ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ವಿವಾಹ ಮತ್ತು ಜಾತಕ – ವರ ಪರೀಕ್ಷೆ ಮತ್ತು ವಧು ಪರೀಕ್ಷೆ

ವಿವಾಹ ಮತ್ತು ಜಾತಕ..!

ವಿವಾಹವು ಧರ್ಮಶಾಸ್ತ್ರ ರೀತ್ಯಾ ಒಂದು ಜೀವನದ ಗುರಿಯ ಸಾಧನೆಗಾಗಿ ಮಾಡುವ ಮಹಾನ್ ಸಂಕಲ್ಪವಾಗಿರುತ್ತದೆ, ಅಲ್ಲಿ ಗಂಡು ಹೆಣ್ಣು ಪರಸ್ಪರ ಹೊಂದಾಣಿಕೆಯಿಂದ ಬಾಳಿಬದುಕುವ ಉದ್ದೇಶದೊಂದಿಗೆ ಪರಮ ಪುರುಷಾರ್ಥಗಳಾದ ಧರ್ಮಪೋಷಣೆ, ಧರ್ಮದಿಂದ ಅರ್ಥಸಂಚಯನ, ಆ ಅರ್ಥದಿಂದ ಇಚ್ಛಾಪೂರ್ತಿ ಅಥವಾ ಕಾಮಸಾಧನೆ, ಸತ್ಕಾರ್ಯ, ಅತಿಥಿ ಸತ್ಕಾರಾದಿ ಗೃಹಸ್ಥ ಧರ್ಮಾಚರಣೆ, ತತ್ಸಂಬಂಧವಾಗಿ ಪುಣ್ಯ ಸಂಚಯನಪೂರ್ವಕ ಮೋಕ್ಷ ಪ್ರಾಪ್ತಿಯು ಗೃಹಸ್ಥಾಶ್ರಮದ ಗುರಿಯಾಗಿರುತ್ತದೆ.

ಇದರಲ್ಲಿ ಪುರುಷ ಪ್ರಧಾನವಾದ ಸಮಾಜವಿದ್ದಾಗ್ಯೂ ಹೆಂಡತಿಯೇ ಧರ್ಮಸ್ವರೂಪಿ ಆಗಿರುತ್ತಾಳೆಯೇ ವಿನಃ ಪುರುಷನಲ್ಲ. ಹಾಗಿದ್ದು ಆ ಸೂತ್ರವನ್ನು ಮನನ ಮಾಡಿದಾಗ ಜೀವನವೆಂಬ ರಥಕ್ಕೆ ಹೆಂಡತಿ ಸಾರಥಿಯಾಗಿಯೂ, ಗಂಡ ಕುದುರೆಯಾಗಿಯೂ ಜೀವನೋದ್ದೇಶವೆಂಬ ರಥಿಕನನ್ನೊಡಗೂಡಿ ಪರಮ ಪದದತ್ತ ಸಾಗುವ ಪ್ರಯಾಣವಾಗಿರುತ್ತದೆ. ಹಾಗಿದ್ದಾಗ ವಿವಾಹದಲ್ಲಿ ಹೆಣ್ಣಿಗಿರುವಂತೆಯೇ ಗಂಡಿಗೂ ಇರಬೇಕಾದ ಅನಿವಾರ್ಯತೆ ಇದೆ. ಆದರೆ ವಸ್ತುಸ್ಥಿತಿ ಹಾಗಿಲ್ಲ! ಸಮಾಜದಲ್ಲಿ ಈಗ ವಧುಪರೀಕ್ಷೆ ಎಂಬ ನಾಟಕ ಚಾಲ್ತಿಯಲ್ಲಿದ್ದರೂ ವರಪರೀಕ್ಷೆ ಎಂಬ ಸ್ವರವೂ ಕೇಳಿಬರುತ್ತಿಲ್ಲ. ಸಮಾಜದಲ್ಲಿ ತುಂಬಿರುವ ಅಜ್ಞಾನದಿಂದಾಗಿ ವಿವಾಹಕ್ಕೆ ಪೂರ್ವಭಾವಿಯಾಗಿ ಮಾಡಬೇಕಾದ ಯಾವ ಪೂರ್ವ ಸಿದ್ಧತೆಯೂ ಈಗ ಚಾಲ್ತಿಯಲ್ಲಿಲ್ಲ. ವಿವಾಹಕ್ಕೆ ಹೆಣ್ಣು ಗುಣವತಿಯೂ, ಶೀಲವತಿಯೂ, ವಿಧ್ಯಾವತಿಯೂ ಆಗಿದ್ದು ಆರೋಗ್ಯವಂತಳಾಗಿದ್ದಾಳೆ ಎಂದಾದರೆ ಪೂರ್ಣ ಅರ್ಹತೆಯನ್ನು ಹೊಂದುತ್ತಾಳೆ. ಆದರೆ ಗಂಡು ಹಾಗಲ್ಲ. ಆತನು ವಿವಾಹಿತನಾಗಬೇಕಿದ್ದಲ್ಲಿ ಧರ್ಮ ವಿಧಿಸುವ ಕೆಲವು ನಿಬಂಧನೆಗಳು, ಅವನ ವಿಧ್ಯಾರ್ಹತೆ, ಭೌತಿಕ ಮಟ್ಟ, ಜೀವನಾನುಭವ, ಲೋಕಜ್ಞಾನ, ಕರ್ತವ್ಯ ಪ್ರಜ್ಞೆ, ಮಾನವೀಯ ಗುಣ, ಕಾಮಾದಿ ಅರಿಷಡ್ವರ್ಗಗಳನ್ನು ನಿಗ್ರಹಿಸುವ ಶಕ್ತಿ; ಸತ್ಯ, ಜ್ಞಾನ, ಧರ್ಮ, ದಯೆ, ಶಾಂತಿ, ಕ್ಷಮತೆಗಳೆಂಬ ಷಡ್ಗುಣಗಳನ್ನು ಅವನು ಮೈಗೂಡಿಸಿಕೊಂಡಿರಬೇಕು. ಇಷ್ಟೆಲ್ಲಾ ಅರ್ಹತೆಗಳನ್ನು ಮೈಗೂಡಿಸಿಕೊಂಡಿದ್ದ ವರನು ವಿವಾಹಕ್ಕೆ ಅರ್ಹನೆಂದು ಧರ್ಮ ಮತ್ತು ಸಮಾಜ ಅಂಗೀಕರಿಸುತ್ತಿತ್ತು.

  ಉತ್ತರಾಖಂಡದಲ್ಲಿದೆ ಊಖಿ ಮಂದಿರ - ಉಷೆ ಮಠ

ಹಾಗಿದ್ದಲ್ಲಿ ವರಪರೀಕ್ಷೆ ಎಂದರೇನು? ಆತನಲ್ಲಿ ಇರತಕ್ಕ ಈ ಗುಣಗಳನ್ನು ಪರೀಕ್ಷಿಸುವ ಬಗೆ ಹೇಗೆ ಎಂಬ ಜಿಜ್ಞಾಸೆ ಹುಟ್ಟುವುದು ಸಹಜ. ಹಿಂದೆಲ್ಲಾ ಬೇರೆ, ಬೇರೆ ರೀತಿಯಲ್ಲಿ ಸ್ಪರ್ಧೆ, ವಿಧ್ಯಾ ಪ್ರದರ್ಶನ, ಬಲ ಪ್ರದರ್ಶನ, ಕುಹಕ ಚಿಕಿತ್ಸಾ ವಿಧಾನ, ಹೀಗೆ ಹಲವಾರು ರೀತಿಯ ಪರೀಕ್ಷಾ ವಿಧಾನಗಳು ಬಳಕೆಯಲ್ಲಿದ್ದವು. ಆಗ ಸ್ವಯಂವರಾದಿ ವಿವಾಹ ಪದ್ಧತಿ ಬಳಕೆಯಲ್ಲಿದ್ದವು. ಮುಂದೆ ಆ ರೀತಿಯ ಪರೀಕ್ಷೆಗಳಿಗೆ ಬೇಕಾದ ಮುಖ್ಯ ಭೂಮಿಕೆಗಳು ಲುಪ್ತವಾಗುತ್ತಾ ಹೋದದ್ದರಿಂದಾಗ್ಯೂ ಮತ್ತು ಅದಕ್ಕಿಂತ ಉತ್ತಮವಾದ ಪರೀಕ್ಷಾ ವಿಧಾನಗಳು ರೂಪಿಸಲ್ಪಟ್ಟು ಬೇರೆ ಪರೀಕ್ಷಾ ವಿಧಾನ ಬಳಕೆಗೆ ತರದಿದ್ದ ಕಾರಣದಿಂದ, ಎಲ್ಲವಕ್ಕೂ ಒಂದೇ ಪರಿಹಾರ ಎಂಬುದಾಗಿ ವರನ ಜಾತಕ ಪರಿಶೀಲನಾ ಪದ್ಧತಿ ಜಾರಿಗೆ ಬಂತು. ಆ ಕಾಲದಲ್ಲಿ ಅದು ಸೂಕ್ತವಾಗಿಯೂ ಇತ್ತು. ಆಗಿನ ಜ್ಯೋತಿಷಿಗಳು ಒಬ್ಬನ ಜಾತಕವನ್ನು ಪರಿಶೀಲಿಸಿ ಇವನು ಧರ್ಮಕ್ಕೆ ವ್ಯತಿರಿಕ್ತವಾಗಿ ಹೋಗದೆ ನಿರ್ಧರಿತ ಮಾರ್ಗದಲ್ಲಿಯೇ ಜೀವನವನ್ನು ನಡೆಸಿದಲ್ಲಿ ಇವನು ಹೀಗೇ ಬದುಕಬಲ್ಲ ಎಂಬ ನಿರ್ಣಯವನ್ನು ಸಮರ್ಥವಾಗಿ ಕೊಡುತ್ತಿದ್ದರು. ಆ ಕಾಲದಲ್ಲಿ ಬಳಕೆಯಲ್ಲಿ ಬಂದ ಜಾತಕ ಪರಿಶೀಲನಾ ಪದ್ಧತಿಯು ಇದಾಗಿರುತ್ತದೆ.

ಜಾತಕ ಪರಿಶೀಲನಾ ಪದ್ಧತಿ ಎಂದರೆ ವರನ ಜಾತಕವನ್ನು ಪರಿಶೀಲಿಸಿ ಈ ಜಾತಕನು ಗೃಹಸ್ಥಾಶ್ರಮವನ್ನು ಸ್ವೀಕರಿಸಲು ಅರ್ಹನೆ? ಅರ್ಥಾತ್ ವಿವಾಹವಾಗಲು ಅರ್ಹನೆ? ಇವನು ವಿವಾಹದಲ್ಲಿ ತನ್ನ ಸಂಸಾರ ಪೋಷಣೆ ಮಾಡುವುದರೊಂದಿಗೆ ಆಶ್ರಮಧರ್ಮದ ಪರಮೋದ್ದೇಶವಾದ ಅತಿಥಿ ಸತ್ಕಾರ, ದೇವ ಋಷಿ ಪಿತೃ ಯಜ್ಞಗಳು, ಪ್ರಾಣಿದಯಾದಿ ಪಂಚಯಜ್ಞಗಳನ್ನು ನಡೆಸಿಕೊಂಡು ಹೋಗಲು ಇವನಲ್ಲಿ ಸಾಮರ್ಥ್ಯವಿದೆಯೇ? (ಗೃಹಸ್ಥಾಶ್ರಮಿಯಾದ ಪ್ರತಿಯೊಬ್ಬನಿಗೂ ಪಂಚಾಯತನ ಪೂಜಾಪದ್ಧತಿ ಅನಿವಾರ್ಯ. ಅದರ ಸೂಕ್ಷ್ಮ ಉದ್ದೇಶವಾದ ಪಂಚಭೂತಾತ್ಮಕ ಪಂಚಯಜ್ಞದ ಅಂಗವೇ ಪಂಚಾಯತನ.) ಈ ರೀತಿಯಲ್ಲಿ ವಿಮರ್ಶಿಸುವುದರೊಂದಿಗೆ ಪ್ರಜಾಪತಿಯ ಉದ್ದೇಶವಾದ ಸತ್ಪ್ರಜಾವೃದ್ಧಿ, ಧರ್ಮಾರ್ಥ ಸಾಧನೆಗಳನ್ನು ಮಾಡಲು ಇವನು ಸಮರ್ಥನೆಂದು ಜಾತಕದಲ್ಲಿ ಕಂಡುಬಂದಲ್ಲಿ ಆತನಿಗೆ ವಿವಾಹದ ಅರ್ಹತೆಯನ್ನು ದೈವಜ್ಞರು ಹಾಗೂ ಸಮಾಜವು ಕೊಡುತ್ತಿತ್ತು. ಗೃಹಸ್ಥಾಶ್ರಮಿಯಾಗಲು ಸಮಾಜದ ಅಂಗೀಕಾರ ಮುದ್ರೆಯನ್ನು ಹೊಂದಿದವನು ಸೂಕ್ತ ಕನ್ಯೆಯನ್ನು ಅನ್ವೇಷಿಸಿ ವಿವಾಹವಾದಲ್ಲಿ ಆತನನ್ನು ಗೃಹಸ್ಥನೆಂದು ಸಮಾಜ ಸ್ವೀಕರಿಸುತ್ತಿತ್ತು.

  ಏಕಾದಶಿಗಳ ಹೆಸರುಗಳು ಮತ್ತು ಫಲ

ಮುಂದೆ ಅನಿವಾರ್ಯ ಕಾರಣದಿಂದ, ವಂಶ ಬೆಳೆಸುವ ಉದ್ದೇಶದಿಂದಲೂ, ವರನ ಜಾತಕದಲ್ಲಿ ಸೂಕ್ತ ವಿವಾಹ ಅರ್ಹತೆಗಳು ಇಲ್ಲದಿದ್ದಲ್ಲಿ ವಧುವಿನ ಅಥವಾ ಕನ್ಯೆಯ ಜಾತಕವನ್ನು ಪರಿಶೀಲಿಸಿ, ಆಕೆಗೆ “ಸ್ತ್ರೀ ಪುಣ್ಯ ಪುರುಷ ಭಾಗ್ಯ” ಎಂಬಂತೆ ಪುಣ್ಯ ಭಾಗವು ಉತ್ತಮವಾಗಿದ್ದು ಸಂಸಾರ ನೌಕೆಗೆ ಆ ಕನ್ಯೆಯು ಸಮರ್ಥ ಚುಕ್ಕಾಣಿಯಾಗಲು ಸಹಕಾರಿಯಾದಾಳೆ? ಎಂದು ವಿಮರ್ಶಿಸುವ ಪದ್ಧತಿ ಬಳಕೆಯಲ್ಲಿ ಬಂದಿತು. ಜಾತಕ ಪರಿಶೀಲನಾ ವಿಧಾನ ಈ ಮುಖದಿಂದ ಬಳಕೆಯಲ್ಲಿತ್ತೇ ವಿನಃ ಕೂಟಾದಿಗಳ ಹೊಂದಾಣಿಕೆಯಲ್ಲ. ಷಷ್ಟಾಷ್ಟಕ, ಕುಜದೋಷ ಇತ್ಯಾದಿ ಯೋಗಗಳು ವಿವಾಹ ನಂತರ ಸೂಕ್ತ ಶಾಂತಿಗಳ ಮುಖೇನ ಪರಿಹರಿಸಿಕೊಳ್ಳುವ ವಿಧಾನ ಬಳಕೆಯಲ್ಲಿತ್ತೇ ವಿನಃ, ಜಾತಕ ಹೊಂದುವುದಿಲ್ಲ ಎಂದು ತಿರಸ್ಕರಿಸಲ್ಪಡುತ್ತಿರಲಿಲ್ಲ! ಮುಂದೆ ಸಮರ್ಥ ಜ್ಯೋತಿಷ್ಯಾಭ್ಯಾಸಿಗಳ ಕೊರತೆಯಿಂದಾಗಿಯೂ, ಅಲ್ಪ ಜ್ಞಾನದಿಂದಲೇ ಜ್ಯೋತಿಷ್ಯ ಹೇಳುವ ವೃತ್ತಿ ಬಳಕೆಯಲ್ಲಿ ಬಂದಿದ್ದರಿಂದಲೂ, ವೃತ್ತಿಪರ ಜ್ಯೋತಿಷ್ಯವು ತನ್ನ ರಕ್ಷಣೆಯ ಉದ್ದೇಶದಿಂದ ಹೇಳುತ್ತಾ ಬಂದ ಕೆಲವು ಯೋಗಗಳು ನಗಣ್ಯ! ಅವುಗಳನ್ನು ಸೂಕ್ತ ರೀತಿಯಲ್ಲಿ ಪರಿಹಾರ ಮಾಡಿಕೊಳ್ಳಲು ಸಾಧ್ಯ.

ಹಾಗಾಗಿ ಜಾತಕ ನೋಡುವ ಪದ್ಧತಿ ಏಕೆ ಬೇಕೆಂದರೆ ಸಂಸಾರಿಯಾಗಿ, ಗೃಹಸ್ಥನಾಗಿ ಬದುಕಲು ವರನು ಅರ್ಹನೇ ಎಂದು ತಿಳಿಯುವುದಕ್ಕಾಗಿಯೇ ವಿನಃ, ಹೆಣ್ಣು ಗಂಡಿನ ಮನೋಭೂಮಿಕೆಯನ್ನು ಒಂದು ಮಾಡುವುದಕ್ಕಾಗಿ ಅಲ್ಲ. ಅವರ ಮನೋಭೂಮಿಕೆಯನ್ನು ಒಂದು ಮಾಡುವಂತಹಾ ಶಾಸ್ತ್ರ ಸಿದ್ಧವಾದ ಕೆಲವು ಸೂಕ್ತ ಧಾರ್ಮಿಕ ಆಚರಣೆಗಳು, ಜೀವನ ಧರ್ಮ ಮತ್ತು ವಂಶಾಚಾರ, ಕುಲಾಚಾರಗಳನ್ನು ಅವುಗಳ ಮೂಲ ಉದ್ದೇಶವನ್ನರಿತು ಸ್ಪಷ್ಟವಾಗಿ ಆಚರಿಸಿಕೊಂಡು ಬಂದಲ್ಲಿ ಸಮರ್ಥ ದಂಪತಿಗಳಾಗಿ ಬಾಳಿ ಬೆಳಗುತ್ತಾರೆ, ಲೋಕಕ್ಕೆ ಬೆಳಕಾಗುತ್ತಾರೆ, ದೇಶಕ್ಕೆ ತಮ್ಮದಾದ ಸತ್ಪ್ರಜೆಯನ್ನು ಒದಗಿಸುತ್ತಾರೆ ಎಂದು ಸ್ಪಷ್ಟೀಕರಿಸುತ್ತೇನೆ. ಆದ್ದರಿಂದ ವಿವಾಹಕ್ಕೆ ವಧೂವರರ ಜಾತಕ ಹೊಂದಾಣಿಕೆಯೇ ಪ್ರಧಾನವಲ್ಲ. ಆ ವಧೂವರರಲ್ಲಿ ತಮ್ಮ ಭಾವೀಜೀವನದಲ್ಲಿ ಸಮರ್ಥ ಜವಾಬ್ದಾರಿಯುತ ಪ್ರಜೆಯಾಗಬೇಕೆಂಬ ಇಚ್ಛೆ ಅಥವಾ ಸಂಕಲ್ಪ ಶಕ್ತಿ ಪ್ರಬಲವಾಗಿರಬೇಕಾದ್ದು ಅಗತ್ಯವಾಗಿರುತ್ತದೆ. ಹಾಗಿದ್ದಲ್ಲಿ ಈ ಕೂಟಾದಿಗಳು, ದುರ್ಯೋಗಗಳು, ಇವುಗಳಿಗೆಲ್ಲಾ ಹೆದರುವ ಅವಶ್ಯಕತೆ ಇಲ್ಲ! ಅವುಗಳಿಗೆ ಸೂಕ್ತ ಪರಿಹಾರವನ್ನು ಕಂಡುಕೊಂಡು ಯಶಸ್ವೀ ಜೀವನ ನಡೆಸುವುದಕ್ಕೆ ಸಾಧ್ಯವಾಗುತ್ತದೆ.

  ಸಣ್ಣವರಿದ್ದಾಗ - ದೊಡ್ಡವರಾದ ಮೇಲೆ - ಕಾಲ

ಆದ್ದರಿಂದ ವಿವಾಹ ಮಾಡತಕ್ಕ ಹಿರಿಯರು ಈ ವಿಚಾರವನ್ನು ಮನಗಂಡು ಮುಂದೆ ವಧೂವರರಾಗಬೇಕಾದ ತಮ್ಮ ಮಕ್ಕಳಿಗೆ ಜೀವನೋದ್ದೇಶ, ಕರ್ತವ್ಯ ಪ್ರಜ್ಞೆ, ಧರ್ಮದಲ್ಲಿ ಸದಭಿಪ್ರಾಯ, ಜೀವನದಲ್ಲಿ ತಾವೇನಾದರೂ ಸಾಧಿಸಬೇಕೆಂಬ ಪ್ರಬಲ ಇಚ್ಛೆ, ಸದ್ಗುಣಗಳನ್ನು ತುಂಬುವುದರ ಮುಖೇನ ಉತ್ತಮ ಪ್ರಜೆಯಾಗಿ ರೂಪಿಸಿ. ಹಾಗಾದಾಗ ನೀವು ಅವರನ್ನು ಉತ್ತಮ ಸಂಸಾರಿಯಾಗಿ ರೂಪಿಸಬೇಕಾದ ಅಗತ್ಯವಿರುವುದಿಲ್ಲ. ಅವರೇ ಸಕಲ ಜವಾಬ್ದಾರಿಗಳನ್ನರಿತ ಗೃಹಸ್ಥರಾಗಿ ಬಾಳಿ ಬೆಳಗುತ್ತಾರೆ.

Leave a Reply

Your email address will not be published. Required fields are marked *

Translate »