ಮರಣದ ನಂತರ ಮನುಷ್ಯನ ಬದುಕು ಹೇಗಿರುತ್ತೆ? ಆತ್ಮ ಎಲ್ಲಿಗೆ ಹೋಗುತ್ತದೆ…?
ಮರಣದ ನಂತರ ಮನುಷ್ಯನ ಬದುಕು ಹೇಗಿರುತ್ತೆ? ಆತ್ಮ ಎಲ್ಲಿಗೆ ಹೋಗುತ್ತದೆ? ಕಠೋಪನಿಷತ್ ನಲ್ಲಿ ಸ್ವತಃ ನರಕಾಧಿಪತಿ ಯಮರಾಜನು ಬಾಲಕ ನಚೀಕೇತನಿಗೆ ಹೇಳಿದ ಆತ್ಮ ವಿದ್ಯೆಯ ಪರಮ ರಹಸ್ಯ ಏನು?
ಸಾವು – ಈ ಶಬ್ದ ಎಂತಹ ಮಹಾನ್ ವ್ಯಕ್ತಿಗಳನ್ನೂ ಬಿಟ್ಟಿಲ್ಲ. ಇದು ಗೊತ್ತಿದ್ದರೂ ಮನುಷ್ಯ ಗೊತ್ತಿಲ್ಲದಂತೆ ಬದುಕುತ್ತಾನೆ. ಅದುವೇ ಮನುಷ್ಯ ಜೀವನ. ನ್ಯಾಯ-ಅನ್ಯಾಯಗಳ ಮೂಲಕ ಯಥಾಯೋಗ್ಯ ಕರ್ಮಗಳನ್ನು ಸಂಪಾದಿಸುವನು. ಇರಲಿ. ಬದುಕು ಮುಗಿದ ಮೇಲೆ ಅದು ದೇಹ ಮಾತ್ರ. ಸಾವಿನೊಂದಿಗೆ ವ್ಯಕ್ತಿಯ ಹೆಸರೂ ಸಹ ಸಾಯುವುದು.
ಎಲ್ಲರಲ್ಲಿಯೂ ಒಂದು ಅನುಮಾನ. ಸಾವಿನ ಬಳಿಕ ದುಃಖ ಒಂದೆಡೆಯಾದರೆ ಮರಣದ ನಂತರದ ಬದುಕು ಹೇಗಿರತ್ತೆ ಎಂಬುದು. ಆತ್ಮ ವಿದ್ಯೆಯ ಕುರಿತು ಸ್ವತಃ ನರಕಾಧಿಪತಿ ಯಮರಾಜನು ಬಾಲಕ ನಚೀಕೇತನಿಗೆ ಹೇಳಿದ ಪರಮ ರಹಸ್ಯವಾದ ಆತ್ಮವಿದ್ಯಾ ರಹಸ್ಯ ಈ ಲೇಖನದಲ್ಲಿದೆ. ನರಕಾಧಿಪತಿ ಯಮರಾಜನು ಬಾಲಕ ನಚೀಕೇತನಿಗೆ ಆತ್ಮವಿದ್ಯೆಯ ರಹಸ್ಯ ಹೇಳುವನು. ರವಿ, ಚಂದ್ರ, ಅಗ್ನಿ, ವಾಯು, ಆಕಾಶ, ಭೂಮಿ, ಜಲ ಇವೆಲ್ಲವೂ ಯಮರಾಜನ ಹೃದಯಗಳು. ಹಗಲು ಮತ್ತು ರಾತ್ರಿಗಳು ಯಮರಾಜನಿಗೆ ಮಾನವನ ವೃತ್ತಾಂತವನ್ನು ತಿಳಿಸುವರು.
ಜೀವಿಯು ಗತಿಸಿದ ಮೇಲೆ ಒಂದು ವರ್ಷದ ಪರ್ಯಂತ ಧೀರ್ಘ ಪ್ರಯಾಣ ಮಾಡಿ ಯಮಲೋಕವನ್ನು ತಲುಪುವನು. ದಿನಕ್ಕೆ 2470 ಯೋಜನದಂತೆ 86,000 ಯೋಜನ ದೂರ ಯಮಲೋಕವಿದೆ. ದೇಹ ತ್ಯಜಿಸಿದ 10 ದಿನಗಳವರೆಗೂ ಸ್ಥೂಲಕಾಯದಿಂದ( ದೇಹದಿಂದ) ಬೇರ್ಪಟ್ಟ ಜೀವಿಯು ಹಸ್ತ ಪ್ರಮಾಣದಷ್ಟೇ ಬೆಳೆಯುವನು. ಬಳಿಕ ಮುಂದೆ ಯಮಲೋಕ ದಲ್ಲಿಒಂದು ವರ್ಷದ ಬಳಿಕವಷ್ಟೇ ಅಂಗುಷ್ಠ ಪ್ರಮಾಣದಲ್ಲಿ ಬೆಳೆದು ಯಮಭೋಗವನ್ನು ಕರ್ಮಾನುಸಾರವಾಗಿ ಭೋಗಿಸುವನು.
ನಾಭುಕ್ತಂ ಕ್ಷೀಯತೇ ಕರ್ಮ ಕಲ್ಪಕೋಟಿ ಶತೈರಪಿ !
ಅಭುಕ್ತ್ವಾ ಯಾತನಾಂ ಜಂತುರ್ಮಾನುಷಂ ಲಭತೇ ನಹಿ !!
ನೂರು ಕೋಟಿಕಲ್ಪ ಕಾಲವಾದರೂ ಕರ್ಮಫಲವು ಅನುಭವಿಸಿದಲ್ಲದೇ ಅದು ಎಂದೆಂದೂ ಬಿಡದು. (ದೇವತೆಗಳಿಗೂ ಇದು ಬಿಟ್ಟಿಲ್ಲ. ಸ್ವತಃ ಯಮರಾಜನು ಅಣುಮಾಂಡವ್ಯ ಋಷಿಗಳ ಶಾಪಕ್ಕೆ ತುತ್ತಾಗಿ ವಿದುರನಾಗಿ ಜನ್ಮವೆತ್ತಿದ ಕಥೆಯೂ ಇದೆ). ಹಾಗೆಯೇ ಯಾತನೆಯನ್ನು ಅನುಭವಿಸದೇ ಜೀವಿಗೆ ಮನುಷ್ಯ ಜನ್ಮ ಲಭ್ಯವಿಲ್ಲ. ಸತ್ತ ಜೀವಿಗೆ ಪಿಂಡ ಪ್ರಧಾನ ಏಕೆಂದರೆ 10 ದಿನಗಳಲ್ಲಿ ಸೂಕ್ಷ್ಮ ದೇಹ ನಿರ್ಮಾಣವಾಗಿ ಜೀವಿಗೆ ಯಮಪುರಿ ಸೇರಲು ಶಕ್ತಿ ಸಿಗುವುದು. ಪಿಂಡ ಪ್ರಧಾನ ಕಾರ್ಯಗಳು ಮಾಡದಿದ್ದಲ್ಲಿ ಆತ್ಮವು ಪ್ರೇತವಾಗಿ ಅಲೆದಾಡಬೇಕಾಗುತ್ತದೆ. 5 ನೇ ತಿಂಗಳಲ್ಲಿ ಯಮಕಿಂಕರರು ಜೀವಿಗೆ ದಾರಿ ಮಧ್ಯೆ ವಿಶ್ರಾಂತಿ ನೀಡುವರು.
6ನೇ ತಿಂಗಳಲ್ಲಿ ಆತ್ಮವು ವೈತರಣಿ ನದಿ ದಾಟುವುದು. (ದಕ್ಷನ ಯಜ್ಞದಲ್ಲಿ ದಾಕ್ಷಾಯಣಿಯು ದೇಹ ತ್ಯಾಗ ಮಾಡಿದಾಗ ಆ ನೋವಿನಲ್ಲಿ ರುದ್ರನು ಹರಿಸಿದ ಕಣ್ಣೀರಿನ ನದಿಯೇ ಈ ವೈತರಣಿ ನದಿಯಾಯಿತು). ಬಳಿಕ ಆತ್ಮವು ಯಮಪುರಿ ಸೇರುವುದು. ಇದೊಂದು ಧೀರ್ಘ ಪ್ರಯಾಣವೇ ಹೌದು.
ಮೊದಲು ಮನುಷ್ಯನ ಕರ್ಮಾಕರ್ಮಗಳ ವಿಚಾರಣೆ ನಡೆಯುವುದು ಅದು ಯಮಪುರಿಯಲ್ಲೇ. ಯಮಲೋಕವಿರುವುದು ನರಕದಲ್ಲೇ.. ನರಕಗಳು ಭೂಮಿಯಿಂದ ದಕ್ಷಿಣ ದಿಕ್ಕಿಗೆ ನೀರಿನ ಮೇಲೆ ನಿಂತಿದೆ. ಇಲ್ಲಿಯೇ ಪಿತೃ ದೇವತೆಗಳ ವಾಸ. ಇಲ್ಲಿಂದಲೇ ಪಿತೃಗಳು ಕಾಲಕಾಲಕ್ಕೆ ತಮ್ಮ ವಂಶಜರು ನೀಡುವ ತರ್ಪಣಗಳನ್ನು ಸ್ವೀಕರಿಸಿ ( ವರ್ಷಂ ಪ್ರತೀ ) ತಮ್ಮ ವಂಶದಲ್ಲಿ ಹುಟ್ಟುವವರಿಗೆ ಮಂಗಳವಾಗಲಿ ಎಂದು ಹಾರಸುತ್ತಿರುತ್ತಾರೆ.
ನರಕಾಧಿಪತಿ ಯಮಧರ್ಮನಾಗಿದ್ದು ಮೃತ ಜೀವಿಗಳ ಪಾಪ-ಪುಣ್ಯಕ್ಕನುಗುಣವಾಗಿ 21 ನರಕಗಳಲ್ಲಿ ಶಿಕ್ಷೆ ವಿಧಿಸುವನು. ತಾಮಿಸ್ರ, ಅಂಧ ತಾಮಿಸ್ರ, ರೌರವ, ಮಹಾ ರೌರವ, ಕುಂಭಿಪಾಕ, ಕಾಲಸೂತ್ರ, ಅಸಿಪತ್ರವನ ಇತ್ಯಾದಿ. ಇದಲ್ಲದೇ ಸೌಮ್ಯ, ಸೌರಿ ಪುರ, ನಗೇಂದ್ರ ಭವನ, ಕ್ರೌಂಚ, ವಿಚಿತ್ರ ಭವನ, ಶೀತಾಢ್ಯಬಹುಭೀತಪುರ, ಧರ್ಮ ಭವನ ಇತ್ಯಾದಿ (ಈ ಲೋಕದ ಕುರಿತು ಗರುಡ ಪುರಾಣದಲ್ಲಿ ಪ್ರತ್ಯೇಕ ವಿವರಣೆ ಇದೆ).
ಭೂಮಿಯಲ್ಲಿ ಮಾಡಿದ ಪಾಪ ಪುಣ್ಯಗಳಿಗೆ ಅನುಸಾರವಾಗಿ ಫಲಗಳನ್ನು ಅನುಭವಿಸಿ ಬಳಿಕ ಪುಣ್ಯಾಂಶಗಳಿಗೆ ಅನುಸಾರವಾಗಿ ಸ್ವಗಕ್ಕೆ (ವೈಕುಂಠ ಅಥವಾ ಕೈಲಾಸ) ತೆರಳುವನು. ಬಳಿಕ ಸ್ವರ್ಗದಲ್ಲಿ ಪುಣ್ಯಾಂಶ ಅನುಭವಿಸಿದ ಬಳಿಕ ನಿಗದಿತ ಯೋನಿಯೊಂದರಲ್ಲಿ ಮತ್ತೆ ಕರ್ಮಾನುಸಾರ ಭೂಮಿಗೆ ಮರಳುವನು.
ಜೀವಿಯು ಬದುಕಿರುವಾಗ ಋಣದಲ್ಲೇ ಬದುಕುವನು… ಮೃತಪಟ್ಟ ಬಳಿಕವೂ ಸಂಪಾದಿತ ಋಣವನ್ನು ಅನುಭವಿಸಲೇ ಬೇಕು. ಮಾನವನ ಜನ್ಮ ಬರುತ್ತಲೇ 3 ಋಣ (ಪಿತೃ ಋಣ, ಋಷಿ ಋಣ, ದೇವ ಋಣ) ಗಳು ಅವನನ್ನು ಅಂಟಿಕೊಳ್ಳುವುದು. ಇವುಗಳಲ್ಲಿ ತಮ್ಮ ಕುಲ ಗುರುಗಳ (ಮಠ ಅಥವಾ ಗುರು ಪೀಠ) ಸೇವೆ ಮಾಡಿಯೂ ಋಷಿ ಋಣವನ್ನು ಹಾಗೂ ಹೋಮ ಹವನ ಆಹುತಿಗಳ ಮೂಲಕ ದೇವ ಋಣವನ್ನು ಸುಲಭದಲ್ಲಿ ತೀರಿಸಬಹುದು.
ಆದರೆ ಪಿತೃ ಋಣ ಎಂಬುವದು ಮಾತ್ರ ಮನುಷ್ಯನಾದವನು ತೀರಿಸುವುದು ಬಲು ಕಷ್ಟ. ಶಾಸ್ತದಲ್ಲಿ ಮಾತ್ರ ದೇವೋ ಭವ, ಪಿತೃ ದೇವೋಭವ ಎಂದು ಮೊದಲೆರಡು ಸ್ಥಾನಗಳನ್ನು ಪಿತೃರಿಗೆ ನೀಡಲಾಗಿದೆ. ನವ ಮಾಸ ಹೊತ್ತು ಹೆತ್ತು ಸಲಹುವ ತಾಯಿ, ತನಗೆ ಕಷ್ಟವಿದ್ದರೂ ತಾನು ತಿನ್ನುವುದನ್ನು ಮಕ್ಕಳಿಗೆ ಕೊಟ್ಟು ತನ್ನ ತೋಳಿನಲ್ಲಿ ಪ್ರೀತಿ ಕೊಟ್ಟು ಬೆಳೆಸುವ ತಂದೆಯ ಪ್ರೀತಿಗೆ ಅಥವಾ ಋಣಕ್ಕೆ ಸಾಟಿ ಉಂಟೇ? ಇನ್ನು ಇವರ ತ್ಯಾಗ, ಪ್ರೀತಿಯ ಋಣ ಮಕ್ಕಳಿಗೆ ಜನ್ಮಜನ್ಮಾಂತರದವರೆಗೂ ಭಾಧಿಸುವುದು.
ತಂದೆ, ತಾಯಿಯರು ವೃದ್ಥಾಪ್ಯದಲ್ಲಿದ್ದಾಗ ಅವರ ಸೇವೆ ಮಾಡುವುದೇ ನಿಜವಾದ ಪಿತೃ ಋಣ ತೀರಿಸುವುದು ಎಂದರ್ಥ. ಸಾವಿನ ಬಳಿಕ ತಮ್ಮ ಪಿತೃಗಳ ಈಡೇರದ ಆಸೆಗಳೇನಿದ್ದರೂ ಅದನ್ನು ಪೂರೈಸುವುದು ಇದುವೇ ನಿಜವಾದ ಶ್ರಾದ್ದ. ಜೀವಿತಾವಧಿಯಲ್ಲಿ ಪಿತೃಗಳನ್ನು ವೃದ್ದಾಶ್ರಮಕ್ಕೆ ಸೇರಿಸಿ ಪಿತೃಗಳು ಸತ್ತ ಬಳಿಕ ಶ್ರಾದ್ದ ಮಾಡಿಸಿದರೆ ಅದು ಬೂಟಾಟಿಕೆ ಆಗುವುದು ವಿನಹ ಶ್ರಾದ್ದವಾಗುವುದಿಲ್ಲ.
ಶಾಸ್ತ್ರಗಳಲ್ಲಿ ಪಿತೃಗಳಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಪಿತೃಗಳಿಗೆ ಸದ್ಗತಿ ನೀಡದೇ ನಾನಾ ದೇವಾಲಯದಲ್ಲಿ ಪೂಜೆ ಪುರಸ್ಕಾರ ಹೋಮ ಎಂದು ಅಡ್ಡಾಡಿದರೆ ಇದೇ ಪಿತೃಗಳು ದೇವತೆಗಳ ಆಶೀರ್ವಾದವೂ ನಿಮಗೆ ಸಿಗದಂತೆ ಅಡ್ಡಿ ಮಾಡುವರು. ಈ ಅಧಿಕಾರವನ್ನು ದೇವತೆಗಳೇ ಪಿತೃರಿಗೆ ನೀಡಿದ್ದಾರೆ. ಯಾವ ಮಕ್ಕಳು ಜೀವಿತಾವಧಿಯಲ್ಲಿ ವೃದ್ದ ಪಿತೃಗಳ ಸೇವೆ ಮಾಡುವರೋ ಅವರಿಗೆ ಯಾವ ಕರ್ಮಗಳೂ ಅಂಟಿಕೊಳ್ಳಲಾರದು.
ಇನ್ನು 3 ಸ್ಥಳಗಳಿಗೆ ಪಿತೃ ಶ್ರಾದ್ದ ಪರಮ ಶ್ರೇಷ್ಠ ಎಂದು ಹೇಳಲಾಗಿದೆ. ಕಾಶಿ ವಿಶ್ವನಾಥನ ಗಂಗಾ ಸನ್ನಿಧಿ, ತ್ರಿವೇಣಿ ಸಂಗಮ ಹಾಗೂ ವಿಷ್ಣು ಪಾದ ದೇವಾಲಯ, ಗಯಾ ( ಬಿಹಾರ). ಈ 3 ಸ್ಥಳಗಳಲ್ಲಿ ಯಾರು ತಮ್ಮ ಪಿತೃಗಳಿಗೆ ಸರ್ವ ಪಿತೃ ಶ್ರಾದ್ದ ಮಾಡಿ ಪಿಂಡ ಪ್ರಧಾನ ತರ್ಪಣಗಳನ್ನು ಬಿಡುವರೋ ಅಂತಹ ಪಿತೃಗಳು ಕರ್ಮದ ಪೊರೆಯಿಂದ ಬಹು ಬೇಗನೇ ಸ್ವರ್ಗ ಸೇರುವರು.
ಜೀವತೋರ್ವಾಕ್ಯ ಕಾರಣಾತ್ ವರ್ಷಾಣಿತೆ ಭುವಿ ಭೋಜನಾತ್ !
ಗಯಾಯಾಂ ಷಿಂಡ ದಾನಚ್ಛ ತ್ರಿಭಿಃ ಪುತ್ರಸ್ಯ ಪುತ್ರತಾ !!
ಗಯಾ ಪಿಂಡ ಪ್ರಧಾನದ ಕುರಿತು ಶಾಸ್ತ್ರ ವಾಕ್ಯ ಪ್ರಮಾಣವಾಗಿದೆ.
(ಸರ್ವ ಪಿತೃ ಶ್ರಾದ್ದವೆಂದರೆ ತಮ್ಮ ವಂಶಜರಲ್ಲಿ ಗೊತ್ತಿದ್ದವರು ಮತ್ತು ಗೊತ್ತಿಲ್ಲದೇ ಮೃತಪಟ್ಟವರು ಮತ್ತು ವಂಶಜರ ಮನೆಯಲ್ಲಿ ಅಸುನೀಗಿದ ಸಾಕು ಪ್ರಾಣಿಗಳಿಗೂ ಈ ಕಾರ್ಯಲ್ಲಿ ಪಿತೃಗಳ ಜೊತೆಯಲ್ಲಿ ಅವರಿಗೂ ಸದ್ಗತಿ ದೊರೆಯುವುದು).
ಯಮಪುರಿಯಲ್ಲಿ ಯಮನು ಆತ್ಮನನ್ನು ಕೇಳುವನು? ನಿನಗೆ ಕೊಟ್ಟ ದೇಹದಲ್ಲಿ ಕೈ ಕಾಲು ಇದೆ. ನೋಡಲು ಕಣ್ಣು ಕೊಟ್ಟೆ. ನೀನು ಏನು ಮಾಡಿದೆ ಎಂದು. ಅದಕ್ಕೆ ಉತ್ತರಿಸಲು ನಮ್ಮಲ್ಲಿ ಉತ್ತಮ ಉದಾಹರಣೆ ಇರಲಿ. ಸಜ್ಜನರ ಸಹವಾಸ, ದಾನ ಧರ್ಮ, ಹೋಮ ಹವನ, ಸಮಾಜ ಸೇವೆ ಹೀಗೆ ನಾನಾ ವಿಧಿಯಲ್ಲಿ ಭಗವಂತನ ಸೇವೆ ಮಾಡಿದರಷ್ಟೇ ಯಮನ ಪ್ರಶ್ನೆಗೆ ಉತ್ತರಿಸಬಹುದಾಗಿದೆ.
▬▬▬ஜ۩۞۩ஜ▬▬▬▬▬▬ஜ۩۞۩ஜ▬▬ ಧಮೋ೯ ರಕ್ಷತಿ ರಕ್ಷಿತ: ಕೃಷ್ಣಾರ್ಪಣಮಸ್ತು
ಸರ್ವಜನಾಃ ಸುಖಿನೋಭವತು
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬