ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಭಾರತದ ಸಂವಿಧಾನ ಹೇಗೆ ರೂಪುಗೊಂಡಿತು?

ಸಂವಿಧಾನ ರಚನೆ

ಸಾವಿರಾರು ಜಾತಿ, ನೂರಾರು ಭಾಷೆ, ಹತ್ತಾರು ಮತಧರ್ಮಗಳ ಭಾರತ ದೇಶಕ್ಕೆ ಸಂವಿಧಾನ ರೂಪುಗೊಳಿಸುವುದು ಸಾಮಾನ್ಯ ಜವಾಬ್ದಾರಿಯಾಗಿರಲಿಲ್ಲ. ಅಂಬೇಡ್ಕರ್ ಸಂವಿಧಾನದ ಕರಡನ್ನು ಹಗಲು ರಾತ್ರಿಯೆನ್ನದೆ ತಿದ್ದಿದರು, ಪರಿಶೀಲಿಸಿದರು, ಸೇರಿಸಿದರು. ಸಂವಿಧಾನ ಸಭೆ 2 ವರ್ಷ 11 ತಿಂಗಳು 17 ದಿನ ಚರ್ಚೆ ನಡೆಸಿತ್ತು. ಒಟ್ಟು 7600 ತಿದ್ದುಪಡಿಗಳನ್ನು ಸೂಚಿಸಲಾಗಿತ್ತು. ಅದರಲ್ಲಿ 2473 ತಿದ್ದುಪಡಿ ಬಗೆಗೆ ವಿಚಾರ ವಿನಿಮಯ ನಡೆದಿತ್ತು. ನಂತರ ಅದನ್ನು 6 ತಿಂಗಳ ಕಾಲ ಸಾರ್ವಜನಿಕ ಚರ್ಚೆಗೆ ಬಿಡಲಾಯಿತು. ಸಲಹೆಗಳನ್ನು ಗಮನಿಸಿ ಪರಿಷ್ಕರಿಸಲಾಯಿತು. 1948 ಜುಲೈ 30ರಿಂದ ಶುರುವಾದ ಎರಡನೆಯ ಸುದೀರ್ಘ ಸಂವಿಧಾನ ಅಧಿವೇಶನದಲ್ಲಿ ಕರಡನ್ನು ಎರಡನೆಯ ಬಾರಿ ಓದಲಾಯಿತು.

1948ರ ನವೆಂಬರ್ 4ರಂದು ಸಂವಿಧಾನವನ್ನು ರಚನಾ ಸಭೆಯ ಮುಂದೆ ಅಂಬೇಡ್ಕರ್ ಮಂಡಿಸಿದರು. ಸಂವಿಧಾನದ ಕರಡು ರೂಪಿಸಿದ ಸರ್ ಬಿ.ಎನ್.ರಾವ್, ಎಸ್.ಎನ್.ಮುಖರ್ಜಿ ಅವರನ್ನು ಸ್ಮರಿಸಿದರು. ಕರಡು ಪ್ರತಿಯಲ್ಲಿ 315 ಅನುಚ್ಛೇದಗಳಿದ್ದವು. 8 ಅಧ್ಯಾಯಗಳಿದ್ದವು. ಸಾರ್ವಭೌಮತೆ ಜನತೆಯಲ್ಲಿರುತ್ತದೆಂದೂ, ಜನತೆಯ ಪ್ರತಿನಿಧಿಗಳಿರುವ ಸಂಸತ್ತು ದೇಶದ ಸಾರ್ವಭೌಮತೆಯ ಹಾಗೂ ರಕ್ಷಣೆಯ ಜವಾಬ್ದಾರಿಯನ್ನು ಹೊರುವುದೆಂದೂ ಸಂವಿಧಾನ ಸ್ಪಷ್ಟಪಡಿಸಿತ್ತು. ಸಂಸತ್ತು ಮತ್ತು ಸುಪ್ರೀಂ ಕೋರ್ಟ್ ಗಳಿಗೆ ಸರ್ವೋಚ್ಛ ಸ್ಥಾನಮಾನ ನೀಡಲಾಗಿತ್ತು. ಅದು ಇರುವ ಅನುಚ್ಛೇದ 32 ಸಂವಿಧಾನದ ಆತ್ಮ ಎಂದು ಅಂಬೇಡ್ಕರ್ ಬಣ್ಣಿಸಿದರು. ಅತಿ ಕೇಂದ್ರೀಕರಣಗೊಂಡು ತನ್ನ ಭಾರದಿಂದಲೇ ದೇಶ ತಾನು ಕುಸಿಯುವಂತಾಗಬಾರದೆಂದು ವಿಕೇಂದ್ರೀಕರಣ ನೀತಿಯನ್ನು ಅಲ್ಲಿ ರೂಪಿಸಲಾಗಿದೆ ಎಂದು ತಿಳಿಸಿದರು. ಪ್ರತಿಯೊಂದೂ ಅನುಚ್ಛೇದವನ್ನು ಓದಿ, ಚರ್ಚೆ ಮಾಡಿ ಒಪ್ಪಿಕೊಳ್ಳಲಾಯಿತು.

ಅಂಬೇಡ್ಕರ್ ಮಾತನಾಡುತ್ತ, ‘ಈ ಕರಡು ಸಂವಿಧಾನ 1935ರ ಭಾರತ ಸರ್ಕಾರ ಕಾಯ್ದೆಯ ಉತ್ತಮ ಅಂಶಗಳನ್ನೆಲ್ಲ ಒಳಗೊಂಡಿದೆ. ಇದು ಪ್ರಯೋಗಾರ್ಹವಾಗಿದೆ. ಆಕಸ್ಮಿಕ ಅಡೆತಡೆಗಳು ಒದಗಿದಲ್ಲಿ ತಿದ್ದುಪಡಿಗೊಳ್ಳಬಹುದಾಗಿದೆ. ಇಡೀ ದೇಶವನ್ನು ಅಖಂಡವಾಗಿಟ್ಟುಕೊಂಡು ನಾಗರಿಕ ಆಡಳಿತ ನೀಡಲು; ಯುದ್ಧಕಾಲ ಮತ್ತು ಶಾಂತಿಕಾಲದಲ್ಲಿ ಸಹಾಯಕವಾಗುವಂತಿದೆ. ಸಂವಿಧಾನ ಜಾರಿಗೊಂಡ ಬಳಿಕ ಪರಿಸ್ಥಿತಿ ಹದಗೆಟ್ಟರೆ ಅದಕ್ಕೆ ಸಂವಿಧಾನ ಕಾರಣವಾಗುವುದಿಲ್ಲ, ಅದನ್ನು ಜಾರಿಗೊಳಿಸುವವರು ಕಾರಣ’ ಎಂದು ಸಂವಿಧಾನದ ಪ್ರತಿಯನ್ನು ರಾಷ್ಟ್ರಾಧ್ಯಕ್ಷರಿಗೆ ಒಪ್ಪಿಸಿದರು. ಅದರಲ್ಲಿ ಪರಿಶಿಷ್ಟ ಜಾತಿಗಳಿಗೆ ಸಂಬಂಧಿಸಿದಂತೆ ಬಯಸಿದ್ದನ್ನೆಲ್ಲ ಅಡಕಗೊಳಿಸಿದ್ದರು. ಅಸ್ಪೃಶ್ಯರಲ್ಲದೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ಗುಂಪುಗಳಿಗೂ ಮೀಸಲಾತಿ ಸವಲತ್ತು ಪಡೆಯಲು ಸಾಧ್ಯ ಮಾಡಿದ್ದರು. ಸಾರ್ವತ್ರಿಕ ವಯಸ್ಕ ಮತದಾನ ಮತ್ತು ಮೀಸಲಾತಿ ವ್ಯವಸ್ಥೆ ಅಳವಡಿಸಿದರೆ ಸಾಕೆಂದು ಪ್ರತ್ಯೇಕ ಮತ ಕ್ಷೇತ್ರದ ಬೇಡಿಕೆಯನ್ನು ಕೈಬಿಟ್ಟಿದ್ದರು.

  60 ವರ್ಷ ಮೇಲ್ಪಟ್ಟ ಅಪ್ಪಂದಿರಿಗೆ, 55 ವರ್ಷಗಳು ದಾಟಿದ ಅಮ್ಮಂದಿರಿಗಾಗಿ

ಮೂರನೆಯ ಹಾಗೂ ಅಂತಿಮ ಬಾರಿ ನವೆಂಬರ್ 14ರಿಂದ ಶುರುವಾದ ಅಧಿವೇಶನದಲ್ಲಿ ಸಂವಿಧಾನ ಓದಲಾಯಿತು. ಅದು ಸಂವಿಧಾನ ಅಂಗೀಕರಿಸುವ ಅಧಿವೇಶನ. ಎಲ್ಲರೂ ಮುಕ್ತಕಂಠದಿಂದ ಸಂವಿಧಾನವನ್ನು, ಅದರ ಕರ್ತೃವನ್ನು ಶ್ಲಾಘಿಸಿದರು. ಅಂಬೇಡ್ಕರರ ಪ್ರಗಾಧ ಪಾಂಡಿತ್ಯ, ಅಧ್ಯಯನಶೀಲತೆಯನ್ನು ಮೆಚ್ಚದವರೇ ಇರಲಿಲ್ಲ. ಸಂವಿಧಾನ ಕರಡು ರಚನಾ ಸಮಿತಿಯಲ್ಲಿದ್ದ ಟಿ.ಟಿ.ಕೃಷ್ಣಮಾಚಾರಿಯವರೇ ಸಂವಿಧಾನವು ಕೇವಲ ಅಂಬೇಡ್ಕರರ ನಿಷ್ಠೆ, ಶ್ರಮ, ಪ್ರತಿಭೆಯಿಂದ ರೂಪುಗೊಂಡಿದೆ ಎಂದು ಸದನದಲ್ಲಿ ತಿಳಿಸಿ ಕೊಂಡಾಡಿದರು. ಕೆಲವು ಟೀಕೆಗಳೂ ಬಂದವು: ‘ಸಂವಿಧಾನವು ರಾಜ್ಯಗಳನ್ನು ಮುನ್ಸಿಪಾಲ್ಟಿ ಮಟ್ಟಕ್ಕೆ ಇಳಿಸಿದೆ’, ‘ಗಾಂಧಿಯ ವಿಕೇಂದ್ರೀಕರಣ ತತ್ವಕ್ಕೆ ಎಲ್ಲೂ ಅವಕಾಶ ನೀಡಿಲ್ಲ’, ‘ಗೋಹತ್ಯೆ ನಿಷೇಧದ ಬಗ್ಗೆ ಸಂವಿಧಾನ ಉಲ್ಲೇಖಿಸಿಲ್ಲ’, ‘ವಿವಿಧ ರೀತಿಯಲ್ಲಿ ಅರ್ಥೈಸಲು ಅವಕಾಶವಿರುವ ಸಂವಿಧಾನ ವಕೀಲರಿಗೆ ಒಳ್ಳೆಯ ಕಾಲ ಸೃಷ್ಟಿಸಲಿದೆ’, ‘ವಿವಿಧ ದೇಶಗಳ ಸಂವಿಧಾನದ ಮಿಶ್ರಣ ಅಷ್ಟೆ’ ಇದು ಮೊದಲಾದ ಕೊರಕೊರಗಳು ಕ್ಷೀಣವಾಗಿ ಕೇಳಿದವು. ಸಮಿತಿಯ ಇನ್ನೊಬ್ಬ ಸದಸ್ಯರಾಗಿದ್ದ ಸಾದುಲ್ಲಾ, ‘ಸಮಿತಿಗೆ ಸಂಪೂರ್ಣ ಸ್ವಾತಂತ್ರ್ಯವಿರಲಿಲ್ಲ. ಪ್ರಜಾಪ್ರಭುತ್ವಕ್ಕೆ ಹೊಂದದ ಕೆಲ ವಿಷಯಗಳನ್ನು ಗತ್ಯಂತರವಿಲ್ಲದೆ ಸೇರಿಸುವಂತಹ ಒತ್ತಡ ಬಂತು’ ಎಂದರು.

ಕೊನೆಗೆ ನವೆಂಬರ್ 25, 1949ರಲ್ಲಿ ಅಂಬೇಡ್ಕರ್ ಕೊನೆಯ ಬಾರಿಗೆ ಮಾತನಾಡಿದರು. ‘ಮೂರು ಸಲ ಓದಲ್ಪಟ್ಟು ಚರ್ಚಿಸಲ್ಪಟ್ಟ ಸಂವಿಧಾನ ಸರ್ವ ಸದಸ್ಯರ ಆಶೋತ್ತರಗಳನ್ನು ಬಿಂಬಿಸಿದೆ. ಈಗ ಇದು ಸರ್ವಮಾನ್ಯ ಸಂವಿಧಾನವಾಗಿದೆ. ಆದರೆ ಇದೇ ವೇಳೆ ಒಂದು ವಿಷಯವನ್ನು ಸದನದ ಗಮನಕ್ಕೆ ತರಬಯಸುತ್ತೇನೆ: ಸಂವಿಧಾನ ಎಷ್ಟೇ ಉದಾತ್ತ ಆಶಯ ಹೊಂದಿದ್ದರೂ ಅದನ್ನು ಅನುಷ್ಠಾನಕ್ಕೆ ತರುವ ಸರ್ಕಾರ ಧ್ಯೇಯನಿಷ್ಠವಲ್ಲದಿದ್ದರೆ ಅಂಥ ಸಂವಿಧಾನದಿಂದ ಏನೂ ಉಪಯೋಗವಾಗುವುದಿಲ್ಲ. ಚರಿತ್ರೆಯುದ್ದಕ್ಕೂ ಭಾರತವು ಸ್ವಾತಂತ್ರ್ಯ ಕಳೆದುಕೊಳ್ಳಲು ತನ್ನವರು ದ್ರೋಹ ಬಗೆದಿದ್ದೇ ಕಾರಣವಾಗಿದೆ. ಅಂತಹ ಅಸಂಖ್ಯ ಉದಾಹರಣೆಗಳು ನಮ್ಮೆದುರಿಗಿವೆ. ಚರಿತ್ರೆ ಮರುಕಳಿಸಬಹುದು. ಸಂವಿಧಾನ ಜಾರಿಯಾದ ನಂತರವೂ ಹಳೆಯ ವಿಚ್ಛಿದ್ರಕಾರಕ ಶಕ್ತಿಗಳಾದ ಜಾತಿ, ಧರ್ಮಗಳು ಹಾಗೇ ಉಳಿದಿರುತ್ತವೆ. ಜೊತೆಗೆ ರಾಜಕೀಯ ಪಕ್ಷಗಳೂ ಹುಟ್ಟಿಕೊಳ್ಳುತ್ತವೆ. ದೇಶಹಿತಕ್ಕಿಂತ ಪಕ್ಷಹಿತವೇ ಪ್ರಧಾನವೆಂದು ಪರಿಗಣಿಸುವ ರಾಜಕೀಯ ಪಕ್ಷಗಳ ಬಗೆಗೆ ದೇಶ ಎಚ್ಚರದಿಂದಿರಬೇಕಿದೆ. ಇಲ್ಲದಿದ್ದರೆ ಭಾರತದ ಸ್ವಾತಂತ್ರ್ಯ, ಏಕತೆ, ಸಂವಿಧಾನದ ಮೇಲೆ ಅಪಾಯದ ಕಾರ್ಮೋಡ ಕವಿಯುತ್ತದೆ ಎಂದೇ ರಕ್ತದ ಕೊನೆ ಹನಿಯಿರುವವರೆಗೆ ದೇಶದ ಸ್ವಾತಂತ್ರ್ಯ ಉಳಿಸಿಕೊಳ್ಳಲು ಹೋರಾಡಬೇಕು..’

  ನಕ್ಕು ನಗಿಸಲು ಒಂದಿಷ್ಟು ಕನ್ನಡ ಜೋಕ್ಸ್

‘ಪ್ರಜಾಪ್ರಭುತ್ವ ತಮಗೆ ನೀಡಿದ ಹಕ್ಕುಗಳನ್ನು ದೇಶದ ಜನತೆ ಯಾವ ಕಾರಣಕ್ಕೂ ಒಬ್ಬ ವ್ಯಕ್ತಿಗೆ ನೀಡಕೂಡದು. ಆ ವ್ಯಕ್ತಿಯ ಬಗೆಗೆ ನಮಗೆಷ್ಟೇ ಗೌರವ ಇರಲಿ, ನಮ್ಮ ಸಂವಿಧಾನ ಬದ್ಧ ಹಕ್ಕುಗಳನ್ನು ಅವರ ಪಾದಾರವಿಂದಗಳಲ್ಲಿ ಅರ್ಪಿಸಿಬಿಡಬಾರದು. ಗೌರವ ಮತ್ತು ನಂಬಿಕೆ ಬೇರೆ ಬೇರೆ. ಕೃತಜ್ಞತೆ, ಗುಲಾಮಗಿರಿ ಬೇರೆ ಬೇರೆ. ರಾಜಕೀಯದಲ್ಲಿ ವ್ಯಕ್ತಿಪೂಜೆಗೆ ಅವಕಾಶ ಇರಕೂಡದು. ಅದು ಬಂದದ್ದೇ ಆದಲ್ಲಿ ಪ್ರಜಾಪ್ರಭುತ್ವ ಅರ್ಥಹೀನವಾಗುತ್ತದೆ’ ಎಂದು ಎಚ್ಚರಿಸಿದರು.

‘ಪ್ರಜಾಪ್ರಭುತ್ವವು ಯಶಸ್ವಿಯಾಗಬೇಕಾದರೆ ಅಸಮಾನತೆಯಿಲ್ಲದ ಸಮಾಜ ವ್ಯವಸ್ಥೆ ಅತಿ ಅಗತ್ಯ. ಅಲ್ಲಿ ದಮನಿತ, ತುಳಿತಕ್ಕೊಳಗಾದ ಎಂಬ ವರ್ಗಗಳಿರಕೂಡದು. ಸಾಮಾಜಿಕ ವ್ಯವಸ್ಥೆಯ ಈ ತೆರನ ವಿಭಜನೆಯು ರಕ್ತಕ್ರಾಂತಿಯ ಬೀಜಗಳನ್ನು ತನ್ನೊಳಗೆ ಅಡಗಿಸಿಕೊಂಡಿರುತ್ತದೆ. ಮತ್ತು ಇದನ್ನು ಹತ್ತಿಕ್ಕುವುದು ಬಹುಶಃ ಪ್ರಜಾಪ್ರಭುತ್ವಕ್ಕೆ ಸಾಧ್ಯವಾಗುವುದಿಲ್ಲ. 1950 ಜ. 26ರಂದು ನಾವೊಂದು ವಿಪರ್ಯಾಸದ ಬದುಕಿಗೆ ಕಾಲಿಡಲಿದ್ದೇವೆ. ರಾಜಕೀಯದಲ್ಲಿ ನಮಗೆ ಸಮಾನತೆ ಸಿಗಲಿದೆ, ಅದೇ ಸಾಮಾಜಿಕ, ಆರ್ಥಿಕ ಕ್ಷೇತ್ರಗಳಲ್ಲಿ ಅಸಮಾನತೆ ಮುಂದುವರೆಯಲಿದೆ. ಈ ವಿರೋಧಾಭಾಸವನ್ನು, ವಿಪರ್ಯಾಸವನ್ನು ಆದಷ್ಟು ಬೇಗ ನಿವಾರಿಸಬೇಕು. ಇಲ್ಲದಿದ್ದರೆ ಅಪಾರ ಪರಿಶ್ರಮದಿಂದ ರೂಪಿಸಿದ ಸಂವಿಧಾನದ ಮೂಲಕ ನೀಡಲಾದ ರಾಜಕೀಯ ಪ್ರಯತ್ನವನ್ನು ದಮನಿತರು ಧೂಳೀಪಟ ಮಾಡಿಯಾರು’ ಎಂದು ಎಚ್ಚರಿಸಿದರು.

45 ನಿಮಿಷ ಅಂಬೇಡ್ಕರ್ ಮಾತನಾಡಿದ್ದರು. ಅದೇ ದಿನ ಸಂವಿಧಾನವನ್ನು ದೇಶದ ಜನತೆಯ ಪರವಾಗಿ ಸ್ವೀಕರಿಸಲಾಯ್ತು. 1857ರಿಂದ 1947ರವರೆಗೆ ಜಾರಿಯಲ್ಲಿದ್ದ ಬ್ರಿಟಿಷರ ಇಂಡಿಯಾ ಇಂಡಿಪೆಂಡೆನ್ಸ್ ಆಕ್ಟ್ ಹಿನ್ನೆಲೆಗೆ ಸರಿದು ಜನವರಿ 26, 1950ರಿಂದ ಹೊಸ ಸಂವಿಧಾನ ಜಾರಿಯಾಯ್ತು.

ಅಂಬೇಡ್ಕರ್ ಕಠಿಣ ಪರಿಶ್ರಮದಿಂದ ಕಣ್ಣಲ್ಲಿ ಕಣ್ಣಿಟ್ಟು ರೂಪಿಸಿದ ಸಂವಿಧಾನ ದೇಶದ ದಿಕ್ಕಾಯಿತು.
ಭಾರತವು ತನ್ನನ್ನು ತಾನು ಆಳಿಕೊಳ್ಳಲು ಸಂವಿಧಾನ ರಚಿಸಿಕೊಳ್ಳಬೇಕಿತ್ತು. ಅಂಥ ಸಂವಿಧಾನವನ್ನೇ ನಾವಿಂದು ಹೊಂದಿರುವುದು. ಭಾರತದ ಸಂವಿಧಾನ ಎಲ್ಲರನ್ನು ಒಳಗೊಳ್ಳುವ ಸಂವಿಧಾನ. ಅದುವರೆಗೆ ಜಾರಿಯಲ್ಲಿದ್ದದ್ದು ಪ್ರತ್ಯೇಕಿಸುವ, ತಾರತಮ್ಯವೇ ಮೂಲ ಆಶಯವಾಗಿದ್ದ ಅಲಿಖಿತ ಸಂವಿಧಾನ. ನ್ಯಾಯ ಹಾಗೂ ಸಮಾನತೆಯ ಆಧಾರದ ಮೇಲೆ ಉದಿಸಲಿರುವ ಭಾರತ ಗಣರಾಜ್ಯವು ಭಾರತೀಯ ಸಮಾಜವನ್ನು ಮರುರೂಪಿಸಬೇಕೆನ್ನುವುದು ಸಂವಿಧಾನದ ಆಶಯ. ಸಂವಿಧಾನದ ಪೀಠಿಕೆಯಲ್ಲಿ ಮುಖ್ಯವಾಗಿ ವ್ಯಕ್ತವಾಗಿರುವುದು ಇದೇ ಆಶಯ. ನಾಗರಿಕನೊಬ್ಬನ ಅವಕಾಶ ಮತ್ತು ಸ್ಥಾನಗಳು ಅವನ ಸತ್ವದಿಂದ ನಿರ್ಧಾರವಾಗಬೇಕೇ ಹೊರತು ಅವನ ಸಾಮಾಜಿಕ ಮೂಲದಿಂದ ಅಲ್ಲ. ಜಾತಿ, ಧರ್ಮ, ಕುಲ, ಭಾಷೆ, ಲಿಂಗ, ಪ್ರದೇಶ, ವಂಶ ಯಾವುದೇ ಇರಲಿ ಭಾರತ ಗಣರಾಜ್ಯದ ಪ್ರತಿಪ್ರಜೆಗೂ ಸಮಾನ ಹಕ್ಕು, ಅವಕಾಶಗಳನ್ನು ಒದಗಿಸಿಕೊಡಬೇಕೆನ್ನುವ, ಸ್ವಾತಂತ್ರ್ಯ ಮತ್ತು ಅಭಿವೃದ್ಧಿಯ ಪ್ರತಿಫಲ ಎಲ್ಲರಿಗೂ ದಕ್ಕಲು ಸಾಧ್ಯವಾಗಬೇಕೆನ್ನುವ, ಭಾರತೀಯರ ನಡುವೆ ಭ್ರಾತೃತ್ವವನ್ನು ಉದ್ದೀಪಿಸುವ ಆಶಯ ಹೊಂದಿರುವ ಸಂವಿಧಾನವು ನಮ್ಮದಾಯಿತು. ಸಾಮಾಜಿಕ ಬದಲಾವಣೆ ತರಲು ಅಥವಾ ಅದಕ್ಕೆ ಪೂರಕವಾದ ಸಮಾಜ ನಿರ್ಮಾಣ ಮಾಡಲು ಅಗತ್ಯವಾದ ಕಾಯ್ದೆ ಕಾನೂನು ರೂಪಿಸಲು ನಮ್ಮ ಸಂವಿಧಾನವು ಊರುಗೋಲಿನಂತಿದೆ. ಅದು ಭಾರತದ ಎಲ್ಲ ಪ್ರಾಂತ್ಯ, ಲಿಂಗ, ಜಾತಿ, ಭಾಷೆ, ಧರ್ಮದ ನಾಗರಿಕರಿಗೂ ಸಮಾನತೆ, ಸಮಾನ ಅವಕಾಶ ದೊರಕಿಸಿಕೊಡುತ್ತದೆ. ಸಮಾನತೆ, ಧಾರ್ಮಿಕ ಸ್ವಾತಂತ್ರ್ಯ, ಅಸ್ಪೃಶ್ಯತಾ ನಿಷೇಧ, ತಾರತಮ್ಯ ನಿಷೇಧ, ಮಹಿಳೆಯರಿಗೆ ಆರ್ಥಿಕ-ಸಾಮಾಜಿಕ ಹಕ್ಕು ಸೇರಿದಂತೆ ಹಲವು ವಿಷಯಗಳ ಬಗೆಗೆ ಸಂವಿಧಾನ ಚರ್ಚಿಸುತ್ತದೆ. ಈ ದೇಶದ ರಾಜಕೀಯ ನೀತಿ, ನಿರ್ದೇಶನ ತತ್ವಗಳು, ಪ್ರಜೆಗಳ ಮೂಲಭೂತ ಹಕ್ಕುಗಳೇ ಮುಂತಾದ ವಿಷಯಗಳ ಬಗೆಗೆ ಸ್ಪಷ್ಟವಾಗಿ ವಿವರಿಸುತ್ತದೆ.

  ಪರಿಶುದ್ಧ ಕನ್ನಡ ಭಾಷೆಯ ಸವಿಯನ್ನು ಸ್ವಚ್ಛವಾಗಿ ಸರಿಯಾಗಿ ಉಚ್ಚರಿಸು

ಲಡಾಯಿ ಪ್ರಕಾಶನ ಪ್ರಕಟಿಸಿರುವ ‘ವಿಮೋಚಕನ ಹೆಜ್ಜೆಗಳು’ ಕೃತಿ ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯವಿದ್ದು, ಆಸಕ್ತರು ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ಕಿಸಬಹುದು…
https://imojo.in/fq3uhh

ಶ್ರೀಮತಿ ಅನಿತ

Leave a Reply

Your email address will not be published. Required fields are marked *

Translate »