ಕಾಶಿಯಲ್ಲಿ ಮೋಕ್ಷ ಭವನ..!
ಕಾಶಿ ಎಂದಾಕ್ಷಣ ಫಕ್ಕನೆ ನೆನಪಿಗೆ ಬರುವುದು: ಕಾಶಿ ವಿಶ್ವನಾಥ, ಕಲುಷಿತವಾದ ಗಂಗೆ, ಜನನಿಬಿಡ ಗಲ್ಲಿಗಳು, ಸಾಧು ಸನ್ಯಾಸಿಗಳು, ಬೆನ್ನು ಬಿದ್ದು ಕಾಸು ಕೀಳುವ ಪಂಡಾಗಳು, ಮತ್ತು ಅಗಾಧ ಭಕ್ತ ಸಮೂಹ..
ಇಂಥ ಕಾಶಿಗೆ ಬರೀ ಪುಣ್ಯಕ್ಷೇತ್ರ ದರ್ಶನಕ್ಕೆ ಬರುವುದಿಲ್ಲ, ಸಾಯಲೂ ಬರುತ್ತಾರೆ! ಕಾಶಿಯಲ್ಲಿ ಸಾಯಲು ಬರುವವರಿಗೆ ವಿಶೇಷ ಮರ್ಯಾದೆ ಇದೆ. ಸತ್ತ ನಂತರ ಅವರಿಗೆ ಮುಕ್ತಿಪ್ರಾಪ್ತಿಯಾಗುತ್ತದಂತೆ. ಹಾಗಾಗಿ, ಕೆಲವರು ಸಾಯುವ ಹಂತದಲ್ಲಿ ಇಲ್ಲಿಗೆ ಬಂದು ಕೆಲಕಾಲ ತಂಗಿ ದೇಹತ್ಯಾಗ ಮಾಡಿದರೆ; ಇನ್ನುಳಿದವರು ಸತ್ತನಂತರ ಕೂಡ ದೇಹವನ್ನು ಇಲ್ಲಿಗೆ ತಂದು ಗಂಗೆಯ ದಡದಲ್ಲಿ ದಹನ ಮಾಡುತ್ತಾರೆ. ಹಾಗಾಗಿ ಬಿಹಾರ, ಉತ್ತರಪ್ರದೇಶದ ಎಷ್ಟೋ ಊರುಗಳಲ್ಲಿ ಸ್ಮಶಾನವೇ ಇಲ್ಲ! ಕಾಶಿಯನ್ನೇ ‘ಮಹಾ ಸ್ಮಶಾನ’ ಎಂದು ಕರೆಯುತ್ತಾರೆ.
‘ಕಾಶೀಲಾಭ್ ಮುಕ್ತಿಭವನ’.
ಇದು ಕಾಶಿಗೆ ಸಾಯಲು ಬರುವವರ ತಾತ್ಕಾಲಿಕ ತಂಗುದಾಣ. ಇಲ್ಲಿ ಹನ್ನೆರಡು ಕೋಣೆಗಳಿವೆ. ಉಳಿದುಕೊಳ್ಳಲು ಯಾವುದೇ ರೀತಿಯ ಶುಲ್ಕ ನೀಡಬೇಕಿಲ್ಲ. ಕೋಣೆ, ನೀರು, ವಿದ್ಯುತ್ ಎಲ್ಲವೂ ಉಚಿತ! ಒಂದೇ ಕಂಡೀಷನ್. ನಿಮಗೆ ಅರವತ್ತು ವರ್ಷ ದಾಟಿರಬೇಕು! ಸಾವಿನ ಅಂಚಿನಲ್ಲಿರಬೇಕು. ಜೊತೆಗೆ ಮುಂಚೆಯೇ ಕಾಗದ ಬರೆದು ಇಲ್ಲಿಯ ಕೋಣೆಯನ್ನು ಕಾದಿರಿಸಿರಬೇಕು. ಎಲ್ಲವೂ ಸುಸೂತ್ರವಾಗಿ ನಡೆದು, ಅಲ್ಲಿಯ ಮ್ಯಾನೇಜರ್ ಬನ್ನಿ ಎಂದರೆ, ಇಲ್ಲಿಗೆ ಬಂದು ನಾಲ್ಕು ಜನ ಬಂಧುಗಳೊಂದಿಗೆ ತಂಗಬಹುದು. ಹದಿನೈದು ದಿನ ನೀವು ಅವರ ಅತಿಥಿ. ಆ ಅವಧಿಯಲ್ಲಿ ನಿಮಗೆ ಸಾವು ಬಂದು ಸತ್ತರೆ ನೇರ ಸ್ವರ್ಗ, ಇಲ್ಲವೇ ವಾಪಸ್ ನಿಮ್ಮ ಊರಿಗೆ ಟಿಕೆಟ್!
ತಮಾಷೆಯಲ್ಲ,
ಕಾಶಿ ಲಾಭ್ ಮುಕ್ತಿ ಭವನ ಮಣಿಕರ್ಣಿಕಾದಿಂದ ದೂರವಿದ್ದರೂ ಮೋಕ್ಷಾರ್ಥಿಗಳ ಮೆಚ್ಚುಗೆ ಗಳಿಸಿದೆ. ಮೊದಲಿಂದಲೂ ಸತ್ಸಂಗ ಭವನವಾಗಿ ಬೆಳೆದು ಬಂದಿರುವ ಕಾಶಿ ಲಾಭ್ ಮುಕ್ತಿ ಭವನದಲ್ಲಿ ನಿತ್ಯ ಪೂಜೆ, ಪುನಸ್ಕಾರ, ಭಜನೆ ನಡೆಯುತ್ತಲೆ ಇರುತ್ತದೆ. ಇದರಿಂದ ಮುಕ್ತಿ ಹೊಂದಲು ಬಂದಿರುವ ವ್ಯಕ್ತಿಗೆ ಸೂಕ್ತ ಆಧಾತ್ಮಿಕ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಜನ ನಂಬಿದ್ದಾರೆ. ಸಾಯುವ ಮುನ್ನ ಭಗವನ್ನಾಮ್ ಸ್ಮರಣೆ, ರಾಮಚರಿತಾ ಮಾನಸ ಕಿವಿಗೆ ಬೀಳುತ್ತಿದ್ದರೆ, ಮೋಕ್ಷಾರ್ಥಿಗಳಿಗೆ ಮೋಕ್ಷ ಖಚಿತ ಎನ್ನಲಾಗಿದೆ.
ಹೀಗೆ, ಸುಮಾರು ಐವತ್ತೆರಡು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ‘ಕಾಶೀಲಾಭ್ ಮುಕ್ತಿಭವನ’ದಲ್ಲಿ ಈಗಾಗಲೇ ಸುಮಾರು ಇಪ್ಪತ್ತು ಸಾವಿರಕ್ಕು ಹೆಚ್ಚು ಜನರ ಪ್ರಾಣ ಹೋಗಿದೆ! ಅವರಿಗೆಲ್ಲ ಸ್ವರ್ಗ ಸಿಕ್ಕಿದೆಯೇ? ಮನುಷ್ಯ ಜನ್ಮದಿಂದ ಮುಕ್ತಿಪಡೆದಿದ್ದಾರೆಯೇ? ಗೊತ್ತಿಲ್ಲ. ಏಕೆಂದರೆ ಹೋದವರು ಯಾರೂ ವಾಪಸ್ ಬಂದು ಹೇಳಿಲ್ಲ…
ಈ ಮುಕ್ತಿ ಭವನಗಳಲ್ಲಿ ನೆಲೆಸಲು ನಿಯಮಗಳಿವೆ…
ಮರಣಶಯ್ಯೆಯಲ್ಲಿರುವ ಮೋಕ್ಷಾರ್ಥಿ ಹಾಗೂ ಆತನ ಕುಟುಂಬ ಗರಿಷ್ಠ 15 ದಿನಗಳ ಇಲ್ಲಿ ನೆಲೆಸಬಹುದು.
ಸಾಂಕ್ರಮಿಕ ರೋಗಗ್ರಸ್ತರಿಗೆ ನೆಲೆಸಲು ಅವಕಾಶವಿಲ್ಲ.
ಅತಿಥಿ ಗೃಹದ ಇತರೆ ಸದಸ್ಯರು, ನಿರ್ವಹಕರೊಡನೆ ಅಸಭ್ಯವಾಗಿ ವರ್ತಿಸುವುದು, ಅನುಚಿತವಾಗಿ ನಡೆದುಕೊಳ್ಳುವಂತಿಲ್ಲ.
ಸಂಬಂಧಿಕರು ಸೌದೆ ಒಲೆಯಲ್ಲಿ ಅಡಿಗೆ ಮಾಡಿಕೊಳ್ಳತಕ್ಕದ್ದು.
ಮೋಕಾರ್ಥಿಯೂ ಮುಕ್ತಿ ಹೊಂದಿದ 24 ಗಂಟೆಗಳಲ್ಲಿ ಅವರ ಕುಟುಂಬಸ್ಥರು ಅತಿಥಿ ಗೃಹ ತೊರೆಯಬೇಕು
ಕರ್ಮ ಕಳೆಯುವ ತನಕ ಮುಕ್ತಿ ಇಲ್ಲ.
ಸಾವಿನಲ್ಲೂ ಇಲ್ಲಿ ಸಮಾನತೆ ಇಲ್ಲ. ಕಾಶಿಯಲ್ಲಿ ಹಲವೆಡೆ ವರ್ಣಾಶ್ರಮಕ್ಕೆ ತಕ್ಕ ಪ್ರತ್ಯೇಕ ಘಾಟ್ ಗಳಿವೆ. ಕೆಲವು ಹಿಂದೂಗಳಿಗೆ ಸಾವಿನಲ್ಲೂ ಹೆಚ್ಚಿನ ಮರ್ಯಾದೆ ನೀಡಲಾಗುತ್ತದೆ ಎಂಬ ಕೂಗಿದೆ. ಆದರೆ. ಮೊದಲೇ ಹೇಳಿದಂತೆ ಮುಕ್ತಿ ಹೊಂದಲು ಸಾಯುವ ವ್ಯಕ್ತಿಯ ಮನಸ್ಥಿತಿ ಮುಖ್ಯವಾಗುತ್ತದೆ. ಜಾತಿ, ಧರ್ಮ, ಮತ, ಪಂಥ ಎಲ್ಲವನ್ನೂ ಮೀರಿದ್ದು ಸಾವು. ಅತಿಥಿ ಗೃಹಗಳು ಮೋಕ್ಷಾರ್ಥಿಯ ಕೊನೆ ನಿಲ್ದಾಣವಾಗಿ, ಹುಟ್ಟು ಸಾವಿನ ಚಕ್ರದಿಂದ ತಪ್ಪಿಸಿಕೊಳ್ಳಲು ಕಾಶಿಯಲ್ಲಿ ಮುಕ್ತಿ ಹೊಂದುವುದೇ ಮಾರ್ಗ ಎಂಬ ನಂಬಿಕೆ ಅಚಲವಾಗಿ ಇಂದಿಗೂ ಉಳಿದುಕೊಂಡು ಬಂದಿದೆ.
ಆದರೆ, ಕಾಶಿಯಲ್ಲಿ ಸಾಯುವವರಿಗೆಲ್ಲ ಮುಕ್ತಿ ಸಿಗುವುದಿಲ್ಲ, ಮುಕ್ತಿ ಸಿಗಲು ಕಾಶಿಯಲ್ಲೇ ಸಾಯಬೇಕಾಗಿಲ್ಲ. ಕರ್ಮ ಕಳೆಯುವ ತನಕ ಮುಕ್ತಿ ಇಲ್ಲ ಎಂಬ ಮಾತಿದ್ದರೂ, ಹುಟ್ಟು ಸಾವಿನ ಮರ್ಮ ಅರಿತರೇ ಮೋಕ್ಷ ತಾನಾಗೇ ಲಭಿಸುತ್ತದೆ.