ಪೂಜೆಗೆ ಯಾವ ತೆಂಗಿನಕಾಯಿ ಬಳಸಬೇಕು, ತೆಂಗಿನಕಾಯಿ ಏಕೆ ಬಳಸುತ್ತಾರೆ…?
ನಾವು ಪೂಜೆಗೆ ಹೋಗುವಾಗ ಹಣ್ಣುಕಾಯಿ ಹಿಡಿದುಕೊಂಡು ಹೋಗುತ್ತೇವೆ, ಇನ್ನು ಪೂಜೆಯಲ್ಲಿ ಹಣ್ಣುಕಾಯಿ ದೇವರಿಗೆ ಅರ್ಪಿಸಲಾಗುವುದು.
ಹಣ್ಣುಕಾಯಿಯಲ್ಲಿ ತೆಂಗಿನಕಾಯಿ, ಬಾಳೆಹಣ್ಣು, ಅರಿಶಿಣ, ಕುಂಕುಮ, ಕರ್ಪೂರ, ಹಣ್ಣುಗಳು, ವೀಳ್ಯೆದೆಲೆ, ಹೂ ಹೀಗೆ ದೇವರಿಗೆ ಅನೇಕ ಮಂಗಳಕರ ವಸ್ತುಗಳನ್ನು ಇಟ್ಟು ಅರ್ಪಿಸಲಾಗುವುದು.
ಅದರಲ್ಲಿ ಬೇರೆ ಯಾವುದೇ ಒಂದು ವಸ್ತು ಇಲ್ಲದಿದ್ದರೆ ತೊಂದರೆಯಿಲ್ಲ ಆದರೆ ಹಣ್ಣಕಾಯಿ ಅಂದ ಮೇಲೆ ಅದರಲ್ಲಿ ತೆಂಗಿನಕಾಯಿ ಇರಲೇಬೇಕು. ತೆಂಗಿನಕಾಯಿ ಇಲ್ಲದಿದ್ದರೆ ಅದು ಹಣ್ಣುಗಾಯಿ ಅನಿಸುವುದಿಲ್ಲ.
ಅಷ್ಟು ಮಾತ್ರವಲ್ಲಿ ಇನ್ನು ಪೂಜೆಯಲ್ಲಿ ತೆಂಗಿನಕಾಯಿ ಒಡೆಯಲಾಗುವುದು, ನಾವು ದೇವರಿಗೆ ತೆಂಗಿನಕಾಯಿ ಅರ್ಪಿಸುವಾಗ ಎಂಥ ತೆಂಗಿನಕಾಯಿ ಅರ್ಪಿಸಬೇಕು?
ಈ ತೆಂಗಿನಕಾಯಿ ಅರ್ಪಿಸುವುದರ ಮಹತ್ವವೇನು ಎಂದು ನೋಡೋಣ ಬನ್ನಿ:
ಪೂಜೆಯಲ್ಲಿ ತೆಂಗಿನಕಾಯಿ ಮಹತ್ವವೇನು?
ಋಷಿ-ಮುನಿಗಳು ಈ ತೆಂಗಿನಕಾಯಿಯಷ್ಟು ದೈವಿಕ ಶಕ್ತಿಯಿರುವ ಹಣ್ಣು ಮತ್ತೊಂದಿಲ್ಲ ಎಂದು ಹೇಳಿದ್ದಾರೆ. ಈ ತೆಂಗಿನಕಾಯಿಗೆ ದೈವ ಶಕ್ತಿಯನ್ನು ಆಕರ್ಷಿಸುವ ಗುಣವಿದೆ, ಆದ್ದರಿಂದಲೇ ಇದನ್ನು ಪೂಜೆ ಕಾರ್ಯಗಳಲ್ಲಿ ಬಳಸಲಾಗುವುದು.
ಪೂಜೆಯಲ್ಲಿ ಎಂಥ ತೆಂಗಿನಕಾಯಿ ಬಳಸಲಾಗುವುದು?
ಪೂಜೆಯಲ್ಲಿ ಎಳನೀರು ಬಳಸಲಾಗುವುದು ಹಾಗೂ ತೆಂಗಿನಕಾಯಿ ಬಳಸಲಾಗುವುದು. ಪೂಜೆಗೆ ಬಳಸುವ ತೆಂಗಿನಕಾಯಿಗೆ ಜುಟ್ಟು ಇರಬೇಕು, ಜುಟ್ಟು ತೆಗೆದಿರುವುದನ್ನು ಬಳಸುವಂತಿಲ್ಲ, ಅಲ್ಲದೆ ತೆಂಗಿನಕಾಯಿ ಒಳಗಡೆ ನೀರಿರಬೇಕು, ನೀರಿಲ್ಲದ ತೆಂಗಿನಕಾಯಿ ಬಳಸುವುದಿಲ್ಲ.
ತೆಂಗಿನಕಾಯಿ ಬಳಸುವುದರ ಹಿಂದಿರುವ ಪೌರಾಣಿಕ ಹಿನ್ನೆಲೆಯೇನು?
ತೆಂಗಿನಕಾಯಿಯಲ್ಲಿರುವ 3 ಕಣ್ಣಿನಲ್ಲಿ ಬ್ರಹ್ಮ, ವಿಷ್ಣು, ಶಿವ ನೆಲೆಸಿರುತ್ತಾರೆ ಎಂದು ಹೇಳಲಾಗಿದೆ. ತೆಂಗಿನಮರವನ್ನು ಕಾಮಧೇನು, ಕಲ್ಪವೃಕ್ಷ ಎಂದು ಕರೆಯಲಾಗುವುದು. ತೆಂಗಿನಕಾಯಿಯಲ್ಲಿರುವ ಕಣ್ಣನ್ನು ಶಿವಣ್ಣನ ಮುಕ್ಕಣ್ಣು ಎಂದು ಕರೆಯಲಾಗುವುದು. ತ್ರಿಮೂರ್ತಿಗಳು ತೆಂಗಿನಕಾಯಿಯಲ್ಲಿ ನೆಲೆಸಿರುವುದರಿಂದ ಇದನ್ನು ಪೂಜೆಗೆ ಬಳಸುವುದು ಶ್ರೇಷ್ಠ ಎಂದು ಹೇಳಲಾಗುವುದು. ಪೂಜೆಯಲ್ಲಿ ಎಲ್ಲಾ ಹಣ್ಣುಗಳಿಗಿಂತ ಶ್ರೇಷ್ಠವಾದ ಹಣ್ಣು ಇದಾಗಿದೆ.
ತೆಂಗಿನಕಾಯಿ ಒಡೆದಾಗ ಹಾಳಾಗಿದ್ದರೆ
ಕೆಲವೊಮ್ಮೆ ತೆಂಗಿನಕಾಯಿ ಒಳಗಡೆ ಹಾಳಾಗಿದ್ದರೆ ಗೊತ್ತಾಗುವುದಿಲ್ಲ, ದೇವರ ಪೂಜೆ ತೆಂಗಿನಕಾಯಿ ದೇವರಿಗೆ ಅರ್ಪಿಸಿದಾಗ ಅದು ಹಾಳಾದರೆ ಭಕ್ತರು ತುಂಬಾನೇ ಕಸಿವಿಸಿಗೊಳ್ಳುತ್ತಾರೆ. ಅಯ್ಯೋ ಇದು ಅಶುಭದ ಸೂಚನೆಯೇ? ಇದರಿಂದ ನನಗೆ ಹಾನಿಯುಂಟಾಗುವುದೇ ಎಂದು ಭಯ ಉಂಟಾಗುವುದು. ಆದರೆ ದೇವರಿಗೆ ನೀವು ಶುದ್ಧ ಭಕ್ತಿಯಿಂದ ತೆಂಗಿನಕಾಯಿ ಅರ್ಪಿಸಿದಾಗ ಅದು ಹಾಳಾಗಿದ್ದರೂ ನೀವು ಆತಂಕ ಪಡಬೇಕಾಗಿಲ್ಲ, ದೇವರಿಗೆ ನೀವು ಅರ್ಪಿಸುವ ವಸ್ತುಗಳಿಗಿಂತ ಭಕ್ತಿಯೇ ಮುಖ್ಯ.
ತೆಂಗಿನಕಾಯಿ ಒಳಗಡೆ ಹೂ ಸಿಕ್ಕರೆ ಏನರ್ಥ?
ಕೆಲವೊಮ್ಮೆ ತೆಂಗಿನಕಾಯಿ ಒಳಗಡೆ ಹೂ ಸಿಗುತ್ತದೆ, ಹೀಗೆ ಸಿಕ್ಕರೆ ನವ ದಂಪತಿಗೆ, ಮಕ್ಕಳ ಅಪೇಕ್ಷಿತ ದಂಪತಿಗೆ ಮಗುವಿನ ಭಾಗ್ಯ ಸಿಗಲಿದೆ ಎಂದು ಹೇಳಲಾಗುವುದು.
ಪೂಜೆಯಲ್ಲಿ ತೆಂಗಿನಕಾಯಿ ಅರ್ಪಿಸುವುದರ ಮಹತ್ವಪೂಜೆಯಲ್ಲಿ ತೆಂಗಿನಕಾಯಿ ಅರ್ಪಿಸಿದರೆ ನಾವು ದೇವರಿಗೆ ಸಂಪೂರ್ಣ ಶರಣಾಗಿದ್ದೇವೆ ಎಂದರ್ಥ. ನಮ್ಮಲ್ಲಿರುವ ಅಹಂ, ಕೋಪ ಎಲ್ಲವನ್ನೂ ಬಿಟ್ಟು ಓ… ದೇವರೇ ನಿನಗೆ ನಾವು ಸಂಪೂರ್ಣ ಶರಣಾಗಿದ್ದೇವೆ ಎಂಬುವುದರ ಸಂಕೇತವಾಗಿದೆ
ತೆಂಗಿನಕಾಯಿ ನೀರು, ಎಳನೀರು ತುಂಬಾನೇ ಪವಿತ್ರ
ಪೂಜೆಯಲ್ಲಿ ತೆಂಗಿನಕಾಯಿ ನೀರು ಅಥವಾ ಎಳನೀರನ್ನು ಪ್ರಸಾದ ರೂಪದಲ್ಲಿ ನೀಡಲಾಗುವುದು. ಇದು ಗಂಗಾಜಲದಷ್ಟೇ ಪವಿತ್ರವಾದ ನೀರಾಗಿದೆ. ಇನ್ನು ಯಾವುದೇ ಶುಭಕಾರ್ಯ ಮಾಡುವಾಗ ತೆಂಗಿನಕಾಯಿ ಒಡೆಯುವ ಸಂಪ್ರದಾಯ ಹಿಂದೂ ಧರ್ಮದಲ್ಲಿದೆ.
ದೇವರ ಅಭಿಷೇಕದಲ್ಲಿಯೂ ಬಳಸಲಾಗುವುದು
ದೇವರ ಅಭಿಷೇಕದಲ್ಲಿ, ಹಾಲು, ಜೇನು, ಮೊಸರು, ತುಪ್ಪ, ಎಳನೀರು ಇವುಗಳನ್ನು ಬಳಸಲಾಗುವುದು. ದೇವರಿಗೆ ಅಭಿಷೇಕ ಮಾಡುವುದರಿಂದ ದೈವ ಕೃಪೆಗೆ ಮಾತ್ರರಾಗುವಿರಿ.
ಹೀಗೆ ತೆಂಗಿನಕಾಯಿ ಪೂಜೆಯಲ್ಲಿ ಬಹುಮುಖ್ಯ ವಸ್ತುವಾಗಿದೆ.