನಿತ್ಯನೇಮಂಗಳ ಮಾಡುವಡೆ ನಿನಗೆ ಅನಂತನಾಮಂಗಳಾದವು
ಗುಹೇಶ್ವರಾ.
ವಚನ 0964
ಧ್ಯಾನ ಆಧ್ಯಾತ್ಮಿಕದಲ್ಲಿ ಕಂಡಹೆನೆಂಬುದು
ಜೀವನಲ್ಲದೆ ಪರಮನಲ್ಲ.
ಜಪ ತಪ ನೇಮ-ನಿತ್ಯಂಗಳಿಂದ ಕಂಡಹೆನೆಂಬುದು
ಪ್ರಕೃತಿಯಲ್ಲದೆ ಸುಚಿತ್ತವಲ್ಲ.
ಭಾವದಿಂದ ಪ್ರಮಾಣಿಸುವುದೆ ಏಕರೂಪು,
ಗುಹೇಶ್ವರಲಿಂಗವು ತಾನೆ.
ವಚನ 0965
ಧ್ಯಾನ ಸೂತಕ, ಮೌನ ಸೂತಕ, ಜಪಸೂತಕ, ಅನುಷ್ಠಾನ ಸೂತಕ.
ಗುಹೇಶ್ವರನೆಂಬ ಲಿಂಗವನರಿದ ಬಳಿಕ ಸೂತಕ ಹಿಂಗಿತ್ತು,
ಯಥಾ ಸ್ವೇಚ್ಛೆ.
ವಚನ 0966
ನ ಎಂಬುದೆ ನಂದಿಯಾಗಿ, ಮ’ ಎಂಬುದೆ ಮಹತ್ತಾಗಿ,
ಶಿ’ ಎಂಬುದೆ ರುದ್ರನಾಗಿ, ವಾ’ ಎಂಬುದೆ ಹಂಸೆಯಾಗಿ,
ಯ’ ಎಂಬುದೆ ಅರಿವಾಗಿ, `ಓಂ’ ಕಾರವೆ ಗುರುವಾಗಿ,
ಸಂಬಂಧವೆ ಅಸಂಬಂಧವಾಗಿ, ಅಸಂಬಂಧವೆ ಸಂಬಂಧವಾಗಿ,
ಎರಡೂ ಒಂದಾಗಿ ಗುಹೇಶ್ವರಲಿಂಗಸಂಬಂದಿ
ವಚನ 0967
ನಚ್ಚು ಮಚ್ಚಿನ ಸುಖ ಪರಿಣಾಮ ಸನ್ನಹಿತವಾದ ಬಳಿಕ,
ಇನ್ನು ಅನುಭಾವವೆಂಬುದಿಲ್ಲ-ಅಂತಿರಲಿ ನುಡಿಯ ಗಡಣ.
ಶಶಿಧರನಟ್ಟಿದ ಬೆಸನ ಮಾಡಬಂದ ಬಳಿಕ,
ಹೇಳಿದ ಮಣಿಹವ ಮಾಡುತ್ತಿಹುದಲ್ಲದೆ
ಅದು ತನ್ನಲ್ಲಿ ತಾನು ಬೆರಸುವಂದಿಗೆ ಬೆರಸಲಿ;
ಆ ದಿನಕ್ಕೆ ಬಂದು ಹೇಳುವೆವು ನಿರ್ಣಯವ.
ಗುಹೇಶ್ವರಲಿಂಗದ ಆಣತಿ ಬಪ್ಪನ್ನಬರ
ಶಿವಶರಣರೆಲ್ಲರೂ ಸಂಗನಬಸವಣ್ಣ ಸಹಿತ ನಿತ್ಯರಾಗಿ ಇರಿ.
ವಚನ 0968
ನಚ್ಚುಮಚ್ಚಿಂಗೆ ಪೂಜಿಸಿ ನಿಶ್ಚಯವೆಂದೆನಲಿಲ್ಲ.
ತಾನು ಲಿಂಗವೊ ? ಪ್ರಾಣ ಲಿಂಗವೊ ?
ಆವುದು ಲಿಂಗ ? ಬಲ್ಲವರು ನೀವು ಹೇಳಿರೆ
ಅಂಗದಲ್ಲಿ ಅಂ(ಸಂ ?)ಗಿಯಲ್ಲ, ಸಂಗದಲ್ಲಿ ವ್ಯಸನಿಯಲ್ಲ
ಅಂಗವಿಲ್ಲದ ಸಂಗ ಗುಹೇಶ್ವರ ನಿಮ್ಮ ಶರಣ.
ವಚನ 0969
ನಚ್ಚುಮಚ್ಚಿನ ಲಿಂಗವ ಗ್ರಹಿಸಿ, ಮಚ್ಚು ಒಳಗೊಂಡಿತ್ತಯ್ಯಾ.
ಕರ್ಪುರದ ಕರಡಿಗೆಯ ಘಾಸಿಮಾಡಿದಂತಾಯಿತ್ತು.
ಲಿಂಗಾನುಭಾವಿಗಳ ಸಂಗದಿಂದ ನಾನು ಕಣ್ದೆರೆದೆನು ಕಾಣಾ ಗುಹೇಶ್ವರಾ.
ವಚನ 0970
ನಟ್ಟಿರ್ದ ಬೆಟ್ಟಕ್ಕೆ ತಾಗು ತಡೆಯುಂಟೆ ಮರುಳೆ ?
ಆತುರದಲ್ಲಿ ಕಳವಳಿಸಿ, ವ್ಯಾಕುಳದಲ್ಲಿ ಕಳವಳಿಸುತಿಪ್ಪುದೀ ಮನವು.
ಆ ಮನವು ಬೆನ್ನುದೋರದ ಮೊದಲೆ ಘನವ ಬೆಂಬತ್ತಿ ಬಿಡದಿರಬಲ್ಲಡೆ
ತನ್ನಲ್ಲಿ ತ(ಚಿ?)ನ್ಮೂರ್ತಿ ಗುಹೇಶ್ವರನಯ್ಯಾ.
ವಚನ 0971
ನಡೆ ನುಡಿಯಿಲ್ಲದ ಗುರುವ ಕಂಡು
ಉಪದೇಶವ ಪಡೆಯಲೆಂದು ಹೋದಡೆ;
ಒಡನೆ ನುಡಿಯನು ನುಡಿಸಿದಡೆ ಕೇಳನು.
ಕಡೆ ಮೊದಲ ಕಾರ್ಯ ಎಂತಪ್ಪುದೊ ಅಯ್ಯಾ ?
ಮೂಗರ ಮೂಗರ ಪ್ರಸಂಗದಂತೆ ಇದೆ
ಎನ್ನೊಳಗೆ ಅರಿವಿನ ಪರಿಮಳ !
ಹೊರಗೆ ನೋಡಿದಡೆ ಮುಗ್ಧವಾಯಿತ್ತು.
ಇದನೆಂತು ಉಪಮಿಸುವೆ ಅನಿಯಮದ ಬೆಡಗ ?
ಇದು ತನ್ನಿಂದ ತಾನಪ್ಪುದಲ್ಲದೆ, ಬಿನ್ನದಲುಂಟೆ ಗುಹೇಶ್ವರಾ ?
ವಚನ 0972
ನಡೆದಡೆ ನಡೆಗೆಟ್ಟ ನಡೆಯ ನಡೆವುದಯ್ಯಾ.
ನುಡಿದಡೆ ನುಡಿಗೆಟ್ಟ ನುಡಿಯ ನುಡಿವುದಯ್ಯಾ.
ಒಡಲ ಹಿಡಿದಡೆ ಹಿಡಿಯದೆ ಹಿಡಿವುದಯ್ಯಾ.
ಕೂಡುವಡೆ ಕೇಡಿಲ್ಲದ ಕೂಟವ ಕೂಡುವುದಯ್ಯಾ,
ಗುಹೇಶ್ವರಾ ನಿಮ್ಮಲ್ಲಿ ನಿಲುವುದಯ್ಯಾ.
ವಚನ 0973
ನಡೆದಡೆ ನಿರ್ಗಮನಿ !
ಸುಳಿದಡೆ ಗತಿವಿರಹಿತನನು ಏನೆಂಬೆನು ? ಎಂತೆಂಬೆನು ?
ಅಘಟಿತಘಟಿತನನು, ಏನೆಂಬೆನು ಎಂತೆಂಬೆನು ?
ಅಖಂಡಿತ ಮಹಿಮನನು ಏನೆಂಬೆನು ಎಂತೆಂಬೆನು ?
ಆದಿಯಿಂದತ್ತತ್ತ ಗುಹೇಶ್ವರನ ಶರಣ ಅಲ್ಲಮಯ್ಯನ ಸುಳುಹು
ಜಗಕ್ಕೆ ಪಾವನ !
ವಚನ 0974
ನಡೆವರಿಗೊಂದು ಬಟ್ಟೆ, ಮನೆಯ ಒಡೆಯರಿಗೊಂದು ಬಟ್ಟೆ.
ನಡೆಯದು ನಡೆಯದು ಹೋ ನಡೆಗೆಟ್ಟಿತ್ತು ನಿಂದಿತ್ತಲ್ಲಾ!
ಗಮನಾಗಮನದ ನುಡಿಯ ಬೆಡಗಿನ ಕೀಲ,
ಮಡಗಿದಾತ ಬಲ್ಲ ಗುಹೇಶ್ವರಾ.
ವಚನ 0975
ನಡೆವಲ್ಲಿ, ನುಡಿವಲ್ಲಿ ಪ್ರಾಣಲಿಂಗವೆಂದೆಂಬರು,
ಕೆಡೆಯಲೊಡನೆ ಹೆಣನದು ಎಂಬರು, ಬೇಗ ಬಾರೆಂಬರು !
ಹಿರಿಯ ಭೂಮಿಯಲ್ಲಿ ನಿಮ್ಮ ಹೆಸರಿಲ್ಲ ಗುಹೇಶ್ವರಾ.
ವಚನ 0976
ನದೀಜಲ, ಕೂಪಜಲ, ತಟಾಕಜಲವೆಂದಂಬು
ಹಿರಿದು ಕಿರಿದಾದುದನರಿಯರು.
ಬೇರೆ ಮತ್ತೊಂದು ಭಾಷೆ ವ್ರತ ನೇಮಂಗಳ ಹಿಡಿವ
ಶೀಲಸಂಬಂದಿಗಳು ಜಾತ್ಯಂಧರು,
ನಿಮ್ಮನೆತ್ತಬಲ್ಲರು ಗುಹೇಶ್ವರಾ ?
ವಚನ 0977
ನರರು ಸುರರು ಕಿನ್ನರರು ಮೊದಲಾದವರೆಲ್ಲರೂ
ಪಿಂಡವೆಂಬ ಭಾಂಡದಲ್ಲಿಯೆ ಅಡಗಿಹರಾಗಿ,
ನಾನವರ ರೂಹಿಸಿ ಬಲ್ಲೆನೆ ಅಯ್ಯಾ ?
ದೇವಗಣ ರುದ್ರಗಣ ಪ್ರಮಥಗಣ ಮೊದಲಾದವರೆಲ್ಲರೂ
ಬ್ರಹ್ಮಾಂಡವೆಂಬ ಭಾಂಡದಲ್ಲಿಯೆ ಅಡಗಿಹರಾಗಿ
ನಾನವರ ಭಾವಿಸಿ ಬಲ್ಲೆನೆ ಅಯ್ಯಾ ?
ಸತ್ಯರು ನಿತ್ಯರು ಮುಕ್ತರು ಮಹಾಮಹಿಮರೆಲ್ಲರು
ಚಿದ್ಬ್ರಹ್ಮಾಂಡವೆಂಬ ಭಾಂಡದಲ್ಲಿಯೆ ಅಡಗಿಹರಾಗಿ
ನಾನವರ ಅರಿದು ಬಲ್ಲೆನೆ ಅಯ್ಯಾ ?
ಇಂತೀ ತ್ರಿಭಾಂಡವನೊಳಕೊಂಡ ಅಖಂಡಿತ ಪರಿಪೂರ್ಣವಪ್ಪ ಭಾಂಡವೆ,
ತನ್ನ ಇರವೆಂದರಿದ ನಿಜಲಿಂಗೈಕ್ಯನ-ಉಪಮಿಸಲಿಲ್ಲ,
ಉಪಮಿಸಲಿಲ್ಲಾಗಿ ರೂಹಿಸಲಿಲ್ಲ, ರೂಹಿಸಲಿಲ್ಲಾಗಿ ಭಾವಿಸಲಿಲ್ಲ,
ಭಾವಿಸಲಿಲ್ಲಾಗಿ ಅರಿಯಲಿಲ್ಲ !
ಅರಿಯಲಿಲ್ಲದ ಅರಿವೆ ತಾನಾಗಿ, ಗುಹೇಶ್ವರನೆಂಬುದು ಬೇರಿಲ್ಲ.
ವಚನ 0978
ನರಲೋಕದ ನರರುಗಳೆಲ್ಲರು ನರಸಂಸಾರಕ್ಕೊಳಗಾದರು.
ಸುರಲೋಕದ ಸುರರುಗಳೆಲ್ಲರು ಸುರಸಂಸಾರಕ್ಕೊಳಗಾದರು.
ಮುನಿಲೋಕದ ಮುನಿಗಳೆಲ್ಲರು ತಪಃಸಂಸಾರಕ್ಕೊಳಗಾದರು.
ರುದ್ರಲೋಕದ ರುದ್ರಗಣಂಗಳೆಲ್ಲರು ರುದ್ರಪದವೆಂಬ ಸಂಸಾರಕ್ಕೊಳಗಾದರು.
ಲಿಂಗವ ಧರಿಸಿದವರೆಲ್ಲರು ಲಿಂಗಸಂಸಾರಕ್ಕೊಳಗಾದರು.
ಜಂಗಮವ ಪೂಜಿಸಿದವರೆಲ್ಲರು ಸಾಯುಜ್ಯ ಸಂಸಾರಕ್ಕೊಳಗಾದರು.
ಪ್ರಸಾದ ಪಾದೋದಕ ಸಂಬಂದಿಗಳೆಲ್ಲರು ಪ್ರಸಾದ ಸಂಸಾರಕ್ಕೊಳಗಾದರು.
ಗುಹೇಶ್ವರಲಿಂಗದಲ್ಲಿ ಸರ್ವ ಸಂಸಾರವಿರಹಿತ ಚನ್ನಬಸವಣ್ಣಂಗೆ,
ನಮೋ ನಮೋ ಎಂಬೆನು.
ವಚನ 0979
ನವಖಂಡಪೃಥ್ವಿ, ಚತುರ್ದಶಭುವನಗ್ರಾಮದಿಂದತ್ತತ್ತ ಮುನ್ನ ಅನಾದಿಯಲ್ಲಿ,
ಜಂಗಮವೆ ಲಿಂಗವೆಂಬಿರಿ.
ಇದೇನಿ ಭೋ, ಎಡೆಯಲ್ಲಿ ಕೊಲೆಯಾಯಿತ್ತು !
ಭಕ್ತಿ ಹಿಂದುಮುಂದಾಯಿತ್ತು, ರಕ್ಕಸರ ಪರಿಯಾಯಿತ್ತು !
ಇದ ಕಂಡು ಬೆರಗಾದೆ ಗುಹೇಶ್ವರಾ !
ವಚನ 0980
ನವನಾಳ ಬಿಂದು ಪವನ ಹೃದಯಕಮಲ ಮಧ್ಯದ ದಳವ ಮೆಟ್ಟಿ,
ಗಳಿಗೆ ಗಳಿಗೆಗೆ ಚರಿಸುವ ಪರಮಹಂಸನ
ಆರಿಗೆಯೂ ಅರಿಯಬಾರದು-ಘಮ್ಮುಘಮ್ಮೆನೆ ಸುತ್ತುವನಲ್ಲದೆ !
ಅದೆಂತೆಂದಡೆ:
“ಪೂರ್ವದಲೇ ಭವೇತ್ ಭಕ್ತಿರಾಗ್ನೇಯಾಂ ಚ ಕ್ಷುಧೈವ ಚ
ದಕ್ಷಿಣೇ ಕ್ರೋಧಮುತ್ಪನ್ನಂ ನೈರುತ್ಯಾಂ ಸತ್ಯಮೇವ ಚ
ಪಶ್ಚಿಮೇ ತು ಭವೇತ್ ನಿದ್ರಾ ವಾಯವ್ಯಾಂ ಗಮನಸ್ತಥಾ
ಉತ್ತರಾಯಾಂ ಧರ್ಮಶೀಲಾವೈಶಾನ್ಯಾಂ ವಿಷಯಸ್ತಥಾ
ಅಷ್ಟದಲೇಷು ಮಧ್ಯಸ್ಥಮಾನಚಂದಮಚಲಂ ಶಿವಃ-ಎಂದುದಾಗಿ
ಇಂದು ಅಷ್ಟದಳವ ಮೆಟ್ಟಿ ಚರಿಸುವ ಆ ಪರಮಹಂಸನ
ತಲೆಗಿಂಬ ಮಾಡಿ ನಿಲಿಸಬಲ್ಲ ನಿಮ್ಮ ಶರಣ ಚನ್ನಬಸವಣ್ಣಂಗೆ
ನಾನು ನಮೋ ನಮೋ ಎಂಬೆನು ಗುಹೇಶ್ವರಾ.
ವಚನ 0981
ನವಿರೂ ನೆಳಲೂ ಇಲ್ಲದಂದು, ಷಡುಶೈವರಿಲ್ಲದಂದು
ಬ್ರಹ್ಮಾಂಡ ಭಾಂಡ ಭಾಂಡಾವಳಿಗಳಿಲ್ಲದಂದು
ಪಿಂಡಾಂಡ ಅಂಡ ಪಿಂಡಾವಳಿಗಳಿಲ್ಲದಂದು
ಅಖಂಡಿತ ಜ್ಯೋತಿರ್ಮಯಲಿಂಗ !
ಶರಣನ ಲೀಲೆಯಿಂದಾದ ಏಳು ತೆರದ ಗಣ[ಘನ?] ಪಿಂಡವಂ ಕಂಡು
ಅಖಂಡಿತನಾಗಿ ಬದುಕಿದೆನಯ್ಯಾ ಗುಹೇಶ್ವರಾ.
ವಚನ 0982
ನಾ `ನೀ’ ಎಂಬ ಭೇದ ಅಂದೂ ಇಲ್ಲ, ಇಂದೂ ಇಲ್ಲ
ಸಾಲೋಕ್ಯನಲ್ಲ ಸಾಮೀಪ್ಯನಲ್ಲ ಶರಣ.
ಸಾರೂಪ್ಯನಲ್ಲ ಸಾಯಜ್ಯನಲ್ಲ ಶರಣ.
ಕಾಯನಲ್ಲ ಅಕಾಯನಲ್ಲ
ಗುಹೇಶ್ವರಲಿಂಗ ತಾನೆಯಾಗಿ
ವಚನ 0983
ನಾ ದೇವನಲ್ಲದೆ ನೀ ದೇವನೆ ?
ನೀ ದೇವನಾದಡೆ ಎನ್ನನೇಕೆ ಸಲಹೆ ?
ಆರೈದು, ಒಂದು ಕುಡಿತೆ ಉದಕವನೆರೆವೆ,
ಹಸಿದಾಗ ಒಂದು ತುತ್ತು ಓಗರವನಿಕ್ಕುವೆ.-
ನಾ ದೇವ ಕಾಣಾ ಗುಹೇಶ್ವರಾ !
ವಚನ 0984
ನಾ ಸತ್ತೆನೆಂದು ಕೂಗಿದುದುಂಟೆ ?
ಬೈಚಿಟ್ಟ ಬಯಕೆ ಕರೆದುದುಂಟೆ ?
ಹೆಪ್ಪಿಟ್ಟ ಹಾಲು ಸಿಹಿಯಪ್ಪುದೆ ?
ಈ ಮಾತು ಒಪ್ಪವಲ್ಲ ಗುಹೇಶ್ವರಲಿಂಗಕ್ಕೆ.
ವಚನ 0985
ನಾಚಿ ಮಾದುದು ಮಾದುದಲ್ಲ, ನಾಚದೆ ಮಾದುದು ಮಾದುದಲ್ಲ.
ಹೇಸಿ ಮಾದುದು ಮಾದುದಲ್ಲ, ಹೇಸದೆ ಮಾದುದು ಮಾದುದಲ್ಲ.
ಆಲಸಿ ಮಾದುದು ಮಾದುದಲ್ಲ, ಆಲಸದೆ ಮಾದುದು ಮಾದುದಲ್ಲ.
ನಾಚದೆ ಹೇಸದೆ ಆಲಸದೆ ಮಾದಡೆ ಮಾದುದು-ಗುಹೇಶ್ವರಾ.
ವಚನ 0986
ನಾಣ ಮರೆಯ ನಾಚಿಕೆ ಒಂದು ನೂಲ ಮರೆಯಲಡಗಿತ್ತು.
ಬಲ್ಲೆನೆಂಬ ಅರುಹಿರಿಯರೆಲ್ಲಾ ಅಲ್ಲಿಯೇ ಮರುಳಾದರು.
ನೂಲ ಮಾರಿ ಹತ್ತಿಯ ಬಿಲಿಯ ಹೋದರೆ,
ಅದು ಅತ್ತಲೆ ಹೋಯಿತ್ತು ಗುಹೇಶ್ವರಾ.
ವಚನ 0987
ನಾದ ಮುನ್ನವೊ ಬಿಂದು ಮುನ್ನವೊ ?
ಕಾಯ ಮುನ್ನವೊ ಜೀವ ಮುನ್ನವೊ ?
ಜೀವ ಕಾಯದ ಕುಳಸ್ಥಳಂಗಳ ಬಲ್ಲವರು ನೀವು ಹೇಳಿರೆ ?
ಗುಹೇಶ್ವರಾ ನೀನು ಮುನ್ನವೊ ನಾನು ಮುನ್ನವೊ ?
ಬಲ್ಲವರು ನೀವು ಹೇಳಿರೆ ?
ವಚನ 0988
ನಾದದ ಉತ್ಪತ್ತಿ ಸ್ಥಿತಿ ಲಯವನು
ಹೇಳಿದಡೇನು ಕೇಳಿದಡೇನು, ಎಲೆ ಮರುಳೆ !
ಬಿಂದು ದಳದ ಉತ್ಪತ್ತಿ ಸ್ಥಿತಿ ಲಯವನು
ಹೇಳಿದಡೇನು ಕೇಳಿದಡೇನು ಎಲೆ ಮರುಳೆ !
ಮಧ್ಯದಳದ ಉತ್ಪತ್ತಿ ಸ್ಥಿತಿ ಲಯವನು
ಹೇಳಿದಡೇನು ಕೇಳಿದಡೇನು ಎಲೆ ಮರುಳೆ !
ಮುಗಿಲಗಲದ ಅಂಬರ ವಾಯು ಅಗ್ನಿಜಲ ಧರೆಯ ಹೊತ್ತುಕೊಂಡು
ಅವ, ಹೇಳಿದಡೇನು ಕೇಳಿದಡೇನು ಎಲೆ ಮರುಳೆ !
ಗುಹೇಶ್ವರಲಿಂಗದ ಬಾರಿಗೊಳಗಾಗಿ,
ಇವೆಲ್ಲವನುಂಟುಮಾಡಲರಿಯೆನಾಗಿ-ಎನಗಿಲ್ಲವೆನುತಿರ್ದೆನಯ್ಯಾ.
ವಚನ 0989
ನಾದಬಿಂದುಗಳಿಲ್ಲದಂದು ನಿರ್ಭಯನೆಂಬ ಗಣೇಶ್ವರನು,
ಉತ್ಪತ್ತಿ ಸ್ಥಿತಿ ಲಯವಿಲ್ಲದಂದು ಅಕ್ಷಯನೆಂಬ ಗಣೇಶ್ವರನು,
ಓದು ವೇದಂಗಳಿಲ್ಲದಂದು ಓಂಕಾರನೆಂಬ ಗಣೇಶ್ವರನು,
ಯುಗಜುಗಂಗಳಿಲ್ಲದಂದು ಊಧ್ರ್ವಮುಖನೆಂಬ ಗಣೇಶ್ವರನು,
ಗುಹೇಶ್ವರಲಿಂಗವಿಲ್ಲದಂದು ನಿರ್ಮಾಯನೆಂಬ ಗಣೇಶ್ವರನು.
ವಚನ 0990
ನಾನೀನೆಂಬ ಭಾವವಾರಿಂದಾಯಿತ್ತು ಹೇಳಾ ?
ನೀನೆಂಬುದೆ ಅಜ್ಞಾನ, ನಾನೆಂಬುದೆ ಮಾಯಾದಿನ.
ನೀನೆನ್ನದೆ ನಾನೆನ್ನದೆ ಇಪ್ಪ ಸುಖವ, ಬಿನ್ನವಿಲ್ಲದೆ ಅರಿಯಬಲ್ಲಡೆ
ಆ ಸುಖ ನಿಮಗರ್ಪಿತ ಕಾಣಾ ಗುಹೇಶ್ವರಾ.
ವಚನ 0991
ನಾನು ಗುರುಲಿಂಗಜಂಗಮದಲ್ಲಿ ನಿಷ್ಠೆವಿಡಿದು
ಬೇಡಿಕೊಂಡು ಬದುಕಿದೆನಯ್ಯಾ.
ನಾನು ಪಾದೋದಕ ಪ್ರಸಾದದಲ್ಲಿ ನಿಷ್ಠೆವಿಡಿದು
ಬೇಡಿಕೊಂಡು ಬದುಕಿದೆನಯ್ಯಾ.
ನಾನು ಮೂರು ಪ್ರಣವಗಳಲ್ಲಿ ನಿಷ್ಠೆವಿಡಿದು
ಬೇಡಿಕೊಂಡು ಬದುಕಿದೆನಯ್ಯಾ.
ನಾನು ಪುರಾತನರ ಮೇಲುಪಂಕ್ತಿಗಳಲ್ಲಿ ನಿಷ್ಠೆವಿಡಿದು
ಬೇಡಿಕೊಂಡು ಬದುಕಿದೆನಯ್ಯಾ.
ನಾನು ಶರಣರುಗಳಲ್ಲಿ ನಿಷ್ಠೆವಿಡಿದು,
ಬೇಡಿ ಹಾಡಿ ಹೊಗಳಿ ಐದು ಬಗೆಯ ಜಪವ ಜಪಿಸಿ
ಬೇಡಿಕೊಂಡು ಬದುಕಿದೆನಯ್ಯಾ.
ಗುಹೇಶ್ವರಾ ನಿಮ್ಮ ಶರಣ ಬಸವಣ್ಣನ ಸನ್ನಿದಿಯಿಂದ
ನಾನು ಕೃತಾರ್ಥನಾದೆನಯ್ಯಾ.
ವಚನ 0992
ನಾನು ಘನ ತಾನು ಘನವೆಂಬ ಹಿರಿಯರುಂಟೆ ಜಗದೊಳಗೆ ?
ಹಿರಿದು ಕಿರಿದೆಂದಲ್ಲಿ ಏನಾಯಿತ್ತು ?
ಹಿರಿದು ಕಿರಿದೆಂಬ ಶಬ್ದವಡಗಿದರೆ,
ಆತನೆ ಶರಣ ಗುಹೇಶ್ವರಾ.
ವಚನ 0993
ನಾನು ಭಕ್ತನಾದಡೆ, ನೀನು ದೇವನಾದಡೆ,
ನೋಡುವೆವೆ ಇಬ್ಬರ ಸಮರಸವನೊಂದು ಮಾಡಿ?
ಭೂಮಿಯಾಕಾಶವನೊಂದು ಮಾಡಿ,
ಚಂದ್ರ-ಸೂರ್ಯರಿಬ್ಬರ ತಾಳವ ಮಾಡಿ ಆಡುವೆವೆ?
ಜಡೆಯ ಮೇಲಣ ಗಂಗೆ ನೀನು ಕೇಳಾ,
ತೊಡೆಯ ಮೇಲಣ ಗಾರಿ ನೀನು ಕೇಳಾ,
ಗುಹೇಶ್ವರನೆಂಬ ಲಿಂಗವು ಎನ್ನ ಕೈಯಲ್ಲಿ ಸತ್ತಡೆ,
ರಂಡೆಗೂಳನುಂಬುದು ನಿಮಗೆ ಲೇಸೆ?
ವಚನ 0994
ನಾನು ಸಜ್ಜೀವವೊ, ನೀನು ಸಜ್ಜೀವವೊ ?
ನಿನಗೆಯೂ ಎನಗೆಯೂ ಸಂಬಂಧವಯ್ಯಾ,
ನಿನ್ನನೆಂತು ಪ್ರಾಣಲಿಂಗವೆಂದು ಪೂಜಿಸುವೆನಯ್ಯಾ ?
ಎನ್ನ ಪ್ರಸಾದವು ನಿನಗೆ ನಿನ್ನ ಪ್ರಸಾದವು ಎನಗೆ.
ಎನಗೆಯೂ ನಿನಗೆಯೂ ಏಕಪ್ರಸಾದ ಕಾಣಾ ಗುಹೇಶ್ವರಾ.
ವಚನ 0995
ನಾನೆಂಬ ಅಹಂಕಾರ ತಲೆದೋರಿದಲ್ಲಿ
ಅಟಮಟ ಕುಟಿಲ ಕುಹಕವೆಂಬ ಬಿರುಗಾಳಿ ಹುಟ್ಟಿತ್ತು.
ಆ ಬಿರುಗಾಳಿ ಹುಟ್ಟಲೊಡನೆ ಜ್ಞಾನಜ್ಯೋತಿ ಕೆಟ್ಟಿತ್ತು.
ಜ್ಞಾನಜ್ಯೋತಿ ಕೆಡಲೊಡನೆ,
ನಾ ಬಲ್ಲೆ,-ಬಲ್ಲಿದರೆಂಬ ಅರುಹಿರಿಯರೆಲ್ಲರು
ತಾಮಸಕ್ಕೊಳಗಾಗಿ ಸೀಮೆದಪ್ಪಿ ಕೆಟ್ಟರು ಕಾಣಾ ಗುಹೇಶ್ವರಾ.
ವಚನ 0996
ನಾನೆಂಬ ಅಹಂಕಾರದಲ್ಲಿ ನಾನುಂಡೆನಾದಡೆ,
ಎನಗದೆ ಭಂಗ.
ಸ್ತುತಿ-ನಿಂದೆಗೆ ನೊಂದೆನಾದಡೆ
ಅಂಗೈಯಲ್ಲಿರ್ದ ಗುಹೇಶ್ವರಲಿಂಗಕ್ಕೆ ದೂರ ಕಾಣಾ
ಸಂಗನಬಸವಣ್ಣಾ.
ವಚನ 0997
ನಾನೆಂಬುದು ಪ್ರಮಾಣ, ನೀನೆಂಬುದು ಪ್ರಮಾಣ.
ಸ್ವಯವೆಂಬುದು ಪ್ರಮಾಣ, ಪರವೆಂಬುದು ಪ್ರಮಾಣ.
ಪ್ರಮಾಣವೆಂಬುದು ಪ್ರಮಾಣ,
ಗುಹೇಶ್ವರನೆಂಬುದು ಅಪ್ರಮಾಣ !
ವಚನ 0998
ನಾಬಿಮಂಡಲದ ಉದಯವೆ ಉದಯ.
ಮಧ್ಯನಿರಾಳದ ನಿಲವಿನ ಪರಿಯ ನೋಡಾ !
ಪವನಶೂಲದ ಮೇಲೆ ಪರಿಣಾಮವಯ್ಯಾ.
ಊಧ್ರ್ವ ಮುಖದಲ್ಲಿ ಉದಯವಾಯಿತ್ತ ಕಂಡೆ.
ಮಿಂಚುವ ತಾರಕೆ ಇದೇನೊ ಗುಹೇಶ್ವರಾ.
ವಚನ 0999
ನಾಬಿಮಂಡಲದೊಳಗೆ ಈರೈದು ಪದ್ಮದಳ,
ಸದಮದ ಗಜಮಸ್ತಕದೊಳಗೆ ತೋರುತ್ತದೆ.
ಅಕಾರ ಉಕಾರ ಮಕಾರ ಮರ್ಮಸ್ಥಾನ ತ್ರಿಕೂಟಸ್ಥಾನದ
ಸಮರಸದ ಸುಖದಲ್ಲಿ ಬೆಳೆದ ಕಂದ ಮೂಲಾದಿಗಳ,
ಹೊಸರಸದ ಅಮೃತವನು ಓಸರಿಸಿ,
ದಣಿಯುಂಡ ತೃಪ್ತಿಯಿಂದ ಸುಖಿಯಾದೆನು ಗುಹೇಶ್ವರಾ.
ವಚನ 1000
ನಾಮ ನೇಮಂಗಳಾಗಿಪ್ಪ ಹಿರಿಯರು ಆದಿಕುಳವನರಿಯರಾಗಿ,
ಇದೇನಯ್ಯಾ, ಸೂಕ್ಷ್ಮದ ಗಂಟಲಗಾಣವಿದೇನಯ್ಯಾ ?
ನೆಳಲ ರೂಹಿಂಗೆ ಬಯಲು ಸಯವೆ
ಅಪಾಯರಹಿತ ಗುಹೇಶ್ವರಾ ?
ವಚನ 1001
ನಾರಿ ಹರಿಯಿತ್ತು ಬಿಲ್ಲು ಮುರಿಯಿತ್ತು,
ಅಂಬು ಏನ ಮಾಡುವುದು?
ಎಲೆ ಎಲೆ ನೋಡಿರಣ್ಣಾ, ಹೊತ್ತು ಹೋಯಿತ್ತು ನೇಮ ನೀರಡಿಸಿತ್ತು
ಏನು ಕಾರಣ ಹೇಳಾ ಗುಹೇಶ್ವರಾ ?
ವಚನ 1002
ನಾರು ಬೇರಿನ ಕುಟಿಲ ಕಪಟದ
ಯೋಗವಲ್ಲಿದು ನಿಲ್ಲಿ ಭೋ.
ಕಾಯಸಮಾದಿ ಕರಣಸಮಾದಿ-
ಯೋಗವಲ್ಲಿದು ನಿಲ್ಲಿ ಭೋ.
ಜೀವಸಮಾದಿಯೆಂಬುದಲ್ಲ,
ನಿಜ ಸಹಜಸಮಾದಿ ಗುಹೇಶ್ವರಾ !
ವಚನ 1003
ನಿಂದಡೆ; ಹೊನ್ನು ಹೆಣ್ಣು ಮಣ್ಣು ಹಿಡಿದು
ನೆಟ್ಟನೆ ಭಕ್ತನಾಗಿ ನಿಲ್ಲಬೇಕು.
ಸುಳಿದಡೆ; ಹೊನ್ನು ಹೆಣ್ಣು ಮಣ್ಣು ಬಿಟ್ಟು
ನೆಟ್ಟನೆ ಜಂಗಮವಾಗಿ ಸುಳಿಯಬೇಕು.
ನಿಂದು ಭಕ್ತನಲ್ಲದ, ಸುಳಿದು ಜಂಗಮವಲ್ಲದ
ಉಭಯಭ್ರಷ್ಟರನೇನೆಂಬೆ ಗುಹೇಶ್ವರಯ್ಯಾ ?
ವಚನ 1004
ನಿಂದೆ, ಎಂಬುದು ಬಂದ ಭವದಲ್ಲಿಯೆ ಹೋಯಿತ್ತು.
ಮುಂದೆ ಗುರುಕಾರುಣ್ಯವಾದಲ್ಲಿಯೇ `ಹಿಂದು’ ಹರಿಯಿತ್ತು.
ಮರ್ತ್ಯಲೋಕದ ಮಹಾಗಣಂಗಳು ಮೆಚ್ಚೆ, ದಾಸೋಹವ ಮಾಡಿದಲ್ಲಿಯೆ
ಪ್ರಮಥಗಣಂಗಳು ತಮ್ಮೊಳಗೆ ನಿಮ್ಮನು ಇಂಬಿಟ್ಟುಕೊಂಡು.
ಅಂಗದ ಮೇಲೆ ಲಿಂಗವುಳ್ಳುದೆಲ್ಲವೂ ಸಂಗಮನಾಥನೆಂದರಿದು,
ನಿನ್ನ ಸರ್ವಾಂಗದಲ್ಲಿ ಲಿಂಗಸನ್ನಹಿತವಾದಲ್ಲಿಯೆ
ಪ್ರಾಣಲಿಂಗಸಂಬಂಧವಳವಟ್ಟಿತ್ತು.
ಲಕ್ಷದ ಮೇಲೆ ತೊಂಬತ್ತಾರುಸಾವಿರ ಪ್ರಮಥರಿಗೆ ಮಾಡಿದ ಸಯದಾನವ
ನಿಮ್ಮ ಲಿಂಗಕ್ಕೆ ಆರೋಗಿಸಲಿತ್ತು ತೃಪ್ತಿಪಡಿಸಿದಲ್ಲಿಯೆ
ನಿನ್ನ ತನು ಮನ ಪ್ರಾಣಗಳು ಅರ್ಪಿತವಾದಲ್ಲಿ
ಮಹಾಪ್ರಸಾದ ಸಾಧ್ಯವಾಯಿತ್ತು.
ಆದಿಯ ಲಿಂಗವಿಡಿದು ನಾನು ನಿಮ್ಮಲ್ಲಿ ಅಡಗಿದ ಬಳಿಕ
ಹಿಂದಣ ಸಂಕಲ್ಪವಳಿಯಿತ್ತು.
ಸರ್ವಾಚಾರಸಂಪತ್ತು ನಿನ್ನಲ್ಲಿ ಸಯವಾದಲ್ಲಿ
ಸರ್ವಸೂತಕ ತೊಡೆಯಿತ್ತು.
ಗುಹೇಶ್ವರಲಿಂಗವು ನಿನ್ನ ಹೃದಯಕಮಲದಲ್ಲಿ ನೆಲೆಗೊಂಡು
ನಿನ್ನ ಕರಸ್ಥಲದೊಳಗೆ ತೊಳಗೆ ಬೆಳಗುತ್ತೈದಾನೆ.
ಇನ್ನೊಮ್ಮೆ ತಿಳಿದು ನೋಡಾ ಸಂಗನಬಸವಣ್ಣಾ.
ವಚನ 1005
ನಿಚ್ಚಕ್ಕೆ ನಿಚ್ಚ ಒತ್ತೆಯ ಬೇಡಿದಡೆ,
ಅಚ್ಚುಗವಾಯಿತ್ತಯ್ಯಾ ನಮ್ಮ ನಲ್ಲಂಗೆ.
ಕಿಚ್ಚನೆ ಹೊತ್ತುಕೊಂಡು ಅರ್ಚನೆಯನಾಡಲು,
ಅಚ್ಚುಗವಾಯಿತ್ತವ್ವಾ ನಮ್ಮ ನಲ್ಲಂಗೆ.
ಅರ್ಚನೆಯ ಗಳಿಹವ ನಿಳುಹಿದಡೆ,
ಬಳಿಕ ನಿಶ್ಚಿಂತವಾಯಿತ್ತು ಗುಹೇಶ್ವರಾ
ವಚನ 1006
ನಿಜ ಬಲ್ಲವಂಗೆ ಜಲವೂ ಸರಿ, ನೆಲವೂ ಸರಿ.
ಅರಿದು ನುಡಿವಂಗೆ ಜಗವೂ ಸರಿ, ಸಮಯವೂ ಸರಿ.
ಎಮಗಾಮಿಥ್ಯವಿಲ್ಲ, ಸಂಗನಬಸವಣ್ಣಾ,
ಗುಹೇಶ್ವರಲಿಂಗವು ಪರಿಪೂರ್ಣವಾದ ಕಾರಣ.
ವಚನ 1007
ನಿಜವನರಿಯದ ನಿಶ್ಚಿಂತನೆ, ಮರಣವ ಗೆಲಿದ ಮಹಂತನೆ,
ಘನವ ಕಂಡ ಮಹಿಮನೆ, ವರವನೊಳಕೊಂಡ ಪರಿಣಾಮಿಯೆ,
ಬಯಲಲೊದಗಿದ ಭರಿತನೆ,
ಗುಹೇಶ್ವರಲಿಂಗನಿರಾಳವನೊಳಕೊಂಡ ಸಹಜನೆ
ವಚನ 1008
ನಿಜವರಿಯದ (ನಿಜವರಿದ?) ಶರಣಂಗೆ ಆಚಾರವಿಲ್ಲ,
ಆಚಾರವಿಲ್ಲದವಂಗೆ ಲಿಂಗವಿಲ್ಲ.
ಲಿಂಗವಿಲ್ಲದ ಶರಣನ ಸುಳುಹು ಜಗದಲ್ಲಿ ಸುಳಿವು,
ಹೊರವೇಷದ ಜಂಗಮಕ್ಕೆ ವಿಪರೀತ ಚರಿತ್ರವದು
ಸರ್ವರಿಗೆ ಪ್ರಕಟವಲ್ಲ ನೋಡಾ !
ಸಂಸಾರಿಗಳು ಬಳಸುವ ಬಳಕೆಯನೆಂದೂ ಹೊದ್ದನು.
ಇದನರಿಯದೆ ಸಟೆಯ ಹಿಡಿದು ದಿಟವಮರದು
ಇಲ್ಲದ ಲಿಂಗವನುಂಟೆಂದು ಪೂಜಿಸುವರಾಗಿ ಆಚಾರವುಂಟು,
ಆಚಾರವುಳ್ಳವಂಗೆ ಗುರುವುಂಟು,
ಗುರುವುಳ್ಳವಂಗೆ ಲಿಂಗವುಂಟು,
ಲಿಂಗಪೂಜಕರಿಗೆ ಭೋಗವುಂಟು.
ಈ ಬರಿವಾಯ ಮಂಜಕ(ವಂಚಕ ?)ರೆಲ್ಲರೂ ಪೂಜಕರಾದರು.
ಗುಹೇಶ್ವರಲಿಂಗವು ಅಲ್ಲಿ ಇಲ್ಲವೆಂಬುದನು
ಈ ವೇಷಲಾಂಛನರೆತ್ತ ಬಲ್ಲರು ಹೇಳಯ್ಯ ಸಂಗನಬಸವಣ್ಣಾ.
ವಚನ 1009
ನಿತ್ಯ ನಿರಂಜನ ತಾನೆಂದರಿಯದೆ, `ತತ್ತ್ವ ಮಸಿ’ ಎಂದು
ಹೊರಗನೆ ಬಳಸಿ ಸತ್ತಿತ್ತಲ್ಲಾ ಜಗವೆಲ್ಲ ನಾಯ ಸಾವ !
ತಮ್ಮ ತಾವರಿಯದೆ,
ಸತ್ತವರ ಹೆಸರ ಪತ್ರವನೋದಿದಡೆ ಎತ್ತಣ ಮುಕ್ತಿ ಗುಹೇಶ್ವರಾ?
ವಚನ 1010
ನಿತ್ಯನಿರಂಜನ ನಿರವಯಖಂಡ ಪರವಸ್ತುವಿನತ್ತಣಿಂದುದಯಿಸಿ,
ನಿಂದ ನಿಲವನರಿದು ಭಕ್ತ,
ಗುರುಪ್ರಸನ್ನವಿಡಿದು ಮಾಹೇಶ್ವರ,
ಲಿಂಗಪೂಜೆಯವಿಡಿದು ಪ್ರಸಾದಿ,
ಸ್ವಾನುಭಾವ ವಿವೇಕವಿಡಿದು ಪ್ರಾಣಲಿಂಗಿ,
ಸ್ವಯಾನಂದವಿಡಿದು ಶರಣ,-
ಸೋಹಂ ಬ್ರಹ್ಮಾಸ್ಮಿನ್ನೆಂದು ಲಿಂಗೈಕ್ಯ.
ಇಂತೀ ಷಟ್ಸ್ಥಲ ಸಂಪನ್ನನಾಗಿ, ನಿಂದ ನಿಲವ ನೀ ಬಲ್ಲೆಯಲ್ಲದೆ
ಲೋಕದ ಸಂದೇಹಿಮಾನವರೆತ್ತ ಬಲ್ಲರು ಗುಹೇಶ್ವರಾ.
ವಚನ 1011
ನಿದ್ರೆಯಿದ್ದಡೆಯಲ್ಲಿ ಬುದ್ಧಿಯೆಂಬುದಿಲ್ಲ ನೋಡಾ.
ಕಾಯವೊಂದೆಸೆ, ಜೀವವೊಂದೆಸೆ,
ಗುಹೇಶ್ವರಲಿಂಗ ತಾನೊಂದೆಸೆ !
ವಚನ 1012
ನಿಧಾನವ ಸಾದಿಸಿದವರಿಗೆ ವಿಗುರ್ಬಣೆ ಕಾಡುವುದು.
ಅದಕ್ಕಂಜಲಾಗದು ಬೆಚ್ಚಲಾಗದು ಬೆದರಲಾಗದು.
ಹೊನ್ನು ಹೆಣ್ಣು ಮಣ್ಣು ಈ ತ್ರಿವಿಧಮಾಯವ ತೋರಿ, ಹೆರತೆಗೆಸುವನಾಗಿ !
ಸತಿಪುರುಷಸಂಯೋಗದ ವೇಳೆಯಲ್ಲಿ
ಜೀವಧನ ಬಿಟ್ಟುಕೊಂಡು ಮಡಕೆಯನೂಕುವುದು.
ಇದಿರ ಜೀವಧನ ಬಿಟ್ಟುಕೊಂಡು ಮನೆಯ ಹಿಂದನುಚ್ಚುವುದು.
ಬೆಕ್ಕು ನೆಲಹಿಗೆ ತುಡುಕುವುದು. ನಾಯಿ ಮನೆಯ ಹೊರಗ ಹೊಂಚಿಕೊಂಡಿಹುದು.
ಮಗುವು ಮೊಲೆಗೆ ಅಳುವುದ ಕೇಳಿ-
ಇವೆಲ್ಲವ ಸಂತವಿಟ್ಟು ಬಂದು ಪುರುಷನ ನೆರೆವಳು,
[ಇದು ಸಜ್ಜನಸ್ತ್ರೀಯ ಲಕ್ಷಣವು !
ಇಂತಪ್ಪ ಆ ತವಕ ನಿನಗಳವಟ್ಟಿತ್ತು ಬಸವಾ
ಆ ಗುಹೇಶ್ವರನ ಸಂಯೋಗದ ವೇಳೆಯಲ್ಲಿ !
ವಚನ 1013
ನಿನ್ನ ನೊಸಲಲ್ಲಿ ಕಣ್ಣು, ಮನದಲ್ಲಿ ವಿರಸ, ನುಡಿವುದೆಲ್ಲವೂ ಭಕ್ತಿರಸ !
ಜ್ಞಾನವೆಂತು ಹೇಳಾ ? ನಿರಹಂಕಾರವೆಂತು ಹೇಳಾ ?
ಅರುಹಿನ ಕುರುಹಿನ ಮರವೆ ಮಾತಿನೊಳಗದೆ
ನಿನ್ನಿಂದ ನಿಜಪದವೆಂತು ಸಾಧ್ಯವಪ್ಪುದು ಹೇಳಾ ?
ಕುರುಹಳಿದು ಕುರುಹನರಿಯ ಬಲ್ಲಡೆ
ಗುಹೇಶ್ವರ ಲಿಂಗದಲ್ಲಿ ಉಭಯಗೆಟ್ಟಲ್ಲದೆ ಪ್ರಸಾದವಿಲ್ಲ,
ಕಾಣಾ ಮಡಿವಾಳ ಮಾಚಯ್ಯಾ.
ವಚನ 1014
ನಿಮ್ಮ ತೇಜವ ನೋಡಲೆಂದು ಹೆರಸಾರಿ ನೋಡುತ್ತಿರಲು
ಶತಕೋಟಿ ಸೂರ್ಯರು ಮೂಡಿದಂತೆ ಇರ್ದುದಯ್ಯಾ !
ಮಿಂಚಿನಬಳ್ಳಿಯ ಸಂಚವ ಕಂಡಡೆ,
ಎನಗಿದು ಸೋಜಿಗವಾಯಿತ್ತು !
ಗುಹೇಶ್ವರಾ ನೀನು ಜ್ಯೋತಿರ್ಲಿಂಗವಾದಡೆ
ಉಪಮಿಸಿ ನೋಡಬಲ್ಲವರಿಲ್ಲಯ್ಯಾ.
ವಚನ 1015
ನಿಮ್ಮ ನೆನೆವುತ್ತಿದ್ದಿತ್ತು-ನೆನೆವ ಮುಖವಾವುದೆಂದರಿಯದೆ,
ಪೂಜೆಯ ಪೂಜಿಸುತ್ತಿದ್ದಿತ್ತು-ಪೂಜೆಯ ಮುಖವಾವುದೆಂದರಿಯದೆ;
ಆಡಿ ಹಾಡಿ ಬೇಡುತ್ತಿದ್ದಿತ್ತು-ಬೇಡುವ ಮುಖವಾವುದೆಂದರಿಯದೆ;
ಕಾಯದಲ್ಲಿ ಇಲ್ಲ, ಜೀವದಲ್ಲಿಇಲ್ಲ, ಭಾವದಲ್ಲಿ ಇಲ್ಲ;
ಭರಿತವು ಅದು ತಾನಪ್ಪುದು.
ತಾನಲ್ಲದುದೇನ ಹೇಳುವೆ ಕೌತುಕವ?
ಗುಹೇಶ್ವರನೆಂಬ ಹೆಸರೊಳಗಿದ್ದುದ
ಬೆಸಗೊಂಬವರಿಲ್ಲ ನಿರಾಳದ ಘನವ !
ವಚನ 1016
ನಿಮ್ಮ ನೋಡುವ ಸುಖ ಉಳ್ಳನ್ನಕ್ಕರ, ಬೆರಸಲೆಲ್ಲಿಯದಯ್ಯಾ ?
ನಿಮ್ಮ ಬೆರಸುವ ತವಕ ಉಳ್ಳನ್ನಕ್ಕ ನೋಟ ಹಿಂಗದು !
ನೋಡಿ ಕೂಡಿ ಸೈವೆರಗಾದ ಸುಖವನು
ಏನೆಂದುಪಮಿಸುವೆನಯ್ಯಾ ಗುಹೇಶ್ವರಾ ?
ವಚನ 1017
ನಿಮ್ಮ ಲೀಲೆ, ನಿಮ್ಮ ವಿನೋದ, ನಿಮ್ಮ ಹರೆ, ನಿಮ್ಮ ಕೊಳಲು,
ಆನಿದಕ್ಕೆ ಬೇಕೆನ್ನೆ ಬೇಡೆನ್ನೆ.
ಮೇಘವಹ್ನಿ ಧರೆಗೆರಗುತ್ತ ಭೂಲೋಕವ ಬೆಸಗೊಂಡಿತ್ತೆ ?
ಉದರಾಗ್ನಿ ಧರೆಗೆರಗುತ್ತ ಭೂತಂಗಳ ಬೆಸಗೊಂಡಿತ್ತೆ ?
ಗುಹೇಶ್ವರ ಅಲ್ಲಮನ ನಿರುಪಮ ಮಹಿಮೆ ಎಂತಿದ್ದಿತ್ತು
ಆ ಹಾಂಗೆ ನೀನು ಮಾಡುವುದಲ್ಲದೆ
ನಾನಿದಕ್ಕೆ ಬೇಕೆನ್ನೆನು ಬೇಡೆನ್ನೆನು
ವಚನ 1018
ನಿಮ್ಮ ಶಕ್ತಿ ಜಗದೊಳಗಿಪ್ಪುದು, ಜಗದ ಶಕ್ತಿ ನಿಮ್ಮೊಳಗಿಪ್ಪುದು.
ಜಗಕ್ಕೆ ನಿಮಗೆ ಭೇದವಾದುದಕ್ಕೆ ಬೆರಗಾದೆನು !
ಅಂದೊಮ್ಮೆ ತ್ರಿಪುರವ ಸುಟ್ಟಲ್ಲಿ ನಾಚಿತ್ತೆನ್ನ ಮನವು.
ಕಾಮನನುರುಹಿ ಕಾಮಹರನೆನಿಸಿಕೊಂಡಡೆ
ನಿನ್ನ ಅಹಂಕಾರವ ನೋಡಿ ಹೇಸಿತ್ತೆನ್ನ ಮನವು.
ಕಾಲನ ಸುಟ್ಟು ಬೊಟ್ಟನಿಟ್ಟಡೆ ನಗೆಗೆಡೆಯಾಯಿತ್ತು ನಿಮ್ಮ ಘನವೆನಗೆ.
ಗುಹೇಶ್ವರಾ, ನೀ ಮುನಿದು ನೊಸಲಕಣ್ಣ ತೆಗೆದಡೆ
ಎನ್ನ ಅಂಗಾಲೊಳಡಗಿತ್ತಯ್ಯಾ ನಿಮ್ಮ ಕೋಪ.
ವಚನ 1019
ನಿಮ್ಮಲ್ಲಿ ನೀವು ತಿಳಿದು ನೋಡಿದರೆ:ಅನ್ಯವಿಲ್ಲ ಕಾಣಿರಣ್ಣಾ.
ಅರಿವು ನಿಮ್ಮಲ್ಲಿಯೆ ತದ್ಗತವಾಗಿಯದೆ.
ಅನ್ಯಭಾವವ ನೆನೆಯದೆ ತನ್ನೊಳಗೆ ತಾನೆಚ್ಚರಬಲ್ಲಡೆ
ತನ್ನಲ್ಲಿಯೆ ತನ್ಮಯವು ಗುಹೇಶ್ವರಲಿಂಗವು.
ವಚನ 1020
ನಿಮ್ಮಲ್ಲಿ ಭಕ್ತಿಯುಂಟು, ತಮ್ಮಲ್ಲಿ ಭಕ್ತಿಯುಂಟು
ಎಮ್ಮಲ್ಲಿ ಭಕ್ತಿಯುಂಟು ಎಂದಡೆ ಶಿವಶರಣರು ಮೆಚ್ಚುವರೆ ?
ಹೂಸಿ ಹುಂಡನೆ ಮಾಡಿ ಬಾಯ ಸವಿಯ ನುಡಿವರೆಲ್ಲಾ ಭಕ್ತರಪ್ಪರೆ ?
ಮಾತಿನ ಅದ್ವೈತವ ಕಲಿತು ಮಾರುಗೋಲ ಬಿಡುವರೆಲ್ಲ ಭಕ್ತರಪ್ಪರೆ ?
ಬೆಳ್ಳಿಗೆಯ ಮಕ್ಕಳೆಂದಡೆ ಬಳ್ಳವಾಲ ಕರೆವವೆ ಮರುಳೆ ?
ಸಂಗನಬಸವಣ್ಣನೆಂದರೆ ಮಾತಿನ ಮಾತಿಂಗೆಲ್ಲ ಭಕ್ತಿಯುಂಟೆ ?
ಬಂದ ಜಂಗಮದ ಇಂಗಿತಾಕಾರವನರಿದು, ಇದಿರೆದ್ದು ವಂದಿಸಿ,
ಕೈಮುಗಿದು ನಡುನಡುಗಿ ಕಿಂಕಿಲನಾಗಿ,
ಭಯಬಿತಿ ಭೃತ್ಯಾಚಾರವಾಗಿ ಇರಬಲ್ಲಡೆ ಅದು ಭಕ್ತಿ, ಅದು ವರ್ಮ !
ಬಂದವರಾರೆಂದರಿಯದೆ, ನಿಂದ ನಿಲವರಿಯದೆ
ಕೆಮ್ಮನೆ ಅಹಂಕಾರವ ಹೊತ್ತುಕೊಂಡಿಪ್ಪವರ
ನಮ್ಮ ಗುಹೇಶ್ವರಲಿಂಗನೊಲ್ಲ ನೋಡಾ !
ವಚನ 1021
ನಿಮ್ಮಲ್ಲಿ ಸನ್ನಹಿತನಾಗಿ ನಿಜವನರಿತು ಬೆರಸಿದ
ಶಿವಯೋಗಿಯ ಕಂಡಡೆ ಎನ್ನ ಮನ ಅಗಲಲಾರದಯ್ಯಾ;
ಎನ್ನ ತನು ಅಪ್ಪದಿರಲಾರದಯ್ಯಾ,
ಎನ್ನ ಶಬುದ ಹೊಗಳಿದಲ್ಲದೆ ಸೈರಿಸಲಾರದಯ್ಯಾ.
ಗುಹೇಶ್ವರಾ ನಿಮ್ಮ ಶರಣ ಸಿದ್ಧರಾಮಯ್ಯನನಪ್ಪಿ
ಸೊಪ್ಪಳಿದು ನಮೋ ನಮೋ ಎನುತಿರ್ದೆನು.
ವಚನ 1022
ನಿರವಯ ನಿರ್ಗುಣ ನಿಃಶೂನ್ಯಲಿಂಗಕ್ಕೆ
ಶರಣರು ತಮ್ಮ ತಮ್ಮ ತನುಗುಣಾದಿಗಳ
ಅರ್ಪಿಸಿಹೆನೆಂಬುದೆ ಮಹಾಪಾಪ!
ಅವು ತಮ್ಮ ತನುವಿನಲ್ಲಿಪ್ಪುದೆ ಭಂಗ, ಅದೇ ಕರ್ಮ.
ಈ ಉಭಯ ನಾಸ್ತಿಯಾಗದ ಸುಳುಹು
ಮುಂದೆ ಕಾಡಿಹುದಯ್ಯಾ ಗುಹೇಶ್ವರಾ.
ವಚನ 1023
ನಿರಾಳ ನಿಶ್ಶೂನ್ಯ ಪರಮಜಂಗಮದರಿವು ತಾನಾಗದೆ,
ಬರಿದೆ ಅಹಂಕಾರದಿಂದ ಮೂರು ಮಲಂಗಳ ಸ್ವೀಕರಿಸುತ್ತ
ನಾವೆ ಜಂಗಮವೆಂದು ನುಡಿವ ಕರ್ಮ ಪಾಷಂಡಿಗಳು-
ಕಾಶಿ ಕೇದಾರ ಶ್ರೀಶೈಲ ವಿರೂಪಾಕ್ಷನೆಂದು,
ಮತ್ತೆ ಈರಣ್ಣ ಮಲ್ಲಣ್ಣ ಬಸವಣ್ಣ ಇವರೇ ದೇವರೆಂದು
ಆ ಕಲ್ಲುಗಳ ತಮ್ಮ ಮನೆಯೊಳಗೊಂದು ಮೂಲೆ
ಸಂದಿ ಗೊಂದಿ ಗೊತ್ತಿನೊಳಗಿಟ್ಟು
ಅದರ ಬಳಿದ [ತೊಳೆದ] ನೀರು, ಅವರೆಂಜಲ ತಿಂಬುವ ಪಶುಗಳಿಗೆ
ದೇವಭಕ್ತರೆನಬಹುದೇನಯ್ಯಾ ? ಎನಲಾಗದು.
ಇಂತಪ್ಪ ಅನಾಚಾರಿ ಅಪಸ್ಮಾರಿ ಶ್ವಪಚರ
ಜಂಗಮವೆಂದು ಪೂಜಿಸಲಾಗದು ಕಾಣಿರೊ.
ವೀರಶೈವ ಆಚಾರವುಳ್ಳ ಭಕ್ತನು ಇದ ಮೀರಿ ಪೂಜಿಸಿದಡೆ
ಅವರಿಬ್ಬರಿಗೆಯೂ ಭವಕರ್ಮಂಗಳು ತಪ್ಪವು ಕಾಣಾ ಗುಹೇಶ್ವರಾ
ವಚನ 1024
ನಿರಾಳವೆಂಬ ಕೂಸಿಂಗೆ ಬೆಣ್ಣೆಯನಿಕ್ಕಿ, ಹೆಸರಿಟ್ಟು ಕರೆದವರಾರೊ ?
ಅಕಟಕಟಾ ಶಬ್ಧದ ಲಜ್ಜೆ[ಯ] ನೋಡಾ !
ಗುಹೇಶ್ವರನರಿಯದ ಅನುಭಾವಿಗಳೆಲ್ಲರ
ತರಕಟ ಕಾಡಿತ್ತು.
ವಚನ 1025
ನಿರಾಳವೆಂಬ ಶಿಶುವಿಂಗೆ ಪೃಥ್ವಿಯೆಂಬ ತೊಟ್ಟಿಲು,
ನಿಜೈಕ್ಯವೆಂಬ ತಾಯಿ ಬಂದು ಮೊಲೆಯ ಕೊಟ್ಟು ಬೆಣ್ಣೆಯನಿಕ್ಕಿ;
ವಾಯು ಬಂದು ತೊಟ್ಟಿಲ ತೂಗಿ ಜೋಗುಳವಾಡಿದಡೆ,
ಆಕಾಶ ಬಂದು ಶಿಶುವನೆತ್ತಿಕೊಂಡು ಬೆಳೆಯಿಸಿತ್ತಲ್ಲಾ !
ನಿರಾಳವೆಂಬ ಹಸಿವು-ತೃಷೆಯ ಶಿಶುವಿಂಗೆ ಬೇಕೆಂದು
ಮುಗ್ಧೆಯ ಬೆಸಗೊಳಲರಿಯರು ಮೂರುಲೋಕವು ಗುಹೇಶ್ವರಾ.
ವಚನ 1026
ನಿರಾಳಸ್ಥಾನದಲ್ಲಿ ಆಪ್ಯಾಯನವಿಲ್ಲದೆ ಹೋಯಿತ್ತದೇನೆಂಬೆನಯ್ಯಾ ?
ಹಲವು ನಾಮವಾದೆಯಲ್ಲಾ !
ಚಂದಚಂದದ ಚರಿತ್ರನಲ್ಲ – ನಿಲ್ಲು ಮಾಣು .
ನಿಮ್ಮಿಚ್ಛೆಯ ಪಡೆದರೆಮ್ಮವರು.
ಇಂತಹ ದೇವನು ಅಂತಹ ದೇವನು ಎಂಬ ನಾಮ ಉಳಿಸದು,
ಒಲ್ಲೆ ಕಾಣಾ ಗುಹೇಶ್ವರಾ.
ವಚನ 1027
ನಿರ್ಣಯವನರಿಯದ ಮನವೆ, ದುಗುಡವನಾಹಾರಗೊಂಡೆಯಲ್ಲಾ
ಮಾಯಾ ಸೂತ್ರವಿದೇನೊ! ಕಂಗಳೊಳ[ಗಣ] ಕತ್ತಲೆ ತಿಳಿಯದಲ್ಲಾ !
ಬೆಳಗಿನೊಳಗಣ ಶೃಂಗಾರ ಬಳಲುತ್ತಿದ್ದುದು, ಗುಹೇಶ್ವರಾ.
ವಚನ 1028
ನಿರ್ವಿಕಲ್ಪಿತದ ಅದ್ವೈತವ ನೋಡಿರೆ !
ಬೆಳಗಿನೊಳಗಣ ಬೆಳಗು ಅಡಗಿತ್ತು ನೋಡಿರೆ !
ಚಂದ್ರ ಸೂರ್ಯರು ಭೂಲೋಕದೊಳು ಅಂದು ಅದಾರುವ ಕಾಣೆ !
ಜ್ಯೋತಿಯಿಲ್ಲದ ಬೆಳಗಿನ ಪ್ರಭೆಯೊ,
ಗುಹೇಶ್ವರಲಿಂಗದಲ್ಲಿ ಸಿದ್ಧರಾಮಯ್ಯದೇವರ ಮಹಾಘನವು !
ವಚನ 1029
ನಿರ್ವಿಕಲ್ಪಿತವೆಂಬ ನಜದೊಳಗಯ್ಯಾ,
ನಿರಹಂಭಾವದಲ್ಲಿ ನಾನಿದ್ದೆನಯ್ಯಾ (ನೀ ನಿದ್ದೆಯಯ್ಯಾ ?)
ನೋಡಿಹೆನೆಂದಡೆ ನೋಡಲಿಲ್ಲ, ಕೇಳಿಹೆನೆಂದಡೆ ಕೇಳಲಿಲ್ಲ.
ಘನನಿರಂಜನದ ಬೆಳಗಿಂಬಾದುದನೇನೆಂಬೆ ಗುಹೇಶ್ವರಾ ?
ವಚನ 1030
ನಿಶ್ಚಲವೆಂಬ ಭಾಜನದಲ್ಲಿ ನಿಜಜ್ಞಾನವೆಂಬ ಅಕ್ಕಿಯ ತುಂಬಿ,
ಪರಮಾನಂದವೆಂಬ ಜಲವನೆರೆದು,
ಸ್ವಯಂ ಪ್ರಕಾಶವೆಂಬ ಅಗ್ನಿಯಿಂದ ಪಾಕವಾದ ಲಿಂಗದೋಗರವು
ಮಹಾಘನದಲ್ಲಿ ನಿಂದು ಘನತೃಪ್ತಿಯನೀವುತ್ತಿದ್ದಿತ್ತು ಕಾಣಿರೆ !
ಅದ ಕಣ್ಣಿಲ್ಲದೆ ಕಂಡು ಕೈಯಿಲ್ಲದ ಕೊಂಡು
ಬಾಯಿಲ್ಲದೆ ಉಂಡ ತೃಪ್ತಿಯ, ಅರಿವಿಲ್ಲದ ಅರಿವಿನಿಂದ ಅರಿದು,
ಸುಖಿಯಾದೆ ನಾನು ಗುಹೇಶ್ವರಾ.
ವಚನ 1031
ನಿಷ್ಠೆ ಘಟಿಸಿ ಕ್ರಿಯವಗ್ರಹಿಸಿ ಭಾವಭರಿತವಾಗಿ
ಜ್ಞಾನವೆ ಅಂಗವಾಗಿ ಕ್ರಿಯೆ ಪ್ರಾಣವಾಗಿ,
ಮತ್ತೆ ಜ್ಞಾನವೆ ಪ್ರಾಣವಾಗಿ ಕ್ರಿಯೆ ಅಂಗವಾಗಿ
ಅಂಗಮನಕ್ರಿಭಾವ ಈ ಚತುರ್ವಿಧವೊಂದಾಗಿ,
ಮತ್ತೆ ನಿಷ್ಠೆಘಟಿಸಿ ಕ್ರಿಜ್ಞಾನ ಎರಡ ವಿೂರಿನಿಂದ ಭಕ್ತವಿರಕ್ತನ
ತೂರ್ಯದ ಕ್ರಿಯೆ ವೇದಿಸಿ ನಿಂದವನ ನಿಲವು ಎಂತುಟೆಂದರೆ:
ಕ್ರಿಯೆಂದರೆ ಇಷ್ಟಲಿಂಗ, ಅಂಗವೆಂದರೆ ಪ್ರಾಣಲಿಂಗ.
ಆ ಪ್ರಾಣಲಿಂಗವ ಇಷ್ಟಲಿಂಗದಲ್ಲಡಗಿಸಿಕೊಂಡು ನಿಂದುದು ಎರಡಾಗಿ
ಭಕ್ತನೆಂದು ಮಾಹೇಶ್ವರನೆಂದು ನಿಷ್ಠೆಯಲ್ಲಿ ನೆರೆನಿಂದಿರಲು
ಮತ್ತಾ ನಿಷ್ಠೆಪಸರಿಸಿ ಆ ಭಕ್ತಮಾಹೇಶ್ವರರು
ತಮ್ಮ ಮುನ್ನಿನ ನಿಷ್ಠೆಯ ಬಳಿಗೆ ಬಂದು
ಎನ್ನಕ್ರಿ ನಿಮ್ಮಲ್ಲಿಯೇ ಅಡಗಿತ್ತು ಆ ಮುಕ್ತತ್ವದ ಕ್ರಿಯೊಳಗೊಂಡು
ದೃಷ್ಟವ ಕಂಡು ಬರ….ಕೇಳಲಾಗಿ,
ಎನ್ನ ಇಷ್ಟವಾಸರಿಸಿತ್ತೆಂದು ಹೇಳಲು
ಸುಮ್ಮನೆ ಅವನ ಕೂಡೆ ಪ್ರಸಂಗಿಸಲಾಗದು.
ಅದೇನು ಕಾರಣವೆಂದರೆ:
ಮೊಟ್ಟ ಮೊದಲಲ್ಲಿ ಮೂರು ಬಿನ್ನವ ಕೇಳುವದು
ಆ ಮೂರು ಬಿನ್ನಯೆಂತಾದವಯ್ಯಯೆಂದರೆ,
ಅದರೊಳಗೈದು ಬಿನ್ನ ಉಂಟು.
ಇಂತೀ ಎಂಟರೊಳಗೆ ನಾಲ್ಕು ಲಿಂಗದ ನೆಲೆ ಸಿಕ್ಕಿದರೆ ಅವೆಲ್ಲರಲ್ಲಿ ಬಂದಿಸೂದು.
ಅದಲ್ಲದೆ ನಿಂದರೆ ಮುಂದಣ ನಾಲ್ಕು ಅವನ ಭಾವವ ತೊರೆದು ನೋಡೂದು.
ನೋಡಿ ನಿಶ್ಚಯವಾದ ಮತ್ತೆ
ಕೂಡೆಯಿಟ್ಟುಕೊಂಡಿರ್ಪ ಸಮಯದಲ್ಲಿ,
ಮೂಲಾಗ್ನಿಯ ಜ್ವಾಲೆಯಿಂದ ಮೇಲುವಾಯ್ದು
ಒತ್ತಿಲಿರ್ದ ತನ್ನ ತೆತ್ತಿಗರ ನಿಲ್ಲದಂತೆ ನೀಕರಿಸುತ್ತಿರಲು,
ಸಲಹಲಾರದ ತಾಯಿ ಶಿಶುವ ಬೈದು ಕೊಲುವಂತೆ
ತಮ್ಮ ತ್ಯಾಗದ ಮೈಮರೆದಿದರ್ಾತನ ಎಚ್ಚರ ಮಾಡಿ,
ನೀ ಮುನ್ನಲಿಂತಹವನೆಂದೆ ನುಡಿದು ಹೋಗುವ ನಿಷ್ಠೆ ಭಂಡರ
ಗುಹೇಶ್ವರ ಸಾಕ್ಷಿಯಾಗಿ ಅಲ್ಲಯ್ಯನೊಲ್ಲ ಸಂಗನಬಸವಣ್ಣಾ.
ವಚನ 1032
ನೀ ದೇವರೊಳಗೊ ? ದೇವರು ನಿನ್ನೊಳಗೊ ? ಎಂಬಠಾವನರಿಯೆ.
ಸಿಪ್ಪೆ ಒಪ್ಪೆಗೆಟ್ಟಾಗ ಹಣ್ಣಿನ ರಸ ಕೊಳಕಾಯಿತ್ತು,
ಅದು ಗುಹೇಶ್ವರನೊಪ್ಪದ ಮಾತು.
ವಚನ 1033
ನೀ ನಾನೆಂಬ ಭಾವವಾರಿಂದಾಯಿತ್ತು ಹೇಳಾ?
ನೀನೆಂಬುದು ಅಜ್ಞಾನ, ನಾನೆಂಬುದು ಮಾಯಾದಿನ.
ನೀನೆನ್ನದೆ ನಾನೆನ್ನದೆ ಇಪ್ಪ ಸುಖವ
ಬಿನ್ನವಿಲ್ಲದೆ ಅರಿಯಬಲ್ಲಡೆ;
ಆ ಸುಖ ನಿಮಗರ್ಪಿತ ಕಾಣಾ ಗುಹೇಶ್ವರಾ.
ವಚನ 1034
ನೀನು’ `ನಾನು’ ಎಂಬ ಉಭಯಸಂಗವಳಿದು ತಾನು ತಾನಾದ
ತ್ರಿಕೂಟವೆಂಬ ಮಹಾಗಿರಿಯ ತುಟ್ಟತುದಿಯ ಮೆಟ್ಟಿ ನೋಡಲು,
ಬಟ್ಟಬಯಲು ಕಾಣಬಹುದು ನೋಡಾ !
ಆ ಬಯಲ ಬೆರಸುವಡೆ-ತ್ರಿಕೂಟಗಿರಿಯೊಳಗೊಂದು ಕದಳಿಯುಂಟು ನೋಡಾ !
ಆ ಕದಳಿಯ ತಿಳಿದು ಅಲ್ಲಿ ಒಳಹೊಕ್ಕು ನೋಡಲು
ತೊಳಗಿ ಬೆಳಗುವ ಜ್ಯೋತಿಯುಂಟು ಕೇಳಾ !
ನಡೆ ಅಲ್ಲಿಗೆ ತಾಯೆ,
ಗುಹೇಶ್ವರಲಿಂಗದಲ್ಲಿ ಪರಮಪದವಿ ನಿನಗೆ ಸಯವಪ್ಪುದು ನೋಡಾ
ವಚನ 1035
ನೀರ ನಡುವೆ ಒಂದು ಗಿಡು ಹುಟ್ಟಿತ್ತು.
ಆ ಗಿಡುವಿನ ಎಲೆಯ ಮೆಲಬಂದಿತ್ತೊಂದು ಕೋಡಗ.
ಆ ಕೋಡಗದ ಕೊಂಬಿನಲ್ಲಿ ಮೂಡಿತ್ತು ಅದ್ಭುತ.
ಆ ಅದ್ಭುತವಳಿದಲ್ಲದೆ ಶರಣನಾಗಬಾರದು ಗುಹೇಶ್ವರಾ.
ವಚನ 1036
ನೀರ ನೆಳಲನೆ ಕಡಿದು, ಮೇರುವೆಂಬುದ ನುಂಗಿ,
ಶಾರದೆಯೆಂಬವಳ ಬಾಯ ಕಟ್ಟಿ,
ಕಾರ ಮೇಘದ ಬೆಳಸ ನೀರ ಹರಿ ನುಂಗಲು
ದಾರಿ ಮೃತ್ಯುವ ನುಂಗಿ ನಗುತ್ತಿದ್ದಿತು.
ನಾರಿಯ ಬೆನ್ನ ಮೇಲೆ ಗಂಡ ಬಂದು ಕುಳ್ಳಿರಲು,
ನೀರ ಹೊಳೆಯವರೆಲ್ಲರ ಕೊಡನೊಡೆದವು.
ಕಾರೆಯ ಮುಳ್ಳೆರ್ದು ಕಲಿಗಳನಟ್ಟಿ ಸದೆವಾಗ,
ಸೋರುಮುಡಿಯಾಕೆ ಗೊರವನ ನೆರೆದಳು.
ಬಳ್ಳು ಆನೆಯ ನುಂಗಿ, ಹೊಳೆ (ಒಳ್ಳೆ ?) ಸಮುದ್ರವ ಕುಡಿದು,
ಕುಳ್ಳಿರ್ದ ಶಿಶು ಹಲಬರನೆಯ್ದೆ ನುಂಗಿ,
ಅತ್ತೆ ಅಳಿಯನ ಕೂಡಿ ಕೋಡಗವ ಹಡೆದಲ್ಲಿ,
ಹತ್ತಿರಿರ್ದ ಹಾವಾಡಿಗನನು ಅದು ನುಂಗಿತ್ತು!
ಕಪ್ಪೆ ಸರ್ಪನ ಹಿಡಿದು ಒತ್ತಿ ನುಂಗುವಾಗ,
ಕಪ್ಪೆಯ ಕೊರಳಲ್ಲಿ ಬಿಳಿದು ಕೆಂಪಡರಲು,
ನಿಶ್ಚಿಂತವಾಯಿತ್ತು ಗುಹೇಶ್ವರನ ಶರಣಂಗೆ,
ಕಟ್ಟಿದಿರ ಕರ್ಪುರದ ಜ್ಯೋತಿಯಂತೆ!
ವಚನ 1037
ನೀರ ಬೊಂಬೆಯ ಚೋಹವ ತೊಟ್ಟು,
ಅಗ್ನಿಯ ಬಣ್ಣದ ಹೊದಕೆಯ ಹೊದ್ದು,
ಗಾಳಿಯ ಗತಿಯಲ್ಲಿ ಸುಳಿದಾಡುವ ಪ್ರಾಣಿಗಳು
ದೇವರನೆತ್ತ ಬಲ್ಲರು ಗುಹೇಶ್ವರಾ ?
ವಚನ 1038
ನೀರ ಸುಟ್ಟ ಕಿಚ್ಚಿನ ಬೂದಿಯ ಮರ್ಮವ ಬಲ್ಲಡೆ,
ನೀವು ಹೇಳಿರೆ?
ಬಯಲ ಸುಟ್ಟ ಕಿಚ್ಚಿನ ಬೂದಿಯ ಕಂಡಡೆ,
ನೀವು ಹೇಳಿರೆ?
ವಾಯುನಿಂದ ಸ್ಥಾನಕ್ಕೆ (ವ?), ಗುಹೇಶ್ವರ ನಿಂದ ನಿಲವ ಕಂಡಡೆ,
ನೀವು ಹೇಳಿರೆ?
ವಚನ 1039
ನೀರ, ಧಾರುಣಿಯೊಳಗೆ ನಾರಿ ಶೃಂಗಾರವ ಮಾಡಿ,
ಈರೇಳು ಭವನವನಮಳೋಕ್ಯವ ಮಾಡಿ,
ಬಿಂದು ಶಕ್ತಿಯ ಭೇದ ಸಂದ ಯೋಗದ ಸುಖವ ತಂದು
ಮೂರ್ತಿಗೊಳಿಸಿದವರಾರು ?
ಒಂದೆರಡರ ನುಡಿಯ ಮತ್ತೊಂದು ಗ್ರಹಿಸಿತ್ತ ಕಂಡೆ.
ಬಿಂದುವಿನ ರಸದ ಪರೀಕ್ಷೆಯ ಭೇದವ
ಚಂದ್ರಕಾಂತದ ಗಿರಿಗೆ ಅರುಣ ಚಂದ್ರನೊಡನೆ
ಇಂಬಿನಲ್ಲಿಪ್ಪ ಪರಿಯ ನೋಡಾ !
ಅಂಗಯ್ಯ ತಳದೊಳು ಮೊಲೆ
ಕಂಗಳಲ್ಲಿ ಕರಸನ್ನೆಗೆಯ್ದಿಂಬಿನಲ್ಲಿ ನೆರೆವ ಸುಖ
ಅಂದಿನಾದಿಯ ಪ್ರತಿಬಿಂಬ ಇಂದೆನಗೆ ತೋರಿತ್ತು.
ಗುಹೇಶ್ವರನ ಶರಣ ಚನ್ನಬಸವಣ್ಣಂಗೆ ಶರಣೆನುತಿರ್ದೆನು.
ವಚನ 1040
ನೀರನೀಜುವನ ದೇಹ ಬಳಲುವುದಲ್ಲದೆ ನೀರು ಬಳಲುವುದೆ ?
ಸಮಯವ ನುಡಿದಡೆ ಸಮಯಕ್ಕೆ ನೋವಲ್ಲದೆ
ಗುಹೇಶ್ವರಲಿಂಗಕ್ಕೆ ಭ್ರಮೆಯಿಲ್ಲ (ನೋವಿಲ್ಲ?) ಸಂಗನಬಸವಣ್ಣಾ
ವಚನ 1041
ನೀರಲೊಗೆದ ಮರಕ್ಕೆ ಕಾಣಬಾರದ ನೆಳಲು !
ಬೀಜವಿಲ್ಲದ ಮರನ ಹೆಸರೇನೆಲವೊ ?
ಇದನೇನ ಬಲ್ಲಿರಿ ? ಇದನೇನ ಬಲ್ಲಿರಿ ?
ಅರಿವಿನ ಮರೆಯ ಘನಕ್ಕೆ ಘನವಾದುದ !
ಕಾಸಲಿಲ್ಲದ ತುಪ್ಪ, ವಾಸನೆಯಿಲ್ಲದ ಪರಿಮಳ !
ಗುಹೇಶ್ವರನಿಪ್ಪ ನಿರಾಳವ ನೋಡಯ್ಯಾ.
ವಚನ 1042
ನೀರಿಲ್ಲದ ಒರಳಿಂಗೆ ನೆಳಲಿಲ್ಲದ ಒನಕೆ !
ರೂಹಿಲ್ಲದ ನಾರಿಯರು ಬೀಜವಿಲ್ಲದಕ್ಕಿಯ ತಳಿಸುತ್ತಲಿ
ಬಂಜೆಯ ಮಗನ ಜೋಗುಳವಾಡುತ್ತೈದಾರೆ,
ಉರಿಯ ಚಪ್ಪರವನಿಕ್ಕಿ-
ಗುಹೇಶ್ವರನ ಕಂದನು ಲೀಲೆಯಾಡಿದನು !
ವಚನ 1043
ನೀರಿಲ್ಲದ ನೆರಳಿಲ್ಲದ ಬೇರಿಲ್ಲದ ಗಿಡುವ
ತಲೆಯಿಲ್ಲದ ಮೃಗ ಬಂದು ಮೇಯಿತ್ತು.
ಕಣ್ಣಿಲ್ಲದ ಕುರುಡನು ಕಂಡನಾ ಮೃಗವ.
ಕೈಯಿಲ್ಲದ ವ್ಯಾಧನು ಎಚ್ಚನಾ ಮೃಗವ.
ಕಿಚ್ಚಿಲ್ಲದ ನಾಡಿಗೊಯ್ದು ಸುಟ್ಟು ಬಾಣಸವ ಮಾಡೆ
ಲಿಂಗಕ್ಕರ್ಪಿತವಾಯಿತ್ತು ಗುಹೇಶ್ವರಾ !
ವಚನ 1044
ನೀರು ಕ್ಷೀರದಂತೆ ಕೂಡಿದ ಭೇದವ, ಆರಿಗೂ ಹೇಳಲಿಲ್ಲ, ಕೇಳಲಿಲ್ಲ.
ಬೆಳುಗಾರ ಬೆರಸಿ ಬೆಚ್ಚ ಬಂಗಾರಕ್ಕೆ ಸಂದುಂಟೆ ಹೇಳಾ ?
ಉರಿಯುಂಡ ಕರ್ಪುರದ ಪರಿಯಂತಿರ್ದುದನು,
ಇದಿರಿಂಗೆ ಕೊಂಡಾಡಿ ಹೇಳಲುಂಟೆ ? ಅದಂತಿರಲಿ,-
ನಮ್ಮ ಗುಹೇಶ್ವರಲಿಂಗದ ಕಣ್ಣಮುಂದೆ,
ನಿಮ್ಮ ಧರ್ಮದಿಂದಲೊಂದು ಆಶ್ಚರ್ಯವ ಕಂಡು ಬದುಕಿದೆನು ಕಾಣಾ
ಸಂಗನಬಸವಣ್ಣಾ.
ವಚನ 1045
ನೀರೂ ನೆಳಲೂ ಇಲ್ಲದಂದು, ಷಡುಶೈವ (ದೈವ ?) ರಿಲ್ಲದಂದು.
ಬ್ರಹ್ಮಾಂಡ ಭಾಂಡ ಭಾಂಡಾವಳಿಗಳಿಲ್ಲದಂದು,
ಪಿಂಡಾಂಡ ಅಂಡ ಅಂಡಾವಳಿಗಳಿಲ್ಲದಂದು,
ಅಖಂಡಿತ ಜ್ಯೋತಿರ್ಮಯಲಿಂಗ ಶರಣನ ಲೀಲೆಯಿಂದಾದ
ಏಳು ತರದ ಗಣಪಿಂಡವಂ ಕಂಡು ಅಖಂಡಿತನಾಗಿ
ಬದುಕಿದೆನಯ್ಯಾ ಗುಹೇಶ್ವರಾ.
ವಚನ 1046
ನೀರೊಳಗಣ ಜ್ಯೋತಿ ಮೇರುವ ನುಂಗಿತ್ತು.
ದೂರ[ದ] ಧಾತು ಸಾರಾಯದೊಳಡಗಿತ್ತು.
ಪುರದೊಳಗೈವರ ಶಿರವರಿದು, ಪರಿಮಳದೋಕುಳಿಯನಾಡಿತ್ತ ಕಂಡೆ.
ಸಾರಿರ್ದ ಬ್ರಹ್ಮನ ಓಲಗ ಹರೆಯಿತ್ತು,
ಘೋರ ರುದ್ರನ ದಳ ಮುರಿಯಿತ್ತು-ಗುಹೇಶ್ವರಾ.
ವಚನ 1047
ನೀರೊಳಗೆ ಚಿತ್ರವ ಬರೆದಡೆ ಅದಾರ ಕಣ್ಣಿಗೆ ಕಾಣಬಹುದು ?
ಒಡಲು ಬರಿಯ ಬಯಲು ಬೊಮ್ಮವ ನುಡಿವಲ್ಲಿ
ಆ ಬೊಮ್ಮದ ಮಾತದೆಲ್ಲಿ ಬಿದ್ದಿತ್ತು ?
ಅದು ಸಾಕಾರದೊಡಲುಗೊಂಡು ನುಡಿಯಿತ್ತು.
ಆ ಉಭಯವನರಿದು ಅಡಗುವನ್ನಕ್ಕ
ನಮ್ಮ ಗುಹೇಶ್ವರಲಿಂಗವೆಂಬ ಕುರುಹು ಬೇಕು
ಕಾಣಾ ಎಲೆ ಅಂಬಿಗರ ಚಾಡಯ್ಯ.
ವಚನ 1048
ನುಡಿಗೆಡೆಗೊಡದ ಘನವ ಹಿಡಿದು ಒಡಬಂದಿಯಾಳು.
ಎಡೆಯಿಲ್ಲದ ಪರಿಪೂರ್ಣದೊಳಗೆ ನಡೆನುಡಿಗೆಟ್ಟಳು.
ತನ್ನ ನಿಲುಕಡೆಯ ನಿಜವ ತಾನರಿಯದಂತೆ
ಎನ್ನಿಂದ ಕೇಳಿ ಸ್ವಯವಾದಳು.
ಗುಹೇಶ್ವರಲಿಂಗ ಸಾಕ್ಷಿಯಾಗಿ,
ಮಹಾದೇವಿಯಕ್ಕನ ನಿಲವ ಕೊಂಡಾಡುವುದಕ್ಕೆ
ತೆರಹಿಲ್ಲ ಕಾಣಾ ಮಡಿವಾಳಯ್ಯ.
ವಚನ 1049
ನುಡಿಯಿಂದ ನಡೆಗೆಟ್ಟಿತ್ತು ನಡೆಯಿಂದ ನುಡಿಗೆಟ್ಟಿತ್ತು.
ಭಾವದ ಗುಸುಟು ಅದು ತಾನೆ ನಾಚಿ ನಿಂದಿತ್ತು.
ಗುಹೇಶ್ವರನೆಂಬ ಅರಿವು ಸಿನೆ ಬಂಜೆಯಾಯಿತ್ತು.
ವಚನ 1050
ನೆನಹು ನೆನೆವ ಮನದಲ್ಲಿಲ್ಲ, ತನುವಿನಲ್ಲಿ ಆಸೆಯಿಲ್ಲ.
ನೆನೆವ ಮನವನತಿಗಳೆದ ಘನಕ್ಕೆ ಘನವೆಂತೆಂಬೆ ?
ತನ್ನಲ್ಲಿ ತಾನಾಯಿತ್ತು, ಬಿನ್ನವಿಲ್ಲದೆ ನಿಂದ ನಿಜವು.
ಅನಾಯಾಸದ ಅನುವ ಕಂಡು ಆನು ಬೆರಗಾದೆನಯ್ಯಾ.
ಎಂತಿದ್ದುದು ಅಂತೆ ಅದೆ ಚಿಂತೆಯಿಲ್ಲದನುಭಾವ ಗುಹೇಶ್ವರಾ
ವಚನ 1051
ನೆನಹು ನೆನೆವ ಮನದಲ್ಲಿಲ್ಲ, ತನುವಿನಾಶೆ ಮುನ್ನವಿಲ್ಲ.
ಮನ ಮನವನೊಳಕೊಂಡ ಘನಘನವನೇನೆಂಬೆ !
ತನ್ನಲ್ಲಿ ತಾನೆಯಾಯಿತ್ತು !
ನೆನೆಯಲಿಲ್ಲದ ನಿಂದ ನಿರಾಳ ಅನಾಗತವಾದುದ ಕಂಡು
ನಾನು ಬೆರಗಾದೆನು.
ಅಂತು ಇಂತು ಎನಲಿಲ್ಲ, ಚಿಂತೆಯಿಲ್ಲದ ಮಹಾಘನವ.
ಗುಹೇಶ್ವರಲಿಂಗವ ಬೇರೆ ಅರಸಲಿಲ್ಲ.
ವಚನ 1052
ನೆನಹು ಸತ್ತಿತ್ತು ಭ್ರಾಂತು ಬೆಂದಿತ್ತು.
ಅರಿವು ಮರೆಯಿತ್ತು ಕುರುಹುಗೆಟ್ಟಿತ್ತು.
ಗತಿಯನರಸಲುಂಟೆ? ಮತಿಯನರಸಲುಂಟೆ?
ಅಂಗವೆಲ್ಲ ನಷ್ಟವಾಗಿ ಲಿಂಗಲೀಯವಾಯಿತ್ತು.
ಕಂಗಳಂಗದ ಕಳೆಯ ಬೆಳಗಿನ ಭಂಗ ಹಿಂಗಿತ್ತು ಗುಹೇಶ್ವರಾ.
ವಚನ 1053
ನೆನೆ ಎಂದಡೆ ಏನ ನೆನೆವೆನಯ್ಯಾ?
ಎನ್ನ ಕಾಯವೆ ಕೈಲಾಸವಾಯಿತ್ತು,
ಮನವೆ ಲಿಂಗವಾಯಿತ್ತು, ತನುವೆ ಸೆಜ್ಜೆಯಾಯಿತ್ತು.
ನೆನೆವಡೆ ದೇವನುಂಟೆ? ನೋಡುವಡೆ ಭಕ್ತನುಂಟೆ?
ಗುಹೇಶ್ವರಲಿಂಗ ಲೀಯವಾಯಿತ್ತು.
ವಚನ 1054
ನೆನೆದೆಹೆನೆಂದಡೆ ಮನಕ್ಕೆ ಸಿಲುಕದು,
ಅರಿದೆಹೆನೆಂದಡೆ ಕುರುಹಿಂಗೆ ಬಾರದು,
ಕಂಡೆಹೆನೆಂದಡೆ ಮೂರ್ತಿಯಲ್ಲ.
ತನುವಿನೊಳಗಿಲ್ಲದ ಮನದೊಳಗಿಲ್ಲದ ಘನವು,
ನಿಮ್ಮ ಮನಕ್ಕೆ ವೇದ್ಯವಾದ ಪರಿ, ಎಂತಯ್ಯಾ ?
ಗುಹೇಶ್ವರನೆಂಬ ಲಿಂಗವು ಜಗದ ಕಣ್ಣಿಂಗೆ ಕತ್ತಲೆಯ ಕವಿಸಿ
ತನ್ನ ತಪ್ಪಿಸಿಕೊಂಡಿಪ್ಪ [ಆ] ಭೇದ
ನಿನ್ನೊಳಗಡಗಿದ ಪರಿ ಎಂತು ಹೇಳಾ ಸಂಗನಬಸವಣ್ಣಾ ?
ವಚನ 1055
ನೆನೆನೆನೆದು ಮನ ಘನವ ವೇದಿಸಿತ್ತು.
ಕಂಡು ಕಂಡು ಮನ ಡಾವರಿಸಿತ್ತು
ತತ್ತಲ್ಲೀಯವಾಯಿತ್ತು, ತದುಗತ ಶಬ್ದ ಮುಗ್ಧವಾಯಿತ್ತು.
ಎತ್ತಣ ಗುಹೇಶ್ವರನೆಂದರಿಯದೆ,
ಉಭಯಲಿಂಗ ಒಳಕೊಂಡಿತ್ತಯ್ಯಾ.
ವಚನ 1056
ನೆನೆವಡೆ ಮನವಿಲ್ಲ. ತನುವಿನಾಸೆ ಮುನ್ನಿಲ್ಲ,
ನೆನೆವ ಮನವ ನೇತಿ ಮಾಡುವ
ಘನಕ್ಕೆ ಘನವನೇನೆಂಬೆನಯ್ಯಾ ?
ತನ್ನಿಂದ ತಾನಾದುದು ಬಿನ್ನವಿಲ್ಲದೆ ನಿಂದ ನಿಜವು !
ಅನಾಯಾಸದಿರವಿಂಗೆ ಬೆರಗಾದೆ ಗುಹೇಶ್ವರಾ.
ವಚನ 1057
ನೆಲ ಹುಟ್ಟದಂದಿನ ಧವಳಾರ,
ಧವಳಾರದೊಳಗೊಬ್ಬ ಸೂಳೆ ನೋಡಯ್ಯಾ.
ತಲೆಯಿಲ್ಲದಾತ ನಿಚ್ಚಕ್ಕೆ ಬಪ್ಪ,
ಕರುಳಿಲ್ಲದಾತ ಕುಂಟಿಣಿಯಾದ ನೋಡಯ್ಯಾ.
ಕೈಕಾಲಿಲ್ಲದೆ ಅಪ್ಪಲೊಡನೆ !-
ಇದ ಕಂಡು ಬೆರಗಾದೆ ಗುಹೇಶ್ವರಾ.
ವಚನ 1058
ನೆಲದ ಬೊಂಬೆಯ ಮಾಡಿ, ಜಲದ ಬಣ್ಣವನುಡಿಸಿ,
ಹಲವು ಪರಿಯಾಶ್ರಿ(ಶ್ರ?)ಮದಲ್ಲಿ ಉಲಿವ ಗೆಜ್ಜೆಯ ಕಟ್ಟಿ
ವಾಯುವನಲನ ಸಂಚಕ್ಕೆ ಅರಳೆಲೆಯ ಶೃಂಗಾರವ ಮಾಡಿ
ಆಡಿಸುವ ಯಂತ್ರವಾಹಕನಾರೊ ?
ಬಯಲ ಕಂಬಕ್ಕೆ ತಂದು ಸಯವೆಂದು ಪರವ ಕಟ್ಟಿದಡೆ
ಸಯವದ್ವಯವಾಯಿತ್ತು-ಏನೆಂಬೆನು ಗುಹೇಶ್ವರಾ !
ವಚನ 1059
ನೆಲದ ಮರೆಯ ನಿಧಾನದಂತೆ, ಮುಗಿಲ ಮರೆಯಲಡಗಿದ ಮಿಂಚಿನಂತೆ,
ಬಯಲ ಮರೆಯಲಡಗಿದ ಮರೀಚನಂತೆ (ಮರೀಚಿಯಂತೆ?)
ಕಂಗಳ ಮರೆಯಲಡಗಿದ ಬೆಳಗಿನಂತೆ-ಗುಹೇಶ್ವರಾ ನಿಮ್ಮ ನಿಲವು!
ವಚನ 1060
ನೆಲದ[ತ್ತ] ಮುಂದಣ ಬಾಗಿಲು,
ಮೂರು ಮೊನೆಯ ಕಂಭದ ಶೂಲದಲ್ಲಿ ಒಂದು ದೇಗುಲ !
ಅಲ್ಲಿ ಒಳಗಣ ಹೂವಿನ ಕಲ್ಲಿನಲ್ಲಿ ಸಿಲುಕಿ (ನೆಲಸಿ?)
ನಾದ ಮೂರುತಿ ಲಿಂಗವಿಪ್ಪುದು.
ಒಂದು ಮಾತನಾಡಿದಡೆ ನುಡಿವುದು.
ಗುಹೇಶ್ವರ ಮೆಚ್ಚಲು, ಬಹುಮಾತಿನ ಮಾಲೆಯ ಅನುಭಾವಕ್ಕೆ
ನಾಚುವನು ಕಾಣಾ ಸಂಗನಬಸವಣ್ಣಾ.
ವಚನ 1061
ನೋಡಲಿಲ್ಲದ ಶೃಂಗಾರ, ಮಾತಾಡಲಿಲ್ಲದ ಶಬ್ದ
ಬೇಡಲಿಲ್ಲದ ವರ-ನೋಡಿರೆ ನಿರಾಳವ !
ಬಾಡಲಿಲ್ಲದ ಸಸಿಯ ಬೆಳಸು
ಕೂಡದೆ ಕೂಡಿತ್ತೊಂದು ಸುಖವ ಕಂಡೆ ನಾನು.
ಇಲ್ಲದ ಉಪಕಾರ ಮೆಲ್ಲದ ಸವಿಯಿಂದ
ಸುಖಿಯಾದೆ ಗುಹೇಶ್ವರಾ.
ವಚನ 1062
ನೋಡು ನೋಡಾ ಸಿದ್ಧರಾಮಯ್ಯಾ;
ಆಗಳೆ ಭಕ್ತರಿಗೆ ಅಹಂಕಾರವಾಯಿತ್ತು.
ಭೃತ್ಯನಿದ್ದೆಡೆಗೆ ಕರ್ತನೈತಂದಡೆ
ಅಟ್ಟಾಟಿಕೆಯಲ್ಲಿ ಇಂತು ಕರೆದವರುಂಟೆ ?
ಬಸವಣ್ಣನೊಳಗೆ ಇಂತು ಮರವೆ ಹುಟ್ಟಿದ ಬಳಿಕ
ಉಳಿದ ಶಿವಭಕ್ತರ ಪಾಡೇನು ಹೇಳಾ ?
ಗುಹೇಶ್ವರಲಿಂಗವನು ಭಕ್ತಿರತಿಯಿಂದ
ಮನಮುಟ್ಟಿ ಕರೆದಡೆ ಹೋಹುದಲ್ಲದೆ
ವ್ಯರ್ಥಕ್ಕೆ ಹೋಗಲಾರದು ನೋಡಯ್ಯಾ.
ವಚನ 1063
ನೋಡುವ ಸೂರ್ಯ ಸುರಿವ ಜಲ
ಹೊಲೆನೆಲೆ ಶುದ್ಧ ಎಲ್ಲಕ್ಕೂ ಸರಿ.
ಅರಿದು ನುಡಿವವಂಗೆ, ಮರೆದು ನುಡಿದು ತಲ್ಲಣಿಸುವವಂಗೆ
ಅವನ ಹೃದಯವೆ ಸಾಕ್ಷಿ !
ಗುಹೇಶ್ವರಲಿಂಗಕ್ಕೆ ತಥ್ಯ ಮಿಥ್ಯವಿಲ್ಲ ಸಂಗನಬಸವಣ್ಣಾ.
ವಚನ 1064
ನೋಡೂದ ನೋಡಲರಿಯದೆ, ಕೆಟ್ಟಿತ್ತೀ ಲೋಕವೆಲ್ಲ.
ನೋಡೂದ ನೋಡಬಲ್ಲಡೆ ಕೂಡಲಿಲ್ಲ ಅಗಲಲಿಲ್ಲ.
ನೋಟದ ಕೂಟದ ಅಗಲದ ಸುಖವನು
ಗುಹೇಶ್ವರಾ ನಿಮ್ಮ ಶರಣ ಬಲ್ಲ
ವಚನ 1065
ನೋಳ್ಪುದೆ ನೋಟದೊಳ್, ನೋಟವೆ ನೋಟಕನೊಳ್,
ನೋಟಕನೆ ಸಾಕ್ಷಿ, ಸಾಕ್ಷಿಯೆ ಲಿಂಗ.
ಲಿಂಗದಿಂದೆಲ್ಲವು, ಆ ಲಿಂಗಕ್ಕೆ ಕುರುಪಿಲ್ಲ.
ಲಿಂಗಕ್ಕೆ ಲಿಂಗವೇ, ಲಿಂಗವಿದು ಬಹು ಗುಹ್ಯ,
ಗುರುಲಿಂಗದೆರಕದಿಂ ಸಚ್ಛಿಷ್ಯನೆ ಬಲ್ಲ.
ಭವಿಗಳದನೆತ್ತ ಬಲ್ಲರು ?
ಕಣ್ಣುಗೆಟ್ಟವರು ನೋಡಾ ಗುಹೇಶ್ವರಾ
ವಚನ 1066
ಪಂಚಬ್ರಹ್ಮಮೂರ್ತಿ ಪ್ರಣವ ಮಂತ್ರರೂಪ
ಪಂಚಮುಖ ದಶಭುಜ ಫಣಿಯ ಮಣಿಯ ಮೇಲೆ ನೋಡುತ್ತೈದಾನೆ !
ಸಮತೆ ಸಮಾದಿಯೆಂಬ ಸಮರಸದೊಳಗೆ;
ಚಂದ್ರಕಾಂತಕೊಡದಲ್ಲಿ ಅಮೃತವ ತುಂಬಿ,
ಕೊಡನೊಡೆಯದೆ ಬೆಳಗುತ್ತಿದೆ, ಗುಹೇಶ್ವರಾ.
ವಚನ 1067
ಪಂಚಭೂತ ತ್ರಿಗುಣವನು ಸಂಚರಿಸಿ
ರವಿಶಶಿಯ ಅಂತು ಕೂಡದ ರಜಬೀಜ
ಬದ್ಧ ಬಂಧವಾಯಿತ್ತೊ !
ಸಂಗತಿಯಿಲ್ಲದವನಲ್ಲ, ಪವನಗತಿಯ ನಡೆವವನಲ್ಲ.
ಭೇದಿಸುತ್ತಿದ್ದಿತು ಲೋಕವೆಲ್ಲ ಆತನ !
ರಜಬೀಜವಿಲ್ಲದ ಬಯಲು ಬದ್ಧವಾಯಿತ್ತೆ ?
ಇನ್ನೇನೆಂದು ಉಪಮಿಸುವೆ ಗುಹೇಶ್ವರಾ
ಸಿದ್ಧರಾಮನ ನಾಮವನು ?
ವಚನ 1068
ಪಂಚಭೂತಸಂಗದಿಂದ ಜ್ಯೋತಿಯಾಯಿತ್ತು.
ಪಂಚಭೂತಸಂಗದಿಂದ ಕರ್ಪುರವಾಯಿತ್ತು.
ಈ ಎರಡರ ಸಂಗವೇನಾಯಿತ್ತು ಹೇಳಾ ವಾಙ್ಮನಾತೀತ ಗುಹೇಶ್ವರಾ ?
ವಚನ 1069
ಪಂಚಮಹಾಪಾತಕಂಗಳು ಹೋವಠಾವ ಕಂಡೆ.
ಸರ್ವದುಃಖಗಳು ಬೇವ ಠಾವ ಕಂಡೆ.
ಕಾಲನ, ಕಾಲಲೊದೆವ ರಾವ ಕಂಡೆ.
ಕಾಮನ ಕೈಯ ಕೊಯ್ವ ರಾವ ಕಂಡೆ.
ಮಾಯೆಯ ಬಾಯ ಕುಟ್ಟುವ ರಾವ ಕಂಡೆ.
ಗುಹೇಶ್ವರಲಿಂಗಯ್ಯನ
ಎನ್ನ ಕರಸ್ಥಲದಲ್ಲಿ ಕಣ್ಣು ತುಂಬಿ ಕಂಡೆ.
ವಚನ 1070
ಪಂಚಮಹಾಪಾತಕವಾವುದೆಂದರಿಯರು –
ಭವಿಯ ತಂದು ಭಕ್ತನ ಮಾಡೂದು ಪ್ರಥಮ ಪಾತಕ.
ಭಕ್ತರಿಗೆ ಶರಣೆಂಬುದು ದ್ವಿತೀಯ ಪಾತಕ, ಗುರುವೆಂಬುದು ತೃತೀಯ ಪಾತಕ.
ಗುರು ಲಿಂಗ ಜಂಗಮದ ಪ್ರಸಾದವ ಕೊಂಡಡೆ ನಾಲ್ಕನೆಯ ಪಾತಕ.
ಗುಹೇಶ್ವರಲಿಂಗದಲ್ಲಿ ಹಿರಿದು ಭಕ್ತಿಯ ಮಾಡೂದು ಪಂಚಮ ಪಾತಕ !
ವಚನ 1071
ಪಂಚವರ್ಣದಬಿಂದು ಪ್ರಪಂಚವನಳಿದುಳಿದಿರಲು,
ಸಂಚರಿಸುವಡೆ ಆವೆಡೆಯೂ ಇಲ್ಲ.
ನಿಂದ ಚಿತ್ತಿನ ಪ್ರಭೆ ಅಂಗವನು ನೆರೆ ನುಂಗೆ,
ಹಿಂದು ಮುಂದು ಎಡಬಲನೆಂಬುದಿಲ್ಲ !
ಅಡಿಯಾಕಾಶವೆಂಬುದಿಲ್ಲ
ಕೆಳಗೆ ನಿಲಲು, ಆಧಾರ ಮೊದಲಿಂಗಿಲ್ಲ
ಕಡೆಗೆ ಸಾರುವೆನೆನಲು ಊಧ್ರ್ವವಿಲ್ಲ.
ನಡುವೆ ನಾನಿದ್ದಿಹೆನೆಂದಡೆ,
ತನ್ನೊಡಲೊಳಗೆ ಒಡೆದು ಮೂಡಿತ್ತು ತನ್ನಂತೆ ಬಯಲು !
ಈ ಬೆಡಗು ಬಿನ್ನಾಣವ ಬಡವರರಿವರೆ ?
ಇದನರಿದು ನುಡಿದು ತೋರಿದನು
ಗುಹೇಶ್ವರನ ಶರಣ ಚನ್ನಬಸವಣ್ಣನು.
ವಚನ 1072
ಪಂಚಾಶತ್ಕೋಟಿ ಭೂಮಂಡಲವನು,
ಒಂದು ತಲೆಯಿಲ್ಲದ ಮುಂಡ ನುಂಗಿತ್ತ ಕಂಡೆನು.
ತಲೆಯಿಲ್ಲದೆ ಕಂಡು ಬೆರಗಾದೆನು
ನವಖಂಡ ಮಂಡಲ ಬಿನ್ನವಾದಂದು-
ಆ ತಲೆಯ ಕಂಡವರುಂಟೆ ಗುಹೇಶ್ವರಾ ?
ವಚನ 1073
ಪಂಚೀಕೃತವೆಂಬ ಪಟ್ಟಣದೊಳಗೆ;
ಈರೈದು ಕೇರಿ, ನಾಲ್ಕೈದು ವೀಥಿ, ಅಲ್ಲಿ ಹಾವ ಕಂಡೆ.
ಹಿಂಡುಗಟ್ಟಿ ಆಡುವ ಮದಗಜವ ಕಂಡೆ!
ಕೇಸರಿಯ ಕಂಡು ಮನ ಬೆದರಿತ್ತು ನೋಡಾ.
ಮೂವರರಸಿಂಗೆ ಇಪ್ಪತ್ತೈದು ಪರಿವಾರ,
ಅಂಜಲಂಜ ಬೆಳಗಾಯಿತ್ತು ಗುಹೇಶ್ವರಾ
ವಚನ 1074
ಪಂಚೇಂದ್ರಿಯ ಸಪ್ತಧಾತುವನತಿಗಳೆದಲ್ಲಿ ಫಲವೇನೊ ?
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ-
ವಿಷಯವನತಿಗಳೆದಲ್ಲಿ ಫಲವೇನೊ ?
ಇವೆಲ್ಲವ ಕೊಂದ ಪಾಪ ನಿಮ್ಮ ತಾಗುವುದು-ಗುಹೇಶ್ವರಾ
ವಚನ 1075
ಪದವನರ್ಪಿಸಬಹುದಲ್ಲದೆ, ಪದಾರ್ಥವನರ್ಪಿಸಬಾರದು.
ಓಗರವನರ್ಪಿಸಬಹುದಲ್ಲದೆ, ಪ್ರಸಾದವನರ್ಪಿಸಬಾರದು.
ಗುಹೇಶ್ವರಾ ನಿಮ್ಮ ಶರಣರು,
ಹಿಂದ ನೋಡಿ ಮುಂದನರ್ಪಿಸುವರು.
ವಚನ 1076
ಪದ್ಮಾಸನದಲ್ಲಿ ಕುಳ್ಳಿರ್ದು, ಕುಂಡಲಿಯ ಸ್ಥಾನವನರಿದು,
ಅಂಡಲೆವ ಅಧೋವಾಯುವ ಊಧ್ರ್ವಮುಖವ ಮಾಡಿ
ಷಡಂಗುಲವನೊತ್ತಿ ಊಧ್ರ್ವವಾಯುವನಧೋಮುಖಕ್ಕೆ ತಂದು
ಉತ್ತರಪೂರ್ವದಕ್ಷಿಣವನತಿಗಳೆದು
ಪಶ್ಚಿಮದ ಸುಷುಮ್ನೆಯಲ್ಲಿ ಮನಶ್ಶಕ್ತಿಸಂಧಾನಸಂಯೋಗದಿಂದ
ಸಹಸ್ರದಳಕಮಲದಲ್ಲಿ ನಾದಬ್ರಹ್ಮವನೆಯ್ದಿ,
ಮಹಾವಾಸನಾಮೃತವ ದಣಿಯುಂಡು
ತ್ರಿಸಂಧಾನ ಒಂದಾದ ಬಳಿಕ-ಆತ್ಮ ಪರಮಾತ್ಮ ಇಂತಾಗಿ,
ಅಂತರಾತ್ಮ ವಿಚಾರಕ್ಕೆ ಇಳಿದಲ್ಲಿ ಅಭ್ಯಾಸಕ್ಕೆ ಬರಲಾಗದು.
ಅದೆಂತೆಂದಡೆ:ದೇವಲೋಕಕ್ಕೆ ಸಂದು ಮರಳಿ ಮಾನವನಪ್ಪಡೆ ಅದೇ ಪಾತಕ
ಹಸಿದವನಮೃತವನುಂಡು,
ಮರಳಿ ಹಸಿದು, ಉಂಡಿಹೆನೆಂದಡೆ ಅದೇ ಪ್ರಕೃತಿ ಗುಣ.
ಇದು ಕಾರಣ-ಪರಮಾತ್ಮ ತಾನಾದಾತನು, ಪರಮಾತ್ಮ ತಾನಾದನಾಗಿ
ತನ್ನಲ್ಲಿ ತಾನೆ ಏಕೀ ಭವಿಸಿರಬೇಕು, ಗುಹೇಶ್ವರಾ.
ವಚನ 1077
ಪದ್ಯದಾಸೆಯ ಹಿರಿಯರು ಕೆಲಬರು.
ಬುದ್ಧಿಯಾಸೆಯ ಹಿರಿಯರು ಕೆಲಬರು.
ಸಮತೆಯಾಸೆಯ ಹಿರಿಯರು ಕೆಲಬರು.
ಇವರೆಲ್ಲರು ತಮ್ಮ ನಿಜವ ತಾವರಿಯದೆ
ತಪವನಾಚರಿಸಿದರು.
ವೇಷ ನಿರ್ವಯಲಾಗಿ ಆಸೆ ರೋಷವ ಬಿಟ್ಟು
ದಾಸೋಹಿಯಾಗಿದ್ದಡೆ ತಾನೆ ಗುಹೇಶ್ವರಲಿಂಗ.
ವಚನ 1078
ಪರಮ(ಪರ?)ತತ್ವದಲ್ಲಿ ತದ್ಗತವಾದ ಬಳಿಕ
ಬೇರೆ ಮತ್ತೆ ಅರಿದೆಹೆನೆಂಬ ಭ್ರಾಂತೇಕೆ ?
ಅರಿವು ಸಯವಾಗಿ ಮರಹು ನಷ್ಟವಾದ ಬಳಿಕ
ತಾನಾರೆಂಬ ವಿಚಾರವೇಕೆ ?
ಗುಹೇಶ್ವರನ ಬೆರಸಿ ಭೇದಗೆಟ್ಟ ಬಳಿಕ
ಮತ್ತೆ ಸಂಗವ ಮಾಡಿಹೆನೆಂಬ ತವಕವೇಕಯ್ಯಾ ?
ವಚನ 1079
ಪರಮಜ್ಞಾನವೆಂಬ ಸಸಿಗೆ,
ಗುರುಭಕ್ತಿ ಎಂಬ ಭೂಮಿಯ ಮಣ್ಣ ತಂದು ಪಾತೆಯ ಕಟ್ಟಿದೆ
ಲಿಂಗಭಕ್ತಿ ಎಂಬ ಗೊಬ್ಬರವ ತುಂಬಿದೆ
ಜಂಗಮಭಕ್ತಿ ಎಂಬ ಪರಮಾನಂದದ ಜಲವ ನೀಡಿದೆ.
ಇಂತಿವರಿಂದ, ಭಕ್ತಿವೃಕ್ಷ ಫಲವ ಧರಿಸೆ
ಗುಹೇಶ್ವರಲಿಂಗದಲ್ಲಿ ಮುಕ್ತನಾದೆನು ಕಾಣಾ ಸಂಗನಬಸವಣ್ಣಾ.
ವಚನ 1080
ಪರಮತತ್ವ (ಪರತತ್ವ?)ದೊಳಗಿರಬಲ್ಲಡೆ; ಉಣಲಾಗದು ಉಣದಿರಲಾಗದು.
ಎಲ್ಲರ ಸಂಗದಲ್ಲಿರಲಾಗದು, ಮತ್ತೆ ಒಬ್ಬನೆ ಇರಲಾಗದು.
ತಾಯಿ ಸತ್ತ ಅರುದಿಂಗಳಿಗೆ ತಾ ಹುಟ್ಟಿದ, ಮೂಲ ಗುಹೇಶ್ವರ.
ವಚನ 1081
ಪರಮಸುಖದ ಪರಿಣಾಮದ ಇರವ ಬಲ್ಲವರಾರೊ?
ಅದು ದೊರಕೊಳ್ಳದು ನೋಡಾ !
ತನತನಗೆ ತನ್ನ ಇರವ ಲಿಂಗದಲ್ಲಿರಿಸಿ, ಪರವ ಮನದಲ್ಲಿ ಹಿಡಿದು
ಇಹ ಪರವೆಂಬುದೊಂದು ಭ್ರಾಂತಳಿದು,
ನಿರತಿಶಯ ಸುಖದೊಳಗೆ ನಿಜವಾಗಿರಬಲ್ಲ
ನಿಮ್ಮ ಶರಣನನುಪಮಪ್ರಸಾದಿ ಗುಹೇಶ್ವರಾ.
ವಚನ 1082
ಪರಮಾರ್ಥದಲ್ಲಿ ಪರೀಕ್ಷಿಸಿ ತಿಳಿದು ನೋಡುವಡೆ
ಗುರುವಾರೂ ಇಲ್ಲ ಚೋಳ ತಪ್ಪಿಸಿ.
ಪರಮಾರ್ಥದಲ್ಲಿ ಪರೀಕ್ಷಿಸಿ ತಿಳಿದು ನೋಡುವಡೆ
ಭಕ್ತರಾರೂ ಇಲ್ಲ ಬಸವಣ್ಣ ತಪ್ಪಿಸಿ.
ಪರಮಾರ್ಥದಲ್ಲಿ ಪರೀಕ್ಷಿಸಿ ತಿಳಿದು ನೋಡುವಡೆ
ನಿರ್ವಾಣಿಗಳಾರೂ ಇಲ್ಲ ಅಕ್ಕಗಳು ತಪ್ಪಿಸಿ.
ಪರಮಾರ್ಥದಲ್ಲಿ ಪರೀಕ್ಷಿಸಿ ತಿಳಿದು ನೋಡುವಡೆ
ಹಿರಿಯರಾರೂ ಇಲ್ಲ ಚೀಲಾಳ ತಪ್ಪಿಸಿ.
ಪರಮಾರ್ಥದಲ್ಲಿ ಪರೀಕ್ಷಿಸಿ ತಿಳಿದು ನೋಡುವಡೆ
ಗಂಬಿರರಾರೂ ಇಲ್ಲ ಅಜಗಣ್ಣ ತಪ್ಪಿಸಿ.
ಇಂತೀ ಐದು ತೆರದನುವು ಆರಿಗೂ ಇಲ್ಲವೆಂದೆನಬೇಡ.
ಅವರ ಕರುಣ ಉಳ್ಳವರಿಗೆ ಆ ಮುಕ್ತಿಯುಂಟು.
ಆ ಐವರ ಕಾರುಣ್ಯದ ಪ್ರಸಾದವ ಕೊಂಡು
ನಾನು ಬಯಲಾದೆನು ಕಾಣಾ ಗುಹೇಶ್ವರಾ.
ವಚನ 1083
ಪರವನರಿದ ಸತ್ಪುರುಷರ ಸಂಗದಿಂದ
ಶಿವಯೋಗದ ವಚನಾಮೃತವನು,
ಸದ್ಭಕ್ತಿಯುಳ್ಳ ಮಹೇಶ್ವರನು ತನ್ನ ಶ್ರೋತ್ರಮುಖದಲ್ಲಿ ಕೇಳಿ,
ಮನೋಮುಖದಲ್ಲಿ ಹಾರೈಸಿ, ತೃಪ್ತಿಮುಖದಲ್ಲಿ ಸಂತೋಷವನೆಯ್ದಬಲ್ಲಡೆ
ಆ ಸುಖವು ಪರಿಣಾಮವನೊಡಗೂಡುವುದು !
ಹೀಂಗಲ್ಲದೆ,
ಸಂಸಾರವಿಷಯರಸವ ತಮ್ಮ ಹೃದಯಕೂಪದಲ್ಲಿ ತುಂಬಿಕೊಂಡಿಪ್ಪ ಜೀವರು
ಕಾಯದಲ್ಲಿ ವಚನಾಮೃತವ ತುಂಬಿದಡೆ,
ಬಿನ್ನಘಟದಲ್ಲಿ ಉದಕವ ಹೊಯ್ದಂತೆ ಕಾಣಾ ಗುಹೇಶ್ವರಾ.
ವಚನ 1084
ಪರಿಣಾಮದೊಳಗೆ ಮನದ ಪರಿಣಾಮವೆ ಚೆಲುವು.
ಸಂಗದೊಳಗೆ ಶರಣರ ಸಂಗವೆ ಚೆಲವು.
ಕಾಯಗೊಂಡು ಹುಟ್ಟಿದ ಮೂಢರೆಲ್ಲರು
ಸಾಯದ ಸಂಚವನರಿವುದೆ ಚೆಲುವು-ಗುಹೇಶ್ವರಾ.
ವಚನ 1085
ಪರಿಣಾಮಪರಿಮಿತ ದೊರೆಕೊಂಡಾತಂಗೆ
ಬಳಿಕೇಕೊ ಬರು ಮಾತಿನವರೊಡನೆ ಗೋಷ್ಠಿ?
ಬಳಿಕೇಕೊ ಬರಿಯ ಸಂಭ್ರಮಿಗಳೊಡತಣ ಅನುಭಾವ?
ಐವತ್ತೆರಡಕ್ಷರ ತಮ್ಮಲ್ಲಿ ತಾವು ಉಲಿಯದಂತೆ ಉಲಿದವು,
ಗುಹೇಶ್ವರನೆಂಬ ಲಿಂಗವನರಿದಾತಂಗೆ ಬಳಿಕೇಕೊ?
ವಚನ 1086
ಪರಿಪರಿಯ ಅವಲೋಹ[ವ]ಪರುಷ ಮುಟ್ಟಲು
ಹೊನ್ನು ಪರಿವರ್ತನಕ್ಕೆ ಬಂದು ಸಲುತ್ತಿರ್ದುವು ನೋಡಾ
ಪರುಷವ ಮಾಡುವ ಪುರುಷರೆಲ್ಲರು
ಪರುಷ ಮುಟ್ಟಿದ ಹೊನ್ನಿನಂತಿದ್ದರು ನೋಡಾ.
ಪರುಷ ತಾನಾಗಲು, ಹರಿಬ್ರಹ್ಮರಿಗಳವಲ್ಲ.
ಸುರರು ಕಿನ್ನರರೆಲ್ಲರು ನಿಮ್ಮ ವರದಲ್ಲಿ ಸಿಲುಕಿದ್ದರು.
ಪರುಷದಂತಿದ್ದರು ನಮ್ಮ ಗುಹೇಶ್ವರನ ಶರಣರು.
ವಚನ 1087
ಪರಿಮಳವಿದ್ದು ಗಮನಾಗಮನವಿಲ್ಲವಿದೇನೊ!
ಬಯಲ ಸಿಡಿಲು ಹೊಯ್ದಡೆ
ಹಿಂದಕ್ಕೆ (ಹಿಂದೆ?) ಹೆಣನ ಸುಡುವರಿಲ್ಲ ಗುಹೇಶ್ವರಾ.
ವಚನ 1088
ಪರುಷಕ್ಕೆ ಬೆಲೆಯಿಲ್ಲ, ಪ್ರಾಣಕ್ಕೆ ನಿರ್ಮಾಲ್ಯವಿಲ್ಲ.
ರುಚಿಗೆ ಎಂಜಲಿಲ್ಲ, ಸುಖಕ್ಕೆ ಆರೋಚಕವಿಲ್ಲ.
ಗುಹೇಶ್ವರಾ ನಿಮ್ಮ ಶರಣಂಗೆ ಭವವಿಲ್ಲ ಬಂಧನವಿಲ್ಲಯ್ಯಾ.
ವಚನ 1089
ಪರುಷದ ಪುತ್ಥಳಿಗೆ ಕಬ್ಬುನದ ಆಭರಣಗಳುಂಟೆ ಅಯ್ಯಾ ?
ಲೋಕದೊಳಗೆ ಲಿಂಗ, ಲಿಂಗದೊಳಗೆ ಲೋಕವಾದಡೆ
ಹಿಂದಣ ಪ್ರಳಯಂಗಳೆಂತಾದವು ?
ಇನ್ನು ಮುಂದಣ ಪ್ರಳಯಗಳಿಗಿನ್ನೆಂತೊ ?
ಲೋಕವು ಲೋಕದಂತೆ, ಲಿಂಗವು ಲಿಂಗದಂತೆ,
ಈ ಉಭಯ ಭೇದವ ಗುಹೇಶ್ವರಾ ನಿಮ್ಮ ಶರಣ ಬಲ್ಲ
ವಚನ 1090
ಪರುಷದ ಪುತ್ಥಳಿಗೆ ಲೋಹದ ಶೃಂಗಾರವೇತಕೊ ?
“ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ
ಲಿಂಗಬಾಹ್ಯಾತ್ ಪರಂ ನಾಸ್ತಿ” ಎಂಬ ಭ್ರಾಂತೇಕೋ ?
ಲಿಂಗಮಧ್ಯೆ ಜಗತ್ಸರ್ವವಾದರೆ, ಈ ಆತ್ಮಂಗೆ
ಹಿಂದಣುತ್ಪತ್ಯ ಸ್ಥಿತಿಲಯಂಗಳೆಂತಾದವು ?
ಲಿಂಗ ಲಿಂಗದಂತೆ ಜಗ ಜಗದಂತೆ
ಲಿಂಗವನೊಳಗುಮಾಡಿ, ಜಗವ ಹೊರಗು ಮಾಡಬಲ್ಲನೆಮ್ಮ ಶರಣ,
ಗುಹೇಶ್ವರ ನೀನೇ ತಾನು.
ವಚನ 1091
ಪರುಷವ ತಂದು ಕಬ್ಬುನಕ್ಕೆ ಮುಟ್ಟಿಸಲು
ಚಿನ್ನವಪ್ಪುದಲ್ಲದೆ ಪರುಷವಾಗಬಲ್ಲುದೆ ?
ಈ ಲೋಕದ ಮನುಜರು ಶಿವಲಿಂಗವ ಕಟ್ಟಿದರೇನು,
ಲಿಂಗವಂತರಲ್ಲದೆ ಪ್ರಾಣಲಿಂಗಸಂಬಂದಿಗಳಾಗಬಲ್ಲರೆ ?
ಶರಣ ಆವ ಕುಲದಲ್ಲಿ ಹುಟ್ಟಿದರೇನು ಆತನು,
ಆಚಾರ ವೀರಶೈವಸಂಪನ್ನಸಿದ್ಧಾಂತ
ಕ್ರಿಯಾ ಜ್ಞಾನ ಅನುಭಾವಯುಕ್ತವಾದ ಪ್ರಾಣಲಿಂಗಸಂಪನ್ನ.
ಆದಿ ಅನಾದಿಯಿಲ್ಲದಂದಿನ ನಿಃಕಲ ನಿಶ್ಶೂನ್ಯ ನಿರ್ಭೆದ್ಯ
ನಿರಾಳ ನಿರಂಜನ ಪರಾತ್ಪರತರನು ತಾನೆ ನೋಡಾ.
ಅಂತಪ್ಪ ಮಹಾತ್ಮನ ಕುಲಜನಕುಲಜನೆಂದು ಸಂದೇಹ ಸಂಕಲ್ಪದಿಂದ ದೂಷಿಸಿ
ಜರೆವ ದುರಾಚಾರಿ [ಗಳ] ಬಾಯಲ್ಲಿ
ಬಾಲಹುಳ ಸುರಿಯದೆ ಮಾಣ್ಬುದೆ ಗುಹೇಶ್ವರಾ.
ವಚನ 1092
ಪರುಷವಾದರೂ ಒಂದರಲ್ಲಿ ಇರಿಸಬೇಕು.
ರತ್ನವಿಶೇಷವಾದಡೂ ಕುಂದಣದಲ್ಲಿ ಬಂದಿಸಿ ಸಂದಿಸಬೇಕು.
ಲಿಂಗವ ಹಿಡಿದಲ್ಲಿ ಪೂಜಿಸುವ ಅಂಗವಿರಬೇಕು.
ಇದು ಕಾರಣ, ಗುಹೇಶ್ವರಲಿಂಗವನರಿದು
ಮರೆಯಲಿಲ್ಲ ಕಾಣಾ ಚಂದಯ್ಯಾ.
ವಚನ 1093
ಪಾತಾಳದಿಂದತ್ತ ಮಾತ ಬಲ್ಲವರಿಲ್ಲ,
ಗಗನದಿಂದ ಮೇಲೆ ಅನುಭಾವ ತಾನಿಲ್ಲ.
ಒಳಗಣ ಜ್ಯೋತಿಯ ಬೆಳಗ ಬಲ್ಲವರಿಲ್ಲ; ಹೊರಗಣ ಹೊರಗನು ಅರಿಯಬಲ್ಲವರಿಲ್ಲ.
ಹಿಂದಣ ಹಿಂದನು, ಮುಂದಣ ಮುಂದನು,
ತಂದು ತೋರಿದ ನಮ್ಮ ಗುಹೇಶ್ವರನು.
ವಚನ 1094
ಪಾದವಿಲ್ಲದ ಗುರುವಿಂಗೆ ತಲೆಯಿಲ್ಲದ ಶಿಷ್ಯನು.
ಅನಾಚಾರಿ ಗುರುವಿಂಗೆ ವ್ರತಗೇಡಿ ಶಿಷ್ಯನು.
ಈ ಗುರುಶಿಷ್ಯರಿಬ್ಬರೂ ಸತ್ತ ಸಾವ, ನಿಮ್ಮಲ್ಲಿ ಅರಸುವೆ ಗುಹೇಶ್ವರಾ.
ವಚನ 1095
ಪಾರ್ವತಿಯು ಪರಶಿವನ ಸತಿಯೆಂಬ ಶಿವದ್ರೋಹಿಗಳು ನೀವು ಕೇಳಿರೆ.
ಬೆನಕನು ಪರಶಿವನ ಮಗನೆಂಬ ಪಾತಕ ದುಃಖಿಗಳು ನೀವು ಕೇಳಿರೆ.
ಸ್ವಾಮಿ ಕಾರ್ತಿಕೇಯನು ನಮ್ಮ ಹರಲಿಂಗನ ಮಗನೆಂಬ
ಲಿಂಗದ್ರೋಹಿಗಳು ನೀವು ಕೇಳಿರೆ.
ಭೈರವನು ಭಯಂಕರಹರನ ಮಗನೆಂಬ
ಭವಹರಗುರುದ್ರೋಹಿಗಳು ನೀವು ಕೇಳಿರೆ.
ಅಜಾತನ ಚರಿತ್ರ ಪವಿತ್ರ.
ನಮ್ಮ ಗುಹೇಶ್ವರಲಿಂಗಕ್ಕೆ ಪ್ರಸಾದವ ಸಲಿಸಿದಾತ
ಪೂರ್ವಾಚಾರಿ ಸಂಗನಬಸವಣ್ಣನ ಮಗನಾಗಿ,
ಆದಿಯ ಲಿಂಗ ಅನಾದಿಯ ಶರಣ
ಗುರುವಿನ ಗುರು ಪರಮಗುರುವರ[ನ]
ತೋರಿದೆನಯ್ಯಾ ಸಿದ್ಧರಾಮಯ್ಯ ಚೆನ್ನಬಸವಣ್ಣನು
ವಚನ 1096
ಪಿಂಡಬ್ರಹ್ಮಾಂಡದೊಳಗೆ ತಂಡ ತಂಡದ ಲೋಕ.
ಗಂಡ ಗಂಡರನಿರಿಸಿ, ಬಡವರೊಡೆಯರ ನುಂಗಿ,
ನಾಡೊಳಗೆ ನಿಡು ನಡೆದು, ಮಡುವನೆಲ್ಲವ ತೊಡೆದು
ನಡುರಂಗದಲ್ಲಿ ಕೊಡನೊಡೆಯಲೀಯದೆ;
ಮಡದಿಯೊಡಗೂಡಿ, ಗಗನವನಡಿಗೆಯ ಮಾಡಿ
ಉಂಡು ಸುಖಿಯಾದೆ ಗುಹೇಶ್ವರಾ.
ವಚನ 1097
ಪಿಂಡಮುಕ್ತನ ಪದಮುಕ್ತನ ರೂಪಮುಕ್ತನ-ತಿಳಿದೆ ನೋಡಾ.
ಪಿಂಡವೆ ಕುಂಡಲಿಯ ಶಕ್ತಿ, ಪದವೆ ಹಂಸನ ಚರಿತ್ರ,
ಬಿಂದು ಅನಾಹತವೆಂದರಿದು-ಗುಹೇಶ್ವರಲಿಂಗವ ಕೂಡಿದೆನು.
ವಚನ 1098
ಪುಣ್ಯಪಾಪವಿಲ್ಲಾಗಿ ಜನನದ ಹಂಗಿಲ್ಲ.
ಬಂದುದನುಂಬನಾಗಿ ಮಾನವರ ಹಂಗಿಲ್ಲ.
ಭವಗೆಟ್ಟನಾಗಿ ದೈವದ ಹಂಗಿಲ್ಲ.
ಸತ್ಯಜ್ಞಾನಾನಂದವೆ ತಾನಾಗಿ ಇನ್ನಾರ ಹಂಗಿಲ್ಲ.
ಇನ್ನಾರ ಹಂಗಿಲ್ಲದಾತ ಗುಹೇಶ್ವರಲ್ಲಯ್ಯನೊಬ್ಬನೆ !
ವಚನ 1099
ಪುಣ್ಯವುಳ್ಳ ಕಾಲಕ್ಕೆ ಮಣ್ಣು ಹೊನ್ನಪ್ಪುದು,
ಪುಣ್ಯವುಳ್ಳ ಕಾಲಕ್ಕೆ ಪಾಷಾಣ ಪರುಷವಪ್ಪುದು ನೋಡಾ.
ಮುನ್ನ ಮುನ್ನವೆ,
ಅಚ್ಚೊತ್ತಿದ ಭಾಗ್ಯ ಎನ್ನ ಕಣ್ಣ ಮುಂದೆ ಕಾಣಬಂದಿತ್ತು ನೋಡಾ !
ಮಣ್ಣ ಮರೆಯ ದೇಗುಲದೊಳಗೊಂದು ಮಾಣಿಕ್ಯವ ಕಂಡಬಳಿಕ,
ಇನ್ನು ಮುನ್ನಿನಂತಪ್ಪುದೆ ಗುಹೇಶ್ವರಾ ?
ವಚನ 1100
ಪೂಜಿಸಿ ಕೆಳಯಿಂಕಿಳುಹಲದೇನೊ ?
ಅನಾಹತ ಪೂಜೆಯ ಮಾಡಲದೇನೊ ?
ದೇಹವೆ ಪೀಠಿಕೆ, ಜೀವವೆ ಲಿಂಗ ಗುಹೇಶ್ವರಾ.
ವಚನ 1101
ಪೂಜಿಸಿ ಕೆಳಯಿಂಕೆ ಇಳುಹಲದೇನೊ?
ಅನಾಗತ (ಅನಾಯತ?) ಪೂಜೆಯ ಮಾಡಲದೇನೊ?
ದೇಹವೆ ಪಿಂಡಿಗೆ, ಜೀವವೆ ಲಿಂಗ-ಗುಹೇಶ್ವರಾ.
ವಚನ 1102
ಪೂಜೆಯಾಯಿತ್ತದೇನೊ ? ಪೂಜೆಯ ಮೇಲೆ ಸಿಂಹಾಸನವಿದೇನೊ ?
ಧೂಪ ದೀಪ ನಿವಾಳಿ ಇದೇನೊ ?
ತಳದಲ್ಲಿ ಜ್ಯೋತಿ ಮೇಲೆ ಪ್ರಣತೆ !
ಕಳಸದ ಮೇಲಣ ನೆಲಗಟ್ಟು ಕಂಡು
ನೋಡಿ ಬೆರಗಾದೆ ಗುಹೇಶ್ವರಾ !
ವಚನ 1103
ಪೂರಾಯ ಗಾಯ ತಾಗಿ ನೊಂದೆನೆಂದರಿಯೆನಯ್ಯಾ,
ಇದ್ದೆನೆಂದರಿಯೆನಯ್ಯಾ, ಸತ್ತೆನೆಂದರಿಯೆನಯ್ಯಾ,
ಕಾಯ ಪಲ್ಲಟವಾಯಿತ್ತು ಗುಹೇಶ್ವರಲಿಂಗ ಸ್ವಾಯತವಾಗಿ.
ವಚನ 1104
ಪೂರ್ವಗುಣವನೆಲ್ಲ ಅಳಿದು ಪುನರ್ಜಾತನಾದ ಬಳಿಕ
ಗುರುವಿನ ಕರಸ್ಥಲದಲ್ಲಿ ಉತ್ಪತ್ತಿ ಸದ್ಭಕ್ತರಲ್ಲಿ ಸ್ಥಿತಿ ಲಿಂಗದಲ್ಲಿ ಲಯ-
ಇಂತೀ ನಿರ್ಣಯವನರಿಯದೆ;
ಶೀಲವಂತರ ಶೀಲ ತಪ್ಪಿದಡೆ ಹೇಳಬಹುದೆ ? ಹೇಳಬಾರದು.
ಸೂಳೆ ಮುತ್ತು ಗೊರವಿತಿಯಾದಂತೆ, ಬಂಟ ಮುತ್ತು ಬಾಗಿಲಕಾಯ್ದಂತೆ,
ನರಿ ಮುತ್ತು ಬಳ್ಳಾದಂತೆ, ಹಾವು ಮುತ್ತು ಸಿಂಗಿಯಾದಂತೆ !
ಎಲ್ಲ ದೇವರಿಗೆ ಮಸ್ತಕ ಪೂಜೆ ಜಂಗಮದೇವರಿಗೆ ಪಾದಪೂಜೆ.
ಪಾದೋದಕ ಪ್ರಸಾದವ ಕೊಡುವ ಜಂಗಮದೇವರು,
ಕಂಠಪಾವಡ ಧೂಳಪಾವಡ ಸರ್ವಾಂಗಪಾವಡ ಶೀಲಸಂಬಂಧವೆಂದಡೆ
ಕೇಸರಿ ಶುನಕನಾದಂತೆ ಕಾಣಾ ಗುಹೇಶ್ವರಾ.
ವಚನ 1105
ಪೂರ್ವಬೀಜವು ಬ್ರಹ್ಮಚರ್ಯವೆ ? ಅರಿವು ತಾ ಬ್ರಹ್ಮಚರ್ಯವೆ ?
ಜ್ಞಾನಾಜ್ಞಾನದುದಯ ತಾ ಬ್ರಹ್ಮಚರ್ಯವೆ ?
ಗುಹೇಶ್ವರಾ ನಿಮ್ಮ ಶರಣರ ಪರಿಣಾಮವೆ ಬ್ರಹ್ಮಚರ್ಯವು.
ವಚನ 1106
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಪಂಚಭೌತಿಕ,
ಮನೋಬುದ್ಧಿ ಚಿತ್ತ ಅಹಂಕಾರ ಚತುಷ್ಟಯ ಕರಣಂಗಳು,
ಸತ್ವ ರಜ ತಮದಲ್ಲಿ-ಆತ್ಮನ ಎತ್ತಲೆಂದರಿಯರು!
ಇದನರಿದಡೆ; ಸಮತೆ ಸದಾಚಾರ ಆಶ್ರಮಸ್ಥಾನಕ
ಸಹಸ್ರದಳಕಮಲದಲ್ಲಿ ಗುಹೇಶ್ವರಲಿಂಗವು.
ವಚನ 1107
ಪೃಥ್ವಿ ಅಪ್ಪು ತೇಜ ವಾಯು ಆಕಾಶದ ಕೊನೆಯ ಮೊನೆಯ ಮೇಲೆ,
ಇಪ್ಪತ್ತೈದು ಗ್ರಾಮಂಗಳು, ಚೌಷಷ್ಟಿ ಪಟ್ಟಣ.
ಛಪ್ಪನ್ನ ವೀಥಿಗಳ ದಾಂಟಿ, ಛತ್ತೀಸ ಪುರದ ರಚನೆಯ ನೋಡಬಲ್ಲೆವೆಂಬರು,
ತ್ರಿಕೋಣದ್ವಾರಮಂಟಪದ ಅಯ್ವೆತ್ತೆರಡಕ್ಷರದ,
ಶಾಸನದ ಲಿಪಿಯಂ ತಿಳಿಯಲೋದಿ,
ಎಂಬತ್ತುನಾಲ್ಕುಲಕ್ಷ ದ್ವಾರದೊಳಗೆ ಹೊಕ್ಕು ಹೊರವಡುವ ಜೀವನ
ತಿಳಿಯಲರಿಯದೆ ದಕ್ಷಿಣದ್ವಾರದಿಂದ ಉತ್ತರದ್ವಾರಕ್ಕೆ ಬಂದು,
ಪಶ್ಚಿಮವಾಯುವ ಕೊನೆಯ ಮೊನೆಯ ಮೇಲೆ ಬೆಳಗುವ ಜ್ಯೋತಿಯ
ನಿಮ್ಮ ಶರಣರಲ್ಲದೆ, ಲೋಕದ ಅಜ್ಞಾನಿಗಳೆತ್ತ ಬಲ್ಲರು ಗುಹೇಶ್ವರಾ ?
ವಚನ 1108
ಪೃಥ್ವಿ ಅಪ್ಪು ತೇಜ ವಾಯು ಆಕಾಶದಲ್ಲಿ
ಬೆಳೆಯುತ್ತಿದ್ದಡೇನು ನೋಡಾ.
ಘನ ಘನವನರಿದೆನೆಂಬ ಮರುಳು ಮಾನವರ ನೋಡಾ.
ನಿರ್ಣಯವಿಲ್ಲದ ನಿರ್ವಿಕಾರ ಗುಹೇಶ್ವರನೆಂಬ ಮಹಾಘನವ
ತಿಳಿಯರು ನೋಡಾ !
ವಚನ 1109
ಪೃಥ್ವಿ ಜಡನೆಂದರಿದವಂಗೆ ಸ್ಥಾವರಾದಿಗಳಲ್ಲಿ ಎರಗಲೇಕಯ್ಯಾ ?
ಅಪ್ಪು ಜಡನೆಂದರಿದವಂಗೆ ತೀರ್ಥಸ್ನಾನಂಗಳಲ್ಲಿ ಅತಿಶಯವೇಕಯ್ಯಾ ?
ತೇಜ ಜಡನೆಂದರಿದವಂಗೆ ಹೋಮ ಸಮಾದಿಗಳೇಕಯ್ಯಾ ?
ವಾಯು ಜಡನೆಂದರಿದವಂಗೆ ಧ್ಯಾನ ಮೌನಂಗಳ ಹಿಡಿಯಲೇಕಯ್ಯಾ ?
ಆಕಾಶ ಜಡನೆಂದರಿದವಂಗೆ ಮಂತ್ರ(ತ್ರಾ ?)ರೂಡಿ ಏಕಯ್ಯಾ ?
ಇನಿತೂ ಜಡನೆಂದರಿದವಂಗೆ ವಿದಿ ಕಿಂಕರತೆ ಇಲ್ಲವಯ್ಯಾ ?
ಗುಹೇಶ್ವರನ ನಿಜವು ಇದು ತಾನೆಂದರಿದ ಮಹಾತ್ಮಂಗೆ.
ವಚನ 1110
ಪೃಥ್ವಿ ಹೋದತ್ತಲಿದೆ (ಹೊರುತ್ತಲಿದೆ ?) ಅಪ್ಪು ಉಲಿವುತ್ತಲಿದೆ,
ತೇಜ ಉರಿವುತ್ತಲಿದೆ, ವಾಯು ಹರಿಯುತ್ತಲಿದೆ,
ಆಕಾಶವಿಂಬುಗೊಡುತ್ತಲಿದೆ.
ಅಗಣಿತವಪ್ರಮಾಣವಾನಂದ ಗುಹೇಶ್ವರ !
ವಚನ 1111
ಪೃಥ್ವಿಕುಲಮಂಟಪದ ಮೇಲೆ ಪಾದ(ಪದ?)ಶಿಲೆ ಬಿಗಿದು,
ತಳಕಂಭ ಕಳಸದ ಮೇಲೆ ಕೆಸರುಗಲ್ಲು-
ಒಂದು ವಠಕ್ಕೆ ಒಂಬತ್ತು ತುಂಬಿಯ ಆಳಾಪ.
ಬಗೆಯ ಬಣ್ಣದ ಮೇಲೆ ಹಿರಿದಪ್ಪ ಸಂಯೋಗ !
ಅಂಗಜನ ಪಡೆ ಕೋಟಿ, ಮುಂಡವೆದ್ದು ಕುಣಿವಲ್ಲಿ,
ರಣವುಂಡ ಭೂಮಿಯನು ಮೀರಿದನು ಗುಹೇಶ್ವರಾ !
ವಚನ 1112
ಪೃಥ್ವಿಗೆ ಹುಟ್ಟಿದ ಶಿಲೆ, ಕಲುಕಟಿಗಂಗೆ ಹುಟ್ಟಿದ ಮೂರುತಿ,
ಮಂತ್ರಕ್ಕೆ ಲಿಂಗವಾಯಿತ್ತಲ್ಲಾ!
ಈ ಮೂವರಿಗೆ ಹುಟ್ಟಿದ ಮಗನ (ಮಗುವ?) ಲಿಂಗವೆಂದು ಕೈವಿಡಿವ,
ಅಚ್ಚವ್ರತಗೇಡಿಗಳನೇನೆಂಬೆ ಗುಹೇಶ್ವರಾ.
ವಚನ 1113
ಪೃಥ್ವಿಯ ಕಠಿಣವ ಕೆಡಿಸಿ,
ಅಪ್ಪುವಿನ ಕೈಕಾಲು ಮುರಿದು,
ಅಗ್ನಿಯ ಕಿವಿ ಮೂಗಂ ಕೊಯ್ದು,
ವಾಯುವಿನ ಶಿರವರಿದು,
ಆಕಾಶವ ಶೂಲದಲ್ಲಿಕ್ಕಿದ ಬಲ್ಲಿದ ತಳವಾರನೀತ ನೋಡಯ್ಯಾ.
ಒಂಬತ್ತು ಬಾಗಿಲ ಬೀಗಮಂ ಬಲಿದು
ಒಡನೆ ನವಸಹಸ್ರ ಮಂದಿಯ ಕೊಂದುಳಿದ ಗುಹೇಶ್ವರಾ ನಿಮ್ಮ ಶರಣ.
ವಚನ 1114
ಪೃಥ್ವಿಯ ಪಾಷಾಣ ಪೃಥ್ವಿಯ ಮೇಲೆ ಬಿದ್ದುಹೋದಡೆ
ಪ್ರಾಣಲಿಂಗ ಹೋಯಿತ್ತು ಪ್ರಾಣಲಿಂಗ ಹೋಯಿತ್ತು ಎಂಬಿರಿ.
ಪ್ರಾಣಲಿಂಗ ಹೋದಡೆ ನೀವು ನುಡಿವ ಪರಿಯೆಂತು ?
ಅಂತರಂಗದಿ ಪ್ರಾಣಲಿಂಗಸಂಬಂಧದ ಸುದ್ದಿಯ (ಹೊಲಬ?) ನರಿಯರಾಗಿ,
ಗುಹೇಶ್ವರಾ, ನೀ ಮಾಡಿದ ಬೆಡಗು ಬಿನ್ನಾಣಕ್ಕೆ ನಾನು ಬೆರಗಾದೆನು !
ವಚನ 1115
ಪೃಥ್ವಿಯ ಪೂರ್ವಾಶ್ರಯವ ಕಳೆಯದನ್ನಕ್ಕ
ಅಪ್ಪುವಿನ ಪೂರ್ವಾಶ್ರಯವ ಕಳೆಯದನ್ನಕ್ಕ
ತೇಜದ ಪೂರ್ವಾಶ್ರಯವ ಕಳೆಯದನ್ನಕ್ಕ
ವಾಯುವಿನ ಪೂರ್ವಾಶ್ರಯವ ಕಳೆಯದನ್ನಕ್ಕ
ಆಕಾಶದ ಪೂರ್ವಾಶ್ರಯವ ಕಳೆಯದನ್ನಕ್ಕ
ಚಂದ್ರ ಸೂರ್ಯರ ಪೂರ್ವಾಶ್ರಯವ ಕಳೆಯದನ್ನಕ್ಕ
ಆತ್ಮನ ಪೂರ್ವಾಶ್ರಯವ ಕಳೆಯದನ್ನಕ್ಕ
ಭಕ್ತರೆಂದು ಲಿಂಗವ ಪೂಜಿಸುವವರ ಕಂಡು
ಬೆರಗಾದೆನು ಕಾಣಾ ಗುಹೇಶ್ವರಾ.
ವಚನ 1116
ಪೃಥ್ವಿಯ ಮೇಲೊಂದು ಪರಮಶಾಂತಿ ಎಂಬ ಪರ್ವತವ ಕಂಡೆ.
ಆ ಪರ್ವತದ ಮೇಲೆ ಪರಮಗುರು ಪರಿಯಾಯವಾಯಿತ್ತ ಕಂಡೆ.
ಆ ಪರಿಯಾಯ ಗುರು ಒಂದು ಕಥನದಿಂದ ದೃಷ್ಟಿ ತೆರೆಯಿತ್ತ ಕಂಡೆ.
ಆ ದೃಷ್ಟಿಯ ಬೆಳಗಿನಿಂದ ನೆತ್ತಿಯ ಕಲಶ ಪುಟದೋರುತ್ತ ನಡೆದು
ಸಸಿಯಾಯಿತ್ತ ಕಂಡೆ.
ಆ ಸಸಿಯ ಕೆಳಗಣ ಮೃತ್ತಿಕೆ,
ಭಕ್ತರಿಗೆ ಮೂರಾಯಿತ್ತ ಕಂಡೆ ಗುಹೇಶ್ವರಾ
ವಚನ 1117
ಪೃಥ್ವಿಯನತಿಗಳೆದ ಸ್ಥಾವರಂಗಳಿಲ್ಲ;
ಅಪ್ಪುವನತಿಗಳೆದ ತೀರ್ಥಯಾತ್ರೆಗಳಿಲ್ಲ.
ಅಗ್ನಿಯನತಿಗಳೆದ ಹೋಮ ಸಮಾದಿಗಳಿಲ್ಲ.
ವಾಯುವನತಿಗಳೆದ ನೇಮನಿತ್ಯಂಗಳಿಲ್ಲ.
ಆಕಾಶವನತಿಗಳೆದ ಧ್ಯಾನ ಮೌನಂಗಳಿಲ್ಲ.
ಗುಹೇಶ್ವರನೆಂದರಿದವಂಗೆ ಇನ್ನಾವಂಗವೂ ಇಲ್ಲ.
ವಚನ 1118
ಪೃಥ್ವಿಯನತಿಗಳೆದು ಅಪ್ಪುವಿಲ್ಲ, ಅಪ್ಪುವನತಿಗಳೆದು ಅಗ್ನಿಯಿಲ್ಲ,
ಅಗ್ನಿಯನತಿಗಳೆದು ವಾಯುವಿಲ್ಲ, ವಾಯುವನತಿಗಳೆದು ಆಕಾಶವಿಲ್ಲ,
ಆಕಾಶವನತಿಗಳೆದು ನಾದವಿಲ್ಲ, ನಾದವನತಿಗಳೆದು ಬಿಂದುವಿಲ್ಲ,
ಬಿಂದುವನತಿಗಳೆದು ಕಳೆಯಿಲ್ಲ, ಕಳೆಯನತಿಗಳೆದು ಆತ್ಮನಿಲ್ಲ,
ಆತ್ಮವನತಿಗಳೆದು ಗುಹೇಶ್ವರನೆಂಬ ಲಿಂಗವಿಲ್ಲ.
ವಚನ 1119
ಪೃಥ್ವಿಯಲೊದಗಿದ ಘಟವು ಪೃಥ್ವಿಯಲಡಗಿದಡೆ
ಆ ಪೃಥ್ವಿಯ ಚರಿತ್ರವೆ ಚರಿತ್ರ ನೋಡಾ !
ಅಪ್ಪುವಿನಲೊದಗಿದ ಘಟವು ಅಪ್ಪುವಿನಲಡಗಿದಡೆ
ಆ ಅಪ್ಪುವಿನ ಚರಿತ್ರವೆ ಚರಿತ್ರ ನೋಡಾ !
ತೇಜದಲೊದಗಿದ ಘಟವು ತೇಜದಲಡಗಿದಡೆ
ಆ ತೇಜದ ಚರಿತ್ರವೆ ಚರಿತ್ರ ನೋಡಾ !
ವಾಯುವಿನಲೊದಗಿದ ಘಟವು ವಾಯುವಿನಲಡಗಿದಡೆ
ಆ ವಾಯುವಿನ ಚರಿತ್ರವೆ ಚರಿತ್ರ ನೋಡಾ !
ಆಕಾಶದಲೊದಗಿದ ಘಟವು ಆಕಾಶದಲಡಗಿದಡೆ
ಆ ಆಕಾಶದ ಚರಿತ್ರವೆ ಚರಿತ್ರ ನೋಡಾ !
ಗುಹೇಶ್ವರನೆಂಬ ಲಿಂಗದಲೊದಗಿದ ಘಟವು ಲಿಂಗದಲಡಗಿದಡೆ,
ಆ ಲಿಂಗದ ಚರಿತ್ರವೆ ಚರಿತ್ರ ನೋಡಾ.
ವಚನ 1120
ಪೃಥ್ವಿಯೊಳಗಿಲ್ಲ, ಆಕಾಶದೊಳಗಿಲ್ಲ,
ಚತುರ್ದಶ ಭುವನಾದಿ ಭುವನಂಗಳೊಳಗೆಯೂ ಇಲ್ಲ.
ಹೊರಗೆಯೂ ಇಲ್ಲ-ಏನಾಯಿತ್ತೆಂದರಿಯೆನಯ್ಯಾ.
ಗುಹೇಶ್ವರ ಅಂದೂ ಇಲ್ಲ ಇಂದೂ ಇಲ್ಲ ಎಂದೂ ಇಲ್ಲ.
ವಚನ 1121
ಪೌರ್ಣಮಿ ಬಪ್ಪನ್ನಕ್ಕ,
ಬಾಯಿಬಂಧನದಲ್ಲಿದ್ದ ಚಕೋರನಂತಿದ್ದೆನಯ್ಯಾ.
ಉಣಲಾಗದೆಂಬ ಶಾಸ್ತ್ರವಿಡಿದು ಇದ್ದವನಲ್ಲ.
ಉಣಲಾಗದೆಂಬ ಶಾಸ್ತ್ರವುಂಟೆ ಲಿಂಗವಂತಂಗೆ ?
ಅಹೋರಾತ್ರಿ ಅಷ್ಟಭೋಗಂಗಳ ಲಿಂಗಕ್ಕೆ ಕೊಟ್ಟು ಕೊಳಬೇಕು.
ಮಾಡುವ ನೀಡುವ ನಿಜಭಕ್ತರಿಲ್ಲದ ಕಾರಣ, ಬಾಯ್ದೆರೆಯದಿದ್ದೆನು.
ಮಾಡಿಹೆ ನೀಡಿಹೆನೆಂಬ ಸಂತೋಷದ ಆಪ್ಯಾಯನ ಹಿರಿದಾಯಿತ್ತು.
ನೀಡಯ್ಯಾ ಸಂಗನಬಸವಣ್ಣಾ ಗುಹೇಶ್ವರಂಗೆ !
ವಚನ 1122
ಪ್ರಕೃತಿಗುಣವುಳ್ಳನ್ನಕ್ಕರ ಭಕ್ತನಲ್ಲ.
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಉಳ್ಳನ್ನಕ್ಕರ ಶರಣನಲ್ಲ.
ಹಸಿವು ತೃಷೆ ನಿದ್ರೆ ವಿಷಯ ಉಳ್ಳನ್ನಕ್ಕರ ಪ್ರಸಾದಿಯಲ್ಲ.
ಆಚಾರದಲ್ಲಿ ಅನುಭಾವಿ ಪ್ರಸಾದದಲ್ಲಿ ಪರಿಣಾಮಿ,
ಗುಹೇಶ್ವರಲಿಂಗದಲ್ಲಿ ಚೆನ್ನಬಸವಣ್ಣನೆಂಬ ಪ್ರಸಾದಿಗೆ
ನಮೋ ನಮೋ ಎಂಬೆನು.
ವಚನ 1123
ಪ್ರಣತೆಯೂ ಇದೆ ಬತ್ತಿಯೂ ಇದೆ;
ಜ್ಯೋತಿಯ ಬೆಳಗುವಡೆ,
ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೊ?
ಗುರುವಿದೆ ಲಿಂಗವಿದೆ; ಶಿಷ್ಯನ ಸುಜ್ಞಾನ ಅಂಕುರಿಸದನ್ನಕ್ಕರ
ಭಕ್ತಿ ಎಲ್ಲಿಯದೊ?
`ಸ್ಯೋಹಂ’ ಎಂಬುದಕ್ಕೆ ದಾಸೋಹವ ಮಾಡದಿರ್ದಡೆ
ಅತಿಗಳೆವೆ ನೋಡಾ ಗುಹೇಶ್ವರಾ.
ವಚನ 1124
ಪ್ರಣಮವನುಚ್ಚರಿಸುವ ಪ್ರಮಾಣಿಕರೆಲ್ಲರು,
ಪ್ರಣವಮಂತ್ರದರ್ಥವ ತಿಳಿದು ನೋಡಿರೆ.
ಪ್ರಣವ ನಾಹಂ’ ಎಂದುದೆ ? ಪ್ರಣವ
ಕ್ಯೋಹಂ’ ಎಂದುದೆ ?
ಪ್ರಣವ ಸ್ಯೋಹಂ’ ಎಂದುದೆ ? ಪ್ರಣವ
ಚಿದಹಂ’ ಎಂದುದೆ ?-ಎನ್ನದಾಗಿ,
ಪ್ರಣವ `ಭಗರ್ೊದೇವಸ್ಯ ದಿಮಹಿ’ ಎಂದುದು.
“ಸವಿತುಃ ಪದಮಂಗಃ ಸ್ಯಾತ್ ಭರ್ಗಸ್ತು ಲಿಂಗಮೇವ ಚ
ದಿಮಹಿ ಪದಮಿತ್ಯೇಷಾಂ ಗಾಯತ್ರ್ಯಾಂ ಲಿಂಗಸಂಬಂಧಃ ” -ಎಂದುದಾಗಿ
ಪ್ರಣವದರ್ಥ ತಾನೆ ನಿಮ್ಮ ಮಯವು ಗುಹೇಶ್ವರಾ.
ವಚನ 1125
ಪ್ರಣವಮಂತ್ರವ ಕರ್ಣದಲ್ಲಿ ಹೇಳಿ,
ಶ್ರೀಗುರು ಶಿಷ್ಯನ ಅಂಗದ ಮೇಲೆ ಲಿಂಗಪ್ರತಿಷ್ಠೆಯ ಮಾಡಿದ ಬಳಿಕ,
ಪ್ರಾಣದಲ್ಲಿ ಲಿಂಗವಿಪ್ಪುದೆಂಬ ವ್ರತಗೇಡಿಗಳ ಮಾತ ಕೇಳಲಾಗದು.
ಒಳಗಿಪ್ಪನೆ ಲಿಂಗದೇವನು ಮಲ ಮೂತ್ರ ಮಾಂಸದ ಹೇಸಿಗೆಯೊಳಗೆ ?
ಅಲ್ಲಿ ಪ್ರಾಣವಿಪ್ಪುದಲ್ಲದೆ ಲಿಂಗವಿಪ್ಪುದೆ ?
ಆ ಪ್ರಾಣವ ತಂದು ತನ್ನ ಇಷ್ಟಲಿಂಗದಲ್ಲಿ ಇರಿಸಿ ನೆರೆಯ ಬಲ್ಲಡೆ,
ಆತನೆ ಪ್ರಾಣಲಿಂಗಸಂಬಂದಿ.
ಅಲ್ಲದವರ ಮೆಚ್ಚುವನೆ ನಮ್ಮ ಗುಹೇಶ್ವರಲಿಂಗವು
ವಚನ 1126
ಪ್ರಥಮದಲ್ಲಿ ವಸ್ತು ಅನಿರ್ವಾಚ್ಯವಾಗಿದ್ದಿತ್ತು.
ಆ ಅನಿರ್ವಾಚ್ಯವಾಗಿದ್ದ ಪರವಸ್ತು
ತನ್ನ ಲೀಲೆಯಿಂದ ತಾನೇ ಪರಬ್ರಹ್ಮವೆಂಬ ನಾಮವಾಯಿತ್ತು !
ಆ ನಾಮವನೆಯ್ದಿ ಕುಳವಾಯಿತ್ತು,
ಆ ಕುಳದಿಂದ ಆತ್ಮನೆಂಬ ಲಿಂಗಸ್ಥಲವಾಯಿತ್ತು.
ಆ ಸ್ಥಳ ಕುಳದೊಳಗೆಯ್ದಿ ಸ್ಥಳಕುಳವೆಂಬ ಎರಡಿಲ್ಲದೆ ನಿಂದಿತ್ತು.
ಅದೆಂತೆಂದಡೆ:
ವಾಙ್ಮನಕ್ಕಗೋಚರವಾದ ಪ್ರರಬ್ರಹ್ಮದಿಂದಾಯಿತ್ತು ಭಾವ,
ಭಾವದಿಂದಾಯಿತ್ತು ಜ್ಞಾನ, ಜ್ಞಾನದಿಂದಾಯಿತ್ತು ಮನ,
ಮನದಿಂದಾಯಿತ್ತು ಬುದ್ಧಿ, ಬುದ್ಧಿಯಿಂದಾಯಿತ್ತು ಚಿತ್ತ,
ಚಿತ್ತದಿಂದಾಯಿತ್ತು ಅಹಂಕಾರ.
ಇಂತು-ಅಹಂಕಾರ ಚಿತ್ತ ಬುದ್ಧಿ ಮನ ಜ್ಞಾನ ಭಾವ ಎಂದು ಆರಾದವು.
ಈ ಆರೂ ಕೆಟ್ಟಲ್ಲದೆ ವಾಙ್ಮನಕ್ಕಗೋಚರವಾದ ಪರಬ್ರಹ್ಮವಾಗಬಾರದು.
ಇದ ಕೆಡಿಸುವುದಕ್ಕೆ ಆರು ಸ್ಥಲವಾದವು.
ಅವಾವೆಂದಡೆ:
ಅಹಂಕಾರ ಅಡಗಿದಾಗ ಭಕ್ತಸ್ಥಲ,
ಚಿತ್ತದ ಗುಣ ಕೆಟ್ಟಾಗ ಮಾಹೇಶ್ವರಸ್ಥಲ
ಬುದ್ಧಿಯ ಗುಣ ಕೆಟ್ಟಾಗ ಪ್ರಸಾದಿಸ್ಥಲ,
ಮನೋಗುಣ ಅಳಿದಾಗ ಪ್ರಾಣಲಿಂಗಸ್ಥಲ,
ಜೀವನ ಗುಣ ಸಂದಾಗ ಶರಣ ಸ್ಥಲ
ಭಾವ ನಿರ್ಭಾವವಾದಾಗ ಐಕ್ಯಸ್ಥಲ.
ಇಂತು ಷಟ್ಸ್ಥಲವಾಗಿ ವಾಙ್ಮನಕ್ಕೆ ಅಗೋಚರವಾದ ಬ್ರಹ್ಮವೆ ಆತ್ಮನು.
ಆ ಆತ್ಮನಿಂದ ಆಕಾಶ ಹುಟ್ಟಿತ್ತು, ಆ ಆಕಾಶದಿಂದ ವಾಯು ಹುಟ್ಟಿತ್ತು.
ಆ ವಾಯುವಿನಿಂದ ಅಗ್ನಿ ಹುಟ್ಟಿತ್ತು,
ಆ ಅಗ್ನಿಯಿಂದ ಅಪ್ಪು ಹುಟ್ಟಿತ್ತು.
ಆ ಅಪ್ಪುವಿನಿಂದ ಪೃಥ್ವಿ ಹುಟ್ಟಿತ್ತು.
ಇಂತು-ಕುಳಸ್ಥಳವಾಗಿ ಸ್ಥಳಕುಳವಾದ ವಿವರವೆಂತೆಂದಡೆ:
ಪೃಥ್ವಿ ಅಪ್ಪುವಿನೊಳಡಗಿ, ಅಪ್ಪು ಅಗ್ನಿಯೊಳಡಗಿ,
ಅಗ್ನಿ ವಾಯುವಿನೊಳಡಗಿ, ವಾಯು ಆಕಾಶದೊಳಡಗಿ,
ಆಕಾಶ ಆತ್ಮನೊಳಡಗಿತ್ತು, ಆತ್ಮ ಪರಶಿವನಲ್ಲಿ ಅಡಗಿತ್ತು !
ಇಂತು-ಷಡಂಗವಡಗಿದ ಪರಿ ಎಂತೆಂದಡೆ: “ಪೃಥ್ವೀ ಭವೇತ್ ಜಲೇ, ಜಲೇ ಮಗ್ನಾಜಲಂ ಗ್ರಸ್ತಂ ಮಹಾಗ್ನಿನಾ
ವಾಯೋರಸ್ತಮಿತಂ ತೇಜೋ ವ್ಯೋಮ್ನಿ ವಾತೋ ವಿಲೀಯತೇ
ವ್ಯೋಮ್ಯೋತ್ಮನಿ ವಿಲೀನಂ ಸ್ಯಾತ್ ಆತ್ಮಾ ಪರಶಿವೇ ಪದೇ” –
ಎಂದುದಾಗಿ
ಆತ್ಮನು ಪರಬ್ರಹ್ಮದೊಳಡಗಿ ನಿಂದಿತ್ತು ಗುಹೇಶ್ವರಾ.
ವಚನ 1127
ಪ್ರಥಮದಲ್ಲಿ ವಸ್ತು ಏನೂ ಏನೂ ಇಲ್ಲದ
ಮಹಾಘನಶೂನ್ಯಬ್ರಹ್ಮವಾಗಿದ್ದಿತ್ತು.
ಅಂತಿರ್ದ ಪರವಸ್ತು ತಾನೆ, ತನ್ನ ಲೀಲೆಯಿಂದ, ತನ್ನ ದಿವ್ಯಾನಂದ
ಸ್ವಲೀಲಾ ಸ್ವಭಾವದಿಂದಾದುದು ಆತ್ಮನೆಂಬಂಗಸ್ಥಲ.
ಅಂತಾದ ಜೀವಾತ್ಮನೆಂಬ ಅಂಗಸ್ಥಲಕ್ಕೆ
ಸೇರಿದ ತತ್ವಂಗಳಿಪ್ಪತ್ತೈದು.
ಅವಾವುವಯ್ಯಾ ಎಂದಡೆ:
ಶ್ರೋತ್ರಾದಿ ಜ್ಞಾನೇಂದ್ರಿಯಂಗಳೈದು,
ವಾಗಾದಿ ಕಮರ್ೆಂದ್ರಿಯಂಗಳೈದು,
ಶಬ್ದಾದಿ ವಿಷಯಂಗಳೈದು,
ಪ್ರಾಣಾದಿ ವಿಷಯಂಗಳೈದು,
ಮನ ಬುದ್ಧಿ ಚಿತ್ತ ಅಹಂಕಾರ ಜೀವಂಗಳೈದು.-
ಅಂತು ಅಂಗ ತತ್ವಂಗಳಿಪ್ಪತ್ತೈದು.
ಇಂತು ಅಂಗತತ್ವ ಇಪ್ಪತ್ತೈದು ತನ್ನೊಳಗೆ ಸಮರಸತ್ವನೆಯ್ದಿಸಲೋಸುಗ,
ಭಕ್ತಿ ತದರ್ಥವಾಗಿ, ಆ ಮಹಾಘನ ಪರಾತ್ಪರವಪ್ಪ ದಿವ್ಯಲಿಂಗವು
ಹನ್ನೊಂದು ತತ್ವವಾಯಿತ್ತು.
ಇಂತೀ ಹನ್ನೊಂದು ತತ್ವದ ಪರಿಕ್ರಮವೆಂತೆಂದೊಡೆ:
ಶಾಂತ್ಯಾದಿ ಶಕ್ತಿಗಳೈದು,
ಶಿವಾದಿ ಸಾದಾಖ್ಯಗಳೈದು, ಪರಶಿವತತ್ವವೊಂದು.-
ಇಂತೀ ಲಿಂಗತತ್ತ್ವ ಹನ್ನೊಂದು.
ಆ ಅಂಗತತ್ತ್ವ ಲಿಂಗತತ್ತ್ವವೆಂಬ ಉಭಯತತ್ತ್ವ ಮೂವತ್ತಾರು.
ಇಂತಿವರ ಸಮರಸೈಕ್ಯವೆಂತುಂಟಯ್ಯಾ ಎಂದಡೆ:
ನಿವೃತ್ತಿಶಕ್ತಿಯನೈದಿ, ವಾಗಾದಿ ಕಮರ್ೆಂದ್ರಿಯಂಗಳೈದು
ಕರ್ಮ ಸಾದಾಖ್ಯವನೊಡಗೂಡಿದಲ್ಲಿ,
ಪೃಥ್ವಿ ತತ್ತ್ವ ಬಯಲಾಯಿತ್ತು.
ಪ್ರತಿಷ್ಠಾಶಕ್ತಿಯನೈದಿ, ಶಬ್ದಾದಿ ವಿಷಯಂಗಳೈದು
ಕರ್ತುಸಾದಾಖ್ಯವನೊಡಗೂಡಿದಲ್ಲಿ,
ಅಪ್ಪು ತತ್ತ್ವ ಬಯಲಾಯಿತ್ತು.
ವಿದ್ಯಾಶಕ್ತಿಯನೈದಿ, ಶ್ರೋತ್ರಾದಿ ಜ್ಞಾನೇಂದ್ರಿಯಂಗಳೈದು
ಮೂರ್ತಿ ಸಾದಾಖ್ಯವನೊಡಗೂಡಿದಲ್ಲಿ,
ತೇಜತತ್ತ್ವ ಬಯಲಾಯಿತ್ತು.
ಶಾಂತಿಶಕ್ತಿಯನೈದಿ, ಪ್ರಾಣಾದಿವಾಯುಗಳೈದು
ಅಮೂರ್ತಿಸಾದಾಖ್ಯವನೊಡಗೂಡಿದಲ್ಲಿ,
ವಾಯುತತ್ತ್ವ ಬಯಲಾಯಿತ್ತು.
ಶಾಂತ್ಯತೀತ ಶಕ್ತಿಯನೈಯ್ದಿ,
ಮನ ಬುದ್ಧಿ ಚಿತ್ತ ಅಹಂಕಾರ ಜೀವಂಗಳೈದು
ಶಿವಸಾದಾಖ್ಯವನೊಡಗೂಡಿದಲ್ಲಿ,
ಆಕಾಶತತ್ತ್ವ ಬಯಲಾಯಿತ್ತು.
ಇಂತೀ ಪಂಚವಿಂಶತಿತತ್ತ್ವಂಗಳು ಲಿಂಗೈಕ್ಯವಾಗಲೊಡನೆ,
ಲಿಂಗತತ್ತ್ವ ಹನ್ನೊಂದು ತಾವು ಒಂದೊಂದನೊಡಗೂಡಿ ಏಕಾರ್ಥವಾದಲ್ಲಿ,
ಕುಳಸ್ಥಲವಡಗಿತ್ತು.
ಇಂತು ಕುಳಸ್ಥಲ-ಸ್ಥಲಕುಳವಡಗಲೊಡನೆ,
ಮಹಾಘನ ಪರಾತ್ಪರವಪ್ಪ ದಿವ್ಯಲಿಂಗವು, ವಾರಿಕಲ್ಲು ಕರಗಿ ನೀರಾದಂತೆ
ತನ್ನ ಪರಮಾನಂದದಿಂದವೆ ಸರ್ವಶೂನ್ಯವಾಯಿತ್ತು.
ಅದೆಂತೆನಲು,
ಸಾಕ್ಷಿ:
ಅನಾದಿಸಿದ್ಧಸಂಸಾರಂ ಕರ್ತೃ ಕರ್ಮ ವಿವರ್ಜಯೇತ್
ಸ್ವಯಂಮೇವ ಭವೇದ್ದೇಹೀ ಸ್ವಯಂಮೇವ ವಿಲೀಯತೇ
ಅಂತಃ ಶೂನ್ಯಂ ಬಹಿಃ ಶೂನ್ಯಂ ಶೂನ್ಯಶೂನ್ಯಾ ದಿಶೋ ದಶ
ಸರ್ವಶೂನ್ಯಂ ನಿರಾಕಾರಂ ನಿದ್ರ್ವಂದ್ವಂ ಪರಮಂ ಪದಂ
-ಎಂದುದಾಗಿ, ಇಂತೀ ಅಂಗ ತತ್ತ ್ವವಿಪ್ಪತ್ತೈದು ಲಿಂಗತತ್ತ್ವ ಹನ್ನೊಂದು,
ಇಂತೀ ಉಭಯತತ್ತ್ವ ಏಕಾರ್ಥವಾಗಿ,
ಸರ್ವಶೂನ್ಯವನೆಯ್ದಿದ ಪರಿಕ್ರಮದ ನಿರ್ಣಯದ ಬೆಡಗು,
ತತ್ತ್ವಮಸ್ಯಾದಿ ವಾಕ್ಯಾರ್ಥಂಗಳಲ್ಲಿ ಕಾಣಲಾಯಿತ್ತು.-ಅದೆಂತೆಂದಡೆ:
ತತ್ಪದವೇ ಲಿಂಗ, ತ್ವಂ ಪದವೇ ಅಂಗ,
ಈ ಎರಡರ ಐಕ್ಯವೇ ಅಸಿ ಎಂದುದಾಗಿ .
ಇಂತು ಸಕಲನಾಗಬಲ್ಲ, ಸಕಲ ನಿಃಕಲನಾಗಬಲ್ಲ,
ಸಕಲ ನಿಃಕಲಾತೀತನಾಗಿ ಏನೂ ಏನೂ ಇಲ್ಲದ ಮಹಾ ಘನಶೂನ್ಯಬ್ರಹ್ಮವಾಗಿ
ಇರಬಲ್ಲನಯ್ಯಾ ನಮ್ಮ ಗುಹೇಶ್ವರಲಿಂಗವು !
ವಚನ 1128
ಪ್ರಸಾದಲಿಂಗ ಉಳ್ಳನ್ನಕ್ಕರ, ಪ್ರಾಣಲಿಂಗವೆಂಬ ವಾರ್ತೆ
ಭಂಗ ನೋಡಾ ಬಸವಣ್ಣಾ.
ಬೀದಿಯಲ್ಲಿ ಕೊಡನನೊಡೆದು
ಬಯಲನುಡುಗಿದಡೆ ಉಂಟೆ ಹೇಳಾ ?
ಗುಹೇಶ್ವರಲಿಂಗವ ಬೇರೆಮಾಡಿ ಅರಸಲುಂಟೆ ಬಸವಣ್ಣಾ ?
ವಚನ 1129
ಪ್ರಸಾದಿಗಳು ಪ್ರಸಾದಿಗಳು ಎಂದೆಂಬಿರಿ
ಅಂದು ಇಂದು ಎಂದೂ, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.
ಆದಿ ಅನಾದಿ ಇಲ್ಲದಂದು, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.
ವೇದಶಾಸ್ತ್ರಂಗಳಿಲ್ಲದಂದು, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.
ಅಜಾಂಡ ಬ್ರಹ್ಮಾಂಡಕೋಟಿಗಳುದಯವಾಗದಂದು
ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.
ತ್ರೈಮೂರ್ತಿಗಳಿಲ್ಲದಂದು, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.
ಉಮೆಯ ಕಲ್ಯಾಣವಿಲ್ಲದಂದು, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.
ಗಂಗೆವಾಳುಕರಿಲ್ಲದಂದು, ಚೆನ್ನಬಸವಣ್ಣನೊಬ್ಬನೇ ಪ್ರಸಾದಿ.
ಲಿಂಗವೆಂಬ ನಾಮ ಜಂಗಮವೆಂಬ ಹೆಸರಿಲ್ಲದಂದು
ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.
ಗುಹೇಶ್ವರಾ ನೀನೆ ಲಿಂಗ, ಬಸವಣ್ಣನೆ ಗುರು
ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.
ಮತ್ತಾರನು ಕಾಣೆನಯ್ಯಾ.
ವಚನ 1130
ಪ್ರಾಣ, ಲಿಂಗದಲ್ಲಿ ಸಮನಿಸದು; ಲಿಂಗ ಪ್ರಾಣದಲ್ಲಿ ಸಮನಿಸದು.
ಪ್ರಾಣ ಲಿಂಗ, ಲಿಂಗ ಪ್ರಾಣವೆಂಬುದು
ಸಂದು ಸಂಶಯವಲ್ಲದೆ ನಿಜವ ಕೇಳಾ.
ದಶಪ್ರಾಣವಳಿದು ಲಿಂಗವೆ ತಾನೆಂದರಿಯ ಬಲ್ಲಡೆ
ಅದೇ ಪ್ರಾಣಲಿಂಗ ಗುಹೇಶ್ವರಾ !
ವಚನ 1131
ಪ್ರಾಣಲಿಂಗ ಪರಾಪರವೆಂದರಿದು,
ಅಣು ರೇಣು ತೃಣ ಕಾಷ್ಠದಲ್ಲಿ ಕೂಡಿ ಪರಿಪೂರ್ಣಶಿವನೆಂದರಿದು,
ಇಂತು-ಕ್ಷಣವೇದಿ ಅಂತರಂಗವ ವೇದಿಸಲ್ಕೆ
ಅಗಣಿತ ಅಕ್ಷೇಶ್ವರ ತಾನೆಂದರಿದು
ಪ್ರಣವಪ್ರಭೆಯ ಮೇಲಣ ಪರಂಜ್ಯೋತಿ ತಾನೆಂದರಿದ ಕಾರಣ,
ಗುಹೇಶ್ವರಾ ನಿಮ್ಮ ಶರಣನುಪಮಾತೀತನು.
ವಚನ 1132
ಪ್ರಾಣಲಿಂಗಕ್ಕೆ ಕಾಯವೆ ಸೆಜ್ಜೆ, ಆಕಾಶಗಂಗೆಯಲ್ಲಿ ಮಜ್ಜನ.
ಹೂವಿಲ್ಲದ ಪರಿಮಳದ ಪೂಜೆ!
ಹೃದಯಕಮಳದಲ್ಲಿ `ಶಿವಶಿವಾ’ ಎಂಬ ಶಬ್ದ-
ಇದು, ಅದ್ವೈತ ಕಾಣಾ ಗುಹೇಶ್ವರಾ.
ವಚನ 1133
ಪ್ರಾಣಲಿಂಗವೆಂಬ ಶಬ್ದಕ್ಕೆ ನಾಚಿತ್ತು ಮನ ನಾಚಿತ್ತು.
ಪ್ರಾಣ ಹೋದರೆ ಕಾಯ ಬಿದ್ದಿತ್ತು,
ಲಿಂಗ ಒಂದೆಸೆಯಾದಡೆ ಮನ ನಾಚಿತ್ತು.
ಗುಹೇಶ್ವರನೆನಲಿಲ್ಲದ ಘನವು.
ವಚನ 1134
ಪ್ರಾಣವ ಮಾರುವವರಿಂಗೆ ಪ್ರಾಣಲಿಂಗವೆಲ್ಲಿಯದೊ?
ಇಷ್ಟಲಿಂಗಪೂಜಕರೆಲ್ಲ ನೇಮವ ಮಾಡುತ್ತಿಪ್ಪರು.
ಸೂನೆಗಾರಂಗೆ ಪ್ರಸಾದವೆಲ್ಲಿಯದೊ ಗುಹೇಶ್ವರಾ.
ವಚನ 1135
ಪ್ರಾಯದ ಪಿಂಡಕ್ಕೆ, ಮಾಯದ ದೇವರಿಗೆ,
ವಾಯಕ್ಕೆ, ಕಾಯವ ಬಳಲಿಸದೆ ಪೂಜಿಸಿರೊ.
ಕಟ್ಟುಗೂಂಟಕ್ಕೆ ಬಂದ ದೇವರ ಪೂಜಿಸಲು,
ಸೂಜಿಯ ಪೋಣಿಸಿ ದಾರವ ಮರೆದಡೆ,
ಹೊಲಿಗೆ ಬಿಚ್ಚಿತ್ತು ಗುಹೇಶ್ವರಾ
ವಚನ 1136
ಪ್ರಾರಬ್ಧವಂತೆ-
ನೊಸಲಬರಹವೆಂತು ಹೋಯಿತ್ತೆನಬಹುದು ?
ನೊಸಲಬರಹವಂತೆ-
ಹಸ್ತಮಸ್ತಕ ಸಂಯೋಗವೆಂತಾಯಿತ್ತು ?
ಪ್ರಳಯವಂತೆ-
ಪ್ರಾಣಲಿಂಗವೆಂತುಟು ಹೇಳಾ, ಗುಹೇಶ್ವರಾ.
ವಚನ 1137
ಬ’ ಎಂಬಲ್ಲಿ ಎನ್ನ ಭವ ಹರಿಯಿತ್ತು.ಸ’ ಎಂಬಲ್ಲಿ ಸರ್ವಜ್ಞನಾದೆನು.
ವ’ ಎಂಬಲ್ಲಿ ವಚಿಸುವಡೆ ಚೈತನ್ಯಾತ್ಮಕನಾದೆನು.
ಇಂತೀ ಬಸವಾಕ್ಷರತ್ರಯವೆನ್ನ ಸರ್ವಾಂಗದಲ್ಲಿ
ತೊಳಗಿ ಬೆಳಗುವ ಭೇದವನರಿದು
ಆನೂ ನೀನೂ ಬಸವಾ’
ಬಸವಾ’ `ಬಸವಾ’
ಎನುತಿರ್ದೆವಯ್ಯಾ ಗುಹೇಶ್ವರಾ.
ವಚನ 1138
ಬಂ(ಬಿಂ?)ದು ನಿಂದು ಮೊ(ಹೊ?)ಲೆನೀರ ಮಿಂದವರೆಲ್ಲರು
ಹೆಂಡತಿಯರಾಗಬಲ್ಲರೆ ?
ಬಂದು ನಿಂದು ಸುಳಿದು ಮಾಡುವರೆಲ್ಲರು
ಸಂಗನಬಸವಣ್ಣನಂತೆ ಗುಹೇಶ್ವರಲಿಂಗವ ಬಲ್ಲರೆ ?
ವಚನ 1139
ಬಂದ ಬಟ್ಟೆಯ ನಿಂದು ನೋಡದೆ, ಬಂದ ಬಟ್ಟೆಯ ಕಂಡು ಸುಖಿಯಾದೆ.
ನಿಂದ ನಿಲುವ ಮುಂದುಗೆಡಿಸಿ, ನಿಂದನಿಲವ ಮುಂದುಗೊಂಡಿತ್ತು.
ತಂದೆ ಮಕ್ಕಳ ಗುಣ ಒಂದು ಭಾವದೊಳಡಗಿ,
ಸಂದಿಲ್ಲದ ಕಾಲೊಳಗೆ ಕೈ ಮೂಡಿತ್ತು.
ಒಂದೊಂದನೆ (ಒಂದನೆ ?) ಹಿಡಿದು ಒಂದೊಂದನೆ (ಒಂದನೆ ?) ಬಿಟ್ಟಡೆ-
ಇದು ನಮ್ಮ ಗುಹೇಶ್ವರನ ಸದ್ಭಕ್ತಿಯಾಯಿತ್ತೈ ಸಂಗನಬಸವಣ್ಣಾ
ವಚನ 1140
ಬಂದ ಬಟ್ಟೆಯ ನಿಂದು ನೋಡಲೊಲ್ಲೆ ಕಂದಾ,
ಅದೇನು ಸೋಜಿಗವೊ ? ಬಿಂದು ಛಂದವಲ್ಲ
ಬಂದ ಪರಿಯನು ಗುಹೇಶ್ವರ ಬಲ್ಲ ಕಂದಾ.
ವಚನ 1141
ಬಂದುದನತಿಗಳೆದು ಬಾರದುದ ಬಯಸೆನೆಂಬುದು
ಒಡಲ ಗುಣಧರ್ಮರಹಿತಂಗಲ್ಲದೆ,
ಒಡಲ ಗುಣಧರ್ಮ ಉಳ್ಳವಂಗೆ ಆಗದು ನೋಡಾ.
ಅದೆಂತೆಂದಡೆ:
ರಾಜಭಯ ಚೋರಭಯ ಮೃಗಭಯ ದೆಸೆಭಯ ಸ್ತ್ರೀಭಯ ಬಂದು ಸೋಂಕಿದಲ್ಲಿ
ಹೆಚ್ಚು ಕುಂದಿಲ್ಲದೆ ಒಂದೆ ಸಮವಾಗಿ ಕಾಣಬೇಕು.
ಕ್ಷೀರ ಘೃತ ನವರತ್ನ ಆಭರಣ ಮನೆ ಮಂಚ ಹಸು ಧನ ವನಿತೆಯರ ಭೋಗಂಗಳು,
ಲಿಂಗದಾಣತಿಯಿಂದ ಬಂದವೆಂದು,
ಬಿಡದೆ ಭೋಗಿಸುವ ಅಣ್ಣಗಳು ನೀವು ಕೇಳಿರೊ,
ಮದಸೊಕ್ಕಿದಾನೆ ಪೆಬರ್ುಲಿ ಕಾಳೋರಗ ಮಹಾಜ್ವಾಲೆ
ಅಪ್ರಯತ್ನದಿಂದ ಬಂದು ಸಂದಿಸೆ,
ಸಂದು ಸಂಶಯವಿಲ್ಲದೆ `ಲಿಂಗದಾಣತಿ’ ಎನ್ನದಿದ್ದಡೆ
ಸ್ವಯವಚನ ವಿರುದ್ಧ ನೋಡಾ.
ಇದು ಜೀವಜಾಲಂಗಳ ಉಪಾದಿಕೆಯಲ್ಲದೆ ನಿರುಪಾದಿಕೆಯಲ್ಲ.
ಪೇಯಾಪೇಯವನರಿದು ಭೋಗಿಸಬೇಕು.
ಭಯ ಲಜ್ಜೆ ಮೋಹ ಉಳ್ಳನ್ನಕ್ಕರ ಎಂತಪ್ಪುದೊ ?
ಇದು ಕಾರಣ-ಅಂಗಕ್ಕಾಚಾರ, ಭಾವಕ್ಕೆ ಕೇವಲ ಜ್ಞಾನ.
ಬಂದಿತ್ತು ಬಾರದು ಎಂಬ ತಥ್ಯಮಿಥ್ಯ ರಾಗದ್ವೇಷವನಳಿದು
ತನ್ನ ನಿಜದಲ್ಲಿ ತಾನೆ ಪರಿಣಾಮಿಯಾಗಿಪ್ಪ[ನು]
ಗುಹೇಶ್ವರಾ ನಿಮ್ಮ ಶರಣ.
ವಚನ 1142
ಬಂದುದನೆಲ್ಲವ ನುಂಗಿ, ಬಾರದುದನೆಲ್ಲವ ನುಂಗಿ,
ಆರಿಗಿಲ್ಲದ ಅವಸ್ಥೆ ಎನಗಾಯಿತ್ತು.
ಆ ಅವಸ್ಥೆ ಅರತು ನೀನು, ನಾನೆಂದರಿದೆ ಗುಹೇಶ್ವರಾ.
ವಚನ 1143
ಬಂದೂ ಬಾರದು ಹೊಂದಿಯೂ ಹೊಂದದು,
ನಿಂದೂ ನಿಲ್ಲದ ಪರಿಯ ನೋಡಾ !
ಬಿಂದು ನಾದವ ನುಂಗಿತ್ತು, ಮತ್ತೊಂದದಿಕವುಂಟೆ?
ನವಖಂಡ ಪೃಥ್ವಿಯನೊಳಕೊಂಡ ಅಗಮ್ಯ ಸನ್ಮತ ಸುಖವಿರಲು
ಗುಹೇಶ್ವರನ ಬೇರೆ ಅರಿಯ(ಅರಸ?)ಲುಂಟೆ?
ವಚನ 1144
ಬಟ್ಟಬಯಲ ಮಹಾಮನೆಯೊಳಗೊಂದು
ಹುಟ್ಟದ ಹೊಂದದ ಶಿಶುವ ಕಂಡೆ.
ಮುಟ್ಟಿ ಪೂಜಿಸಹೋದಡೆ
ನೆಟ್ಟನೆ ಆ ಶಿಶು ತನ್ನುವ ನುಂಗಿತ್ತು
ಮುಟ್ಟಲಿಲ್ಲ ನೋಡಲಿಲ್ಲ, ಪೂಜೆಗೆ ಕಟ್ಟಳೆ ಮುನ್ನಿಲ್ಲ.
ಗುಹೇಶ್ವರ ಬಯಲು !
ವಚನ 1145
ಬಟ್ಟೆಗೊಂಡು ಹೋಗುತ್ತೊಂದ ಕೊಟ್ಟುಹೋದರೆಮ್ಮವರು.
ಎಲ್ಲಿಯದು ಲಿಂಗ ಎಲ್ಲಿಯದು ಜಂಗಮ ?
ಎಲ್ಲಿಯದು ಪಾದೋದಕ ಪ್ರಸಾದವಯ್ಯಾ ?
ಅಲ್ಲದವರೊಡನಾಡಿ ಎಲ್ಲರೂ ಮುಂದುಗೆಟ್ಟರಯ್ಯಾ.
ಅನು ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ.
ವಚನ 1146
ಬಟ್ಟೆಯ ಬಡಿವ ಕಳ್ಳಂಗೆ, ಬೇಹು ಸಂದು ಕಳವು ದೊರಕಿದಂತಾಯಿತ್ತು.
ಕುರುಡನು ಎಡಹುತ್ತ ತಡಹಿ ಹಿಡಿದು ಕಂಡಂತಾಯಿತ್ತು.
ನಿರ್ಧನಿಕ ಧನದ ಬಯಕೆಯಲ್ಲಿ ನಡೆವುತ್ತ ಎಡಹಿದ ಕಲ್ಲು
ಪರುಷವಾದಂತಾಯಿತ್ತು.
ಅರಸುವಂಗೆ ಅರಿಕೆ ತಾನಾದಂತಾಯಿತ್ತು.
ಎಲೆ ಗುಹೇಶ್ವರಾ ನೀನು ಎನಗೆ ದೊರಕುವುದೆಂಬುದು,
ನಾ ಮುನ್ನ ಮಾಡಿದ ಸುಕೃತದ ಫಲ ! ಏನ ಬಣ್ಣಿಪೆ ಹೇಳಾ ?
ವಚನ 1147
ಬಣ್ಣವುಂಡ ಚಿನ್ನದಂತೆ, ಬೆಣ್ಣೆ ಉಂಡ ಘೃತದಂತೆ,
ಪ(ಸ್ವ?)ರವುಂಡ ಶಬ್ದದಂತೆ, ಪರಿಮಳವುಳ್ಳ ಪುಷ್ಪದಂತೆ,
ಗುಹೇಶ್ವರಲಿಂಗದಲ್ಲಿ ಹೊರೆಯಿಲ್ಲದಿರ್ಪ ಸಂಗನಬಸವಣ್ಣನ
ಭಕ್ತಿಯಾಚಾರದ ಮಹಾತ್ಮೆಯೆಂತು ಪೇಳಾ ಮಡಿವಾಳ ಮಾಚಯ್ಯಾ.
ವಚನ 1148
ಬತ್ತೀಸಾಯುಧವನು ಅನಂತ ದಿನ ಸಾದಿಸಿ ಪಿಡಿದರೂ
ಕಾದುವುದು ಒಂದೇ ಕೈದು ಒಂದೇ ದಿನ.
ಆ ಹಾಂಗೆ-ಫಲ ಹಲವಾದಡೂ
ಅರಿವುದೊಂದೇ ಮನ, ಒಂದೇ ಲಿಂಗ !
ಆ ಮನವು ಆಲಿಂಗದ ನೆಲೆಯಲ್ಲಿ ನಿಂದು ಸ್ಥಲಲೇಪವಾದ ಮತ್ತೆ
ಸ್ಥಲವಿಲ್ಲ ನಿಃಸ್ಥಲವಿಲ್ಲ, ನಿಜ ನೀನೇ ಗುಹೇಶ್ವರಾ.
ವಚನ 1149
ಬಯಕೆ ಎಂಬುದು ದೂರದ ಕೂಟ,
`ಬಯಸೆ’ ಎಂಬುದು ಕೂಟದ ಸಂದು.
ಈ ಉಭಯವೂ ಕಪಟ ಕನ್ನಡವಲ್ಲದೆ ಸಹಜವಲ್ಲ.
ಕೂಡಿ ಕಂಡ ಪರಿಯೆಂತು ಹೇಳಾ ಇನ್ನು ಲಿಂಗೈಕ್ಯವನು ?
ಕೂಪಠಾವಿನಲ್ಲಿ ಪರವಶವಾದೆನೆಂಬ ಮಾತ ಮೆಚ್ಚುವನೆ
ನಮ್ಮ ಗುಹೇಶ್ವರಲಿಂಗ ?
ವಚನ 1150
ಬಯಲ ಪೀಠದಲ್ಲಿ ನಿರ್ವಯಲ ಕಂಡಿಹೆನೆಂದಡೆ,-ಅತ್ಯತಿಷ್ಠದ್ದಶಾಂಗುಲ’ ಎಂಬ ಶ್ರುತಿಯ ನೋಡಲು, ಮತ್ತೆ
ವಾಚಾತೀತಂ ಮನೋತೀತಂ ಭಾವಾತೀತಂ ಪರಂ ಶಿವಂ ‘
ಎಂಬುದ ವಿಚಾರಿಸಿ ನೋಡೆ
ಸ್ಥಾನಮಾನಕ್ಕೆ ಬಂದಿತೆಂಬ ಶ್ರುತಿಯುಂಟೆ ?
ಕಾಯದ ಜೀವದ ಹೊಲಿಗೆಯ ಬಿಚ್ಚಿ, ನಾದ ಬಿಂದುವಂ ತಿಳಿದು
ಪರಿಪೂರ್ಣ ಜ್ಞಾನಿಯಾಗಿ, ಪರಿಪೂರ್ಣಶಿವನನೊಳಕೊಳ್ಳಬಲ್ಲ ಶರಣನೆ,
ಗುಹೇಶ್ವರಲಿಂಗದಲ್ಲಿ ಸಹಜ ಶಿವಯೋಗಿ ಕಾಣಾ ಸಿದ್ಧರಾಮಯ್ಯಾ.
ವಚನ 1151
ಬಯಲ ಬೆರಗಿನ ಸುಖದ ಸವಿಯ ಬೆರಗಲ್ಲದೆ ಕಾಣೆ !
ಕಾಣೆನೆಂಬ ನುಡಿಗೆಡೆಯ ಕಾಣೆ !
ಕುರುಹುಗೆಟ್ಟು ಅರಿವ ನೆರೆಯರಿದು
ಬೆರಸಿದೆನೆಂಬ ಬರುನುಡಿಯ ನುಡಿಗೆ
ನಾಚಿದೆನಯ್ಯಾ ಗುಹೇಶ್ವರಾ
ವಚನ 1152
ಬಯಲ ಮೂರ್ತಿಗೊಳಿಸಿದನೊಬ್ಬ ಶರಣ.
ಆ ಮೂರ್ತಿಯಲ್ಲಿ ಭಕ್ತಿಸ್ವಾಯತವ ಮಾಡಿದನೊಬ್ಬ ಶರಣ.
ಆ ಭಕ್ತಿಯನೆ ಸುಜ್ಞಾನ ಮುಖವ ಮಾಡಿದನೊಬ್ಬ ಶರಣ.
ಆ ಸುಜ್ಞಾನವನು ಲಿಂಗಮುಖವಾಗಿ ಧರಿಸಿದನೊಬ್ಬ ಶರಣ.
ಆ ಲಿಂಗವನೆ ಸರ್ವಾಂಗದಲ್ಲಿ ವೇದಿಸಿಕೊಂಡನೊಬ್ಬ ಶರಣ.
ಆ ಸರ್ವಾಂಗವನೆ ನಿರ್ವಾಣಸಮಾದಿಯಲ್ಲಿ ನಿಲಿಸಿದನೊಬ್ಬ ಶರಣ.
ನಾನು ನಿರ್ವಾಣದಲ್ಲಿ ನಿಂದು ಅಗಮ್ಯನಾದೆನೆಂದಡೆ,
ಭಕ್ತಿಕಂಪಿತನೆನಿಸಿ ಎನ್ನ ತನ್ನಲ್ಲಿಗೆ ಬರಿಸಿಕೊಂಡನೊಬ್ಬ ಶರಣ.
ಗುಹೇಶ್ವರಾ ನಿಮ್ಮ ಶರಣ ಸಂಗನಬಸವಣ್ಣನ ಶ್ರೀಪಾದವ ಕಂಡು
ಶರಣೆಂದು ಬದುಕಿದೆನು
ವಚನ 1153
ಬಯಲಿಂಗೆ ಕಡೆಯಿಲ್ಲ ಮರುತಂಗೆ ತಡೆಯಿಲ್ಲ.
ರುಚಿಗೆ ಖಂಡಿತವಿಲ್ಲ ಸುಖಕ್ಕೊಗಡಿಕೆಯಿಲ್ಲ.
ಸುಖವೆ ಪರಬ್ರಹ್ಮಾನಂದವಾಗಿ ಶೂನ್ಯತೃಪ್ತಿಗೆ ಸೂತಕವಿಲ್ಲ !
ಸಾಕಾರಕ್ಕೆ ಸತ್ಕ್ರಿಯೆಯಿಂದರ್ಪಿಸಬೇಕು.
ಅದೆಂತೆಂದಡೆ:
ಲೋಹದ ಸಂಗದಿಂದ ಅಗ್ನಿ ಬಡಿವಡೆದಂತೆ
ರೂಪುಗೂಡಿದ ರುಚಿಯ ಸತ್ಕ್ರಿಯೆಯಿಂದರ್ಪಿಸಬೇಕು
ನಮ್ಮ ಗುಹೇಶ್ವರಲಿಂಗದಲ್ಲಿ ಸಂದು ಸಂಶಯವಿಲ್ಲದೆ.
ವಚನ 1154
ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು
ಬಯಲು ಬಯಲಾಗಿ ಬಯಲಾಯಿತ್ತಯ್ಯಾ.
ಬಯಲ ಜೀವನ ಬಯಲ ಭಾವನೆ,
ಬಯಲು ಬಯಲಾಗಿ ಬಯಲಾಯಿತ್ತಯ್ಯಾ.
ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು
ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ.
ವಚನ 1155
ಬಯಸಿ ಬಂದುದು ಅಂಗಭೋಗ
ಬಯಸದೇ ಬಂದುದು ಲಿಂಗಭೋಗವೆಂದು ವಚನವನೋದಿ,
ಕಾರ್ಯಕ್ಕಾಗಿ ಬಂದ ವೇಷಧಾರಿಗಳ ಕಂಡು ಹಿಗ್ಗಿ ಹಾರೈಸಿ
ಅನ್ನದಾಶೆಯಿಂದ ಒಪ್ಪುಗೊಳಿಸಿ ಬಯಸಿ ಬಾಯಾರಿ ಬಳಲಬಾರದೆಂದು,
ಗೋಳಿಟ್ಟು, ಬಗುಳಾಡಿ, ಅನ್ನ ಅಶನೋಪಜೀವಿ
ಶೇಷ ಭೋಗಂಗಳಿಗೆ ಕಕ್ಕುಳ ಕುದಿದು ಬಿಕ್ಕನೆ ಬಿರಿದು
ಮತ್ತೆ ಲಿಂಗಾಣತಿಯೆಂಬ ವೇಷಧಾರಿಗಳಿಗೆ
ಅಘೋರನರಕ ತಪ್ಪದು ಗುಹೇಶ್ವರಾ.
ವಚನ 1156
ಬಯಸುವ ಬಯಕೆ ನೀನಾದ ಪರಿಯೆಂತು ಹೇಳಾ ?
ಅರಸುವ ಅರ(ರಿ?)ಕೆ ನೀನಾದ ಪರಿಯೆಂತು ಹೇಳಾ ?
ಕಾಯವೆ ಲಿಂಗ ಪ್ರಾಣವೆ ಜಂಗಮವಾದ ಶರಣಂಗೆ
ಬೇರೆ ದೇವಾಲಯ ಮಾಡಿಸಲೇಕೆ ಹೇಳಾ ?
ಗುಹೇಶ್ವರಲಿಂಗವು ಸಾಧ್ಯವಾಯಿತ್ತೆಂಬುದ ಮಾತಿನಲ್ಲಿ ಕಂಡೆನಲ್ಲದೆ,
ಕಾರ್ಯದಲ್ಲಿ ಕಾಣೆ ನೋಡಾ ಸಿದ್ಧರಾಮಯ್ಯಾ.
ವಚನ 1157
ಬರಿಯ ನಚ್ಚಿನ ಮಚ್ಚಿನ ಭಕ್ತರು,
ಲಿಂಗವ ಮುಟ್ಟಿಯೂ ಮುಟ್ಟದ ಒಳಲೊಟ್ಟಿಗಳು,
ನೆರೆದು ಗಳಹುತ್ತಿಪ್ಪರು,
ತಮ ತಮಗೆ ಅನುಭಾವವ ನುಡಿವರು.
ಅನುಭಾವದ ಆಯತವನರಿಯದಿರ್ದರೆ ಹಿಂದಣ ಅನುಭಾವಿಗಳು?
ಗುಹೇಶ್ವರಲಿಂಗದ ಸುಖವನು ಮುಟ್ಟಿದರೆ,
ಮರಳಿ ಭವಕಲ್ಪಿತವೆಲ್ಲಿಯದೊ?
ವಚನ 1158
ಬಲ್ಲ ಹಿರಿಯರೆನಿಸಿಕೊಂಡು ಎಲ್ಲರನು ಕೂಡಿಕೊಂಡು
ಹಳ್ಳಿ ಹಿರಿಯರು ಪಟ್ಟಣದಲ್ಲಿ ತಿರಿದುಂಡು
ಅಲ್ಲದಾಟವನಾಡಿದಡೆ ತಮ್ಮ ಬಲ್ಲತನಕ್ಕೆ ಭಂಗವಾಯಿತ್ತು.
ಅಶನ, ವ್ಯಸನ, ಹಸಿವು, ತೃಷೆ, ನಿದ್ರೆ ಇಚ್ಛೆಗೆ
ಹರಿದಾಡುವರೆಲ್ಲ ಇನ್ನು ಬಲ್ಲರೆ ಹೇಳಿರೆ !
ಅನಂತ ಮೇಳಾಪದಚ್ಚಗೋಷ್ಠಿಯ
ಭಂಡರೆಲ್ಲ ಇನ್ನು ಬಲ್ಲರೆ, ಹೇಳಿರೆ !
ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರದಿಚ್ಛೆಗೆ
ಹರಿದಾಡುವ ಹಂದಿಗಳೆಲ್ಲ
ನಾಯನೊಡನಾಡಿದ ಕಂದನಂತಾಯಿತ್ತು ಗುಹೇಶ್ವರಾ.
ವಚನ 1159
ಬಲ್ಲತನವನೇರಿಸಿಕೊಂಡು ಅಲ್ಲದಾಟವನಾಡಿದಡೆ
ಬಲ್ಲತನಕ್ಕೆ ಭಂಗವಾಯಿತ್ತು.
ವ್ಯಸನದಿಚ್ಛೆಗೆ ಹರಿದಾಡುವವರು ಬಲ್ಲಡೆ ಹೇಳಿರೆ ?
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರದಿಚ್ಛೆಗೆ ಹರಿದು
ಹಂದಿಯೊಡನಾಡಿದ ಕಂದಿನಂತಾದರು.
ಇನ್ನು ಬಲ್ಲರೆ ಗುಹೇಶ್ವರಾ ಮಾಯಾಮುಖರು ನಿಮ್ಮನು ?
ವಚನ 1160
ಬಲ್ಲನಿತ ಬಲ್ಲರಲ್ಲದೆ, ಅರಿಯದುದನೆಂತು ಬಲ್ಲರಯ್ಯಾ ?
ಅರಿವು ಸಾಮಾನ್ಯವೆ ?
ಅರಿಯದುದನಾರಿಗೂ ಅರಿಯಬಾರದು
ಗುಹೇಶ್ವರನೆಂಬ ಲಿಂಗವನರಿಯದಡೆರಡು, ಅರಿದೊಡೊಂದೇ
ವಚನ 1161
ಬಲ್ಲೆನು, ಒಲ್ಲೆ ಮರ್ತ್ಯದ ಹಂಗ,
ಹಿಂದಣ ಮರವೆಯಿಂದ ಬಂದು ನೊಂದೆ, ಸಾಕು.
ಇನ್ನು ಅರಿದೆ, ತ್ರಿವಿಧಪಾಶವ ಹರಿದೆ.
ಗುಹೇಶ್ವರಾ, ಇನ್ನು ಮರ್ತ್ಯದ ಸುಖವ ಮನದಲ್ಲಿ ನೆನೆದೆನಾದಡೆ
ನಿಮ್ಮಾಣೆ ನಿಮ್ಮ ರಾಣಿವಾಸದಾಣೆಯಯ್ಯಾ.
ವಚನ 1162
ಬಸವಣ್ಣ ಎಂಬಲ್ಲಿ ಎನ್ನ ಕಾಯ ಬಯಲಾಯಿತ್ತು.
ಚನ್ನಬಸವಣ್ಣ ಎಂಬಲ್ಲಿ ಎನ್ನ ಪ್ರಾಣ ಬಯಲಾಯಿತ್ತು.
ಈ ಉಭಯಸ್ಥಲ ನಿರ್ಣಯದ ನಿಷ್ಪತ್ತಿ,
ಗುಹೇಶ್ವರಲಿಂಗ ಸಾಕ್ಷಿಯಾಗಿ ಚನ್ನಬಸವಣ್ಣನಿಂದ
ಸಾಧ್ಯವಾಯಿತ್ತು ಕಾಣಾ ಸಂಗನಬಸವಣ್ಣಾ.
ವಚನ 1163
ಬಸವಣ್ಣ ನಿನ್ನ ಹೊಗಳತೆ ಅಂತಿರಲಿ, ಎನ್ನ ಹೊಗಳತೆ ಅಂತಿರಲಿ,
ಗುರುವಾಗಬಹುದು ಲಿಂಗವಾಗಬಹುದು ಜಂಗಮವಾಗಬಹುದು,
ಇಂತೀ ತ್ರಿವಿಧವೂ ಆಗಬಹುದು.
ನಿನ್ನ ಆಚಾರಕ್ಕೆ ಪ್ರಾಣವಾಗಿ, ಎನ್ನ ಜ್ಞಾನಕ್ಕೆ ಆಚಾರವಾಗಿ
ಈ ಉಭಯ ಸಂಗದ ಸುಖದ ಪ್ರಸನ್ನಕ್ಕೆ
ಪರಿಣಾಮಿಯಾಗಿ ಬಂದ ಘನಮಹಿಮನು
ಗುಹೇಶ್ವರಲಿಂಗದಲ್ಲಿ ಚನ್ನಬಸವಣ್ಣನಾಗಬಾರದು ಕಾಣಾ
ಸಂಗನಬಸವಣ್ಣಾ.
ವಚನ 1164
ಬಸವಣ್ಣನ ಉಂಗುಷ್ಠದಲ್ಲಿ,
ಅಷ್ಟಾಷಷ್ಟಿ ತೀರ್ಥಂಗಳ ಉದಕವ ಮೀರಿದ
ಮಹಾತೀರ್ಥದೊಟ್ಟಿಲ ಕಂಡೆನಯ್ಯಾ !
ಬಸವಣ್ಣನ ಆಧಾರ ಲಿಂಗ ನಾಬಿ ಪರಿಯಂತರವು
ಗುರುಸ್ವರೂಪದೊಟ್ಟಿಲ ಕಂಡೆನಯ್ಯಾ.
ಬಸವಣ್ಣನ ನಾಬಿ ಹೃದಯ ಪರಿಯಂತರವು
ಲಿಂಗಸ್ವರೂಪದೊಟ್ಟಿಲ ಕಂಡೆನಯ್ಯಾ.
ಬಸವಣ್ಣನಗಳ ಮುಖ ಭ್ರೂಮಧ್ಯ ಉನ್ಮನಿ
ಉತ್ತಮಾಂಗ ಪರಿಯಂತರವು
ಜಂಗಮಸ್ವರೂಪದೊಟ್ಟಿಲ ಕಂಡೆನಯ್ಯಾ.
ಬಸವಣ್ಣನ ವಿಶ್ವತೋಮುಖವನುಳ್ಳ ಶರೀರದೊಳಗೆ,
ಈ ಪರಿಯ ಕಂಡಾತನೆ ಭಕ್ತ,
ಜಂಗಮವೆಂಬೆನು ಕಾಣಾ ಗುಹೇಶ್ವರಾ.
ವಚನ 1165
ಬಸವಣ್ಣನೆ ಪ್ರಾಣಲಿಂಗವೆಂದು ಭಾವಿಸಿ,
ದೃಷ್ಟಿನಟ್ಟು ಸೈವೆರಗಾದುದ ಕಂಡೆ-ಕಲ್ಪಿಸಿ
ಮನ ನಟ್ಟು ನಿಬ್ಬೆರಗಾಯಿತ್ತಯ್ಯಾ !
ಗುಹೇಶ್ವರಾ ನಿಮ್ಮಲ್ಲಿ, ಸರ್ವನಿರ್ವಾಣಿ
ಸಂಗನಬಸವಣ್ಣನೆ ಎನ್ನ ಪ್ರಾಣಲಿಂಗವೆಂದರಿದು
ನೀನೆನ್ನ ಒಳಕೊಂಡ ಗುರುವೆಂದು ಕಂಡೆನಯ್ಯಾ
ನಿಮ್ಮ ಧರ್ಮ ನಿಮ್ಮ ಧರ್ಮ
ವಚನ 1166
ಬಸವಣ್ಣಾ ನಿನಗೇಳು ಜನ್ಮ, ನನಗೆ ನಾಲ್ಕು ಜನ್ಮ,
ಚನ್ನಬಸವಣ್ಣಗೊಂದೆ ಜನ್ಮ.
ನೀನು ಗುರುವೆನಿಸಿಕೊಳಬೇಡ,
ನಾನು ಜಂಗಮವೆನಿಸಿಕೊಳಬೇಡ,
ನಾವಿಬ್ಬರು ಚೆನ್ನಬಸವಣ್ಣನ ಒಕ್ಕುಮಿಕ್ಕ ಪ್ರಸಾದವ ಕೊಳ್ಳದಡೆ
ನಮ್ಮ ಗುಹೇಶ್ವರ ಸಾಕ್ಷಿಯಾಗಿ
ಭವಂ ನಾಸ್ತಿಯಾಗದು ಕಾಣಾ ಸಂಗನಬಸವಣ್ಣಾ.
ವಚನ 1167
ಬಸವಣ್ಣಾ ನಿನ್ನ ಕಂಡು ಎನ್ನ ತನು ಬಯಲಾಯಿತ್ತು.
ಬಸವಣ್ಣಾ ನಿನ್ನ ಮುಟ್ಟಿ ಮುಟ್ಟಿ ಎನ್ನ ಕ್ರೀ ಬಯಲಾಯಿತ್ತು.
ಬಸವಣ್ಣಾ ನಿನ್ನ ನೆನೆ ನೆನೆದು ಎನ್ನ ಮನ ಬಯಲಾಯಿತ್ತು.
ಬಸವಣ್ಣಾ ನಿನ್ನ ಮಹಾನುಭಾವವ ಕೇಳಿ ಕೇಳಿ ಎನ್ನ ಭವಂ ನಾಸ್ತಿಯಾಯಿತ್ತು.
ನಮ್ಮ ಗುಹೇಶ್ವರಲಿಂಗದಲ್ಲಿ ನೀನು ಅಜಾತನೆಂಬುದ ನೆಲೆಮಾಡಿ
ಭವಪಾಶಂಗಳ ಹರಿದಿಪ್ಪೆಯಾಗಿ,
ನಿನ್ನ ಸಂಗದಿಂದಲಾನು ಬದುಕಿದೆನು !
ವಚನ 1168
ಬಸಿರೊಳಗಣ ಕೂಸಿಂಗ ಬೇರೆ ಊಟ ಬೇರೆ ಮೀಹ ಉಂಟೆ ?
ಜ್ಞಾನವೆಂಬ ಗರ್ಭದೊಳಗೆ ಲಿಂಗವೆಂಬ ಶಿಶುವಿರಲು
ಬೇರೆ ಕೊಡುವ ಕೊಂಬ ಪರಿಯೆಂತೊ ?
ದೇಹದೊಳಗಿನ ಪ್ರಾಣವ ಬೇರೆ ಮಾಡಿ ಭೋಗಿಸಲುಂಟೆ ?
ಅನುಮಾನ ಅಳಿದು ಮಹದಲ್ಲಿ ಮನ ಮುಸುಕಿದ ಬಳಿಕ
ಬಿನ್ನವ ಮಾಡಲುಂಟೆ ಗುಹೇಶ್ವರಾ ?
ವಚನ 1169
ಬಾಯೆ ಭಗವಾಗಿ ಕೈಯೆ ಇಂದ್ರಿಯವಾಗಿ
ಹಾಕುವ ತುತ್ತುಗಳೆಲ್ಲಾ ಬಿಂದು ಕಾಣಿರೊ !
ಪ್ರಥಮವಿಷಯವಿಂತಿರಲಿಕೆ, ಗುಹೇಶ್ವರ ಏಕೋ ಅದ್ವೈತ !
ವಚನ 1170
ಬಾರದುದೆಲ್ಲವನು ಹಿಂಗಿ, ಬಂದುದನೆಲ್ಲವನು ನುಂಗಿ,
ಆರಿಗೂ ಇಲ್ಲದ ಅವಸ್ಥೆ ಎನಗಾಯಿತ್ತಯ್ಯಾ.
ಆ ಅವಸ್ಥೆಯರತು, ನಾನು ನೀನೆಂದಿದ್ದೆ ಕಾಣಾ ಗುಹೇಶ್ವರಯ್ಯಾ.
ವಚನ 1171
ಬಿಂದುವೆ ಪೀಠವಾಗಿ, ನಾದವೇ ಲಿಂಗವಾದಡೆ
ಅದು ಬಿನ್ನಲಿಂಗ ನೋಡಾ.
ಕಳೆ ಎಂಬ ಪೂಜೆ ನಿರ್ಮಾಲ್ಯವಾಗಿ,
ನಾದಬಿಂದುಕಳಾತೀತ ನೋಡಾ ಮಹಾಘನವು.
ಅಲ್ಲಿ ಇಲ್ಲಿ ಸಿಲುಕಿದ ಅಚಲವಪ್ಪ ನಿರಾಳವ
ಪ್ರಣವರೂಪೆಂದು ಹೆಸರಿಡಬಹುದೆ ?
ನಮ್ಮ ಗುಹೇಶ್ವರನ ನಿಲುವು `ನಿಶ್ಯಬ್ದಂ ಬ್ರಹ್ಮ ಉಚ್ಯತೇ’
ಎಂಬುದನರಿಯಾ ಸಿದ್ಧರಾಮಯ್ಯಾ ?
ವಚನ 1172
ಬಿತ್ತದೆ ಬೆಳೆಯದೆ ತುಂಬಿದ ರಾಶಿಯ ಕಂಡಲ್ಲಿ
ಸುಖಿಯಾಗಿ ನಿಂದವರಾರೊ ?
ಇದ, ಹೇಳಲೂ ಬಾರದು ಕೇಳಲೂ ಬಾರದು.
ಗುಹೇಶ್ವರಾ ನಿಮ್ಮ ಶರಣನು,
ಲಚ್ಚಣವಳಿಯದೆ ರಾಶಿಯನಳೆದನು
ವಚನ 1173
ಬಿತ್ತಿ ಮೂರರ ಮೇಲೆ ಚಿತ್ರ ಬರೆಯಿತ್ತು;
ಪ್ರಥಮ ಬಿತ್ತಿಯ ಚಿತ್ರ ಚಿತ್ರದಂತೆ ಇದ್ದಿತ್ತು;
ಎರಡನೆಯ ಬಿತ್ತಿಯ ಚಿತ್ರ ಹೋಗುತ್ತ ಬರುತ್ತ ಇದ್ದಿತ್ತು,
ಮೂರನೆಯ ಬಿತ್ತಿಯ ಚಿತ್ರ ಹೋಯಿತ್ತು ಮರಳಿ ಬಾರದು.
ಗುಹೇಶ್ವರಾ-ನಿಮ್ಮ ಶರಣ ತ್ರಿವಿಧದಿಂದತ್ತತ್ತಲೆ !
ವಚನ 1174
ಬಿರುಗಾಳಿ ಬೀಸಿ ಮರ ಮುರಿವಂತಹ ಸುಳುಹ ಸುಳಿಯದೆ,
ತಂಗಾಳಿ ಪರಿಮಳದೊಡಗೂಡಿ ಸುಳಿವಂತೆ ಸುಳಿಯಬೇಕು.
ಸುಳಿದಡೆ ನೆಟ್ಟನೆ ಜಂಗಮವಾಗಿ ಸುಳಿಯಬೇಕು.
ನಿಂದಡೆ ನೆಟ್ಟನೆ ಭಕ್ತನಾಗಿ ನಿಲ್ಲಬೇಕು.
ಸುಳಿದು ಜಂಗಮವಾಗಲರಿಯದ, ನಿಂದು ಭಕ್ತನಾಗಲರಿಯದ
ಉಭಯಭ್ರಷ್ಟರನೇನೆಂಬೆ ಗುಹೇಶ್ವರಾ
ವಚನ 1175
ಬಿಸಿಲೆಂಬ ಗುರುವಿಂಗೆ ನೆಳಲೆಂಬ ಶಿಷ್ಯ.
ನಿರಾಳಲಿಂಗಕ್ಕೆ ಬಯಲೆ ಸೆಜ್ಜೆ, ವಾಯುವೆ ಶಿವದಾರ,
ಬೆಳಗೆ ಸಿಂಹಾಸನ.
ಅತ್ತಲಿತ್ತ ಚಿತ್ತವ ಹರಿಯಲೀಯದೆ,
ಮಜ್ಜನಕ್ಕೆರೆದು ಸುಖಿಯಾದೆ ಗುಹೇಶ್ವರಾ.
ವಚನ 1176
ಬಿಸುಜಂತೆ ಜವಳಿಗಂಭ !
ಲೇಸಾಯಿತ್ತು ಮನೆ, ಲೇಸಾಯಿತ್ತು ಮೇಲುವೊದಕೆ.
ಮಗುಳೆ ಆ ಲಿಂಗಕ್ಕೆ ಕಿಚ್ಚನಿಕ್ಕಿ ಸುಟ್ಟು,
ಮನೆಯನಿಂಬು ಮಾಡಿದ ಲಿಂಗಜಂಗಮಕ್ಕೆ.
ಹುಟ್ಟುಗೆಟ್ಟು ಬಟ್ಟಬಯಲಲ್ಲಿ ನಾನಿದೇನೆ ಗುಹೇಶ್ವರಾ.
ವಚನ 1177
ಬಿಳಿಯ ಮುಗಿಲ ನಡುವಣ ಕರಿಯನಕ್ಷತ್ರ ಮಧ್ಯದಲ್ಲಿ
ಉರಿಯ ಅಂಕುರ ಹುಟ್ಟಿ ಒಂದೆರಡೆಂಬಂತೆ ತೋರುತ್ತದೆ,
ಹೊಸ್ತಿಲ ಜ್ಯೋತಿಯಂತೆ ಒಳಹೊರಗೆ ಬೆಳಗುತ್ತದೆ.
ಅದು ನೋಡಿದಡೆ ಘನ, ನೋಡದಿದ್ದಡೆ ಸಹಜ.
ಈ ಭೇದವ ಗುಹೇಶ್ವರಲಿಂಗದಲ್ಲಿ ಚನ್ನಬಸವಣ್ಣ ಬಲ್ಲನು.
ಬೆಸಗೊಂಬ ಬಾರಾ ಸಿದ್ಧರಾಮಯ್ಯಾ.
ವಚನ 1178
ಬೀದಿಯಲ್ಲಿ ಬಿದ್ದ ಮಾಣಿಕ್ಯವು, ಹೂಳಿದ್ದ ನಿಧಾನವು,
ಆರಿಗೂ ಕಾಣಬಾರದು ನೋಡಾ !
ಮರಣ ಉಳ್ಳವರಿಗೆ ಮರುಜವಣಿ ಸಿಕ್ಕುವುದೆ ?
ಪಾಪಿಯ ಕಣ್ಣಿಂಗೆ ಪರುಷ ಕಲ್ಲಾಗಿಪ್ಪಂತೆ
ಇಪ್ಪರಯ್ಯಾ ಶಿವಶರಣರು.
ನಮ್ಮ ಗುಹೇಶ್ವರನ ಶರಣ ಮರುಳಶಂಕರದೇವರ
ನಿಲವ ನೋಡಾ ಸಂಗನಬಸವಣ್ಣಾ.
ವಚನ 1179
ಬೆಂಕಿ ಸುಡಬಲ್ಲಡೆ ಕಲ್ಲು ನೀರು ಮರಂಗಳಲ್ಲಡಗಬಲ್ಲುದೆ ?
ಅರಿವು ಶ್ರೇಷ್ಠವೆಂದಡೆ ಕುರುಹಿನಲ್ಲಡಗಿ
ಬೇರೊಂದೆಡೆಯುಂಟೆಂದು ನುಡಿವಾಗ ಅದೇತರಲ್ಲಿ ಒದಗಿದ ಅರಿವು ?
ಪಾಷಾಣದಲ್ಲಿ ಒದಗಿದ ಪ್ರಭೆಯಂತೆ,
ಆ ಪಾಷಾಣ ಒಡೆಯೆ ಆ ಪ್ರಭೆಗೆ ಕುರುಹುಂಟೆ ?
ಇಂತೀ ಲೇಸಪ್ಪ ಕುರುಹನರಿಯಬೇಕು ಕಾಣಾ,
ನಮ್ಮ ಗುಹೇಶ್ವರನುಳ್ಳನ್ನಕ್ಕ ಅಂಬಿಗರ ಚೌಡಯ್ಯ.
ವಚನ 1180
ಬೆಕ್ಕ ನುಂಗಿದ ಕೋಳಿ ಸತ್ತು ಕೂಗಿತ್ತ ಕಂಡೆ.
ಕರಿಯ ಕೋಗಿಲೆ ಬಂದು ರವಿಯ ನುಂಗಿತ್ತ ಕಂಡೆ.
(ಕರಿಯ ಕೋಗಿಲೆಯ ರವಿ ಬಂದು ನುಂಗಿತ್ತ ಕಂಡೆ ?).
ಸೆಜ್ಜೆ ಬೆಂದು ಶಿವದಾರ ಉಳಿಯಿತ್ತು.
ಪ್ರಾಣಲಿಂಗವೆಂಬ ಶಬ್ದ ವ್ರತಗೇಡಿಯಾಯಿತ್ತು
ನೀರ ಮೇಲಣ ಹೆಜ್ಜೆಯನಾರು ಬಲ್ಲವರಿಲ್ಲ.
ಗುಹೇಶ್ವರನೆಂಬ ಶಬ್ದ ಅಲ್ಲಿಯೂ ಇಲ್ಲ, ಇಲ್ಲಿಯೂ ಇಲ್ಲ.
ವಚನ 1181
ಬೆಟ್ಟಕ್ಕೆ ಚಳಿಯಾದೊಡೆ ಏನ ಹೊದಿಸುವರಯ್ಯಾ?
ಬಯಲು ಬತ್ತಲೆ ಇದ್ದಡೆ ಏನ ನುಡಿಸುವರಯ್ಯಾ?
ಭಕ್ತನು ಭವಿಯಾದಡೆ ಅದೇನನುಪಮಿಸುವೆನಯ್ಯಾ ಗುಹೇಶ್ವರಾ ?
ವಚನ 1182
ಬೆಣ್ಣೆಯ ಕಂದಲ ಕರಗಲಿಟ್ಟಡೆ
ಕಂದಲು ಕರಗಿತ್ತು ಬೆಣ್ಣೆ ಉಳಿಯಿತ್ತು !
ತುಂಬಿ ಇದ್ದಿತ್ತು ಪರಿಮಳವಿಲ್ಲ, ಪರಿಮಳವಿದ್ದಿತ್ತು ತುಂಬಿಯಿಲ್ಲ.
ತಾನಿದ್ದನು ತನ್ನ ಸ್ವರೂಪವಿಲ್ಲ; ಗುಹೇಶ್ವರನಿದ್ದನು ಲಿಂಗವಿಲ್ಲ
ವಚನ 1183
ಬೆಲ್ಲದ ಪುತ್ಥಳಿಯ ಕೈಯಲ್ಲಿ ಹಿಡಿದು
ಎಲ್ಲಿ ಚುಂಬಿಸಿದಡೂ ಇನಿದಹುದು.
ಒಳ್ಳಿಹ ಬೇವಿನ ಹಣ್ಣ ಮೆಲ್ಲನೆ ಚುಂಬಿಸಿದಡೆ ಇನಿದಹುದೆ?
ಎಲ್ಲ ವಿದ್ಯೆಯನೂ ಬಲ್ಲೆವೆಂದೆಂಬರು,
ಅವರು ಅ(ಸ?)ಲ್ಲದೆ ಹೋದರಯ್ಯಾ ಗುಹೇಶ್ವರಾ.
ವಚನ 1184
ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಬತ್ತವಿಲ್ಲದಿರ್ದಡೆ,
ಆ ಬೆವಸಾಯದ ಘೋರವೇತಕ್ಕಯ್ಯಾ ?
ಕ್ರಯವಿಕ್ರಯವ ಮಾಡಿ ಮನೆಯ ಸಂಚ ನಡೆಯದನ್ನಕ್ಕ
ಆ ಕ್ರಯವಿಕ್ರಯದ ಘೋರವೇತಕ್ಕಯ್ಯಾ ?
ಒಡೆಯನನೋಲೈಸಿ ತನುವಿಂಗೆ ಅಷ್ಟಭೋಗವ ಪಡೆಯದಿರ್ದಡೆ
ಆ ಓಲಗದ ಘೋರವೇತಕ್ಕಯ್ಯಾ ?
ಭಕ್ತನಾಗಿ ಭವಂ ನಾಸ್ತಿಯಾಗದಿರ್ದಡೆ;
ಆ ಉಪದೇಶವ ಕೊಟ್ಟ ಗುರು,
ಕೊಂಡ ಶಿಷ್ಯ,- ಇವರಿಬ್ಬರ ಮನೆಯಲ್ಲಿ ಮಾರಿ ಹೊಗಲಿ,
ಗುಹೇಶ್ವರನೆಂಬವನತ್ತಲೆ ಹೋಗಲಿ.
ವಚನ 1185
ಬೆಳಗಪ್ಪ ಜಾವದಲ್ಲಿ ಲಿಂಗವ ಮುಟ್ಟಿ ಪೂಜಿಸಿ
ಪ್ರಾತಃಕಾಲದಲ್ಲಿ ಜಂಗಮದ ಮುಖದ ನೋಡಿದಡೆ,
ಹುಟ್ಟಿದೇಳು ಜನ್ಮದ ಪಾಪ ಹಿಂಗುವುದು.
ಅದೆಂತೆಂದಡೆ:
`ಸೂಯರ್ೊದಯವೇಲಾಯಾಂ ಯಃ ಕರೋತಿ ಶಿವಾರ್ಚನಂ
ಋಣತ್ರಯವಿನಿಮರ್ುಕ್ತೋ ಯಸ್ಯಾಂತೇ ಬ್ರಹ್ಮ ತತ್ಪದಂ ‘-ಎಂದುದಾಗಿ
ಇಂತಪ್ಪ ಸತ್ಕ್ರೀ ಇಲ್ಲದವರನೊಲ್ಲ ನಮ್ಮ ಗುಹೇಶ್ವರ.
ವಚನ 1186
ಬೆಳಗಿನೊಳಗಣ ಬೆಳಗ ಕಡೆದಡೆ ಮರಳಿ ಕೂಡಿತ್ತಲ್ಲಾ !
ಮೇರುವನೆ ಬೋನವ ಮಾಡಿ ಸವಿದ ಭಕ್ತರ ನೋಡಾ !
ಅಡಗನಾರೋಗಣೆಯ ಮಾಡಿದ ಲಿಂಗವ
ಕೊಡಗೂಸು ನುಂಗಿತ್ತ ಕಂಡೆ ಗುಹೇಶ್ವರಾ.
ವಚನ 1187
ಬೆಳಗಿನೊಳಗಣ ರೂಪ ತಿಳಿದು, ನೋಡಿಯೆ ಕಳೆದು,
ಹಿಡಿಯದೆ ಹಿಡಿದುಕೊಳ್ಳಬಲ್ಲನಾಗಿ-ಆತ ಲಿಂಗಪ್ರಸಾದಿ !
ಜಾತಿ ಸೂತಕವಳಿದು ಶಂಕೆ ತಲೆದೋರದೆ,
ನಿಶ್ಶಂಕನಾಗಿ,- ಆತ ಸಮಯಪ್ರಸಾದಿ!
ಸಕಲ ಭ್ರಮೆಯನೆ ಜರೆದು, ಗುಹೇಶ್ವರಲಿಂಗದಲ್ಲಿ-
ಬಸವಣ್ಣನೊಬ್ಬನೆ [ಅಚ್ಚ]ಪ್ರಸಾದಿ !
ವಚನ 1188
ಬೆಳಗಿನೊಳಗೊಂದು ಬೆಳಗು ದೊರೆಕೊಂಡಡೆ
ಮತ್ತೊಂದು ಬೆಳಗು ಮತ್ತೆಲ್ಲಿಯದೊ ?
ಘನದೊಳಗೊಂದು ಘನವು ದೊರೆಕೊಂಡಡೆ
ಮತ್ತೊಂದು ಘನವು ಮತ್ತೆಲ್ಲಿಯದೊ ?
ಸಮೀಪನ ಮೇಲೆ ಸಮೀಪ ದಾಳಿವರಿದನು.
ಗುಹೇಶ್ವರನ ಶರಣ ಚನ್ನಬಸವಣ್ಣನು !
ವಚನ 1189
ಬೆಳಗು ಕತ್ತಲೆಯ ನುಂಗಿ, ಒಳಗೆ ತಾನೊಬ್ಬನೆಯಾಗಿ
ಕಾಬ ಕತ್ತಲೆಯ ಕಳೆದುಳಿದು
ನಿಮಗೆ ಆನು ಗುರಿಯಾದೆ ಗುಹೇಶ್ವರಾ.
ವಚನ 1190
ಬೆಳಗುವ ಜ್ಯೋತಿಯ ತಿರುಳಿನಂತೆ ಹೊಳೆವ ಕಂಗಳ ಕಾಂತಿ,
ಒಳಹೊರಗೆನ್ನದೆ ಅಳವಟ್ಟ ಶಿವಯೋಗಿಯ ಕಂಡೆ ನೋಡಾ !
ನಿಜ ಉಂಡ ನಿರ್ಮಲದ ಘನವ ಕಂಡು ಬೆರಗಾದೆ ನಾನು
ಗುಹೇಶ್ವರಲಿಂಗದಲ್ಲಿ ಚನ್ನಬಸವಣ್ಣನಿಂದ ಆನು ಬದುಕಿದೆನು.
ವಚನ 1191
ಬೇಡದ ಮುನ್ನವೆ ಮಾಡಬಲ್ಲಡೆ ಭಕ್ತಿ
ಬೇಡುವನೆ(ದೆ?) ಲಿಂಗಜಂಗಮವು?
ಬೇಡುವರಿಗೆಯೂ ಬೇಡಿಸಿಕೊಂಬವರಿಗೆಯೂ
ಪ್ರಸಾದವಿಲ್ಲ-ಗುಹೇಶ್ವರಾ.
ವಚನ 1192
ಬೇಡುವೆನೆ ದೇವೇಂದ್ರನ ಪದವಿಯನಿನ್ನು ?
ಮೂಡುವ ಸೂರ್ಯನ ಪ್ರಭೆಯಂತೆ ಓಡದಿರು.
ಓಡದಿರು ಎನ್ನ ಮುಂದೆ ಮಾಣಿಕ್ಯದ ಬೆಳಗಿನಂತೆ.
ನೋಡು, ಮಾತಾಡು.
ಕೃತಕದ ಪರಿಯ (ಪದವಿಯ?) ಬೇಡುವ,
ಲಿಂಗವೆನ್ನಲಿದ್ದುದೆ ಗುಹೇಶ್ವರಾ ?
ವಚನ 1193
ಬೇರಿಲ್ಲದ ಗಿಡುವಿಂಗೆ ಪರಿಮಳವಿಲ್ಲದ ಪುಷ್ಪ ಹುಟ್ಟಿ,
ರೂಹಿಲ್ಲದ ಅನಲನು ಅವಗ್ರಹಿಸಿತ್ತು ನೋಡಾ !
ವೃಕ್ಷವಿಲ್ಲದ ದಳದಲ್ಲಿ ಒಂದು ಪಕ್ಷಿ ಹುಟ್ಟಿತ್ತು ನೋಡಾ !
ಅತ್ತಲಿತ್ತಲು ಕಾಣದೆ ನೆತ್ತಿಯ ನಯನದಲ್ಲಿ ನೋಡಿತ್ತಲ್ಲಾ !
ನಿತ್ಯಾನಂದಪರಿಪೂರ್ಣದ ನಿಲವಿನ,
ಅಮೃತಬಿಂದುವಿನ ರಸವ ದಣಿಯುಂಡು,
ಪಶ್ಚಿಮದಲ್ಲಿ ಗುಹೇಶ್ವರಲಿಂಗವ ಸ್ವೀಕರಿಸಿತ್ತಲ್ಲಾ.
ವಚನ 1194
ಬೋನದೊಳಗೊಂದು ಆನೆ ಇದ್ದಿತ್ತು.
ಬೋನ ಬೆಂದಿತ್ತು ಆನೆ ಬದುಕಿತ್ತು-ಇದೇನು ಸೋಜಿಗವಯ್ಯಾ ?
ದೇವ ಸತ್ತ, ದೇವಿ ಕೆಟ್ಟಳು !
ಆನು ಬದುಕಿದೆನು ಗುಹೇಶ್ವರಾ.
ವಚನ 1195
ಬ್ರಹ್ಮ ಘನವೆಂದಡೆ ಬ್ರಹ್ಮನ ನುಂಗಿತ್ತು ಮಾಯೆ
ವಿಷ್ಣು ಘನವೆಂದಡೆ ವಿಷ್ಣುವ ನುಂಗಿತ್ತು ಮಾಯೆ
ರುದ್ರ ಘನವೆಂದಡೆ ರುದ್ರನ ನುಂಗಿತ್ತು ಮಾಯೆ
ತಾ ಘನವೆಂದಡೆ ತನ್ನ ನುಂಗಿತ್ತು ಮಾಯೆ
ಸರ್ವವೂ ನಿನ್ನ ಮಾಯೆ !
ಒಬ್ಬರನ್ನೊಳಕೊಂಡಿತ್ತೆ ಹೇಳಾ ಗುಹೇಶ್ವರಾ ?
ವಚನ 1196
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಪರಮೇಶ್ವರರೆಂಬ ಸಂದಣಿ
ತಲೆದೋರದ ಮುನ್ನ-ಅಲ್ಲಿಂದತ್ತ ಬಯಲೆ ಸ್ವರೂಪವಾಯಿತ್ತು.
ಆ ಸ್ವರೂಪಿನ ಘನತೆಯ ಉಪಮಿಸಬಾರದು.
ನೋಡಬಾರದ ಬೆಳಗು, ಕೂಡಬಾರದ ಮೂರ್ತಿ,
ಅಖಂಡ ಅಪ್ರತಿಮ ನಮ್ಮ ಗುಹೇಶ್ವರಲಿಂಗದ ಬೆಳ(ಬೆಡ?)ಗಿನ ಮೂಲವ
ಲಿಂಗಸಂಗಿಗಳಲ್ಲದೆ ಮಿಕ್ಕಿನ ಅಂಗವಿಕಾರಿಗಳೇನ ಬಲ್ಲರೊ ?
ವಚನ 1197
ಬ್ರಹ್ಮ ವಿಷ್ಣುವ ನುಂಗಿ, ವಿಷ್ಣು ಬ್ರಹ್ಮನ ನುಂಗಿ,
ಬ್ರಹ್ಮಾಂಡದೊಳಡಗಿ, ಶತಪತ್ರ ಸಹಸ್ರದಳಂಗಳ ಮೀರಿ
ಚಿತ್ರಗುಪ್ತರ ಕೈಯ ಪತ್ರವ ನಿಲಿಸಿತ್ತು
ಗುಹೇಶ್ವರನೆಂಬ ಲಿಂಗೈಕ್ಯನದ ನಿಲಫವು.
ವಚನ 1198
ಬ್ರಹ್ಮಂಗೆ ದೂರುವೆನೆ ? ಸರಸ್ವತಿಯ ವಿಕಾರ.
ವಿಷ್ಣುವಿಂಗೆ ದೂರುವೆನೆ ? ಲಕ್ಷ್ಮಿಯ ವಿಕಾರ.
ರುದ್ರಂಗೆ ದೂರುವೆನೆ ? ದೇವಿಯ ವಿಕಾರ.
ಇನ್ನಾರಿಗೆ ದೂರುವೆ ಕಾಮನ ಹುಯ್ಯಲ ?
ಎಲ್ಲರೂ ತಮ್ಮ ತಮ್ಮ ಅವಸ್ಥೆಯ ಕಳೆಯಲಾರರು.
ಪರದೈವವೆಂಬಂತೆ ನಾನು ಹೇಳಾ ಗುಹೇಶ್ವರಾ ?
ವಚನ 1199
ಬ್ರಹ್ಮಪಾಶ, ವಿಷ್ಣುಮಾಯೆ ಎಂಬ ಬಲೆಯ ಬೀಸಿ,
ಹೊನ್ನು ಹೆಣ್ಣು ಮಣ್ಣು ತೋರಿ, ಮುಕ್ಕಣ್ಣನಾಡಿದ ಬೇಂಟೆಯ.
ಆಸೆಯೆಂಬ ಕುಟುಕನಿಕ್ಕಿ, ಹೇಸದೆ ಕೊಂದೆಯಲ್ಲಾ ಗುಹೇಶ್ವರಾ.
ವಚನ 1200
ಬ್ರಹ್ಮವ ನುಡಿದಾನು ಭ್ರಮಿತನಾದೆನಯ್ಯಾ,
ಅದ್ವೈತವ ನುಡಿದಾನು ಅಹಂಕಾರಿಯಾದೆನಯ್ಯಾ,
ಶೂನ್ಯವ ನುಡಿದಾನು ಸುಖದುಃಖಕ್ಕೆ ಗುರಿಯಾದೆನಯ್ಯಾ,
ಸ್ಥಲಗೆಟ್ಟು ನುಡಿದಾನು ಸಂಸಾರಿಯಾದೆನಯ್ಯಾ,
ಗುಹೇಶ್ವರಾ, ನಿಮ್ಮ ಶರಣ ಸಂಗನಬಸವಣ್ಣನ
ಪ್ರಸಾದವ ಕೊಂಡು ಬದುಕಿದೆನಯ್ಯಾ.
ವಚನ 1201
ಬ್ರಹ್ಮವಿಷ್ಣುಗಳ ಮಾಯೆ ತೊತ್ತಳದುಳಿವಂದು,
ರುದ್ರಗಣ ಪ್ರಮಥಗಣಂಗಳೆಂಬವರ
ಮಾಯೆ ಮರುಳ್ಮಾಡಿ ಕಾಡುವಂದು,
ನೊಸಲ ಕಣ್ಣು ಪಂಚಮುಖ ದಶಭುಜದವರಿಗೆ
ಮಾಯೆ ಅಧರ್ಾಂಗಿಯಾದಂದು,
ದೇವದಾನವರ ಮಾಯೆ ಅಗಿದಗಿದು ತಿಂಬಂದು,
ಅಷ್ಟಾಶೀತಿಸಹಸ್ರ ಋಷಿಗಳ
ಮಾಯೆ, ತಪೋಮದದಲ್ಲಿ ಕೆಡಹುವಂದು
ನಾನು ಮಾಯಾಕೊಲಾಹಲ (ನಿರ್ಮಾಯನೆಂಬ ಗಣೇಶ್ವರ?)ನಾಗಿರ್ದೆ
ಕಾಣಾ ಗುಹೇಶ್ವರಾ.
ವಚನ 1202
ಭಕ್ತ ಜಂಗಮದ ಷಟ್ಸ್ಥಲದ,
ಸಕೀಲ ಸಂಬಂಧವನಾರು ಬಲ್ಲರು ಹೇಳಾ
ಅದೇನು ಕಾರಣವೆಂದಡೆ:
ಹಸಿವುಳ್ಳವ ಭಕ್ತನಲ್ಲ
ವಿಷಯವುಳ್ಳವ ಮಹೇಶ್ವರನಲ್ಲ
ಆಸೆಯುಳ್ಳವ ಪ್ರಸಾದಿಯಲ್ಲ
ಜೀವಗುಣವುಳ್ಳವ ಪ್ರಾಣಲಿಂಗಿಯಲ್ಲ
ತನುಗುಣವುಳ್ಳವ ಶರಣನಲ್ಲ
ಜನನ-ಮರಣವುಳ್ಳವ ಐಕ್ಯನಲ್ಲ
ಈ ಆರರ ಅರಿವಿನ ಅರ್ಥದ, ಸಂಪತ್ತಿನ
ಭೋಗ ಹಿಂಗಿದರೆ, ಸ್ವಯಂ ಜಾತನೆಂಬೆ
ಆ ದೇಹ ನಿಜದೇಹವೆಂಬೆ
ಆ ದೇಹ ಗುರುಗುಹೇಶ್ವರನೆಂಬೆ.
ವಚನ 1203
ಭಕ್ತ ಭಕ್ತನೆಂದೇನು ? ಭವಿಗಳ ಮನೆಯಲುಳ್ಳನ್ನಬರ ಭಕ್ತನೆ ?
ಭಕ್ತ ಭಕ್ತನೆಂದೇನು ? ಜಾತಿ ವರ್ಣಾಶ್ರಮ ಕುಲ ಗೋತ್ರ ನಾಮ ಸೀಮೆಯೆಂಬ
ಷಡುಭ್ರಮೆ ಕಣ್ಣಲ್ಲಿ ಕವಿದು ಓಲಾಡುವನ್ನಬರ ಭಕ್ತನೆ ?
ಭಕ್ತ ಭಕ್ತನೆಂದೇನು ? ಪಂಚಸೂತಕವುಳ್ಳನ್ನಬರ ಭಕ್ತನೆ ?
ಭಕ್ತ ಭಕ್ತನೆಂದೇನು ? ತನುವಂಚಕ, ಮನವಂಚಕ ಧನವಂಚಕ ಭಕ್ತನೆ ?
ಅಲ್ಲಲ್ಲ ನಿಲ್ಲು ಮಾಣು,-
ಇವರು ಸಾವಿಂಗೆ ಸಂಬಳಗುಂಡನಿರಿದು ಕೊಂಬವರು,
ಭಕ್ತರಪ್ಪರೆ ಗುಹೇಶ್ವರಾ ?
ವಚನ 1204
ಭಕ್ತ ಭಕ್ತನೆಂಬರು,
ಪೃಥ್ವಿಯ ಪೂರ್ವಾಶ್ರಯವ ಕಳೆಯನಲರಿಯಫದನ್ನಕ್ಕ,
ಅಪ್ಪುವಿನ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ,
ತೇಜದ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ,
ವಾಯುವಿನ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ,
ಆಕಾಶದ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ,
ಸೋಮಸೂರ್ಯರ ಕಳೆಗಳ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ,
ಆತ್ಮನ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ,-
ಭಕ್ತರೆಂದು ಲಿಂಗವ ಪೂಜಿಸುವವರ ಕಂಡು
ನಾನು ಬೆರಗಾದೆ ಗುಹೇಶ್ವರಾ.
ವಚನ 1205
ಭಕ್ತ ಮಾಡಿಹನೆಂಬಿರಿ, ಭಕ್ತ ಮಾಡಿಹನೆಂಬಿರಿ;-
ಭಕ್ತ ಮಾಡಿಹನೆಂದು ಗೆಗ್ಗೆವಾಯ್ದುಕೊಳ್ಳಲಾಗದು.
ಅದೇಕೆಂದಡೆ:
ಭಕ್ತನು ಅಸ್ತಿ ನಾಸ್ತಿ ಅರಿಯದನ್ನಕ್ಕ, ಉಂಟು ಇಲ್ಲವೆಂದು ತಿಳಿಯದನ್ನಕ್ಕ
ಮಾಡಿತ್ತೇ ಗೆಲ್ಲ ಎಂದುಕೊಂಡಡೆ ಆ ಸುಳುಹಿಂಗೆ ಭಂಗ.
ತೂಳವೆತ್ತಿದಾತನು ಇರಿದುಕೊಂಬುದು,
ಭೂತದ ಗುಣವಲ್ಲದೆ ವೀರದ ಗುಣವಲ್ಲ.
ಸ್ವೇಚ್ಛಾತುರದ ಮಾಟವೊ ? ಮುಕ್ತ್ಯಾತುರದ ಮಾಟವೊ ?
ರಿಣಾತುರದ ಮಾಟವೊ ?-ಎಂಬುದ ತಿಳಿಯಬೇಕಲ್ಲದೆ
ಕೊಂಡುದೆ ಕೋಳಾಗಿ ಹೋಹನ್ನಕ್ಕರ ಜಂಗಮಲಕ್ಷಣವಲ್ಲ.
ತುಂಬಿದ ಬಂಡಿಯ ಹಾರವನರಿದು ನಡೆಸುವನ
ಜಾಣಿಕೆಯಂತಿರಬೇಡಾ ಲಿಂಗಜಾಣರು ?
ಸ್ವೇಚ್ಛಾತುರವನಾಚರಿಸುವ ಜಂಗಮಕ್ಕೆ ಭವಂ ನಾಸ್ತಿ
ಮುಕ್ತ್ಯಾತುರವನಾಚರಿಸುವ ಜಂಗಮಕ್ಕೆ ಭವ ಹಿಂಗದು.
ರಿಣಾತುರವನಾಚರಿಸುವ ಜಂಗಮಕ್ಕೆ ಯಮದಂಡನೆ.
ಹರಿದು ಬರಲಿ ಕಿತ್ತು ಬರಲಿ ಅವನೇನಾದರೂ ಆಗಲಿ
ನಾನು ತೆಕ್ಕೊಂಡು ಹೋದೆನೆಂಬನ್ನಕ್ಕರ ಜಂಗಮಲಕ್ಷಣವಲ್ಲ,-
ಜಂಗಮ ಕರುಣರಸಭರಿತನಾಗಿ,
ಭಕ್ತನಲ್ಲಿ ಜಂಗಮದಲ್ಲಿ ಭಾವಭೇದವಿಲ್ಲಾಗಿ.
ಇಂತೀ ಕ್ರಮಾದಿಕ್ರಮಂಗಳನರಿದು ಸುಳಿಯದಿದ್ದಡೆ
ನಿರ್ವಯಲಸ್ಥಲಕ್ಕೆ ದೂರ ಕಾಣಾ ಗುಹೇಶ್ವರಾ.
ವಚನ 1206
ಭಕ್ತ, ಪ್ರಸಾದವ ಕೊಂಡು ಪ್ರಸಾದವಾದ
ಪ್ರಸಾದ, ಭಕ್ತನ ನುಂಗಿ ಭಕ್ತನಾಯಿತ್ತು.
ಭಕ್ತನೂ ಪ್ರಸಾದವು ಏಕಾರ್ಥವಾಗಿ-ಲಿಂಗಸಂಗವ ಮರೆದು,
ಭಕ್ತನೆ ಭವಿಯಾದ, ಪ್ರಸಾದವೆ ಓಗರವಾಯಿತ್ತು.
ಮತ್ತೆ ಆ ಓಗರವೆ ಭವಿ, ಭವಿಯೆ ಓಗರವಾಯಿತ್ತು.
ಓಗರ ಭವಿ ಎಂಬೆರಡೂ ಇಲ್ಲದೆ
ಓಗರವೆ ಆಯಿತ್ತು ಗುಹೇಶ್ವರಾ.
ವಚನ 1207
ಭಕ್ತಂಗೆ ಉತ್ಪತ್ಯ(ತ್ತಿ?) ವಿಲ್ಲಾಗಿ, ಸ್ಥಿತಿಯಿಲ್ಲ.
ಸ್ಥಿತಿಯಿಲ್ಲಾಗಿ ಲಯವಿಲ್ಲ.-ಮುನ್ನ ಎಲ್ಲಿಂದ ಬಂದನಲ್ಲಿಗೆ ಹೋಗಿ,
ನಿತ್ಯನಾಗಿರ್ಪ ಗುಹೇಶ್ವರಾ ನಿಮ್ಮ ಶರಣ.
ವಚನ 1208
ಭಕ್ತ-ಜಂಗಮದ ಸಕೀಲಸಂಬಂಧವನು ಆರು ಬಲ್ಲರು ಹೇಳಾ ?
ಅರ್ಥವನೊಪ್ಪಿಸಿದಾತ ಭಕ್ತನಲ್ಲ, ಪ್ರಾಣವನೊಪ್ಪಿಸಿದಾತ ಭಕ್ತನಲ್ಲ,
ಅಬಿಮಾನವನೊಪ್ಪಿಸಿದಾತ ಭಕ್ತನಲ್ಲ.
ಅದೇನು ಕಾರಣವೆಂದಡೆ-ಸತ್ಯಸದಾಚಾರಕ್ಕೆ ಸಲ್ಲನಾಗಿ.
ಆ ಭಕ್ತನ ಮನೆಯ ಹೊಕ್ಕು-ಪಾದಾರ್ಚನೆಯ ಮಾಡಿಸಿಕೊಂಡು
ಒಡಲ ಕುಕ್ಕಲತೆಗೆ ಅಶನವನುಂಡು, ವ್ಯಸನದ ಕಕ್ಕುಲತೆಗೆ ಹಣವ ಬೇಡಿ,
ಕೊಟ್ಟಡೆ ಕೊಂಡಾಡಿ ಕೊಡದಿರ್ದಡೆ ದೂರಿಕೊಂಡು ಹೋಹಾತ ಜಂಗಮವಲ್ಲ.
ಆದಿ ಅನಾದಿಯಿಂದಲತ್ತತ್ತ ಮುನ್ನಲಾದ, ಮಹಾಘನವ ಭೇದಿಸಿ ಕಂಡು ಅರಿದು
ಕಾಯದ ಜೀವದ ಹೊಲಿಗೆಯ ಬಿಚ್ಚಿ ಬೀಸಾಡಿ, ತನ್ನನೆ ಅರ್ಪಿಸಿ ಇರಬಲ್ಲಾತ ಭಕ್ತ.
ಸುಳುಹಿನ ಸೂತಕ ಮೈದೋರದೆ, ಒಡಲ ಕಳವಳದ ರುಚಿಗೆ ಹಾರೈಸದೆ,
ಅರಿವೆ ಅಂಗವಾಗಿ ಆಪ್ಯಾಯನವೆ ಭಕ್ತಿಯಾಗಿ, ಕಿಂಕುರ್ವಾಣವೆಂಬ ಶಿವಮಂತ್ರಕ್ಕೆ
ನಮೋ ನಮೋ ಎನಬಲ್ಲಡೆ ಆತ ಜಂಗಮ.
ಆ ಜಂಗಮದ ಆ ಭಕ್ತನ ಸಮ್ಮೇಳವೆ ಸಮ್ಮೇಳ.
ಮಿಕ್ಕಿನ ಅರೆಭಕ್ತರ ಒಡತಣ ಸಂಗ
ನಮ್ಮ ಗುಹೇಶ್ವರಲಿಂಗಕ್ಕೆ ಸೊಗಸದು.
ವಚನ 1209
ಭಕ್ತನಾದಿನವಾಗಿ ಭಕ್ತಿಯ ಬೇಡ ಬಂದವನಲ್ಲ.
ಮುಕ್ತಿಯಾದಿನವಾಗಿ ಮುಕ್ತಿಯ ಬೇಡಬಂದವನಲ್ಲ.
ಅಶನಾತುರನಾಗಿ ವಿಷಯವ ಬಯಸಿ ಬಂದವನಲ್ಲ.
ಗುಹೇಶ್ವರನ ಶರಣ ಸಂಗನಬಸವಣ್ಣ
ಮಾಡುವ ಭಕ್ತನಲ್ಲಾಗಿ, ನಾನು ಬೇಡುವ ಜಂಗಮವಲ್ಲ, ಕಾಣಾ,
ಚೆನ್ನಬಸವಣ್ಣಾ.
ವಚನ 1210
ಭಕ್ತನಿದರಠಾವಿಂಗೆ ಕರ್ತ ಬಂದಡೆ.
ಅತ್ತಿತ್ತ ಹರಿಯದೆ ನಂಬಬೇಕು ನೋಡಾ.
ಕರ್ತನ ಕಂಡು ಭೃತ್ಯ ಉರಿಯನುಗುಳಿದಡೆ
ಬಳಿಕ ಈ ಕರ್ತನ [ಭೃತ್ಯ] ಭಾವಕ್ಕೆ ಸಂಬಂಧವೇನು ?
ತಪ್ಪಿ ತಪ್ಪಿ ತಿದ್ದಿಕೊಂಡೆಹೆನೆಂದಡೆ ಹಸನಾಗಬಲ್ಲುದೆ ?
ಗುಹೇಶ್ವರನ ಶರಣನಾರೆಂಬುದನು ನೀನೆತ್ತ ಬಲ್ಲೆ ? ಹೋಗಾ,
ಮರುಳ ಸಿದ್ಧರಾಮಯ್ಯಾ.
ವಚನ 1211
ಭಕ್ತನೆಂದಲ್ಲಿ ದೃಷ್ಟವಾಯಿತ್ತು; ಐಕ್ಯನೆಂದಲ್ಲಿ ನಷ್ಟವಾಯಿತ್ತು.
ಈ ನಷ್ಟ ದೃಷ್ಟವನೊಳಗೊಂಡು ಅದೃಶ್ಯವಾಗಿಪ್ಪ
ಅಖಂಡಗುಹೇಶ್ವರನ ನಿಲವ ಉಪಮಿಸಬಾರದೆ
ನಿಶ್ಶಬ್ದಿಯಾದೆನು.
ವಚನ 1212
ಭಕ್ತನೆಂಬವ ಸೂತಕಿ, ಲಿಂಗೈಕ್ಯನೆಂಬವ ವ್ರತಗೇಡಿ.
ಶರಣಸತಿ ಲಿಂಗಪತಿ ಎಂಬ ಶಬ್ದ ಸರ್ವಗುಣಸಾಹಿತ್ಯ ಎಂಬಾತ
ಕಮರ್ೆಂದ್ರಿಯ ಭೋಗಕ್ಕೆ ಬಾರದ ಭೋಗಿ,
ಗುಹೇಶ್ವರಾ ನಿಮ್ಮ ಶರಣ,
ಆವ ಬಿತನೂ ಅಲ್ಲ ಆವ ಕರ್ಮಿಯೂ ಅಲ್ಲ.
ವಚನ 1213
ಭಕ್ತರೆಲ್ಲರೂ ಲಂದಣಿಗರಾಗಿ ಹೋಯಿತ್ತು.
ಜಂಗಮಗಳೆಲ್ಲರೂ (ಜಂಗಮವೆಲ್ಲ?)
ಉಪಜೀವಿಗಳಾಗಿ, ಹೋದರು (ಹೋಯಿತ್ತು?).
ಇದೇನೊ? ಇದೆಂತೊ? ಅರಿಯಲೆ ಬಾರದು.
ಕಾಯಗುಣ ನಾಸ್ತಿಯಾದಾತ ಭಕ್ತ,
ಪ್ರಾಣಗುಣ ನಾಸ್ತಿಯಾದಾತ ಜಂಗಮ,
ಉಳಿದವೆಲ್ಲವ ಸಟೆಯೆಂಬೆ ಗುಹೇಶ್ವರಾ
ವಚನ 1214
ಭಕ್ತಿಭಾವದ ಭಜನೆ ಎಂತಿದ್ದುದಂತೆ ಅಂತರಂಗದಲ್ಲಿ ಅರಿವು,
ಆ ಅಂತರಂಗದಲ್ಲಿ ಅರಿವಿಂಗೆ ಆಚಾರವೆ ಕಾಯ,
ಆ ಆಚಾರಕಾಯವಿಲ್ಲದೆ ಅರಿವಿಂಗಾಶ್ರಯವಿಲ್ಲ.
ಅರಿವು ಆಚಾರದಲ್ಲಿ ಸಮವೇದಿಸಿದ ಲಿಂಗೈಕ್ಯ,
ಕ್ರಿಯಾಬದ್ಧನೆಂದು ನುಡಿದಡೆ ಪಂಚಮಹಾಪಾತಕ.
ನಿನ್ನ ಅರಿವಿಂಗಚ್ಚಾಗಿ ಆಚಾರಕ್ಕೆ ಆಳಾಗಿ
ನಮ್ಮ ಗುಹೇಶ್ವರಲಿಂಗ ನಿನ್ನ ಕೈವಶಕ್ಕೊಳಗಾದನು.
ನಿನ್ನ ಸುಖಸಮಾದಿಯ ತೋರು ಬಾರಾ ಸಿದ್ಧರಾಮಯ್ಯಾ.
ವಚನ 1215
ಭಕ್ತಿಯೆ ಓಗರವಾಗಿ, ಸತ್ಯವೆ ಮೇಲೋಗರವಾಗಿ
ನಿಜತತ್ವವೆ ಸವಿಯಾಗಿ-
ಗುಹೇಶ್ವರಲಿಂಗಕ್ಕೆ ಇಕ್ಕಬಲ್ಲವ
ಸಂಗನಬಸವಣ್ಣನಲ್ಲದಿಲ್ಲ.
ವಚನ 1216
ಭಕ್ತಿಯೆಂಬ ಸಮಾಧಾನ ಬಸವಣ್ಣನಿಂದ ಎನಗಾಯಿತ್ತು.
ಪ್ರಸಾದವೆಂಬ ಪರಿಣಾಮ ಮರುಳುಶಂಕರದೇವರಿಂದ ಎನಗಾಯಿತ್ತು.
ಏಕೋಭಾವದ ನಿಷ್ಠೆ ಸಿದ್ಧರಾಮಯ್ಯದೇವರಿಂದ ಎನಗಾಯಿತ್ತು.
ಸರ್ವಜೀವ ಪರಿಪೂರ್ಣಕಳೆ ಚನ್ನಬಸವಣ್ಣನಿಂದ ಎನಗಾಯಿತ್ತು.
ಆದ (ಅದರ?) ನಿಜದ ನೆಲೆ ಗುಹೇಶ್ವರಲಿಂಗವೆಂಬ ನಾಮವಾಯಿತ್ತು.
ವಚನ 1217
ಭಕ್ತಿಯೆಂಬುದು ಯುಕ್ತಿಯೊಳಗು, ಪೂಜೆಯೆಂಬುದು ನಿರ್ಮಾಲ್ಯದೊಳಗು.
ಪ್ರಸಾದವೆಂಬುದು ಓಗರದೊಳಗು, ಆಚಾರವೆಂಬುದು ಅನಾಚಾರದೊಳಗು.
ಧರ್ಮವೆಂಬುದು ಅಧರ್ಮದೊಳಗು, ಸುಖವೆಂಬುದು ದುಃಖದೊಳಗು.
ವ್ರತವೆಂಬುದು ವೈರಾಗ್ಯದೊಳಗು, ನೇಮವೆಂಬುದು ಉದ್ದೇಶದೊಳಗು.
ಅಹಿಂಸೆಯೆಂಬುದು ಹಿಂಸೆಯೊಳಗು!-ಇವಾವಂಗವೂ ಇಲ್ಲದೆ
ಗುಹೇಶ್ವರಾ ನಿಮ್ಮ ಶರಣ ಸುಖಿಯಾಗಿರ್ದನು!
ವಚನ 1218
ಭರಿತಭೋಜನ ಭರಿತಭೋಜನ ಎಂದು,
ಭ್ರಮೆಗೊಂಡಿತ್ತು ಲೋಕವೆಲ್ಲ.
ಭರಿತಭೋಜನವೆ ದಿಟವಾದಡೆ ಮತ್ರ್ಯದಲ್ಲಿ ಸುಳಿಯಲುಂಟೆ ?
ಚತುರ್ವಿಧ ಅರ್ಪಿತದೊಳಗೆ, ಆವುದು ಭರಿತ ಎಂಬುದನರಿಯರಾಗಿ,
ಗುಹೇಶ್ವರಲಿಂಗದಲ್ಲಿ ಭರಿತಭೋಜನದ ಅನು,
ಚನ್ನಬಸವಣ್ಣಂಗಾಯಿತ್ತು !
ವಚನ 1219
ಭವವಿರಹಿತಂಗೆ ಭಕ್ತಿಯ ಮಾಡುವರು ನೀವು ಕೇಳಿರಣ್ಣಾ,
ಭವದ ಬಾಧೆಯೊಳಗೆ ನೀವಿದ್ದು ಅಭವಭಕ್ತಿಯ ಮಾಡುವ ಪರಿಯಂತೊ ?
ತಾನಭವನಾದಲ್ಲದೆ ಸಹಜಭಕ್ತಿಯ ಮಾಡಬಾರದು ಗುಹೇಶ್ವರಾ.
ವಚನ 1220
ಭವವುಳ್ಳನ್ನಕ್ಕ ಧಾವತಿ ಮಾಣದು, ಶರೀರವುಳ್ಳನ್ನಕ್ಕ ಅವಸ್ಥೆ ಮಾಣದು.
ಗುಹೇಶ್ವರನೆಂಬ [ನೆನಹು]ಉಳ್ಳನ್ನಕ್ಕ, ಲಿಂಗವೆಂಬುದ ಬಿಡಲಾಗದು.
ವಚನ 1221
ಭವವೆತ್ತಿ ಶಿರ ಕಳಕೊಂಡ.
ಇಂದ್ರನ ಮೈ ಕೆಟ್ಟಿತ್ತು, ಚಂದ್ರ ಕ್ಷಯ ರೋಗಿಯಾದ.
ದಿವಸೇಂದ್ರ ಕಿರಣ ನಷ್ಟವಾದ.
ಮುನೀಂದ್ರರ್ನಷ್ಟವಾಗಿ ಮಡಿದರು.
ಮನು ಮಾಂಧಾತರು ಮಂದಮತಿಗಳಾದರು.
ದೇವ ದಾನವ ಮಾನವರು ಮಡಿದರು.
ಇದ ನೋಡಿ ನಮ್ಮ ಶರಣರು,
ವಿಷಯಗಾಳಿ ತಮ್ಮ ಸೋಕೀತೆಂದು ಶಾಂಭವಪುರದಲ್ಲಿಯೆ ನಿಂದು,
ನಿರ್ವಿಷಯಾಸ್ತ್ರದಲ್ಲಿ ವಿಷಯಗಾಳಿಯ ಛೇದಿಸಿ ಜಯಿಸಿ
ಅಕ್ಷಯ ಸುಖಿಗಳಾದರು ನೋಡಾ ಗುಹೇಶ್ವರಲಿಂಗದಲ್ಲಿ.
ವಚನ 1222
ಭವಿಬೀಜವೃಕ್ಷದ ಫಲದೊಳಗೆ, ಭಕ್ತಿಬೀಜವೃಕ್ಷ ಪಲ್ಲವಿಸಿತ್ತು !
ಭಕ್ತಿಬೀಜವೃಕ್ಷದ ಫಲದೊಳಗೆ, ಶರಣಬೀಜವೃಕ್ಷ ಪಲ್ಲವಿಸಿತ್ತು !
ಶರಣಬೀಜವೃಕ್ಷದ ಫಲದೊಳಗೆ;
ಕುಲನಾಶಕನಾದ ಶರಣ ಒಂದೆ ಬಸುರಲ್ಲಿ ಬಂದ-
ಬಂದು, ಬಳಗಕ್ಕೆ ತನ್ನ ಕುಲಕ್ಕೆ ತಾನೆ ಮಾರಿಯಾದ ಶರಣ.
ಭವಿಭಕ್ತ ಭವಿಬೀಜವೃಕ್ಷದ ತಂಪು ನೆಳಲ ಬಿಟ್ಟು,
ಕುಳ್ಳಿರ್ದಲ್ಲಿಯೆ; ಬಳಿ ಬಳಿಯೆ ಬಯಲಾದ ಶರಣ !
[ನಾದ]ಬಿಂದು ಬೀಜವಟ್ಟ ಹಾಳಾಗಿ ಹಾರಿಹೋದಲ್ಲಿ; ಇನ್ನೇನ ಹೇಳಲುಂಟು ?
ಗುಹೇಶ್ವರನೆಂಬ ಲಿಂಗವನರಿದು ಭವಿಗೆ ಭವಿಯಾದಾತಂಗೆ
ಇನ್ನೇನು ಪಥ (ಪದ?)ವುಂಟಯ್ಯಾ ?
ವಚನ 1223
ಭವಿಯ ಕಳೆದೆವೆಂಬ ಮರುಳು ಜನಂಗಳು ನೀವು ಕೇಳಿರೆ;
ಭವಿಯಲ್ಲವೆ ನಿಮ್ಮ ತನುಗುಣಾದಿಗಳು ?
ಭವಿಯಲ್ಲವೆ ನಿಮ್ಮ ಮನಗುಣಾದಿಗಳು ?
ಭವಿಯಲ್ಲವೆ ನಿಮ್ಮ ಪ್ರಾಣಗುಣಾದಿಗಳು ?
ಇವರೆಲ್ಲರೂ ಭವಿಯ ಹಿಡಿದು ಭವಭಾರಿಗಳಾದರು.
ನಾನು ಭವಿಯ ಪೂಜಿಸಿ ಭವಂನಾಸ್ತಿಯಾದೆನು ಗುಹೇಶ್ವರಾ.
ವಚನ 1224
ಭವಿಯ ಕಳೆದೆಹೆವೆಂಬ ಅಪ್ರಮಾಣಿಗಳು ನೀವು ಕೇಳಿರೆ,
ಭವಿಯ ಕಳೆದೆಹೆವೆಂಬ ಭವಭಾರಿಗಳು ನೀವು ಕೇಳಿರೆ;
ಭವಿಗೆ ಕೊಡಲಾಗದೆಂಬ ಭಕ್ತನ ನುಡಿಯ ಕೇಳಲಾಗದು.
ನಾನು ಭವಿವಿಡಿದು ಭಕ್ತಿಯಿಂದ ಸುಖಿಯಾದೆ ಗುಹೇಶ್ವರಾ
ವಚನ 1225
ಭವಿಯ ತಂದು ಭಕ್ತನ ಮಾಡಿ, ಪೂರ್ವಾಶ್ರಯವ ಕಳೆದ ಬಳಿಕ,
ಮರಳಿ ಪೂರ್ವಾಶ್ರಯವನೆತ್ತಿ ನುಡಿವ, ಗುರುದ್ರೋಹಿಯ ಮಾತ ಕೇಳಲಾಗದು.
ಹೆಸರಿಲ್ಲದ ಲಿಂಗಕ್ಕೆ ಹೆಸರಿಡುವ ಲಿಂಗದ್ರೋಹಿಯ ಮಾತ ಕೇಳಲಾಗದು.
ಪೂರ್ವದಲ್ಲಿ ನಾಮವಿಲ್ಲದ ಗುರು, ಹೆಸರಿಲ್ಲದ ಲಿಂಗ, ಹೆಸರಿಲ್ಲದ ಶಿಷ್ಯ-
ಈ ತ್ರಿವಿಧಸ್ಥಲವನರಿಯದೆ ಕೆಟ್ಟರು ಗುಹೇಶ್ವರಾ.
ವಚನ 1226
ಭವಿಯೆಂಬುದು ಹುಸಿ, ಭಕ್ತಿಯೆಂಬುದು ಉಪದೇಶ.
ಶೀಲವೆಂಬುದು ಸಂಕಲ್ಪ, ಸಮತೆಯೆಂಬುದು ಸೂತಕ.-
ಇಂತೀ ಚತುರ್ವಿಧದೊಳಗಿಲ್ಲ,
ಗುಹೇಶ್ವರಾ ನಿಮ್ಮ ಶರಣ ನಿಸ್ಸೀಮ!
ವಚನ 1227
ಭಸ್ಮವ ಹೂಸಿ ಬತ್ತಲೆಯಿದ್ದಡೇನು ಬ್ರಹ್ಮಚಾರಿಯೇ ?
ಅಶನವನುಂಡು ವ್ಯಸನವ ಮರೆದಡೇನು ಬ್ರಹ್ಮಚಾರಿಯೆ ?
ಭಾವ ಬತ್ತಲೆಯಿರ್ದು ಮನ ದಿಗಂಬರವಾಗಿರ್ದಡೆ
ಅದು ಸಹಜನಿರ್ವಾಣವು ಕಾಣಾ ಗುಹೇಶ್ವರಾ.
ವಚನ 1228
ಭಾನು ಶಶಿ ಕಳೆಗುಂದಿ,
ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂಬ
ನಾಗ ಕೂರ್ಮ ಕೃಕರ ದೇವದತ್ತ ಧನಂಜಯವೆಂಬ-
ವಾಯುವನರಿಯವೊ!
ಆದಿಪ್ರಣಮವನರಿದಹೆನೆಂಬವಂಗೆ,
ಬಯಲು ಆಕಾಶದೊಳಗೊಂದು ರಸದ ಬಾವಿ!
ಮುನ್ನಾದವರೆಲ್ಲಿಯವರೆಂದೆನಬೇಡ
ಗುಹೇಶ್ವರನೆಂಬ ಲಿಂಗವು ತಾನೆ ಕಂಡೆಲವೊ!
ವಚನ 1229
ಭಾವ ಸದ್ಭಾವ ನಿರ್ಭಾವವೆಂಬ ತ್ರಿಪುಟಿಭಾವವಾವುದೆಂದಡೆ:
ಜಡವಹ ತನ್ನನ್ನು ಅಜಡವಹ ಮನಸ್ಸಿನಿಂದಲೆ
ತದೇಕ ನಿಷ್ಠೆಯಿಂದ ಭಾವಿಸೂದೀಗ ಭಾವವು.
ಸದ್ಭಾವವೆಂದಡೆ:
ಜಡವಾಗಿ ದೃಶ್ಯವಲ್ಲದ ಅಜಡವಾಗಿ ಅದೃಶ್ಯವಲ್ಲದ
ಜಡಾಜಡ ಸಮ್ಮಿಶ್ರವಲ್ಲದ ಭಾವವ ಭಾವಿಸೂದೆ ಸದ್ಭಾವವು.
ನಿರ್ಭಾವವೆಂದಡೆ:ಭಾವ ಸದ್ಭಾವವೆರಡಳಿದು
ವಾಚಿಕ ಅವಾಚಿಕವಾಗಿಹುದಾಗಿ ನಿರ್ಭಾವವು.
ಇಂತೀ ಭಾವ ಸದ್ಭಾವ ನಿರ್ಭಾವವೆಂಬ
ತ್ರಿಪುಟಿಭಾವವಳಿದುಳಿದ ಮಹಾಘನವು ತಾನೆ;
ಶ್ರೀಗುರುವಾದ, ಲಿಂಗವಾದ, ಜಂಗಮವಾದ.
ಇಂತೀ ತ್ರಿವಿಧದ ಪಾದೋದಕ ಪ್ರಸಾದದಲ್ಲಿ
ಪರಿಣಾಮಿ ಗುಹೇಶ್ವರಾ ನಿಮ್ಮ ಶರಣ.
ವಚನ 1230
ಭಾವಕ್ಕೆ ಇಂಬಿಲ್ಲ ಶಬ್ದ ಮೀಸಲು ನೋಡಾ.
ನುಡಿಗೆ ಎಡೆಯಿಲ್ಲ ಎಡೆಗೆ ಕಡೆಯಿಲ್ಲ,
ಗುಹೇಶ್ವರನೆಂಬ ಶಬ್ದ ವೇದಿಸಲೊಡನೆ
ವಚನ 1231
ಭಾವಕ್ಕೆ ಪೂಜ್ಯನಲ್ಲ,
ಬಹಿರಂಗದೊಳಗಡಗಿತ್ತೆಂದಡೆ ಕ್ರಿಯಾಶಬ್ದನಲ್ಲ.
ಅರಿವಿನೊಳಗಡಗಿತ್ತೆಂದಡೆ ಮತಿಗೆ ಹವಣಲ್ಲ.
ಭಾವ ನಿರ್ಭಾವ ನಿಶ್ಶೂನ್ಯವನು ಕಾಬ ಪರಿಯಿನ್ನೆಂತು ಹೇಳಾ?
ಅದ ಕಂಡು, ತನ್ನೊಳಗಿಂಬಿಟ್ಟುಕೊಂಬ ಪರಿಯೆಂತು ಹೇಳಾ,
ನಮ್ಮ ಗುಹೇಶ್ವರಲಿಂಗದಲ್ಲಿ, ಸಂಗನಬಸವಣ್ಣಾ ?
ವಚನ 1232
ಭಾವಗೆಟ್ಟು ಭವನಷ್ಟನು ಒಡಹುಟ್ಟಿದ ಐವರ ಕೈಬಿಟ್ಟನು.
ಭಂಡನು ಲಜ್ಜೆಭಂಡನು, ಕಂಡಡೆ ನುಡಿಸದಿರಾ ಮಾಯಾದೇವಿ.
ಅರಿವೆಯ (ಅರಿವ?)ನುಟ್ಟು ನೆರೆ ಮರುಳಾದನು
ಹುಟ್ಟ ಮುರಿದನು ಮಡಕೆಯನೊಡೆದನು
ಆದಿ ಪುರಾತನು ಅಚಲ ಲಿಂಗೈಕ್ಯನು.
ಗುಹೇಶ್ವರನಲ್ಲಯ್ಯಂಗೆ ಮೂಗಿಲ್ಲ ಮಗಳೆ.
ವಚನ 1233
ಭಾವದಲೊಬ್ಬ ದೇವರ ಮಾಡಿ,
ಮನದಲೊಂದು ಭಕ್ತಿಯ ಮಾಡಿದಡೆ,
ಕಾಯದ ಕೈಯಲ್ಲಿ ಕಾರ್ಯವುಂಟೆ?
ವಾಯಕ್ಕೆ ಬಳಲುವರು ನೋಡಾ.
ಎತ್ತನೇರಿ ಎತ್ತನರಸುವರು, ಎತ್ತ ಹೋದರೈ ಗುಹೇಶ್ವರಾ?
ವಚನ 1234
ಭಾವದಲ್ಲಿ ಭ್ರಮಿತರಾದವದ
ಸೀಮೆಯೇನು ? ನಿಸ್ಸೀಮೆಯೇನು ?
ವಚನದ ರಚನೆಯ ರಂಜನೆಯ ಲೀಲೆಯನಾಡುವರು.
ಗುಹೇಶ್ವರನಿಪ್ಪ ಗುಪ್ತವೆಂತೆಂದರಿಯರು.
ವಚನ 1235
ಭಾವದಲ್ಲಿ ಸಿಲುಕಿದ ಲಿಂಗಕ್ಕೆ ಪ್ರಳಯವದ್ಭುತ ಕಾಣಿರೆ !
ಅದ ಪ್ರಾಣಲಿಂಗವೆಂತೆಂಬೆ ? ಲಿಂಗಪ್ರಾಣವೆಂತೆಂಬೆ ?ಗುಹೇಶ್ವರ’
ಗುಹೇಶ್ವರ’ ಎಂದೆಂಬ ಲಿಂಗವು
ನಿಂದಲ್ಲಿಯೆ ನಿಂದಿತ್ತು.
ವಚನ 1236
ಭಾವವಳಿಯದೆ ಬಯಕೆ ಸವೆಯದೆ
ಐಕ್ಯವು ಅವ ಘನವೆಂದಡಹುದೆ?
ಶಬ್ದ ಸಂಭ್ರಮದ ಮದವಳಿಯದೆ,
ತನ್ನ ಇದಿರಲ್ಲಿ ಪ್ರತಿಯುಳ್ಳಡೆ, ಏನೆಂದಡೂ ಅಹುದೆ?
ಗುಹೇಶ್ವರನೆಂಬ ಶಬ್ದಸಂದಳಿಯದೆ
ಬೇಸತ್ತು ಬಯಲಾದಡೆ ಆಯತವಹುದೆ?
ವಚನ 1237
ಭಾವಿ(ವು?)ಕರಿಗೆ ಮೂರ್ತಿಯ ಆರಾಧನೆ ಸಂಸಾರಕ್ಕೆ ಬೀಜ,
ಲಿಂಗಾರಾಧನೆ ಭವಕ್ಕೆ ಬೀಜ.
ಲಿಂಗಸ್ವಾಯತ ಜಂಗಮವೆ ಪ್ರಾಣಲಿಂಗ.
ಇದು ಕಾರಣ-ಗುಹೇಶ್ವರಾ
ಸಂಗನಬಸವಣ್ಣನ ಮರೆಯ ಹೊಕ್ಕು ಬದುಕಿದೆನು
ವಚನ 1238
ಭಾವಿಸಿ ದೃಷ್ಟಿನಟ್ಟು ಸೈವೆರಗಾಗಿದ್ದುದ ಕಂಡೆ,
ಕಲ್ಪಿಸಿ ದೃಷ್ಟಿನಟ್ಟು ಸೈವೆರಗಾಯಿತ್ತಯ್ಯಾ.
ಗುಹೇಶ್ವರಾ, ನಿಮ್ಮಲ್ಲಿ ಸರ್ವನಿರ್ವಾಣಿ ಸಂಗನಬಸವಣ್ಣ.
ಎನ್ನ ಪ್ರಾಣಲಿಂಗವೆಂದರಿದು ಕಂಡೆನಿಂದು.
ವಚನ 1239
ಭಾವಿಸಿ ನೋಡಿಹೆನೆಂಬುದೆಲ್ಲವು ಭ್ರಮೆ,
ಅದು ತಾ ಮುನ್ನಿನಂತೆ ಇದ್ದಿತ್ತು.
ಮುಂದೆ ಭಾವಿಸಬೇಡ ಕೂಡಬೇಡ,
ಕೂಡಿಹೆನೆಂಬ ಭಾವ ಮುನ್ನವೆ ಬೇಡ ಗುಹೇಶ್ವರಾ.
ವಚನ 1240
ಭುವನ ಹದಿನಾಲ್ಕರ ಭವನದ ಕೀಲನೆ ಕಳೆದು
ಉರವಣಿಸುವ ಪವನಂಗಳ ತರಹರಿಸಿದಡೆ-ಅದು ಯೋಗ !
ಚತುರಸದೊಳಗಣ ನಿಲವ ಕಾಣಬೇಕು.
ವಜ್ರ ನೀಲದ ಹೊದಿಕೆಯಲ್ಲಿರ್ದ ಭುವನಂಗಳ ಹೊದ್ದಿ
ಮಾಣಿಕವ ನುಂಗಿ ಉಗುಳದು-ಗುಹೇಶ್ವರಾ.
ವಚನ 1241
ಭುವರ್ಲೊಕದ ಸ್ಥಾವರಕ್ಕೆ,
ಸತ್ಯಲೋಕದ ಅಗ್ಘಣಿಯಲ್ಲಿ ಮಜ್ಜನಕ್ಕೆರೆದು,
ದೇವಲೋಕದ ಪುಷ್ಪದಲ್ಲಿ ಪೂಜೆಯ ಮಾಡಿದಡೆ
ಹತ್ತು ಲೋಕದಾಚಾರ ಕೆಟ್ಟಿತ್ತು.
ಮೂರು ಲೋಕದರಸುಗಳು ಮುಗ್ಧರಾದರು.
ಗುಹೇಶ್ವರಲಿಂಗವು ಸ್ಥಾವರಕ್ಕೆ ಸ್ಥಾವರವಾದನು.
ವಚನ 1242
ಭೂತ ಭೂತವ ಕೂಡಿ ಅದ್ಭುತವಾಯಿತ್ತು,
ಕಿಚ್ಚು ಕೋಡಿತ್ತು, [ನೀರು] ನೀರಡಿಸಿತ್ತು-ಅದ್ಭುತವಾಯಿತ್ತು !
ಉರಿ, ಪವನದೋಷದೊಳಡಗಿರ್ದು
ವಾಯುವಿಮ್ಮಡಿಸಿತ್ತ ಕಂಡೆ, ಗುಹೇಶ್ವರಾ.
ವಚನ 1243
ಭೂತವೈದರಿಂದ ಸ್ಥೂಲ ತನು.
ಮನ ಬುದ್ಧಿ ಚಿತ್ತ ಅಹಂಕಾರದಿಂದ ಸೂಕ್ಷ್ಮತನು.
ಭಾವಜ್ಞಾನದಿಂದ ಕಾರಣತನು.-ಈ ತ್ರಿವಿಧವು ಚೈತನ್ಯವಿಡಿದ ಕಾರಣ,
ಭೂತ ಅಂತಃಕರಣ ಭಾವ ಜ್ಞಾನಕ್ಕೆ ಸ್ವತಂತ್ರತೆಯಿಲ್ಲ.
ಆ ಚೈತನ್ಯಕ್ಕೆ ಶರೀರಭಾವವಿಲ್ಲದಿರ್ದಡೆ ತೋರಿಕೆ ಇಲ್ಲವಾಗಿ
ಆ ಚೈತನ್ಯವೆ ತನ್ನ ಲೀಲೆಯಿಂದ ಶರಣನೆನಿಸಿತ್ತು.
ಆ ಶರಣನ ಪಂಚಭೌತಿಕ ತನುವ ಇಷ್ಟಲಿಂಗ ಇಂಬುಗೊಂಡಿಹ ಕಾರಣ,
ಕಾಯ ಪಂಚಬ್ರಹ್ಮಮಯವಾಯಿತ್ತು.
ಅಂತಃಕರಣ[ವ] ಅಂತಃಪ್ರೇರಕ ಪ್ರಾಣಚೈತನ್ಯಲಿಂಗವೊಳಕೊಂಡ ಕಾರಣ
ಶರಣನ ಕರಣಂಗಳೆ ಲಿಂಗಕಿರಣಂಗಳಾದವು.
ಭಾವ ಜ್ಞಾನವೆಡೆಗೊಂಡು [ಲಿಂಗ] ತೃಪ್ತಿಸ್ವರೂಪದಿಂದ
ಆನಂದಮಯವಪ್ಪ ಕಾರಣ,
ಶರಣ ಸಚ್ಚಿನ್ಮಯನಾದ-ಇದು ಕಾರಣ,
ಗುಹೇಶ್ವರಾ ನಿಮ್ಮ ಶರಣರ ದೃಷ್ಟಲಿಂಗವೆಂಬೆ !
ವಚನ 1244
ಭೂತಳದ ಮತಿವಂತರು ಆತ್ಮನ ಸ್ಥಲವಿಡಲು
ಮಾತು ಮಾಣಿಕವ ನುಂಗಿ; ಜಾತಿ ಧರ್ಮವನುಡುಗಿ,
ವ್ರತದ ಭ್ರಮೆಗಳ ಸುಟ್ಟು, ಚಿತ್ತ ಭಸ್ಮವ ಧರಿಸಿ
ಅಣಿಮಾದಿ ಗುಣಂಗಳ ಗತಿಯ ಪಥವನೆ ಮೀರಿ,
ಭ್ರಾಂತಳಿದು ಜ್ಯೋತಿ ಬೆಳಗುತ್ತಿದೆ ಗುಹೇಶ್ವರಾ
ವಚನ 1245
ಭೂಮಿ ನಿನ್ನದಲ್ಲ ಹೇಮ ನಿನ್ನದಲ್ಲ ಕಾಮಿನಿ ನಿನ್ನವಳಲ್ಲ-
ಅವು ಜಗಕ್ಕಿಕ್ಕಿದ ವಿದಿ.
ನಿನ್ನ ಒಡವೆ ಎಂಬುದು ಜ್ಞಾನರತ್ನ.
ಅಂತಪ್ಪ ದಿವ್ಯರತ್ನವ ಕೆಡಗುಡದೆ
ಆ ರತ್ನವ ನೀನು ಅಲಂಕರಿಸಿದೆಯಾದಡೆ
ನಮ್ಮ ಗುಹೇಶ್ವರಲಿಂಗದಲ್ಲಿ
ನಿನ್ನಿಂದ ಬಿಟ್ಟು ಸಿರಿವಂತರಿಲ್ಲ ಕಾಣಾ ಎಲೆ ಮನವೆ.
ವಚನ 1246
ಭೂಮಿಯ ಕಠಣವನು, ಆಕಾಶದ ಮೃದುವನು; ತಿಳಿವ ಗಮನ
ಅಲ್ಲಿಯೇ ನಿಂದಿತ್ತು.
ಉದಕದೊಳಗೆ ಹುಟ್ಟಿದ ತೃಷ್ಣೆ ಉದಕವನರಸಿತ್ತಲ್ಲಾ!
ಒಳಗೆ ಸತ್ತು ಹೊರಗೆ ಆಡುತ್ತದೆ !
ಗುಹೇಶ್ವರ ಬೆರಗಾಗಿ ಅಲ್ಲಿಯೇ ನಿಂದನು.
ವಚನ 1247
ಭೂಮಿಯಲ್ಲಿ ಹುಟ್ಟಿ ಅಂತರಂಗದಲ್ಲಿ ಬೆಳೆವ ಫಲವೃಕ್ಷದಂತೆ,
ಸರ್ವರಿಗೆ ಭೂತಹಿತವಾಗಿ ಫಲರಸವನೀವಂತೆ,
ನೀ ಭೂಮಿಯಾಗಿ ನಾ ಸಸಿಯಾಗಿ ಬೆಳೆದ ಬೆಂಬಳಿಯಲ್ಲಿ
ಗುಹೇಶ್ವರಲಿಂಗವೆಂಬುದು ಫಲವಾಯಿತ್ತು.
ಅರಿದ ಅರಿಕೆ ರಸವಾಯಿತ್ತು.ಸಂಗನಬಸವಣ್ಣನಿಂದ ಎನ್ನಂಗ ಬಯಲಾಯಿತ್ತು !
ವಚನ 1248
ಭೂಮಿಯಾಕಾಶ ಒಂದು ಜೀವನದುದರ.
ಅಲ್ಲಿ ಘನವೇನು ಘನವೆನ್ನದವಂಗೆ? ಕಿರಿದೇನು ಕಿರಿದೆನ್ನದವಂಗೆ ?
ಆ ಘನವು ಮನಕ್ಕೆ ಗಮಿಸಿದಡೆ, ಇನ್ನು ಸರಿಯುಂಟೆ ಗುಹೇಶ್ವರಾ ?
ವಚನ 1249
ಭೂಮಿಯೊಳಗಿಲ್ಲ ಆಕಾಶದೊಳಗಿಲ್ಲ:
ಚತುರ್ದಶ ಭುವನದೊಳಗಿಲ್ಲ, ಹೊರಗಿಲ್ಲ.
ಏನೆಂದರಿಯರು ಎಂತೆಂದರಿಯರು ಹೇಳಿರಯ್ಯಾ (ಹೇಳಯ್ಯಾ?)
ಕೃತಯುಗದಂದಿನ ಮಾತು ಬೇಡ
ಗುಹೇಶ್ವರ ಅಂದೂ ಇಲ್ಲ ಇಂದೂ ಇಲ್ಲ.
ವಚನ 1250
ಭೂವಳಯ ಮಧ್ಯದ ಎಂಟೆಸಳ ಪದ್ಮದ ಮೇಲೆ
ಸುಳಿವನ ಎಚ್ಚರಲೀಯ,
ಕಂಟಕ ವಿರಹಿತನು, ನಂಟರಿಗೆ ವಿರೋದಿಸಿ, ಇಳೆಯ ಗುಣ ರಹಿತನು,
ಗಗನಕಮಲಕುಸುಮ ಪರಿಣಾಮದೊಳಗೆ ಪರಿಣಾಮಿ ನೋಡಾ !
ತಾನೆಂಬುದ ಹುಸಿ ಮಾಡಿ, ಲಿಂಗಜಂಗಮ ದಿಟವೆಂದುಸಕಲ ಸುಖಭೋಗಂಗಳನರ್ಪಿಸಿದ.
ಗುಹೇಶ್ವರಾ [ಅದು], ನಿಮ್ಮ ಶರಣ ಬಸವಣ್ಣಂಗಲ್ಲದೆ
ಇನ್ನಾರಿಗೂ ಅಳವಡದು.
ವಚನ 1251
ಮಂಜರನೇತ್ರದಲ್ಲಿ ಉಭಯಚಂದ್ರರ ಕಾಬವರಾರೊ?
ಕಂಡುದ ದಶರವಿ ಕರದಲ್ಲಿ ಪಿಡಿದು
ಅಗ್ನಿಮುಖಕ್ಕೆ ಸಲಿಸುವರಲ್ಲದೆ, ಲಿಂಗಮುಖಕ್ಕೆ ಸಲಿಸುವರಾರೊ ?
ತದನಂತರ ಪ್ರಾಣಲಿಂಗಕ್ಕೆ ಕೊಟ್ಟು ಕೊಂಬಲ್ಲಿ
ನಿರಂತರ ಸಾವಧಾನಿ ಗುಹೇಶ್ವರಾ-ನಿಮ್ಮ ಪ್ರಸಾದಿ.
ವಚನ 1252
ಮಂಡೆ ಮರ…………..ಹರಿದು ಹೊರಳಿದಡೆ,
ದಂಡೆಯ ಕಟ್ಟಿದ ಗಂಡ ನಗೆಗೆಡೆಯಾದಡೆ,
ಗೌರಿ ರಂಡೆ ಕಾಣಾ ಗುಹೇಶ್ವರಾ
ವಚನ 1253
ಮಂತ್ರವ ಕಲಿತಡೇನು ?
ಪುರಶ್ಚರಣೆಯ ಮಾಡಿದಲ್ಲದೆ ಸಿದ್ಧಿಸದು.
ಮದ್ದನರಿದು ಫಲವೇನು ?
ಪ್ರಯೋಗಿಸಿಕೊಂಡಲ್ಲದೆ ಮಾಣದು.
ಲಿಂಗವನರಿದಡೇನು ?
ನೆನೆದಲ್ಲದೆ ಸಿದ್ಧಿಸದು ಕಾಣಾ ಗುಹೇಶ್ವರಾ.
ವಚನ 1254
ಮಜ್ಜನಕ್ಕೆರೆದು ಫಲವ ಬೇಡುವರಯ್ಯಾ,
ತಮಗೆಲ್ಲಿಯದೊ ಆ ಫಲವು ಸಿತಾಳಕ್ಕಲ್ಲದೆ ?
ಪತ್ರೆ ಪುಷ್ಪದಲ್ಲಿ ಪೂಜಿಸಿ ಫಲವ ಬೇಡುವರಯ್ಯಾ,
ತಮಗೆಲ್ಲಿಯದೊ ಆ ಫಲವು ಗಿಡುಗಳಿಗಲ್ಲದೆ ?
ಸೈದಾನವ(ಸುಯಿಧಾನವ ?)ನರ್ಪಿಸಿ ಫಲವ ಬೇಡುವರಯ್ಯಾ
ತಮಗೆಲ್ಲಿಯದೊ ಆ ಫಲವು ಹದಿನೆಂಟು ಧಾನ್ಯಕ್ಕಲ್ಲದೆ ?
ಲಿಂಗದೊಡವೆಯ ಲಿಂಗಕ್ಕೆ ಕೊಟ್ಟು,
ಫಲವ ಬೇಡುವ ಸರ್ವ ಅನ್ಯಾಯಿಗಳನೇನೆಂಬೆ ಗುಹೇಶ್ವರಾ !
ವಚನ 1255
ಮಜ್ಜನಕ್ಕೆರೆವಡೆ ಭೂತವಿಕಾರ. ಪ್ರಮಥ ಗಣಂಗಳೆಲ್ಲರೂ ಪ್ರೇತರು.
ವೀರಭದ್ರ ಗಣಂಗಳೆಲ್ಲರೂ ಬ್ರಹ್ಮರಾಕ್ಷಸರು.
ಅರ್ಧನಾರೀಶ್ವರರೆಲ್ಲರೂ ಚಿಕ್ಕಮಕ್ಕಳ ಮೇಲೆ, ತಪ್ಪ ಸಾದಿಸಿ ಕಾಡಿ ಉಂಬರು.-
ಈ ನಾಲ್ಕು ಸ್ಥಾನದೊಳಗೆ ಆವುದೂ ಅಲ್ಲ
ಗುಹೇಶ್ವರಾ ನಿಮ್ಮ ಲಿಂಗೈಕ್ಯವು !
ವಚನ 1256
ಮಜ್ಜನಕ್ಕೆರೆವಡೆ; ನೀನು ಶುದ್ಧ ನಿರ್ಮಲದೇಹಿ.
ಪೂಜೆಯ ಮಾಡುವಡೆ; ನಿನಗೆ ಗಗನಕಮಲಕುಸುಮದ ಅಖಂಡಿತಪೂಜೆ.
ಧೂಪದೀಪಾರತಿಗಳ ಬೆಳಗುವಡೆ; ನೀನು ಸ್ವಯಂ ಜ್ಯೋತಿಪ್ರಕಾಶನು.
ಅರ್ಪಿತವ ಮಾಡುವಡೆ; ನೀನು ನಿತ್ಯತೃಪ್ತನು.
ಅಷ್ಟವಿಧಾರ್ಚನೆಗಳ ಮಾಡುವಡೆ; ನೀನು ಮುಟ್ಟಬಾರದ ಘನವೇದ್ಯನು.
ನಿತ್ಯನೇಮಗಳ ಮಾಡುವಡೆ;
ನಿನಗೆ ಅನಂತನಾಮಂಗಳಾದವು ಗುಹೇಶ್ವರಾ.
ವಚನ 1257
ಮಜ್ಜನಕ್ಕೆರೆವರೆಲ್ಲ, ಇದ್ದಲ್ಲಿ ಫಲವೇನು?
ಮುದ್ರಾಧಾರಿಗಳಪ್ಪರಯ್ಯಾ.
ಲಿಂಗದಲ್ಲಿ ನಿಷ್ಠೆಯಿಲ್ಲ, ಜಂಗಮದಲ್ಲಿ ಪ್ರೇಮವಿಲ್ಲ
ವೇಷಧಾರಿಗಳಪ್ಪರಯ್ಯಾ.
ಲಾಂಛನ ನೋಡಿ ಮಾಡುವ ಭಕ್ತಿ, ಸಜ್ಜನಸಾರಾಯವಲ್ಲ,
ಗುಹೇಶ್ವರ ಮೆಚ್ಚನಯ್ಯಾ.
ವಚನ 1258
ಮಠವೇಕೋ ಪರ್ವತವೇಕೋ ಜನವೇಕೋ ನಿರ್ಜನವೇಕೋ
ಚಿತ್ತ ಸಮಾಧಾನವುಳ್ಳ ಶರಣಂಗೆ ?
ಮತ್ತೆ-ಹೊರಗಣ ಚಿಂತೆ ಧಾನ್ಯ ಮೌನ ಜಪತಪವೇಕೊ;
ತನ್ನ ತಾನರಿದ ಶರಣಂಗೆ ಗುಹೇಶ್ವರಾ ?
ವಚನ 1259
ಮಣಿಯನೆಣಿಸಿ ಕಾಲವ ಕಳೆಯಬೇಡ.
ಕಣಿಯ ಪೂಜಿಸಿ ದಿನವ ಕಳೆಯಬೇಡ.
ಕ್ಷಣವಾದಡೆಯೂ ಆಗಲಿ ನಿಜದ ನೆನಹೆ ಸಾಕು.
ಬೆಂಕಿಯಲುಳ್ಳ ಗುಣ ಬಿಸಿನೀರಲುಂಟೆ ಗುಹೇಶ್ವರಾ ?
ವಚನ 1260
ಮಣ್ಣಿಲ್ಲದ ಹಾಳ ಮೇಲೆ, ಕಣ್ಣಿಲ್ಲದಾತ ಮಣಿಯ ಕಂಡ,
ಕೈಯಿಲ್ಲದಾತ ಪವಣಿಸಿದ, ಕೊರಳಿಲ್ಲದಾತ ಕಟ್ಟಿಕೊಂಡ !
ಅಂಗವಿಲ್ಲದ ಸಿಂಗಾರಕ್ಕೆ ಭಂಗವುಂಟೆ ಗುಹೇಶ್ವರಾ ?
ವಚನ 1261
ಮಣ್ಣಿಲ್ಲದ ಹಾಳಿನ ಮೇಲೆ
ಕಣ್ಣಿಲ್ಲದ ಕುರುಡನೊಂದು ರತ್ನವ ಕಂಡ.
ಕೈಯಿಲ್ಲದವ ತಕ್ಕೊಂಡ, ಕೊರಳಿಲ್ಲದವ ಧರಿಸಿಕೊಂಡ.
ಗಂಡನಿಲ್ಲದ ಬಾಲೆ ಆರು ಮಕ್ಕಳ ಹಡೆದು,
ಗುಹೇಶ್ವರನೆಂಬಂತರತೊಟ್ಟಿಲ ಕಟ್ಟಿ, ತಾಯಿಯೆದ್ದು ಆಡುವಾಗ
ಮಗನೆದ್ದು ಮೊಲೆಯ ಕೊಡುತಿರ್ದ.
ಆದ ಕಂಡು ಬೆರಗಾದ ನಮ್ಮ ಗುಹೇಶ್ವರನು.
ವಚನ 1262
ಮತಿಯೊಳಗೆ ದುರ್ಮತಿ ಹುಟ್ಟಿ, ಕಲಿ ಗಸಣಿಗೊಳಗಾದ ಪರಿಯ ನೋಡಾ !
ಜ್ಞಾನವನು ಅಜ್ಞಾನ ಬಂದು ನುಂಗಿದಡೆ,
ಭಾನು ಗ್ರಹಣಕ್ಕೆ ಒಳಗಾದಂತೆ ಆದುದಲ್ಲಾ !
ಕ್ಷೀರವುಳ್ಳ ಪಶು ಕರುವನಗಲಿ ಅರಿಯದ ಮೋಹದಂತಿದ್ದುದಲ್ಲಾ.
ಹೇಳುವಲ್ಲಿ ಯುಕ್ತ ಕೇಳುವಲ್ಲಿ ಮುಕ್ತನೆಂಬುದೆಲ್ಲವೂ,
ಅಜ್ಞಾನಭಾವಕ್ಕೆ ಬಂದುದಲ್ಲಾ !
ನೀರ ಮೇಲಣ ಲಿಪಿಯ ಓದಬಲ್ಲವರುಂಟೆ ? ಸಾರಾಯ ವೇದ್ಯರಿಗಲ್ಲದೆ ?
ಕನ್ನಡಿಯೊಳಗೆ ನೋಡೆ ಬಿನ್ನವಿದ್ದುದೆ ಅಯ್ಯಾ ?
ತನ್ನಕಣ್ಣಿಂಗೆ ಕಾಣದಂತೆ ಇದ್ದಿತ್ತು
ದರ್ಪಣದೊಳಗಣ ಬೆಳಗು.
ಬೆಳಗಿನೊಳಗಣ ಬೆಳಗು,
ಗುಹೇಶ್ವರನಿಪ್ಪೆಡೆಯ ತಿಳಿದು ನೋಡಿರೆ !
ವಚನ 1263
ಮತಿಯೊಳಗೊಂದು ದುರ್ಮತಿ ಹುಟ್ಟಿದ ಬಳಿಕ;
ಮತಿಯ ಮರವೆಯೊಳಕೊಂಡು,
ಭವಕ್ಕೆ ಗುರಿಮಾಡಿ ಕೆಡಹಿತ್ತು ನೋಡಾ.
ಅಖಂಡಿತವ ತಂದು ಮತಿಯೊಳಗೆ ವೇದಿಸಲು,
ಗತಿಗೆಟ್ಟು ನಿಂದಿತ್ತು ಗುಹೇಶ್ವರಾ.
ವಚನ 1264
ಮತ್ರ್ಯಲೋಕದ ಕವಿಗಳೆಲ್ಲರೂ ಎನ್ನ ತೊತ್ತಿನ ಮಕ್ಕಳು.
ದೇವಲೋಕದ ಕವಿಗಳೆಲ್ಲರೂ ಎನ್ನ ಕರುಣದ ಕಂದಗಳು
ಹಿಂದೆ ಮುಂದೆ ಆಡುವ ಕವಿಗಳೆಲ್ಲರೂ ಲೆಂಕ ಡಿಂಗರಿಗರು
ಹರಿ ಬ್ರಹ್ಮ ರುದ್ರ ಈ ಮೂವರೂ ಎನ್ನ ಕಕ್ಷೆಯ ಒಕ್ಕಲು
ಗುಹೇಶ್ವರಾ ನೀ ಮಾವ ನಾನಳಿಯ.
ವಚನ 1265
ಮತ್ರ್ಯಲೋಕದ ಮಾನವರು;
ದೇಗುಲದೊಳಗೊಂದು ದೇವರ ಮಾಡಿದಡೆ,
ಆನು ಬೆರಗಾದೆನು.
ನಿಚ್ಚಕ್ಕೆ ನಿಚ್ಚ ಅರ್ಚನೆ ಪೂಜೆಯ ಮಾಡಿಸಿ,
ಭೋಗವ ಮಾಡುವರ ಕಂಡು ನಾನು ಬೆರಗಾದೆನು.
ಗುಹೇಶ್ವರಾ ನಿಮ್ಮ ಶರಣರು, ಹಿಂದೆ ಲಿಂಗವನಿರಿಸಿ ಹೋದರು.
ವಚನ 1266
ಮಥನದ ಲೀಲೆಯಲ್ಲಿ ಹುಟ್ಟುವುದೇ ಬ್ರಹ್ಮವು ?
ಶ್ರುತಿ ಸ್ಮೃತಿಗಳಿಗೆ ಅಳವಡದು ನೋಡಾ !
ಪೃಥ್ವಿಯೊಳಗಿಲ್ಲದ ಅಚಲವಪ್ಪ ಘನವನು,
ಸಚರಾಚರದಲ್ಲಿ ಭರಿತವೆಂತೆಂಬೆ ?
ಇಲ್ಲದ ಲಿಂಗವನಲ್ಲಲ್ಲಿಗೆ ಉಂಟುಮಾಡುವ
ಈ ಲೀಲೆಯ ವಾರ್ತೆ ಎಲ್ಲಿಯದೊ ಗುಹೇಶ್ವರಾ ?
ವಚನ 1267
ಮದ್ದ ನಂಬಿಕೊಂಡಡೆ ರೋಗ ಮಾಣದಿಪ್ಪುದೆ ?
ಸಜ್ಜನಿಕೆಯುಳ್ಳಡೆ ಪ್ರಸಾದಕಾಯ ಕೆಡುವುದೆ ?
ಪ್ರಾಣ, ಲಿಂಗವಾದಡೆ ಪ್ರಾಣ ಬೇರಪ್ಪುದೆ ?
ಪ್ರಾಣಲಿಂಗ ಪ್ರಸಾದವನು ತಿಳಿದು ನೀವು ನೋಡಿರೆ,
ನಾದ ಬಿಂದು ಸೂಸದ ಮುನ್ನ, ಆದಿಯ ಪ್ರಸಾದವ ಭೇದಿಸಿಕೊಂಡರು-
ಗುಹೇಶ್ವರಾ ನಿಮ್ಮ ಶರಣರು.
ವಚನ 1268
ಮದ್ಯ ಮಾಂಸಾದಿಗಳ ಮುಟ್ಟೆವೆಂದೆಂಬಿರಿ-ನೀವು ಕೇಳಿರೆ.
ಮದ್ಯವಲ್ಲದೇ(ವೇ?)ನು ಅಷ್ಟಮದಂಗಳು ?
ಮಾಂಸವಲ್ಲದೇ(ವೇ?)ನು ಸಂಸಾರಸಂಗ ?
ಈ ಉಭಯವನತಿಗಳದಾತನೆ, ಗುಹೇಶ್ವರಲಿಂಗದಲ್ಲಿ ಲಿಂಗೈಕ್ಯನು.
ವಚನ 1269
ಮನ ಉಂಟೆ ಮರುಳೆ ಶಿವಯೋಗಿಗೆ ?
ಮತ್ತೊಂದು ಮನಮಗ್ನ ಉಂಟೆ ಶಿವಯೋಗಿಗೆ ?
ಇಲ್ಲದ ಮನವ ಉಂಟೆಂದು ನುಡಿದು, ಅಡಗಿಸಿದೆನೆಂಬ ಮಾತು
ಮನವ ನೆಲೆಮಾಡಿ ತೋರುತ್ತದೆ.
ಗುಹೇಶ್ವರನ ಅರಿದ ಶರಣಂಗೆ
ತೋರಲಿಲ್ಲ ಅಡಗಲಿಲ್ಲ ಕೇಳಾ.
ವಚನ 1270
ಮನ ಬಸಿರಾದಡೆ ಕೈ ಬೆಸಲಾಯಿತ್ತ ಕಂಡೆ !
ಕರ್ಪುರದ ಕಂಪ ಕಿವಿ ಕುಡಿಯಿತ್ತ ಕಂಡೆ !
ಮುತ್ತಿನ ಢಾಳವ ಮೂಗು ನುಂಗಿತ್ತ ಕಂಡೆ !
ಕಂಗಳು ಹಸಿದು ವಜ್ರವ ನುಂಗಿತ್ತ ಕಂಡೆ !
ಒಂದು ನೀಲದೊಳಗೆ ಮೂರುಲೋಕವಡಗಿತ್ತ ಕಂಡೆ, ಗುಹೇಶ್ವರಾ,
ವಚನ 1271
ಮನ ಮನ ಒಂದಾಗಿ ಅರಿವು ಸಯವಾದ ಬಳಿಕ
ಕೊಂಡಾಡಲಿಕ್ಕೆ ಇಂಬುಂಟೆ ಹೇಳಾ ? ಶಬ್ದಕ್ಕೆ ತೆರಹಿಲ್ಲ !
ಗುಹೇಶ್ವರಲಿಂಗದಲ್ಲಿ ಬೆರಸಿ, ಬೇರಿಲ್ಲ ಕಾಣಾ ಸಂಗನಬಸವಣ್ಣಾ.
ವಚನ 1272
ಮನ ಮನ ಒಂದಾಗಿ ತನು ತನು ಒಂದಾಗಿ ಬೆರಸಿದ ಬಳಿಕ,
ಕರೆಯಲಿಲ್ಲ ಕಾಲುವಿಡಿಯಲಿಲ್ಲ ಎಂದು ಅರಿದವರು,
ಉಪಚರಿಸಿ ಬರಹೇಳಿದಡೆ ಅದೆ ಕೊರತೆ ನೋಡಾ !
ಅಂಗದ ಕೈಯಲ್ಲಿ ಕ್ರೀ ಇರಲು ಮಾತಿನಲ್ಲಿ ಅದ್ವೈತವೆಂತಪ್ಪುದೊ ?
ಆಗಾಗದ ಮುನ್ನವೆ ತಾನಾದೆನೆಂಬವರಲ್ಲಿಗೆ
ನಮ್ಮ ಗುಹೇಶ್ವರಲಿಂಗವು ಅಡಿಯಿಡುವನಲ್ಲ.
ವಚನ 1273
ಮನ ಮನ ಬೆರಸಿ ಸಮರತಿಯ ಸಂಗದಲ್ಲಿ ಸುಖಿಗಳಾಗಿಪ್ಪ
ಶರಣರ ಸಂಗಸುಖವನು ಆ ಶರಣರೆ ಬಲ್ಲರಲ್ಲದೆ
ಕೆಲದಲ್ಲಿದ್ದವರಿಗೆ ಅರಿಯಬಹುದೆ ?
ನಿಜಗುಣಭರಿತ ಶಿವಶರಣರ ನಿಲವ
ಕಂಡಿಹೆನೆಂದಡೆ ಕಾಣಬಹುದೆ ?
ವಚನ 1274
ಮನ ಮನ ಬೆರಸಿದವರೆಂತಿಪ್ಪರಂತಿಪ್ಪರು.
ಅವರ ಪರಿಯನರಿಯಬಾರದು ಕೇಳಾ.
ಇದಿರಿಚ್ಛೆಯರಿಯದಿಪ್ಪರು.
ಒಳಗೆ ನೋಡಿದರೆ ಬಟ್ಟಬಯಲಲ್ಲಿಪ್ಪರು.
ಗುಹೇಶ್ವರನ ಶರಣರು ತಾವಿಲ್ಲದ ಮಹಿಮರೆಂಬುದ
ನಿನ್ನಿಂದಲರಿದೆ ನೋಡಾ ಸಿದ್ಧರಾಮಯ್ಯಾ.
ವಚನ 1275
ಮನ ಮನವ (ಘನವ?) ಬೆರಸಿದನುಭಾವ
ಘನಕ್ಕೆ ಘನ ಒಂದಾಯಿತ್ತು ನೋಡಾ !
ಅದು ತನ್ನಲ್ಲಿ ತಾನು ತೃಪ್ತಿಯಾದ ನಿಜವು (ನಿಲವು?)
ನಿರ್ಣಯದ ಮೇಲೆ ನಿರ್ಧರವಾಯಿತ್ತು ನೋಡಾ.
ಗುಹೇಶ್ವರಲಿಂಗದಲ್ಲಿ,
ಚನ್ನಬಸವಣ್ಣನಿಂದ ಸುಖಿಯಾದೆನು.
ವಚನ 1276
ಮನ ಮುಕ್ತಿ ವಿವೇಕವೆಂಬ ಅಕ್ಕಿಯನು ಗುಪಿತವೆಂಬ ಒರಳೊಳಗಿಕ್ಕಿ
ಅಬಿನ್ನಮಥನವೆಂಬ ಒನಕೆಯಲ್ಲಿ ಥಳಿಸಿ ಕಲ್ಮಷವೆಂಬ ತಾಡ ಹಾರಿಸಿ,
ಸಮತೆಯೆಂಬ ಸಲಿಲದಲ್ಲಿ ಜಾಳಿಸಿ, ಅಳುಪು ಎಂಬ ಹರಳ ಕಳೆದು
ದಯಾಮೃತವೆಂಬ ಹಾಲಿನಲ್ಲಿ ಬೋನವ ಮಾಡಿ
ಸಮರಸ ರುಚಿಕರದಿಂದ ಶಾಕಪಾಕಂಗಳಂ ಮಾಡಿ
ನೆನಹಿನ ಲವಲವಕಿಯೆ ಅಬಿಗಾರವಾಗಿ
ನಿರ್ಮಲವೆಂಬ ಶಿವದಾನವ ಗಡಣಿಸಿ ಕಾಯ್ದಿದ್ದರಯ್ಯಾ.
ಪಂಚೇಂದ್ರಿಯವೆಂಬ ಸೊಣಗ ಮುಟ್ಟದಂತೆ ಕಾಯ್ದಿದ್ದರಯ್ಯಾ.
ಷಡುವರ್ಗವೆಂಬ ತೊತ್ತಿರು ಮುಟ್ಟದಂತೆ ಕಾಯ್ದಿದ್ದರಯ್ಯಾ.
ಅಷ್ಟಮದವೆಂಬ ಮಕ್ಕಳು ಮುಟ್ಟದಂತೆ ಕಾಯ್ದಿದ್ದರಯ್ಯಾ.
ಇನಿತು ಮುಖ್ಯವಾದ ಹೀನಂಗಳಾವೂ ಮುಟ್ಟದಂತೆ ಕಾಯ್ದಿದ್ದರಾಗಿ,
ಈ ಬೋನ ಗುಹೇಶ್ವರಲಿಂಗಕ್ಕೆ ಅರ್ಪಿತವಾಯಿತ್ತು, ಕಾಣಾ
ಚೆನ್ನಬಸವಣ್ಣಾ.
ವಚನ 1277
ಮನ ಮುಟ್ಟದ ಮಜ್ಜನ ತನು ತಾಗದ ದೇಹಾರ,
ಭಾವ ತಾಗದ ಪೂಜೆ, ಎದೆ ತಾಗದ ನೋಟ
ವಾಯು ತಾಗದ ನಲಿಂಗದಫರಠಾವ ತೋರಾ ಗುಹೇಶ್ವರಾ.
ವಚನ 1278
ಮನ ಸಂದಲ್ಲಿ ಬೇರೊಂದು ನೆನಹುಂಟೆ ?
ನೆನಹು ನಿಷ್ಪತಿಯಾದಲ್ಲಿ ಉಭಯವೆಂಬುದಕ್ಕೆ ಒಡಲಿಲ್ಲ,
ಅದು ಸಲ್ಲದ ನೇಮ.
ಗುಹೇಶ್ವರಲಿಂಗ ಅಲ್ಲಿ ಇಲ್ಲವೆಂಬುದಕ್ಕೆ
ಅದೇ ಕುರುಹು.
ವಚನ 1279
ಮನಕ್ಕೆ ಮನ ಏಕಾರ್ಥವಾಗಿ, ಕಾಯಕ್ಕೆ ಕಾಯ ಸಮದರ್ಶನವಾಗಿ
ಪ್ರಾಣಕ್ಕೆ ಪ್ರಾಣ ಸಮಕಳೆಯಾಗಿ ಇದ್ದವರಲ್ಲಿ-
ಮನ ವಚನ ಕಾಯದಲ್ಲಿ ಶಬ್ದಸೂತಕ ಹುಟ್ಟಿದಡೆ
ಸೈರಿಸಬಾರದು ಕೇಳಾ.
ನಮ್ಮ ಗುಹೇಶ್ವರಲಿಂಗದಲ್ಲಿ ನೀನು ಭಕ್ತನಾದ ಕಾರಣ,
ಮುಳಿಸು ಮೊಳೆದೋರಿತ್ತು ಕಾಣಾ ಸಂಗನಬಸವಣ್ಣಾ.
ವಚನ 1280
ಮನಕ್ಕೆ ಮನೋಹರವಾದಡೆ ಮನಕ್ಕೆ ಭಂಗ ನೋಡಾ.
ತನುವಿನಲ್ಲಿ ಸುಖವ ಧರಿಸಿಕೊಂಡಡೆ, ಆ ತನುವಿಂಗೆ ಕೊರತೆ ನೋಡಾ.
ಅರಿವನರಿದು ಸುಖವಾಯಿತ್ತೆಂದಡೆ,
[ಆ] ಅರಿವಿಂಗೆ ಭಂಗ ನೋಡಾ-ಗುಹೇಶ್ವರಾ.
ವಚನ 1281
ಮನದ ಕತ್ತಲೆಯೊಳಗಣ ಜ್ಯೋತಿಯ ಕೊನೆಯ[ಮೊನೆಯ]ಮೇಲೆ
ಘನವನರಿದೆವೆಂಬರ ಅನುಮಾನಕ್ಕೆ ದೂರ.
ತಮತಮಗೆ ಅರಿದೆವೆಂಬರು,-ಕನಸಿನಲಿಂಗ ಗುಹೇಶ್ವರಾ.
ವಚನ 1282
ಮನದ ಕಾಲತ್ತಲು ತನುವಿನ ಕಾಲಿತ್ತಲು.
ಅನುಭಾವದ ಅನುವನು ನೆನೆವುತ್ತ ನೆನೆವುತ್ತ ಗಮನ ಕೆಟ್ಟಿತ್ತು.
ಲಿಂಗ ಮುಖದಲಾದ ಸೂಚನೆಯ ಸುಖವ ಕಂಡು ಗಮನ ಕೆಟ್ಟಿತ್ತು.
ಅನುವಾಯಿತ್ತು ಅನುವಾಯಿತ್ತು, ಅಲ್ಲಿಯೆ ತಲ್ಲೀನವಾಯಿತ್ತು-
ಗುಹೇಶ್ವರನೆಂಬ ಲಿಂಗೈಕ್ಯಂಗೆ
ವಚನ 1283
ಮನದ ಕೊನೆಯ ಮೊನೆಯ ಮೇಲೆ ನೆನೆದ ನೆನಹು
ಜನನ ಮರಣವ ನಿಲಿಸಿತ್ತು.
ಜ್ಞಾನಜ್ಯೋತಿಯ ಉದಯ ಭಾನುಕೋಟಿಯ ಮೀರಿ,
ಸ್ವಾನುಭಾವದ ಉದಯ ಜ್ಞಾನಶೂನ್ಯದಲಡಗಿದ
ಘನವನೇನೆಂಬೆ ಗುಹೇಶ್ವರಾ !
ವಚನ 1284
ಮನದ ಮರವೆ ತನುವಿನಲ್ಲಿರಲು ಅದೆಂತೊ ಅರಿವು ?
ಎರಡು ಬೆಟ್ಟಕ್ಕೆ ಒಂದೆ ತಲೆಯೊಡ್ಡಿ ಧರಿಸಿದ ಬಳಿಕ,
ತಲೆ ಕಾಲಿಗೆ ಇಕ್ಕಿದ ಬಳ್ಳಿ ಎಂತು ಹರಿವುದೊ ?
ಗುಹೇಶ್ವರಾ, ನಿಮ್ಮ ಶರಣರು,
ಬಾರದ ಭವದಲ್ಲಿ ಬಂದ ಕಾರಣ-ಸುಖಿಗಳಾದರಯ್ಯಾ.
ವಚನ 1285
ಮನದ ಸುಖವ ಕಂಗಳಿಗೆ ತಂದರೆ,
ಕಂಗಳ ಸುಖವ ಮನಕ್ಕೆ ತಂದರೆ,
ನಾಚಿತ್ತು, ಮನ ನಾಚಿತ್ತು.
ಸ್ಥಾನಪಲ್ಲಟವಾದ ಬಳಿಕ ವ್ರತಕ್ಕೆ ಭಂಗ ಗುಹೇಶ್ವರಾ.
ವಚನ 1286
ಮನದೊಳಗೆ ಘನ ವೇದ್ಯವಾಗಿ, ಘನದೊಳಗೆ ಮನ ವೇದ್ಯವಾದ ಬಳಿಕ
ಪುಣ್ಯವಿಲ್ಲ ಪಾಪವಿಲ್ಲ, ಸುಖವಿಲ್ಲ ದುಃಖವಿಲ್ಲ,
ಕಾಲವಿಲ್ಲ ಕರ್ಮವಿಲ್ಲ, ಜನನವಿಲ್ಲ ಮರಣವಿಲ್ಲ.
ಗುಹೇಶ್ವರಾ ನಿಮ್ಮ ಶರಣನು ಘನಮಹಿಮ ನೋಡಯ್ಯಾ.
ವಚನ 1287
ಮನಬೀಸರವೆಂಬ ಗಾಳಿ ಬೀಸಿತ್ತು, ವಿದ್ಯಾಮುಖದ ಜ್ಯೋತಿ ನಂದಿತ್ತು.
ಕತ್ತಲೆಯಲ್ಲಿ ಗತಿಯ ಕಾಣದೆ ದುಮ್ಮಾನ ನೆಲೆಗೊಂಡಿತ್ತು.
ಸುಮ್ಮಾನ ಹೋಯಿತ್ತು.
ಸಕಳಕಲಾವಿದ್ಯಾಗುರುವಲ್ಲಾ! ಮತಿತಾಳವೆಂಬ ಗುಹ್ಯತಾಗಿ,
ಸುತಾಳವೆಂಬ ಶರಣಸಂಗದಲ್ಲಿ ಬಿದ್ದು,
ಗುರುವಿಂಗೆ ಪ್ರಸಾದವಾದುದು, ಶಿಷ್ಯಂಗೆ ಓಗರವಾದುದು ನೋಡಾ!
ಲಾಕಿಕಕಾಯಕ ನರಕ (ಲಾಕಿಕ ನಾಯಕನರಕ?)
ಅರ್ಪಿತಮುಖವನರಿಯದೆ, ಅನರ್ಪಿತಮುಖವಾಯಿತ್ತು ಗುಹೇಶ್ವರ
ವಚನ 1288
ಮನಮಗ್ನವೆಂತಿರ್ಪುದು ಅಂತೆ ಇರಬೇಕಲ್ಲದೆ
ಮತ್ತೊಂದು ಮನವೆಂಬುದುಂಟೆ ಹೇಳಾ ?
ಅರಿದು ಮರೆದುದ ಅರಿದು ನುಡಿದು
ಮರೆದೆನೆಂಬ ಜ್ಞಾನ (ಅಜ್ಞಾನ?) ವುಂಟೆ ?
ಗುಹೇಶ್ವರಲಿಂಗವು ನೆರೆ ಅರಿದೆನೆಂಬಲ್ಲಿ
ಮನವ ಮರೆಮಾಡಿ ಕಾಡುವನು.
ವಚನ 1289
ಮನವ ತೊಳೆದು ನಿರ್ಮಲವ ಮಾಡಿಹೆನೆಂಬ ಯೋಗವೆಂತುಟೊ ?
ಮನವ ಹಿಡಿದು ತಡೆದಿಹೆನೆಂಬವರ
ಮರುಳುಮಾಡಿ ಕಾಡಿತ್ತು ನೋಡಾ ಮನವು !
ಮನ ವಿಕಲ್ಪಜ್ಞಾನದಿಂದರಿದು,
ಅದ ಶುದ್ಧವ ಮಾಡಿಹೆನೆಂಬುದು ತಾನೆ ಮನ ನೋಡಾ.
ನಮ್ಮ ಗುಹೇಶ್ವರಲಿಂಗದ ಅನುವನರಿದಿಹೆನೆಂಬವರು,
ಮನವಿಲ್ಲದಿರಬೇಕು ನೋಡಾ ಸಿದ್ಧರಾಮಯ್ಯಾ.
ವಚನ 1290
ಮನವ ಮರೆದು ಮಾಡಿದಡೆ ಲಿಂಗರೂಪವಾಯಿತ್ತು.
ಧನವ ಮರೆದು ಮಾಡಿದಡೆ ಜಂಗಮರೂಪವಾಯಿತ್ತು.
ತನುವ ಮರೆದು ಮಾಡಿದಡೆ ಪ್ರಸಾದರೂಪವಾಯಿತ್ತು.
ಇಂತೀ ತ್ರಿವಿಧವನರಿದು ಮಾಡಿದಡೆ ಬಯಲು ರೂಪವಾಯಿತ್ತು.
ಮನವನರಿಯನಾಗಿ, ಲಿಂಗವನರಿತ.
ಧನವನರಿಯನಾಗಿ ಜಂಗಮವನರಿತ.
ತನುವನರಿಯನಾಗಿ ಪ್ರಸಾದವನರಿತ-
ಈ ತ್ರಿವಿಧಸುಖವ ಮರೆದನಾಗಿ ಬಯಲೆಂದರಿತ.
ಮನವ ಲಿಂಗ ಒಳಕೊಂಡಿತ್ತು.
ಧನವ ಜಂಗಮ ಒಳಕೊಂಡಿತ್ತು.
ತನುವ ಪ್ರಸಾದ ಒಳಕೊಂಡಿತ್ತು.
ಇಂತೀ ತ್ರಿವಿಧರೂಪವನು ಬಯಲು ಒಳಕೊಂಡಿತ್ತು ಗುಹೇಶ್ವರಾ.
ವಚನ 1291
ಮನವೆ ಲಿಂಗವಾದ ಬಳಿಕ ಇನ್ನಾರ ನೆನೆವುದಯ್ಯಾ ?
ಭಾವವೆ ಐಕ್ಯವಾದ ಬಳಿಕ ಬಯಸುವುದಿನ್ನಾರನು ?
ಭ್ರಮೆಯಳಿದು ನಿಜವು ಸಾಧ್ಯವಾದ ಬಳಿಕ
ಅರಿವುದಿನ್ನಾರನು ಗುಹೇಶ್ವರಾ ?
ವಚನ 1292
ಮನಸುಖವನರಿಯನಾಗಿ ಲಿಂಗವೆಂದರಿದನು.
ಧನಸುಖವನರಿಯನಾಗಿ ಜಂಗಮವೆಂದರಿದನು.
ತನುಸುಖವನರಿಯನಾಗಿ ಪ್ರಸಾದವೆಂದರಿದನು.
ಗುಹೇಶ್ವರಾ ನಿಮ್ಮ ಶರಣ ಸಂಗನಬಸವಣ್ಣ
ಸ್ವಯಲಿಂಗವಾದ ಕಾರಣ.
ವಚನ 1293
ಮರನುಳ್ಳನ್ನಕ್ಕ ಎಲೆ ಉಲಿವುದು ಮಾಬುದೆ ?
ಶರೀರವುಳ್ಳನ್ನಕ್ಕ ವಿಕಾರ ಮಾಬುದೆ ?
ಅಯ್ಯಾ ಸುಳುಹುಳ್ಳನ್ನಕ್ಕ ಸೂತಕ ಹಿಂಗೂದೆ
ಗುಹೇಶ್ವರಾ ?
ವಚನ 1294
ಮರನೊಳಗಣ ಕಿಚ್ಚು ಮರನಸುಟ್ಟಂತಾದೆನಯ್ಯಾ.
ಬಯಲ ಗಾಳಿಯ ಪರಿಮಳ ನಾಸಿಕವನಪ್ಪಿದಂತಾದೆನಯ್ಯಾ.
ಕರುವಿನ ಬೊಂಬೆಯನುರಿಯುಂಡಂತಾದೆನಯ್ಯಾ.
ಗುಹೇಶ್ವರನೆಂಬ ಲಿಂಗವ ಪೂಜಿಸಿ ಭವಗೆಟ್ಟೆನಯ್ಯಾ.
ವಚನ 1295
ಮರನೊಳಗಣ ಪತ್ರೆ ಫಲಂಗಳು, ಮರಕಾಲವಶದಲ್ಲಿ ತೋರುವಂತೆ,
ಹರನೊಳಗಣ ಪ್ರಕೃತಿಸ್ವಭಾವಂಗಳು, ಹರಭಾವದಿಚ್ಛೆಗೆ ತೋರುವವು.
ಲೀಲೆಯಾದಡೆ ಉಮಾಪತಿ, ಲೀಲೆ ತಪ್ಪಿದಡೆ ಸ್ವಯಂಭು ಗುಹೇಶ್ವರಾ.
ವಚನ 1296
ಮರಹು ಬಂದಹುದೆಂದು ಶ್ರೀಗುರು ಕರಸ್ಥಲಕ್ಕೆ ಕುರುಹ ಕೊಟ್ಟಡೆ;
ಆ ಕುರುಹು ನೋಟದಲ್ಲಿ ಅಳಿದು,
ಆ ನೋಟ ಮನದಲ್ಲಿ ಅಳಿದು,
ಆ ಮನ ಭಾವದಲ್ಲಿ ಅಳಿದು,
ಆ ಭಾವ ಜ್ಞಾನದಲ್ಲಿ ಅಳಿದು,
ಆ ಜ್ಞಾನ ಸಮರಸದಲ್ಲಿ ಅಳಿದ ಬಳಿಕ-
ಇನ್ನು ಅರಿವ ಕುರುಹಾವುದು ಹೇಳಾ ?
ನೀನರಸುವ ಕುರುಹು ಎನ್ನ ಕರಸ್ಥಲದ ಲಿಂಗ,
ಎನ್ನ ಕರಸ್ಥಲ ಸಹಿತ ನಾನು ನಿನ್ನೊಳಗೆ ನಿರ್ವಯಲಾದೆ.
ಎನ್ನ ನಿರ್ವಯಲಲಿಂಗ ನಿನಗೆ ಸಾಧ್ಯವಾಯಿತ್ತಾಗಿ;
ನೀನೇ ಪರಿಪೂರ್ಣನಯ್ಯಾ.
ನಿನ್ನಲ್ಲಿ ಮಹಾಲಿಂಗವು ಸಾಧ್ಯವಾಗಿ ಅದೆ.
ಗುಹೇಶ್ವರ ಸಾಕ್ಷಿಯಾಗಿ,
ನೀ ಬಯಸುವ ಬಯಕೆ ಸಂದಿತ್ತು ಕಾಣಾ ಸಂಗನಬಸವಣ್ಣಾ.
ವಚನ 1297
ಮರುಳುಂಡ ಮನುಷ್ಯನ ಇರವಿನ ಪರಿಯಂತೆ,
ವಿವರವನರಿಯಬಾರದು ನೋಡಾ,-ಶಿವಜ್ಞಾನ.
ಅದನರಿದೆಹೆನರಿದೆಹೆನೆಂದು ನೆನೆಯ ಹೋದರೆ, ಅದು ಮುಂದುದೋರದು.
ಮರೆದೆಹೆನೆಂದು ಭಾವಿಸ ಹೋದಡೆ ತೆರಹುಗೊಡದು !
ಗುಹೇಶ್ವರಾ, ನಿಮ್ಮ ನೆರೆ ಅರಿದ ಶರಣರು;
ನಿಸ್ಸೀಮಸುಖಿಗಳು ನೋಡಾ.
ವಚನ 1298
ಮರ್ತ್ಯಲೋಕದ ಮಹಾಮನೆ ಹಾಳಾಗಿ ಹೋಗಬಾರದೆಂದು
ಕರ್ತನಟ್ಟಿದನಯ್ಯಾ ಒಬ್ಬ ಶರಣನ !
ಆ ಶರಣ ಬಂದು ಕಲ್ಯಾಣವೆಂಬ ಶಿವಪುರವ ಕೈಲಾಸವ ಮಾಡಿ
ರುದ್ರಗಣ ಪ್ರಮಥಗಣಂಗಳೆಲ್ಲರ ಹಿಡಿತಂದು
ಅಮರಗಣಂಗಳೆಂದು ಹೆಸರಿಟ್ಟು ಕರೆದು,
ಅಗಣಿತಗಣಂಗಳೆಲ್ಲರ ಹಿಡಿತಂದು,
ಅಸಂಖ್ಯಾತರೆಂಬ ಹೆಸರಿಟ್ಟು ಕರೆದು,
ಭಕ್ತಿಯ ಕುಳಸ್ಥಲವ ಶ್ರುತದೃಷ್ಟಪವಾಡದಿಂದ ಮರೆದು ತೋರಿ,
ಜಗವರಿಯಲು ಶಿವಾಚಾರವ ಧ್ವಜವನೆತ್ತಿಸಿ
ಮರ್ತ್ಯಲೋಕ ಶಿವಲೋಕವೆರಡಕ್ಕೆ ನಿಚ್ಚಿಣಿಗೆಯಾದನು.
ಆ ಶಿವಶರಣನ ಮನೆಯೊಳಗಿಪ್ಪ ಶಿವಗಣಂಗಳ ತಿಂಥಿಣಿಯ ಕಂಡು,
ಎನ್ನಮನ ಉಬ್ಬಿಕೊಬ್ಬಿ ಓಲಾಡುತ್ತಿದ್ದೆನಯ್ಯಾ !
ನಮ್ಮ ಗುಹೇಶ್ವರನ ಶರಣ ಸಂಗನಬಸವಣ್ಣನ
ದಾಸೋಹದ ಘನವನೇನೆಂದೆನಬಹುದು ನೋಡಾ ಸಿದ್ಧರಾಮಯ್ಯಾ.
ವಚನ 1299
ಮಲಿನ ದೇಹಕ್ಕೆ ಮಜ್ಜನವಲ್ಲದೆ, ನಿರ್ಮಲದೇಹಕ್ಕೆ ಮಜ್ಜನವೇಕೊ ?
ಉಂಟೆ ವಿಷಯ ಲಿಂಗ ನಿಷ್ಪತಿಯಾದ ಶರಣಂಗೆ ?
ಆಗಮ್ಯ ಅಗೋಚರ ಅಪ್ರಮಾಣ ಗುಹೇಶ್ವರಾ-ನಿಮ್ಮ ಶರಣ.
ವಚನ 1300
ಮಸಿಯಿಲ್ಲದ ಗೂಡಿನೊಳಗೆ
ಹೊಸಬಣ್ಣದ ಪಕ್ಷಿಯ ಗೂಡನೈದೆ ಭಸ್ಮವ ಮಾಡಿ ನುಂಗಿ,
ಶಿಶು ತಾಯ ಬೆಸಲಾಗಲಾ ತಾಯಿ ಶಿಶುವನೆ ನುಂಗಲಾ ಶಿಶು
ಕೋಪದಿಂದಲಾ ತಾಯ ಐದೆ ನುಂಗಿ,
ಹೊಸ ದೇಶದಿಂದೊಬ್ಬನಾರಯ್ಯ ಬಂದಾತ ಪೆಸರಿಲ್ಲದಂತಿಪ್ಪರನೈದೆ ನುಂಗಿ,
ಬಸವ ಚೆನ್ನಬಸವ ಅನುಮಿಷ ಗುಹೇಶ್ವರ ಸಹಿತವಾಗಿ
ಶಿಶುವಿನ ಕರಸ್ಥಲದಲ್ಲಿ ಸುಖಿಯಾದರು.
ವಚನ 1301
ಮಹಾಘನವೆ ತಾನಾದ ಬಳಿಕ ಪುಣ್ಯವಿಲ್ಲ, ಪಾಪವಿಲ್ಲ;
ಸುಖವಿಲ್ಲ, ದುಃಖವಿಲ್ಲ;
ಕಾಲವಿಲ್ಲ, ಕರ್ಮವಿಲ್ಲ;
ಜನನವಿಲ್ಲ, ಮರಣವಿಲ್ಲ;
ಗುಹೇಶ್ವರಾ ನಿಮ್ಮ ಶರಣಂಗೆ ! ಆತ ಮಹಾಮಹಿಮ ನೋಡಯ್ಯಾ.
ವಚನ 1302
ಮಹಾಜ್ಞಾನದೊಳಗೆ ಪರಮಾನಂದ ನಿಜಬಿಂದು.
ಆ ನಿಜದೊಳಗೆ ಪರಮಾಮೃತ ತುಂಬಿ,
ಮೊದಲ ಕಟ್ಟೆಯೊಡೆದು ನಡುವಳ ಕಟ್ಟೆಯನಾಂತುದು,
ಮೊದಲ ಕಟ್ಟೆಯು, ನಡುವಳ ಕಟ್ಟೆಯು ಒಡೆದು,
ಕಡೆಯ ಕಟ್ಟೆಯನಾಂತುದು,
ಮೊದಲ ಕಟ್ಟೆಯು, ನಡುವಳ ಕಟ್ಟೆಯು,
ಕಡೆಯ ಕಟ್ಟೆಯು ಕೂಡಿ ಕಟ್ಟೆ ಕಟ್ಟೆಯನಾಂತುದು.
ಈ ಮೂರು ಕಟ್ಟೆಯೊಡೆದ ಮಹಾಜಲವನು ಪರಮ ಪದವಾಂತುದು.
ಆ ಪರಮ ಪದದಲ್ಲಿ ಎರಗಿ,
ನಾನು ಪಾದೋದಕ ಸಂಬಂದಿಯಾಗಿ,
ಎನ್ನ ನಾನರಿಯದಾದೆ ಕಾಣಾ ಗುಹೇಶ್ವರಾ.
ವಚನ 1303
ಮಹಾಮಂಜಿನ ಸಂಗ್ರಹದ ಘಟಾಘಟಿತರವರೆಲ್ಲರು
ಕುಂಜರನ ಪಂಜರದಲ್ಲಿ ಸಂಜೀವಿತರಾಗಿಪ್ಪರು !
ಎಂಜಲವನುಂಡು ಬಂದು ಅಂಜದೆ ನುಡಿವುತ್ತಿಪ್ಪರು.
ರಂಜನೆಗೊಳಗಪ್ಪುದೆ ? -ಆಗರದ ಸಂಚವನರಿಯರು !
ರಂಜಕನೂ ಅಲ್ಲ, ಭುಂಜಕನೂ ಅಲ್ಲ,
ಗುಹೇಶ್ವರಾ ನಿಮ್ಮ ಶರಣ ಸಂಜೀವನರಹಿತನು !
ವಚನ 1304
ಮಹಾಮೇರುವಿನ ಮರೆಯಲ್ಲಿರ್ದು,
ಭೂತದ ನೆಳಲನಾಚರಿಸುವ ಕರ್ಮಿ, ನೀ ಕೇಳಾ,
ಆ ಮಹಾಲಿಂಗಕ್ಕೆ ಮಜ್ಜನವೆಂದೇನೊ ?
ಪರಿಮಳಲಿಂಗಕ್ಕೆ ಪತ್ರಪುಷ್ಪಗಳೆಂದೇನೊ ?
ಜಗಜ್ಯೋತಿಲಿಂಗಕ್ಕೆ ಧೂಪದೀಪಾರತಿಗಳೆಂದೇನೊ ?
ಅಮೃತಲಿಂಗಕ್ಕೆ ಆರೋಗಣೆಯೆಂದೇನೊ ?
ಗುಹೇಶ್ವರಲಿಂಗದಂತುವ ಬಲ್ಲವರಾರೊ ?
ವಚನ 1305
ಮಹಾಲಿಂಗಕ್ಕೆ ಮಜ್ಜನವೆಂದರೇನು ?
ಪರಿಮಳದ ಲಿಂಗಕ್ಕೆ ಪತ್ರಿಪುಷ್ಪವೆಂದರೇನು ?
ಜಗಜ್ಯೋತಿ ಲಿಂಗಕ್ಕೆ ದೀಪಾರತಿ ಎಂದರೇನು ?
ಅಮೃತಲಿಂಗಕಾರೋಗಣೆ ಎಂದರೇನು ?
ಗುಹೇಶ್ವರಲಿಂಗದಂತುವ ಬಲ್ಲವರಾರೊ ?
ವಚನ 1306
ಮಾಡಿ ಮಾಟವ ಮರೆದು, ಕೂಡಿ ಕೂಟವ ಮರೆದು,
ಬಯಲ ಸಮರಸದೊಳಗೆ ಬಯಲ ಬಯಲಾಗಿಪ್ಪವರಾರು ಹೇಳಾ
ಬಸವಣ್ಣನಲ್ಲದೆ ?
ತನ್ನ [ಅ?] ಬಿನ್ನವ ಮಾಡಿ ಅನ್ಯವೇನೂ ಇಲ್ಲದೆ
ತನ್ನ ತಾ ಮರೆದಿಪ್ಪವರಾರು ಹೇಳಾ
ಬಸವಣ್ಣನಲ್ಲದೆ ?
ಗುಹೇಶ್ವರಾ ನಿಮ್ಮ ಶರಣ ಸಂಗಬಸವಣ್ಣನ ನಿಲವಿಂಗೆ
ನಮೋ ನಮೋ ಎಂಬೆನು.
ವಚನ 1307
ಮಾಡಿದ ಓಗರ ಮಾಡಿದಂತಿದ್ದಿತ್ತು,
ನೀಡಿದ ಕೈಗಳೆಡೆಯಾಡುತ್ತಿರ್ದವು.
ಲಿಂಗಕರ್ಪಿತವ ಮಾಡಿದೆವೆಂಬರು.
ಒಂದರಲೊಂದು ಸವೆಯದು ನೋಡಾ.
ಲಿಂಗವಾರೋಗಣೆಯ ಮಾಡಿದನೆಂಬರು,
ತಾವುಂಡು ನಿಮ್ಮ ದೂರುವರು ಗುಹೇಶ್ವರಾ.
ವಚನ 1308
ಮಾಡಿಹೆ ಮಾಡಿಹೆನೆಂಬನ್ನಬರ
ತನ್ನ ಅವದಿಗೆ ಬಂದುದನು ಅರಿವ ಪರಿ ಇನ್ನೆಂತೊ ?
ಅಗಸ ನೀರಡಿಸಿ ನಿಂದಂತೆ ಆಗಬೇಡ ಮಾರಯ್ಯಾ,
ಗುಹೇಶ್ವರಲಿಂಗವ ಅರಿವುದಕ್ಕೆ.
ವಚನ 1309
ಮಾಡುವ ಭಕ್ತನಲ್ಲಿ ಕೂಡಿಪ್ಪ ಜಂಗಮವು.
ಖೋಡಿಗಳೆವುತ್ತಿಪ್ಪರು ಒಬ್ಬರನೊಬ್ಬರು,
ತಮ್ಮವರ ತಾವರಿಯದಖಂಡಿತರು.
ಒಡಲ ಗುಣಧರ್ಮದಿಂದ ಅನ್ನಾಸನ ಪಂಕ್ತಿಗೆ
ಹೋರುವವರಿಗೇಕೆ ಶಿವನ ವೇಷ ?
ಜಂಗಮವೆನಿಸಿಕೊಳ್ಳವೆ ಚರಾಚರವೆಲ್ಲವು ?
ಅರಸನ ಹೆಸರಿನಲ್ಲಿ ಕರೆಯಿಸಿಕೊಂಡ ಅನಾಮಿಕನಂತೆ
ನಾಮ ರೂಪ ಇರ್ದಡೇನಾಯಿತ್ತು ? ಅಲ್ಲಿ ಶಿವನಿಲ್ಲ !
ಎಲ್ಲಾ ಅವನಿಯಲ್ಲಿ ಹೇಮವಿಪ್ಪುದೆ ? ಇಪ್ಪುದೊಂದುಠಾವಿನಲ್ಲಿ.
ಪರಮನ ವೇಷಕ್ಕೆ ತಕ್ಕ ಚರಿತ್ರವುಳ್ಳಲ್ಲಿ ಶಿವನಿಪ್ಪನು.
ಅದೆಂತೆಂದಡೆ : ಧಾರಯೇತ್ ಸಮತಾಕಂಥಾಂ ಕ್ಷಮಾಖ್ಯಾಂ ಭಸ್ಮಘುಟಿಕಾಂ ದಯಾ ಕಮಂಡಲಮೇವ ಜ್ಞಾನದಂಡೋ ಮನೋಹರಃ ಬಿಕ್ಷಾಪಾತ್ರಂ ಚ ವೈರಾಗ್ಯಭಕ್ತಿಬಿಕ್ಷಾಂ ಚ ಯಾಚಯೇತ್ ‘ ಎಂದುದಾಗಿ ಅರಿವಿನ ವೇಷವ ಜ್ಞಾನದಲ್ಲಿ ಧರಿಸಿ, ಕುರುಹಿನ ವೇಷವ ಅಂಗದಲ್ಲಿ ಧರಿಸಿ
ಭಕ್ತಿಬಿಕ್ಷಾಂದೇಹಿ’
ಆದ ಅರಿವುಮೂರ್ತಿಗೆ ವೇಷವು ತಾ ಬೇಡ,
ಗುಹೇಶ್ವರಲಿಂಗದ ಆಣತಿಯುಂಟಾಗಿ.
ವಚನ 1310
ಮಾಡುವ ಮಾಟದಿಂದವೆ ಬೇರೊಂದ ಅರಿಯಬೇಕು
ಅರಿವಿಂಗೆ ನೆಮ್ಮುಗೆ ಒಡಗೂಡಬೇಕು.
ಅರಿವಿಂಗೆ ನೆಮ್ಮುಗೆ ಒಡಗೂಡಿದ ಬಳಿಕ
ಬಯಲ ಭ್ರಮೆಯ ಕಳೆದು
ನಮ್ಮ ಗುಹೇಶ್ವರಲಿಂಗದಲ್ಲಿ ನಿಜಪದವನೆಯ್ದುವುದು ಮಾರಯ್ಯಾ.
ವಚನ 1311
ಮಾತೆಂಬುದು ಜ್ಯೋತಿರ್ಲಿಂಗ, ಸ್ವರವೆಂಬುದು ಪರತತ್ವ;
ತಾಳೋಷ್ಠಸಂಪುಟವೆಂಬುದು ನಾದಬಿಂದುಕಳಾತೀತ.
ಗುಹೇಶ್ವರನ ಶರಣರು
ನುಡಿದು ಸೂತಕಿಗಳಲ್ಲ ಕೇಳಾ ಮರುಳೆ.
ವಚನ 1312
ಮಾನವ ತೋರಿಹ ಆವಿಂಗೆ ಕೊಳಗದ ತೋರಿಹ ಕೆಚ್ಚಲು.
ತಾಳುದ್ದ (ತಾಳ ಮರದುದ್ದ ?)ವೆರಡು ಕೋಡು ನೋಡಾ !
ಆದನರಸ ಹೋಗಿ ಆರುದಿನ, ಅದು ಕೆಟ್ಟು ಮೂರುದಿನ !
ಅಘಟಿತ ಘಟಿತ ಗುಹೇಶ್ವರಾ, [ಅರಸುವ ಬಾರೈ]
ವಚನ 1313
ಮಾಮರದೊಳಗೊಂದು ಮಾಯದ ಮಂಜು ಕವಿದಡೆ,
ಹೂ ಮಿಡಿ ಫಲಂಗಳು ಉದುರವಿನ್ನೆಂತೊ ?
ಮಂಜಿನ ರಸವನುಂಡು ಫಲ ನಿಮಿರ್ದು ಬೆಳೆದಡೆ,
ಆ ಫಲವ ನಾನು ಮುಟ್ಟೆನು ಕಾಣಾ ಗುಹೇಶ್ವರಾ.
ವಚನ 1314
ಮಾಯದ ಕೈಯಲಿ ಓಲೆ ಕಂಠವ ಕೊಟ್ಟಡೆ,
ಲಗುನ ವಿಗುನವ ಬರೆಯಿತ್ತು ನೋಡಾ
ಅರಗಿನ ಪುತ್ಥಳಿಗೆ ಉರಿಯ ಸೀರೆಯನುಡಿಸಿದಡೆ,
ಅದು ಸಿರಿಯ ಸಿಂಗಾರವಾಯಿತ್ತು ನೋಡಾ.
ಅಂಬರದೊಳಗಾಡುವ ಗಿಳಿ ಪಂಜರದೊಳಗಣ ಬೆಕ್ಕ ನುಂಗಿ
ರಂಭೆಯ ತೋಳಿಂದ ಅಗಲಿತ್ತು ನೋಡಾ-ಗುಹೇಶ್ವರಾ.
ವಚನ 1315
ಮಾಯದ ಬಲೆಯಲ್ಲಿ ಸಿಲುಕಿದ ಮರುಳ ನಾನೆಂದರಿದ ಪರಿಯ ನೋಡಾ !
ಲಿಂಗವೆಂದರಿದ ಪರಿಯ ನೋಡಾ !
ತನ್ನ ವಿನೋದಕ್ಕೆ ಬಂದು (ದ?) ನಿಶ್ಚಿಂತ ನಿರಾಳ
ಗುಹೇಶ್ವರನೆಂದರಿದ ಪರಿಯ ನೋಡಾ.
ವಚನ 1316
ಮಾಯಾಮಂಜಿನ ಜಲ ಉಕ್ಕಿ ಸಂಸಾರಕ್ಕೆ ಬೀಜವಾಗಿ
ಘಟಾನುಘಟಿತರ ಲಯಜನನವ ತನ್ನೊಳಗೆ ಮಾಡಿಸಿ
ಕುಂಜರ ಬಂದು ಸಿಂಹಾಸನವ ಸೀಳಿದಂತೆ
ನಿನ್ನಂಗದಲ್ಲಿ ನಿನ್ನನೆ ಕೊಲುವುದಾಗಿ-
ರಂಜನೆಗೆ ಸಿಲುಕುಗೊಳಿಸಿ ಮಂಜಿನ ರಂಜಕನ ಮಾಡದ ಮುನ್ನ
ನಿರಂಜನನಾಗು ಕಂಡಾ ನೀನು !
ನೀನಂಜದೆ ನೆನೆ ಕಂಡಾ ಗುಹೇಶ್ವರನ.
ವಚನ 1317
ಮಾಯಾಮಲಿನ ಮನದಿಂದಗಲದೆ,
ಕಾಯದ ದಂದುಗ ಕಳೆಯಿಂದಗಲದೆ,
ಅರಿವು ಬರಿದೆ ಬಪ್ಪುದೆ? ನಿಜವು ಬರಿದೆ ಸಾಧ್ಯವಪ್ಪುದೆ ?
ಮರುಳೆ, ಗುಹೇಶ್ವರಲಿಂಗವನರಿಯ ಬಲ್ಲಡೆ,
ನಿನ್ನ ನೀ ತಿಳಿದು ನೋಡಾ.
ವಚನ 1318
ಮಿಂದು ದೇವರ ಪೂಜಿಸಿಹೆನೆಂಬ ಸಂದೇಹಿ ಮಾನವಾ ನೀ ಕೇಳಾ,
ಮೀಯದೆ ಮೀನು ? ಮೀಯದೆ ಮೊಸಳೆ ?
ತಾ ಮಿಂದು, ತನ್ನ ಮೀಯದನ್ನಕ್ಕರ
ಈ ಬೆಡಗಿನ ಮಾತ ಮೆಚ್ಚುವನೆ ನಮ್ಮ ಗುಹೇಶ್ವರ ?
ವಚನ 1319
ಮುಂಡಧಾರಿಯ ತಲೆ ಮುಂದೆ ಬರ್ಪುದ ಕಂಡೆ.
ಜಟಾಧಾರಿಯ ತಲೆ ನಡೆದು ಹೋಯಿತ್ತ ಕಂಡೆ.
ಖಂಡಕಪಾಲಿಯ ಖಂಡವ ಕೊಯಿತ್ತ ಕಂಡೆ.
ಬಾಲಬ್ರಹ್ಮಚಾರಿಯ ಬಾರನೆತ್ತಿತ್ತ ಕಂಡೆ.
ಭಕ್ತರೆಲ್ಲರೂ ಸತ್ತು ನೆಲಕ್ಕಿಕ್ಕಿತ್ತ ಕಂಡೆ.
ಗುಹೇಶ್ವರಾ ನೀ ಸತ್ತು ಲಿಂಗವಾಯಿತ್ತ ಕಂಡೆ.
ವಚನ 1320
ಮುಂದಳೂರಿಗೆ ಬಟ್ಟೆ ಇದೇ ಹೋಗೆಂದಡೆ
ಅಂಧಕನೇನು ಬಲ್ಲನು ಹೇಳಾ ?
ಸಂಗ್ರಾಮದಲ್ಲಿ ಓಡಿದ ಹೆಂದೆ ಗೆಲಬಲ್ಲನೆ ಹೇಳಾ ?
ನಿಂದ ನಿಲವಿನ (ನೀರಿನ ?) ಮಡುವ ಕಂದನೀಸಾಡ ಬಲ್ಲನೆ ಹೇಳಾ ?
ಗುಹೇಶ್ವರನೆಂಬ ನಿರಾಳದ ಘನವ
ಪಂಚೇಂದ್ರಿ[ಯ]ಕನೆತ್ತ ಬಲ್ಲನು ಹೇಳಾ?
ವಚನ 1321
ಮುಂದು ಜಾವದಲೆದ್ದು, ಲಿಂಗದಂಘ್ರಿಯ ಮುಟ್ಟಿ,
ಸುಪ್ರಭಾತ ಸಮಯದಲ್ಲಿ ಶಿವಭಕ್ತರ ಮುಖವ ನೋಡುವುದು.
ಹುಟ್ಟಿದುದಕ್ಕೆ ಇದೇ ಸಫಲ ನೋಡಾ,
ಸತ್ಯವಚನವಿಂತೆಂದುದು-ಇವಿಲ್ಲದವರ ನಾನೊಲ್ಲೆ ಕಾಣಾ ಗುಹೇಶ್ವರಾ.
ವಚನ 1322
ಮುಕ್ತಿಗೆ ಮುಖವಾಗಿ ಯುಕ್ತಿಗೆ ಹೊರಗಾಗಿ
ಅರಿವಿಂಗೆ ಅರಿವಾಗಿಪ್ಪ ಭೇದ ಕಾಣಬಂದಿತ್ತು ನೋಡಾ !
ಅರಿವರಿತು ಮರಹು ನಷ್ಟವಾಗಿಪ್ಪುದು ನಿನ್ನಲ್ಲಿ ಸನ್ನಹಿತವಾಗಿತ್ತು.
ಗುಹೇಶ್ವರನ ಶರಣ ಅಜಗಣ್ಣನ ನಿಲವು
ಬಯಲ ಬೆರಸಿದ ಮರೀಚಿಯಂತಾಯಿತ್ತು,
ಬೆರಸಿ ನೋಡಾ ಬೇರಿಲ್ಲದೆ !
ವಚನ 1323
ಮುಕ್ತಿಗೆ ಮುಖವಾಗಿ ಯುಕ್ತಿಗೆ ಹೊರಗಾಗಿ
ಅರಿವಿಂಗೆ ಅರಿವಾಗಿಪ್ಪ ಭೇದವು
ಎನಗೆ ಕಾಣಬಂದಿತ್ತು ನೋಡಾ.
ನಿನ್ನ ಒಳಗ ಒರೆದು ನೋಡಿದಡೆ,
ಒರೆದೊರೆಯಿಲ್ಲದ ಚಿನ್ನದ ಪರಿಮಳ ಎನ್ನ ಮನವನಾವರಿಸಿ
ಪರಮಸುಖದ ಪರಿಣಾಮವನು ಒಳಕೊಂಡಿತ್ತು ನೋಡಾ.
ಈ ಕುರುಹಿನ ಮೊಳೆಯ
ಬರಿಯ ಬಯಲಲ್ಲಿ ನಿಲಿಸಿ ನೋಡಿ ಕೂಡಾ,
ನಮ್ಮ ಗುಹೇಶ್ವರನ ಶರಣ ಅಜಗಣ್ಣನೊಳಗೆ
ನೀನು ನಿರಾಳಸಂಗಿಯಾಗಿ.
ವಚನ 1324
ಮುಖಮಧ್ಯದಲ್ಲಿ ನೇತ್ರ,
ನೇತ್ರ ಮಧ್ಯದಲ್ಲಿ ಮನ,
ಮನೋ ಮಧ್ಯದಲ್ಲಿ ತಾನು ತಾನಲ್ಲದೆ,
ಮತ್ತೊಂದು ಸಾಕಾರವಿಲ್ಲದಂತಹುದು ತಾರಕಬ್ರಹ್ಮವು
ಗುಹೇಶ್ವರಾ.
ವಚನ 1325
ಮುಗಿಲ ಬಣ್ಣದ ಪಕ್ಷಿ ಮಗನ ಕೈಯ ಅರಗಿಳಿ,
ಗಗನನ[ದ] ಕೋಲಂಬಿನಲ್ಲಿ ಸ್ವಪ್ನದ ನಿಲವನು ತೆಗೆದೆಚ್ಚವನಾರೊ ?
ಉಪಮಿಸಬಾರದು !
ಜಾಗ್ರ ಸ್ವಪ್ನ ಸುಷುಪ್ತಿಯ ನಡುವೆ ತ್ರಿಜಗವಾಯಿತ್ತು.
ಜಗಜ್ಯೋತಿ, ನಿನ್ನ ಮಾಯೆಯನೇನೆಂಬೆನು ಗುಹೇಶ್ವರಾ.
ವಚನ 1326
ಮುಗಿಲನೆಚ್ಚ ಕೋಲು ಮುಗಿಲ ಮುಟ್ಟದೆ ಮರಳಿ ಬಿದ್ದಂತೆ,
ಏರಿ ಜಾರಿ ಬೀಳುವ ಪ್ರಾಣಿಗಳು ಅತ್ತಲಾರು ಬಲ್ಲರೊ ?
ಹೊನ್ನು ಹೆಣ್ಣು ಮಣ್ಣೆಂಬ ಬಲೆಯಲ್ಲಿ ಬಿದ್ದವರು ಅತ್ತಲಾರು ಬಲ್ಲರೊ ?
ಗುಹೇಶ್ವರಾ, ನಿಮ್ಮ ಬಂದಿವಿಡಿದು ಸಯಬಂದಿಯಾದೆನು !
ವಚನ 1327
ಮುಟ್ಟದ ಮುನ್ನ ನರರು, ಸುರರು, ಕಿನ್ನರರು
ಮೊದಲಾದವರೆಲ್ಲರೂ ಪಿಂಡವೆಂಬ ಭಾಂಡದಲ್ಲಿ
ಅಡಗಿದರಾಗಿ
ನಾನವರ ರೂಪಿಸಬಲ್ಲೆ.
ದೇವಗಣ ಪ್ರಮಥಗಣ, ರುದ್ರಗಣಂಗಳೆಂಬವರೆಲ್ಲರೂ
ಬ್ರಹ್ಮಾಂಡವೆಂಬ ಭಾಂಡದಲ್ಲಿ ಅಡಗಿದರಾಗಿ,
ನಾನವರ ಭಾವಿಸಬಲ್ಲೆ.
ಸತ್ಯರು, ನಿತ್ಯರು, ಮುಕ್ತರೆಂಬ ಮಹಾಮಹಿಮರೆಲ್ಲರೂ
ಚಿದ್ಭಾಂಡವೆಂಬ ಭಾಂಡದಲ್ಲಿ ಅಡಗಿದರಾಗಿ,
ನಾನವರನರಿದು ಬಲ್ಲೆ.
ಇಂತೀ ತ್ರಿಭಾಂಡವನೊಳಕೊಂಡ ಆ ಅಖಂಡಿತದಿರವೆ
ತಾನೆಂದರಿದ ಲಿಂಗೈಕ್ಯನ ರೂಹಿಸಲಿಲ್ಲಾಗಿ,
ಭಾವಿಸಲಿಲ್ಲಾಗಿ, ಅರಿಯಲಿಲ್ಲ.
ಅರಿವೆ ತಾನೆಂದರಿದ ಬಳಿಕ, ಗುಹೇಶ್ವರನೆಂಬುದು
ಬಯಲು ನೋಡಾ !
ವಚನ 1328
ಮುನಿಯದಿರಿ ಮುನಿಯದಿರಿ ನಿಮಗೊಂದು ಯುಕ್ತಿಯ ಹೇಳಿಹೆನು,
ಅದೆಂತೆಂದಡೆ:
ನೀವೆನ್ನ ವಂಶೀಭೂತರಾದ ಕಾರಣ-ನಿಮ್ಮ ಹೆಚ್ಚು ಕುಂದು ಎನ್ನದಾಗಿ,
ನಿಮ್ಮ ಅಸ್ತಿ ನಾಸ್ತಿ ಎನ್ನದಾಗಿ,
ನಿಮ್ಮ ಹಾನಿವೃದ್ಧಿ ಎನ್ನದಾಗಿ.
ಹಾವ ಹಡದವರು ಬೇಲಿಯ ಹೊಗುವರೆ ಹೋಹುದೆ ಅಯ್ಯಾ ?
ವ್ಯಾಧನು ಸೂಸಲ ಚೆಲ್ಲಿ ಜಂತ್ರವ ಹಣ್ಣಿ,
ಅಡಿಗಲ್ಲನೊಡ್ಡಿ ಹೋದಬಳಿಕ
ಸೂಸಲ ಕಂಪಿಗೆ ಹೆಗ್ಗಣ ಬಂದು ಬಿದ್ದಂತೆ ಬಿದ್ದಿರಲ್ಲಾ ಮಾಯದ ಬಲೆಯಲ್ಲಿ !
ಕೋಪವೆಂಬ ಅಡಗನೊಡ್ಡಿ ತಾಪವೆಂಬ ಅರೆಗಲ್ಲನಿರಿಸಿ
ಹುಸಿಯೆಂಬ ಮೀಟುಗವಣೆಯ ಜಂತ್ರಿಸಿ,
ಹೊನ್ನು ಹೆಣ್ಣು ಮಣ್ಣೆಂಬ ಅಡಿಗಲ್ಲನೊಡ್ಡಿ
ಕೆಡಹಿದನಲ್ಲಾ ನಿಷ್ಕರುಣಿ ಮುಕ್ಕಣ್ಣ ವ್ಯಾಧನು !
ಅದೆಂತೆಂದಡೆ, ಶಿವರಹಸ್ಯದಲ್ಲಿ:
“ನಿಸ್ಸಂಗತ್ವಂ ನಿರಾಭಾರೀ ನಿಸ್ಸೀಮಂ ನಿರುಪಾದಿಕಂ
ನಿರ್ದೆಹಂ ನಿರ್ಮಲಂ ನಿತ್ಯಂ ಸತ್ಯಂ ಜಂಗಮಲಕ್ಷಣಂ
ಇಂತೆಂಬ ಶ್ರುತ್ಯರ್ಥವ ಕೇಳದೆ,
ಜಂಗಮವಾಗಿ ಸುಳಿವ ಮರುಳುಗಳಿರಾ ಕೇಳಿರೆ,
ಇದಕ್ಕೆ ಮತ್ತೆಯೂ ಶ್ರುತಿ:
“ಸುಖಂ ಚ ಬಿಂದುಮಾತ್ರೇಣ ದುಃಖಂ ಪರ್ವತ ಏವ ಚ
ಹರಿಣೀಪಾದಮಾತ್ರೇಣ ಬಂಧನಂ ತು ಜಗತ್ರಯಂ
ಇಂತೆಂಬ ಶ್ರುತಿಗೊಳಗಾಗದೆ ಹೊನ್ನು ಹೆಣ್ಣು ಮಣ್ಣಿನಾಸೆಯಂ ಬಿಟ್ಟು
ಕೋಪ ತಾಪಮಂ ಬಿಟ್ಟು,
ಭ್ರಾಂತು ಭ್ರಮೆಯಂ ಬಿಟ್ಟು
ಜಂಗಮವಾಗಬೇಕು ಕಾಣಿರೆ ಮರುಳುಗಳಿರಾ.
ಇಂತೀ ಷಡುಲೋಭದ ರುಚಿ ಹಿಂಗಿ ಜಂಗಮವಾದಲ್ಲದೆ
ಭವ ಹಿಂಗದು ಕಾಣಾ ಗುಹೇಶ್ವರಾ.
ವಚನ 1329
ಮುನ್ನ ಎಂತಾಯಿತ್ತು ? ಆಗದಡೆಂತಾಯಿತ್ತು ?
ತನ್ನ ತಾನು ಅರಸುತ್ತಿದ್ದಿತ್ತು.
ತನ್ನ ಬಚ್ಚಿಟ್ಟ ಬಯಕೆಯ ನಿಧಾನವ ಕಂಡು
ತಾನೆ ಮಹವೆಂದು ತಿಳಿದು ನೋಡಾ.
ಗುಹೇಶ್ವರಲಿಂಗ ತನ್ನುವ ತನ್ನಂತೆ ಮಾಡಿತ್ತು.
ವಚನ 1330
ಮುನ್ನಿನ ಪರಿಯಂತುಟಲ್ಲ.
ಆದಡೆಂತಹುದು? ಆಗದಡೆಂತಾಯಿತ್ತು ? (ಆದಡಿಂತಹುದೆ ? ಆಗದಡಿಂತಾಯಿತ್ತು)
ಹಲವು ಪರಿ ಬಗೆಯ ಬಯಕೆ ತಾರ್ಕಣೆಯಾದಂತೆ
ಗುಹೇಶ್ವರಲಿಂಗ, ತನುವ ತನ್ನತ್ತಲೊಯ್ದನು.
ವಚನ 1331
ಮುಸುರೆಯ ಮಡಕೆಯ ನೊಣ ಮುತ್ತಿಕೊಂಡಿಪ್ಪಂತೆ,
ಕಸವುಳ್ಳ ಹೊಲದಲ್ಲಿ ಪಶುಗಳು ನೆರೆದಿಪ್ಪಂತೆ,
ಅನ್ನ ಉದಕ ಹೊನ್ನು ವಸ್ತ್ರವುಳ್ಳ ದೊರೆಯ ಬಾಗಿಲಲ್ಲಿ
ಬಹುಭಾಷೆಯ ಹಿರಿಯರುಗಳು ನೆರೆದುಕೊಂಡಿಪ್ಪರು.
ಗುಹೇಶ್ವರಾ, ನಿಮ್ಮ ಶರಣರು ಆಶಾಪಾಶವಿರಹಿತರು !
ವಚನ 1332
ಮೂರರ ಹೊಲಿಗೆಯ ಬಿಚ್ಚಿ ಆರ ಮಾಡಲರಿಯರು !
ಆರರ ತಿರುಳ ತೆಗೆದು ಒಂದರೊಳಗೆ ನಿಲಿಸಲರಿಯರು !
ಐದರ ಮುಸುಕ ತೆಗೆದು ಐದರ ಕಳೆಯ ಕೆಡಿಸಿ,
ಐದರ ನಿಲವನಡಗಿಸಿ ಮೂರುಸಂಕಲೆಯ ಕಳದು
ಮೂರರ ಮುದ್ರೆಯನೊಡದು ಒಂದುಮುಖವಾಗಿನಿಂದಲ್ಲದೆ
ಜಂಗಮವಾಗಲರಿಯರು ಕಾಣಾ ಗುಹೇಶ್ವರಾ.
ವಚನ 1333
ಮೂರರಲ್ಲಿ ಮುಟ್ಟಲಿಲ್ಲ, ಆರರಲ್ಲಿ ತೋರಲಿಲ್ಲ.
ಎಂಟರಲ್ಲಿ ಕಂಡುದಿಲ್ಲ ಒಂದರಲ್ಲಿ ನಿಂದುದಿಲ್ಲ.
ಏನೆಂದೆಂಬೆ ? ಎಂತೆಂದೆಂಬೆ ?
ಕಾಯದಲ್ಲಿ ಅಳಿದುದಿಲ್ಲ ಜೀವದಲ್ಲಿ ಉಳಿದುದಿಲ್ಲ,
ಗುಹೇಶ್ವರನೆಂಬ ಲಿಂಗವು ಶಬ್ದಕ್ಕೆ ಬಂದುದಿಲ್ಲ
ವಚನ 1334
ಮೂರು ಪುರದ ಹೆಬ್ಬಾಗಿಲೊಳಗೊಂದು ಕೋಡಗನ ಕಟ್ಟಿರ್ದುದ ಕಂಡೆ.
ಅದು ಕಂಡಕಂಡವರನೇಡಿಸುತ್ತಿದ್ದಿತ್ತು ನೋಡಾ!
ಆ ಪುರದರಸು ತನ್ನ ಪಾಯದಳ ಸಹಿತ ಬಂದಡೆ,
ಒಂದೆ ಬಾರಿ ಮುರಿದು ನುಂಗಿತ್ತ ಕಂಡೆ.
ಆ ಕೋಡಗಕ್ಕೆ ಒಡಲುಂಟು ತಲೆಯಿಲ್ಲ.
ಕಾಲುಂಟು ಹೆಜ್ಜೆಯಿಲ್ಲ, ಕೈಯುಂಟು ಬೆರಳಿಲ್ಲ.
ಇದು ಕರಚೋದ್ಯ ನೋಡಾ,
ತನ್ನ ಕರೆದವರ ಮುನ್ನವೆ ತಾ ಕರೆವುದು!
ಆ ಕೋಡಗ ತನ್ನ ಬಸುರಲ್ಲಿ ಬಂದ ಮದಗಜದ ನೆತ್ತಿಯನೇರಿ,
ಗಾಳಿಯ ದೂಳಿಯ ಕೂಡಿ ಓಲಾಡುತ್ತಿಹುದ ಕಂಡೆ !
ವಾಯದ ಗಗನದ ಮೇಲೆ ತನ್ನ ಕಾಯವ,
ಪುಟನೆಗೆದು ತೋರುತ್ತಿಹುದ ಕಂಡೆ !
ಹತ್ತು ಮುಖದ ಸರ್ಪನ ತನ್ನ ಹೇಳಿಗೆಯೊಳಗಿಕ್ಕಿ,
ಆಡಿಸುತ್ತಿಹುದ ಕಂಡೆ !
ಐವರು ಕೊಡಗೂಸುಗಳ ಕಣ್ಣಿಂಗೆ,
ಕನ್ನಡಕವ ಕಟ್ಟುತಿಹುದ ಕಂಡೆ!
ಹತ್ತು ಕೇರಿಗಳೊಳಗೆ ಸುಳಿವ ಹರಿಯ ನೆತ್ತಿಯ ಮೆಟ್ಟಿ,
ಹುಬ್ಬೆತ್ತುತ್ತಿಹುದ ಕಂಡೆ !
ಆ ಕೋಡಗದ ಕೈಯೊಳಗೆ ಮಾಣಿಕವ ಕೊಟ್ಟರೆ,
ನೋಡುತ್ತ ನೋಡುತ್ತ ಬೆರಗಾದುದ ಕಂಡೆ !
ಕೂಡಲಿಲ್ಲ ಕಳೆಯಲಿಲ್ಲ;
ಗುಹೇಶ್ವರ[ನ]ನಿಲುವು, ಪ್ರಾಣಲಿಂಗಸಂಬಂಧವಿಲ್ಲದವರಿಗೆ ಕಾಣಬಾರದು.
ವಚನ 1335
ಮೂರುಲೋಕಕೊಂದು ಪುಷ್ಪ !
ಆ ಪುಷ್ಪದ ಬಂಡ ಉಣಬಂದ ತುಂಬಿಯ ನೋಡಾ !
ತುಂಬುತ್ತ ಕೆಡಹುತ್ತಲೈದಾವೆ ಅವು ತಮ್ಮ ಪೂರ್ವಜನ್ಮಂಗಳಿಗೆ !
ಅದಕ್ಕೆ ಇಕ್ಕಿದೆನು ಒರೆಯ,
ಕಟ್ಟಿದೆನು ತೊಡರ,
ಓಡದ ಬಿರುದು ಗುಹೇಶ್ವರಾ.
ವಚನ 1336
ಮೂರುಲೋಕದ ದಿರೆ ನಿದ್ರಾಂಗನೆ,
ಎಲ್ಲರನೂ ಹಿಂಡಿ ಹೀರಿ ಪ್ರಾಣಾಕರ್ಷಣೆಯ ಮಾಡಿ,
ಕಟ್ಟಿ ಕೆಡಹಿದಳಲ್ಲಾ !
ಇವಳ ಗೆಲುವ ದಿರನಾರುವನೂ ಕಾಣೆ
ಇವಳ ಬಾಣಕ್ಕೆ ಗುರಿಯಾಗಿ
ಏಳುತ್ತ ಬೀಳುತ್ತಲಿದ್ದರು ಎಲ್ಲರೂ-ಗುಹೇಶ್ವರಾ.
ವಚನ 1337
ಮೂಲ ಮಂತ್ರವ ಕರ್ಣದಲ್ಲಿ ಹೇಳಿ
ಶ್ರೀ ಗುರು ಶಿಷ್ಯನಂಗದ ಮೇಲೆ ಲಿಂಗ ಪ್ರತಿಷ್ಠೆಯ ಮಾಡಿದ ಬಳಿಕ
ತನುವಿನೊಳಗೆ ಲಿಂಗ ಬೇರಿಪ್ಪುದೆಂಬ
ವ್ರತಗೇಡಿಯ ಮಾತ ಕೇಳಲಾಗದು.
ಒಳಗಿಪ್ಪನೆ ಲಿಂಗದೇವನು ?
ಮಲಮೂತ್ರದ ಹೇಸಿಕೆಯೊಳಗೆ,
ಪ್ರಾಣವಿಪ್ಪುದಲ್ಲದೆ ಲಿಂಗವಿಪ್ಪುದೆ ?
ಆ ಪ್ರಾಣನ ತಂದು, ತನ್ನ ಇಷ್ಟಲಿಂಗದಲ್ಲಿರಿಸಿ
ನೆರೆಯಬಲ್ಲರೆ ಆತನೆ ಪ್ರಾಣಲಿಂಗಸಂಬಂದಿ.
ಇಷ್ಟಿಲ್ಲದವರ ಮೆಚ್ಚುವನೆ ನಮ್ಮ ಗುಹೇಶ್ವರಲಿಂಗವು ?
ವಚನ 1338
ಮೃಗದ ಸಂಚದ ತಲೆಯಲ್ಲಿ ಜಗದ ಬಯಲ ನಾಲಗೆ!
ಅಘಹರನ ದೃಷ್ಟಿಯಲ್ಲಿ ಬೊಬ್ಬೆಯಬ್ಬರವಿದೇನೊ?
ಗಗನದ ವಾಯುವ ಬೆಂಬಳಿವಿಡಿದು,
ಅಗ್ನಿಯಪ್ಪಿನ ಕಳೆಯಲ್ಲಿ ಮೇದಿನಿ ಅಡಗಿತ್ತು ನೋಡಾ!
ಮನದ ಬಗೆಯನವಗ್ರಹಿಸಿ, ಜಗದ ಬಣ್ಣವ ನುಂಗಿ,
ಗುಹೇಶ್ವರನೆಂಬ ಲಿಂಗದಲ್ಲಿ ನಿರಾಳವಾಯಿತ್ತು.
ವಚನ 1339
ಮೃಡನೆ ನಿಮ್ಮ ಪುರಾತನರ ಕಾಣುತ್ತ,
ತಡೆಯದೆ ಇದಿರೆದ್ದು ಹೊಡೆವಡೆನಾಗಿ ಬಿಡದು ನಾಚಿಕೆ.
ಸುಡಲಿಕೆನ್ನ ನುಡಿಹ,
ಸಡಿಲದೆನ್ನ ಅಹಂಕಾರ ನೋಡಯ್ಯಾ.
ಬಡಮನದವನ ಜಡಿದು ನಡೆಸಯ್ಯಾ ಗುಹೇಶ್ವರಾ.
ವಚನ 1340
ಮೇರುಗಿರಿಗಳೆಲ್ಲವೂ ಪ್ರಮಥರೊಡವೆ.
ರಜತಗಿರಿಗಳೆಲ್ಲವೂ ಪುರಾತರೊಡವೆ.
ಚತುರ್ದಶ ಭುವನವೆಲ್ಲವೂ ಲಿಂಗದೊಡವೆ.
ಪೃಥ್ವಿ ಎಂಬುದು ಕರ್ತಾರನ ಕಮ್ಮಟ ಅಚ್ಚಿನ ಮೊಳೆ ಬಾಣಸದ ಮನೆ.
ತನುಮನಧನಂಗಳೆಲ್ಲವು ನಮ್ಮ ಗುಹೇಶ್ವರಲಿಂಗದ ಸೊಮ್ಮು.
ನೀನೇನ ಕೊಟ್ಟು ಭಕ್ತನಾದೆ ಹೇಳಾ ಬಸವಣ್ಣಾ ?
ವಚನ 1341
ಮೇರುಮಂದಿರದಲ್ಲಿ ಈರೈದರತಲೆ,
ಧಾರುಣಿಯ ಜನರೆಲ್ಲ ಬಣ್ಣಿಸುತ್ತಿಪ್ಪರು.
ಜ್ಞಾನಾಮೃತರಸದಲ್ಲಿ ಓಗರವ ಮಾಡಿ ಆರೋಗಣೆಯ ಮಾಡಿದೆನು.
ವಿಷಮಾಕ್ಷ ಹರ ಭಸ್ಮವಿಭೂಷಣ ಶಶಿಧರ
ಶರಣು ಶರಣೆನುತಿದ್ದೆನು.
ಇಂದ್ರಾಗ್ನಿಯ ಪುರಪಟ್ಟಣದಲ್ಲಿ ಚಂದ್ರಾಹಾರವ (ಚಂದ್ರಹಾರ?) ಬೇಡಿದಡೆ
ಖಂಡಕಪಾಲದಲ್ಲಿ ಉಂಡ ತೃಪ್ತಿ,
ಅಖಂಡ ನಿರಾಳ ಗುಹೇಶ್ವರ.
ವಚನ 1342
ಮೇರುವ ಸಾರಿದ ಕಾಗೆ ಹೊಂಬಣ್ಣವಾಗದಿದ್ದಡೆ,
ಆ ಮೇರುವಿಂದತ್ತಣ ಹುಲುಮೊರಡಿಯೆ ಸಾಲದೆ ?
ದೇವಾ, ನಿಮ್ಮ ಪೂಜಿಸಿ ಧಾವತಿಗೊಂಬಡೆ,
ಆ ಧಾವತಿಯಿಂದ ಮುನ್ನಿನ ವಿಧಿ[ಯೆ] ಸಾಲದೆ ?
ಗುಹೇಶ್ವರಾ, ನಿಮ್ಮ ಪೂಜಿಸಿ ಸಾವಡೆ,
ನಿಮ್ಮಿಂದ ಹೊರಗಣ ಜನವೆ ಸಾಲದೆ ?
ವಚನ 1343
ಮೊಲೆಯಿಲ್ಲದಾವಿಂಗೆ ತಲೆ[ಯೆ] ಮೊಲೆ !
ಮನದಲ್ಲಿ ಉಣ್ಣು ಕಂಡಾ, ಮನದಲ್ಲಿ ಉಣ್ಣು ಕಂಡಾ !
ತಾ ಸತ್ತು, ಹಾಲ ಕುಡಿಯ ಬಲ್ಲಡೆ,
ಗುಹೇಶ್ವರನೆಂಬ ಲಿಂಗವು ತಾನೆ ಕಂಡಾ !
ವಚನ 1344
ಮೋಟರ ಮದುವೆಗೆ ಭಂಡರು ಹರೆಯ ಹೊಯ್ದು,
ಮೂಕೊರತಿಯರು ಕಳಸವ ಹೊತ್ತರಲ್ಲಾ !
`ಉಘೇ ಚಾಂಗು ಭಲಾ’ ಎಂದು ನಿಬ್ಬಣ ನೆರೆದು,
ಹೂದಂಬುಲಕ್ಕೆ ಮುನಿವರದೇಕಯ್ಯಾ ?
ತ್ರಿಜಗವೆಲ್ಲಾ ನಿಬ್ಬಣವಾಯಿತ್ತು,
ಗುಹೇಶ್ವರನನರಿಯದ ಹಗರಣವೊ !
ವಚನ 1345
ಯುಕ್ತಿಯ ಕೇಳಿದಡೆ ಭಕ್ತಿಯ ತೋರಿದ.
ಭಕ್ತಿಯ ಕೇಳಿದಡೆ ಯುಕ್ತಿಯ ತೋರಿದ.
ನಿತ್ಯವ ಬೆಸಗೊಂಡಡೆ ಅತ್ತತ್ತಲೋಸರಿಸಿದ.
ಗುಹೇಶ್ವರನ ಶರಣ ಬಸವಣ್ಣ,
ಮರೆಗೆ ಮರೆಯನೊಡ್ಡಿ ಜಾರಿದನು.
ಬಸವಣ್ಣನ ಪರಿ ಎಂತು ಹೇಳಾ ಮಡಿವಾಳ ಮಾಚಯ್ಯಾ.
ವಚನ 1346
ಯುಗ ಜುಗವ ಬಲ್ಲೆನೆಂಬವರು,
ನಿಚ್ಚಕ್ಕೆ ನಿಚ್ಚ ಬಪ್ಪ ಚಿಕ್ಕುಟು ಸಾವನರಿಯರು.
ಬಾಯ ಬಾಗಿಲ [ಉಲುಹು], ತಲೆಹೊಲದ ಹುಲ್ಲೊಣಗಿತ್ತು.
ನಿಮ್ಮನುವಿನಲ್ಲಿರ್ದೆ ಕಾಣಾ ಗುಹೇಶ್ವರಾ
ವಚನ 1347
ಯುಗಜುಗ ಮಡಿವಲ್ಲಿ ಬ್ರಹ್ಮಾಂಡಗಳಳಿವಲ್ಲಿ
ಲಿಂಗವೆಂದರಿತವರಾರೊ ?
ಶಿವ ಶಿವಾ ವಾಯದಲೊದಗಿದ ಮಾಯಾವಾದಿಗಳು !
ದೇವನೆಂದರಿತವರಾರೊ ?
ಶಿವ ಶಿವಾ ಅಗ್ನಿ ತೃಣದೊಳಗಡಗಿ ಲೀಯವಾದುದ
ಗುಹೇಶ್ವರಾ ನಿಮ್ಮ ಶರಣ ಬಲ್ಲ !
ವಚನ 1348
ಯುಗದ ಉತ್ಸಾಹವ (ಉತ್ಸವವ?) ನೋಡಿರೆ !
ಪಂಚಶಕ್ತಿಗಳಿಗೆ ಪಂಚಪ್ರಧಾನರು.
ಅವರ ಆಗುಹೋಗನು ಆ ಶರಣನೆ ಬಲ್ಲ.
ಆ ಶರಣನು ತಾನು ತಾನಾಗಿ ಆರು ದರುಶನಕ್ಕೆ ಯಾಚಕನಲ್ಲ !
ಮೂರು ದರುಶನಕ್ಕೆ ಮುಯ್ಯಾನುವನಲ್ಲ,
ವೇದ ಶಾಸ್ತ್ರಾಗಮ ಪುರಾಣ ಛಂದಸ್ಸು,
ನಿಘಂಟುಗಳೆಂಬುವಕ್ಕೆ ಭೇದಕನಲ್ಲ,
ಅದೆಂತೆಂದಡೆ:ಅವರ ಅಂಗದ ಮೇಲೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ.
ಪ್ರಸಾದವಿಲ್ಲ ಪಾದೋದಕವಿಲ್ಲದ ಭಾಷೆ.
ಆ ಗುರು ಲಿಂಗ ಜಂಗಮ ಪ್ರಸಾದ ಪಾದೋದಕ ಏಕಾರ್ಥವಾದ ಕಾರಣ
ಪ್ರಾಣಿಗಳೆಲ್ಲವು ಪ್ರಣಾಮಂಗೆಯ್ಯುತ್ತಿದ್ದವು,
ಜೀವಿಗಳೆಲ್ಲವು ಜಯ ಜೀಯಾ ಎನುತ್ತಿದ್ದುವು.
ಆತ್ಮಂಗಳೆಲ್ಲ ಅನುವ ಬೇಡುತ್ತಿದ್ದವು.
ಗುಹೇಶ್ವರಾ ಸಂಗನಬಸವಣ್ಣನ ಪಾದಕ್ಕೆ
ಈರೇಳುಭುವನವೆಲ್ಲವೂ ಜಯ ಜೀಯಾ ಎನುತ್ತಿದ್ದವು.
ವಚನ 1349
ಯೋಗ ವಿಯೋಗವೆಂಬ ಹೊಲಬ ಬಲ್ಲವರನಾರನೂ ಕಾಣೆನು.
ನವನಾಳದ ಸುಳುಹ ತಿಳಿದಹೆನೆಂಬುದು ಯೋಗವಲ್ಲ.
ಐವತ್ತೆರಡಕ್ಷರದ ಶಾಸನವ ತಿಳಿದು ನೋಡಿ,
ಹೃದಯಕಮಲಕರ್ಣಿಕೆಯಲ್ಲಿ ಸಿಲುಕಿದೆನೆಂಬುದು ಯೋಗವಲ್ಲ.
ಬಹಿರಂಗವೆಂಬಡೆ ಕ್ರಿಯಾರಹಿತ (ಬದ್ಧ?) ಅಂತರಂಗವೆಂಬಡೆ ವಾಙ್ಮನೋತೀತ
ಗುಹೇಶ್ವರನೆಂಬ ಲಿಂಗವು ಷಡುಚಕ್ರದ ಮೇಲಿಲ್ಲ ಕಾಣಾ
ಸಿದ್ಧರಾಮಯ್ಯಾ.
ವಚನ 1350
ಯೋಗ ಶಿವಯೋಗಗಳ ಹೊಲಬನರಿಯದೆ
ಯೋಗಿಗಳು ಶಿವಯೋಗಿಗಳು ಎಂದರೆ,
ಶೀಳ್ನಾಯಿ ಸಿಂಹನಾಗಬಲ್ಲುದೆ ?
ಯೋಗದ ಅಷ್ಟಾಂಗವನು, ಶಿವಯೋಗದ ಷಟ್ಸ್ಥಲವನು
ಶಿವಲಿಂಗದಲ್ಲಿ ಹುರಿಗೊಳಿಸಿದಲ್ಲದೆ
ಯೋಗ ಶಿವಯೋಗಗಳ ಹೊಲಬಿನ ನಿಲುಕಡೆಯು ನಿಲುಕದು
ಅದೆಂತೆಂದೊಡೆ:-
ಯಮ ನಿಯಮಗಳ ಗುಣಧರ್ಮಗಳನರಿತಾಚರಿಪನೆ ಭಕ್ತ
ಆಸನಗಳ ಭೇದವನರಿತಾಚರಿಪನೆ ಮಹೇಶ್ವರ
ಚರಾಚರಾತ್ಮಕವೆನಿಪ್ಪ ಪ್ರಾಣಿಗಳಿಗೆ ಲಯಸ್ಥಾನವಾದ
ಪ್ರಾಣಾಯಾಮದ ಭೇದವನರಿತಾಚರಿಪನೆ ಪ್ರಾಣಲಿಂಗಿ
ಪಂಚೇಂದ್ರಿಯ ವಿಷಯಂಗಳಲ್ಲಿ ಸಂಚರಿಪ
ಮನ-ಮಾರುತಂಗಳ ಸಂಯಮದ ನಿಗ್ರಹದ
ಪ್ರತ್ಯಾಹಾರವನರಿತಾಚರಿಪನೆ
ಪ್ರಸಾದಿ
ಇಷ್ಟಲಿಂಗಧ್ಯಾನದ ಮೂಲವನರಿತು
ಭಾವದ ಹಸ್ತದಲ್ಲಿಧರಿಸುವ ಮಹಾಲಿಂಗದ
ಧ್ಯಾನ-ಧಾರಣಗಳನರಿತಾಚರಿಪನೆ ಶರಣ
ಅಂತಪ್ಪ ಭಾವದ ಹಸ್ತದಲ್ಲಿ ಧ್ಯಾನಧಾರಣಗಳಿಂದತಂದ
ಮಹಾಲಿಂಗದಲ್ಲಿ ಕೂಡಿ ಸಮರಸವಾಗುವ
ಸಮಾದಿಯನರಿತಾಚರಿಪನೆ ಐಕ್ಯ
ಅದೆಂತೆಂದೊಡೆ: ಯೋಗಜಾಗಮೇ
“ಯಮೇನ ನಿಯಮೇನೈವಮನ್ಯೇಭಕ್ತ ಇತಿ ಸ್ವಯಂ
ಸ್ಥಿರಾಸನಸಮಾಯುಕ್ತೋ ಮಾಹೇಶ್ವರ ಪದಾನ್ವಿತಃ
ಚರಾಚರಲಯಸ್ಥಾನಂ ಲಿಂಗಮಾಕಾಶಸಂಜ್ಞಕಂ
ಪ್ರಾಣೇತದ್ಯೋಮ್ನಿ ತಲ್ಲೀನೇ ಪ್ರಾಣಲಿಂಗಿಭವೇತ್ಸುಮಾನೆ
ಪ್ರತ್ಯಾಹಾರೇಣ ಸಂಯುಕ್ತಃ ಪ್ರಸಾದೀತಿ ನ ಸಂಶಯಃ
ಧ್ಯಾನಧಾರಣ ಸಂಪನ್ನಃ ಶರಣಸ್ಥಲವಾನೆಸುದಿಃ
ಲಿಂಗೈಕ್ಯೋದ್ವೈತಭಾವತ್ಮಾ ನಿಶ್ಚಲೈಕಸಮಾದಿನಾ
ಏವಮಷ್ಟಾಂಗಯೋಗೇನ ವೀರಶೈವೋಭವೇನ್ನರಃ
ತಸ್ಮಾತ್ ಸರ್ವಪ್ರಯತ್ನೇನ ಕರ್ಮಣಾಜ್ಞಾನತೋಪಿವಾ
ತ್ವಮಪ್ಯಷ್ಟಾಂಗ ಮಾರ್ಗೆಣ ಶಿವಯೋಗೀಭವೇತ್
ಎಂಬುದಾಗಿ,
ಇಂತಪ್ಪ ಅಷ್ಟಾಂಗಯೋಗದ ಕೀಲವನು
ಷಟ್ಸ್ಥಲ, ಶಿವಯೋಗದಲ್ಲಿ, ನಿಜವೀರಶೈವನಾಗುವ
ನಿಲುವಳಿಯನರಿದು, ನಮ್ಮ ಗುಹೇಶ್ವರಲಿಂಗದಲ್ಲಿ
ನಿಬ್ಬೆರಗುಗೊಂಡವರಿಬ್ಬರು
ಶಿವಸಿದ್ದರಾಮ, ನಿಜಗುಣಶಿವಯೋಗಿಗಳು ಕೇಳಾ ಗೋರಕ್ಷಯ್ಯ.
ವಚನ 1351
ಯೋಗ ಶಿವಯೋಗವೆಂಬರು,
ಯೋಗದ ಹೊಲಬನಾರು ಬಲ್ಲರಯ್ಯಾ ?
ಹೃದಯಕಮಲ ಮಧ್ಯದಲ್ಲಿ ಭ್ರಮಿಸುವನ ಕಳೆದಲ್ಲದೆ
ಯೋಗವೆಂತಪ್ಪುದೊ ?
ಐವತ್ತೆರಡಕ್ಷರದ ಲಿಪಿಯ ಓದಿ ನೋಡಿ ತಿಳಿದಲ್ಲದೆ
ಯೋಗವೆಂತಪ್ಪುದೊ ?
ಆರುನೆಲೆಯ ಮೇಲಿಪ್ಪ ಮಣಿಮಾಡದೊಳಗೆ ಇರಬಲ್ಲಡೆ
ಅದು ಯೋಗ !
`ಸ್ಯೋಹಂ’ ಎಂಬಲ್ಲಿ ಸುಳುಹಡಗಿ ಮನ ನಷ್ಟವಾಗಿರಬಲ್ಲ ಕಾರಣ,
ಗುಹೇಶ್ವರಲಿಂಗದಲ್ಲಿ ನೀನು ಸ್ವತಂತ್ರದಿರನೆಂಬುದು
ಕಾಣಬಂದಿತ್ತು ನೋಡಾ ಸಿದ್ಧರಾಮಯ್ಯಾ.
ವಚನ 1352
ಯೋಗದಾಗೆಂಬುದ ಮುನ್ನವೆ ಹೊದ್ದದ ಯೋಗಿಯೆ ಶಿವಯೋಗಿ
ಮೂಗ ಕಂಡ ಕನಸಿನ ಸ್ನೇಹದಂತೆ,
ಮುಗ್ಧೆಯ ಮನಹರುಷದ ರತಿಯಂತೆ, ಸಂಧಾನದಂತೆ;
ನಡು ಬಟ್ಟೆಯ ಮೂರು ನಡೆಗಳಲ್ಲಿ ಬರಿಗೆಯ್ದಡೆ
ನಡೆಯೊಂದೆ ಸಸಿನ ಕಂಡಾ.
ಒಂದ ಮೂರು ಮಾಡಿದಡೆಯೂ ಒಂದೆ ಕಂಡಾ.
ಮೂರಾರಾದಡೆಯೂ ಒಂದೆ ಕಂಡಾ.
ಆರು ಮುವತ್ತಾರಾದಡೆಯೂ ಒಂದೆ ಕಂಡಾ.
ನಿನ್ನ ಅವಯವಂಗಳೆಲ್ಲ ಒಂದೆ ಕಂಡಾ.
ನಿನ್ನ ಅರಿವು ಹಲವಾದಡೆ ಅರಿವು ನಿನಗೊಂದೆ ಕಂಡಾ.
ಕತ್ತಲೆಯ ಮನೆ, ಮಾಯೆಯೆ ಕಾಡುವ ನಿದ್ರೆ.
ಜಾಗರವಾಗಿ ಕಂಗೆಡಿಸಲು, ಕಂಗಳ ಹರವರಿಯಲು,
ಮನವ ಮಣ್ಣಿಸು ಕಂಡಾ.
ಗುಹೇಶ್ವರ ತಾನಾದ ಮುಗ್ಧತನಕ್ಕೆ ಕಡೆಮೊದಲುಂಟೆ ?
ವಚನ 1353
ಯೋಗದಾಗೆಂಬುದನಾರು ಬಲ್ಲರೊ?
ಅದು ಮೂಗ ಕಂಡ ಕನಸು !
ನಡೆವ ಬಟ್ಟೆ ಮೂರು, ನಡೆಯದ ಬಟ್ಟೆ ಒಂದೆ !
ಒಂದನೊಂಬತ್ತ ಮಾಡಿ ನಡೆದೆಹೆವೆಂಬರು
ಒಂಬತ್ತನೊಂದ ಮಾಡಿ ನಡೆದೆಹೆವೆಂಬ[ನ್ನಕ್ಕರ],
ಮೂರು ಮುಖದ ಕತ್ತಲೆ ಒಂದು ಮುಖವಾಗಿ ಕಾಡುತ್ತಿಪ್ಪುದು.
ಪ್ರಾಣಲಿಂಗಸಂಬಂಧವೆಲ್ಲಿಯದು ಹೇಳಾ ಗುಹೇಶ್ವರಾ.
ವಚನ 1354
ಯೋನಿಗ್ರಾಮದಲ್ಲಿ ಹುಟ್ಟಿ ದೇಹಪ್ರಪಂಚವನರಿಯದೆ
ಭಕ್ತರೆಂತಾದಿರಿ ಭೋ !
ಭಕ್ತಿ ಷಟ್ಸ್ಥಲದ ಭೇದವ ನಿಶ್ಚೈಸಲರಿಯದೆ
ಜಂಗಮವೆಂತಾದಿರಯ್ಯಾ ?
ನಿಃ ಕಾಮಿಯಾಗಿ ನಿಃ ಪ್ರಿಯನಾಗಿ ನಿರ್ಮೊಹಿಯಾಗಿ,
ನಿರಾಶ್ರಿತನಾಗಿ ನಿಲರ್ೆಪನಾಗಿ,
ಉಭಯಗುಣ ರಹಿತನಾಗಿ,
ಸರ್ವಾಂಗದಲ್ಲಿ ನಿರ್ಮೊಹಿಯಾಗಿ,
ತನು ಮನ ಧನ ಸುಖಾದಿಗಳ ನಿರ್ವಹಿಸಿ,
ಬಂದುದನೆ ಪರಿಣಾಮಿಸಿ ಇರಬಲ್ಲಡೆ ಜಂಗಮಸ್ಥಲವಹುದು.
ಆತನೆ ಜಂಗಮವೆಂಬುದಾಗಿತ್ತಾಗಿ
ಗುಹೇಶ್ವರ ಲಿಂಗ ತಾನೆಂಬೆ.
ವಚನ 1355
ರಂಗ ಒಂದೇ ಕಂಭ ಒಂದೇ ದೇವರೊಂದೇ ದೇಗುಲ ಒಂದೇ.
ಗುಹೇಶ್ವರಾ ನಿಮ್ಮ ಮನ್ನಣೆಯ ಶರಣರ ದೇವರೆಂದೆಂಬೆ.
ವಚನ 1356
ರಂಜಕರೆಲ್ಲರು ರತ್ನವ ಕೆಡಿಸಿ ಅಂಧಕಾರದಲ್ಲಿ ಬಂದರಸುವರು.
ಅದರಂದ ತಿಳಿಯದು ಛಂದ ತಿಳಿಯದು.
ಬಂದ ಬಟ್ಟೆಯಲಿ ತೊಳಲುವರು.
ಸಂದೆಗವಿಡಿದು ಸಂದವರೆಲ್ಲ ಅಂದಂದಿಗೆ ದೂರ ಗುಹೇಶ್ವರಾ.
ವಚನ 1357
ರಕ್ಕಸಿಗಿಬ್ಬರು ಮಕ್ಕಳು, ತೊಟ್ಟಿಲ ಮೇಲೈವರು,
ರಕ್ಕಸಿ ಬಾಣತಿಯಾದಡೆ ಮಕ್ಕಳಿಗಿನ್ನೆಂತೊ !
ತೊಟ್ಟಿಲ ತೂಗುವೆ ಜೋಗುಳವಾಡುವೆ
ರಕ್ಕಸಿಬಾಣತಿಯ ತೊಟ್ಟಿಲು ನುಂಗಿತ್ತು-ಇದೇನು ಹೇಳಾ ಗುಹೇಶ್ವರಾ ?
ವಚನ 1358
ರತ್ನದೀಪ್ತಿಯಾದಡೇನು ? ಬಂದಿಸಿದ ಕುಂದಣದಲ್ಲಿಯೆ ಸಂದಿರಬೇಕು.
ಸ್ವಾದುರಸದ ರುಚಿಯನೀವ ಫಲವೆಂದಡೇನು ವೃಕ್ಷವಿಲ್ಲದನ್ನಕ್ಕರ ?
ಚಿತ್ರಸೌಂದರ್ಯ ನೋಟಕೆ ಸುಖವೆಂದಡೇನು
ಬಿತ್ತಿಯ ಪಟ ಮುಖ್ಯಸ್ಥಾನದಲ್ಲಿಲ್ಲದನ್ನಕ್ಕರ ?
ಅಂಜನ ಸಿದ್ಧಿಯಿಂ ನಿಧಾನವ ಕಂಡಡೇನು
ಸಾಧನ ಕ್ರೀಯಿಂದ ಸಾಧ್ಯವ ಮಾಡಿಕೊಳ್ಳದನ್ನಕ್ಕರ ?
ಇದು ಕಾರಣ-
ಕಾಯದ ಕರಸ್ಥಲಕ್ಕೆ ಇಷ್ಟಲಿಂಗಸಾಹಿತ್ಯವಿಲ್ಲದಿದ್ದಡೆ,
ನಿರವಯವಾದ ಜ್ಞಾನಯೋಗ ಕೂಟ ಸಾಧ್ಯವಾಗದು.
ಇದು ಕಾರಣ-
ಕ್ರಿಯಾಲಿಂಗಸಂಬಂಧವೆ ಭಕ್ತಂಗೆ ಮತವು, ಇದೇ ಕಾರಣ ದೇಹಶೌಚವು !
ನಮ್ಮ ಗುಹೇಶ್ವರನ ಶರಣರ ಮನ ಒಪ್ಪುವಂತೆ
ಸಿದ್ಧರಾಮಯ್ಯಂಗೆ ಲಿಂಗಸಾಹಿತ್ಯವ ಮಾಡಾ ಚೆನ್ನಬಸವಣ್ಣಾ.
ವಚನ 1359
ರವಿಕಾಂತಿಯ ಪ್ರಭೆ ಪಾಷಾಣವ ಕೂಡಿ ರತ್ನವೆನಿಸಿಕೊಂಬಂತೆ
ಅರಿವ ಜ್ಞಾನ ಮಾಡುವ ಸತ್ಕ್ರೀಯಿಂದಲ್ಲದೆ
ಆ ಸಾಕಾರದ ಪಟಲವು ಹರಿಯದು.
ಈ ರವಿಕಾಂತಿಯ ಪ್ರಭೆಯಿಲ್ಲದಿದ್ದಡೆ
ಆ ಪಾಷಾಣಕ್ಕೆ ರತ್ನವೆಂಬ ಕುಲ ಮುನ್ನವೇ ಇಲ್ಲ.
ರವಿಕಾಂತಿಯ ಪ್ರಭೆಯಡಗೂದಕ್ಕೆ ಪಾಷಾಣ ಹೇಂಗೆ
ಅರಿವಡಗೂದಕ್ಕೆ ಕುರುಹೆಂಬ ನಾಮ ಹಾಂಗೆ.
ಆ ಉಭಯವಡಗಿ ಕುರುಹಿಲ್ಲದಿದ್ದಡೆ ಮತ್ತೆ
ನಮ್ಮ ಗುಹೇಶ್ವರನೆಂಬ ಮಾತಿನ ಕುರುಹಿಲ್ಲದಿರಬೇಕು.
ಕಾಣಾ ಎಲೆ ಅಂಬಿಗರ ಚಾಡಯ್ಯ.
ವಚನ 1360
ರಸದ ಬಾವಿಯ ತುಡುಕಬಾರದು,
ಕತ್ತರಿವಾಣಿಯ ದಾಂಟಿದವಂಗಲ್ಲದೆ.
ಪರುಷವಿದೆ ಕಬ್ಬುನವಿದೆ ಸಾದಿಸಬಲ್ಲವಂಗೆ.
ಶ್ರೀಶೈಲದುದಕವ ಧರಿಸಬಾರದು ಗುಹೇಶ್ವರಾ-
ನಿಮ್ಮ ಶರಣಂಗಲ್ಲದೆ.
ವಚನ 1361
ರಾಗವಡಗಿ ತಾಮಸ ನಿಂದು, ಆಹಂಕಾರದ ಗಿರಿ ಉಡುಗಿ,
ಮಾತಿನ ಬಣವೆಯ ಮೆದೆಯ ಸುಟ್ಟುರುಹದೆ,
ಕಾಯ ಕರ್ಮದಲ್ಲಿ ಸವೆಯುತ್ತ, ಜೀವ ಸಕಲ ಸಂಸಾರದಲ್ಲಿ ನೋಯುತ್ತ [ಇದ್ದಡೆ]
ಮತ್ತೆ ಭಾವಶುದ್ಧವುಂಟೆ ಗುಹೇಶ್ವರಲಿಂಗಕ್ಕೆ ?
ವಚನ 1362
ರಾಜಸಭೆ ದೇವಸಭೆಯೊಳಗೆ, ದೇವ-ರಾಜ-ಪೂಜಕರೆಲ್ಲಾ ಮುಖ್ಯರಿಗೆ,
ಗುರುವಿನ ಕರುಣ !
ಇದ ಬಲ್ಲರೆ ಅಯ್ಯಾ ಪೂಜಕರೆಲ್ಲರು ?
ಇಂತಹ ಪರಿಗಳ ಕಂಡು ಬೆರಗಾದೆ,
ಗುಹೇಶ್ವರಾ-ಇವರೆಲ್ಲ ಸಂಸಾರವ್ಯಾಪಕರು.
ವಚನ 1363
ರಾತ್ರಿಯೆಂಬ ಹುತ್ತಿನೊಳಗೆ ನಿದ್ರೆಯೆಂಬ ಕಾಳೋರಗ,
ಹೆಡೆಯನೆತ್ತಿ ಆಡಿ ಕಚ್ಚಲೊಡನೆ
ಅಂಜನಸಿದ್ಧರ ಅಂಜನ ಕರಗಿತ್ತು, ಘುಟಿಕಾಸಿದ್ಧರ ಘುಟಿಕೆ ಉರುಳಿತ್ತು
ಯಂತ್ರಿಗಳ ಯಂತ್ರ ಅದ್ದಿ ಹೋಯಿತ್ತು,
ಮಂತ್ರಿಗಳ ಮಂತ್ರ ಮರೆತು ಹೋಯಿತ್ತು
ಔಷದಿಕರ ಔಷಧವನು ಆಳಿಗೊಂಡಿತ್ತು,
ಸರ್ವ ವಿದ್ಯಾಮುಖದ ಜ್ಯೋತಿ ನಂದಿತ್ತು,
ಇದರ ವಿಷವ ಪರಿಹರಿಸುವರನಾರನೂ ಕಾಣೆ.
ಈ ರಾಹುವಿನ ವಿಷಯದಲ್ಲಿ ತ್ರಿಭುವನವೆಲ್ಲ
ಮೂರ್ಛಿತವಾಗುತ್ತಿಹುದು ಗುಹೇಶ್ವರಾ
ವಚನ 1364
ರುದ್ರನೆಂಬಾತನೊಬ್ಬ ಗಣೇಶ್ವರನು, ಭದ್ರನೆಂಬಾತನೊಬ್ಬ ಗಣೇಶ್ವರನು.
ಶಂಕರನೆಂಬಾತನೊಬ್ಬ ಗಣೇಶ್ವರನು, ಶಶಿಧರನೆಂಬಾತನೊಬ್ಬ ಗಣೇಶ್ವರನು.
ಪೃಥ್ವಿಯೆ ಪೀಠ ಆಕಾಶವೆ ಲಿಂಗ-ಅಂತಹ ಆತನೊಬ್ಬ ಗಣೇಶ್ವರನು.
ಬಲ್ಲಾಳನ ವಧುವ ಬೇಡಿದಾತನೊಬ್ಬ ಗಣೇಶ್ವರನು.
ಸಿರಿಯಾಳನ ಮಗನ ಬಿಕ್ಷವ ಬೇಡಿದಾತನೊಬ್ಬ ಗಣೇಶ್ವರನು.
ಬ್ರಹ್ಮಕಪಾಲ ವಿಷ್ಣುಕಂಕಾಳವನಿಕ್ಕಿ ಆಡುವಲ್ಲಿ
ನೀಲಕಂಠನೆಂಬಾತನೊಬ್ಬ ಗಣೇಶ್ವರನು.-
ಇವರೆಲ್ಲರು ನಮ್ಮ ಗುಹೇಶ್ವರಲಿಂಗದೊಳಡಗಿಪ್ಪರು
ವಚನ 1365
ರೂಪ[ನೆ] ಕಂಡರು, ನಿರೂಪ[ನ] ಕಾಣರು.
ಅನುವನೆ ಕಂಡರು, ತನುವನೆ ಕಾಣರು.
ಆಚಾರವನೆ ಕಂಡರು, ವಿಚಾರವನೆ ಕಾಣರು.
ಗುಹೇಶ್ವರಾ-ನಿಮ್ಮ ಕುರುಹನೆ ಕಂಡರು,
ಕೂಡಲರಿಯದೆ ಕೆಟ್ಟರು !
ವಚನ 1366
ರೂಪಿಂಗೆ ಕೇಡುಂಟು ನಿರೂಪಿಂಗೆ ಕೇಡಿಲ್ಲ.
ರೂಪು ನಿರೂಪನೊಡಗೂಡುವ ಪರಿ ಎಂತು ಹೇಳಾ ?
ಅಸಂಬಂಧ ಸಂಬಂಧವಾಗಿ ಇದೆ.
ದೇಹ ಇಂದ್ರಿಯವೆಂಬ ಜಾತಿಸೂತಕವಿರಲು
ಗುಹೇಶ್ವರಲಿಂಗವ ಮುಟ್ಟಬಾರದು ಕೇಳವ್ವಾ.
ವಚನ 1367
ರೂಪಿಂಗೆ ಬಂದು ನಿಂದುದು ಮಾತಿಂಗೆ ಒಡಲಾಯಿತ್ತು.
ಮಾತಿಂಗೆ ವೇದಿಸಿದ ಮನ ರಾಟಾಳದ ಕುಂಭದಂತೆ.
ಅದ ನೇತಿಗಳೆದು ನಿಂದಲ್ಲಿ
ಗುಹೇಶ್ವರಲಿಂಗ ತಾನೆ ಸಂಗನಬಸವಣ್ಣಾ.
ವಚನ 1368
ರೂಪೆಂದಡೆ ನಷ್ಟ, ನಿರೂಪೆಂದಡೆ ಶೂನ್ಯ.
ರೂಪು ನಿರೂಪನತಿಗಳೆದ ರೂಪ ಕಾಬಡೆ
ಗುಹೇಶ್ವರಲಿಂಗದಲ್ಲಿ ತನ್ನ ರೂಪನತಿಗಳದು ಕಾಣಬೇಕು ಕಾಣಾ
ಸಿದ್ಧರಾಮಯ್ಯಾ.
ವಚನ 1369
ಲಿಂಗ ಒಳಗೊ ಹೊರಗೊ? ಬಲ್ಲಡೆ ನೀವು ಹೇಳಿರೆ ?
ಲಿಂಗ ಎಡನೊ ಬಲನೊ ? ಬಲ್ಲಡೆ ನೀವು ಹೇಳಿರೆ ?
ಲಿಂಗ ಮುಂದೊ ಹಿಂದೊ ? ಬಲ್ಲಡೆ ನೀವು ಹೇಳಿರೆ ?
ಲಿಂಗ ಸ್ಥೂಲವೊ ಸೂಕ್ಷ್ಮವೊ ? ಬಲ್ಲಡೆ ನೀವು ಹೇಳಿರೆ ?
ಲಿಂಗ ಪ್ರಾಣವೊ, ಪ್ರಾಣ ಲಿಂಗವೊ ?
ಬಲ್ಲಡೆ ನೀವು ಹೇಳಿರೆ ಗುಹೇಶ್ವರಲಿಂಗವನು ?
ವಚನ 1370
ಲಿಂಗ ಜಂ