ಧವಳ ಶಿಖರ : ಕುವೆಂಪು
ಕುವೆಂಪು, ಕಾರಂತ, ಸರ್. ಎಂ. ವಿಶ್ವೇಶ್ವರಯ್ಯ ಮತ್ತು ಡಾಕ್ಟರ್ ರಾಜಕುಮಾರ್ ಈ ಹೆಸರುಗಳನ್ನು ಕೇಳಿದರೆ ಸಾಕು, ಕನ್ನಡಿಗರು ರೋಮಾಂಚನಗೊಳ್ಳಬಲ್ಲರು. ಹೆಮ್ಮೆ ಪಡಬಲ್ಲರು, ಎದೆಯುಬ್ಬಿಸಿ ನಡೆಯಬಲ್ಲರು, ತಲೆ ಎತ್ತಿ ನಿಲ್ಲಬಲ್ಲರು ! ಇಂತಹ ಮಹಾನ್ ವ್ಯಕ್ತಿಗಳಿಂದಲೇ ನಾಡು, ನುಡಿ ಶ್ರೀಮಂತವಾಗಿರುವುದೇ ಹೊರತು ಹಣ, ಐಶ್ವರ್ಯ, ಒಣ ವೇದಾಂತಗಳಿಂದ ಅಲ್ಲ. ನೆಲ ನೆಲೆಗಳಿಂದ ಅಲ್ಲ. ಅಂತಹ ವಿಭೂತಿ ಪುರುಷರಲ್ಲಿ ಕೆ ವಿ. ಪುಟ್ಟಪ್ಪನವರು ಅಗ್ರಗಣ್ಯರು. ಕುವೆಂಪು ಎಂಬ ಹೆಸರೇ ಕನ್ನಡಿಗರಿಗೆ ಒಂದು ಮಂತ್ರ. ಆಧುನಿಕ ಕನ್ನಡ ಸಾಹಿತ್ಯದ ಮೇರು ಸಾಹಿತಿಗಳಲ್ಲಿ ಮತ್ತು ಕರ್ನಾಟಕದ ನಿರ್ಮಾಪಕರಲ್ಲಿ ಕುವೆಂಪುರವರ ಹೆಸರು ಅಗ್ರೇಸರ. ಕನ್ನಡದ ಹಿರಿಮೆ ಗರಿಮೆಗಳನ್ನು ಮುಗಿಲೆತ್ತರಕ್ಕೆ ಎತ್ತಿ, ಲೋಕಕ್ಕೆಲ್ಲ ಬಿತ್ತರಿಸಿದ ಜಗದ ಕವಿ, ಯುಗದ ಕವಿ ಕುವೆಂಪು. ಕನ್ನಡ ಸಾಹಿತ್ಯ ಲೋಕದ ದೀಪ ಸ್ತಂಭ. ಕನ್ನಡ ನಾಡಿನ ಪುಣ್ಯ. ಇಂತಹ ಹಲವು ದೀಪದಾರಿಗಳನ್ನು ಪಡೆದ ಭಾಗ್ಯ ನಮ್ಮದು. ಹುಟ್ಟು ಕವಿಗಳಾದ ಕುವೆಂಪು ಸೃಷ್ಟಿಸಿದ ಸಾಹಿತ್ಯ ಇಡೀ ಭರತ ಭೂಮಿಯಲ್ಲಿ ತನ್ನ ಕಂಪನ್ನು ನಿರಂತರವಾಗಿ ಸೂಸುತ್ತಲೇ ಇದೆ. ಮಲೆನಾಡಿನ ಒಂದು ಸಣ್ಣ ಕೊಂಪೆಯಲ್ಲಿ ಜನಿಸಿ ಜಗದ್ವಿಖ್ಯಾತರಾದ ಕುವೆಂಪು ರಚಿಸಿದ ಸಾಹಿತ್ಯ ಅಪಾರ. ಬೃಹತ್ತು ಮತ್ತು ಮಹತ್ವಗಳಲ್ಲಿ ಸರಿಸಾಟಿ ಇಲ್ಲದ ಅವರ ಸಾಹಿತ್ಯವನ್ನು ಅಧ್ಯಯನ ಮಾಡದ ಸಾಹಿತ್ಯ ಪ್ರೇಮಿಗಳಿಲ್ಲ. ಅವರಿಂದ ಪ್ರೇರಣೆಗೊಂಡು ಪ್ರಭಾವಿತರಾದವರು ಸಾವಿರಾರು ಜನ. ರಸ ಸರಸ್ವತಿಯನ್ನು ಒಲಿಸಿಕೊಂಡ ಈ ಮಹಾನ್ ಸಾಹಿತ್ಯ ಸಾಧಕರ ಹಿರಿಮೆ ಗರಿಮೆಗಳು ಒಂದೇ ಎರಡೇ? ಇಪ್ಪತ್ತನೆಯ ಶತಮಾನದ ಉದ್ದಕ್ಕೂ ತಮ್ಮ ಪ್ರಖರ ವೈಚಾರಿಕ ನಿಲುವಿನಿಂದ ತನ್ನ ಸುತ್ತಣ ಸಮಾಜವನ್ನು ಪ್ರಭಾವಿಸಿದ ಎರಡು ದೈತ್ಯ ಪ್ರತಿಭೆಗಳಲ್ಲಿ ಒಬ್ಬರು ಕಾರಂತರಾದರೆ, ಇನ್ನೊಬ್ಬರು ಕುವೆಂಪು.
ವೆಂಕಟಪ್ಪ ಗೌಡರು ಮತ್ತು ಸೀತಮ್ಮ ದಂಪತಿಗಳ ಮಗನಾಗಿ ದಿನಾಂಕ 29.12 1904 ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕು ಹಿರೇ ಕೊಡಿಗೆಹಳ್ಳಿ ಜನಿಸಿದ ಕುವೆಂಪು, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕುಪ್ಪಳಿಯಲ್ಲಿ, ಮಾಧ್ಯಮಿಕ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ, ಕಾಲೇಜು ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ಮಾಡಿದರು. ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರಿಂದ ಪ್ರಭಾವಿತರಾದ ಕುವೆಂಪುರವರು ಮೈಸೂರಿನ ರಾಮಕೃಷ್ಣ ಆಶ್ರಮದಿಂದ ಪಡೆದ ದೀಕ್ಷೆ ಅವರ ಬದುಕಿನಲ್ಲಿ ಮಹತ್ವದ ತಿರುವು. ಬಾಲ ಮೇಧಾವಿಯಾದ ಕುವೆಂಪು 1922 ರಲ್ಲಿ "ಬಿಗಿನರ್ಸ್ ಮ್ಯುಸ್" ಎಂಬ ಇಂಗ್ಲಿಷ್ ಕವನ ಸಂಕಲನವನ್ನು ಹೊರ ತಂದರು. ಆ ಕಾಲಕ್ಕೆ ಕವನ ಬರೆಯಲು ಕನ್ನಡ ಸೂಕ್ತ ಭಾಷೆಯಲ್ಲ, ಇಂಗ್ಲಿಷ್ ಸರಿಯಾದ ಭಾಷೆ ಎಂದು ಭಾವಿಸಿದ್ದರು ! ಅವರ ಈ ತಪ್ಪು ಕಲ್ಪನೆಯನ್ನು ಹೋಗಲಾಡಿಸಿದವರು ಐರೀಷ್ ಕವಿ ಜೇಮ್ಸ್ ಎಚ್. ಕಸಿನ್ಸ್ . ಅವರಿಗೆ ತಮ್ಮ ಇಂಗ್ಲಿಷ್ ಕವನಗಳನ್ನು ತೋರಿಸಿದಾಗ ಮಾತೃಭಾಷೆಯಲ್ಲಿ ವ್ಯಕ್ತ ಪಡಿಸಿದಂತೆ ಅನ್ಯ ಭಾಷೆಯಲ್ಲಿ ಭಾಷೆ, ಭಾವನೆಗಳನ್ನು ಸಮರ್ಪಕವಾಗಿ ಹೊಮ್ಮಿಸಲಾಗದು ಎಂದು ತಿಳಿ ಹೇಳಿ ಕನ್ನಡದಲ್ಲಿ ಬರೆಯುವಂತೆ ಪ್ರೇರೇಪಣೆ ನೀಡಿದವರು ಜೇಮ್ಸ್ ಎಚ್. ಕಸಿನ್ಸ್ . ನಂತರ ಕನ್ನಡಕ್ಕೆ ಹೊರಳಿದ ಕುವೆಂಪುರವರು ವಿಶ್ವ ಕವಿಯಾಗಿ ಹೊರಹೊಮ್ಮಿದ್ದು ಇತಿಹಾಸ.
ಕವಿಯಾಗಿ, ಕಾದಂಬರಿಕಾರರಾಗಿ, ನಾಟಕಕಾರರಾಗಿ, ವಿಮರ್ಶಕರಾಗಿ, ಮಹಾ ಕಾವ್ಯಗಳನ್ನು ಸೃಜಿಸಿದ ಕುವೆಂಪುರವರು ಮಲೆನಾಡಿನಿಂದ ಬಂದವರಾದ್ದರಿಂದ ಪ್ರಕೃತಿಯ ಆರಾಧಕರು. ಮಲೆನಾಡು ಅವರಿಗೆ ಜೀವ ದ್ರವ್ಯ . "ನಲ್ಲೆಯನಪ್ಪುವ ನಲ್ಲನ ತೆರದಿ, ತಾಯನಪ್ಪುವ ಮಗುವಿನ ತೆರದಿ, ಮಲೆನಾಡಿನ ಸಾಮಿಪ್ಯಕ್ಕೆ ಕವಿ ಮನ ಆಶಿಸುತ್ತದೆ. "ಹೋಗುವೆನು ನಾ ಹೋಗುವೆನು, ನನ್ನ ಒಲುಮೆಯ ಗೂಡಿಗೆ, ಮಲೆಯ ನಾಡಿಗೆ, ಮಳೆಯ ಬೀಡಿಗೆ, ಸಿರಿಯ ಚೆಲುವಿನ ರೂಢಿಗೆ " ಎಂದು ಹುಟ್ಟೂರನ್ನು ಮತ್ತೆ ಮತ್ತೆ ಹಂಬಲಿಸುತ್ತಾರೆ. ನಿಸರ್ಗದಲ್ಲಿ, ಪಂಚಭೂತಗಳಲ್ಲಿ ದೈವವನ್ನು ಕಾಣುವ ಕುವೆಂಪು " ಸೂರ್ಯೋದಯ ಚಂದ್ರೋದಯ ದೇವರ ದಯಕಾಣೋ " ಎನ್ನುತ್ತಾರೆ. ದೇವರು ಭಾವವು ಹೌದು, ವಿಭಾವವು ಹೌದು. ದೇವರು ಆಕಾರನೂ ಹೌದು, ನಿರಾಕಾರನು ಹೌದು. ಭಗವಂತ ರಾಗವೂ ಹೌದು, ವಿರಾಗಿಯು ಹೌದು. ಅವನ ಸನ್ನಿಧಿಗೆ ನೂರಾರು ಮಾರ್ಗಗಳು. ಸತತ ಅನ್ವೇಷಣೆಯೇ ಮನುಷ್ಯನ ಜೀವನದ ಗುರಿ ಎನ್ನುವ ಕುವೆಂಪು, "ದಾರಿಯ ಪರಿಚಯವಿಲ್ಲ. ಸೇರುವ ಗುರಿಯ ಪರಿಚಯವಿಲ್ಲ. ನಿನ್ನ ಪರಿಚಯವೊಂದೇ ನನಗೆ ಎಲ್ಲದರ ಪರಿಚಯ. ಕಡಿದಾದ ಬೆಟ್ಟಗಳಿರೆ ಕೈಹಿಡಿದು ಮೇಲೇರಿಸು, ಆಳವಾದ ಕಂದಕಗಳಿರೆ ಮೆಲ್ಲಗೆ ಕೆಳಗಿಳಿಸು, ಮುಳ್ಳು ಕೆಸರುಗಳಿರೆ ಮೇಲೆತ್ತಿ ದಾಟಿಸು, ಮರುಭೂಮಿಗಳಿರೆ ಹಾಡಿ ಹುರಿದುಂಬಿಸು, ಎಂದು ನಿಯಾಮಕನಿಗೆ ಬೇಡಿಕೆ ಸಲ್ಲಿಸುತ್ತಾರೆ. "ಹೂಗಳನ್ನು ಕೊಯ್ದು ತಂದಿರುವೆ, ಮಾಲೆಗಳನ್ನು ನೆಯ್ದು ನಿಂದಿರುವೆ, ಗುಡಿಯ ಗುಡಿಸಿರುವೆ, ತೊಳೆದು ರಂಗವಲ್ಲಿಯ ಬರೆದು ಸಿಂಗಾರ ಮಾಡಿರುವೆ ! ಗಂಧ ಗುಗ್ಗುಳ ಹೊತ್ತಿಸಿರುವೆ, ಕೀರ್ತನೆಗಳನ್ನು ಹಾಡುತಿರುವೆ, ನೀ ಬರುವೆ ಎಂಬುದನು ಜನರಿಗೊರೆದು .... ನೀನೆಂದಿಗೈ ತರುವೆ ? ಎಂದು ಆತನನ್ನು ಪ್ರಶ್ನಿಸುತ್ತಾರೆ.
ಹುಣ್ಣಿಮೆಯ ಚಂದ್ರನನ್ನು ಅವರು ವರ್ಣಿಸುವ ಪರಿಯನ್ನು ನೋಡಿರಿ. "ಗಗನ ರಮಣಿ ಹಣೆಯೊಳಗಿಟ್ಟ ಕುಂಕುಮದ ಬಟ್ಟಿನೊಲು" ಕಾಣಿಸುತ್ತಾನಂತೆ ಆತ ! " ಬನಗಳನು ಮುದ್ದಿಸುತ, ಗಿರಿಗಳನು ಚುಂಬಿಸುತ, ಹೊಳೆಗಳೆದೆಯ ಬೆಳಗಿ ತೊಳಗಿ" ಮೂಡುತ್ತಾನೆ ಶಶಿ. ಬಂಗಾರದ ಹೊಸ ಚೆಂಡಿನಂತೆ ಹೊಳೆವ ಚಂದ್ರನಲಿ - ಸೊಬಗಿಹದು, ಆ ಸೊಬಗಿನಲ್ಲಿ ಶಿವನಿಹನು; ಶಿವನೆ ಸೊಬಗಾಗಿಹನು! ಸೊಬಗನೊಲಿಯೆ ಶಿವನ ಭಕುತಿ! ಸೊಬಗೆ ನಮಗೆ ಕೊನೆಯ ಮುಕುತಿ! ಎನ್ನುತ್ತಾರೆ. ಕೀರ್ತಿಯನ್ನು ಶನಿ ಎಂದು ಕರೆದು "ಕೀರ್ತಿ ಶನಿ" ತೊಲಗಾಚೆ ಎಂದು ಕುವೆಂಪುರವರು ಹೇಳಿದರೂ, ಯಶೋ ಕೀರ್ತಿಗಳು ಅವರನ್ನೇ ಅಪ್ಪಿಕೊಂಡವು. ಅವರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳು, ಬಂದ ಬಿರುದು ಬಾವಲಿಗಳು ಕನ್ನಡದ ಮತ್ತೊಬ್ಬ ಕವಿಗೆ ದೊರಕಿದ್ದನ್ನು ನಾವು ಕಾಣೆವು. ಅವರಿಗೆ ದೊರಕಿದ ಗೌರವ ಸನ್ಮಾನಗಳು ಅಸಂಖ್ಯ. ಜ್ಞಾನಪೀಠ ಪ್ರಶಸ್ತಿ, ಪದ್ಮಭೂಷಣ, ಪಂಪ ಪ್ರಶಸ್ತಿ, ಪದ್ಮ ವಿಭೂಷಣ, ಕರ್ನಾಟಕ ರತ್ನ ಮುಂತಾದ ಪ್ರಶಸ್ತಿಗಳನ್ನು ನೀಡಿ ನಾಡು ಅವರನ್ನು ಗೌರವಿಸಿದೆ.
ಪ್ರಕೃತಿಯ ಪೂಜೆ, ಆಧ್ಯಾತ್ಮದ ಆರಾಧನೆಗಳು ಕುವೆಂಪುರವರ ಜೀವನದ ಪ್ರಮುಖ ದರ್ಶನ. ಪ್ರತಿಯೊಬ್ಬ ಮಾನವರಿಗೂ ಅದು ಅವಶ್ಯಕ ಎಂದು ನಂಬಿದವರು. ಕ್ಷಮೆ, ಪರೋಪಕಾರ, ಸಹೋದರತ್ವ, ಸಮಚಿತ್ತ, ವಿಶ್ವ ಮಾನವತೆ ಎಲ್ಲರಿಗೂ ಇರಬೇಕಾದ ಗುಣಗಳು. ತಾಮಸ ಗುಣಗಳಿಗೆ ದಾಸರಾದರೆ ಮನುಷ್ಯನ ಅವನತಿ ಪ್ರಾರಂಭವಾಗುತ್ತದೆ. ಆದ್ದರಿಂದ " ಗರ್ವಕ್ಕೆ ಮಣಿಯದೆ ದೀನರ ತುಳಿಯದೆ, ಸಿರಿಯಾಧಿಕಾರಗಳಾಸೆಗೆ ಸಿಲುಕಿ, ಶಿವ ಸತ್ಯ ಸೌಂದರ್ಯಗಳನ್ನೆಲ್ಲ ಹಳಿಯದೆ, ಜೀವವು ಹೂವಿನೊಳಿರಲಿ ಸದಾ" (ಕೊಳಲು) ಎಂದು ದೈವಕ್ಕೆ ಮೊರೆ ಇಡುತ್ತಾರೆ.ಅಧಿಕಾರ, ಐಶ್ವರ್ಯಗಳು ಮನುಜರ ಉನ್ನತಿಗೆ ಕಾರಣವಾಗುವಂತೆ, ದುರ್ಗತಿಗೂ ಕಾರಣವಾಗುತ್ತದೆ. ಲೋಕದಲ್ಲಿ ಕಾಣುವ ಅನ್ಯಾಯ, ಅಕ್ರಮಗಳಿಗೆ, ದುಷ್ಟತನಗಳಿಗೆ ಮನುಷ್ಯರ ದುರಾಸೆಗಳು, ದುರ್ನೀತಿಗಳು ಪ್ರಮುಖ ಕಾರಣ. ಅಹಂಕಾರವಂತೂ ಮನುಷ್ಯನ ಅಳಿವಿಗೆ ಮೂಲ ಕಾರಣ. ಆದ್ದರಿಂದ "ತುಳಿ ! ತುಳಿ ! ಹತ್ತಿ ತುಳಿ ! ಮತ್ತೆ ತುಳಿ ! ಒತ್ತಿ ತುಳಿ ! ಅಹಂಕಾರವಳಿಯಲಿ. ತಾನು ಎಂಬುದೆಲ್ಲ ಉದುರಿ, ನೀನು ಮಾತ್ರ ಉಳಿಯಲಿ " ಎಂದು ಭಗವಂತನನ್ನು ಪ್ರಾರ್ಥಿಸುತ್ತಾರೆ. ( ಅಗ್ನಿ ಹಂಸ )
ಮನುಜ ಮತ, ವಿಶ್ವ ಪಥ, ಸರ್ವೋದಯ, ಸಮನ್ವಯ, ಪೂರ್ಣ ದೃಷ್ಟಿ ಎಂಬ ಪಂಚ ಮಂತ್ರಗಳ ಮೂಲಕ ವಿಶ್ವ ಮಾನವ ಸಂದೇಶವನ್ನು ಸಾರಿದರು. " ರೂಪ ,ರೂಪಗಳನು ದಾಟಿ, ನಾಮ ಕೋಟಿಗಳನು ಮೀಟಿ, ಎದೆಯ ಬಿರಿಯೆ ಭಾವಗೀತೆ, ಓ ನನ್ನ ಚೇತನ, ಆಗೂ ನೀ ಅನಿಕೇತನ" ಎಂಬ ವಿಶ್ವಮಾನವ ಗೀತೆಯನ್ನು ನೀಡಿದ ಕುವೆಂಪುರವರು ತಮ್ಮ ಜೀವನವಿಡಿ ಮೌಡ್ಯತೆಯ ವಿರುದ್ಧ ಸಮರ ಸಾರಿದರು. ಪ್ರಕೃತಿಯೇ ದೇವರು ಎಂದು ನಂಬಿದವರು. ಅದಕ್ಕಾಗಿ ಅವರ ಪ್ರಾರ್ಥನೆ, "ನನ್ನನು ನಿನ್ನಯ ಕೊಳಲನು ಮಾಡು ಹೇ ಜೀವೇಶನೆ ಬೇಡುವೆನು, ನಿನ್ನಯ ಸವಿಗೊರಲುಸಿರನು ನೀಡು. ವಿಧ ವಿಧ ರಾಗವ ಹಾಡುವೆನು". ಮರೆಯಾದರೂ ಮರೆಯಲಾಗದ ಮಲೆನಾಡಿನ ಕೋಗಿಲೆಗೆ, ರಸ ಋಷಿಗೆ, ರಾಷ್ಟ್ರ ಕವಿಗೆ, ಕವಿ ಶೈಲದ ಕವಿವರ್ಯರಿಗೆ, ಹುಟ್ಟು ಹಬ್ಬದ ಶುಭಾಶಯಗಳು .
ಸಿರಿಗನ್ನಡಂ ಗೆಲ್ಗೆ. ಸಿರಿಗನ್ನಡಂ ಬಾಳ್ಗೆ.
- ವಾಸುದೇವ ಬಿ . ಎಸ್.
( 9986407256 )